ತಸ್ಮೈಶ್ರೀಗುರವೇನಮಃ

ಫೋಟೋ ಕೃಪೆ ಗೂಗಲ್ L>R ರಾಧಾ ಕೃಷ್ಣನ್, ಬಿಎಂಶ್ರೀ, ಕುವೆಂಪು, ಹೆಚ್ ಏನ್
ಕಳೆದ ಕೆಲವು ದಿನಗಳ ಹಿಂದೆ ನಾವೆಲ್ಲಾ ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ನಮ್ಮ ಬದುಕಿನಲ್ಲಿ ನಮಗೆ ಸ್ಫೂರ್ತಿ ನೀಡಿ, ಜ್ಞಾನ ದೀವಿಗೆಯನ್ನು ಕೈಗಿತ್ತ ಗುರುಗಳನ್ನು ಸ್ಮರಿಸಿಕೊಂಡಿದ್ದೇವೆ.  ಇಂದು ಗೌರಿ ಪ್ರಸನ್ನ ಮತ್ತು ಡಾ. ದೇಸಾಯಿಯವರು ತಮ್ಮ ಗುರುವಿನ ಬಗ್ಗೆ ಆತ್ಮೀಯವಾದ ಬರಹಗಳನ್ನು ಇಲ್ಲಿ ಸಮರ್ಪಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯರ ಪರಂಪರೆಗೆ, ಸಂಬಂಧಗಳಿಗೆ ಉಚ್ಚ ಸ್ಥಾನಮಾನಗಳಿವೆ. 'ಗುರು ಸಾಕ್ಷಾತ್ ಪರಬ್ರಹ್ಮ' ಎಂದು ಪರಿಗಣಿಸುತ್ತೇವೆ. ಇದು ಒಂದು ಪವಿತ್ರವಾದ ನಂಟು. ಗುರುವಿಗೆ ಒಂದು ಜವಾಬ್ದಾರಿಯಿದೆ, ಜ್ಞಾನಾರ್ಜನೆಯ ಕರ್ತವ್ಯ ಮತ್ತು ಕೈಂಕರ್ಯವಿದೆ. ನಿಜವಾದ ಗುರುವಿಗೆ ತನ್ನ ಶಿಷ್ಯರ ಬಗ್ಗೆ ಪಕ್ಷಪಾತವಿರಬಾರದು, ಅಲ್ಲಿ ಜಾತಿ ಮತಗಳ ಭಾವನೆಗಳು ನುಸುಳಿ ಬರಬಾರದು. ಬಹಳ ಹಿಂದೆ ಗುರುಕುಲಗಳಲ್ಲಿ ಕೆಳಜಾತಿ ವರ್ಗದವರಿಗೆ, ಹೆಂಗಸರಿಗೆ  ವಿದ್ಯೆಯನ್ನು ಪಡೆಯುವ ಅರ್ಹತೆ ಇಲ್ಲವೆಂದು ಅವರನ್ನು ದೂರ ಇಡಲಾಗಿತ್ತು. ಏಕಲವ್ಯನಂಥವರು ತಮ್ಮ ಕಲಿಕೆಯನ್ನು ತ್ಯಜಿಸಬೇಕಾಯಿತು. ಅದು ಗುರುಭಕ್ತಿಯ ಪರಾಕಾಷ್ಠೆ  ಹಾಗೂ ಉತ್ತಮ ನಿದರ್ಶನವೂ ಹೌದು. ಸ್ವಾತಂತ್ರ್ಯ ಭಾರತದಲ್ಲಿ ಶಿಕ್ಷಣ ಎಲ್ಲರ ಹಕ್ಕು. ಹಿಂದೆ ಮತ್ತು ಇಂದಿಗೂ ಕೆಲವೆಡೆ ಶಿಕ್ಷಕರು ಶಿಷ್ಯನಿಗೆ ಬಹಳ ಅಸಡ್ಡೆಯಿಂದ, ಕೆಲವೊಮ್ಮೆ ಎಲ್ಲರ ಮುಂದೆ ತೇಜೋವಧೆ ಮಾಡಿ ಹೀನೈಸಿ ವಿದ್ಯೆ ಕಲಿಸುವ ವಿಧಾನ ಸರಿಯೆಂದು ಭಾವಿಸಿದ್ದಾರೆ. (Learning by humiliation) ಇಂತಹ ಗುರುಗಳು ಮತ್ತು ಇಂತಹ ಶಿಕ್ಷಣ ವ್ಯವಸ್ಥೆ ಕಲಿಕೆಗೆ ತದ್ವಿರುದ್ಧ ಪರಿಣಾಮಗಳನ್ನು ತರಬಹುದು.  ನಿಜವಾದ ಗುರು ಶಿಷ್ಯನ ಸರ್ವತೋಮುಖ ಬೆಳವಣಿಗೆಗೆ 
(Holistic Development) ಪೂರಕವಾಗುವ ಶಿಕ್ಷಣವನ್ನು ಆಸ್ಥೆಯಿಂದ, ಪ್ರೀತಿಯಿಂದ ನೀಡಬೇಕಾಗಿದೆ. ಶಿಷ್ಯನನ್ನು ಗೌರವದಿಂದ ಕಂಡು, ಅವನು ತನ್ನ ಪೈಪೋಟಿ ಎಂದೆನಿಸದೆ  ಶಿಷ್ಯನು ತನ್ನಷ್ಟೇ ಅಥವಾ  ತನಗಿಂತ  ಉನ್ನತ ಸ್ಥಾನವನ್ನು ಏರಬೇಕೆಂದು ನೀರೀಕ್ಷೆಯಿಟ್ಟುಕೊಂಡಲ್ಲಿ ಅದು ಶಿಕ್ಷಣದ ಉದ್ದೇಶವನ್ನು ಪೂರೈಸುತ್ತದೆ. ಶಿಷ್ಯರಿಂದ ಶಿಷ್ಯರಿಗೆ ಜ್ಞಾನದ ಬೆಳಕು ಇನ್ನು ಪ್ರಖರವಾಗಿ ಬೆಳಗಬೇಕೆ ಹೊರತು ಅದು ಕುಂದಬಾರದು. ಈ ಜ್ಞಾನದಿಂದ ಒಬ್ಬ ವ್ಯಕ್ತಿಯ ವಿಕಾಸದ ಜೊತೆಗೆ ಒಂದು ಸಮಾಜದ ವಿಕಾಸವೂ  ಆಗಬೇಕು, ಅಲ್ಪ ಮಾನವ ವಿಶ್ವಮಾನವನಾಗಬೇಕು, ಅದೇ ಶಿಕ್ಷಣದ ಗುರಿ. ಕೆಲವು ವಿಶೇಷ ಗುರು-ಶಿಷ್ಯ ಸಂಬಂಧಗಳು, ಶಿಷ್ಯ ಗುರುವಿಗೆ ಸಲ್ಲಿಸಿರುವ ಕಾಣಿಕೆಗಳು ಕಾವ್ಯ ರೂಪದಲ್ಲೂ ಅಭಿವ್ಯಕ್ತಗೊಂಡಿವೆ. ಗೌರಿ  ಅವರು ಕೆಳಗೆ ತಮ್ಮ ಬರಹದ ಕೊನೆಯಲ್ಲಿ ಪ್ರಸ್ತಾಪಿಸಿರುವಂತೆ, ಜಿ ಎಸ್ ಎಸ್  ತಮ್ಮ ಗುರುಗಳಾದ ಕುವೆಂಪು ಅವರನ್ನು ಗೌರವದಿಂದ, ನಿಶ್ಶಬ್ದದಲ್ಲಿ ನಿಂತು ನೆನೆಯುತ್ತಾರೆ. ಗುರುಗಳು ಕೊಟ್ಟ ಹೊಸ ಹುಟ್ಟುಗಳನ್ನು ಹಿಡಿದು, ದೋಣಿಯೇರಿ ಜ್ಞಾನವೆಂಬ ಸಾಗರವನ್ನು ಪ್ರವೇಶಿಸುತ್ತಾರೆ. ಅವರ ಗುರುಗಳಾದ ಕುವೆಂಪುರವರು ತಮ್ಮ ಮೇರುಕೃತಿ ಶ್ರೀ ರಾಮಾಯಣ ದರ್ಶನಂ ಮುಗಿಸಿ ಅದನ್ನು ತಮ್ಮ ಗುರುಗಳಾದ ಶ್ರೀ ವೆಂಕಣ್ಣಯ್ಯನವರಿಗೆ ಅರ್ಪಿಸಿ; 

"ಇದೋ ಮುಗಿಸಿ ತಂದಿಹೆನ್  ಈ ಬೃಹದ್ ಗಾನಮಂ, 
ನಿಮ್ಮ ಸಿರಿಯಡಿಗೆ ಒಪ್ಪಿಸಲ್ಕೆ, ಓ ಪ್ರಿಯ ಗುರುವೇ, ಕರುಣಿಸಿಂ 
ನಿಮ್ಮ ಹರಕೆಯ ಬಲದ ಶಿಷ್ಯನಂ"  

ಎಂದು ವಿನಂತಿಸುತ್ತಾರೆ. ಹೀಗೆ ಗುರು ಶಿಷ್ಯರ ಪ್ರೀತಿ ವಿಶ್ವಾಸಗಳ ಪರಂಪರೆಯನ್ನು ಮತ್ತು ಅದರ ಸಮೃದ್ಧಿಯನ್ನು ಕನ್ನಡ ಸಾಹಿತ್ಯದಲ್ಲಿ ಕಾಣಬಹುದು. ಆದರ್ಶ ಗುರುಗಳು  ನಮಗೆ ಸ್ಫೂರ್ತಿಯನ್ನು ನೀಡಿ ಬದುಕಿನ ದಿಕ್ಕನ್ನೇ ಬದಲಾಯಿಸುತ್ತಾರೆ. ಸಮರ್ಥಗುರುಗಳು ನಮ್ಮ ಸ್ಮೃತಿಯಲ್ಲಿ ಅಮರರಾಗಿರುತ್ತಾರೆ. ಇಂತಹ ಮಹಾನುಭಾವಿ ಮಹನೀಯರನ್ನು ಮಹಿಳೆಯರನ್ನು ಶಿಕ್ಷಕರ ದಿನದಂದು ಸ್ಮರಿಸುವುದು, ನಮನಗಳನ್ನು ಅರ್ಪಿಸುವುದು ನಮ್ಮ ಕರ್ತವ್ಯ. 

***

ನಮ್ಮೆಲ್ಲರ ನೆಚ್ಚಿನ ರಾಣಿ ಎಲಿಝಬೆತ್ ಇಂದು ತೀರಿಕೊಂಡಿದ್ದಾಳೆ. ಅವಳ ಕರ್ತವ್ಯ ನಿಷ್ಠೆ ನಮಗೆಲ್ಲ ಆದರ್ಶಪ್ರಾಯವಾಗಿದೆ. ತನಗೆ ದೊರಕಿದ ಆಯುಷ್ಯದುದ್ದಕ್ಕೂ ಜನರ ಸೇವೆಯನ್ನು ಮಾಡುವುದಾಗಿ ಪಣತೊಟ್ಟಿದ್ದು ಅದನ್ನು ಇಂದು ಪೂರೈಸಿದ್ದಾಳೆ. ಕಳೆದ ಕೆಲವು ತಿಂಗಳ ಹಿಂದೆ ರಾಣಿಯ ೭೦ ವರ್ಷ ಆಳ್ವಿಕೆಯ ಸಂದರ್ಭದಲ್ಲಿ ಅನಿವಾಸಿ ಬಳಗ ವಿಶೇಷ ಸಂಚಿಕೆ ತಂದಿದ್ದನು ಇಲ್ಲಿ ಸ್ಮರಿಸಬಹುದು. ರಾಣಿಯ ಆತ್ಮಕ್ಕೆ ಶಾಂತಿಯನ್ನು ಕೊರೋಣ. 

