ಬಾಲ್ಯದ ನೆನಪುಗಳು – ಶ್ರೀವತ್ಸ ದೇಸಾಯಿ ಹಾಗೂ ಗೌರಿ ಪ್ರಸನ್ನ

ಪ್ರಿಯ ಓದುಗರೇ, ಕೆಳಗಿನ ಎರಡು ಲೇಖನಗಳು ‘ಬಾಲ್ಯದ ನೆನಪುಗಳು’ ಸರಣಿಯ ಕೊನೆಯ ಲೇಖನಗಳು. ಗೌರಿ ಪ್ರಸನ್ನ ಅವರು ಪ್ರೀತಿಯಿಂದ ತಮ್ಮ ಅಜ್ಜಿಯನ್ನು (ಓಣ್ಯಾಯಿ) ನೆನಪಿಸಿಕೊಂಡರೆ, ದೇಸಾಯಿಯವರು ತಮ್ಮ ಬಾಲ್ಯವನ್ನು ಕಳೆದ ಊರಿನ ಬಗ್ಗೆ ಬರೆಯುತ್ತಾರೆ. ಓದಿ ನನ್ನಂತೆ ನಿಮಗೂ ಅಜ್ಜಿಯ, ಊರಿನ ನೆನಪಾಗದಿದ್ದರೆ ಹೇಳಿ. – ಎಲ್ಲೆನ್ ಗುಡೂರ್ (ಸಂ.)

ನನ್ನ ಬಾಲ್ಯದ ದಿನಗಳು – ಶ್ರೀವತ್ಸ ದೇಸಾಯಿ

ಸಾಮಾನ್ಯವಾಗಿ childhood ಅಂದರೆ 1 ರಿಂದ 12ರ ವಯಸ್ಸಿನ ವರೆಗಿನ ವರ್ಷಗಳು. ಆ ಸಮಯವನ್ನು ನಾನು ನೀಲಗಿರಿಯ ಮಧ್ಯದಲ್ಲಿ ರಮಣೀಯ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಪವಡಿಸಿದ್ದ ಊಟಿ ಅಥವಾ ಉದಕಮಂಡಲ ಎನ್ನುವ ಊರಲ್ಲಿ ಕಳೆದೆ. ಅದು ನನ್ನ ಜೀವನದ ಅತ್ಯಂತ ಸಂತೋಷದ ಕಾಲ ಎಂದರೆ ಉತ್ಪ್ರೇಕ್ಷೆಯಾಗಲಾರದು. ಬಹುತೇಕ ಎಲ್ಲರಿಗೂ ಬಾಲ್ಯದ ದಿನಗಳೆಂದರೆ ಹಾಗೆಯೇ ’ಹ್ಯಾಪ್ಪಿ ಡೇಸ್’ ಅಲ್ಲವೆ? ಮೊದಲು ನೀಲಗಿರಿ ಜಿಲ್ಲೆ ಮೈಸೂರು ಅರಸರ ಕಾಲದಿಂದಲೂ ಹಳೆಯ ಮೈಸೂರು ರಾಜ್ಯದಲ್ಲಿತ್ತು. 1956ರಲ್ಲಿ ಭಾಷಾವಾರು ಪ್ರದೇಶಗಳ ವಿಂಗಡನೆಯಾದ ನಂತರ ಅದು ತಮಿಳುನಾಡಿಗೆ ಸೇರಿತು. ಅದಕ್ಕೂ ಮೊದಲು ಕನ್ನಡ ಮತ್ತು ತಮಿಳು ಎರಡೂ ಭಾಷೆಗಳನ್ನು ಜನರು ಆಡಿಕೊಳ್ಳುತ್ತಿದ್ದರೂ ಕ್ರಮೇಣ ತಮಿಳಿನ ಪ್ರಭಾವ ಹೆಚ್ಚಾಗಿ ನಾನು ಶಾಲೆಗೆ ಹೋಗುವಾಗ ತಮಿಳೇ ಹೆಚ್ಚು ಬಳಕೆಯಲ್ಲಿತ್ತು. ನಾನು ಹುಟ್ಟಿದ್ದು ಧಾರವಾಡದಲ್ಲಿ. ಆದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ ನಮ್ಮ ತಂದೆ ಊಟಿಯಲ್ಲಿ ಕೇಂದ್ರ ಸರಕಾರದ ಎಪಿಗ್ರಾಫಿ ಮತ್ತು ಆರ್ಕಿಯಾಲಜಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಊಟಿಯಲ್ಲಿ ಬೆಳೆದೆ. ಮನೆಯಲ್ಲಿ ಕನ್ನಡ ಮಾತೃಭಾಷೆ. ಹೊರಗಡೆ ತಮಿಳು ಆಡು ಮಾತು. ಮೊದಮೊದಲು ನಮಗೆ ಇದು ಗೊಂದಲವನ್ನುಂಟು ಮಾಡಿದರೂ ದಿನ ಕಳೆದಂತೆ ಸರಿಹೋಯಿತು. ವಿಚಿತ್ರವೆಂದರೆ ಮತ್ತೆ ನನ್ನ 12ನೆಯ ವಯಸ್ಸಿನಲ್ಲಿ ಧಾರವಾಡಕ್ಕೆ ವಾಪಸ್ ಬಂದಾಗ ಈ ಗೊಂದಲ ವಿರುದ್ಧ ದಿಕ್ಕಿನಲ್ಲಿ ಮರುಕಳಿಸಿತು.

ಹೊಳಪಿನ ಕಣ್ಣುಗಳು!

ನನ್ನ ನಾಲ್ಕನೆಯ ವಯಸ್ಸಿನಲ್ಲಿಯೇ ನಾನು ಒಂದನೆಯ ಕ್ಲಾಸಿಗೆ ಸೇರಿದ್ದು ನಮ್ಮ ಮನೆಯಿಂದ ಒಂದೇ ಫರ್ಲಾಂಗ್ ದೂರದಲ್ಲಿದ್ದ ಜೆಲ್ ಮೆಮೋರಿಯಲ್ ಪ್ರೈಮರಿ ಸ್ಕೂಲ್ ನಲ್ಲಿ. ಕೆಲವೊಂದು ಅಪ್ರಿಯ ಅಥವಾ ಅಹಿತಕರ ಅನುಭವಗಳು ಎಳೆಯ ಮನಸ್ಸಿನ ಮೇಲೆ ವಿಪರೀತ ಭೀತಿಯನ್ನುಂಟು ಮಾಡುವ ಸಾಧ್ಯತೆಯಿದೆ. ಮನೆಯ ಅಕ್ಕಪಕ್ಕದಲ್ಲಿಯ ನಾಯಿಗಳಿಗೆ ನಾನು ಹೆದರಿದ್ದೆನೋ ಏನೋ. ಆಗ ತಾನೆ ಸ್ವಾತಂತ್ರ್ಯ ಸಿಕ್ಕು ಕೆಲವರ್ಷಗಳಷ್ಟೇ ಆಗಿತ್ತು. ತಮಿಳು ನಾಡಿನ ಸುಪ್ರಸಿದ್ಧ ದೇಶಭಕ್ತ ಮತ್ತು  ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರ ಸುಪ್ರಸಿದ್ಧ ಹಾಡು ”ಒಳಿಪಡೈತ್ತ ಕಣ್ಣಿನಾಯ್ ವಾ ವಾ ವಾ” (ಪ್ರಕಾಶಯುಕ್ತ ಕಣ್ಣಿನವನಿಗೆ ಸ್ವಾಗತ) ಎನ್ನುವ ಹಾಡನ್ನು ನಾವು ಶಾಲೆಯಲ್ಲಿ ವಾರಕ್ಕೊಮ್ಮೆ ಸಾಮೂಹಿಕವಾಗಿ ಹಾಡುತ್ತಿದ್ದೆವು. ನನ್ನ ಭಾಷಾ ಗೊಂದಲದ ಕಾರಣ ಅದರಲ್ಲಿಯ ’ನಾಯ್’ ಎನ್ನುವ ಶಬ್ದ (ಅದರರ್ಥ ತಮಿಳಿನಲ್ಲಿ ”ಉಳ್ಳವನು’ ಅಂತ) ಬಂದ ಕೂಡಲೆ ಒಂದು ಹೊಳೆಯುತ್ತಿರುವ ದೊಡ್ಡ ಕಣ್ಣಿನ ಕರಿ ಬೇಟೆ ನಾಯಿ ಬಂದು ಕೂತ ಚಿತ್ರ ನನ್ನ ಕಣ್ಣ ಮುಂದೆ ಬಂದು ಹೆದರಿಕೆಯಾಗುತ್ತಿತ್ತು! ರಾತ್ರಿಯಲ್ಲಿ ಸಹ ನನ್ನ ಕನಸಿನಲ್ಲಿ ಬಂದು ಹೆದರಿಸುತ್ತಿತ್ತು. ಸುಪ್ರಸಿದ್ಧ ಗಾಯಕಿ ಎಂ ಎಸ್ ಸುಬ್ಬುಲಕ್ಷ್ಮಿ ಈ ಹಾಡನ್ನು ತಮ್ಮ ಸುಶ್ರಾವ್ಯ ಕಂಠದಲ್ಲಿ ಹಾಡಿ ಅಜರಾಮರ ಮಾಡಿದ್ದಾರೆ (https://youtu.be/Jkg0ng6aEs4).  ಆ ಹಾಡಿನಿಂದಲೋ ಏನೋ, ಮುಂದೆ ನಾನು ಕಾಲೇಜಿನಲ್ಲಿದ್ದಾಗ ಶೆರ್ಲಾಕ್ಸ್ ಹೋಮ್ಸ್ ಕಥೆಯನ್ನೋದಿದಾಗ ಕತ್ತಲಲ್ಲಿ ಮಿನುಗುವ ರಂಜಕ ಲೇಪಿತ ಮುಖದ ಆ ನಾಯಿಯ ರೂಪ (ಹೌಂಡ್ ಆಫ್ ಬ್ಯಾಸ್ಕರ್ವಿಲ್ಸ್) ನನ್ನ ಮನಸ್ಸಿನ ಮೇಲೆ ವಿಪರೀತ ಪರಿಣಾಮವನ್ನುಂಟುಮಾಡಿ ಮಧ್ಯರಾತ್ರಿಯಲ್ಲಿ ಹಾಸಿಗೆಯಿಂದ ಬಡಿದೆಬ್ಬಿಸುತ್ತಿತ್ತು!

ಮುಸಲ ಧಾರ ಮಳೆ ಮತ್ತು ಚಿಲ್ ಬ್ಲೇನ್ಸ್!

ನಮ್ಮದು ಮಧ್ಯಮವರ್ಗದ ಕುಟುಂಬವಾಗಿತ್ತು. ನಮ್ಮ ತಂದೆಗೆ ನಾವು ಐದೂ ಗಂಡುಮಕ್ಕಳು. ಕೊನೆಯವನಾದ ನಾನು ಮತ್ತು ನನ್ನ ಇಬ್ಬರು ಅಣ್ಣಂದಿರಷ್ಟೇ ಊಟಿಯಲ್ಲಿದ್ದು ಕಲಿಯುತ್ತಿದ್ದೆವು. ಉಳಿದಿಬ್ಬರು ಹಿರಿಯರು ಉಚ್ಚ ಶಿಕ್ಷಣಕ್ಕೆ ಧಾರವಾಡ – ಪುಣೆಗಳಲ್ಲಿ ಉಳಿದಿದ್ದರು. ನಾವು ಅತಿ ಅನುಕೂಲಸ್ಥರಾಗಿರದಿದ್ದರೂ ಬಡತನವಿರಲಿಲ್ಲ. ಚಳಿ ಹೆಚ್ಚೆಂದು ಒಂದು ಉಣ್ಣೆ ಕೋಟನ್ನು ಹಾಕಿಕೊಂಡೇ ಶಾಲೆಗೆ ಬರಿಗಾಲಲ್ಲೇ ನಡೆದುಕೊಂಡೇ ಹೋಗುತ್ತಿದ್ದೆವು. ನಾವು ಹೋಗುತ್ತಿದ್ದ ಪ್ರಾಥಮಿಕ ಶಾಲೆಯಂತೆಯೇ ಮಾಧ್ಯಮಿಕ ಶಾಲೆ ಸೇಂಟ್ ಜೋಸೆಫ್ ಹೈಸ್ಕೂಲ್ ಸಹ ಕ್ರಿಸ್ತ ಮತದವರ ಮಿಷನ್ ಶಾಲೆಯಾಗಿತ್ತು. ಅದು ಫರ್ನ್ ಹಿಲ್ಲ್ ನಲ್ಲಿದ್ದ ನಮ್ಮ ಮನೆಯಿಂದ ಎರಡು ಮೈಲಿ ದೂರದಲ್ಲಿತ್ತು. ಛಳಿ-ಮಳೆ-ಬಿಸಿಲಲ್ಲಿ ನಡೆದುಕೊಂದು ಹೋಗುವ ರಸ್ತೆ ಊರ ಮಧ್ಯದ ಕೆರೆಯ ದಂಡೆಗುಂಟ ಹಾಯ್ದು ಹೋಗುತ್ತಿತ್ತು. ಊಟಿಯ ಮನ್ಸೂನ್ ಮಳೆಯ ಬಗ್ಗೆ ಹೇಳಲೇ ಬೇಕಿಲ್ಲ.

