ಬಾಸ್ವರ್ತ್ ಯುದ್ಧರಂಗ ಎನ್ನುವ ಇಂಗ್ಲೆಂಡಿನ ಪ್ರೇಕ್ಷಣೀಯ ಸ್ಥಳ -ಶ್ರೀವತ್ಸ ದೇಸಾಯಿ

ಒಂದು ರೀತಿಯಿಂದ ಇದು ಇಂಗ್ಲೆಂಡಿನ ದೊರೆ ಮೂರನೆಯ ರಿಚರ್ಡ್ ನ ಇತಿಹಾಸದ ಬಗ್ಗೆ ನಾನು ಬರೆದ ಲೇಖನದ (https://wp.me/p4jn5J-3Sw) ಹಿಂದೆ ಸರಿದ ಭಾಗ! ಅದರಲ್ಲಿ ಆತನ ಮರಣದ ನಂತರದ ಘಟನೆಗಳ ವಿಶ್ಲೇಷಣೆಯಿದ್ದರೆ ಇದರಲ್ಲಿ ಆತ ಸಾವನ್ನಪ್ಪಿದ ಜಾಗದ ಸ್ಥಳಪುರಾಣ ಇದೆ. ಅಲ್ಲಿ ನೋಡುವದೇನು ಇದೆ? ಇದೇ ಪ್ರಶ್ನೆಯನ್ನು ಸ್ಟೇನ್ಸ್ಟಪಕ್ಕದ ರನ್ನಿಮೀಡ್ ಬಗ್ಗೆಯೂ ಕೇಳಬಹುದು. ಅಲ್ಲಿ ಮ್ಯಾಗ್ನಾ ಕಾರ್ಟಾದ ಮೇಲೆ ಸಹಿ ಆಗಿತ್ತು. ಅಲ್ಲಿ ಇತಿಹಾಸವಿದೆ. ಇಂಥ ಐತಿಹಾಸಿಕ ಸ್ಥಳಗಳಲ್ಲೆಲ್ಲ ಅದರ ಹಿಂದಿನ ಐತಿಹಾಸಿಕ ಸಂಗತಿಗಳೇ ರೋಚಕ. ಇತಿಹಾಸ ಎದ್ದು ಬರುತ್ತದೆ; ವ್ಯಕ್ತಿಗಳು, ರಾಜರು ಜೀವ ತಳೆದು ಮಾತಾಡುತ್ತಾರೆ! ಒಂದು ವಿಷಯ: ನಾವು ಲ್ಯಾಂಕಾಸ್ಟರಿನ ಕೆಂಪು ಮತ್ತು ಯಾರ್ಕ್ ಶೈರಿನ ಬಿಳಿ ಗುಲಾಬಿ ಲಾಂಛನಗಳ ಬಗ್ಗೆ ಓದುತ್ತೇವೆ. ಆದರೆ ಅವುಗಳು ಆಗ ಲಾಂಛನವಾಗಿರಲಿಲ್ಲ. ಸೈನಿಕರು ಹೊತ್ತ ಬಿಳಿ ಬ್ಯಾಜಿನ ದಾಖಲೆ ಮಾತ್ರ ಇದೆ. ಶೇಕ್ಸ್ಪಿಯರನ ನಾಟಕದಲ್ಲಿ ಮತ್ತು ನಂತರದ ಹತ್ತೊಂಬತ್ತನೆಯ ಶತಮಾನದ ಬರವಣಿಗೆಗಳಲ್ಲಿ ಈ ಸಂಜ್ಞೆಗಳಿಗೆ ಪ್ರಚಾರ ಬಂದಿತು. -(ತತ್ಕಾಲ ಸಂ!)
king-richard-iii-
ಮೂರನೆಯ ರಿಚರ್ಡ್                             ಮೊದಲು ಸ್ವಲ್ಪ ಇತಿಹಾಸ

ಮೇಲಿನ ಮಾತುಗಳ ಅರ್ಥವಾಗಲು ಕೆಲವು ಐತಿಹಾಸಿಕ ವಿಷಯಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಬಹಳಷ್ಟು ಜನರಿಗೆ  ಇಂಗ್ಲೆಂಡಿನ ಎರಡು ಎರಡು ಪ್ರಮುಖ ರಾಜವಂಶ ಪಂಗಡಗಳಾದ ಲ್ಯಾಂಕಾಸ್ಟರ್ ಮನೆತನ (ಲಾಂಛನ ಕೆಂಪು ಗುಲಾಬಿ) ಮತ್ತು ಯಾರ್ಕ್ ಮನೆತನಗಳ (ಬಿಳಿ ಗುಲಾಬಿ) ಮಧ್ಯೆ 30 ವರ್ಷಗಳ ಕಾಲ ನಡೆದ 15 ಯುದ್ಧಗಳ ಬಗ್ಗೆ (”ದ ಬ್ಯಾಟಲ್ ಆಫ್ ದಿ ರೋಸಸ್”) ಗೊತ್ತಿದ್ದರೂ ಅದು ಮುಕ್ತಾಯವಾದ ಬಾಸ್ವರ್ತ್ಎನ್ನುವ ಊರಿನ ಹತ್ತಿರದ ಈ ತಗ್ಗು, ದಿನ್ನೆ ಮತ್ತು ಚೌಗು ಪ್ರದೇಶದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲಿಕ್ಕಿಲ್ಲ. ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಕಾದ ದಾಯಾದಿಗಳಾದ ಕೌರವ ಪಾಂಡವರಂತೆಯೇ ಇಂಗ್ಲೆಂಡಿನ ಕಿರೀಟಕ್ಕಾಗಿ ಹೋರಾಡಿದ ಈ ಎರಡೂ ಮನೆತನಗಳೂ 14 ನೆಯ ಶತಮಾನದಲ್ಲಿ ಆಳಿದ ಮೂರನೆಯ ಎಡ್ವರ್ಡ್ ಪ್ಲಾಂಟಾಂಜನೆಟ್ ದೊರೆಯ ಸಂತತಿಗಳೇ! ಅ ಕರಾಳ ದಿನ ಬೆಳಗಿನ ಸಮಯ (22ನೆಯ ಆಗಸ್ಟ್, 1485) ಬಾಸ್ವರ್ತ್ ಯುದ್ಧದಲ್ಲಿ ಮೂರನೆಯ ರಿಚರ್ಡ್ ಇಂಗ್ಲೆಂಡಿನ ಪಟ್ಟಕ್ಕಾಗಿ ಎದುರಾಳಿಯಾದ (ಮುಂದೆಏಳನೆಯ ಹೆನ್ರಿ ಎಂದು ಕರೆಯಲ್ಪಡಲಿರುವ)  ಹೆನ್ರಿ ಟ್ಯೂಡರ್ ನ ದಂಡಿನ ಮೇಲೆ ರಾಜ ಸ್ವತಃ ಏರಿ ಹೋದಾಗ ತಲೆಗೆ ವೈರಿಯ ಹ್ಯಾಲ್ಬರ್ಡ್ (halberd) ಎನ್ನುವ ಭೀಕರ ಶಸ್ತ್ರದ ಪ್ರಹಾರದಿಂದ ಮರಣಹೊಂದಿದ. ಆತನ ಕುದುರೆಯ ಕಾಲುಗಳು ಕೆಸರಿನಲ್ಲಿ ಸಿಕ್ಕಿಕೊಂಡಿದ್ದರಿಂದ ಕೆಳಗಿಳಿಯಬೇಕಾಗಿ ಅಲ್ಲಿಂದಲೆ ಧೈರ್ಯದಿಂದ ಮುನ್ನುಗ್ಗಿದ್ದ ರಿಚರ್ಡ್ ಯುದ್ಧರಂಗದಲ್ಲಿ ಮೃತನಾದ ಇಂಗ್ಲೆಂಡಿನ ಕೊನೆಯ ಅರಸನೂ ಆಗಿದ್ದಾನೆ. ಆತ ಆಳಿದ್ದು ಬರೀ ಹದಿನಾಲ್ಕು ವರ್ಷ ಮಾತ್ರ.

