ಸನ್ಮಿತ್ರ ಓದುಗರೇ ! ನಮಗೆಲ್ಲರಿಗೂ ತಿಳಿದಿರುವ ಹಾಗೆ ಕೋವಿಡ್-೧೯ ೨ನೇ ಅಲೆ ಕರುನಾಡನ್ನು ಭೀಕರವಾಗಿ ಅಲ್ಲೋಲ ಕಲ್ಲೋಲ ಮಾಡಿದೆ. ಈ ಅವಧಿಯಲ್ಲಿ ಮಾನವಕುಲದ ಅಮಾನುಷ ಕೃತ್ಯಗಳನ್ನು ಡಾ।।ಶಿವ ಪ್ರಸಾದ್ ತಮ್ಮ ‘ಸೆಕೆಂಡ್ ವೇವ್’ ಎಂಬ ಶೀರ್ಷಿಕೆಯ ಕವನದಲ್ಲಿ ವ್ಯಕ್ತಪಡಿಸಿದ್ದಾರೆ.
ನಮ್ಮ ಸಾಪ್ತಾಹಕ ಸಂಚಿಕೆಯ ‘ಹಸಿರು ಉಸಿರು’ ಸರಣಿಯಲ್ಲಿ ಅನ್ನಪೂರ್ಣ ಆನಂದ್ ಮತ್ತು ಸ್ಮಿತಾ ಕಡಾಡಿ ಅವರ ಹೂದೋಟದ ಹಾದಿಯತ್ತ ಹೋಗಿ ಬರೋಣವೇ ? ಓದಿ ಪ್ರತಿಕ್ರಿಯಿಸಿ.
-ಸವಿ.ಸಂ
ಸೆಕೆಂಡ್ ವೇವ್
ಮಾಸ್ಕ್ ಎಂಬ ಮುಸುಕನ್ನು
ಮನೆಯಲ್ಲಿ ಬಿಚ್ಚಿಟ್ಟು
ಮುಂಜಿ ಮದುವೆಗಳ ನೆಪದಲ್ಲಿ
ಮನೆಯಾಚೆ ಕಾಲಿಟ್ಟು
ಕುಂಭ ಮೇಳದಲಿ ಮಿಂದು
ನಂಬಿಕೆಯಂಬ ಮಡಿಯುಟ್ಟು
ಚುನಾವಣೆಯ ಬಿಸಿಯಲ್ಲಿ
ಧುರೀಣರಿಗೆ ವೋಟುಕೊಟ್ಟು
ವೈದ್ಯರು ಕೊಟ್ಟ ಸಲಹೆಗಳನು
ನಿರ್ಲಕ್ಷಿಸಿ ಕೈಬಿಟ್ಟು
ಇಂದು ಎದುರುಸುತ್ತಿದ್ದೇವೆ
ಸೆಕಂಡ್ ವೇವ್ ಬಿಕ್ಕಟ್ಟು!
ವ್ಯಾಕ್ಸೀನ್ ಕೊಡಲು ಬಂದಾಗ
ನೆಪಗಳನ್ನೆತ್ತಿ ನಿರಾಕರಿಸಿದ್ದೇವೆ
ಪಿಡುಗು ಮಹಾಮಾರಿಯಾದಾಗ
ವ್ಯಾಕ್ಸೀನ್ ಇಲ್ಲವೆಂದು ಪರಿತಪಿಸಿದ್ದೇವೆ
ಲಸಿಕೆಗಳನು ವಿದೇಶಗಳಿಗೆ ಮಾರಿ
ವಾಟ್ಸ್ ಆಪಿನಲ್ಲಿ ಮೆರೆದಿದ್ದೇವೆ
ಕರೋನ ಕುರುಡು ಕುಣಿತದಲ್ಲಿ
ಕೈ ಚೆಲ್ಲಿ ಕಂಗಾಲಾಗಿ ಕುಳಿತ್ತಿದ್ದೇವೆ
ಪಾಶ್ಚಿಮಾತ್ಯ ಮಾಧ್ಯಮಗಳ
ಮೇಲೆ ಕೆಂಡ ಕಾರುತ್ತಾ
ಪಾಶ್ಚಿಮಾತ್ಯ ಸಜ್ಜನರಿಂದಲೇ
ಔಷಧಿ ವೆಂಟಿಲೇಟರ್ಗಳನು ಬೇಡಿದ್ದೇವೆ
ಜನ ಸೇವೆಯೇ ಜನಾರ್ಧನ ಸೇವೆ,
ಕಾಯಕವೇ ಕೈಲಾಸವೆನ್ನುತ್ತ
ಆಕ್ಸೀಜನ್ ಸಿಲಿಂಡರ್ಗಳನ್ನು
ಬ್ಲ್ಯಾಕ್ ಮಾರ್ಕೇಟಿನಲ್ಲಿ ಮಾರುತ್ತಿದ್ದೇವೆ
ಹತಾಶೆ, ನೋವುಗಳನು,
ಆಕ್ರೋಶ, ಆವೇಶಗಳನೂ ನೋಡಿದ್ದೇವೆ
ಹೆಣಗಳ ರಾಶಿಯನ್ನು ಕಂಡು ಮರುಗಿದ್ದೇವೆ
ಕಂಬನಿಗಳ ಕೋಡಿಯನ್ನೇ ಹರಿಸಿದ್ದೇವೆ
ಅವರಿವರ ಪರ-ವಿರೋಧ
ವಾದ ವಿವಾದಗಳು ದಿನ ನಿತ್ಯ
ಸರಿ ತಪ್ಪುಗಳ ನಡುವೆಯೆಲ್ಲೋ ಸತ್ಯ
ಮಾಸ್ಕ್, ಲಸಿಕೆ, ಸಾಮಾಜಿಕ ಅಂತರಗಳು ಅಗತ್ಯ
ಪ್ರಗತಿಶೀಲ ಭಾರತಕ್ಕೆ
ಹೆಮ್ಮೆ, ಆತ್ಮವಿಶ್ವಾಸಗಳು ಮುಖ್ಯ
ಗರ್ವ, ಒಣಜಂಭಗಳು ಅನಗತ್ಯ
ಒಳನೋಟ, ಆತ್ಮವಿಮರ್ಶೆಗಳು ಅತ್ಯಗತ್ಯ
-ಡಾ. ಜಿ. ಎಸ್. ಶಿವಪ್ರಸಾದ್
🔆〰〰〰〰〰〰〰〰〰〰〰〰🔆
ಅನ್ನಪೂರ್ಣ ಆನಂದ್ ಅವರ ಹೂದೋಟದ ರಮ್ಯಚಿತ್ರಗಳು







🔆〰〰〰〰〰〰〰〰〰〰〰〰🔆
ಸ್ಮಿತಾ ಕಡಾಡಿ ಅವರ ಗೃಹದ ಲಿಲ್ಲಿ ಲಾವಣ್ಯವತಿಯರು














