ನೆನಪುಗಳ ಶ್ರಾವಣ 

ಎಲ್ಲರಿಗೂ ಆತ್ಮೀಯ ನಮಸ್ಕಾರ,
ಈ ವಾರದ ಅನಿವಾಸಿ ಸಂಚಿಕೆಯಲ್ಲಿ ಎರಡು ಪುಟ್ಟ ಬರಹಗಳಿವೆ. ಒಂದು ಶ್ರಾವಣ ಮಾಸದಲ್ಲಿ ಸಾರಸ್ವತ ಸಮುದಾಯದಲ್ಲಿ ಆಚರಿಸಲಾಗುವ ಚೂಡಿ ಪೂಜೆಯ ಕಿರು ಪರಿಚಯ ಮತ್ತು ಅನಿವಾಸಿ ಬ್ಲಾಗ್ ನಲ್ಲಿ ಇದೇ ಮೊದಲ ಸಲ ಬರೆಯುತ್ತಿರುವ ಶ್ರೀಮತಿ ರೇಖಾ ಪಾಟೀಲ್ ಅವರು, ನಮ್ಮನ್ನು ತಮ್ಮ ಅಜ್ಜನ ಮನೆಯ ನೆನಪುಗಳ ಜಾತ್ರೆಗೆ ಪದಗಳ ತೇರಿನಲ್ಲಿ ಕರೆದೊಯ್ಯಲಿದ್ದಾರೆ.
ಓದಿ ತಮ್ಮ ಅನಿಸಿಕೆಯನ್ನು ತಿಳಿಸುವುದನ್ನು ಮರೆಯಬೇಡಿ
ಪ್ರೀತಿಯಿಂದ
ಅಮಿತಾ ರವಿಕಿರಣ್ .
 ಚೂಡಿ-ಶ್ರಾವಣದ ವಿಶಿಷ್ಟ ಆಚರಣೆ.   
ಮೊನ್ನೆ ಮೊನ್ನೆಯಷ್ಟೇ ಯುಗಾದಿ ಆದಂತಿದೆ, ಅದೋ ಆಗಲೇ ಶ್ರಾವಣ ಬಂದು ಸಾಲು ಸಾಲು ಹಬ್ಬಗಳನ್ನು ತನ್ನೊಟ್ಟಿಗೆ ಕರೆದು ತಂದಿದೆ. ಭಾರತದಲ್ಲಿ ಮಳೆಗಾಲವೆಂಬ ಈ ಚೈತನ್ಯಪೂರ್ಣ ಕಾಲದಲ್ಲಿ ಹೊಲದಲ್ಲಿ ಗದ್ದೆ ತೋಟದಲ್ಲಿ ಮನೆಗಳಲ್ಲಿ ಮನಗಳಲ್ಲಿ ಎಲ್ಲೆಡೆ ಒಂದು ಬಗೆಯ ಸಂಭ್ರಮ. ಜಿರಾಪತಿ ಮಳೆಯಲ್ಲೂ ತಮ್ಮ ಜರಿಸೀರೆಯನ್ನುಟ್ಟು ಮನೆ ಮನೆಗೆ ಅರಿಶಿನ ಕುಂಕುಮಕ್ಕೆ ಹೋಗುವ ಆ ನೋಟವೇ ಚಂದ. ಜೊತೆಗೆ ನಾಗರ ಪಂಚಮಿ,ರಾಖಿ,ನೂಲು ಹುಣ್ಣಿಮೆ, ಕೃಷ್ಣಾಷ್ಟಮಿ, ವರಮಹಾಲಕ್ಷ್ಮಿ ಸಾಲು ಸಾಲು ಸಂಭ್ರಮಗಳ ಮಾಸ ಈ ಶ್ರಾವಣ. ಈ ಶ್ರಾವಣಮಾಸದಲ್ಲಿ ಬರುವ ಇನ್ನೊಂದು ವಿಶಿಷ್ಟ ಹಬ್ಬ, ಕೇವಲ ಸಾರಸ್ವತ ಸಮುದಾಯದವರು ಪಾಲಿಸಿಕೊಂಡು ಬಂದಿರುವ ಆಚರಣೆಯೇ ಚೂಡಿ ಪೂಜೆ.

ಸರಸ್ವತಿ ನದಿತೀರದಿಂದ ವಲಸೆ ಬಂದು ಮಹಾರಾಷ್ಟ್ರದ ರತ್ನಾಗಿರಿಯಿಂದ ಕೇರಳದ ತುದಿಯವರೆಗಿನ ಕೊಂಕಣ ಪಟ್ಟಿಯಗುಂಟ ಹೆಚ್ಹಾಗಿ ನೆಲೆಸಿರುವ ಸಾರಸ್ವತರು ಎದುರು ನೋಡುವುದು ಶ್ರಾವಣದ ಚೂಡಿ ಪೂಜೆಯನ್ನ. ಶ್ರಾವಣದ ಪ್ರತಿ ಶುಕ್ರವಾರ ಮತ್ತು ವಿಶೇಷವಾಗಿ ಭಾನುವಾರಗಳಂದು ಈ ಪೂಜೆ ತುಳಸಿಯ ಮುಂದೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ.

