ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫ ಸಾಹೇಬರು – ಶ್ರೀವತ್ಸ ದೇಸಾಯಿ ಲೇಖನ

”ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ” ಸರಣಿಯಲ್ಲಿ ಭಾಗ - 4. ಯು.ಕೆ ಕನ್ನಡ ಬಳಗದ  ಯುಗಾದಿ ಹಬ್ಬದ ಸಂಭ್ರಮದಲ್ಲಿ (ಮೇ 3, 2025) ಅನಿವಾಸಿ ಸಾಹಿತ್ಯಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಈ ಸಾಹಿತ್ಯ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಶರಣರ, ದಾಸರ ಮತ್ತು ಸಂತರ ಕೊಡುಗೆ’ಯನ್ನು ಕುರಿತು ಕ್ಗಾಳ್ಲೆೆದ ಮೂರು ವಾರಗಳಲ್ಲಿ ಮೂರು ಸದಸ್ಯರು ತಮ್ಮ ಚರ್ಚೆಯನ್ನು ಮಂಡಿಸಿದರು. ಇದು ಕೊನೆಯ ಭಾಗ. ಇದರಲ್ಲಿ ತತ್ವಪದಕಾರ ಶಿಶುನಾಳ ಶರೀಫ್ ಸಾಹೇಬರ ಕೊಡುಗೆಯನ್ನು ಇಲ್ಲಿ ಚರ್ಚಿಸಲಾಗಿದೆ. ಆ ದಿನ ಮಂಡಿಸಿದ ಭಾಗದ ವಿಸ್ತೃತ ಆವೃತ್ತಿ ಇದು.

ಶರಣರು ಮತ್ತು ದಾಸರ ನಂತರದ ಕಾಲ ಶಿಶುನಾಳ ಶರೀಫರದು. ಅವಾಗಾಗಲೇ ಬ್ರಿಟಿಷರು ಭಾರತದಲ್ಲಿ ತಳವೂರಿ ವಿಕ್ಟೊರಿಯಾ ಮಹಾರಾಣಿಯ ಆಡಳಿತ ಪ್ರಾರಂಭವಾಗಿತ್ತು. ಅವರ ಒಂದು ಕೃತಿಯಲ್ಲಿ (ತತ್ವಪದದಲ್ಲಿ) ಸಹ ಅದರ ಪರೋಕ್ಷ ಉಲ್ಲೇಖವನ್ನು ಗುರುತಿಸಲಾಗಿದೆ. ಅವರಿಗೆ ನೂರಾರು ‘ಗೀತೆ’ಗಳನ್ನು ರಚಿಸಿದ ವರಿಂದಕೀರ್ತಿ ಸಲ್ಲುತ್ತದೆ. ಕಂಬಾರ ಮುದುಕಪ್ಪನ ಮಗಳಾದ ಬಸಮ್ಮಳ ಸುಶ್ರಾವಕ ದನಿಯಲ್ಲಿ ಹಾಡಿಸಿದ್ದವುಗಳ ದಾಖಲೆ ಸಿಗುತ್ತವೆ. ಆದರೆ ಎಲ್ಲವನ್ನೂ ಯಾರೂ ಬರೆದಿಟ್ಟಿಲ್ಲವಾದ್ದರಿಂದ ನಿಖರವಾದ ಸಂಖ್ಯೆ ದೊರೆಯುವದಿಲ್ಲವಂತೆ.
ಮುಸಲ್ಮಾನ ಕುಟುಂಬದಲ್ಲಿ ಹುಟ್ಟಿದ್ದರೂ ಅವರ ತಂದೆ ‘ಹಿಂದುಗಳ ಮಂತ್ರ, ತಂತ್ರ ಶಾಸ್ತ್ರ, ಜ್ಯೋತಿಷ, ಪುರಾಣ ಇವೆಲ್ಲವಕ್ಕೂ ಮನಸ್ಸು ತೆತ್ತಿದ್ದರಿಂದ’ ಅವರ ಪ್ರಭಾವದಿಂದ ಶರೀಫರು ಎರಡೂ ಮತಗಳನ್ನು ಕಲೆಸಿ ಉಂಡಿದ್ದರು.’ ಅವರ ರಚನೆಗಳನ್ನು ತತ್ವಪದಗಳೆಂದು ಕರೆಯುವ ವಾಡಿಕೆ.

ಬೋಧ ಒಂದೇ ಬ್ರಹ್ಮನಾದ ಒಂದೇ
ಸಾಧನ ಮಾಡುವ ಹಾದಿ ಒಂದೇ
ಆದಿ ಪದ ಒಂದೇ …
ಶಿಶುನಾಳಧೀಶನ ಭಾಷೆ ಒಂದೇ

ಶಿಶುನಾಳ ಶರೀಫರು

ತತ್ವಪದಗಳೆಂದರೇನು?
ಈ ಪದಕ್ಕೆ ಅನೇಕ ವ್ಯಾಖ್ಯೆಗಳಿರಬಹುದು. ತತ್ವಪದಗಳು ನಮ್ಮ ಅಂತರಂಗವನ್ನು ದರ್ಶಿಸುವ ಮೂಲಕ ಅಸ್ಮಿತೆಯ ಅರಿವನ್ನುಂಟುಮಾಡುತ್ತವೆ. ಅವು ತಾತ್ವಿಕ ದೃಷ್ಟಿಯಿಂದಲೇ ಜೀವನದ ರಹಸ್ಯಗಳನ್ನು ಭೇದಿಸಲು ಪ್ರೇರಿಸುತ್ತವೆ. ದೇವರು, ಅನುಭವ, ಅನುಭಾವ, ಜ್ಞಾನ, ಮುಕ್ತಿ ಬಗ್ಗೆ ಹೇಳುತ್ತವೆ. ಆದರೆ ಇಲ್ಲಿ ತತ್ತ್ವಪದ ರಚಯಿತರಿಗೆ ಯಾರಿಗೂ ಅಂಕಿತ ಪ್ರದಾನ ವಗೈರೆ ಮಾಡದಿದ್ದರೂ ತಮ್ಮಿಂದ ತಾವೇ ತಮ್ಮ ಆರಾಧ್ಯ ದೈವದ ಹೆಸರಿನಲ್ಲಿ, ತಮ್ಮ ಗುರುಗಳ ಹೆಸರಿನಲ್ಲಿ ತತ್ವಪದಗಳನ್ನು ಬರೆದರು. ಇದು ಪ್ರಮುಖವಾಗಿ ಗುರು ಶಿಷ್ಯ ಪರಂಪರೆಯ ಪ್ರತಿಪಾದಕ ಪಂಥ ಅನಬಹುದು.ಕನ್ನಡದಲ್ಲಿ ತತ್ವಪದಕಾರರೇ ಬೇರೆ ಭಾಷೆಗಳಲ್ಲಿ ಬೇರೆ ಹೆಸರಿನಿಂದ ಕರೆಯಲ್ಪಟ್ಟರು. ಅವಧೂತರು, ಸಂತರು, ವಾರಕರಿ, ಸೂಫಿ ಇತ್ಯಾದಿ. ಕಬೀರರ ದೋಹಾ, ತುಕಾರಾಮನ ಅಭಂಗ, ಜ್ಞಾನದೇವ ಇವರೆಲ್ಲರವೂ ತತ್ವಪದಗಳೇ. ಇಲ್ಲಿ ಯಾವುದೇ ದೀಕ್ಷೆ, ವ್ರತದ ಹಂಗಿಲ್ಲ. ಕನಕದಾಸರೂ ಕೆಳವರ್ಗದವರೇ ಆದರೂ ವೈದಿಕ ಸಂಸ್ಕೃತಿಯ, ಮಧ್ವಮತದ ಹರಿಕಾರರೆನಿಸಿ ಹರಿದಾಸರಾದರು ಅವರು. ಆ ಮಟ್ಟದ ವೇದಾಧ್ಯಯನದಿಂದ ದೂರವಿದ್ದೂ ಚಿಂತನೆಯ ಆಯಾಮಗಳ ದಾಟುತ್ತ ಅನುಭಾವಿಕರೆನಿಸಿದವರ ಅಭಿವ್ಯಕ್ತಿಯ ಪದಗಳೇ ಈ ತತ್ವಪದಗಳು.

