ವೈಚಾರಿಕ ಲೇಖನ ಮತ್ತು ಹೊಸ ಬರಹಗಳ ಸರಣಿ ‘ಬದುಕು ಬದಲಿಸಿದ ಪುಸ್ತಕ’.

ಆತ್ಮೀಯ ಓದುಗರೇ, 
ಕಳೆದ ವಾರ ಪ್ರಕಟಗೊಂಡ 'ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ' ಲೇಖನದ ಮೊದಲ ಭಾಗವನ್ನು ತಾವೆಲ್ಲರೂ ಓದಿ ಮೆಚ್ಚಿಕೊಂಡು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿದ್ದೀರಿ. ನೀವೆಲ್ಲರೂ ಕಾಯುತ್ತಿರುವ ಈ ಲೇಖನದ ಎರಡನೇ ಭಾಗ ಈ ವಾರ ಪ್ರಕಟವಾಗುತ್ತಿದೆ. ಜೊತೆಗೆ ಕೆಲ ವಾರಗಳ ಹಿಂದೆ ಓದುಗರಿಗೆ ಅವರ ಮೆಚ್ಚಿನ, ಬದುಕಿನ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಹಾಯ ಮಾಡಿದ  ಆ ಬದುಕು ಬದಲಿಸಿದ ಪುಸ್ತಕದ ಬಗ್ಗೆ ಕಿರು ಲೇಖನವನ್ನು ಬರೆಯುವಂತೆ ವಿನಂತಿಯನ್ನು ಮನ್ನಿಸಿ ಹಲವಾರು ತಮ್ಮ ಆ ಸರಣಿಯ ಮೊದಲ ಬರಹ ಈ ವಾರ ಪ್ರಕಟವಾಗುತ್ತಿದೆ. ಶ್ರೀರಂಜನಿ ಸಿಂಹ ಅವರು ತಮ್ಮ ಮನಸಿಗೆ ಸಾಂತ್ವನ ನೀಡಿ ಆಶಾಭಾವ ಹೊಮ್ಮಿಸಿದ ಪುಸ್ತಕಗಳ ಬಗ್ಗೆ ಬರೆದಿದ್ದಾರೆ. 
ಈ ಸರಣಿಗೆ ತಾವೆಲ್ಲರೂ ಬರೆಯಿರಿ. ಈ ರೀತಿಯಲ್ಲಿ ಹೊಸ ಪುಸ್ತಕಗಳ ಬಗ್ಗೆ ನಾವೆಲ್ಲರೂ ತಿಳಿಯುವಂತಾಗಲಿ ಎಂಬ ಆಶಯದೊಂದಿಗೆ 
ಈ ವಾರದ ಓದಿಗೆ ತಮಗಿದೋ ಸ್ವಾಗತ. 
-ಸಂಪಾದಕಿ   

ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ-ಭಾಗ ೨

ಲೇಖಕರು-ಡಾ ಜಿ ಎಸ್ ಶಿವಪ್ರಸಾದ್,ಶೇಫೀಲ್ಡ್ ಯು.ಕೆ

ಉದಾರತೆ, ವೈಚಾರಿಕತೆ, ಮತ್ತು ಸಾಮಾಜಿಕ ಜವಾಬ್ದಾರಿ ಈ ಮೂರು ಏಕ ಕಾಲಕ್ಕೆ ಮೇಳವಿಸಿದ್ದು ೧೨ನೇ ಶತಮಾನದ ಬಸವಕೇಂದ್ರಿತ ಶರಣ ಚಳುವಳಿಯಲ್ಲಿ, ಇವು ಶರಣ ತತ್ವದ ಮೂರು ಮುಖಗಳು ಎಂದು ಜಿ. ಎಸ್. ಎಸ್. ಕರೆದಿದ್ದಾರೆ. ಅವರು ಇದನ್ನು ಮುಂದಕ್ಕೆ ವಿಸ್ತರಿಸಿ ಸಮಾಜದ ಎಲ್ಲ ಸ್ತರಗಳನ್ನು ಸಮಾನವೆಂದು ಪರಿಗಣಿಸಲು ಉದಾರತೆ ಬೇಕು, ವ್ಯವಸ್ಥೆಯೊಳಗಿನ ತಾರತಮ್ಯಗಳನ್ನು ಪ್ರಶ್ನಿಸುವುದಕ್ಕೆ ವೈಚಾರಿಕತೆ ಬೇಕು, ಇದಕ್ಕೆ ಅನುಗುಣವಾಗಿ ಹೊಸ ಸಮಾಜವೊಂದನ್ನು ನಿರ್ಮಿಸಲು ಸಾಮಾಜಿಕ ಜವಾಬ್ದಾರಿ ಬೇಕು ಎನ್ನುತ್ತಾರೆ. ಜಿ.ಎಸ್.ಎಸ್ ಚಿಂತನೆಗಳ ಸಂಗ್ರಹವಾದ 'ಶರಣ ಪಥ' ಎಂಬ ಸಂಕಲನದಲ್ಲಿ ಈ ವಿಚಾರಗಳು ಪ್ರಸ್ತಾಪಗೊಂಡಿವೆ. 

ಈ ವೈಜ್ಞಾನಿಕ ಯುಗದಲ್ಲಿ ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವುದು ಬಹಳ ಅವಶ್ಯವಾಗಿದೆ. ಅಮೇರಿಕದ  'ನ್ಯಾಸ' ಕೇಂದ್ರದವರು ಉಡಾಯಿಸಿದ ಅಪೋಲೊ ೧೩ ರಾಕೆಟ್ ವಿಫಲಗೊಂಡ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ  ದೇಶಗಳಲ್ಲಿ ೧೩ ಎಂಬ ಸಂಖ್ಯೆಯ ಬಗ್ಗೆ ಮೂಢನಂಬಿಕೆಗಳು ಹುಟ್ಟಿಕೊಂಡಿವೆ. ಇಲ್ಲಿಯ ವಸತಿಗಳಲ್ಲಿ, ಬಹು ಅಂತಸ್ತಿನ ಕಟ್ಟಡಗಳಲ್ಲಿ, ಹೋಟೆಲ್ ಕೊಠಡಿಗಳಲ್ಲಿ ೧೩ ಸಂಖ್ಯೆ ಕಾಣೆಯಾಗಿದೆ. ೧೩ ಎಂಬ ಸಂಖ್ಯೆ ದುರದೃಷ್ಟದ ಕುರುಹಾಗಿ ಅದು ಅಮಂಗಳವೆಂದು ಪರಿಗಣಿಸಲಾಗಿದೆ. ಹೀಗೆ ವೈಜ್ಞಾನಿಕವಾಗಿ ಮುನ್ನಡೆದ ಸುಶೀಕ್ಷಿತ ಪಾಶ್ಚಿಮಾತ್ಯ   ದೇಶಗಳಲ್ಲಿ ಮೂಢನಂಬಿಕೆ ಸ್ವಲ್ಪ ಮಟ್ಟಿಗೆ ಪ್ರಚಲಿತವಾಗಿರುವಾಗ ಅಭಿವೃದ್ಧಿ ಗೊಳ್ಳುತ್ತಿರುವ ಮತ್ತು ಧಾರ್ಮಿಕ ನಂಬಿಕೆಗಳಿಂದ  ತುಂಬಿರುವ  ಭಾರತದಲ್ಲಿ ಮೂಢನಂಬಿಕೆಗಳು ಸಾವಿರಾರು ವರ್ಷಗಳಿಂದ ಮನೆಮಾಡಿಕೊಂಡಿವೆ. ೮೦೦ ವರ್ಷಗಳ ಹಿಂದೆಯೇ ಈ ಮೂಢನಂಬಿಕೆಗಳನ್ನು ಪ್ರಶ್ನಿಸುವ ವೈಚಾರಿಕ ಮನೋಭಾವವನ್ನು ಜನರಲ್ಲಿ ಬೆಳೆಸುವ ಪ್ರಯತ್ನವನ್ನು ಬಸವಾದಿ ಶರಣರು ಮಾಡಿದ್ದಾರೆ. 
'ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತೆ ಉಂಟೆ'? ಎಂದು ಪ್ರಶ್ನಿಸಿ ಮುಂದಕ್ಕೆ ‘ಸತ್ಯ ನುಡಿವುದೇ ದೇವಲೋಕ, ಮಿಥ್ಯ ನುಡಿವುದೇ ಮರ್ತ್ಯ ಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎನ್ನುತ್ತಾ ಇಹ-ಪರ ಲೋಕಗಳ ಪರಿಕಲ್ಪನೆಗಳನ್ನು ಶರಣರು ತಿರಸ್ಕರಿಸಿದ್ದಾರೆ. ಇಂದಿನ ದಿನಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಚಾಲನೆಯಲ್ಲಿರುವ ಎಷ್ಟೋ ಸಂಗತಿಗಳನ್ನು ನಾವು ನಂಬುವುದೇ ಕಷ್ಟೆ.  ಕೆಲವರು  ತಮ್ಮ ಆಲೋಚನಾ ಕ್ರಮಕ್ಕೆ, ತಮ್ಮ ಸಿದ್ಧಾಂತಕ್ಕೆ, ರಾಜಕೀಯ ನಿಲುವಿಗೆ  ಸರಿದೂಗುವಂತೆ  ನಿಜವಾದ ಸಂಗತಿಗಳನ್ನು ತಿರುಚಿ ವ್ಯವಸ್ಥಿತವಾಗಿ ಅದನ್ನು ವಾಟ್ಸ್ ಆಪ್ ಗುಂಪುಗಳಲ್ಲಿ ಹಂಚಿ ಪ್ರಚಾರಕ್ಕಾಗಿ ಬಳೆಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 'ಮಿಥ್ಯ ನುಡಿವುದೇ ಮರ್ತ್ಯಲೋಕ' ಎಂಬ ಬಸವ ತತ್ವದ ಬಗ್ಗೆ ನಾವೆಲ್ಲಾ ಧೀರ್ಘವಾಗಿ ಚಿಂತಿಸಬೇಕಾಗಿದೆ.