ಬರಿಯ ಪೂಜೆ ಅಂದ್ರೆ ಅದರಲ್ಲೇನು ವಿಶೇಷ ಅಂದ್ರಾ? ಆ ಪೂಜೆಯಲ್ಲಿ ಬಳಸುವ ವಸ್ತುಗಳು ಈ ಆಚರಣೆಯನ್ನು ವಿಶೇಷವಾಗಿಸುತ್ತವೆ. ಮಳೆಗಾಲದಲ್ಲಿ ಭೂಮಾತೆ ಹಸಿರುಟ್ಟು ನಗುವಾಗ ಅವಳಲ್ಲಿ ದೊರೆಯುವ ಅಪರೂಪದ ಹದಿನಾರು ಬಗೆಯ ಎಲೆಗಳು, ಜೊತೆಗೆ ಸೇವಂತಿಗೆ, ಗರಿಕೆ ,ಹೊಲದ ಬದುವಿನಲ್ಲಿ ಸಿಗುವ ನೆಲನೆಲ್ಲಿ,ಲಾಯಾ ಮಡ್ಡಿ,ರತ್ನಗಂಧಿ,ವಿಷ್ಣುಕಾಂತಿ ,ಸುಗಂಧಿ,ಕಾಗಿ ಕಾಲು ಗುಬ್ಬಿ ಕಾಲು ,ಹುಲಿ ಉಗುರು.ಬೆಕ್ಕಿನ ಕಾಲು,ಮಿಟಾಯಿ ಹೂ ,ಗೌರಿ ಮುತ್ತು,ಗೌರಿ ಹೂವು,ರಥದ ಹೂ ಎಂಬ ವಿಚಿತ್ರ ಜನಪದ ಹೆಸರಿನ ಸಸ್ಯಗಳನ್ನು ತಂದು ಕೂಡಿಸಿ ಗುಚ್ಛ ಕಟ್ಟಿದರೆ ಚೂಡಿ ಸಿದ್ಧ. ಚೂಡಿ ಎಂಬುದು ಕಲಾತ್ಮಕತೆಯ ಕನ್ನಡಿಯೂ ಹೌದು. ಲಭ್ಯ ಇರುವ ಸಸ್ಯಗಳನ್ನು ಹೂ ಎಲೆಗಳನ್ನು ಬಣ್ಣದ ಹೊಂದಾಣಿಕೆ ಮತ್ತು ಆಕಾರ ಗಾತ್ರ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಟ್ಟ ಬೇಕಾಗುತ್ತದೆ. ಚೂಡಿಯನ್ನು ಕಟ್ಟುವಾಗ ಬಾಳೇನಾರನ್ನು ನೆನೆಸಿ ಅದರಿಂದ ದಾರದ ಎಳೆಗಳನ್ನು ತೆಗೆದು ಅದರಿಂದಲೇ ಕಟ್ಟಲಾಗುತ್ತದೆ.ಇತ್ತೀಚಿಗೆ ಸಾರಸ್ವತ ಸಮಾಜ ಮಂದಿರಗಳಲ್ಲಿ ದೇವಳಗಳಲ್ಲಿ ಚೂಡಿ ಸ್ಪರ್ಧೆ ಏರ್ಪಡಿಸುವುದೂ ಉಂಟು.

