ಡಾ ಜಿ ಎಸ್ ಶಿವಪ್ರಸಾದ್

ಈ ವಾರದ ಸಂಚಿಕೆಯಲ್ಲಿ ಹಣತೆ ಮತ್ತು ಬೆಳಕು ಎಂಬ ಬರಹವನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಹಣತೆ ಮತ್ತು ಬೆಳಕು ಪ್ರಪಂಚದ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಪ್ರತಿಮೆ, ಉಪಮೆ ಮತ್ತು ರೂಪಕವಾಗಿ ವಿಜೃಂಭಿಸಿದೆ. ಕನ್ನಡ ಸಾಹಿತ್ಯದಲ್ಲಿ ಶತಮಾನಗಳಿಂದಲೂ ಈ ಬೆಳಕು, ಹಣತೆ ಎಂಬ ಪ್ರತಿಮೆಯನ್ನು (ದೀಪ, ದೀವಿಗೆ, ಪ್ರಣತಿ ಜ್ಯೋತಿ ಇತ್ಯಾದಿ ಹೆಸರಿನಲ್ಲೂ) ಬಳಸಲಾಗಿದೆ. ಈ ಒಂದು ಹಿನ್ನೆಲೆಯಲ್ಲಿ ಈ ಬರಹ ಮೂಡಿಬಂದಿದೆ. ಈಗ ತಾನೇ ದೀಪಾವಳಿ ಮುಗಿದಿದೆ, ನೀವು ನಿಮ್ಮ ಹಣತೆಯನ್ನು ಉಜ್ಜಿ ತೊಳೆದು ಎತ್ತಿಡುತ್ತಿರುವ ಸಂದರ್ಭದಲ್ಲಿ ಈ ಬರಹವನ್ನು ನಿಮ್ಮ ಮುಂದಿಡುತ್ತಿದ್ದೇನೆ. ನೀವು ಎಲ್- ಈ- ಡಿ ಲೈಟುಗಳನ್ನು ಬಳಸಿದ್ದರೂ ಚಿಂತೆಯಲ್ಲ. ಈ ಹಣತೆಗಾಗಿ ಸ್ವಲ್ಪ ಸಮಯ ಮಾಡಿಕೊಳ್ಳಿ. ಈ ಹಣತೆಯಲ್ಲಿ ನೀವು ಬೆಳಕನ್ನು ಕಂಡಿದ್ದರೆ ಹಣತೆ ಹಚ್ಚಿದ ನಾನು ತೃಪ್ತ. ನಿಮ್ಮ ಬೆಳಕನ್ನೂ ಹಂಚಿಕೊಳ್ಳಿ.
-ಸಂ
ಕನ್ನಡ ಸಾಹಿತ್ಯದಲ್ಲಿ ಹಣತೆ, ಬೆಳಕು ಎಂಬ ವಿಷಯವಸ್ತುವನ್ನು, ಕಲ್ಪನೆಯನ್ನು ನೂರಾರು ವರ್ಷಗಳಿಂದ ಕವಿ ಮತ್ತು ಕಥೆಗಾರರು ಬಳಸುತ್ತ ಬಂದಿದ್ದಾರೆ. ಅನಾದಿಕಾಲದಿಂದಲೂ ಬೆಂಕಿ ಮತ್ತು ಅದು ಹೊರ ಹೊಮ್ಮುವ ಬೆಳಕು ನಮ್ಮ ಆಸಕ್ತಿಯನ್ನು ಕೆರಳಿಸಿದೆ. ಅಲ್ಲಿ ಒಂದು ಆಕರ್ಷಣೆಯಿದೆ, ಸೆಳೆತವಿದೆ. ಅದರ ಬಗ್ಗೆ ಭಯ ಗೌರವಗಳಿವೆ. ಇವು ಮನುಷ್ಯವರ್ಗವಲ್ಲದೆ ಇತರ ಜೀವಿಗಳಲ್ಲೂ ಇದೆ. ‘ಬೆಳಕು’ ಎಂಬ ಶಬ್ದ ಹಲವಾರು ಭಾವನೆಗಳನ್ನು ಉಂಟುಮಾಡುತ್ತದೆ. ಕತ್ತಲು ಮತ್ತು ಬೆಳಕಿನ ನಡುವೆ ಒಂದು ವೈರುಧ್ಯವಿದೆ. 'ಬೆಂಕಿಯಲ್ಲಿ ಅರಳಿದ ಹೂ' ಎನ್ನುವ ಅಭಿವ್ಯಕ್ತಿಯಲ್ಲೇ ಅದೆಷ್ಟೋ ಭಾವನೆಗಳನ್ನು, ವೈರುಧ್ಯವನ್ನು ಕಾಣಬಹುದು. ನಮ್ಮ ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಇವುಗಳ ನಮ್ಮ ಕಾವ್ಯ ಕಲ್ಪನೆಗಳಲ್ಲಿ ವಿಜೃಂಭಿಸಿವೆ. ಪ್ರಪಂಚದ ನಾನಾ ಭಾಷೆಗಳ ಸಾಹಿತ್ಯದಲ್ಲಿ ಹಣತೆ ಅಥವಾ ದೀಪವನ್ನು ಒಂದು ಪ್ರತಿಮೆ, ಉಪಮೆ ಮತ್ತು ರೂಪಕವಾಗಿ ಬಳಸಿಕೊಂಡು ಬೆಳಕಿನ ಬೆಲೆಯನ್ನು ಅದರ ಹಿರಿಮೆಯನ್ನು ಕುರಿತು ಕವಿ ಕಥೆಗಾರರು ಬರೆದಿದ್ದಾರೆ.