ಹುಟ್ಟು ಮತ್ತು ಬೆಳವಣಿಗೆ
ಆಗಿನ ಧಾರವಾಡ ಜಿಲ್ಲೆಯ (ಈಗ ಹಾವೇರಿ) ಶಿಗ್ಗಾವಿ ತಾಲೂಕಿನಲ್ಲಿ ಗುಡಿಗೇರಿ ರೇಲ್ವೆ ಸ್ಟೇಶನ್ನಿನಿಂದ ಮೂರು ಮೈಲಿ ದೂರದಲ್ಲಿರುವ ಚಿಕ್ಕ ಹಳ್ಳಿಯೇ ಶಿಶುನಾಳ. ಅಲ್ಲಿ ವಾಸಿಸುತ್ತಿದ್ದ ತಂದೆ ಇಮಾಮ ಸಾಹೇಬ ಮತ್ತು ತಾಯಿ ಹಜ್ಜುಮಾ ಅವರು ತಮ್ಮ ಪಾಲಿಗಿದ್ದ ಭೂಮಿಯ ಸಾಗುವಳಿಯಿಂದಲೇ ಬದುಕುತ್ತಿದ್ದರು. ಅವರಿಗೆ ಬಹುಕಾಲ ಮಕ್ಕಳಾಗಿರಲಿಲ್ಲ. ಇಮಾಮ ಸಾಹೇಬರು ಹುಲಗೂರ ಖಾದರ ಷಾವಲಿ ಸಂತರಲ್ಲಿ ಹರಕೆ ಹೊತ್ತರು. ಹಜರತ್ ಖಾದರಿಯವರು ಸಹ ಹಿಂದೊಮ್ಮೆ ಹಿಂದು ಮುಸ್ಲಿಮ್ ಧರ್ಮಗಳ ಸಂಗಮದ ಕನಸು ಕಂಡಿದ್ದರಂತೆ. ಒಮ್ಮೆ ಯಾರೋ ಛೇಡಿಸಿದ್ದಕ್ಕೆ ಬಯಸಿ ಬಂದವರಿಗೆ ಲಿಂಗ ದೀಕ್ಷೆ ಕೊಟ್ಟು ಖಾದರಲಿಂಗ ಅನ್ನಿಸಿಕೊಂಡರು ಮತ್ತು ಮುಂದೆ ಶಿಶುನಾಳರ ಹಾಡುಗಳಲ್ಲಿ ಅವರ ಉಲ್ಲೇಖ ಬರುತ್ತದೆ.
ಇಮಾಮ್ ಮತ್ತು ಹಜ್ಜುಮಾ ದಂಪತಿಗಳು ೧೮೧೯ರ ಮಾರ್ಚ ಏಳನೆಯ ತಾರೀಕಿಗೆ ಜನಿಸಿದ ತಮ್ಮ ಗಂಡು ಮಗುವಿಗೆ ಮೊಹಮ್ಮದ್ ಶರೀಫ್ ಎಂದು ಹೆಸರಿಟ್ಟರು. ಆತನೇ ಮುಂದೆ ಶಿಶುನಾಳ ಶರೀಫ್ ಎಂದು ಪ್ರಸಿದ್ಧರಾದರು. ಹುಡುಗನಾಗಿದ್ದಾಗಲೇ ಎರಡೂ ಮತಗಳ ಪ್ರಭಾವ ಆತನ ಮೇಲಿತ್ತು. ತಂದೆಯಿಂದ ರಾಮಾಯಣ, ಭಾರತ, ಪುರಾಣದ ಕತೆಗಳು ಮತ್ತು ಶಿವ ಶರಣರ ಜೀವನದ ಸಂಗತಿಗಳನ್ನು ಅರಿತು ಆ ಹುಡುಗ ’ತನಗರಿವಿಲ್ಲದೆಯೇ ಮತ ಮರುಳತನದಿಂದ ತನ್ನನ್ನು ಪಾರು ಮಾಡ ಬಲ್ಲ ನಿಜ ಧರ್ಮದ ರಕ್ಷಾವಸ್ತ್ರವನ್ನು ಸಿದ್ಧ ಮಾಡಿಕೊಂಡ’ ಎಂದು ಇತಿಹಾಸಕಾರರು ಹೇಳುತ್ತಾರೆ.

