ಕೇವಲ ಸಪ್ತಸ್ವರಗಳಿಂದ ಅದೆಂಥ ಅಲೌಕಿಕ ಲೋಕವನ್ನು ಕಟ್ಟಿಕೊಡುತ್ತದೆ ಸಂಗೀತ!! ಮಾನವ ಭಾವನೆಗಳಿಗೆಲ್ಲ ಬಣ್ಣತುಂಬುತ್ತದೆ. ನಿಮಿಷಾರ್ಧದಲ್ಲಿ ನವರಸಗಳ ಪ್ರಪಂಚ ಮೈತಳೆಯುತ್ತದೆ. ನಿಮಗಿದು ಅರ್ಥವಾಗಬೇಕೆಂದರೆ ಒಮ್ಮೆ ಟಿ.ವಿ. ವ್ಯಾಲ್ಯೂಮ್ ಪೂರ್ತಿ ಬಂದ್ ಮಾಡಿ ಬರೀ ದೃಶ್ಯವನ್ನು ನೋಡಿ. ಅಲ್ಲಿ ದೆವ್ವದ ಸೀನ್ ಇದ್ದರೂ ನಿಮಗೆ ಹೆದರಿಕೆ ಎನಿಸುವುದಿಲ್ಲ. ನಾಯಕ -ನಾಯಕಿ ಅಪ್ಪಿ ಮುತ್ತಿಟ್ಟರೂ ನಿಮ್ಮ ಹೃದಯದಲ್ಲಿ ಶೃಂಗಾರ ರಸ ಜಿನುಗುವುದಿಲ್ಲ. ನಾಯಕ ಫೈಟಿಂಗ್ ಮಾಡುತ್ತ ಏಕಕಾಲಕ್ಕೆ ನೂರು ಜನರನ್ನು ಕೆಡವಿದರೂ ನೀವು ರೋಮಾಂಚಿತರಾಗುವುದಿಲ್ಲ. ಅಂತೂ ಸಂಗೀತವಿಲ್ಲದೇ ರಸವಿಲ್ಲ..ಬಣ್ಣವಿಲ್ಲ. ಅಂಥ ಸಂಗೀತ ಲೋಕದ ಮಾಂತ್ರಿಕ ತಬಲಾಪಟು , ಹಲವಾರು ಪ್ರಶಸ್ತಿಗಳ ಗೌರವ ಹೆಚ್ಚಿಸಿದ ಉಸ್ತಾದ್ ಝಾಕೀರ್ ಹುಸೇನ್ ಅವರ ಶೃದ್ಧಾಂಜಲಿಗೆ ಮುಡಿಪು ಇಂದಿನ ಅನಿವಾಸಿ ಸಂಚಿಕೆ. ಸಂಪಾದಕರು ಗತಕಾಲದ ಕಲಾವಿದರೊದಿಗಿನ ಸಾಕ್ಷಾತ್ ಪ್ರಸಂಗವನ್ನು ನೆನೆಸಿಕೊಂಡಿದ್ದಾರೆ. ರಾಧಿಕಾ ಜೋಶಿಯವರು ತಮ್ಮದೇ ಆದ ಅನನ್ಯ ಶೈಲಿಯ ಇಂಗ್ಲೀಷ್ ಕವನವೊಂದರ ಮೂಲಕ ಭಾವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ. ಬನ್ನಿ.. ನೀವೂ ಓದಿ ನಿಮ್ಮ ಪಾಲಿನ ಅಂಜಲಿಯನ್ನು ಸಲ್ಲಿಸಿ.
~ ಸಂಪಾದಕಿ
ವಾಹ್! ಉಸ್ತಾದ್ ವಾಹ್!!
ಕೆಲವು ಚೇತನಗಳೇ ಹಾಗೆ. ಸುಮ್ಮನೇ ಅವರ ಹೆಸರು ಕೇಳಿದರೇನೇ ಮನಕ್ಕೆಂಥದೋ ಹಾಯೆನ್ನಿಸುವ ಭಾವ, ಅದೇನೋ ನಿರಾಳ. ಎಲ್ಲಿಂದಲೂ, ಏನೂ ನೇರ ಸಂಬಂಧವಿರದೆಯೂ ಅದೇನೋ ಆತ್ಮೀಯ – ಆಪ್ತ ಅನುಭೂತಿ. ಉಸ್ತಾದ್ ಝಾಕೀರ ಹುಸೇನ್ ಅಂಥದೇಒಂದು ಚೆಂದದ ಚೇತನ. ‘ ಚೆಲುವಯ್ಯಾ ಚೆಲುವೋ ತಾನಿತಂದಾನಾ’ ಅಂದಂತೆ ಅದೆಷ್ಟು ಚೆಲ್ವಿಕೆಗಳ ಸಂಗಮ?! ಸುಂದರ ಶರೀರ- ಶಾರೀರ– ಅಂತ:ಕರಣಗಳು, ತಬಲಾವನ್ನು ನಾದದ ನದಿಯಾಗಿಸುವ ಅವರ ಶೈಲಿ, ನೆರೆದವರ ಮನ ತಿಳಿಯಾಗಿಸುವ ಲಘು ಹಾಸ್ಯದ ಎಲ್ಲೆ ಮೀರದ ತೂಕದ ಮಾತುಗಳು. ಒಂದೊಂದೂ ನ ಭೂತೋ ನ ಭವಿಷ್ಯತಿ.
ಎಲ್ಲಿಂದ, ಯಾವಾಗಿಂದ ಶುರುವಾದದ್ದು ಅವರ ನಂಟು ಎಂದು ಯೋಚಿಸಿ ನೋಡಿದರೆ – ‘ ವಾಹ್ !,ತಾಜ್ ಬೋಲಿಯೆ’ ದಿನಗಳಿಂದ ಅನ್ನಬಹುದು ಸದಾ ಹಸನ್ಮುಖದ ಈ ಚೆಲುವ ಚೆನ್ನಿಗರಾಯನ ತಬಲಾದ ಮೇಲಿನ ಬೆರಳುಗಳ ಆ ಸುರಳೀತ, ಸುಲಲಿತ ನಾಧಿನ್ ಧಿನ್ನಾ ನರ್ತನ, ಅಲೆಅಲೆಗುಂಗುರುಗೂದಲಿನ ತೋಂತನನ ನೋಡುತ್ತಿದ್ದರೆ ನಮ್ಮ ಹೃದಯವೂ ‘ ಧಕ್ ಧಕ್ ಕರನೇ ಲಗಾ’ ಆಗಿ ಅಮೃತವಾಹಿನಿಯೊಂದು ಹರಿಯುತ್ತಿದ್ದುದು ಸುಳ್ಳಲ್ಲ. ಸಂಗೀತದ ಬಗ್ಗೆ ಒಂದು ಕೈ ಒಲವು ಹೆಚ್ಚಾದದ್ದೇ ಇವರಿಂದ ಎನ್ನಬಹುದು. ನಮ್ಮ ಅಡುಗೆಮನೆಯಲ್ಲಿ red label ಹೋಗಿ Taj ಚಹಾ ಬರಲೂ ಇವರೇ ಕಾರಣ.
ಕಲೆಯ ಬಗೆಗಿನ ಅವರ ಪ್ರೀತಿ, ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂತಿರುವ ನಯವಿನಯ, ಸಾದಾತನಗಳು, ಮಾನವೀಯತೆಗೆ ಮಿಡಿವ ಅವರ ಮಾತು – ವರ್ತನೆಗಳು ಅವರನ್ನು ಬೇರೆಯದೇ ನೆಲೆಯಲ್ಲಿ ನಿಲ್ಲಿಸುತ್ತವೆ. ಅವರೇ ಹೇಳುವಂತೆ ಸಂಗೀತಕ್ಕಿರುವ ಶಕ್ತಿ ಅಪರಿಮಿತ. ಅದು ಯಾವಾಗಲೂ ಎಲ್ಲ ದೇಶ, ಕಾಲ, ಜನಾಂಗದಲ್ಲೂ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತದೆ. ಯಾವ ಧರ್ಮಕ್ಕೂ, ಪ್ರಭುತ್ವಕ್ಕೂ ಇರದ ಅಸಾಧಾರಣ ಶಕ್ತಿಯದು.
