ಕವನ ಮತ್ತು ವೈಚಾರಿಕ ಲೇಖನ.

ಪ್ರಿಯ ಓದುಗರೇ, 
ಈ ವಾರ 'ಅನಿವಾಸಿ' ಸಂಚಿಕೆಯಲ್ಲಿ ನಿಮ್ಮ ಓದಿಗೆ, ಶ್ರೀಮತಿ ರಾಧಿಕಾ ಜೋಶಿ ಅವರ ಕವನ 'ಸಮರಸ'. ಮತ್ತು ಡಾ ಜಿ ಎಸ್ ಶಿವಪ್ರಸಾದ್ ಅವರು ಬರೆದಿರುವ 'ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ' ಎಂಬ ಮಾಹಿತಿ ಪೂರ್ಣ ವೈಚಾರಿಕ ಬರಹವಿದೆ. ಓದಿ ತಮ್ಮ ಅಭಿಪ್ರಾಯಗಳನ್ನು ಮರೆಯದೆ ತಿಳಿಸಿ. 
ಈ ವಾರದ ಓದಿಗೆ ತಮಗಿದೋ ಸ್ವಾಗತ.  
- ಸಂಪಾದಕಿ
ಸಮರಸ 
 
  -  ಶ್ರೀಮತಿ ರಾಧಿಕಾ ಜೋಶಿ 

ಹುಟ್ಟಿದ ಸಮಯ ಬೇರೆ ಇರುವಾಗ 
ಬಿಟ್ಟು ಹೋಗುವ  ಸಮಯ ಒಂದೇ ಆಗಬಹುದೇ?

ಹುಟ್ಟಿಬಿಟ್ಟು ಬಿಡುವ ಸಮಯದ ನಡುವೆ ನೀ ಇರುವೆ 
ಗಮ್ಯ ಗೋಚರವಾದರೆ ನಿನಗೆ, ನನ್ನನ್ನೂ ಜೊತೆಗೊಯ್ಯುವೆಯೇ?

ನಿನ್ನ ಬಿಟ್ಟು ಹುಟ್ಟಿ, ಈಗ ನನ್ನ ಬಿಟ್ಟು ನೀ ಹೊರಟರೆ ದಾರಿಯಲಿ 
ಹೂವಿನ ಹಾಸಿಗೆಯು ಮುಳ್ಳಾಗಿ, ನಡೆಯಲು ಸಾಧ್ಯವಾದೀತೆ?

ಹೆಜ್ಜೆ ಮುಂದಕ್ಕೆ ನೋಟ ಹಿಂದಕ್ಕೆ ಅಂತ್ಯಕ್ಕೆ ದೃಷ್ಟಿ ನೆಟ್ಟು 
ತಲುಪೇನೆಲ್ಲಿಗೂ ನೀನಿಲ್ಲದೆ, ಕಣ್ಣು ಮಚ್ಚಿದಾಗ ನೀ ಗೋಚರ 
ಕಣ್ತೆರೆದರೆ ವಾಸ್ತವ್ಯದ ಸತ್ಯ ನಿನ್ನ ನೆನಪಿನಲ್ಲೇ ಮುಳ್ಳಲ್ಲಿ ಹೂ ನೋಡುತ ಸಾಗುವೆ!

ಈ ಜೀವ ಜೀವನಕ್ಕೆ ಅರ್ಥ ಕೊಟ್ಟು ಕೃತಾರ್ಥನನ್ನಾಗಿ ಮಾಡಿ 
ಕೂಡಿದ್ದ ಘಳಿಗೆ ಹೂಡಿದ್ದ ಸಂಭ್ರಮ ಮನ ಮನೆಯ ಮೂಲೆಮೂಲೆಯಲಿ 
ನೆನಪಿನ ಮಲ್ಲಿಗೆಯ ಹಂದರದಡಿ ಕೂತು ನಿಂತು ನನ್ನ ಉಸಿರೇ ನಿನ್ನ ಶ್ರೀಗಂಧ.


ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ – ಭಾಗ ೧

  • ಡಾ ಜಿ ಎಸ್ ಶಿವಪ್ರಸಾದ್, ಶೇಫೀಲ್ಡ್
ಕಳೆದ ಸುಮಾರು ೫೦ -೬೦ ವರ್ಷಗಳಿಂದ ಕನ್ನಡಿಗರು ಇಂಗ್ಲೆಂಡ್, ಅಮೇರಿಕ, ಯುರೋಪ್, ಆಸ್ಟ್ರೇಲಿಯ, ಮಧ್ಯಪೂರ್ವ ದೇಶಗಳಿಗೆ ವೃತ್ತಿ ಅವಕಾಶಗಳಿಂದ, ಆರ್ಥಿಕ ಉನ್ನತಿಗಾಗಿ, ಶಿಕ್ಷಣಕ್ಕಾಗಿ ಹೀಗೆ  ಅನೇಕ ಕಾರಣಗಳಿಂದ ವಲಸೆ ಬಂದಿದ್ದಾರೆ. ಅವರು ಯಾವ ಕಾರಣಕ್ಕಾಗಿ ವಲಸೆ ಬಂದಿದ್ದರೂ, ಈ ಅನಿವಾಸಿ ನೆಲೆಗಳಲ್ಲಿ ಅವರಿಗೆ ತಮ್ಮ ತಾಯ್ನಾಡಿನ ಭಾಷೆ, ಸಂಸ್ಕೃತಿ, ಆಧ್ಯಾತ್ಮ, ಸಂಸಾರ, ಸಂಬಂಧಗಳ ತುಡಿತಗಳು ಕಾಡುವುದು ಸಹಜ. ಅಲ್ಲದೆ ತಮ್ಮ ಮಕ್ಕಳು ಈ ವಿದೇಶಿ ಸಂಸ್ಕೃತಿಯ ಪರಿಸರದಲ್ಲಿ ಬೆಳೆಯುತ್ತಿರುವಾಗ  ತಮ್ಮ ಮೂಲ ಬೇರುಗಳನ್ನು ಕಳೆದುಕೊಳ್ಳುವುದರ ಬಗ್ಗೆ ಆತಂಕವಿರುವುದೂ ಸಹಜ. 

ಈ ಹಿನ್ನೆಲೆಯಲ್ಲಿ ವಲಸೆ ಬಂದ ಸಮುದಾಯ ವಿದೇಶಗಳಲ್ಲಿ ಕನ್ನಡ ಸಂಘಗಳನ್ನು ಕಟ್ಟಿಕೊಂಡು ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಪ್ರಯತ್ನವನ್ನು ಮಾಡಿದೆ. ಅದು ಸಾಕಷ್ಟು ಸಫಲವಾಗಿದೆ. ನಾನು ನೆಲೆಸಿರುವ ಇಂಗ್ಲೆಂಡಿನಲ್ಲಿ ಕೆಲವು ಕನ್ನಡಿಗರು ಶರಣ ತತ್ವದ ಪರಿಕಲ್ಪನೆಗಳನ್ನು ಇಟ್ಟುಕೊಂಡು ಜ್ಯಾತ್ಯತೀತವಾದ ವೀರಶೈವ ಸಮಾಜ ಯು.ಕೆ ಎಂಬ ಸಂಘವನ್ನು ಹುಟ್ಟುಹಾಕಿದ್ದಾರೆ. ಇಲ್ಲಿ ಕಾಲ ಕಾಲಕ್ಕೆ ಶರಣ ಸಾಹಿತ್ಯ, ವಚನ, ಶರಣರ ಬದುಕು ಬರಹ ಈ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತದೆ. ಇಲ್ಲಿ ವೀರಶೈವ ಮತದವರು ಎಂಬ ಭಾವನೆಯನ್ನು ಮೀರಿ ಎಲ್ಲ ಸಹೃದಯ ಕನ್ನಡಿಗರಿಗೂ, ಭಾರತೀಯರಿಗೂ ಆಹ್ವಾನವಿದೆ. ಇಲ್ಲಿ ಎಲ್ಲರನ್ನು ತಲುಪುವ ಉದ್ದೇಶದಿಂದ ಕೆಲವೊಮ್ಮೆ ಕಾರ್ಯಾಕಲಾಪಗಳು ಇಂಗ್ಲಿಷಿನಲ್ಲೂ ನಡೆಯುವುದುಂಟು.  ಲಂಡನ್ನಿನ ಥೇಮ್ಸ್ ನದಿಯ ದಡದಲ್ಲಿ ಲ್ಯಾಮ್ ಬತ್ ಎಂಬ ಪ್ರದೇಶದ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಮತ್ತು ಇತರ ಶರಣರು ಬಸವೇಶ್ವರರ ಪ್ರತಿಮೆಯನ್ನು ಸ್ಥಾಪಿಸಿ ಅದನ್ನು ಭಾರತದ ಪ್ರಧಾನಿ ಮೋದಿ ಅವರು ಅನಾವರಣ ಗೊಳಿಸಿದ್ದಾರೆ. ಈ ಹಿನ್ನೆಲೆ ವಿಚಾರಗಳು ಯು.ಕೆ.ಯಲ್ಲಿರುವ  ಕನ್ನಡಿಗರ ಮತ್ತು ಭಾರತೀಯರ  ಬಸವ ತತ್ವದ  ಅರಿವಿಗೆ ಮತ್ತು ಪ್ರಸ್ತುತತೆಗೆ ಸಾಕ್ಷಿಯಾಗಿದೆ. 

ವಚನಗಳ ಮೂಲಕ ಪ್ರತಿಪಾದಿಸುವ ಶರಣ ತತ್ವವನ್ನು ಗಮನಿಸಿದಾಗ ಎರಡು ಅಂಶಗಳು ಎದ್ದುತೋರುತ್ತದೆ; 
೧. ಭಕ್ತಿರಸ ಪ್ರಧಾನವಾದ, ಅಧ್ಯಾತ್ಮಕ್ಕೆ ಸಂಬಂಧಿಸಿದ  ವಚನಗಳು 
೨.  ಸಾಮಾಜಿಕ ವಿಚಾರಗಳಿಗೆ ಸಂಬಂಧಿಸಿದ ವಚನಗಳು  

ಈ ಒಂದು ಬರಹದಲ್ಲಿ ಧರ್ಮ ಮತ್ತು ಭಕ್ತಿರಸವನ್ನು ಪಕ್ಕಕ್ಕೆ ಇರಿಸಿ, ಶರಣರ ಸಾಮಾಜಿಕ ಚಿಂತನೆಗಳು ಹೇಗೆ ನಮ್ಮ ಇಂದಿನ ಬದುಕಿಗೆ ಪ್ರಸ್ತುತವಾಗಿದೆ ಎಂಬದರ ಬಗ್ಗೆ  ಇಲ್ಲಿ ಚರ್ಚಿಸಲಾಗಿದೆ. ಇದು 'ವೀರಶೈವ, ಲಿಂಗಾಯಿತ' ಎಂಬ ಸಂಕುಚಿತ ಜಾತಿ ಕಟ್ಟಳೆಗಳನ್ನು ಮೀರಿ ಬಸವ ತತ್ವದಲ್ಲಿರುವ ಸಾರ್ವತ್ರಿಕ ಸಾಮಾಜಿಕ ವಿಚಾರಗಳ ಬಗ್ಗೆ ಒಂದು ಪಕ್ಷಿನೋಟವನ್ನು ಒದಗಿಸುವ ಪ್ರಯತ್ನ. 