’ದೊರಕಿದ, ಗುರು ದೊರಕಿದಾ ’
ಶರೀಫನಿಗೆ ಒಬ್ಬ ಗುರುವಿನ ತಲಾಷ್ ಇತ್ತು. ಆತನ ಮನಸ್ಸಿನಲ್ಲಿ ಫಲವತ್ತಾದ ಭೂಮಿ ತಯಾರಾಗಿತ್ತು. ಅದರಲ್ಲಿ ಬೀಜ ಬಿತ್ತ ಬೇಕಾಗಿತ್ತು. ಅದೃಷ್ಟವಶಾತ್ ಈ ಹುಡುಗನ ಊರಿಗೆ ಪಕ್ಕದ ಊರಿನಿಂದ ಒಬ್ಬ ಬ್ರಾಹ್ಮಣ ಬಂದನು. ಆತ ಜಾತಿ ಮತಗಳ ಕಟ್ಟುಪಾಡುಗಳಿಗೆ ಸೊಪ್ಪು ಹಾಕದ ಮತ್ತು ವೇದ ಶಾಸ್ತ್ರಗಳನ್ನೆಲ್ಲ ಅರೆದು ಕುಡಿದ ಸ್ಮಾರ್ತ ಬ್ರಾಹ್ಮಣ; ದೇವಿ ಉಪಾಸಕ. ಆತನೇ ಬಹು ಮಹಿಮಾವಂತ ಎಂದು ಹೆಸರು ಗಳಿಸಿದ ಗೋವಿಂದ ಭಟ್ಟ. ಆತ ಕಟ್ಟುಪಾಡುಗಳಿಗೆ ಹೊರತಾಗಿದ್ದ. ಕೆಲವರು ಹಬ್ಬಿಸಿದ ವದಂತಿ ’ಸೆರೆ ಕುಡೀತಾನೆ, ಗಾಂಜಾ ಸೇದತಾನೆ, ಯಾರಂದರೆ ಅವರಿಂದ ಮುಟ್ಟಿಸಿಗೋತಾನ,’ ಅಂತ. ಆದರೂ ಜನರಿಗೆ ಆತನ ವಿದ್ವತ್ತಿನ ಬಗ್ಗೆ ಗೌರವ. ಅಂತೆಯೇ ಆತನ ತಂದೆ ಶರೀಫನನ್ನು ಅವರ ಹತ್ತಿರ ಕರೆದು ಕೊಂಡು ಹೋದನು. ಮೊದಲ ಭೇಟಿಯಲ್ಲೇ ಹುಡುಗನ ವೇದಾಂತ ನೆಲೆಯನ್ನು ಕಂಡು ಭಟ್ಟರಿಗೆ ಅಚ್ಚರಿ. ತನ್ನಲ್ಲಿ ಅನುಗ್ರಹ ಬೇಡಿ ಬಂದ ಇಮಾಮ ಸಾಹೇಬನನ್ನು ’ಈ ಹುಡುಗನ್ನ ನನ್ನ ಉಡಿಗೆ ಹಾಕಿ ಬಿಡು’ ಅಂತ ಗೋವಿಂದ ಭಟ್ಟ ಕೇಳಿದೊಡನೆ ತಂದೆ ಒಪ್ಪಿಬಿಟ್ಟನು. ಶರೀಫನೋ ಆತನನ್ನು ಗುರುವೆಂದು ಕೂಡಲೇ ಒಪ್ಪಿದನಂತೆ. ಅವರ ಬಗ್ಗೆ ಒಂದು ಪದ್ಯದಲ್ಲಿ ಹೀಗೆ ಹಾಡಿದನು :
”ದೊರಕಿದ ಗುರು ದೊರಕಿದಾ
ಪರಮಾನಂದ ಬೋಧ ಅರುವಿನೊಳಗೆ ಬಂದು
ದೊರಕಿದಾ ಗುರು ದೊರಕಿದಾ
ಕರಪಾತ್ರೆ ಹಿಡಿದು ಈ ನರ ಶರೀರದಿ ತನ್ನ
ಅರುವ ತನಗೆ ತೋರಿ ಪರಮ ನಂಬುಗೆಯಲಿದೆ”ಯೆಂದು. ಗುರು ಶಿಷ್ಯರು ಹತ್ತಿರವಾದರು.
ಸ್ವಲ್ಪ ಕಾಲದ ನಂತರ ಗುರು ಆತನ ಕೊರಳಿಗೆ ತಮ್ಮ ಮೈಮೇಲಿದ್ದ ಜನಿವಾರವನ್ನು ಹಾಕಿ ಬಿಟ್ಟರು! ಈ ಸಾಂಕೇತಿಕ ಉಪನಯನದಿಂದ ಭಾವ ಪರವಶನಾಗಿ ಗುರುವಿಗೆ ಉದ್ದಂಡ ನಮಸ್ಕಾರ ಹಾಕಿಬಿಟ್ಟ ಶರೀಫ ಉದ್ಗಾರ ತೆಗೆದು ಕವನ ರಚಿಸಿದ:
”ಹಾಕಿದ ಜನಿವಾರವ ಸದ್ಗುರುನಾಥ
ಹಾಕಿದ ಜನಿವಾರವ ನೂಕಿದ ಭವ ಭಾರವ
ಲೋಕದಿ ಬ್ರಹ್ಮಜ್ಞಾನ ನೀ ಪಡೆಯೆಂದು.”
ಅವರೀರ್ವರ ಸಂಬಂಧ ಗಾಢವಾಗಿ ಕೊನೆಯ ವರೆಗೆ ಉಳಿಯಿತು.

ಆಧ್ಯಾತ್ಮದ ಕಡೆಗೇ ಒಲವು ಇದ್ದ ಶರೀಫರು ಊರೂರು ತಿರುಗುತ್ತಿದ್ದರು. ತಂದೆ ತಾಯಿಗಳು ಚಿಂತೆಗೀಡಾಗಿ ಕುಂದುಗೋಳದ ಫಕೀರಸಾಹೇಬರ ಮಗಳು ಫಾತಿಮಾಳೊಂದಿಗೆ ಮದುವೆ ಮಾಡಿದರು. ಸ್ವಲ್ಪ ಸಮಯದ ನಂತರ ಲತ್ತುಮಾ ಎಂಬ ಮಗಳೂ ಹುಟ್ಟಿದಳು. ಆದರೆ ಅನತಿ ಕಾಲದಲ್ಲೆ ಇಬ್ಬರೂ ಮರಣ ಹೊಂದಿದರು. ಹೆಂಡತಿ ಸತ್ತಾಗಲೂ ಶರೀಫರು ದುಃಖಿಸಲಿಲ್ಲ:
’ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ’
ಎಂದು ಹಾಡಿದರು.
ಕಾಲರಾದಿಂದ ಮಗಳ ಮರಣದ ನಂತರವೂ ನಿರ್ಲಿಪ್ತತೆ! ಸಂಸಾರ ಬಂಧನದಿಂದ ಮುಕ್ತನಾದೆನೆಂದು ಉರ್ದುದಲ್ಲಿ ಆಶು ಕವನ ರಚಿಸಿದರು:
’ದುಃಖಮೆ ಪಡಾ ಮನ್ ಸುಖ ನಹಿ ಮಾಯಾ
ಟಕತಿ ಮರನ ರಖವಾಲರೆ’ (ದುಃಖ ಸಾಗರದಲ್ಲಿ ಬಿದ್ದಿದೆ ಮನಸ್ಸು; ಮರಣ ತುಂಬಿದ ಮಾಯಾಮಯ ಸಂಸಾರದಲ್ಲಿ ಸುಖವೇ ಇಲ್ಲ,ಪರಮಾತ್ಮನೇ!) ಕುಡಿಯುವುದು, ತಿನ್ನುವುದು ಇದರಲ್ಲೆ ಕಾಲ ಹರಣ ಮಾಡಿದರೆ ಮರಣ ಸದಾ ನಮ್ಮನ್ನು ದೃಷ್ಟಿಸುವಾಗ ಭಗವಂತನರಿಯುವುದು ಯಾವಾಗ ಎಂದರು.
ಶರೀಫ ಸಹೇಬರು ನವಲಗುಂದದ ನಾಗಲಿಂಗ ಶಿವಯೋಗಿಗಳು ಮತ್ತು ಗರಗದ ಮಡಿವಾಳೇಶ್ವರರ ಜೊತೆ ತ್ರಿಮೂರ್ತಿಗಳಂತೆ ಊರೂರು ತಿರುಗಿದರು. ಗುರುವಿನ ಸಂಬಂಧವೂ ಇತ್ತು.”ಗುರುವೆಂದರೆ ನಿಜಕೆ ಈತನೇ, ದೊರೆಯೆಂದರು ನಿಜಕೆ ಈತನೇ, ಕಟಕಿ ನುಡಿಗೆ ಬಾಗದಿರುವನು–ಏನು ದಿಟ್ಟ!” ಎಂದು ಹಾಡಿದರು.
ಗೋವಿಂದ ಭಟ್ಟ ಗುರುಗಳನ್ನು ಅವರು ಸಾಯುವ ವರೆಗೆ ಸೇವೆ ಮಾಡಿದರು. ನೂರಾರು ಕವಿತೆಗಳನ್ನು ರಚಿಸಿದರು.