ಆಚರಣೆ -ವಿಧಿ ವಿಧಾನ
ಪ್ರತ್ಯೇಕ ಚೂಡಿಯನ್ನು ವೀಳ್ಯದೆಲೆಯೊಂದಿಗೆ ತುಳಸಿ ಮುಂದೆ ಇಟ್ಟು, ದೀಪ ಹಚ್ಹಿ ಹಣ್ಣು ಕಾಯಿ ಸಮರ್ಪಿಸಿ ತುಳಸಿಗೆ ಪ್ರದಕ್ಷಿಣೆ ಹಾಕಲಾಗುತ್ತದೆ. ಜೊತೆಗೆ ಮತ್ತೊಂದು ವಿಶೇಷ ಎಂದರೆ ಇಲ್ಲಿ ಪೂಜೆಗೆ ಅರಿಶಿನ ಕುಂಕುಮ ದೊಂದಿಗೆ ''ರುವಣ'' ಎಂದು ಕರೆಯಲಾಗುವ ಸುಣ್ಣ ಮತ್ತು ಗಂಧ ಅರಿಶಿನದ ಮಿಶ್ರಣವನ್ನು ಬಳಸುವುದು. ಆಗತಾನೇ ಚಿಗುರೊಡೆದು ನಿಂತಿರುವ ಅರಿಸಿನದ ಎಲೆ ತಂದು ಅದರ ಮೇಲೆ ಅಕ್ಕಿಯನ್ನು ಹರಡಿ. ಅದರ ಮೇಲೆ ಅಡಿಕೆ ಬೆಟ್ಟವನ್ನು ಇಟ್ಟು ಅದರ ಎದುರಿಗೆ ೫,೭.೧೧.೨೧.ಹೀಗೆ ಚೂಡಿಯನ್ನಿಟ್ಟು ಪೂಜಿಸಿ ೧೬.೩೨ ರಂತೆ ಗರಿಕೆಯನ್ನು ಕಟ್ಟಿ ಸೆರಗಿನ ತುದಿಯಿಂದ ಅದನ್ನು ಹಿಡಿದು ಸೂರ್ಯನಿಗೆ ಅರ್ಘ್ಯ ನೀಡುತ್ತಾರೆ. ನಂತರ ಬಾವಿ ಕಟ್ಟೆಗೆ ಮನೆಯ ಸೂರಿಗೆ, ತೆಂಗಿನ ಮರಕ್ಕೆ, ಮನೇ ಹೊಸಿಲಿಗೆ ವಿಳ್ಯದೊಂದಿಗೆ ಇವನ್ನು ಇಟ್ಟು ಪೂಜಿಸುತ್ತಾರೆ. ಸೌಭಾಗ್ಯ ಸಮೃದ್ಧಿ ವೃದ್ಧಿಸುವಂತೆ ಹೆಂಗಳೆಯರು ಪ್ರಾರ್ಥಿಸುತ್ತಾರೆ. ಭತ್ತದ ಅರಳು ಮತ್ತು ಬೆಲ್ಲವನ್ನ ನೇವೇದ್ಯ ಮಾಡಿ ಹೊಸಿಲ ಮೇಲೆ ಚೂಡಿಯನ್ನು ಇಟ್ಟು ಆರತಿ ಮಾಡುತ್ತಾರೆ..
ಕೆಲವೊಂದು ಮನೆಯ ಸಂಪ್ರದಾಯದಲ್ಲಿ, ಪೂಜೆಯನ್ನು ದೇವರ ಮುಂದೆ ಮಾಡಿ ಸಂಜೆ ಸಮಯದಲ್ಲಿ ತುಳಸಿಯ ಮುಂದೆ ಚೂಡಿ ಯನ್ನುವಿಸರ್ಜಿಸಲಾಗುತ್ತದೆ. ಘಟ್ಟದ ಕೆಳಗೆ ಮತ್ತು ಘಟ್ಟದ ಮೇಲಿನ ಆಚರಣೆಯಲ್ಲಿ ಕೆಲವು ವ್ಯತ್ಯಾಸಗಳು ಕಾಣಸಿಗುತ್ತವೆ.

ಮದುವೆಯ ನಂತರ ಬರುವ ಮೊದಲ ಚೂಡಿಯನ್ನು ಮದುಮಗಳೊಂದಿಗೆ ಸಮಾಜದ ಎಲ್ಲಾ ಬಂಧು ಭಗಿನಿಯರು ಸೇರಿ ಆಚರಿಸುತ್ತಾರೆ. ಮತ್ತು ಮದುಮಗಳು ಎಲ್ಲಾ ಹಿರಿಯರಿಗೂ ಚೂಡಿ ಕೊಟ್ಟು ನಮಸ್ಕರಿಸಿದ ಮೇಲೆ ಆಕೆಗೆ ಉಡುಗೊರೆಯನ್ನು ನೀಡಲಾಗುತ್ತದೆ. ಪತಿ ಮತ್ತು ಇತರ ಹಿರಿಯರಿಗೆ ಕೇವಲ ವೀಳ್ಯದೆಲೆಯನ್ನು ನೀಡಿ ನಮಸ್ಕರಿಸಲಾಗುತ್ತದೆ. ಅನುಕೂಲಸ್ಥರು ಈ ದಿನ ಔತಣ ನೀಡುವುದೂ ಉಂಟು.ಸಂಜೆ ಮನೆ ಮನೆಗೆ ಹೋಗಿ ಹಿರಿಯ ಮುತ್ತೈದೆಯರಿಗೆ, ದೇವಸ್ಥಾನಗಳಿಗೂ ಚೂಡಿಯನ್ನು ಕೊಟ್ಟು ಬರುವ ನಿಯಮವಿದೆ. ದೂರವಿದ್ದವರು ಪೋಸ್ಟಿನ ಮೂಲಕ ಕಳಿಸುವುದೂ ಉಂಟು.ಇದು ಗೌರವ ಸೂಚಕವು ಹೌದು.