ಯು.ಕೆ ಯ ಅತ್ಯಂತ ಹಳೆಯ ಮತ್ತು ಹಿರಿದಾದ ಕನ್ನಡ ಸಂಸ್ಥೆ ಎಂದರೆ ಕನ್ನಡ ಬಳಗ ಯು.ಕೆ. ಈ ಒಂದು ದಾನಶೀಲ ಮತ್ತು ಸಾಂಸ್ಕೃತಿಕ ಸಂಸ್ಥೆ ಹಲವಾರು ದಾನಶೀಲ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಬಸವ ತತ್ವದ ಮೂಲಭೂತ ಧ್ಯೇಯಗಳಲ್ಲಿ ಒಂದಾದ 'ದಾಸೋಹ' ಯು.ಕೆ ಕನ್ನಡ ಬಳಗದಲ್ಲಿ ಮತ್ತು ಯು.ಕೆ.ಯ ವೀರಶೈವ ಸಮಾಜದಲ್ಲಿ ವಿಶೇಷ ಅರ್ಥವನ್ನು ಪಡೆದುಕೊಂಡಿದೆ. ಬರ, ಪ್ರವಾಹಗಳಿಗೆ ಪರಿಹಾರ ನಿಧಿ, ಅನಾಥಾಶ್ರಮಗಳಿಗೆ ಆರ್ಥಿಕ ಸಹಾಯ, ಮತ್ತು ಕರೋನ ಪಿಡುಗಿನ ಮಧ್ಯೆ ಬೇಕಾದ ಆಕ್ಸಿಜನ್ ಮತ್ತು ವೆಂಟಿಲೇಟರ್ ಉಪಕರಣಗಳನ್ನು ಕೊಟ್ಟು ನೆರವಿಗೆ ಬಂದಿದೆ. ಹೀಗೆ ಕಾಲ ಕಾಲಕ್ಕೆ ಅನುಕಂಪೆಯಿಂದ ವೀರಶೈವ ಸಮಾಜ ಮತ್ತು ಯು.ಕೆ. ಕನ್ನಡ ಬಳಗ ಸ್ಪಂದಿಸಿದೆ. ಈ ಒಂದು ಅನುಕಂಪೆ ಕೂಡ ಬಸವ ತತ್ವದ ವಿಶೇಷ ಲಕ್ಷಣ. ಪಡೆಯುವುದಕ್ಕಿಂತ ಕೊಡುವುದರಲ್ಲೇ ಸಾರ್ಥಕತೆಯನ್ನು ಕಂಡು ಕೊಳ್ಳುವ ವಿಚಾರವನ್ನು ಬಸವಣ್ಣನವರ ಈ ವಚನದಲ್ಲಿ ಕಾಣಬಹುದು. 

"ತನುವ ಬೇಡಿದೆಡೆ ಇವೆ, ಮನವ ಬೇಡಿದೆಡೆ ಇವೆ 
ಧನವ ಬೇಡಿದೆಡೆ ಇವೆ, ಕಣ್ಣ ತಲೆ ಬೇಡಿದೆಡೆ ಇವೆ 
ಕೂಡಲ ಸಂಗಮ  ದೇವಾ ನಿಮಗಿತ್ತು ಶುದ್ಧನಾಗಿದ್ದೆ 
ನಿಮ್ಮ ಪುರಾತನ ಮನೆಯಲ್ಲಿ" 


ಈ ನಿಸ್ವಾರ್ಥ ಕೊಡುವಿಕೆ , ಆರ್ಥಿಕವಾಗಿ ಅನುಕೂಲವಾಗಿರುವ ಅನಿವಾಸಿಗಳಿಗೆ ಒಂದು ನೈತಿಕ ಜವಾಬ್ದಾರಿ ಅಥವಾ ಹೊಣೆ ಎಂದು ಪರಿಗಣಿಸಬಹುದು. ಕೊಡುವಾಗ ಅದರ ಹಿಂದೆ ಯಾವ ಉದ್ದೇಶವು ಇರಬಾರದು, ಕೊಡುವಿಕೆ ಒಂದು ಪ್ರಚಾರವಾದಾಗ ಆ ನಿಸ್ವಾರ್ಥತೆಯನ್ನು ಅದು ಕಳೆದು ಕೊಂಡು ಬಿಡುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಕೆಲವು  ದಾನಿಗಳು ಆನ್ ಲೈನ್ ಡೊನೇಶನ್ ಕೊಡುವಾಗ ತಮ್ಮ ಹೆಸರನ್ನು ಬಹಿರಂಗ ಪಡಿಸಬಾರದೆಂದು ಕೋರುವುದನ್ನು  ಕಾಣಬಹುದು. ಇನ್ನು ಕೆಲವರು ತಮ್ಮ ದಾನಶೀಲತೆಯ ಬಗ್ಗೆ ಕೊಚ್ಚಿಕೊಳ್ಳುತ್ತಾರೆ. ಅಂತಹವರನ್ನು ಕಂಡಾಗ ಬಸವಣ್ಣನವರ ಈ ವಚನ ನೆನಪಿಗೆ ಬರುತ್ತದೆ. 
 
"ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ 
ಮಾಡಿದನೆಂಬುದು ಮನದಲಿ ಹೊಳೆದರೆ 
ನೀಡಿದನೆಂಬುದು ನಿಜದಲಿ ತಿಳಿದರೆ 
ಏಡಿಸಿಕಾಡಿತ್ತು ಶಿವನ ಡಂಗುರ 
ಮಾಡಿದೆನೆನ್ನದಿರಾ ಲಿಂಗಕೆ 
ನೀಡಿದೆ ನೆನ್ನದಿರಾ  ಜಂಗಮಕೆ
ಮಾಡುವ ನೀಡುವ ನಿಜಗುಣ  ಉಳ್ಳವರ 
ಕೂಡಿಕೊಂಡಿಪ್ಪ ನಮ್ಮ ಕೂಡಲ ಸಂಗಯ್ಯ”

ದಶಕಗಳ ಹಿಂದೆ ನನ್ನನ್ನೂ ಒಳಗೊಂಡಂತೆ ಇಂಗ್ಲೆಂಡಿಗೆ ವಲಸೆ ಬಂದವರಲ್ಲಿ ವೈದ್ಯರೇ ಹೆಚ್ಚು. ಈ ವೈದ್ಯರೆಲ್ಲಾ ಇಲ್ಲಿಯ ರಾಷ್ಟೀಯ ಆರೋಗ್ಯ ಸಂಸ್ಥೆಯ ವಿವಿಧ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ನಮಗೆಲ್ಲಾ ಇಲ್ಲಿ ರೋಗಿಗಳ ತಪಾಸಣೆ, ಔಷಧಿ ಮತ್ತು ಶೃಶೂಷೆಯ ಜೊತೆಗೆ ಹೇಗೆ ಮಾತಿನಲ್ಲಿ ವ್ಯವಹರಿಸಬೇಕು ಎಂದು ಹೇಳಿಕೊಡುತ್ತಾರೆ. ಹಲವಾರು ಕಮ್ಯುನಿಕೇಷನ್ ಕೋರ್ಸ್ ಗಳಲ್ಲಿ ಈ ತರಬೇತು ನಡೆಯುತ್ತದೆ. ಇಲ್ಲಿ ಆಸ್ಪತ್ರೆಯಲ್ಲಿರುವ ರೋಗಿ ಬರಿಯ ಸಂಖ್ಯೆಯಲ್ಲ. ರೋಗಿಯನ್ನು ಪರೀಕ್ಷಿಸುವುದಕ್ಕೆ ಮುಂಚೆ ಅವರ ಹೆಸರನ್ನು ತಿಳಿದು ಸಂಬೋಧಿಸಬೇಕು. ರೋಗಿಯ ಜೊತೆ ನಡೆಸುವ ಸಂಭಾಷಣೆಯಲ್ಲಿ  ನಯ, ನಾಜೂಕು, ಆತ್ಮೀಯತೆ ಇವು ಇರಬೇಕು. ನಾವು ಹೇಳುವುದನ್ನು ನಿರ್ದಿಷ್ಟವಾಗಿ ಅರ್ಥವಾಗುವ ಹಾಗೆ ತಿಳಿಸಬೇಕು. ಈ ಒಂದು ಅಂಶವನ್ನು ಗಮನಿಸಿದ ನನಗೆ ಬಸವಣ್ಣನವರು ಈ ವಿಚಾರವನ್ನು ೧೨ನೇ ಶತಮಾನದಲ್ಲೇ ತಿಳಿಸಿದ್ದರು  ಎಂದೆನಿಸಿ ಈ ವಚನ ನೆನಪಿಗೆ ಬಂತು;

ನುಡಿದರೆ ಮುತ್ತಿನ ಹಾರದಂತಿರಬೇಕು 
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು 
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು 
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು 

ಹೀಗೆ ನಮ್ಮ ಮಾತು ಸುಂದರವಾಗಿ ದೀಪ್ತಿಯಂತೆ ಬೆಳಕನ್ನು ನೀಡುತ್ತಾ, ಜ್ಞಾನವನ್ನು ವಿಸ್ತರಿಸುತ್ತ, ನಿರ್ದಿಷ್ಟವಾಗಿ, ದೇವರನ್ನೂ (ಈಗಿನ ಕಾಲಕ್ಕೆ ನಮ್ಮ ನೆಲೆಯಲ್ಲಿ ಸಹೃದಯರನ್ನೂ) ಮೆಚ್ಚಿಸುವಂತೆ ಇರಬೇಕು ಎಂಬುದು ಈ ವಚನದ ಇಂಗಿತ. ಈ ಒಂದು ವಚನವನ್ನು ಹಿನ್ನೆಲೆಯಾಗಿಟ್ಟುಕೊಂಡು ಗಮನಿಸಿದರೆ; ಸುಸಂಸ್ಕೃತ ರಾಷ್ಟ್ರಗಳಾದ ಇಂಗ್ಲೆಂಡ್ , ಯೂರೋಪ್ , ಅಮೇರಿಕಗಳಲ್ಲಿ ಜನರ ಸಂಭಾಷಣೆ ಮತ್ತು ಭಾಷೆಯ ಬಳಕೆಯಲ್ಲಿ ಸೌಜನ್ಯ ಎದ್ದು ತೋರುತ್ತದೆ. ಶಿಷ್ಟಾಚಾರದ ಜೊತೆಗೆ ಸಜ್ಜನಿಕೆಯೂ ಇವೆ. ಇಲ್ಲಿ ಜನ ತಮ್ಮಿಂದ ಸಂಭವಿಸಿದ ಕನಿಷ್ಠ ಲೋಪಗಳಿಗೆ 'ಸಾರಿ' ಎಂದು ಕ್ಷಮೆ ಯಾಚಿಸುವುದು, ನಮ್ಮ ದೃಷ್ಟಿಯಲ್ಲಿ ಗೌಣವೆಂದೆನಿಸುವ ವಿಚಾರಗಳಿಗೆ ‘ಥ್ಯಾಂಕ್ಸ್’ ಎನ್ನುತ್ತಾ ಧನ್ಯತೆಯನ್ನು ಸೂಚಿಸುವುದು ಸಾಮಾನ್ಯ. ಈ ಬಸವ ತತ್ವ ಇಲ್ಲಿ ಆಚರಣೆಯಲ್ಲಿದೆ. 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ವಚನದ ಕೊನೆ ಸಾಲುಗಳನ್ನು ಗಮನಿಸಿದರೆ; "ನುಡಿಯೊಳಗಾಗಿ ನಡೆಯದಿದ್ದರೆ ದೇವನೆಂತು ಒಲಿಯುವನಯ್ಯಾ" ಎಂದು ಈ ವಚನ ಕೊನೆಗೊಳ್ಳುತ್ತದೆ.  ಪಾಶ್ಚಿಮಾತ್ಯ ದೇಶಗಳಲ್ಲಿ ನುಡಿಯೊಳಗಾಗಿ ನಡೆಯದಿದ್ದರೆ ದೇವರೇಕೆ ಸಮಾಜ ಕೂಡ ಒಲಿಯುವುದಿಲ್ಲ, ಒಪ್ಪುವುದಿಲ್ಲ. ಈ ದೇಶಗಳಲ್ಲಿ ಜನ ಕೊಟ್ಟ ಮಾತಿಗೆ ಬಹಳಷ್ಟು ಬೆಲೆ ನೀಡುತ್ತಾರೆ. ಇದು ಮೂಲತಃ ಮಾಡುವ ಕೆಲಸದಲ್ಲಿರುವ ಶ್ರದ್ಧೆ ಮತ್ತು ಸಮಯಪ್ರಜ್ಞೆ ಯಿಂದ ಮೂಡುವ ಮೌಲ್ಯಗಳು. ಭಾರತದಲ್ಲಿ ಕೆಲವು ಕಡೆ ಕಛೇರಿಗಳಲ್ಲಿ  ನಮ್ಮ ಒಂದು ಕೆಲಸವಾಗಬೇಕಾಗಿದ್ದಲ್ಲಿ ಎಷ್ಟುಬಾರಿ ಅಲೆಯ ಬೇಕು ಎಂಬುದು ನಮಗೆಲ್ಲಾ ತಿಳಿದಿದೆ. ಆಲಸ್ಯ ಮತ್ತು ಲಂಚಕೋರತನಗಳು ಇದರ ಹಿನ್ನೆಲೆ ಕಾರಣವಿರಬಹುದು. ಪಾಶ್ಚಿಮಾತ್ಯ ದೇಶಗಳಲ್ಲಿ ಕಾಫಿ ತಿಂಡಿ ವಿರಾಮಗಳ ನೆಪದಲ್ಲಿ ಕೆಲಸ ಕದಿಯುವವರಿಲ್ಲ. ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಸಬೂಬು ಹೇಳುವವರೂ ಇಲ್ಲ. ನುಡಿಯೊಳಗಾಗಿ ನಡೆಯುವ ಬಸವ ತತ್ವ ಇಲ್ಲಿ ಅನುಷ್ಠಾನದಲ್ಲಿದೆ.


