ನಮ್ಮ ಆಹಾರ ಮತ್ತು ಆರೋಗ್ಯ – ಬಾಲ್ಯದ ನೆನಪುಗಳು ಮತ್ತು ಈಗಿನ ಜ್ಞಾನ: ರವಿರಾಜ್ ಉಪ್ಪೂರ್ ಭಟ್.

"You can’t just eat good food. You’ve got to talk about it too. And you’ve got to talk about it to somebody who understands that kind of food." - Kurt Vonnegut

"Most of us have fond memories of food from our childhood. Whether it was our mom's homemade lasagna or a memorable chocolate birthday cake, food has a way of transporting us back to the past." - Homaro Cantu.

ನಮಸ್ಕಾರ ಅನಿವಾಸಿ ಬಳಗಕ್ಕೆ.
ಮೇಲಿನ ಎರಡೂ ಹೇಳಿಕೆಗಳನ್ನು ಒಪ್ಪದೇ ಇರಲು ಸಾಧ್ಯವಿಲ್ಲ. ಊಟ ಎಲ್ಲಿಯದಾದರೇನು, ಅಮ್ಮನ ಕೈಯಡಿಗೆಯ ರುಚಿ ಬೇರೆಡೆ ಬಂದೀತೇ? ಇದನ್ನೇ ಮಿತ್ರ ರವಿರಾಜ ಉಪ್ಪೂರ್ ಭಟ್ ಅವರ ಮಾತಿನಲ್ಲಿ ಕೇಳೋಣ. ಎಂದಿನಂತೆ ಓದಿ, ನಿಮ್ಮ ಅನಿಸಿಕೆ, ಪ್ರತಿಕ್ರಿಯೆ ಹಂಚಿಕೊಳ್ಳಿ. - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).
**********************************************************
ಊಟ ಬಲ್ಲವನಿಗೆ ರೋಗವಿಲ್ಲ; ಮಾತು ಬಲ್ಲವನಿಗೆ ಜಗಳವಿಲ್ಲ ...

ಎಷ್ಟು ಚೆನ್ನಾಗಿ ಈ ಒಂದು ಗಾದೆ ಮಾತು ನಮಗೆ ಹೇಗೆ ಆರೋಗ್ಯದ ಬಗ್ಗೆ ಒಂದು ಕಿವಿಮಾತು ಹೇಳಿದೆ ನೋಡಿ. ನಮ್ಮ ಈಗಿನ ಹೊಸ ಪೀಳಿಗೆಯವರಿಗೆ ಇದರ ಬಗ್ಗೆ ಅರಿವು ತುಂಬಾ ಇದ್ದಂತಿಲ್ಲ. ಇದೇನೇ ಇದ್ದ್ರೂ ನಮ್ಮ ಪೀಳಿಗೆಯವರ ಆಹಾರ ಪದ್ಧತಿ ಹೇಗಿತ್ತೆಂದು ನೋಡೋಣ.

ನಾನು ಮೂಲತಃ ಉಡುಪಿಯವನು ಮಾರಾಯ್ರೆ. ಉಡುಪಿಯವ್ರು ಅಂದ್ರೆ ನಿಮಗೆಲ್ಲ ಮೊದ್ಲು ನೆನಪಾಗುದೇ ಹೋಟೆಲ್ ಅಂತ ನಂಗೆ ಗೊತ್ತುಂಟು ಮಾರಾಯ್ರೆ ... ಅದೇನೇ ಇದ್ದ್ರೂ ನಂಗೂ ಉಡುಪಿ ಹೋಟೆಲ್ಗೂ ಯಂತ ಕನೆಕ್ಷನ್ ಇಲ್ಲ ಮಾರಾಯ್ರೆ ....

ನಾನು ಹುಟ್ಟಿ ಬೆಳೆದಿದ್ದೆಲ್ಲಾ ಉಡುಪಿಯ ಒಂದು ಸಣ್ಣ ಹಳ್ಳಿಯಲ್ಲಿ. ನಮ್ಮ ಮನೆ ಒಂದು ಹಳೆ (ಸಾಧಾರಣ 200 ವರ್ಷ ಹಳೆಯ ಮನೆ) ಬಂಗ್ಲೊ. ಅದ್ರಲ್ಲಿ ನನ್ನ ಅಜ್ಜ, ಅಪ್ಪ, ಅಮ್ಮ, ನನ್ನ ಅಣ್ಣ, ತಮ್ಮ, ನಾನು ಹಾಗೂ ನಮ್ಮ ಚಿಕ್ಕಪ್ಪ ಮತ್ತು ಅವರ ಕುಟುಂಬ ಇದ್ದೆವು. ನಮ್ಮನೆ ಎಲ್ಲರ ಊಟ ತಿಂಡಿಯ ವ್ಯವಸ್ಥೆ ಮಾಡುವುದು ನಮ್ಮಮ್ಮನೇ.

ನಂಗೆ ಇನ್ನೂ ಹಚ್ಚ ಹಸಿರಾಗಿಯೇ ಇದೆ ಆ ಹಳೆ ನೆನಪುಗಳು ... ಮನೆ ತುಂಬಾ ಜನ ... ಮಳೆಗಾಲದಲ್ಲಿ ನಟ್ಟಿಯ ಸಮಯ ಮನೆಯ ಕೆಲಸದಾಳುಗಳು, ನಟ್ಟಿ ನಡುವೆ ಹೆಂಗಸರೂ, ಹಾಗೂ ಹೂಟೆಗೆ ಕಟ್ಟುವ ಒಂದು ಜೊತೆ ಎತ್ತು ಹಾಗು ಕೋಣ ಮತ್ತೆ 3-4 ದನ ಎಮ್ಮೆಗಳು ಕರಾವಿಗೆ ಇರುತ್ತಿದ್ದವು. ಅಮ್ಮ ಹಾಗೂ ನಿತ್ಯದ ಕೆಲಸದಾಳು ಕೂಸ ಸುಮಾರಿಗೆ ಬೆಳಿಗ್ಗೆ 5 ಗಂಟೆಗೆಲ್ಲ ಎದ್ದು ಮನೆಯವರಿಗೆಲ್ಲ ಬೆಳಿಗ್ಗಿನ ಕೊಚ್ಚಿಗೆ ಅಕ್ಕಿ ಗಂಜಿ ಹಾಗೂ ಹಟ್ಟಿಯ ಗಂಟಿಗಳಿಗೆಲ್ಲ 'ಬಾಯಿರು' (ಗಂಟಿಗಳಿಗೆ ಹಾಕುವ ಕಲಗಚ್ಚು ಮಿಶ್ರಿತ ಅನ್ನ ಹಾಗೂ ತೌಡು) ತಯಾರು ಮಾಡುವರು. ನಾವು ಶಾಲೆಗೆ ಹೋಗುವ ಮಕ್ಕಳೆಲ್ಲ 6- 6:30ರ ಸುಮಾರಿಗೆ ಎದ್ದು ಬಚ್ಚಲು ಒಲೆಯಲ್ಲಿ ಬಾಯಿರು ಬಿಸಿಮಾಡುವ ಒಲೆಯ ಎದುರು ಕೂತು ಸ್ವಲ್ಪ ಹೊತ್ತು ಚಳಿ ಕಾಸಿ ಕೂಸನೊಂದಿಗೆ (ಮನೆ ಕೆಲಸದವನು) ಹರಟೆ ಹೊಡೆಯುವುದು ದಿನನಿತ್ಯದ ಪದ್ಧತಿ. ನಮ್ಮೊಟ್ಟಿಗೆ ಮನೆಯ 'ರಾಜು' ನಾಯಿ ಕೂಡ ಪಕ್ಕದಲ್ಲೇ ಕೂತಿರುವುದು ಒಂದು ವಾಡಿಕೆ. ಹಾಗೆ ಚಳಿ ಕಾಸುವಾಗ ಒಲೆಯೊಳಗೆ ಹುಣಸೆ ಬೀಜವನ್ನೋ, ಹಲಸಿನ ಹಣ್ಣಿನ ಒಣಗಿದ ಬೀಜವನ್ನೋ ಕೆಂಪಿನ ಕೆಂಡದೊಳಗೆ ಹಾಕಿ ಹದನಾಗಿ ಸುಡುವುದು ನಾವು ಶಾಲೆ ಹುಡುಗರ ಒಂದು 'ಹೋಮ್ ವರ್ಕ್'. ಹೀಗೆ ಹದನಾಗಿಸಿದ ಹುಣಸೆ ಬೀಜ ಮತ್ತೆ ದಾಣಿ (ಹಲಸಿನ ಬೀಜಕ್ಕೆ ನಮ್ಕಡೆ ದಾಣಿ ಅಂತಲೂ ಹೇಳುವುದು ಒಂದು ವಾಡಿಕೆ ... ಬಹುಶಃ ಆಡುಭಾಷೆ ತುಳುವಿನಿಂದ ಬಂದದ್ದಿರಬೇಕು) ಎರಡೂ ಸರಿಯಾಗಿ ಪಾಲಾಗಿ ನಮ್ಮ ಕಂಪಾಸ್ ಪೆಟ್ಟಿಗೆಯೊಳಗೋ, ಇಲ್ಲ ಕಾಲಿ ಬೆಂಕಿಪೆಟ್ಟಿಗೆಯೊಳಗೋ , ಇಲ್ಲ ಶಾಲೆಯ ಚೀಲದೊಳಗೋ ಹೋಗಿ ಸೇರುತ್ತಿತ್ತು. ಇದೇ ನಮ್ಮ ಶಾಲೆಯ ವಿರಾಮದ ಸಮಯ್ದ 'tuck time ಫುಡ್'. ನೆನೆಸಿದರೆ ಈಗಲೂ ನನ್ನ ಬಾಯಲ್ಲಿ ನೀರೂರುತ್ತದೆ.