 - ಸಂಪಾದಕ 

*************
ಫೋಟೋ ಕೃಪೆ ಗೂಗಲ್ L>R ಅನಿ ಬೆಸೆಂಟ್, ರೋಮಿಲಾ ಥಾಪರ್ ಮತ್ತು ಚೀ.ನಾ. ಮಂಗಳ
ಶಿಕ್ಷಕರ ದಿನಾಚರಣೆ –  ಶ್ರೀಮತಿ  ಗೌರಿ ಪ್ರಸನ್ನ 

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಹ 
 ಸುಮಾರು ೩-೫ ವರುಷಗಳ ಹಿಂದಿನ ಮಾತು. ಅದೊಂದು ಸುಂದರ ಶಾಲೆ. ಅಂದು ಶಿಕ್ಷಕರ ದಿನಾಚರಣೆ. ಹತ್ತನೆಯ ತರಗತಿಯ ವಿದ್ಯಾಥಿ೯ನಿಯರೆಲ್ಲ ತಮ್ಮ ನೆಚ್ಚಿನ ಗುರುವೃಂದಕ್ಕಾಗಿ ಒಂದು ಪುಟ್ಟ ಸಮಾರಂಭವನ್ನೇಪ೯ಡಿಸಿದ್ದರು.  ಗುರುಶಿಷ್ಯರ ನಡುವಿನ ಸಂಬಂಧ ಅದೂ ಆ ಹದಿವಯಸ್ಸಿನಲ್ಲಿ ಬಹಳ ಮನೋಹರವೂ, ಆತ್ಮೀಯವೂ ಆಗಿರುತ್ತದೆಯಲ್ಲವೇ? ತಮ್ಮ ಪ್ರೀತಿಯ ಗುರುಗಳಿಗೊಂದು ಕೃತಜ್ಞತೆ ಸಲ್ಲಿಸುವ ಸದಾವಕಾಶ. ಜೀವನದ ವಕ್ರತೆಗಿನ್ನೂ ಅಪರಿಚಿತರಾದ ಆ ಹುಡುಗಿಯರ ಮೊಗದ ತುಂಬ ಮುಗ್ಧತೆಯ ಮುಗುಳ್ನಗು; ಹೃದಯಗಳಲ್ಲಿ ಪ್ರೀತಿ-ಗೌರವಗಳ ಮಹಾಪೂರ. ತಮ್ಮ ಪ್ರೀತ್ಯಾದರಗಳ ದ್ಯೋತಕವಾಗಿ ತಮಗೆ ತಿಳಿದಂತೆ ನಾಲ್ಕಾರು ಮಾತಾಡಿ, ಎಲ್ಲ ಶಿಕ್ಷಕವೃಂದಕ್ಕೂ ಒಂದೊಂದು ಗುಲಾಬಿ ಹೂ ಕೊಟ್ಟರು. ಶಿಕ್ಷಕರೆಲ್ಲ ಅವರ ಖುಷಿಯಲ್ಲಿ ತಾವೂ ಪಾಲ್ಗೊಂಡು ತಮ್ಮ ತಮ್ಮ ಅಂಗಿಯ ಕಿಸೆಗೆ ಸಿಕ್ಕಿಸಿಕೊಂಡರೆ ಶಿಕ್ಷಕಿಯರೆಲ್ಲ ತಮ್ಮ ಮುಡಿಗೆ ಮುಡಿದುಕೊಂಡರು. ಆದರೆ ಯಾವಾಗಲೂ ಬಳೆ-ಕುಂಕುಮವಿಲ್ಲದೇ, ಬರೀ ಸಾಧಾರಣ ಸೀರೆಗಳನ್ನುಟ್ಟು  ಸೈಕಲ್ ಮೇಲೆ ಶಾಲೆಗೆ ಬರುವ ಒಬ್ಬ P.E .ಟೀಚರ್, ದೈಹಿಕ ಶಿಕ್ಷಕಿ ಮಾತ್ರ ಅದನ್ನು ಮುಡಿಯದೇ ಕೈಯಲ್ಲಿ ಹಿಡಿದು ಯಾವುದೋ ಚಿಂತನೆಯಲ್ಲಿ ಮುಳುಗಿದ್ದಾರೆ. 'ಪಾಪ! ಗಂಡ ಇರಲಿಕ್ಕಿಲ್ಲ. ಅದು ಹೇಗೆ ತಾನೇ ಮುಡಿದಾರು?!' ಎನ್ನುವ  ಅನುಕಂಪ ನನಗೆ.  ಆಷ್ಟರಲ್ಲೇ ಮತ್ತೋವ೯ ಹುಡುಗಿ ಜಯಶ್ರೀ ಯಾಳವಾರ  ಅನ್ನುವವಳು ಕೇಳಿಯೇಬಿಟ್ಟಳು.' ಮೇಡಂ,ನಾವಷ್ಟು ಪ್ರೀತಿಯಿಂದ  ಕೊಟ್ಟೇವಿ. ನೀವು ಇಟ್ಟುಕೊಳ್ಳಲೇ  ಇಲ್ಲ?' ನಸುನಕ್ಕ ಅವರು ಉತ್ತರಿಸಿದರು - ' ಇಲ್ಲ ಮರೀ,ಖಂಡಿತ ನಿಮ್ಮ ಪ್ರೀತಿಗೆ ಸರಿಯಾದ  ಸ್ಥಾನವನ್ನೇ ಅದು ಸೇರುತ್ತದೆ'. ಶಾಲೆಯಲ್ಲಿದ್ದ ಅರವಿಂದರ ಫೋಟೋವನ್ನದು ಅಲಂಕರಿಸಿತು. ನಮಗೆಲ್ಲ 'ಅಯ್ಯೋ! ಜಯಶ್ರೀ ಎಂಥ ಅನಾಹುತದ ಪ್ರಶ್ನೆ ಕೇಳಿಬಿಟ್ಟಳಲ್ಲ?' ಎಂಬ ಆತಂಕ.

      ಮರುದಿನ  ೧೧ ಗಂಟೆ. ಕಿಲಕಿಲ ನಗುತ್ತ , ಜೋರುಜೋರಾಗಿ ಹರಟೆ ಹೊಡೆಯುತ್ತ ನಮ್ಮೆಲ್ಲ  ಗೆಳತಿಯ ಸವಾರಿ  ಇಡಿಯ ರೋಡನ್ನೇ  block ಮಾಡಿಕೊಂಡು ಶಾಲೆಗೆ ಹೊರಟಿತ್ತು. 'ಟ್ರಿಣ್..ಟ್ರಿಣ್..' ಹಿಂದೆ ಮ್ಯಾಡಂ ನ ಸೈಕಲ್ ನ ಬೆಲ್ ದನಿ. ಹಿಂತಿರುಗಿ ನೋಡಿ ದಾರಿ ಮಾಡಿಕೊಟ್ಟ ನಮ್ಮ ಪಕ್ಕದಲ್ಲೇ ಸೈಕಲ್ ನಿಂದ ಇಳಿದ ಅವರು ನನ್ನನ್ನೇ ನೋಡುತ್ತ ಗಂಭೀರವಾಗಿ ' ನಿನ್ನೆ ಹೂವು ಯಾಕೆ ಮುಡಿದುಕೊಳ್ಳಲಿಲ್ಲ ಎಂದು ನೀನಲ್ಲವೇ ಕೇಳಿದ್ದ?' ಎಂದರು. ನನಗೋ ಒಮ್ಮೆಲೇ ಎದೆ ಝಲ್ಲೆಂದಿತು, ಖಂಡಿತ  ಬಯ್ಯುತ್ತಾರಿವರು ಎಂದು. ಕೆಲಸಮಯದ ಹಿಂದೆ ಅಮ್ಮ ಅರಿಶಿನ-ಕುಂಕುಮಕ್ಕೆ ಎಲ್ಲರನ್ನೂ ಕರೆದು ಬಾ ಎಂದು ಹೇಳಿಕಳಿಸಿದಾಗ ನಮ್ಮೂರಿನ ಮಡಿಹೆಂಗಸು ಪದ್ದಕ್ಕಜ್ಜಿಯನ್ನೂ 'ಅರಿಶಿನ-ಕುಂಕುಮಕ್ಕ ಬರಬೇಕಂತ್ರಿ' ಎಂದು ಕರೆದು ' ನಿಮ್ಮವ್ವ ಹೇಳಿದ್ಲಾ ನನ್ನ ಕರಿ ಅಂತ. ಹುಚ್ಚು ಮುಂಡೆದೇ..' ಅಂತ ಅವರಿಂದ ಬಯ್ಯಿಸಿಕೊಂಡದ್ದು ನೆನಪಾಗಿ ಕಟ್ಟಾ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದಿದ್ದ ನಾನು ಹೆದರಿದ್ದೆ.' ಓಹೋ! ಇವರು ಆ ಪ್ರಶ್ನೆ ಕೇಳಿದವಳು ನಾನೇ ಅಂದುಕೊಂಡಿದ್ದಾರೆ. ನಾನಲ್ಲ; ಜಯಶ್ರೀ ಎಂದು ಅವಳ ಹೆಸರು ಹೇಳಿ ಅವಳಿಗೆ ಬಯ್ಯಿಸಬಾರದು. ಪಾಪಾ! ಅವಳು ಮೊದಲೇ ಮೆತ್ತನೆಯ ಹುಡುಗಿ. ಏನೋ ತಿಳಿಯದೇ ಕೇಳಿದ್ದಾಳೆ' ..ಎಂದೆಲ್ಲ ಅನ್ನಿಸಿ 'ಹೌದ್ರಿ.ನಾನೇ' ಎಂದುಬಿಟ್ಟೆ. ನಾನಂದುಕೊಂಡಂತೆ ಅವರು ಬಯ್ಯಲಿಲ್ಲ;ರೇಗಲೂ ಇಲ್ಲ. ''ನೋಡು ಮರೀ, ನೀನಿನ್ನೂ ಸಣ್ಣವಳು.ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಂದು ವ್ಯಕ್ತಿ , ವಸ್ತುವೂ ತನ್ನ ಆತ್ಯಂತಿಕ ಗುರಿಯನ್ನು ಮುಟ್ಟಲು ಉದ್ಯುಕ್ತವಾಗಿರುತ್ತದೆ; ಸಾಥ೯ಕತೆಯನ್ನು ಪಡೆಯಲು ತುಡಿಯುತ್ತಿರುತ್ತದೆ. ನೀವು ನಿನ್ನೆ ಕೊಟ್ಟ ಹೂ ..ದೇವನ, ಗುರುವಿನ ಶಿರವನ್ನೋ, ಪಾದವನ್ನೋ ಸೇರುವುದೇ ಅದರ ತಪಸ್ಸು. ನಾ ಮುಡಿದುಕೊಂಡರೆ  ಒಂದೆರಡು ಗಂಟೆಯಲ್ಲಿ ಒಣಗಿ ಮುದುರಿ ಹೋಗುತ್ತಿತ್ತು. ಅದಕ್ಕೆಂದೇ ನಿಮ್ಮೆಲ್ಲರ ಯಶಸ್ಸಿಗಾಗಿ, ಶ್ರೇಯಸ್ಸಿಗಾಗಿ  ಪ್ರಾಥಿ೯ಸಿ ಅದನ್ನು ಅರವಿಂದರ ಭಾವಚಿತ್ರಕ್ಕೆ ಸಮಪಿಸಿದ್ದು' ಎಂದರು. ಅವರು ಹೇಳಿದ್ದು ಬಹಳಷ್ಟೇನೂ ಅಥ೯ವಾಗದಿದ್ದರೂ ಅವರ ದನಿಯಲ್ಲಿನ ನೈಜ ಕಳಕಳಿ, ಪ್ರೀತಿ ನೇರವಾಗಿ ನನ್ನ  ಹೃದಯವನ್ನು ಸ್ಪಶಿ೯ಸಿತು. ಅವರ ಆ ರೀತಿಯ ವಿಚಾರ-ಚಿಂತನೆ ನಮ್ಮ ಆಗಿನ ಬೌದ್ಧಿಕ ವಲಯಕ್ಕೊಂದು ಕ್ರಾಂತಿ ಎಂದರೂ ಸರಿಯೇ.  'ಮಗೂ, ಸಸ್ಯಗಳಿಗೆ, ಹೂಗಳಿಗೆ, ಗಿಡಮರಬಳ್ಳಿಗಳಿಗೆ ಎಲ್ಲಕ್ಕೂ ಜೀವವಿರುತ್ತದೆ. ಅವಕ್ಕೂ ನಮ್ಮಂತೆಯೇ ಭಾವನೆಗಳಿರುತ್ತವೆ. ನಿಮ್ಮ ಪಾಠದಲ್ಲಿ ಜಗದೀಶ್ ಚಂದ್ರ  ಬೋಸ್ ರ ವಿಷಯ ಬಂದಿಲ್ಲವೇ? ಇವತ್ತು ಶಾಲೆ ಬಿಟ್ಟ ಮೇಲೆ ನನ್ನನ್ನು ಕಾಣು. ಅವರ ಪುಸ್ತಕ ಕೊಡುತ್ತೇನೆ.'' ಎಂದರು. ಆ ಪುಸ್ತಕ, ಅದರಲ್ಲಿ ಅವರು ನನಗೆಂದು ಬರೆದಿಟ್ಟ ಚಂದದ ಪತ್ರ ನಂತರದ ಕತೆಯೇ ಬೇರೆ.ಆ ಶರಾವತಿ ಹೆಗಡೆ ಮ್ಯಾಡಂ ನನ್ನ ಪ್ರೀತಿಯ ಶತ೯ಕ್ಕನಾಗಿ ಜೀವನದ ಎತ್ತರದ ಸ್ತರಗಳನ್ನು ತೋರಿಸಿಕೊಟ್ಟು, ನೈತಿಕತೆ, ಪ್ರಾಮಾಣಿಕತೆ, ಪ್ರೀತಿ, ಅಧ್ಯಾತ್ಮ, ಸಾಹಿತ್ಯ, ಸಂಗೀತದಂಥ ಧನಾತ್ಮಕ ಚಿಂತನೆಗಳ ಸಹಸ್ರ ಗರಿ ಮೂಡಿಸಿ, ಅಂತ:ಕರಣದ ಹೊಳೆಯಲ್ಲಿ ನನ್ನನ್ನು ಮೀಯಿಸಿ, ತೊಯ್ಯಿಸಿ,  ಮೈ-ಮನ-ಚೇತನಗಳನ್ನೆಲ್ಲ ಸಂತೃಪ್ತಗೊಳಿಸಿ , ಜೀವನದ ಇಂದಿನ ಹಂತದವರೆಗೂ ತನ್ನ ಕೃಪಾ ಶಕ್ತಿಯಿಂದಲೇ ಎಲ್ಲ ಕಷ್ಟಗಳಲ್ಲೂ ಪಾರುಮಾಡಿ ...ಓಹ್! ಅದ್ಭುತ!! ಅದನ್ನೆಲ್ಲ ಬರೆಯಲಾಗದು. ಬರೆದು,ಮಾತಾಡಿ  ಅದರ ಭಾವತೀವ್ರತೆಯ ಸೊಗವನ್ನು ಕಡಿಮೆ ಮಾಡಿಕೊಳ್ಳಲಾಗದು.