 ’ಶ್ರಾವಣದ ಕೊಳೆ’ ಎನ್ನುವ ಲೇಖನದಲ್ಲಿ ಎನ್ಕೆ ಕುಲಕರ್ಣಿಯವರು ಮಲೆನಾಡಿನ ಅಂಚಿನಲ್ಲಿದ್ದ ಧಾರವಾಡದ ಮಳೆಯನ್ನು ’ಜಿಟಿ ಜಿಟಿ, ಪಿಸಿ ಪಿಸಿ ಮಳ” ಅಂತ ವರ್ಣಿಸುತ್ತಾರೆ. ಇಂಗ್ಲಿಷ್ನಲ್ಲಿ ಜೋರಾಗಿ ಮಳೆ ಬಂದರೆ ’It rains cats and dog” ಅನ್ನುವ ರೂಢಿ. ಯಾರ್ಕ್ ಶೈರಿನಲ್ಲಿ ಅದಕ್ಕೆ ’’it rained stair rods’ ಅನ್ನುವ ರೂಪಕ ಕೊಡುತ್ತಾರೆ. ಊಟಿಯಲ್ಲಿ ಮಾತ್ರ ನಿಜವಾಗಿಯೂ ಮುಸಲ ಧಾರೆ ಮಳೆ! ಗಾಳಿ ಬೀಸಿದರೆ ೪೫ ಡಿಗ್ರಿಯಲ್ಲಿ ಬಂದು ಅಪ್ಪಳಿಸುತ್ತಿದ್ದ ಆ ಮಳೆಯ ನೀರು ಮನೆಯೊಳಗೆ ಬರದಿರಲು ನಮ್ಮ ಮನೆಯ ತಲಬಾಗಿಲಿನ ಹೊರಗೆ ಭದ್ರತೆಗಾಗಿ ಎರಡನೆಯ ತಗಡಿನ ಬಾಗಿಲು ಕಟ್ಟಿತ್ತು. ರಾತ್ರಿ ರಪ ರಪ ಅಂತ ಮಳೆ ನಿಜವಾಗಿಯೂ ಒನಕೆ (ಮುಸಲ್)ಯಿಂದ ಕುಟ್ಟಿದಂತೆ ಬಂದು ಅಪ್ಪಳಿಸುವುದು. ನನಗೆ ಮಲಗಲೂ ಅಂಜಿಕೆಯಾಗುತ್ತಿತ್ತು. ನರ್ಸರಿ ರೈಮ್ ದ Wee Willie Winkie ಬಂದನೇ ಅಂತ ಮತ್ತೆ ಮುಸುಕೆಳೆದುಕೊಂಡು ನಿದ್ದೆ ಹೋಗುತ್ತಿದ್ದೆ! ಅದರ ಒಂದು ಸಾಲು: Are the children in their bed, for it’s past ten o’clock? ಯಾವಾಗಲೂ ಆರ್ದ್ರ ಹವೆ, ಜೊತೆಗೆ ರಾತ್ರಿ ಹುಲ್ಲಿನಮೇಲೆ frost ಬೀಳುವ ಡಿಸೆಂಬರ್-ಜಾನೇವರಿ ತಿಂಗಳಿನ ಚಳಿಗಾಲದಲ್ಲಿ ಶಾಲೆಯಿಂದ ಮನೆಗೆ ಬರುವಷ್ಟರಲ್ಲಿ ರಕ್ಷಣೆಯಿರದ ನಮ್ಮಕಾಲಿನ ಬೆರಳುಗಳೆಲ್ಲ ಟೊಮೆಟೊದಂತೆ ಬಾತು ವಿಪರೀತ ತುರಿಕೆಯಾಗುತ್ತಿತ್ತು. ಇದು ಪ್ರತಿ ವರ್ಷ ಚಳಿಗಾಲದ ಅನುಭವ. ನಾವು ಚಿಕ್ಕ ಮಕ್ಕಳು. ನಮ್ಮ ಬವಣೆ ನೋಡಿ ನಮ್ಮ ಅವ್ವ – ಪಾಪ ಅವಳಿಗೇನು ಗೊತ್ತು, ಅದು ಏನು ಮತ್ತು ಯಾಕೆ ಅಂತ? – ಹಿತ್ತಾಳೆ ಪರಾತದಲ್ಲಿ ಬಿಸಿನೀರು ಉಪ್ಪು ಹಾಕಿ ಕಾಲುಗಳನ್ನು ಮುಳಿಗಿಸಿ ಕೂತು ಕೊಳ್ಳಲು ಹೇಳುವಳು. ಅದರಿಂದ ತುರಿಕೆಯೇನೂ ಶಮನವಾಗದಿದ್ದರೂ ಒಂದು ಕಾಲು ಗಂಟೆ ಅಣ್ಣ – ತಮ್ಮ ಶಾಲೆಯ ವಿಷಯ ಹರಟಲು ಅನುವಾಗುತ್ತಿತ್ತಲ್ಲ, ಮತ್ತು ತಾಯಿಯ ಪ್ರೀತಿ, ಅದೇ ಸಾಕು. ಮುಂದೆ ಒಂದು ದಶಕದ ನಂತರ ಅಲ್ಲಿಗಿಂತ ಹೆಚ್ಚು ಬೆಚ್ಚಗಿನ ಧಾರವಾಡಕ್ಕೆ ಬಂದ ನಂತರ ಆ ’ಬೇನೆ’ ಪೂರ್ತಿ ಹೋಗಿಯೇ ಬಿಟ್ಟಿತ್ತು – ಈ ದೇಶಕ್ಕೆ ಬರುವ ವರೆಗೆ! ಇಲ್ಲಿಗೆ (ಇಂಗ್ಲೆಂಡಿಗೆ) ಬಂದ ಹೊಸತರಲ್ಲಿ ನಮಗೆ ಕೊಟ್ಟ ಆಸ್ಪತ್ರೆಯೆ ಮನೆಯಲ್ಲಿ ಸರಿಯಾದ ಸೆಂಟ್ರಲ್ ಹೀಟಿಂಗ್ ಇರಲಿಲ್ಲ. ’ಟೆರೇಸ್ ಹೌಸಿನ’ ಅಟ್ಟದ ಕೆಳಗಿನ ಲೌಂಜಿನಲ್ಲಷ್ಟೇ ಒಂದು ಗ್ಯಾಸ್ ಹೀಟರ್. ಪೂರ್ತಿ ಗೋಡೆಯವರೆಗೆ ಸಹ ಚಾಚದ ಕಿರಿದಾದ ಕಾರ್ಪೆಟ್ಟು ಕೋಣೆಯ ಮಧ್ಯದಲ್ಲಿ. ಮಲಗುವ ಕೋಣೆಯಂತೂ ಐಸ್ ಬಾಕ್ಸ್! ಒಂದೇ ವಾರದಲ್ಲಿ ನನ್ನ ಊಟಿಯ ’ಟೊಮೇಟೋ ಪಾದಗಳು’ ಮತ್ತೆ ಹುಟ್ಟಿಬಂದವು! ಡಾಕ್ಟರ ಕಡೆಗೆ ಹೋದಾಗಲೇ ತಿಳಿದಿದ್ದು ನಾವು ಪುಸ್ತಕದಲ್ಲಿ ಓದಿದ್ದರೂ ಆದರೆ ನಮಗೆ ಕಲ್ಪಿಸಿ ಕೊಳ್ಳಲಾಗದ ’ಚಳಿ ಕಜ್ಜಿ” (chilblains) ಎಂದು ಅದಕ್ಕೆ ಕರೆಯುತ್ತಾರೆ ಅಂತ. ಅಂದರೆ ೨೫ ವರ್ಷಗಳ ನಂತರ ನನಗೇ retrospective diagnosis ಸಿಕ್ಕಿತ್ತು! ಕೆಲವರಷ್ಟೇ ಈ ’ದೋಷಕ್ಕೆ’ ಈಡಾಗುತ್ತಾರೆ ಅಂತ ಆಮೇಲೆ ತಿಳಿಯಿತು. ಚಳಿ ಮತ್ತು ತೇವಕ್ಕೆ ಒಡ್ಡಿದ ತುದಿ ಬೊಟ್ಟಿನ ರಕ್ತನಾಳಗಳ ಆಕುಂಚನದಿಂದ ಅವುಗಳು ಉಬ್ಬಿ ಹಾಗಾಗುತ್ತದೆ ಅಂತ. ಪಾಪ, ಅವ್ವನಿಗೆ ಆ ಜ್ಞಾನವಿರಲಿಲ್ಲವಲ್ಲ? ಯಾರು ತಿಳಿಹೇಳಬಹುದಿತ್ತು?

ಮರದ ಮೇಲೊಂದು ತಿತ್ತಿರಿ!

ಕಡುಬೇಸಿಗೆಯನ್ನು ತಾಳಲಾರದೆ ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ತಂಪು ಆದರೂ ಆಹ್ಲಾದಕರ ಹವೆಯನ್ನು ಹುಡುಕುತ್ತ ಭಾರತದಲ್ಲಿ ಬಿಡಾರ ಬಿಟ್ಟ ಬ್ರಿಟಿಷರು ಉತ್ತರದಲ್ಲಿದ್ದರೆ ಸಿಮ್ಲಾ, ದಕ್ಷೀಣದಲ್ಲಿದ್ದವರು ಊಟಿಗೆ ರಜೆಗೆ ಬರುತ್ತಿದ್ದರು. ಅದಕ್ಕೆ ‘going to the hills’ ಅನ್ನುವ ರೂಢಿ. ತದನಂತರ ಅದೇ ತರಹ ನಿವೃತ್ತ ಶಾಲಾ ಶಿಕ್ಷಕರಾಗಿದ್ದ ನನ್ನ ಅಜ್ಜ ಹಲವಾರು ಸಲ ಧಾರವಾಡದಿಂದ ಊಟಿಗೆ ನಮ್ಮ ಮನೆಗೆ ಬಂದು ಕೆಲ ತಿಂಗಳಿದ್ದು ಮರಳುತ್ತಿದ್ದರು. ನಮ್ಮ ಮನೆಗೆ ಬಂದಾಗ ಪ್ರತಿದಿನ ಬೆಳಿಗ್ಗೆ ನಾವು ಮೂವರು ಅಣ್ಣತಮ್ಮಂದಿರನ್ನು ತಮ್ಮ ಹತ್ತಿರ ಕೂಡ್ರಿಸಿಕೊಂಡು ಉಪನಿಷತ್ತುಗಳ ಶ್ಲೋಕಗಳನ್ನು ಮತ್ತು ಸಂಸ್ಕೃತವನ್ನು ಹೇಳಿಕೊಡುತ್ತಿದ್ದರು.  ಉಪನಿಷತ್: ಉಪ(ಹತ್ತಿರ) + ನಿ(ಶ್ರದ್ಧೆಯಿಂದ) + ಸತ್(ಕುಳಿತು) = ಉಪನಿಷತ್.  ಅದರಲ್ಲಿ ಈಶಾವಾಸ್ಯ, ತೈತ್ತಿರೇಯ ಉಪನಿಷತ್ತುಗಳ ಹಲವಾರು ಶ್ಲೋಕಗಳು ನೆನಪಿನಲ್ಲುಳಿದಿವೆ. ಆಗಲೇ ಬಹುಭಾಷಾವಿಶಾರದರಾಗಿದ್ದ ಅವರಿಗೆ ಇನ್ನು ತಮಿಳು ಭಾಷೆಯನ್ನು ಕಲಿಯುವ ಉತ್ಸಾಹ.  ನಾವು ಅವರಿಗೆ ತಮಿಳು ಓದಿ ಅವರು ಕಲಿಯಲು ಸಹಾಯ ಮಾಡುತ್ತಿದ್ದೆವು. ಆಗ ’ಕಲ್ಕಿ’ ಪತ್ರಿಕೆಯಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿಯವರ ರಾಮಾಯಣ ಧಾರಾವಾಹಿಯಾಗಿ ತಮಿಳಿನಲ್ಲಿ ಬರುತ್ತಿತ್ತು. ಇನ್ನುಳಿದ ಸಮಯದಲ್ಲಿ ಆಟ, ಪಾಠಗಳಲ್ಲಿ ನಮ್ಮ ರಜೆಯ ಸ್ವಚ್ಚಂದ ದಿನಗಳನ್ನು ಕಳೆಯುತ್ತಿದ್ದೆವು. ಮನೆಯ ತೋಟದಲ್ಲೇ ಕಾಯಿ ಪಲ್ಯೆ, ತರಕಾರಿ, ವಿವಿಧ ಗಡ್ಡೆಗಳನ್ನು ಬೆಳೆಯುತ್ತಿದ್ದೆವು. ನಮಗೆ ’ಗಿಡಮಂಗನ ಆಟ’ ಆಡಲು ಅನುಕೂಲವಾಗುವಂಥ ಅತಿ ಎತ್ತರವಲ್ಲದ ನಾಲ್ಕೈದು ಪೇರ್ (pear) ಹಣ್ಣಿನ ಮರಗಳು ಸಹ ಇದ್ದವು.