'ಭಕ್ತನಿರ್ದ ತಾಣವೇ ದೇವಲೋಕ, ಭಕ್ತನಂಗಳವೇ ವಾರಣಾಸಿ, ದೇಹವೇ ದೇಗುಲ' ಎಂದು ಹೇಳುತ್ತಾ ದೇವಸ್ಥಾನಗಳನ್ನು ಶರಣರು ನಿರಾಕರಿಸಿದ್ದಾರೆ. ದೇವಸ್ಥಾನದ ಒಂದು ಚೌಕಟ್ಟಿನಲ್ಲಿ ಮೂರ್ತವಾದ ದೇವರನ್ನು ಧಿಕ್ಕರಿಸಿ, ಬಯಲೆಂಬ ಮುಕ್ತ ಪರಿಸರದಲ್ಲಿ, ನಿರಾಕಾರದಲ್ಲಿ, ಇಷ್ಟಲಿಂಗದಲ್ಲಿ  ದೇವರನ್ನು ಕಾಣುವ ಪರಿಕಲ್ಪನೆಯನ್ನು ಒದಗಿಸಿದ್ದಾರೆ. ನಾವು ಆಚರಿಸುವ ಕೆಲವು ಪೂಜೆ ಪುನಸ್ಕಾರಗಳ, ಧಾರ್ಮಿಕ ವಿಧಿಗಳ ಬಗ್ಗೆ ಆಲೋಚಿಸಿ; 
 

ಕಲ್ಲ ನಾಗರ  ಕಂಡರೆ  ಹಾಲನೆರೆಯಂಬರು 
ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ 
ಉಂಬ ಜಂಗಮ ಬಂದರೆ ನಡೆಯಂಬರು 
ಉಣ್ಣದ ಲಿಂಗಕೆ ಬೋನವ ಹಿಡಿ ಎಂಬರಯ್ಯ 

ಎನ್ನುತ್ತಾ  ನಮ್ಮ ಆಚರಣೆಗಳನ್ನು ವಿಮರ್ಶಿಸಿದ್ದಾರೆ. ಇನ್ನು ಕೆಲ ಶರಣರು ವೇದ ಶಾಸ್ತ್ರ ಪುರಾಣಗಳನ್ನು, ಆಗಮಗಳನ್ನು , ಪಾಪ -ಪುಣ್ಯ ಕರ್ಮವೆಂಬ ಕಲ್ಪನೆಗಳನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ನಮ್ಮ ಸಮಾಜದಲ್ಲಿ ಅರ್ಥಹೀನವಾದ ಅವೈಜ್ಞಾನಿಕ ನಂಬಿಕೆಗಳು ಅನುಷ್ಠಾನ ದಲ್ಲಿದ್ದು ಈ ವೈಜ್ಞಾನಿಕ ಯುಗದಲ್ಲಿ,  ಬದಲಾಗುತ್ತಿರುವ ಸಮಾಜದಲ್ಲಿ ವೈಚಾರಿಕತೆಯನ್ನು ಬೆಳಸಿಕೊಳ್ಳಬೇಕಾಗಿದೆ. ಧರ್ಮದ ನೆಪದಲ್ಲಿ ಮೂಡುವ ಭಾವೋದ್ವೇಗವನ್ನು ಪಕ್ಕಕ್ಕಿಟ್ಟು ಚಿಂತಿಸಬೇಕಾಗಿದೆ.

'ಎನಗಿಂತ ಕಿರಿಯರಿಲ್ಲಯ್ಯ ಮತ್ತು ತನ್ನ ಬಣ್ಣಿಸಬೇಡ'ಎಂಬ ವಚನದ ಸಾಲುಗಳು ತನ್ನ ಪ್ರಸ್ತುತತೆಯನ್ನು ಇಂಗ್ಲೆಂಡಿನಲ್ಲಿ ವಿಶೇಷವಾಗಿ ಕಂಡುಕೊಂಡಿದೆ. ಈ ಭಾವನೆಗಳನ್ನು ನಾವು ಅನಿವಾಸಿಗಳು ಇಲ್ಲಿ ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ. ವೃತ್ತಿಯ ಪರಿಸರದಲ್ಲಿ ಕಿರಿಯರು ಹಿರಿಯರಿಗೆ 'ಸರ್' ಎನ್ನುತ್ತಾ ತಲೆಬಾಗಿಸುವುದಿಲ್ಲ, ಅತಿಯಾದ ವಿನಮ್ರತೆ ಮತ್ತು ವಿಧೇಯತೆಗಳನ್ನು ತೋರುವುದು ಇಲ್ಲಿ ಕಂಡುಬರುವುದಿಲ್ಲ. ಹಿರಿಯರು ಅದನ್ನು ನಿರೀಕ್ಷಿಸುವುದೂ ಇಲ್ಲ. ಒಂದು ಕಛೇರಿಯಲ್ಲಿ ಮೇಲಧಿಕಾರಿಯೂ ಸಾಮಾನ್ಯ ಉದ್ಯೋಗಿಯೂ ಬಿಡುವಿನ ವೇಳೆಯಲ್ಲಿ ಒಟ್ಟಿಗೆ ಕುಳಿತು ಕಾಫಿ ಹೀರುವುದು, ಹರಟುವುದು ಮತ್ತು ಎಲ್ಲರು ಒಂದು ತಂಡದಂತೆ ಕೆಲಸ ಮಾಡುವುದನ್ನು ಕಾಣಬಹುದು. ಇವರ ವ್ಯಕ್ತಿತ್ವದಲ್ಲಿ ದರ್ಪವಾಗಲಿ ಅಥವಾ ಆಡಂಬರವಾಗಲಿ ಇರುವುದಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ಮತ್ತು ನೋಬಲ್ ಪ್ರಶಸ್ತಿ ಪಡೆದ ಪ್ರಖ್ಯಾತ ನಾಯಕರು, ಸಾಹಿತಿಗಳು, ವಿಜ್ಞಾನಿಗಳು ಬಾಳಿ ಬದುಕಿದ್ದಾರೆ. ಇವರು ಯಾವುದೇ ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಹೆಗ್ಗಳಿಕೆಯ ಬಗ್ಗೆ ಮಾತನಾಡುವುದಿಲ್ಲ. ಹೊಗಳಿಕೆ ಇವರಿಗೆ ಸಂಕೋಚದ ವಿಚಾರವಾಗಿರುತ್ತದೆ. ಈ ವಿನಯಶೀಲರು 'ಎನಗಿಂತ ಕಿರಿಯರಿಲ್ಲಯ್ಯ' ಎಂಬ ಭಾವನೆಯಲ್ಲಿ ಬದುಕುತ್ತಿದ್ದಾರೆ.  'ತನ್ನ ಬಣ್ಣಿಸಬೇಡ' ಎಂಬ ಸಾಲುಗಳ ಬಗ್ಗೆ ಚಿಂತಿಸುವಾಗ ಪ್ರಪಂಚದ ನಾನಾ ದೇಶಗಳಲ್ಲಿ ನೂರಾರು ವರ್ಷಗಳಿಂದ ರಾಜ ಮಹಾರಾಜರಿಗೆ ಹೊಗಳು ಭಟ್ಟರು ಇದುದ್ದನ್ನು  ನಾವು ಇತಿಹಾಸದಲ್ಲಿ ಗಮನಿಸಬಹುದು. ಈಗಿನ ಕಾಲಕ್ಕೆ ಆ ಹೊಗಳುಭಟ್ಟರ ಹೊಗಳಿಕೆಗಳ ಹಳೆಯ ಸಂಪ್ರದಾಯವನ್ನು ರಾಜಕಾರಣಿಗಳ ಅನುಯಾಯಿಗಳು ಉಳಿಸಿಕೊಂಡಿದ್ದಾರೆ. ಇದನ್ನು ನಾವು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಬಹುದು

'ಎನ್ನವರೊಲಿದು ಹೊನ್ನ ಶೂಲದಲಿ ಇಕ್ಕಿದರೆನ್ನ 
ನಿಮ್ಮ ಮನ್ನಣೆಯೇ ಅಲುಗಾಗಿ ತಾಕಿತ್ತಲ್ಲಾ 
ಅಯ್ಯ ನೊಂದೆನು ಸೈರಿಸಲಾರೆನು 
ನೀ ನನಗೆ ಒಳ್ಳಿದನಾದರೆ 
ಎನ್ನ ಹೊಗಳತೆಗೆ ಅಡ್ಡ ಬಾರ'

ಎನ್ನುವ ಈ ಬಸವಣ್ಣನವರ ಸರಳ ವಚನ ಜನ ಸಾಮಾನ್ಯರಿಂದ ಹಿಡಿದು ಅಧಿಕಾರದಲ್ಲಿ ಮತ್ತು ಉನ್ನತ ಸ್ಥಾನದಲ್ಲಿರುವ ಎಲ್ಲರಿಗೂ ಪ್ರಸ್ತುತವಾದ ಸಂದೇಶ ಎನ್ನಬಹುದು. ಒಮ್ಮೆ ‘ಸೂರ್ಯ ಮುಳುಗದ ಸಾಮ್ರಾಜ್ಯ’ವೆಂದು ತಮ್ಮನು ತಾವು ಹೊಗಳಿಕೊಂಡು, ತಮ್ಮ ದೇಶವನ್ನು ಗ್ರೇಟ್ ಬ್ರಿಟನ್ ಎಂಬ ಹೆಸರಿನಲ್ಲಿ ಕರೆದು ಕೊಳ್ಳುತ್ತಿದ್ದ ಇಂಗ್ಲೆಂಡ್ ಈಗ ಕಾಲ ಬದಲಾದಂತೆ ತನ್ನ ಹಿಂದಿನ ತಪ್ಪುಗಳನ್ನು, ಸ್ವಾಭಿಮಾನವನ್ನು ಸಂಕೋಚದಿಂದ ಪಕ್ಕಕ್ಕೆ ತಳ್ಳಿ ಈಗ ವಿನಮ್ರವಾಗಿದೆ.  'ಕಾಯಕವೇ ಕೈಲಾಸ' ಎಂಬ ಬಸವ ತತ್ವ ಪಾಶ್ಚಿಮಾತ್ಯ ದೇಶಗಳಲ್ಲಿ ಅನುಷ್ಠಾನದಲ್ಲಿದೆ. ಇಲ್ಲಿ ಎಲ್ಲ ವೃತಿಯೂ ಸಮಾನವೆಂದು ಪರಿಗಣಿಸಲ್ಪಡುತ್ತದೆ. ಇಲ್ಲಿ ವೃತ್ತಿಗಿಂತ ಅದರ ಹಿಂದೆ ಇರುವ ವ್ಯಕ್ತಿ, ಅವನ ಶ್ರದ್ಧೆ ಮುಖ್ಯವಾಗುತ್ತದೆ. ಇಲ್ಲಿಯ ಜನ ಸಂಭಾಷಣೆಯಲ್ಲಿ ತೊಡಗಿದಾಗ; 'ನೀನು ಯಾವ ವೃತ್ತಿಯಲ್ಲಿದ್ದೀಯಾ? ನಿನಗೆ ಸಂಬಳವೆಷ್ಟು? ಎಂಬ ಪ್ರಶ್ನೆಯನ್ನು ಯಾರು ಯಾರಿಗೂ ಕೇಳುವುದಿಲ್ಲ. ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಹಂಬಲ ಮತ್ತು ಛಲ ಇವು ಇಲ್ಲಿಯ ಬದುಕಿನ ರೀತಿ ನೀತಿಗಳಾಗಿವೆ.  

ಅನಿವಾಸಿಗಳಾದ ನಮಗೆ ಕನ್ನಡ ಮಾತೃಭಾಷೆಯಾದರೆ ಇಂಗ್ಲಿಷ್ ಪರಿಸರದ ಭಾಷೆ. ಹಾಗೆ ನಮ್ಮ ಧರ್ಮ ಹಿಂದೂ ಧರ್ಮವಾದರೆ ಪರಿಸರದ ಧರ್ಮ ಕ್ರೈಸ್ತ ಧರ್ಮವಾಗಿದೆ. ಕ್ರೈಸ್ತ ಧರ್ಮಧ ಕೆಲವು ಬೋಧನೆಗಳನ್ನು ಗಮನಿಸಿದಾಗ ಅಲ್ಲಿ ನಮಗೆ ಬಸವಣ್ಣನವರ ತತ್ವ ಕಾಣಿಸಿಕೊಳ್ಳುತ್ತದೆ. "ದಯವೇ ಧರ್ಮದ ಮೂಲವಯ್ಯ' ಎಂದು ಬಸವಣ್ಣ ಹೇಳಿದ್ದರೆ, ಕ್ರೈಸ್ತ ಧರ್ಮವು, ‘ದೇವರಿಗೆ ಧನ್ಯತೆಯನ್ನು ಸೂಚಿಸು, ಅವನ ದಯೆ ಎಂದೆಂದಿಗೂ ಇರುತ್ತದೆ, ದಯೆ, ನ್ಯಾಯ ತೀರ್ಪುಗಳನ್ನು ಮೀರಿದ್ದು’ ಎಂಬುದಾಗಿ ಸಾರುತ್ತದೆ. ‘ಕ್ರೈಸ್ತ ಧರ್ಮದಲ್ಲಿ ನಿನ್ನ ದೇಹವು ನಿನ್ನ ಪವಿತ್ರ ಚೇತನದ ಮಂದಿರ, ಆ ಚೇತನವನ್ನು ವಿಜೃಂಭಿಸಿ ಆರಾಧಿಸು’ ಎಂದು ಹೇಳಿದರೆ, ಬಸವಣ್ಣನವರು 'ದೇಹವೇ ದೇಗುಲ' ಎಂಬ ಕಲ್ಪನೆಯನ್ನು ಒದಗಿಸಿದ್ದಾರೆ. "ಯಾರಾದರೂ ನಿನ್ನ ಬಲ ಕೆನ್ನೆಗೆ ಹೊಡೆದರೆ ಅವರಿಗೆ ನಿನ್ನ ಎಡಕೆನ್ನೆಯನ್ನು ತೋರಿಸು ಎಂಬ ಸಹನೆಯ ಮಾತನ್ನು ಜೀಸಸ್ ಹೇಳಿದ್ದಾರೆ ಇದೇ ಮಾತನ್ನು;