ಬಾಸ್ವರ್ತ್ ಯುದ್ಧರಂಗ

ನೆರಳು ಗಡಿಯಾರ (Sun dial with the crown of Richard III)

ಧರ್ಮಕ್ಷೇತ್ರೇ ಕುರುಕ್ಷೇತ್ರೇ!

ಆಗ ಪ್ರಾಟೆಸ್ಟೆಂಟ್ ಮತ ಹುಟ್ಟಿರಲಿಲ್ಲ. ರಿಚರ್ಡನ ಪೂರ್ವಜರಿಗೆ ಫ್ರಾನ್ಸ್ ದೇಶದ ಸಂಬಂಧವಿತ್ತು ಅಂತ ಆತನೂ ಕ್ಯಾಥಲಿಕ್ ಆಗಿದ್ದ. ಆತ ಮೃತನಾದ ಮೇಲೆ ಆತನ ದೇಹವನ್ನು ಹತ್ತಿರದ ಲೆಸ್ಟರಿನ ಫ್ರಾನ್ಸಿಸ್ಕನ್ ಫ್ರಯರಿ ಚರ್ಚಿನಲ್ಲಿ ಗಡಿಬಿಡಿಯಿಂದ ಮಣ್ಣು ಮಾಡಲಾಗಿತ್ತು. ಅದರ ಗುರುತುಗಳೆಲ್ಲ ಮಾಯವಾಗಿದ್ದವು. ಮುಂದೆ ಆ ಸ್ಥೂಲಕಾಯದ, ಷಟ್ಪತ್ನಿವ್ರತ (!) ಎಂಟನೆಯ ಹೆನ್ರಿ ಪೋಪನನ್ನು ಮಾನ್ಯ ಮಾಡದೆ ಪ್ರಾಟೆಸ್ಟೆಂಟ್ ಆದ. ಆತ ಫ್ರಯರಿಗಳನ್ನು (Friary) ರದ್ದುಗೊಳಿಸಿದ. ಸೋರ್ ನದಿಯಲ್ಲಿ ರಿಚರ್ಡನ ಅಸ್ಥಿಯನ್ನು ಚೆಲ್ಲಲಾಯಿತೆಂದೆಲ್ಲ ವದಂತಿ ಹಬ್ಬಿತ್ತು. ಅದಕ್ಕೆ ಅದನ್ನು ಪತ್ತೆ ಹಚ್ಚಲು ಐದು ಶತಮಾನಗಳೇ ಬೇಕಾಯಿತು. ಆತನ ನಿಷ್ಟ ಅಭಿಮಾನಿಗಳ ಪ್ರಯತ್ನದಿಂದ ಸಂಶೋಧನೆ ಪ್ರಾರಂಭವಾಗಿ ಆ ಚರ್ಚಿನ ಗುರುತು ಹಿಡಿದು ಕಾರ್ ರ್ಪಾರ್ಕಿನಡಿ ಉತ್ಖನನ ಮಾಡಿ ರಿಚರ್ಡನನ್ನು ವಿಜೃಂಭ್ಹಣೆಯಿಂದ ಲೆಸ್ಟರ್ ಕೆಥಿಡ್ರಲ್ನಲ್ಲಿ ಸಮಾಧಿ ಮಾಡಿದ್ದು ಕ್ಯಾಥಲಿಕ್ ಮತದ ಕ್ರಿಶ್ಚಿಯನ್ನರಿಗೆ ಅಸಮಾಧಾನವಾಗಿತ್ತು! 

ಕೊನೆಯುಸಿರೆಳೆದವರೆಷ್ಟು ಜನ?