ಬೆಳಿಗ್ಗಿನ ನಿತ್ಯಕರ್ಮಗಳನ್ನೆಲ್ಲಾ ಕ್ಲಪ್ತವಾಗಿ ಮುಗಿಸಿ ಕುಚ್ಚಲಕ್ಕಿ ಗಂಜಿ ಊಟ ಮಾಡಬೇಕಿತ್ತು. ಗಂಜಿಯೊಂದಿಗೆ ತುಪ್ಪ, ಚಿಟಿಕೆ ಉಪ್ಪು ಹಾಗೂ ನೆಂಜಿಕೊಳ್ಳಲು ಉಪ್ಪಿನಕಾಯಿಯೋ, ಕೊತ್ತಂಬರಿಸೊಪ್ಪಿನ ಚಟ್ನಿಯೋ, ಮಾವಿನಕಾಯಿಯ ತೊಕ್ಕು ಇಲ್ಲ ಮಜ್ಜಿಗೆ ಮೆಣಸು ಅಥವಾ ಹಿಂದಿನ ದಿನದ ಹುಳಿ (ನಮ್ ಕಡೆ ತೆಂಗಿನಕಾಯಿ ರುಬ್ಬಿ ಮಸಾಲೆ ಹಾಕಿ ಮಾಡಿದ 'ಸಾಂಬಾರು'). ನನ್ನ ಅಣ್ಣ ಹಾಗೂ ಅಪ್ಪನಿಗೆ ಗಂಜಿ ಊಟ ಅಂದ್ರೆ ಪಂಚ ಪ್ರಾಣ. ನನಗೆ ಹಾಗು ನನ್ನ ತಮ್ಮನಿಗೆ ಗಂಜಿ ಊಟ ಅಂದ್ರೆ ಅಷ್ಟಕ್ಕಷ್ಟೇ. ನಾನು ಅರ್ಧ ಗಂಜಿ ತಿಂದು ಉಳಿದರ್ಧ ನನ್ನ ಪ್ರೀತಿಯ ರಾಜು ನಾಯಿಯ ಕೊರಿಕೆಗೆ (ನಾಯಿಗೆ ತಿನ್ನಲು ಹಾಕುವ ಕಲ್ಲಿನ ದಪ್ಪ 'ತಟ್ಟೆ') ಹಾಕುತ್ತಿದ್ದೆ. ಅದಕ್ಕೆ ದಿನಾ ಅಮ್ಮನಿಂದ ಬೈಸಿಕೊಳ್ಳಬೇಕಿತ್ತು. ಅಜ್ಜನಂತೂ ನನ್ನ ಗಂಜಿ ಊಟದ ಸ್ಪೀಡ್ ನೋಡಿ ಯಾವಾಗಲೂ ಹೇಳುವವರು “ಇಷ್ಟು ಮೆಲ್ಲ ತಿಂದ್ರೆ ಹ್ಯಾಂಗೆ ತಿಂದಿದ್ದು ಮೈಗೆ ಹಿಡಿತ್ ... ಆಡು ಮೆಂದ ಹಾಗೆ ತಿನ್ನಬೇಕಂತೆ ... ಆನೆ ಮಿಂದಹಾಗೆ ಮೀಯಬೇಕಂತೆ (ಸ್ನಾನ ಮಾಡಬೇಕಂತೆ)” ಅಂತ.

ಆ ಗಂಜಿ ಊಟಕ್ಕೆ ಮುಕ್ತಿ ಸಿಕ್ಕಿದ್ದು ನಾ ಮೆಡಿಕಲ್ ಮಾಡಲು ಬಳ್ಳಾರಿಗೆ ಹೋದಮೇಲೆಯೇ. ಈಗಿನ ನನ್ನ ಮಕ್ಕಳಿಗಂತೂ ಗಂಜಿ ಊಟದ ಮಜವೇ ಗೊತ್ತಿಲ್ಲ..... ಹಾಗೆಯೇ ಸುಟ್ಟ ಹುಣಸೇ ಬೀಜ, ಹದವಾಗಿ ಸುಟ್ಟ ದಾಣಿ, ಉಪ್ಪು ಕಾರಪುಡಿ ಹಾಕಿದ ಹುಳಿ ಹಪ್ಪಟೆ ಮಾವಿನ ಕಾಯಿ - ಇದ್ಯಾವುದೂ ಗೊತ್ತೇ ಇಲ್ಲ! ಅದ್ರ ಮಜವೇ ಬೇರೆ. ನಾವು ಮಕ್ಕಳಿಗೆಲ್ಲ ಬೆಳಿಗ್ಗೆ ಗಂಜಿ ಕಡ್ಡಾಯ, ಆದ್ರೆ ಅಜ್ಜನಿಗೆ ಬೆಳಿಗ್ಗೆ ತಿಂಡಿ ಆಗಬೇಕಿತ್ತು. ಅಜ್ಜನಿಗೆ ಗೋಧಿಯಿಂದ ಮಾಡಿದ ಏನಾದ್ರೂ ತಿಂಡಿ ಅಂದ್ರೆ ಶ್ರೇಷ್ಠ ..... ಗೋಧಿ ಹಿಟ್ಟಿನ ತೆಳ್ಳಗಿನ ನೀರು ದೋಸೆ ಅಥವಾ ರವೆ ಉಪ್ಪಿಟ್ಟು ಹೀಗೆ ಏನಾದ್ರೂ ತಿಂಡಿ ಆಗಲೇ ಬೇಕು. ಹೀಗೆ ಅಜ್ಜನಿಗೆ ಮಾಡಿದ ತಿಂಡಿ ಸ್ವಲ್ಪ ಏನಾದ್ರೂ ಉಳಿದ್ರೆ ನಂಗೆ ಗಂಜಿಯೊಟ್ಟಿಗೆ ಅಮ್ಮ ಸ್ವಲ್ಪ ಕೊಡ್ತಿದ್ದ್ರು... ಅದೂ ಅಜ್ಜ ಆಚೆ ಕಡೆ ಹೋದ ಮೇಲೆ. ಅಜ್ಜ ಏನಾದ್ರೂ ನೋಡಿದ್ರೆ ನನ್ನ ಅಮ್ಮನ್ನ ಬೈಯ್ಯುವರು .... ಮಕ್ಕಳು ಬೆಳಿಗ್ಗೆ ತಿಂಡಿ ತಿಂದ್ರೆ ಹೊಟ್ಟೆ ಹಾಳಾಗ್ತದೆ ಅಂತ!

ಸಾಯಂಕಾಲ ಶಾಲೆ ಮುಗಿಸಿ ಬರುವಾಗ ದಾರಿಯಲ್ಲಿ ಮಾವಿನಕಾಯಿಗೆ ಗುರಿ ಇಟ್ಟು ಕಲ್ಲು ಹೊಡೆದುರುಳಿಸಿ ಅದರ ಸೊನೆ ಅಲ್ಲೇ ಕೆಳಗೆ ಹುಲ್ಲಿನಲ್ಲಿ ಒರೆಸಿ ತಿಂದರೆ ಅದ್ರ ಹುಳಿ ಹಪ್ಪಟೆ ರುಚಿಗೆ ಒಂದು ಸರ್ತಿ ಮೈಯೆಲ್ಲಾ ಜುಂ ಅನ್ನುವ ಮಜಾನೇ ಬೇರೆ. ಈಗೆಲ್ಲಿದೆ ಅದರ ಸುಖ ??...

ಮಾವಿನ ಕಾಯಿಯ ಸೀಸನ್ ಅಲ್ಲದೆ ಇದ್ರೆ ಬೇಲಿಯಲ್ಲಿರುವ ಕರಂಡೆ ಕಾಯಿ ಇಲ್ಲ ಹಣ್ಣು, ಕಿಸ್ಕಾರ್ ಹಣ್ಣು, ನೇರಳೆ ಹಣ್ಣು, ಜಂಗಮನ ಹಣ್ಣು, ಪೇರಳೆ ಹಣ್ಣು, ರೆಂಜೆ ಹಣ್ಣು ...ಹೀಗೆ ಏನಾದ್ರೂ ಒಂದು ಸಿಕ್ಕೇ ಸಿಗುತ್ತದೆ.

ಇನ್ನೂ ಶನಿವಾರ ಮಧ್ಯಾಹ್ನದ ಮೇಲೆ ರಜೆ.
ಹಾಗೆ ಭಾನುವಾರ ನಮ್ಮ ಮನೆಯಲ್ಲಿ ಗಂಜಿಗೂ ರಜೆ. ಸಾದಾರಣವಾಗಿ ಆವತ್ತು ಇಡ್ಲಿ ಅಥವಾ ದೋಸೆ. ಹಾಗಾಗಿ ನಂಗಂತೂ ಭಾನುವಾರ ಅಂದ್ರೆ ಇಷ್ಟ. ತಿಂಡಿ ತಿಂದು ಟಿವಿಯಲ್ಲಿ ಹೀಮ್ಯಾನ್, Tom & Jerry ನೋಡಿ ಮುಗಿಯುವಷ್ಟರಲ್ಲಿ ರಾಮಾಯಣ ಇಲ್ಲ ಮಹಾಭಾರತ ಸೀರಿಯಲ್ ಶುರುವಾಗುವುದು.

ಹೀಗೆ ಮುಂದುವರಿದು ಮೆಡಿಕಲ್ ಕಾಲೇಜ್ ಸೇರಿದಮೇಲೆ ಈ ದಿನಚರಿಗೆ ಒಂದು ಮುಕ್ತಾಯ ಹಾಡಿದೆವು. ಆಮೇಲೆ ಬಳ್ಳಾರಿಯಲ್ಲಿ ಹಾಸ್ಟೆಲ್ ದಿನಚರಿ ಆರಂಭ. ಹಾಸ್ಟೆಲ್ ಅಂದಮೇಲೆ ನಿಮಗೆಲ್ಲಾ ಗೊತ್ತೇ ಇದೆಯಲ್ಲ .... ಬೆಳಿಗ್ಗಿನ ತಿಂಡಿಗೆ ಚೌ ಚೌ ಬಾತ್, ಕಾಂಕ್ರೀಟ್ (ಉಪ್ಪಿಟ್ಟಿಗೆ ಹಾಸ್ಟೆಲ್ ನಲ್ಲಿ ನಾವಿಟ್ಟಿದ್ದ ಹೆಸರು), ಇಡ್ಲಿ, ದೋಸೆ, ಬ್ರೆಡ್, ಚಿತ್ರಾನ್ನ, ವಾಂಗೀಬಾತ್ .... ಹೀಗೆ ನಾನಾ ವಿಧದ ಟಿಫನ್ ಗಳು. ಅದರಲ್ಲೂ ಬಳ್ಳಾರಿಯ ಸ್ಪೆಷಲ್ ತಿಂಡಿ ... ಮೆಣಸಿನ ಕಾಯಿ ಬಜ್ಜಿ (ಪುಗ್ಗಿ) ಹಾಗೂ ಮಂಡಕ್ಕಿ (ಮಂಡಾಳು) ಒಗ್ಗರಣೆಯನ್ನು ಹೇಳದಿದ್ದರೆ ಹೇಗೆ? ಇವತ್ತು ಬೆಳಿಗ್ಗೆ ಏನಾದ್ರೂ ಇದನ್ನು ತಿಂದ್ರೆ .... ಅದ್ರ ಪರಿಣಾಮ ಮಾರನೆಯ ದಿನ ಬೆಳಿಗ್ಗೆ ಬಹಿರ್ದೆಸೆಗೆ ಹೋದಾಗಲೇ ಗೊತ್ತಾಗುವುದು!