ಪಾಶ್ಚಿಮಾತ್ಯ ದೇಶಗಳಲ್ಲಿ ಎಲ್ಲ ಸಜ್ಜನರೇ ಮತ್ತು ಇಲ್ಲಿ ಎಲ್ಲವೂ ಕ್ಷೇಮ ಎಂದು ಹೇಳಲಾಗುವುದಿಲ್ಲ. ಇಲ್ಲಿಯೂ ದುಷ್ಟ ಜನರಿದ್ದಾರೆ, ಕಳ್ಳರು, ಖದೀಮರು ಇದ್ದಾರೆ.  ವಲಸೆ  ಬಂದ  ಜನರ ಬಗ್ಗೆ ತಿರಸ್ಕಾರ ಮತ್ತು ಕೀಳು ಮನೋಭಾವ ಕೆಲವರಿಗೆದೆ. ಕೆಲವು ಸ್ಥಳೀಯ ಬಿಳಿ ಜನಕ್ಕೆ ವಲಸೆ ಬಂದ ಅನ್ಯರು ತಮ್ಮಿಂದ ಉದ್ಯೋಗ ಅವಕಾಶಗಳನ್ನು ಕಸಿದು ಕೊಳ್ಳುತ್ತಿದ್ದಾರೆ ಎಂಬ ಆತಂಕವಿದೆ. ನಮ್ಮ ಯಶಸ್ಸಿನ ಬಗ್ಗೆ ಅವರಿಗೆ ಅಸೂಯೆಯಿದೆ. ಕಳೆದ ವರುಷ ಅಮೇರಿಕ ಸಂಸ್ಥಾನದ ಮಿನಿಯಾಪೋಲಿಸ್  ಎಂಬ ನಗರದಲ್ಲಿ  ಕ್ಯಾರಿಬಿಯನ್  ಮೂಲದ ಜಾರ್ಜ್ ಫ್ಲ್ಯಾಯ್ಡ್ ಎಂಬ ಚಿಕ್ಕ ಕಳ್ಳ ಎಸಗಿದ ತಪ್ಪಿಗೆ ಅವನನ್ನು ಅರೆಸ್ಟ್ ಮಾಡಲು ಬಂದ  ಪೊಲೀಸರು ಅವನ ಕುತ್ತಿಗೆಯ ಮೇಲೆ ಮಂಡಿಯೂರಿ ಹೆಚ್ಚಿನ ಬಲ ಪ್ರಯೋಗ ಮಾಡಿದ ಪರಿಣಾಮದಿಂದ ಜಾರ್ಜ್ ಉಸಿರುಕಟ್ಟಿ ಅಲ್ಲಿಯೇ ಪ್ರಾಣ ಬಿಟ್ಟ! ಪೋಲೀಸರ ಈ ದೌರ್ಜನ್ಯದಿಂದಾಗಿ ಎಲ್ಲೆಡೆ ಗಲಭೆಗಳಾದವು. ಇಲ್ಲಿ ಒಬ್ಬ ಬಿಳಿ ಪೊಲೀಸನು ಒಬ್ಬ ಕರಿ ಅಪರಾಧಿಯ ಮೇಲೆ ಮಾಡಿದ ದೌರ್ಜನ್ಯ ವರ್ಣಬೇಧ ಅಥವಾ ರೇಸಿಸಂ ಉದ್ದೇಶದಿಂದ ಕೂಡಿದ್ದು ಎಂದು ಪರಿಗಣಿಸಲಾಯಿತು. ಹಾಗೆ 'ಬ್ಲಾಕ್ ಲೈವ್ಸ್ ಮ್ಯಾಟರ್' ಅಂದರೆ ಕರಿಯರ ಜೀವಕ್ಕೊ ಬೆಲೆ ಇದೆ ಎಂಬ ಚಳುವಳಿ ತೀವ್ರವಾಯಿತು. ಪಾಶ್ಚಿಮಾತ್ಯ ದೇಶಗಳಲ್ಲಿ ಸ್ಥಳೀಯ ಬಿಳಿ ಜನರಿಗೂ ಮತ್ತು ವಲಸೆ ಬಂದ ಇತರರಿಗೂ ಆಗಾಗ್ಗೆ ವರ್ಣಬೇಧ ಘರ್ಷಣೆಗಳು ನಡೆಯುವುದನ್ನು ಕಾಣ ಬಹುದು. ವರ್ಣ ಬೇಧ ಮತ್ತು ಧರ್ಮದ ಹೆಸರಿನಲ್ಲಿ ಘರ್ಷಣೆಗಳು  ಪ್ರಪಂಚದ ನಾನಾ ಭಾಗಗಳಲ್ಲಿ ನಡೆಯುತ್ತಾ ಬಂದಿವೆ. ಐರ್ಲೆಂಡಿನಲ್ಲಿ ಕ್ರೈಸ್ತ ಧರ್ಮದ ಒಳಗೆ ಇರುವ ಎರಡು ಪಂಗಡಗಳಲ್ಲಿ ಘರ್ಷಣೆ ಇಂದಿಗೂ ನಡೆಯುತ್ತಿದೆ. ಭಾರತದಲ್ಲಿ ಹಿಂದೆ ಜಾತಿಯ ಹೆಸರಿನಲ್ಲಿ ಶೋಷಣೆಗಳು ನಡೆದಿವೆ. ಸ್ವತಂತ್ರ ಭಾರತದಲ್ಲಿ ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಆಗಾಗ್ಗೆ ಘರ್ಷಣೆಗಳು ನಡೆಯುತ್ತಿವೆ. ಮಧ್ಯಪೂರ್ವದಲ್ಲಿ ಇಸ್ರೇಲಿನ ಜ್ಯೂ ಧರ್ಮದವರಿಗೂ ಮತ್ತು ಪ್ಯಾಲೆಸ್ಟೀನ್ ದೇಶದ ಮುಸ್ಲಿಂಗಳಿಗೂ ತಿಕ್ಕಾಟಗಳಾಗುವುದು ಸಾಮಾನ್ಯ. ಹಲವಾರು ದೇಶಗಳಲ್ಲಿ ಜನ ತಮ್ಮ ಧರ್ಮ, ಸಂಸ್ಕೃತಿ ಶ್ರೇಷ್ಠ ಎಂಬ ಗರ್ವದಲ್ಲಿ ಮೆರೆಯುತ್ತಿದ್ದಾರೆ. ಪ್ರಪಂಚದಲ್ಲಿ ಅಸಹಿಷ್ಣುತೆ, ಅಂಧ ಶ್ರದ್ಧೆ ಹೆಚ್ಚಾಗಿ ಭಯೋತ್ಪಾದನೆ ಹುಟ್ಟಿಕೊಂಡಿದೆ. ವಿಶ್ವ ಶಾಂತಿಗೆ ಧಕ್ಕೆ ಒದಗಿದೆ. ಈ ಹಿನ್ನೆಲೆ ವಿಚಾರವನ್ನು ಗಮನಿಸಿದಾಗ ಬಸವಣ್ಣನವರ ಈ ವಚನ ತಟ್ಟನೆ ನೆನಪಿಗೆ ಬರುತ್ತದೆ; 

"ಇವನಾರವ ಇವನಾರವ ಎಂದೆನಿಸದಿರಯ್ಯ 
ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ 
ಕೂಡಲ ಸಂಗಮ ದೇವಾ ನಿಮ್ಮ ಮನೆಯ ಮಗನೆನಿಸಯ್ಯ"

ಅಮೇರಿಕ, ಇಂಗ್ಲೆಂಡ್ ದೇಶಗಳಲ್ಲಿ ಹಲವು ಭಾಷೆಯ, ಹಲವು ಬಣ್ಣಗಳ, ಹಲವು ಸಂಸ್ಕೃತಿಗಳ ಜನರಿದ್ದಾರೆ. ಭಾರತ, ಶ್ರೀ ಲಂಕಾ, ಪಾಕಿಸ್ತಾನ, ಮಲೇಷಿಯಾ, ಪೋಲೆಂಡ್, ಕ್ಯಾರಿಬಿಯನ್, ಆಫ್ರಿಕಾ ಪ್ರದೇಶ ಹೀಗೆ ಅನೇಕ ರಾಷ್ಟ್ರಗಳಿಂದ ಜನ ವಲಸೆ ಬಂದಿದ್ದಾರೆ. ಈ ವೈವಿಧ್ಯಮಯವಾದ ಸಂಸ್ಕೃತಿಯನ್ನು ‘ಕರಗುವ ಕಡಾಯಿ’ ಎಂದು ಬಣ್ಣಿಸಲಾಗಿದೆ. ಈ ಸಂಸ್ಕೃತಿಗಳ ನಡುವೆ ಸಮನ್ವಯತೆ ಇದೆ. ಇಂತಹ ಒಂದು ಸಮೃದ್ಧಿಯಾದ ಸಂಸ್ಕೃತಿಯಲ್ಲಿ 'ಇವನಾರವ'? ಎಂದು ಪ್ರಶ್ನಿಸಲು ಶುರು ಮಾಡಿದರೆ ಘರ್ಷಣೆಗಳು ಸಹಜ. ಇಲ್ಲಿ ಪರಸ್ಪರ ಗೌರವ, ಸಹಿಷ್ಣುತೆ, ಪ್ರೀತಿ ವಿಶ್ವಾಸಗಳು, ಹೊಂದಿಕೆಗಳು ಅತ್ಯಗತ್ಯ. 

ಇದೇ ಮೇಲಿನ ‘ಇವನಾರವ’ ಎಂಬ ಹಿನ್ನೆಲೆಯಲ್ಲಿ ಬಸವಣ್ಣನವರ ಇನ್ನೊಂದು ವಚನದ ಸಾಲುಗಳನ್ನು ನೆನೆಯ ಬಹುದು, ಅದು ಹೀಗಿದೆ;

'ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ'. 

