ಇತ್ತೀಚೆಗೆ ‘ನಮ್ಮ ಊರು ಯಾವುದು’ ಎಂಬ ವಿಚಾರದ ಬಗ್ಗೆ ರಾಜಾರಾಮ್ ಕಾವಳೆ, ವತ್ಸಲಾ ರಾಮ್, ಶ್ರೀವತ್ಸ
ದೇಸಾಯಿ, ಉಮಾ ವೆಂಕಟೇಶ್ ಮತ್ತು ಅರವಿಂದ ಕುಲಕರ್ಣಿ ಅವರು ರಸವತ್ತಾಗಿ ಬರೆದಿದ್ದಾರೆ. ಆದರೆ ನನ್ನ ಊರು ಯಾವುದು ಎಂಬ ಪ್ರಶ್ನೆ ನನ್ನನ್ನು ಬಹಳ ದಿನಗಳಿಂದ ಕಾಡಿಸುತ್ತಿದೆ, ಎನ್ನುತ್ತಾರೆ ಬೇಸಿಂಗಸ್ಟೋಕ್ ವಾ್ಸಿ ರಾಮಮೂರ್ತಿ.
ಈ ಲೇಖಕರ ಪರಿಚಯ (ಅದು ಅವಶ್ಯವೇ?): ಯು ಕೆ ಕನ್ನಡ ಬಳಗದ ಆರಂಭದ ದಿನಗಳಿಂದಲೂ ವಿವಿಧ ರೀತಿಯಲ್ಲಿ ಸತತವಾಗಿ ಅದರ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಸ್ವಯಂ ಸೇವಕರಾಗಿ, ಕಾರ್ಯಕಾರಿ ಮಂಡಲಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆನ್ನಿಗೆ ನಿಂತು ಕೆಲಸ ಮಾಡಿದ, ಮಾಡುತ್ತಿರುವ ಗಣ್ಯರ ಮುಂಚೂಣಿಯಲ್ಲಿ ಅವರ ಹೆಸರು ಯಾವಾಗಲೂ ಇದ್ದೇ ಇರುತ್ತದೆ ಎಂದರೆ ಅದೇನೂ ಅತಿಶಯೋಕ್ತಿಯಲ್ಲ. ಇದರಲ್ಲಿ ಯಾವ ಕನ್ಫ಼್ಯೂಶನ್ನೂ ಇಲ್ಲ. ಆದರೆ ”ನನ್ನ ಊರಿನ ಬಗ್ಗೆ ….?” ಅವರೇ ಬರೆದದ್ದನ್ನು ಮುಂದೆ ಓದಿ:
ನನ್ನ ಪತ್ನಿ ಸೀತುಗೆ ಈ ಸಮಸ್ಯೆ ಇಲ್ಲ. ಬೆಳೆದಿದ್ದು ಬೆಂಗಳೂರು, ಸಂಸಾರ ಮಾಡುತ್ತಿರುವುದು ಇಂಗ್ಲೆಂಡ್. ಇಂಡಿಯಾಗೆ ಹೋದಾಗ ನನಗೆ ಕೆಲವರು ಎರಡು ಪ್ರಶ್ನೆಗಳನ್ನು ಕೇಳುತ್ತಾರೆ, “What is your good name?” ಮತ್ತು “ನಿಮ್ಮ ನೇಟಿವ್ ಪ್ಲೇಸ್?”. ಗುಡ್ ನೇಮೂ ಬ್ಯಾಡ್ ನೇಮೂ ಗೊತ್ತು ಆದರೆ ನೇಟಿವ್ ಪ್ಲೇಸ್ ? ದೇವರಿಗೇ ಗೊತ್ತು. ಅದು ಯಾಕೆ ಅಂತ ಕೇಳ್ತೀರಾ?