ನನ್ನ ಇಷ್ಟದ ತಿಂಡಿ ವಾಂಗೀಬಾತ್ ಆಗಿತ್ತು. ವಾಂಗಿಬಾತ್ ಮಾಡಿದ ದಿನ ನನ್ನ ತಟ್ಟೆಯ್ಲಲಿ ಒಂದು ಸಣ್ಣ ಗುಡ್ಡೆಯಾಕಾರದಲ್ಲಿ ವಾಂಗೀಬಾತ್ ಇರುತ್ತಿತ್ತು. ಇದರಿಂದಾಗಿ ನನ್ನ ಫ್ರೆಂಡ್ಸ್ ಎಲ್ಲ ನನ್ನನ್ನು ವಾಂಗಿಪ್ರಿಯ ಅಂತಲೇ ಕರೆಯಲು ಶುರು ಮಾಡಿದ್ರು.
ಹೀಗೆ ಮುಂದುವರಿದು ಒಂದು ತಿಂಗಳಿಗೆ ನಾನೂ ಕೂಡ ಮೆಸ್ಸ್ prefect ಆದೆ. ಆ ತಿಂಗಳು ನನಗೆ ಇಷ್ಟವಾದ ತಿಂಡಿಗಳನ್ನು ಹೇಳಿ ಮಾಡಿಸಿಕೊಂಡು ತಿಂದಿದ್ದೇ ತಿಂದಿದ್ದು. ಒಮ್ಮೆ ಭಾನುವಾರ, ನನ್ನ ಇಬ್ಬರು ಗೆಳೆಯರ ಜೊತೆ ದೋಸೆ ತಿನ್ನುವ ಸ್ಪರ್ಧೆ ನಡೆಯಿತು. ಆವತ್ತು ಮಸಾಲೆ ದೋಸೆ ಟಿಫನ್. ನನ್ನ ಇಬ್ಬರು ಆಪ್ತ ಗೆಳೆಯರು ಒಬ್ಬೊಬ್ಬರೂ ಹತ್ತೋ ಹನ್ನೆರಡೋ ಮಸಾಲೆ ದೋಸೆ ಭುಂಜಿಸಿದರು ... ಕೊನೆಗೆ ನನ್ನ ಸರಣಿ .... ಲೆಕ್ಕ ಮಾಡಿ ನಾನು ಅಂದು 16 ಮಸಾಲೆ ದೋಸೆ ಗುಳುಂಮಾಯಿಸಿದೆ.
ಹಾಗೇ ಇನ್ನೊಂದು ಸಲ ಯಾವುದೋ ಒಂದು ಹಾಸ್ಟೆಲ್ ಡೇ celeberation ದಿನದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ 2 ನಿಮಿಷದಲ್ಲಿ 21 ಇಡ್ಲಿ ತಿಂದು 2ನೇ ಸ್ಥಾನ ಗಿಟ್ಟಿಸಿಕೊಂಡವ ನಾನು.
ಈಗ ನೋಡಿದ್ರೆ ಅದೆಲ್ಲ ಗತ ವೈಭವ ಅನ್ನಿಸುತ್ತೆ 😁
ಎಡಗಡೆ ಮೇಲಿನಿಂದ, ಗಡಿಯಾರದ ಚಲನೆಯಂತೆ: ೧. ಕುಚ್ಚಲು ಅಕ್ಕಿ ಗಂಜಿ ಉಪ್ಪಿನ ಕಾಯಿ, ಮಜ್ಜಿಗೆ ಮೆಣಸು, ಚಟ್ನಿ, ಹಲಸಿನ ಹಪ್ಪಳ; ೨. ಹುಳಿ ಹಪ್ಪಟೆ ಮಾವಿನ ಕಾಯಿ ಉಪ್ಪು ಖಾರ; ೩. ಮಂಡಕ್ಕಿ ಒಗ್ಗರಣೆ ಹಾಗೂ ಮೆಣಸಿನ ಕಾಯಿ ಬಜ್ಜಿ – ಬಳ್ಳಾರಿ ಮೆಸ್ಸ್ ಸ್ಪೆಷಲ್; ೪. ಉಪ್ಪಿಟ್ಟು – ಶಿರಾದ ಚೌ ಚೌ ಭಾತ್.
(ಎಲ್ಲಾ ಚಿತ್ರಗಳು ಲೇಖಕರು ಗೂಗಲ್ ನಿಂದ ಪಡೆದದ್ದು.)
ಫಾಸ್ಟ್ ಫಾರ್ವರ್ಡ್ .... ಕೋವಿಡ್ ನಂತರದ ದಿನಗಳು ...ಈಗಿನ ಆಹಾರ ಪದ್ದತಿಯ ಬಗ್ಗೆ ಒಂದು ಇಣುಕು ನೋಟ ಹಾಕೋಣ -
ಇತ್ತೀಚಿನ ದಿನಗಳಲ್ಲಿ ನಮ್ಮ ಊಟ ತಿಂಡಿಗಳಲ್ಲೆಲ್ಲಾ ಪ್ರೋಸೆಸ್ಸ್ಡ್ ಫುಡ್ ಹಾಗೂ ಫಾಸ್ಟ್ ಫುಡ್ ಗಳದ್ದೇ ಕಾರುಬಾರು .....
ಬರಬರುತ್ತಾ ನಮ್ಮ ದೇಹಶ್ರಮ ಕೂಡ ಕಡಿಮೆ ಆಗುತ್ತಾ ಬರುತ್ತಿದೆ! ತಿಂದ ಆಹಾರದ ಪಚನಕ್ರಿಯೆ ಹಾಗು ಮೈಗೆ ಹತ್ತಲು ಸಮತೂಕದ ಆಹಾರ ಹಾಗೂ ಸಾಧಾರಣ ಮಟ್ಟದ ದೇಹಶ್ರಮ ಕೂಡಾ ಅಗತ್ಯ
ನಮ್ಮ ಆದುನಿಕ ಸರ್ವಜ್ಞ ಡಿವಿಜಿ ಅವರು ಹೇಳಿದಂತೆ -
ಎಷ್ಟು ನೀನುಂಡರೇಂ ಪುಷ್ಟಿ ಮೈಗಾಗುವುದು ।
ಹೊಟ್ಟೆ ಜೀರ್ಣಿಸುವಷ್ಟೆ ಮಿಕ್ಕುದೆಲ್ಲ ಕಸ ।।
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು ।
ಮುಷ್ಠಿ ಪಿಷ್ಟವು ತಾನೆ ಮಂಕುತಿಮ್ಮ ।।

ನೀನು ಎಷ್ಟು ಆಹಾರವನ್ನು ತಿಂದರೂ, ಅದರಿಂದ ದೇಹಕ್ಕೆ ಪುಷ್ಟಿಸಿಗುವುದು, ನಿನ್ನ ದೇಹ ಜೀರ್ಣಿಸಿಕೊಳ್ಳುವಷ್ಟು ಮಾತ್ರ. ಅಧಿಕವಾಗಿ ತಿಂದದ್ದೆಲ್ಲ ಜೀರ್ಣವಾಗದೆ, ಮಲರೂಪದಲ್ಲಿ ಕಸವಾಗಿ ಹೊರಬರುತ್ತದೆ. ಎಷ್ಟು ಸಂಪತ್ತನ್ನು ಗಳಿಸಿದರೂ ಹಸಿವಾದಾಗ ನೀನು ಸೇವಿಸಲಾಗುವುದು ಕೇವಲ ಒಂದು ಮುಷ್ಠಿ ಅನ್ನ ತಾನೆ? ಎಂದು ಕೇಳುತ್ತಾ ನಮ್ಮ ಮಿತಿಗಳನ್ನು ಅರ್ಥ ಮಾಡಿಕೊಳ್ಳುವಂತೆ ನಮಗೆ ಸೂಚನೆಯನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದ ಮಾತಿನಲ್ಲಿ.

ಹಾಗಾಗಿ ಮಿತಿಯರಿಯಬೇಕು. ಮಿತಿಯಿಂದಿದ್ದರೆ ಬಾಳು ಹಿತ. ಇದು ಕೇವಲ ಆಹಾರಕ್ಕಷ್ಟೇ ಸೀಮಿತವಲ್ಲ. ಬದುಕಿನ ನಮ್ಮ ಎಲ್ಲ ಆಯಾಮಗಳಿಗೂ ಇದನ್ನು ಅನ್ವಯಿಸಿಕೊಳ್ಳಬೇಕು. ನಮ್ಮ ಕ್ಷಮತೆ ಮತ್ತು ಯೋಗ್ಯತೆಗನುಗುಣವಾಗಿ ಒಂದು ‘ಗೆರೆ’ ಎಳೆದುಕೊಳ್ಳಬೇಕು. ಆ ಮಿತಿಯ ವೃತ್ತದ ಪರಿಧಿಯಲ್ಲೇ ನಮ್ಮ ಕಾರ್ಯಕ್ಷೇತ್ರವಿರಬೇಕು. ನಮ್ಮ ಕ್ಷಮತೆಯನ್ನು ಹೆಚ್ಚಿಸಿಕೊಂಡ ಹಾಗೆ ಆ ವೃತ್ತದ ಪರಿಧಿಯೂ ಹೆಚ್ಚುತ್ತಾ ಹೋಗುತ್ತದೆ. ದೇಹವು ಆಹಾರದಲ್ಲಿನ ಸತ್ವವನ್ನು ಮಾತ್ರ ಸ್ವೀಕರಿಸಿ ಮಿಕ್ಕದ್ದನ್ನು ತ್ಯಜಿಸುವಹಾಗೆ, ನಾವು ಈ ಜಗತ್ತಿನಲ್ಲಿ ಸತ್ವವನ್ನು ಮಾತ್ರ ಹೀರಿಕೊಳ್ಳಬೇಕು.
ಮಿತವಾಗಿ ಉಂಡರೆ ಅಮಿತ ಸುಖದಲಿ ಹಿತವಾಗಿ ಬದುಕುವೆ.
ನಾವೆಲ್ಲ ನೆನಪಿನಲ್ಲಿ ಇಡಬೇಕಾದ್ದು:
* ಮಿತವಾಗಿ ತಿನ್ನುವುದು,
* ಸಮತೂಕದ ಆಹಾರವಿರಲಿ: 40-50% ಶರ್ಕರ ಪಿಷ್ಟ (carbohydrates), 20-30% - ಕೊಬ್ಬಿನ ಅಂಶ (fats), 10-30% ಪ್ರೊಟೀನ್, 10-20% - ನಾರಿನ ಅಂಶ (fibre).
* ಸಾಧ್ಯವಾದಷ್ಟೂ ಕಡಿಮೆ ಸಂಸ್ಕರಿಸಿದ ಆಹಾರದ (processed food) ಉಪಯೋಗ.
* ಸಂಸ್ಕರಿಸಿದ ಸಕ್ಕರೆಯನ್ನು ಸಾಧ್ಯವಾದಷ್ಟೂ ಕಡಿಮೆ ಉಪಯೋಗಿಸುವುದು.
* ಊಟಗಳ ಮದ್ಯೆ ಕುರುಕಲು ತಿಂಡಿಗಳನ್ನು (snacks) ತಿನ್ನುವುದನ್ನು ಸಾಧ್ಯವಾದಷ್ಟೂ ಕಡಿತಗೊಳಿಸುವುದು.
* ಊಟವಾದ ಮೇಲೆ 15-20 ನಿಮಿಷ ಮೆಲ್ಲಗೆ ನಡೆದಾಟ / ಅಡ್ಡಾಡುವುದನ್ನು ರೂಢಿಗೊಳಿಸಿಕೊಳ್ಳುವುದು, ಇಲ್ಲವೇ ಸಣ್ಣ ಪುಟ್ಟ ಮನೆ ಕೆಲಸ ಮಾಡುವುದು.
* ಕರಿದ ತಿಂಡಿಯನ್ನು ತಿನ್ನುವುದನ್ನು ಸಾಧ್ಯವಾದಷ್ಟೂ ಮಿತಗೊಳಿಸುವುದು.
* ಸಿಹಿ ತಿನ್ನಬೇಕೆನಿಸಿದರೆ ಕಾಲಿ ಹೊಟ್ಟೆಯಲ್ಲಿ ತಿನ್ನುವುದಕ್ಕಿಂತ ಊಟ ಆದ ಮೇಲೆ ತಿನ್ನುವುದು ಒಳ್ಳೆಯದು. ಸಿಹಿಯ ಜೊತೆ ಬಾದಾಮಿ ಇಲ್ಲ ಪಿಸ್ತಾ (ಯಾವುದೇ dry fruits / nuts ) ಬೆರಸಿ ತಿನ್ನುವುದು. ಇಲ್ಲ ಹೋಳಿಗೆ ತಿನ್ನುವುದಾದರೆ ಅದರ ಜೊತೆ ಸ್ವಲ್ಪ(ವೇ!) ತುಪ್ಪ ಸೇರಿಸಿ ತಿನ್ನುವುದು.