ಹಾಗೆ ನೋಡಿದರೆ ಒಂದು ಸಾವಿರ ಜನ ಮೃತರಾದರೂ, ಎರಡೂ ಕಡೆ ಸೇರಿ ಪಾಲುಗೊಂಡ 22,000 ಯೋಧರ ಸಂಖ್ಯೆ ಕುರುಕ್ಷೇತ್ರದ ಹದಿನೆಂಟು ಅಕ್ಷೌಹಿಣಿ ಸೈನ್ಯಕ್ಕೆ ಹೋಲಿಸಲಾಗದು. ಅದರಲ್ಲಿ ಎರಡುಸಾವಿರ ಯೋಧರು ಫ್ರಾನ್ಸಿನಿಂದ ಬಂದ ಕೂಲಿ ಸೈನಿಕರು (mercenaries). ಈ ದೇಶದ ಅತ್ಯಂತ ಭೀಕರವಾದ ಯಾದವೀ ಕಾಳಗವೆಂದು ಪ್ರಸಿದ್ಧವಾದ ಐವತ್ತು ಸಾವಿರ ಜನ ಭಾಗವಹಿಸಿದ್ದ ಟೌಟನ್ ಯುದ್ಧಕ್ಕೆ ಸಮ ಇದು ಆಗಿರಲಿಲ್ಲ. ಆದರೂ ಇದು ಈ ದೇಶದ ಇತಿಹಾಸಕ್ಕೆ ಅತ್ಯಂತ ಮಹತ್ವದ ತಿರುವು ಕೊಟ್ಟಿತ್ತು. ರಿಚರ್ಡನ ಪತನದಿಂದ ಇಂಗ್ಲೆಂಡಿನ ದೊರೆಯಾದ ಏಳನೆಯ ಹೆನ್ರಿ ಯಾರ್ಕ್ ಮಹಿಳೆಯನ್ನು ಮದುವೆಯಾಗಿ ಎರಡೂ ಪಂಗಡಗಳನ್ನು ಒಂದುಗೂಡಿಸಿದ. ಆತನ ಲಾಂಛನವೇ ಮುಂದೆ ಬಿಳಿ-ಕೆಂಪು ಎರಡೂ ಬಣ್ಣದ ಹೂಗಳೊಂದಿಗೆ ಟ್ಯೂಡರ್ ರೋಸ್ ಆಯಿತು.

ರಿಚರ್ಡನ ಕೊನೆಯ ಮಾತುಗಳು

ಬಾಸ್ವರ್ತ್ ರಣರಂಗದ ಸುತ್ತಲೂ ನಡೆದಾಡಲು ಅನುಕೂಲವಾಗುವ ಪಥ ಅದೆ. ಅಲ್ಲಲ್ಲಿ ಉತ್ತಮ ಮಾಹಿತಿ ಫಲಕಗಳನ್ನು ನಿರ್ಮಿಸಿದ್ದರಿಂದ 500 ವರ್ಷಗಳ ಹಿಂದಿನ ಇತಿಹಾಸ ಜೀವ ತಳೆದು ಸಮರ ಇದುರಿಗೇ ನಡೆಯುತ್ತಿದೆಯೇನೋ ಅಂತ ರೋಮಾಂಚನವಾಗುತ್ತದೆ. ಕುದುರೆಗಳ ಖುರಪುಟ, ಕತ್ತಿ ಗುರಾಣಿಗಳ ಘರ್ಷಣೆಯ ಖಟ್ – ಖಡಲ್, ಮರಣವನ್ನಪ್ಪುತ್ತಿರುವ, ಗಾಯಗೊಂಡ ಸೈನಿಕರ ಆರ್ತ ನಾದ, ಕಿವಿಯನ್ನು ಗಡಚಿಕ್ಕುತ್ತವೆ. ಇಂಥ ಕಾಳಗಗಳಲ್ಲಿ ಕುದುರೆ ಸವಾರರದೇ ಮೇಲುಗೈಯೆಂದ ಮೇಲೆ ಕುದುರೆಯನ್ನು ಕಳೆದುಕೊಂಡು ಕುದುರೆಯಿಂದ ಕೆಳಕ್ಕುರುಳಿದ ರಿಚರ್ಡ್ ದೊರೆ ’ಒಂದು ಕುದುರೆಗಾಗಿ ಏನನ್ನು (ನನ್ನ ರಾಜ್ಯವನ್ನೂ) ಕೊಡಲಾರೆ” ಅಂದನಂತೆ. ಆತನ ಕಿರೀಟ ಹಾರಿತ್ತು ಎದುರಾಳಿಗಳ ಭರ್ಚಿ-ಕೊಡಲಿ ಕೂಡಿದ ಹ್ಯಾಲ್ಬರ್ಡ್ ಶಸ್ತ್ರದಿಂದ ಭೀಕರ ಹತ್ಯೆಯಾಯಿತು..ಶೇಕ್ಸ್ಪಿಯರನ ನಾಟಕದ ಪ್ರಸಿದ್ಧ ಸಾಲುಗಳ ಪ್ರಕಾರ “A horse, a horse, My kingdom for a horse” ಅಂತ ಕನವರಿಸುತ್ತ ಮಡಿದನಂತೆ

ರಾಜನ ಕೊನೆಯ ನೀರಿನ ಗುಟುಕು?

ಬಾಸ್ವರ್ತ್ ರಣಭೂಮಿಯ ಸುತ್ತಿನ ದಾರಿಯ ಹದಿನೇಳನೆಯ ಮತ್ತು ಕೊನೆಯ ವೀಕ್ಷಣಾ ಸ್ಥಾನದಲ್ಲಿ ಹತ್ತೊಂಬತ್ತನೆ ಶತಮಾನದಲ್ಲಿ ಊರ್ಜಿತವಾದ ಒಂದು ಕಲ್ಲುಗುಡ್ಡೆ (Cairn) ಇದೆ. ಅದು ಅಲ್ಲಿ ಹರಿವ ನೀರಿನ ಸೆಲೆಯ ಮೇಲೆ ಕಟ್ಟಲಾಗಿದೆ ಅನ್ನುತ್ತದೆ ಒಂದು ಫಲಕ. ಅದರ ಪಕ್ಕದಲ್ಲೇ ರಿಚರ್ಡನ ಸೈನ್ಯಯುದ್ಧ ಪೂರ್ವ ’ಡೇರೆ’ ಹಾಕಿತ್ತು. ಅಲ್ಲಿಯೇ ಆತ ಕೊನೆಯ ಬಾರಿ ನೀರು ಕುಡಿದನೆಂದು ಪ್ರತೀತಿ. ಆ ಸ್ಥಳವನ್ನು ಇಂದಿಗೂ ನೋಡಿ ನಿಮ್ಮ ಇತಿಹಾಸ ಪಿಪಾಸೆಯನ್ನು ತಣಿಸಿಕೊಳ್ಳಬಹುದು.