" ತನಗೆ ಮುನಿದವರಿಗೆ ತಾ ಮುನಿಯಲೇಕೆಯ್ಯಾ  
ತನುವಿನಕೋಪ ತನ್ನ ಹಿರಿಯತನದ ಕೇಡು 
ಮನೆಯೊಳಗಿನ ಕಿಚ್ಚು ಮನೆಯ ಸುಟ್ಟಲ್ಲದೆ 
ನೆರೆಮನೆಯ ಸುಡದು, ಕೂಡಲ ಸಂಗಮದೇವ" 

ಎಂದು ಬಸವಣ್ಣ ಹೇಳುತ್ತಾರೆ. ಎರಡು ಸಾವಿರ ವರುಷಗಳ ಹಿಂದೆ ದೂರದ ಬೆಥ್ಲೆಹೆಮ್ ನಗರದಲ್ಲಿ  ಹುಟ್ಟಿದ ಮಹಾನ್ ಪುರುಷ ಜೀಸಸ್ ಮತ್ತು ಅಲ್ಲಿಂದ ಒಂದುಸಾವಿರ ವರುಷಗಳ ನಂತರ ಕರ್ನಾಟಕದಲ್ಲಿ ಹುಟ್ಟಿದ ಮಹಾನುಭಾವಿ  ಬಸವಣ್ಣನವರ ತತ್ವಗಳು ಎಷ್ಟು ಸಾದೃಶ್ಯವಾಗಿವೆ ಎನ್ನುವ ವಿಚಾರ ಆಶ್ಚರ್ಯಕರವಾಗಿದೆ. 'ದೇವನೊಬ್ಬ ನಾಮ ಹಲವು' ಎಂದು ಬಸವಣ್ಣ ಹೇಳಿದ್ದರೇ 'ಎಷ್ಟು ಮತಗಳೋ ಅಷ್ಟು ಪಥಗಳು ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ. "ಅವರವರ ದರುಶನಕೆ, ಅವರವರ ದೇಶದಲಿ, ಅವರವರಿಗೆಲ್ಲ ಗುರು ನೀನೊಬ್ಬನೇ" ಎಂದು ಮುಪ್ಪಿನ ಷಡಕ್ಷರಿ ಹೇಳಿದ್ದಾರೆ.  ಹೀಗೆ ಪ್ರಪಂಚದ ಸಾಧು ಸಂತರ, ಮಹಾಪುರುಷರ ಅನುಭಾವದಲ್ಲಿರುವ ಸಾಮ್ಯ ಗಮನಾರ್ಹವಾದದ್ದು ಮತ್ತು ಎಲ್ಲ ಮತಗಳನ್ನು ಗೌರವದಿಂದ ಸಮಾನವಾಗಿ ಕಾಣುವ ಸಂದೇಶ ಇಂದಿನ ಸಾಮಾಜಿಕ ಪರಿಸ್ಥಿತಿಗೆ ಪ್ರಸ್ತುತವಾಗಿದೆ. 

ಇಂಗ್ಲೆಂಡಿನಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೂಡಿದ 'ಸಫ಼್ರಜೆಟ್ ಚಳುವಳಿ' ಚಾರಿತ್ರಿಕವಾಗಿ ಮಹತ್ವವಾದದ್ದು. ೧೯೧೮ ರಲ್ಲಿ ತೀವ್ರವಾದ ಈ ಚಳುವಳಿಯಿಂದ ಸ್ತ್ರೀಯರ ಸ್ಥಾನಮಾನಗಳಿಗೆ ವಿಶೇಷ ಅರ್ಥದೊರಕಿತು. ಸ್ತ್ರೀಯರು ಚುನಾವಣೆಯಲ್ಲಿ ಮತಚಲಿಸುವುದಕ್ಕೆ ಅನುವುಮಾಡಿಕೊಟ್ಟಿತು. ಇತಿಹಾಸದ ಎಲ್ಲ ಹಂತಗಳಲ್ಲಿ ಸ್ತ್ರೀಯರು ಸಮಾಜದಲ್ಲಿ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಯಿತು. ಈ ಆಧುನಿಕ ಯುಗದಲ್ಲೂ ಮೂಲಭೂತವಾದಿ ಧಾರ್ಮಿಕ ಆಲೋಚನೆಯುಳ್ಳ ಕೆಲವು ದೇಶಗಳಲ್ಲಿ ಸ್ತ್ರೀಯರು ತಮ್ಮ ಅಸ್ತಿತ್ವವನ್ನು ಮತ್ತು ಮೂಲಭೂತ ಹಕ್ಕುಗಳನ್ನು     ಉಳಿಸಿಕೊಳ್ಳುವುದರ ಬಗ್ಗೆ ಆತಂಕವಿದೆ. ಈ ಹೋರಾಟ ಇನ್ನೂ ನಡೆಯುತ್ತಿದೆ. ಆದರೆ ೮೦೦ ವರ್ಷಗಳ ಹಿಂದೆಯೇ ಬಸವಣ್ಣನವರು ಸ್ತ್ರೀಯರಿಗೆ ಸಮಾಜದಲ್ಲಿ ಪುರುಷ ಸಮಾನ ಹಕ್ಕುಗಳನ್ನು ಒದಗಿಸಿ ಕೊಟ್ಟರು. ಪೂಜೆ ಮಾಡಲು ಸ್ತ್ರೀ ಅರ್ಹಳಲ್ಲ ಎಂಬ ಪರಿಸ್ಥಿತಿಯಲ್ಲಿ "ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎನ್ನುತ್ತಾ 'ಶರಣ
ಸತಿ-ಲಿಂಗ ಪತಿ' ಎಂಬ ಪರಿಕಲ್ಪನೆಯನ್ನು ಕೊಟ್ಟು ಗಂಡು ಹೆಣ್ಣಿನ ಮಧ್ಯ ಇರುವ ಭೇದಗಳನ್ನು ತೊಡೆದು ಹಾಕಿದರು. 

ಪ್ರಜಾಪ್ರಭುತ್ವದ ತವರೂರಾದ ಇಂಗ್ಲೆಂಡಿನಲ್ಲಿ ಕುಳಿತು ಪ್ರಜಾಪ್ರಭುತ್ವದ ಬಗ್ಗೆ ಯೋಚಿಸುವಾಗ ೮೦೦ ವರ್ಷಗಳ ಹಿಂದೆ ಬಸವಣ್ಣನವರು ಜ್ಯಾತ್ಯಾತೀತವಾದ, ಲಿಂಗ ಬೇಧವಿಲ್ಲದ ವಿಚಾರವಂತರ, ವೇದಿಕೆಯನ್ನು ಕಲ್ಪಿಸಿದ್ದರು, ಅಲ್ಲಿ ಜನಪರ ಸಾಮಾಜಿಕ ಹಾಗು ಆಧ್ಯಾತ್ಮಿಕ ವಿಚಾರಗಳನ್ನು ಅನುಭವ ಮಂಟಪದಲ್ಲಿ ವಿನಿಮಯ ಮಾಡಿಕೊಂಡು ಚರ್ಚಿಸುತ್ತಿದ್ದರು ಎಂಬ ವಿಚಾರ ಅತ್ಯಂತ ಶ್ಲಾಘನೀಯವಾದದ್ದು. ಸಮಾನತೆ ಮತ್ತು ಮಾನವೀಯ ಮೌಲ್ಯಗಳು ಅಲ್ಲಿ ಪ್ರಧಾನವಾಗಿದ್ದು ಅದು ಪ್ರಜಾಪ್ರಭುತ್ವದ ಒಂದು ಮಾದರಿಯಾಗಿತ್ತು. ಈ ವಿಚಾರಗಳು ಇಡೀ ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.

ದಯೆ, ಕರುಣೆ, ಅನುಕಂಪೆ, ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆ, ಕಾಯಕದಲ್ಲಿ ಶ್ರದ್ಧೆ, ದಾಸೋಹ, ವಿನಯ ಶೀಲತೆ ಮುಂತಾದ ಉತ್ತಮ ಮೌಲ್ಯಗಳನ್ನು ಬಸವಾದಿ ಶರಣರು ಎತ್ತಿ ಹಿಡಿದಿದ್ದಾರೆ. ಈ ಮೌಲ್ಯಗಳು ಪ್ರಪಂಚದ ಯಾವ ದೇಶದಲ್ಲಾದರೂ ಒಂದು ಆರೋಗ್ಯಕರವಾದ ಸಮಾಜವನ್ನು ಕಟ್ಟಲು ಬೇಕಾಗಿರುವ ಅಡಿಗಲ್ಲುಗಳು. ಹೀಗಾಗಿ ಈ ಮೌಲ್ಯಗಳನ್ನು ಒಳಗೊಂಡ ಶರಣ ತತ್ವ ವೈಯುಕ್ತಿಕ ಮತ್ತು ಸಾಮೂಹಿಕ ನೆಲೆಯಲ್ಲಿ, ಎಲ್ಲ ದೇಶಗಳಿಗೂ ಎಲ್ಲ ಕಾಲಕ್ಕೂ ಪ್ರಸ್ತುತವಾದದ್ದು.

ಬದುಕು ಬದಲಿಸಿದ ಪುಸ್ತಕ

ಲೇಖಕಿ-ಶ್ರೀರಂಜನಿ ಸಿಂಹ

ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು,'ನಮ್ಮ ಬದುಕಿನಲ್ಲಿ ಸ್ನೇಹಿತರ ಕೊರತೆ ಯಾವತ್ತೂ ಇರಲ್ಲ ಪುಸ್ತಕ ಒಂದಿದ್ದರೆ ಸಾಕು'ಎಂದು. ಬೇಸಿಗೆ ರಜೆ ಬರಲಿ, ದಸರಾ ರಜೆ ಇರಲಿ ಆ ರಜೆಯಲ್ಲಿ ಪುಸ್ತಕ ಓದುವುದು, ಗ್ರಂಥಾಲಯಕ್ಕೆ ಹೋಗಿ ಪುಸ್ತಕ ತರುವುದು ನನ್ನ ದೈನಂದಿನ ಕೆಲಸವಾಗಿತ್ತು. ನಾನು ಸದ್ವಿದ್ಯಾ ಶಾಲೆಯಲ್ಲಿ ಓದುತ್ತಿದ್ದಾಗ ಪುಸ್ತಕ ಓದುವ ಹವ್ಯಾಸ ಇನ್ನೂ ಹೆಚ್ಚಾಯಿತು,tinkle ಪಂಚತಂತ್ರ Competitive success, Wisdom, Tell me why ನಂತಹ ಪುಸ್ತಕಗಳನ್ನು ಓದುತ್ತಿದ್ದೆ. ಇವೆಲ್ಲ ಪುಸ್ತಕಗಳಲ್ಲಿ ಯಾವುದಾದರೂ ಪದ ಅರ್ಥ ಆಗದೆ ಇದ್ದರೆ, ಆ ಪದವನ್ನು Oxford Dictionary ( ಆಂಗ್ಲ ಭಾಷೆ -ಕನ್ನಡ) ಯಲ್ಲಿ ಹುಡುಕಿ ಹೊಸ ಪದಗಳೆಂದು ಕಲಿಯುವ ವಾಡಿಕೆ. (ಇವೆಲ್ಲ tables, square root, cube root ಜೊತೆಗೆ ಓದುತ್ತಿದ್ದ ಪದಗಳು). ಕಾಲ ಕಳೆದಂತೆ ಪುಸ್ತಕ ಓದುವ ಆಸಕ್ತಿ ಹೆಚ್ಚಾಗಿ, ನನಗೆ ಇಷ್ಟವಾಗುವ ಆಂಗ್ಲ ಭಾಷೆಯ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ.