+++
ಶರೀಫರ ಅನೇಕ ಕವಿತೆಗಳು ಅವರ ಬಾಳಿನ ಘಟನೆಗಳ ಕಾರಣವಾಗಿ ಹುಟ್ಟಿದವು ( topical) ಎಂಬ ಮಾತಿದೆ. ಘಟನೆಗಳನ್ನು ಆಧರಿಸಿ ಪದ್ಯಗಳು ಹುಟ್ಟಿದವೋ ಅಥವಾ ಪದ್ಯವನ್ನು ನೋಡಿ ಜನ ಕಥೆ ಕಟ್ಟಿದರೋ ಹೇಳುವಂತಿಲ್ಲ. ನಂತರದ ಅನೇಕ ಪದ್ಯಗಳನ್ನೋದಿದಾಗ ಈ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಅವರ ಅನೇಕ ಪದ್ಯಗಳು ಆಶು ಕವನಗಳು ಎನ್ನುವದರಲ್ಲಿ ಸಂದೇಹವಿಲ್ಲ. ಉದಾಹರಣೆಯಾಗಿ ಈ ಮೊದಲೇ ಉಲ್ಲೇಖಿಸಿದ ಉರ್ದು ಕವನಗಳು ಅಂಥವೇ.
ಇನ್ನೊಂದು ಪದ್ಯ. ಶರೀಫರನ್ನು ಮೆಚ್ಚಿಕೊಂಡ ಚೆಲುವೆಯೊಬ್ಬಳು ಅವರು ಕಾರಡಿಗೆಯ ಶಾಲೆಯಿಂದ ಎಂದಿನಂತೆ ಊರಿಗೆ ಮರಳುವಾಗ ಒಂದು ರಾತ್ರಿ ಕತ್ತಲೆಯಲ್ಲಿ ಎದುರಾಗಿ ತನ್ನ ಮನಸ್ಸಿನ ಮಾತು ಹೇಳಿಕೊಂಡಾಗ ಬರೆದ ಕವಿತೆಯೇ ’ಹಾವು ತುಳಿದೆನೇ ಮಾನಿನಿ’ ಎನ್ನುವ ರಚನೆ.
”ಹಾವು ತುಳಿದೆನೇ/ ಹಾವು ತುಳಿದು ಹಾರಿನಿಂತೆ/ ಜೀವ ಕಳವಳಿಸಿತೇ ಗೆಳತಿ” ಎಂದು ಪ್ರಾರಂಭ ಮಾಡುತ್ತಾರೆ ಆ ಕವಿತೆಯಲ್ಲಿ. ಆಕೆಗೆ ಸಾಂತ್ವನ ಹೇಳಿ ನುಂಗ ಬಂದಿದ್ದ ಮೋಹದಿಂದ ಪಾರಾದೆ ಅಂತ ಕೊನೆಯಲ್ಲಿ ಹೇಳುತ್ತಾರೆ:
”ದೇವಾ ನೀನೇ ಗತಿಯೋ ಎಂದೆ … ಹಾವಿನ
’ಶಿರವ ಮೆಟ್ಟಿದೆ ಶಿವನ ದಯದಿ.”
ಇದೇ ತರಹದ ಅನೇಕ ಪ್ರಾಣಿ ಪ್ರತೀಕಗಳು ಅವರ ಕವನಗಳಲ್ಲಿ ಸಿಗುತ್ತವೆ. ಚೋಳು (ಚೇಳು), ಕುದುರೆ, ನರಿ, ನಾಯಿ ಎಲ್ಲವೂ ರೂಪಕಗಳಾಗುತ್ತವೆ. ಶರೀಫರು ಅನುಭಾವಿ ಕವಿ. ಲೌಕಿಕದ ಎಲ್ಲ ಬೆಡಗು ಬಿನ್ನಾಳಗಳನ್ನುಬಲ್ಲವರಾಗಿದ್ದರು. ತಮ್ಮ ಲೌಕಿಕ ಅನುಭವಗಳ ಸಾರವನ್ನು ತತ್ವಪದಗಳಲ್ಲಿ ಎರಕ ಹೊಯ್ದು ಹಾದಿ ಜನರಿಗೆ ತಲುಪಿಸಿದರು. ಎಲ್ಲ ಮತಗಳಬಗ್ಗೆ ಸಮನ್ವಯ ದೃಶ್ಟಿಯಿಂದ ನೋಡಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿ ಅಳಿಲು ಸೇವೆಯನ್ನು ಮಾಡಿದರು. ಉಳಿದ ಕವಿವರ್ಯರಂತೆ ಅವರನ್ನು ಹಿಂಬಾಲಿಸುವ ಅನುಯಾಯಿಗಳಿರಲಿಲ್ಲವೆಂತಲೇ ಪರಂಪರೆಯಾಗಲು ಸಾಧ್ಯವಿರಲಿಲ್ಲ. ಅದಲ್ಲದೆ ಅವರು ಬದುಕಿದ ಕಾಲವೂ ಪ್ರತಿಕೂಲವಾಗಿರಬೇಕು,ಎನ್ನುವುದು ಇನ್ನೊಂದು ಕಾರಣವಿರಬೇಕು.

ಶಿಶುನಾಳರ ಕವನಗಳ ಆಕರ್ಷಣೆ
ಬರಕೋ ಪದ ಬರಕೋ -ಜತೆಗೆ
ಅದರನ್ವಯ ತಿಳಕೋ;

ಗುರು ಗೋವಿಂದನ ಸ್ತುತಿ ಬರಕೋ
ಧರೆಯೊಳು ಶಿಶುನಾಳಾಧೀಶನ ಪಾದಕೆ
ಕರಕೊಂಡು ಹೋಗೋ ವರ ಪಡಕೋ.

