ಸೊಗಸಿನ ಕ್ಷಣಗಳು( ಕವಿತೆ) ಮತ್ತು ಒಂದು ನಗೆ ಹನಿ (ಸ್ವಾಮಿ)

ಕನ್ನಡ ಕಾವ್ಯಲೋಕವನ್ನು ಅವಲೋಕಿಸಿದಾಗ ಅಲ್ಲಿ ಸೊಗಸು ಮತ್ತು ಸೌಂದರ್ಯಗಳ ಉಲ್ಲೇಖವನ್ನು ಯಥೇಚ್ಛವಾಗಿ ಕಾಣಬಹುದು. ಬದುಕಿನ ಸೊಗಸುಗಳನ್ನು ಇಂದ್ರಿಯಗಳ ಮೂಲಕ ಗ್ರಹಿಸಿ ಭಾವನೆಗಳ ಲೋಕದಲ್ಲಿ ಅದನ್ನು ಅನುಭವಿಸಿ ಕೊನೆಗೆ ಅದನ್ನು ಪದಗಳ ಮೂಲಕ ಕವನವಾಗಿ ಅಭಿವ್ಯಕ್ತಗೊಳಿಸುವುದು ಕವಿಯ ವಿಶೇಷ ಸಾಮರ್ಥ್ಯ. ಈ ಸೊಗಸನ್ನು ಅನುಭವಿಸಲು ಬದುಕಿನ ಬಗ್ಗೆ ಪ್ರೀತಿ ಇರಬೇಕು. ಇಲ್ಲದಿದ್ದಲ್ಲಿ ಅದು ನಮ್ಮ ದಿನನಿತ್ಯ ಬದುಕಿನ ಯಾಂತ್ರಿಕತೆಯಷ್ಟೇ ಆಗಿ ಉಳಿದುಬಿಡುತ್ತದೆ. ಕವಿತೆಯಲ್ಲಿಯ ರಸಿಕತೆ, ಬದುಕಿನ ಪ್ರೀತಿ ಎಂಬ ವಿಚಾರಗಳು ಯುರೋಪ್ ಸಾಹಿತ್ಯವಲಯಗಳಲ್ಲಿ ಸಂಭವಿಸಿದ ಸಾಹಿತ್ಯ ಕ್ರಾಂತಿಯಲ್ಲಿ ರೊಮ್ಯಾಂಟಿಕ್ ಪೊಯೆಟ್ರಿ ಎಂಬ ಹೆಸರಿನಲ್ಲಿ ಮೂಡಿಬಂದಿದೆ. ಈ ಸೊಗಸಿನ ಕ್ಷಣಗಳನ್ನು ಕುವೆಂಪು, ಬೇಂದ್ರೆ ಮತ್ತಿತರ ಕವಿಗಳ ಕವನಗಳಲ್ಲಿ ಕಾಣಬಹುದು. 'ಆನಂದಮಯ ಈ ಜಗ ಹೃದಯ' ಎಂಬ ಕುವೆಂಪು ಅವರ ಕವಿತೆ ಇದಕ್ಕೆ ಉತ್ತಮ ನಿದರ್ಶನ. ಇದೇ ಕವನದಲ್ಲಿ 'ಸೂರ್ಯೋದಯ, ಚಂದ್ರೋದಯ ದೇವರ ದಯೆಕಾಣೋ' ಎನ್ನುವ ಈ ಸಾಲಿನಲ್ಲಿ ಕವಿ ಬರಿ ನಿಸರ್ಗ ಸೌಂದರ್ಯವನ್ನಷ್ಟೇ ಅಲ್ಲ, ಅಲ್ಲಿ ಒಂದು ಆಧ್ಯಾತ್ಮಿಕ ಅನುಭಾವವನ್ನೂ ಪಡೆಯುತ್ತಾನೆ. ಕುವೆಂಪು ಹೇಳುವಂತೆ ‘ರವಿ ವದನವು ಶಿವವದನವೂ ಕೂಡ. ಶಿವನಿಲ್ಲದೆ ಸೌಂದರ್ಯವು ಇಲ್ಲ. ಶಿವ ಕಾವ್ಯದ ಕಣ್ಣೋ, ಶಿವ ಕಾಣದ (ಸೌಂದರ್ಯವನ್ನು ಕಾಣದ) ಕವಿ ಕುರುಡನೋ!’ ಈ ಒಂದು ಪರಿಕಲ್ಪನೆ "ಸತ್ಯಂ ಶಿವಂ ಸುಂದರಂ" ಎಂಬ ಸಾಲುಗಳಲ್ಲಿ ಕೂಡ ಅಭಿವ್ಯಕ್ತಗೊಂಡಿದೆ. ಕುವೆಂಪು ಅವರ ಇನ್ನೊಂದು ಕವನದಲ್ಲಿ ನಿಸರ್ಗದ ಸೊಗಸನ್ನು, ಬೆಳಕ್ಕಿಗಳು ನೀಲಾಕಾಶದಲ್ಲಿ ತೂಗುತ್ತ ಬರುವುದನ್ನು ನೋಡಿ ಭಾವ ಪರವಶರಾಗಿ 'ದೇವರು ರುಜು ಮಾಡಿದನು, ರಸವಶನಾಗುತ ಕವಿ ಅದ ನೋಡಿದನು'ಎಂದು ಬರೆಯುತ್ತಾರೆ. ಬೇಂದ್ರೆ ಅವರು 'ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ, ಬಾಗಿಲು ತೆರೆದು ಬೆಳಕು ಹರಿದೂ ದೇವನು ಜಗವೆಲ್ಲ ತೊಯ್ದ' ಎಂದು ಸೂರ್ಯೋದಯದ ಬಗ್ಗೆ ಬರೆಯುತ್ತಾರೆ. ‘ಶ್ರಾವಣ ಬಂತು ಶ್ರಾವಣ’ ಎಂದು ಸಂತಸಪಡುತ್ತಾರೆ. ಈ ರೀತಿಯ ಅನೇಕ ಸೊಗಸಿನ ಕ್ಷಣಗಳನ್ನು ಕುವೆಂಪು ಮತ್ತು ಬೇಂದ್ರೆ ಅವರ ಪದ್ಯ-ಗದ್ಯ ಕೃತಿಗಳಲ್ಲಿ ಕಾಣಬಹುದು.