ಕ್ರಿಸ್ತ ಪಾದ್ರಿಗಳು ಕಲಿಸುತ್ತಿದ್ದ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬ ಜೋರಾಗಿ ಆಚರಿಸಲಾಗುತ್ತಿತ್ತು. ಚರ್ಚಿನಲ್ಲಿ ಕ್ರಿಸ್ಮಸ್ ಕ್ಯಾರಲ್ -Ten days of Christmas ಹಾಡುತ್ತಿದ್ದುದು ನಮಗೆ ಬಾಯಿಪಾಠವಾಗಿತ್ತು. On the first day of Christmas my true love sent to me a partridge in a pear tree ಎಂದು ಅದರ ಮೊದಲ ಸಾಲು. ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಮೊದಲ ದಿನ ಪ್ರೀತಿಯಿಂದ ಬಂದ ಉಡುಗೊರೆ ಪೇರ್ ಮರದಲ್ಲಿಯ ಒಂದು ತಿತ್ತಿರಿ (partridge) ಹಕ್ಕಿ ಅಂತ ಅದರ ಅರ್ಥ. ಪರ್ವತ ಪ್ರದೇಶದ ಊಟಿಯಲ್ಲಿ ಡಿಸೆಂಬರಿನಲ್ಲಿ ಸ್ವಲ್ಪಬೇಗನೆ ಕತ್ತಲೆಯಾಗುತ್ತಿತ್ತು, ಆದರೂ ಏಳೂ ವರೆಗೆ ರಾತ್ರಿಯ ಊಟ. ಅದೊಂದು ದಿನ ರಾತ್ರಿ ಊಟ ಇನ್ನೂ ಸಿದ್ಧವಾಗಿರಲಿಲ್ಲ. ನಮ್ಮ ದೊಡ್ಡ ಅಣ್ಣ ಯಾವುದೋ ವಿಷಯಕ್ಕಾಗಿ ಕೋಪ ಮಾಡಿಕೊಂಡು ಶಟಕೊಂಡು ”’ನಾನು ಮನೆ ಬಿಟ್ಟು ಹೋಗುತ್ತೇನೆ” ಅನ್ನುತ್ತ ಕಾಲು ಅಪ್ಪಳಿಸುತ್ತ ಹೊರಗೆ ಕತ್ತಲೆಯಿದ್ದರೂ ಬಾಗಿಲು ತೆರೆದು ಮನೆಯಿಂದ ಹೊರಗೆ ಓಡಿ ಹೋದ. ಅದೇನು ಮೊದಲ ಸಲವಲ್ಲ. ಮೊದಲೂ ಹೀಗೆಯೇ ಹೆದರಿಸಿದ್ದ! ಹತ್ತು-ಹದಿನೈದು ನಿಮಿಷಗಳಾದರೂ ಪತ್ತೆಯಿಲ್ಲ. ಹೊರಗೆ ದೀಪವಿಲ್ಲ, ಆಗಿನಕಾಲದಲ್ಲಿ. ಹುಳ, ಹುಪ್ಪಡಿ, ಹತ್ತಿರದ ಕಾಡು ಹುಲಿ-ಚಿರ್ಚುಗಳಂಥ ಕಾಡುಪ್ರಾಣಿಗಳ ಹೆದರಿಕೆ ಬೇರೆ. ಊಟ ಸಹ ಆಗಿಲ್ಲ, ತಾಯಿಗೆ ಸಂಕಟ. ನಾವಿಬ್ಬರೂ ಆತನ ಹೆಸರನ್ನು ಕೂಗುತ್ತ ಎರಡು-ಮೂರು ಸಲ ಮನೆಯ ಸುತ್ತ ಚಕ್ಕರ್ ಹೊಡೆದರೂ ಆತನ ಸುಳಿವಿಲ್ಲ, ಯಾವ ಸದ್ದೂ ಇಲ್ಲ. ನಮಗೆಲ್ಲ ಚಿಂತೆ. ಅವ್ವನಿಗ ತಳಮಳ. ನಾವಿಬ್ಬರು ತಮ್ಮಂದಿರು ಆತನನ್ನು ಹುಡುಕುತ್ತ ಹಿಂದಿನ ತೋಟದಲ್ಲಿ ನಿಂತು ‘ಅವನಿಲ್ಲಿಲ್ಲವಲ್ಲ’ ಅಂತ ನಾವು ಮಾತಾಡಿಕೊಂಡಾಗ ಪಕ್ಕದ ಮನೆಯ ನಾಯಿ ಬೊಗಳಲು ನಾವು ಹೆದರಿ ಓಡಲು ಶುರು ಮಾಡಿದೆವು. ಪೇರ್ ಮರದ ಕಡೆಯಿಂದ ಯಾರೋ ಕಿಸಕ್ಕನೆ ನಕ್ಕಂತೆ ಸದ್ದು. ಸ್ವಲ್ಪ ಸಿಟ್ಟು ಇಳಿದು ನಮ್ಮ ಪೇಚಾಟ ನೋಡಿ ತಡೆದುಕೊಳ್ಳಲಾರದೆ ಈ ತಮಾಷೆ ನೋಡಿ ಅಣ್ಣನಿಗೆ ನಗು!  ಅವನನ್ನು ಪುಸಲಾಯಿಸಿ ಒಳಗೆ ಕರೆದುಕೊಂದು ಬಂದ ಮೇಲೆಯೇ ಜೀವ ಬಂದಿತ್ತು ನಮ್ಮ ತಾಯಿಗೆ. ಆತನನ್ನು ಅಪ್ಪಿಕೊಂಡು ಕಣ್ಣೀರಿಟ್ಟು ಹೊಟ್ಟೆ ತುಂಬ ಉಣಿಸಿದ ದೃಶ್ಯಗಳನ್ನು (ಹೀಗೆ ಎರಡು ಮೂರು ಸಲ ಆಗಿತ್ತು!) ನಾವು ಎಂದೂ ಮರೆತಿಲ್ಲ. ಅದನ್ನು ಕಥೆಯಾಗಿ ನಮ್ಮ ಮಕ್ಕಳಿಗೆ, ಆತನ ಮೊಮ್ಮಕ್ಕಳಿಗೆ ಸಹ ಹೇಳಿ ಹಂಚಿಕೊಳ್ಳುತ್ತ ದಂತ ಕಥೆಯ ಮಟ್ಟಕ್ಕೆ ಏರಿಸಿಬಿಟ್ಟಿದ್ದೆವು! ಪೇರ್ ಮರದದಲ್ಲಿದ್ದುದು ಒಬ್ಬ ಹುಡುಗ ಅಲ್ಲದೆ ತಿತ್ತಿರಿ ಪಕ್ಷಿಯಲ್ಲ (partridge) ಅಂತ ಪ್ರತಿ ಕ್ರಿಸ್ಮಸ್ಸಿನಲ್ಲಿ ನೆನಪಾಗುವುದು. ಕಾಕತಾಳಿಯವೆಂಬಂತೆ ತೈತ್ತಿರೀಯ ಉಪನಿಷತ್ತಿಗೆ ಅ ಹೆಸರುಬಂದದ್ದೂ ತಿತ್ತಿರಿಯಿಂದಲೇ ಎನ್ನುವ ಕಥೆಯನ್ನು ಅಜ್ಜನಿಂದ ಉಪನಿಷತ್ ಪಾಠದಲ್ಲಿ ಕೇಳಿದಂತೆ ನೆನಪು!

ಹೊಲಿ ನಿನ್ನ ತುಟಿಗಳನು!

ನಮ್ಮ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಣ (co-educational) ಇತ್ತು.  ಜೆಲ್ ಮೆಮೋರಿಯಲ್ ಹುಡುಗಿಯರ ಶಾಲೆಯಾಗಿದ್ದರೂ ಮೂರನೆಯ ಕ್ಲಾಸಿನ ವರೆಗೆ ಗಂಡು ಹುಡುಗರಿಗೂ ಪ್ರವೇಶವಿತ್ತು. ಆದರೆ ನಾವು ಹುಡುಗರು ನಿಜಕ್ಕೂ ’ಮೈನಾರಿಟಿ”ಯಲ್ಲಿದ್ದೆವು. 20 ಜನರ ನನ್ನ ವರ್ಗದಲ್ಲಿ ನಾವು ಐದೇ ಹುಡುಗರು. ಶಾಲೆಯಲ್ಲಿ ಪಠ್ಯದ ಜೊತೆಗೆ ಹೊಲಿಗೆ-ಕಸೂತಿಯನ್ನೂ ಕಡ್ಡಾಯವಾಗಿ ಹೇಳಿಕೊಡುತ್ತಿದ್ದರು. ಮುಂದೆ ನಾನು ಕಣ್ಣಿನ ವೈದ್ಯನಾದಾಗ ಇದರ ಲಾಭ ಪಡೆದಿರಬೇಕು. ಯಾಕಂದರೆ ನೇತ್ರತಜ್ಞನಾಗಿ ವೃತ್ತಿ ಆರಂಭಿಸಿದ ಮೇಲೆ ಕಣ್ಣು, ಮತ್ತು ಮುಖದ ಮೇಲೆ ಆಪರೇಷನ್ ಮಾಡುವಾಗ ಪುಟ್ಟ ಪುಟ್ಟ ಸೂಕ್ಷ್ಮ ಹೊಲಿಗೆ (surgical sutures) ಹಾಕಲು ಬಾಲ್ಯದ ಪಾಠ ಸಹಾಯವಾಗಿರಬೇಕು ಅನಿಸುತ್ತದೆ!

ಆಶ್ಚರ್ಯವೆಂದರೆ ಹೊಲಿಗೆಯಲ್ಲಿ ಅವರೆಲ್ಲ ಹುಡುಗಿಯರಿಗಿಂತ ನನಗೇ ಹೆಚ್ಚು ಗುಣಗಳು ಬರುತ್ತಿದ್ದವು. ಅವೆರಡೂ ವರ್ಷ ನನಗೇ ಎಂಬ್ರಾಯ್ಡರಿಯಲ್ಲಿ ಸಹ ಮೊದಲ ಸ್ಥಾನ! ನಾನು ಹೇಳುವ ಉದ್ದೇಶ ಜಂಬಕ್ಕಲ್ಲ. ಮರೆತೇ ಹೋಗಿದ್ದ ಈ ಸಣ್ಣ ವಿಷಯವನ್ನು ಹೇಗೆ ದಶಕಗಳ ನಂತರ ನನಗೆ ಇನ್ನೊಬ್ಬರು ನೆನಪಿಸಿದರೆಂದು ಎನ್ನುವ ಮಾತು ಈಗಲೂ ಅಚ್ಚಾರಿಯನ್ನುಂಟು ಮಾಡುತ್ತದೆ. ಅದು ಆದದ್ದು ಹೀಗೆ:

ನಾನು ಮತ್ತು ನನ್ನ ಅಣ್ಣ ಕಲಿಯುತ್ತಿದ್ದಂತೆ ಒಬ್ಬ ಹುಡುಗಿ ಮತ್ತು ಆಕೆಯ ತಮ್ಮ (ನನ್ನ ಕ್ಲಾಸ್ ಮೇಟ್ ವಿನ್ಸೆಂಟನ ಹೆಸರು ಮಾತ್ರ ನನಗೆ ನೆನಪಿದೆ) ಸಹ ತಮ್ಮ ತಮ್ಮ ವರ್ಗಗಳಲ್ಲಿ ನಮ್ಮಿಬ್ಬರ ಸಹಪಾಠಿಗಳಾಗಿದ್ದರು. ಆ ನಂತರ ಸೆಕೆಂಡರಿ ಸ್ಕೂಲಿನಲ್ಲಿ ನಮ್ಮ ದಾರಿಗಳು ಬೇರೆ ಬೇರೆಯಾದವು. ವರ್ಷಗಳು ಉರುಳುತ್ತಿದ್ದರೂ ಒಂದು ದಿನ ನನ್ನ ಬಾಲ್ಯದ ಊರು, ಶಾಲೆ ಮತ್ತು ನಮ್ಮ ಮನೆಗೆ ಭೆಟ್ಟಿಕೊಡುವ ಕನಸು ಕಾಣುತ್ತಲೇ ಇದ್ದೆ. ಅದು ಕೈಗೂಡಿದ್ದು ಸುಮಾರು ನಲವತ್ತು ವರ್ಷಗಳ ನಂತರ, 1989ರಲ್ಲಿ, ನಾನು ಈ ದೇಶದಲ್ಲಿ ನೆಲೆಸಿದ ನಂತರ ರಜೆಯಲ್ಲಿ ಭಾರತಕ್ಕೆ ಹೋದಾಗ.