ನೋಡಿ, ನಮ್ಮ ತಂದೆಯ ಕಡೆಯವರು ತಮಿಳುನಾಡಿನಿಂದ ಬಂದವರು ಅಂತ ಕೇಳಿದ್ದೆ, ಬಹಳ ಹಿಂದೆ ಅಂತ ಇಟ್ಕೋಳಿ. ಇವರು ವಲಸೆ ಬಂದು ಕಾವೇರಿ ನದಿಯ ದಡದಲ್ಲಿ ಇರುವ ಹನಸೋಗೆಯಲ್ಲಿ (ಹಾಸನ ಡಿಸ್ಟ್ರಿಕ್ಟ್) ಬಂದು ಸೆಟ್ಲ್ ಆದರಂತೆ. ಯಾಕೆ ಅಂತ ಕೇಳಬೇಡಿ, ನನಗೆ ಗೊತ್ತಿಲ್ಲ. ನಮ್ಮ ಮನೆ ದೇವರು ಜೋಲಾರ ಪೇಟೆ ಹತ್ತಿರ ಘಟಕಾಚಲ. ಇದು ಇರುವುದು ತಮಿಳುನಾಡಿನಲ್ಲಿ. ಅಜ್ಜಿ ಮನೆಯವರು ಮಹಾರಾಷ್ಟ್ರದವರು. ಇವರೆಲ್ಲಾ ಪೇಶ್ವೆಗಳ ಕಾಲದಲ್ಲಿ ಬಂದವರು, ಕಂದಾಯ ವಸೂಲಿ ಗಾರರು. ಕೊಣಸೋರು (ಮೈಸೂರು ಮತ್ತು ಕೊಡಗು ಗಡಿಯಲ್ಲಿ) ನೆಲಸಿದ್ದವರು. ನಮ್ಮ ಅಜ್ಜಿಗೆ 4 ಜನ ಅಣ್ಣಂದಿರು.
ಮನೆಯಲ್ಲಿ ಅನುಕೂಲವಂತರು ಬೇಕಾದಷ್ಟು ತೋಟ ಗದ್ದೆ ಇತ್ತು. ಒಬ್ಬ ಅಣ್ಣ ರಾಮರಾಯರು, ಮನೆ ಎದುರಲ್ಲೇ ಇದ್ದ ಪ್ರಾಥಮಿಕ ಶಾಲೆಯಲ್ಲಿ ಓದಿ, ಅಲ್ಲೇ ಮೇಷ್ಟ್ರು ಆಗಿ ರಿಟೈರ್ ಆದರು. ಸಾಯಂಕಾಲ ಅವರು ಜಗಲಿ ಮೇಲೆ ಕೂತು ಹಳ್ಳಿಯವರ ಕಷ್ಟಗಳನ್ನ ಮತ್ತು ಜಗಳಗಳನ್ನು ಪರಿಹರಿಸುತ್ತಿದರು. ಇದು ಸುಮಾರು 1920 ರಲ್ಲಿ. ಇನ್ನೊಬ್ಬ ಅಣ್ಣ ನಾರಾಯಣರಾಯರು ಬಹಳ ಮುಂದುವರೆದರು. 1925 ರಲ್ಲಿ ಮೈಸೂರು ರಾಜ್ಯದ Education Dept. ನಲ್ಲಿ ಡೈರೆಕ್ಟರ್ ಆಗಿದ್ದರು. ಇವರೇ ನಮ್ಮ ತಂದೆಗೆ ಕೆಲಸ ಕೊಡಿಸಿದ್ದರು. Nepotism ಅಂದಿರಾ, ಹೌದು ಇದು ಬಹಳ ಹಳೇ ಪದ್ದತಿ ಅಲ್ಲವೇ?
ನಾನು ಹುಟ್ಟಿದ್ದು ಕಾವೇರಿ ದಡದಲ್ಲಿರುವ ರಾಮನಾಥಪುರ, ನಮ್ಮ ತಾಯಿಯ ಊರು. ಇಲ್ಲಿ ನಮ್ಮ ಅಜ್ಜಿ f
ಮತ್ತು ಮುತ್ತಜ್ಜಿ ಇದ್ದರು. ಇವರ ಮನೆಗೆ ಪ್ರತಿ ಬೇಸಿಗೆ ರಜಕ್ಕೆ ಹೋಗುತ್ತಿದ್ದೆ . ನಮ್ಮ ಅಜ್ಜಿ ಅಡ್ರೆಸ್ ಬಹಳ ಸಿಂಪಲ್: “ಅರಕಲಗೂಡು ತಾಲೋಕು ರಾಮನಾಥಪುರದ ಓಣಿ ನಾಗೂ ಬಾಯಿ ಅವರಿಗೆ”.