ಅದು ಸುಮಾರು 88 – 89 ರ ಇಸ್ವಿ. ‘ ಸುರ್ – ಸಂಗಮ್’ ಎನ್ನುವ ಕಾರ್ಯಕ್ರಮಕ್ಕೆ ಝಾಕೀರ್ ಹುಸೇನ್ ಬರುತ್ತಿದ್ದಾರೆನ್ನುವ ಸುದ್ದಿ ಗೊತ್ತಾಯಿತು. ಆದರೆ ಟಿಕೆಟ್ ದರ 500 ರೂಪಾಯಿಗಳು. ಆಗಿನ ಕಾಲಕ್ಕೆ 500 ರ ಮುಖವನ್ನೂ ನಾವು ನೋಡಿರಲಿಲ್ಲ. ಸಿನೆಮಾ ನೋಡಲು ಹೋದರೆ ಮೂರು ರೂಪಾಯಿ ಇಪ್ಪತ್ತು ಪೈಸೆಯ ಬಾಲ್ಕನಿ ಟಿಕೆಟ್ ತೆಗೆಸಲೂ ಹಿಂದು ಮುಂದೆ ನೋಡುವ ಕಾಲವದು. ಕಾಲೇಜಿನ ಲೆಕ್ಚರರ್ ಆಗಿದ್ದ ನಮ್ಮ ಮುದ್ದಣ್ಣ ಮಾಮಾಗೆ ಎರಡು ಪಾಸ್ ಸಿಕ್ಕಿತ್ತು. ನಮ್ಮದು 5 ಜನರ ಗ್ಯಾಂಗ್. ( ನಾನು ಹಾಗೂ 4 ಜನ ಮಾಮಾನ ಮಕ್ಕಳು) ನಾವೆಲ್ಲರೂ ನಮಗೂ ಹೋಗಲೇಬೇಕು ಎಂಬ ಒಕ್ಕೊರಲಿನ ಗಾಯನವನ್ನೂ, ಝಾಕೀರ್ ಹುಸೇನ್ ರನ್ನು ನೋಡಲೇಬೇಕೆಂದು ಧಿಮಿಧಿಮಿ ನೃತ್ಯವನ್ನೂ ಶುರುಮಾಡಿದೆವೆನ್ನಿ. “ಅಲ್ರೇ , ನಿಮಗೇನು ಮಹಾ ರಾಗತಾಳ ಜ್ಞಾನ ಅದ? 2-3 ತಾಸಿನ ಕಛೇರಿ ಅದು. ಬ್ಯಾಸರ ಆಗಿ ಬಿಡತದ ನಿಮಗ.” ಅಂದ ಮಾಮನಿಗೆ “ ನಮಗೆಲ್ಲಿ ತಬಲಾ ಕೇಳೂದದ? ಝಾಕೀರ ಹುಸೇನ್ ರನ್ನು ಹತ್ತಿರದಿಂದ ನೋಡಿ ಖುಷಿ ಪಡೂದದ” ಎನ್ನುವ ನಮ್ಮ ಉತ್ತರ ಸಿದ್ಧವಾಗಿತ್ತು “ ದಿನಾ ಬೆಳಗಾದ್ರ ಟಿವ್ಯಾಗ ನೋಡತಿರಲಾ?” “ ಹೂಂ. ದಿನಾ ಟಿವ್ಯಾಗ ನೋಡಿ ನೋಡೇ ಅವರನ್ನ ನೋಡಲೇಬೇಕು ಅನ್ನಿನಿಸಿದ್ದು. ಇಲ್ಲೀತನಾ, ನಮ್ಮ ಬಿಜಾಪೂರಿಗೆ ಅದರಲ್ಲೂ ನಮ್ಮ ಮನೆ ಹತ್ತಿರದGovt.high school ಗೆ ಬರುತ್ತಿದ್ದಾರೆ. ನಾವು ಹೋಗಲಿಲ್ಲ ಅಂದರೆ ಅದ್ಹೇಗೆ ?” ಎನ್ನುವುದು ನಮ್ಮ ವಾದ. ಬೆಳಗ್ಗೆಯಿಂದ ಸಂಜೆಯವರೆಗೆ ಮಾಮನ ಮುಖ ಕಂಡೊಡನೆ ‘ ಝಾಕೀರ್, ತಬಲಾ. ಝಾಕೀರ, ತಬಲಾ’ ಅಂತ ಸ್ಲೋಗನ್ ಕೂಗುತ್ತ ದೊಡ್ಡ ಹರತಾಳವನ್ನೇ ಮಾಡಿ ಅಂತೂ ಯಶಸ್ವಿಯಾದೆವೆನ್ನಿ.ನಮ್ಮ ಬಡಬಡಿಸುವಿಕೆಗೆ, ಹಟಕ್ಕೆ ಸೋತ ನಮ್ಮ ಸೋದರಮಾವ 1,500 ರೂಪಾಯಿಗಳನ್ನು (ಆಗಿನ ಕಾಲಕ್ಕೆ) ಕೊಟ್ಟು ಇನ್ನೂ ಮೂರು ಟಿಕೆಟ್ ಖರೀದಿಸಿ ನಮ್ಮನ್ನು ಆ ಕಾರ್ಯಕ್ರಮಕ್ಕೆ ಕಳಿಸಿದ್ದರು. ಅವರು ಸ್ವಲ್ಪ ಜೋರು ಮಾಡಿ ನಮ್ಮನ್ನು ಸುಮ್ಮನಾಗಿಸಬಹುದಿತ್ತು. ‘ ರೊಕ್ಕದ ಗಿಡಾ ಅದ ಎನು ಹಿಂದ?’ ಎನ್ನಬಹುದಿತ್ತು. ಆದರೆ ಹಾಗೆ ಮಾಡದೇ ನಮ್ಮ ಬಾಲಿಶ ಹುಚ್ಚುತನವನ್ನು ಅಪರೋಕ್ಷವಾಗಿ ಬೆಂಬಲಿಸಿದ ಆ ತಾಯಂಥಕರಣದ ಜೀವಕ್ಕೆ ಎಷ್ಟು ಮಣಿದರೂ ಕಡಿಮೆ ಎನಿಸುತ್ತದೀಗ.
ಬಂಗಾರದ ಗುಂಡಿ, ಚೈನು ಪೋಣಿಸಿದ, ತಿಳಿನೀಲಿ ಬಣ್ಣದ ಉದ್ದನೆಯ ಕುರ್ತಾ, ಬಿಳಿ ಶುಭ್ರ ಪಾಯಿಜಾಮಾ ಧರಿಸಿದ ಅವರು ಸ್ಟೇಜ್ ಮೇಲೆ ಬಂದರೆ ನನಗೆ ಯಾರೋ ದೇವ ಮಾನವ ನಡೆದು ಬಂದಂಥ ಭಾವ. ತಬಲಾದ ರಠಈಕ ಅರ್ಥವಾಗದಿದ್ದರೂ ಆ ನಾದದ ಲಹರಿ ತಾನಾಗೇ ನಮ್ಭನ್ನು ತನ್ನ ಸೆಳವಿನಲ್ಲಿ ಎಳೆದೊಯ್ದು ನಮ್ಮನ್ನು ತೇಲಿಸಿ, ತೊಯ್ಯಿಸಿದ್ದು, ಆ ತಬಲಾ – ಡಗ್ಗಾಗಳ ಮೇಲೆ ಅವರು ಹರಿಸಿದ ಆ ದೈವೀಕ ನಾದದ ಹೊಳೆ, ಗುಡುಗಿನ ಆರ್ಭಟ, ಮಳೆಯ ಟಪಟಪ ಹನಿಗಳ ಸದ್ದು, ಬೀಸುವ ರೊಯ್ ರೊಯ್ ಗಾಳಿ, ಶಿವನ ಡಮರುಗ, ಕೃಷ್ಣನ ಪಾಂಚಜನ್ಯ, ಕುದುರೆಯ ಹೇಷಾರವ, ಖುರಪುಟ.. ಕೇಳುತ್ತಿದ್ದ ಶ್ರೋತೃಗಳೆಲ್ಲ ದಂಗಾಗಿದ್ದರು; ಗುಂಗಿನಲ್ಲಿದ್ದರು.
ಆಗ ಸೆಲ್ಫಿಯ ಕಾಲವಲ್ಲ, ಆಟೋಗ್ರಾಫ್ ದ ಸ್ಪೆಲ್ಲಿಂಗೂ ಗೊತ್ತಿರಲಿಲ್ಲ. ಆದರೆ ಆ ಸುನೆಹರೆ ಕ್ಷಣಗಳು ಎದೆಯ ಗೂಡಲ್ಲಿ ನಿತ್ಯನಿರಂತರ ಹಸಿರು.ಇಷ್ಟು ಬೇಗ ಹೊರಡಬಾರದಿತ್ತು ಉಸ್ತಾದ್ ನೀವು. ಇನ್ನೂ ಇರಬೇಕಿತ್ತು.’ ಸುರ್ ಕಿ ಸಾಧನಾ ಪರಮೇಶ್ವರ್ ಕಿ’ ಎಂಬ ಆ ನಿಮ್ಮ ‘ ಸೋಚ್’ ಇನ್ನಷ್ಟು ಹರಡಬೇಕಿತ್ತು. “ ಕಲಾವಿದ ಹೋದರೇನಂತೆ? ಕಲೆ ಎಲ್ಲಿಗೂ ಹೋಗುವುದಿಲ್ಲ..ಯಾವೂದೂ ಖಾಲಿಯಾಗುವುದಿಲ್ಲ” ಎಂದು ನೀವೇ ಹಲವಾರು ಬಾರಿ ಸಂದರ್ಶನಗಳಲ್ಲಿ ಹೇಳುತ್ತಿದ್ದಿರಾದರೂ ನೀವು ತೆರವು ಮಾಡಿದ ಜಾಗ ಸದಾ ಖಾಲಿಯೇ. ಅದಕ್ಕ್ಯಾವ ಪರ್ಯಾಯವೂ ಇಲ್ಲ. ಹೋಗಿ ಬನ್ನಿ; ಭಾವಪೂರ್ಣ ಶೃದ್ಧಾಂಜಲಿಗಳು.