ಈ ವಚನದ ಸಾಲುಗಳು ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಪ್ರಸ್ತುತವಾಗುವಂತಹ ಸಾಲುಗಳು. ಈ 'ಅನ್ಯರು' ಅಂದರೆ ಯಾರು? ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ. ಬಸವಣ್ಣನವರ ಕಾಲಕ್ಕೆ, ೧೨ನೇ ಶತಮಾನದಲ್ಲಿ ಅನ್ಯರು ಅಂದರೆ  ಅಂತ್ಯಜರು, ಶೋಷಿತವರ್ಗದವರು ಎಂದು ವ್ಯಾಖ್ಯಾನಿಸಬಹುದು .  ಈ ೨೧ನೇ ಶತಮಾನದಲ್ಲಿ ಈ ‘ಅನ್ಯ’ರು ಯಾರು? ಎಂಬುದನ್ನು ದೇಶ, ಗಡಿ, ಭಾಷೆ, ಬಣ್ಣ, ಧರ್ಮ, ಜಾತಿ ವ್ಯವಸ್ಥೆ, ಸಂಸ್ಕೃತಿ, ರಾಜಕೀಯನಿಲುವು, ಬಲ ಪಂಥ, ಎಡ ಪಂಥ ಆಲೋಚನೆಗಳು ನಿರ್ಧರಿಸುತ್ತವೆ. ಭಾರತವನ್ನು ಬಿಟ್ಟು ಇಂಗ್ಲೆಂಡಿಗೆ ವಲಸೆ ಬಂದ ನಾನು ಈ ಹೊರದೇಶದಲ್ಲಿ  ಕೆಲವು ಸಂಕುಚಿತ ಮನಸ್ಸುಗಳಿಗೆ ಅನ್ಯನಾಗಿರಬಹುದು. ಭಾರತದಲ್ಲೇ ಇದ್ದು ಅಲ್ಲಿ ಕೂಡ ನನ್ನ ಕೆಲವು ಆಲೋಚನೆಗಳ ಹಿನ್ನೆಲೆಯಲ್ಲಿ, ಅಲ್ಲಿಯೂ ಅನ್ಯನಾಗಬಹುದು. ಹೀಗೆ ಅನ್ಯ ಎಂಬುದು ನಮ್ಮ ನಮ್ಮ ಮನಸ್ಸಿನ ಭಾವನೆಗಳಷ್ಟೇ. ಈ 'ಅನ್ಯ', 'ತನ್ನ' ವನಾಗಬೇಕಾದರೆ, 'ಇವ', 'ನಮ್ಮ'ವನಾಗಬೇಕಾದರೆ  ಕುವೆಂಪು ಹೇಳಿದ ಹಾಗೆ ನಮ್ಮ ಚೇತನಗಳು;

"ರೂಪ ರೂಪಗಳನು ದಾಟಿ 
ನಾಮಕೋಟಿಗಳನು ಮೀಟಿ 
ನೂರು ಮತದ ಹೊಟ್ಟ ತೂರಿ 
ಎಲ್ಲ ತತ್ವದೆಲ್ಲೆ ಮೀರಿ"

ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸಿಕೊಂಡಾಗಲೇ ಅದು ಸಾಧ್ಯ, ಇದೇ ವಿಚಾರಗಳನ್ನು ಹಿಂದೆ ಪ್ರತಿಪಾದಿಸಿದ     ಬಸವತತ್ವವನ್ನು ಅರ್ಥಮಾಡಿಕೊಂಡಾಗಲೇ ಅದು ಸಾಧ್ಯ!  ಈ ವಿಶ್ವಮಾನವ ಪ್ರಜ್ಞೆಯ ಹಿನ್ನೆಲೆಯಲ್ಲಿ ಸರ್ವಜ್ಞರ ವಚನವನ್ನುಇಲ್ಲಿ ಪ್ರಸ್ತಾಪಿಸುವುದು ಸೂಕ್ತ;

"ಊರೆಲ್ಲಾ ನೆಂಟರು, ಕೇರಿಯಲ್ಲವೂ ಬಳಗ 
ಧಾರಿಣಿಯು ಎಲ್ಲ ಕುಲದೈವವಾಗಿನ್ನು 
ಯಾರನ್ನು ಬಿಡಲೋ ಸರ್ವಜ್ಞ”

………ಮುಂದುವರೆಯುವುದು ಮುಂದಿನ ಕಂತಿನಲ್ಲಿ ಭಾಗ ೨ನ್ನು ನಿರೀಕ್ಷಿಸಿ

‘Black Lives Matter’ – ಅನಿವಾಸಿಗಳ ಅನುಭವಗಳು

‘Black lives matter’ (ಕರಿಯರ ಜೀವಗಳಿಗೂ ಬೆಲೆಯಿದೆ) ಈ ಪದಪುಂಜ ಕಣ್ಣ ಮುಂದೆ ತರುವುದು, ಆಗಾಗ ಸುದ್ದಿವಾಹಿನಿಗಳಲ್ಲಿ ಬರುವ ಅಮೆರಿಕಾದ ಕರಿಯರ ಮೇಲಿನ ಪೋಲೀಸರ ಅತ್ಯಾಚಾರಗಳಷ್ಟೇ ಇರಲಿಕ್ಕಿಲ್ಲ. ಅವರವರ ಜೀವನದಲ್ಲಿ ನಡೆದ, ಕೇಳಿದ, ನೋಡಿದ ಘಟನೆಗಳೂ ಇರಬಹುದು. ಈ ರೀತಿಯ ಘಟನೆಗಳು ಆಯಾ ದೇಶದ ರಾಜಕೀಯ-ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಆಗಾಗ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ಆಗಬಹುದು. ೯/೧೧ ಆದಾಗಿನಿಂದ ಹೆಚ್ಚಾಗಿದೆಯೇನೋ ಅನ್ನಿಸಿದರೂ, ಈ ರೀತಿಯ ನಡುವಳಿಕೆ ಮುಂಚಿನಿಂದಲೂ ಇದ್ದೇ ಇದೆಯಲ್ಲವೆ? ಅನಿವಾಸಿ ಬಳಗದ ಇಬ್ಬರು ಸದಸ್ಯರು, ಶ್ರೀವತ್ಸ ದೇಸಾಯಿ ಮತ್ತು ಉಮಾ ವೆಂಕಟೇಶ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. – ಎಲ್ಲೆನ್ ಗುಡೂರ್ (ಸಂ.)

Black Lives Matter – ಉಮಾ ವೆಂಕಟೇಶ್

೯ ಸೆಪ್ಟೆಂಬರ್ ೨೦೦೧, ಅಮೆರಿಕೆಯ ಇತಿಹಾಸದ ಪುಟಗಳಲ್ಲಿ ಕರಾಳವಾದ ದಿನ. ನನ್ನ ಗಂಡ ಸತ್ಯಪ್ರಕಾಶ್ ಬರ್ಲಿನ್ನಿನಲ್ಲಿ ತಮ್ಮ ಒಂದು ವರ್ಷದ ಸಬಾಟಿಕಲ್ ಸಮಯವನ್ನು ಅಲ್ಲಿನ ಮ್ಯಾಕ್ಸ್ ಪ್ಲಾಂಕ್ ಸಂಶೋಧನಾ ಸಂಸ್ಥೆಯಲ್ಲಿ ಕಳೆಯಲು ನಿರ್ಧರಿಸಿದ್ದರು. ಹಾಗಾಗಿ ನಾವು ಬರ್ಲಿನ್ನಿಗೆ ಹೋಗಿ ಅಲ್ಲಿ ನಮ್ಮ ವಾಸ್ತವ್ಯಕ್ಕೆ ಬೇಕಾದ ಸಿದ್ಧತೆಯಲ್ಲಿದ್ದೆವು. ಬರ್ಲಿನ್ ನಗರದ ಪೂರ್ವಭಾಗದಲ್ಲಿರುವ, ಪಾಟ್ಸಡ್ಯಾಮ್ ಟೌನಿನಲ್ಲಿರುವ, ಡಾಯ್ಚ್ ಬ್ಯಾಂಕಿನಲ್ಲಿ ನಮ್ಮ ಅಕೌಂಟ್ ತೆರೆಯಲು ಸರತಿಯಲ್ಲಿ ಕಾಯುತ್ತಿದ್ದೆವು. ಅಲ್ಲೇ ಇದ್ದ ಟಿವಿಯಲ್ಲಿ ಬರುತ್ತಿದ್ದ CNN world ಸಮಾಚಾರದ ಕಡೆಗೆ ಆಗಾಗ ನಮ್ಮ ದೃಷ್ಟಿಯನ್ನೂ ಹರಿಸಿದ್ದೆವು. ಇದ್ದಕ್ಕಿದ್ದಂತೆ, ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಕಟ್ಟಡದ ಉತ್ತರದ ಗೋಪುರಕ್ಕೆ ವಿಮಾನವೊಂದು ಬಂದಪ್ಪಳಿಸಿ, ಆ ಗೋಪುರ ಕುಸಿಯುವ ದೃಶ್ಯವನ್ನು ತೋರಿಸಿದರು. ನಾವೆಲ್ಲಾ, ಇದ್ಯಾವುದೋ ಬಿಡುಗಡೆಯಾಗಲಿದ್ದ ಹೊಸ ಹಾಲಿವುಡ್ ಚಿತ್ರದ ಟ್ರೈಲರ್ ಇರಬಹುದೆಂದು ತಿಳಿದು ಸುಮ್ಮನಿದ್ದೆವು. ಆದರೆ ಸ್ವಲ್ಪ ಕ್ಷಣದಲ್ಲೇ ಮತ್ತೊಂದು ವಿಮಾನ ಟ್ರೇಡ್ ಸೆಂಟರ್ ಕಟ್ಟಡದ ದಕ್ಷಿಣ  ಗೋಪುರಕ್ಕೆ ಬಡಿದು ಅದೂ ಕುಸಿಯಲಾರಂಭಿಸಿತು. ನಾನು ನನ್ನ ಗಂಡ ಇದೇನಾಗುತ್ತಿದೆ ಎಂದು ಯೋಚಿಸುತ್ತಿರುವಾಗಲೇ, ಬ್ಯಾಂಕಿನ ಕ್ಲರ್ಕ್ ನಮ್ಮನ್ನು ಒಳಗೆ ಕರೆದಳು. ನಾವು ಕುತೂಹಲದಿಂದ ಟಿವಿ ಕಡೆಗೆ ಕೈ ತೋರಿಸಿದಾಗ, ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದ ಆಕೆ, ನ್ಯೂಯಾರ್ಕಿನಲ್ಲಿ ಘಟಿಸುತ್ತಿದ್ದ ಆಂತಂಕವಾದಿ ಆಕ್ರಮಣದ ಬಗ್ಗೆ ನಮಗೆ ತಿಳಿಸಿದಾಗ ದಿಗ್ಬ್ರಮೆಯಾಯಿತು. ಮುಂದಿನ ಹಲವಾರು ವಾರಗಳ ಕಾಲ ಕೇವಲ ಆ ಕರಾಳ ಘಟನೆಯಿಂದ ಪ್ರಪಂಚದಾದ್ಯಂತ ನಡೆದ ಘಟನೆಗಳು ಈಗ ಇತಿಹಾಸದ ಪುಟಗಳಲ್ಲಿ ಸೇರಿಹೋಗಿವೆ. ಆದರೆ ೨೦೦೧ರ ಆ ಆತಂಕವಾದದ ಘಟನೆಯ ನಂತರ ಪ್ರಪಂಚ ಮೊದಲಿನಂತಿಲ್ಲ. ಎಲ್ಲವೂ ಬದಲಾಯಿಸಿತು. ಒಂದು ದೇಶದ ಜನ, ಮತ್ತೊಂದು ದೇಶದ ವರ್ಣದವರನ್ನು ನೋಡುವ ದೃಷ್ಟಿಯೇ ಬದಲಾಯಿಸಿತು. ಈ ಘಟನೆಯ ನಂತರ ಮುಸ್ಲಿಮ್ ಜನಾಂಗ ಅನುಭವಿಸಿದ ಕಷ್ಟ, ದ್ವೇಷದ ನಡವಳಿಕೆಗಳನ್ನು ಇನ್ನೂ ನೋಡುತ್ತಲೇ ಇದ್ದೀವಿ. ಅಮೆರಿಕೆಯಲ್ಲಿ, ಸ್ಥಳೀಯ ಸಂಕುಚಿತ ಮನೋಭಾವದ ಬಿಳಿಯರು, ಆ ಘಟನೆಯ ತರುವಾಯ ಕಂದುಬಣ್ಣದ ಏಶಿಯನ್ ಜನಾಂಗದವರೊಡನೆ ಬಹಳ ಕೆಟ್ಟದಾಗಿ ವರ್ತಿಸಿದ್ದರು ಎಂದು ಕೇಳಿದ್ದೆವು.

