ಲ್ಯಾಂಕಶಾಯರಿನ ಭಾರತೀಯ ನೃತ್ಯ ಪರಂಪರೆ

ನಮ್ಮ ಕನಸನ್ನು ಮಕ್ಕಳ ಮೂಲಕ ನನಸಾಗಿಸುವುದು ಒಂದು ಪ್ರಶ್ನಾರ್ಹ ಪ್ರಯತ್ನ ಅನ್ನುತ್ತಾರೆ.  ಆದರೆ ಮಕ್ಕಳ ಶ್ರಮದ ಯಶಸ್ಸು ತಾಯ್ತಂದೆಯರಿಗೆ ಹೆಮ್ಮೆಯ ವಿಷಯ ಅನ್ನುವುದರಲ್ಲಿ ಎರಡು ಮಾತಿಲ್ಲ. 

ನಮಸ್ಕಾರ. ವಿಶ್ವಾವಸು ಸಂವತ್ಸರದ ಹೊಸವರ್ಷದ ಶುಭಾಶಯಗಳು. ಈ ಸಲದ ಆವೃತ್ತಿಯಲ್ಲಿ ನಮ್ಮ ಕೌಂಟಿಯ ನೃತ್ಯ ಶಾಲೆಗಳಲ್ಲಿ ಒಂದಾದ ಅಭಿನಂದನಾ ಡಾನ್ಸ್ ಅಕ್ಯಾಡೆಮಿಯ ಮತ್ತು ಅದರ ಸಂಚಾಲಕರಾದ ಶ್ರೀಮತಿ ಅಭಿನಂದನಾ ಕೋದಂಡ ಅವರ ಒಂದು ಕಿರು ಪರಿಚಯ – ವಿದ್ಯಾರ್ಥಿಯೊಬ್ಬಳ ಪಾಲಕರ ಅನುಭವದ ಸಹಿತ.  ಓದಿ ತಮ್ಮ ಅಭಿಪ್ರಾಯವನ್ನು ತಿಳಿಸುವುದು. ಧನ್ಯವಾದಗಳೊಂದಿಗೆ – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ).
****************************
ಅಭಿನಂದನಾ ಡಾನ್ಸ್ ಅಕ್ಯಾಡೆಮಿ – ನಾಟ್ಯರಸ

*********************************

ಇಂಗ್ಲಂಡಿನಲ್ಲಿ ನನ್ನ ಕಲಿಕೆಯ ಸುತ್ತನ್ನು (training rotation) ಮುಗಿಸಿ ಪ್ರೆಸ್ಟನ್ನಿಗೆ ಬಂದು ಕನ್ಸಲ್ಟಂಟ್ ಆಗಿ ಸೇರಿದಾಗ ನಮ್ಮ ಮಗಳಿಗೆ ೩ ವರ್ಷ. ಎಲ್ಲಾ ಅನಿವಾಸಿ ಭಾರತೀಯರಂತೆ ನಾವೂ ನಮ್ಮೂರಿನಲ್ಲಿರುವ ಹಿಂದಿನ ಪೀಳಿಗೆಗೂ, ಇಲ್ಲಿ ಹುಟ್ಟಿರುವ ಮುಂದಿನ ಪೀಳಿಗೆಗೂ ಮಧ್ಯ ಪೂರ್ವ – ಪಶ್ಚಿಮಗಳಿಗೆ ಸೇತುವೆಯಾಗಿ ಬದುಕುವ ಜೀವನದ ಹಂತದಲ್ಲಿ ಇದ್ದೆವು ಅನ್ನಿ. ಆದಷ್ಟು ಭಾರತೀಯ ಪರಂಪರೆಯ ಕುರುಹುಗಳನ್ನು ಮಕ್ಕಳಿಗೆ ಪರಿಚಯಿಸಬೇಕೆಂಬ ಆಶಯವನ್ನು ನಮ್ಮ ಜೀವನದ ಓಟದ ಜೊತೆಗೇ ಹೊತ್ತುಕೊಂಡು ಓಡುತ್ತಿದ್ದೆವು.  ಮಕ್ಕಳು ಇಲ್ಲಿಯ ಸಂಗೀತ, ನೃತ್ಯ, ಸಂಸ್ಕೃತಿಯನ್ನು ಹೇಗೋ ಕಲಿತುಬಿಡುತ್ತವೆ.  ಭಾರತೀಯ ಸಂಗೀತ – ನೃತ್ಯದ ಹುಚ್ಚು ಹತ್ತಿಸಬೇಕೆಂದರೆ, ಮೊದಲು ನಮಗೆ ಆ ಹುಚ್ಚಿರಬೇಕು, ಹತ್ತಿರದಲ್ಲಿ ಎಲ್ಲಾದರೂ ಕಲಿಯುವ ಅವಕಾಶವಿರಬೇಕು ಮತ್ತು ಛಲ ಬಿಡದೆ ವಾರವೂ ಪ್ರತಿ ತರಗತಿಗೆ ಕರೆದೊಯ್ಯುವ ತಾಳ್ಮೆಯಿರಬೇಕು. ಇದು ಬೀಜ ಬಿತ್ತಿ, ನೀರು-ಗೊಬ್ಬರ ಹಾಕಿ ಸಸಿ ಏಳುವವರೆಗಿನ ಹಂತ ಅಷ್ಟೇ.  ಅಲ್ಲಿಂದ ಮುಂದೆ ಅದು ಬೆಳೆದು ಮರವೂ ಆಗಬಹುದು ಇಲ್ಲವೇ, ಮುರುಟಿ ಮಾಯವೂ ಆಗಬಹುದು.  ಆರಂಭದಲ್ಲಿ ಆಟ-ಸಂಗೀತ-ನೃತ್ಯ ಅಲ್ಲದೇ ಇನ್ನೂ ಇತರ ಪಠ್ಯೇತರ ತರಗತಿಗಳಿಗೆ ವಾರದಲ್ಲಿ ೮ ಬಾರಿ (ಶನಿವಾರ ಎರಡು!) ಕರೆದೊಯ್ದರೂ, ೧೦ನೆಯ ತರಗತಿಗೆ ಬರುವ ಹೊತ್ತಿಗೆ ಒಂದೆರಡು ಮಾತ್ರ ಉಳಿಯುತ್ತವೆ ಅನ್ನುವುದು ಸತ್ಯ; ಎಲ್ಲಾ ಅನಿವಾಸಿ ತಂದೆ-ತಾಯಂದಿರ ಅನುಭವವೂ ಹೆಚ್ಚು ಕಡಿಮೆ ಇದೇ ಇರಲಿಕ್ಕೆ ಸಾಕು. 