ಬಾಬ್ ಥೀಲ್ ಮತ್ತು ಜಾರ್ಜ ವೀಸ್ ರಚಿಸಿರುವ, ಖ್ಯಾತ ಗಾಯಕ ಲೂಯಿಸ್ ಆರ್ಮ್ ಸ್ಟ್ರಾಂಗ್ ಹಾಡಿರುವ ಈ ಗೀತೆಯ ಮೊದಲ ಪಂಕ್ತಿಯ ಸಾಲುಗಳು ಹೀಗಿವೆ;   
I see trees of green, red roses too
I see them bloom for me and you 
And think to myself 
What a wonderful world! 

ಈ ಒಂದು ಗೀತೆ ಬಹಳ ಜನಪ್ರೀಯವಾಗಿದೆ, ಇದು ಕೂಡ ಬದುಕಿನ ಪ್ರೀತಿಯ ಬಗ್ಗೆ ಬರೆದ ಕವನ ಎನ್ನಬಹುದು.  
ಡಾ. ಸತ್ಯವತಿ ಅವರು ಬದುಕಿನ ಹಲವಾರು ದೈನಂದಿಕ ಆಗು ಹೋಗುಗಳಲ್ಲಿ ಮತ್ತು ಸಾಧಾರಣ ಸರಳ ವಿಚಾರಗಳಲ್ಲಿ ಸೊಗಸಿನ ಕ್ಷಣಗಳನ್ನು ಕಂಡಿದ್ದಾರೆ ಮತ್ತು ತಮ್ಮ ಕೆಳಗಿನ (ಸೊಗಸಾದ) ಕವಿತೆಯಲ್ಲಿ ನಮಗೂ ಕಾಣಿಸಿದ್ದಾರೆ.


