ಸಹೃದಯಿ ಅನಿವಾಸಿ ಬಳಗಕ್ಕೆ ನಮಸ್ಕಾರ. ಪ್ರೆಸ್ಟನ್ನಿನ ಕುಚಿಪುಡಿ ನೃತ್ಯಗಾತಿಯರ ಬಗ್ಗೆ ಮುಂಚೆಯೇ ಬರೆದಿದ್ದೆ. ಅದೇ ಥೀಮನ್ನು ಮುಂದುವರೆಸುತ್ತ, ಇಲ್ಲಿನ ಭರತನಾಟ್ಯದ ತರಗತಿಗಳನ್ನು ಪರಿಚಯಿಸುತ್ತಿರುವೆ, ಆದರೆ ಈ ಬಾರಿ ಸ್ವತಃ ಅಲ್ಲಿ ಉತ್ಸಾಹಿ ವಿದ್ಯಾರ್ಥಿನಿಯಾಗಿರುವ ಶಿಲ್ಪಾ ಜಗದೀಶ್ ಅವರ ಮೂಲಕ. ಎಂದಿನಂತೆ ಓದಿ, ಪ್ರತಿಕ್ರಯಿಸಿ; ಮೊದಲ ಬಾರಿಗೆ ಅನಿವಾಸಿಗೆ ಬರೆಯುತ್ತಿರುವ ಶಿಲ್ಪಾ ಅವರನ್ನು ಪ್ರೋತ್ಸಾಹಿಸಿರೆಂದು ಕೋರುವ - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).
*****************************************

ಮೈಸೂರಿನಲ್ಲಿ ಹುಟ್ಟಿ, ಮಂಗಳೂರಿನಲ್ಲಿ ಬೆಳೆದು, ಈಗ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಇಂಗ್ಲಂಡಿನಲ್ಲಿ ನೆಲೆಸಿರುವ ಶಿಲ್ಪಾ ಜಗದೀಶ್ ವೃತ್ತಿಯಿಂದ ಸಂಧಿವಾತಶಾಸ್ತ್ರ (Rheumatologist) ವೈದ್ಯೆ ಮತ್ತು ಪ್ರವೃತ್ತಿಯಿಂದ ಭರತನಾಟ್ಯ ವಿದ್ಯಾರ್ಥಿನಿ. ಓದುವ ಮತ್ತು ಆಗಾಗ ಬರೆಯುವ ಗೀಳು ತಂದೆಯಿಂದ ಬಂದದ್ದು ಎಂದು ಅವರ ನಂಬಿಕೆ.
*****************************************
ಪ್ರೆಸ್ಟನ್ ಭಾರತೀಯ ನೃತ್ಯ ಪರಂಪರೆ, ಭಾಗ ೨: ಭರತನಾಟ್ಯ
ಭರತಮುನಿ ವಿರಚಿತ ನಾಟ್ಯಶಾಸ್ತ್ರ ಭಾರತೀಯ ಕಲೆಗಳ ಮೂಲಗ್ರಂಥ. ಅದನ್ನು ಆಧರಿಸಿ ಪ್ರಚಲಿತವಾಗಿರುವ ಭಾರತೀಯ ನೃತ್ಯಪರಂಪರೆಯಲ್ಲಿ ಭರತನಾಟ್ಯ ಒಂದು ಪ್ರಸಿದ್ಧ ಪ್ರಕಾರ.
ಭರತನಾಟ್ಯದ ನಾಲ್ಕು ಪ್ರಸಿದ್ಧ ಶೈಲಿಗಳಲ್ಲಿ ಮೈಸೂರು ಶೈಲಿಯೂ ಒಂದು. ಕಲಾಕ್ಷೇತ್ರ, ಪಂದನಲ್ಲೂರು ಮತ್ತು ತಂಜಾವೂರು ಶೈಲಿಗಳು ಭರತನಾಟ್ಯದ ಉಗಮ ಸ್ಥಾನವಾದ ತಮಿಳುನಾಡಿನಲ್ಲಿ ಉದಯಿಸಿದವು.
