ಶೀರ್ಷಿಕೆ ನೋಡಿ ಇದು ಕತೆಯೋ ಅಥವಾ ಕವಿತೆಯೂ ಎಂದು ಗೊಂದಲಪಡಬೇಡಿ, ಇದು ಕವಿತೆಯಲ್ಲಿ ಕತೆಯೂ ಹೇಳುತ್ತದೆ ಮತ್ತು ಕವಿತೆಯ ಕಥೆಯನ್ನು ತಿಳಿಸುವ ಪ್ರಯತ್ನ ಮಾಡುತ್ತದೆ. ವೀರ ವನಿತೆ ಎಂದ ಕೂಡಲೇ ನಿಮಗೆ ಇದು ಯಾರ ವಿಷಯ ಎಂದು ತಿಳಿದಿರುತ್ತದೆ… ಹೌದು, ವೀರ ವನಿತೆ ಕಿತ್ತೂರು ಚೆನ್ನಮ್ಮನ ವಿಷಯ. ಇನ್ನೂ ಅಜ್ಜ ಎಂದಾಗ ಕೂಡ ನಿಮಗೆ ಹೊಳೆದಿರಬಹುದು… ಹೌದು, ಅವರೇ ಬೇಂದ್ರೆ ಅಜ್ಜ.
ಈ ಸಂಚಿಕೆಯಲ್ಲಿ ಯಾಕೆ ಈ ವಿಷಯ ಎಂಬ ಪ್ರಶ್ನೆಯೇ?
ನಾಲ್ಕೈದು ದಿನದಲ್ಲಿ ಚೆನ್ನಮ್ಮನ ಹುಟ್ಟಿದ ದಿನ, ಅದ ಕಾರಣ ಇಂದು ವಿವಿಡ್ಲಿಪಿ ಪ್ರಕಟಣೆಯ ಶ್ರೀ. ಸತ್ಯೇಶ್ ಬೆಳ್ಳೂರ್ ಅವರು ಬರೆದ “ಕನ್ನಡೋತ್ಸವ” ನೃತ್ಯ ನಾಟಕದ ಒಂದು ಲಾವಣಿ ಇಲ್ಲಿ ಹಂಚಿಕೊಂಡಿದ್ದೇನೆ. ಚೆನ್ನಮ್ಮನ ವೀರ ಕಥೆಯನು ಸತ್ಯೇಶ್ ಅವರು ಲಾವಣಿಯ ಸುಂದರ ಸಾಲುಗಳಲ್ಲಿ ವಿವರಿಸಿದ್ದಾರೆ, ಕನ್ನಡೋತ್ಸವ ಪುಸ್ತಕ ನೃತ್ಯ ನಾಟಕದ ರೂಪದಲ್ಲಿ ಬೆಂಗಳೂರಿನಲ್ಲಿ ಪ್ರದರ್ಶನ ಕೂಡ ಆಗಿದೆ.
ಎರಡನೆಯದು ಬೇಂದ್ರೆ ಅವರ ನಾಕು ತಂತಿ ಕವನ ಸಂಕಲನದ ವಿಷಯ. ಅವರ ಸಂಕಲನಕ್ಕೆ “ಜ್ಞಾನ ಪೀಠ ಪ್ರಶಸ್ತಿ” ಬಂದು ೫೦ ವರ್ಷ ಆಯಿತು, ಆದುದರಿಂದ ಈ ಸಂಚಿಕೆಯಲ್ಲಿ ಅದರ ವಿಷಯ ಹಂಚಿಕೊಳ್ಳಬಹುದು ಎನ್ನುವ ವಿಚಾರ ಮನಸ್ಸಿಗೆ ಬಂತು… ಹಂಚಿಕೊಂಡಿದ್ದೇನೆ. ನನ್ನ ಸಂಪಾದಕೀಯ ಕಳೆದ ಸಂಚಿಕೆಯಲ್ಲಿ ಬೇಂದ್ರೆ ಅವರ “ನರಬಲಿ” ಕವನದ ವಿಷಯ ಇತ್ತು, ಈ ಸಂಚಿಕೆಯಲ್ಲಿ “ನಾಕು ತಂತಿ” ವಿಚಾರ ಬಂದಿದ್ದು ಆಕಸ್ಮಿಕ, ನನ್ನ ಸಂಪಾದಕೀಯ ಬರುವ ಸಮಯಕ್ಕೆ ಇದೆ ವಿಷಯ ಸಿಕ್ಕಿದ್ದು ಕಾಕತಾಳೀಯ.