ಊಟಿ ಪಟ್ಟಣ ಒಂದು ಗುಡ್ಡದ ಮೇಲೆ. ಪಕ್ಕದ ಗುಡ್ಡ ’ಫರ್ನ್ ಹಿಲ್” ಅಲ್ಲಿಯೇ ನಮ್ಮ ಮನೆಯಿತ್ತು. ಅದಕ್ಕೆ ಪಾದುಕಾ ಎಂದು ಹೆಸರಿಟ್ಟಿದ್ದರು. ಆ ಮನೆಯ ಹಾಲಿ ಮಾಲೀಕರಿಗೆ ಒಂದು ಪತ್ರ ಬರೆದು ನಿಗದಿತ ದಿನದಂದು ಬೆಳಗ್ಗೆ 10 ಗಂಟೆಗೆ ನಾನು ಬಂದು ಭೆಟ್ಟಿಯಾಗುವ ವಿಷಯ ತಿಳಿಸಿದ್ದೆ. ಫರ್ನ ಹಿಲ್ಲಿನಲ್ಲಿ ಮೈಸೂರು ಮಹಾರಾಜರ ”ಭವಾನಿ ಹೌಸ್’ ಅರಮನೆಯಿತ್ತು. ಆ ಅರಮನೆಯ ಪಕ್ಕದಲ್ಲಿಯೇ ನಮ್ಮ ಗೆಸ್ಟ್ ಹೌಸ್. ನಮ್ಮ ಅಪಾಯಿಂಟ್ಮೆಂಟಿನ್ ಸಮಯಕ್ಕೆ  ಕಾಯದೆ ಬೆಳಿಗ್ಗೆ ಎದ್ದ ಕೂಡಲೇ ’ಪಾದುಕಾ’ಗೆ ಧಾವಿಸಿದೆ. ಆ ತಗಡಿನ ಬಾಗಿಲು ಮುಚ್ಚಿತ್ತು. ಈಗ ಕಾಲ್ಬೆಲ್. ಒತ್ತಿದಾಗ ನನ್ನ ಪ್ರತೀಕ್ಷೆಯಲ್ಲಿ ಇದ್ದ ಒಬ್ಬ ಮಧ್ಯವಯಸ್ಸಿನ ಹೆಂಗಸು ಬಾಗಿಲು ತೆರೆದಳು. ನನ್ನ ಹೆಸರು ಹೇಳಿದೆ. ಬರಮಾಡಿಕೊಳ್ಳುವ ಮೊದಲೇ ಆಕೆಯ ಬಾಯಿಂದ ಬಂದ ಮೊದಲ ಪ್ರಶ್ನೆ ನನ್ನನ್ನು ದಂಗು ಬಡಿಸಿತು: ”ನೀವಿಬ್ಬರೂ ಅಣ್ಣ ತಮ್ಮಂದಿರಲ್ಲಿ ಯಾರು ಹೊಲಿಗೆಯಲ್ಲಿ ಮುಂದೆ ಇದ್ದರು?” ಔಪಚಾರಿಕವಾಗಿಯೋ ಉಭಯ ಕುಶಲೋಪರಿ ವಿಚಾರಿಸಲಿಕ್ಕೋ, ಮಾತಾಡುವ ವಿಷಯಗಳಿರಲಿಲ್ಲವೇ ಆಕೆಗೆ ಅಂತ ಅದನ್ನು ನೆನೆದರೆ ಇಂದಿಗೂ ನಂಬಲಿಕ್ಕಾಗುವದಿಲ್ಲ. ”ಅದು ನಿಮಗೆ ಹೇಗೆ ಗೊತ್ತು?” ಅಂದೆ. ಆಗಲೇ ಆಕೆ ಹೇಳಿದ್ದು ಅವರ ಇಬ್ಬರು ಮಕ್ಕಳು- ಒಂದು ಗಂಡು ಒಬ್ಬ ಹೆಣ್ಣು ಮಕ್ಕಳೇ-ನಮ್ಮ ಸಹಪಾಠಿಗಳಾಗಿದ್ದರು ಎಂದು. ’ಸೆಲೆಕ್ಟಿವ್ ಮೆಮರಿ’ ಅಂದರೆ ಇದೇನಾ? ಆಮೇಲೆ ಬಹಳೇ ಸಂತೋಷದಿಂದ ಬರಮಾಡಿಕೊಂಡು ತನ್ನ ಮನೆಯೊಳಗೆ, ಹೊರಗೆ ಎಲ್ಲ ಕಡೆ ಕರೆದುಕೊಂಡು ತೋರಿಸಿದರು. ’ಪಾದುಕಾ’ ದೊಳಗೆ ಕಾಲಿಟ್ಟಾಗ ಆದ ರೋಮಾಂಚನ, ಹಳೆಯ ನೆನಪುಗಳೊಂದಿಗೆ ಹೊಸ ದೃಶ್ಯಗಳನ್ನು ಬೆಸೆದುಕೊಂಡು ಆಕಾಶದಲ್ಲಿ ಹಾರುತ್ತಿರುವಂಥ ಅನುಭವ! ಪಡಸಾಲೆ, ಮಲಗು ಮನೆ ಊಟದ ಮನೆ, ಹಿತ್ತಲ ಬಾಗಿಲಿನಿಂದ ಆ ಪೇರ್ ಮರಕ್ಕೆ ಹೋಗುವ ದಾರಿ ಎಲ್ಲವನ್ನೂ ಫೋಟೋ ಮತ್ತು ವಿಡಿಯೋದಲ್ಲಿ ಸೆರೆಹಿಡಿದೆ.  

ಈ ಘಟನೆಯನ್ನು ಹೇಳುವ ಉದ್ದೇಶ ಈ ’ಮಂಕು ತಿಮ್ಮ”ನ ಬಾಲ್ಯದ ದಿನಗಳ ಸ್ಮರಣೆಗಾಗಿ ಅಷ್ಟೇ. ಜಂಬ ಬೇಡ, ಹೊಲಿ ನಿನ್ನ ತುಟಿಗಳನ್ನು ಅನ್ನುವ ಡಿ ವಿ ಜಿಯವರ ಕಗ್ಗದ ಮಾತು ಎಚ್ಚರಿಸುತ್ತಿದೆ ನನ್ನ ಕಿವಿಯಲ್ಲಿ ಈಗ!

ಇತ್ತೀಚಿನ ಕೋವಿಡ್ ಸ್ಥಿತಿಯಲ್ಲಿ ಇನ್ನೊಮ್ಮೆ ನನ್ನ ಬಾಲ್ಯದ ದಿನಗಳನ್ನು ನೆನಪಿಸುವ ಊಟಿಗೆ ಭೇಟಿ ಕೊಡುವ ಕನಸು ನನಸಾಗುವ ಸಾಧ್ಯತೆಯಿಲ್ಲ ಅಂತ ನಿರಾಶೆಯಾಗಿದೆ.

************************************************************************

ನನ್ನ ಆಯಿ, ಓಣ್ಯಾಯಿ – ಗೌರಿ ಪ್ರಸನ್ನ

   ಬಾಲ್ಯ ಅಂದಕೂಡಲೇ ಥಟ್ಟನೆ ನೆನಪಿಗೆ ಬರುವವರು ಅಜ್ಜ-ಅಜ್ಜಿ. ಯಾವ ಕೊಡ-ತಗೊಳ್ಳೋ ಆಪೇಕ್ಷೆಯಿಲ್ಲದೇ ಅಂತಃಕರಣ ಸುರಿಸೋ ಜೀವಗಳು ಅಂದ್ರ ಈ ಅಜ್ಜ-ಅಜ್ಜಿಯರು. ನಮ್ಮ ಸವ೯ಜ್ಞ ಕವಿ ಹಾಡೂ ಹಂಗ ’ಮಜ್ಜಿಗೂಟಕೆ ಲೇಸು..ಮಜ್ಜನಕೆ ಮಡಿ ಲೇಸು..ಕಜ್ಜಾಯ ತುಪ್ಪ ಉಣಲೇಸು..ಮನೆಗೊಬ್ಬ ಅಜ್ಜಿಯೇ ಲೇಸು  ಸವ೯ಜ್ಞ’.

 ನಂಗ ನಮ್ಮ ಆಯಿ, ಅಂದ್ರ ನಮ್ಮ ಅಮ್ಮನ ಅಮ್ಮ, ಯಾವಾಗಲೂ ಬಹಳ ನೆನಪಾಗತಿರತಾಳ. ನಮ್ಮಜ್ಜಿ ನಮಗೆಲ್ಲ ಭಾಳ ‘ಅಚ್ಛಾ’ ಮಾಡತಿದ್ದಳೇನೋ ಖರೇ.. ಆದ್ರ ನಮ್ಮದೇನರೇ ಮಂಗ್ಯಾನಾಟ ನಡದ್ರ ‘ಉಣಲಿಕ್ಕೆ ಅಚ್ಛಾ..ತಿನಲಿಕ್ಕೆ ಅಚ್ವಾ..ಇದೆಲ್ಲಾ ಏನು ಒಣಾ ತಿರಕಚ್ಛಾ’ ಅಂತ ಜಬರಿಸಿ ಬಿಡಾಕಿ.

ಅಕಿಯಿಂದ ಮನಿ ತುಂಬ ಗದ್ದಲ; ಹಬ್ಬದ ವಾತಾವರಣ. ೪ ಜನ ಹೆಣ್ಣುಮಕ್ಕಳು, ೪ ಜನ ಅಳಿಯಂದಿರು,  ೫ ಜನ ಗಂಡುಮಕ್ಕಳು, ೪ ಜನ ಸೊಸೆಯಂದಿರು, ೨೪ ಮೊಮ್ಮಕ್ಕಳ ದೊಡ್ಡ ಸಂಸಾರ ಅವಳದು. ಬರಹೋಗುವವರಿಗಂತೂ ಬರವಿರಲಿಲ್ಲ.  ಮ್ಯಾಲೆ ಸ್ವಣ೯ಗೌರಿ, ವರಮಹಾಲಕ್ಷ್ಮಿ, ಋಷಿಪಂಚಮಿ, ಅನಂತ ಇತ್ಯಾದಿ ಹತ್ತು  ಹಲವಾರು ವ್ರತಾಚರಣೆಗಳ ನೆಪದಲ್ಲಿ ಮನೆತುಂಬ ಬಂಧು-ಬಾಂಧವರು. ಎಲ್ಲವನ್ನೂ – ಎಲ್ಲರನ್ನೂ ಅದ್ಹೆಂಗ ಅಚ್ಚುಕಟ್ಟಾಗಿ ನಿಭಾಯಿಸ್ತಿದ್ಲೋ ಭಗವಂತನೇ ಬಲ್ಲ.

  ಅರಿಶಿನದ ಛಾಯೆಯ ಬಿಳಿಬಣ್ಣದ, ಕುಲುಕುಲು ನಗುವಿನ ಲಕ್ಷಣವಾದ ಮುತ್ತೈದಿ ಅಕಿ. ಓದು ಬರಹ ಕಲಿತಿರದಿದ್ದರೂ ಲೆಕ್ಕ ಬಾಯ್ ತುದಿಯಲ್ಲಿ. ಮೂರುಜನಕ್ಕೂ- ನೂರುಜನಕ್ಕೂ ಬೇಕಾಗುವ ಅಡುಗೆಯ ಅಳತೆಯನ್ನು ಪಾವು-ಸೊಲಗೆಗಳಲ್ಲಿ ಕರಾರುವಕ್ಕಾಗಿ ಹೇಳುವವಳು. ಗೌರಿ ಹಾಡು, ದಶಾವತಾರದ ನಿಂದಾಸ್ತುತಿ, ಸಂಪೂಣ೯ ರಾಮಾಯಣದ ಹಾಡುಗಳಿರಲಿ.. ದೊಡ್ಡ ದೊಡ್ಡ ಗಂಟಿನ ಎಳೆಯ ರಂಗೋಲಿಗಳು; ನಾನಾ ನಮೂನಿ ಕ್ಯಾದಗಿ – ಹೂವಿನ  ಹೆರಳುಗಳು; ಚಿರೋಟಿ, ತರಗು, ಹತ್ತು ಹಲವಾರು ಥರದ  ಖಾದ್ಯಗಳ ರೆಸಿಪಿಗಳು.. ಅವಳೊಂದು ಖಜಾನೆ. ಆಕೆಯ ಹೆಸರು ಶಾರದಾಬಾಯಿ. ನಾನು ‘ಓಣ್ಯಾಯಿ’ ಅಂತಿದ್ದೆ. ಇದೆಂಥಾ ಹೆಸರು ಅಂದ್ಯ್ರಾ? ಅದಕ್ಕೂ ಒಂದು ಇತಿಹಾಸನೋ ,ಪುರಾಣನೋ ಏನಂತೀರೋ ಅನ್ರಿ..ಅದು ಅದ. ನಾನು ನಮ್ಮಾಯಿಗೆ ಮೊದಲನೇ ಮೊಮ್ಮಗಳು. ಹಿಂಗಾಗಿ ಸ್ವಾಭಾವಿಕವಾಗಿಯೇ ಅಚ್ಛಾ, ಪ್ರೀತಿ ಎಲ್ಲಾದಕ್ಕೂ ಏಕಮೇವ ಅಧಿಕಾರ. ಮುಂದ ಒಂದೆರಡು ವಷ೯ದಾಗ ನಮ್ಮ ಮಾಮಾನ ಮಗಳು ಹುಟ್ಟಿದ್ಲಂತ. ಅಕಿನ್ನ ಹೆಸರು ‘ರೋಹಿಣಿ’. ಅದಕ್ಕಽ ನಮ್ಮ ಮಾಮ – ಮಾಂಶಿಯರೆಲ್ಲ ‘ಅಕಿ ನಿಮ್ಮ ಆಯಿ ಅಲ್ಲ..ರೋಹಿಣಿ ಆಯಿ’ ಅಂದಂದು ನನ್ನ ತೊದಲು ಬಾಯಲ್ಲಿ ಅದು ‘ಓಣ್ಯಾಯಿ’ ಆಗಿ ಬರೀ ನಮ್ಮ ಮನೆ ಮಕ್ಕಳಿಗಷ್ಟೇ ಅಲ್ಲದಽ ಇಡಿಯ ಓಣಿಗೇ ‘ಓಣ್ಯಾಯಿ’ ಆಗಿಬಿಟ್ಲು.