ಹೀಗಿರುವಾಗ, ಪ್ರೆಸ್ಟನ್ನಿನಲ್ಲಿ ಕೇಳಿಬಂದ ಹೆಸರು ಅಭಿನಂದನಾ. ಶ್ರೀಮತಿ ಅಭಿನಂದನಾ ಕೋದಂಡ ಅವರು ನಡೆಸುತ್ತಿದ್ದ ಕುಚಿಪುಡಿ ತರಗತಿಗಳಿಗೆ ನಮ್ಮ ಪರಿಚಯದ ಹಲವರ ಮಕ್ಕಳು ಹೋಗುತ್ತಿದ್ದದ್ದು ತಿಳಿದು, ನಮ್ಮ ಮಗಳನ್ನೂ ಸೇರಿಸಿದೆವು. ಅಭಿನಂದನಾ ಅವರು ಮಕ್ಕಳೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ, ಶಿಸ್ತು, ಕಲಿಸುವ ಶೈಲಿ ಇವೆಲ್ಲ ಕ್ರಮೇಣ ನಮಗೂ, ಮುಖ್ಯವಾಗಿ ಮಗಳಿಗೂ ಮೆಚ್ಚುಗೆಯಾಗಿ ಅವಳ ಕಲಿಕೆ ನಿಲ್ಲದೆ ಮುಂದುವರೆಯಿತು. ವರ್ಷದಲ್ಲಿ ಹಲವಾರು ಚಿಕ್ಕಪುಟ್ಟ ಪ್ರದರ್ಶನಗಳೊಂದಿಗೆ ಶುರುವಾಗಿದ್ದು ಅದೊಂದು ನಮ್ಮ ಜೀವನಕ್ರಮವೇ ಆಗಿಹೋಯಿತೆನ್ನಬಹುದು. ವಾರದ ತರಗತಿಗಳು ಅಷ್ಟೇ ಅಲ್ಲದೇ ಸಂಕ್ರಾಂತಿ, ೨೬ ಜನವರಿಯ ಗಣತಂತ್ರ ದಿವಸ, ಯುಗಾದಿ, ೧೫ ಆಗಸ್ಟ್, ದೀಪಾವಳಿ, ಹೊಸ ವರ್ಷ ಹೀಗೆ ಅನೇಕ ಕಾರ್ಯಕ್ರಮಗಳಿಗೆ ತಯಾರಿ ನಮ್ಮನ್ನೂ, ಮಕ್ಕಳನ್ನೂ ವಾರಾಂತ್ಯದಲ್ಲಿ ಸಮಯವೇ ಇಲ್ಲದಂತೆ ಇಟ್ಟವು. ಎಲ್ಲ ಪಾಲಕರಂತೆ ನಮ್ಮ ಜೀವನದ ಪರಿಕ್ರಮಣವೂ ಮಕ್ಕಳ ಚಟುವಟಿಕೆಗಳ ಸುತ್ತಲೇ ಸುತ್ತುವಂತಾಯಿತು. ಹೀಗಿದ್ದರೂ, ಪ್ರತಿಯೊಂದು ಕಾರ್ಯಕ್ರಮದ ಯಶಸ್ಸು ನಮ್ಮ ಹೆಮ್ಮೆಯನ್ನು ಹೆಚ್ಚಿಸಿತೆಂದೇ ಹೇಳಬಹುದು.

ಕುಚಿಪುಡಿಯ ನೃತ್ಯ ಪ್ರಕಾರದಲ್ಲಿ, ವಿದ್ಯಾರ್ಥಿಗೆ ಮೊದಲಿನಿಂದ ಕಾಲ್ಗೆಜ್ಜೆ ದೊರೆಯದು. ಅದನ್ನು ವಿದ್ಯಾರ್ಥಿ ಗಳಿಸಬೇಕು. ಅಂದರೆ, ಒಂದು ಹಂತ ತಲುಪಿದಾಗ ಮಕ್ಕಳಿಗೆ ಗುರುವಿನಿಂದ ಗೆಜ್ಜೆ ಕಟ್ಟಿಸಲಾಗುತ್ತದೆ, ನಟರಾಜನ ಪೂಜೆಯೊಂದಿಗೆ. ಇದುವರೆಗೆ ಗುಂಪಿನಲ್ಲಿ ನಾಟ್ಯಪ್ರದರ್ಶನ ಮಾಡಿದ್ದ ವಿದ್ಯಾರ್ಥಿ, ಮೊದಲ ಬಾರಿಗೆ ಸ್ಪಾಟ್‍ಲೈಟ್‍ನಲ್ಲಿ ಬರುತ್ತಾರೆ; ಸೋಲೋ ನೃತ್ಯ ಮಾಡುತ್ತಾರೆ; ಮಾಡಬಲ್ಲೆನೆಂಬ ಆತ್ಮಸ್ಥೈರ್ಯ ಗಳಿಸುತ್ತಾರೆ. ನಾನು ನೋಡಿದಂತೆ, ಮಕ್ಕಳು ನೃತ್ಯದ ಬಗ್ಗೆ ಹೆಚ್ಚು ಗಮನ ಕೊಡುವುದು ಅಲ್ಲಿಂದಲೇ. ಅಲ್ಲಿಂದ ಪ್ರತಿ ಹಾವ-ಭಾವದಲ್ಲಿ, ಪ್ರತಿಯೊಂದು ಪ್ರದರ್ಶನದಲ್ಲಿ ಮನಸುಕೊಟ್ಟು ಮಾಡಿದ ಪ್ರಯತ್ನದ ಫಲ ಕಾಣಲು ಶುರುವಾಗುತ್ತದೆ.