~ಗೌರಿ ಪ್ರಸನ್ನ
No photos, no videos to mark my tale, Yet his magic fills my spirit’s sail. Ustad Zakir Hussain, the tabla’s very name, A legend whose glory ignites music’s flame.
As a child, through palace halls and Dasara nights, I witnessed his art beneath Mysuru’s lights. The memory is faint, yet vivid and clear, A childlike smile—so pure, so near.
Oh, that smile! A symphony of untold lore, A joy that sprang from his music’s core. Each beat of the tabla, each rhythmic embrace, Lit up his eyes, adorned his face.
Did he ever feel nerves, or pressures vast? If so, that smile—steadfast, unsurpassed— Taught us all, in life’s demanding race, To wear our joy as a saving grace.
I’ve watched his videos, a hundred, no less, Never a frown, never distress. Eyes that sparkled, fingers that flew, Creating celestial rhythms anew.
Even the tea ad, with his father in frame, Hair aflutter, rhythm the same, Added a cadence, a timeless beat, Turning the mundane into something sweet.
My memories now soar beyond the clouds, Among the stars, where his spirit resounds. For Zakir Hussain, a maestro so bright, Plays on forever, in music’s eternal light.
ಈ ವಾರದ ದುಪ್ಪಟ್ಟು ಪ್ರಸ್ತುತಿಗಳಿವು. ಮೊದಲನೆಯದು ಶ್ರೀವತ್ಸ ದೇಸಾಯಿ ಬರೆದದ್ದು, ಎರಡನೆಯದು ಪ್ರಮೋದ ಲಕ್ಕುಂಡಿ ಅವರದು. ಈಗ ಕಳೆದ ತಿಂಗಳು ಎರಡು ವರ್ಷಾಬ್ದಿಗಳನ್ನು ಕಂಡಿತು. ಜೂನ್ ೨೧ ರಂದು ಯೋಗ ದಿನಾಚರಣೆಯಷ್ಟೇ ಅಲ್ಲ, ಜಾಗತಿಕ ಮ್ಯೂಸಿಕ್ ದಿನಾಚರಣೆ ಸಹ. ಅದರ ಪೀಠಿಕೆ ಕೆಳಗೆ, ಆ ಲೇಖನದ ಪೂರ್ವದಲ್ಲಿದೆ. ಪ್ಯಾಕೇಜ್ ಟೂರಿಸಂ ಹುಟ್ಟಿದ ಜಾಗ ಇಂಗ್ಲೆಂಡಿನ ಲೆಸ್ಟರ್ ಎನ್ನುವ ವಿಷಯ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಕಳೆದ ವಾರದ ಜುಲೈ ೫ನೆಯ ತಾರೀಕಿಗೆ ಸರಿಯಾಗಿ ೧೮೩ ವರ್ಷಗಳ ಹಿಂದೆ ಒಂದು ಚಿಕ್ಕ ಆದರೆ ಮಹತ್ವದ ೧೧ ಮೈಲಿ ರೈಲು ಪ್ರಯಾಣ ಸಂಭವಿಸಿತು. ಮುಂದೆ ಎರಡು ಶತಮಾನ ಜಗತ್ತಿನಲ್ಲೆಲ್ಲ ಪ್ಯಾಕೇಜ್ ಪ್ರಯಾಣದ ಪರ್ಯಾಯ ಪದದಂತೆ ಜನರ ಮಸ್ಸಿನಲ್ಲಿ ಉಳಿದ ಹೆಸರು ಥಾಮಸ್ ಕುಕ್. ಆತನನ್ನು ಪರಿಚಯಿಸುತ್ತ ಹಾಲಿಡೆ ಪ್ರವಾಸದತ್ತ ಒಂದು ಇಣುಕು ನೋಟ ಕೊಡುವ ಪ್ರಯತ್ನವೇ ನನ್ನ ಈ ಲೇಖನ. (ವಾರದ ಸಂಪಾದಕ)
1) ಕಳೆದ ತಿಂಗಳು ನಾನು ಬಹುಸಂಖ್ಯಾತ ಬ್ರಿಟಿಶ್ ಭಾರತೀಯ ಮೂಲದವರು ವಾಸಿಸುತ್ತಿರುವ ಲೆಸ್ಟರ್ ಶಹರಕ್ಕೆ ಹೋದಾಗ ಸ್ಟೇಶನ್ನಿನ ಹೊರಗಡೆಯಲ್ಲಿ ಕಟ್ಟೆಯ ಮೇಲೆ ನಿಂತ ಆರಡಿ ಎತ್ತರದ ಅರ್ಧ ಬೋಳು ತಲೆಯ ಈಗ ತಾನೆ ಪ್ರವಾಸಕ್ಕೆ ಹೊರಟವನಂತೆ ಕಾಣುತ್ತಿದ್ದವನ ಶಿಲ್ಪ ಕಣ್ಣಿಗೆ ಬಿತ್ತು. ಒಂದು ಕೈಯಲ್ಲಿ ಹಳೆಯ ಕಾಲದ (ಗಾಂಧಿ ತಾತನ ಹತ್ತಿರ ಇದ್ದಂಥ) ಪಾಕೆಟ್ ಗಡಿಯಾರ, ಇನ್ನೊಂದು ಕೈಯಲ್ಲಿ ಮಡಿಚಿಟ್ಟ ಕೊಡೆ, ಗ್ಲಾಡ್ಸ್ಟನ್ ಬ್ಯಾಗು, ಅದರಡಿ ಒಂದು ಚಿಕ್ಕ ಟೂರಿಂಗ್ ಸೂಟ್ ಕೇಸ್. ಅಪ್ಪಟ ಹಳೆಯಕಾಲದ ಇಂಗ್ಲಿಷ್ ’ಜಂಟಲ್ ಮನ್ ಟೂರಿಸ್ಟ್.’ ಯಾರೀತ? ಇವನೇ ಸುಮಾರು ಎರಡು ಶತಮಾನಗಳ ಹಿಂದೆ ತಾನು ನಿಂತಿದ್ದ ಜಾಗದ ಪಕ್ಕದಲ್ಲೇ ಇದ್ದ ಸ್ಟೇಶನ್ನಿನಿಂದ ೫೦೦ ಜನ ಯಾತ್ರಿಕರನ್ನು ಪ್ರವಾಸಕ್ಕೆ ಕರೆದೊಯ್ದು ಥಾಮಸ್ ಕುಕ್. ಇದೊಂದು ರೋಚಕ ಪ್ರವಾಸಿ ಕಥನ! ಇಂದು ಊರಿಂದೂರಿಗೆ ಮತ್ತು ದೇಶಾಂತರ ಪ್ರವಾಸಿಗಳ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. ಇಪ್ಪತ್ತನೆಯ ಶತಮಾನದ ಅರವತ್ತರ ಮತ್ತು ಎಪ್ಪತ್ತರ ದಶಕಗಳಲ್ಲಿ ಇಂಗ್ಲೆಂಡಿನಲ್ಲಿ ಸರ್ ಫ್ರೆಡ್ಡಿ ಲೇಕರ್ ಸ್ಲೈ ಟ್ರೇನ್ (Skytrain) ಎನ್ನುವ ಕಂಪನಿ ಶುರು ಮಾಡಿದ ನಂತರ ಪ್ಯಾಕೇಜ್ ಹಾಲಿಡೇಗಳು ಬೆಳೆಯುತ್ತ ಥಾಮಸ್ ಕುಕ್ ಕಂಪನಿ ೧೯೮೦ರ ದಶಕದಲ್ಲಿ ಅದನ್ನು ಉಚ್ಛ್ರಾಯ ಸ್ಥಿತಿಗೆ ಒಯ್ಯಿತು. ಆದರೆ ಅದು ಯಾವಾಗ ಪ್ರಾರಂಭವಾಯಿತು? ಇಲ್ಲಿಂದ ಶುರುವಾಗುತ್ತದೆ ಜರ್ನಿ!
