ಇಂಗ್ಲೆಂಡಿನಲ್ಲಿ ಯುಗಾದಿ 2019 – ೧: ಕಲಿಯುವ, ಕಲಿಸುವ ಕಲರವ

ಈ ವಾರದ ಅನಿವಾಸಿಯಲ್ಲಿ, ಇಂಗ್ಲೆಂಡಿನ ಕನ್ನಡ ಸಂಸ್ಥೆಗಳ ಈ ವರ್ಷದ ಯುಗಾದಿ ಆಚರಣೆಯ ಕೂಡು-ಕೂಟಗಳ ವರದಿಯ ಮೊದಲನೇ ಭಾಗ ಮತ್ತು ಅನಿವಾಸಿಯ ಪರಿಚಿತ ಲೇಖಕ ಹಾಗು ಕವಿ ಸುದರ್ಶನ ಗುರುರಾಜರಾವ್ ಬರೆದ ನುಡಿಪರ್ವ ಕವನ. ಎರಡನ್ನೂ ಓದಿ, ಕಮೆಂಟಿಸಿ. ಧನ್ಯವಾದ.

 

“ಗಜವದನ ಹೇರಂಭ….” ಇದು ಹಯವದನ ನಾಟಕದ ಒಂದು ಪ್ರಸಿದ್ಧ ರಂಗಗೀತೆ. ಬಿ.ವಿ.ಕಾರಂತರಿಂದ ಆದಿಯಾದ ಇದು, ಜಯಶ್ರೀಯವರ ಕಂಠದಲ್ಲಿ ಯು-ಟ್ಯೂಬಿನಿಂದ ಎಲ್ಲೆಡೆ ಹರಿದಿದೆ. ಇಂತಹ ಒಂದು ಗೀತೆಯಿಂದ ಕಾರ್ಯಕ್ರಮವೊಂದರ ಪ್ರಮುಖ ಅಂಕದ ಆರಂಭವಾದರೆ, ಆ ಸಭಿಕರ ಮತ್ತು ಆಯೋಜಕರ ಹೃದಯ ನಾಡು-ನುಡಿ-ಸಂಸ್ಕೃತಿಯ ಮಿಡಿತದಿ೦ದ ತುಂಬಿದೆ ಎನ್ನುವದು ಅತಿಶಯೋಕ್ತಿಯಾಗಲಾರದು. ಇದು ಹದಿನೈದರ ಹರೆಯದ ಕನ್ನಡಿಗರು ಯುಕೆ ಸಂಘಟನೆಯ ಯುಗಾದಿ ಆಚರಣೆಯ ಹದ. ರಂಗಗೀತೆಯಿಂದ ಆರಂಭಿಸಿ ಮತ್ತಷ್ಟು ಹಾಡುಗಳಲ್ಲಿ ಸಭಿಕರನ್ನು ಮನಸೂರೆಗೈದ ಗಾಯಕಿ, ಮೈಸೂರಿನವರೆಂದು ಹೆಮ್ಮೆಯಿಂದ ಹೇಳಿಕೊಂಡ ರಂಗ ಮತ್ತು ಸಿನೆಮಾ ಗಾಯಕಿ ಅನನ್ಯ ಭಟ್.

 

ಕಾರ್ಯಕ್ರಮದ ಒಟ್ಟು ಆರಂಭವೂ ಅಷ್ಟೇ ಆಪ್ತವಾಗಿತ್ತು. ಲಂಡನ್ನಿನ ನೈರುತ್ಯ ಭಾಗದ ಫೆಲ್ಥಮ್ (Feltham)ನ ಶಾಲೆಯೊಂದರ ಸಭಾಂಗಣದಲ್ಲಿ ಕಳೆದ ಭಾನುವಾರ ನಡೆದ ಈ ಹಬ್ಬದಲ್ಲಿ ಶುರುವಿಗೆ ಬೇವು-ಬೆಲ್ಲ, ರುಚಿ-ರುಚಿ ಒಬ್ಬಟ್ಟಿನ ಊಟ; ತುಂಬಿದ ಹೊಟ್ಟೆಗೂ ಹಸಿವು ತರುವ  ಸಮೋಸ, ಉದ್ದಿನ ವಡೆ, ಮಂಗಳೂರು ಬಜ್ಜಿ, ಮತ್ತು ಜೊತೆಗೆ ಚಾ. ಶಾಲೆಯ ಗೇಟಿನಿಂದ ಶುರುವಾದ ದಾರಿ ಗುರುತುಗಳಿಂದ ಹಿಡಿದು, ಅಡಿಕೆ ಹಾಳೆಯ ತಟ್ಟೆ, ಮರದ ಚಮಚ ಉಪಯೋಗಿಸುವಲ್ಲಿ ಆಯೋಜಕರ ಕಾರ್ಯಚತುರತೆ ಮತ್ತು ಕಾಳಜಿ ಎದ್ದು ಕಾಣುತಿತ್ತು. ಈ ಕಾಳಜಿ ಮನರಂಜಿಸಿದ ಗೀತೆ-ನೃತ್ಯಗಳಿಂದ ತುಂಬಿದ ಮಕ್ಕಳ ಮತ್ತು ದೊಡ್ಡವರ ಪ್ರಯತ್ನಗಳಲ್ಲೂ ಮಿಂಚಿತ್ತು.