ಆಶಯ
ಮೇಲು ನೋಟದಲ್ಲಿ ಕೇವಲ ಪೂಜೆಯಾಗಿ ಕಾಣುವ ಈ ಆಚರಣೆ, ನಮ್ಮ ಜನಪದರ ಪ್ರಕೃತಿ ಪೂಜೆಯ ಮುಂದುವರಿಕೆ, ಸಮಷ್ಟಿ ಪ್ರಜ್ಞೆಯ ಮತ್ತೊಂದು ಉದಾಹರಣೆ ಎಂದರೂ ತಪ್ಪಲ್ಲ .ಎಲ್ಲೂ ಬಳಕೆ ಆಗದ ಸಸ್ಯಗಳು.ಈ ಆಚರಣೆಯಲ್ಲಿ ಬಳಸಲ್ಪಡುತ್ತವೆ. ಸಮಾಜದಲ್ಲಿ ಎಲ್ಲಾ ಸಮುದಾಯದ ಸಾಮರಸ್ಯದ ತತ್ವವನ್ನು ಇದು ಒಳಗೊಂಡಿದೆ.ಇದೊಂದು ಆಚರಣೆಯ ನಿಮಿತ್ಯ ತನ್ನ ಬಿಡುವಿಲ್ಲದ ದಿನಚರಿಯ ನಡುವೆಯೂ ಗೃಹಿಣಿ ತನ್ನ ಸರೀಕರೊಂದಿಗೆ ಬೆರೆತು ಕಷ್ಟ ಸುಖ ಮಾತಾಡುವ ಅವಕಾಶವನ್ನು ಮಾಡಿಕೊಡುವ ಉದ್ದೇಶದಿಂದಲೂ ಈ ನಿಯಮ ಮಾಡಿರಬಹುದು..
ಪದ್ಧತಿ ಸಂಪ್ರದಾಯಗಳು ಯಾವುದೊ ಒಂದು ಆಶಯ ದ ಹಿನ್ನೆಲೆಯಲ್ಲೇ ರೂಪುಗೊಂಡಿರುತ್ತವೆ.ಮತ್ತು ಮಾನವನಿಗೆ ಸಂಸ್ಕೃತಿಗೆ ಸನ್ನಿಹಿತವಾಗಿ ನಡೆಯಲು ಪ್ರೇರೇಪಿಸುತ್ತವೆ.ಅದನ್ನು ಅರಿತು ಮುನ್ನಡೆಸಿಕೊಂಡು ಹೋಗುವ ಮನಸ್ಸು ನಮಗಿರಬೇಕು ಅಷ್ಟೇ!

ನೆನಪಿನ ಅಂಗಳದಲ್ಲಿ


ರೇಖಾ ಪಾಟೀಲ. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ಊರಿನವರು. ಅವರ ಕರ್ಮಭೂಮಿಯಾದ ಬೆಂಗಳೂರು ಈಗ ಗಂಡನ ಮನೆ ಕೂಡ. ಸಾಹಿತ್ಯ, ಹಾಡು ಕೇಳುವುದು ಪ್ರವಾಸ, ಹರಟೆ,ಕನ್ನಡ ನಾಡು ನುಡಿ,ಅವರ  ಮನಸಿಗೆ ಖುಷಿ ಕೊಡುವ ವಿಚಾರಗಳು.
ಸಾಫ್ಟವೇರ್ ಕಂಪನಿಯಲ್ಲಿ ಉದ್ಯೋಗ ನಿಮಿತ್ತ ಬೆಲ್ಫಾಸ್ಟ್ನಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾರೆ .


ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಶಾಲೆಯ ಕೊನೆಯ ದಿನ ಪರೀಕ್ಷೆ ಮುಗಿಸಿ ಬಂದವರೇ ಅಜ್ಜನ ಊರಿಗೆ ಹೋಗುವುದು ವಾಡಿಕೆಯಾಗಿತ್ತು.
ನನ್ನ ಅಜ್ಜನ ಊರು ಗಾಡಗೋಳಿ ಅನ್ನುವ ಹೆಸರಿನ, ಹೊಳೆ ಆಲೂರಿನ ಹತ್ತಿರ ಒಂದು ಹಳ್ಳಿ. ಭರ್ಜರಿ ೨ ತಿಂಗಳಿನ ಬೇಸಿಗೆ ರಜೆ ಕಳೆಯುವುದು ಅಲ್ಲೇ. ಅಲ್ಲಿಗೆ ಹೋಗುವುದಕ್ಕೆ ಕಾರಣ ಅಜ್ಜ,ಅಜ್ಜಿ,ಚಿಕ್ಕಮ್ಮ, ಮಾಮ ಅವರು ತೋರಿಸುವ ಪ್ರೀತಿ ಒಂದು ಕಡೆ ಆದರೆ ಊರಲ್ಲಿ ಹಾದು ಹೋಗುವ, ಊರಿನ ಜೀವ ನದಿ ಮಲಪ್ರಭೆ ಅತಿ ಮುಖ್ಯ ಮತ್ತು ಅಸಲಿ ಕಾರಣ ಅಂತ ಅನಿಸುತ್ತದೆ

ದೈನಂದಿನ ನೀರಿನ ಎಲ್ಲ ಅವಶ್ಯಕತೆಗಳಿಗೆ ಇಡೀ ಊರೇ ನೆಚ್ಚಿಕೊಂಡಿದ್ದು ಮಲಪ್ರಭೆಯನ್ನೇ. ಅಜ್ಜನ ಮನೆಯಿಂದ ಹೊಳೆ 3 ರಿಂದ 4 ನಿಮಿಷದ ಕಾಲು ದಾರಿ. ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ದನ ಕರುಗಳಿಗೆ ನೀರು ಕುಡಿಸಲು ಹೀಗೆ ಹತ್ತು ಹಲವು ಕೆಲಸಗಳಿಗೆ ಊರಿನ ಜನ ಇಡೀ ದಿನ ಹೊಳೆಗೆ ಹೋಗಿ ಬರುವುದು ಸಾಮಾನ್ಯವಾಗಿತ್ತು. ಪ್ರತಿ ಸಲ ನಮ್ಮ ಮನೆಯಿಂದ ಯಾರಾದರೂ ಹೊಳೆಗೆ ಹೋದರೂ ನಾನು ಮತ್ತು ನನ್ನ ತಮ್ಮಂದಿರು ಅವರನ್ನು ಹಿಂಬಾಲಿಸುತ್ತಿದ್ದೆವು. ಕಾರಣ ನದಿಯಲ್ಲಿ ಈಜುವುದು.