ಅಂದಿನ ಕಾಲದಲ್ಲಿ ರಾಜಾಶ್ರಯದಲ್ಲಿ ಏಳಿಗೆ ಪಡೆದ ಭರತನಾಟ್ಯ ಇಂದು ಆಸಕ್ತ ಗುರುಗಳಿಂದ ಅಭಿವೃದ್ಧಿ ಹೊಂದುತ್ತಿದೆ.
ಪ್ರೆಸ್ಟನ್ನಿನ ಗುಜರಾತ್ ಹಿಂದೂ ಸೊಸೈಟಿಯ ದೇವಸ್ಥಾನದಲ್ಲಿ ಭರತನಾಟ್ಯ ಕಲಿಸುತ್ತಿರುವ ಗುರು ಡಾ|| ಸ್ವಾತಿ ರಾವುತ್ ನನ್ನ ಗುರುಗಳು. ಬುಧವಾರ ಗೂಧೂಳಿಯ ಸಮಯದಲ್ಲಿ (ಸಾಯಂಕಾಲ) ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿಗಳ ಆಸಕ್ತಿ ಅರಿತು ಪೋಷಿಸುವುದಲ್ಲಿ ಅವರು ಕರಗತರು. ಪ್ರೆಸ್ಟನ್ ಅಲ್ಲದೆ ವಿಗನ್ ಮತ್ತು ಲಿವರ್ಪೂಲ್‍ನಲ್ಲಿಯೂ ಅವರು ಭರತನಾಟ್ಯ ಕಲಿಸುತ್ತಾರೆ. ಕಳೆದ ಎರಡು ದಶಕಗಳಿಂದ ಈ ನೃತ್ಯ ಪ್ರಕಾರದ ಏಳಿಗೆಗೆ ಅವಿರತ ಶ್ರಮಿಸಿದ್ದಾರೆ. ಸ್ವಾತಿ ಡಾನ್ಸ್ ಅಕಾಡೆಮಿ ಕಟ್ಟಿ ತಾರತಮ್ಯವಿಲ್ಲದೆ ಎಲ್ಲಾ ವಯಸ್ಸಿನ ಶಿಷ್ಯರಿಗೂ ನಾಟ್ಯಸುಧೆ ಉಣಿಸುತಿದ್ದಾರೆ. ಶಿಷ್ಯರ ಸರ್ವಾoಗೀಣ ವ್ಯಕ್ತಿತ್ವ ಅಭಿವೃದ್ಧಿಗೆ ಪೂರಕ ವಾತಾವರಣ ತರಗತಿಗಳಲ್ಲಿ ಇರುತ್ತದೆ.
ನೃತ್ಯಕ್ಷೇತ್ರದ ಹಲವು ಉಪಾಧಿಗಳು ಅವರನ್ನರಸಿ ಬಂದಿವೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆ ಅವರಿಗೆ ಅನ್ವರ್ಥ. ಪಂದನಲ್ಲೂರು ಬನಿಯೊಂದಿಗೆ ಕೊಂಚ ಕಲಾಕ್ಷೇತ್ರ ಮಿಳಿತವಾಗಿದೆ ನಮ್ಮ ಕಲಿಕೆಯಲ್ಲಿ. ಒಂದು ನೃತ್ಯ ಪ್ರಕಾರ ಕಲಿಯುವುದೇ ಜೀವಮಾನದ ಸಾಧನೆ ಎಂದು ತಿಳಿದಿದ್ದ ನನಗೆ ನಮ್ಮ ಗುರುಗಳು ಎರಡು ಭರತನಾಟ್ಯ ಶೈಲಿಗಳೊಂದಿಗೆ ಮೋಹಿನಿಯಾಟ್ಟಮ್ ಸಹ ಕಲಿತಿದ್ದಾರೆಂದು ತಿಳಿದಾಗ ಅಚ್ಚರಿಯಾಯಿತು ಹಾಗೆ ಗೌರವವು ದುಪ್ಪಟ್ಟಾಯಿತು. ನೃತ್ಯಕ್ಷೇತ್ರದಲ್ಲಿ ಗುರು ಪರಂಪರೆ ಇನ್ನೂ ಚಾಲ್ತಿಯಲ್ಲಿದೆ.