ಕಾಲ್ನಡಿಗೆಯಲ್ಲಿ ಹೊರಟ ಪಾದ್ರಿ
ಥಾಮಸ್ ಕುಕ್ ಹುಟ್ಟಿದ್ದು ಡಾರ್ಬಿಶೈರಿನ ಮೆಲ್ ಬೋರ್ನ್ (ಆಸ್ಟ್ರೇಲಿಯದು ಅಲ್ಲ) ಎನ್ನುವ ಹಳ್ಳಿಯಲ್ಲಿ, ೧೮೦೮ರಲ್ಲಿ. ಹತ್ತು ವರ್ಷಕ್ಕೇ ಶಾಲೆ ಬಿಟ್ಟು ತನ್ನ ಸೋದರಮಾವನ ಕೆಳಗೆ ಬಡಿಗನಾಗಿ ಕೆಲಸಕ್ಕೆ ಸೇರಿಕೊಂಡ. ತಂದೆ ತಾಯಿಗಳ ಕಟ್ಟಾ ಬಾಪ್ಟಿಸ್ಟ್ ಕ್ರಿಶ್ಚಿಯನ್ ವಾತಾವರಣದಲ್ಲಿ ಬೆಳೆದವನು. ೧೮೨೮ರಲ್ಲಿ ಬೈಬಲ್ ರೀಡರ್ ಮತ್ತಿ ಮಿಷನರಿಯಾಗಿ ನೇಮಕಗೊಂಡನು. ಆ ಕೆಲಸಕ್ಕಾಗಿಯೇ ಮರುವರ್ಷ ೨೬೯೨ ಮೈಲಿಗಳ ಸಂಚಾರ; ಅದರಲ್ಲಿ ಎರಡುಸಾವಿರ ಮೈಲು ಬರೀ ಕಾಲ್ನಡಿಗೆಯಲ್ಲೇ ಸುತ್ತಾಡಿದ! ಮದ್ಯಪಾನವಿರೋಧಿ ಚಳುವಳಿಗಾಗಿ ಮೀಟಿಂಗ್ ಮತ್ತು ಮೆರವಣಿಗೆಗಳನ್ನು ಯೋಜಿಸಿದ. ಇಸವಿ ಸನ್ ೧೮೪ರ ಜೂನ್ ೯ ರಂದು ಥಾಮಸ್ ತನ್ನ ಊರಾದ ಮಾರ್ಕೆಟ್ ಹಾರ್ಬರಾದಿಂದ ಕಾಲ್ನಡಿಗೆಯಲ್ಲಿ ೧೧ ಮೈಲು ದೂರದ ಲೆಸ್ಟರ್ ನಗರಕ್ಕೆ ಟೆಂಪರನ್ಸ್ (ಮದ್ಯಪಾನ ಸಂಯಮ ಸಂಘದ) ಮೀಟಿಂಗಿಗೆ ಹೊರಟಿದ್ದ. ಉದರ ನಿರ್ವಹಣೆಗಾಗಿ ಬಡಿಗನಾಗಿ ಕೆಲಸಮಾಡುತ್ತಿದ್ದರೂ ತನಗೆ ಅತೀವ ಶ್ರದ್ಧೆಯಿದ್ದ ಕ್ರಿಸ್ತಮತದ ಬಾಪ್ಟಿಸ್ಟ್ ಪ್ರವಾಚನಕಾರನೂ ಆಗಿದ್ದ ಆತನ ತಲೆಯಲ್ಲಿ ಫಕ್ಕನೆ ಸುಳಿಯಿತೊಂದು ವಿಚಾರ: ಇತ್ತೀಚಿಗೆ ಬೆಳೆಯುತ್ತಿರುವ ರೇಲ್ವೆಯ ಪ್ರಭಾವವನ್ನು ನಮ್ಮ ಬಡವರನ್ನು ಹೀನ ಸ್ಥಿತಿಗೆಳೆಯುತ್ತಿರುವ ಮದ್ಯಪಾನದಂಥ ದುರ್ವ್ಯಸನಗಳ ಸಂಯಮ ಚಳುವಳಿಗೇಕೆ (Temperance Movement) ಉಪಯೋಗಿಸಿಕೊಳ್ಳಬಾರದು? ಅಂತ. ಈ ವಿಚಾರವನ್ನು ಅಂದು ಟೆಂಪರನ್ಸ್ ಸೊಸೈಟಿ ಸಭೆಯಲ್ಲಿ ಮಂಡಿಸಿ ಕಮಿಟಿಯಿಂದ ಆನುಮತಿ ಪಡೆದು ಕಾರ್ಯಪ್ರವೃತ್ತನಾದ. ಮುಂದಿನ ಜುಲೈ ೫, ೧೮೪೧ ಮಹತ್ವದ ದಿನ. ಮೊದಲ ಬಾರಿ ಇಂಗ್ಲೆಂಡಿನ ಲೆಸ್ಟರ್ ನಗರದಿಂದ ಲಫ್ ಬರಾ (Loughborough) ಎನ್ನುವ ಊರಿಗೆ ೪೮೫ ಜನರನ್ನು ಹದಿನೊಂದು ಮೈಲು ರೈಲು ಪ್ರವಾಸ ಮಾಡಿಸಿ ಥಾಮಸ್ ಕುಕ್ ಪಪ್ರಥಮ ದಾಖಲೆಯನ್ನೇ ಮಾಡಿದನು. ಆ ದಿನ ಅವರೆಲ್ಲ ಮರಳಿ ಲೆಸ್ಟರಿಗೆ ಬಂದಾಗ ರಾತ್ರಿ ೧೦ ೩೦ ಗಂಟೆ! ಅವರು ತೆತ್ತ ಶುಲ್ಕ ಬರೀ ಒಂದು ಶಿಲ್ಲಿಂಗ್. ಈಗಿನ ಲೆಕ್ಕದಲ್ಲಿ ಮೂರು ಪೌಂಡುಗಳು; ಅಂದು ಸಾಮಾನ್ಯ ಮನುಷ್ಯನ ಆಗಿನ ಕಾಲದ ಒಂದು ತಿಂಗಳ ಆದಾಯಕ್ಕೆ ಸಮವಾಗಿತ್ತು. ಅಂದೇ ಹುಟ್ಟಿತು ಪ್ಯಾಕೇಜ್ ಪ್ರವಾಸ. ಆತನೇ ಅದಕ್ಕೆ ಚಾಲನೆ ಕೊಟ್ಟವರಲ್ಲಿ ಮೊದಲಿಗನು. ಈ ಪ್ರವಾಸದ ಯಶಸ್ಸಿನಿಂದ ಪ್ರೇರಿತನಾಗಿ ೧೮೫೧ರ ಗ್ರೇಟ್ ಎಗ್ಸಿಬಿಷನ್ ಗೆ ಒಂದುಉವರೆ ಲಕ್ಷ ಜನರನ್ನು ಕೊಂಡೊಯ್ದ. ೧೮೫೫ ರ ಪ್ಯಾರಿಸ್ ಎಗ್ಸಿಬಿಷನ್ನಿಗೆ ಹೋಗಿಬಂದ ಲೆಸ್ಟರಿನ ಪ್ರಯಾನಿಕರು ತೆತ್ತ ಶುಲ್ಕ ಬರೀ ಒಂದೂ ವರೆ ಪೌಂಡುಗಳು! ಹೀಗೇ ’ಕುಕ್ ಟೂರಿಸ್ಟ್’ಗಳ ಸಂಖ್ಯೆ ಬೆಳೆದು ಪ್ರವಾಸಗಳು ಯೂರೋಪ್, ಅಮೇರಿಕಾ, ಸಿಂಗಾಪೂರ್, ಪ್ರಾಚ್ಯ ದೇಶಗಳಿಗೂ ವಿಸ್ತರರಿಸಿತು. ಅಲ್ಲಿ ವಾಸಕ್ಕೆಹೋಟೆಲ್ ಕೂಪನ್ನುಗಳು, ಹಣಕಾಸಿನ ವ್ಯವಸ್ಥೆಗೆ ಟ್ರಾವಲರ್ಸ್ ಚೆಕ್ ಹೀಗೇ ಬೆಳೆಯಿತು ಕುಕ್ ಎಂಪಾಯರ್! ಆತನ ನಂತರ ಆತನ ಮಗನು ಥಾಮಸ್ ಕುಕ್ ಕಂಪನಿಯನ್ನು ಮುನ್ನಡೆಸಿ ಇನ್ನಷ್ಟು ಬೆಳೆಸಿದನು. ಮುಂದೆ ಮೊಮ್ಮಕ್ಕಳೂ ಸೇರಿಕೊಂಡರು. ಅವರದೇ ಏರ್ ಲೈನ್ ಸಹ ಪ್ರಾರಂಭವಾಯಿತು