ದಿನದ ಕನಿಷ್ಠ ಪಕ್ಷ, 4 ರಿಂದ 5 ಘಂಟೆಗಳ ಕಾಲ ಹೊಳೆಯಲ್ಲೇ ಕಳೆಯುತ್ತಿದ್ದೆವು. ಬಟ್ಟೆ ತೊಳೆಯುವುದಕ್ಕೆಂದು ಹೋದವರ ಜೊತೆ ಹೋಗಿ, ಬಟ್ಟೆ ತೊಳೆದು, ಮರಳಿನ ಮೇಲೆ ಹಾಕಿ ಬಟ್ಟೆ ಒಣಗಿಸಿ ಮಡಚಿದ ಮೇಲೆಯೇ ಮನೆಗೆ ಮರಳುವುದು. ಅಲ್ಲಿಯವರೆಗೂ ನೀರಲ್ಲೇ ಆಟ.
ಊರಿನಲ್ಲಿ ಕೆಲವೊಂದು ಮನೆಗೆ ನಲ್ಲಿಯ ವ್ಯವಸ್ಥೆ ಇತ್ತಾದರೂ ಸಾಕಾಗುವಷ್ಟು ಕುಡಿಯಲು ನೀರು ಸಿಗುತ್ತಿರಲಿಲ್ಲ. ಅದಕ್ಕೂ ಹೊಳೆ ದಾಟಿ ಮರಳನ್ನು ಬಗೆದು ವರ್ತಿ ತೋಡಿ ತಿಳಿಯಾದ ಕುಡಿಯುವ ನೀರನ್ನುತೆಗೆದುಕೊಂಡು ಹೋಗುತ್ತಿದ್ದರು.
ಆ ವರ್ತಿಯಲ್ಲಿ ಒಂದು ಚಿಕ್ಕ ಪಾತ್ರೆಯ ಸಹಾಯದಿಂದ ತಿಳಿಯಾದ ನೀರನ್ನು ಕೊಡಕ್ಕೆ ತುಂಬುವುದೇ ಒಂದು ಖುಷಿ. ಇದೆಲ್ಲ ಸಂಭ್ರಮವನ್ನು ನೋಡಲೆಂದೇ ತಾಯಿ ಮಲಪ್ರಭೆ ಊರನ್ನು ಶಾಂತವಾಗಿ ದಾಟಿ ಹೋಗುತ್ತಿದ್ದಳೇನೋ ಅನಿಸುತ್ತದೆ.

ಹೊಳೆ ಆಲೂರಿನಲ್ಲಿ ಹೊಳೆಗೆ ಅಡ್ಡವಾಗಿ ರೈಲ್ವೆ ಹಳಿ ಇದೆ. ಅದರ ಮೇಲೆ ಕೂಗಿಕೊಂಡು ಹೋಗುವ ರೈಲಿನ ಶಬ್ದ ಇಲ್ಲಿಗೂ ಕೇಳುತ್ತದೆ. ಆ ಕೂಗಿನೊಂದಿಗೆ ಜನ ಸಮಯವನ್ನು ಗುರುತಿಸುತ್ತಿದ್ದರು. 12ರ ಟಪಾಲ್ ಗಾಡಿ, 5ರ ಹಾಲಿನ ಗಾಡಿ ಹೀಗೆ. ಈಗ ನಾನಿರುವ ಮನೆಯ ಮೇಲೆ ಪ್ರತಿ 10 ರಿಂದ 15 ನಿಮಿಷಕ್ಕೊಂದು ವಿಮಾನ ಹಾರುತ್ತದೆ, ಅದರಿಂದ ನಾನು ಯಾವ ದಿನಚರಿಯನ್ನು ಗುರುತಿಸಿಕೊಂಡಿಲ್ಲವಾದರೂ ನನಗೆ ನೆನಪಾಗುವುದು ಟಪಾಲ್ ಗಾಡಿ ಮತ್ತು ಹಾಲಿನ ಗಾಡಿ.
ಒಂದಷ್ಟು ವರ್ಷಗಳ ನಂತರ ಪ್ರತಿ ಮನೆಗೆ ನಲ್ಲಿ ಸೌಕರ್ಯ ದೊರಕಿ ಹೊಳೆಗೆ ಹೋಗುವುದು ಕಡಿಮೆ ಆಯಿತು. ಅಷ್ಟೊತ್ತಿಗೆ ನಾವುಗಳು ಪ್ರೌಢ ಶಾಲೆಗೆ ಸೇರಿದ್ದರಿಂದ ರಜೆಗೆಂದು ಊರಿಗೆ ಹೋಗುವುದು ತೀರಾ ವಿರಳವಾಗಿತ್ತು. ಹೊಳೆಯಲ್ಲಿ ಮಣ್ಣೆತ್ತುವ ಕೆಲಸ ಭರದಿಂದ ಸಾಗಿ ಹೊಳೆಗೆ ಹೋಗುವುದೇ ಅಪಾಯ ಅನ್ನುವಂತಾಯಿತು. ಊರಿನ ಜನ ಹೊಳೆಯಾಚೆಗಿನ ಹೊಲಗಳನ್ನು ಮಾರಿಕೊಂಡರು.
2009ರ ಪ್ರವಾಹದಲ್ಲಿ ಮಲಪ್ರಭೆ ಇಡೀ ಊರನ್ನೇ ಆವರಿಸಿಕೊಂಡಳು. ಒಂದಿಡೀ ವಾರ ಪೂರ್ತಿ ಊರಿಗೆ ಊರೇ ನೀರಲ್ಲಿ ಮುಳುಗಿ ಹೋಯಿತು. ಊರ ಜನರೆಲ್ಲಾ ಗಂಜಿ ಕೇಂದ್ರಗಳಿಗೆ ಹೋಗಿ ಸೇರಿಕೊಂಡರು.ಈಗ ಊರನ್ನು ನದಿಯಿಂದ ದೂರ ಸ್ಥಳಾಂತರಿಸಲಾಗಿದೆ.
ಸುಮಾರಷ್ಟು ವರ್ಷಗಳಾದ ಮೇಲೆ ಮತ್ತೆ ಹೋದೆ ಅಜ್ಜನ ಮನೆ ಮತ್ತು ನಾವು ಜೀವದಂತೆ ಪ್ರೀತಿಸುತ್ತಿದ್ದ ಹೊಳೆ ನೋಡಲು. ಅಜ್ಜನಿಲ್ಲದ ಬಿದ್ದು ಹೋದ ಮನೆ ನೋಡಿ ಯಾಕೋ ಗಂಟಲಬ್ಬಿಬಂತು, ಮಾತೇ ಹೊರಡಲಿಲ್ಲ ಕಣ್ಣು ತುಂಬಿಕೊಂಡಿತ್ತು.