ನೃತ್ಯ ಕಲಿಕೆಗೆ ನನ್ನ ಪ್ರವೇಶ ಬಹಳ ತಡವಾಗಿಯೇ ಆಯಿತೆಂದು ಹೇಳಬಹುದು. ಒಂಬತ್ತನೆ ತರಗತಿಯ ಕೊನೆಯಲ್ಲಿ ಪುತ್ತೂರಿನ ನಮ್ಮ ಮನೆಯ ಬಳಿ ಹೊಸ ಭರತನಾಟ್ಯ ಶಾಲೆ ಶುರುವಾಯಿತು. ಕುಂಟೇಬಿಲ್ಲೆ, ಥ್ರೋ ಬಾಲ್ ಅಡಿ ಮಣ್ಣಿನ ಶಿಲ್ಪದಂತೆ ಮನೆಗೆ ಬರುವ ನಮ್ಮನ್ನು ಈ ಶಾಲೆಗೆ ಸೇರಿಸಿದರು.
ಎಂಟನೇ ಮತ್ತು ಒಂಬತ್ತನೇ ವರ್ಗದಲ್ಲಿ ಶಾಲಾ ನೃತ್ಯದಿಂದ ನಿನಗೆ ಬರುವುದಿಲ್ಲ ಎಂದು ಹೊರದೂಡಿಸಿಕೊಂಡಿದ್ದ ನನಗೆ, ಕಲಿಯೋಣ ಎಂಬ ಆಸಕ್ತಿ ಇದ್ದರೂ ಅನುಕೂಲ ಇರಲಿಲ್ಲ. ನೃತ್ಯ ಕಲಿಯುವ ಹುಮ್ಮಸ್ಸು ಬಹಳ ಇತ್ತು, ಈಗಲೂ ಇದೆ - ಎಂದಿಗೂ ಬತ್ತದಿರುವ ಒರತೆಯಂತೆ.
ವೈದ್ಯಳಾಗುವ ಹಂಬಲ ಮತ್ತು ಅದಕ್ಕೆ ಬೇಕಾಗುವ ತನ್ಮಯತೆಯಿಂದಾಗಿ ನೃತ್ಯ ಕಲಿಕೆ ಅರ್ಧಕ್ಕೆ ನಿಂತು ಹೋಯಿತು. ಮದುವೆಯಾಗಿ ಇಂಗ್ಲೆಂಡಿಗೆ ಬಂದಿಳಿದು, ಕೆಲಸಕ್ಕಾಗಿ ಊರೂರು ಅಲೆದು, ಎರಡು ಮಕ್ಕಳಾದ ಮೇಲೆಯೂ ನಾನಿರುವ ಊರಿನಲ್ಲಿ ಯಾರಾದರೂ ಗುರುಗಳು ಇದ್ದಾರಾ ಎಂದು ಹುಡುಕಾಡುತ್ತಿದ್ದೆ. ಗೆಳತಿಯೊಬ್ಬಳು ಸ್ವಾತಿ ಗುರುಗಳ ಚರದೂರವಾಣಿ ಸಂಖ್ಯೆ ಕೊಟ್ಟಾಗ ಸ್ವರ್ಗಕ್ಕೆ ಮೂರೇ ಗೇಣು ಎಂದೆನಿಸಿತು. ನೀನು ಎಳೆ ಹುಡುಗಿಯoತೆಯೇ ಕಾಣುತ್ತಿಯ, ಅವರೊಂದಿಗೆ ಸೇರಿ ಕಲಿ ಎಂದು ನಾನು ಎಲ್ಲಿಗೆ ಕಲಿಕೆ ನಿಲ್ಲಿಸಿದ್ದೆನೋ ಅದೇ ಸ್ತರಕ್ಕೇ ಸೇರಿಸಿಕೊಂಡರು.