 

ಈ ಹಾಡು-ನೃತ್ಯ-ಅಭಿನಯಗಳಲ್ಲಿ, ಅತಿ ಮೆಚ್ಚೆನಿಸಿದ್ದು ಕನ್ನಡ ಕಲಿಯುತ್ತಿರುವ ಮಕ್ಕಳ ಕಾರ್ಯಕ್ರಮ. ಭಾಷೆಯಷ್ಟೇ ಅಲ್ಲದೆ, ಕನ್ನಡದ ಸಾಹಿತಿ, ಶರಣ, ಮತ್ತಿತರ ಇತಿಹಾಸ ಪ್ರಸಿದ್ಧರ ವೇಷ ಭೂಷಣ, ಕರ್ನಾಟಕದ ಪ್ರಸಿದ್ಧ ಸ್ಥಳಗಳ ಪರಿಚಯ, ಮತ್ತು ಒಂದಿಷ್ಟು ಹಾಡುಗಳು ಆ ಮಕ್ಕಳಿಗಿರುವ ಶೃದ್ಧೆ , ಅಪ್ಪ-ಅಮ್ಮರ ಭಾಷೆ ಕಲಿಯುವಲ್ಲಿನ ಆಸಕ್ತಿ, ಹಾಗೂ ಆ ಮಕ್ಕಳ ಅಪ್ಪ-ಅಮ್ಮರ ಭಾಷಾ ಪ್ರೀತಿಯನ್ನ ಹಲವು ರೀತಿಯಲ್ಲಿ ವೇದಿಕೆಯ ಮೇಲೆ ಹರಡಿದ್ದವು. Basingstoke, Milton Keynes, London ಹೀಗೆ ಹಲವೆಡೆಯ ‘ಕನ್ನಡ ಕಲಿ’ ತರಗತಿಗಳಲ್ಲಿ ಕೂಡಿ ಕಲಿಯುತ್ತಿರವ ಮಕ್ಕಳಿಗೂ, ಕಲಿಸುತ್ತಿರುವ ಗುರುಗಳಿಗೂ ಮತ್ತೊಮ್ಮೆ ಚಪ್ಪಾಳೆಗಳು.

 

‘ಕನ್ನಡ ಕಲಿ’ ಆರಂಭವಾದದ್ದು ೨೦೧೧-೧೨ರಲ್ಲಿ. ಆರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರ, ಬೆಂಬಲವಿದ್ದರೂ, ಇದರ ಮೂಲ ಶಕ್ತಿ ಕನ್ನಡಿಗರು-ಯುಕೆಯ ಸಂಘಟಕರು ಮತ್ತು ಅವರೊಂದಿಗೆ ಕೈ ಜೋಡಿಸಿದ ಕೆಲವು ಕನ್ನಡಿಗರು. ಐ ಟಿ ಯ ಬಲದಲ್ಲಿ ಕನ್ನಡಿಗರ ಸಂಖ್ಯೆ ಯುಕೆಯಲ್ಲಿ ಬೆಳೆದಂತೆ, ಬೇರೆ ಬೇರೆ ಊರುಗಳಲ್ಲಿ ಕನ್ನಡಿಗರು-ಯುಕೆ ಮರಿ ಹಾಕಿ, ಅಲ್ಲೆಲ್ಲ ಈಗ ‘ಕನ್ನಡ ಕಲಿ’ಯ ಕಲರವ! ಈಗ ಕನ್ನಡ ಕಲಿ ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶೃದ್ಧಾ ಕಾರ್ತಿಕ್, ಹೊಸ-ಹೊಸ ಆಲೋಚನೆಗಳಲ್ಲಿ ಕನ್ನಡ ಕಲಿ ಯನ್ನ ಬೆಳೆಸುವ ಉತ್ಸಾಹದಲ್ಲಿದ್ದಾರೆ.  ಅಲ್ಲಿ ಕಲಿತದ್ದನ್ನು ಮರೆಯದಂತೆ ಉಪಯೋಗದಲ್ಲಿಡಲು, ಮತ್ತು ಪ್ರದರ್ಶಿಸಲು ಹಬ್ಬಗಳ ನೆಪದಲ್ಲಿ ಕನ್ನಡಿಗರನ್ನು ಕೂಡಿಸುವ ಕೆಲಸ ಮುಂದೆಯೂ – ಇಲ್ಲಿಯೇ ಕನ್ನಡ ಕಲಿತವರು ಬೆಳೆದಂತೆ – ಮುಂದುವರಿಸಿಕೊಂಡು ಹೋದರೆ ಚೆನ್ನ.

 

ಈ ಮುದ್ದಿನ ಮಕ್ಕಳ ಕಾರ್ಯಕ್ರಮದ ನಂತರ, ಹಲವರಿಂದ ಹಾಡು, ವಾದ್ಯ ಸಂಗೀತ, ಭಾರತ ನಾಟ್ಯ, ಸಿನೆಮಾ ನೃತ್ಯ ಹೀಗೆ ಒಂದರಿದ ಹಿಂದೊಂದು ಬಿರುಸಾಗಿ ಸಾಗಿದವು. ವೇದಿಕೆಯ ಮುಂದೆ ಪುಟಾಣಿ ಮಕ್ಕಳ ಹಿಂಡು ಅವರದೇ  ಸಂತಸದ ಲೋಕದಲ್ಲಿ ಕುಣಿಯುತಿತ್ತು. ಚಪ್ಪಾಳೆಗಳಲ್ಲಿ ಸಭಿಕರು ತಾರತಮ್ಯ ತೊರಲಿಲ್ಲ. ಹಾಗಂತ ಸೀಟಿಗಳು ಎಲ್ಲರಿಗೂ ಬೀಳಲಿಲ್ಲ!

 