                                                                        *

ಬದುಕಿನ ಸೊಗಸಿನ ಕ್ಷಣದೊಂದಿಗೆ ಒಂದು ನಗುವನ್ನು ಸೇರಿಸಿ ನಕ್ಕು ಬಿಡೋಣ. ಉಮೇಶ್ ಅವರು ಬರೆದಿರುವ 'ಸ್ವಾಮಿ' ಎಂಬ ಕಿರು ಪ್ರಸಂಗ ಒಂದೇ  ಹೆಸರಿನಲ್ಲಿ ಅಡಗಿರುವ ಮತ್ತೊಂದು ಅರ್ಥ ಹೇಗೆ ಗೊಂದಲಕ್ಕೆ ಕಾರಣವಾಗಬಹುದು ಎಂಬುದಕ್ಕೆ ನಿದರ್ಶನವಾಗಿ ಒಂದು ತಿಳಿ ಹಾಸ್ಯ ಪ್ರಸಂಗವಾಗಿ ಮೂಡಿಬಂದಿದೆ.  

****

ಸೊಗಸಿನ ಕ್ಷಣಗಳು

ಮಾಗಿಯ ಚಳಿಯಲ್ಲಿ ಕುಳಿತು ಬಿಸಿ ಬಿಸಿ ಕಾಫಿಯನು
ಕೋಡುಬಳೆಯೊಂದಿಗೆ ಸವಿಯುವುದೊಂದು ಸೊಗಸು

ಬೆಳಗಾಗೆದ್ದು ಕಿಟಕಿಯಾಚೆಗೆ ಮುಖವನ್ನಿಟ್ಟು ಅಳಿದುಳಿದ 
ಕಾಳುಗಳ ಹೆಕ್ಕುತಿರುವ ಹಕ್ಕಿಗಳ ನೋಡುವುದೊಂದು ಸೊಗಸು

ಮನೆಯ ಮುಂದಿನ ಅಂಗಳದಿ ನಿಂತು ರಸ್ತೆಯಲಿ ಒಡಾಡುವ 
ಕಾರುಗಳ ಬಣ್ಣಗಳ ಗುರುತಿಸುವುದೊಂದು ಸೊಗಸು

ಮುಳುಗಿಹೋಗಿದೆ ಜಗವೆಂಬ ಗಾಬರಿಯಲಿ ಧಾವಿಸುವ
ಜನರ ಧಾವಂತಿಕೆ ನೋಡುವುದೊಂದು ಸೊಗಸು

ಲಲ್ಲೆ ಹೊಡೆಯುತ ಗೆಳೆಯರೊಡನೆ ಶಾಲೆಗೆ ನಿರ್ಯೋಚನೆಯಲಿ 
ಕುಣಿಯುತ ನಡೆವ ಮಕ್ಕಳ ನೋಡುವುದೊಂದು ಸೊಗಸು

ಭೂಮಿಯಲಿ ನಡೆವ ವ್ಯಾಪಾರವನು ಮೌನದಲಿ 
ನೋಡುವಾ ಆಗಸವ ನಿರುಕಿಸುವುದೊಂದು ಸೊಗಸು

ತನ್ನೆಲ್ಲ ಆಟದೀ ಗೊಂಬೆಗಳ ಆಟವನು ನೋಡುತ್ತ ತನ್ನಷ್ಟಕ್ಕೆ
ನಗುತಿರಬಹುದಾದ ಸೃಷ್ಟಿಕರ್ತನನು ನೆನೆಯುವುದೊಂದು ಸೊಗಸು

ಮತ್ತೆ ಬಾರದ ಜೀವನದ ಸೊಗಸಿನೀ ಕ್ಷಣಗಳನು 
ಮೆಲುಕು ಹಾಕುತ ಬದುಕುವ ಸಂಭ್ರಮದ ಸೊಗಸು

ಡಾ.ಸತ್ಯವತಿ ಮೂರ್ತಿ

****
ನನ್ನ ಸ್ವಾಮಿ 

ಈ ಕಥೆಯನ್ನು ನಾನು ಮ್ಯಾಂಚೆಸ್ಟರ ಹತ್ತಿರ ಕೆಲಸ ಮಾಡುವಾಗ ಭೆಟ್ಟಿಯಾದ ಕನ್ನಡಿಗ ಗೆಳೆಯರು ಹೇಳಿದರು. 