ಇದಾಗಿ ನಾಲ್ಕು ವರ್ಷಗಳ ನಂತರ, ೨೦೦೫ರಲ್ಲಿ ನನ್ನ ಗಂಡ ಕಾರ್ಡಿಫ಼್ ವಿಶ್ವವಿದ್ಯಾಲಯದ ತಮ್ಮ ಪಿ.ಎಚ್.ಡಿ ವಿದ್ಯಾರ್ಥಿಗಳು ಮತ್ತು ಪೋಸ್ಟ್ ಡಾಕ್ಟರಲ್ ಸಂಶೋಧಕರೊಂದಿಗೆ, ಲೂಸಿಯಾನ ರಾಜ್ಯದಲ್ಲಿರುವ, ನ್ಯೂ ಓರ್ಲಿಯನ್ಸ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದ ಕಾನ್ಫ಼ರೆನ್ಸ್ ಒಂದಕ್ಕೆ ಹೋಗಿದ್ದರು. ಏರ್ ಪೋರ್ಟಿನಿಂದ ಬಾಡಿಗೆ ಕಾರಿನಲ್ಲಿ ತಮ್ಮ ವಿದ್ಯಾರ್ಥಿಗಳ ಜೊತೆ ತಾವೇ ಕಾರು ಚಲಾಯಿಸುತ್ತಾ ಹೈವೇನಲ್ಲಿ ಹೋಗುತ್ತಿದ್ದಾಗ ನಡೆದ ಒಂದು ಘಟನೆ ನೇರವಾಗಿ ವರ್ಣೀಯ ದ್ವೇಷಕ್ಕೆ ಸಂಬಂಧಿಸಿದ್ದು. ಅಮೆರಿಕೆಯ ಹಲವಾರು ದಕ್ಷಿಣದಲ್ಲಿರುವ ರಾಜ್ಯಗಳಲ್ಲಿ, ಪೋಲೀಸ್ ಆಫೀಸರುಗಳು ಬಹಳ ನಿರ್ದಯರು ಎನ್ನುವುದನ್ನು ನಮ್ಮ ಗೆಳೆಯರ ಬಾಯಿಂದ ಕೇಳಿದ್ದೆವು.  ಕೈಯಲ್ಲಿರುವ ಗನ್ ಅಥವಾ ಪಿಸ್ತೂಲನ್ನು ಚಲಾಯಿಸಲು ಅವರು ಹಿಂದೆಮುಂದೆ ನೋಡುವುದಿಲ್ಲ ಎನ್ನುವ ವಿಷಯವೂ ನಮಗೆ ತಿಳಿದಿತ್ತು. ಹಾಗಾಗಿ ನನ್ನ ಗಂಡ ಸತ್ಯಪ್ರಕಾಶ್, ವೇಗದ ಮಿತಿಯನ್ನು ಸ್ವಲ್ಪವೂ ಮೀರದಂತೆ, ಬಹಳ ಎಚ್ಚರಿಕೆಯಿಂದ ಕಾರನ್ನು ಚಲಾಯಿಸುತ್ತಿದ್ದರಂತೆ. ಸುಮಾರು ಒಂದೂವರೆ ಗಂಟೆ ದೂರದ ಅವರ ಪ್ರಯಾಣದಲ್ಲಿ, ಮೊದಲು ಅರ್ಧ ಗಂಟೆ ಯಾವ ತೊಂದರೆಯೂ ಆಗಲಿಲ್ಲ. ನಂತರ ಇದ್ದಕಿದ್ದಂತೆ ಅವರ ಮುಂದೆ ಒಂದು ಪೋಲೀಸ್ ಕಾರ್ ವೇಗವಾಗಿ ದಾಟಿ ಹೋಯಿತು. ಅದನ್ನು ನೋಡಿ ಸತ್ಯ, ಯಾವುದೋ ಆಕ್ಸಿಡೆಂಟ್ ಆಗಿರಬೇಕು, ಸರಿ ಇನ್ನು ತಮ್ಮ ಪ್ರಯಾಣಕ್ಕೆ ಅಡಚಣೆ ಇದೆ ಎಂದು ತಮ್ಮ ಜೊತೆಯಲ್ಲಿದ್ದ ವಿದ್ಯಾರ್ಥಿಗಳನ್ನು ಎಚ್ಚರಿಸಿದರಂತೆ. ಸುಮಾರು ೧೦ ಗಂಟೆಯ ವಿಮಾನ ಪ್ರಯಾಣದಲ್ಲಿ ನಿದ್ದೆಗೆಟ್ಟಿದ್ದ ಅವರೆಲ್ಲಾ ತೂಕಡಿಸುತ್ತಿದ್ದಾಗಲೇ, ಮತ್ತೊಂದು ಪೋಲೀಸ್ ಕಾರ್ ಇವರ ಬೆನ್ನಟ್ಟಿ ಬಂದು, ಕಾರನ್ನು ಪಕ್ಕದ ಹಾರ್ಡ್ ಶೋಲ್ಡರಿನಲ್ಲಿ ನಿಲ್ಲಿಸಬೇಕೆಂದು ಆಣತಿ ಇತ್ತಾಗ, ಸತ್ಯ ಅವರಿಗೆ ಸ್ವಲ್ಪ ಆಶ್ಚರ್ಯವಾಯಿತು. ವೇಗದ ಮಿತಿಯಲ್ಲೇ ಹೋಗುತ್ತಿದ್ದೇನೆ, ಆದರೂ ಇದೇಕೆ ತನ್ನನ್ನು ತಡೆಹಾಕುತ್ತಿದ್ದಾರೆ ಎಂದು ಸ್ವಲ್ಪ ಗಾಬರಿಯೂ ಆಯಿತು. ಸರಿ ವಾಹನದಿಂದ ಕೆಲಗಿಳಿದು ಬಂದ ಪೋಲೀಸ್ ಅಧಿಕಾರಿ, ಸತ್ಯ ಅವರನ್ನು ಕಾರಿನಿಂದ ಹೊರಗೆ ಬರಬೇಕೇಂದು ಆಣತಿ ಇತ್ತಾಗ ಅವರ ವಿದ್ಯಾರ್ಥಿಗಳೂ ಗಾಬರಿಗೊಂಡರು. ಸತ್ಯ ಕೆಳಗಿಳಿದು ತಮ್ಮ ಲೈಸೆನ್ಸ್, ಪಾಸ್ಪೋರ್ಟ್ ಎರಡನ್ನೂ ತೋರಿಸಿದಾಗ, ಅದನ್ನು ಸರಿಯಾಗಿ ನೋಡದೆ, ನೀನು ಎಲ್ಲಿಗೆ ಹೋಗುತ್ತಿರುವೆ? ನಿನ್ನ ಜೊತೆಯಲ್ಲಿರುವವರು ಯಾರು? ನಿನ್ನ ವೃತ್ತಿಯೇನು? ನಿನ್ನ ಧರ್ಮ ಯಾವುದು? ನೀನು ಮುಸ್ಲಿಮ್ ಜನಾಂಗಕ್ಕೆ ಸೇರಿದವನೇ? ನಿನ್ನ ಕಾರಿನಲ್ಲಿ ಬಾಂಬ್ ಇದೆಯೇ? ನೀನೊಬ್ಬ ಉಗ್ರವಾದಿಯೇ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದನಂತೆ. ಅಮೆರಿಕೆಯ ದಕ್ಷಿಣ ರಾಜ್ಯಗಳಲ್ಲಿ ಪೋಲೀಸ್ ಅಧಿಕಾರಿಗಳು ಭ್ರಷ್ಟರು, ಒಂದು ರೀತಿಯಲ್ಲಿ ಲೈಸೆನ್ಸ್ ಗೂಂಡಾಗಳಿದ್ದಂತೆ ಎಂದು ಕೇಳಿದ್ದರಿಂದ ಎಲ್ಲಾ ಪ್ರಶ್ನೆಗೂ ಸಮರ್ಪಕವಾಗಿಯೇ ಉತ್ತರಿಸಿದ ಸತ್ಯಪ್ರಕಾಶ್, ಧರ್ಮದ ಪ್ರಶ್ನೆಗೆ ತಾವು ಒಬ್ಬ ನಾಸ್ತಿಕ ಎಂದು ಉತ್ತರಿಸಿದಾಗ, ಪೋಲೀಸ್ ಅಧಿಕಾರಿಗೆ ಇಷ್ಟವಾಗಲಿಲ್ಲ. ನೀನು ಹೇಳುತ್ತಿರುವುದು ಸುಳ್ಳು, ಎಲ್ಲಾ ವ್ಯಕ್ತಿಗಳಿಗೂ ಒಂದು ಧರ್ಮವಿದ್ದೇ ಇರುತ್ತದೆ ಎಂದು ದಬಾಯಿಸಿದಾಗ, ಸತ್ಯಪ್ರಕಾಶ್, ಇರಬಹುದು, ಆದರೆ ನಾನೊಬ್ಬ ಭೌತಶಾಸ್ತ್ರ ವಿಜ್ಞಾನಿ, ನನಗೆ ಯಾವ ದೇವರೂ ಮತ್ತು ಧರ್ಮದಲ್ಲಿ ನಂಬಿಕೆಯಿಲ್ಲ ಎಂದಾಗ, ಅದು ಸರಿಯಲ್ಲ. ನೀನು ಧರ್ಮನ್ನು ಪಾಲಿಸಬೇಕು. ಅದೇ ಸರಿಯಾದ ದಾರಿ. ಇಲ್ಲದಿದ್ದರೆ ಹೀಗೆ ತೊಂದರೆಗೆ ಸಿಕ್ಕಿಬೀಳುತ್ತೀಯಾ ಎಂದು ಗದರಿದನಂತೆ. ಕಡೆಗೊಮ್ಮೆ ಸತ್ಯನನ್ನು ಬಿಟ್ಟ ನಂತರ, ಅವರ ಜೊತೆಯಲ್ಲಿದ್ದ ಫ಼್ರಾನ್ಸ್ ದೇಶದ ವಿದ್ಯಾರ್ಥಿಯನ್ನು ಕಾರಿನಿಂದ ಹೊರಕ್ಕೆ ಇಳಿಸಿ, ಅವನನ್ನೂಇದೇ ರೀತಿ ಅಸಬಂದ್ಧವಾಗಿ ಪ್ರಶ್ನಿಸಿ, ಕಡೆಗೊಮ್ಮೆ ಅವರನ್ನು ಬೆದರಿಸಿ ಹೊರಟುಹೋದನಂತೆ. ಇದು ಸುಮಾರು ಒಂದು ಗಂಟೆಯ ಕಾಲ ನಡೆದ ಘಟನೆ. ಕಾರಿನಲ್ಲಿದ್ದ ಅವರ ಇತರ ವಿದ್ಯಾರ್ಥಿಗಳು ಹೆದರಿ ನಡುಗಿದ್ದರಂತೆ. ಅವರೆಲ್ಲರ ಕಣ್ಗಳೂ, ಪೋಲೀಸ್ ಅಧಿಕಾರಿಯ ಪಿಸ್ತೂಲ್ ಕಡೆಗೇ ಇತ್ತಂತೆ. ಎಲ್ಲಾದರೂ ಅವನು ತಲೆಕೆಟ್ಟು ಗುಂಡು ಹಾರಿಸಿದರೇನು ಗತಿ ಎಂದು ಹೆದರಿ ಹಣ್ಣಾಗಿದ್ದ ಅವರು ಕಡೆಗೆ ಕಾನ್ಫ಼ರೆನ್ಸ್ ಸ್ಥಳಕ್ಕೆ ತಡವಾಗಿ ತಲುಪಿದಾಗ ಅವರ ಮನಸ್ಸು ತಲ್ಲಣವಾಗಿತ್ತು. ಅಲ್ಲಿನ ವಿಶ್ವವಿದ್ಯಾಲಯದ ಅವರ ಸಹೋದ್ಯೋಗಿಗಳು, ವಿಷಯ ತಿಳಿದು ನಾಚಿಕೆ ಮತ್ತು ಅವಮಾನದಿಂದ ತಲೆತಗ್ಗಿಸಿ ಕ್ಷಮೆ ಕೋರಿದ್ದರೆಂದು ಸತ್ಯ ತಿಳಿಸಿದ್ದು ನೆನಪಿದೆ. ಇದೊಂದೇ ಬಾರಿ ಅಲ್ಲ. ಸತ್ಯ ಅವರ ವೃತ್ತಿ ಜೀವನದಲ್ಲಿ ಇಂತಹ ಘಟನೆಗಳು ಅನೇಕ ಬಾರಿ ಜರುಗಿವೆ. ಏರ್ಪೋರ್ಟಿನಲ್ಲಂತೂ ಅವರನ್ನು ಪ್ರತೀ ಬಾರಿ ವಿಶೇಷವಾದ ತಪಾಸಣೆಗೊಳಪಡಿಸುತ್ತಾರೆ. ಇದು ವರ್ಣದ್ವೇಷವಲ್ಲದೇ ಮತ್ತೇನು? ಕೇವಲ ಮನುಷ್ಯನ ಬಣ್ಣ ಮತ್ತು ಅವನ ಸಂತತಿಯನ್ನು ನೋಡಿ ಅವನನ್ನು ಅವಮಾನಪಡಿಸುವುದು ಯಾವ ನ್ಯಾಯ? ಇಂದಂತೂ ಅಮೆರಿಕೆಯಲ್ಲಿ ಆಫ಼್ರಿಕನ್ ಮೂಲದ ಅಮೆರಿಕನ್ನರನ್ನು ಇನ್ನೂ ಅನ್ಯಾಯವಾಗಿ ಹಿಂಸೆಗೊಳಪಡಿಸಿ ಅವರನ್ನು ಕೊಲ್ಲುವ ಅಮಾನುಷ ಕೃತ್ಯ ಮುಂದುವರೆದಿದೆ. ಮಾನವ ಎಷ್ಟು ತಂತ್ರಜ್ಞಾನ ಮತ್ತು ವಿಜ್ಞಾನದಲ್ಲಿ ಮುಂದುವರೆದರೇನು? ಮಾನವಿಕ ಮೌಲ್ಯಗಳನ್ನು ಕಳೆದುಕೊಂಡು ಪಶುವಿನ ರೀತಿಯಲ್ಲಿ ವರ್ತಿಸುತ್ತಲೇ ಇದ್ದಾನೆ. ಇದು ನಮ್ಮ ಮಾನವ ಕುಲಕ್ಕೇ ಅವಮಾನ.