ಆ ಸೀಟಿಗಳು, ಅನನ್ಯ ಭಟ್ ಇವರ ಹಾಡಿಗೆ ಬೇಕಾದಷ್ಟು ಬಿದ್ದವು. ಅನನ್ಯ ಭಟ್, ನಾಟಕ ರಂಗದಲ್ಲಿ ಅಭ್ಯಸಿಸಿ, ಹಿನ್ನೆಲೆ ಗಾಯನದಲ್ಲಿ ಈಗೀಗ ಪ್ರಸಿದ್ಧಿಗೆ ಬರುತ್ತಿದ್ದಾರೆ. ಸಿನಿಮಾಗಿಂತ ಯೂಟ್ಯೂಬಿನಲ್ಲಿ ಅವರ ಜನಪ್ರಿಯತೆ ಹೆಚ್ಚು. ಮೇಲೆ ಹೇಳಿದಂತೆ ರಂಗಗೀತೆಯಿಂದ ಆರಂಭವಾದ ಅವರ ಗಾಯನ, ಜಾನಪದ ಹಾಡುಗಳಲ್ಲಿ ಮುಂದುವರೆದು ಕಡೆಗೆ ಐಟಂ ಸಾಂಗ್ ಗಳಲ್ಲಿ ಎಲ್ಲರನ್ನ ಕುಣಿಸಿ ಮುಗಿದಿತ್ತು. ಅಚ್ಚ ಕನ್ನಡದಲ್ಲಿ ಸ್ಫುಟವಾಗಿ ಮಾತನಾಡುವ ಅನನ್ಯರಿಗೆ ಸಭಿಕರೊಂದಿಗೆ ಬೆರೆಯುವ ಕಲೆ ಕರಗತವಾಗಿದೆ ಎನ್ನಿಸಿತು. ಅವರ ಮಾತುಗಳಲ್ಲಿ ಹೆಚ್ಚು ಮನ ಮುಟ್ಟಿದ್ದು, ಜಾನಪದ ಗೀತೆಗಳನ್ನ ಉಳಿಸಿ ಬೆಳೆಸಬೇಕೆಂಬ ಅವರ ಕಾಳಜಿ. ಅನನ್ಯ ಭಟ್ಟರ ಬಗ್ಗೆ ಹೆಚ್ಚು ಮಾಹಿತಿ ಬೇಕಿದ್ದರೆ ಗೂಗಲ್ ಇದೆ. ಅವರ ಹಾಡುಗಳನ್ನು ಯೂಟ್ಯೂಬಿನಲ್ಲಿ ಲಕ್ಷಾಂತರ ಜನ ಕೇಳಿದ್ದಾರೆ. ನೀವೂ ಆ ಲೆಕ್ಕವನ್ನ ಬೆಳೆಸಿ, ಅವರನ್ನ ಪ್ರೋತ್ಸಾಹಿಸಬಹುದು.

 

ಗಮನ ಸೆಳೆದ ಇನ್ನೊಂದು ವಿಚಾರ, ಹದಿನೈದು ವರ್ಷಗಳಲ್ಲಿ ಕನ್ನಡಿಗರು ಯುಕೆ ಗಾಗಿ ದುಡಿದ ವ್ಯಕ್ತಿಗಳನ್ನ ನೆನಪಿಸಿಕೊಂಡಿದ್ದು. ಹುಟ್ಟಿನ ದಿನಗಳಲ್ಲಿ ಇದ್ದ ಸುಮಾರು ಜನ ಬೇರೆ ಬೇರೆ ಕಾರಣಗಳಿಂದ ಸಕ್ರಿಯವಾಗಿಲ್ಲ. ಅವರನ್ನೆಲ್ಲ ನೆನೆಸಿಕೊಂಡು, ಬಂದಿದ್ದ ಕೆಲವರನ್ನು ವೇದಿಕೆಗೆ ಕರೆದು ಮಾತನಾಡಲು ಅವಕಾಶ ಕೊಟ್ಟದ್ದು, ಹದಿನೈದು ವರ್ಷಗಳ ಅನುಭವದ ಹಿರಿತನ. ಮೆಚ್ಚುವಂತದ್ದು. ಆದರೂ ಇದರಲ್ಲಿ ಬೇಸರದ ವಿಚಾರವೊಂದಿತ್ತು.

 

ಅದು, ಕೇವಲ ಸ್ಕ್ರೀನ್ ಮೇಲಷ್ಟೇ ನಮಗೀಗ ಕಾಣಿಸುವ ಪವನ್ ಮೈಸೂರ್ ಅವರ ಸ್ಮರಣೆ. ಇವರು ಕೆಲವು ತಿಂಗಳುಗಳ ಹಿಂದೆ, ತಮ್ಮ ನಲವತ್ತರ ದಶಕದ ಕಿರಿಯದಲ್ಲೇ ಹಠಾತ್ತಾಗಿ ಎಲ್ಲರನ್ನಗಲಿದರು. ಕನ್ನಡಿಗರು ಯುಕೆಯ ಹಲವು ಮೊದಲು ಗಳಲ್ಲಿ ಪವನ್ ಮೈಸೂರರ ಶ್ರಮವನ್ನ ಮತ್ತೊಮ್ಮೆ ನೆನಪಿಗೆ ಈ ಸ್ಮರಣೆ ತಂದಿತು. ಸಭೆಯಲ್ಲಿದ್ದ ಅವರ ಪತ್ನಿ, ಯುಕೆ ಕನ್ನಡಿಗರ ಸಾಂತ್ವನ ಮತ್ತು ಸಹಾಯ ಮನೋಭಾವವನ್ನ ಸ್ಮರಿಸಿದರು.

 

ಕಾರಣ ಏನೇ ಇರಲಿ, ೪೦ರ ದಶಕ ಸಾವಿಗಲ್ಲ. ನಾವು ಕಳೆದ ೫೦-೬೦ ವರ್ಷಗಳಲ್ಲಿ ಸೃಷ್ಟಿಸಿಕೊಂಡ ಸಮಸ್ಯೆಗಳಾದ ನಗರೀಕರಣ, ಮನಸಿನೊತ್ತಡ, ಅನಾರೋಗ್ಯಕರ ಆಹಾರ; ವ್ಯಾಯಾಮ, ನಿದ್ರೆಗಳಿಗೆ ಸಮಯವಿಲ್ಲದ ದುಡಿತ ಇವೆಲ್ಲ ಹೃದಯದ ಆಯಸ್ಸನ್ನು ಕಡಿಮೆಗೊಳಿಸುತ್ತಿವೆ. ಇದಕ್ಕಾಗಿ, ಯುಕೆಯಲ್ಲಿ ೪೦ ದಾಟಿದ ಎಲ್ಲರಿಗೂ ಉಚಿತ ಆರೋಗ್ಯ ತಪಾಸಣೆಯ ವ್ಯವಸ್ಥೆ ಇದೆ. ನಿಮಗೆ ೪೦ ದಾಟಿದ್ದರೆ, ದಯವಿಟ್ಟು ಬೇಗ ಮಾಡಿಸಿಕೊಳ್ಳಿ. ನಿಮ್ಮ ಸ್ನೇಹಿತರಿಗೂ ಪ್ರೋತ್ಸಾಹಿಸಿ. ಹಾಗೆಯೇ, ತಂಬಾಕು ಸುಡುವ ಅಭ್ಯಾಸವಿದ್ದರೆ, ಆ ಅಭ್ಯಾಸವನ್ನು ಸುಟ್ಟುಬಿಡಿ. ಇನ್ನೂ ತುಂಬಾ ಯುಗಾದಿಗಳಲ್ಲಿ ಹೋಳಿಗೆಗಳನ್ನ ಬಾರಿಸಲಿಕ್ಕಿದೆ.