ಕಲಿಕೆ ನಿಂತೇ ಇಲ್ಲವೇನೋ ಎಂಬಂತೆ ಮುಂದುವರೆಯಿತು. ಒಂದು ದಶಕದ ಕಂದಕ ಅಷ್ಟು ಬೇಗ ಕಾಣದಂತೆ ಮಾಯವಾದದ್ದು ನೋಡಿ ಅಚ್ಚರಿಯಾಯಿತು. ಬ್ಲಾಕ್‍ಪೂಲ್‍ನಲ್ಲಿ ದೀಪಾವಳಿ ಆಚರಣೆಗೆ ಭಾರತೀಯ ನೃತ್ಯ ತಂಡಗಳಿಗೆ ವಿಶೇಷ ಆಹ್ವಾನವಿತ್ತು. ಅಂದಿನ ದಿನ ಬ್ಲಾಕ್‍ಪೂಲ್ ಟವರ್ ಎದುರು ಹಾಕಿದ್ದ ರಂಗಮಂಚದಲ್ಲಿ ನೂರಾರು ಜನರೆದುರಲ್ಲಿ ತಿಲ್ಲಾನ ನೃತ್ಯ ಪ್ರಸ್ತುತಪಡಿಸಿದೆವು. ಭರತನಾಟ್ಯ ಮಾರ್ಗದ ಉತ್ತರಾರ್ಧದಲ್ಲಿ ತಿಲ್ಲಾನ ಸಂತೋಷ ವ್ಯಕ್ತಪಡಿಸುವ ನಾಟ್ಯ. ರಂಗಪ್ರವೇಶದಲ್ಲಿ ಪ್ರಸ್ತುತ ಪಡಿಸುವ ನೃತ್ಯಸರಣಿಗೆ ಮಾರ್ಗo ಎನ್ನುತ್ತಾರೆ. ತಾತ್ಕಾಲಿಕ ತೆರೆದ ವೇದಿಕೆ ಆದ್ದರಿಂದ ಹತ್ತಿರದಲ್ಲಿ ಯಾವ ಸೌಲಭ್ಯ ಇರಲಿಲ್ಲ. ದೂರದಲ್ಲಿ ಕಾರು ನಿಲ್ಲಿಸಿ ಪೂರ್ತಿ ಭರತನಾಟ್ಯ ವೇಷಭೂಷಣದಲ್ಲಿ ಬ್ಲಾಕ್‍ಪೂಲ್ ರಸ್ತೆಗಳಲ್ಲಿ ನಡೆದು ಬ್ಲಾಕ್‍ಪೂಲ್ ಟವರ್ ತಲುಪಿದ್ದಾಯಿತು, ಅಚ್ಚರಿ ತುಂಬಿದ ನೋಟಗಳ ನಡುವೆ. ನೂರಾರು ಸ್ಥಳೀಯರ ಸಮಕ್ಷಮದಲ್ಲಿ ಭಾರತೀಯ ನೃತ್ಯಗಳ ಪ್ರಸ್ತುತಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮವಾದ ಮೇಲೆ ಮೆರವಣಿಗೆಯಂತೆ ವಾಪಸ್ ಕಾರಿನೆಡೆಗೆ ಬರುವಾಗ ಬಹಳ ಜನ ನನ್ನ ಗುರುತು ಹಿಡಿದು ನಮ್ಮ ನೃತ್ಯ ಅದ್ಭುತವಾಗಿತ್ತು, ಪ್ರತಿವರ್ಷ ನೋಡಲು ಬರುತ್ತೇವೆ ಎಂದು ಕೊಂಡಾಡಿದಾಗ ನಮ್ಮ ಶ್ರಮ ಸಾರ್ಥಕವಾಯಿತು ಎಂದು ಆನಂದವಾಯಿತು.