ಅಲ್ಲಿಂದ ಮುಂದಿನ ಹಂತ ರಂಗಪ್ರವೇಶದ್ದು. ಭರತನಾಟ್ಯದಿಂದಾಗಿ ಆರಂಗೇಟ್ರಮ್ ಎಂದು ಹೆಚ್ಚು ಪ್ರಚಲಿತವಾಗಿರುವ ಈ ಹಂತ, ವಿದ್ಯಾರ್ಥಿಯ ಕಲಿಕೆ ಪೂರ್ಣವಾಯಿತು ಅನ್ನುವುದಕ್ಕೆ ಸಮ. ಸುಮಾರು ೩ ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮ ವಿದ್ಯಾರ್ಥಿಯ ಪರಿಶ್ರಮವನ್ನು ಒರೆಗೆ ಹಚ್ಚುತ್ತದೆ. ಲೈವ್ ಹಾಡುಗಾರ ಮತ್ತು ಸಂಗೀತಗಾರರೊಂದಿಗೆ ನಡೆಯುವ ನೃತ್ಯ ವಿದ್ಯಾರ್ಥಿಯನ್ನು, ಅಲ್ಲಾಗಬಹುದಾದ ಹೆಚ್ಚು-ಕಡಿಮೆಗಳಿಗೆ ಹೊಂದಿಕೊಂಡು ಕಾರ್ಯಕ್ರಮವನ್ನು ಸರಿಯಾಗಿ ನಡೆಸಿ, ಮುಗಿಸುವ ಚಾಣಾಕ್ಷತೆಯನ್ನು ಕಲಿಸುತ್ತದೆ. ಕಾರ್ಯಕ್ರಮಕ್ಕೆ ಸುಮಾರು ೧೦-೧೨ ತಿಂಗಳ ಮುಂಚೆ ಆರಂಭವಾಗುವ ರಂಗಪ್ರವೇಶದ ತಯಾರಿ, ವಿದ್ಯಾರ್ಥಿ ಮತ್ತು ಗುರು ಇಬ್ಬರ ಸಮಯ, ಸಾಮರ್ಥ್ಯ ಎರಡರಲ್ಲೂ ಸಂಪೂರ್ಣ ಹೊಂದಾಣಿಕೆ, ತಾಳ್ಮೆ ಮತ್ತು ಸಮರ್ಪಣೆಯನ್ನು ನಿರೀಕ್ಷಿಸುತ್ತದೆ. ಪಾಲಕರಿಗೆ ಇದೊಂದು ಸಣ್ಣ ಪ್ರಮಾಣದಲ್ಲಿ ಮದುವೆಯನ್ನೇ ಮಾಡಿದ ಅನುಭವ – ತಯಾರಿ, ಖರೀದಿ ಎಲ್ಲದರಲ್ಲೂ. ಕೊನೆಯ ವಾರವಂತೂ, ದಿನಕ್ಕೆ ೮-೧೦ ಗಂಟೆಗಳ ಕಾಲ ಸಂಗೀತಗಾರರೊಂದಿಗೆ ನಡೆಯುವ ನೃತ್ಯದ ಅಭ್ಯಾಸ ನೋಡುವ ಪಾಲಕರಿಗೇ ಬೆವರಿಳಿಸುತ್ತದೆ! ಎಲ್ಲ ಯಶಸ್ವಿಯಾಗಿ ಮುಗಿದು, ನೆರೆದ ಪ್ರೇಕ್ಷಕವೃಂದದ ಚಪ್ಪಾಳೆಗಳನ್ನು ಕೇಳಿದಾಗ ಆಗುವ ಹೆಮ್ಮೆಯ ಅನುಭವ ಬರೆದು ಹೇಳಿ ವರ್ಣಿಸಲಾಗದು.

ಮೇಲಿನ ಎರಡು ಹಂತಗಳಲ್ಲೂ ಒಬ್ಬೊಬ್ಬಳು ಮಗಳು ಇರುವ ನಮಗೆ, ಈಗ ಕುಚಿಪುಡಿಯಿಲ್ಲದ ವಾರ ಏನೆಂದೇ ನೆನಪಿಲ್ಲ. ಯೂನಿವರ್ಸಿಟಿಯಲ್ಲಿರುವ ದೊಡ್ಡ ಮಗಳು ಕಲಿತ ವಿದ್ಯೆಯನ್ನು ಉತ್ಸಾಹದಿಂದ ಅಲ್ಲೂ ಪ್ರದರ್ಶನ ಮಾಡುತ್ತಿದ್ದಾಳೆ. ಕುಚಿಪುಡಿ ಕಲಿಸಿದ ಶಿಸ್ತು, ಏಕಾಗ್ರತೆಯ ಅರಿವು ಜೀವನಕ್ಕೆ ಎಷ್ಟು ಉಪಯುಕ್ತ ಎನ್ನುವ ಅರಿವು ಅವಳಿಗಿದೆ. ಇದಕ್ಕೆ ಕಾರಣವಾದ ಗುರು ಶ್ರೀಮತಿ ಅಭಿನಂದನಾ ಕೋದಂಡ ಮತ್ತು ಅವರು ನಡೆಸುವ ಅಭಿನಂದನಾ ಡಾನ್ಸ್ ಅಕ್ಯಾಡೆಮಿಗೆ ನಮ್ಮ ಧನ್ಯವಾದಗಳು.

ಅಭಿನಂದನಾ ಡಾನ್ಸ್ ಅಕ್ಯಾಡೆಮಿ (ADA):
ಸಧ್ಯಕ್ಕೆ ಇಂಗ್ಲೆಂಡಿನಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಶಾಸ್ತ್ರೀಯ ನಾಟ್ಯ ಕಲಿಸುವ ಶಾಲೆಗಳಲ್ಲಿ ಒಂದು. ೨೦೦೭ರಲ್ಲಿ ಆರಂಭವಾದ ಈ ಶಾಲೆ ತನ್ನ ಶಿಸ್ತು ಮತ್ತು ಕಲಿಕೆಯ ವಿಧಾನದಿಂದಾಗಿ ಹಿರಿಮೆಯನ್ನು ಕಾಯ್ದುಕೊಂಡು ಬಂದಿದೆ. ದಕ್ಷಿಣ ಭಾರತದ ಆಂಧ್ರಪ್ರದೇಶದಲ್ಲಿ ತನ್ನ ಬೇರುಗಳನ್ನು ಹೊಂದಿರುವ ಕುಚಿಪುಡಿ ನೃತ್ಯವನ್ನು ಕಲಿಸುವ ಈ ಶಾಲೆ, ವಾಯವ್ಯ ಇಂಗ್ಲಂಡಿನ ಲ್ಯಾಂಕಶಾಯರ್‌ನ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳನ್ನು ಹೊಂದಿದೆ. ಇಲ್ಲಿನ ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ದೇಶದಾದ್ಯಂತ ಹಲವಾರು ಪ್ರಮುಖ ವೇದಿಕೆಗಳಲ್ಲಿ ಪ್ರದರ್ಶಿಸಿದ್ದಾರೆ – ಉದಾಹರಣೆಗೆ, ಲಂಡನ್ ಇಂಟರ್ನ್ಯಾಶನಲ್ ಆರ್ಟ್ಸ್ ಫೆಸ್ಟಿವಲ್, ಟೂರ್ ಡಿ ಫ್ರಾನ್ಸ್ ಫೆಸ್ಟಿವಲ್ (ಹ್ಯಾಲಿಫ್ಯಾಕ್ಸ್), ಬ್ಯಾರೊ ಫೆಸ್ಟಿವಲ್ ಆಫ್ ಕಲರ್ಸ್, ಲ್ಯಾಂಕಶಾಯರ್ ಎನ್ಕೌಂಟರ್, ಪ್ರೆಸ್ಟನ್ ಗಿಲ್ಡ್ ಮತ್ತು ಹೌಸ್ ಆಫ್ ಕಾಮನ್ಸ್ ದೀಪಾವಳಿ ಉತ್ಸವ.