ಮಾವು..ನಾವು.

ಸ್ವರ್ಗದೊಳಗೀ ಮಾವು ದೊರೆವುದೇನು?
ಎಲ್ಲ ಪರಿ ಸವಿಸೊಬಗ ರಸದ ಜೇನು॥
ಇಲ್ಲದಿರೆ ಎನಗಿಲ್ಲೆ ನೂರು ಜನುಮಗಳಿರಲಿ
ಎಲ್ಲ ಪರಿಯ ಮಾವು ಸವಿಯ ಸಿಗಲಿ ॥
( ಮೂಲ ಕವಿಯ ಕ್ಷ ಮೆ ಯಾಚಿಸುತ್ತ)

ಜಗದೊಡೆಯನ ಅತ್ಯದ್ಭುತ ಸೃಷ್ಟಿ ಯಾವುದೆಂದು ಯಾರಾದರೂ ಕೇಳಿದರೆ ನಾನಿನಿತೂ ಹಿಂದೆ ಮುಂದೆ ನೋಡದೇ ಥಟ್ಟನೇ ಕಣ್ಮುಚ್ಚಿಕೊಂಡು ಕೊಡುವ ಉತ್ತರ ಎಂದರೆ. ‘ಮಾವು..ಮಾವು..ಮಾವು’.

ಎಂಥ ಸೊಗಸು ಘಮ್ಮನೇ ಹೂತ ಆ ಚೂತ ಮರ,ಚಿಗುರು,ತಳಿರು,ದೋರಗಾಯಿ,ಕಾಯಿ, ಹಣ್ಣುಗಳು!! ಮಾಮರದ ಹೂಗಳನ್ನೇ ಮಾರ ತನ್ನ ಬಿಲ್ಲಿನ ಹೂಬಾಣಕ್ಕೆ ಬಳಸುವುದಂತೆ. ಕೋಗಿಲೆಯ ಪಂಚಮನೂಂಚರದ ತವರೂ ಇದೇ ಮಾಮರ. ಕವಿಗಳಿಗೂ ಇದುವೇ ಸ್ಫೂರ್ತಿಯ ಸೆಲೆ. ವಸಂತನಾಗಮನದ ತುತ್ತೂರಿ ಈ ಮಾವೇ.
ಈ ಮಾವಿನಕಾಯಿ – ಹಣ್ಣುಗಳಿರದಿದ್ದರೆ ಜೀವನ ಅದೆಷ್ಟು ನೀರಸವಾಗಿರುತ್ತಿತ್ತು ಊಹಿಸಿ. ಮಾವು ಬಳಸಿದ ಅಡುಗೆಯ ಸ್ವಾದದ ಮಾತೇ ಬೇರೆ. ಚಟ್ನಿ, ಕೋಸಂಬರಿ, ಗೊಜ್ಜು, ತೊಕ್ಕು- ಉಪ್ಪಿನಕಾಯಿಗಳು, ಪಳುವು, ಮೊರಬ್ಬ-ಗುಳಂಬಗಳು, ಚಿತ್ರಾನ್ನ-ಕಲಸನ್ನಗಳು, ಸೀಕರಣೆ-ಆಮ್ರಖಂಡಗಳು, ಅಪ್ಪೆಹುಳಿ,ತೊವ್ವೆಗಳು..ಒಂದೇ ?! ಎರಡೇ?! ನನಗಂತೂ ಆ ವಿಧಾತ ಕನಿಷ್ಟ ಈ ಮಾವಿನ ಸೀಜನ್ ನಲ್ಲಾದರೂ ಎರಡು ಹೊಟ್ಟೆ ಕೊಡಬಾರದೇ ಎಂಬ ಚಡಪಡಿಕೆ.
ನನಗಂತೂ ಈ ಮಾವಿನ ಖಾದ್ಯಗಳು ಬರೀ ಬಾಯ್ ರುಚಿಯ,ಹೊಟ್ಟೆ ತುಂಬಿಸುವ ತಿನಿಸುಗಳಲ್ಲ. ಅವುಗಳಲ್ಲಿ ನನ್ನ ಬಾಲ್ಯದ ಕಂಪಿದೆ. ನೂರಾರು ಮಧುರನೆನಪುಗಳು ಭಾವಕೋಶದೊಂದಿಗೆ ಬೆಸೆದಿವೆ.