ಹಣತೆ ಬೆಳಕಿನ ಸಂಕೇತ ಅಷ್ಟೇ ಅಲ್ಲ ಅದು ಅರಿವಿನ ಪ್ರತಿಮೆಯಾಗಿಯೇ ಹೆಚ್ಚುನಿಲ್ಲುವುದು. ಆ ಬೆಳಕಿನಲ್ಲಿ ಒಂದು ಶಕ್ತಿ ಇದೆ, ಆದುದರಿಂದಲೇ ಅದನ್ನು ನಾವು ದೇವ, ದೇವತೆಗಳಿಗೆ, ಅಳಿದವರಿಗೆ ನೆನಪಿನ ಗೌರವದ ಸೂಚಕವಾಗಿ ಬೆಳಗುತ್ತೇವೆ. ದೀಪವನ್ನು ಹಚ್ಚುವುದರ ಮೂಲಕ ಕಾರ್ಯಕ್ರಮವನ್ನು ಶುರುಮಾಡುತ್ತೇವೆ. ಆ ಜ್ಯೋತಿಯಲ್ಲಿ ಪವಿತ್ರತೆಯನ್ನು ಕಂಡು ಮಂಗಳಾರತಿಯಾಗಿ ಸ್ವೀಕರಿಸುತ್ತೇವೆ. ಚರ್ಚುಗಳಲ್ಲಿ ಮೇಣದ ಬತ್ತಿಯನ್ನು ಹಚ್ಚುತ್ತೇವೆ. ಕಡ್ಡಿ ಗೀಚಿದ ಕೂಡಲೇ ಶೂನ್ಯದಿಂದ ಹಠಾತ್ತನೆ ಮೂಡುವ ಬೆಂಕಿ, ಜ್ಯೋತಿ, ಬೆಳಕು ನಿಗೂಢವಾದದ್ದು ಮತ್ತು ಅತ್ಯಂತ ವಿಸ್ಮಯಕಾರಿ. ಒಂದು ಹಣತೆಯಿಂದ ಇನ್ನೊಂದು ಹಣತೆಗೆ ಹಬ್ಬುತ್ತಾ ಹೆಚ್ಚಾಗುವ ಬೆಳಕಿನ ಗುಣ ಮೆಚ್ಚುವಂತಹುದು. ಈ ಹಣತೆಯಲ್ಲಿ ನಮ್ಮ ನಿಮ್ಮ ಬದುಕಿನಂತೆ ಕೊಂಡಿಗಳಿರುತ್ತವೆ. ಒಂದು ಇನ್ನೊಂದನ್ನು ಅವಲಂಬಿಸಿರುತ್ತದೆ. ಹಣತೆಯಲ್ಲಿ ತೈಲವಿರಬೇಕು, ಆ ತೈಲದಲ್ಲಿ ಬತ್ತಿ ಕುಳಿತಿರಬೇಕು, ತೈಲವಿರುವವರೆಗೂ ಆ ಬತ್ತಿ ಉರಿಯುವುದು. ವಚನ ಸಾಹಿತ್ಯದಲ್ಲಿ ಅಲ್ಲಮ ಪ್ರಭುಗಳು ತಮ್ಮ ವಚನಗಳಲ್ಲಿ ಅನೇಕ ಉತ್ಕೃಷ್ಟ ಉಪಮೆಗಳನ್ನು ಬಳಸಿದ್ದಾರೆ. ಅವರು ಹಣತೆಯನ್ನು ಪ್ರಣತಿ ಎಂದು ಕರೆದಿದ್ದು, ತೈಲ ಎಣ್ಣೆ ಬತ್ತಿಯ ಸಂಬಂಧವನ್ನು ತಮ್ಮ ಒಂದು ವಚನದಲ್ಲಿ ಬಳಸಿದ್ದಾರೆ, ಅದು ಹೀಗಿದೆ;
ಪ್ರಣತೆಯೂ ಇದೆ ಬತ್ತಿಯೂ ಇದೆ;
ಜ್ಯೋತಿಯು ಬೆಳಗುವೆಡೆ,
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ?
ಎಣ್ಣೆ, ಬತ್ತಿ, ಮತ್ತು ಹಣತೆಯ ಬಗ್ಗೆ ಸಿನಿಮಾ ಸಾಹಿತ್ಯದಲ್ಲಿ ಮೂಡಿಬಂದ ಒಂದೆರಡು ಸಾಲು ಸೊಗಸಾಗಿದೆ. 'ಕನ್ನಡ ಕುಲದೇವಿ ಕಾಪಾಡು ತಾಯಿ' ಎಂದು ಶುರುವಾಗುವ ಸ್ಕೂಲ್ ಮಾಸ್ಟರ್ ಗೀತೆಯಲ್ಲಿ ವಿಜಯ ಭಾಸ್ಕರ್ ಬರೆದ ಸಾಲುಗಳು ಹೀಗೆದೆ;
"ಯಾವ ಎಣ್ಣೆಯಾದರೂ ಬೆಳಗುವುದು ಗುರಿಯೆಂಬ
ತತ್ವವನು ನೀನೆತ್ತಿ ತೋರು ಬಾ ತಾಯೆ"
ನಮ್ಮ ಅನಿವಾಸಿ ಬಳಗದ ಲೇಖಕ ಕವಿ ಡಾ ಕೇಶವ್ ಕುಲಕರ್ಣಿಯವರು ದೀಪಾವಳಿಯಂದು ಹಂಚಿಕೊಂಡ ಕವಿತೆಯೊಂದು ಹೀಗಿದೆ;
ಜಗಮಗಿಸುವ
ಕಣ್ಣುಕುಕ್ಕುವ
ನೂರಾರು ಬಣ್ಣ ಬದಲಿಸುವ
ಈ ಸಾಲು ಸಾಲು
ಎಲ್-ಈ-ಡಿ ಲೈಟುಗಳ ನಡುವೆ
ನನ್ನ ಹಣತೆ ಯಾರಿಗೂ ಕಾಣುವುದಿಲ್ಲ
ಎಂದು ನನಗೆ ಚೆನ್ನಾಗಿ ಗೊತ್ತು
ಆದರೂ
ತವರಿನಿಂದ ತಂದ ಬತ್ತಿಗೆ
ಊರಿಂದ ತಂದ ತುಪ್ಪ ಹಾಕಿ
ಅಜ್ಜಿಯಿಂದ ಬಳುವಳಿಯಾದ ಹಣತೆಗೆ
ಮಗನಿಂದ ದೀಪ ಹಚ್ಚಿಸಿ
ದೀಪಾವಳಿ ಆಚರಿಸುತ್ತೇನೆ