    ಆಕೆಯ ತಕ೯ಗಳು,ಆಪದ್ಧಮ೯ಗಳು ಇವುಗಳ ಬಗೆಗೆಲ್ಲ ನೆನೆಸಿಕೊಂಡರೆ ಬಹಳ ಹೆಮ್ಮೆ ಅನಸತದ. ಒಮ್ಮೆ ಮಧ್ಯಾಹ್ನ ೨-೩ ರ ಸುಮಾರಿಗೆ ಬಾಜೂ ಮನಿಯ ಶಿವಮೊಗ್ಗಿ ಪಮ್ಮಕ್ಕಜ್ಜಿ ನಮ್ಮನಿಗೆ ಬಂದು ‘ಒಂದು ಕೊಡ ಮಡಿನೀರು ಇದ್ರ ಬೇಕಾಗಿತ್ತು. ಯಾರೋ ಆಚಾರ್ಯರು ಅಚಾನಕ್ ಆಗಿ ಊರಿಂದ ಬಂದಾರ .ಅವರಿಗೆ ಮಡೀಲೆ ಅಡಿಗಿ, ಪೂಜಾ ಎಲ್ಲ ಆಗಬೇಕು’ ಅಂತ ಕೇಳಿದ್ರು. (ಬಿಜಾಪೂರದಲ್ಲಿ ವಾರಕ್ಕೊಮ್ಮೆ ನಳ ಬರುತ್ತಿದ್ದುದರಿಂದ ತುಳಸಿ ಹಾಕಿ ಮಡಿನೀರನ್ನೂ ಕಾಯ್ದಿಟ್ಟುಕೊಳ್ಳಬೇಕಾಗುತ್ತಿತ್ತು.) ‘ಆಯ್ತು..ತಗೊಂಡ ಹೋಗ್ರಿ’ ಅಂದ ನಮ್ಮಜ್ಜಿ ಒಳಗ ಬಂದು ನೋಡಿದ್ರ ಮಡಿನೀರು ಇಲ್ಲ. ‘ಆ ತುಂಬಿದ ತಾಮ್ರದ ಕೊಡ ಒಯ್ಯಿರಿ’ ಅಂತ ಸಾದಾ ನೀರು ಕೊಟ್ಟು ಕಳಿಸಿದ್ಲು. ನಾ ಮದಲಽ ಉಪದ್ವ್ಯಾಪಿ. ’ಓಣ್ಯಾಯಿ, ಅವರು ಮಡಿನೀರು ಅಂದ್ರ ನೀ ಸಾದಾ ನೀರು ಕಳಿಸಿದ್ಯೆಲಾ’ ಅಂದೆ – ಪುಣ್ಯಾಕ್ಕ ಅವರು ಹೋದಮ್ಯಾಲೆ. ಅಕಿ ಹೇಳಿದ ಉತ್ತರ ನನಗಿನ್ನೂ ನೆನಪದ, ಅಷ್ಟೇ ಅಲ್ಲ ಎಷ್ಟೋ ಸಂದರ್ಭಗಳಲ್ಲಿ ನನ್ನನ್ನು ‘ದುವಿಧಾ’ದಿಂದ  ಪಾರುಮಾಡಿದೆ. ’ಹೀಂಗ ಹೊತ್ತಿಲ್ಲದ ಹೊತ್ತಿನಾಗ ನಮ್ಮ ಮನ್ಯಾಗ ಮಡಿನೀರು ಇದ್ದೇ ಇರತಾವ ಅಂತ ನಂಬಕೀಲೇ ಬಂದಾರ. ಇಲ್ಲ ಅಂತ ಕಳಿಸಿದ್ರ ಆ ಹಸಿದ ಬ್ರಾಹ್ಮಣರ ಪೂಜಿ, ಊಟಾ ಆಗಂಗಿಲ್ಲ. ಈಗ ಪಮ್ಮಕ್ಕ ಮತ್ತ ಆ ಆಚಾರ್ಯರಿಗಂತೂ ಅದು ಮಡಿನೀರೇನಽ. ಅಲ್ಲ ಅಂತ ನಂಗ ಗೊತ್ತದ. ಅದರ  ಪಾಪ ನನಗ ಸುತಗೋತದ.. ನಡೀತದ. ಅವರಿಗೆ ಏನೂ ಆಗಂಗಿಲ್ಲ. ಹಸಿದವರ ಹೊಟ್ಟಿ ತುಂಬಬೇಕು.. ಹಾರುವ ಹಸಕೊಂಡಿರಬಾರದು’ ಅಂದ್ಲು.  ಎಂಥ ಉನ್ನತ ವಿಚಾರ ಅಲ್ಲ?!  ‘ಇಲ್ಲ’ ಅಂದಬಿಡೂದು ಭಾಳ ಸರಳ. ಆದ್ರ ಪಾಪನ್ನೆಲ್ಲ ತನ್ನ ತಲೆಮೇಲೆ ಹೇರಿಕೊಂಡು ಇನ್ನೊಬ್ಬರಿಗೆ ಕೊಡುವುದು ಭಾಳ ಕಷ್ಟದ ಕೆಲಸ. ದೇವರು, ಕಮ೯ಫಲ… ಅನ್ನುವುದೆಲ್ಲ ಇದ್ದರೆ ಖಂಡಿತ ಅಕಿಗೆ ಪಾಪ ಬಂದಿರುವುದಿಲ್ಲ. ಉಲ್ಟಾ ಪುಣ್ಯದ ಒಂದೆರಡು ಪಾಲು ಹೆಚ್ಚಿಗೇ ಸಂದಾಯ ಆಗಿರತಾವ ಅಕಿನ್ನ ಅಕೌಂಟಿನಾಗ.

   ಈ ನಮ್ಮ ಓಣ್ಯಾಯಿ ಒಂಥರಾ snoozeಗೆ ಇಟ್ಟ ಮೊಬೈಲ್ ದ ಆಲಾರಂ ಥರ. ‘ಮುಂಜಾನೆ ಲಗೂ ಎಬ್ಬಸು…ಪರೀಕ್ಷಾಕ್ಕ ಓದಿಕೊಳ್ಳೋದದ’ ಅಂತೇನರೇ ಅಪ್ಪಿತಪ್ಪಿ ಹೇಳಿಬಿಟ್ಟಿದ್ರ ನಸುಕಿನ ೪ ರಿಂದಲೇ ಶುರು. ‘ಏಳು.. ಲಗೂ ಎಬ್ಬಸು ಅಂದಿದ್ದೀ. ೬ ಆಗೇದ ನೋಡು’ ಅಂತ ಯಾರಿಗೂ ಜಗ್ಗದ ಕಾಲರಾಯನನ್ನೇ ಹಿಗ್ಗಾಮುಗ್ಗಾ ಓಡಿಸ್ಯಾಡಬಿಡಕೀರಿ. ಇನ್ನಽ ೬:೩೦, ೭ ಆಗಿರಲಿಕ್ಕಿಲ್ಲ ‘ಇದೇನಽ ತೀರಾ ಇಷ್ಟೊತ್ತು ಮಲಗೂದು..ಸೂರ್ಯ ನೆತ್ತಿ ಮ್ಯಾಲೆ ಬಂದ..ಇನ್ನ ‘ಕು..’ ಮ್ಯಾಲ ಮಾಡಕೊಂಡು ಬಿದ್ದೀದಿ?’ ಅಂತ ಅದೇ ತಾನೇ ಹುಟ್ಟಿದ ಸೂಯ೯ನಿಗೂ ದಿಗ್ಭ್ರಮೆ ಹುಟ್ಟಿಸಿಬಿಡಾಕೀರಿ. ಇನ್ನ ಏನರೇ ಹಬ್ಬ-ಹುಣ್ಣಿಮಿ ಇತ್ತಿಲ್ಲ.. ಬ್ಯಾಡ ತಗೀರಿ ಅದರ ಸುದ್ದಿ. ‘ಇವತ್ತ ಉಗಾದಿ. ಏಳು.. ವರುಷದ ಮದಲನೇ ಹಬ್ಬ.. ಇವತ್ತಽ ಹೀಂಗ ಮಲಕೊಂಡರ ಹೆಂಗ? ಸಣ್ಣ ಹುಡುಗೂರು ಹೆಂಗ ಇರಬೇಕು ಜಿಂಕಿ ಹಂಗಽ..ಭಡಾಭಡಾ ಎದ್ದು, ಲಕಾಲಕಾ ತಯಾರಾಗಿ ಸರಾಭರಾ ಅಂತ ಓಡಾಡಬೇಕು’ ಅನ್ನಾಕಿ.

ಚೌತಿ-ಪಂಚಮಿ ಬಂತಂದ್ರ ‘ಏಳ್ರವಾ. ನಾಗಪ್ಪಗ ಹಾಲು ಹಾಕಬೇಕು. ತಿರುಗಿ ಬಾಜೂಮನಿ ಪಮ್ಮಕ್ಕ, ಎದುರಮನಿ ಶಾರಕ್ಕ ಎಲ್ಲಾರೂ ಹೋಗಿ ಹಾಲು ಹಾಕಿ ಬಂದ್ರು. (ಈಕಿಗೆ ಒಳಗ ಮಂಚದ ಮ್ಯಾಲೆ ಕೂತಲ್ಲೇ ಅವರೆಲ್ಲ ಹೆಂಗ ಕಾಣಸತಿದ್ರು ಅನ್ನೂದು ನನಗಿನ್ನೂ ಯಕ್ಷಪ್ರಶ್ನೆನೇ!) ಈಗಿನ್ನ ಅವರೆಲ್ಲಾರೂ ತಂಬಿಟ್ಟು- ಖಣ ಕೊಡಲಿಕ್ಕೆ ಬರತಾರ. ನೀವ ನೋಡಿದ್ರ ಹಾಸಿಗಿ ಹರವಿಕೊಂಡು ಮಲಗೀರಿ..ಏಳ್ರಿ.. ಒಬ್ಬೊಬ್ಬರೇ ಎದ್ದು, ಎಣ್ಣಿ ಹಚಗೊಂಡು, ಎರಕೊಳ್ಳೂದರಾಗ ‘ಢಣ್’ ಅಂತದ’  ಅನ್ನಾಕಿ. (ನಂಗೂ ಗೊತ್ತಿಲ್ಲ ಏನ ಢಣ್ ಅಂತದೋ ಅಂತ) ಗಣೇಶ ಚೌತಿ ದಿನಾ ಕಡಬು – ಬುರಬುರಿ – ಚಿತ್ರಾನ್ನ ಅಂತ ಮಸ್ತ್ ಪೈಕಿ ಊಟಾ ಗಡದ್ದಾಗಿ ಹೊಡದು ಕಣ್ಣ ಎಳೀತಾವಂತ ಅಡ್ಡಾಗಲಿಕ್ಕೆ ಹೋದರ ‘ಅಯ್ಯ, ಈಗೇನ ಮಲಗತೀಯ? ಇವತ್ತ ಸುಬ್ಭಣಾಚಾರ್ರು ಲಗೂನೇ ೫ ಕ್ಕೇ ಬರತೀನಂದಾರ ಉತ್ತರಪೂಜಾಕ್ಕ. ಹೋಗು ಲಗೂ ಲಗೂ ಹೆರಳು-ಮಾರಿ ಮಾಡಕೊಂಡು ಎಲ್ಲಾರನ್ನೂ ಅರಿಶಿಣ-ಕುಂಕುಮಕ್ಕ ಕರದ ಬಾ. ಹೋದಸಲ ಆ ಬಮ್ಮಣಗಿ ಶಾರಕ್ಕನ್ನ  ಕರಿಯೂದು ಮರತಽಬಿಟ್ಟಿದ್ದೀ.. ಮತ್ತ ಈ ಸಲಾನೂ ಹಂಗೇ ಮಾಡಿಬಿಡಬ್ಯಾಡ.’ ಅಂತ ಗಡಿಬಿಡಿ ಮಾಡಾಕಿ.