ನನಗೆ ತುಂಬಾ ಬೇಸರ ಆದಾಗ ಮೂರು ಕೆಲಸ ಮಾಡುತ್ತೇನೆ - ಗಿಡಗಳನ್ನು ಬೆಳೆಸುವುದು, ಗಿಡಗಳ ಜೊತೆ ಮಾತನಾಡುವುದು, ಅಡುಗೆ ಮಾಡುವುದು, ಪುಸ್ತಕ ಓದುವುದು. ಪುಸ್ತಕ ಎಂದರೆ ಸ್ನೇಹಿತರಿದ್ದಹಾಗೆ, ಈವಾಗಲಂತೂ ಎಲ್ಲೆಂದರಲ್ಲಿ digital ರೂಪದಲ್ಲಿ ಪುಸ್ತಕ ಓದುವ ಅನುಕೂಲವಿದೆ, ಹೀಗಾಗಿ ಪುಸ್ತಕ ಓದುವುದರಿಂದ ವಿಚಾರ ವಿನಿಮಯ, ದೇಶದ ಆಗು ಹೋಗುಗಳ ಬಗ್ಗೆ ತಿಳುವಳಿಕೆ, ಹೊಸಪದ ಪರಿಚಯ, ಸಾಂಸ್ಕೃತಿಕ ವೈವಿಧ್ಯತೆ ಎಲ್ಲದರ ಅನುಭವವಾಗುತ್ತದೆ. ಅಂತಹ ಪುಸ್ತಕಗಳಲ್ಲಿ ನನಗೆ ಬಹಳ ಹತ್ತಿರವಾದ ಪುಸ್ತಕಗಳು ಎಂದರೆ - You can Win (By Shiv Khera) , ನಾ ಕಂಡ ಕಲಾವಿದರು - ಶ್ರೀ ಮೈಸೂರು ವಾಸುದೇವಾಚಾರ್ಯರು, What Can I give? - (By Abdul Kalam Sir Personal Assistant - Srijan Pal Singh)

ನಾನು ನಮ್ಮ ತಂದೆಯನ್ನು ಕಳೆದುಕೊಂಡ ನಂತರ ಓದಿದ ಪುಸ್ತಕ ಎಂದರೆ - You can Win. ನನ್ನ ವಿಚಲಿತವಾದ ಮನಸನ್ನು, ಆ ಪುಸ್ತಕವನ್ನು ಓದಿ ನಿಧಾನವಾಗಿ ಸಮಾಧಾನ ಮಾಡಿಕೊಂಡೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ, ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋ ಮಾತುಗಳು, ಹೇಳಕ್ಕೆ ಕೇಳಕ್ಕೆ ಚಂದ ಆದರೆ ಅಂತಹ ಪರಿಸ್ಥಿತಿ ನಮಗೆ ಬಂದಾಗ ನಮ್ಮ ಮನಸ್ಸು ತುಂಬಾ ನಿಧಾನ ಗತಿಯಲ್ಲಿ ಒಪ್ಪಿಕೊಳ್ಳುತ್ತದೆ. ಈ ಪುಸ್ತಕದಿಂದ ನನಗೆ ನಿಧಾನವಾಗಿ ಈ ವಿಷಯ ಅರಿವಾಯಿತು, ಮತ್ತೊಂದು ವಿಷಯ ಎಂದರೆ " Always count on blessings" ನಾವು  ಹಿರಿಯರಲ್ಲಿ ಯಾವಾಗಲೂ ಆಶೀರ್ವಾದ ಪಡೆಯುತ್ತೇವೆ. ಯಾಕೋ ಏನೋ ನಮ್ಮ ತಂದೆಯವರನ್ನು ಕಳೆದುಕೊಂಡ ನಂತರ ನನಗೆ ಆಶೀರ್ವಾದ ಇಲ್ಲವೇನೋ ಅನ್ನಿಸುತಿತ್ತು, ಈ ವಾಕ್ಯ ಮತ್ತೆ ಮತ್ತೆ ಓದಿದ ನಂತರ ಒಂದಂತೂ ಅನ್ನಿಸಿದ್ದು ನಿಜ ಲಕ್ಷ್ಮೀನರಸಿಂಹ ಕಾಪಾಡಪ್ಪ ಎಂದು ಕೇಳಿಕೊಂಡೆ ಎಲ್ಲ ನೆರವೇರಿದೆ. 

ನಾನು ದ್ವಿತೀಯ ಪದವಿ ಪೂರ್ವ ಮುಗಿಸಿದ ನಂತರ, BE in Industrial Production ಅಧ್ಯಯನ ಮಾಡಿದ್ದು SJCE ಕಾಲೇಜ್ ನಲ್ಲಿ. ಹದಿ ಹರೆಯದ ವಯಸ್ಸಿನಲ್ಲಿ  ಬರೀ fiction ಪುಸ್ತಕಗಳೇ ಓದಿದ್ದು, ಮಧ್ಯದಲ್ಲಿ ನಾ ಓದಿದ ಒಂದು ಪುಸ್ತಕ - ''ನಾ ಕಂಡ ಕಲಾವಿದರು''ನಮ್ಮ ಊರಿನ ವಿದ್ವಾಂಸರಾದ ಶ್ರೀ ವಾಸುದೇವಾಚಾರ್ಯರು ಬರೆದ ಈ ಪುಸ್ತಕದಲ್ಲಿ ಅವರು ಕಂಡ ಹಲವಾರು ಕಲಾವಿದರ ಬಗ್ಗೆ ಬರೆದಿದ್ದಾರೆ. ಅವರು ಕಲಿಕೆಯ ಮಹತ್ವವನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಅಂಥ ವಿದ್ವಾಂಸರೇ ವಯಸ್ಸಿನ ಅಡ್ಡಿಯಿಲ್ಲದೇ ಕಲಿಯುವ ಪ್ರಯತ್ನ ಮಾಡುತ್ತಾರೆ ಅಂದರೆ ನಮ್ಮ ಕೈಯಲ್ಲೂ ಸಾಧ್ಯ ಎಂದು ಮನದಟ್ಟು ಮಾಡಿಸಿದ ಪುಸ್ತಕ ಇದು . ಈ ಪುಸ್ತಕ ನನ್ನನು ಮುಂದೆ ಕರ್ನಾಟಕ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಪ್ರೇರೇಪಿಸಿತು ಎಂದರೆ ತಪ್ಪಿಲ್ಲ.

ನನಗಿಷ್ಟವಾದ ಇನ್ನೊಂದು ಪುಸ್ತಕ  - What Can I give? by Sir Srijan Pal Singh. ಈ ಪುಸ್ತಕ ನಾನು ಮೊಟ್ಟ ಮೊದಲ ಬಾರಿಗೆ ಓದಿದ್ದು ಚುನಾವಣೆಯಲ್ಲಿ ಮತ ಚಲಾಯಿಸುವ ಮೊದಲು. ದಿವಂಗತ ರಾಷ್ಟ್ರಪತಿ A P J Abdul Kalam sir ಅವರ ಒಂದೊಂದು ಅನುಭವದ ಮಾತು, ದೇಶಕ್ಕೆ ನಾವು ಎಂತಹ ಪ್ರಜೆಗಳಾಗಿ ಇರಬೇಕೆನ್ನುವ ಕುರಿತು ನನ್ನನು ಚಿಂತನೆ ಮಾಡಲು ಹಚ್ಚಿತು. 
...................................................................................................................................................




“ಪಯಣ” ಪುಸ್ತಕ ವಿಮರ್ಶೆ-ಡಾ.ಕೇಶವ ಕುಲಕರ್ಣಿ, ಡಾ. ದಿವ್ಯತೇಜ, ಡಾ.ನವೀನ್

ಪ್ರಿಯ ಓದುಗರೆ, ಅನಿವಾಸಿ ಓದುಗರಿಗೆ ಡಾ. ಪ್ರಸಾದ್ ರವರು, ಈ ಜಗುಲಿಯ ಸದಸ್ಯರಾಗಿ, ಬರಹಗಾರರಾಗಿ ಮತ್ತು ಓದುಗರಾಗಿ ಪರಿಚಿತರು. ಅವರ ಪಯಣ ಪುಸ್ತಕವು ಖ್ಯಾತ ವಿಮರ್ಶಕ ಮತ್ತು ಸಾಹಿತಿ ಟಿ.ಪಿ ಅಶೋಕರವರ ಮುನ್ನುಡಿ ಮತ್ತು ಖ್ಯಾತ, ಜನಪ್ರಿಯ ಕವಿ ಎಚ್.ಸ್. ವೆಂಕಟೇಶಮೂರ್ತಿ ಮತ್ತು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರರವರ ಹಿನ್ನುಡಿಯೊಂದಿಗೆ ಸ್ವಪ್ನ ಬುಕ್ ಹೌಸ್ ಪ್ರಕಾಶನದಲ್ಲಿ ೭.೦೨.೨೦೨೧ ರಂದು ಪ್ರಕಟಗೊಂಡಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಕೋವಿಡ್ ಕಾರಣ ಪುಸ್ತಕದ ಪ್ರಕಟಣೆಯನ್ನು ಜಾಲಜಗುಲಿಯಲ್ಲಿ ಶ್ರೀಮತಿ ಸುಧಾಮೂರ್ತಿಯವರು ನೆರವೇರಿಸಿದರು (ವಿವರಗಳು ಕೊನೆಯ ಪುಟದ ಆಹ್ವಾನ ಪತ್ರಿಕೆಯಲ್ಲಿದೆ). ಲೇಖಕರ ಕಿರುಪರಿಚಯವನ್ನು ಕೇಶವ್ ರವರು ಮಾಡಿಕೊಟ್ಟಿದ್ದಾರೆ. ಪುಸ್ತಕವನ್ನು ಓದಿ ತಮ್ಮ ವಿಮರ್ಶೆಯನ್ನು ಕೇಶವ್, ದಿವ್ಯತೇಜ ಮತ್ತು ನವೀನ್ ರವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ-ಸಂ