– ಉಮಾ ವೆಂಕಟೇಶ್.

***********************************************************************

 Black Lives Matter:  ನನ್ನ ಅನುಭವ – ಶ್ರೀವತ್ಸ ದೇಸಾಯಿ

ಇದೇ ವರ್ಷ(2020) ಮೇ ತಿಂಗಳಲ್ಲಿ ಅಮೇರಿಕದ ಮಿನ್ನಿಯಾಪೋಲಿಸ್ ನಲ್ಲಿ ಜಾರ್ಜ್ ಫ್ಲಾಯ್ಡ್ ಎನ್ನುವ ಕರಿಯ ಮನುಷ್ಯನ ಹತ್ಯೆಯಾದ ಮೇಲೆ Black Lives Matter (2013 ರಲ್ಲೇ ಸ್ಥಾಪನೆಯಾಗಿತ್ತು) ಎನ್ನುವ ಘಟಕದ ಪ್ರತಿಭಟನೆ, ಆಂದೋಲನಗಳು ಜಗತ್ತಿನಲ್ಲಿ ಎಲ್ಲ ಕಡೆ ಹರಡಿತು. ಇದೇ ಜೂನ್ ತಿಂಗಳಲ್ಲಿ ”ಅನಿವಾಸಿ’ಯ ಸಂಪಾದಕರು ಓದುಗರ ಅನುಭವಗಳ ಬಗ್ಗೆ ಬರೆಯಲು ಕರೆ ಕೊಟ್ಟರು. ಆಗ ಅವಿತುಕೊಂಡಿದ್ದ ಎರಡು ಅನುಭವಗಳನ್ನು ಹೆಕ್ಕಿ ತೆಗೆದೆ.

ರೇಸಿಸಂ (racism, racialism) ಎಲ್ಲಕಡೆಗೆ, ಬಹುಕಾಲದಿಂದ ಕಂಡುಬರುತ್ತದೆ. ಆಗಾಗ ಈ ವರ್ಣಭೇದ ಅಥವಾ ಜನಾಂಗಗಳಲ್ಲಿಯ ಪಕ್ಷಪಾತ ಧೋರಣೆಯ ಬಗ್ಗೆ ಪ್ರತಿಭಟನೆಗಳು ಕಾರಣಾಂತರಗಳಿಂದ ತಲೆಯೆತ್ತಿ ಕಾಡುತ್ತಾ ಬಂದಿವೆ. ಹತ್ತೊಂಬತ್ತು ನೂರಾ ಎಪ್ಪತ್ತರ ದಶಕದಲ್ಲಿ ಯು ಕೆ ಗೆ ಬಂದ ನಾನು ಹಲವಾರು ಸಣ್ಣ ಪುಟ್ಟದಾದ ಎಂದು ಅನಿಸಿದರೂ, ಒಂದೆರಡು ಮನಸ್ಸಿಗೆ ನೋವು ಮಾಡುವಂತ ಘಟನೆಗಳನ್ನು ಅನುಭವಿಸಿದ್ದರೂ, ನೆನಪಿನ ಮೂಲೆಯಲ್ಲಿ ಒತ್ತಿ ಬದುಕುತ್ತಾ ಬಂದಿದ್ದೇನೆ. ಇತ್ತೀಚಿನ ಘಟನೆಗಳು ಮತ್ತು ಈ ಆಹ್ವಾನದಿಂದ ಆ ನೆನಪುಗಳು ಮತ್ತೆ ಮರುಕಳಿಸಿವೆ.

 1940ರ ಕಾಲದಿಂದಲೂ ದಕ್ಷಿಣ ಏಶಿಯಾದ ವಲಸಿಗ ಡಾಕ್ಟರುಗಳು (ಭಾರತ, ಪಾಕಿಸ್ತಾನ, ಸಿಂಹಳ, ಅಥವಾ ದೂರ ಪ್ರಾಚ್ಯ ದೇಶದವರು) ಈ ದೇಶದಲ್ಲಿ ನ್ಯಾಶನಲ್ ಹೆಲ್ಥ್ ಸರ್ವಿಸ್ (NHS) ದಲ್ಲಿ ಕೆಲಸಮಾಡುತ್ತ ಬಂದಿದ್ದಾರೆ. 1960-70ರ ದಶಕಗಳಲ್ಲಿ ಆ ಸಂಖ್ಯೆ ಹೆಚ್ಚಾದಾಗ ಜನರಲ್ಲಿ ಈ ಭೇದ ಭಾವನೆ ಹೆಚ್ಚಾದಂತೆ ನನ್ನ ಅನಿಸಿಕೆ. ಆಗ ಈದೇಶದ ಬಿಳಿಯರಲ್ಲಿ ಪಾಕಿಸ್ತಾನ, ಭಾರತೀಯ ಮತ್ತಿತರ ಕಂದು-ಕಪ್ಪು ಚರ್ಮದ ವೈದ್ಯರುಗಳು ಮತ್ತಿತರ ಸಿಬ್ಬಂದಿಗಳು ಎರಡನೆಯ ದರ್ಜೆಯವರು ಅನ್ನುವ ಭಾವನೆ ಇತ್ತು.

1) 1970  ಆಸು ಪಾಸು, ಆಸ್ಪತ್ರೆಯಲ್ಲಿ.

1970ರ ಮಧ್ಯದಲ್ಲಿ ಉಚ್ಚ ಶಿಕ್ಷಣಕ್ಕಾಗಿ ನಾನು ಈ ದೇಶಕ್ಕೆ ಬಂದೆ.ಭಾರತದಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದು, ನಂತರ ನನ್ನ ಸ್ಪೆಷಾಲಟಿಯಲ್ಲಿ (ಕಣ್ಣಿನ ರೋಗಗಳ ವಿಷಯಗಳಲ್ಲಿ)  ಸಾಕಷ್ಟು ಅನುಭವವಿದ್ದರೂ ನಾನು FRCS ಡಿಗ್ರಿಗೆ ಓದುವಾಗ ವೇಲ್ಸ್ ಪ್ರಾಂತದಲ್ಲಿ ಆಗ ಜೂನಿಯರ್ ಡಾಕ್ಟರ್ ಅಂತ ಕೆಲಸ ಮಾಡುತ್ತಿದ್ದಾಗ ಆದ ಮೊದಲ ಅನುಭವ. ಒಂದೆರಡು ಸಲ ಮುಂದೆಯೂ ಇಂಥ ಘಟನೆಗಳು ಆದವು. ಹಿಂದಿನ ದಿನ ಬಿಬಿಸಿ ಟೆಲಿವಿಷನ್, ಮತ್ತು ಆ ದಿನದ ಸುದ್ದಿ ಮಾಧ್ಯಮಗಳಲ್ಲಿ ಒಬ್ಬ ವರ್ಣೀಯ ಡಾಕ್ಟರು ’’ತನ್ನ ವೃತ್ತಿಯಲ್ಲಿ ಮಾಡಿದ ತಪ್ಪಿನಿಂದ ಆದ ಹಾನಿ, ಆ ’ಅಪರಾಧ’ಕ್ಕೆ ಮೆಡಿಕಲ್ ಕೌನ್ಸಿಲ್ ಗೆ ದೂರು” ಅನ್ನುವ ಸುದ್ದಿ ಬಿತ್ತರಣೆಯಾಗಿತ್ತು. ಮರುದಿನ ಬೆಳಿಗ್ಗೆ ಆಸ್ಪತ್ರೆಗೆ ಅಪಾಯಿಂಟ್ಮೆಂಟ್ ಬಂದ ರೋಗಿಗಳು ನನ್ನನ್ನು ’ಕರಿಯ’ ಡಾಕ್ಟರೆಂದು ನೋಡಲು ನಿರಾಕರಿಸಿದರು. ಮೊದಲನೇ ಇಂಥ ಅನುಭವದಿಂದ ಸ್ವಾಭಿಮಾನಕ್ಕೆ ಕೊಡಲಿಪೆಟ್ಟು ಬಿದ್ದಂತಾಯಿತಾದರೂ ಆಗ ಪ್ರತಿಭಟಿಸುವ ಸಾಧ್ಯತೆಯೇ ಇರದ್ದರಿಂದ ಬಂದ ಹೊಸತರಲ್ಲಿ ಶಾಂತಿಯಿಂದ ನುಂಗಿಕೊಳ್ಳಬೇಕಾಯಿತು. ಮೊದಲೆರಡು ಸಲ ಇದನ್ನು ಸಹಿಸುವದು ಕಷ್ಟವಾದರೂ ಉಪಾಯವಿಲ್ಲದೆ ಆ ವ್ಯಕ್ತಿಗಳನ್ನು ನನ್ನ ವರಿಷ್ಠರಾದ ’ಬಿಳಿಯ ಕನ್ಸಲ್ಟಂಟನ’ ಕಡೆಗೇ ತಪಾಸಣೆ ಯಾ ಚಿಕಿತ್ಸೆಗೆ ಕರೆದೊಯ್ಯಲು ನರ್ಸ್ ಗೆ ಹೇಳ ಬೇಕಾಗುತ್ತಿತ್ತು. ಒಂದೆರಡು ತಿಂಗಳ ನಂತರ ಇನ್ನೊಮ್ಮೆ ಇದೇ ತರಹ ಘಟನೆ ನಡೆದಾಗ, ತನಗೆ ಆಗಲೇ ಆ ದಿನದ  ರೋಗಿಗಳ ’’ಫುಲ್ ಲಿಸ್ಟ್ ಅಪ್ಪಾಯಿಂಟಮೆಂಟ್ಸ್” ಇರುವಾಗ ಪಾಪ ಆತನಾದರೂ ಏನು ಮಾಡಿಯಾನು? ಈಗಾಗಲೇ ಆ ಹಿರಿಯ ವೈದ್ಯ ಕನ್ಸಲ್ಟಂಟನಿಗೆ ನನ್ನ ಕೆಲಸದಲ್ಲಿ ಪೂರ್ತಿ ವಿಶ್ವಾಸವಿದ್ದುದರಿಂದ ರೋಗಿಗಳಿಗೆ ಆತ ಹೇಳಿದ ಮಾತು: ”ಈತ ನುರಿತ ಡಾಕ್ಟರ್. ನನಗೇ ಏನಾದರೂ ಕಾಯಿಲೆ ಆದಲ್ಲಿ ಈತನಿಂದಲೆ ನನಗೇ ಚಿಕೆತ್ಸೆಮಾಡಿಸಿಕೊಳ್ಳುವಷ್ಟು ನಂಬಿಕೆಯಿದೆ ಈತನ ಮೇಲೆ. ಇಂದು ಆತನನ್ನೇ ನೋಡಬಹುದಲ್ಲ. ಮುಂದಿನ ಸಲ ನೋಡೋಣ.” ಹಾಗೆ ಹೇಳಿ ಮತ್ತೆ ವಾಪಸ್ ನನ್ನ ಕಡೆಗೇ ಕಳಿಸಿ ಸಮಸ್ಯೆಯನ್ನು ಬಗೆಹರಿಸಿದ್ದಲ್ಲದೆ ನನಗೆ ಸರ್ಟಿಫಿಕೇಟ್ ಸಹ ಕೊಟ್ಟಂತೆ ನನಗೆ ಅನಿಸಿತು. ಅದು ಬರೀ ತೋರಿಕೆಯೇ ಅಲ್ಲ ತಾನೆ ಅಂತ ಆಗ ನನಗೆ ಅನಿಸಲೂ ಇಲ್ಲ. ಇಂಥ ಅನೇಕ ಘಟನೆಗಳನ್ನು ನಮ್ಮ ಸಹೋದ್ಯೋಗಿಗಳು ಮತ್ತು ಬೇರೆ ಊರುಗಳಲ್ಲಿಯ ಮಿತ್ರರು ಆಗಿನ ಸಮಯದಲ್ಲಿ ಅನುಭವಿಸಿದ್ದು ಈಗ ನೆನಪಾಗುತ್ತದೆ. ಈಗ ಕಾಲ ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜನಸಾಮಾನ್ಯರಿಗೆ ನಮ್ಮವರ ವೈದ್ಯಕೀಯ ಪರಿಣಿತಿಯ ಬಗ್ಗೆ ಅರಿವಾಗಿದ್ದರೂ ಒಮ್ಮೊಮ್ಮೆ ’ಅಜ್ಞಾನಿಗಳು’ ಆಗಾಗ ಇನ್ನೂ ಸವಾಲೊಡ್ಡುತ್ತಿರುತ್ತಾರೆ ಎಂದು ನನ್ನ ಗ್ರಹಿಕೆ.