ವೀರ ವನಿತೆ ಚೆನ್ನಮ್ಮನ ಲಾವಣಿ (- ಸತ್ಯೇಶ್ ಬೆಳ್ಳೂರ್)
ಬನ್ನಿರಿ ಮಕ್ಕಳೇ ನೋಡುತ ಹಾಡುವ ಕನ್ನಡನಾಡಿನ ಕತೆಯೊಂದ
ಬೆಳಗಾವಿಯ ಅಭಿಮಾನವ ಬೆಳಗುವ ವೀರರಮಣೀಯ ಹಾಡೊಂದ|
ಪೇಶ್ವೆಯ ರಾಜ್ಯವ ನುಂಗಿದ ನಂತರ, ಆಂಗ್ಲರ ದೃಷ್ಟಿಯು ನೆಟ್ಟಿತ್ತು
ಕಿತ್ತೂರಿನ ಸಿರಿ ಧನವನು ದೋಚುವ, ದುಷ್ಟ ಯೋಜನೆಯು ಹೊಮ್ಮಿತ್ತು ||ಪ||
“ವಸ್ತ್ರಕಾಣಿಕೆಯ ಕೊಡುವೆವು ನಾವು, ನಿಮ್ಮಯ ಪಾಡಿಗೆ ಇದ್ದುಬಿಡಿ
ನಿಮ್ಮಯ ರಕ್ಷಣೆ ಆಂಗ್ಲರ ಹೊಣೆಯು, ನಿಮ್ಮಯ ಸೇನೆಯ ಕೊಟ್ಟುಬಿಡಿ”|
ಆಂಗ್ಲರ ಮಾತಿಗೆ ವಿಧಿಯೇ ಇಲ್ಲದೆ ಸಮ್ಮತಿ ಕೊಟ್ಟರು ಒಳಒಳಗೆ
ಚೆನ್ನಮ್ಮಾಜಿಯು ಕುದಿಯುತಲಿದ್ದಳು ತೋರದೆ ಏನನು ಹೊರಹೊರಗೆ ||೧||
ದೇಸಾಯಿಯ ಆರೋಗ್ಯವು ಕೆಟ್ಟರೆ ರಾಜ್ಯವನುಳಿಸುವ ಸಲುವಾಗಿ
ತಾಯಿ ಚೆನ್ನಮ್ಮ ಕಚ್ಚೆಗಟ್ಟುತ್ತ ಖಡ್ಗವ ಹಿಡಿದಳು ಬಲವಾಗಿ|
ಅರಿಗು ತಿಳಿಯದ ಹಾಗೆ ಮತ್ತೊಮ್ಮೆ ಸೈನ್ಯವನೊಂದನು ಕಟ್ಟಿದಳು
ಶಸ್ತ್ರಾಸ್ತ್ರಗಳನು ಪೇರಿಸಿ ಇಡುತಲಿ ಕೋಟೆಯ ಗಟ್ಟಿ ಮಾಡಿದಳು ||೨||
ಸುಳುಹು ಸಿಗುತಲೇ ಆಂಗ್ಲರ ಸೈನ್ಯವು ಕೋಟೆಗೆ ಮುತ್ತಿಗೆ ಹಾಕಿತ್ತು
ಮದ್ದುಗುಂಡುಗಳ ತೋಪು ತುಪಾಕಿಯ ಕೋಟೆಯ ಹೊರಗಡೆ ನಿಲಿಸಿತ್ತು|
“ಅರ್ಧ ತಾಸಿನೊಳು ಕೋಟೆಯ ಬಾಗಿಲ ತೆರೆಯದೆ ಹೋದರೆ ಮುದದಿಂದ
ಬಾಗಿಲ ಸಿಡಿಸಿ ಒಳ ನುಗ್ಗುವೆವು” ಎಂದನು ಥ್ಯಾಕರೆ ಮದದಿಂದ ||೩||
ಅರ್ಧ ತಾಸಿಗೆ ಬಾಗಿಲು ತೆರೆಯಲು ನುಗ್ಗುತ ಬಂದಿತು ವೀರಪಡೆ
ಕುದರೆಯನೇರಿದ ಚೆನ್ನಮ್ಮಾಜಿಯೇ, ಮೊದಲ ಯೋಧಳು ಅವರ ಕಡೆ|
ಒಂಟೆ ಅಬಲೆ ಇವಳೇನು ಮಾಡುವಳು, ನಕ್ಕರು ಆಂಗ್ಲರು ಮೊದಲಲ್ಲಿ
ವೀರನಾರಿಯ ಖಡ್ಗಕೆ ಮಣಿದು, ಸೋಲನು ಉಂಡರು ಕೊನೆಯಲ್ಲಿ ||೪||
ತೋಪು ತುಪಾಕಿಯ ಪಡೆಯೇ ಆದರು, ಥ್ಯಾಕರೆ ಸತ್ತನು ಕೆಳಗುರಳಿ
ಎದೆಯಲಿ ಕೆಚ್ಚಿರೆ, ಮನದಲ್ಲಿ ನೆಚ್ಚಿರೆ, ಗೆಲವೇ ಬರುವುದು ಮರಮರಳಿ|