1 ಪ್ರಸಾದ್ ಅವರ ‘ಪಯಣ’ ಕಾದಂಬರಿ: ಒಂದು ಪರಿಚಯಕೇಶವ ಕುಲಕರ್ಣಿ

ಡಾ. ಜಿ.ಎಸ್. ಶಿವಪ್ರಸಾದ್

‘ಅನಿವಾಸಿ’ಯ ನಿಯಮಿತ ಬರಹಗಾರರಾಗಿರುವ, ‘ಕೆ‍.ಎಸ್‍.ಎಸ್‍.ವಿ.ವಿ’ ಯ ಸಂಸ್ಥಾಪಕರಲ್ಲೊಬ್ಬರಾಗಿರುವ, ‘ಕನ್ನಡ ಬಳಗ, ಯು.ಕೆ’ಯ ಕಾರ್ಯಕಾರಿ ಸಮಿತಿಯಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡಿರುವ, ‘ಕನ್ನಡ ಬಳಗ, ಯಾರ್ಕ್‌ಶೈರ್ ಅಧ್ಯಾಯ’ದ ಸಂಸ್ಥಾಪಕರಾಗಿರುವ, ಕನ್ನಡ ಸಾಹಿತ್ಯ ಮತ್ತು ಸಿನೆಮಾದ ದಿಗ್ಗಜರನ್ನು ಇಂಗ್ಲೆಂಡಿಗೆ ಕರೆತರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ, ಮುಂದಾಳುವಾಗಿ, ವ್ಯವಸ್ಥಾಪಕರಾಗಿ, ಕವಿಯಾಗಿ, ಸನ್ಮಿತ್ರರಾಗಿ, ಕನ್ನಡದ ಖ್ಯಾತ ಕವಿ ಡಾ. ಜಿ ಎಸ್ ಶಿವರುದ್ರಪ್ಪನವರ ಮಗನಾಗಿ, ಮಕ್ಕಳ ತಜ್ಞರಾಗಿ, ಡಾ. ಜಿ ಎಸ್ ಶಿವಪ್ರಸಾದ್ (ನಮಗೆಲ್ಲ ಅವರು ಪ್ರಸಾದ್) ಅವರನ್ನು ಗೊತ್ತಿಲ್ಲದ ಕನ್ನಡಿಗ ಇಂಗ್ಲೆಂಡಿನಲ್ಲಿ ಇಲ್ಲ ಎಂದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ ಎಂದುಕೊಂಡಿದ್ದೇನೆ. ಈಗಾಗಲೇ ಸಾಕಷ್ಟು ಲೇಖನಗಳನ್ನು ಕವನಗಳನ್ನು ಬರೆದಿರುವ ಪ್ರಸಾದ್ ಅವರು ‘ಅನಿವಾಸಿ ತಾಣದಲ್ಲಿ ಮಾತ್ರವಲ್ಲದೇ, ಕನ್ನಡ ಪತ್ರಿಕೆಗಳಲ್ಲೂ ಪ್ರಕಟಿಸಿದ್ದಾರೆ. 2016ರಲ್ಲಿ ‘ಇಂಗ್ಲೆಂಡಿನಲ್ಲಿ ಕನ್ನಡಿಗ’ ಎನ್ನುವ 60 ಕವನಗಳ (ಇಂಗ್ಲೀಷ್ ಮತ್ತು ಕನ್ನಡ ಭಾಷೆ) ಸಂಕಲನವನ್ನೂ, 2018 ರಲ್ಲಿ ‘ದಕ್ಷಿಣ ಅಮೇರಿಕ – ಒಂದು ಸುತ್ತು’ ಎನ್ನುವ ಪ್ರವಾಸ ಕಥನವನ್ನೂ ಪ್ರಕಟಿಸಿದ್ದಾರೆ. ಇದುವರೆಗೂ ತಮ್ಮನ್ನು ಕವನ ಮತ್ತು ಲೇಖನಗಳಿಗೆ ಸೀಮಿತಗೊಳಿಸಿದ್ದ ಪ್ರಸಾದ್ ಅವರು, ಇದೀಗ ಕಥಾಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ, ಅವರ ಮೊದಲ ಕಾದಂಬರಿ ‘ಪಯಣ’.

“ಒಳ್ಳೆಯ ಮನುಷ್ಯನ ಬದುಕು ಒಳ್ಳೆಯ ಕತೆಯಾಗಲು ಸಾಧ್ಯವಿಲ್ಲ” ಎನ್ನುವ ಮಾತಿದೆ. ಕೆಟ್ಟ ಪಾತ್ರಗಳಿಲ್ಲದಿದ್ದರೆ ಅದು ‘ಕತೆ’ ಹೇಗೆ ಆಗುತ್ತೆ ಎನ್ನುವುದು ವಿಮರ್ಶಕರ  ತಕರಾರು. ಕೆಟ್ಟ ಪಾತ್ರಗಳಿಲ್ಲದಿದ್ದರೂ ಕತೆ ಹೇಳಲು ಸಾಧ್ಯ ಎಂದು ಸವಾಲು ಹಾಕುವಂತೆ ಡಾ. ಜಿ ಎಸ್ ಶಿವಪ್ರಸಾದ್ (ಪ್ರಸಾದ್) ಅವರು ‘ಪಯಣ’ವನ್ನು  ಬರೆದಿದ್ದಾರೆ.

ಇತ್ತೀಚೆಗೆ ‘ಕನ್ನಡ ಬಳಗ’ಕ್ಕಾಗಿ ಪ್ರೋ.ಕೃಷ್ಣೇಗೌಡರು ಮಾತಾಡಿದಾಗ ಪ್ರಸಿದ್ಧ ಲೇಖಕರೊಬ್ಬರ ಬಗ್ಗೆ ಪ್ರಸ್ತಾಪಿಸುತ್ತಾ, ಅವರ ಒಂದು ಕಾದಂಬರಿಯಲ್ಲಿ ಕೆಟ್ಟ ಪಾತ್ರಗಳೇ ಇರಲಿಲ್ಲವಂತೆ. ಅದು ಹೇಗೆ ಸಾಧ್ಯ ಎಂದು ಅವರನ್ನು ಕೇಳಿದ್ದಕ್ಕೆ, ‘ಪ್ರಪಂಚದಲ್ಲಿ ಎಂಥೆಂಥ ಜನರಿದ್ದರೂ ನಮಗೆ ಒಳ್ಳೆಯವರು ಅನಿಸಿದವರನ್ನು ಮಾತ್ರ ನಮ್ಮ ಮನೆಯೊಳಗೆ ಬಿಟ್ಟುಕೊಳ್ಳುವಂತೆ, ಕಾದಂಬರಿಯಲ್ಲೂಅದನ್ನೇ ಮಾಡಿದ್ದೇನೆ, ಮನೆಯೊಳಗೆ ಬಿಟ್ಟುಕೊಂಡವರ ಬಗ್ಗೆ ಮಾತ್ರ ಕತೆ ಬರೆದಿದ್ದೇನೆ,’ ಎಂದರಂತೆ. ‘ಪಯಣ’ದ ವಿಷಯದಲ್ಲೂ ಅದೇ ಮಾತನ್ನು ಹೇಳಬೇಕಾಗುತ್ತದೆ.  ಪ್ರಸಾದ್ ಅವರ ಜೊತೆ ಸುಮಾರು ವರ್ಷಗಳಿಂದ ಬೇರೆ ಬೇರೆ ಸಂದರ್ಭದಲ್ಲಿ ಮಾತಾನಾಡಿದ್ದೇನೆ, ಒಡನಾಡಿದ್ದೇನೆ, ಅವರ ಮನೆಯ ಆತಿಥ್ಯವನ್ನೂ ಸವಿದಿದ್ದೇನೆ; ಅವರ ಸಭ್ಯತೆ, ವಿನಯಶೀಲತೆ, ಸ್ನೇಹಪರತೆ ಮತ್ತು ಒಳ್ಳೆಯತನಗಳಿಂದಾಗಿ ಅವರು ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ಒಳ್ಳೆಯದನ್ನು ಮಾತ್ರ ಕಾಣಬಲ್ಲ ಉದಾರ ಹೃದಯಿಗಳು. ಹಾಗಾಗಿ ಅವರ ‘ಪಯಣ‘ದಲ್ಲಿ ‘ವಿಲನ್‘ ಇಲ್ಲದಿರುವುದು ಆಶ್ಚರ್ಯವೇನಲ್ಲ.

ಇದೊಂದು ನಾಯಿಯ ಕತೆ. ನಾಯಿ ಬೀಗಲ್ ಜಾತಿಯದು. ಮಗಳ ಜೊತೆ ಆಟಕ್ಕೆ ಇರಲಿ ಎಂದು ಪುಟ್ಟಮರಿಯಾಗಿ ಸಿನೆಮಾ ನಿರ್ದೇಶಕನೊಬ್ಬನ ಮನೆಗೆ ‘ಸ್ನೂಪಿ’ಯಾಗಿ ಬರುತ್ತದೆ; ಮನೆಯಲ್ಲಿ ಇನ್ನೇನು ಹೊಂದಿಕೊಳ್ಳುತ್ತಿದೆ ಎನ್ನುವಾಗ ಮನೆಯಿಂದ ತಪ್ಪಿಸಿಕೊಂಡು ಬೀದಿನಾಯಿಯಾಗಿ ತನ್ನ ಹೆಸರನ್ನು ಕಳೆದುಕೊಳ್ಳುತ್ತದೆ. ಕಾರ್ಪೋರೇಷನ್ ಅವರಿಂದಾಗಿ ಸಂತಾನಹರಣ ಚಿಕಿತ್ಸೆಯನ್ನು ಮಾಡಿಸಿಕೊಂಡು ಹೆಸರಿಲ್ಲದ ನಾಯಿ ಕೈದಿಗಳಂತೆ ‘2025’ ಎನ್ನುವ ಸಂಖ್ಯೆಯಾಗುತ್ತದೆ. ನಂತರ ದತ್ತು ಸ್ವೀಕಾರವಾಗಿ ‘ಆರ್ಚಿ’ಯಾಗುತ್ತದೆ. ಬೆಳೆಯುತ್ತ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತ ಪೋಲೀಸರಿಗೆ ಸಹಾಯ ಮಾಡುತ್ತದೆ. ಪೋಲೀಸ್ ನಾಯಿಪಡೆಯ ಬಗ್ಗೆ ಸಾಕ್ಷ್ಯಚಿತ್ರ ಮಾಡುವಾಗ ಮತ್ತೆ ಸಿನೆಮಾ ನಿರ್ದೇಶಕನಿಗೆ ‘ಆರ್ಚಿ’ಯೇ ‘ಸ್ನೂಪಿ’ ಎಂದು ಗೊತ್ತಾಗುತ್ತದೆ. ‘ಆರ್ಚಿ’ ಮತ್ತೆ ‘ಸ್ನೂಪಿ’ಯಾಗುತ್ತಾ, ಮತ್ತೆ ನಿರ್ದೇಶಕನ ಮನೆ ಸೇರುತ್ತಾ ಎನ್ನುವುದೇ ಕತೆ. ಕತೆಯ ಕೊನೆ ತುಂಬ ಸ್ವಾರಸ್ಯಕರವಾಗಿದೆ.

ಪುಟ್ಟ ಮಗುವಾದಾಗಿನಿಂದ ನಿವೃತ್ತ(!)ನಾಗುವವರೆಗಿನ ನಾಯಿಯ ಕತೆಯಿದು. ಟಿಪಿಕಲ್ ಬೆಂಗಳೂರಿಗನಂತೆ ಕನ್ನಡ, ತಮಿಳು ಮತ್ತು ಇಂಗ್ಲೀಷ್ (ನಾಯಿ ತರಬೇತಿಗೆ ಪೋಲೀಸ್ ಇಲಾಖೆಯವವರು ಇಂಗ್ಲೀಷ್ ಬಳಸುತ್ತಾರೆ ಎನ್ನುವ ಊಹೆ ನನ್ನದು) ಮೂರೂ ಭಾಷೆಯಲ್ಲಿ ಪರಿಣಿತಿ ಪಡೆಯುವ ನಾಯಿಯಿದು.