ಅವರ ಕವನಗಳು ಬಾಯಿಂದ ಬಾಯಿಗೆ ಹರಿದು ಜನರನ್ನು ತಲುಪಿ ಪ್ರಸಿದ್ಧಿ ಪಡೆದವು. ಅವುಗಳನ್ನು ಅವರಂತೂ ಬರೆದಿಡಲಿಲ್ಲ. ಕುಂಬಾರ ಮುದುಕಪ್ಪ ಮತ್ತು ಆತನ ಮಗಳು ಬಸಮ್ಮ ಹಾಡಿದ ನಂತರ ಎಚ್ ಟಿ ಮಹಾಂತೇಶ ಶಾಸ್ತ್ರಿಗಳು ಸಂಗ್ರಹಿಸಿದ್ದನ್ನು ಗದುಗಿನ ಶಾಬಾದಿಮಠ ಬುಕ್ ಡಿಪೋ ಮುದ್ರಿಸಿ, ಮರುಮುದ್ರಣಮಾಡುತ್ತ ಬಂದುದು ತಿಳಿದು ಬರುತ್ತದೆ. ಕವಿಯ ಉತ್ತರ ಕರ್ನಾಟಕ ಭಾಷೆಯನ್ನು ಮತ್ತು ಅವರು ಉಪಯೋಗಿಸುವ ಅಸಾಮಾನ್ಯ ರೂಪಕಗಳನ್ನು ಅರ್ಥಮಾಡಿಕೊಳ್ಳಲು ಸಮಾನ್ಯ ಓದುಗನಿಗೆ ಬಹುಕಾಲ ಕಷ್ಟವಾಗಿರಬೇಕು. ಉದಾಹರಣೆಗಾಗಿ ’ಕೋಡಗನ ಕೋಳಿ ನುಂಗಿತ್ತ” ಕವನ. ಇಲ್ಲಿ ಕೋಡಗ ಎಂದರೆ ಚಂಚಲ ಮನಸ್ಸನ್ನು ಸೂಚಿಸುವ, ಟೊಂಗೆಯಿಂದ ಟೊಂಗೆಗೆ ಹಾರುವ ಮರ್ಕಟ. ಕೋಳಿಯೆಂದರೆ ಸೂರ್ಯೋದಯಕ್ಕೆ ಕೂಗುವ ಕೋಳಿ ಅಂದರೆ ಕತ್ತಲೆಯೆಂಬ ಅಜ್ಞಾನವನ್ನು ನುಂಗಿ ತಿಳುವಳಿಕೆಯನ್ನು ಬೆಳಗುವುದು. ಮುಂದಿನ ಚರಣದಲ್ಲಿ ನರ್ತಕಿಯ (ಪಾತರದವಳು) ಗತಿಗೆಡಿಸುವ ಶಕ್ತಿ ಮದ್ದಲಿಯಲ್ಲಿದೆ. ಲೌಕಿಕದಲ್ಲಿ ಎಷ್ಟೇ ದೊಡ್ಡ ವ್ಯಕ್ತಿತ್ವವನ್ನುಳ್ಳವನಾಗಿದ್ದರೂ ಶಿಷ್ಯನ ಮೋಹ ಅಥವಾ ಅಹಂಭಾವವನ್ನು ಗುರುವಿನ ಪಾದದ ಮಹಿಮೆ ನುಂಗಿಹಾಕುತ್ತದೆ ಎನ್ನುವ ತಾತ್ಪರ್ಯ! ಅದೇ ಅರ್ಥ ಉಳಿದ ರೂಪಕಗಳಾದ ಒನಕೆ-ಒರಳು, ಬೀಸುವ ಕಲ್ಲು-ಗೂಟಗಳಲ್ಲಿಯೂ ಇದೆ.
ಅವರ ಅನೇಕ ಪದ್ಯಗಳಲ್ಲಿ ಮೇಲಿಂದ ಮೇಲೆ ಸಂಖ್ಯೆಗಳು ಆರು (ಅರಿಷಡ್ವರ್ಗಗಳು), ಎಂಟು (ಮದಗಳು), ಮೂರು (ತ್ರಿಕರಣಗಳು, ದೇಹಗಳು) ಬರುತ್ತವೆ. ಮಾನವನಿಗೆ ಇಂದ್ರಿಯ ನಿಗ್ರಹ ಎಷ್ಟು ಮುಖ್ಯ, ಅದಿಲ್ಲದಿದ್ದರೆ ಕಾಮ ಆತನನ್ನು ಅವನತಿಗಿಳಿಸುತ್ತದೆ ಎನ್ನುವ ಸೂಚನೆಯನ್ನು ’ಕುಕ್ಷಿಯ ಕೆಳಗಿನ ಇಕ್ಷುವೆ ತಾನಾದ’ ಮಂಗವನ್ನು ಒಂದು ಕವಿತೆಯಲ್ಲಿ ವರ್ಣಿಸಿದರೆ ಇನ್ನೊಂದರಲ್ಲಿ ’ಶಿವನ ತೊಡೆಯ ಕೆಳಗಿರುವಂಥ ಕಪ್ಪೆ’ಯ ಪ್ರತಿಮೆಯಲ್ಲಿ ಅದನ್ನೇ ಸಂಕೇತಿಸುತ್ತಾರೆ. ಹುಚ್ಚು ನಾಯಿಯ ಪ್ರತಿಮೆಯಲ್ಲೂ ಅದೇ ವಸ್ತು ’ಇಳೆಯೊಳೆಲ್ಲರ ತೊಡೆ ಹಿಡಿಯುತ ಹಲ್ಲೊಳು ತಳಮಳಗೊಳಿಸಿತು ಹುಚ್ಚಿಡಿಸಿ’ ಎಂದು.

ದೇಹವೆನ್ನುವ ದೇವಾಲಯ
ಗುಡಿಯ ನೋಡಿರಣ್ಣಾ-ದೇಹದ
ಗುಡಿಯ ನೋಡಿರಣ್ಣಾ…
ಧೀರ ನಿರ್ಗುಣನ ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರಾಗಿರುತಿಹ
ಗುಡಿಯ ನೋಡಿರಣ್ಣಾ
ಎನ್ನುವಲ್ಲಿ ಬಸವಣ್ಣನವರ ’ಉಳ್ಳವರು ಶಿವಾಲಯವ ಮಾಡಿಹರು/ ನಾನೇನು ಮಾಡುವೆ ಬಡವನಯ್ಯಾ/ ಎನ್ನ ಕಾಲೇ ಕಂಬ ದೇಹವವೇ ದೇಗುಲ’ ಎನ್ನುವ ಭಾವವನ್ನು ಕಾಣುತ್ತೇವೆ. ’ಧರಣಿ ವಿಸ್ತಾರ ನೋಡಮ್ಮ’ ಎನ್ನುವ ಪದ್ಯದಲ್ಲಿ ಬರುವ ಸಾಲುಗಳಿವು: ”ಧರಣೀಶ ರಾಣಿ ಕರುಣದಿ ರಾಜ್ಯಕ/ ತರಿಸಿದ ಘನಚೋದ್ಯವೋ, ಚೀನಾದ ವಿದ್ಯವೋ’ ಇವು ಬ್ರಿಟಿಶ್ ರಾಣಿಕಕಾಲದಲ್ಲಿ ಬರೆದುದು. ಗಿರಣಿ ಶರೀರದ ವರ್ಣನೆಯೊಂದಿಗೆ ಯೋಗ ಸಾಧನೆಯ ಅಂಶಗಳನ್ನೂ ನುಡಿಯುತ್ತದೆ ಎನ್ನುತ್ತಾರೆ ವಿಮರ್ಶಕರು. ಶಿಶುನಾಳ ಋಷಿಯನ್ನು ಅದರಲ್ಲಿ ನೇಯ್ಗೆಗಾರನೆಂದು ಅರ್ಥೈಸುತ್ತಾರೆ.