2) 1992ರ ಸುಮಾರು ನಡೆದದ್ದು: 

ಆಗ ಜನರ ವಿಚಾರ – ಆಚರಣೆಯಲ್ಲಿ ವರ್ಣಭೇದ ಭಾವನೆ ಗುಪ್ತವಾಗಿದ್ದರೂ ಇನ್ನೂ ”ಸಾಂಸ್ಥಿಕ ವರ್ಣಭೇದ ನೀತಿ” (”Institutional racism”)  ಪದದ ಬಳಕೆ ಅಷ್ಟಾಗಿ ಕೇಳಿ ಬರುತ್ತಿರಲಿಲ್ಲ, ಪತ್ರಿಕೆಗಳಲ್ಲಿ ಚಾಪಿಸುತ್ತಿದ್ದಿಲ್ಲ. ಈ ಮಧ್ಯೆ 22 ಎಪ್ರಿಲ್, 1992 ರಂದು ಸಂಜೆ ಲಂಡನ್ ದಲ್ಲಿ ಒಂದು ಕರಾಳ ದುರ್ಘಟನೆ ಸಂಭವಿಸಿತು. ಸ್ಟೀವನ್ ಲಾರೆನ್ಸ್ ಎನ್ನುವ 19 ವರ್ಷದ ಕರಿಯ ಯುವಕ ಒಂದು ಸಾಯಂಕಾಲ ಮನೆಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದಾಗ ಅವನ ಮೈಮೇಲೆರಗಿದ ಐವರು ಬಿಳಿಯ ಯುವಕರಿಂದ ಆತನ ಘೋರ ಕೊಲೆಯಾಯಿತು. ಅದು ಮುಂದೆ ಸತತವಾಗಿ ಎರಡು ವರ್ಷಗಳ ಕಾಲ ಸುದ್ದಿ ಮಾಡಿತು. ಇನ್ನೂ ಆಗಾಗ ಅದರ ತೆರೆಗಳೆದ್ದು ಅಪ್ಪಳಿಸುತ್ತವೆ. ಅಪರಾಧಿಗಳು ಸಿಕ್ಕರೂ ಅವರಿಗೆ ಶಿಕ್ಷೆಯಾಗಲಿಲ್ಲ. ದೀರ್ಘಕಾಲದ ನಂತರ ಅದರ ತನಿಖೆಯಾಗಿ ನಂತರ ಹೊರಬಿದ್ದುದೇ ಮೆಕ್ಫರ್ಸನ್ ರಿಪೋರ್ಟ್ (1999).ಅದರಲ್ಲೇ ಈ ರೇಸಿಸಮ್ ದ ವ್ಯಾಖ್ಯೆ ಇದೆ: ಒಂದು ಸಮುದಾಯದಲ್ಲಿ ಅಥವಾ ಸಂಘ, ಸಂಸ್ಥೆಯಲ್ಲಿ ಹಾಸುಹೊಕ್ಕ ’ಮಾಮೂಲು’ ಎಂದೆನಿಸಿಕೊಳ್ಳುವ ವರ್ಣಭೇದ ನೀತಿ ಅದು ಎಂದು. ಇದೆಲ್ಲ ಹೊರಬಂದುದು ನನ್ನ ಈ ಕೆಳಗಿನ ಅನುಭವದ ನಂತರ. ಈ ತರದ Institutional racism ಈಗಲೂ ಕಂಡುಬಂದರೆ ಆಶ್ಚರ್ಯವಿಲ್ಲ. ನನ್ನ ಅನುಭವದ ಸಾರ ಹೀಗಿದೆ:

ಅಂದು ನಾನು ನನ್ನ ಕುಟುಂಬದೊಂದಿಗೆ ಕಳೆದ ’ಮಾಮೂಲು’ ಶನಿವಾರವಾಗಿತ್ತು. ಆ ಸಂಜೆ ನನ್ನ ವೋಲ್ವೋ ಕಾರನ್ನು ಎಂದಿನಂತೆ ಸಾವಕಾಶವಾಗಿ ಎಚ್ಚರಿಕೆಯಿಂದ ಡ್ರೈವ್ ಮಾಡುತ್ತ ಆಗತಾನೆ ಬೇಸಿಂಗ್ ಸ್ಟೋಕಿನ ಆ ರೌಂಡಬೌಟ್ ದಾಟಿ ಲಂಡನ್ ಕಡೆಗೆ ಗಾಡಿಯನ್ನು ತಿರುಗಿಸಿದ್ದೆ. ಒಮ್ಮಿಂದೊಮ್ಮೆಲೆ ಎಲ್ಲಿಂದಲೋ ನೀಲಿ ಬೆಳಕಿನ ಫ್ಲಾಷ್ ಲೈಟ್ ಹಾಕಿಕೊಡು ನನ್ನ ಮುಂದೆ ಬಂದೆರಗಿತು ಆ ಪೋಲೀಸ್ ಕಾರು.! ಕಾರನ್ನು ನಿಲ್ಲಿಸಿ ಏನಾಗುತ್ತಿದೆ ಎಂದು ಸುಧಾರಿಸಿಕೊಳ್ಳುವಷ್ಟರಲ್ಲಿ ಕಾರಿನ ಕಿಡಕಿಯ ಗಾಜನ್ನು ಇಳಿಸಲು  ಅತಿಯಾದ ರೋಷದಿಂದ ಹೇಳಿ ಪೋಲಿಸ್ ಅಧಿಕಾರಿ ನಯನಾಜೂಕು ಬಾಹಿರ ಒರಟು ದನಿಯಲ್ಲಿ ಕೇಳಿದ: ”ಈ ತರದ ಕೆಟ್ಟ ರೀತಿಯಿಂದ ಗಾಡಿ ಓಡಿಸುವದನ್ನೆ ಎಂದೂ ನೋಡಿರಲಿಲ್ಲ, ಕುಡಿದಿದ್ದೀಯಾ?” ಎಂದು ಜಬರಿಸಿದ. ನನಗೋ ಆಶ್ಚರ್ಯ ಮತ್ತು ಸಿಟ್ಟು ಸಹ. ಅತ್ಯಂತ ಕಾಳಜಿಪೂರ್ವಕ ಗಾಡಿ ನಡೆಸುವದೇ ನನ್ನ ರೂಢಿ. ಅದಲ್ಲದೆ ನಾ ಹೊರಬಿದ್ದ ಸಭಾಗೃಹದಿಂದ ಕೇವಲ 200 ಅಡಿಗಳಷ್ಟೂ ದೂರವಿರದ ಆ ಜಂಕ್ಷನ್ನಿಗೆ ಬರುವಷ್ಟರಲ್ಲಿ  ವೇಗಮಿತಿ ಮೀರಿರುವ ಪ್ರಶ್ನೆಯೇ ಇರಲಿಲ್ಲ. ಆಗ ತಾನೆ ಆ ಸಭಾಗೃಹದಲ್ಲಿ ಕನ್ನಡಿಗರೊಬ್ಬರು ಏರ್ಪಡಿಸಿದ್ದ ”ಪುರಂದರ ಸ್ಮರಣೆ’” ಎನ್ನುವ ಗಾಯನ ಕಾರ್ಯಕ್ರಮ ಮುಗಿಸಿ ಹೊರಟಾಗ ಆರು ಗಂಟೆಯ ಶರದೃತುವಿನ ಸಂಜೆಯ ಬೆಳಕು ಇನ್ನೂ ಚೆನ್ನಾಗಿಯೇ ಇತ್ತು. ನಾನು ಕುಡಿದಿಲ್ಲ, ಸಂಗೀತ ಕಾರ್ಯಕ್ರಮ ಮುಗಿಸಿಬರುತ್ತಿದ್ದೇನೆಂಬ ಸತ್ಯವನ್ನು ಎಷ್ಟುಸಲ ಹೇಳಿದರೂ ಆತ ಮತ್ತು ಆತನ ಜೊತೆಗಿನ ಪೋಲೀಸ್ ಮಹಿಳೆ ಒಪ್ಪಲು ತಯಾರಿರಲಿಲ್ಲ. ಆ 10 ನಿಮಿಷಗಳ ಆತನ ಉದ್ಧಟ ವರ್ತನೆ ಮಂದುವರೆದು ’ಬ್ರೆಥಲಿಸರ್’ ಮಾಡುತ್ತೇನೆಂದು ಧಮಕಿ ಹಾಕಿದ. ಒಳ್ಳೆಯದೇ ಆಯಿತು, ಆಫೀಸರ್, ನಿಮಗೂ ಖಾತ್ರಿ ಆಗ ಬೇಕಲ್ಲ ಎಂದು ಒಪ್ಪಿದೆ. ಮದ್ಯದ ಲವಲೇಶವೂ ತೋರಿಸಿರಲಿಲ್ಲ ಆ ಯಂತ್ರ. ಆದರೆ ಆತನಿಗೆ ಅಸಮಾಧಾನ, ನಾನು ತಪ್ಪಿತಸ್ಥನಲ್ಲವಲ್ಲ ಎಂದು. ಆ ನಡತೆಗೆ ಏನು ಕಾರಣವಿರಬಹುದು? ಅಥವಾ ಅದುವೇ ಅವರು “ಮಾಮೂಲು” ವರ್ತನೆಯೇ? ಆ ದಿನ ತಿಂಗಳ ಕೊನೆ. ಅವರಿಗೆ `ಟಾರ್ಗೆಟ್` ಮುಟ್ಟಲು ’ಗಿರಾಕಿ’ಗಳು ಬೇಕಾಗಿತ್ತು ಕಾಣಿಸುತ್ತದೆ. ಅದಕ್ಕೇ ಈ ತರದ ಉದ್ಧಟ ನಡತೆಯಿಂದ ಬೆದರಿಸಿ ಒಪ್ಪಿಸಿ ತನ್ನ ಉದ್ದೇಶವನ್ನು ಪೂರೈಸಿಕೊಳ್ಳುತ್ತಿರಬೇಕು, ಎಂದುಕೊಂಡೆ. ಅದು ನನ್ನ ತಪ್ಪು ಗ್ರಹಿಕೆ ಇರಬಹುದು. ತನ್ನ ಬೆನ್ನು ತನಗೆ ಕಾಣದು, ನಿಜ. ನಾನು ಅಂಥದೇನೂ ನಿಯಂತ್ರಣ ಕಳೆದುಕೊಂಡು ಗಾಡಿ ಚಲಾಯಿಸುತ್ತಿರಲಿಲ್ಲವಲ್ಲ, ಮತ್ತೇನು ಕಾರಣ, ನನ್ನಗೆ ಇನ್ನೂ ತಿಳಿದಿಲ್ಲ. ನನ್ನ ಚರ್ಮದ ಬಣ್ಣ, ಜೊತೆಗೆ ನನ್ನ ವೋಲ್ವೋ ಕಾರು ಸ್ವಲ್ಪವೇ ಹಳೆಯದಾದರೂ ಅತಿ ಹಳೆಯ ’ಬ್ಯಾಂಗರ್’ ಕಾರು ಆಗಿರಲಿಲ್ಲ, ನನ್ನ ಮೇಲೆ ಗುರಿಯಿಡಲು. ಇದು ಓದುಗರಿಗೆ ಸಣ್ಣ ವಿಷಯ ಎನಿಸ ಬಹುದಾದರೂ, ನನಗೆ ಮಾತ್ರ ಆತನ ಸೊಕ್ಕು, ಉದ್ಧಟ ವರ್ತನೆ, ಮಾತಿನ ರೀತಿ ನನ್ನ ಮನಸ್ಸನ್ನು ಬಹಳೆ ಘಾಸಿಗೊಳಿಸಿತು. ಯಾಕೆ ಒಬ್ಬ ಕಾಯದೆಗೆ ವಿಧೇಯನಾದ ನಾಗರಿಕನನ್ನು ಇಂತಹ ಅಸಭ್ಯ ಮತ್ತು ಅಸಹ್ಯ ವರ್ತನೆಗೆ ಗುರಿಮಾಡಬೇಕು ಎಂದು ಯೋಚಿಸುತ್ತಲೇ ಇದ್ದೆ. ಯಾವದೂ ತಪ್ಪು ಸಿಗದೆ ನಮ್ಮನ್ನು ಮುಂದೆ ಹೊಗಲು ಬಿಡಲೇ ಬೇಕಾಯಿತಾದರೂ, ಏನಾದರೂ ಹುಳುಕು ಕಂಡುಹಿಡಿಯಲು ಇನ್ನೆರಡು ಪೋಲೀಸು ಕಾರುಗಳೂ ನನ್ನನ್ನು ಸ್ವಲ್ಪ ಸಮಯದ ವರೆಗೆ ಹಿಂಬಾಲಿಸಿದ್ದನ್ನು ಗಮನಿಸಿದೆ. ಅಲ್ಲಿಯವರೆಗೆ ಇಂಥ ಅನುಭವ ಆಗಿರಲಿಲ್ಲ. ಮುಂದೆಯೂ ಆಗಿಲ್ಲ.