ತೊವ್ವೆ

ಬಚ್ಚಲಿನ ಹಂಡೆದೊಲೆಯ ಕಟ್ಟಿಗೆಯನ್ನು ಹೊರಗೆಳೆದು ಕಪ್ಪಾದ ದೊಡ್ಡ ಝಾಲಿಸೌಟಿನಿಂದ ಒಳಗಿನ ನಿಗಿನಿಗಿಕೆಂಡವನ್ನು ಒಂದು ಹಿತ್ತಾಳಿಝಾಕಣಿಯಲ್ಲಿ ತುಂಬಿಕೊಂಡು ಬಂದು ಅದನ್ನು ಅಡುಗೆಮನೆಯ ಶೇಗಡಿಗೆ (ಇದ್ದಲಿ ಒಲಿ) ಸುರುವಿ ಅದರ ಮೇಲೆ ದಪ್ಪನೆಯ ಹಿತ್ತಾಳೆಯಗುಂಡಿಯಲ್ಲಿ ಬ್ಯಾಳಿ ಬೇಯಲಿಕ್ಕಿಡೂದು ಅಮ್ಮನ ದಿನಬೆಳಗಿನ ಕಾಯಕ. ಮಾವಿನಕಾಯಿ ತೊವ್ವೆ ಮಾಡುವ ದಿನದಂದು ಎರಡು ಮುಷ್ಟಿಬ್ಯಾಳಿ ಹೆಚ್ಚಿಗೇ ಇಡುವುದಿತ್ತು. ಆ ಇದ್ದಿಲೊಲೆಯ ಹದವಾದ ಶಾಖದಲ್ಲಿ ನಿಧಾನವಾಗಿ ಮಿದುವಾಗಿ ಬೆಂದ ತೊಗರಿಬೇಳೆ ತೊವ್ವೆಗೆ ಸ್ವಲ್ಪಹೆಚ್ಚಿಗೇ ಇಂಗು, ಜೀರಗೆ, ಮೆಂತ್ಯ, ಕರಿಬೇವು, ಸಣ್ಣಗೆ ಹೆಚ್ಚಿದ ಹಸಿಮೆಣಸು ಹಾಗೂ ಮಾವಿನಕಾಯಿ ಹೋಳುಗಳನ್ನು  ಒಗ್ಗರಣೆಯಲ್ಲಿಕೈಯಾಡಿಸಿ ಸುರಿದು,ಒಂದಿಷ್ಟು  ಉಪ್ಪು,ಬೆಲ್ಲ ಹಾಕಿ ಮತ್ತೊಂದು ಕುದಿ ಕುದಿಸಿದರೆ 'ಮಾವಿನಕಾಯಿ ತವ್ವಿ' ಸವಿಯಲು ಸಿದ್ಧವಾಗುತ್ತಿತ್ತು. ಮೆಂತ್ಯ-ಇಂಗು-ಮಾವಿನ ಘಮ, ಖಾರ-ಹುಳಿ-ಉಪ್ಪು-ಸಿಹಿಗಳ ಹಿತವಾದ ಮಿಶ್ರಣ..ಬಿಸಿ ಬಿಸಿ ಅನ್ನ-ತುಪ್ಪದೊಡನೆಯೋ, ಭಕ್ರಿ-ಚಪಾತಿಯೊಡನೆಯೋ  ಉಂಡರೆ..ಅದೂ ಎಡಗೈಯಲ್ಲಿ  ಬೆವರೊರೆಸಿಕೊಳ್ಳುತ್ತ ( ಮಾವಿನಕಾಯಿ ಸೀಜನ್ನೇ ಭರ್ತಿ ಬೇಸಗೆಯಏಪ್ರಿಲ್-ಮೇ ದಿನಗಳಲ್ಲಿ.ಲೋಡ್ ಶೆಡ್ಡಿಂಗ್ ನಿಂದಾಗಿ ಒಂದಿನವೂ ಮಧ್ಯಾಹ್ನ  ಕರೆಂಟ್ ಇರುತ್ತಿರಲಿಲ್ಲ ನಮ್ಮ ಹಳ್ಳಿಯಲ್ಲಿ.) ಮತ್ತಾವಸುಖವಿದ್ದೀತು ಅದರ ಮುಂದೆ ಎನಿಸುತ್ತಿತ್ತು.