ಇನ್ನ ದೀಪಾವಳಿ ಬಂತಂದ್ರಂತೂ ಮುಗದಽ ಹೋತರಿ. ಪುಣ್ಯಾಕ್ಕ ಅವತ್ತ ಎದ್ದು ಹಲ್ಲು ತಿಕ್ಕೊಂಡು ಸೀದಾ ಹೊಸ ಬಟ್ಟಿ ಹಾಕೊಂಡ್ರ ಆತರೀ.. ಆರತಿಗೆ ತಯಾರ. ಮುಂಜಾನೆ ೪ – ೪:೩೦ ಯ ಚುಮುಚುಮು ನಸುಕಿನ್ಯಾಗ ಕೆಟ್ಟ ಥಂಡಿ. ಥಳಿ – ರಂಗೋಲಿ, ಪ್ರಣತಿ -ತುಳಸೀ ದೀಪ ಅಂತ ಇಷ್ಟಗಲ ತಲಬಾಗಲಾ ತಗದಽ ಇಟ್ಟಬಿಟ್ರ ಎರಡೆರಡು ಚಾದರ (ನಮ್ಮ ಬಿಜಾಪೂರದಾಗ ರಗ್ಗು ಅಂದ್ರೇನಂತ ಗೊತ್ತಿರಲಿಲ್ಲ) ಎಳಕೊಂಡ ಎಳಕೊಂಡ ಎಷ್ಟು ಮುದ್ದೆ ಆಗಿ ಮಲಗಿದ್ರೂ ಗಡಗಡ ನಡುಗಿ ನಿದ್ದಿ ಹಾರೇ ಹೋಗತಿತ್ತು ಅನ್ರಿ.

  ಇನ್ನ ಯಾವಾಗರೇ ಸೂಟಿ, ರವಿವಾರ ಅಂತ ಮಧ್ಯಾಹ್ನ ಮಲಕೊಳ್ಳಿಕ್ಕೆ ಹೋದ್ರ ‘ಏನ ನಟ್ಟ ಕಡದೀಯವಾ, ಹೊತಗೊಂಡು ಮಲಕೋಳಿಕ್ಕೆ.. ಎದ್ದು ನಿನ್ನ ಪುಸ್ತಕ ಮಾಡಾ ಸ್ವಚ್ಛ ಮಾಡಕೋಬಾರದ? ಎಷ್ಟು ಹರವಿ ನೋಡು.. ಆ ರಿಬ್ಬನ್ ಹೊಲಸ ಖಮಟ ಆಗ್ಯಾವ. ಒಂಚೂರು ಸಾಬಾಣ ಹಚ್ಚಿ ಒಕ್ಕೋಬಾರದ?’ ಅಂತೆಲ್ಲ ಮಾಡಬೇಕಾದ ಕೆಲಸಗಳ ಇಷ್ಟುದ್ದದ ಲಿಸ್ಟ್ ಹೇಳಿ ನಮ್ಮೊಳಗೆ ‘ಇಷ್ಟ ಕೆಲಸಾ ಇಟಗೊಂಡು ಮಲಗೀನಲಾ’ ಅನ್ನೋ ಅಪರಾಧೀಪ್ರಜ್ಞೆಯನ್ನು ಜಾಗೃತ ಮಾಡಿಬಿಡಾಕೀರಿ ಅಕಿ.

ಬರೀ ನಮ್ಮಾಯಿ ಅಷ್ಟೇ ಅಲ್ಲ; ಓಣಿಯ ಆಯಿ- ಓಣ್ಯಾಯಿ ಈಕಿ. ಮಂಚದ ಮೇಲೆ ಕುಳಿತೇ ದಬಾ೯ರು ನಡೆಸುವಾಕಿ. ಮೈ ಕುಣಿಸುತ್ತ ನಕ್ಕು ಎಲ್ಲರ ಮೈ ಮರೆಸುವಾಕಿ. ‘ಶೆಕೆ’ ಎಂದು ಬೆಂದಾಗ ಸೆರಗಿನ ಚಾಮರದಿಂದ ಗಾಳಿ ಬೀಸುವಾಕಿ. ‘ಥಂಡಿ’ ಎಂದಾಗ ಬೆಚ್ಚಗೆ ಅಪ್ಪಿಕೊಳ್ಳುವಾಕಿ. ಅಳುವಾಗ ರಮಿಸುವಾಕಿ. ಜಗಳಾಡಿದಾಗ ಬಯ್ದು ರಾಜಿ ಮಾಡಿಸುವಾಕಿ. ‘ಬೋಕಾಣಿ ಸಿದ್ಧ್ಯಾರ’ ಎಂದು ಜೋರು ಮಾಡುವಾಕಿ. ಒಂದು ಕೇಳಿದರೆ ಎರಡೆರಡು ಉಂಡಿಗಳನ್ನು ಕೈಗೆ ನೀಡುವಾಕಿ. ‘ಬಾಳೆಕಾಯಿ’ ಗಂಟಿನಿಂದ ನಾಣ್ಯಗಳನ್ನು ತೆಗೆದು ಜಾದೂ ಮಾಡುವಾಕಿ. ಖಲಬತ್ತಲಿನಲ್ಲಿ ಎಲೆಯಡಿಕೆ ಕುಟ್ಟಿ ವೀಳ್ಯದ ರುಚಿ ಹಚ್ದಾಕಿ. ಎರಡು ತುತ್ತು ಕಮ್ಮಿ ತಿಂದರೆ ‘ದೃಷ್ಟಿ’ಯಾಯಿತೆಂದು ಅಯ್ಯನ ಮಠದಿಂದ ತಾಯತ ಮಂತ್ರಿಸಿ ತರುವಾಕಿ. ಮಲಗಿದಾಗ ಕೋಲಿಂದ ತಿವಿದು ಎಚ್ಚರಿಸುವಾಕಿ. ಕುಂಟುತ್ತಲೇ ಕತ್ತಲಲ್ಲಿ ನಮ್ಮ ‘ಜೋಡಿ’ ಬರುವಾಕಿ.

‘ಮತ್ಸ್ಯನೆಂದು ಬಲು ಬಡಾಯಿ ಹೇಳತಿ ಹೆಂಗ ಬಂದ್ಯೋ ನೀ ಊರಾಗ..’ ಎಂದು ದಶಾವತಾರದ ಮಹಾವಿಷ್ಣುವಿಗೇ ‘ಚಾಲೆಂಜ್’ ಮಾಡುವಾಕಿ.’ ‘ಚೈತ್ರ ಶುದ್ಧ ಹಗಲು ನವಮಿ ರಾಮ ಜನಿಸಿದ. ಬಿದ್ದ ಶಿಲೆಯ  ಪಾದದಿಂದುದ್ಧಾರ ಮಾಡಿದಾ’ ಎಂದು ಇಡಿಯ ರಾಮಾಯಣವನ್ನೇ ನಾಲಗೆ ತುದಿಯಲ್ಲಿ ಇಟ್ಟುಕೊಂಡಾಕಿ. ವರಮಹಾಲಕ್ಷ್ಮಿ – ಸ್ವಣ೯ಗೌರಿಯರೊಡನೆ ನೆಂಟಸ್ತಿಕೆ ಕಟ್ಟಿಕೊಂಡಾಕಿ. ಒಂದಾಣೆಯ ಮುಡಿಪು ಕಟ್ಟಿಟ್ಟು ವಾಯುಜೀವೋತ್ತಮ ಭೋಗಾಪುರೇಶನನ್ನು ಕೆಲಸ ಮಾಡಲು ‘ಮಜಬೂರ್’ ಮಾಡುವಾಕಿ. ಎಲ್ಲರ ಪಾಲಿನ ಹಾಲು ಕುಡಿಸಿ ಚೌತಿಯ ನಾಗಪ್ಪನನ್ನೇ ದಣಿಸಿಬಿಡಾಕಿ.

  ಎದೆಯ ಗೂಡಲ್ಲಿ ಬೆಚ್ಚನೆಯ ನೆನಪಾಗಿ ಉಳಿದಾಕಿ. ನೆನಪಾಗಿ ಕಾಡಿ ಕಣ್ಣಂಚು ಒದ್ದೆ ಮಾಡುವಾಕಿ. ನಮ್ಮಾಯಿ..ಅಲ್ಲ, ಓಣ್ಯಾಯಿ.. ಅಲ್ಲಲ್ಲ, ‘ಮಹಾಮಾಯಿ’ ಆಕೆ.

**************************************************************

ಸಂಪಾದಕರ ಟಿಪ್ಪಣಿ: ಗೌರಿಯವರ ಬರಹ, ಬರಿಯ ಅಜ್ಜಿಯ ಬಗೆಗಲ್ಲದೇ ಶುದ್ಧ ಬಿಜಾಪುರ (ಈಗ ವಿಜಯಪುರ) ದ ನೆಲದ ಮಾತಿನ ಕನ್ನಡದ ಘಮಲನ್ನೂ ಹಂಚುತ್ತದೆ. ಇದನ್ನು ಮನಸ್ಸಿನಲ್ಲಲ್ಲ, ಜೋರಾಗಿ ಅಕ್ಕ-ಪಕ್ಕದವರಿಗೆ ಕೇಳುವಂತೆ ಓದಿ ಮಜಾ ತೊಗೊಳ್ಳೋದು ಒಳ್ಳೆಯದು!

`ಈ ಹೊತ್ತಿಗೆ` ನವರಾತ್ರಿ ಕಾವ್ಯೋತ್ಸವ – ಭಾಗ ೨.

ಹೋದ ವಾರ ಪ್ರಕಟವಾದ `ಈ ಹೊತ್ತಿಗೆ` ನವರಾತ್ರಿ ಕಾವ್ಯೋತ್ಸವದ ವರದಿ ಮತ್ತು ಕವನಗಳನ್ನು ತಾವೆಲ್ಲಾ ಓದಿದ್ದೀರಿ. ಈ ವಾರ ಆ ಕಾರ್ಯಕ್ರಮದ ಎರಡನೇ ಕಂತು ಕೆಳಗಿದೆ; ಅದರಲ್ಲಿ ಅಂದು ಓದಲ್ಪಟ್ಟ ಉಳಿದ ಕವಿತೆಗಳು ಇವೆ. ಓದಿ ಆನಂದಿಸಿ. – ಎಲ್ಲೆನ್ ಗುಡೂರ್ (ಸಂ.)

  ನೆನಪುಗಳು  -  ಡಾ. ಪ್ರೇಮಲತ ಬಿ. 
 
ಬೆಳ್ಳಂಬೆಳಗು ನಸುನಕ್ಕು
 ಮತ್ತೆ ಬಂದಿಹೆನೆಂಬ ಹೊತ್ತಲ್ಲಿ
 ಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿ
 ವರ್ತಮಾನವ ಕದಡದಿರಿ
 ಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿ
 ನೋವು ನಲಿವುಗಳ ಚಿತ್ತಾರದ ರಂಗೋಲಿ
 ಹಾಲುಕ್ಕಿ ಹರಿದ ಬದುಕಿನಲಿ
 ಒಂದೊಂದೇ ಪಾರಿಜಾತಗಳು ಜಾರಿ ಉದುರಿ
 ಭೂತದ ನೆರಳುಗಳಿಗೆ ಇಂದು
 ಹೊಸರೆಕ್ಕೆ ಕಟ್ಟಿ ಅಗಲಿಕೆಯ ನೋವು,
 ವಿರಹದ ಕಾವು ತುಂಬಿಹ ಬೆಂಗಾಡಿನ
 ಮಾಯೆ ಮರುಳಿಗೆ ಹೊತ್ತೊಯ್ಯದಿರಿ
 ಬರಗಾಲದ ಬಿರು ಬಿಸಿಲಿಗೆ
 ನಿಡುಸುಯ್ದ ಈ ಇಹಕ್ಕೆ
 ಮರಳಿ ಅರಳುವ ಬಯಕೆ
 ನೀರು ಹುಯ್ಯುವವರಿಲ್ಲ
 ಒಂಟಿ ಮರಕ್ಕೆ
 ಸಂಜೆ ಗಾಳಿಯ ಹಿತ ಆಳಕ್ಕೆ ಇರಿದ ಕೆಂಪಿನಲಿ
 ಮನಸ್ಸರಳಿ ಹಿತವಾಗಿ ನರಳುತ್ತದೆ
 ಅವನೆದೆ ಕಾವಿನಲಿ ಕರಗುತ್ತದೆ
 ಸೆಟೆದ ನರನಾಡಿಗಳು ಅದುರಿ
 ಹಗುರಾಗಿ ಬಿಡುತ್ತವೆ
 ಕೂಡಿ ಕಳೆದುಹೋಗುವ ತವಕದಲಿ
 ಕಣ್ಣೆವೆ ಭಾರವಾಗುವ ಹೊತ್ತಲ್ಲಿ
 ನಿಮ್ಮ ಒತ್ತಾಸೆಯಿರಲಿ ನನಗೆ
 ನನ್ನ ಬಿಡದಿರಿ,ಬಿಡದೆ ಕಾಡದಿರಿ
 ಅಣಕಿಸದಿರಿ ನೆನಪುಗಳೆ, ಬದುಕಿದು
 ವೃದ್ಧಾಪ್ಯದಲಿ ಒಂಟಿ ಮುದುಕಿ.
 