ಕನ್ನಡ ನಾಡಿನ ಕಥೆಯನು ಯಾರೇ ಹೇಳಲಿ ಕೇಳಲಿ ಯುಗಯುಗದಿ
ಕಿತ್ತೂರಿನ ಈ ರಾಣಿಯ ನೆನೆಯದೆ ಮುಗಿಯುವದೆಂತೋ ಈ ಜಗದೀ ||೫||
ಬನ್ನಿರಿ ಮಕ್ಕಳೆ ನಲಿಯುತ ಹಾಡುವ ಕನ್ನಡನಾಡಿನ ಕಥೆಯನ್ನು
ಕಿತ್ತೂರಿನ ಹೆಸರನು ಬೆಳಗಿಸಿದ ಚೆನ್ನಮ್ಮಾಜಿಯ ಹಾಡನ್ನು…
ವೀರರಮಣೀಯ ಹಾಡನ್ನು…
ದೇಶಪ್ರೇಮದ ಕಹಳೆಯ ಊದಿದ ಒಂದು ಹೆಣ್ಣಿನ ಕಥೆಯು ಇದು…
ಸ್ವಜನರ ದ್ರೋಹದ ಸಂಚಿಗೆ ಬಿದ್ದು ಜೀವವ ತೆತ್ತ ವ್ಯಥೆಯು ಇದು…
ವೀರವನಿತೆಯ ಕಥನವಿದು… ಚೆನ್ನಮಾಜಿಯ ಗಾಥೆ ಇದು…
“ನಾಕು ತಂತಿ”
“ನಾಕು ತಂತಿ” ನಲವತ್ತು ನಾಲ್ಕು ಕವನಗಳ ಸಂಗ್ರಹ, ಅವರ ಮೆಚ್ಚಿನ ಶ್ರಾವಣದ ಕುರಿತ ಕವನ ಮೊದಲನೆಯದು ಮತ್ತು ಶಿಶುಮಾರನ ಲಾಲಿ ನಲವತ್ತು ನಾಲ್ಕನೆಯ ಕವನ, ಪ್ರಕಟಿತ ಪುಸ್ತಕದ ನಾಲ್ಕನೆಯ ಕವನ “ನಾಕು ತಂತಿ”… ಇದು ನಾಲ್ಕನೆಯದು ಆಗುವದಕ್ಕೆ ನಾಕು ಸಂಖ್ಯೆ ಸಾಂಕೇತಿಕ ಇರಬಹುದೇನೋ (ಇದನ್ನು ಯಾರೂ, ಎಲ್ಲಿಯೂ ಉಲ್ಲೇಖಿಸಿಲ್ಲ, ಇದು ನನ್ನ ಅನಿಸಿಕೆ).
ನಾಕು ತಂತಿ ಕವನ ಸಂಕಲನದ ಬಗ್ಗೆ ಮಾತನಾಡುತ್ತ ಬೇಂದ್ರೆ ಅವರು ಹೇಳುತ್ತಾರೆ ” ಕವಿತೆಗಳಲ್ಲಿ ಭಾಷಾಂತರಕ್ಕೆ ಅನುಕೂಲವಾದ ಕವಿತೆಗಳು ಇರುತ್ತವೆ, ಭಾಷಾಂತರಕ್ಕೆ ಅಸಾಧ್ಯವಾದ ಕವಿತೆಗಳು ಇರುತ್ತವೆ. ಅದು ಭಾಷೆಯ ಜಾಯಮಾನಕ್ಕೆ ಕಟ್ಟಿದ್ದು… ನನ್ನ ನಾಕು ತಂತಿ ಕವನ ಯಾವ ಭಾಷೆಗೋ ವಯಲಿಕ್ಕೆ (ಭಾಷಾಂತರಕ್ಕೆ) ಬರಲ್ಲ…”,
ಅವರ ಕವನ ಓದುವಾಗ ಅನಿಸುತ್ತದೆ… ಕವನದ ಸೂಕ್ಷ್ಮ ಅರ್ಥ ತಿಳಿದುಕೊಳ್ಳುವದೇ ಕಷ್ಟ, ಯಾಕಂದರೆ ಕವನದ ಪದಗಳು, ಅಕ್ಷರಗಳು ಕನ್ನಡದಲ್ಲಿ ಕೊಡುವ ಅರ್ಥ ಇನ್ನೊಂದು ಭಾಷೆಯಲ್ಲಿ ಕೊಡಲಿಕ್ಕಿಲ್ಲ. ಡಾ|| ಗುರುರಾಜ ಕರಜಗಿ ಅವರು ಇದನ್ನು ಬೀಜಾಕ್ಷರ ರೂಪದ ಶ್ರುತಿ ಕಾವ್ಯ ಎಂದಿದ್ದಾರೆ. ನಿಜ, ಶಬ್ದ ಗಾರುಡಿಗ ಬೇಂದ್ರೆ ಅವರ ಪ್ರತಿಯೊಂದು ಅಕ್ಷರದಲ್ಲೂ ಅರ್ಥ ಇದೆ.