 

ಈ ವರ್ಷದ ನವೆಂಬರ್ ತಿಂಗಳಲ್ಲಿ – ಬಹುಷ ೯ನೇ ತಾರೀಕು -, ರಾಜ್ಯೋತ್ಸವದ ಕನ್ನಡಿಗರು ಯುಕೆ ಕಾರ್ಯಕ್ರಮ ಲಂಡನ್ನಿನ ಹ್ಯಾರೋ ಎಂಬಲ್ಲಿ ಇರಲಿದೆ ಎಂದು ಘೋಷಿಸಿದ್ದು, ಹಾಗು ಲಾಲಿತ್ಯ ಎನ್ನುವ ಎಳೆಯಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಮೆರವಣಿಗೆ ಇರಲಿದೆ ಎಂದದ್ದು ನಿರೀಕ್ಷೆ ಹುಟ್ಟುಹಾಕಿ, ಆ ಕಾರ್ಯಕ್ರಮವನ್ನ ಎದುರುನೋಡುವಂತೆ ಮಾಡಿದೆ.

 

ಊಟ, ತಿಂಡಿ, ಮನರಂಜಿಸುವ ಹಾಡು, ಕುಣಿತಗಳಲ್ಲಿ ಹೊಟ್ಟೆ, ಮನಸು ತುಂಬಿಸಿಕೊಂಡು ಹೊರಡುವಾಗ, ಸಭಾಂಗಣದ ಹೊರಗೆ, ‘ಸಿರಿಗನ್ನಡಂ ಗೆಲ್ಗೆ’ ಎನ್ನುವ ಬ್ಯಾನರ್ ಬಿಚ್ಚುತ್ತಿದ್ದ ಸ್ವಯಂಸೇವಕರಿಗೆ ಧನ್ಯವಾದ ಹೇಳಿ ಮುನ್ನಡೆವಾಗ, ಹೀಗೆ ಯಾವುದೇ ಬಹುಮಾನ ಪದವಿಗಳ ನಿರೀಕ್ಷೆಯಿಲ್ಲದೆ ‘ನಾವಿದ್ದೇವೆ’ ಎನ್ನುವ ಇಂತವರೇ ಯುಕೆಯಲ್ಲಿ ಕನ್ನಡ ಉಳಿಸುವವರು, ಕಲಿಸುವವರು, ಬೆಳೆಸುವವರು ಎನ್ನುವ ಆಲೋಚನೆ ಮೂಡಿ ಮನಸಿನಲ್ಲಿ ಉಳಿಯಿತು. ಕಲಿಯುತ, ಕಲಿಸುತ ಕನ್ನಡದ ಕಲರವವ ಬೆಳೆಸಿ ಮೆರೆಸುತ್ತಿರುವ ಇವರೆಲ್ಲರಿಗೆ ನಮನ.
ಸೂ: ಈ ಕಾರ್ಯಕ್ರಮದ ಫೋಟೋಗಳು ನನ್ನ ಬಳಿ ಇಲ್ಲ. ಇದ್ದವರು ಲಿಂಕ್ ಗಳನ್ನ ಕಮೆಂಟಿನ ಜೊತೆಗೆ ಸೇರಿಸಿ, ಪ್ಲೀಸ್. ಧನ್ಯವಾದ. 
—————————————————————————————————————————————–

ನುಡಿಪರ್ವ

ಡಾ. ಸುದರ್ಶನ್ ಗುರುರಾಜರಾವ್ 

ಕತ್ತಲಾದ ಬಾಳಿಗೆ
ಅಕ್ಷರಗಳ ದೀವಿಗೆ
ಹಿಡಿದು ಬೆಳಕ ಕೊಡುವೆ ತಾಯಿ
ನೀನೆ ನಮ್ಮ ಪಾಲಿಗೆ

ಮುದ್ದು ಸುರಿವ ಅಕ್ಷರ
ಮುತ್ತು ಪೋಣಿಸಿಟ್ಟ ಹಾರ
ಕೇಳುತಿರಲು ಇಂಪು ನುಡಿಯ
ಉಳಿದುದೆಲ್ಲ ನಶ್ವರ

ಮಧುರಲಯದ ಪದ್ಯವು
ಬಹುವಿಧಗಳ ಗದ್ಯವು
ನಿಜದಿ ನಿನ್ನ ಸೇವೆಗಾಗಿ
ಪದತಲದಲಿ ನೈವೇದ್ಯವು

ಭಾಷೆಯಿಂದ ಸಂಸ್ಕೃತಿ
ನಾತ್ಯ ಗೀತದುತ್ಕೃತಿ
ಬೆರಕೆ ಇರದ ಭಾಷೆಇರಲು
ಪರಂಪರೆಗೆ ಸುಸ್ಠಿತಿ

ತುತ್ತಲೊಂದು ಕಲ್ಲು ಸಿಗಲು
ಉಗಿಯಬಹುದು ದೂರಕೆ
ತುತ್ತ ತುಂಬ ಕಲ್ಲೆ ಇರಲು
ಒಗ್ಗಲಹುದೆ ದೇಹಕೆ

ಕಲ್ಲು ತುಂಬಿದನ್ನದಂತೆ
ಬೆರಕೆಯಾದ ಭಾಷೆಯು
ಕೀಳರಿಮೆಗೆ ಆಲಸ್ಯವು
ಸೇರಿ ಬೆಳೆದ ಕ್ಲೀಷೆಯು

ಅರಿಯದಾಗಿ ನುಡಿಯ ಸಿರಿ
ಬೆರೆಕೆ ಮಾಡಿ ಬಳಸದಿರಿ
ಬೆರಕೆಯಾದ ಭಾಷೆ ಎಂದು
ಬೇರು ಸತ್ತ ಮರವೆ ಸರಿ

ಹೊಸ ಚಿಗುರಿಗೆ ಹಳೆ ಬೇರು
ಕೂಡಿದಾಗ ಮರವು ಸೊಗಸು
ಪರಂಪರೆಯ ಮರೆತು ನಡೆಯೆ
ನನಸಾಗದು ಕನಸು

ನಮ್ಮ ನಾಡು ನಮ್ಮ ನುಡಿಯ
ಬಗೆಗೆ ಬೆಳೆಯೆ ತಾತ್ಸಾರ
ನಮ್ಮ ನುಡಿಯ ನಾವೆ ಮರೆಯೆ
ಭಾಷೆಯುಳಿವು ದುಸ್ತರ