ಇವರ ಮನೆ ಸುಬ್ರಹ್ಮಣ್ಯ ದೇವಸ್ತಾನದ ಎದರು ಓಣಿ. ಸಾಯಂಕಾಲ ನಮ್ಮಗೆಲ್ಲಾ ಮುತ್ತಜ್ಜಿ, ತುಳಸಿಬಾಯಿ ನದಿ ದಡದಲ್ಲಿ ಕಥೆಗಳ ಮಧ್ಯೆ ಕೈತುತ್ತು ಹಾಕುತ್ತಿದ್ದರು. ಈ ನದಿಯಲ್ಲಿ ದೊಡ್ಡ ದೊಡ್ಡ ಮೀನುಗಳು (ಇನ್ನೂ ಇದೆ). ಜೇಬಿನಲ್ಲಿ ಕಡಲೆಪುರಿ ತುಂಬಿಕೊಂಡು ಮೀನುಗಳಿಗೆ ಹಾಕುತ್ತಿದ್ದೆವು.

ಅರಕಲ ಗೂಡಿನಿಂದ ಮೊದಲನೇ ಬಸ್ ಬಂದಾಗ ನಮ್ಮ ಮುತ್ತಜ್ಜಿಯ ತಾಯಿನ ಬಸ್ನಲ್ಲಿ ಕರೆಕೊಂಡು ಹೋದರು. ಪಾಪ ಈ ಮುದುಕಿಗೆ ಸರಿಯಾಗಿ ಕಣ್ಣು ಕಾಣುತ್ತಿರಲ್ಲಿಲ್ಲ. ಬಸ್ ಬಹಳ ಸ್ಪೀಡಿನಲ್ಲಿ ಹೋಗುತ್ತಾ ಇತ್ತು. ಆಶ್ಚರ್ಯದಿಂದ ”ಎಷ್ಟು ಎತ್ತು ಕಟ್ಟಿದಾರೆ ಈ ಗಾಡಿಗೆ” ಅಂತ ಕೇಳಿದ್ದರಂತೆ!


ನಮ್ಮ ತಂದೆ ಹುಟ್ಟಿದ್ದು ನಂಜನಗೂಡಿನಲ್ಲಿ. ಅಲ್ಲಿ ಅವರ ತಂದೆ ಕೆಲಸಕ್ಕೆ ಬಂದವರು ಅಂತ ಕಾಣುತ್ತೆ, ಸರಿಯಾಗಿ ಗೊತ್ತಿಲ್ಲ. ನಾನು ಈ ಊರಿನ ಹೈಸ್ಕೂಲಿನಲ್ಲಿ ಓದಿದೆ. ನಮ್ಮ ಹೆಡ್ ಮಾಸ್ಟರ ಹೆಸರು “ತಾಪತ್ರಯ ಅಯ್ಯಂಗಾರ್“ ಇವರ ನಿಜವಾದ ಹೆಸರು ಮರುತುಹೋಗಿದೆ. ಬಹಳ ಸ್ಟಿಕ್ಟ್ ಮನುಷ್ಯ, ಲೇಟಾಗಿ ಬಂದರೆ ಏಟು. ಇವರಿಗೆ ಈ ಅಡ್ಡ ಹೆಸರು ಹೇಗೆ ಬಂತು ಅನ್ನುವುದು ಸ್ವಲ್ಪ ತಮಾಷಿಯಾಗಿದೆ. ಬಾಲ್ಯದಲ್ಲಿ ಇವರು ಚೆನ್ನಾಗಿ ಫುಟ್ ಬಾಲ್ ಆಡುತ್ತಿದ್ದರಂತೆ. ಒಂದು ಮ್ಯಾಚಿಗೆ ಬಂದಿದ್ದು ಲೇಟ ಆಯಿತು “ಏನೋ ಮನೇಲಿ ತಾಪತ್ರಯ ಇತ್ತು ಅದಕ್ಕೆ ಲೇಟ ಆಯಿತು ” ಅಂದರಂತೆ . ಅವತ್ತಿಂದ ಅವರ ಹೆಸರು ಹೀಗೆ ನಿಂತುಹೋಯಿತಂತೆ.