ಇದು ಮೂಲ ಕತೆಯ ಎಳೆಯಾದರೆ, ಇದರಲ್ಲಿ ಮೂರು ಮಕ್ಕಳ ಉಪಕತೆಗಳಿವೆ. ಒಂದೊಂದು ಮಗುವಿನ ಕತೆಯೂ ಈ ನಾಯಿಯ ಬದುಕಿನ ಜೊತೆ ಬೆರೆತುಕೊಂಡಿವೆ. ಯಾವ ಭಾತೃಗಳೂ ಇಲ್ಲವೆಂದು ಒಂಟಿಯಾಗಿರುವ ಮಗುವಿಗೆ ನಾಯಿ ತಮ್ಮನಾಗುತ್ತಾನೆ, ಗೆಳೆಯನಾಗುತ್ತಾನೆ. ಸೂರಿಲ್ಲದ ಹುಡುಗಿಗೆ ಜೊತೆಗಾರನಾಗುತ್ತಾನೆ, ರಕ್ಷಕನಾಗುತ್ತಾನೆ. ಆಟಿಸಂ ಇರುವ ಮಗುವಿನ ಆರೈಕೆಗೆ ಸಹಾಯವಾಗುತ್ತಾನೆ. ಮೂರೂ ಮಕ್ಕಳ ಕತೆಗಳು ಮೂಲ ಕತೆಗೆ ಧಕ್ಕೆ ಬರದಂತೆ ಗುಪ್ತಗಾಮಿನಿಯಾಗಿ ಹರಿಯುತ್ತವೆ. ಮಕ್ಕಳ ದೃಷ್ಟಿಯಿಂದ ನಾಯಿಗಳ ಬಗ್ಗೆ ಇರುವ ಪ್ರೀತಿ ಮತ್ತು ತುಂಟತನವನ್ನು ನಾವು ಕಂಡುಕೊಳ್ಳುತ್ತೇವೆ. ನಾಯಿಗಳಿಗೂ ಮಕ್ಕಳಿಗೂ ಅಂಥ ವ್ಯತ್ಯಾಸವೇನೂ ಇಲ್ಲ ಎನ್ನುವುದನ್ನು ಪ್ರಸಾದ್ ಸೂಕ್ಷ್ಮವಾಗಿ ನಿರೂಪಿಸುತ್ತಾರೆ.

ಕತೆಯ ತಂತ್ರ ಸರಳ ಮತ್ತು ಶೈಲಿ ನೇರ. ಅಲ್ಲಲ್ಲಿ ಮಾಹಿತಿಗಳೂ ಬಂದು ಕತೆಯ ಓಟಕ್ಕೆ ಕಡಿವಾಣ ಹಾಕುತ್ತವಾದರೂ ಕತೆಗೆ ಪೂರಕವಾಗುವಂತೆ ವಿಷಯ ಗೊತ್ತಿಲ್ಲದವರಿಗೆ ಗೊತ್ತಿರಲಿ ಎನ್ನುವಂತೆ ತೋಳ-ನಾಯಿಗಳ ಇತಿಹಾಸ, ಬೀದಿನಾಯಿಗಳ ಸಂತಾನಶಕ್ತಿಹರಣ ಚಿಕಿತ್ಸೆ, ನಾಯಿಗಳ ತರಬೇತಿ, ಪೋಲಿಸ್ ಪಡೆಯಲ್ಲಿ ನಾಯಿಗಳ ಪಾತ್ರಗಳ ಬಗ್ಗೆ ವಿವರವಾದ ಮಾಹಿತಿಗಳಿವೆ.

ಕತೆ ಓದಿ ಮುಗಿಸಿದಾಗ ಒಂದು ಕಾಮಿಕ್ ಪುಸ್ತಕವನ್ನು ಅಥವಾ ಒಂದು ‘ಡಿಸ್ನಿ‘ ಸಿನೆಮಾ ನೋಡಿದಂತಾಯಿತು, ಜೊತೆಗೆ ನಾಯಿಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಕಲಿತಂತಾಯಿತು. ಇದೊಂದು ಸುಂದರ ‘ಮಕ್ಕಳ ಕಾದಂಬರಿ’ ಅಲ್ಲವೇ ಅನಿಸಿತು. ಕನ್ನಡದಲ್ಲಿ ಮಕ್ಕಳ ಕಾದಂಬರಿಗಳಿಲ್ಲ ಎನ್ನುವ ಕೊರತೆಯನ್ನು ಈ ಪುಸ್ತಕ ಖಂಡಿತವಾಗಿಯೂ ನೀಗಿಸುತ್ತದೆ ಎಂದು ನನ್ನ ಅನಿಸಿಕೆ. ಕನ್ನಡ ಭಾಷೆಯಲ್ಲಿ ಕತೆ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲು ಇಚ್ಛಿಸುವ ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ಕನ್ನಡದ ಮಕ್ಕಳಿಗೆ ಈ ಪುಸ್ತಕದಿಂದ ಕನ್ನಡದ ಓದನ್ನು ಶುರು ಮಾಡಿದರೆ ಅವರಿಗೆ ಕನ್ನಡದ ಓದಿನಲ್ಲಿ ಆಸಕ್ತಿ ಹುಟ್ಟಬಹುದು.

ಕಾದಂಬರಿಯ ಅಂತ್ಯದಲ್ಲಿ ಬರೆದಿರುವಂತೆ, ಈ ಕಾದಂಬರಿಯನ್ನು ಸಿನೆಮಾ ಮಾಡಬಹುದು, ಒಂದು ಒಳ್ಳೆಯ ಅನಿಮೇಷನ್ ಸಿನೆಮಾ ಮಾಡುವ ಎಲ್ಲ ಸರಕೂ ಈ ಕಾದಂಬರಿಯಲ್ಲಿದೆ. ಪ್ರಸಾದ್ ಅವರು ಇನ್ನೂ ಹಲವು ಕಾದಂಬರಿಗಳನ್ನು ಬರೆಯಲಿ ಎನ್ನುವುದು ನನ್ನ ಅಪೇಕ್ಷೆ.

ಡಾ.ಕೇಶವ ಕುಲಕರ್ಣಿ

2 ಆತ್ಮೀಯತೆಯೆನ್ನು ಒಳಗೊಂಡಿರುವ “ಪಯಣ”ದಿವ್ಯತೇಜ

ಶ್ರೀಯುತ ಡಾ.|ಶಿವಪ್ರಸಾದ್ ಅವರಿಗೆ “ಪಯಣ” ಕಾದಂಬರಿಯ ಪ್ರಕಟಣೆಗೆ ಅಭಿನಂದನೆಗಳು. ಅವರ ಪುಸ್ತಕ ಬಿಡುಗಡೆ ಸಮಾರಂಭ ದಿನದ ನಂತರ ಪುಸ್ತಕ ದೊರಕುವುದಕ್ಕೆ ಕಾತರದಿಂದ ಎದುರು ನೋಡುತ್ತಿದ್ದೆನು. ಪ್ರಸಾದ್ ಅವರು ಬೆಂಗಳೂರಿನಿಂದ ಕೆಲವು ಪುಸ್ತಕಗಳನ್ನು ತರಿಸಿದಾಗ ನಮಗೂ ಒಂದು ಪ್ರತಿಯನ್ನು ಕಳುಹಿಸಿದರು. ಶುಕ್ರವಾರ ಪುಸ್ತಕ ಬಂದು ತಲುಪಿತು. ರಾತ್ರಿ ಮಲಗುವ ಮುನ್ನ ಕಾದಂಬರಿ ಓದಲು ಪ್ರಾರಂಭಿಸಿದೆ. ಕಥೆಯಲ್ಲಿ ಸಂಪೂರ್ಣ ಮಗ್ನನಾದ ನಾನು, ಮಧ್ಯೆ ನಿಲ್ಲಿಸಲು ಮನಸ್ಸೇ ಬರಲಿಲ್ಲ. ಕಾದಂಬರಿ ಮುಗಿಸಿದಾಗ ಸರಿ ರಾತ್ರಿ ಎರಡು ಘಂಟೆ. ಕಾದಂಬರಿಯ ನಿರೂಪಣೆ ಸರಳವಾಗಿ, ಸುಲಲಿತವಾಗಿ ಮೂಡಿ ಬಂದಿದೆ. ಸ್ನೂಪಿ /ಆರ್ಚಿ ಯ ಪಯಣ, ಮಾನವ ಮತ್ತು ಶುನಕದ ನಡುವೆಯ ವಿಶೇಷ ಸ್ನೇಹವನ್ನು ಸುಂದರವಾಗಿ ವಿವರಿಸುತ್ತದೆ.
ಮಾಧ್ಯಮ ವರ್ಗದವರ ಮನೆಯಲ್ಲಿ ಕುಟುಂಬದ ಸದಸ್ಯನಾಗಿದ್ದ ಸ್ನೂಪಿ, ನಂತರ ಬೀದಿ ನಾಯಿಯಾಗಿ ಮಾರ್ಪಟ್ಟಾಗ ಪಡುವ ಕಷ್ಟ, ನಂತರ ಪೊಲೀಸ್ ನಾಯಿಯಾಗಿ ತನ್ನ ಅಸಾಮಾನ್ಯ ಘ್ರಾಣ ಶಕ್ತಿಯಿಂದ ಕಥಾನಾಯಕನಾಗುವುದು ಬಹಳ ಸೊಗಸಾಗಿ ಮೂಡಿ ಬಂದಿದೆ.  ಇದೆಲ್ಲರ ನಿರುಪಣೆ ಬಹಳ ನೈಜತೆಯಿಂದ ಕೂಡಿದ್ದು ನಮ್ಮ ಕಣ್ಮುಂದೆಯೇ ನಡೆದಿರುವ ಕಥೆಯಂತೆ ತೋರುವುದು ಈ ಕಾದಂಬರಿಯ ವಿಶೇಷತೆ. ಪ್ರಸಾದ್ ಅವರ ಪರಿಚಿತರಿಗೆ ಕಾದಂಬರಿಯಲ್ಲಿ ಬರುವ ಪಾತ್ರದಾರಿಗಳಿಗೂ ಮತ್ತು ಪ್ರಸಾದ್ ಅವರ ಕುಟುಂಬ  ಸದಸ್ಯರಿಗೂ ಇರುವ ಸಾಮ್ಯ ಗೋಚರಿಸುತ್ತದೆ. ಇದು ಕಥೆಗೆ ನಮ್ಮದೇ ಅನ್ನುವ ಆತ್ಮೀಯ ಭಾವವನ್ನು ಕೊಡುತ್ತದೆ.

ಪ್ರಸಾದ್ ಅವರು ಈ ಕಾದಂಬರಿಯಲ್ಲಿ ತಮ್ಮ ವೈದ್ಯಕೀಯ ಪರಿಣತಿಯನ್ನು ಪ್ರದರ್ಶಿಸುತ್ತಾ ಕಾದಂಬರಿಗೆ ತಮ್ಮದೇ ಆದ ಛಾಪು ಕೊಟ್ಟಿದ್ದಾರೆ. ಅಲ್ಲದೆ ಕಾರ್ಮಿಕ ವರ್ಗದವರ ಕಷ್ಟ, ವಿವಿಧ ಜನಾಂಗಗಳ ಸಂಸ್ಕೃತಿಯ ಪರಿಚಯ, ಸ್ವಲೀನತೆ (ಆಟಿಸಂ) ನಿಭಾಯಿಸುವಲ್ಲಿ ಪ್ರಾಣಿಗಳ ಸಹಕಾರ, ಹೀಗೆ ಅನೇಕ ವಿಷಯಗಳನ್ನು ನಮಗೆ ಕಾದಂಬರಿಯ ಮೂಲಕ ವಿವರಿಸಿದ್ದಾರೆ. ಕಾದಂಬರಿಯ ಮೂಲ ಕಥೆಗೆ ಪೂರಕವಾಗಿ ಇವೆಲ್ಲವನ್ನೂ ವಿವರಿಸಿರುವುದು ಶ್ಲಾಘನೀಯ ಪ್ರಯತ್ನವೇ ಸರಿ.