ಲಫ್ ಬರಾ ಸ್ಟೇಶನ್ನಿನಲ್ಲಿ ಆ ಪ್ರವಾಸದ ಸ್ಮಾರಕವಾಗಿ ಹಸಿರು ಫಲಕದ ಅನಾವರಣ (೨೦೨೩)
ಫ್ರೆಡ್ಡಿ ಲೇಕರ್ ಅವರ ಸ್ಕೈ ಟ್ರೇನ್ ಮತ್ತು ವಿದೇಶ ಪ್ರವಾಸದ ಬೆಳವಣಿಗೆ
ಮೋಡ, ಮಂಜು ಕವಿದ ಬ್ರಿಟಿಶ್ ಆಕಾಶಕ್ಕೆ ಹೊಂದಿಕೊಂಡವರು ಮತ್ತು ಇಡೀ ವರ್ಷ ಸತತವಾಗಿಯಲ್ಲದಿದ್ದರೂ ತಿಂಗಳಲ್ಲೊಂದು ಬಾರಿಯಾದರೂ ಮಳೆಯಾಗುವ ಈ ಚಳಿನಾಡಿನಲ್ಲಿ ವಾಸಿಸುವ ಆಂಗ್ಲರ ಹವ್ಯಾಸಗಳಲ್ಲಿ ಒಂದು ಬಹುತೇಕ ಎಲ್ಲ ಕುಟುಂಬದವರು ’ಬೇಸಗೆಯಲ್ಲಿ’ ಒಂದು ಅಥವಾ ಎರಡು ವಾರಗಳು ಸಮುದ್ರತಟದ ಮೇಲೆ ಕಳೆಯುವ ಬೀಚ್ ಹಾಲಿಡೇ! ಚಿಕ್ಕಂದಿನಲ್ಲಿ ಈ ದೇಶದ ನೈಋತ್ಯದ ಡೆವನ್ ಮತ್ತು ಕಾರ್ನ್ ವಾಲ್ ಪ್ರದೇಶಗಳಿಗೆ ತಂಡೋಪ ತಂಡವಾಗಿ ಹೋಗುವ ರಿಚುಅಲ್ ಅವರದು. ಅದು ತಪ್ಪಿದರೆ ಉತ್ತರದ ಬ್ಲಾಕ್ ಪೂಲ್, ಅಥವಾ ಅಗ್ನೇಯದ ಗ್ರೇಟ್ ಯಾರ್ಮೌತ್ ಅಥವಾ ಸ್ಕಾಟ್ಲಂಡಿಗೆ ಕಾರಿಗೆ ಕಾರವಾನ್ ಲಗತ್ತಿಸಿ ಪಯಣ. ಇದು ತಲೆ ತಲಾಂತರಗಳಿಂದ ಅವರು ಮಾಡುತ್ತಿದ್ದರೆಂದು ವಿಕ್ಟೋರಿಯನ್ ಆಂಗ್ಲ ಸಾಹಿತಿ ಚಾರ್ಲ್ಸ್ ಡಿಕೆನ್ಸ್ನ ಓದುಗರಿಗೂ ವಿದಿತ. ಆಗ ಮಧ್ಯಮ ವರ್ಗದ ಕುಟುಂಬಗಳಿಗೆ ಏರೋಪ್ಲೇನಿನಲ್ಲಿ ಪರದೇಶಗಳಿಗೆ ಹೋಗುವ ಸಾಮರ್ಥ್ಯ ಇರಲಿಲ್ಲ. ಅದನ್ನು ಮುರಿದವನು ೧೯೭೭ರಲ್ಲಿ ಬರೀ ೧೧೮ ಸ್ಟರ್ಲಿಂಗ್ ಪೌಂಡುಗಳಿಗೆ ಅಮೇರಿಕೆಗೆ ಕೊಂಡೊಯ್ಯುವ ಸ್ಕೈಟ್ರೇನ್ ಪ್ರಾರಂಭ ಮಾಡಿದವನೇ ಮುಂದೆ ಸರ್ ಬಿರುದು ಪಡೆದು ಸರ್ ಫ್ರೆಡ್ಡಿ ಲೇಕರ್ ಆದವನು. ಆ ತಿಕೀಟು ಉಳಿದ ದೊಡ್ಡ ಏರ್ಲೈನ್ಗಳಿಗಿಂತ ಶೇಕಡಾ ೬೬ ಕಡಿಮೆ ದರದ್ದು ಎಂದ ಮೇಲೆ ಶ್ರೀಸಾಮಾನ್ಯನ ಪರದೇಶ ಪ್ರವಾಸದ ಕನಸು ನನಸಾಯಿತು. ಹಲವೇ ವರ್ಷಗಳ ನಂತರ ೧೯೮೦ರ ದಶಕದಲ್ಲಿ ಹಣಕಾಸಿನ ಕುಸಿತ (ರಿಸೆಷನ್) ಮತ್ತು ಆತನ ಪ್ರತಿಸ್ಫರ್ದಿ ಏರ್ಲೈನ್ ಗಳ ಷಡ್ಯಂತ್ರ ಇವೆರಡರ ಕಾರಣದಿಂದ ಆತನ ಕಂಪನಿ ಮುಳುಗಿದರೂ ಜನರಿಗೆ ಯೂರೋಪ್ ಮತ್ತು ದೂರ ದೇಶಗಳಿಗೆ ಬಿಸಿಲನ್ನು ಬೆನ್ನು ಹತ್ತಿ ಪ್ರವಾಸ ಮಾಡುವ ಚಟ ಆಗಲೇ ಹತ್ತಿತ್ತು. ಚಳಿ-ಮಳೆಯಿಂದ ಬೇಸತ್ತು ಯುಕೆಯನ್ನು ಬಿಟ್ಟು ಎರಡೇ ತಾಸುಗಳೊಳಗೆ ದಕ್ಷಿಣ ಫ್ರಾನ್ಸ್ ಅಥವಾ ಅಗ್ಗ ದರದಲ್ಲಿ ಬೇಸಗೆಯಲ್ಲಿ ಬೇಯುವ ಸ್ಪೇನಿನ ಕಾಸ್ಟಾ ಡೆಲ್ ಬೀಚುಗಳಿಗೆ ಹೋಗುವ ಸಾಧ್ಯತೆ ಅವರ ಮಡಿಯಲ್ಲಿ ಬಂದು ಬಿದ್ದಾಗ ಯಾರಿಗೆ ಬೇಡ? ಒಂದು ಅಥವಾ ಎರಡು ವಾರಗಳ ನಂತರ ವಿಮಾನದಲ್ಲಿ ಮರಳುವಾಗ ಬೀಚಿನಲ್ಲಿ ಬೆಂದ ಕಂದು ಬಣ್ಣದ ಸನ್ ಟ್ಯಾನ್ ಮೈ ಬಿಟ್ಟು ಕೊಂಡು ಮೆರೆದವರೇ ಟೀಚರ್-ಲಾಯರ್ನಿಂದ ಹಿಡಿದು ಗಣಿ ಕೆಲಸಗಾರರು ಸಹ. ಇದರ ಲಾಭ ಪಡೆದ ಥಾಮಸ್ ಕುಕ್ ಕಂಪೆನಿ ಒಮ್ಮೆಲೆ ನೂರು ಟ್ರಾವಲ್ ಏಜಂಟ್ ಅಂಗಡಿಗಳನ್ನು ಊರೂರಿಗೆ ಹೋಗಿ ತೆರೆಯಿತು. ಅದರ ಹೆಸರು ಪ್ಯಾಕೇಜ್ ಹಾಲಿಡೇಗೆ ಮನೆಮಾತಾಯಿತು. ಅವುಗಳೂ ಏರಿಳಿತಗಳನ್ನು ಕಂಡ ಕಥೆಯನ್ನು ನಂತರ ನೋಡುವಾ.