ಆ ನಂತರ ಇವೆಲ್ಲ ವಿವರಗಳನ್ನು (ಸಮಯ, ಜಾಗ, ತಾರೀಕು) ಹ್ಯಾಂಪ್  ಶೈರಿನ ಚೀಫ್ ಕಾನ್ಸ್ ಟಬಲ್ ಗೆ ಲಿಖಿತ ಕಂಪ್ಲೇಂಟ್ ಕೊಟ್ಟೆ. `ಶಾಸ್ತ್ರಕ್ಕ` ತನಿಖೆ ಮಾಡಿದಂತೆ ಮಾಡಿದ ಆತನಿಂದ ನನಗೆ ಬಂದ ಉತ್ತರ: “ನಾನು ಆ ಅಧಿಕಾರಿಗಳನ್ನು ಕಂಡು ಹಿಡಿದು ವಿಚಾರಿಸಿದೆ. ಅವರು ಎಲ್ಲ ಆಪಾದನೆಯನ್ನೂ ಅಲ್ಲಗಳೆಯುತ್ತಾರೆ” ಎಂದು. ಸ್ಟಿವನ್ ಲಾರೆನ್ಸ್ ಪ್ರಕರಣ ಬಲ್ಲವರಿಗೆ ಇದರಿಂದ ಆಶ್ಚರ್ಯವಾಗಲಿಕ್ಕಿಲ್ಲ.

ಈ ದೇಶದಲ್ಲಿ ಆಸ್ಪತ್ರೆಗಳು, ಸಾರ್ವಜನಿಕ ವಲಯದ ಆಫಿಸುಗಳು, ಮತ್ತು ಸರಕಾರದ ಸೇವಾ ವಿಭಾಗಗಳಲ್ಲೆಲ್ಲ Institutional racism ಮೊದಲಿಗಿಂತಲೂ ಈಗ ಕಡಿಮೆಯಾಗುತ್ತಿದೆಯೇನೋ ಎಂದು ಅನಿಸುತ್ತದೆ. ಆದರೆ, ನಾನು ಕಂಡಂತೆ  ಈ ದೇಶದಲ್ಲಿ ಮಧ್ಯ- ಮಧ್ಯದಲ್ಲಿ ವರ್ಣಭೇದದ ಅತಿರೇಕದ ಸಂಭವಗಳು, ಪ್ರಕರಣಗಳು ತಲೆಯೆತ್ತುತ್ತಲೇ ಇರುತ್ತವೆ.

3) “ನಿಮ್ಮಂತಿರದಿದ್ದರೂ ನೀವು ನನ್ನನ್ನು ನಿಮ್ಮೊಳಗೆ ಕೂಡಿಸಿ …” (ನಿಸ್ಸಾರ್ ಅಹಮದರ ಕ್ಷಮೆ ಕೋರಿ)

ಇನ್ನು, ಇವುಗಳಿಗೆ ವಿರುದ್ಧವಾದ ಒಂದು ಸಿಹಿ ಅನುಭವ. ನನಗೆ ಮೊದಲಿನಿಂದಲೂ ಫೋಟೋಗ್ರಾಫಿಯಲ್ಲಿ ಆಸ್ಥೆ ಇತ್ತು.  ಆದರೆ ಈ ದೇಶಕ್ಕೆ ಬಂದ ಹೊಸತರದಲ್ಲಿ ವಿಡಿಯೋ ಹವ್ಯಾಸವನ್ನು ಕೈಗೆತ್ತಿಕೊಳ್ಳಲು ಆಸ್ಪದವಾಗಲಿ, ಆ ಉಪಕರಣಗಳನ್ನು ಕೊಳ್ಳುವ ಆರ್ಥಿಕ ಶಕ್ತಿಯಾಗಲಿ ಇರಲಿಲ್ಲ. 

1985ರ ಸುಮಾರು ಒಂದು ಜಾಹಿರಾತನ್ನು ನೋಡಿ ವಿಡಿಯೋ ಕಲೆಯನ್ನು ಕಲಿಯಬೇಕೆಂದು ವಾರಕ್ಕೊಂದರಂತೆ ಮೂರು ದಿನಗಳ ಕೋರ್ಸ್ ನಡೆಸಿದ ನಮ್ಮ ಊರಿನ ವಿಡಿಯೋ ಕ್ಲಬ್ಬನ್ನು ಸೇರಿದೆ, ಸದಸ್ಯರು ನನ್ನನ್ನು ಆದರದಿಂದ ಬರಮಾಡಿಕೊಂಡರು. ಆ ಸಂಘ 20 -25 ಜನರಿದ್ದ ಹೆಚ್ಚಾಗಿ ತಲೆನರೆತ ರಿಟೈರ್ಡ್ ಜನರೇ ಅದರ ಸದಸ್ಯರು. ಅವರ ಸೌಜನ್ಯತೆ, ಆದರ, ಸ್ನೇಹಮಯ ವರ್ತನೆ ನನ್ನ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು ಎಂದರೆ ಅತಿಶಯೋಕ್ತಿಯಲ್ಲ. ಅದಕ್ಕೆ ನಾನಿನ್ನೂ ಅದರ ಸದಸ್ಯನಷ್ಟೇ ಅಲ್ಲ, ಅದರ ಚೇರ್ಮನ್ ಆಗಿಯೂ ಕಳೆದ ಐದು ವರ್ಷಗಳಿಂದ ಇನ್ನೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ ಎನ್ನುವ ಮಾತೇ ಸಾಕ್ಷಿ. ನಾನಿರುವ ಇಂಗ್ಲೆಂಡಿನ ಈಶಾನ್ಯ ವಿಭಾಗದ ಐದಾರು ಕ್ಲಬ್ ಗಳಲ್ಲಿ ನಾನೊಬ್ಬನೇ ವರ್ಣೀಯ ಸದಸ್ಯ ಎಂದರೆ ನನಗೇ ಆಶ್ಚರ್ಯ. ಎಲ್ಲ ಕ್ಲಬ್ಬುಗಳು ಒಂದೆಡೆಗೆ  ಕೂಡಿದಾಗಲೂ ನನಗೆ ಪರಕೀಯ ಎನ್ನುವ ಭಾವನೆ (”’ನಿಮ್ಮೊಳಗಿದ್ದೂ ನಿಮ್ಮಂತಾಗದೆ”) ಒಮ್ಮೆಯೂ ಬಂದಿಲ್ಲ. ಎಲ್ಲರೂ ನನ್ನನ್ನು ಇವನೂ ಒಬ್ಬ ಹವ್ಯಾಸಿ ಫಿಲ್ಮ್ ಮೇಕರ್ ಎನ್ನುವ ದೃಷ್ಟಿಯಲೇ ಬೇರೆ ದೇಶದವನೆಂದಾಗಲಿ ವೇರೆ ವರ್ಣದವನೆಂದಾಗಲಿ ಅಲ್ಲ.

ಮಾನವನು ಮೂಲತಃ ಸ್ನೇಹಮಯಿ. ಆದರೆ ಗುಂಪಿನಲ್ಲಿ ಒಮ್ಮೊಮ್ಮೆ ಪರಕೀಯರ ದ್ವೇಷ (xenophobia) ತಲೆಯೆತ್ತುತ್ತದೆ. ಅವರ ಮನಸ್ಸನ್ನು ಕಲುಷಿತಗೊಳಿಸಿದಾಗ, ಆ ವಿಷಕ್ಕೆ ಹಾಲೆರೆಯುವವರಿರುವಾಗ, ಅದು ದೀರ್ಘಕ್ಕೆ ಹೋಗಿ ಆಗಿನ ಸ್ಟೀವನ್ ಲಾರೆನ್ಸ್ ಆಗಲಿ, ಇತ್ತೀಚಿನ ಜಾರ್ಜ್ ಫ್ಲಾಯ್ಡ್ ನಂತಹ ಪ್ರಕರಣಗಳಾಗಲಿ ನಡೆಯುತ್ತವೆ. ಆದರೆ ಸಣ್ಣ ಪುಟ್ಟ ಮೇಲೆ ಹೇಳಿದಂಥ ಘಟನೆಗಳೂ ಆಗುತ್ತಲೇ ಇರುತ್ತವೆ. ಎಷ್ಟೇ Black Lives Matter ಪ್ರತಿಭಟನೆಗಳಾದರೂ ಇದಕ್ಕೆ ಕೊನೆಯುಂಟೇ?

– ಶ್ರೀವತ್ಸ ದೇಸಾಯಿ