ಅವರ ಅನಿಸಿಕೆಯಂತೆ ಈ ಕಾದಂಬರಿಯನ್ನು ದೃಶ್ಯ ಮಾಧ್ಯಮಕ್ಕೆ ಪರಿವರ್ತಿಸಿ ಬಹಳಷ್ಟು ಜನರಿಗೆ ಮುಟ್ಟುವಂತಾಗಲಿ ಎಂದು ಆಶಿಸುತ್ತೇನೆ.

ಹೃ.ದಿವ್ಯತೇಜ

3. ‘ಪಯಣ’ದ ಜೊತೆ ಚಲಿಸುತ್ತಿದ್ದಂತೆ ಮೂಡಿಬಂದ ಭಾವನೆಗಳುನವೀನ

ಯುನೈಟೆಡ್ ಕಿಂಗ್ಡಮಿನ ಕ್ರಿಯಾತ್ಮಕ ಕನ್ನಡ ಬಳಗಗಳು ಕನ್ನಡ ಪ್ರೇಮಿಗಳಿಗೆ ರಸದೌತಣವನ್ನೇ ಉಣ್ಣಿಸುತ್ತಿವೆ ಎನ್ನಬಹುದು. ಅಂತಹ ಒಂದು ಸಂಘದ ಪ್ರತಿಭಾವಂತ ರೂವಾರಿ, ಗೆಳೆಯ ಶಿವಪ್ರಸಾದರು. ಇವರ ಮೊಟ್ಟಮೊದಲಿನ ಕಾದಂಬರಿ, ‘ಪಯಣ’ವನ್ನು ಈಗಷ್ಟೆ ಓದಿ ಮುಗಿಸಿದ್ದೇನೆ. ಹಿಂದೆ, ವಿಶೇಷವಾಗಿ ಶಾಲಾಕಾಲೇಜಿನಲ್ಲಿದ್ದಾಗ, ಬಹಳಷ್ಟು ಕಥೆ ಕಾದಂಬರಿಗಳನ್ನು ಓದಿದ್ದೆ. ನಂತರ, ಜೀವನದ ಜಂಜಾಟ, ಹೋರಾಟ, ಒದ್ದಾಟದಲ್ಲಿ, ಜೊತೆಗೆ ಸುಲಭವಾಗಿ ಹಸ್ತಕ್ಕೆ ನಿಲುಕುವ ‘ಅಲೆಯುಲಿ(ಮೊಬೈಲ್ ಫೋನ್)’ಯಲ್ಲಿ ದೊರಕುವ ’ಜ್ಞಾನ’ದಿಂದಲೊ ಏನೊ, ದಪ್ಪ ಪುಸ್ತಕ ಹಿಡಿದು ಓದುವ ರೂಢಿಯೆ ಕಡಿಮೆಯಾಗಿತ್ತು. ಹಾಗೆ ನೋಡಿದ್ದಲ್ಲಿ ‘ಪಯಣ’ವೆಂಬ ಈ ಕಾದಂಬರಿ ಅಷ್ಟೊಂದು ದೊಡ್ಡದಲ್ಲ. ಕ್ಲಿಷ್ಟ ಪದಗಳಾಗಲಿ, ಗಾಢವಾಗಿ ಆಲೋಚಿಸಿ ಅರ್ಥ ಹುಡುಕುವಂತ ವಾಕ್ಯಗಳಾಗಲಿ ಇಲ್ಲದೆ ಸಾಮಾನ್ಯ ಓದುಗರೂ ಸರಾಗವಾಗಿ ಒಂದೇಸಲ ಕುಳಿತು ಕೊನೆಯವರೆಗು ಓದಿ ಮುಗಿಸುವಂತ ಸರಳ ರಚನೆ. ಹಾಗಂದ ಮಾತ್ರಕ್ಕೆ, ಗಾಢವಾದ ಅಂಶಗಳಿಂದ ಕೂಡಿಲ್ಲವೆಂದಲ್ಲ. ಜೀವನದಲ್ಲಿ ನಮ್ಮ ಹೃದಯಕ್ಕೆ ನಿಕಟವಾಗಿರುವಂತವು ಬಹಳ ಸರಳವೆ ಸರಿ. ‘ಪಯಣ’ ಓದುಗರನ್ನು ಮೊದಲಿನಿಂದ ಅಂತದವರೆಗು ಕುತೂಹಲದೊಂದಿಗೆ ಕರೆದೊಯ್ಯುತ್ತದೆ. ಓದುತ್ತ ಓದುತ್ತ ನಾನೂ ಸ್ನೂಪಿ,ಆರ್ಚಿ ಮತ್ತು ಅವನ ಅನೇಕ ಮನುಜ ಸಂಗಾತಿಯರೊಡನೆ ಒಂದಾಗಿಬಿಟ್ಟೆ.

ಬೃಹತ್ ನಗರದ ಜೀವನ ಮನುಷ್ಯರ ಪ್ರಾಕೃತಿಕ ಸಂಪರ್ಕಕ್ಕೆ ಒಂದು ತರಹದ ಕಡಿವಾಣ ಹಾಕಿದಂತಿದೆ. ವಿಶೇಷವಾಗಿ, ಮಕ್ಕಳು ಮುಂಚಿನ ಹಾಗೆ ಆಚೆ ಹೋಗಿ ಬೀದಿಗಳಲ್ಲಿ ಸಂದಿಗಳಲ್ಲಿ ಆಟವಾಡುವಂತಿಲ್ಲ. ನಾವು ಚಿಕ್ಕವರಿದ್ದಾಗ ಗೋಲಿ, ಬುಗುರಿ, ಗಿಲ್ಲಿದಾಂಡು, ಲಗೋರಿ ಆಡ್ತಿದ್ವಿ. ಶಾಲೆಯಿಂದ ಬರುವುದೆ ತಡ, ಪುಸ್ತಕಗಳ ಚೀಲ ಎಸೆದು ಬೀದಿಗಿಳಿತಿದ್ವಿ; ಪಕ್ಕದ ಮನೆ, ಆಚೆ ಬೀದಿ ಮನೆಗಳ ಮಕ್ಕಳ ಗುಂಪು ಜೊತೆ ಸೇರಿ ಕುಣಿದು ಕುಪ್ಪಳಿಸ್ತಿದ್ವಿ. ಈಗ ಆ ಆತಂಕವಿಲ್ಲದ ದಿನಗಳಿಲ್ಲ ನಮ್ಮ ನಗರಗಳಲ್ಲಿ ಬೆಳೆಯುವ ಮಕ್ಕಳಿಗೆ. ವಿಪರೀತ ವಾಹನ ಚಲನೆ, ಜೊತೆಗೆ ಖಾಲಿ ಜಾಗಗಳಿಲ್ಲ. ಇಂತಹ ಸನ್ನಿವೇಶದಲ್ಲಿ ‘ಪಯಣ’ದ ಮುಖ್ಯ ಪಾತ್ರದಾರಿ ಮಕ್ಕಳಾದ ಅರ್ಚನ, ಸೆಲ್ವಿ ಮತ್ತು ಸಹನರಿಗೆ ‘ಸ್ನೂಪಿ’ ‘ಆರ್ಚಿ’ ತಮ್ಮ ಪ್ರೀತಿ, ಸ್ನೇಹ, ಸುಪ್ತ ಚೈತನ್ಯ ವ್ಯಕ್ತ ಪಡಿಸಲು ಒಂದು ಮಾರ್ಗ ಕಲ್ಪಿಸಿದ. ದೊಡ್ಡವರಿಗಿಂತ ಹೆಚ್ಚಾಗಿ ಮಕ್ಕಳು ನಾಯಿಗಳ ಜೊತೆ ಅವರದೆ ಆದ ವಿಶಿಷ್ಟ ರೀತಿಯಲ್ಲಿ ಸಂಬಂಧ ಬೆಳೆಸಿಕೊಳ್ಳುತ್ತಾರೆ. ನಾಯಿಗಳೂ ಅಷ್ಟೆ. ಮಕ್ಕಳೊಡನೆ ಶೀಘ್ರವಾಗಿ ಒಡನಾಟ ಸಲಿಗೆ ಸ್ನೇಹ ವೃದ್ಧಿಗೊಳಿಸುಕೊಳ್ಳುತ್ತವೆ. ಎಷ್ಟೊಂದು ನಾವು ನೋಡಿಲ್ಲ ಉದ್ಯಾನವನಗಳಲ್ಲಿ ನಡೆಯುವಾಗ. ತಮ್ಮ ಮಾಲಿಕರಲ್ಲದೆ ಇತರರನ್ನು ಆಕರ್ಶಿಸಿ ಅವರೊಡನೆ ಒಂದಷ್ಟು ಆಟವಾಡಿ, ಮೂಸಿ, ಮೈಮೇಲೆತ್ತಿ ಮೈ ಸವರಿಸಿಕೊಂಡು ಚೆಂಡಿನಂತೆ ಪುಟ ಪುಟಿಸುವುವದು ಸಾಮಾನ್ಯ ದೃಶ್ಯ. ನಾಯಿಯಿಂದಾಗಿ ಮನುಷ್ಯರು ಒಂದೆರಡು ಮಾತಾಡಿ ಪರಿಚಯ ಮಾಡಿಕೊಳ್ಳುತ್ತಾರೆ. ಕೆಲವರ ಏಕಾಂಗಿತನ ಸ್ವಲ್ಪವಾದರೂ ನಿವಾರಣೆಯಾಗುವುದಕ್ಕೆ ಇದೊಂದು ಅವಕಾಶ.