ಟ್ರಾವಲರ್ಸ್ ಚೆಕ್
ಫುಲ್ ಪ್ಯಾಕೇಜ್ ಅಂದರೆ ವಿಮಾನ ಪಯಣವಲ್ಲದೆ ಹೋಟೆಲ್ ವಾಸ ಮತ್ತು ದೈನಂದಿನ ಖರ್ಚಿಗಾಗಿ ಟ್ರಾವಲ್ ಚೆಕ್ಕುಗಳ ಪುಡಿಕೆ. ನಾನು ಮೊದಲ ಬಾರಿ ಇಂಗ್ಲೆಂಡಿಗೆ ಬಂದದ್ದು ಐವತ್ತು ವರ್ಷಗಳ ಹಿಂದೆ. ಆರೇ ತಿಂಗಳ ನಂತರ ಭಾರತಕ್ಕೆ ಭೆಟ್ಟಿ ಕೊಟ್ಟಾಗ ಹಣ ಕಳುವಾಗುವಗದಂತೆ ಒಯ್ಯಲು ಅನುಕೂಲ ಎಂದು ಹೇಳಿ ಇನ್ನೂ ಬಡವನಾಗಿದ್ದ ನನಗೂ (ಬೇಂದ್ರೆ ಅವರ ಮಾತಿನಲ್ಲಿ) ಆತ ’ಹಿಡಿ ಹಿಡಿಯಂತ” ಮಿತ್ರ ಕೊಡಿಸಿದ್ದು ಒಂದು ”ಹಿಡಿ” ಥಾಮಸ್ ಕುಕ್ ಟ್ರಾವಲರ್ಸ್ ಚೆಕ್ ಗಳು. ಇತ್ತೀಚಿನ ವರೆಗೆ ಈ ಹೆಸರಿನಲ್ಲೆ ಅವುಗಳು ಜಗತ್ತಿನ ಎಲ್ಲ ಕಡೆ ನಗದು ಹಣದಂತೆಯೇ ಚಾಲ್ತಿಯಲ್ಲಿವೆ. ’ಸರ್ಕ್ಯುಲರ್ ನೋಟ್ಸ್’ ಎನ್ನುವ ಹೆಸರಿನಲ್ಲಿ ಅವುಗಳನ್ನು ಥಾಮಸ್ ಕುಕ್ ೧೮೭೪ರಲ್ಲೇ ಪ್ರಾರಂಭ ಮಾಡಿದ್ದರು. ಆಮೇಲೆ ಅಮೆರಿಕನ್ ಎಕ್ಸ್ ಪ್ರೆಸ್ ಮತ್ತು ಅಮೆರಿಕನ್ ಬ್ಯಾಂಕುಗಳ ಚೆಕ್ಕುಗಳೂ ಪ್ರಚಲಿತವಾಗಿದ್ದವು. ವಿದೇಶದಲ್ಲಿ ಗ್ರಾಹಕ ಚೆಕ್ ನೋಟಿನ ಮೇಲೆ ಅಂಗಡಿ ಅಥವಾ ಹೋಟೆಲ್ನಲ್ಲಿ ಪ್ರತ್ಯಕ್ಷ ಸಹಿ ಮಾಡಿ ಕ್ಯಾಶ್ ಮಾಡಬಹುದಿತ್ತು. ೧೯೭೫ರಲ್ಲಿ ನಾನು ಮುಂಬಯಿಯಲ್ಲಿ ಬಂದಿಳಿದಾಗ ಅದನ್ನು ಕ್ಯಾಶ್ ಮಾಡಲು ಹೆಚ್ಚಿನ ಎಕ್ಸ್ಚೇಂಜ್ ಮಾರುಕಟ್ಟೆಗಳು ಆಗ ಇರಲಿಲ್ಲ. ಫೋರ್ಟ್ ಪ್ರದೇಶಕ್ಕೇ ಹೋಗ ಬೇಕಾಗಿ ಬಂತು. ಪಾಸ್ ಪೋರ್ಟ್ ತೋರಿಸಿ ಚೆಕ್ ಬುಡದಲ್ಲಿ ಸಹಿಮಾಡಿ ರೂಪಾಯಿಗಳನ್ನು ಪಡಕೊಂಡೆ. ಮುಂದೆರಡು ವಾರಗಳ ನಂತರ ಹುಬ್ಬಳ್ಳಿ ಧಾರವಾಡದ ಪ್ರತಿಷ್ಠಿತ ಬ್ಯಾಂಕಿಗೆ ಹೋದಾಗ ಯಾರೂ ಅದನ್ನು ನೋಡಿಯೇ ಇರಲಿಲ್ಲ ಅಂತ ರೂಪಾಯಿ ಕೊಳ್ಳಲು ತ್ರಾಸವಾಯಿತು! ಈಗ ಜಗತ್ತು ಮುಂದುವರೆದಿದೆ. ಕ್ರೆಡಿಟ್ ಕಾರ್ಡು ಮತ್ತು ಪ್ರಿಪೇಡ್ ಕಾರ್ಡುಗಳ ಈಗಿನ ಬದಲಾದ ವಾತಾವರಣದಲ್ಲಿ ಅವುಗಳು ಅಪರೂಪವಾಗಿ ಮತ್ತೆ ಮಾಯವಾಗುತ್ತಿವೆ
ಕುಕ್ ’ಸಾಮ್ರಾಜ್ಯ’ ಅವನತಿ ಮತ್ತು ಹೊಸ ಅವತಾರ
೧೭೮ ವರ್ಷಗಳ ನಿರಂತರ (ಮಹಾಯುದ್ಧದ ಸಮಯದಲ್ಲಿ ಸ್ವಲ್ಪ ಕಾಲ ರಾಷ್ಟ್ರೀಕರಣವಾದದ್ದನ್ನು ಬಿಟ್ಟು) ಸೂರ್ಯೋದಯ ಸೂರ್ಯಾಸ್ತಗಳನ್ನರಸಿ ಬಂದ ಲಕ್ಷಾಂತರ ಪ್ರಯಾಣಿಕರನ್ನು ದೇಶವಿದೇಶಗಳಿಗೆ ಕರೆದುಕೊಂಡು ಹೋದನಂತರ ಸೆಪ್ಟೆಂಬರ್, ೨೦೧೯ರಲ್ಲಿ ಅದರ ನೇಸರ ಅಸ್ತಂಗತವಾಯಿತು. ಏಕೆ? ಕಾಲ ಬದಲಾದಂತೆ, ಮತ್ತು ಅಗ್ಗದರದ ವಿಮಾನಯಾನದ ಕಂಪನಿಗಳಾದ ಈಸಿ ಜೆಟ್, ರೈಯಾನ್ ಏರ್, ಜೆಟ್-2, Airbnbಗಳ ಪೈಪೋಟಿ, ಕೋವಿಡ್ ಮಹಾ ಮಾರಿ ಜನರ ಓಡಾಟವನ್ನಿ ನಿಲ್ಲಿಸಿದ್ದು ಇವೆಲ್ಲ ಕೂಡಿ ಅದರ ಬೇಡಿಕೆ ಕಡಿಮೆಯಾಗಲಾರಂಭಿಸಿತು. ಜೊತೆಗೆ ೨೦೧೬ರಲ್ಲಿ ಯೂರೋಪಿಯನ್ನರ ಪ್ರಮುಖ ಹಾಲಿಡೇ ದೇಶವಾಗಿದ್ದ ಟರ್ಕಿಯಲ್ಲಿ ಬದಲಾದ ರಾಜಕೀಯ ಪರಿಸ್ಥಿತಿ, ೨೦೧೮ ರಲ್ಲಿ ಹೀಟ್ ವೇವ್, ಇಂದಿನ ಯುವ ಪ್ರವಾಸಿಕರು ಇಂಟರ್ನೆಟ್ ನಲ್ಲಿ ತಮ್ಮ ವಿಮಾನ, ಹೋಟೆಲ್ ಹುಡಿಕಿಕೊಳ್ಳುವದು ಇವೆಲ್ಲ ಸೇರಿ ಒಂದು ಪ್ರಸಿದ್ಧ ಆಂಗ್ಲ ಪದಗುಚ್ಛದಂತೆ (To cook one's goose) ಥಾಮಸ್ ಕುಕ್ಕನ ‘ಬಾತನ್ನು ಬೇಯಿಸಿದಂತಾಯಿತು!‘ ೨೩, ಸೆಪ್ಟೆಂಬರ್ ೨೦೧೯ ರಂದು ಕಂಪನಿ ಮುಳುಗಿತು. ಆದರೆ ಫೀನಿಕ್ಸ್ ಪಕ್ಷಿಯಂತೆ ಅದು ಬರೀ ಆನ್ ಲೈನ್ ಟ್ರಾವಲ್ ಏಜಂಟ್ ರೂಪದಲ್ಲಿ ಚೀನದ ಫೋಸನ್ ಟೂರಿಸ್ಮ್ ಗ್ರುಪ್ ಹೆಸರಿನಲ್ಲಿ ಸನ್ನಿ ಹಾರ್ಟ್ ಲಾಂಛನದೊಂದಿಗೆ ಮತ್ತೆ ತಲೆಯಿತ್ತಿದೆ. ವಿಪರ್ಯಾಸವೆಂದರೆ ಅದರ ಧ್ಯೇಯವಾಕ್ಯ: ಡೋಂಟ್ ಜಸ್ತ್ ಬುಕ್ ಇಟ್, ಥಾಮಸ್ ಕುಕ್ ಇಟ್! (Don't just book it, Thomas Cook it.)