ಕೊನೆಗೂ ವಿಜ್ಞಾನದ ತೀರ್ಪು

ಯುದ್ಧದ ನಾಮೋ ನಿಶಾನೆ ಎಲ್ಲ ಅಳಿಸಿ ಹೋಗಿರುವಾಗ ಈ ಜಾಗದಲ್ಲೇ ಆ ರಣರಂಗವಿತ್ತು ಅಂತ ಹೇಗೆ ಸಾಬೀತು ಮಾಡಲಾಯಿತು? ಅದಕ್ಕೆ ಸಹಾಯ ಬಂದುದು ಆಧುನಿಕ ಕಾರ್ಬನ್ ಡೇಟಿಂಗ್ ವಿಜ್ಞಾನ. ಈ ದೇಶದಲ್ಲಿ ಅತ್ಯಂತ ಹಳೆಯ ಚರ್ಚುಗಳಲ್ಲೂ ಉಳಿದಿರುವ ದಾಖಲೆಗಳು ಇತಿಹಾಸವನ್ನು ಜೋಡಿಸಲು ಬಹಳ ಸಹಾಯ ಮಾಡುತ್ತವೆ. ಹುಟ್ಟು, ಬಾಪ್ಟಿಸಮ್ (ನಾಮಕರಣ), ಮದುವೆ, ಶವಸಂಸ್ಕಾರದ ದಾಖಲೆಗಳನ್ನು ಮುತವರ್ಜಿಯಿಂದ ಕಾದಿಡಲಾಗುತ್ತದೆ. ಪಕ್ಕದ ಡಾಡ್ಲಿಂಗ್ಟನ್ ಚರ್ಚಿನ ಶವಸಂಸ್ಕಾರ ದಾಖಲೆಗಳಿಂದ ಇತಿಹಾಸದ ತುಣುಕುಗಳನ್ನು ಜೋಡಿಸಿದ ಮೇಲೆಯೂ ಉಳಿದಿರಬಹುದಾದ ಸಂಶಯಗಳನ್ನು ನಿವಾರಿಸಲು ಆಧುನಿಕ ವಿಜ್ಞಾನ ಸಹಾಯಕ್ಕೆ ಬಂದಿದೆ. ಶತಮಾನಗಳ ಹಿಂದೆ ಲೆಸ್ಟರಿನ ಮಧ್ಯೆ ನೆಲಸಮವಾಗಿ ಹೂತುಹೋದ ಫ್ರಯರಿ ಚರ್ಚಿನಲ್ಲಿ ಸಿಕ್ಕ ಎಲುಬುಗಳು ರಿಚರ್ಡ್ ದೊರೆಯದೇ ಅಂತ ಹಲ್ಲಿನ ಡಿ ಎನ್ ಏ ಸಾಬೀತು ಮಾಡಿದಂತೆ ಬಾಸ್ವರ್ತ್ ಹತ್ತಿರದ ಆಳದ ಮಣ್ಣಿನ ಪೀಟ್ (peat) ಸ್ಯಾಂಪಲ್ಲುಗಳನ್ನು ಕಾರ್ಬನ್ ಡೇಟಿಂಗ್ ಮಾಡಿ ಪರೀಕ್ಷಿಸಿದ ಅಮೇರಿಕೆಯ ಲ್ಯಾಬೋರಟರಿ ಐದು ನೂರು ವರ್ಷಗಳ ಹಿಂದೆ ಇಲ್ಲಿರುವುದೇ ಜವುಳು ಪ್ರದೇಶ (marshland) ಅಂತ ಖಚಿತಪಡಿಸಿತು. ಅದರಿಂದ ರಣರಂಗದ ಸರಿಯಾದ ಜಾಗ ಇದು ಅಂತ ನಿಶ್ಚಿತವಾಯಿತು.ಇವೆಲ್ಲ ಮಾಹಿತಿ ಪಕ್ಕದಲ್ಲಿರುವ ವಿಸಿಟರ್ ಸೆಂಟರ್ ನಲ್ಲಿರುವ ಉತ್ತಮ ಮ್ಯೂಸಿಯಮ್ ದಲ್ಲಿ ದೊರಕುತ್ತವೆ.

ಕೊನೆಯ ಮಾತು

ಇತಿಹಾಸದಿಂದ ಏನು ಉಪಯೋಗ ಎಂದು ಅನೇಕರ ಅಭಿಪ್ರಾಯವಾದರೂ ಜಾರ್ಜ್ ಸಾಂಟಾಯನ ಹೇಳಿದಂತೆ ಇತಿಹಾಸವನ್ನರಿಯದವರು ಮತ್ತೆ ಮತ್ತೆ ಅವೇ ತಪ್ಪುಗಳನ್ನು ಮಾಡುವ ಶಾಪಗ್ರಸ್ತರಾಗುತ್ತಾರೆ! ಇತಿಹಾಸವನ್ನು ತುಳಿದರೆ ಅದು ನಿನ್ನನ್ನು ನೆಲಸಮಮಾಡುತ್ತದೆ! ಆದರೆ ಮಾನವ ಇತಿಹಾಸದ ತುಂಬೆಲ್ಲ ಈರ್ಷೆ, ದ್ವೇಷಗಳಿಂದ ಯುದ್ಧಗಳಾಗುತ್ತಿರುವಾಗ ಅತ್ಯಂತ ಪುರಾತನ ಉಪನಿಷತ್ತಿನ ವಾಕ್ಯ ’ಮಾ ವಿದ್ವಿಷಾವಹೈ’ (ವೈಮನಸ್ಸು, ದ್ವೇಷ ಬೇಡ) ಯನ್ನು ಯಾರೂ ಕೇಳಿಸಿಕೊಂಡಿಲ್ಲವೇ? ಎಂದೆನಿಸುತ್ತದೆ

ಶ್ರೀವತ್ಸ ದೇಸಾಯಿ.