''ಸದ್ದುಗದ್ದಲದ  ತುತ್ತೂರಿ ದನಿಗಳಾಚೆಗೆ ನಿಂತು 
ನಿಶ್ಶಬ್ದ ದಲ್ಲಿ  ನೆನೆಯುತ್ತೇನೆ ಗೌರವದಿಂದ.
ನಕ್ಷತ್ರ ಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ ನನ್ನ ಸುತ್ತ.
ಪಟಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ'' 
 ( ಮೂಲ ಡಾ. ಜಿ. ಎಸ್. ಎಸ್ )

***********************************************
ನಾಡಗೀರ ಮಾಸ್ತರ್ (1915-2011)

ನನ್ನಶಾಲೆ ಮತ್ತು ನನ್ನ ಇಂಗ್ಲಿಷ್ ಟೀಚರ್ ನಾಡಗೀರ ಮಾಸ್ತರ್ (1915-2011) ಶ್ರೀವತ್ಸ ದೇಸಾಯಿ

ಪ್ರತಿ ವರ್ಷ ಭಾರತದಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವೆಂದು ಸಾಮೂಹಿಕವಾಗಿ ಆಚರಿಸುತ್ತೇವೆಯಾದರೂ ಪ್ರತಿದಿನದ ಯೋಗಾಭ್ಯಾಸದ ಪ್ರಾರಂಭದಲ್ಲಿ ನಮ್ಮ ಯೋಗಾಮಾ ಹೇಳಿದಂತೆ ನನ್ನ ಶಾಲಾಗುರುಗಳು ನನಗೆ ಪ್ರಾತಃಸ್ಮರಣೀಯರಾಗುತ್ತಾರೆ. ಸುಮಾರು ಎಂಬತ್ತು ವರ್ಷಗಳ ಕೆಳಗೆ ಕರ್ನಾಟಕ ಎಜುಕೇಶನ್  ಸೊಸೈಟಿ ಎನ್ನುವ  ಹೆಸರಿನಿಂದ ಸ್ಥಾಪಿತವಾಗಿ ಮುಂದೆ ಮಹತ್ವದ ಶೈಕ್ಷಣಿಕ ಸಂಸ್ಥೆ ಯ(K E Board) ಧಾರವಾಡದ ಮಾಳಮಡ್ಡಿಯಲ್ಲಿರುವ ಕೆ ಇ ಬೋರ್ಡ್ ಹೈಸ್ಕೂಲಿನ ವಿದ್ಯಾರ್ಥಿ ನಾನು. ಗುರುರಾಜ ಕರಜಗಿಯವರು ಅನೇಕ ಸಲ ಹೇಳಿದಂತೆ ನಿಸ್ವಾರ್ಥ, ಅಪ್ಪಟ ದೇಶಪ್ರೇಮಿ ಆದರ್ಶ ಮಾಸ್ತರರ ಪಡೆಯೇ ಅಲ್ಲಿ ಇತ್ತು. ನಮಗೆ ಪಾಠ ಕಲಿಸಿದ ಮತ್ತು ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಗುರುಗಳೆಲ್ಲರ ಹೆಸರು ತೊಗೊಳ್ಳದೆ ಅವರೆಲ್ಲರಿಗೂ ವಂದಿಸಿ ಈ ಚಿಕ್ಕ ಲೇಖನದಲ್ಲಿ ಇಂಗ್ಲಿಷ್ ಟೀಚರ್ ನಾಡಗೀರವರ ಬಗ್ಗೆಯಷ್ಟೇ ಸ್ವಲ್ಪ ಬರೆಯುತ್ತೇನೆ. ಬರೆಯುತ್ತ ಹೋದರೆ ಪರೀಕ್ಷೆಯ ದಿನ ಕೊಡುತ್ತಿದ್ದ ’ಸಪ್ಲಿಮೆಂಟೆಲ್ಲ’ ತುಂಬಿಸುವಷ್ಟಿದೆ. ನಮ್ಮೆಲ್ಲ ಗೆಳೆಯರಿಗೆ ’ಮಾಸ್ತರ್’ ಅಂದರೆ ಅವರೊಬ್ಬರೇ – ಶಿವರಾವ್ ಜಿ ನಾಡಗೀರ್ ಮಾಸ್ತರರು. ಇನ್ನೂ ಹತ್ತಿರದವರು ಅವರನ್ನು ’ಶಿವಣ್ಣ ಕಾಕಾ’ ಅಂತ ಕರೆಯುತ್ತಿದ್ದರು. ನಮ್ಮ ’ಸಾಲಿ” ಅಂದರೆ ಉತ್ತರ ಕರ್ನಾಟಕ ಭಾಷೆಯಲ್ಲಿ ಶಾಲೆ -ನಾಡಗೀರ್ ಮಾಸ್ತರರ ಸಾಲಿ ಅಂತ ಎಲ್ಲೆಡೆ  ಪ್ರಸಿದ್ಧವಾಗಿತ್ತು. ಕೆ ಇ ಬೋರ್ಡ್ ಹೈಸ್ಕೂಲಿನಲ್ಲಿ ಅವರು ಸೇವೆ ಸಲ್ಲಿಸಿದ ನಾಲ್ಕು ದಶಕಗಳಲ್ಲಿ (1938-1976) ಅದೆಷ್ಟೊಂದು ಕೆಲಸ ಮಾಡಿದ್ದರು! ಅದರಲ್ಲಿ 20 ವರ್ಷ ಹೆಡ್ಮಾಸ್ಟರ್ ಆಗಿದ್ದರು. ಅವರು ಕಲಿಸಿದ ವಿದ್ಯಾರ್ಥಿಗಳು ಸಾವಿರಾರು. ಅವರೆಲ್ಲರ ಮನದಲ್ಲಿ ಅವರು ಸ್ಥಿರವಾಗಿ ನೆಲೆಸಿದ್ದಾರೆಂದರೆ ಅತಿಶಯೋಕ್ತಿಯಲ್ಲ. 1975ರಲ್ಲಿ ರಾಷ್ಟ್ರಪತಿಗಳ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯಿಂದ ಭೂಷಿತರಾದರು. ಅವರ ಪ್ರಯತ್ನ ಮತ್ತು ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ಪ್ರತಿವರ್ಷ ಉತ್ತಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದರು. ಹೆಚ್ಚಿನ ಕೋಚಿಂಗಿನಿಂದ ನೂರಕ್ಕೂ ಹೆಚ್ಚು ’ರಾಂಕ್’ ಗಳಿಸಿ Rank Bank ಅಂತ ನಮ್ಮ ಶಾಲೆ ಕರೆಸಿಕೊಳ್ಳಲಾರಂಭಿಸಿತು.

ಕೆ. ಯೀ. ಬೋರ್ಡ್ ಮಹಾವಿದ್ಯಾಲಯ, ಧಾರವಾಡ
ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಸ್ವೀಕಾರ – ನಾಡಿಗೇರ್ ಮಾಸ್ತರ್ ಮತ್ತು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್
 ’ನನ್ನ ಮಾಸ್ತರ್-ನನ್ನ ಪೆನ್ ಫ್ರೆಂಡ್ ಸಹ’.
ಆ ಶಾಲೆಯಲ್ಲಿ ನಾನು  ಕಲಿತದ್ದು ಮೂರೇ ವರ್ಷಗಳಾದರೂ ಅವರೊಡನೆ ನನ್ನ ಸಂಬಂಧ, ಮತ್ತು ಪತ್ರ ವ್ಯವಹಾರ ಅವರು ನಿಧನರಾಗುವ ತನಕ ಇತ್ತು. ಅವರು ಅತ್ಯಂತ ಶಿಸ್ತಿನ ಮನುಷ್ಯ. ವ್ಯತಿರಿಕ್ತವಾಗಿ ನಡೆದರೆ ಶಿವನ ಮೂರನೆಯ ಕಣ್ಣಿಗೆ ಆಹುತಿಯೇ ಸೈ. ನಾವೆಲ್ಲ ಅವರೆದುರು ಥರ ಥರ ನಡುಗುತ್ತಿದ್ದೆವು. ನಾನು ಸಾಲಿ ಬಿಟ್ಟ ನಂತರವೇ ಅವರು ನನಗೆ ಇನ್ನೂ ಹತ್ತಿರವಾದರು. ತಮ್ಮ ತೊಂಬತ್ತಾರನೆಯ ವಯಸ್ಸಿನವರೆಗೆ ನನ್ನೂಡನೆ ಪತ್ರವ್ಯವಹಾರ ನಡೆಸುತ್ತಿದ್ದರು: ಅದರಲ್ಲಿ ಹಾಸ್ಯವಿರುತ್ತಿತ್ತು, ಬೋಧನೆಯಿರುತ್ತಿತ್ತು; ಚೇಷ್ಟೆ ಸಹ! ಅದೇ ತರಹ ಇನ್ನುಳಿದ ಅಗಣಿತ ಹಳೆಯ ವಿದ್ಯಾರ್ಥಿಗಳಿಗೂ ಸ್ವಹಸ್ತದಿಂದಲೇ ಪತ್ರಗಳನ್ನು ಬರೆಯುತ್ತಿದ್ದರೆಂದು ನನಗೆ ಆಮೇಲೆ ಗೊತ್ತಾಯಿತು.ಅವರು ನಮಗೆ ಇಂಗ್ಲಿಷ್ ಕಲಿಸುತ್ತಿದ್ದರು. ಅವರ ಸ್ಖಾಲಿತ್ಯವಿರದ ಪತ್ರಗಳ ತುಂಬ ಶೇಕ್ಸ್ಪಿಯರಿನ ನಾಟಕಗಳ,  ಥಾಮಸ್ ಗ್ರೇ, ಕಾರ್ಲೈಲ್, ಟೆನ್ನಿಸನ್ ಮುಂತಾದ ಆಂಗ್ಲ ನಾಡಿನ ಸಾರಸ್ವತ ಪುತ್ರರ ಕೊಟೇಶನ್ ಗಳಿರುತ್ತಿದ್ದವು. ಅವರ ಜನ್ಮಶತಾಬ್ದಿಯ ಸ್ಮರಣಸಂಚಿಕೆಗಾಗಿ ಆ ’ಪತ್ರ ಪರಾಚಿಯ’ ಆಧಾರದ ಮೇಲೆಯೇ ಒಂದು ಲೇಖನ ಬರೆದಿದ್ದೆ. ಅದರ ಶೀಷಿಕೆ: 'Nadgir master -my guru and my pen pal!'  ಅಂತ!  "A good teacher teaches well at school; a great teacher continues to teach even after you've left the school!" ಅಂತ ಉಲ್ಲೇಖಿಸಿದ್ದೆ.
’ಆರಂಕು”ಶಮಿಟ್ಟೊಡಂ ...

ಅವರ ಇಂಗ್ಲಿಷ್ ಪಾಠದಿಂದಲೆ ನನಗೆ ಆ ಭಾಷೆಯ ಮೇಲಿನ ಒಲವು ಶುರುವಾಗಿತ್ತು. ಅವರು ಕನ್ನಡ ಸಹ ಕಲಿಸುತ್ತಿದ್ದರು. ನಾನು ಪರದೇಶಕ್ಕೆ ಬಂದ ಮೇಲೆ ಒಂದು ವರ್ಷ ಇನ್ನೊಬ್ಬ ಸಹಪಾಠಿಯ ಜೊತೆ ಸೇರಿ ನಾವೇ ಹೊಸದಾಗಿ ಕಲಿತ ಕಂಪ್ಯೂಟರಿನಿಂದ ಅವರಿಗೊಂದು ಬರ್ತ್ ಡೇ ಕಾರ್ಡ್ ಮಾಡಿ ಪ್ರಿಂಟ್ ಕಳಿಸಿಕೊಟ್ಟಿದ್ದೆವು. ಅವರ ಸೂಕ್ಷ್ಮ ಕಣ್ಣು ನಾವು ಟೈಪು ಮಾಡುವಾಗ ಒಂದಕ್ಷರ ('r') ಬಿಟ್ಟು ಹೋಗಿ ”ಅದು ’ಬಿಥ ಡೇ’ ಆಗಿತ್ತಲ್ಲೋ,” ಅಂತ ಅವರು ಟೀಕಿಸಿ ತಿದ್ದಿದ್ದನ್ನು ಮರೆಯುವಂತಿಲ್ಲ. ಈಗಲೂ ಪ್ರತಿ ಸಲ ನಾನು 'Happy birthday' ಅಂತ ಬರೆಯುವಾಗಲೆಲ್ಲ ಅಂಕುಶದಿಂದ ತಿವಿದು ಮರೆಯ ಬೇಡ ’’r' ಅಂತ ”ಏಡಿಸಿ ಕಾಡುತ್ತದೆ, ಶಿವನ ಡಂಗುರ!” ಅದಕ್ಕೇ ಎಚ್ಚರಿಕೆಯಿಂದ ತಪ್ಪು ಮಾಡದೆ ಬರೆಯಲು ಪ್ರಯತ್ನಿಸುತ್ತೇನೆ. ಆರಂಕುಶಮಿಟ್ಟೊಡಮ್ ನೆನೆವುದೆನ್ನ ಮನಂ ಧಾರವಾಡ ದೇಶಮಮ್!