ಕೊನೆಯ ಕೊಸರು:
- ನಮ್ಮ ದೇಹದ ಆರೋಗ್ಯ (ಅಕ್ಷರಶಃ) ನಮ್ಮ ಕೈಯಲ್ಲಿ (ಅಥವಾ ಚಮಚೆಯಲ್ಲಿ) ಇದೆ ಹಾಗೂ ಬಹುತೇಕ ನಾವು ತಿನ್ನುವ ಆಹಾರವನ್ನು ಅವಲಂಬಿಸಿದೆ.
- ನೆನಪಿನಲ್ಲಿರಲಿ - ಊಟ ಬಲ್ಲವನಿಗೆ ರೋಗವಿಲ್ಲ.... ಮಾತು ಬಲ್ಲವನಿಗೆ ಜಗಳವಿಲ್ಲ!

ಡಾ. ರವಿರಾಜ್ ಉಪ್ಪೂರ್ ಭಟ್.
ಲ್ಯಾಂಕಾಸ್ಟರ್.

**********************************************************

ಹೊಸವರುಷಕ್ಕೊಂದು ಹಳೆಯ ಹರಟೆ

ನಮಸ್ಕಾರ ಅನಿವಾಸಿ ಬಳಗಕ್ಕೆ. ಇನ್ನೇನು ಬಂದೇ ಬಿಡಲಿರುವ ಕ್ರಿಸ್ಮಸ್ ಹಬ್ಬದ ಹಾಗೂ ಹೊಸವರುಷದ  ಹಾರ್ದಿಕ ಶುಭಾಶಯಗಳು. 

ದೇಶ- ಕಾಲ ಯಾವುದಿದ್ದರೇನು? ಮಾನವ ಜೀವ - ಭಾವ ಜಗತ್ತು ಮಾತ್ರ ಸದಾ ಅದೇ ಅಲ್ಲವೇ? ಅದಕ್ಕೆಂದೇ ತ್ರೇತೆಯ ಸೀತೆ, ದ್ವಾಪರದ ರಾಧೆ ಈಗಲೂ ನಮ್ಮನ್ನು ಕಾಡುತ್ತಾರೆ. ನನ್ನ ಹಳ್ಳಿಯ ನನ್ನ ಪರಿಧಿಗೆ ಬಂದ ಎಲ್ಲ ಹೆಂಗಳೆಯರದೂ ಒಂದೊಂದು ಕಥೆ.. ವ್ಯಥೆ. ಅದನ್ನೇ ಇಲ್ಲಿನ ಕವನ ಹೇಳಲು ಪ್ರಯತ್ನಿಸುತ್ತಿದೆ. ಹಾಗೆಯೇ ಒಂದು ಲಘು ಹರಟೆಯೂ ಉಂಟು. ಒಪ್ಪಿಸಿಕೊಳ್ಳಿ.

~ ಸಂಪಾದಕಿ

ನಮ್ಮೂರ ರಾಧೆಯರು..

 ನಮ್ಮೂರಲ್ಲಿ ಜುಳು ಜುಳು ಹರಿವ ತಂಪಾದ ನದಿಯಿಲ್ಲ.
ಹಿಂಡಿದರೆ ದಂಡಿ ಹಾಲು ಕರೆವ ದನದ ಮಂದೆಗಳಿಲ್ಲ.
ಒಣಬಿದಿರ ಕೊಳಲ ಮಾಡಿ ನುಡಿಸಿ ಕುಣಿಸುವ ಕೃಷ್ಣನೂ ಇಲ್ಲ.
ನಮ್ಮೂರ ಹೆಸರಂತೂ ಗೋಕುಲ- ಬೃಂದಾವನ ಮೊದಲೇ ಅಲ್ಲ.

ಆದರೇನು? ತುಸು ಪ್ರೀತಿಗೆ ಆಜನ್ಮ ಕಾಯುವ
ರಾಧೆಯರಿಗೇನೂ ಬರವಿಲ್ಲ.
ಸೀತೆ, ಗೀತೆ,ನಿಂಗಿ, ಸಂಗಿ ಒಳ ಭಾವದಲಿ
ರಾಧೆಯರೇ ಎಲ್ಲಾ.
ಒರಳು, ಒನಕೆ, ಒಲೆ, ತಪ್ಪಲೆಗಳ
ಎಸರಲ್ಲಿ ಕುದಿಯುತ್ತಲಿರುವರಲ್ಲ..
ದಣಿದ ಕಂಗಳು ಮುಚ್ಚಿದರೂ, ನಿದ್ದೆಯಲ್ಲೂ
ಒಲವ ಕನಸು ತೇಲುವುದಿಲ್ಲ.
ಸಾಂಗತ್ಯ, ಸಾಮೀಪ್ಯ, ಆತ್ಮದಾನಂದಗಳ
ಹೆಸರನ್ನೂ ಅರಿತವರಲ್ಲ..
ಸೆಳೆದೊಯ್ಯುವ ಸಮ್ಮೋಹನದ ರಾಗಕ್ಕಾಗಿ
ಆಜನ್ಮ ಕಾಯುತ್ತಲೇ ಇಹರಲ್ಲ?!

ಯಮುನೆ ಇರದಿದ್ದರೇನಂತೆ ಇಲ್ಲಿ
ಕಾಳಿಂಗರಿಗೇನೂ ಕೊರತೆ ಇಲ್ಲ.
ರಾಸ ರಚಿಸಲೆಂದೇ ರಸಿಕರು ಸುತ್ತಮುತ್ತ
ಕಾಯ್ದುಕೊಂಡಿಹರಲ್ಲ?!
ಪ್ರತಿಷ್ಠೆ, ಮರ್ಯಾದೆ, ರಕ್ಷಣೆಯ ಹೆಸರಲ್ಲಿ
ಚೈತನ್ಯ ಹೋಮ ನಡೆವುದಲ್ಲ..
ದ್ವಾಪರವಲ್ಲವಾದ್ದರಿಂದ ನರಕಾಸುರ ಬಂಧನದಿಂದ
ಈ ಗೋಪಿಕೆಯರಿಗೆ ಮುಕ್ತಿಯೇ ಇಲ್ಲ..

~ ಗೌರಿಪ್ರಸನ್ನ

ಕ್ಯಾಲೆಂಡರ್ ಪುರಾಣ

2025 ಅರಿವಿಲ್ಲದೇ ಉರುಳಿ  ಇನ್ನೇನು ಹೊಸ ವರುಷದ ಹೊಸಿಲಲ್ಲಿದ್ದೇವೆ. ಇಷ್ಟಕ್ಕೂ ಈ ಹೊಸ ವರ್ಷ ಅನ್ನೋದು ಏನು? ಅದೇ ಹಗಲು ರಾತ್ರಿಗಳು, ಅದೇ ಸೂರ್ಯ ಚಂದ್ರರು, ಅವೇ ಗಿಡಮರ-ಉಪವನಗಳು, ಅವೇ ಮಾನವ ಮನದ ರಾಗ ದ್ವೇಷ ಭಾವವೇಗಗಳು, ಅದೇ ಹೊಡೆದಾಟ ಬಡೆದಾಟಗಳು,ಅವೇ ಚರ್ವಿತ ಚರ್ವಣ ರಾಜಕೀಯ ಸಾಮಾಜಿಕ ಸುದ್ದಿ ಸಮಾಚಾರಗಳು, ಅವೇ ಹೊಸ ವರ್ಷದ ಹಳೆಯ ರೆಸುಲ್ಯೂಷನ್ ಗಳು.. ಬರೀ ಬದಲಾಗುವ ಕ್ಯಾಲೆಂಡರ್ ಹೊರತುಪಡಿಸಿ ಉಳಿದಿದ್ದೆಲ್ಲಾ ಅದೇ ಹಿಂದಿನದೇ. 

ಆದರೆ ಜಡ್ಡು ಕಟ್ಟಿದ ಮನಸ್ಸಿಗೆ ಯಾಂತ್ರಿಕವಾದ ಬದುಕಿಗೆ ಒಂದೆರಡು ಖುಷಿಯ ಕ್ಷಣಗಳು ಬೇಕು ಹಗುರಾಗಲು ಒಂದು ನೆಪಬೇಕು ಆ ನೆಪದಲ್ಲಿ ಆಪ್ತರೊಡನೆ, ಸ್ನೇಹಿತರೊಡನೆ ಬಂಧು ಬಾಂಧವರೊಡನೆ ಒಂದಷ್ಟು ಮಾತು, ಹರಟೆ, ನಗು, ಹಾಡು, ಕುಣಿತ, ತಿನ್ನುವುದು, ಕುಡಿಯುವುದು.. ಅವುಗಳ ಮೂಲಕ ಒಂದು ನಿರಾಳತೆಯನ್ನೂ, ಬಿಡುಗಡೆಯನ್ನೂ, ಸಾರ್ಥಕತೆಯ ಕ್ಷಣಗಳನ್ನೂ, ಹೊಸ ಭರವಸೆಯನ್ನೂ ಪಡೆಯಲು ಬಯಸುವುದಷ್ಟೇ ಅವುಗಳ ಆಚರಣೆಯ ಹಿಂದಿರುವ ಅರ್ಥ. ಬರೀ ಹೊಸ ವರ್ಷದ ಆಚರಣೆ ಅಲ್ಲ ಎಲ್ಲ ಹಬ್ಬ, ದಿನಗಳು, ಜಾತ್ರೆ, ಉತ್ಸವಗಳ ಉದ್ದೇಶವೂ ಅದುವೇ ಅಂಬೋದು ನನ್ನ ಅನಿಸಿಕೆ. ಇಷ್ಟಕ್ಕೂ ಅಖಂಡವಾದ ಅನಂತವಾದ ಕಾಲವನ್ನು ನಮ್ಮ ಅನುಕೂಲಕ್ಕಂತನೇ ತಾನೇ ನಾವು ವಿಭಾಗಿಸಿ ವರುಷ, ತಿಂಗಳು, ಮಾಸ, ತಿಥಿ, ವಾರ ಎಂದೆಲ್ಲ ಮಾಡಿಕೊಂಡಿದ್ದು.ನಿನ್ನೆಯಷ್ಟೇ ಎಲ್ಲಿಯೋ ಓದುತ್ತಿದ್ದೆ.. ಇಥಿಯೋಪಿಯಾ ದೇಶದ ಕ್ಯಾಲೆಂಡರ್, ಅಲ್ಲಿಯ ಹೊಸ ವರುಷ ಎಲ್ಲ ಬೇರೆಯೇ ಅಂತೆ. ಅಲ್ಲೀಗ 2018 ನಡೆದಿದೆಯಂತೆ. ಅದಕ್ಕೇ ಅಲ್ಲವೇ ‘ದೇಶ ಕಾಲ ವಿಭಾಗ ಮನದ ರಾಜ್ಯದೊಳಿರದು’ ಅಂತ ನಮ್ಮ ಗುಂಡಪ್ಪನವರು ಎಂದೋ ಹೇಳಿದ್ದು?!