(ಈ ವಾರದ ಕನ್ನಡಪ್ರಭದಲ್ಲಿಯ ನನ್ನ ಲೇಖನದ ವಿಸ್ತೃತ ಆವೃತ್ತಿ)

ಫೋಟೋಗಳು: ಲೇಖಕರವು; Photo of Peat: CC BY-SA 3.0, https://commons.wikimedia.org/w/index.php?curid=244694

Links: My article: https://wp.me/p4jn5J-3Sw

https://www.bosworthbattlefield.org.uk/

ಟೊಲಿಮೊರ ಪಾರ್ಕ್ ಉತ್ತರ ಐರ್ಲ್ಯಾಂಡಿನ ದೇವಿಮನೆ -ಅಮಿತಾ ರವಿಕಿರಣ್ ಬರೆಯುವ ಪ್ರವಾಸ ಕಥನ

ರಜೆಯಲ್ಲಿ ದೂರದ ಅಜ್ಜಿ ಮನೆಗೆ ಹೋಗುವಾಗ ಸಿಗುತ್ತಿದ್ದ ದೇವಿಮನೆ ಘಟ್ಟ. ಅದು ನಾನು ನೋಡಿದ ಮೊದಲ ದಟ್ಟ ಅರಣ್ಯ. ಕತೆಯಲ್ಲಿ ಕೇಳುತ್ತಿದ್ದ `ಕಾಡು` ಎಂಬ ಪದದ ಕಲ್ಪನೆಗೆ ದೃಶ್ಯ ರೂಪ ಕೊಟ್ಟ ಜಾಗ ಅದು. ಜಿರ್ರ್ ಜಿರ್ರ್ ಎಂಬ ಝೇಂಕಾರ ಹಕ್ಕಿಗಳ ಸಂಗೀತ, ಕಾಡು ಹೂಗಳ ಘಮ, ಬೆಣ್ಣೆಯಂತೇ ಹರಿಯುವ ಬೆಣ್ಣೆ ಹೊಳೆ ಮತ್ತು ಅಲ್ಲಿ ನೆಲ ಕಾಣಿಸುವ ತಿಳಿನೀರು, ಎಲ್ಲೆಲ್ಲೂ ನೆರಳು, ಅದೆಲ್ಲೋ ಒಂದಷ್ಟು ಕಂಡರೂ ಕಾಣಿಸದಂತೆ ಮುಖ ಮರೆಸಿಕೊಳ್ಳುತ್ತಿದ್ದ ಬಿಸಿಲು. ಹಸಿರು ಹಸಿರು ಹಸಿರು. ಇಲ್ಲಿ ಯಾವ ದೇವಿ ಮನೆ ಮಾಡಿ ನಿಂತರೂ ಆಶ್ಚರ್ಯ ಪಡಬೇಕಿಲ್ಲ!   


ಬರೀ ಬಸ್ಸಿನ ಕಿಟಕಿಯಿಂದಲೇ ಈ ದೇವಿಮನೆ ಘಟ್ಟವನ್ನ ನೋಡುತ್ತಿದ್ದ ನನಗೆ, ಇಂತಹ ಕಾಡನ್ನೊಮ್ಮೆ ಅಲೆದು ಬರಬೇಕು ಅದರ ಸನ್ನಿಧಿಯಲ್ಲಿ ಸಮಾಧಾನಿಸಬೇಕು ಎಂಬುದು ಬಾಲ್ಯದಿಂದಲೂ ಮನಸಿನಲ್ಲಿ ಘಟ್ಟಿಯಾಗುತ್ತಿದ್ದ ಕನಸು. ಭಾರತದಲ್ಲಿದ್ದಷ್ಟು ದಿನವೂ ಏನಾದರೊಂದು ಕಾರಣದಿಂದ ಅಂತಹ ಅವಕಾಶ ಕೈ ತಪ್ಪಿ ಹೋಗುತ್ತಿತ್ತು. ಗಣೇಶ ಚವತಿಗೆ ಮಂಟಪ ಸಿಂಗರಿಸಲು ಶತಾವರಿ ಗಿಡಗಳನ್ನು ಹುಡುಕಿಕೊಂಡು ಹೊಲದ ಬದುವಿನಲ್ಲಿದ್ದ ಪುಟ್ಟ ಕಾಡಿಗೆ ಹೋದಾಗ ಅಥವಾ ಮುಂಡಗೋಡ-ಯಲ್ಲಾಪುರದ ನಡುವೆ ಪ್ರಯಾಣಿಸುವಾಗಲೊಮ್ಮೆ  ದೇವಿಮನೆ ಸುತ್ತುವ ಆಸೆ ಮತ್ತೆ ಮನದಲ್ಲಿ ಮೂಡುತ್ತಿತ್ತು.   

ನಾನು ನಾರ್ದರ್ನ್ ಐರ್ಲೆಂಡ್ ಗೆ ಬಂದ ನಂತರ ಈ ದೇಶದಲ್ಲಿ ನನಗೆ ಅತಿಯಾಗಿ ಇಷ್ಟವಾದ ವಿಷಯವೇ ಈ ಹಸಿರು ಶುದ್ಧ ಪರಿಸರ.  ಮತ್ತದನ್ನು ಸ್ವಚ್ಛವಾಗಿಡಲು ಸರ್ವ ರೀತಿಯಿಂದಲೂ ಸಹಕರಿಸುತ್ತಿದ್ದ ನಾಗರೀಕರು. ಎಲ್ಲಡೆ ಹಸಿರು ನೀರಿನ ನೀಲಿ ಕಾಣ ಸಿಗುತಿತ್ತು, ಆದರೆ ಇಲ್ಲಿ ಕಾಡು ಇರಬಹುದೇ? ಎಂಬ ಪ್ರಶ್ನೆ ಮನದಲ್ಲಿದ್ದುದು ಸುಳ್ಳಲ್ಲ. ಜುಲೈ ಅಗಸ್ಟ್ ತಿಂಗಳು ಇಲ್ಲಿ ಹೆಸರಿಗೊಂದು ಬೇಸಿಗೆ ಬರುತ್ತದೆ. ಮಕ್ಕಳಿಗೆ ರಜೆ ಇರುವ ಕಾರಣ ನಾವೆಲ್ಲರೂ ಈ ನಾಮಕಾವಾಸ್ತೆ ಬರುವ ಬೇಸಿಗೆಯಲ್ಲಿ ಸ್ಥಳೀಯ ಜಾಗೆಗಳನ್ನ ತಿರುಗಾಡುವ ಪ್ಲಾನ್ ಮಾಡ್ತೀವಿ. ಹಾಗೆ ಬೇಸಿಗೆಯ ಒಂದು ದಿನ  ಇಂಟರ್ನೆಟ್ ತಡಕಾಡಿ ಹುಡುಕಿ ತೆಗೆದಿದ್ದು ''ಟೊಲಿಮೊರ್ ಪಾರ್ಕ್''ಎಂಬ ಸ್ಥಳದ ಪೋಸ್ಟ್ ಕೋಡ್. ಹತ್ತಿರ ಇತ್ತಾದ್ದರಿಂದ ಒಂದೇ ದಿನದಲ್ಲಿ ಹಿಂದಿರುಗಲು ಅನುಕೂಲ ಎಂಬ ಕಾರಣದಿಂದ ನಾವು ಅಲ್ಲಿ ಹೊರಟಿದ್ದೆವು. ಪಾರ್ಕ್ ಎಂಬುದನ್ನ  ಕೇಳಿದ ಕೂಡಲೇ  ಮಕ್ಕಳು ಆಡುವಂತ ಸ್ಥಳ ಅಂದುಕೊಂಡು ಮತ್ತೊಂದಿಷ್ಟು ಪೂರ್ವಾಗ್ರಹದೊಂದಿಗೆ ನಾವು ಹೊರಟಿದ್ದು ನಾರ್ದರ್ನ್ ಐರ್ಲೆಂಡನ ಟೊಲಿಮೊರ ಎಂಬ ಫಾರೆಸ್ಟ್ ಪಾರ್ಕ್ ಗೆ. 