ಇಲ್ಲಿ ಆಧುನಿಕ ಎಲ್-ಈ-ಡಿ ದೀಪಗಳನ್ನು ಮತ್ತು ಹಳೆಯ ಹಣತೆಯನ್ನು ಜೊತೆಗಿಟ್ಟು ಹಳತು ಮತ್ತು ಹೊಸತರ ನಡುವಿನ ಸಂಬಂಧವನ್ನು ಕವಿ ಕೇಶವ್ ಅನ್ವೇಷಿಸಿದ್ದಾರೆ. ಎಲ್ -ಈ -ಡಿ ಲೈಟುಗಳಿಗೆ ಬಣ್ಣ ಬದಲಿಸುವ ಗುಣವಿದೆ, ಅಲ್ಲಿ ತೋರ್ಪಡಿಕೆ ಇದೆ. ಅಲ್ಲಿ ಬಹಿರಂಗ ಪ್ರದರ್ಶನಕ್ಕೆ ಹೆಚ್ಚು ಅವಕಾಶವಿದೆ. ಇವುಗಳನ್ನು ಹತ್ತಿರ ಹೋಗಿ ಸ್ಪರ್ಶಸಿದಾಗ ಮಾತ್ರ ಇವು ತಣ್ಣಗೆ ಉರಿಯುವ ಲೈಟುಗಳೇ ಹೊರತು ಇಲ್ಲಿ ಬೆಚ್ಚನೆಯ ಅನುಭವವಿಲ್ಲ ಎಂಬುದು ತಿಳಿಯುತ್ತದೆ. ಎಣ್ಣೆ ಬತ್ತಿ ಇರುವ ಹಳೆ ಹಣತೆಗೆ ಘನತೆ, ಬಾಂಧವ್ಯ, ಪರಂಪರೆ, ಒಂದಿಷ್ಟು ಇತಿಹಾಸ, ಅನುಭವ, ಮತ್ತು ಬಣ್ಣ ಬದಲಿಸಿದಂತೆ ಒಂದೇ ರೀತಿಯ ಬೆಳಕನ್ನು ನೀಡುವ ಸಾಮರ್ಥ್ಯವಿದೆ. ಎಣ್ಣೆ ಇರುವವರೆಗೂ ಶ್ರದ್ಧೆಯಿಂದ ಉರಿಯುವ ಮತ್ತು ಸುಡುವ ಶಕ್ತಿ ಇದೆ. ಅದರ ಹಿಂದೆ ಅನೇಕ ಕಥೆ, ಕವನಗಳಿವೆ. ಈ ಬಣ್ಣ ಬದಲಿಸುವ, ಬೂಟಾಟಿಕೆ ಪ್ರಪಂಚದಲ್ಲಿ ಅಬ್ಬರಗಳ ನಡುವೆ ಹಣತೆ ಕಾಣದಾಗಿದೆ ಎಂಬುದು ವಿಷಾದದ ಸಂಗತಿ. ಈ ಕವನ ನಮ್ಮ ವಾಸ್ತವ ಬದುಕಿಗೆ ಕನ್ನಡಿ ಹಿಡಿದಿದೆ.
ಬಿ ಎಂ ಶ್ರೀ ಅವರು 'ಕರುಣಾಳು ಬಾ ಬೆಳಕೇ' ಎಂಬ ಅನುವಾದಿತ ಕವಿತೆಯಲ್ಲಿ ಮುಸಿಕಿದ ಮಬ್ಬಿನಲ್ಲಿ ಕೈ ಹಿಡಿದು ನಡೆಸುವಂತೆ ಬೆಳಕನ್ನು ಬೇಡಿಕೊಳ್ಳುವ ಪ್ರಾರ್ಥನೆಯಿದೆ. ಈ ಮೂಲ ಕವಿತೆಯನ್ನು ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಇಂಗ್ಲಿಷ್ ಪಾದ್ರಿ ಮತ್ತು ಕವಿ ಜಾನ್ ಹೆನ್ರಿ ನ್ಯೂಮನ್ Lead, Kindly Light ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾನೆ. ಈ ಕವಿತೆಯನ್ನು ಬರೆದ ಹಿನ್ನೆಲೆ ಎಂದರೆ 1833 ಯಲ್ಲಿ ನ್ಯೂ ಮ್ಯಾನ್ ಇಟಲಿಯ ಪಲೆರ್ಮೊ ಎಂಬ ನಗರದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದು ಆತ ಇಂಗ್ಲೆಂಡಿಗೆ ತುರ್ತಾಗಿ ಮರಳಬೇಕಾಗಿರುತ್ತದೆ. ಅವನು ಹಿಂದಿರುಗುವಾಗ ಸಮುದ್ರಮಾರ್ಗದಲ್ಲಿ ಮಬ್ಬು ಕವಿದು ಗಾಳಿ ಸ್ಥಬ್ದವಾಗಿ ಹಡಗು ಚಲಿಸಲಾರದೆ ನಿಂತುಕೊಂಡು ಬಿಡುತ್ತದೆ. ಆ ಒಂದು ಅನಿಶ್ಚಿತ ಸನ್ನಿವೇಶದಲ್ಲಿ ನ್ಯೂಮನ್ ಈ ಕವಿತೆಯನ್ನು ರಚಿಸಿದ್ದಾನೆ. ಅದರ ಅನುವಾದ ಹೀಗಿದೆ;
ಕರುಣಾಳು ಬಾ ಬೆಳಕೆ ಮುಸುಕಿದಿ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯಾ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು
ಹೇಳಿ ನನ್ನಡಿ ಇಡಿಸು ಬಲು ದೂರ ನೋಟವನು
ಕೇಳಿದೊಡನೆಯೆ ಸಾಕು ನನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು
ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು
ಮುಂದೆಯೂ ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯ?
ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ
ಈ ಕವಿತೆಯನ್ನು ಮುಂದಕ್ಕೆ ವಿಸ್ತರಿಸಿನೋಡುವುದಾದರೆ, ಈ ಕವಿತೆಯಲ್ಲಿ ನ್ಯೂಮನ್ ತನ್ನ ನಂಬಿಕೆಗಳನ್ನು ಮತ್ತೆ ಅವಲೋಕಿಸುತ್ತಾನೆ. ಕರುಣಾಳು ಬೆಳಕು ಇಲ್ಲಿ ಅದ್ವಿತೀಯವಾದ, ಅಗೋಚರವಾದ ಶಕ್ತಿ ಅಥವಾ ದೈವತ್ವದ ಕಲ್ಪನೆ.