“ನಾಕು ತಂತಿ” ಯನ್ನು ಬೇಂದ್ರೆ ಅವರು ಬೆಂಗಳೂರಿನ ಆಲ್ ಇಂಡಿಯಾ ರೇಡಿಯೋ ಸಂದರ್ಶನದಲ್ಲಿ ಈ ರೀತಿ ವಿವರಿಸಿದ್ದಾರೆ ” ತನ್ನ ತನಾನೇ ಒಂದು ತಂತಿ, ಆ ತಂತಿ ಒಂದು ತುದಿ ನೀವು ನೋಡ್ತಿರ್ತೀರಿ ಅದಕ್ಕ ಅದು ನಿಮಗೆ ಪ್ರತ್ಯಕ್ಷ ಅಗುದಕ್ಕೆ ಅದಕ್ಕೆ “ನೀನು” ಅಂತೀನಿ, ಇನ್ನೊಂದು ನನಗ ಅದ ಅದಕ್ಕ “ನಾನು” ಅಂತೀನಿ. ಹೊರಗಿನ ಮಂದಿ “ನೀನು” ಅನೂದಕ್ಕೆ ನಾನು “ನಾನು” ಅಂತೀನಿ. ನನ್ನಷ್ಟಕ್ಕೆ ನಾನು ಇದ್ದಂಗೆ ನಾನು ಎಂಬುದು ಇದು “ತಾನು” ಇರ್ತೀನಿ, ಈ “ತಾನು” ಬಹಳ ಎಳೆದಾಡಿದರೆ ಸುಖ ಆಗೋದಿಲ್ಲ, ಅದಕ್ಕೆ “ಆನು” ಬೇಕಾಗುತ್ತದೆ… ಇದರ ಎಲ್ಲಾದರಲ್ಲೂ “ನು” ಏನಿದೆ ಅದು ಜೀವನದ ಮಹತ್ವದ ಭಾಗ.”
ಅದಕ್ಕೆ ಬೇಂದ್ರೆ ಅವರು ತಮ್ಮ ಕವನದಲ್ಲಿ ಅನುತ್ತಾರೆ
’ನಾನು’ ’ನೀನು’
’ಆನು’ ’ತಾನು’
ನಾಕೆ ನಾಕು ತಂತಿ,
ನಾಕೇ ತಂತಿ ಸಾಕು ಶ್ರುತಿ ಹಿಡಿಯಲಿಕ್ಕೆ, ಮಧುರವಾದ ಸಂಗೀತಕ್ಕೆ ಒಂದು ಚೌಕಟ್ಟು ಕೊಡಲಿಕ್ಕೆ. ಹಾಗೆ ’ನಾನು’, ’ನೀನು’, ’ಆನು’, ’ತಾನು’ – ನಾಕೇ ತಂತಿ ಸಾಕು ಜೀವನದ ಸಂಗೀತ ಮಧುರವಾಗಿಸಲಿಕ್ಕೆ.
ಮತ್ತೊಂದು ಕಡೆ ಬೇಂದ್ರೆ ಅವರು ಒಂದು ಇಂಗ್ಲಿಷ್ ಭಾಷಣದಲ್ಲಿ ನಾಕು ತಂತಿ ವಿವರಿಸಿದ್ದು ಹೀಗೆ, (ಕರಜಗಿ ಅವರ ಭಾಷಣದಲ್ಲಿ ಕೇಳಿದ್ದು)
Mans identity is four fold, it’s Naanu, Neenu, Taanu and Aanu. Nu is sensibility, Noovu is special form of sensibility turned into agony. I cannot see myself, not even my face, yet I love it. That is Naanu (I). You can see me as I am but cannot participate in my sensibility, that is Neenu (You). Taanu is the received self, Aanu is the receiving self the one that discovers self by surrender.