***************************************************** 
 ಕಾಯಲೇಬೇಕಲ್ಲ......... - ಅಮಿತಾ ರವಿಕಿರಣ
 
 ಬಂದಿಲ್ಲಿ ಜಾವ ಕಳೆದಿಲ್ಲ.. 
 ಅದಾಗಲೇ ಸಮಯ ಸರಿಯುತ್ತಿಲ್ಲ..
 
 ಸೂರ್ಯ ಮುಳುಗುತ್ತಿಲ್ಲ
 ಚಂದ್ರ ನಗುತ್ತಿಲ್ಲ,
 ಸಂಜೆಯ ಆ ತುಳಸಿ ದೀಪದ ಮಿಣುಕಿಲ್ಲ
 ಮಂತ್ರ ಭಜನೆಯ ಜೊತೆಗೆ ಊದುಬತ್ತಿ ಲೊಬಾನದ ಘಮವಿಲ್ಲ
 ನನಗಿಲ್ಲಿ ಸಮಯ ಸರಿಯುತ್ತಿಲ್ಲ
 
 ಸೊಳ್ಳೆಯ ಕಿರಿಕಿರಿಯಿಲ್ಲ 
 ಇರುವೆ ಸಕ್ಕರೆಯ ಮುತ್ತುವುದಿಲ್ಲ
 ಜಿರಳೆಗಳ ಚಿರಿಪಿರಿಯೂ ಇಲ್ಲ..
 ಹಲ್ಲಿ ಲೊಚಗುಡುವುದಿಲ್ಲ,
 ಸಂಜೆಯ ಸಂಗೀತಕ್ಕೆ ಜೀ ಗೊಡುವ ಜೀರುಂಡೆಯೂ ಇಲ್ಲ..
 ಚಾ ಸಮಯಕ್ಕೆ ಸರಿಯಾಗಿ ಟೋಸ್ಟ್ ಬೇಕೆಂದು ಹಿಂದೆ ಮುಂದೆ ಸುತ್ತಿ ಸಿಟ್ಟು 
 ಬರಿಸುವ ನಾಯಿ ಇಲ್ಲ..
 ಆದರೂ ಇಲ್ಲಿ ಯಾಕೋ ಸರಿ ಹೋಗುತ್ತಿಲ್ಲ...
 
 ಬಿಸಿಲಿಗೆ ಝಳವಿಲ್ಲ, ಮಳೆ ಇದೆ ಗುಡುಗು ಮಿಂಚಿಲ್ಲ... ರಸ್ತೆಬದಿ ನಿಲ್ಲುವ 
 ಕೆಂಬಣ್ಣದ ನೀರ ಓಕುಳಿ ಇಲ್ಲ..
 ಎಲ್ಲೆಲ್ಲೂ ಶುಭ್ರ ಸುಭಗ ಎನಿಸುವ ಈ ನಾಡು ನನ್ನದೆನಿಸುತ್ತಿಲ್ಲ...
 
 ಟಿವಿಯಲ್ಲಿ ಬಂದು ವೃಥಾ ನಮ್ಮ ಸಮಯ ತಿನ್ನುವ ಮಹದೇವಿ, ನಾಗಿಣಿ, 
ಸುಬ್ಬಲಕುಮಿ, ಶನಿ ಇನ್ನಿತರರಿಲ್ಲ.
 ರಸ್ತೆ ಮೇಲೆ ವೃಥಾ ಹಾರ್ನ್ ಮಾಡುತ್ತಾ ಸ್ಪರ್ಧೆಗಿಳಿಯುವ ವಾಹನ ದಟ್ಟಣೆ ಇಲ್ಲ, 
 ಅದರೂ ಸಂಜೆ ಸರಿಯುತ್ತಿಲ್ಲ...
 
 ಮನದ ಮಾತು ಕೇಳಲು ಯಾರಿಲ್ಲ..
 ನನ್ನ ಹರಟೆ ಕೇಳಲು ಕಿವಿಗಳಿಲ್ಲ..
 ಮುದ್ದಿಸಿ ಅದೇ ಮಾಯದಲ್ಲಿ ಬುದ್ದಿಹೇಳುವ ಪಪ್ಪ ಅಮ್ಮನ ಆ ದನಿ ಕೇಳಲು.. 
 ಜಗಳವಾಡಿ ಮತ್ತದೆ ಮಾಯದಲ್ಲಿ ಒಪ್ಪಿ ಅಪ್ಪುವ  ತಂಗಿ ತಮ್ಮನ ಹಿತಸ್ಪರ್ಶಕ್ಕೆ
 ಮತ್ತೆ ಕಾಯಲೇಬೇಕಲ್ಲ???

************************************************

 ಏಕತಾರಿ - ಅಮಿತಾ ರವಿಕಿರಣ
 
ಹೇಗಿರುತ್ತಿ ಹೀಗೆ ?
 ಹೇ ಏಕತಾರಿ….
 ಒಂಟಿ ಒಂಟಿ,  
 ಕಂಟಿಗೆ ಕೊರಳ ಕಟ್ಟಿ ಬಿಗಿದು
 ಖಾಲಿ  ಒಣ ಬಿರಡೆಯೊಳು ಬದುಕ ಸವೆಸಿ
 ಯಾವಗಲೂ ಅದೇ ನಾದ ಸ್ವಲ್ಪ ಹೆಚ್ಚು ಚೂರು ಕಡಿಮೆ...
 ಅಲ್ಪ ತೃಪ್ತೆ ನೀ 
 ಹೇ ಏಕತಾರಿ…
  
 ನೊಡಲ್ಲಿ
 ಬಗೆ ಬಗೆಯ ವಿಧ ವಿಧದ
 ನೂರು ನೂರು ತಂತಿ ವಾದ್ಯಗಳು‌.
 ಯಾರೂ ಒಂಟಿ ಅಲ್ಲಾ ನಿನ್ನಂತೆ…
  
 ಸಪ್ತ ಸ್ವರ, ಗಮಕ, ಖಟ್ಕಾ ಮುರ್ಕಿಗಳ ಗುಂಗಲ್ಲಿ….
 ದನಿಗೆ ದನಿಯಂತೆ ಬೆರೆಯಲು ತವಕಿಸುವ 
 ವೀಣೆ ಸಂತೂರ್ ಸಿತಾರು…
  
 ನಾಲ್ಕೇ ತಂತಿ
 ಅದಾಗ್ಯೂ
 ಜೀರ್ ಹಿಡಿದಾಗ ಜುಂಯ್ಯೆಂದು ಸಾತ್ ಕೊಡುವ ತಂಬೂರಿಯ ಖರಜ್ ಷಡಜಗಳು..
 ಮನಸ್ಸಿದ್ದರೆ, ಮನಸೋತರೆ ಒಂದು ತಂತಿ ಮೀಟಿದರೆ ಇನ್ನೊಂದು ನುಡಿಯುತ್ತದೆ.
  
 ಗಿಟಾರು ಎಲ್ಲದ್ದಕ್ಕೂ 
 ಖುಶಿಗೂ ದುಖಃಕ್ಕೂ, 
 ನೋಡು ಆ ಹಾರ್ಪ್ ಎನ್ನುವ ಬಿನ್ನಾಣಗಿತ್ತಿ
 ಬೂಜುಕಿಯ ಬಾಜು ನನ್ನ ಮುಂದ್ಯಾರು ಎನ್ನುತ್ತ ದನಿ ಹೊಮ್ಮಿಸಿ ಅಲೆ ಅಲೆ ನಾದವಾಗಿದ್ದು…
  
 ಇನ್ನೂ ಇವೆ ಅದೆಷ್ಟೋ ಮೋಹನ, ರುದ್ರ ವೀಣೆಗಳು; 
ಸಣ್ಣನೆ ತಂತಿ ಮನಮೀಟಿ ಮಿಡಿಯುವ   
ತರಂಗಾಂತರಗಳ ಯುಗಾಂತರಕ್ಕೂ ಹರಡುವ ನಾದರೂಪಿಗಳು..
  
 ನೀನ್ಯಾಕೆ ಅಷ್ಟು ಒಂಟಿ ಒಂಟಿ 
 ಓ ಏಕತಾರಿ
 ತಳಕು ಬಳುಕಿನ ಈ ಭ್ರಮಾಲೋಕದ
 ನಡುವೆಯೆ ಅವ್ಯಾಹತ ಮಿಡಿಯುವ
 ವಿಕ್ಷಿಪ್ತ ರಾಗರಂಜಿನಿ…

******************************************************
ರೆಕ್ಸನ ಕಿವಿಮಾತು - ಲಕ್ಷ್ಮೀನಾರಾಯಣ ಗುಡೂರ್

 ಕಾಯುತ್ತ ಕುಳಿತಾಗ ಮ್ಯೂಸಿಯಮ್ಮಿನಲೊಮ್ಮೆ
 ದಿಟ್ಟಿಸುತ ಮೈ ಮರೆತಿದ್ದೆ ಟಿ ರೆಕ್ಸನನ್ನೇ
 ಇಪ್ಪತ್ತಡಿಯ ಮೇಲಿದ್ದ ಕಣ್ಣು ನನ್ನೆಡೆ ನೋಡಿ,
 ಚೂಪು ಹಲ್ಲಿನ ಬಾಯಿ ನಸುವೇ ನಕ್ಕಂತಾಗಿ
 ಗಡಸು ದನಿಯಲಿ ಬಂದ ನಮಸ್ಕಾರ ಕೇಳಿ
 ತೆರೆದ ಬಾಯ್ ತೆರೆದಂತೆ ನೋಡಿದೆನು ಅತ್ತ
 'ನೋಡಯ್ಯ ಮನುಜ, ನನ್ನ ಮಾತು ಕೇಳು
 ನನ್ನನುಭವದ ಮಾತು, ಹಾಕಿಕೊ ಕಿವಿಯೊಳು..
 ನಿನ್ನಂತೆ ನಾನೂ ಒಮ್ಮೆ ಈ ಭುವಿಯಲಿದ್ದೆ
 ನನ್ನದೇ ಟೈಮೆಂದು ಉರಿಯುತಲೆ ಇದ್ದೆ;
 ಕೋಟಿ ಕೋಟಿಗಳಲ್ಲಿ ಬಲಶಾಲಿಯಾಗಿ
 ತಡೆಯುವರು ಇಲ್ಲದೆಲೆ ಮೆರೆಯುತ್ತಲಿದ್ದೆ..
 ಸಿಡಿಲಿನೊಲು ಅಪ್ಪಳಿಸಿತಂದೊಮ್ಮೆ ಕಲ್ಲು,
 ಹೊರ ಗಗನದಿಂದೆಲ್ಲೋ ಬಂದಂಥ ಕಲ್ಲು..
 ಹಬ್ಬಿ ಧೂಳಿನ ಮೋಡ, ಸೂರ್ಯ ಮರೆಯಾಯ್ತು
 ಲಕ್ಷ ವರ್ಷಗಳಿದ್ದ ನಮ್ಮೆಲ್ಲರ ಕೊನೆಯಾಯ್ತು
 ನಿಮ್ಮನ್ನು ನೋಡುತ್ತಿರೆ... ಹಾ...ಮತ್ತದೆಲ್ಲ ನೆನಪಾಯ್ತು
 ಉರಿವ ಬೆಂಕಿಗೂ ಕೂಡ ಒಮ್ಮೆ ಕೊನೆಯುಂಟು
 ನಮ್ಮ ಜೀವನಕ್ಕಂತೂ ಮರಣವೇ ನಂಟು
 ಅದಕೆ ಹೇಳುವೆ ಕೇಳು ಮತ್ತೆ ನನ್ನ ಮಾತು
 ಕೈಲಿರದ ಕಾರಣದಿ ನಮ್ಮ ಕೊನೆಯಾಯ್ತು
 ನಿಮ್ಮ ಬದುಕುವ ಪರಿಯೇ ಸಾವಿಗೆಡೆಯಾಯ್ತು
 ಇನ್ನಾದರೂ ಏಳು, ನಮ್ಮ ಪಾಠವನೋಡಿ ಕಲಿತು
 ಪರಿಸರದ ಉಳಿವಿನಲೇ ಮಾನವನ ಒಳಿತು
 ನಿನ್ನದಲ್ಲವೋ ಭುವಿಯು ಬಾಡಿಗೆಯ ತಾನು
 ಇರುವ ಭೂಮಿಯನೊಂದ ಉಳಿಸಿಕೊ ನೀನು...
 ಇರುವುದೊಂದೇ ಭೂಮಿ, ಉಳಿಸಿಕೊ ನೀನು.