ಇದು ಒಂದು ಅಂತರಂಗದ ಅನ್ವೇಷಣೆಯೂ ಆಗಿದೆ. ನನ್ನಲ್ಲಿ ದೂರದೃಷ್ಟಿಯನ್ನಿಡಿಸು ಆದರೆ ನನಗೆ ಈಗ ಬೇಕಾಗಿರುವುದು ಸಣ್ಣ ಹೆಜ್ಜೆ, ನನಗೆ ಅದೇ ಸಾಕು ಎನ್ನುವ ಸಾಲುಗಳು ನಮ್ಮ ಮನುಷ್ಯ ಪ್ರಯತ್ನದ ಇತಿಮಿತಿಗಳನ್ನು ಇಲ್ಲಿ ನೆನಪಿಸುತ್ತದೆ. ದೂರದ ತಾರೆಗಳನ್ನು ಹಿಡಿಯುವುದಕ್ಕೆ ಮುನ್ನ ಕೈಯಲ್ಲಿರುವ ಹಣತೆಗೆ ಬತ್ತಿ, ಎಣ್ಣೆಯನ್ನು ಹುಡುಕುವುದು ಸರಿಯಾದ ವಿಚಾರವೆಂದು ಇನ್ನೊಬ್ಬ ಕವಿ ಹೇಳುತ್ತಾರೆ. ಹಿಂದೆ ನಾನು ನಿನ್ನನ್ನು ಬೇಡದೆ ಹೋದೆ, ಇದುವರೆವಿಗೂ ನನ್ನ ದಾರಿಯನ್ನು ನಾನೇ ಕಂಡುಕೊಳ್ಳಲು ಪ್ರಯತ್ನಿಸಿದೆ ಎನ್ನುವ ಸಾಲುಗಳು ಸ್ವಪ್ರಯತ್ನದ ಅನಿವಾರ್ಯತೆ ಮತ್ತು ಅವಶ್ಯಕತೆಯನ್ನು ಎತ್ತಿಹಿಡಿಯುತ್ತದೆ. ಎಲ್ಲ ಸಮಸ್ಯೆಗಳಿಗೆ ನಂಬಿಕೆ ಅಷ್ಟೇ ಸಾಲದು, ನಮ್ಮ ಬದುಕನ್ನು ನಾವೇ ನಡೆಸಬೇಕು ಎಂಬುದು ನಿಜ. ನಮ್ಮಲ್ಲಿರುವ ಗರ್ವ ಅಹಂಕಾರ ಮೂರ್ಖತನ ನಮ್ಮ ಆತ್ಮವಿಶ್ವಾಸಗಳನ್ನು ಹಿಡಿದಿಟ್ಟಿರುತ್ತವೆ ಆದರೆ ಯಾವುದೋ ಒಂದು ಆತಂಕದ ಘಳಿಗೆಯಲ್ಲಿ ಅದು ಸಾಲದೇ ಹೋಗಬಹುದು. ಇಂತಹ ಒಂದು ಸನ್ನಿವೇಶದಲ್ಲಿ ಆ ಕರುಣಾಳು ಆ ಬೆಳಕು ನಮ್ಮನ್ನು ಕಷ್ಟಗಳೆಂಬ ಅಡವಿ, ಬೆಟ್ಟ ಮತ್ತು ಹೊಳೆಗಳನ್ನು ದಾಟಿಸಿ ಕೈ ಹಿಡಿದು ನಡೆಸಬೇಕಾಗುತ್ತದೆ. ಇರುಳು ಕಳೆದು ಆ ದೈವತ್ವದ ಚಹರೆಗಳು ಕೊನೆಗೂ ಕಾಣಿಸಿಕೊಂಡವು ಎಂಬ ಹಾರೈಕೆಯಲ್ಲಿ ಈ ಕವನ ಮುಕ್ತಾಯಗೊಳ್ಳುತ್ತದೆ. ಈ ಕವಿತೆ ಆಂಗ್ಲ ಭಾಷೆಯ ಸ್ತುತಿ ಗೀತೆಯಾಗಿ ಜನಪ್ರೀಯವಾಗಿದೆ. ಈ ಕವಿತೆಯನ್ನು ಇಂಗ್ಲೆಂಡಿನಲ್ಲಿ ಕಲ್ಲಿದ್ದಲು ಗಣಿ ಕುಸಿದಾಗ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ಗಣಿ ಕೆಲಸಗಾರರು ಈ ಗೀತೆಯನ್ನು ಹಾಡಿದ್ದರು. ಟೈಟಾನಿಕ್ ಎಂಬ ಹಡಗು ಅಟ್ಲಾಂಟಿಕ್ ಸಮುದ್ರದ ನಡುವೆ ಮುಳುಗಡೆಯಾಗುವ ಸಮಯದಲ್ಲಿ ಇನ್ನೊಂದು ದೊಡ್ಡ ರೆಸ್ಕ್ಯೂ ಹಡಗಿನ ನಿರೀಕ್ಷೆಯಲ್ಲಿ ಚಿಕ್ಕ ರೆಸ್ಕ್ಯೂ ದೋಣಿಯಲ್ಲಿ ನಡುರಾತ್ರಿ ಕಳೆದ ಪಯಣಿಗರು ಈ ಸ್ತುತಿ ಗೀತೆಯನ್ನು ಹಾಡುತ್ತ ಇರುಳನ್ನು ನೂಕಿದರು. ನಮ್ಮ ಭಾರತದ ಹಲವಾರು ಶಾಲಾ ಕಾಲೇಜುಗಳಲ್ಲಿ ಈ ಸ್ತುತಿಗೀತೆಯನ್ನು ದೈನಂದಿಕ ಪ್ರಾರ್ಥನೆಯಾಗಿ ಅಳವಡಿಸಿಕೊಳ್ಳಲಾಗಿದೆ. ಇದು ಕನ್ನಡ ಭಾವಗೀತೆಯಾಗಿಯೂ ಜನಪ್ರೀಯವಾಗಿದೆ.