ಅವಸಾನ – ’ಶರಣರ ಬದುಕನ್ನು ಮರಣದಲ್ಲಿ ನೋಡು’
೧೮೮೯ರಲ್ಲಿ ಅವಸಾನದ ಗಳಿಗೆ ಬಂದಾಗ ವಿಭೂತಿ ವೀಳ್ಯ ಆಚರಿಸಿ ದೇಹತ್ಯಾಗ ಮಾಡಲು ಬಯಸಿದರು. ಶರೀಫರಂಥ ದೊಡ್ಡವರಿಂದ ಪೂಜಿಸಿಕೊಳ್ಳಲು, ಅವರತಲೆಯನ್ನು ಕಾಲ ಮೇಲೆ ಇರಿಸಿಕೊಳ್ಳಲುಯಾವ ಜಂಗಮರೂ ಒಪ್ಪಲಿಲ್ಲ. ಕಡೆಗೆ ಅವರ ಮಾತು ಮೀರಲಾರದೆ ಹಿರೆಮಠ ಕರಿಬಸಯ್ಯನವರು ಹಿಂಜರಿಯುತ್ತ ಒಪ್ಪಿದರಂತೆ. ಅವರ ಇಚ್ಛೆಯ ಪ್ರಕಾರ ಅವರತಲೆಯ ಮೇಲೆ ಪಾದವಿಟ್ಟರಂತೆ. ಅಂತ್ಯಕ್ರಿಯೆ ಎರಡೂ ಮತಗಳ ವಿಧಿಯ ಪ್ರಕಾರ ಆಯಿತಂತೆ. ಈಗ ಶರೀಫರ ಗದ್ದುಗೆಯ ಎಡಭಾಗದಲ್ಲಿ ಮುಸಲ್ಮಾನರು ಕುರಾನದಿಂದ ಕಲಮಾ ಓದಿ ಸಕ್ಕರೆ ಓದಿಸಿ ಹಂಚುತ್ತಾರೆ; ಬಲಬದಿಗೆ ಹಿಂದುಗಳು ಹಣ್ಣು ಕಾಯಿ ಹೂ ಅರ್ಪಿಸಿ ಪೂಜಿಸುತ್ತಾರೆ. ಶಿಶುನಾಳ ಊರಲ್ಲಿ ಕಟ್ಟಿದ ಭವ್ಯ ಸಮಾಧಿಯ ಹತ್ತಿರ ಮುಸಲ್ಮಾನ ಮತ್ತು ಹಿಂದುಗಳು ಜೊತೆಯಾಗಿಯೇ ಶಿವರಾತ್ರಿಯ ಹುಣ್ಣಿವೆಯ ಆಸು ಪಾಸು ಮೂರು ದಿನಗಳ ಜಾತ್ರೆ ಆಚರಿಸುತ್ತಾರೆ. ಭಿನ್ನ ಮತೀಯರು ಕಲೆತು ಕೂಡುವದು ಈ ಆದಿ ’ಸಮನ್ವಯ ಕವಿಗೆ’ ಗೌರವ ಅರ್ಪಿಸಿದಂತೆಯೂ ಆಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಸಿ. ಅಶ್ವಥ್ ಅವರ ರಾಗ ಸಂಯೊಜನೆಯಿಂದ ಶರೀಫರ ಆಡಿಯೋ ಕೆಸೆಟ್ಟುಗಳಿಂದ ಶರೀಫರನ್ನು ಜನರು ಗುರುತಿಸುತ್ತಿದ್ದಾರೆ. ಅವರ ಜೀವನ ಚರಿತ್ರೆ ಹೇಳುವ ಸಿನಿಮಾ ಸಹ ಆಗಿದೆ.
ಶರೀಫರ ಜೀವನ ಮತ್ತು ’ಗೀತೆ’ಗಳ ಆಳ ಅಭ್ಯಾಸ ಮಾಡಿದ ಡಾ ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟರು ಹೇಳುವ ಪ್ರಕಾರ: ”ನೀತಿಬೋಧೆ ಮಾಡುತ್ತಲೇ ತಮ್ಮ ಪದಗಳಿಗೆ ಕಾವ್ಯದ ಹೊಳಪನ್ನು ನೀಡಿದ ಶರೀಫರ ಕೃತಿಗಳನ್ನು ಪುರಂದರ, ಕನಕರಂಥ ಹಿರಿಯ ಕೀರ್ತನಕಾರರ ಕೃತಿಗಳ ಜೊತೆ ಅಭ್ಯಾಸಮಾದುವ ಅಗತ್ಯವಿದೆ. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅವರಿಗೆ ಸಲ್ಲಬೇಕಾದ ಸ್ಥಾನವನ್ನು ನಾವು ಸಮರ್ಪಕವಾಗಿ ಗೊತ್ತು ಮಾಡಬೇಕಾಗಿದೆ.”

ಲೇಖನ: ಶ್ರೀವತ್ಸ ದೇಸಾಯಿ

ಈ ಲೇಖನಕ್ಕೆ ಸಹಾಯ ಮಾಡಿದ ಪುಸ್ತಕಗಳನ್ನು ಮತ್ತು ಅಮೂಲ್ಯ ಒದಗಿಸಿದ ಡಾ ಶಿವಪ್ರಸಾದ್, ಸರೋಜಿನಿ ಪಡಸಲಗಿ ಮತ್ತು ಡಾ C ನವೀನ್ ಅವರಿಗೆ ಋಣಿ.

ವಚನ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ  ಮತ್ತು ಮಹಾದೇವಿ -ಡಾ /  ದಾಕ್ಷಾಯಿನಿ  ಗೌಡ ಅವರ ಲೇಖನ


ಈ ವರ್ಷ ಮೇ ತಿಂಗಳಿನ ಅನಿವಾಸಿಯ ಉಗಾದಿ ಕಾರ್ಯಕ್ರಮದಲ್ಲಿ ಶರಣರ, ದಾಸರ, ಸಂತರ ಸಾಹಿತ್ಯದ ಬಗ್ಗೆ ಚರ್ಚಾಗೋಷ್ಟಿಯಲ್ಲಿ ನಾನು, ಶರಣ ಸಾಹಿತ್ಯದಲ್ಲಿ  ಮಹಿಳೆಯರ ಪಾತ್ರ  ಮತ್ತು ಅಕ್ಕಮಹಾದೇವಿಯಯ ಬಗ್ಗೆ ನನ್ನ ಕೆಲ ಮಾತುಗಳನ್ನು ಹಂಚಿಕೊಂಡೆ. ಅದನ್ನು ಮತ್ತೊಮ್ಮೆ ಬರವಣಿಗೆಯ  ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ.

ವಚನ ಸಾಹಿತ್ಯದ ಮೂಲಕ ಕರ್ನಾಟಕದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಮಹಿಳೆಯರು ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಇದಕ್ಕೆ ಮುಂಚೆ ದಿಗಂಬರ ಜೈನ ಧರ್ಮವು ಜನಪ್ರಿಯವಾಗಿದ್ದು , ಈ ಧರ್ಮದಲ್ಲಿ ಸ್ತ್ರೀಯರಿಗೆ ಯಾವ ರೀತಿಯ ಸ್ಥಾನಮಾನಗಳಿರಲಿಲ್ಲ. ಜೈನಧರ್ಮವು, ಯಾವ ಹೆಣ್ಣಿಗೂ ಮೋಕ್ಷ ದೊರೆಯುವುದು ಸಾಧ್ಯವಿಲ್ಲವೆಂದು ನಂಬಿದ್ದಿತು.