ಮನೆಯ ಗೆದ್ದು ಮಾರು ಗೆದೆ
ಎಂಬ ಗಾದೆ ಮಾತಿದೆ
ಕನ್ನಡವನು ಕಲಿತು ಉಳಿದ
ಭಾಷೆ ಕಲಿಯಬಾರದೆ

ಮಾಸಕೊಮ್ಮೆ ದೊರೆವ ಹಣವೆ
ಆಂಗ್ಲ ಭಾಷೆ ಪ್ರಕೃತಿ
ಜೀವ ವಿಮೆಯ ಶ್ರೀರಕ್ಷೆಯು
ಕನ್ನಡದ ಸುಸಂಸ್ಕೃತಿ

ಕನ್ನಡವನೆ ನುಡಿಯಿರಿ
ಬಳಸಿ ಅದರ ಪದಸಿರಿ
ಶುದ್ಧವಾದ ಭಾಷೆಯಿಂದ
ಪರಂಪರೆಯ ಉಳಿಸಿರಿ

ಸರ್ವ ಶಕ್ತ ನಮ್ಮ ಭಾಷೆ
ನಮಗೆ ಇರಲಿ ಗರ್ವವು
ಕನ್ನಡವನೆ ಬಳಸಿ ಗೆಲ್ಲು
ಉದಯಿಸಲಿ ಹೊಸ ಪರ್ವವು

 

___________________________________________________________________________________________

ಅವ್ವನ ನೆನಪುಗಳು

ಮಾರ್ಚ್ ತಿಂಗಳ ಕೊನೆಯ ಭಾನುವಾರ ಆಚರಿಸುವ, ಹೇಗೋ ಶುರುವಾಗಿ ಇನ್ನಾವುದೂ ಅರ್ಥದಲ್ಲಿ ಬೆಳೆದು ಉಳಿದಿರುವ, ತಾಯಂದಿರ ದಿನವನ್ನು ಅಕ್ಷರಗಳಲ್ಲಿ ಮೆರೆಸುವ ಅನಿವಾಸಿಯ ಆಶಯದ ಎರಡನೇ ಲೇಖನ ಈ ವಾರ. ಹೋದ ವಾರ, ಮಾತೃ ಭಾಷೆಯ ಅಕ್ಷರ, ವ್ಯಂಜನಗಳನ್ನ ಪದ್ಯ ರೂಪದಲ್ಲಿ ಮೆರೆಸಿದ ಲೇಖನವನ್ನ ನೀವೆಲ್ಲ ಓದಿರಬೇಕು. ಹಿರಿಯ ವೈದ್ಯ, ಅನಿವಾಸಿಯ ಮೂಲ ಚೇತನ, ಶ್ರೀಯುತ ಶ್ರೀವತ್ಸ ದೇಸಾಯಿಯವರು ತಮ್ಮ ಜೀವನದ ಅಮೂಲ್ಯ ಹಿನ್ನೋಟವೊಂದನ್ನು ಈ ವಾರ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ, ಕೇಶವ ಕುಲಕರ್ಣಿಯವರು ಕನ್ನಡದಲ್ಲಿ ಕೇಳಿಸಿಕೊಂಡಿರುವ ಹಿಂದಿಯ ಅಮ್ಮ-ಮಗನ ಹಾಡು. ನಿಮಗಾಗಿ.