ನಮ್ಮ ತಂದೆ ಮಿಡ್ಲ್ ಸ್ಕೂಲ್ headmaster. ಕೋಲಾರ ಡಿಸ್ಟ್ರಿಕ್ಟ್ ನ ಕೈವಾರ, ಚಿಂತಾಮಣಿ, ಕಾಗತಿ ಮುಂತಾದ ಕಡೆ ಇದ್ದು ಕೊನೆಗೆ ನಾನು ಬೆಂಗಳೂರಿಗೆ ಕೆಲಸಕ್ಕೆ ಬಂದೆ. ನೀವು ಕೈವಾರದ ಹೆಸರು ಕೇಳಿರಬಹುದು. ಪೂರ್ವ ಕಾಲದ ಹೆಸರು ಏಕಚಕ್ರ ನಗರ, ಮಹಾಭಾರತದಲ್ಲಿ. ಇಲ್ಲೇ ಭೀಮ ಬಕಾಸುರನ್ನು ಕೊಂದಿದ್ದು ಅಂತ ಪ್ರತೀತಿ.
ಈ ದೇಶಕ್ಕೆ ಬರುವುದು ನನ್ನ ಕನಸಿನಲ್ಲೂ ಬಂದಿರಲಿಲ್ಲ. ಆದರೆ ನನ್ನ ಸ್ನೇಹಿತ ಹೇಳಿದ Employment
voucher
ಗೆ ಅಪ್ಲೈ ಮಾಡು ಅಂದ. ಮಾಡಿ ಆರು ತಿಂಗಳಿಗೆ ಪೋಸ್ಟ್ ನಲ್ಲಿ On Her Majesty`s Service ಕಾಗದ ಬಂತು ಇಂಗ್ಲೆಂಡಿಗೆ ಹೋಗುವುದಕ್ಕೆ. ಮನೆಯಲ್ಲಿ ಹೇಳಿದರೆ ನಮ್ಮಜ್ಜಿ ನನಗೆ ಹುಚ್ಚು ಅಂತ ಹೇಳಿದರು. ಆದರೆ ನಮ್ಮ ತಂದೆ ಹೋಗು, ಆದರೆ 5 ವರ್ಷ ದಲ್ಲಿ ವಾಪಸ್ ಬಂದು ಬಿಡು ಅಂದರು. ಇದು ಆಗಿ ಈ ತಿಂಗಳಿಗೆ ೫೦ ವರ್ಷ ಆಯಿತು. ನಾನು ಇನ್ನೂ ಇಲ್ಲೇ ಇದ್ದೀನಿ.
ಹೇಗೋ ಮಾಡಿ ಏರ್ ಇಂಡಿಯಾ ಟಿಕೆಟ್ ಆಯ್ತು. ಆಗ ಪಾಕಿಸ್ತಾನದ ಮೇಲೆ ಯುದ್ಧ ಶುರು ಆಯಿತು. ಬೊಂಬಾಯಿಗೆ ಬಂದರೆ ಅಲ್ಲಿ ಬ್ಲಾಕ್ ಔಟ್. airport
ತಲುಪಿದಾಗಲೂ ಹೊರಡುವುದು ಗ್ಯಾರಂಟಿ ಇರಲಿಲ್ಲ .ಆಗ ಕೇವಲ Rs.50 (£3) ಮಾತ್ರ exchange ಕೊಡುತ್ತಿದ್ದರು.ಇದನ್ನ ಜೇಬಿನಲ್ಲಿ ಹಾಕಿ ಇಲ್ಲಿಗೆ ಬಂದೆ 1965ರಲ್ಲಿ.
ಲಂಡನ್ನಿಗೆ ಬಂದು Essex, Cambridgeshireನಲ್ಲಿ ವಾಸಮಾಡಿ ಈಗ ಮೂವತ್ತು ವರ್ಷಗಳಿಂದ ಬೇಸಿಂಗಸ್ಟೋಕ್ ನಲ್ಲಿ ವಾಸಿಸುತ್ತಿದ್ದೇನೆ. ಈಗ ನೀವೇ ಹೇಳಿ ನನ್ನ ‘ನೇಟಿವ್ ಪ್ಲೇಸ್’ ಯಾವುದು? ಅಂತ. ನೀನು Gipsy ಅಂತ ನಮ್ಮ ಮಕ್ಕಳು ಹಾಸ್ಯ ಮಾಡುತ್ತಾರೆ! ಈ ವಿಚಾರನೆಲ್ಲಾ ನಮ್ಮ ಇಬ್ಬರು ಮೊಮ್ಮಕ್ಕಳಿಗೆ ಹೇಳಬೇಕು!
ರಾಮಮೂರ್ತಿ, Basingstoke