೧೧ನೇ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿದ ವಚನ ಸಾಹಿತ್ಯವು, ಹೊಸ ಚಳುವಳಿಯನ್ನು ಆರಂಭಿಸಿ, ಸಂಪ್ರದಾಯ ಸಮಾಜದ ವಿರುದ್ಧ ಬಂಡೆದ್ದು, ಹೆಣ್ಣು ಗಂಡಿನಂತೆಯೇ ಮೋಕ್ಷ ಗಳಿಸಬಲ್ಲಳೆಂದು ಸಾರಿದರು. ಈ ಮನೋಭಾವದಿಂದಾಗಿ ವಚನಯುಗದಲ್ಲಿ ಹಿಂದೆಂದೂ ಇಲ್ಲದಷ್ಟುಸಂಖ್ಯೆಯಲ್ಲಿ ಸ್ತ್ರೀಯರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡರು.

ಬದಲಾವಣೆಯ ಹೊಸ ರೂಪವನ್ನು ಜನ ಸಾಮಾನ್ಯರಿಗೆ ಪರಿಚಯಿಸಿತು. ಈ ಪ್ರಭಾವಶಾಲಿ ಮಾಧ್ಯಮ ಮುಂದಿನ ಸಾಹಿತ್ಯ ಪರಂಪರೆಗಳ ಮೇಲೂ ಬಹಳಷ್ಟು ಪ್ರಭಾವನ್ನು ಬೀರಿದೆಯೆನ್ನುವುದಲ್ಲಿ ಸಂದೇಹವಿಲ್ಲ. ವಚನಕಾರರು ಧರ್ಮ ಮತ್ತು ನೀತಿ ಸಮಾಜದಲ್ಲಿ ಆಳವಾಗಿ ಬೇರೂರ ಬೇಕೆಂದರೆ, ಸಾಹಿತ್ಯ ಪಂಡಿತರ ಭಾಷೆಯಾಗಿರದೆ, ಜನಸಾಮಾನ್ಯರು ಬಳಸುವ ಭಾಷೆಯಲ್ಲಿರಬೇಕೆನ್ನುವುದನ್ನು ಅರಿತಿದ್ದರು .

ಬರಿಯ ಧರ್ಮವನ್ನಲ್ಲದೆ ವಚನಗಳು ಸಾಮಾಜಿಕ ಜವಾಬ್ದಾರಿ, ಕೌಟುಂಬಿಕ ಮೌಲ್ಯ , ಜಾತಿವರ್ಗಗಳ ಸಮಾನತೆ, ದಾಸೋಹ, ಕಾಯಕ ಮತ್ತು  ಸ್ತ್ರೀ ಸ್ವಾತಂತ್ರ್ಯನ್ನು ಬೋಧಿಸಿದವು.

೨೦೦ಕ್ಕೊ ವಚನಕಾರರಿದ್ದಾರೆಂದು ಹೇಳುತ್ತಾರೆ, ಅದರಲ್ಲಿ ೩೦ ಕ್ಕೊ ಹೆಚ್ಚಿನವರು ಮಹಿಳೆಯರಾಗಿದ್ದರೆನ್ನುವುದು ಈ ಸಾಹಿತ್ಯದ ವೈಶಿಷ್ಟ್ಯ ಮತ್ತು ಮಹತ್ವ. ಎಲ್ಲಾ ಜಾತಿಯ ಮತ್ತು ವರ್ಗದ ಮಹಿಳೆಯರು ವಚನಗಳನ್ನು ರಚಿಸಿರುವುದು ಹೊಸ ಬೆಳವಣಿಗೆಯ, ಹೊಸಚಳುವಳಿಯ ಸಂಕೇತವೆಂದು ಹೇಳಬಹುದು.

ಕೆಲ ಪರಿಚಿತ ಹೆಸರುಗಳೆಂದರೆ ನೀಲಮ್ಮ, ನಾಗಾಂಬಿಕೆ, ಗಂಗಾಬಿಕೆ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ, ಬೊಂತಾದೇವಿ ಮತ್ತು ಮಹಾದೇವಿ ಮುಂತಾದವರು.

ಮಹಾದೇವಿ ಕನ್ನಡದ ಪ್ರಪ್ರಥಮ ಕವಯಿತ್ರೀ. ೪೦೦ ಕ್ಕೊ ಹೆಚ್ಚಿನವಚನಗಳನ್ನು ಈಕೆ ರಚಿಸಿದ್ದಾಳೆ. ’ಯೋಗಾಂಗ ತ್ರಿವಿಧಿ’ ಮಹಾದೇವಿಯ ಪ್ರಮುಖ ಕೃತಿ.

ಮಹಾದೇವಿಯದು ಆ ಕಾಲಕ್ಕೆ  ಅಸಾಧಾರಣ ವ್ಯಕ್ತಿತ್ವ. ಯಾರ ಕೈ ಕೆಳಗೂ ಇರಬಯಸದೆ, ಧೈರ್ಯದಿಂದ, ತನಗೆ ಸರಿಯೆನ್ನಿಸಿದ ಜೀವನಮಾರ್ಗವನ್ನು ಅನುಸರಿಸಿದ ಆಕೆಯದು ಅಸಾಮಾನ್ಯ ಸಾಹಸವೆಂದು ಹೇಳಬಹುದು.

ಶರಣ ಪಥವನ್ನು ತುಳಿಯುವ ಮುನ್ನ ಆಕೆ ವೈವಾಹಿಕ ಜೀವನ, ಕುಟುಂಬ, ವೈಭವ, ಸಂಪತ್ತುಗಳನ್ನ ತ್ಯಜಿಸಿ ಹೊರ ನಡೆದ ಘಟನೆಗಳು ಬಹುಶಃ ಬಹಳ ಜನರಿಗೆ ತಿಳಿದ ವಿಷಯ.

ಸಾಮಾನ್ಯರಲ್ಲಿ, ಸಾಮಾನ್ಯರಂತೆ ಬದುಕಿದ ಆಕೆಯದು ಅಲೆಮಾರಿ ( ಜಿಪ್ಸಿ) ಜೀವನವೆಂದು ಹೇಳಬಹುದು. ಈ ವಚನದಲ್ಲಿ ಇದನ್ನು ಕಾಣಬಹುದು.