ಅಭಿನಂದನಾ ಅಕ್ಯಾಡೆಮಿಯ ಮೂಲಮಂತ್ರ ಸಂಪ್ರದಾಯಬದ್ಧ ಕುಚಿಪುಡಿ ನಾಟ್ಯವನ್ನು ಕಲಿಸುವ, ಈ ನೆಲದಲ್ಲಿ ಬೆಳೆಸುವ ಅವಿಚ್ಚಿನ್ನ ಆಶಯ. ವಿದ್ಯಾರ್ಥಿಗಳನ್ನು ಥಿಯರಿ ಮತ್ತು ಪ್ರಾಕ್ಟಿಕಲ್‍ಗಳೆರಡರಲ್ಲೂ ಪ್ರವೀಣರನ್ನಾಗಿಸುವ ಅವಿರತ ಪ್ರಯತ್ನ. ೧೫ ವರ್ಷಗಳಿಂದ ಕಲಿಯುತ್ತಿರುವ ಮೊದಲೆರಡು ತರಗತಿಗಳ ವಿದ್ಯಾರ್ಥಿನಿಯರು ಕಳೆದ ಹಲ ವರ್ಷಗಳಲ್ಲಿ ತಮ್ಮ ರಂಗಪ್ರವೇಶವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಪ್ರತಿಯೊಂದು ರಂಗಪ್ರವೇಶದಲ್ಲೂ ಇದ್ದಂತಹ ಕಾಮನ್ ಫ್ಯಾಕ್ಟರ್ ಅಂದರೆ ಲಂಡನ್ನಿನಿಂದ ಬರುವ ಕರ್ನಾಟಿಕ್ ಸಂಗೀತಗಾರರು – ಹಾಡುಗಾರ ಶ್ರೀ ವಂಶೀಕೃಷ್ಣ ವಿಷ್ಣುದಾಸ್, ವೇಣುವಾದಕ ಶ್ರೀ ವಿಜಯ ವೆಂಕಟ ಮತ್ತು ಮೃದಂಗ ವಾದಕ ಶ್ರೀ ಪ್ರತಾಪ ರಾಮಚಂದ್ರ. ಈ ಮೂವರ ಸಂಗತಿ ರಂಗಪ್ರವೇಶದ ಕಾರ್ಯಕ್ರಮಕ್ಕೆ ಖಳೆ ತರುವುದರಲ್ಲಿ ಸಂದೇಹವೇ ಇಲ್ಲ.

ಕೆಳಗೆ ಕೊಟ್ಟಿರುವ ಹಲವು ಲಿಂಕುಗಳಲ್ಲಿ ವಿದ್ಯಾರ್ಥಿನಿಯರ ಇತ್ತೀಚಿನ ಕಾರ್ಯಕ್ರಮದ ಪಟಚಿತ್ರಗಳೂ, ಯುಟ್ಯೂಬ್ ಲಿಂಕ್ ಇವೆ. ಮಿತ್ರ ರಾಮಶರಣ ಬರೆದಿದ್ದ ನನ್ನ ಮಗಳು ಅದಿತಿಯ ರಂಗಪ್ರವೇಶದ ವಿವರಣೆಯನ್ನೂ ನೋಡಬಹುದು.

ಶೀಮತಿ ಅಭಿನಂದನಾ ಕೋದಂಡ:
ಆಭಿನಂದನಾ ಅವರೊಬ್ಬ ಅತ್ತ್ಯುತ್ತಮ ಕಲಾವಿದೆ, ನೃತ್ಯಸಂಯೋಜಕಿ ಮತ್ತು ಕಲಾನಿರ್ದೇಶಕಿ. ಭಾರತದಲ್ಲಿ ಹೆಸರಾಂತ ಗುರುಗಳಾದ ಶ್ರೀ ಪಸುಮರ್ತಿ ವೆಂಕಟೇಶ್ವರ ಶರ್ಮ, ಶ್ರೀ ವೇದಾಂತಂ ರಾಘವ ಮತ್ತು ಪದ್ಮಭೂಷಣ ಡಾ. ವೆಂಪಟಿ ಚಿನ್ನ ಸತ್ಯಮ್ ಅವರೊಂದಿಗೆ ಕಲಿತಿದ್ದಾರೆ, ಕೆಲಸ ಮಾಡಿದ್ದಾರೆ. ಎಂಟು ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಅವರದು. ದೂರದರ್ಶನ, ಈ-ಟಿವಿ, ಸ್ಟಾರ್ ಪ್ಲಸ್, ಜೆಮಿನಿ ಟಿವಿ ಮುಂತಾದ ಹಲವಾರು ಚಾನಲ್‍ಗಳಲ್ಲಿ ಇವರ ನೃತ್ಯಗಳು ಪ್ರದರ್ಶಿತವಾಗಿವೆ. ಭಾರತ, ಯುನೈಟೆಡ್ ಕಿಂಗ್‍ಡಮ್ ಮತ್ತು ಅಮೆರಿಕಗಳಲ್ಲಿ ಪ್ರದರ್ಶನ ಮತ್ತು ಕಮ್ಮಟಗಳನ್ನ ನಡೆಸಿಕೊಟ್ಟಿದ್ದಾರೆ. ತಮ್ಮ ಪ್ರತಿಭೆ ಮತ್ತು ಕೊಡುಗೆಗೆ ಹಲವಾರು ಬಾರಿ ಪ್ರಶಸ್ತಿ ಮತ್ತು ಬಿರುದು ಗಳಿಸಿದ್ದಾರೆ (Indian National Award for dance, Outstanding Young Person, Ugaadi puraskaar, Yuva Tarang puraskaar, Woman of the Future award to name a few). ದಿ. ಶ್ರೀ ಪಿ ವಿ ನರಸಿಂಹ ರಾವ್, ದಿ. ಶ್ರೀ ಅಬ್ದುಲ್ ಕಲಾಮ್ ಆಜಾದ್ ಮುಂತಾದವರಿಂದ ಸನ್ಮಾನಿತರಾಗಿದ್ದಾರೆ.

ಎಮ್ ಬಿ ಎ ಪದವೀಧರೆಯಾಗಿರುವ ಅಭಿನಂದನಾ ಪ್ರೆಸ್ಟನ್ನಿನ ಗುಜರಾತ್ ಹಿಂದು ಸೊಸೈಟಿಯ ಮಂದಿರದಲ್ಲಿ ಮುಖ್ಯಸ್ಥೆಯಾಗಿ ದಿನದ ಕೆಲಸ ಮಾಡುತ್ತಾರೆ. ಇವರ ಯಶಸ್ಸಿನ ಹಿಂದೆ ಪತಿ ಡಾ. ಪ್ರಫುಲ್ ಅವರ ಸಂಪೂರ್ಣ ಸಹಕಾರ ಇರುವುದು ವಿದಿತ.