ಬೆಳಕು ಆರಿದಾಗ ಆವರಿಸುವ ಅಂಧಕಾರ ತಲ್ಲಣವನ್ನು ಉಂಟುಮಾಡುವಂತಹುದು. ಬೆಳಕು ಆರುವುದನ್ನು ಸಾವಿನೊಂದಿಗೆ ರೂಪಕವಾಗಿ ಸಾಹಿತ್ಯದಲ್ಲಿ ಮತ್ತು ಚಿತ್ರರಂಗದಲ್ಲಿ ಬಳಸಲಾಗುತ್ತಿದೆ. ಅದು ಮತ್ತೆ ಆವರಿಸುವ ಅಜ್ಞಾನದ ಸಂಕೇತವೂ ಆಗಿರಬಹುದು. ಖ್ಯಾತ ಕವಿ ಕೆ ಎಸ್ ನರಸಿಂಹಸ್ವಾಮಿ ಅವರ ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು ಎಂಬ ಪ್ರಖ್ಯಾತ ಕವಿತೆಯ ಈ ಹಿನ್ನೆಲೆಯಲ್ಲಿ ಈ ಕೆಳಗಿನ ಸಾಲುಗಳನ್ನು ಇಲ್ಲಿ ಗಮನಿಸುವುದು ಸೂಕ್ತ:
ದೀಪವು ನಿನ್ನದೇ ಗಾಳಿಯು ನಿನ್ನದೆ ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ ಮುಳುಗದಿರಲಿ ಬದುಕು
ಕೆ ಎಸ್ ಎನ್ ಅವರ ಕವಿತೆಗಳ ತುಂಬಾ ಜೀವನೋತ್ಸಾಹ, ಜೀವನ ಪ್ರೀತಿ ತುಂಬಿ ತುಳುಕುತ್ತಿರುವುದನ್ನು ಕಾಣಬಹುದು. ಆ ಹಿನ್ನೆಲೆಯಲ್ಲೂ ಈ ಸಾಲುಗಳನ್ನು ನಾವು ಅರ್ಥೈಸಿಕೊಳ್ಳ ಬಹುದು. ಈ ಕವಿತೆ ಹಲವಾರು ಆಶಯಗಳಿಂದ ತುಂಬಿದೆ.
ಪುರುಷ ಪ್ರಧಾನವಾದ ಸಮಾಜದಲ್ಲಿ, ಶೋಷಣೆಗೆ ಒಳಗಾಗಿ, ಎಲ್ಲರಿಂದ ತಿರಸ್ಕೃತಳಾಗಿ ಪ್ರೀತಿಯನ್ನು ಕಳೆದುಕೊಂಡು ತನ್ನಲ್ಲಿನ ಆತ್ಮವಿಶ್ವಾಸವೆಂಬ ಎದೆಯ ಹಣತೆ ಸಂಪೂರ್ಣವಾಗಿ ಬತ್ತಿಹೋಗಿ ಬದುಕಿನಲ್ಲಿ ಕವಿಯುವ ಅಂಧಕಾರವನ್ನು ನಿಭಾಯಿಸಲಾಗದ ದಾರುಣ ಕಥೆಯಲ್ಲಿ ಲೇಖಕಿ ಬಾನು ಮುಷ್ತಾಕ್ ಹಣತೆ, ಎದೆಯ ಹಣತೆ ಎಂಬ ರೂಪಕವನ್ನು ಬಳಸಿದ್ದಾರೆ. ಅದು ಕಥೆಯ ಶೀರ್ಷಿಕೆಯೂ ಆಗಿದೆ. ಬದಲಾಗುವ ಸನ್ನಿವೇಶದಲ್ಲಿ ಛಲವನ್ನು ಮತ್ತೆ ರೂಢಿಸಿಕೊಂಡು ಎದ್ದುನಿಲ್ಲುವ ನಾಯಕಿಯೊಳಗಿನ ಎದೆಯ ಹಣತೆ ಮತ್ತೆ ಹತ್ತಿ ಉರಿಯಿತೇ ಎನ್ನುವುದನ್ನು ಓದುಗರಿಗೆ ಬಾನು ಬಿಟ್ಟಿರುತ್ತಾರೆ. ಇದೇ ಕೃತಿಯನ್ನು ದೀಪಾ ಬಾಷ್ಟಿ ಅವರು ಇಂಗ್ಲಿಷಿಗೆ ಅನುವಾದಿಸಿ 'ಹಾರ್ಟ್ ಲ್ಯಾಂಪ್' ಎಂಬ ಕೃತಿಗೆ ಬುಕ್ಕರ್ ಪ್ರಶಸ್ತಿ ದೊರಕಿದೆ.