ನಾವು ಪ್ರತಿವರ್ಷ ಎದುರು ನೋಡುವ ಸಂದರ್ಭ ನಮ್ಮ ಸ್ವಾತಿ ಡಾನ್ಸ್ ಕಂಪನಿ ನೃತ್ಯಶಾಲೆಯ ವಾರ್ಷಿಕ ಕಲಾಪ್ರದರ್ಶನ ‘ಸಮಯೋಗ’. ವರ್ಷದ ಕಲಿಕೆಯನ್ನು ನಮ್ಮ ಕುಟುಂಬ ಮತ್ತು ಅತಿಥಿಗಳೆದುರು ಪ್ರದರ್ಶಿಸುವ ಸದವಕಾಶವನ್ನು ಈ ಕಾರ್ಯಕ್ರಮ ಒದಗಿಸುತ್ತದೆ. ಇದನ್ನು ವಿಶ್ವ ನೃತ್ಯ ದಿನದ ಆಸುಪಾಸಿನಲ್ಲಿ ಸ್ವಾತಿ ಗುರುಗಳು ಆಯೋಜಿಸುತ್ತಾರೆ.
ಈ ವರ್ಷ ಭಾರತದಿಂದ ತಂದೆಯವರು ಬಂದು ವೀಕ್ಷಿಸಿದ್ದು ನನ್ನ ಭಾಗ್ಯ.
ನೃತ್ಯಾಸಕ್ತರಿಗೆಲ್ಲ ಪ್ರಣಾಮಗಳು. ನಿಮಗೂ ಕಲಿಯುವ ಆಸಕ್ತಿ ಇದ್ದರೆ ಕೆಳಗೆ ಕೆಲವು ವೆಬ್ ವಿಳಾಸಗಳನ್ನು ಉಪಯೋಗಿಸಿ ಸಮೀಪ ಇರುವ ಗುರುಗಳ ಮಾಹಿತಿ ಹುಡುಕಿ. ಕಲಾಸಕ್ತರು ಆಯೋಜನೆ ಮಾಡುವ ಕಾರ್ಯಕ್ರಮಗಳ ಮೂಲಕ ನಮ್ಮ ಪ್ರಾಚೀನ ಕಲೆ ಉಳಿಯಲಿ, ಬೆಳೆಯಲಿ ಎಂದು ಆಶಿಸುತ್ತೇನೆ.
ನಮ್ಮ ಶಾಲೆ - https://swatidance.com/
ಡಾನ್ಸ್ ಸ್ಕೂಲ್ ಡೈರೆಕ್ಟರಿ - https://www.akademi.co.uk/resources/dance-school-directory/
ಸಿoಫೊನಿ ಒಫ್ ಮೂವ್ಮೆಂಟ್ ಟ್ರೈಲರ್ - https://youtu.be/XWTo83YkQCE
************************************
ಕೃತಜ್ಞತೆಗಳು –
ನನ್ನ ತಂದೆ ಜಗದೀಶ್ ಅವರಿಗೆ, ಅತ್ಯಮೂಲ್ಯ ಸಲಹೆ ಸೂಚನೆ ನೀಡಿ ಈ ಬರಹ ತಿದ್ದಿದ್ದಕ್ಕಾಗಿ.
ಡಾ. ಗುಡೂರ್ ಅವರಿಗೆ, ಬರೆಯಲು ನಿರಂತರ ಪ್ರೋತ್ಸಾಹ ನೀಡಿದ್ದಕ್ಕೆ.
ಗುರು ಡಾ. ಸ್ವಾತಿ ರೌತ್ ಮತ್ತು ನನ್ನ ಸಹಪಾಠಿಗಳಿಗೆ - ಚಿತ್ರಗಳನ್ನ ಬಳಸಲು ಅನುಮತಿ ನೀಡಿದ್ದಕ್ಕಾಗಿ.
- ಶಿಲ್ಪಾ ಜಗದೀಶ್, ಪ್ರೆಸ್ಟನ್ ಯು ಕೆ.


*****************************************