ಕೈಬೆರಳಿಂದ ಎಣಿಸಬಹುದಾದಷ್ಟು ವಿದ್ಯಾರ್ಥಿಗಳೊಂದಿಗೆ ಅಭಿನಂದನಾ ಅವರ ಮನೆಯಲ್ಲಿ ಶುರುವಾದ ಈ ಶಾಲೆಯ ಸಸಿ ಈಗ ನೂರಕ್ಕೂ ಹೆಚ್ಚು ಮಕ್ಕಳೊಂದಿಗೆ ಬೆಳೆದು ಹೆಮ್ಮರವಾಗಿದೆ. ಹೊಸ ಪೀಳಿಗೆಯ ಯುವ ನಾಟ್ಯಗಾತಿಯರ ಪ್ರದರ್ಶನ ನೋಡಿದಾಗ ಪಾಲಕರ, ವಿದ್ಯಾರ್ಥಿಗಳ ಮತ್ತು ಗುರುವಿನ ಶ್ರಮ ಖಂಡಿತ ಫಲ ಕೊಡುತ್ತಿವೆ ಅನ್ನಿಸುತ್ತದೆ. ಕಾರಣಾಂತರಗಳಿಂದ ನಮಗಿರದ ಅವಕಾಶಗಳು ಮಕ್ಕಳಿಗೆ ದೊರೆತು, ಅವರ ಕನಸು ನನಸಾಗುವುದನ್ನು ನೋಡುವ ನಮ್ಮ ಆಸೆ ಪೂರೈಸುತ್ತಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಹಾರೈಸುವಾ.

- ಲಕ್ಷ್ಮೀನಾರಾಯಣ ಗುಡೂರ.

*********************************

ಗುರು ಶ್ರೀಮತಿ ಅಭಿನಂದನಾ ಕೋದಂಡ

********************************

ಶುಭ ಶುಕ್ರವಾರ (Good Friday) ಪ್ರಯುಕ್ತ ಪ್ರಸಾದ್ ನಂಜನಗೂಡು ಅವರು ರಚಿಸಿರುವ ಕವನ.

ಶುಭ ಶುಕ್ರವಾರ

ಮೇರಿ-ಜೋಸೆಫರ ಮುದ್ದು ಕುವರ
ಯೇಸು ಕ್ರಿಸ್ತ ನೀ ಅಜರಾಮರ

ಭುವಿಗೆ ಇಳಿದೆ ನೀ ಬೆತ್ಲೆಹೇಮಿನಲಿ
ನಡು ರಾತ್ರಿಯ ನೀರವದಿ
ಸತ್ಯವನರಸುತ ದೇಶವ ಸುತ್ತಿದೆ
ಸುವಾರ್ತೆ ನುಡಿದೆ ಸರಳದಲಿ

ತನ್ನಂತೆಯೇ ನೆರೆಯವರನ್ನು
ಪ್ರೀತಿಯಿಂದಲೇ ಕಾಣೆಂದೆ
ಒಂದು ಕೆನ್ನೆಗೆ ಹೊಡೆದವರಿಗೆ ನೀ
ಇನ್ನೊಂದು ಕೆನ್ನೆಯ ತೋರೆಂದೆ

ಶಿಲುಬೆಗೆ ಏರಿಸಿದವರಾ ಪಾಪವ
ಮನ್ನಿಸಿಬಿಡೆಂದ ಶಾಂತಿದೂತ
ಹಿಂಸಿಸಿದವರ ರೋಮ್ ನಗರವ
ಪುನೀತಗೊಳಿಸಿದ ಪವಾಡ ಪುರುಷ

ಕರ್ತನ ವಚನವ ಪಾಲನೆ ಮಾಡಲು
ಭಯ ಆಮಿಷಗಳು ಬೇಕಿಲ್ಲ
ಕ್ರಿಸ್ತನ ಪ್ರೀತಿ ಸಂದೇಶವ ಸಾರಲು
ವಿದ್ಯಾ-ವೈದ್ಯ ಸೇವೆಗಿಂತಿಲ್ಲಾ !

- ಪ್ರಸಾದ್ ನಂಜನಗೂಡು

*******************************

ಸೇವೆಯ ಕನಸು-ಸಾರ್ಥಕ ಬದುಕು 

ಇದು ಇಂದಿರೆಯ ಕಥನ… 

ಹುಡುಗ, ಹುಡುಗಿ ಒಬ್ಬರನ್ನೊಬ್ಬರು ನೋಡಿ ಮೆಚ್ಚಿದ್ದಾಯ್ತು , ಹಿರಿಯರು ಮದುವೆಯ ಮಾತುಕತೆ ಶಾಸ್ತ್ರವನ್ನೂ ಪೂರೈಸಿದ್ದೂ ಆಯಿತು, ಇನ್ನೇನು ಬದುಕಿನ ಹೊಸ ಆರಂಭದ ಮುನ್ನುಡಿ ಬರೆಯುವ ದಿನ ಮದುವೆಯ ದಿನ ಬಂದೇ ಬಿಟ್ಟಿತು. ಈ ಒಂದು ದಿನಕ್ಕೆ ಬೇಕಾಗುವ ಪೂರ್ವತಯಾರಿ ಮಾಡಿದವರಿಗೇ ಗೊತ್ತು, ಛತ್ರ ದಿಂದ ಹಿಡಿದು ಅಡುಗೆಯವರ ತನಕ, ವಾಲಗದವರಿಂದ ಹಿಡಿದು ಪುರೋಹಿತರತನಕ ಎಲ್ಲವನ್ನ ನಿಭಾಯಿಸುವಾಗ ಮನಸಲ್ಲಿರುವುದು ಅದೊಂದೇ ಭಾವ ‘’ಮದುವೆ ಒಂದು ಚನ್ನಾಗಿ ಆಗಿ ಬಿಟ್ಟರೆ ಅಷ್ಟೇ ಸಾಕು’’ಅಪ್ಪ ಅಮ್ಮ ಮದುವೆಯ ಇತರ ಗಡಿಬಿಡಿಯಲ್ಲಿ ಮಗ್ನರಾಗಿರುವಾಗ ಮದುಮಗಳ ಕಸಿವಿಸಿ ಕೇಳಬೇಕೆ ? ಮದುವೆಯ ಕೇಂದ್ರ ಬಿಂದುವೇ ಆಕೆ. ಆಕೆ ಚನ್ನಾಗಿ ಕಾಣಬೇಕು , ಇನ್ನು ಶುರು, ಬ್ಯೂಟಿಶಿಯನ್ ಹುಡುಕಾಟ, ಅತ್ತೆ ಮಗಳ ಮದುವೆಗೆ ಬಂದವಳನ್ನ ಕರೆಯೋದೇ? ದೊಡ್ಡಮ್ಮನ ಮಗಳ ಮದುವೆಗೆ ಬಂದಿದ್ದಳಲ್ಲ ಅವಳನ್ನ ಕರೆಯೋದೇ? ಹಾಗೊಮ್ಮೆ ಯಾರನ್ನ ಕರೆಯೋದು ಅನ್ನೋದು ನಿರ್ಧಾರವಾದರೂ ಬಜೆಟ್ ಭೂತ ದಿಗ್ಗನೆ ಎದುರಿಗೆಬಂದು ನಿಲ್ಲುತ್ತದೆ.ಇತ್ತೀಚಿನ ದಿನಗಳಲ್ಲಿ ಮದುಮಗಳ ಸಿಂಗಾರಕ್ಕೆ ಹತ್ತು ಸಾವಿರದಿಂದ  ಒಂದು ಲಕ್ಷದವರೆಗೂ ಚಾರ್ಜ್ ಮಾಡುವ ಬ್ಯೂಟಿಶಿಯನ್ ಇದ್ದಾರೆ. ತರಹೇವಾರಿ ಪ್ಯಾಕೇಜ್ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. 