ನಾಡಗೀರ್ ಸರ್ ತಮ್ಮನ್ನು ಶಾಲೆಯ ಉನ್ನತಿಗಾಗಿಯೇ ಹಗಲು ರಾತ್ರಿ ತೂಡಗಿಸಿಕೊಂಡಿರುತ್ತಿದ್ದರು. ಉಳಿದವರಿಂದಲೂ ಅದೇ ಶಿಸ್ತನ್ನೇ ಅಪೇಕ್ಷಿಸುತ್ತಿದ್ದರು. ಅವರ ಮೇಜಿನ ಮೇಲಿನ ಮರದ ತುಂಡಿನಮೇಲೆ ಎರಡೂ ಬದಿಯಲ್ಲಿ ಭಾರತದ ಹಿಂದಿನ ಒಬ್ಬ ಪ್ರಧಾನಿ ಹೇಳಿದ ಬರಹವನ್ನು ಬರೆಸಿ ಇಟ್ಟಿದ್ದರು, ಮತ್ತು ಅದರಂತೆ ನಡೆದುಕೊಳ್ಳುತ್ತಿದ್ದರು. ಅದು ಹೀಗೆ ಇತ್ತು: I am interested in getting things done. I am not interested in the cause of delay.
ಉಪದೇಶ ಮಾಡುವದಕ್ಕಿಂತ ಮಾಡಿ ತೋರಿಸುವದು ಅವರ ಮಾದರಿಯಾಗಿತ್ತು. ಎಲ್ಲಿಯೇ ಇದ್ದರೂ ರಾಷ್ಟ್ರಗೀತೆ ಹಾಡುತ್ತಿರುವಾಗ ಇದ್ದಲ್ಲೇ ನಿಂತು ಗೌರವ ತೋರಿಸುವದನ್ನು ಬಿಂಬಿಸಲು ಒಂದಿ ದಿನ ಬೇಕಂತಲೇ ತಡವಾಗಿ ಶಾಲೆಯ ಮೈದಾನದ ಮಧ್ಯ ಬಂದು ತಲುಪಿದಾಗ ಎಂದಿನಂತೆ ಶಾಲೆಯ ಪ್ರಾರ್ಥನೆ ಆರಂಭವಾಯಿತೆಂದು ಎಲ್ಲರಿಗೂ ಕಾಣುತ್ತಿದ್ದಂತೆಯೇ ಅಲ್ಲೇ ನಿಂತುಬಿಟ್ಟರು, ಮುಗಿಯುವ ವರೆಗೆ. ನನಗೆ ಇನ್ನೂ ನೆಪಿನಲ್ಲಿರುವ ಆ ನಿದರ್ಶನ ಎಲ್ಲ ಶಾಲಾ ಮಕ್ಕಳ ಮೇಲೆಯೂ ಪರಿಣಾಮ ಬೀರಿತ್ತು ಮತ್ತು ಆ ಆದರ್ಶವನ್ನು ಪಾಲಿಸಲು ಪ್ರೇರಿಸಿತು. ಶಾಲೆಯಲ್ಲಿ ಅವರು ಎಲ್ಲರಿಗೂ ಕಾಣಿಸುವಂತೆಒಂದು ಬರಹವನ್ನು ಬರೆಸಿ ಹಾಕಿದ್ದರು. ಅದನ್ನು ಚಾಚೂ ತಪ್ಪದೆ ಪಾಲಿಸಿದರು ಸಹ. ಅದು ಹೀಗಿತ್ತು: 
"Henceforth you and the school are one, what you are, the school shall be. Here shall beat the heart of us, the best school of all. Your alma mater expects everyone to do their duty. For her, no contribution is too great and no sacrifice is too small."

ಆಗ ಶಾಲೆಗಳಿಗೆ ಸರಕಾರದ ಅನುದಾನದ ವ್ಯವಸ್ಥೆ ಇರುತ್ತಿರಲಿಲ್ಲ. ಮಕ್ಕಳು ಕೊಡುವ ಫೀಸ್ ಹಣದಿಂದಲೇ ಶಾಲೆಯ ಖರ್ಚು, ಸಿಬ್ಬಂದಿಯ ಸಂಬಳ, ಇವೆಲ್ಲವನ್ನು ನೋಡಿಕೊಳ್ಳಬೇಕು, ಹೆಡ್ಮಾಸ್ಟರ್. ಹೆಡ್ ಮಾಸ್ಟರ್ ಆಗಿದ್ದ ಅವರ ಮನೆ ಶಾಲೆಯ ಆವರಣದಲ್ಲಿಯೇ ಇತ್ತು. ಅವರ ಮಗ ಅರುಣನೂ ನನ್ನ ಕ್ಲಾಸಿನಲ್ಲಿಯೇ ಇದ್ದ. ಅವನಲ್ಲದೆ ಇನ್ನೂ ಹದಿನೈದು ಮಾಸ್ತರರ ಮಕ್ಕಳೂ ನನ್ನ ಕ್ಲಾಸಿನಲ್ಲಿದ್ದರು. ಅವರಿಗೆ ಫೀ ಮಾಫಿ ಇತ್ತು. ಅನೇಕ ಬಡ ವಿದ್ಯಾರ್ಥಿಗಳಿಗೂ ಅದೇ ತರಹ ರಿಯಾಯತಿ ಕೊಡುತ್ತಿದ್ದರಿಂದ ಹಲವಾರು ಸಲ ಶಿಕ್ಷಕರಿಗೆ ಪೂರ್ತಿ ಸಂಬಳ ಕೊಡಲು ಕಷ್ಟವಾಗುತ್ತಿತ್ತು. ತಾವು ಮಾತ್ರ ತಮ್ಮ ಅವಧಿಯ ಪೂರ್ತಿ ಅರ್ಧ ಪಗಾರ ಅಷ್ಟೇ ತೆಗೆದುಕೊಂಡು ಪೂರ್ತಿ ಸ್ವೀಕರಿಸಿದೆ ಅಂತ ಸಹಿಮಾಡುತ್ತಿದ್ದರು. ಅದೆಷ್ಟೋ ಸಲ ಬಡಮಕ್ಕಳು ಹಸಿದ ಹೊಟ್ಟೆಯಲ್ಲಿ ಬಂದಿದ್ದನ್ನು ಗಮನಿಸಿ ಆವರಣದಲ್ಲಿದ್ದ ತಮ್ಮ ಮನೆಗೇ ತಿಂಡಿ ತಿಂದು ಬರಲು ಕಳಿಸಿ ಕೊಡುತ್ತಿದ್ದರು. ”ಎಷ್ಟೋ ಸಲ ಇಂತಹ ಮಕ್ಕಳೊಂದಿಗೆ ನಾನು ನನ್ನ ರೊಟ್ಟಿಯನ್ನು ಹಂಚಿಕೊಂಡಿದ್ದೇನೆ”’ ಅಂತ ಸನ್ನ ಸಹಪಾಠಿಯಾಗಿದ್ದ ಅರುಣ ತನ್ನ ಸ್ಮರಣೆಯನ್ನು ಇತ್ತೀಚೆಗೆ ಒಂದು ಪುಸ್ತಕದಲ್ಲಿ ಹಂಚಿಕೊಂಡಿದ್ದಾನೆ. National scholarship ಪರೀಕ್ಷೆಯಲ್ಲಿ ಉತ್ತಮ ತರಗತಿಯಲ್ಲಿ ಪಾಸಾಗಿದ್ದರೂ means tested ಇದ್ದುದರಿಂದ ಸ್ವತಃ ಅರ್ಧ ಸಂಬಳವನ್ನೇ ಮನೆಗೆ ಒಯ್ಯುತ್ತಿದ್ದರೂ ಆ ಶಿಷ್ಯವೇತನದ ಪೂರ್ಣ ಫಲ ತನಗೆ ಲಭ್ಯವಾಗಿರಲಿಲ್ಲ ಅಂತ ಮಾಸ್ತರರ ಎರಡನೆಯ ಮಗನಿಗೆ ಇತ್ತು ಕೊರಗು! 

ಬಡತನ ಕಷ್ಟ ಕಾರ್ಪಣ್ಯಗಳೊಡನೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಅನೇಕ ಗುರುಗಳು ಶಾಲೆಯಲ್ಲಿದ್ದರು. ಬದುಕಿದ್ದಷ್ಟು ದಿನ ಬಡತನ. ಅವರ ಆಸ್ತಿಯೆಂದರೆ ಅವರ ಶಿಷ್ಯವೃಂದ. ಆ ದಿನಗಳ ನೆನಪಿನ ಭಂಡಾರವೇ ನಮ್ಮ ಜೀವನಕ್ಕೆ ಭಂಡವಲು. ಅವರ ಆದರ್ಶ ನಮಗೆ ದಿಕ್ಸೂಚಿ.
'ವಾತ್ಸಲ್ಯ’ ಎನ್ನುವ ಅಭಿನಂದನಾ ಗ್ರಂಥದಲ್ಲಿ ತಮ್ಮ ಆತ್ಮಚರಿತ್ರೆ ಬರೆಯುತ್ತ ತಮ್ಮ ’ಪ್ರಸಿದ್ಧ’ ಸಿಟ್ಟಿನ ಬಗ್ಗೆ ಹೀಗೆ ಬರೆದಿದ್ದಾರೆ (’ವಾತ್ಸಲ್ಯ’; ಪು. 9): ’ನನ್ನದು ಸಿಟ್ಟಿನ ಸ್ವಭಾವ. ಅದು ಅಪ್ಪನಿಂದ ಬಂದ ಆನುವಂಶಿಕ ಗುಣವೂ ಇರಬಹುದು, ಅಥವಾ (ಎಳೆವಯಸ್ಸಿನಲ್ಲೇ ತಾಯಿಯನ್ನೆ ಕಳೆದುಕೊಂಡ) ಮಾತೃವಾತ್ಸಲ್ಯದ ಅಭಾವದಿಂದಲೂ ಇರಬಹುದು. ಏನೇ ಇರಲಿ, ”ಹೊಲೆಸಿಟ್ಟು” ನನ್ನ ಜೀವನದ ಬಹುಭಾಗವನ್ನು ನುಂಗಿ ಹಾಕಿದೆ. ಬರೆದ ಚಿತ್ರವೆಲ್ಲ ಮಸಿ ನುಂಗಿದಂತೆ, ಸ್ವಚ್ಛ ಮನಸ್ಸಿನಿಂದ ಮಾಡಿದ ಒಳ್ಳೇ ಕೆಲಸಗಳು ನಿಷ್ಪ್ರಯೋಜಕವಾಗಿರುವುದರ ಅರಿವೂ ನನಗಾಗಿದೆ. ನನ್ನ ಸಿಟ್ಟಿನ ರುಚಿಯನ್ನು ವಿದ್ಯಾರ್ಥಿಗಳು, ಸಹಶಿಕ್ಷಕರು ಹಾಗೂ ಕುಟುಂಬದವರೂ ಸಾಕಷ್ಟು ಉಂಡಿದ್ದಾರೆ'.

 ಶಿಸ್ತಿನ ಸಾಕಾರ ಸ್ವರೂಪರಾಗಿದ್ದ ಅವರು  ಆಗಾಗ್ಗೆ ಸಿಟ್ಟಿನ ಪ್ರತಿರೂಪ ತಳೆದು ’ದೂರ್ವಾಸ ಮುನ್ನಿ’ ಅನ್ನುವ ಉಪನಾಮ ಗಳಿಸಿದ್ದರೂ ಅವರ ಶಿಷ್ಯ ವಾತ್ಸಲ್ಯ ಅಪಾರ. ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಇಂಥ ಒಂದು ಪ್ರಸಂಗದಲ್ಲಿ ತಮಗೆ ಕಪಾಳ ಮೋಕ್ಷ ಕೊಟ್ಟಿದ್ದ ನಾಡಗೀರ್ ಮಾಸ್ತರರೇ ತಾವು ಪ್ರಸಿದ್ಧ ವಾಗ್ಮಿಗಳಾಗಲು ಕಾರಣವೇನೋ ಎಂದು ನನ್ನ ಶಾಲೆಯಲ್ಲೇ ಕಲಿತ ಗುರುರಾಜ ಕರಜಗಿಯವರು ಒಂದು ಲೇಖನದಲ್ಲಿ ಉದ್ಗಾರ ತೆಗೆದಿದ್ದಾರೆ! 

ಕೆಲವು ಸ್ವಾರಸ್ಯಕರ ಘಟನೆಗಳೊಂದಿಗೆ ಈ ಲೇಖನವನ್ನು ಮುಗಿಸುವೆ.

ಮೂರು ವರ್ಷಗಳ ಕೆಳಗೆ 75 ದಾಟಿದ (ಒಬ್ಬರನ್ನು ಬಿಟ್ಟು) ಇಪ್ಪತ್ತೆರಡು ಹಳೆಯ ವಿದ್ಯಾರ್ಥಿಗಳು ಧಾರವಾಡದಲ್ಲಿ ಸೇರಿ ನಮ್ಮ ಶಾಲೆಗೆ ಹೋಗಿ ಹಳೆಯ ನೆನಪುಗಳನ್ನು ತಾಜಾ ಮಾಡಿಕೊಂಡೆವು. ಶಾಲಾ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಮೋಹನನಿಗೆ ’ಟೆನ್ಷನ್.’ ತನಗೆ ಏನೂ ನೆನಪಾಗುವದಿಲ್ಲ ಅಂತ ಬೆವರಿಳಿಯುತ್ತದೆ. ಪ್ರಶ್ನೆಪತ್ರಿಕೆಯನ್ನು ಹಂಚುತ್ತಿದ್ದ ಕುಲಕರ್ಣಿ ಮಾಸ್ತರರು ಆತನ ಬಿನ್ನು ಸವರುತ್ತ, ”ಡೋಂಟ್ ವರ್ರಿ; ಬಂದಷ್ಟು ಬರಿ!” ಅಂತ ಅರಿಪ್ರಾಸವನ್ನು (ಅರಿಸಮಾಸದಂತೆ, ಆಂಗ್ಲ-ಕನ್ನಡ ಭಾಷೆಯ ಕಲಬೆರಕೆ) ಜೋಡಿಸಿ ಹೇಳಿದ್ದನ್ನು ಒಬ್ಬರು ನೆನೆದಾಗ ಕೋಣೆಯ ತುಂಬ ನಗು.
ಶ್ಲೇಷಾಲಂಕಾರ, homonym ಗಳನ್ನು ಮೊದಲ ಬಾರಿ ನಾಡಗೀರ್ ಮಾಸ್ತರ್ ಕಲಿಸಿದ್ದು ನನಗೆ ಇಂದೂ ನೆನಪಿದೆ: The vicar told the sexton (ಚರ್ಚಿನ ಗಂಟೆಯನ್ನು ಬಾರಿಸುವವ) and he tolled the bell (ಬಾರಿಸಿದ). Who is going to bell the cat ಅನ್ನುವ ಪದಗುಚ್ಛದ ಅರ್ಥವನ್ನು ಅವರೇ ಕಲಿಸಿದ್ದು:'to undertake a very dangerous mission.' ಅದರ ಪ್ರಾತ್ಯಕ್ಷಿಕೆಯನ್ನೂ ಮಾಡಬೇಕಾದ ಪ್ರಸಂಗವೂ ಒಮ್ಮೆ ಒದಗಿ ಬಂದಿತ್ತು.