ಕನ್ನಡ ಕವಿ ಸೇಡಿಯಾಪು ಕೃಷ್ಣಭಟ್ಟರು ಒಂದು ಹೊರಗಿನ ಸಾಂಸ್ಕೃತಿಕ ಧಾಳಿಯ ಬಗ್ಗೆ ತಮ್ಮವರನ್ನು ಎಚ್ಚರಿಸಲು ದೀಪವನ್ನು ರೂಪಕವಾಗಿಟ್ಟುಕೊಂಡು ಎಣ್ಣೆ ಹುಯ್ಯುವ ದೀಪಕ್ಕೆ ಎನ್ನುತ್ತಾರೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಸನ್ನಿವೇಶದಲ್ಲಿ ಹಲವಾರು ಕಡೆ ಪಂಜಿನ ಮೆರವಣಿಗೆ ನಡೆದಿರುವುದನ್ನು ನೆನೆಯಬಹುದು. ಅದು ಒಗ್ಗಟಿನ ಸಂಕೇತವಾಗಿಯೂ ನಿಲ್ಲುತ್ತದೆ. ಕೃಷ್ಣ ಭಟ್ಟರ ಕವನದಲ್ಲಿ 'ಎಣ್ಣೆ ಹೊಯ್ಯುವ ದೀಪಕ್ಕೆ' ಎನ್ನುವುದು ಜಾಗೃತಿಯನ್ನು ಮೂಡಿಸುವ ಕರೆಯಾಗಿ ಕೇಳಿ ಬರುತ್ತದೆ. ಹೊರಗಿನ ಸಾಂಸ್ಕೃತಿಕ ಆಕ್ರಮಣವು ಬಿರುಗಾಳಿಯಾಗಿ ಗಿಡ ಮರ ಕೊಂಬೆಗಳನ್ನು ಬಡಿದಾಡಿಸುತ್ತಾ ಬಂದು ಆ ಬಿರುಗಾಳಿಯಲ್ಲಿ ಕಾರ್ಮೋಡಗಳು ಗಿರಿಯ ಅಂಚಿಗೆ ಮೆಟ್ಟಿ ಮಿಂಚಿನಂತೆ ಗಹಗಹಿಸುತ್ತದೆ. ನಮ್ಮಲ್ಲೇ ಇರುವ ಪ್ರೌಢ ಸಾಹಿತ್ಯವನ್ನು (ಹಿರಿಯರ ಸಂಧ್ಯಾವಂದನೆಯ ಸಾಹಿತ್ಯವನ್ನು) ಮುಂದಿನ ಪೀಳಿಗೆ ಕಡೆಗಣಿಸಿ ಮುಗ್ಗುರಿಸುತ್ತಿದೆ ಎನ್ನುವ ಬಗ್ಗೆ ಕವಿಗೆ ವಿಷಾದವಿದೆ. ಈ ಎಲ್ಲಾ ತಲ್ಲಣಗಳ ಹಿನ್ನೆಲೆಯಲ್ಲಿ ನಂದುತ್ತಿರುವ ದೀಪಕ್ಕೆ ಎಣ್ಣೆ ಹುಯ್ಯುವ ಎಂಬ ಆಶಯ ಮನೋಜ್ಞವಾಗಿ ಮೂಡಿಬಂದಿದೆ, ಆ ಕವಿತೆಯ ಸಾಲುಗಳು ಹೀಗಿವೆ;
ಹೊರಗಲ್ಲಿ ಗಿಡಮರಗಳ ಕೊಂಬೆರಂಬೆಗಳ್
ಬಡಿದಾಡಿಕೊಂಡು ಭೋರಿಡುತಲಿವೆ
ಪಡುಬಾನ ಕಾರ್ಮುಗಿಲು ಅರಿಲೊಂದೊಂದನೇ ಮೆಟ್ಟಿ
ಕಾಡುಮಿಂಚಿನಲಿ ಗಹ ಗಹಗಹಿಸುತಿದೆ
ಎಣ್ಣೆ ಹುಯ್ಯುವ ದೀಪಕ್ಕೆ!
ಹಸಿದ ಮಕ್ಕಳು ಬಟ್ಟಲೆನ್ನದು
ತನ್ನದೆಂದೆಳದಾಡಿಕೊಂಡು ಗುದ್ದಾಡುತ್ತಿವೆ
ಹಿರಿಯರ ಸಂಧ್ಯಾವಂದನೆಯ ಸಾಹಿತ್ಯವ
ಕಡಗಾಲೊಳೆಡವಿ ಚೆಲ್ಲಾಡುತ್ತಿವೆ
ಎಣ್ಣೆ ಹುಯ್ಯುವ ದೀಪಕ್ಕೆ!
ಜಿ ಎಸ್ ಎಸ್ ಅವರ ‘ನನ್ನ ಹಣತೆ’ ಕನ್ನಡ ಕಾವ್ಯಲೋಕದಲ್ಲಿನ ಗಮನಾರ್ಹವಾದ ಕವಿತೆ. ಅದನ್ನು ಪ್ರಾಜ್ಞರು ಅನೇಕ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಜಿ ಎಸ್ ಎಸ್ ಅವರ ಬಹುಪಾಲು ಕವಿತೆಗಳು ಸರಳವಾಗಿದ್ದು ಸಂಗೀತಕ್ಕೂ ಒದಗಿಕೊಂಡು ಜನಪ್ರೀಯ ಭಾವಗೀತೆಗಳಾಗಿವೆ. ಆದರೆ ‘ನನ್ನ ಹಣತೆ’ ಎಂಬುದು ಪ್ರಸಿದ್ಧ ಕವಿತೆಯಾಗಿಯೇ ಉಳಿದು ಸಾಹಿತ್ಯಾಸಕ್ತರ ಮೆಚ್ಚುಗೆಯನ್ನು ಪಡೆದುಕೊಂಡು ದೀಪಾವಳಿಯ ಆಸುಪಾಸಿನಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಂಕೀರ್ಣವಾಗಿರುವ ಕವಿತೆಯ ಹಲವಾರು ಸಾಲುಗಳಲ್ಲಿ ದೀಪಾವಳಿಯ, ಪಟಾಕಿಯ ಉಲ್ಲೇಖವಿದ್ದರೂ ಅದು ದೀಪಾವಳಿಯನ್ನು ಕುರಿತಾದ ಕವನವಲ್ಲ! ದೀಪಾವಳಿ ಹಬ್ಬವನ್ನು ಮತ್ತು ಅಲ್ಲಿಯ ಸಂಭ್ರಮಗಳನ್ನು ಕುರಿತಾದ ಬೇರೆ ಕವಿತೆಗಳನ್ನು ಜಿ ಎಸ್ ಎಸ್ ರಚಿಸಿದ್ದಾರೆ. ಆದುದರಿಂದ ಈ ಕವನವನ್ನು ಮೊದಲು ಗಮನಿಸಿ ನಂತರ ಅದರ ಬಗ್ಗೆ ಚರ್ಚೆ ಮಾಡೋಣ.
ನನ್ನ ಹಣತೆ
ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ
ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಿಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮುಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
ಸುಟ್ಟಿದ್ದೇವೆ.
"ತಮಸೋ ಮಾ ಜ್ಯೋತಿರ್ಗಮಯ" ಎನ್ನುತ್ತಾ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.
ನನಗೂ ಗೊತ್ತು ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ
ಎಷ್ಟೊಂದು ಬೆಳಕನ್ನು ಇದು ಉಟ್ಟರೂ ತೊಟ್ಟರೂ
ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.
ಆದರೂ ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ ಮತ್ತೆ
ನಾನು ಯಾರೋ.
