ಇತ್ತೀಚಿಗಷ್ಟೇ ನೊಬೆಲ್ ಪುರಸ್ಕೃತ ಕವಿ ಸರ್ ವಿ.ಎಸ್.ನೈಪೌಲ್ ನಿಧನರಾದ ಸುದ್ದಿ ಬಹಳಷ್ಟು ಮಂದಿಗೆ ಗೊತ್ತಿದೆ.
ಶ್ರೇಷ್ಠ ಬರಹಗಾರರಾಗಿದ್ದ ನೈಪೌಲ್ ಅವರು ಷೇಕ್ಸ್ಪಿಯರ್ ಮತ್ತು ಲಾರ್ಡ್ ಟೆನಿಸನ್ ಅವರ ಬರಹಗಳಿಂದ ಪ್ರಭಾವಿತರಾಗಿದ್ದರು.
ತಮ್ಮ ಕೊನೆಯ ಕ್ಷಣದಲ್ಲಿ ಲಾರ್ಡ್ ಟೆನಿಸನ್ ನ ಜನಪ್ರಿಯ ಕವನವಾದ ‘ಕ್ರಾಸಿಂಗ್ ದಿ ಬಾರ್’ ಅನ್ನು ಓದಬೇಕು ಅದನ್ನು ಕೇಳುತ್ತಾ ನಾನು ಪ್ರಾಣ ಬಿಡಬೇಕು ಎಂದು ಬಯಸಿದ್ದ ಅಂತೆಯೇ ಅವರ ಆಸೆ ನೆರವೇರಿತ್ತು.
ಈ ಕವನ ಟೆನಿಸನ್ ಅವರ ಕೊನೆಯ ಕವಿತೆಯಾಗಿರದಿದ್ದರೂ ತಮ್ಮ ಕವನ ಸಂಕಲನದ ಕೊನೆಯಲ್ಲಿ ಅದನ್ನು ಮುದ್ರಿಸಬೇಕೆಂದು ಕರಾರು ಹಾಕಿದ್ದರಂತೆ. ಅಂತಹ ಮಹತ್ತರವಾದ ಕವನವನ್ನು ಡಾ:ಕೇಶವ ಕುಲಕರ್ಣಿ ಅವರು ಕನ್ನಡಕ್ಕೆ ಭಾವಾಂತರಿಸಿದ್ದಾರೆ, ಓದಿ ಅನುಭವಿಸಿ.
ಈ ಕವನ ಓದುವಾಗ ಕನ್ನಡದ ಶ್ರೇಷ್ಠ ಕವಿಗಳಾದ ಡಾ:ಜಿ.ಎಸ್.ಎಸ್ ಅವರ ಜನಪ್ರಿಯ ಭಾವಗೀತೆ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ದ ಸಾಲುಗಳು ಕಾಡುತ್ತವೆ.

ದಂಡೆ ದಾಟುವಾಗ
ಇಳಿಸಂಜೆ ಮತ್ತು ಬೆಳ್ಳಿಚುಕ್ಕೆ
ಸ್ಪಷ್ಟ ಕರೆಯೊಂದು ನನಗಾಗ!
ಮತ್ತಾಗ ನರಳಿಕೆ ಇರದಿರಲಿ ಮರಳುದಿಬ್ಬಕೆ,
ಕಡಲೊಳು ನಾನು ಹೊರಟಾಗ,
ಆದರಂಥ ತೆರೆಯೂ ಅಲೆದಿದೆ ನಿದ್ರೆವೊಲು,
ಮೊರೆ-ನೊರೆಯಲಾಗದಷ್ಟು ತುಂಬಿಕೊಂಡು,
ಅಪರಿಮಿತದಾಳದಿಂದ ಸೆಳೆದಾಗಲೂ
ಮನೆಗೆ ಹೊರಟಾಗ ತಿರುಗಿಕೊಂಡು.
ಮಬ್ಬೆಳಕು ಮತ್ತೆ ಕೊನೆಗಂಟೆ,
ತದನಂತರ ಕಗ್ಗತ್ತಲಾದಾಗ!
ವಿದಾಯದ ವಿಷಾದವಿಲ್ಲದಿರಲಿ, ಒಂಟಿ
ನಾ ಯಾತ್ರೆಗೆ ಹತ್ತಿದಾಗ;
ನಮ್ಮ ಕಾಲದ ನೆಲೆಯ ಇತಿಮಿತಿಯೊಳಗೆ
ದೂರದವರೆಗೂ ಸೈರಿಸಲಿ ಪ್ರವಾಹವು ನನ್ನನು,
ನನ್ನ ನಾವಿಕನನ್ನು ನೋಡುವ ನಿರೀಕ್ಷೆಯೊಳಗೆ
ನಾನು ದಾಟಿದಾಗ ದಂಡೆಯನು.
-ಕೇಶವ ಕುಲಕರ್ಣಿ
ಓದುಗರ ಆಸಕ್ತಿಗಾಗಿ ಮೂಲ ಕವನ
Crossing the bar