ಕತ್ತಲೆ-ಬೆಳಕು
Epitaph (ಗೋರಿ ಬರಹ) ಅಂದರೇನು ಅಂತ ಕಲಿಸುವಾಗ ಮಾಸ್ತರರು ಹೇಳಿದ’ಕಥೆ.’ ಶೋಕಗ್ರಸ್ತ ಪಾಶ್ಚಿಮಾತ್ಯ ವಿಧವೆಯೊಬ್ಬಳು ಪತಿಯ ಅಗಲುಕೆಯಿಂದ ತನ್ನ ಬದುಕನ್ನು ಆವರಿಸಿದ ಅಂಧಕಾರವನ್ನು ಸೂಚಿಸಲು ಚರ್ಚಿನ ಸೆಮೆಟ್ರಿಯಲ್ಲಿ ಕಲ್ಲಿನ ಮೇಲೆ ಕೆತ್ತಿಸಿದ್ದು: Since the demise of my husband, I'm left in utter darkness ಅಂತ. ಎರಡು ವರ್ಷಗಳ ನಂತರ ಚೇತರಿಸಿಕೊಂಡು ಪುನರ್ವಿವಾಹ ಆದಾಗ ಆ epitaph ಗೆ ಇನ್ನೊಂದು ಸಾಲು ಸೇರಿಸಿದಳಂತೆ: But now I have struck a match!
ಕ್ಷಮಾಪಣೆ ಕೇಳಲು 36 ವರ್ಷಗಳ ಕಾಲ ಕಾಯ್ದ ಪ್ರೀತಿಯ ವಿದ್ಯಾರ್ಥಿ!

’ತಪ್ಪು ಮಾಡುವದು ಸಹಜವೇ. ಆದರೆ ಅದನ್ನು ಒಪ್ಪಿಕೊಂಡು ಕ್ಷಮಾಪಣೆ ಬೇಡಲು ಸಿದ್ಧರಿರುವುದು ದೊಡ್ಡ ಗುಣ ಅಂತ ಅವರು ಕಲಿಸಿದರು. 1977ರಲ್ಲಿ ನಡೆದ ಒಂದು ಘಟನೆಯನ್ನು ನೆನೆದು ನನ್ನ ಸಹಪಾಠಿ ಅರುಣ ಬರೆದದ್ದನ್ನು ಇಲ್ಲಿ ಕೊಡುವೆ:
” 1960ರಲ್ಲಿ ಕನ್ನಡ ಹಾಗೂ ಇಂಗ್ಲಿಷ್ ವಿಷಯಗಳನ್ನು (ನಾಡಗೀರ್ ಮಾಸ್ತರರು) ಕಲಿಸುತ್ತಿದ್ದರು.ಆವಾಗ ಒಂದು ಅಹಿತಕರ ಘಟನೆ ನಡೆದು ನಮ್ಮ ಸಹಪಾಠಿಗಳಿಗೆ ಬೇಸರವಾಯಿತು. ಅವರೆಲ್ಲಾ ಸೇರಿ ನಾಡಗೀರ ಮಾಸ್ತರರು ನಮಗೆ ಕಲಿಸುವದು ಬೇಡ ಎಂದು ಅರ್ಜಿ ಬರೆದು ನಾಡಗೀರ ಮಾಸ್ತರರ ಮೇಜಿನ ಮೇಲೆ ಇಟ್ಟು ಬಂದರು. ಮರುದಿನ ವರ್ಗದಲ್ಲಿ ಎಲ್ಲರಿಗೂ ಬಲು ಭಯ. ಯಾಕೆಂದರೆ ಮಾಸ್ತರ ಸಿಟ್ಟಿಗೆ ಎಲ್ಲರೂ ಅಂಜುತ್ತಿದ್ದರು. ಆದರೆ ಮಾಸ್ತರರು ಏನೂ ಆಗಲಿಲ್ಲ ಎಂಬಂತೆ ಆ ದಿನದ ಪಾಠ ಮಾಡಿದರು. ಎಲ್ಲರಿಗೂ ಅಚ್ಚರಿ ಹಾಗೂ ನಿರಾಳ. ಎಲ್ಲರೂ ಈ ಘಟನೆಯನ್ನು ಮರೆತರು. (Who will bell the cat? ಅಂತ ಕೊನೆಗೆ ಆ ಚೀಟಿಯನ್ನು ಇಟ್ಟು ಬಂದಿದ್ದ ವಿದ್ಯಾರ್ಥಿ ಮಾತ್ರ ಆ ಅಪರಾಧವನ್ನು ಎಂದೂ ಮರೆತಿರಲಿಲ್ಲ. ಅದನ್ನು ಬಚ್ಚಿಟ್ಟಿದ್ದ ಆತನ ಎದೆಯಗೂಡಿನ ಭಾರ ಅವನಿಗೇ ಗೊತ್ತು!) ಮುಂದೆ 1997ರಲ್ಲಿ ಮಾಸ್ತರರಿಗೆ 82 ವರ್ಷ ತುಂಬಿದ ಪ್ರಯುಕ್ತ ಅವರಿಗೆ ವಿದ್ಯಾರ್ಥಿಗಳು ಸಹಸ್ರ ಚಂದ್ರ ದರ್ಶನ ಸಮಾರಂಭ ಏರ್ಪಡಿಸಿದ್ದರು. ಆ ಸಮಾರಂಭದಲ್ಲಿ ಭಾಗವಹಿಸಲೆಂದೇ ನಮ್ಮ ಇಬ್ಬರು ಸಹಪಾಠಿಗಳು ಇಂಗ್ಲೆಂಡ್ ನಿಂದ ಬಂದಿದ್ದರು. ಸಮಾರಂಭ ಮುಗಿದ ಮೇಲೆ ಗುರು-ಶಿಷ್ಯಂದಿರ ಸ್ನೇಹಕೂಟ ಒಂದು ಹೋಟೆಲ್ಲಿನಲ್ಲಿ ಏರ್ಪಾಡಾಗಿತ್ತು. ಹೋಟೆಲ್ ಧಾರವಾಡಕ್ಕೆ ಅವರು ಬಂದಾಗ ಇಲಿಯಾಗಿ ’ಬೆಕ್ಕಿಗೆ ಗಂಟೆ ಕಟ್ಟಿದ’ ಆ ಸಹಪಾಠಿ 36 ವರ್ಷಗಳ ಕೆಳಗೆ ತಾನೇ ಆ ಕಾಗದ ಇಟ್ಟಿದ್ದಕ್ಕೆ ಕ್ಷಮೆ ಬೇಡಿ ಎದೆ ಹಗುರು ಮಾಡಿಕೊಂಡ. ಆಗ ಅವರು ಉತ್ತರಿಸಿದ್ದು ಅತ್ಯಂತ ಮಾರ್ಮಿಕವಾಗಿತ್ತು: ”ಹೌದು, ಅದರ ಹಿಂದಿನ ಅಹಿತಕರ ವರ್ತನೆಗೆ ಕಾರಣನಾದ ... ಎಂಬ ಹುಡುಗನ ವರ್ತನೆ ಸಹಿಸದೆ ನಾನು ಅವನ ಕಪಾಳಕ್ಕೆ ಜೋರಾಗಿ ಹೊಡೆದೆ, ಅದರಿಂದ ಅವನ ಶ್ರವಣ ಶಕ್ತಿ ಕ್ಷೀಣಿಸಿತು. ನಿಮಗೆ ಸಿಟ್ಟು ಬಂದು ಅರ್ಜಿ ಬರೆದಿರಿ. ನಾನು ಸಿಟ್ಟಿನಿಂದ ಆ ರೀತಿ ಮಾಡಬಾರದಾಗಿತ್ತು. ಅವನಿಗೆ ನಾನು ಕ್ಷಮೆ ಕೇಳಲುತಯಾರಿದ್ದೇನೆ.” ಎಂದು ಅವರೂ ತಮ್ಮ ವ್ಯಥೆ ವ್ಯಕ್ತಪಡಿಸಿದರು. ಎಂಥ ದೊಡ್ಡ ಗುಣ!”
ಇಂಗ್ಲೆಂಡಿನಿಂದ ಸಮಾರಂಭಕ್ಕೆಂದು ಧಾರವಾಡಕ್ಕೆ ಹೋಗಿ ಕ್ಷಮಾಪಣೆ ಬೇಡಿದ ವಿದ್ಯಾರ್ಥಿಯೇ ಈ ಲೇಖನದ ಲೇಖಕ!
ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್, ಯು ಕೆ

ಆಕರ ಪುಸ್ತಕಗಳು: ೧.ವಾತ್ಸಲ್ಯ (1997) :ಎಸ್ ಜಿ ನಾಡಗೀರ ಅವರ ಅಭಿನಂದನಾ ಗ್ರಂಥ ಸಂ: ಡಾ ಕೆ ಹೆಚ್ ಕಟ್ಟಿ
 ೨: ವಿದ್ಯಾ ವಿಕಾಸ (2002)  ಲೇ:  ಪ್ರಿ. ಎಸ್ ಜಿ ಣಾಡಗೀರ
೩: ಅಪ್ಪನು ನನಗಿಷ್ಟ: (2021) ಸಂ: ಡಾ ಶರಣಮ್ಮ ಅ. ಗೋರೇಬಾಳ

*******************


(ಕರಾಳ) ರಹಸ್ಯಗಳ ಗೂಡು ಬ್ರಾಡ್ಸ್ ವರ್ತ್ -ಭಾಗ 2 ಶ್ರೀವತ್ಸ ದೇಸಾಯಿ

 

ಕಳೆದ ವಾರ ಪ್ರಕಟಿಸಿದ ರಹಸ್ಯಗಳ ಗೂಡು ಭಾಗ ೧ ರ ನಂತರ ಈ ವಾರ ಇದೇ ವಿಷಯದ ಬಗ್ಗೆ ಅದರಲ್ಲೂ ಭವ್ಯವಾದ ಹಿರಿಯ ಮನೆಯ ಮತ್ತು ಮನೆ ಒಡೆಯರ ಕರಾಳ ಇತಿಹಾಸವನ್ನು ಶ್ರೀವತ್ಸ ದೇಸಾಯಿ ಅವರು ಭಾಗ ಎರಡರಲ್ಲಿ ದಾಖಲಿಸಿದ್ದಾರೆ. ಒಂದು ಹಿನ್ನೋಟದಲ್ಲಿ ನೋಡಿದಾಗ ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯ, ಒಂದು ರಾಷ್ಟ್ರ, ಒಂದು ಸಂಸ್ಕೃತಿ, ಒಂದು ಬಣ್ಣ, ಒಂದು ಜಾತಿ ಮತ್ತು ಒಂದು ಧರ್ಮ ಇನ್ನೊಂದನ್ನು ಶೋಷಿಸುತ್ತ ಬಂದಿದೆ. ಮೇಲು-ಕೀಳು, ಶ್ರೇಷ್ಠ- ಕನಿಷ್ಠ ಎಂಬ ಭಾವನೆಗಳನ್ನು ಹುಟ್ಟುಹಾಕಿದೆ. ಈ ಶೋಷಣೆ, ದ್ವೇಷ, ದಬ್ಬಾಳಿಕೆ, ಅನ್ಯಾಯ ಪ್ರಪಂಚದ ಹಲವಾರು ನೆಲೆಗಳಲ್ಲಿ ನಮ್ಮ-ನಿಮ್ಮ ನಡುವೆ ಇಂದಿಗೂ ನಡೆಯುತ್ತಿದೆ. ಭೇದಗ್ರಹಣ, ಗುಂಪುಗಾರಿಕೆ, ನಮ್ಮವರು-ಅನ್ಯರು ಈ ಭಾವನೆಗಳು ಜೈವಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಗುಂಪಿನ, ಸಮುದಾಯದ ಸಂರಕ್ಷಣೆಗೆ ಪೂರಕವಾದದ್ದು ಎಂದು ಸಮಾಜ ಶಾಸ್ತ್ರ ಪರಿಗಣಿಸಿದ್ದರೂ, ಯಾವ ವಿಶ್ಲೇಷಣೆ ವಿವರಣೆ ಕೊಟ್ಟರೂ, ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ! ಅದು ಅನೈತಿಕ ನಿಲುವು. ಈ ವಿಭಜನೆಗಳನ್ನು ದಾಟಿ ಮೇಲೇರುವುದು ಸಭ್ಯತೆಯ, ನಾಗರೀಕತೆಯ ಮತ್ತು ವಿಕಾಸದ ಲಕ್ಷಣ. ಇತಿಹಾಸದಲ್ಲಿ ನಡೆದ ಹಳೆ ಆಕ್ರಮಣ, ತಪ್ಪು ಇವುಗಳ ನೆಪದಲ್ಲಿ ಅವುಗಳನ್ನು ಕೆದಕಿ ಈ ಇಪ್ಪತ್ತೊಂದನೇ ಶತಮಾನದಲ್ಲಿ ಇತ್ಯರ್ಥ ಮಾಡುವುದು ಕೂಡ ಅನೈತಿಕ. ವಿಶ್ವಮಾನವ, ವಿಶ್ವ ಭ್ರಾತೃತ್ವ ಇವುಗಳ ಚೌಕಟ್ಟಿನಲ್ಲಿ ಈ ಮೇಲೆ ಪ್ರಸ್ತಾಪಿಸಿದ ವಿಭಜನೆಗಳನ್ನು ಸಜ್ಜನರು,ಉದಾರಿಗಳು, ಪ್ರಗತಿಪರರು ಪ್ರಶ್ನಿಸಬೇಕಾಗಿದೆ ಮತ್ತು ತಿರಸ್ಕರಿಸಬೇಕಾಗಿದೆ. ಇದು ನಾಗರೀಕ ಸಮಾಜದ ಸಾಮಾಜಿಕ ಜವಾಬ್ದಾರಿ. ಮೌನ ಸಮ್ಮತಿಯ ಸೂಚಕ ಎಂಬ ಉಕ್ತಿಯನ್ನು ಕೇಳಿದ್ದೇವೆ. ಡಾ.ದೇಸಾಯಿ ಅವರ ಬರಹ ನಮ್ಮ ಸಂವೇದನೆಗಳನ್ನು ಎಚ್ಚರ ಗೊಳಿಸುವುದಲ್ಲದೆ, ಅರಿವನ್ನು ಹೆಚ್ಚಿಸಿದೆ. ಸೂಕ್ಷ್ಮ ಮತೀಯರು ಈ ವಿಚಾರವನ್ನು ಪ್ರಪಂಚದ ಇತರ ನೆಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇಟ್ಟು, ಒರೆ ಹಚ್ಚಿ ನೋಡಿ, ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
      -ಸಂಪಾದಕ