 ************************************************** 

ನವರಾತ್ರಿ ಮತ್ತು ಅಜ್ಜಿಯ ಮನೆ - ಲಕ್ಷ್ಮೀನಾರಾಯಣ ಗುಡೂರ್ 
 
ಮತ್ತೆ ಬಂತು ಪ್ರತಿವರ್ಷ ಬರುವ ನವರಾತ್ರಿ,
 ದೇವ-ದೇವಿಯರ, ಹಬ್ಬಗಳ ನೆನಪು ತರುವ ನವರಾತ್ರಿ
 ನನಗೆ ಅಜ್ಜಿಮನೆಯ ನೆನಪ ತರುವ ನವರಾತ್ರಿ
 ಅಜ್ಜಿಯ ನಗುಮುಖವ ನೆನಪಿಸುವ ನವರಾತ್ರಿ
  
 ಶ್ರಾವಣದೊಂದಿಗೇ ಶುರುವಾಗುವ ಗಡಿಬಿಡಿ
 ಹಬ್ಬ-ಪೂಜೆಗಳ ಅಜ್ಜಿ-ತಾತನ ಮಡಿ-ಮಡಿ!
 ಹತ್ತು ಮತ್ತೊಂದು ಮೊಮ್ಮಕ್ಕಳ ಗಜಿಬಿಜಿ
 ಮನೆತುಂಬ ಹರಡಿದ ಸಾಮಾನಿನ ಮಿಜಿ ಮಿಜಿ..
  
 ದೇವರ ಮನೆಗೆ ಹಚ್ಚಲು ಕಲಿಸಿಟ್ಟ ಬಿಳಿಯ ಸುಣ್ಣ
 ಶ್ರೀಕಾರ ಬರೆಯಲು ತೆಗೆದಿಟ್ಟ ಕೆಂಪು ಬಣ್ಣ
 ತೋರಣದಲಿ ಅಣ್ಣ ಕಿತ್ತಿದ ಅಚ್ಚ ಹಸಿರು ಮಾವಿನೆಲೆ
 ತೊಳೆದ ಹೊಸಿಲಿಗೆ ತಂಗಿ ಎಳೆದ ರಂಗೋಲಿಯ ಬಲೆ
  
 ಅಡಿಗೆ ಮನೆಯ ಚಿತ್ರಾನ್ನ ಒಗ್ಗರಣೆ ಘಮಲು
 ಕಡುಬು ಪಾಯಸಗಳ ಮೇಲೆ ತುಪ್ಪದ ಅಮಲು
 ಪಾತ್ರೆಗಳ ಸೌಟುಗಳ ಬಳೆಗಳ ಝಣಝಣ
 ಕರ್ಪೂರದಾರತಿಯ ಜೊತೆ ಕೈಗಂಟೆಯ ಢಣಢಣ

 ರೇಶಿಮೆ ಸೀರೆ ಪಂಚೆ, ಲಂಗಗಳ ಸರಸರ
 ಸಡಗರದ ಮಾತು, ನಗುಗಳು ಭರಪೂರ
 ಬನ್ನಿ ಕೊಡಲು ಮನೆಮನೆಗಳ ತಿರುಗಿದ ರೀತಿ
 ಹಿರಿ-ಕಿರಿಯರೆನ್ನದೆಲೇ ಒಪ್ಪಿಕೊಳ್ಳುವ ಆ ಪ್ರೀತಿ
  
 ಅಜ್ಜಿಯ ಮನೆಯ ಹಬ್ಬದ ಹದವೇ ಬೇರೆ
 ಅಜ್ಜಿ-ತಾತನ ಪ್ರೇಮದ ಮುದವೇ ಬೇರೆ
 ಮರೆತೇನಂದರೂ ಮರೆಯದಾ ನವರಾತ್ರಿ
 ಪ್ರತಿ ಕೇಳದ ಆ ಪ್ರೀತಿಯ ಚಿಕ್ಕಂದಿನ ನವರಾತ್ರಿ .....
 ...... ಅಜ್ಜಿಯ ಮನೆ ನವರಾತ್ರಿ... 

********************************************
 ಪ್ರೀತಿಯೆಂಬ ಸತ್ಯ - ಮುರಳಿ ಹತ್ವಾರ್
  
 ತಾ ನುಡಿವುದೆಲ್ಲ ಸತ್ಯವೆನಲು ನಲ್ಲೆ
 ನಂಬುವೆ, ತಿಳಿದರೂ ಅದರಡಿಯ ನಿಜ
 ಜಗದ ನಾಲಿಗೆಯಾಳವ ಅರಿಯದ
 ತರುಣ ನಾನೆಂದು ತಿಳಿಯಲಿ ಬಿಡಿ! 
 ಆ ಸಿಹಿ ಕಲ್ಪನೆಯ ಜಂಭದ ನಲಿವಲಿ
 ನೆನೆವೆ ನಾ ಯೌವನದ ನಿನ್ನೆಗಳ ನಿಧಿ,
 ಮನದನ್ನೆಯ ಸವಿಮಾತುಗಳ ನಮಿಸುತಲಿ:
 ಸತ್ಯವ ಬಚ್ಚಿಟ್ಟರೂ ನಾವಿಬ್ಬರೂ ಇಲ್ಲಿ, 
 ಹೇಳಿಲ್ಲ ಅವಳೆಲ್ಲೂ ಸುಳ್ಳಲ್ಲವೆಂದು
 ನಾನೂ ನಂಬಿಲ್ಲ ನಾ ತರುಣನೆಂದು.
 ಪ್ರೀತಿಯೆಂಬುದು ನಂಬಿದಂತೆ ಕಾಣುವ ಬಳ್ಳಿ
 ಬೆಳೆದಷ್ಟೂ ಬಲವದಕೆ ಒಲವಿನ ಹುಸಿಗಳಲಿ
 ನನಗವಳು, ಅವಳಿಗೆ ನಾ ಪ್ರೇಮದ ಹೊದಿಕೆ
 ಕೊರತೆಗಳು ಕರಗಿವೆ ಹೊಗಳಿಕೆಯ ಹದಕೆ!
  
 (Translation of Shakespeare’s Sonnet 138: When my love swears that she is made of truth) 

***********************************************
 ಭೂಮಿ  - ರಮ್ಯ ಭಾದ್ರಿ
  
 ಹಗಲಿರುಳು ದಣಿವಿಲ್ಲದೆ ಸಕಲವೂ ಹೊರುವೆ
 ಒಡಲಲ್ಲಿನ ಜೀವಜಲವೆರೆದು ಪೊರೆವೆ
 ವನಸಿರಿಯ ಉಸಿರಾಗಿಸಿ ಪ್ರಾಣವಾಗಿರುವೆ
 ಮಣ್ಣನ್ನು ಹಸಿರಾಗಿಸಿ ಹಸಿವ ನೀಗಿಸುವೆ
 ತಾಯೇ ಧರಣಿಯೇ ನಿನಗೆ ವಂದಿಸುವೆ.
  
 ಭೇದವರಿಯದ ನಿನಗೆ ಭೇದಭಾವ ಬಾಧಿಸಿದೆ 
 ಒಡಲೊಡಲ ಕಿಚ್ಚಿನ ಕೆನ್ನಾಲಿಗೆ ಎಲ್ಲೆಲ್ಲೂ ಚಾಚಿದೆ
 ಪ್ರಕೃತಿಯ ಪಾಠವ ಮರೆತು ಸ್ವಾರ್ಥವೂ ಭುಗಿಲೆದ್ದಿದೆ
 ಬವಣೆಯಾದರೂ ಬಾಗದೆ ಮನ್ನಿಸುತ ನಿಸ್ವಾರ್ಥದ ಪ್ರೀತಿ ಮಳೆಗರೆವೆ
 ತಾಯೇ ಧರಿತ್ರಿಯೇ ನಿನಗೆ ವಂದಿಸುವೆ.
  
 ಯುಗಗಳನ್ನು ಮಡಿಲಲ್ಲಿ ಆಡಿಸಿ ಬೆಳೆಸಿರುವೆ
 ಪಾಪ ಪುಣ್ಯಗಳ ಪರಾಕಾಷ್ಠೆಯ ನೀ ಬಲ್ಲೆ
 ಅನೀತಿ ಅಧರ್ಮಗಳಿಗೆ ಪ್ರಾಯಶ್ಚಿತ್ತವು ಈ ಇಳೆಯಲ್ಲೆ
 ಎನ್ನುವ ಅನಂತ ಸತ್ಯಕ್ಕೆ ಸಾಕ್ಷಿಯಾಗಿರುವ ನ್ಯಾಯ ದೇವತೆಯೇ
 ತಾಯೇ ಭೂರಮೆಯೇ ನಿನಗೆ ವಂದಿಸುವೆ. 

(ಈ ಕವಿತೆಯನ್ನು ರಮ್ಯ ಅವರ ಸಹೋದರಿ ಲಕ್ಷ್ಮಿ ಭಾದ್ರಿ 
ಅವರು ರೇವತಿ ರಾಗಕ್ಕಳವಡಿಸಿ ಹಾಡಿದ್ದಾರೆ; ಆ ಹಾಡನ್ನು 
 ಇಲ್ಲಿ ಕ್ಲಿಕ್ ಮಾಡಿ ಕೇಳಬಹುದು - ಭೂರಮೆಯೇ ನಿನಗೆ ವಂದಿಸುವೆ 
ಅಥವಾ ಪೂರ್ತಿ ಕೊನೆಯಲ್ಲಿನ ಪ್ಲೇಯರ್ ಮೇಲೆ ಕ್ಲಿಕ್ ಮಾಡಿ ಕೇಳಿ) 

***************************************************

  ನವರಾತ್ರಿ - ರಮ್ಯ ಭಾದ್ರಿ
  
 ವರುಷಗಳುರುಳಿದರು ಮರಳಿ ಬಂತು ನವರಾತ್ರಿ
 ಕರುಣಿಸಲು ಎಲ್ಲರಿಗೂ ಸುಖ ಶಾಂತಿ
 ದುಷ್ಟಶಕ್ತಿಗಳ ನಿಗ್ರಹಿಸಿ ಕಳೆಯಲು ಭೀತಿ 
 ಧರೆಗಿಳಿವಳು ಮಹಾ ತಾಯಿ ಆದಿ ಪರಾಶಕ್ತಿ
  
 ಇಳೆಯಲ್ಲ ಮಳೆ ಸುರಿದು ತಂಪಾಗಿ ಕಂಪೆರೆದು
 ಶಿಶಿರ ಸ್ಪರ್ಶಕ್ಕೆ ವನರಾಶಿಯು ವರ್ಣರಂಜಿತವಾಗಿ ಹೂವ ಹಾಸಿರಲು
 ನಿಶೆಯನ್ನು ಕಳೆಯಲು ಕಾತುರದಿ ಉಷೆಯು ಕಾದಿರಲು
 ಸಕಲವೂ ನವೋದಯಕೆ ಮೊಗ ಮಾಡಿ ನಿಂತಿರಲು  
 ಧರೆಗಿಳಿವಳು ದೇವಿ ದೀನರನ್ನುದ್ದರಿಸಲು
  
 ಪೂರ್ವದ ಪೆಂಡಾಲುಗಳಲ್ಲಿ ಪ್ರಜ್ವಲಿಸುತ ಧಗಿಸುವ ದುರ್ಗೆಯಾಗಿ
 ಪಶ್ಚಿಮದ ಜಾನಪದದ ನೃತ್ಯ ಕಲೆಗಳ ಅಧಿದೇವತೆಯಾಗಿ
 ಉತ್ತರದ ಜಾಗರಣೆಗಳಲ್ಲಿ ಜಗಮಗಿಸುತ ಜಗನ್ಮಾತೆಯಾಗಿ
 ದಕ್ಷಿಣದ ಅಂಗಳದ ಬೊಂಬೆಗಳ ರೂಪದಿ ಜಗದಂಬೆಯಾಗಿ
 ಧರೆಗಿಳಿವಳು ದೇವಿ ಅಂಬಾರಿ ಏರಿ ಚಾಮುಂಡಿಯಾಗಿ
  
 ಭವ ಬಂಧನದ ಪಯಣದಲಿ ಭಕ್ತರ ಶಕ್ತಿಯಾಗಿ
 ಸಕಲಾಭಿಷ್ಟಗಳನು ಕರುಣಿಸುವ ಇಷ್ಟದೇವತೆಯಾಗಿ
 ಮದದಿ ಮತಿಗೆಟ್ಟವರ ತಿಮಿರವನೋಡಿಸುವ ಜ್ಞಾನದೀವಿಗೆಯಾಗಿ
 ಬಳಲಿದ ಬಡವರ ಬಾಳಿನ ಸಿರಿದೇವಿಯಾಗಿ
 ಧರೆಗಿಳಿವಳು ತಾಯಿ ಮೊರೆ ಇಡುವವರ ಮೂಕಾಂಬಿಕೆಯಾಗಿ
  
 ಇಳೆಯಲ್ಲ ಕಳೆಕಟ್ಟಿದೆ ನಿನ್ನ ಆಗಮನದಿ 
 ಭಕ್ತರೆಲ್ಲ ನಿನ್ನ ಭಜಿಸುತಿಹರು ಆನಂದ ಪರವಶದಿ 
 ಕಾಣದೆ ಕಾಡುತ್ತಿರುವ ಕಂಟಕವ ಕಳೆಯಮ್ಮ ಭರದಿ 
 ಕೈ ಹಿಡಿದು ನಡೆಸಮ್ಮಾ ಶರಣಾದೆವು ನಿನ್ನ ಚರಣದಿ 
 ಸರ್ವರಿಗೂ ಸನ್ಮಾನಗಳವಾಗಲಿ ತಾಯೆ ನಿನ್ನ ಅನುಗ್ರಹದಿ

*********************************************