         ಈಗ ಪ್ರೆಸ್ಟೀಜ್ ಪ್ರೆಷರ್ ಕುಕ್ಕರ್ ನಲ್ಲಿ ಗ್ಯಾಸೊಲೆಯ ಮೇಲೆ ಬೆಂದ ನನ್ನೀ ತೊವ್ವೆಗೆ ಆ ಘನತೆ ಇರದಿದ್ದರೂ ಈಗಲೂ ಮಾವಿನಕಾಯಿತವ್ವಿ ಕೊಡೋ ಆ ಸುಖಕ್ಕೇನೂ ಮೋಸವಿಲ್ಲ.

ಚಟ್ನಿ

ಮಾವಿನಕಾಯಿ ಸೀಜನ್ ಬರುವ ಮುಂಚೆಯೇ ದೊಡ್ಡ ದೊಡ್ಡ ಬೆಲ್ಲದ ಪೆಂಟೆಗಳು  ಮನೆಗೆ ಬರುತ್ತಿದ್ದವು. ಸಿಹಿ-ಖಾರದ ಯಾವುದೇಮಾವಿನ ಪದಾರ್ಥಕ್ಕೂ ಈ ಬೆಲ್ಲ ಬೇಕೇ ಬೇಕಾಗುತ್ತಿತ್ತು. ಹುಳಿಹುಳಿಯಾದ ಮಾವಿನ ಹೆರಕಲಿಗೆ ಸಮಪ್ರಮಾಣದಲ್ಲಿ ಬೆಲ್ಲ, ಖಾರಪುಡಿ, ಉಪ್ಪು ಬೆರೆಸಿ, ಘಮ್ಮೆನ್ನುವ ಹುರಿದ ಮೆಂತ್ಯ, ಗಟ್ಟಿ ಇಂಗು ಹಾಕಿ, ಒಣಖೊಬ್ರಿ ತುರಿಯೊಂದಿಗೆ ಅಮ್ಮ ಒಳಕಲ್ಲಿನಲ್ಲಿ ರುಬ್ಬುಗುಂಡಿನಿಂದರುಬ್ಬಲು ಶುರುಮಾಡಿದರೆ ನಮಗೆ ಬಾಯ್ತುಂಬ ನೀರು. ಎಷ್ಟೋ ಸಲ ನಾನು ರುಬ್ಬುತ್ತೇನೆಂದು  ಹಟಮಾಡಿ ರುಬ್ಬಿಯಾದ ಮೇಲೆ ಕೈಗೆಮೆತ್ತಿಕೊಂಡ  ಚಟ್ನಿಯನ್ನು ಗೀರದೇ ಕೈ ತೊಳೆಯಲೆಂದು ಹೋಗಿ ಬಚ್ಚಲಲ್ಲಿ ನಿಂತು ಬಟ್ಟು ನೆಕ್ಕುವ ಆ ಸುಖವೇ ಸುಖ! ದೊಡ್ಡ ಕಲಪರಟಿಯಆ ಚಟ್ನಿ  ಕಣ್ಮುಚ್ಚಿ ತೆಗೆವುದರಲ್ಲೇ ಖಾಲಿಯಾಗುತ್ತಿತ್ತು.

ಇದು ಕಾಯಿಯದಾದರೆ  ಹಣ್ಣಿನ ಸಂಭ್ರಮವೇ ಬೇರೆ. ‘ಸಕ್ರಿ ಮಾವು’, ‘ ಅಡಕಿ ಮಾವು’ ಹೆಸರಿನ ಮನೆಯ ಮಾವಿನಗಿಡಗಳ ಹಣ್ಣುಗಳು. ಒಳಕೋಣೆಯಲ್ಲಿ ಹುಲ್ಲಿನಡಿಯಲ್ಲಿ ಅಡಿಹಾಕಿದ ಕಾಯಿಗಳು..ಮನೆತುಂಬ ಹಣ್ಣಿನ ಸುವಾಸನೆ. ಏಲಕ್ಕಿ,ಜಾಜಿಕಾಯಿ ಪುಡಿ,  ಚಿಟಿಕೆ ಉಪ್ಪು ಹಾಕಿ ಹಿಂಡಿಟ್ಟ ಕೊಳಗಗಟ್ಟಲೇ ಸೀಕರಣೆ.  ಕೆಲವೊಮ್ಮ ಕೋವಳ್ಳಿಡೈರಿಯಿಂದ ತಂದ ಚಕ್ಕಾದಲ್ಲಿ ಮಾವಿನಹಣ್ಣಿನ ರಸ ಬೆರೆಸಿ ಮಾಡಿದ  ಆಮ್ರಖಂಡದ ತಣ್ಣಗಿನ ನಳ್ಪು.ಸಿಹಿಯೊಡನೆ ಮತ್ತೆ ನೆಂಚಿಕೊಳ್ಳಲು ಮಾವಿನಕಾಯಿ ಕಾರೇಸಾ, ಚಿತ್ರಾನ್ನ, ಕೋಸಂಬ್ರಿಗಳು.. ಸಂಹನನಕುಪಚಯ..ಕರಣಕಾನಂದ .

~ ಗೌರಿಪ್ರಸನ್ನ