**********************************************************************************************

’ಸತ್ಯಂ ಬ್ರೂಯಾತ್, ಪ್ರಿಯಮ್ ಬ್ರೂಯಾತ್’. ಒಂದನೆಯ ಭಾಗದಲ್ಲಿ  ಬ್ರಾಡ್ಸ್ ವರ್ತ್ ಮನೆ, ತೋಟದ ಬಗ್ಗೆ ಥಳುಕಿನ ಸತ್ಯಗಾಥೆ ಓದಿದ ನಂತರ ಮೇಲೆ ಉದ್ಧರಿಸಿದ ಮನುಸಮೃತಿಯ ಎರಡನೆಯ ಪಾದಕ್ಕೆ ಬರಬೇಕಲ್ಲವೆ? ’ನ ಬ್ರೂಯಾತ್ ಸತ್ಯಮಪ್ರಿಯಂ!’ ಅಪ್ರಿಯವಾದದ್ದನ್ನೂ ಹೇಳಿದರೇನೇ ಬ್ಯಾಲನ್ಸ್ ಆಗುತ್ತದೆ. ಹೋದಸಲದ ಲೇಖನವನ್ನು ಓದಿದ ಕೆಲವರಿಗೆ ಬಿ ಬಿ ಸಿ ಯಲ್ಲಿ ಬಂದ ’ಆಂಟಿಕ್ ರೋಡ್ ಶೋ’ದಲ್ಲಿ ನೋಡಿದ ವಿವಿಧ grand country homes ಗಳು ನೆನಪಾದವಂತೆ. ನಿಜ, ಹಿಂದೊಮ್ಮೆ ಈ ದೇಶದಲ್ಲಿ 5,000 ಕ್ಕಿಂತ ಹೆಚ್ಚು ಇಂಥ ಭವ್ಯ ಮನೆಗಳಿದ್ದು ಕಾರಣಾಂತರಗಳಿಂದ ಈಗ ಅವುಗಳ ಸಂಖ್ಯೆ 3,000 ಕ್ಕೆ ಇಳಿದು ನಿಂತಿದೆ. ಇವುಗಳನ್ನು ನೋಡಿ ಆನಂದಿಸಿದ ಜನಸಾಮಾನ್ಯರಿಗೆ ಈ

ಬ್ರಾಡ್ಸ್ ವರ್ತ್ ಹಾಲ್

’ಮಾಂಡಲೀಕರು, ಪಾಳೇಗಾರರು (ಅವರಲ್ಲಿ ಕೆಲವರು ನೈಟ್(Kt), ಬಾರೊನೆಟ್(Bt), ಡ್ಯೂಕ್,  ಮಾರ್ಕಿಸ್ಸ್ ಅಂತೆಲ್ಲ ಟೈಟಲ್ ಹೊಂದಿದ ಮಾಲಕರು), ಹೇಗೆ ಸಿರಿವಂತರಾದರು ಅನ್ನುವ ಕುತೂಹಲವಿದ್ದರೂ ಅದನ್ನು ಇತ್ತೀಚೆಗೆ ಕೆದಕುವ ವರೆಗೆ ಗೌಪ್ಯವಾಗಿಯೇ ಇಡಲಾಗುತ್ತಿತ್ತು. ಈಗ ಆ ಕರಾಳ ಇತಿಹಾಸದ ಮೇಲೆ ಬೆಳಕು ಚೆಲ್ಲುವಾ. ಅದಕ್ಕೂ ಮೊದಲು ಅದರ ಹಿನ್ನೆಲೆಯನ್ನು ಅರಿತುಕೊಳ್ಳೋಣ.

 ಒಂದು ಕಾಲಕ್ಕೆ ಸೂರ್ಯಾಸ್ತ ಕಾಣದ ಸಾಮ್ರಾಜ್ಯಶಾಹಿಯಾಗಿದ್ದ ಬ್ರಿಟನ್ ದೇಶದವರು ಬೇರೆ ಕೆಲವು ವಸಹಾತುಶಾಹಿ ಯೂರೋಪಿಯನ್  ದೇಶದ ಪ್ರಜೆಗಳಂತೆ ಹೆಚ್ಚು ಕಡಿಮೆ ಹದಿನಾರನೆಯ ಶತಮಾನದಿಂದಲೂ ಆಫ್ರಿಕನ್ನರನ್ನು ’ಬೇಟೆಯಾಡಿ’ ಗುಲಾಮರನ್ನಾಗಿ ಹಿಡಿದೊಯ್ದು ’ನ್ಯೂ ವರ್ಲ್ಡ್’ ಅಮೇರಿಕೆ, ಮತ್ತು ವೆಸ್ಟ್ ಇಂಡೀಸ್ ದ್ವೀಪಗಳಿಗೆ ಕೊಂಡೊಯ್ದು ಮಾರುವ ವ್ಯಾಪಾರದಲ್ಲಿ ಆಳವಾಗಿ ತೊಡಗಿದ್ದರು. ದಾಖಲೆಗಳ ಪ್ರಕಾರ ಆ ಎರಡೂವರೆ ಶತಮಾನದ ಅವಧಿಯಲ್ಲಿ ಹೆಚ್ಚು ಕಡಿಮೆ 3,000,000 ಗುಲಾಮರನ್ನು ’ಕಪ್ಪು ಖಂಡ’ದಿಂದ ಅಮೇರಿಕೆಗಳಿಗೆ ಸಾಗಿಸಲಾಯಿತು. ಅದರಿಂದ ಉದ್ಭವಿಸಿದ ದುಡ್ಡು-ದೌಲತ್ತು, ವರ್ಚಸ್ಸು ಮತ್ತು ರಾಜಕಾರಣದಲ್ಲಿ  ಯಶಸ್ಸನ್ನು ಗಳಿಸಿದವರು ಅಗಣ್ಯರು. ಈ ದೇಶದ ಉದ್ದಗಲದ ಮಹಾನಗರಗಳಲ್ಲಿ ಅದರ ಕುರುಹುಗಳಿವೆ; ಇಮಾರತಿಗಳಿವೆ, ವಿದ್ಯಾ ಸಂಸ್ಥೆಗಳಿವೆ, ದತ್ತಿ ಪಾರಿತೋಷಕಗಳಿವೆ; ’ಮಹಾ ದಾನಿಗಳ’ ಪುತ್ಥಳಿಗಳಿವೆ. ಅಥವಾ ಇದ್ದವು. ಕೆಲವು ಇತ್ತೀಚಿನ ಕಾಲದಲ್ಲಿ ನೀರುಪಾಲಾದದ್ದು ಸರ್ವ ವಿದಿತ. ದಾಸ್ಯದ ವಿರುದ್ಧ ಪ್ರತಿಭಟನೆಗಳು ಬೆಳೆಯಲಾರಂಭಿಸಿ ತಡವಾಗಿಯಾದರೂ 1833 ರಲ್ಲಿ ಗುಲಾಮಗಿರಿ ನಿಷೇಧಿಸುವ ಕಾನೂನು (Slavery Abolition Act 1833) ಜಾರಿಗೆ ಬಂದಿತು.

ಪೀಟರ್ ಥೆಲ್ಲುಸನ್ ಮತ್ತು ಗುಲಾಮರ ಸಾಗಾಣಿಕೆ

ಗುಲಾಮಗಿರಿ ನಿರ್ಮೂಲನ ಆಂದೋಲನದ ದ್ವಿಶತಮಾನದ ವರ್ಧಂತಿಯ ಕಾಲದಲ್ಲಿ ಈ ವಿಷಯದಲ್ಲಿ ಆಸ್ಥೆ ಬೆಳೆಯಿತು. (ನಂತರದ Black Lives Matter ಆಂದೋಲನ ಇಲ್ಲಿ ಪ್ರಸ್ತುತ ಅಲ್ಲ). ಅದಕ್ಕೂ ಮೊದಲು ಜನರಲ್ಲಿ ಈ ವಿಷಯದಲ್ಲಿ ಹೆಚ್ಚಿನ ತಿಳಿವಳಿಕೆಯನ್ನು ಬಿಂಬಿಸಲು ಈ ನಾಡಿನ ಎರಡು ಪ್ರಮುಖ ದತ್ತಿ ಸಂಸ್ಥೆಗಳದ ಇಂಗ್ಲಿಷ್ ಹೆರಿಟೇಜ್(EH)  ಮತ್ತು ನ್ಯಾಷನಲ್ ಟ್ರಸ್ಟ್(NT)) ತಮ್ಮ ಆಡಳಿತದಲ್ಲಿರುವ ಆದರೆ ಹಿಂದೆ ಖಾಸಗಿ ಸ್ವಾಮಿತ್ವದಲ್ಲಿದ್ದ ಈ ’ಅರಮನೆ’ಗಳ ಹಿಂದಿನ ಇತಿಹಾಸದ ಬಗ್ಗೆ ಆಳವಾದ ಅಭ್ಯಾಸ ಮಾಡಲು ನಿರ್ಧರಿಸಿದವು. ಇತಿಹಾಸಕರರನ್ನು ಸಂಪರ್ಕಿಸಿದರು; ಸಂಶೋಧಕರನ್ನು ಆಹ್ವಾನಿಸಿದರು. ಅದರ ಫಲಶ್ರುತಿ 2009 ರಲ್ಲಿ ನಡೆದ ಮಹತ್ವಪೂರ್ಣ The Slavery and the British Country House’ Conference. (ಆ ವರದಿಯ ಕೊಂಡಿ ಲೇಖನದ ಕೆಳಗೆ ಇದೆ). ಆನಂತರ ಅವೆರಡೂ ಸಂಸ್ಥೆಗಳು ಆ ಸಂಕೀರಣದಲ್ಲಿ ಮಂಡಿಸಿದ ಅಧ್ಯಯನಗಳನ್ನು ಪ್ರಕಟಿಸಿವೆ (ಈ ಲೇಖನದ ಕೊನೆಯಲ್ಲಿಯ ಕೊಂಡಿ ನೋಡಿ). ಆಗ ಬಹಿರಂಗವಾದ ಸತ್ಯ ಜನರಿಗೆ ಅಚ್ಚರಿಯುಂಟು ಮಾಡಿದರೂ ಅವುಗಳು ಅತ್ಯಂತ ಅನಿರೀಕ್ಷಿತವೇನೂ ಆಗಿರಲಿಲ್ಲ. ಆ ವರದಿಯಲ್ಲಿ ಬ್ರಾಡ್ಸ್ ವರ್ತ್ ಮನೆಯ ಹೆಸರು ಕಂಡಿರಬೇಕು ಎಂದು ನೀವು ಈಗಾಗಲೇ ಊಹಿಸಿರಬಹುದು. ನಿಜ. ಇದೊಂದೇ ಅಲ್ಲ ಇಂಗ್ಲಿಷ್ ಹೆರಿಟೇಜ್ ನ ನಿರ್ವಹಣೆಯಲ್ಲಿರುವ 33 ರಲ್ಲಿ 26 ’ಮನೆ’ಗಳಲ್ಲಿ, ಮತ್ತು ನ್ಯಾಷನಲ್ ಟ್ರಸ್ಟ್(NT) ದ ಕೆಳಗಿನ ಮೂರರಲ್ಲೊಂದು ಮನೆಗಳು (93/300) ಈ ’ಕಳಂಕ’ದಿಂದ ಲೇಪಿತವಾಗಿದ್ದವು ಅಥವಾ ಪರೋಕ್ಷ ಸಂಬಂಧ ಹೊಂದಿದ್ದವು! ಈ ಸಂಬಂಧ ಕೆಲವು ಕಡೆಗಷ್ಟೇ ಢಾಲಾಗಿ ಕಂಡರೆ ಇನ್ನು ಕೆಲವು ಮನೆತನಗಳು ತಮ್ಮ ’ಹೇಯ’ ದೌಲತ್ತನ್ನು ಮರೆಮಾಚಿಸಿ ಚಾಣಾಕ್ಷತೆಯಿಂದ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಸಿ, ಅನೇಕ ರೀತಿಯ ಚರಾಚರ ಆಸ್ತಿಗಳನ್ನು ಗಳಿಸಿದ್ದರು. ಆ ವೈಭವವನ್ನೇ ಇಂದೂ ನೋಡ ಬಹುದು.ಕೆಲವರು ರಾಜಕಾಣದಲ್ಲಿ ಧುಮುಕಿ ಮ್ರಧಾನ ಮಂತ್ರಿಗಳಾದರು. (ಉದಾ:ಇಲ್ಲಿಂದ ಅನತಿದೂರದ ಬಾಲ್ಸೋವರ್ ಕಾಸಲ್ಲಿನ (Balsover Castle) ಡ್ಯೂಕ್ ಆಫ್ ಪೋರ್ಟ್ ಲಂಡ್).  ಬ್ರಾಡ್ಸ್ ವರ್ತ್ ಕೊಂಡ ಪೀಟರ್ ಥೆಲ್ಲಿಸನ್ ಬ್ಯಾಂಕ್ ಆಫ್ ಇಂಗ್ಲಂಡಿನ ಡೈರೆಕ್ಟರ್ ಆಗಿದ್ದರೂ ವಲಸಿಗನಾಗಿದ್ದರಿಂದ ಸ್ವತಃ ತನಗೆ ಪಾರ್ಲಿಮೆಂಟಿನಲ್ಲಿ ಕೂಡುವ ಹಕ್ಕಿರದಿದ್ದರೂ ಆತನ ಮಗನಿಗೆ (ಪೀಟರ್ ಐಸಾಕ್ ಥೆಲ್ಲಿಸನ್) ಹಣ ಮತ್ತು ವರ್ಚಸ್ಸಿನಿಂದ ಬ್ಯಾರನ್ ರೆಂಡಲ್ ಶಮ್ ಅನ್ನುವ ಆನುವಂಶಿಕ ಪಿಯರೇಜ್ ದೊರಕಿತು. ಈ ತರದ ಪರಿವರ್ತನೆ (gentrification)     ತಲೆತಲಾಂತರದಿಂದ ನಡೆಯುತ್ತಲೇ ಬಂದಿದೆ. ವಿಪರ್ಯಾಸವೆಂದರೆ ಬ್ರಾಡ್ಸ್ ವರ್ತ್ ಮನೆತನದ ಕೋಟ್ ಆಫ್ ಆರ್ಮ್ಸ್ ಕೆಳಗಿನ ಧ್ಯೇಯ ವಾಕ್ಯ: Lebore et Honore: ಪರಿಶ್ರಮದಿಂದ ಗೌರವ!  