ಈ ಕವಿತೆಯಲ್ಲಿ ಎರಡು ಮೂರು ವಿಚಾರಗಳು ಅಡಗಿವೆ. ಇಲ್ಲಿ ಕತ್ತಲೆ, ಅಜ್ಞಾನದ ಸಂಕೇತ. ಹಣತೆ ಮತ್ತು ಬೆಳಕು, ಜ್ಞಾನದ ಸಂಕೇತ. ಇಲ್ಲಿ ವಾಸ್ತವ ಪ್ರಜ್ಞೆ, ಜೀವನ ಪ್ರೀತಿ ಮತ್ತು ವ್ಯವಹಾರಿಕವಾದ ಚಿಂತನೆಗಳಿವೆ. ಒಟ್ಟಾರೆ ಮನುಷ್ಯ ಅನಾದಿಕಾಲದಿಂದಲೂ ಅಜ್ಞಾನದ ಜೊತೆ ಹೋರಾಡಿಕೊಂಡು, ಹಣತೆಯನ್ನು ಹಚ್ಚುತ್ತಾ ಬಂದಿದ್ದಾನೆ. ಈ ಹೋರಾಟವನ್ನು ಜಯಿಸಲು ಸಾಧ್ಯವೇ ಎನ್ನುವುದು ಮುಖ್ಯವಾದ ವಿಚಾರ. ಕವಿ ತಾನೂ ಹಣತೆ ಹಚ್ಚುವ, ಅಜ್ಞಾನವನ್ನು ತೊಲಗಿಸುವ ಪ್ರಯತ್ನವನ್ನು ಮಾಡುತ್ತಾರೆ. "ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ" ಎನ್ನುವ ಮೂಲಕ ಮನುಷ್ಯ ಪ್ರಯತ್ನಕ್ಕೆ ಮಿತಿ ಇದೆ ಅನ್ನುವುದನ್ನು ಕವಿ ಇಲ್ಲಿ ಒಪ್ಪಿಕೊಳ್ಳುತ್ತಾರೆ. ಹಿಂದೆ ಈ ಪ್ರಯತ್ನವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದ್ದು (ದೀಪಾವಳಿಯ ಹಡಗುಗಳು ಮುಳುಗಿದ್ದು) ಅದೂ ಕೂಡ ವಿಫಲವಾಗಿದೆ ಎನ್ನುವುದನ್ನು ನೆನಪಿಸುತ್ತಾರೆ. ಮುಂದಿನ ಪಂಕ್ತಿಯಲ್ಲಿ ಕವಿ, ಮನುಷ್ಯ ಈ ಅಜ್ಞಾನವನ್ನು ತೊಲಗಿಸಲು ಇಲ್ಲಿಯವರೆಗೆ ಏನೆಲ್ಲ ಪ್ರಯತ್ನಗಳನ್ನು ಕೈಗೊಂಡಿದ್ದಾನೆ ಎಂಬ ಪ್ರಶ್ನೆಯನ್ನು ಓದುಗರ ಮುಂದೆ ನಿಲ್ಲಿಸಿ, ನಾವು ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನ ಇವುಗಳನ್ನೆಲ್ಲಾ ಕೆದಕಿದ್ದೇವೆ, ಉತ್ತರವಂತೂ ಸಿಕ್ಕಿಲ್ಲ ಬದಲಾಗಿ 'ಬರೀ ಬೂದಿಯನ್ನೇ ಕಂಡಿದ್ದೇವೆ' ಎನ್ನುತ್ತಾರೆ. ಇಲ್ಲಿ ಕವಿ ಬದುಕಿನ ಒಳಾರ್ಥ, ಜೀವನದ ಮಹದೋದ್ದೇಶ ಇವುಗಳನ್ನು ಕುರಿತು ಚಿಂತಿಸುತ್ತಿರಬಹುದು. 'ಕತ್ತಲಿಗೆ ಕೊನೆಯಿಲ್ಲದ ಬಾಯಾರಿಕೆ' ಎಂದು ಹೇಳುವುದರ ಮೂಲಕ ನಮ್ಮ ಕಲ್ಪನೆಗೂ ಮೀರಿದ ಕತ್ತಲೊಂದಿದೆ ಅದು ಸರ್ವವ್ಯಾಪಿ 'ತಿಂದರೂ ಕುಡಿದರೂ, ಉಟ್ಟರೂ, ತೊಟ್ಟರು ಇದಕ್ಕೆ ಇನ್ನೂ ಬೇಕು, ಇನ್ನು ಬೇಕು ಎನ್ನುವ ಬಯಕೆ' ಎಂದು ಕವಿ ಹೇಳುತ್ತಿದ್ದಾರೆ. ಇಲ್ಲಿ, ವೈಜ್ಞಾನಿಕ ಪರಿಭಾಷೆಯಲ್ಲಿ ನೋಡುವುದಾದರೆ ಕಾಸ್ಮಿಕ್ ಬ್ಲಾಕ್ ಹೋಲ್ ಇಮೇಜ್ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಹೀಗಿದ್ದರೂ ಕವಿ ಹಣತೆ ಏಕೆ ಹಚ್ಚಬೇಕು? ಕವಿ ಹೇಳುತ್ತಾರೆ; "ಆದರೂ ಹಣತೆ ಹಚ್ಚುತ್ತೇನೆ ನಾನು; ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ"ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ" ಕವಿ ಇಲ್ಲಿ ವಾಸ್ತವ ಪ್ರಜ್ಞೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ನಮ್ಮ ಬದುಕಿನಲಿ ಇರುವಷ್ಟು ಹೊತ್ತು ನಾನು-ನೀನು (ನಾವು-ನೀವು) ಮುಖ ಕೆಡಸಿಕೊಳ್ಳದೆ, ಒಬ್ಬರು ಇನ್ನೊಬ್ಬರನ್ನು ಮುಖ ಮುಖಿಯಾಗಿ ನೋಡುವಷ್ಟು ಪ್ರೀತಿ ವಿಶ್ವಾಸಗಳನ್ನು, ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳೋಣ. ಏಕೆಂದರೆ ಅಳಿದ ಮೇಲೆ (ಹಣತೆ ಆರಿದ ಮೇಲೆ) ನೀನು ಯಾರೂ ಮತ್ತು ನಾನು ಯಾರೋ! ಮುಂದಕ್ಕೆ ಇನ್ನು ಯಾರೋ ಬಂದು ಅವರೂ ಹಣತೆ ಹಚ್ಚುತ್ತಾರೆ. ಹೀಗೆ ಮನುಷ್ಯ ಪ್ರಯತ್ನ ನಿರಂತರವಾಗಿ ಸಾಗುತ್ತದೆ.