image.png

ಈ ವರ್ಷದ ’ಮದರ್ಸ್ ಡೇ’ ದಿನ ಜಗತ್ತಿನ ಎಲ್ಲ ತಾಯಂದಿರಿಗೆ ನನ್ನ ತಾಯಿಯನ್ನು ನೆನೆಸುತ್ತ ಕೃತಜ್ಞತೆಗಳನ್ನು
ಅರ್ಪಿಸುತ್ತಿದ್ದೇನೆ.
ದೊಡ್ಡವರ ಚಿಕ್ ಚಿಕ್ ಸಂಗತಿಗಳು
ನನ್ನ ಪಾಲಿಗೆ ಅವ್ವ-ನಾವು ಉತ್ತರ ಕರ್ನಾಟಕದಲ್ಲಿ ಅಮ್ಮನನ್ನು ಹಾಗೇ ಕರೆಯುತ್ತಿದ್ದೆವು- ದೊಡ್ಡವಳೇ! ಐದನ್ನು ಹೆತ್ತು ದೊಡ್ಡವರನ್ನಾಗಿ ಮಾಡಿ ಕೊನೆಯ ವರೆಗೆ ಪ್ರೀತಿಯನ್ನಲ್ಲದೆ ಬೇರೇನೂ ಎರೆದವಳು ದೊಡ್ಡವಳೇ ಅಲ್ಲವೆ? ಎಲ್ಲರೂ ಮಹಾ ’ಸಾಧಕ’ರೇ ಆಗಿರಬೇಕೆ? ಆಕೆಗೆ ನಾನೇನು ಪ್ರತಿಫಲ ಕೊಟ್ಟೆ? ಉಪಕಾರ ಮಾಡಿದೆ? ಅದು ನನ್ನನ್ನು ಕಾಡದ ದಿನವಿಲ್ಲ. ”ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ”– ನಿಜ. ತಾಯಿ ಮತ್ತು ತಾಯಿನಾಡು ಎರಡೂ ಸ್ವರ್ಗಕ್ಕೆ ಸಮಾನ ಅಂತೆ. ಒಂದು ಸ್ವರ್ಗಕ್ಕಾಗಿ ಇನ್ನಾವ ಸ್ವರ್ಗವನ್ನು ಮಾರಿಕೊಂಡೆವು? ಅವ್ವ ಬದುಕಿರುವಾಗ ಈ ‘ಮದರ್ಸ್ ಡೇ’ದ ಕಲ್ಪನೆಯೇ ಇರಲಿಲ್ಲ. 1970ರ ದಶಕದಲ್ಲಿ ಈ ದೇಶಕ್ಕೆ ಬಂದ ಮೇಲೆಯೇ ನಾನು ಮೊದಲು ಬಾರಿ Mothers Day ಆಚರಣೆಯ ಬಗ್ಗೆ ಕೇಳಿದ್ದು. ಆಗ ಇಂಗ್ಲೆಂಡ್, ಅಮೇರಿಕಾ ಹೋಗುವದೆಂದರೆ ಸ್ವರ್ಗ ಸಿಕ್ಕಂತೆ. ನಾನು ಇಲ್ಲಿ ಬಂದು ಅನಿವಾಸಿಯಾಗಿ ನೆಲೆಸಿದ ನಂತರ ’ಊರಿಗೆ’ ಆಗಾಗ ಹೋಗಿ ಬರುವದುಂಟು. ಹೋದಾಗೆಲ್ಲ, ಮಿತ್ರರು, ಸಂಬಂಧಿಕರು “ಇಂಗ್ಲೆಂಡಿನಿಂದ ಏನೇನು ತಂದ್ರೆಪ್ಪ?“ ಎಂದು ಕೇಳುವವರೇ ಎಲ್ಲ. ಭಾರತದಲ್ಲಿ ಬಹಳಷ್ಟು ಐಷಾರಾಮಿ ವಸ್ತುಗಳು ಸಿಗುತ್ತಿರಲಿಲ್ಲ. ವಿಮಾನ ನಿಲ್ದಾಣದಲ್ಲಿ ಇಳಿದು ಕಸ್ಟಮ್ಸ್ ದಾಟಿಸಿ, ಡ್ಯೂಟಿ ಕೊಟ್ಟು ಏನೇನೋ ತೊಗೊಂಡು ಹೋಗುತ್ತಿದ್ದೆ. ಆಗ ಕ್ಯಾಮರಾ, ರೇಡಿಯೋ-ಟೇಪ್ ಕೆಸೆಟ್ ಪ್ಲೇಯರ್ ಭಾರತದಲ್ಲಿ ದುರ್ಲಭ. ತಾಯಿಗೆ ಅಂತ ಶಾಲು, ವಸ್ತ್ರ ಒಮ್ಮೊಮ್ಮೆ ಸೀರೆ ಒಯ್ಯುವೆ. ‘ನೀನು ಇಲ್ಲಿಗೆ ಬಂದಿದ್ದೇ ಸಾಕು‘ ಅನ್ನುತ್ತಿದ್ದಳು ಅವ್ವ. ವಯಸ್ಸಾದಂತೆ ಮುದುಕರಿಗೆ ಏನೆಲ್ಲ ಅಪೇಕ್ಷೆ ಕಡಿಮೆಯಾಗುತ್ತ ಹೋಗುತ್ತದೆ. ನನ್ನ ಮದುವೆಯಲ್ಲೇ ತನ್ನ ಪತಿ (ನನ್ನ ತಂದೆ)ಯನ್ನು ಕಳೆದುಕೊಂಡ ಆಕೆ ಮುಪ್ಪಿನ ದಿನಗಳನ್ನು ಧಾರವಾಡದಲ್ಲಿ ನನ್ನ ಒಬ್ಬ ಅಣ್ಣನ ಮನೆಯಲ್ಲಿ ಕಳೆದಳು. ವಯಸ್ಸಾದವರಿಗೆ ಚಿಕ್ಕದರಲ್ಲೇ ಸಂತೋಷ ಅಂತ ನನಗೆ ಅನುಭವವಾದದ್ದು ಆಗಲೇ.

ಚಿಕ್ ಚಿಕ್ ಸಂಗತಿಗಳು:

ಯು ಕೆ ದಿಂದ ರಜೆಯಲ್ಲಿ ಧಾರವಾಡಕ್ಕೆ ಹೋದಾಗ ಅವ್ವ ನನ್ನನ್ನು ಕರೆದು ”ಮಗು, ನನ್ನ ಕಾಲು ಉಗುರು ಸ್ವಲ್ಪ ಕತ್ತರಿಸಪ್ಪ, ಹಿಡಕೊಂಡ್ಬಿಟ್ಟಾವಽ” ಅನ್ನುವವಳು. ಮಗು! ಐದು ಮಕ್ಕಳಲ್ಲಿ ಕೊನೆಯವನಾದ ನನಗೆ ಬಂದ ’ಅಚ್ಚಾದ’ ಹೆಸರು.(Nickname) ಮಗು. ಆಗ ಅರವತ್ತರ ಹೊಸ್ತಿಲಲ್ಲಿದ್ದರೂ ನಾನು ಅವಳ ಪಾಲಿಗೆ ಮಗೂನೇ. ಹಗುರಾಗಿ ಅವಳ ಕಾಲನ್ನು ನನ್ನ ತೊಡೆಯ ಮೇಲಿಟ್ಟುಕೊಂಡು – ನಾನು ಮಗುವಾಗಿದ್ದಾಗ ಅವಳ ತೊಡೆಯ ಮೇಲೆ ನನ್ನಕಾಲುಗಳಿದ್ದಂತೆ!- ನನ್ನ ಸರ್ಜನ್ನನ ಕೌಶಲ್ಯವನ್ನೆಲ್ಲ ಉಪಯೋಗಿಸಿ ಮೆಲ್ಲಗೆ ಒಂದೊಂದಾಗಿ ಪಂಜಿನಂತೆ ಕಚ್ಚಿಕೊಂಡ ನಖಗಳನ್ನು ಕ್ಲಿಪ್ ಮಾಡಿ ಕಾಲ್ಬೆರಳುಗಳ ಚರ್ಮವನ್ನು ಬಿಡಿಸಿದಾಗ ಆಕೆಗಾಗುವ ಆನಂದದ ಪಾರವೇ ಇಲ್ಲ. ”ಎಷ್ಟು ಹಗುರಾತು ನೋಡು, ಮಗು!” ಎಂದು ಲಟಿಗೆ ಮುರಿಯುವವಳು ಪ್ರತಿ ಸಲ! ನಾನೊಬ್ಬ ಕಣ್ಣಿನ ವೈದ್ಯನಿಂದ ಪಾದವೈದ್ಯ(chiropodist) ಆದದ್ದಕ್ಕೆ ನನಗೇನೂ ಅವಮಾನವಿಲ್ಲ. ತಾನು ಬರೀ ಅಮ್ಮನಾದಂತೆ ನಾನು ಬರೀ ಮಗನಲ್ಲವೆ? ಅವಳೋ ಪುತ್ರವಾತ್ಸಲ್ಯದಿಂದ ಅಪ್ಪಿಕೊಂಡರೆ, ನಾನು ಮತ್ತೆ ಮಗುವಾಗಿ ಕರಗಿ ಹೋಗುತ್ತಿದ್ದೆ. ಧಾರವಾಡಕ್ಕೆ ಬರುವ ಮೊದಲು 18 ವರ್ಷಗಳ ಕಾಲ ನಮ್ಮ ದೊಡ್ಡ ಕುಟುಂಬ ಊಟಿಯಲ್ಲಿ ವಾಸಿಸುತ್ತಿತ್ತು. ಬ್ರಿಟಿಶರು ಉಟಕಮಂಡ್ ಎಂದು ಕರೆಯುತ್ತಿದ್ದ ಆ ಊರನ್ನು ಆದಿವಾಸಿಗಳು ಕರೆಯುತ್ತಿದ್ದುದು ”ಒತ್ತಕಲ್ ಮಂದು” ಎಂದು. ಅಂದರೆ ”ಒಂದು ಕಲ್ಲಿನ ವಸಾಹತು’ ಎನ್ನುವ ಬುಡಕಟ್ಟು ಜನಾಂಗ ತೊದವರ ಶಬ್ದದ ಅಪಭ್ರಂಶ ಎಂದು ನನ್ನ ತಂದೆ ಬರೆದ ಸಂಶೋಧನಾ ಗ್ರಂಥದ ನೆನಪು ಹಸಿರಾಗಿದೆ. ಎಲ್ಲೆಲ್ಲೂ ಹಸಿರು. ಮನ್ಸೂನ ಮಳೆಯನ್ನು ಅಲ್ಲೇ ನೋಡಬೇಕು. ಮಳೆ ಸುರಿದರೆ ಪಟಪಟನೆ ಕಿಡಕಿಯ ಕಾಜಿನ ಮೇಲೆ ಕೋಲಿನಿಂದ ಬಡಿದಂತೆ. ಹೊರಗಡೆ ನಿಂತಿದ್ದರೆ ಕ್ಷಣದಲ್ಲಿ ಪೂರ್ತಿ
ತೋಯಿಸಿಕೊಳ್ಳುವದೇ. ಒಂದು ಸಲ ಒಂದೂವರೆ ಮೈಲು ದೂರದಲ್ಲಿದ್ದ ಪೇಟೆಯಿಂದ ಮನೆಗೆ ನಡೆದುಕೊಂಡು ಮರಳಿ ಬರುತ್ತಿದ್ದೆವು ನಾನು ಮತ್ತು ನನ್ನ ಅವ್ವ. ಒತ್ತ ಕಲ್ (ಒಂಟಿಕಲ್) ಚಿಕ್ಕ ಗವಿಯಂತಿದ್ದ ಗುಡಿಯ ಹತ್ತಿರ ಬರುವಷ್ಟರಲ್ಲಿ ಗುಡುಗು- ಮಿಂಚಿನೊಂದಿಗೆ ಮನ್ಸೂನ್ ಮಳೆ. ಕೈಯಲ್ಲಿ ಛತ್ರಿ (ಕೊಡೆ)ಯಿಲ್ಲ. ಇದ್ದರೂ ರಕ್ಷಣೆಯಿರುತ್ತಿರಲ್ಲ. ಐದು ವರ್ಷದ ಹುಡುಗ ನಾನು. ತನ್ನ ಸೀರೆಯ ಸೆರಗನ್ನೇ ಹೊದಿಸಿ ಮಳೆಯಿಂದ ನನ್ನನ್ನು ರಕ್ಷಿಸಿ, ಕೊನೆಗೆ ಅದು ನಿಂತ ಮೇಲೆ ಮನೆಗೆ ಕರೆದುಕೊಂಡು ಬಂದಳು. ಮನೆಗೆ ಬರುವ ವರೆಗೆ ಆಕೆಯ ಹೊಟ್ಟೆಗೆ ತೋಯ್ದು ತೊಪ್ಪೆಯಾದ ನನ್ನ ತಲೆಯನ್ನುಅಂಟಿಸಿ ಕೊಂಡಿದ್ದ ಆ ಚಿತ್ರ ಇಂದಿಗೂ ನನ್ನ ಮನಃಪಟದಲ್ಲಿ ಅಚ್ಚಳಿಯದೆ ನಿಂತಿದೆ! ಆಕೆಗೆ ಮದುವೆಯಾದಾಗ ಹೈಸ್ಕೂಲು ವಿದ್ಯಾಭ್ಯಾಸ ಸಹ ಪೂರ್ತಿಯಾಗಿದ್ದಿಲ್ಲ. ಆಗಿನ ಕಾಲದಲ್ಲಿ ಅದು ಸಾಮಾನ್ಯ. ಮೈನೆರೆತ ಮೇಲೆಯೇ ಅತ್ತೆಮನೆಗೆ ಬಂದು ಐವರು ಗಂಡು ಮಕ್ಕಳನ್ನು ಹೆತ್ತಳು. ನಾನು ಕೊನೆಯವ. ಎಲ್ಲರ ವಿದ್ಯಾಭ್ಯಾಸಕ್ಕಾಗಿ ತಂದೆ ತಾಯಿಯರ ತ್ಯಾಗ ಮರೆಯಲಾರೆ. ಮೊದಲು ಗತಿಸಿದ್ದು ತಂದೆ. ನಾನು ಮೆಡಿಕಲ್ ಮುಗಿಸಿ ವಿದೇಶಕ್ಕೆ ಹೊರಟೆ. ನನ್ನನ್ನು ಹರಸಿ ಬೀಳ್ಕೊಟ್ಟ ಅವ್ವ ಪ್ರತಿವರ್ಷ ತಪ್ಪದೆ ನನ್ನ ಹುಟ್ಟಿದ ಹಬ್ಬದ ದಿವಸ ನನ್ನನ್ನು ಆಶೀರ್ವದಿಸಿ ಹರಸಿ ಪತ್ರ ಬರೆಯಲು ಮರೆಯಲಿಲ್ಲ. ಪ್ರತಿ ಕಾಗದದಲ್ಲೂ ”ಮಗು”ವಿಗೆ, ಎಂತಲೇ ಸಂಬೋಧನೆ. ಅಗ STD, ಮೋಬೈಲ್, ಇಂಟರ್ನೆಟ್ ಇರಲಿಲ್ಲ. ಆ ವರ್ಷ ಅವ್ವನ ಪತ್ರ ಬರಲೇ ಇಲ್ಲ. ಅಂದು ನನ್ನ ಜಂಘಾಬಲವೇ ಉಡುಗಿ ಹೋಗಿತ್ತು. ನನಗಿಂತ ಹಿರಿಯರಾದ ನಾಲ್ವರು ಅಣ್ಣಂದಿರು ಭಾರತದಲ್ಲೇ ಇದ್ದುದರಿಂದ ನನಗೆ ಆಕೆಯ ಕೊನೆಯ ದಿನಗಳಲ್ಲಿ ಸಹ ಆರೈಕೆ ಮಾಡುವ ಅವಕಾಶ ಒದಗಿ ಬಂದಿರಲಿಲ್ಲ. ಅವ್ವ ತೀರಿಕೊಂಡ ಸುದ್ದಿ ಗೊತ್ತಾದ ದಿನ ನಾನು ತಬ್ಬಲಿಯಾದ ಅನುಭವ. ಆಸ್ಕರ್ ವೈಲ್ಡನ ನಾಟಕ ’ದ ಇಂಪಾರ್ಟನ್ಸ್ ಆಫ್ ಬೀಯಿಂಗ್ ಅರ್ನೆಸ್ಟ್’ ದ ಲೇಡಿ ಬ್ರಾಕ್ನೆಲ್ ಹೇಳಿದಂತೆ “To lose one parent may be regarded as a misfortune; to lose both looks like carelessness” ಮಾತು ನೆನಪಾಯಿತು. ಕೇರ್ಲೆಸ್ ಅಲ್ಲದಿದ್ದರೂ, ಕಳೆದುಕೊಂಡದ್ದು ಸ್ವರ್ಗವೇ ಏನೋ? Paradise lost? ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ, ಅದರ ಸತ್ಯ ಮನದಟ್ಟವಾಯಿತು. ಜಗತ್ತಿನ ಎಲ್ಲ ತ್ಯಾಗಮಯಿ, ವಾತ್ಸಲ್ಯದ ಮೂರ್ತಿ ತಾಯಂದಿರಿಗೂ ನಮನಗಳು.