ಇನ್ನೂ ಕೆಲವರು ಇದನ್ನು ಅರ್ಥಿಸಿದ್ದು ಹೀಗೆ – “ನಾನು” ಪ್ರಕೃತಿ (ಹೆಣ್ಣಿಗೆ) ಹೋಲಿಸಿದ್ದಾರೆ, “ನೀನು” ಪುರುಷನಿಗೆ ಹೋಲಿಸಿದ್ದಾರೆ, ಇವರಿಬ್ಬರ ಸಮ್ಮಿಲನ “ತಾನು” ಅಂದರೆ ಒಂದು ಮಗು… “ಆನು” ಈ ಸೃಷ್ಟಿಯ ಸೃಷ್ಟಿಕರ್ತ, ಅಂದರೆ ದೇವರು,
ಈ ಕವನದ ನಾಲ್ಕು ಪದಗಳು ಪ್ರತಿ ಸಲ ಓದಿದಾಗಲೂ ಒಂದು ವಿಭಿನ್ನ ಅರ್ಥ ಕೊಡುತ್ತದೆ, ಬೇರೆ ಬೇರೆ ವಿಚಾರ ಮೂಡುತ್ತದೆ, ಹೊಸ ಅರ್ಥ ಹುಟ್ಟುತ್ತದೆ. ನಮ್ಮನ್ನು ನಾವು ಅರ್ಥ ಮಾಡಿಕೊಂಡಿದ್ದು “ನಾನು” ಅನ್ನಬಹುದು… ಬೇರೆಯವರು ನಮ್ಮನ್ನು ನೋಡಿ, ನಮ್ಮ ಬಗ್ಗೆ ತಿಳಿಸುವುದು “ನೀನು” ಅನ್ನಬಹುದು… ನಮ್ಮ ಅಹಂ ಅನ್ನು “ತಾನು” ಅನ್ನಬಹುದು… ಸಕಾರಾತ್ಮಕತೆ ವಿಚಾರಗಳನ್ನು “ಆನು” ಅನ್ನಬಹುದು… ಇವುಗಳನ್ನು ಸಮತೋಲನದಲ್ಲಿ ಇಟ್ಟರೆ ನಮ್ಮ ವ್ಯಕ್ತಿತ್ವ ಮಧುರ, ಇಲ್ಲದಿದ್ದರೆ ಕರ್ಕಶ… ಇದು ನನ್ನ ಮನಸಿನ್ನಲ್ಲಿ ಬಂದ ವಿಚಾರ.
ಅವರ ಇನ್ನೊಂದು ವಿಚಾರ ಇಲ್ಲಿ ಹಂಚಿಕೊಳ್ಳುವುದು ಸೂಕ್ತ ಅನಿಸುತ್ತದೆ, ಅವರು ಹೇಳುತ್ತಾರೆ “ಓದಿದ ಕೂಡಲೇ ಅರ್ಥ ಆಗೋದು ಕವಿತೆ ಉಚ್ಚ ಲಕ್ಷಣ ಅಲ್ಲವೇ ಅಲ್ಲ… ಪ್ರತಿಯೊಂದು ಸಲ ಓದಿದಾಗೂ ಹೊಸ ಅರ್ಥ ಆಗೋದು ಖರೆ ಕವಿತೆಯ ಲಕ್ಷಣ”.
ಇಲ್ಲಿಯವರೆಗೆ ನಾವು ನೋಡಿದ್ದು “ನಾಲ್ಕು ತಂತಿ” ಕವನದ ಮೂರು ಸಾಲು ಮಾತ್ರ, ಪೂರ್ತಿ ಕವನದಲ್ಲಿ ನಾನು ನೋಡಿದ್ದು/ ಓದಿದ್ದು ೬೮ ಸಾಲುಗಳು. ಇವನ್ನು ನನ್ನ ವಿಚಾರಧಾರೆಗೆ ಮತ್ತು ಮಿತಿಗೆ ತಕ್ಕಂತೆ ಅರ್ಥಮಾಡಿಕೊಳುತ್ತಿದ್ದೇನೆ, ಮತ್ತೊಮ್ಮೆ ಅವಕಾಶ ಸಿಕ್ಕರೆ ಉಳಿದ ಸಾಲುಗಳ ಬಗ್ಗೆ ಬರೆಯುವೆ.