ಆದರೆ ಕೆಲವೊಂದು ಸಮುದಾಯದ ವಿಶಿಷ್ಟ ಮದುವೆ ಧಿರಿಸು ಮತ್ತು ವಧುವನ್ನು ಸಿಂಗರಿಸುವ ರೀತಿ ಎಲ್ಲ ಬ್ಯೂಟಿಶಿಯನ್ ಗಳಿಗೆ ತಿಳಿದಿರುವುದಿಲ್ಲ, ಅಂಥವರನ್ನೇ ಹುಡುಕಿ ಅವರು ಹೇಳಿದಷ್ಟು ಮೊತ್ತವನ್ನು ಕೊಟ್ಟು ಕರೆಯುವುದು ಒಂದು ಬಗೆಯ ಅನಿವಾರ್ಯತೆಯೂ ಹೌದು. ಮೊದಲೆಲ್ಲ ಈ ಮದುಮಗಳನ್ನು ಸಿಂಗರಿಸುವ ಕೆಲಸ ಅವಳದೇ ಸಂಬಂಧಿಗಳಲ್ಲಿ ಯಾರೋ ಒಬ್ಬರು ಮಾಡಿ ಬಿಡುತ್ತಿದ್ದರು, ಆದರೆ ಈಗ ದಿನಮಾನ ಹಾಗಿಲ್ಲ ಹಣ ಕೊಟ್ಟರೂ ನಿರೀಕ್ಷಿಸಿದ ಸೇವೆ  ಲಭ್ಯವಾಗುವುದು ಅಪರೂಪ.ಇಂಥಹ ವ್ಯಾವಹಾರಿಕ ಪ್ರಪಂಚದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೇ ಕಳೆದ ೨೫ ವರುಷಗಳ ಕಾಲ ಮದುವೆ ಹೆಣ್ಣನ್ನು ಸಿಂಗರಿಸಿ ಆಕೆಯ ಆ ವಿಶೇಷ ದಿನಕ್ಕೆ ಮೆರಗನ್ನು ತರುವ ಕಾರ್ಯವನ್ನು ತಮ್ಮ ಜವಾಬ್ದಾರಿಎಂಬಂತೆ ಮಾಡಿ ಎಲೆಮರೆಯಲ್ಲೇ ಮಾಗಿದ ಹಿರಿಯ ಜೀವದ ಪರಿಚಯ ಇಲ್ಲಿದೆ.

ಇವರ ಪರಿಚಯ ನಿಮ್ಮೆಲ್ಲರಿಗೂ ಮಾಡಿಕೊಡುವ ಸದಾವಕಾಶ ನನಗೆ ದೊರೆತದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಇವರು ನನ್ನ ಪತಿಯ ದೊಡ್ಡಮ್ಮ ನನ್ನ ದೊಡ್ಡ ಅತ್ತೆ. ನನಗಂತೂ ಇವರೊಂದಿಗೆ ಮಾತಾಡುತ್ತಾ ಕುಳಿತರೆ ನಿಜಕ್ಕೂ ಟೈಂ ಮಶೀನ್ನಲ್ಲಿ ಕುಳಿತು ಅವರು ಹೇಳುವ ಗತಕಾಲದ ಕಥೆಯನ್ನು ನಾನೂ ನೋಡುತ್ತಿದ್ದೇನೋ ಅನ್ನಿಸುವಷ್ಟು ನೈಜವಾಗಿ ಅವರು ಕಥೆ, ಅನುಭವ ರೂಪಿಸುತ್ತಾರೆ.  ನನ್ನ ದೊಡ್ಡತ್ತೆ ಶ್ರೀಮತಿ ಇಂದಿರಾ ನರಸಿಂಹ ಶಾನಭಾಗ್ ಉಡುಪಿ ಜಿಲ್ಹೆಯ ಸಾಲಿಗ್ರಾಮದವರು. ಪ್ರಸ್ತುತ ಕೋಟ ಗ್ರಾಮ ನಿವಾಸಿ.ತಮ್ಮ ಹದಿನಾಲ್ಕನೇ ವಯಸ್ಸಿಗೆ ಹಸೆಮಣೆ ಏರಿದ ಇಂದಿರಾ ಅವರ ಅನುಭವಗಳನ್ನು ಅವರ ಮಾತಲ್ಲೇ ಕೇಳಿ.

‘’ಅದು ೧೯೫೫ ರ ಸಮಯ, ಆಗಿನ ಮದುವೆಗಳು ಈಗಿನಂತಲ್ಲ, ಅದರ ಚಂದವೇ ಬೇರೆ. ಮದುವೆಯೆಂದರೆ ಸುಮ್ಮನೆಯೇ ? ಅದರ ಸುತ್ತ ಇರುವ ತಯಾರಿ ಸಂಭ್ರಮ, ಊಟತಿಂಡಿಯ ತಯಾರಿಗಳು, ಶಾಸ್ತ್ರ ಸಂಪ್ರದಾಯಗಳನ್ನು ಒಳಗೊಂಡು ನಾಲ್ಕೈದು ದಿನದ ಮದುವೆಗಳು, ಬಂದವರಿಗೆ ಬೆಲ್ಲದ ನೀರು ಬಾಳೆಹಣ್ಣು, ವೀಳ್ಯ ಕೊಟ್ಟು ಉಪಚರಿಸಿದರೆ ಅದು ದೊಡ್ಡ ಮರ್ಯಾದೆ ಕೊಟ್ಟಂತೆ. ಬಂದವರು ಕುಳಿತುಕೊಳ್ಳಲು ಈಗಿನಂತೆ ತರಹೇವಾರಿ ಖುರ್ಚಿಗಳಿರಲಿಲ್ಲ ಒಣಹುಲ್ಲು ಹಾಸಿನಮೇಲೆ ಗೋಣಿಚೀಲ ಅದರ ಮೇಲೊಂದು ಪಂಚೆ ಹಾಸಿದರೆ ಅದೇ ಸುಖಾಸನ. ಅದೆಷ್ಟೇ ಅನುಕೂಲಸ್ಥರಾಗಿದ್ದರೂ ಮದುವೆಗೆ ಗಂಜಿ ಊಟ ಹಾಕಿಸಲೇಬೇಕು. ವಧುವರರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆಯಲ್ಲಿ ಕರೆ ತಂದರೆ ಅದು ವಿಜೃಂಭಣೆಯ ಮದುವೆ.