ಟೊಲಿಮೊರ ಪಾರ್ಕ್

ಕಲ್ಲಿನ ಮಾಹಾದ್ವಾರದ ಮೇಲೆ ಕೆತ್ತಿದ ೧೭೮೬ ಎಂಬುದನ್ನು ನೋಡಿಯೇ ಇದು ಬಹು ಪುರಾತನ ಐತಿಹಾಸಿಕ ಸ್ಥಳ ಎಂಬುದು ಮನದಟ್ಟಾಗಿತ್ತು. ದ್ವಾರದ ಒಳಗೆ ಹೆಜ್ಜೆ ಇಟ್ಟಂತೆ ನಾವು ಎಲ್ಲಿ ಇದ್ದೇವೆ ಅನ್ನೋದನ್ನ ಮರೆಸಿ ಬಿಡುವ ದಿವ್ಯ ಪರಿಸರ ಹಸಿರು, ತಿಳಿ ಹಸಿರು, ಕಡು ಹಸಿರು. ಗಿಳಿ ಹಸಿರು, ಕೆಂಪು ಹಸಿರು, ಹಸಿರು ಹಸಿರು. ಎದುರಿನಲ್ಲೇ ಅರಣ್ಯ ಇಲಾಖೆಯ ಪುಟ್ಟ ಕುಟೀರ ಇತ್ತು. ಅಲ್ಲಿ ಅರಣ್ಯದ ನಕ್ಷೆ ತೆಗೆದುಕೊಂಡು ನಾವು ನಡಿಗೆ ಶುರು ಮಾಡಿದೆವು. ಕೆಲವು ನಿರ್ದಿಷ್ಟ  ಜಾಗೆಗಳಲ್ಲಿ  ಟೆಂಟ ಮತ್ತು ಕಾರವನ್ಗಳು ಸುಮಾರು ಸಂಖ್ಯೆಯಲ್ಲಿ ಇದ್ದವು. ಅಲ್ಲೇ ಅಡುಗೆ  BBQ ಗಳನ್ನ ಮಾಡಿಕೊಂಡು  ಆರಾಮ ಆಗಿ ಕುಳಿತ ಜನರನ್ನ ನೋಡಿದರೆ ನಾವು ರೆಸ್ಟಿಂಗ್ zone ಗೆ ಬಂದಿದ್ದೇವೇನೋ  ಅನ್ನೋ ಅನುಮಾನ. ಈ ಸ್ಥಳದ ಪ್ರತಿ ಅಂಗುಲದಲ್ಲೂ ಸಮಾಧಾನ, ನಿಧಾನ, ತಂಪು, ಕಂಪು ತುಂಬಿಕೊಂಡಿದೆ ಅನಿಸುತ್ತಿತ್ತು.  ಎಷ್ಟು ಜನರಿದ್ದರು ಅಲ್ಲಿ, ಆದರೂ ಒಂಚೂರು ಗದ್ದಲವಿಲ್ಲ.  ಎಲ್ಲಿ ಪ್ರಕೃತಿ ಮಾತೆಯ ಮಂಪರು  ಮಾಯವಾಗುವುದೋ ಅನ್ನುವ ಆತಂಕವೇ? ಅಥವಾ ಆ ಮೌನದಲ್ಲೇ ಅವರು ಅಲ್ಲಿಯ ಆನಂದ ಸವಿಯುತ್ತಿದ್ದರೆ? ಒಟ್ಟಿನಲ್ಲಿ ಆ ದಿವ್ಯ ಮೌನ ಬಹಳ ಹಿತ ಕೊಡುತ್ತಿತ್ತು. 

ಇತಿಹಾಸ 

೧೬೧೧ ರಲ್ಲಿ ಮೆಗನ್ನಿಸ್ ಎಂಬ ಕುಟುಂಬದ ಒಡೆತನದಿಂದ ಇದರ ಇತಿಹಾಸ ಆರಂಭವಾಗುತ್ತದೆ. ಇದು ೧೭೮೬ ರ ತನಕವೂ ದಾಯಾದಿಗಳಲ್ಲೇ ಹಸ್ತಾಂತರ ಗೊಳ್ಳುತ್ತ ಇರುತ್ತದೆ. ಈ ಸ್ಥಳದ ಇತಿಹಾಸದ ಬಗ್ಗೆ ಓದುವಾಗ ನಾನು ಗಮನಿಸಿದ ಒಂದು ವಿಷಯವೆಂದರೆ ಯಾರೇ ಇದರ ಒಡೆತನಕ್ಕೆ ಬಂದಿರಲಿ ಒಂದೇ ಅವರು ಮದುವೆ ಆಗುವುದಿಲ್ಲ, ಆದವರಿಗೆ ಮಕ್ಕಳಾಗುವುದಿಲ್ಲ . ಆಗ ಈ ಕಾಡಿನ ಒಡೆತನ  ಸೋದರಿಯ ಸಂತಾನಗಳಿಗೆ ವರ್ಗಾವಣೆ ಆಗುತ್ತದೆ ಇದು ಆ ಸ್ಥಳ ಮಹಿಮೆಯೋ ಏನೋ. 