ಶ್ರೀವತ್ಸ ದೇಸಾಯಿ
(ಉದಯವಾಣಿಯಲ್ಲಿ ಅವರೇ ಬರೆದ ಲೇಖನದ ಪರಿಷ್ಕೃತ, ವಿಸ್ತೃತ ಆವೃತ್ತಿ)
2) ನಮ್ಮ ಮನೆಯಲ್ಲಿ ಆಚರಿಸಿದ ವಿಶ್ವ ಸಂಗೀತ ದಿನಾಚರಣೆ -ಪ್ರಮೋದ ಲಕ್ಕುಂಡಿ
’ಎತ್ತಣ ಥಾಮಸ್ ಕುಕ್, ಎತ್ತಣ ಸಂಗೀತ?’ ಅನ್ನಬಹುದು, ನೀವು. “We carried music with us, and music met us at Loughborough Station … and cheered us all along the line with the heartiest welcome … the whole affair being one which excited extraordinary interest, not only in the county of Leicester but throughout the whole country.” ಆ ದಿನ ಆತ ತನ್ನ ಡೈರಿಯಲ್ಲಿ ಬರೆದ ಮಾತುಗಳಿವು. ಸಂಗೀತಕ್ಕ ಕಾಲ, ದೇಶದ ಪರಿವೆಯಿಲ್ಲ. ೧೯೮೧ ರಲ್ಲಿ ಪ್ಯಾರಿಸ್ ನಲ್ಲಿ ಜಾಕ್ ಲ್ಯಾಂಗ್ ಮತ್ತು ಮೋರಿಸ್ ಫ್ಲೂರೆಟ್ ಎನ್ನುವ ಫ್ರೆಂಚ್ ಸಂಗೀತಗಾರ ಸೇರಿ ‘Fête de la Musique’ (“Make music.”) ಅಂತ ಕರೆ ಕೊಟ್ಟು ಈ ದಿನವನ್ನು ಸಂಗೀತಕ್ಕಾಗಿ ಮುಡುಪಿಡುವ ಯೋಜನೆ ಹಾಕಿ ಮರು ವರ್ಷ ಜೂನ್ ೨೧ರಂದು ಇದನ್ನು ವಿಶ್ವದಾದ್ಯಂತ ಆಚರಿಸುವ ಪ್ರಣಾಲಿ ಶುರುವಾಯಿತು (World Music Day). ಜಗತ್ತಿನಾದ್ಯಂತ ಜನರು ತಮ್ಮ ಮನೆಯಲ್ಲಿ, ಜಗುಲಿಯಲ್ಲೋ, ರಸ್ತೆಯಲ್ಲಿ, ಪಾರ್ಕ್, ಸಭೆಗಳಲ್ಲಿ ಸೇರಿ ಆಚರಿಸುತ್ತ ಈ ದಿನವನ್ನು ಸಂಗೀತಕ್ಕಾಗಿಯೇ ಮೀಸಲಿಟ್ಟಿರುತ್ತಾರೆ. ಅದರ ಪ್ರಕಾರ ತಮ್ಮ ಮನೆಯಲ್ಲಿ ಅದನ್ನು ಆಚರಿಸಿದ್ದನ್ನು ನಿಮ್ಮೊಡನೆ ಪ್ರಮೋದ ಅವರು ಹಂಚಿಕೊಂಡಿದ್ದಾರೆ. ಯುನೆಸ್ಕೋ ಅವರು ಅಕ್ಟೋಬರ್ ೧ ನ್ನು ಜಾಗತಿಕ ಸೌಹಾರ್ದತೆ ಮತ್ತು ಶಾಂತಿಗಾಗಿ ವಿಭಿನ್ನವಾಗಿ “ಇಂಟರ್ನ್ಯಾಷನಲ್ ಮ್ಯೂಸಿಕ್ ಡೇ“ ಅಂತ ಕರೆದರು. ಪ್ರಮೋದ ಅವರ ಮನೆಯಲ್ಲಿ ನಡೆದದ್ದು ಒಂದು ಸಿಂಫನಿಯೇ? ನೀವೇ ತೀರ್ಮಾನಿಸಿರಿ! (ಸಂ)
ಪ್ರಮೋದ ಬರೀತಾರೆ: ಮುಂಜಾನಿ ದಿನಪತ್ರಿಕೆ ಹಿಡ್ಕೊಂಡು, ಚಹಾ ಕುಡ್ಕೋತ ಇಂದಿನ ಸಮಾಚಾರ ಓದೋಣ ಅಂತ ಆರಾಮ ಕುರ್ಚಿಯಲ್ಲಿ ಮೈ ಊರಿದೆ ... ಆರಾಮ ಕುರ್ಚಿಯಲ್ಲಿ ವಿರಮಿಸೋ ಮಜಾನೇ ಬೇರೆ
ಬಾನುಲಿಯಲ್ಲಿ ಸಣ್ಣಗೆ ಹೆಂಡ್ತಿ ಹಚ್ಚಿದ ಹಾಡು ಕೇಳಿಸ್ತಿತ್ತು...
ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುಹುದಕೆ ಭಾಷೆ ಒರಟು ಯಾನ ||
ಡಾ. ಜಿ ಎಸ ಶಿವರುದ್ರಪ್ಪ ಅವರ ಸಾಹಿತ್ಯದ ಹಾಡು ಮನಸ್ಸಿಗೆ ಮುದ ಕೊಡುತ್ತದೆ. ಖುಷಿಯಲ್ಲಿ ಮೈಮರೆತಾಗ ಕೇಳಿಸಿತು ಗುಂಡನ ದನಿ. ಬಂದಪ ನಮ್ಮ ಹರಟೆ ಗುಂಡ ಅನ್ಕೋತ ಕರೆದೆ - "ಬಾರೋ ಗುಂಡಣ್ಣ, ಬಹಳ ದಿನ ಆಯಿತು ಭೇಟಿಯಾಗಿ"
ಗುಂಡ ಒಳಗೆ ಬಂದು ಕೂತು, ಸಮಾಚಾರ ಪತ್ರಿಕೆ ಪುರವಣಿ ಪತ್ರಿಕೆ ಓದುತ್ತ "ನನಗೂ ಚಾ ಕೊಡಿ ಅಕ್ಕ" ಅಂತ ಕೂಗಿದ. ಪತ್ರಿಕೆ ಓದುತ್ತ ಕೇಳಿದ "ಸತ್ಯಾ, ಏನೋ ಇದು ವಿಶ್ವ ಸಂಗೀತ ದಿನಾಚರಣೆ? ಸಂಗೀತ ಅಂದರೆ ಏನೂ ಅಂತ ಗೊತ್ತಿಲ್ಲದ ನನಗೆ ಬೇರೆ ಏನೂ ತಿಳಿಯೋದಿಲ್ಲ, ಸಂಗೀತ ಅಂದ್ರೆ ಖುಷಿ ಕೊಡೊ ಹಾಡು ಮಾತ್ರ"
ನನಗೂ ಖರೆ ಅನಿಸ್ತು, ಮನಸ್ನಾಗೆ ಅಂದ್ಕೊಂಡೆ ನನಗೆ ಸಂಗೀತ ಕಲ್ಲಿನ ಕಡಲೆ. ನಮ್ಮ ಅಮ್ಮ, ಅಜ್ಜಿ ಆಗಾಗ ಹಾಡುವದನ್ನು ಕೇಳಿದ್ದೇನೆ, ಅದನ್ನು ಬಿಟ್ಟರೆ ಶಾಲೆ ಸಮಯದಲ್ಲಿ ನಮ್ಮ ಫಿಲಿಪ್ಸ್ ಮ್ಯೂಸಿಕ್ ಸಿಸ್ಟಮ್ ಮತ್ತು ರಾಶಿ ಕ್ಯಾಸ್ಸೆಟ್ಸ್ ನಮ್ಮ ಸಂಗೀತ ಜಗತ್ತಾಗಿತ್ತು. ಹೈಸ್ಕೂಲ್ನಲ್ಲಿ ಇದ್ದಾಗ ಬಿಜಾಪುರ್ ತೀಟೆ ಸರ್ (ಇವರು ಬಿಜಾಪುರಿನ ಪ್ರಸಿದ್ಧ ಸಂಗೀತ ಗುರುಗಳು) ಹತ್ತಿರ ಒಂದು ಪ್ರಯತ್ನ ಸಂಗೀತ ಕಲಿಯೋದು ಆಗಿದೆ. ನಾನು, ನಮ್ಮಣ್ಣ ಮದುವೆಯಾದ ಮೇಲೆ ಹಾಡೋರೂ, ಬರೆಯೋರು ನಮ್ಮ ಮನೆಯ ಭಾಗ ಆದ್ರು.