ಮರಗಳು ಸಂಗೀತವ ಹಾಡುತಿವೆ! (Songs of Mahogany)

ಹಿಂದಿನ ಲೇಖನದಲ್ಲಿ ಬ್ರಾಡ್ಸ್ ವರ್ತ್ ಮನೆಯನ್ನು ಅಲಂಕರಿಸಿದ ಮಹೋಗನಿ ಮರದ ಆಕರ್ಷಕ ಬಾಗಿಲು, ಹಿಡಿಕೆ, ಸ್ಟೇರ್ಕೇಸ್, balustrade  ಬಗ್ಗೆ ಬರೆದಿದ್ದನ್ನು ಓದಿರ ಬಹುದು ಮತ್ತು ನೋಡಿರಬಹುದು. ಮಹೋಗನಿ ನಮಗೆಲ್ಲ ಚಿರಪರಿಚಿತವಾದ ತೇಗನ್ನು ಹೋಲುತ್ತದೆ. ಅದು ಗಟ್ಟಿ, ಮರಗೆಲಸಕ್ಕೆ ಅನುಕೂಲ ಮತ್ತು ಬೆಲೆಬಾಳುವಂಥದು. ಪಶ್ಚಿಮ ಆಫ್ರಿಕಾ ಮತ್ತು ಸೆಂಟ್ರಲ್ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ದ  ಜಮೈಕಾಗಳಲ್ಲಿ  ಬೆಳೆಯುವ ಈ ಮರ ಮೇಲಿನ ಎರಡು ಬ್ರಿಟಿಶರ ಆಧಿಪತ್ಯದಲ್ಲಿದ್ದ ಭಾಗಗಳಲ್ಲಿ ವಿಪುಲವಾಗಿ ದೊರಕುತ್ತಿದ್ದರಿಂದ ಮತ್ತು ಅದನ್ನು ಕಡಿದು ಸಾಗಿಸಲು ಗುಲಾಮರ ’ತೋಳುಬಲ’ ಇದ್ದುದರಿಂದ ಅದರ ಆಮದು ಬ್ರಿಟಿಶ್ ವಸಹಾತುಗಳಲ್ಲೆಲ್ಲ ಬೆಳೆದದ್ದರಲ್ಲಿ ಆಶ್ಚರ್ಯವಿಲ್ಲ.

ಇಂದು ನೀವು ಬ್ರಾಡ್ಸ್ ವರ್ತಿಗೆ ಭೇಟಿ ಕೊಟ್ಟರೆ ಅಲ್ಲಲ್ಲಿ ಮಲಿಕಾ ಬುಕರ್ (ಚಿತ್ರ) ಎನ್ನುವ ಗಯಾನಾ-ಗ್ರೆನೇಡಾ ಮೂಲದ ಇಂಗ್ಲಿಷ್ ಕವಯಿತ್ರಿಯ ಕವನಗಳ ಪ್ರದರ್ಶನವನ್ನು ನೋಡಬಹುದು (ಈ ಪ್ರದರ್ಶನ ನವೆಂಬರ್ ವರೆಗೆ ಅಷ್ಟೇ). ಆಕೆ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಕ್ರಿಯೇಟಿವ್ ರೈಟಿಂಗ್ ವಿಭಾಗದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿ.  ವಿಶಾಲವಾದ ಡೈನಿಂಗ್ ಟೇಬಲ್ ಹೊದಿಕೆಯ ಮೇಲೆ ಆಕೆಯ ಕವನದ (ಶೀರ್ಷಿಕೆ ಮೇಲೆ ಇದೆ) ಮುದ್ರಿತ ಸಾಲುಗಳು ಇವು:

  ”Speak of Mahogany. Speak

of the original people of the land!

And think of  bodies/ bodies/ blood

black …blessed …bones..back broad   broken branches/

broken bough/  brown/   bleed/ balsam/  balm/  breathless

Here is a space of interruption,
where hands slap wooden surfaces
for luck and palms lick wood for praise.”

ತೆರೆಯದ ಬಾಗಿಲು!

 ಬ್ರಾಡ್ಸ್ ವರ್ತ್ಆಸ್ತಿಯನ್ನು ಕೊಳ್ಳುವ ಮೊದಲು ಬ್ಯಾಂಕರ್ ಪೀಟರ್ ಥೆಲ್ಲುಸನ್ ಮತ್ತು ಅವನ ಸಹಯೋಗಿಗಳು ಗುಲಾಮರು ಮತ್ತು ಅದಕ್ಕೆ ಸಂಬಧ ಪಟ್ಟ ಸರಕುಗಳ ಸಾಗಾಣಿಕೆಯ ವ್ಯಾಪಾರಕ್ಕೆಂದು ಎರಡು ಹಡಗುಗಳನ್ನು ಕೊಂಡಿದ್ದರು. ಒಂದರ ಹೆಸರು ”ಲಾಟರಿ” ಮತ್ತು ಇನ್ನೊಂದು ”ಲಿಬರ್ಟಿ”(ಎಂಥ ವಿಪರ್ಯಾಸ!). ಇತರ ವ್ಯಾಪರಿಗಳು ಇವರಿಂದ ಸಾಲ ತೆಗೆದುಕೊಂಡಿರುತ್ತಿದ್ದರು. ಗ್ರನಾಡಾ ಮತ್ತು ಬೇರೆ ದ್ವೀಪಗಳ ಪ್ಲಾಂಟೇಶನ್ ವ್ಯವಹಾರದಲ್ಲಿ ತೊಂದರೆಯಾಗಿ ಸಾಲ ತೀರಿಸಲು ತಪ್ಪಿದರೆ, ಇನ್ಶೂರನ್ಸ್ ಹಣದಿಂದ ಶ್ರೀಮಂತರಾಗುತ್ತಿದ್ದರು. ಅದಲ್ಲದೆ ಥೆಲುಸ್ಸನ್ ಬೀಡ್ಸ್ (ಆಫ್ರಿಕನ್ ಮಣಿಗಳು), ಗುಲಾಮರು ತಯಾರಿಸಿದ ರಮ್ (ಮದ್ಯ), ತನ್ನದೇ ಸಕ್ಕರೆ ರಿಫೈನರಿ ಮುಂತಾದ ಎಲ್ಲವ್ಯಾಪಾರಗಳು ಅಪಾರ ಸಂಪತ್ತನ್ನು ತಂದದ್ದರಲ್ಲಿ ಆಶ್ಚರ್ಯವಿಲ್ಲ. ಆತ ಸ್ವತಃ ಗ್ರೆನಾಡಾದಲ್ಲಿ ಕಾಲಿಟ್ಟಿರಲಿಕ್ಕಿಲ್ಲ. ಅನೇಕರಂತೆ ಅನುಪಸ್ಥಿತ ಲ್ಯಾಂಡ್ ಲಾರ್ಡ್ಗಳಲ್ಲಿ ಪೀಟರ್ ಸಹ ಒಬ್ಬನು! ಬ್ರಾಡ್ಸ್ ವರ್ತ್ ಮನೆಯ ದಿವಾನಖಾನೆಯಲ್ಲಿ ಅಲಂಕಾರಕ್ಕೆ ಇಟ್ಟಂಥ ಕಂಪು -ಕಂದು ಬಣ್ಣದ ಮಹೋಗನಿಯ ತೆರೆಯದ ಬಾಗಿಲು ಇದ್ದಂತೆ! 1833 ರಲ್ಲಿ ಗುಲಾಮಗಿರಿಗೆ ಅಂತಿಮ ಕಹಳೆ ಊದಿಯಾದ ಮೇಲೆ ಇಂಥ ಭವ್ಯ ಎಸ್ಟೇಟಿನ ಮಾಲಕರ  ಮನೆತನದ ಜೀತದಾಳಾಗಿ ಅನೇಕರು ಅವರನ್ನು ಅವಲಂಬಿಸಿದ್ದುದು ಸತ್ಯ. ಸರಕಾರ ಗುಲಾಮಗಿರಿ ನಿಂತ ಮೇಲೆ ’ನಷ್ಟ ಪರಿಹಾರಕ್ಕೆ’ 20 ಮಿಲಿಯನ್ ಪೌಂಡುಗಳನ್ನು ಬದಿಗಿಟ್ಟಿತು. ಅದು ಈಗಿನ ಲೆಕ್ಕದಲ್ಲಿ 16.5 ಬಿಲಿಯನ್! 100 ಮನೆಮಾಲಕರು ಅರ್ಜಿ ಸಲ್ಲಿಸಿದ 100 ಜನರ ಯಾದಿಯಲ್ಲಿ ಥೆಲುಸನ್ ಹೆಸರು ಮಾತ್ರ ಇಲ್ಲ!

ಇತ್ತೀಚಿನ ವರೆಗೆ ಮೇಲು ನೋಟಕ್ಕೆ ಆತ ಗುಲಾಮಗಿರಿಯಿಂದ ಲಾಭಪಡೆದನೆಂಬ ವಿಷಯ ಎಷ್ಟೋ ತಲೆಮಾರುಗಳ ವರೆಗೆ ರಹಸ್ಯವಾಗಿಯೇ ಉಳಿದಿತ್ತು!  ಮುಖವಾಡದ ಹಿಂದೆ ಏನಿದೆಯೋ!

ಎಲ್ಲಿಂದ ಬಂತು ಮಹೋಗನಿ?

ಮೆಕ್ಸಿಕೋದ ದಕ್ಷಿಣದ ಆಗಿನ ಬ್ರಿಟಿಶ್ ಹೊಂಡುರಾಸ್  (ಈಗಿನ ಬೆಲೀಜ್ ದೇಶದ)”ಮಸ್ಕಿಟೋ ಬೇ’ ಪ್ರದೇಶದಲ್ಲಿ ಬೆಳೆದ ಉತ್ತುಂಗ ಮಹೋಗನಿ ಮರಗಳನ್ನು ಪಶ್ಚಿಮ ಆಫ್ರಿಕದ ಇಬೋ ಮತ್ತು ಯರುಬಾ ಎನ್ನುವ ಬುಡಕಟ್ಟು ಜನಾಂಗದವರು ಕಡಿಯುತ್ತಿದ್ದರು. ತಮ್ಮ ಊರಲ್ಲಿಯೂ ಇದೇ ತರದ ಖಯಾ ಮರಗಳಿಗೆ ’ಮೊಗಾನ್ವೋ’ (‘m’oganwo’) ಅಂತ ಕರೆಯುತ್ತಿದ್ದರಂತೆ. ಅದೇ ಮಹೋಗನಿ ಆಯಿತು ಅಂತ ಒಂದು ವಾದ. ಗುಲಾಮರು ಮರಗಳನ್ನು ಕೊಡಲಿಯನ್ನು ಪಯೋಗಿಸಿ ಕೈಯಿಂದಲೆ ಕಡಿಯುತ್ತಿದ್ದರು. ಮರದ ಬೊಡ್ಡೆಯನ್ನು ತಟ್ಟಿ, ಗುಡ್ ಲಕ್ಕಿಗೆಂದು ಉಗುಳು ಹಚ್ಚಿದ ಅಂಗೈಯಿಂದ ಅದನ್ನು ಸವರಿ, ಮರವನ್ನು ಕಡಿದು ಕೆಡವಿ, ಉರಿಳಿಸುತ್ತ  ನದಿಯಲ್ಲಿ ತೇಲಿಬಿಡುತ್ತಿದ್ದರು. ಆಚೆಯ ತುದಿಯಲ್ಲಿದ್ದ ಸಾ’ ಮಿಲ್ಲಿನಲ್ಲಿ  ಇನ್ನೊಬ್ಬ ಗುಲಾಮ -ಆತನ ಎದೆಯ ಮೇಲೆ ಬರೆಕೊಟ್ಟು ಉಬ್ಬಿದ ದಪ್ಪ ಕಲೆ ಬಿದ್ದ ಒಡೆಯನ ಅಂಕಿತ -ತಲೆಬಗ್ಗಿಸಿ ಪ್ರಾರ್ಥನೆ ಮಾಡಿ ಕ್ಷಮೆ ಕೇಳಿ ಕೊಯ್ಯು ಮರದ ಹಲಗೆಗಳನ್ನು ಮಾಡುತ್ತಾನೆ. ಕೊನೆಯ ಹಂತದಲ್ಲಿ ಕನ್ನಡಿಯಂತೆ ಮಿಂಚಿ ಎಲ್ಲರ ಕಣ್ಣ ಸೂರೆಗೊಳ್ಳುವ ಕೆಂಪು-ಕಪ್ಪು ಪಾಲಿಶ್ ತಿಕ್ಕಿ ಉಜ್ಜಿದರೆ ತನ್ನ ಮುಖವೇ ಕಾಣಬೇಕು. ಅದನ್ನೇ ಚಾರ್ಲ್ ಡಿಕಿನ್ಸ್ ತನ್ನ ಶಬ್ದಗಳಲ್ಲಿ ಹೇಳಿದ್ದು: ”the varnished wood reflected in the depth of its grain, through all its polish, the hue of the wretched slaves.”  