ಶ್ರೀವತ್ಸ ದೇಸಾಯಿ

image.png
ದೂರ ಗಗನದೆಡೆ
ದೂರ್ ಗಗನ್ ಕಿ ಛಾಂವ್ ಮೆ ಚಿತ್ರದ ಹಾಡು. ಆ ಚಲ್ ಕೆ ತುಝೆ… ಹಾಡು ಬರೆದು ಸಂಗೀತ ಕೊಟ್ಟು ಹಾಡು ಹಾಡಿದ್ದು ಕಿಶೋರ್ ಕುಮಾರ್
ಬಾ ನನ್ನ ಜೊತೆ
ನಾ ಕರೆದೊಯ್ಯುವೆ
ಆ ದೂರ ಗಗನದೆಡೆ
ಎಲ್ಲಿ ದುಃಖವಿರದೋ
ಕಣ್ಣೀರಿರದೋ
ಆ ದೂರ ಗಗನದೆಡೆ //ಪ//

ಸೂರ್ಯನ ಮೊದಲನೆ ಕಿರಣ
ಆಸೆಯ ಬೆಳಕಿನ ಸ್ಫುರಣ
ಚಂದ್ರನ ತಿಂಗಳ ಬೆಳಕು
ಅಂಧಕಾರ ಹೋಯಿತು ಹೊರಕು

ಬಿಸಿಲೇ ಇರಲಿ
ನೆರಳೇ ಬರಲಿ
ನಮ್ಮ ದಾರಿ ಗಮ್ಯದೆಡೆ
ಎಲ್ಲಿ ದುಃಖವಿರದೋ
ಕಣ್ಣೀರಿರದೋ
ಆ ದೂರ ಗಗನದೆಡೆ //೧//

ಕಣ್ಣನು ಚಾಚಿದಷ್ಟೂ
ಮುಕ್ತ ಗಗನವೇ ಇರಲಿ
ಅಲ್ಲಿ ರಂಗು ರಂಗಿನ ಹಕ್ಕಿ
ಆಸೆ ಸಂದೇಶವ ತರಲಿ

ಕನಸಿನ ಚಿಗುರು
ನಳನಳಿಸಿರಲು
ಸಂಜೆಯ ತಳಿರಿನೆಡೆ
ಎಲ್ಲಿ ದುಃಖವಿರದೋ
ಕಣ್ಣೀರಿರದೋ
ಆ ದೂರ ಗಗನದೆಡೆ //೨//

– ಕೇಶವ ಕುಲಕರ್ಣಿ