"ಹಸಿವಾದೊಡೆ  ಭಿಕ್ಷಾನ್ನಗಳoಟು,  ತೃಷೆಯಾದೊಡೆ ಕೆರೆ ಭಾವಿಗಳು೦ಟು,

ಶಯನಕೆ ಪಾಳು ದೇಗುಲಗಳು೦ಟು, ಚೆನ್ನಮಲ್ಲಿಕಾರ್ಜುನ ದೇವಾ, ದೇವಾ

ಆತ್ಮಸಂಗಾತಕೆ ನೀನೆನಗುಂಟು "

೧೨ನೇ ಶತಮಾನದಲ್ಲಿ, ಒಂಟಿ ಸ್ತ್ರೀ ಯಾಗಿ, ಸಂಸಾರ ತ್ಯಜಿಸಿ , ಸ್ವಯಂಮಾರ್ಗವನ್ನು ಅರಸಿ ಹೋರಾಟ ಮಹಾದೇವಿ ಯಾವ ರೀತಿಯ, ಟೀಕೆಗಳನ್ನು, ನಿಂದನೆಗಳನ್ನು ಎದುರಿಸಿರ ಬಹುದೆನ್ನುವುದು ನಮ್ಮ ಊಹೆಗೂ ನಿಲುಕದ್ದು.  ನನ್ನನ್ನೇಕೆ ಕಾಡುವಿರಿ ಎಂದು ಈ ವಚನದಲ್ಲಿ ಆಕೆ ಸಮಾಜವನ್ನು ಪ್ರಶ್ನಿಸುವುದರ ಜೊತೆಗೆ ತನ್ನ ದೈಹಿಕ ಮಾನಸಿಕ ಸ್ಥಿತಿಯನ್ನು ನಮಗೆ ತಿಳಿಸುತ್ತಾಳೆ.

" ಮುಡಿಬಿಟ್ಟು ಮೊಗಬಾಡಿ ಕೃಶ ಕರಗಿದವಳ,

ಎನ್ನನೇಕೆ ನುಡಿಸುವಿರಿ ಎಲೆ ಅಣ್ಣಗಳಿರಾ

ಎನ್ನನೇಕೆ  ಕಾಡುವಿರಿ ಎಲೆ ತಂದೆಗಳಿರಾ

ಬಲುಹಳಿದು, ಭವಗೆಟ್ಟು , ಛಲಬಿಟ್ಟು , ಚೆನ್ನಮಲ್ಲಿಕಾರ್ಜುನನ ಕೂಡಿಕುಲವಳಿದವಳ."

ಕಾಡು ನಾಡನ್ನು, ದಾಟಿ ಕಲ್ಯಾಣ ನಗರದಲ್ಲಿನ "ಅನುಭವ ಮಂಟಪ"ಕ್ಕೆ ಆಕೆ ಬಂದಾಗ, ಪುರುಷ ಪ್ರಧಾನ ಮತ್ತು ಮೇಧಾವಿಗಳ ಈ ಸಭೆಯಲ್ಲಿ ಆಕೆ ಪ್ರತಿಯೊಂದು ಪ್ರಶ್ನೆಗೂ , ಟೀಕೆಗಳಿಗೂ ಸಮಂಜಸವಾದ ಉತ್ತರವನ್ನು ಕೊಟ್ಟು ಅಧ್ಯಕ್ಷ ಅಲ್ಲಮ ಪ್ರಭು, ಸದಸ್ಯರಾದ ಕಿನ್ನರಿ ಬೊಮ್ಮಯ್ಯ, ದಾಸಿಮಯ್ಯ, ಬಸವಣ್ಣ ಮತ್ತಿತರ ಪ್ರಶಂಸೆಯನ್ನ ಗಳಿಸುತ್ತಾಳೆ. ಈ ಕಠಿಣ ಸಂದರ್ಶನದ ಬಗ್ಗೆ ಸಾಹಿತ್ಯದಲ್ಲಿ ಸಾಕಷ್ಟು ಮಾಹಿತಿಯುಂಟು. ಅಕ್ಕ ಮಾಹಾದೇವಿ ಧೈರ್ಯಶಾಲಿ, ಮೇಧಾವಿ ಮತ್ತು ಪ್ರತಿಭಾವಂತೆಯೆನ್ನುವದನ್ನು ಮತ್ತೆ ಮತ್ತೆ ಜಗತ್ತಿಗೆ ಸಾರಿ ತಿಳಿಸುತ್ತಾಳೆ.

ಅಕ್ಕ ಮಾಹಾದೇವಿಯನ್ನು ಕುರಿತು ಬರೆದ H. ತಿಪ್ಪೇಸ್ವಾಮಿಯವರ " ಕದಳಿಯ ಕರ್ಪೂರ " ಮತ್ತು ಹರಿಹರನ "ಮಹಾದೇವಿಯಕ್ಕನರಗಳೆ”ಯಲ್ಲಿ ಹೆಚ್ಚಿನ ಮಾಹಿತಿಯನ್ನು ಗಳಿಸಬಹುದು.

ಈ ಕೆಳಗಿನ ವಚನವನ್ನು ಕವಿತೆಯೆಂದೂ ಹೇಳಬಹುದು. ಕನ್ನಡದ ಪ್ರಪ್ರಥಮ ಕವಿಯತ್ರಿ ಬರೆದ ಈ ಬಹು ಸುಂದರವಾದ, ಅರ್ಥಗರ್ಭಿತ ಕವಿತೆಯನ್ನೋದಿ:

"ಈಳೆ - ನಿಂಬೆ -ಮಾದಲಕ್ಕೆ ಹುಳಿ ನೀರೆರೆದವರಾರಯ್ಯ

ಕಬ್ಬು -ಬಾಳೆ -ನಾರಿವಾಳಕ್ಕೆ ಸಿಹಿ ನೀರೆರೆದವರಾರಯ್ಯ

ಮಾರ್ಗ-ಮಲ್ಲಿಗೆ - ಪಚ್ಚೆ -ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ

ಈ ಜಲ ಒಂದೆ , ನೆಲ ಒಂದೆ ,ಆಕಾಶ ಒಂದೆ,

ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾದಂಗೆ

ಎನ್ನದೇವ ಚೆನ್ನಮಲ್ಲಿಕಾರ್ಜುನ ಹಲವು ಜಗಂಗಳಲ್ಲಿ ಕೂಡಿದ್ದರೇನು - ತನ್ನ ಪರಿ ಬೇರೆ "

ನಾನು ಆಯ್ದು ಬರೆದ ಈ ಕೆಲ ವಚನಗಳ ಮೂಲಕ ವಚನಕಾರರು ತಮ್ಮ ವಚನಗಳ , ಧರ್ಮವನ್ನು ಮಾತ್ರವಲ್ಲ  ತಮ್ಮ ಬದುಕಿನ ಪರಿಯನ್ನು ನಮಗೆ ತಿಳಿಸಿದರು,  ಸಮಾಜದ ಕಟ್ಟಳೆಗಳನ್ನು ಪ್ರಶ್ನಿಸಿದರು, ಅನಾಚರಗಳನ್ನು ಪ್ರತಿಭಟಿಸಿದರು ಮತ್ತು ಬದಲಾವಣೆಗಾಗಿ ಶ್ರಮಿಸಿದರು. ವಚನಗಳಿಗೆ ಜಾತಿಯಿಲ್ಲ, ವರ್ಗವಿಲ್ಲ. ವಚನ ಸಾಹಿತ್ಯ  ಶತಮಾನಗಳಿಗೆ ಸೀಮಿತವಲ್ಲ, ಅಂದಿನಂತೆ  ಮತ್ತು ಇಂದಿನ ಸಮಾಜಕ್ಕೂ ಬಹು ಪ್ರಸ್ತುತ .

ವಂದನೆಗಳು.

ಡಾ /  ದಾಕ್ಷಾಯಿನಿ  ಗೌಡ