ಇದು 'ನನ್ನ ಹಣತೆಯ'ಯನ್ನು ಕುರಿತಾದ ನನ್ನ ಒಂದು ವಿಶ್ಲೇಷಣೆ. ಜಿ ಎಸ್ ಎಸ್ ಅವರ ಕವಿತೆಯ ವಿಶೇಷವೆಂದರೆ ಅದು ಹಲವಾರು ದೃಷ್ಟಿ ಕೋನಗಳನ್ನು ತೆರೆದಿಡುತ್ತದೆ. ಆದುದರಿಂದ ಓದುಗರು ತಮ್ಮ ಕಲ್ಪನೆಗೆ ಒದಗುವ ವಿಶ್ಲೇಷಣೆಯನ್ನೂ ಕಟ್ಟಿಕೊಳ್ಳಬಹುದು.
ಕೊನೆಯದಾಗಿ 'ದೀಪಾವಳಿಯ ಹಣತೆ' ಎಂಬ ನನ್ನ ಕವನದೊಂದಿಗೆ ಈ ಬರಹವನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಅದೆಷ್ಟೋ ವೈಜ್ಞಾನಿಕ ಸತ್ಯಗಳು ಸಾಧು ಸಂತರು ಮಹಾಪುರುಷರು ಬಿಟ್ಟುಹೋದ ಬೆಳಕಿನ ರೂಪಕವಾಗಿ ನಿಂತಿರುವುದು ಅಚ್ಚರಿಯನ್ನು ಮೂಡಿಸುತ್ತದೆ. ಅದೆಷ್ಟೋ ವಿಚಾರಗಳು ಮೇಲ್ನೋಟಕ್ಕೆ ಭ್ರಮೆಯಾದರೂ ಅದು ನಿಖರವಾದ ಸತ್ಯ. ಎಲ್ಲರೊಳಗೊಂದು ದೀಪ ಉರಿಯುತ್ತಲೇ ಇರುತ್ತದೆ. ಆದರೆ ಆ ಅಂತರಂಗದ ಬೆಳಕನ್ನು ಕಾಣಲು ವಿಶೇಷ ಒಳನೋಟಗಳು ಬೇಕು. ಆ ಬೆಳಕನ್ನು ಇತರರೊಡನೆ ಹಂಚಿಕೊಳ್ಳಬೇಕು ಎನ್ನುವುದು ಈ ಕವಿತೆಯ ಮತ್ತು ಈ ಬರಹದ ಒಟ್ಟಾರೆ ಆಶಯ.
ದೀಪಾವಳಿಯ ಹಣತೆ
ಕಾರ್ತಿಕದ ಕಗ್ಗತ್ತಲಲ್ಲಿ
ಮುಗಿಲ ತುಂಬೆಲ್ಲಾ
ಮಿಣಕುವ ಬೆಳ್ಳಿ ನಕ್ಷತ್ರಗಳು
ಅಲ್ಲೊಂದು ಕಣ್ತಣಿಸುವ
ನೀರವ ದೀಪಾವಳಿ
ವಿಜ್ಞಾನಿಗಳು ಹೇಳುತ್ತಾರೆ;
“ಆ ನಕ್ಷತ್ರಗಳು ಉರಿದು ಬೂದಿಯಾಗಿವೆ
ನೀವೀಗ ಕಾಣುತ್ತಿರುವುದು
ಅದು ಹೊಮ್ಮಿಸಿದ ಬೆಳಕನ್ನಷ್ಟೆ"
ದೀಪ ಉರಿದಿದ್ದು ಅಂದು
ಬೆಳಕು ಕಾಣುತ್ತಿರುವುದು ಇಂದು!
ಇದು ಭ್ರಮೆಯಲ್ಲ, ನಿಖರ ಸತ್ಯ
ಕವಿಗಳು, ವಿಜ್ಞಾನಿಗಳು, ಸಂತರು
ಹಣತೆಯನ್ನು ಹಚ್ಚಿದ್ದಾರೆ
ಆ ಹಣತೆ ಆರಿಹೋಗಿದ್ದರೂ
ಅದರ ಬೆಳಕು ಇಂದಿಗೂ ಕಾಣುತ್ತಿದೆ,
ನಕ್ಷತ್ರದ ಬೆಳಕಿನಂತೆ.
ಇದು ಭ್ರಮೆಯಲ್ಲ, ನಿಖರ ಸತ್ಯ
ಜಡಗಟ್ಟಿದ ಚಿತ್ತದಲ್ಲಿ
ಅಂಧಕಾರದ ಆಳದಲ್ಲಿ
ನಾವು ಹಚ್ಚಿಕೊಂಡ ಒಳಗಿನ ದೀಪ
ನಮಗೇ ಕಾಣಿಸಲು ಸಮಯಬೇಕು
ನಾವು ಹಚ್ಚುವ ದೀಪ ನಮಗಷ್ಟೇ ಅಲ್ಲ,
ಮುಂದೊಮ್ಮೆ ಇತರರಿಗೂ
ಕಾಣಿಸಬಹುದೆಂಬ ಭರವಸೆಯಿಂದ
ಬನ್ನಿ ಹಚ್ಚೋಣ ದೀಪಾವಳಿಯ ಹಣತೆ
ಜಿ ಎಸ್ ಎಸ್ ಅವರ 'ನನ್ನ ಹಣತೆಯ'ಕೆಲವು ಆಯ್ದ ಸಾಲುಗಳ ಭಾವಾನುವಾದವನ್ನು ಕವಿ ಡಾ ಶ್ರೀವತ್ಸ ದೇಸಾಯಿ ಅವರು ಕೈಗೊಂಡಿದ್ದು ಅದು ಹೀಗಿದೆ;
I know, this darkness has such endless thirst
That no one can quench!
No matter what amount of light it is draped in or is fed or it devoured
Still wants more and more!
But yet, I light a clay lamp, Me too,
Not that I will transcend the darkness,
As long as we are together
I can see your face
And so can you mine, that is the sole desire
After the lamp breathes its last
We remain as just strangers
Unknown to each other!

ಫೋಟೋ ಕೃಪೆ: ಡಾ ಶ್ರೀವತ್ಸ ದೇಸಾಯಿ