ಸತ್ಯಾ: (ಸತ್ಯಪ್ರಮೋದ, ಲೇಖಕ) ಗುಂಡಾ... ಹಾಡು ಅಂದಕೂಡಲೇ ನಮ್ಮಣ್ಣನ ಒಂದು ಸಾಹಸ ನೆನಪಾಗ್ತದೆ, ಹೇಳ್ತಿನ್ ಕೇಳು,
ನಾವು ಹೈಸ್ಕೂಲ್ನಲ್ಲಿ ಇದ್ದಾಗ ಪ್ರತಿದಿನ ಸರಿಯಾಗಿ ಮಧ್ಯಾಹ್ನ ಬಿ ಆರ್ ಲಕ್ಷ್ಮಣರಾವ್ ಅವರ ಕೆಳಗಿನ ಹಾಡು ನಮಣ್ಣ ಜೋರಾಗಿ ಕೇಳಿಸ್ತಿದ್ದ
’"ಕೆಂಪು ಕೆಂಪು ಕೆಂಗುಲಾಬಿ ನನ್ನ ಪ್ರೇಯಸಿ
ಮಧುರವಾದ ವೇಣುನಾದ
ನನ್ನ ಪ್ರೇಯಸಿ..."
ನಾನು ಮತ್ತು ಅಮ್ಮ ಪ್ರತಿದಿನ ವಿಚಾರ ಮಾಡುತ್ತಿದ್ದೆವು, ಇದೆ ಹಾಡು ಪ್ರತಿದಿನ ಇದೆ ಸಮಯಕ್ಕೆ ಯಾಕೆ ಕೇಳಿಸ್ತಾನೆ? ಆಮೇಲೆ ಗೊತ್ತಾಯಿತು ನಮ್ಮ ಮನೆಯ ಎದರು ಒಂದು ಸುಂದರ ಕೆಂಗುಲಾಬಿ ಹುಡುಗಿ ಶಾಲೆಯಿಂದ ಮನೆಗೆ ಹೋಗುತ್ತಿದ್ದಳು, ಅವ್ಳು ಈ ಹಾಡು ಕೇಳಿ ಏನಾದ್ರು ಅವನ ಕಡೆ ನೋಡ್ತಾಳೇನು ಎಂದು ಹರಸಾಹಸ ಪ್ರಯತ್ನ ಮಾಡ್ತಿದ್ದ"
ಗುಂಡಾ: ನಗುತ್ತ "ಜಾಲಿ ಬಾರಿನಲ್ಲಿ ಪೋಲಿ ಹುಡುಗರು ಹಾಡನ್ನು ಪ್ರಯತ್ನ ಮಾಡಿಲ್ಲ ತಾನೇ?"
ಚಾ ಕೈಯಲ್ಲಿ ಹಿಡ್ಕೊಂಡು ಬಂದ ನನ್ನ ಹೆಂಡ್ತಿ "ಉಡಾಳ್ತನ ಬಿಟ್ಟು ಬೇರೆ ಯೇನಾದ್ರು ಮಾಡಿರೇನು ನೀವ್ ಅಣ್ಣ, ತಮ್ಮ?"
ಸತ್ಯಾ: "ಹಾಡು ಕಾಡತೈತಿ, ಕಾಡು ಹಾಡಿತೈತಿ (ಇಲ್ಲಿ ಕಾಡು - ಕಾಡುವ ಮನ ಎನ್ನುವದರ ಸಂಕ್ಷಿಪ್ತ).
ಕೆಲವು ಹಾಡು ನಮಗೆ ಬಹಳ ಕಾಡ್ತವಾ, ನನ್ನ ಪ್ರಕಾರ ಎಲ್ಲರಿಗೂ ಕೆಲವು ಅವರದೇ ಪ್ರೀತಿಯ ಹಾಡುಗಳು ಇರ್ತಾವ, ಅವರ ಮನಸ್ಸಿನ ಭಾವದ ಪ್ರಕಾರ ಅವರ ಮನದಲ್ಲಿ ಅವು ಮೂಡ್ತಾವ... ನಂಗಂತ್ತೂ ಇದು ಖರೆ ನೋಡಪ್ಪ"
"ಗುಂಡಣ್ಣ ನಿಮಗೆ ಇವರ ಒಂದು ಗುಟ್ಟು ಹೇಳ್ತಿನಿ ಕೇಳ್ರಿ...
ಇವರು ಅವರ ಅಣ್ಣ ನೌಕ್ರಿಗೆ ಊರ ಬಿಟ್ಟು ಬೇರೆ ಕಡೆ ಹೋದಾಗ ಇವರು ಕೇಳ್ತಿದಿದ್ದು ಹಾಡು ಯಾವ್ದು ಗೊತ್ತಾ?
ನಾಮ್ ಸಿನೆಮಾದ "ತೂ ಕಲ್ ಚಲಜಾಯೆಗಾ ತೋ ಮೈ ಕ್ಯಾ ಕರೂಂಗ, ತೂ ಯಾದ್ ಬಹುತ್ ಆಯೇಗಾ ತೋ ಮೈ ಕ್ಯಾ ಕರೂಂಗsss"
ಉಡಾಳ್ತನ ಅಷ್ಟೇ ಅಲ್ಲ ಭಾವುಕ ಕೂಡ ಇದ್ರು ಇವರಿಬ್ಬರು"
ನಾನು ಸಣ್ಣಗೆ ಇಬ್ಬರಿಗೂ ಕೇಳಿಸೋ ಹಂಗೆ ಹಾಡಿದೆ (ಒಂದು ಸಾಲು ಹೆಚ್ಚಿಗೆ ಸೇರಿಸಿ)
"ನನ್ನ ಹಾಡು ನನ್ನದು,
ನನ್ನ ಭಾವ ನನ್ನದು,
ನನ್ನ ರಾಗ ನನ್ನದು
ನನ್ನ ತಾಳ ನನ್ನದು
ನನ್ನ ಹಾಡು ನನ್ನದು"
ಗುಂಡ: ಈ ಮಾತಿಗೆ ನನಗೆ ಒಂದ್ ಹಾಡು ನೆನಪಾಯಿತು
"ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ,
ಕರೆಯುವೆ ಕೈ ಬೀಸಿ,
ಬತ್ತಿದೆದೆಯಲ್ಲಿ ಬೆಳಿಯಿರಿ ಹಸಿರನು,
ಪ್ರೀತಿಯ ಮಳೆ ಸುರಿಸಿ"
ಭಟ್ಟರು ಈ ಹಾಡಿನಲ್ಲಿ ಎಷ್ಟು ಚೆನ್ನಾಗಿ ಭಾವನೆಗಳ ಮಳೆ ಸುರಿಸಿದ್ದಾರೆ, ಅರ್ಥಕ್ಕೆ ಒತ್ತು ಕೊಡಬ್ಯಾಡ್ರಿ, ನೀವು ಹಾಡಿನ ಭಾವ ಕೇಳಿ ಆನಂದ್ ಪಡೀರಿ.
ಸತ್ಯಾ: ಹಾಡಿನ ಅರ್ಥ ಅಂದ ಕೂಡ್ಲೇ ಒಂದ್ ಸಾಲು ನೆನಪಾಯ್ತು ನೋಡಪ್ಪ...
"ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ"
ಬೇಂದ್ರೆ ಅಜ್ಜಾ ಹೇಳುವಂಗೆ ಮಾತು ಮಾತು ಮಥಿಸಿ ಹುಟ್ಟುವ ನಾದದ ನವನೀತವೇ ಕಾವ್ಯ, ಅದರಲ್ಲಿ ಅರ್ಥ ಅನ್ನೂದು ಗೌಣ... ಮತ್ತ ಗೌಣ ಅಂತ ಅದನ್ನ ಕಡೆಗಾಣಿಸೋದಲ್ಲ... ಅದು ಭಾವಕ್ಕೆ ಬಿಟ್ಟದ್ದು
ಮಾತು ಹಿಂಗಾ ಓಡ್ತಿತ್ತು, ಮಗರಾಯ ಒಳಗೆ ಬಂದ
ಮಗ: ಅಪ್ಪಾ... ಬಾಜೂ ಮನೆ ಮಾಳಗಿ ಸೋರಕತ್ತಾದ, ಅದಕ್ಕೆ ನಾವೆಲ್ಲ ಹುಡುಗರು "ಸೋರುತಿಹುದು ಮನೆಯ ಮಾಳಿಗೆ, ಅಜ್ಞಾನದಿಂದ" ಅಂತ ಕೂಗಿ ಹಾಡಿದೆವು
ಸತ್ಯಾ: ಕೇಳ್ರಪ್ಪ, ಇವ ಹಾಡಿನ ಭಾವನೆ ಬಿಟ್ಟು ಅರ್ಥ ಹುಡುಕ್ಯಾನ...
ಮಗನೆ sss ಕೇಳಪ್ಪ. "ಸೋರುತಿಹುದು ಮನೆಯ ಮಾಳಿಗೆ, ಅಜ್ಞಾನದಿಂದ" ಅಂದರೆ ಬಾಜೂಕಿನ ಮನಿಯವರ ಅಜ್ಞಾನದಿಂದ ಮನಿ ಸೋರುದು ಅಲ್ಲ... ಮನಗಂಡ ಮಳಿ ಕಾರಣ ಸೋರಕತ್ತಾದ.