ಪಯಣ ಓದುತ್ತಿದ್ದಾಗ ನನ್ನ ಕಣ್ಣುಮುಂದೆ ಹಾದುಹೋದವು ಪುಸ್ತಕದಲ್ಲಿ ಬರುವ ನಾಯಿಗಳಿಗೆ ಸಂಬಂಧ ಪಟ್ಟಂತ ನೆನಪುಗಳು. ಬೀದಿನಾಯಿಗಳ ಹಿಂಡು ರಸ್ತೆ ಸಂದಿಗಳಲ್ಲಿ ಹಾವಳಿ ಎಬ್ಬಿಸಿ ನಮ್ಮ ಸಂಜೆಯ ಆಟಕ್ಕೆ ಬಹಳ ಅಡಚಣೆ ತರುತ್ತಿದ್ದವು. ಅವುಗಳು ಓಡಿಸಿಕೊಂಡು ಬಂದು ಕಚ್ಚುವ ಭಯವೂ ತುಂಬಿರುತ್ತಿತ್ತು. ಬೆಂಗಳೂರು ನಗರ ಪಾಲಿಕೆಯವರು ಆಗಾಗ್ಗೆ ವ್ಯಾನಲ್ಲಿ ಬಂದು ನಾಯಿಗಳನ್ನು ಸೆರೆ ಹಿಡಿದುಕೊಂಡು ಹೋಗುತ್ತಿದ್ದರು. ಆ ನಾಯಿಗಳ ಮುಂದಿನ ಗತಿ ನಮಗೆ ತಿಳಿಯುತ್ತಿರಲಿಲ್ಲ. ಪಯಣ ಕಾದಂಬರಿಯಿಂದ ಬೀದಿನಾಯಿಗಳ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವ ಅವಕಾಶ ಒದಗಿತು. ವಿಶೇಷವಾಗಿ ಅವುಗಳಿಗೆ ಸಂತಾನ ನಿಲ್ಲಿಸಲು ಮಾಡುವ ಶಸ್ತ್ರಕ್ರಿಯೆ, ಪ್ರಾಣಿ ಹಿಂಸೆ ತಡೆಯುವ ಸಂಘಗಳ ಪ್ರಭಾವ, ಬೆಂಗಳೂರು ಪೋಲಿಸ್ ಇಲಾಖೆ ನಾಯಿಗಳಿಗೆ ಏರ್ಪಡಿಸುವ ತರಬೇತಿ ವ್ಯವಸ್ಥೆ, ಅಂತಹ ನಾಯಿಗಳಿಂದ ಆಗುವ ಪ್ರಯೋಜನ – ಅದರಲ್ಲೂ ಮಾದಕ ಸಾಮಾಗ್ರಿ ಮತ್ತು ಭಯೋತ್ಪಾದಕ ಅಥವಾ ಸಿಡಿಮದ್ದುಗಳನ್ನು ಗೊತ್ತು ಹಚ್ಚುವಿಕೆ – ಇಷ್ಟೆಲ್ಲ ಸಂಕ್ಷಿಪ್ತವಾಗಿ ‘ಪಯಣ’ ಮನವರಿಕೆ ಮಾಡುತ್ತೆ.
ಮುಖ್ಯವಾಗಿ ನಾಯಿ ಮನುಷ್ಯರ ಸಂಬಂಧ ಎತ್ತಿ ತೋರಿಸುವಂತ ಕೃತಿ ಇದು. ತಮ್ಮದೆ ಆದ ಜಂಜಟದಲ್ಲಿರುವ, ಒಬ್ಬೊಬ್ಬರ ದೃಷ್ಟಿಕೋನ ವಿಭಿನ್ನದಿಂದಿರುವ ಮಹೇಶ, ನಿರ್ಮಲ, ನಿಖಿಲ್, ರಮ್ಯ ಮತ್ತು ಪುಟ್ಟ ಅರ್ಚನರನ್ನು ಒಂದುಗೂಡಿಸಿ, ಕುಟುಂಬವೆಲ್ಲ ಕುಳಿತು ಆನಂದಿಸುವುದಕ್ಕೆ ಸ್ನೂಪಿ ಹಾದಿ ಮಾಡಿಕೊಡುತ್ತದೆ. ಬೆಳೆಯುತ್ತಿರುವ ಬಾಲಕಿಗೆ ಶಾಲೆನಂತರ ಗೆಳೆಯ ಗೆಳತಿಯರೊಡನೆ ಬೆರೆಯಲಾಗುತ್ತಿಲ್ಲವಲ್ಲ ಎಂಬ ನ್ಯೂನತೆಗೆ ಪರಿಹಾರ ತುಂಬಿಸುತ್ತದೆ. ಮುಂದೆ ಬರುವ ಸೆಲ್ವಿ ಮತ್ತು ಸಹನ ಎಂಬ ಬಾಲಕಿಯರೂ ತಮ್ಮಲ್ಲಿ ಅಜಗಜಾಂತರ ಸಾಮಾಜಿಕ ವ್ಯವಸ್ಥೆಯ ಅಂತರವಿದ್ದರೂ ಅರ್ಚನಳಂತೆ ಸ್ನೂಪಿ ಆರ್ಚಿಗೆ ಹೊಂದಿಕೂಳ್ಳುವುದು ನಾಯಿ-ಮನುಜರ, ಅದರಲ್ಲು ಮಕ್ಕಳು-ನಾಯಿಗಳ ಮಧ್ಯೆ ಉಂಟಾಗುವ ಬಾಂಧವ್ಯವನ್ನು ಮನದಟ್ಟು ಮಾಡುತ್ತದೆ. ನಾಯಿಯೊಂದೆ. ಆದರೆ ಅದೇ ನಾಯಿ ಎಷ್ಟೇ ಸಾಮಾಜಿಕ, ಆರ್ಥಿಕ, ಬೌದ್ಧಿಕ ಅಂತರ ಇದ್ದರೂ, ಆ ಮೂರು ಕುಟುಂಬಗಳಲ್ಲಿ ಸಮಾನಾದ ಪ್ರೀತಿ ವಿಶ್ವಾಸ ಪಡೆದು, ತಾನು ಖುಷಿಯಿಂದ ಕುಣಿದು ಕುಪ್ಪಳಿಸಿ ಮನುಷ್ಯರಿಗೂ ಮನ ತನ ತಣಿಸುತ್ತದೆ. ಇಂತಹ ಸಂಬಂಧ, ಒಬ್ಬ ಮನುಷ್ಯನಿಂದ ಮತ್ತೊಬ್ಬನಿಗೆ ಸಿಗುವುದೆ ಎಂಬ ಸಂಶಯ ಓದುಗರಿಗೆ ಕಾಡದೆ ಇರುವುದಿಲ್ಲ ಎನಿಸುತದೆ.

ಇನ್ನೊಂದು ಕರಾಳ ವಸ್ತು. ಬಡತನ ಬೇಗೆಯಿಂದ ಬಳಲುತ್ತಿದ್ದು, ಸ್ಥಿರವಾದ ನೆಲೆಯಿಲ್ಲದೆ, ಮಗಳ ವಿದ್ಯೆಗೂ ಹಣವಿಲ್ಲದಂತ ಜೀವನ ನಡೆಸುತ್ತಿದ್ದ ಆರ್ಮುಗಂಗೆ ಒದಗಿದ ದುರಂತ. ಕಷ್ಟಪಟ್ಟು, ಪ್ರಾಮಾಣಿಕತೆಯಿಂದ ದುಡಿದು ಸಂಸಾರ ಸಾಗಿಸಿ, ಸರಕಾರಿ ಆಸ್ಪತ್ರೆಯಲ್ಲಿ ಮಗಳ ಚಿಕೆತ್ಸೆಗೆ ಲಂಚವನ್ನು ಕೊಟ್ಟು ಉಳಿಸಿಕೊಂಡು, ಮಿಕ್ಕ ಕಾಸಿನಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ದೇವರ ದರ್ಶನ ಪಡೆಯಲು ಹೋಗಿ ತಾನೇ ಆಹುತಿಯಾದದ್ದು. ಎಂತಹ ದುಷ್ಪರಿಣಾಮ! ಹೆಂಡತಿ ಕನ್ನಗಿ ಮತ್ತು ಮಗಳು ಸೆಲ್ವಿ ಅನಾಥರಾಗುತ್ತಾರೆ. ನಂಬಿಕೆಗೆ ಇದು ದೊರಕಿದ ದೊಡ್ಡ ಪೆಟ್ಟು. ಕನ್ನಗಿ ದೇವರ ಅಸ್ತಿತ್ವವನ್ನೆ ಪ್ರಶ್ನಿಸುವುದರಲ್ಲಿ ತಪ್ಪಿಲ್ಲವೇನೊ!
ಮತ್ತೊಂದು ವಿಷಯ ನನ್ನಲ್ಲಿ ಗಲಿಬಲಿ ಮತ್ತು ಸಂಕಟ ತಂದಿತು. ಆರ್ಚಿ ಸಹನಳ ಆತ್ಮೀಯ ಸಂಗಾತಿಯಲ್ಲದೆ, ಅವಳು ಬಳಲುತ್ತಿದ್ದ, ತಜ್ಞರಿಗೂ ಸವಾಲಾಗಿದ್ದ ಮಾನಸಿಕ ಗೊಂದಲಕ್ಕೆ ಒಂದು ರೀತಿಯ ಚಿಕಿತ್ಸಕನಾಗಿದ್ದ. ಆರ್ಚಿ ಬಂದ ಮೇಲೆ ಆಕೆಯ ಬೆಳವಣಿಗೆಯಲ್ಲಿ ತೃಪ್ತಿ ಕೊಡುವಂತ ಮಾರ್ಪಾಟಾಗಿತ್ತು. ಆಕೆಯ ಸಾಕು ತಂದೆತಾಯಿಯರಿಗು ಸಂತೃಪ್ತಿ ಉಂಟಾಗಿತ್ತು ಮಗಳಲ್ಲಾದ ಬದಲಾವಣೆಯಿಂದ ಮತ್ತು ಆರ್ಚಿಯ ಒಡನಾಟದಿಂದ. ಹಾಗಿದ್ದಲ್ಲಿ ಆರ್ಚಿಯನ್ನು ಅವಳಿಂದ ಬೇರ್ಪಡಿಸಿದ್ದು ಖೇದವೆನಿಸಿತು. ಬೀಗಲ್ ಜಾತಿಯ ನಾಯಿಗಳು ಇನ್ನಿರಲಿಲ್ಲವೆ?ಪೋಲಿಸ್ ಇಲಾಖೆ ಶ್ರಮವಹಿಸಿ ಹುಡುಕಿದ್ದರೆ ಬೇರೆಯವು ಸಿಕ್ಕುತ್ತಿದ್ದವೇನೊ ಎನಿಸಿತು. ಆದರೆ ಆರ್ಚಿ ಆಗಾಗಲೆ ಹೆಸರು ಮಾಡಿದಂತ ಪ್ರಾಣಿ. ಆತನ ಉತ್ತಮ ಮಟ್ಟ ಎಲ್ಲರಿಗು ಅರಿವಾಗಿತ್ತು. ಒಂದು ಕುಟುಂಬಕ್ಕಲ್ಲದೆ, ಸಮಾಜಕ್ಕೆ, ದೇಶದ ಒಳಿತಕ್ಕೆ ಅವನು ಅರ್ಹ ಎಂಬುದು ಮನದಟ್ಟಾಗಿತ್ತು. ಆರ್ಚಿ ಕೊನೆಯವರೆಗು ಇಲಾಖೆಯ ನಿರೀಕ್ಷಿತ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿಕೊಡುವುದು ಪ್ರಶಂಸನೀಯ.

ಕಾದಂಬರಿ ಓದುತ್ತಿದ್ದಂತೆ ನಾನಾತರಹದ ತರಂಗಳು ಚಿಮ್ಮುವುದರಲ್ಲಿ ಸಂಶಯವಿಲ್ಲ. ಓದುಗರೆ, ಉದ್ಭವಿಸುವ ಸಮಸ್ಯೆಗಳಿಗೆ ಅಥವ ದ್ವಂದ್ವಕ್ಕೆ ತಮಗನುಸಾರ ವಿವರಣೆ ಕೊಟ್ಟುಕೊಳ್ಳಬಹುದು. ಒಟ್ಟಿನಲ್ಲಿ ಇದೊಂದು ನಿಜ ಕಥೆಯೆನಿಸುತದೆ. ನಿರೂಪಣೆ ಒಂದು ಚಲನ ಚಿತ್ರಕ್ಕೆ ಅನ್ವಯವಾಗುವಂತದು. ಇದನ್ನು ಒಂದು ಅನಿಮೇಷನ್ ಚಿತ್ರವಾಗಿ ನಿರ್ಮಿಸಿದರೆ ಮಕ್ಕಳಿಗೆ (ದೊಡ್ಡವರಿಗು ಸಹ)ಇಷ್ಟವಾಗುವುದರಲ್ಲಿ ಸಂದೇಹವಿಲ್ಲ ಎಂಬುದು ನನ್ನ ಅನಿಸಿಕೆ. ಲೇಖಕರ ಸಾಧನೆ ಶ್ಲಾಘನೀಯ.

ನವೀನ, ಲೀಡ್ಸ್

ಪಯಣ” ಪುಸ್ತಕ ಪ್ರಕಟಣೆಯ ಆಹ್ವಾನ ಪತ್ರಿಕೆ