ಹೊಸ ವರುಷ ಅಂದ ಮ್ಯಾಲೆ ಎಲ್ಲರ ಮನೆಯಾಗೂ ಹೊಸ ಕ್ಯಾಲೆಂಡರ್ ಹಾರಾಡಲಿಕ್ಕೇ ಬೇಕು . ಈ ಕ್ಯಾಲೆಂಡರ್ ನ ಇತಿಹಾಸ ಅಥವಾ ಕೆಲವು ಜನರ ಈ ಜನವರಿ ಫೆಬ್ರವರಿ ಅಥವಾ ಹಿಂದೂ ಪಂಚಾಂಗ ಚೈತ್ರ- ವೈಶಾಖಗಳ ದ್ವಂದ್ವ ಯುದ್ಧ ಇತ್ಯಾದಿಗಳ ಬಗ್ಗೆ ನಾ ಇಲ್ಲೇ ಮಾತನಾಡಲಿಕ್ಕೆ ಹೋಗೋದಿಲ್ಲ ಖರೇ ಹೇಳಬೇಕೆಂದರೆ ನಾವು ಸಣ್ಣವರಿದ್ದಾಗ ಅಂಕಲಪಿ ಹಿಂದೆ ಇದ್ದ ಚೈತ್ರ- ವೈಶಾಖ- ವಸಂತ ಋತು ಹಾಗೂ ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ಅಂತ ಎರಡನ್ನೂ. ಅಷ್ಟೇ ಶ್ರದ್ಧೆಯಿಂದ ಕಣ್ಮುಚ್ಚಿ ಕೈ ಕಟ್ಟಿ ನಿಂತು ಉರು ಹೊಡೆದಿದ್ದೆವು.. ಕೆಲವೊಮ್ಮೆ ಹಿಂದೆ ಮುಂದೆ ವಾಲಾಡುತ್ತಾ. ಜೋಡಿಗೆ ಆ ಜನವರಿ, ಫೆಬ್ರವರಿಗಳ ಸ್ಪೆಲಿಂಗ್ ಕಲಿಯಲಿಕ್ಕೂ ಪರಿಪಾಟಲು ಪಟ್ಟಿದ್ದು ಸುಳ್ಳಲ್ಲ. ಯಾಕೆಂದರೆ ಇಂಗ್ಲೀಷ್ ನಮ್ಮ ಕನ್ನಡದ್ಹಂಗ ಅಲ್ರಿ ಬಾಯಲ್ಲಿ ಅನ್ನೋದೇ ಬೇರೆ, ಅಲ್ಲಿ ಸ್ಪೆಲಿಂಗ್ ಬರೆಯುವುದೇ ಬೇರೆ. ಈಗ ಉದಾಹರಣೆಗೆ ನೋಡ್ರಿ ಜನವರಿಯನ್ನು ಬರೆಯುವುದು JANUARY ಅಂತ ಇಲ್ಲೇ U ಎಲ್ಲಿಂದ ಬಂತು ಅಂತ ತಲಿ ಕೆಡತಿತ್ತರೀ.. ಈಗಲೂ ಅಷ್ಟೇ ಎಷ್ಟೋ ಶಬ್ದಗಳನ್ನು ಉಚ್ಚಾರ ಮಾಡೂದ್ಹೆಂಗ ಅಂತ ಚಿಂತೀರಿ. ಏನs ಇರಲೀರಿ ನಮಗ ದಿನದ ಉಪಯೋಗಕ್ಕೆ ಸರಳ ಅನ್ನಸೂವು ಈ ಜನವರಿ ಫೆಬ್ರವರಿನೇ. ಚೈತ್ರ ವೈಶಾಖಗಳು ಸ್ವಲ್ಪ ಕಠಿಣ ಅನ್ನಿಸಿ ಬಿಡತಾವ್ರೀ. ವೈಶಾಖ ಶುದ್ಧ ದಶಮಿ, ಭಾದ್ರಪದ ಶುಕ್ಲ ಚೌತಿ, ಶ್ರಾವಣ ಬಹಳ ಅಷ್ಟಮಿ ಹಿಂಗೆಲ್ಲಾ. ಆ ಕೃಷ್ಣ ಪಕ್ಷ ಶುಕ್ಲ ಪಕ್ಷಗಳು, ಶುದ್ಧ ಬಹುಳಗಳು ಸ್ವಲ್ಪ ಕನ್ಫ್ಯೂಸ್ ಆಗಿಬಿಡತಾವ್ರಿ. ಅವು ಸುಮ್ಮ ಮದುವೆ ಮುಂಜವಿಗಳಿಗೆ, ಪೂಜಾ ಪುನಸ್ಕಾರಗಳಿಗೆ, ಲಗ್ನ ಮುಹೂರ್ತಕ್ಕಷ್ಟೇ ಸೀಮಿತವಾಗಿ ಬಿಟ್ಟಾವ. ಹಂಗ ನೋಡಿದ್ರ ಈ ಜನವರಿ ಫೆಬ್ರವರಿಗಳು ದಿನ ಊಟಕ್ಕೆ ಬಳಸುವ ಸ್ಟೀಲ್ ತಟ್ಟೆ ಲೋಟಗಳಾದ್ರ ಈ ಸಂವತ್ಸರೇ, ಅಯನೇ, ಮಾಸೌ, ಪಕ್ಷೇ, ತಿಥೇ, ವಾಸರೌ.. ಎಲ್ಲಾ ಯಾರರೆ ಅತಿಥಿ ಅಭ್ಯಾಗತರು ಬೀಗರು ಬಿಜ್ಜರು ಬಂದಾಗ ಮಾತ್ರ ಹೊರ ತೆಗೆದು ಅವರು ಹೋದ ನಂತರ ಮತ್ತೆ ಕಾಳಜಿಲೆ ಪ್ಯಾಕ್ ಮಾಡಿ ಸ್ವಸ್ಥಾನಕ್ಕೆ ಸೇರಿಸಿಬಿಡುವ ತುಟ್ಟಿ ಡಿನ್ನರ್ ಸೆಟ್ ಗಳ ಗತೆ ಅಂದ್ರ ತಪ್ಪಾಗಲಿಕ್ಕಿಲ್ಲ.

ಆದ್ರೆ ಕೆಲವು ಈ ನಮ್ಮ ಕ್ಯಾಲೆಂಡರ್ ಗಳು ಇರ್ತಾವಲ್ರೀ ‘ ಹೊಂಬಾಳಿ ಬಂಧುಗಳು’, ‘ ಮಹಾಲಕ್ಷ್ಮಿ ದಿನದರ್ಶಿಕೆ’, ‘ಕಾಲ ನಿರ್ಣಯ’ ಇತ್ಯಾದಿ.. ಇವುಗಳು ಮಾಡುವ ಕೆಲಸ ಅನನ್ಯ ನೋಡ್ರಿ ಇವುಗಳೊಳಗ ಜನವರಿ ಫೆಬ್ರವರಿ 1 ರಿಂದ 28,30,31 ದಿನಾಂಕಗಳ ಜೊತೆಗೆ ತಿಥಿ, ನಕ್ಷತ್ರ, ರಾಹುಕಾಲ, ಗುಳಿಕಕಾಲ ಎಲ್ಲಾನೂ ಕೊಟ್ಟಿರ್ತಾರ. ಏನು ಮಾಹಿತಿ ಬೇಕಂದ್ರೂ ತಟ್ಟಂತ ಸಿಕ್ಕಿಬಿಡುತ್ತದ. ಅಡುಗೆಮನೆ ಗ್ವಾಡಿಗೆ ಇಂಥದೊಂದು ಕ್ಯಾಲೆಂಡರ್ ಬೇಕೇ ಬೇಕು ನೋಡ್ರಿ. ರಥ, ಜಾತ್ರಿ, ತೇರು ಏಕಾದಶಿ- ದ್ವಾದಶಿಗಳು, ಹುಣ್ಣಿಮೆ- ಅಮಾವಾಸ್ಯೆಗಳು, ಹಬ್ಬ- ಹರಿದಿನಗಳು, ಆರಾಧನೆ- ವರ್ಧಂತಿಗಳು, ಸಂಕಷ್ಟಿ, ಚಂದ್ರೋದಯ- ಸೂರ್ಯೋದಯಗಳು ಇವುಗಳ ಮಾಹಿತಿ ಗೃಹಿಣಿ ಆದಾಕಿಗೆ ಅವಶ್ಯ ಇರಬೇಕಲ್ರಿ.ಅದಕ್ಕ ಅಡುಗೆಮನ್ಯಾಗೊಂದು ಕ್ಯಾಲೆಂಡರ್ ಇದ್ರ ಅದರ ಮೇಲೆ ಕಣ್ಣು ಹಾಯಕೋತ ಇರ್ತದ. ಇರಲಿಕ್ಕಂದ್ರ ಏಕಾದಶಿ ಮುಂಜಾನೆ ಘಂ ಅಂತ ಉಳ್ಳಾಗಡ್ಡಿ ಉಪ್ಪಿಟ್ಟು ತಯಾರಾಗಿ ಬಿಡುತದ. ಮರುದಿನದ ಹುಣ್ಣಿಮೆಗೆ ಕಾಯಿ ತರೋದು ಮರೆತು ಹೋಗ್ತದ. ಕುಲ ದೇವರ ತೇರು, ಮನೆಯ ಹೆಣ್ಣು ದೇವತೆಯ ಕಾರ್ತಿಕೋತ್ಸವ, ತೆಪ್ಪೋತ್ಸವ ಇವುಗಳೆಲ್ಲ ನೆನಪೇ ಉಳಿಯುವುದಿಲ್ಲ.