ಟೈಟಾನಿಕ್ ಹಡಗಿನ ಹೆಸರನ್ನು ಕೇಳದವರು ವಿರಳ. ಆ ಹಡಗಿನ ನಿರ್ಮಾಣಕ್ಕೆ ಕಟ್ಟಿಗೆ ಒದಗಿಸಿದ್ದು ಇದೇ ಟೋಲಿಮೋರ ಅರಣ್ಯ. ಇಲ್ಲಿದ್ದ ಒಂದು ಅರಮನೆಯಲ್ಲಿ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ  ಅಮೇರಿಕನ್ ಸೈನಿಕರು ಉಳಿದು ಕೊಂಡಿದ್ದರು, ಆದರೆ ಆ ಸುಂದರ ಕಟ್ಟಡ ಈಗ  ನೆಲಸಮ ಮಾಡಲಾಗಿದೆ. ೧೯೩೦ ರಲ್ಲಿ ಅರಣ್ಯ ಇಲಾಖೆಯವರಿಗೆ ಈ ಅರಣ್ಯದ  ಮೇಲ್ವಿಚಾರಣೆ ವಹಿಸಿದ ನಂತರ ನಿರಂತರ ಬೆಳವಣಿಗೆ ಕಂಡ ಇದನ್ನು ೧೯೫೫ ರಲ್ಲಿ ನಾರ್ದರ್ನ್ ಐರ್ಲೆಂಡ್ ನ ಮೊದಲ ಅರಣ್ಯ ಉದ್ಯಾನ ಎಂದು ಘೋಷಿಸಲಾಯಿತು.  

ವಿಶೇಷ 

ಇದು ಮೌರ್ನ ಪರ್ವತ ಶ್ರೇಣಿಯ ಒಡಲಲ್ಲಿ ಇರುವ ಅರಣ್ಯ. ಅದೇ ಕಾರಣಕ್ಕೆ  ಇಲ್ಲಿಂದ ಕಾಣುವ ದೃಶ್ಯಗಳು ಪ್ರಕೃತಿ ಪ್ರಿಯರಿಗೆ ರಸದೂಟ, ಛಾಯಾಚಿತ್ರಕಾರರಿಗೆ ಸ್ವರ್ಗ ಸಮ ಅನುಭವ ನೀಡುತ್ತವೆ. ಶಿಮ್ನಾ  ಮತ್ತು ಸ್ಪಿಂಕ್ವೀ ನದಿಗಳು ಈ ಅರಣ್ಯದಲ್ಲಿ ಸಂಗಮ ಗೊಳ್ಳುತ್ತವೆ ಮತ್ತು ಈ ನದಿಗಳು ಸಾಲಮನ್ ಮೀನಿನ ಆಗರಗಳು. ಕಾಡನ್ನು ಎರಡು ಭಾಗಗಳಾಗಿ ವಿಭಾಗಿಸಿದ ಈ ನದಿಗಳಿಂದಲೇ ಹುಟ್ಟಿಕೊಂಡ ಮತ್ತೊಂದು ಆಕರ್ಷಣೆ ಇಲ್ಲಿರುವ ಸೇತುವೆಗಳು. ಅರಣ್ಯದಲ್ಲಿ ಒಟ್ಟು ೧೬ ಸೇತುವೆಗಳು ಇವೆ. ಪ್ರತಿ  ಸೇತುವೆಯ ಹಿಂದೊಂದು ಕಥೆಯಿದೆ. ಕೆಲವು ಕಲ್ಲಿನ ಸೇತುವೆಗಳು ಕೆಲವು ತೂಗು ಸೇತುವೆ, ಮತ್ತೆ ಕೆಲವು ಕಟ್ಟಿಗೆಯವು. 

ಹರ್ಮಿಟೆಜ್ ಇದರಲ್ಲಿ ಮುಖ್ಯವಾದುದು ಈ ಸೇತುವೆಯ ಪಕ್ಕ ಒಂದು ಸುಂದರ ಕಲ್ಲಿನ ಸೂರು ಇದೆ,ಆಗ ಇಲ್ಲಿ ವಾಸಿಸುತ್ತಿದ್ದ ಜೇಮ್ಸ್ ಹಾಮಿಲ್ಟನ್ ವಿರಾಮ ಸಮಯದಲ್ಲಿ ಇಲ್ಲಿ ಮೀನು ಹಿಡಿಯಲು ಬರುತ್ತಿದ್ದರು ಮತ್ತು ಅವರ ಪತ್ನಿ ಆಕೆಯ ಸ್ನೇಹಿತೆಯರು ಈ ಕಲ್ಲಿನ ಸೂರಿನಡಿಯಲ್ಲಿ ಕಸೂತಿ ಮಾಡುತ್ತ, ಹರಟೆ ಹೊಡೆಯುತ್ತ ಪ್ರಕೃತಿ ಸೌಂದರ್ಯ ಆಸ್ವಾಧಿಸುತ್ತಿದ್ದರು. ಈ ಕಾರಣಕ್ಕೆ ಈ ಸೇತುವೆ ಈ ಕಲ್ಲಿನ ಸೂರನ್ನು ಕಟ್ಟಲಾಗಿತ್ತು ಎಂಬುದು ಈ ಸ್ಥಳದ ಇತಿಹಾಸಬಗೆಗೆ ಇರುವ ಲೇಖನಗಳು ತಿಳಿಸುತ್ತವೆ. ಒಂದೆರಡು ಕಡೆ ನದಿಯ ನಡುವೆ ಚಂದದ ಕಲ್ಲುಗಳನ್ನು ಜೋಡಿಸಿ ನೀರು ಕಡಿಮೆ ಇದ್ದ ಕಡೆ ನಡಿಗೆಯಲ್ಲೇ ನದಿಯನ್ನು ದಾಟಬಹುದಾದ ಚಂದದ ವಿನ್ಯಾಸ ಕೂಡ ಕಾಣಬಹುದು. ನಮ್ಮದು ಭಾರತೀಯ ಮನಸ್ಸು ಆ ಸುಂದರ  ತಿಳಿನೀರನ್ನು ಕಂಡ ಮೇಲೆ ಕೊನೆಪಕ್ಷ ಕಾಲು ಮುಳುಗಿಸಿ  ಸ್ವಲ್ಪ ಆಟ ಆಡಿ ಬರೋಣ ಅನ್ನಿಸಿತು. ನೀರಲ್ಲಿ ಕಾಲಿಟ್ಟರೆ ಅಲ್ಲೇ ಫ್ರೀಜ್ ಆಗಿ ಹೋಗುವೆನೋ  ಎಂಬ ಭಾವ ಬಂದಿದ್ದು ಸುಳ್ಳಲ್ಲ. ಬಿರು ಬೇಸಿಗೆಯಲ್ಲೂ ಅಷ್ಟು ತಂಪಿತ್ತು ಆ ನೀರು 