ಇದೆಲ್ಲದರ ನಡುವೆ ವಧುವನ್ನು ಸಿಂಗರಿಸುವ ಗಮನ ಯಾರಿಗಿರುತ್ತಿತ್ತು?  ಚಿಕ್ಕ ಪ್ರಾಯದ ಹುಡುಗಿಯರಿಗೆ ಸೀರೆ ಸುತ್ತಿ ನಿಲ್ಲಿಸುವುದೇ ದೊಡ್ಡ ಕೆಲಸವಾಗಿತ್ತೇನೋ! ನನ್ನ ಮದುವೆಯಾದಾಗ ನನಗೆ ಹದಿನಾಲ್ಕು ವರ್ಷ.  ಎಲ್ಲರಿಗೂ  ಗಡಿಬಿಡಿ, ಅವರಲ್ಲೇ ಒಬ್ಬರು ಅದ್ಹೇಗೋ ನನಗೆ ಸೀರೆ ಸುತ್ತಿ, ಮಂಟಪದಲ್ಲಿ ನಿಲ್ಲಿಸಿದ್ದರು. ಆಗ, ಆ ನಂತರ ಅದೆಷ್ಟೋ ಸಲ ಅನ್ನಿಸುತ್ತಿತ್ತು ಮದುವೆ ಎಂಬುದು ಬದುಕಿನ ಅತಿ ಸುಂದರ ಗಳಿಗೆ ಹುಡುಗಿಯೊಬ್ಬಳು  ಮದುಮಗಳರೂಪದಲ್ಲಿ ರೂಪಂತರವಾಗುವ ಆ ಗಳಿಗೆ, ಯಾವುದೇ ತಯಾರಿ ಇಲ್ಲದೆ ಅದ್ಹೇಗೆ  ಮುಗಿಸಿಬಿಡುವುದು? ಅದೇ ಗಳಿಗೆಯಲ್ಲಿ, ಈ ಸುಸಂದರ್ಭವನ್ನು, ಅವಳನ್ನು ಇನ್ನೂ ಚಂದ ಮಾಡಿ ಆ ದಿನವನ್ನು ಇನ್ನೂ ವಿಶೇಷ ಮಾಡಬೇಕು, ನೆನಪಲ್ಲಿರುವಂತೆ ಮಾಡಬೇಕು ಎಂಬ ಕನಸಿನ ಬೀಜ ನನ್ನ ಮನದಲಿ ಮೊಳೆಯಿತು.

ಹದಿನಾಲ್ಕಕ್ಕೆ ಮದುವೆ ಹದಿನೈದು ಮುಗಿಯುವ ಮುನ್ನ ಮಗು ಹುಟ್ಟಿದ ಸಂಭ್ರಮ. ಕೂಡು ಕುಟುಂಬದ ಬಿಡುವಿರದ ದಿನಚರಿಯ ನಡುವೆ ನನ್ನ ಕನಸುಗಳು ಆಗಾಗ ನನ್ನ ಕೈ ಎಳೆದು ಕರೆಯುತ್ತಲೇ ಇದ್ದವು. ಆದರೆ ಯಾರಲ್ಲೂ ಹೇಳುವ ಧೈರ್ಯ ಬರಲಿಲ್ಲ. ಮಕ್ಕಳು ಬೆಳೆದು ದೊಡ್ಡವರಾದ ಮೇಲೆ, ಅದೆಷ್ಟೋ ವರುಷಗಳ ನಂತರ ಪತಿಯೊಂದಿಗೆ ನನ್ನ ಈ ಕನಸನ್ನು ಸಂಕೋಚದಿಂದಲೇ ಹಂಚಿಕೊಂಡಾಗ ಅವರು ಸಂತಸದಿಂದ ಒಪ್ಪಿಕೊಂಡು ಪ್ರೋತ್ಸಾಹಿಸಿದರು ಆದರೆ ಈ ಕೆಲಸವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಬೇಕು ಅನ್ನುವುದು ಅವರ ಆಶಯವಾಗಿತ್ತು. ಇಷ್ಟರಲ್ಲಿ  ಮಕ್ಕಳ ಮದುವೆಯೂ ಆಗಿತ್ತು, ಮಕ್ಕಳು ಸೊಸೆಯಂದಿರು ಕೂಡ ನನ್ನ ಈ ಬಹುದಿನದ ಆಸೆಗೆ ಒತ್ತಾಸೆ ಕೊಟ್ಟು ಸಹಕರಿಸಿದರು.  

ಹಾಗೆ ಶುರುವಾಯಿತು ನನ್ನ ಈ ನನಸಿನ ಪಯಣ,ತಮ್ಮ ಮದರಾಸಿನಿಂದ ಆಭರಣದ ಸೆಟ್ಗಳನ್ನ ಒಳ್ಳೆಯ ಚವರಿಗಳನ್ನು ತಂದು ಉಡುಗೊರೆಯಾಗಿತ್ತು ನನ್ನ ಕೆಲಸಕ್ಕೆ ಮತ್ತಷ್ಟು ಸಕಾರಾತ್ಮಕ ಬೆಂಬಲ ನೀಡಿದ. ಸಾರಸ್ವತ ಸಮಾಜದ ಮದುವೆಗಳಲ್ಲಿ  ವಧುವಿಗೆ ಕಚ್ಚೆ ಸೀರೆ ಉಡಿಸುವ ಪದ್ಧತಿ ಇದೆ ಜೊತೆಗೆ ಧಾರೆಯ ಸಮಯದಲ್ಲಿ ಸೆರಗಿನ ಬದಲು ಬಿಳಿಯ ಪಟ್ಟಿಯನ್ನು ಬಳಸುತ್ತಾರೆ ಈ ಶೈಲಿಯ ಸೀರೆ ಉಡಿಸುವುದು ಎಲ್ಲರಿಗೂ ಬರುತ್ತಿರಲಿಲ್ಲ . ನನ್ನ ತಣಿಯದ ಕುತೂಹಲ ಆಸಕ್ತಿ ಯಿಂದ ನಾನು ಈ ವಿಧಾನವನ್ನು ಕರಗತ ಮಾಡಿಕೊಂಡಿದ್ದೆ.  ಮಂಗಳೂರು ಮಲ್ಲಿಗೆಯ ಜಡೆ ಹಾಕುವುದು ನನಗೆ ಸಿದ್ದಿಸಿತ್ತು. ಅದರೊಂದಿಗೆ ಸಿಂಗಾರ ಮಾಡಲು, ಬೇಕಾಗುವ ಎಲ್ಲ ಪೂರಕ ತಯಾರಿ, ಕೌಶಲ್ಯವು ಇತ್ತು , ಅದಕ್ಕೆ ನನ್ನಲ್ಲಿ ಆತ್ಮ ವಿಶ್ವಾಸಕ್ಕೆ ಕೊರತೆ ಇರಲಿಲ್ಲ.