ಈ ಕ್ಯಾಲೆಂಡರ್ಗಳ ಬಹುಪಯೋಗ ನಿಮಗೂ ಗೊತ್ತೇ ಇರುತದ್ರಿ. ಅವಸರಕ್ಕ ಬೇಕಂದಾಗ ದಾರದ ಸಮೇತ ಸೂಜಿ, ಟಾಚನಿಗಳು ಸಿಗುವುದು ಇದೇ ಕ್ಯಾಲೆಂಡರಿನಾಗೇರಿ. ತಿಂಗಳ ವರವಿ ಹಾಲು -ಮೊಸರಿನ ಲೆಕ್ಕ, ಇಸ್ತ್ರಿ ಅವನಿಗೆ ಕೊಟ್ಟ ಬಟ್ಟೆಗಳು, ಅವನು ವಾಪಸ್ ಕೊಡಬೇಕಾದ ಚಿಲ್ಲರೆಯ ಲೆಕ್ಕ, ಯಾವುದೋ ಬ್ಲಡ್ ಟೆಸ್ಟ್, ದಂತ ವೈದ್ಯರ ಅಪಾಯಿಂಟ್ಮೆಂಟ್ ದಿನಾಂಕ, ಮಕ್ಕಳ ಶಾಲೆಯ ಪೇರೆಂಟ್ -ಮೀಟಿಂಗ್, ಪಿಕ್ನಿಕ್- ಗ್ಯಾದರಿಂಗು ಇವುಗಳ ದಿನಾಂಕಗಳು, ಯಾರದೋ ಮನೆಯ ಮದುವೆಯ ರಿಸೆಪ್ಶನ್, ಬಂಧುಗಳೊಬ್ಬರ ಸೊಸೆಯ ಶ್ರೀಮಂತದೂಟಕ್ಕೆ ಹೋಗಬೇಕಾಗಿರುವ ದಿನಾಂಕಗಳು, ಕಿರಾಣಿ ಖರೀದಿಸಿದ ದಿನ ಮತ್ತು ಅದರ ಟೋಟಲ್ ರೊಕ್ಕ ( ಯಾಕಂದ್ರೆ ಯಜಮಾನರು ಯಾವಾಗ ಕಿರಾಣಿ ತರಲು ಕರೆದರೂ “ಮನ್ನೀನ ತಂದಿದ್ದೆಲ್ಲಾ 20,000 ಕಿರಾಣಿ ಅಂತಿರ್ತಾರ. ಅವರಿಗೆ ಸಾಕ್ಷಿ ಸಮೇತ ಆ ಹಿಂದಿನ ಡೇಟ್, ದುಡ್ಡು ತೋರಿಸಬೇಕಲ್ರೀ ಅದಕ್ಕ) ಇನ್ನ ಕೆಲಸದ ಗದ್ದಲದಾಗ ಮರೆತು ಬಿಡಬಾರದಂತ ಮನೆಯವರ ಆಫೀಸಿನ ಟೂರಿನ ದಿನಾಂಕ, ತಿಂಗಳ ಮೊದಲೇ ತಮ್ಮ ಆಗಮನದ ಡೇಟ್ ತಿಳಿಸಿದ ಅತಿಥಿಗಳ ಆಗಮನದ ದಿನಾಂಕ, ಅವರ ಟ್ರೈನು, ಬೋಗಿ ನಂಬರ್, ಫ್ಲೈಟು, arrival time, ಟರ್ಮಿನಲ್ ಇತ್ಯಾದಿಗಳ ದಾಖಲಾತಿ ಎಲ್ಲಾ ಇಲ್ಲೇ ಈ ತೂಗಾಡೋ ಕ್ಯಾಲೆಂಡರಿನಲ್ಲೇ. ನಾದಿನಿಯ ಗಂಡ, ತಮ್ಮನ ಹೆಂಡತಿ, ಅಕ್ಕನ ಗಂಡ ಹೀಗೆ ಬಹಳ ಪ್ರಮುಖರಾದವರ ಹುಟ್ಟುಹಬ್ಬ, ಆನಿವರ್ಸರಿ ಮರೆತು ಬಿಡಬಹುದಾದ ಸಾಧ್ಯತೆಗಳೇ ಹೆಚ್ಚು. ಆ ಪ್ರಮಾದಗಳು ಆಗದಂಗ ತಪ್ಪಿಸಲಿಕ್ಕೆ ಈ ಕ್ಯಾಲೆಂಡರ್ ನಾಗ ಮಾರ್ಕ್ ಮಾಡಿ ಇಟ್ಟುಬಿಟ್ಟರ ಆಯ್ತ್ರಿ . ಇನ್ನ ಮನೆ ಕೆಲಸದಕಿ ತಗೊಂಡ ರಜಾ ದಿನಗಳು, ಅಕಿ ಅಡ್ವಾನ್ಸ್ ಆಗಿ ಇಸ್ಕೊಳ್ಳೋ ನೂರು ಇನ್ನೂರು ರೂಪಾಯಿಗಳ ಲೆಕ್ಕಕ್ಕೂ ಈ ಕ್ಯಾಲೆಂಡರ್ ಬೇಕ್ರಿ. ಇಲ್ಲ ಅಂದ್ರ ತಿಂಗಳದಾಗ ನಾಲ್ಕು ದಿನ ರಜಾ ಮಾಡಿ ಅಂತ ನಾನು, ಇಲ್ಲ ಎರಡೇ ದಿನ ಅಂತ ಅಕಿ ಹಾಕ್ಯಾಡೋದು ನಡೀತಿತ್ರೀ. ಆದ್ರ ಯಾವಾಗ ಈ ಕ್ಯಾಲೆಂಡರ್ನಾಗ ಅವೆಲ್ಲ ದಾಖಲಾಗಲಿಕ್ಕೆ ಶುರು ಆಯ್ತೋ ಆಗ ಇಂಥ ಪ್ರಸಂಗಗಳು ಕಡಿಮೆ ಆದ್ವು ಅನ್ರಿ. ಅಷ್ಟೇ ಅಲ್ರಿ ನಾನಂತೂ ಕೆಲವೊಂದು ಅರ್ಜೆಂಟ್, ಎಮರ್ಜೆನ್ಸಿ ಫೋನ್ ನಂಬರ್ ಗಳನ್ನು ಅದರ ಮೇಲೇ ಗೀಚಿರತೀನ್ರಿ. ಫೆಸಿಲಿಟಿ ಆಫೀಸ್, ಗ್ಯಾಸ್ ಸಿಲಿಂಡರ್ ಏಜೆನ್ಸಿ, ಮಿಕ್ಸಿ ರಿಪೇರಿಯವ, ರದ್ದಿ ಪೇಪರಿನವ, ಹೋಂ ಡೆಲಿವರಿ ಮಾಡುವ ಹತ್ತಿರದ ಕಿರಾಣಿ ಅಂಗಡಿಯವ, ಅರ್ಜಂಟಿಗೊದಗುವ ಆಟೋ ಚಾಲಕ, ಡ್ರೈಕ್ಲೀನಿನವ, ಟೇಲರ್, ಬ್ಯೂಟಿ ಪಾರ್ಲರ್ ದಕಿ.. ಹೀಂಗs ನೂರಾ ಎಂಟು ನಂಬರ್.. ಯಾಕ ನಗಲಿಕ್ಹತ್ತೀರೇನು? ಏಯ್ ನಿಮಗೇನ ಗೊತ್ತರೀ ಯಾವ ಟೈ ಮಿನಾಗ ಯಾರಾರ ನಂಬರ್ ಹರಕತ್ ಆಗಿಬಿಡತಾವ ಅಂತ. ಮೊಬೈಲ್ ನಾಗ ಸೇವ್ ಮಾಡಕೋಬಹುದಲಾ ಅಂತೀರೇನು ಅದರ ಕಥಿನೂ ಹೇಳತೀನಿ ತಡೀರಿ. ಮೊಬೈಲ್ ನಾಗ ನಮಗ ಬೇಕಂದಾಗ ಕೆಂಪು ಗೆರಿನೇ.. ಚಾರ್ಜೇ ಇರಂಗಿಲ್ಲ. ನೂರೆಂಟು ಗೇಮ್ಸ್ ಡೌನ್ಲೋಡ್ ಮಾಡಿಕೊಂಡು ಆಡಿ, U tube, google ಜನ್ಮವನ್ನೆಲ್ಲ ಜಾಲಾಡಿ ಬ್ಯಾಟರಿ ಲೋ ಅಂತ ತೋರಿಸಿದ ಕೂಡಲೇ ಎಲ್ಲಿ ಕೂತಿರತಾರೋ ಅಲ್ಲೇ ಅದನ್ನಿಟ್ಟು ಎದ್ದು ಮತ್ತೊಂದು ಅಪ್ಪನದೋ, ಅಜ್ಜನದೋ ಮೊಬೈಲ್ ಅನ್ವೇಷಣೆಗೆ ಹೊರಡೂದು ನಮ್ಮ ಮಕ್ಕಳ ಹುಟ್ಟು ಗುಣಾರೀ. ಎಷ್ಟರ ಬಯ್ಯರಿ, ತಿಳಿಸಿ ಹೇಳ್ರಿ ಏನು ಉಪಯೋಗ ಇಲ್ಲ ರೀ. ಹಿಂಗಾಗಿ ಮೊದಲು ಮೊಬೈಲ್ ಹುಡುಕುವ ಕೆಲಸ ಶುರು ಮಾಡಬೇಕ್ರಿ. ಸೋಫಾ ಸಂದ್ಯಾಗ, ಡೈನಿಂಗ್ ಟೇಬಲ್ ಚೇರ್ ಮ್ಯಾಲೋ, ಮಡಚಿಡಬೇಕು ಎಂದು ಗುಡ್ಡೆ ಹಾಕಿದ ಒಗೆದ ಬಟ್ಟೆಗಳ ರಾಶಿಯಲ್ಲೋ, ರಜಾಯಿಯ ಸುರುಳಿ, ತಲೆದಿಂಬಿನ ಕವರ್ ನಲ್ಲೋ, ಬಚ್ಚಲು ಮನೆಯ ಸಿಂಕಿನ ಬಳಿಯೋ ಎಲ್ಲಿ ಬೇಕಾದರೂ ಪರದೇಶಿಗತೆ ಅದು ಬಿದ್ದಿರಬಹುದಾದ ಸಾಧ್ಯತೆಗಳು ಹೆಚ್ಚರೀ. ಯಾರನ್ನೇ ಕೇಳ್ರಿ ‘ನಾ ನೋಡಿಲ್ಲ.. ಚಿನ್ನು ತಗೊಂಡಿದ್ಲು’, ‘ನಂಗೊತ್ತಿಲ್ಲ.. ಅಣ್ಣಾ ಪಬ್ಜಿ ಆಡಲಿ ಕ್ಹತ್ತಿದ್ದ’, ‘ಇಲ್ಲೇ ಚಾರ್ಜಿಗಿತ್ತು.. ಆಗಳೇ ನೋಡಿದ್ದೆ.’. ಇಂಥವೇ ಉತ್ತರಗಳು. ರಿಂಗ್ ಮಾಡಿದ್ರೆ ಪಾಪ ಗುಟುಕು ಜೀವ ಹಿಡಿದ ಅದಕ್ಕ ರಿಂಗ್ ಆಗುವ ತಾಕತ್ತೂ ಇರುವುದಿಲ್ಲ. ಕೆಲವೊಮ್ಮೆ ಅಂತೂ ನಾನು ಗೇಮ್ ಆಡಿದ್ರ ಬೈತೀನಿ ಅಂತ ಸೈಲೆಂಟ್ ಬೇರೆ ಮಾಡಿರತಾರ. ಹಿಂಗಂತ ಪಾಸ್ವರ್ಡ್ ಹಾಕಿಟ್ರೆ ಆ ನಂಬರು ಪ್ಯಾಟರ್ನ್ ಏನಿತ್ತು ಅಂತ ನಂಗs ನೆನಪಿರುವುದಿಲ್ಲರೀ. ಇನ್ನ ಯಾವುದರ ಡೈರಿನಾಗ ಬರೆದಿಟ್ಟುಕೊಂಡಿದ್ದರೂ ಆ ಡೈರಿ ಹುಡುಕಲಿಕ್ಕೆ ತಾಸು ಬೇಕು. ಯಾಕಂದ್ರ ಮಗಳು ಒಮ್ಮೆ ಅದನ್ನ ತನ್ನ rough note book ಮಾಡಿಕೊಂಡಿರತಾಳ. ಇನ್ನೊಮ್ಮೆ ಮಗ ರಾಯ ಯಾವುದೋ ಹಾಳಿನಾಗ ಯಾರಿಗೋ ಅಡ್ರೆಸ್ ಬರೀಲಿಕ್ಕೆ ಅಂತ ಅದನ್ನ ಪೇಪರ್ ಪ್ಯಾಡ್ ಗತೆ use ಮಾಡಿ ಎಲ್ಲೋ ಸೇರಿ ಸಿಟ್ಟು ಹೋಗಿರುತ್ತಾನೆ. ವೀಕೆಂಡ್ಗೆ ಮನೆಗೆ ಬಂದಿದ್ದ ನಾದಿನಿ ಮಗಳು ಅದನ್ನು ಡ್ರಾಯಿಂಗ್ ಬುಕ್ ಮಾಡಿಕೊಂಡು ಚಿತ್ರ ಗೀಚಿರತಾಳ. ಟೀಪಾಯ್ ಮೇಲಿದ್ರ ಯಾರೋ ಅದನ್ನು ಬಿಸಿ ಚಹಾ ಕಪ್ ಇಡಲಿಕ್ಕೆ ಕೋಸ್ಟರ್ ಗತೆ ಸಹ ಬಳಸಿರತಾರ. ಹೀಂಗಾಗಿ ಇವ್ಯಾವುದರ ಉಸಾಬರಿನೇ ಬ್ಯಾಡ ಅಂತ ‘ಅನ್ಯಥಾ ಶರಣಂ ನಾಸ್ತಿ.. ತ್ವಮೇವ ಶರಣಂ ಮಮ’ ಅಂತ ಈ ಕ್ಯಾಲೆಂಡರಿನ ಮೊರೆ ಹೋಗುವುದೊಂದೇ ದಾರಿ. ನಂಬಿದವರ ಕೈಬಿಡಲಾರದ ದೊಡ್ಡ ಗುಣ ಈ ನಮ್ಮ ಅಡಗಿಮನಿ ಕ್ಯಾಲೆಂಡರಿಗೆ ಅದರೀ.