ಅದೇ ಭಾವವನ್ನು ಆ ಕರಿಯ ಕವಯಿತ್ರಿ (ಮಲಿಕಾ ಬುಕರ್) ತನ್ನ ಮನ ಕಲುಕುವ ಕವನದ ಸಾಲುಗಳಲ್ಲಿ ಹೇಳಿದ್ದಾಳೆ:

In Jamaica in the big house, the house girl is on her knees

polishing the wood floor with coconut oil and orange halves.

ಬೆನ್ನ ಮೇಲೆ ಚಾಟೆಯೇಟಿನ ಕಲೆಗಳುಳ್ಳ ಗುಲಾಮ

In England servants kneel with linseed and brick dust,

worshiping this majestic red, genuflecting.

In the kitchen cook prepares the tea tray for Master. It too

is fancy wood. She walks through the house to deliver

to a man hunched over a desk shaping his will. Now think of Brodsworth, …

ಆ ಕುಖ್ಯಾತ ಉಯಿಲು!

ಪೀಟರ್ ಥೆಲ್ಲುಸನ್ ಸ್ವತಃ ಡೋಂಕಾಸ್ಟರಿನ ಈ ಮನೆಯಲ್ಲಿ ವಾಸ ಮಾಡಿರಲಿಲ್ಲ. ಈ ಮನೆಯನ್ನು ಆತನ ಮೊಮ್ಮಗ (ಒಂದನೆಯ ಭಾಗದಲ್ಲಿ ಹೇಳಿದಂತೆ) 1860 ರಲ್ಲಿ ಚಾರ್ಲ್ಸ್ ಸಾಬಿನ್ ಕಟ್ಟಿಸಿದ. ಆತನ ಅಜ್ಜ ಪೀಟರ್ 1797ರಲ್ಲಿ ತೀರಿಕೊಳ್ಳುವ ಮೊದಲು ಮಾಡಿದ ವೈಶಿಷ್ಠ್ಯಪೂರ್ನ ಮೃತ್ಯುಪತ್ರ ಇತಿಹಾಸವನ್ನೇ ಮಾಡಿತು. ಆಗ ಆತನ ವಾರ್ಷಿಕ ರಿಯಲ್ ಎಸ್ಟೇಟ್ ಆಸ್ತಿ £5000 ದಷ್ಟಿತ್ತು. ಅದಲ್ಲದೆ ವೈಯಕ್ತಿಕ ಎಸ್ಟೇಟ್ ಆಗಿನ ಆರು ಲಕ್ಷ ಪೌಂಡುಗಳಿಗೆ ಟ್ರಸ್ಟೀಗಳನ್ನು ನೇಮಿಸಿ ಅವೆಲ್ಲಕ್ಕೂ ಒಂದು ವಿಚಿತ್ರ ’ಅಕ್ಯೂಮ್ಯುಲೇಷನ್ ಕ್ಲಾಸ್’ ಹಾಕಿ ಇಟ್ಟ. ಅದರ ಪ್ರಕಾರ ”ಆತನ ಆಸ್ತಿಯನ್ನು ಎಲ್ಲಿಯವರೆಗೆ ಬೆಳೆಯುವಂತೆ ತೊಡಗಿಸಬೇಕೆಂದರೆ ತನ್ನ ಮರಣದ ಸಮಯದಲ್ಲಿ ಬದುಕಿರುವ ಮೊಮ್ಮಕ್ಕಕಳ ಕೊನೆಯಗಂಡು ಸಂತತಿ ಬದುಕಿರುವವರೆಗೆ! ಆವರೆಗೆ ಅದು ಆಗಿನ ಕಾಲದ ಒಂದೂವರೆ ಕೋಟಿ ಪೌಂಡುಗಳಷ್ಟು ಆಗಿರಬಹುದಾಗಿದ್ದು ಅದನ್ನು ಅವರಿಗೆ ಹಂಚ ಬೇಕು” ಎಂದು. ಹಿಂದೆಂದೂ ಈ ತರದ ಉಯಿಲನ್ನು ಕಂಡಿರಲಿಲ್ಲ. ಅದನ್ನು ಆತನ ಹೆಂಡತಿ ಮಕ್ಕಳು ಪ್ರಶ್ನಿಸಲಾಗಿ ಟ್ರಸ್ಟುಗಳಿಗೆಂದೇ ಮೀಸಲಾಗಿದ್ದ  ಚಾನ್ಸರಿ ಕೋರ್ಟಿಗೆ ಬಗೆ ಹರಿಸಲು ತಲೆಬೇನೆಯಾಗಿ ಹೋಯಿತು. ಕೊನೆಗೆ ಮುಂದೆ ಇಂಥ ಮೃತ್ಯು ಪತ್ರಗಳು ಬರಬಾರದೆಂದು ’Thelluson Act’ ಎನ್ನುವ ಹೊಸ ಕಾನೂನೇ ಪಾಸು ಮಾಡಬೇಕಾಯಿತು! ಎಂದಿನಂತೆ ಇಂಥ ವ್ಯಾಜ್ಯಗಳು ಮುಗಿಯದೆ ವರ್ಷಾನುಗಟ್ಟಲೆ ಕೋರ್ಟ್ ಮೆಟ್ಟಲು ಹತ್ತಿಸಿದ ಬಗೆಹರಿಸಿ ಲಾಯರು, ಕೋರ್ಟಿನ ಖರ್ಚು, ಫೀಸ್ ಗಳನ್ನು ಕಳೆದ ನಂತರ ’ಗೆದ್ದ’ ಫಲಾನುಭವಿಗಳಿಗೆ (beneficiaries) ದೊರಕಿದ್ದು ತಮ್ಮ ಮೊದಲಿನ ವರ್ಷಾಸನಕ್ಕಿಂತ ಏನೂ ಹೆಚ್ಚಾಗಿರಲಿಲ್ಲ! ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ! ಈ ಕೇಸನ್ನು ಆಧರಿಸಿಯೇ ಚಾರ್ಲ್ಸ್ ಡಿಕೆನ್ಸ್ ’ಬ್ಲೀಕ್ ಹೌಸ್’ (Bleak House) ಎನ್ನುವ ಕಥೆ ಬರೆದನೆಂದು ಪ್ರತೀತಿ. ಕೆಲವರು ಇದನ್ನು ಒಪ್ಪ್ದದಿದ್ದರೂ ಕೆಂಟ್ ಪ್ರಾಂತದ ಬ್ರಾಡ್ಸ್ಟೇರ್ಸ್ ಎನ್ನುವ ಊರಲ್ಲಿಯ ಆ ಹೆಸರಿನ ಮನೆಗೂ ಆ ಕಾದಂಬರಿಗೂ ಏನೂ ಸಂಬಂಧವಿಲ್ಲ ಅನ್ನುತ್ತಾರೆ, ಅಲ್ಲಿ ಕುಳಿತು ಆ ಕಥೆಯನ್ನು ಬರೆದ ಎನ್ನುವದನ್ನು ಬಿಟ್ಟರೆ.

ನೋವು-ನಲಿವುಗಳನ್ನು ಹಾಡುವ ಕಿರುಸ್ತಂಭ 

ಥೆಲ್ಲುಸ್ಸನ್ ಮನೆಯ ಹಿಂದಿನ ಗ್ರೋಟೊದಲ್ಲಿ (ಭಾಗ -೧ ನೋಡಿರಿ) ಟಾರ್ಗೆಟ್ ಹೌಸ್ ಎದುರುಗಡೆ ತೋಟದಲ್ಲಿ ಬಟನ್ ಒತ್ತಿದರೆ  ಒಂದು ಮರದ ಕಿರುಸ್ತಂಭದಿಂದ ಎರಡು ಧ್ವನಿಮುದ್ರಿಕೆಗಳನ್ನು ಕೇಳಬಹುದು. ಒಂದರಲ್ಲಿ  ಗ್ರೆನಾಡಾದಾಮೀಪದ ದ್ವೀಪದಲ್ಲಿ ಪ್ರಚಲಿತವಿರುವ ಕರಿಯಾಕೋ ಡ್ರಮ್ ಮತ್ತು ನೃತ್ಯದ ಸಂಗೀತ ಕೇಳಬರುತ್ತದೆ. ಇನ್ನೊಂದರಲ್ಲಿ  ಪೀಟರ್ ಥೆಲ್ಲುಸನ್ ಸಾಲದ ಕಾಗದಪತ್ರದಲ್ಲಿ ನಮೂದಿಸಿದ ಗ್ರೆನೇಡಾದ ಬಕೋಲೆಯ (Bacolet Plantation, 1772) 101 ಅಫ್ರಿಕನ್ ಗುಲಾಮರ ಹೆಸರುಗಳನ್ನು ಇವೆಟ್ ಫಿಲ್ಬರ್ಟ್ ಓದುವದನ್ನು ಕೇಳಬಹುದು. ಸುಂದರ ಉದ್ಯಾನದಲ್ಲಿ ಮೈಮರೆತು ಆನಂದಿಸುವ ಪ್ರೇಕ್ಷಕರಿಗೆ ಅದರಲ್ಲಡಗಿದ ರಹಸ್ಯದ ಅರಿವೇ ಇರಲಾರದು. (ಲೇಖನದ ಕೊನೆಯಲ್ಲಿಯ ವಿಡಿಯೋವನ್ನು ನೋಡಿರಿ).

ಈಶಾವಾಸ್ಯಮಿದಂ ಸರ್ವಂ … ಮಾ ಗೃಧ ಕಸ್ಯಸ್ವಿದ್ಧನಂ

ಕೊನೆಯ ಮಾತು. ಈ ಎರಡು ಲೇಖನಗಳಲ್ಲಿ ಒಂದು ಕುಟುಂಬ ತಲೆತಲಾಂತರಗಳಿಂದ ವಾಸಮಾಡಿದ ಸುಂದರ ಮನೆ, ತೋಟಗಳನ್ನು ನೋಡಿದ್ದಾಯಿತು. ಆ ಸಂಪತ್ತಿನ ಹಿಂದಿನ ರಹಸ್ಯವನ್ನೂ ತಿಳಿದೆವು. ಇಲ್ಲಿ ಈಶಾವಾಸ್ಯ ಉಪನಿಷತ್ತಿನ ಮೊದಲ ಶ್ಲೋಕದ ಉಲ್ಲೇಖದಿಂದ ಇದನ್ನು ಮುಗಿಸುವೆ. ಅದರ ಸಂಕ್ಷಿಪ್ತ ತಾತ್ಪರ್ಯ ಹೀಗಿದೆ: ’ಈ ಜಗತ್ತೆಲ್ಲವೂ ಭಗವಂತನ ವಾಸಕ್ಕಾಗಿಯೇ ಇದೆ. ನಮಗೆ ದೊರಕಿದ್ದನ್ನು ತ್ಯಾಗಬುದ್ಧಿಯಿಂದ ಸ್ವೀಕರಿಸ ಬೇಕು ಮತ್ತು ಅನ್ಯರು ’’ಗಳಿಸಿದ” ಸಂಪತ್ತಿನ ಮೇಲೆ ದುರಾಸೆ ಪಡ ಬೇಡ.

ಶ್ರೀವತ್ಸ ದೇಸಾಯಿ

ಫೋಟೋಗಳು ಮತ್ತು ವಿಡಿಯೋ ಶ್ರೀವತ್ಸ ದೇಸಾಯಿ ಮತ್ತು ಗೂಗಲ್.

*ಆಧಾರ: ಪುಸ್ತಕ/ಲೇಖನಗಳು:

1)https://historicengland.org.uk/images-books/publications/slavery-and-british-country-house/slavery-british-country-house-web/

2)  https://www.nationaltrust.org.uk/features/addressing-the-histories-of-slavery-and-colonialism-at-the-national-trust

3) https://www.english-heritage.org.uk/siteassets/home/learn/research/the-slavery-connections-of-brodsworth-hall.pdf

4) Brodsworth Hall and Gardens: English Heritage Guidebooks; http://www.english-heritage.org.uk ; ISBN 978978-1-84802-014-6