ಒಳ್ಳೆಯ ಉದ್ದೇಶದಿಂದ ಶುರುಮಾಡಿದ ಕೆಲಸಕ್ಕೆ ದೈವ ಬಲ ಸಿಗದೇ ಇರುತ್ತದೆಯ.? ದಿನ ಕಳೆದಂತೆ ಸಿಂಗರಿಸುವ ಕೈಂಕರ್ಯಕ್ಕೆ ಕರೆಯುವವರ ಸಂಖ್ಯೆ ಹೆಚ್ಚಿತು. ನನ್ನ  ಮನೆಯ ಹೆಣ್ಣು ಮಕ್ಕಳ ಮದುವೆಗಳಿಂದ ಶುರುವಾದ ಈ ಪಯಣ ಕೆಲವೊಮ್ಮೆ ಒಂದೇ ದಿನ ಎರಡೆರಡು ಮದುವೆಗೆ ನಿಮಂತ್ರಣ ಬರುವ ಮಟ್ಟಿಗೆ ನಡೆದು ಬಂತು. ಹಾಗಾದಾಗ ಇಲ್ಲ ಅನ್ನಲು ಮನಸು ಬಾರದೇ ಮಗಳು, ಸೊಸೆ ಇಬ್ಬರಿಗೂ ತರಬೇತಿ ಕೊಟ್ಟು ಅವರನ್ನು ಕಳಿಸುತ್ತಿದ್ದೆ.

ವರುಷ ಪೂರ್ತಿ ಮನೆಯಲ್ಲಿ ಒಂದಿಲ್ಲೊಂದು ಚವಲ, ಉಪನಯನ, ಮದುವೆ ಇದ್ದೇ ಇರುತ್ತಿತ್ತು ಆಗಂತೂ ನನಗೆ ಇನ್ನೂ ಖುಷಿ. ಕೆಲವೊಮ್ಮೆ ದೂರದೂರಿನಲ್ಲಿ ಮದುವೆಗಳು ಇರುತ್ತಿದ್ದವು. ಮೈಸೂರ, ಗೋವ, ಮುಂಬೈ ಬೆಂಗಳೂರು ಎಲ್ಲ ಕಡೆ ಮನೆಯ ಜವಾಬ್ದಾರಿಯ ನಡುವೆಯೂ ಆ ಮದುವೆಗೆ ಹೋಗಿ ನನ್ನ ಪಾಲಿಗೆ ಬಂದ ಸೇವಾಭಾಗ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೆ . 

ಆಸಕ್ತಿ ಇರುವ ಹಲವರಿಗೆ ನಾನು ತರಬೇತಿ ಕೊಟ್ಟಿದ್ದೇನೆ. ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಹೊಸ ವಿಧಾನಗಳನ್ನು ಕಲಿಯಲು ನಾನು ಸದಾ ಉತ್ಸಾಹ ತೋರುತ್ತಿದ್ದೆ, ಕಲಿಕೆಗೆ ವಯಸ್ಸಿನ ಮಿತಿ ಇಲ್ಲವಲ್ಲ!! ಈ ಇಪ್ಪತೈದು ವರುಷಗಳ (೧೯೮೩-೨೦೦೯)ಅನುಭವದಲ್ಲಿ  ನನ್ನ ಸಂಗ್ರಹದಿಂದ ಕಳೆದುಹೋದ ವಸ್ತುಗಳ ಪಟ್ಟಿ ದೊಡ್ಡದಿದೇ ಆದರೆ ಪಡೆದ ಆತ್ಮ ಸಂತೃಪ್ತಿಯಮುಂದೆ ಅದು ತೃಣ ಸಮಾನ.ನಮ್ಮಲ್ಲಿ ಹಿರಿಯರು ಯಾವಾಗಲು ಹೇಳುತ್ತಿದ್ದರು ‘’ವಧುವರರು ಸಾಕ್ಷಾತ್ ಲಕ್ಷ್ಮಿ ನಾರಾಯಣನ ರೂಪ’’ ಎಂದು ಅದನ್ನೇ ನಾನು ಕೂಡ  ನಂಬುತ್ತೇನೆ ಶ್ರದ್ಧೆ ನಿಷ್ಠೆಯಿಂದ ನನ್ನ ಈ ಸೇವೆಯನ್ನು ಭಗವಂತನ ಕೆಲಸವೆಂದೇ ಮಾಡಿದ್ದೇನೆ ಅದಕ್ಕಿಂತ ಹೆಚ್ಚು ಏನು ಬೇಕು? ಹೀಗೆಂದು ಕೇಳುವ ಇಂದಿರಾ ಅವರಿಗೆ ೮೨ರ ಹರೆಯ. ಈಗಲೂ ಅವರು ಉತ್ಸಾಹದ ಬುಗ್ಗೆ , ಕಾದಂಬರಿಗಳನ್ನು ಓದುವುದು ಅವರಿಗೆ ಅಚ್ಚು ಮೆಚ್ಚು. ತಾವು ಓದಿದ್ದನ್ನ ಕಣ್ಣಿಗೆ ಕಟ್ಟುವಂತೆ ಇತರರಿಗೆ ಹೇಳುವ ಅಪ್ರತಿಮ ಅಭಿವ್ಯಕ್ತಿ  ಅವರಲ್ಲಿದೆ. ಕಲಾತ್ಮಕವಾಗಿ ಹೂಮಾಲೆ ಕಟ್ಟುವುದು, ಸಾಂಪ್ರದಾಯಿಕ ಅಡುಗೆ ಮಾಡುವುದು ಇವರ ಹವ್ಯಾಸ. ಅದಲ್ಲದೆ ಹಲವು ಮರೆತೇ ಹೋದವು ಅನ್ನುವ ಕೊಂಕಣಿ ಜನಪದ ಕಥನ ಗೀತೆಗಳು ಇವರ ಸ್ಮೃತಿಯಲ್ಲಿವೆ.  ತಾವು ಮಾಡುವ ಪ್ರತಿಯೊಂದು ಕೆಲಸವನ್ನು ಅನುಭವಿಸಿ ಪ್ರೀತಿಯಿಂದ ಮಾಡುವುದು ಇವರ ಹೆಗ್ಗಳಿಕೆ.

ಇಂಥಹ ಅಪರೂಪದ ಜೀವನ್ಮುಖಿ ನನ್ನ ದೊಡ್ಡತ್ತೆ  ಅನ್ನುವುದೇ ನನ್ನ ಪಾಲಿನ ಹೆಮ್ಮೆ ಖುಷಿ. 

ಲೇಖನ ಮತ್ತು ಚಿತ್ರಗಳು ; ಅಮಿತಾ ರವಿಕಿರಣ್