ಡಿಸೆಂಬರ್ ತಿಂಗಳು ಬಂತಂದ್ರ ಈ ಕ್ಯಾಲೆಂಡರುಗಳ ವ್ಯಾಪಾರದ ಭರಾಟೆ ನೋಡಬೇಕ್ರಿ. ಎಲ್ಲಾ ಸ್ಟೇಷನರಿ ಹಾಗೂ ಪುಸ್ತಕ ಅಂಗಡಿಗಳೊಳಗ ನಾನಾ ನಮೂನಿ ಹೊಚ್ಚ ಹೊಸ ಕ್ಯಾಲೆಂಡರುಗಳು ಮನೆಮನೆಯ ಗೋಡೆಯನ್ನಲಂಕರಿಸಲು ಸಜ್ಜಾಗಿ ಕೂತಿರತಾವ. ವೆಂಕಪ್ಪ, ಹನುಮಪ್ಪ, ಶಿವ, ನರಸಿಂಹ, ಲಕ್ಷ್ಮಿ ಇತ್ಯಾದಿ ದೇವತೆಗಳ ಚಂದದ ಕ್ಯಾಲೆಂಡರ್ ಗಳು. ನಮ್ಮ ಬಾಲ್ಯಕಾಲದ ಎಲ್ಲಾ ಮನೆಯ ಪಡಸಾಲೆಗಳಲ್ಲಿ ಎಲ್ಲಾ ಪ್ರಮುಖ ದೇವತೆ ದೇವತೆಗಳು ಹಿಂಗ ಕ್ಯಾಲೆಂಡರಿನಾಗ ಜೋಕಾಲಿ ಆಡುತ್ತಿದ್ದರು. ನಾವು ಹೊರಹೋಗಲು ಚಪ್ಪಲಿ ಮೆಟ್ಟುವುದಕ್ಕಿಂತ ಮೊದಲು ತಪ್ಪದೇ ಈ ಜೀಕುವ ದೇವರಿಗೆ ಕೈಮುಗಿದೇ ಹೋಗುತ್ತಿದ್ವಿ. ಕೈ ಮುಗಿದೀದ್ದರೂ ಕಡೀಕೆ ಕಣ್ರೆಪ್ಪೆ ಮುಚ್ಚಿ ತೆಗೆದಾದರೂ ಸಾಂಕೇತಿಕ ನಮಸ್ಕಾರ ಸಲ್ಲಿಸಿಯೇ ಹೊರಗಡಿ ಇಡುತ್ತಿದ್ದು. ಎಲ್ಲ ದೇವಾನುದೇವತೆಗಳ ರೂಪ, ಮೈಬಣ್ಣ, ಅವರ ಆರು-ಮೂರು- ನಾಲ್ಕು ತಲೆಗಳು, ಚತುರ್ ಷಡ್ ಭುಜಗಳು,ಶಂಖ- ಚಕ್ರ- ಗದಾ- ತ್ರಿಶೂಲಾದಿ ಆಯುಧಗಳು, ಗರುಡ -ನಂದಿ- ನವಿಲು -ಇಲಿ ಇತ್ಯಾದಿ ಅವರ ಸ್ಪೆಸಿಫಿಕ್ ಆದ ವಾಹನಗಳು, ಅವರು ನುಡಿಸುವ ಕೊಳಲು, ವೀಣೆ ಇತ್ಯಾದಿ ವಾದ್ಯಗಳು,ಆಭರಣಗಳು, ಉಡುಗೆತೊಡುಗೆಗಳು ನಮ್ಮ ಅರಿವಿನ ವಲಯಕ್ಕೆ ತಲುಪಿದ್ದೇ ಈ ಕ್ಯಾಲೆಂಡರುಗಳಿಂದ. ಒಂದರ್ಥದಲ್ಲಿ ದೇವ ದರುಶನ ಮಾಡಿಸಿದ ಗುರು ಸ್ಥಾನ ಸಲ್ಲಬೇಕಿವಕ್ಕೆ. ಎಷ್ಟೋ ಚೆಂದದ ಕ್ಯಾಲೆಂಡರ್ ಗಳು ಕಟ್ ಹಾಕಿಸಿಕೊಂಡು ದೇವರ ಫೋಟೋ ಆಗಿ ಸೀದಾ ದೇವರ ಮನೆಗೆ ಬಡ್ತಿ ಪಡೆಯುತ್ತಿದ್ದವು. ಈಗಲೂ ನನ್ನ ಅಡುಗೆ ಮನೆಯಲ್ಲಿ ವಿರಾಜಮಾನವಾಗಿರುವ 2014ನೇ ಇಸ್ವಿಯ, ಬರ್ಮೀಂಗ್ ಹ್ಯಾಮಿನ ದೇವಸ್ಥಾನದ ಕ್ಯಾಲೆಂಡರಿನ ವೆಂಕಪ್ಪನ ಪಾದಸ್ಪರ್ಶದಿಂದಲೇ ನಮ್ಮ ದಿನಚರಿ ಆರಂಭ ಆಗುತ್ತದೆ. ಯಾಕಂದ್ರ ನಮ್ಮ ಕುಲದೈವರೀ ವೆಂಕಪ್ಪ. ನಾವೂ ಅವನ ಒಕ್ಕಲದವರೇ.. ಅಷ್ಟೇ ಅಲ್ಲ ಬಹಳಷ್ಟು ಸಾಮ್ಯ ಅವರೀ ನಮಗೂ ಅವಗೂ. ನಾವು ಎಲ್ಲರs ಹೊರಗೆ ಹೊಂಟ್ರ ಅವನ ಹಂಗ ಸಿರಿ -ಗರುಡ- ಶೇಷ- ವಾಯು- ಬ್ರಹ್ಮಾದಿಗಳ ಸುರವರ ಪರಿವಾರ ಸಮೇತ ಹೊಂಡಿತೀವ್ರಿ. ಕನಿಷ್ಠ ಪಕ್ಷ ಎಂಟು 10 ಮಂದಿ ಅಂತೂ ಇರಬೇಕು. ಹಿಂಗಾಗಿ ಖರೆ  ಹೇಳ್ತಿನ್ರಿ ಮಂದಿ ನಮ್ಮನ್ನು ತಮ್ಮ ಮನೆಗೆ ಛಾಕ್ಕ ಸಹಿತ ಕರೀಲಿಕ್ಕೆ ಅಂಜತಾರ್ರೀ. ಮತ್ತ ಹತ್ತಾರು ಮೂಲಗಳಿಂದ ಸಾಕಷ್ಟು ಬೇಕಾದಷ್ಟು ಆದಾಯ ಇದ್ದರೂ ವೆಂಕಪ್ಪ ಸದಾ ಸಾಲಗಾರನೇ. ನಾವೂ ಹಂಗs ಆದಾಯದ ಸ್ರೋತ್ರಗಳೆಷ್ಟೇ ಇರಲಿ ನಮ್ಮ ಕ್ರೆಡಿಟ್ ಮುಗಿಯೋದೇ ಇಲ್ರೀ , ಹೋಂ ಲೋನ್, ಕಾರ್ ಲೋನ್, ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಲೋನ್ ಎಷ್ಟೆಷ್ಟು ಪ್ರಕಾರದ ಲೋನ್ ಗಳು ಅವನೋ ಅಷ್ಟೆಲ್ಲಾ ತರ ಲೋನ್ಗಾರರು ನಾವು. ಇರಲಿ ಬಿಡ್ರಿ ವಿಷಯ ಎಲ್ಲಿಂದೆಲ್ಲೋ  ಹೊಂಟತು ಕ್ಯಾಲೆಂಡರ್ ಬಿಟ್ಟು.
ಚಂದ ಚಂದ ನೆಯ ನೀಲಿ ಆಗಸ, ನೀಲಿ ಕಡಲು, ಬೆಟ್ಟ,ಹಸಿರು ವನಗಳು, ಬಣ್ಣಬಣ್ಣದ ಹೂಗಳಂಥ ನಿಸರ್ಗ ಸೌಂದರ್ಯದ ಕ್ಯಾಲೆಂಡರ್ ಗಳು, ಪ್ರಾಣಿ-ಪಕ್ಷಿಗಳ ಕ್ಯಾಲೆಂಡರ್ ಗಳು, ಮುದ್ದು ಮುದ್ದಾದ ಪುಟ್ಟ ಮಕ್ಕಳ ಕ್ಯಾಲೆಂಡರ್ ಗಳು, ರವಿವರ್ಮನ ಪೇಂಟಿಂಗ್ ಗಳ ಚಿತ್ರವಿರುವ ಕ್ಯಾಲೆಂಡರ್ ಗಳು, ಮೈಸೂರ ಅರಮನೆ, ತಾಜ್ಮಹಲ್, ಗೋಲ್ ಗುಂಬಜ್, ಹಂಪಿಯ ಕಲ್ಲಿನ ರಥವಿರುವಂತಹ ಐತಿಹಾಸಿಕ ಸ್ಮಾರಕಗಳ ಕ್ಯಾಲೆಂಡರ್ ಗಳು, ಸ್ವಾತಂತ್ರ್ಯ ಯೋಧರ, ಸಾಹಿತಿಗಳ, ಕವಿಗಳ ಕ್ಯಾಲೆಂಡರ್ ಗಳು, ಸಿನಿಮಾ ನಟ- ನಟಿಯರ ಕ್ಯಾಲೆಂಡರ್ ಗಳು, ತುಂಡುಡುಗೆಯಲ್ಲಿ ದೇಹಸಿರಿ ಪ್ರದರ್ಶಿಸುವ ರೂಪದರ್ಶಿಗಳ ಮಾದಕ ಕ್ಯಾಲೆಂಡರ್ ಗಳು ಓಹ್! ಎಷ್ಟೆಲ್ಲಾ ವೈವಿಧ್ಯಮಯ.. ಎಷ್ಟೋ ನಮಗೆ ಪ್ರಿಯವಾದ ನಟ ನಟಿಯರ, ಧೀಮಂತ ವ್ಯಕ್ತಿಗಳ, ನಿಸರ್ಗ ಚಿತ್ರಗಳ ಕ್ಯಾಲೆಂಡರ್ ಅನ್ನು ಪುಸ್ತಕ- ನೋಟ್ಬುಕ್ಕುಗಳಿಗೆ ಕವರ್ ಹಾಕಲು ಉಪಯೋಗಿಸಿದ್ದಿದೆ. ಬರೀ ಗೋಡೆಗೆ ತೂಗು ಹಾಕುವ ಕ್ಯಾಲೆಂಡರ್ಗಳಷ್ಟೇ ಅಲ್ಲ ಟೇಬಲ್ ಮೇಲೆ ಇಡಬಹುದಾದ ಕ್ಯಾಲೆಂಡರ್ ಗಳು ಇರ್ತಾವ. ಎಷ್ಟೋ ಬ್ಯಾಂಕು, ಎಲ್ಐಸಿ, ಪ್ರೈವೇಟ್ ಕಂಪನಿಗಳು ತಮ್ಮದೇ ಲೇಬಲ್ ನಡಿಯಲ್ಲಿ ಕ್ಯಾಲೆಂಡರ್ ಮಾಡಿಸುವುದು ಸರ್ವೇಸಾಮಾನ್ಯ. ಇನ್ನು ಕೆಲವೊಬ್ಬ ಸ್ಥಿತಿವಂತರು ತಮ್ಮ ಮದುವೆಯ, ಮಕ್ಕಳ ಚಿತ್ರಗಳನ್ನು ಒಳಗೊಂಡ ತಮ್ಮದೇ ಆದ ಕ್ಯಾಲೆಂಡರ್ ಮಾಡಿಸಿಕೊಂಡು ತಮ್ಮ ಬಂಗಲೆ ಅಂಥ ಮನೆಯ ಲಿವಿಂಗ್ ರೂಮ್ನಲ್ಲೋ, ಬೆಡ್ರೂಮ್ ನಲ್ಲೋ ಹಾಕಿರತಾರ.