ದ್ವಾರದಿಂದಲೇ ಕಾಣುವ  ಮೌರ್ನ್ ಪರ್ವತ ಶೃಂಗಗಳ ವಿಹಂಗಮ ನೋಟ, ಚಾರಣ ಮಾಡಿದರೆ ಪರ್ವತದ ತುದಿಯಿಂದ ಕಾಣುವ ಅಟ್ಲಾಂಟಿಕ್ ಸಾಗರ, ಐರಿಷ್ ಸಮದ್ರ ಸನ್ನಿಧಿ, ಪರ್ವತವೇರಿದ ಆಯಾಸವನ್ನು ತಣಿಸುತ್ತವೆ. ಕಾಡಿನ ತುಂಬಾ ಹಲವು ಅಪರೂಪದ ಜೀವವೈವಿದ್ಯಗಳಿವೆ ಕೆಂಪು ಅಳಿಲು ಅವುಗಳಲ್ಲೊಂದು.

ನಡೆದಷ್ಟು ಕಾಡು, ನೋಡಿದಷ್ಟು ನೀರು, ಮೌನದಲ್ಲಿ ಜೀಗುಟ್ಟುವ ಹಲವು ಕೀಟಗಳ ಸಂಗೀತ, ಮುಗಿಲನ್ನು ಮುಟ್ಟುವ ಓಕ್ ಮರಗಳು--ಇದು ನನ್ನ ದೇವಿ ಮನೆ. ಅದೇ ನನ್ನೆಡೆಗೆ ನಡೆದು ಬಂದಿದೆ ಅಂತ ನನಗೆ ಅನ್ನಿಸಿಬಿಟ್ಟಿತ್ತು. ಹಸಿರು, ಈ ತಂಪಲು, ಹಸಿವು ನೀರಡಿಕೆ ಎಲ್ಲವನ್ನೂ ಮರೆಸುತ್ತವೆ. ಪ್ರತಿ ಋತುವಿನಲ್ಲೂ  ತನ್ನ ರೂಪವನ್ನು ಬದಲಿಸಿಕೊಳ್ಳುವ ಈ ಕಾಡು, ಒಮ್ಮೆ ಹಳದಿ ಎಲೆಗಳಿಂದ ಕೂಡಿ ಅಂದವಾದರೆ, ಮತ್ತೊಮ್ಮೆ  ಚಿಗುರು ಕೆಂಪು ಸೀರೆಯುಟ್ಟು ಮಗಮಗಿಸುತ್ತದೆ. ತಿಳಿ ನೀರು ಅಲ್ಲಲ್ಲಿ ಪುಟ್ಟ ಪುಟ್ಟ ಜಲಪಾತ ನಿರ್ಮಿಸುತ್ತಾ ನಡೆಯುವ ಶಿಮ್ನಾ -ಸ್ಪಿಂಕ್ವೀ ನದಿಗಳು, ಆ ಸೀರೆಗೊಂದು ಥಳಥಳಿಸುವ ಅಂಚು ಹೊಲಿದಿದ್ದಾವೆ ಅನ್ನಿಸುತ್ತದೆ. 

ಕಾಡು ಅಲೆಯಬೇಕು ಅನ್ನೋ ಎಷ್ಟೋ ವರ್ಷದ ಕನಸನ್ನು ನನಸು ಮಾಡಿದ ಶ್ರೇಯ ಈ ಟೊಲಿಮೊರ ಅರಣ್ಯಕ್ಕೆ ಸಲ್ಲುತ್ತದೆ. ಹತ್ತಿರದಲ್ಲೇ ಸೈಲೆಂಟ್ ವ್ಯಾಲಿ, ಟೈಟಾನಿಕ್  ತಯಾರಾದ  ಊರು ಬೆಲ್ಫಾಸ್ಟ್, Newcastle, ಜಗತ್ತಿನ ಅಧ್ಬುತಗಳಲ್ಲಿ ಒಂದಾದ Giant's causeway ಗಳಿವೆ. 
ನಾನು ಈ ಸ್ಥಳವನ್ನು ಮೊದಲಬಾರಿ ನೋಡಿದ್ದು ೨೦೧೧ ರಲ್ಲಿ. ಆ ನಂತರ ಲೆಕ್ಕವಿಲ್ಲದಷ್ಟು ಬಾರಿ ಭೇಟಿ ನೀಡಿದ್ದೇನೆ, ಎಷ್ಟೋ ಸಲ ದಾರಿ ತಪ್ಪಿ ಕಳೆದು ಹೋಗಿದ್ದೇನೆ, ನೀರಿನಲ್ಲಿ ಕಾಗದದ  ದೋಣಿ ಬಿಟ್ಟು ಮಕ್ಕಳೊಂದಿಗೆ ಆಟವಾಡಿದ್ದೇನೆ. ಪ್ರತಿಬಾರಿಯೂ ಮತ್ತೆ ಹೋಗಬೇಕು ಅನ್ನುವ ಆಸೆಯೊಂದಿಗೆ ಮರಳುತ್ತೇನೆ. ಈ ವರ್ಷದ ಬೇಸಿಗೆಯಲ್ಲಿ ಭೇಟಿ ಕೊಟ್ಟಾಗ ಒಂದು ರಾಶಿ ಕಾಡು ಬೆಳ್ಳುಳ್ಳಿ ಸೊಪ್ಪು ಕಿತ್ತುಕೊಂಡು ಬಂದು ಒಳ್ಳೆಯ ಅಕ್ಕಿರೊಟ್ಟಿ, ಪಲ್ಯ,ಚಟ್ನಿ ಮಾಡಿ ಸವಿದಿದ್ದೆ. ಈಗ Autumn ಬಣ್ಣಗಳನ್ನ ನೋಡಲು ಹೋಗಬೇಕು. 

ನೀವು Northern Ireland ಗೆ ಭೆಟ್ಟಿ ಕೊಟ್ಟರೆ ಈ ಕಾಡನ್ನ ನೋಡೋದು ಮರೆಯಬೇಡಿ.  

ಫೋಟೋಗಳು ಮತ್ತು ಲೇಖನ :-ಅಮಿತಾ ರವಿಕಿರಣ