ಮಜಾ ಅಂದ್ರ ಕ್ಯಾಲೆಂಡರಿನ ಮುಂಭಾಗದಷ್ಟೇ ಹಿಂಭಾಗವೂ ಅತ್ಯಂತ ಆಸಕ್ತಿದಾಯಕ ವಿಷಯಗಳನ್ನು ಒಳಗೊಂಡಿರುತದ ಅನ್ನೋದು ನಿಮಗೂ ಗೊತ್ತೇ ಇರುತ್ತದ. ರಾಶಿ ಭವಿಷ್ಯ, ತಲೆನೋವಿನಿಂದ ಮೂಲವ್ಯಾಧಿ ತನಕ ಎಲ್ಲಾ ಜಡ್ಡುಗಳಿಗೂ ಮನೆಮದ್ದುಗಳು, ಗೋದಿ- ಜೋಳದಾಗ ನುಶಿ ಆದ್ರ, ಬ್ಯಾಳಿ- ಕಾಳಿನಾಗ ಬುರಬುರಿ, ಹಾರೋ ಹುಳ, ರವಾದಾಗ ಬಾಲ ಹುಳ ಆದರೆ ಏನು ಮಾಡಬೇಕು, ತಲ್ಯಾಗ ಹೇನು ಆದ್ರ ಏನು ಮಾಡಬೇಕು, ಮನ್ಯಾಗ ಜೊಂಡಿಗ್ಯಾ,ಹಲ್ಲಿ ಹಾವಳಿಯಾದ್ರ ಏನು ಮಾಡಬೇಕು, ಹೊಲದಾಗಿನ ಯಾವ ಬೆಳೀಗೆ ಯಾವ ಗೊಬ್ಬರ ಹಾಕಬೇಕು, ಮುಖದ ಮೇಲೆ ಮೊಡವಿಗಳಾದ್ರ.. ತಲೆ ಕೂದಲು ಉದುರಿದರ..ತ್ವಚೆ ಕಾಂತಿಹೀನವಾದ್ರಏನೇನೆಲ್ಲ ಮಾಡಬೇಕು?, ಗ್ರಹಣವಾದಾಗ ಏನು ತಿನ್ನಬೇಕು, ಯಾವಾಗ ತಿನ್ನಬೇಕು, ಏನೇನು ದಾನ ಕೊಡಬೇಕು ಎಲ್ಲದರ ವಿವರಣೆ ಇರತದ. ಹಲ್ಲಿ ಮೈಮೇಲೆ ಬಿದ್ರ, ಬೆಕ್ಕು ಅಡ್ಡ ಹೋದ್ರಾ , ನಾಯಿ ಊಳಿಟ್ಟರ, ಮನೆ ಮುಂದೆ ಆಕಳು ಸಗಣಿ ಹಾಕಿ ಹೋಗಿದ್ರ, ಬಲಗಣ್ಣು ಅದುರಿದ್ರ, ಎಡಗಾಲು ತುರಿಸಿದ್ರ.. ಹಿಂಗ ಹತ್ತು ಹಲವಾರು ಶಕುನ ಫಲಗಳು.. ಕನಸಿನಾಗ ತುಂಬಿದ ಕೊಡ ಬಂದ್ರ, ಹಾವು ಬಂದ್ರ, ದೇವರು ಬಂದ್ರ, ಸತ್ತ್ರ, ಎದ್ರ, ಬಿದ್ರ ಅಂತೆಲ್ಲ 108 ಸ್ವಪ್ನ ಫಲಗಳು.. ಮುಂಗಾರು ಹಿಂಗಾರು ಮಳೆ, ನಕ್ಷತ್ರಗಳ ವಿವರಣೆ, ಮಳೆಯ ಸಂಭವನೀಯತೆಗಳು.. ಕೃಷ್ಣಾರ್ಘ್ಯ ಮಂತ್ರ, ಕಾರ್ತಿಕ ಸ್ನಾನದ ಮಂತ್ರ, ನಷ್ಟವಸ್ತು ಸಿಗುವ ಕಾರ್ತವೀರ್ಯಾರ್ಜುನ ಮಂತ್ರ, ಲಗ್ನ ಮುಹೂರ್ತಗಳು, ಪ್ರಯಾಣಕ್ಕೆ ಶುಭ ತಿಥಿ, ಶುಭ ನಕ್ಷತ್ರಗಳ ವಿವರಣೆ , ವಾಸ್ತು ಪುರುಷ ತೇಜಿ ಮಂದಿ ಏನುಂಟು ಏನಿಲ್ಲ ನನಗಂತೂ ಹೊಸ ಕ್ಯಾಲೆಂಡರ್ ಬಂದೊಡನೆ ಅದರ ಹಿಂಪುಟಗಳನ್ನು ತಿರುಗಿಸಿ ನೋಡುವುದೇ ಅಲ್ಲಲ್ಲ ಓದುವುದೇ ಕೆಲಸ. ಈಗೀಗ ಮೊಬೈಲ್ನಾಗೂ ಆಯಾ ವರ್ಷದ ಕ್ಯಾಲೆಂಡರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಒಂದು ಬಟ್ಟೊತ್ತಿದರೆ ಸಾಕು ಎಲ್ಲ ಮಾಹಿತಿ ಪಡೆಯಬಹುದು. ಆದರೆ ಗ್ವಾಡಿಗೆ ಮಳಿ ಹೊಡೆದು ತೂಗು ಹಾಕಿದ ಆ ಕ್ಯಾಲೆಂಡರ್ ನ ಮಜಾ ಖಂಡಿತ ಅದರಾಗಿಲ್ಲ. ಯಾಕಂದ್ರ ನಾ ಈ ಹಿಂದೆ ಹೇಳಿದ ಸೂಜಿ ಚುಚ್ಚುವುದೇ ಮುಂತಾದ ಯಾವ ಬಹುಪಯೋಗಿ ಕೆಲಸಕ್ಕೂ ಅದು ಬರಂಗಿಲ್ಲ.

ಒಟ್ಟಿನಾಗ ಕ್ಯಾಲೆಂಡರ್ ನಮ್ಮ ನಿಮ್ಮೆಲ್ಲರ ಜೀವನದ ಒಂದು ಅವಿಭಾಜ್ಯ ಅಂಗ ಅನ್ನೂದರಾಗ ಎರಡು ಮಾತಿಲ್ಲ ಕಾಲ ದೇಶ ಯಾವುದರ ಇರಲಿ ಗ್ವಾಡಿ ಮೇಲೆ ಕ್ಯಾಲೆಂಡರ್ ಇರಲಿ ಅಂತ ಹೇಳುತ್ತಾ ನನ್ನ ಹರಟಿಗೆ ಮಂಗಳ ಹಾಡುತೀನಿ.

~ ಗೌರಿಪ್ರಸನ್ನ