ಒಂದು ಸಮ್ಮೇಳನದಲ್ಲಿ ಇಬ್ಬರು ಭಾರತೀಯ ಮೂಲದ ಮಹಿಳಾ ತಜ್ಞ ವೈದ್ಯೆಯರು ಭೆಟ್ಟಿಯಾದರು. ಮಧ್ಯಾಹ್ನ ಊಟದ ವೇಳೆ ಮಾತನಾಡುವಾಗ ಪರಸ್ಪರ ಇಬ್ಬರೂ ಕನ್ನಡಿಗರೆಂದು ಗೊತ್ತಾಗಿ ಸಂತೋಷವಾಗಿ ಮುಂದಿನ ಸಂಭಾಷಣೆ ಕನ್ನಡದಲ್ಲೇ ಮುಂದುವರೆಯಿತು. ಸಂಜೆ ಊಟಕ್ಕೆ ಕುಳಿತಾಗ ಒಬ್ಬ ಕನ್ನಡತಿ “ನನ್ನ ಸ್ವಾಮಿಗೆ ಈ ಪಲ್ಯ ಬಹಳ ಇಷ್ಟ, ನನ್ನ ಸ್ವಾಮಿ ಇವತ್ತು ಮಕ್ಕಳನ್ನು ಶಾಲೆಗೆ ಬಿಡಲು ಸ್ವಲ್ಪ ತಡವಾಯಿತು“ಎಂದೆಲ್ಲ ಹೇಳತೊಡಗಿದಳು. 
ಆ ತಾಯಿ ಪ್ರತಿ ಸಲ ತನ್ನ ಗಂಡನಿಗೆ “ಸ್ವಾಮಿ“ಎಂದೇ ಸಂಭೋಧಿಸುತ್ತಿದ್ದಳು. ಇಬ್ಬರೂ ಒಂದೇ ಹೋಟೆಲಿನಲ್ಲಿ ಉಳಿದುಕೊಂಡಿದ್ದರಿಂದ ಇಬ್ಬರೂ ಒಂದೇ ಟ್ಯಾಕ್ಸಿಯಲ್ಲಿ ಹೊರಟರು. ಮಾರ್ಗದ ಮಧ್ಯೆಆ ತಾಯಿ ಗಂಡನಿಗೆ ಫೋನ್ ಮಾಡಿ “ಸ್ವಾಮಿ ಊಟ ಮಾಡಿದಿರಾ? “ಎಂದೆಲ್ಲಾ ವಿಚಾರಿಸಿದಳು. ಇನ್ನೊಬ್ಬ ಮಹಿಳೆ ಇದನ್ನೆಲ್ಲಾ ಗಮನಿಸುತ್ತಾ ಮನದಲ್ಲೇ “ಏನಪ್ಪಾ ಇವಳು ಬಹುಶಃ ಪಕ್ಕಾ ಪತಿ ಭಕ್ತೆ ಇದ್ದಾಳೆ, ಇಂಗ್ಲೆಂಡಿಗೆ ಬಂದರೂ ಏನೂ ಬದಲಾಗಿಲ್ಲ“ಎಂದುಕೊಂಡು ಸುಮ್ಮನಿದ್ದಳು .

ಇಬ್ಬರು ಮತ್ತೆ ಸುಮಾರು ಆರು ತಿಂಗಳ ನಂತರ ಇನ್ನೊಂದು ಸಮ್ಮೇಳನದಲ್ಲಿ ಭೆಟ್ಟಿಯಾದರು . 
ಆಗ ಮತ್ತೆ ಆ ತಾಯಿ “ನನ್ನ ಸ್ವಾಮಿಗೆ ಪ್ರಮೋಷನ್(ಬಡ್ತಿ )ಆಯಿತು, ನನ್ನ ಸ್ವಾಮಿ ಹೊಸ ಟೆಸ್ಲಾ ಕಾರು ತೆಗೆದುಕೊಂಡ “ಎಂದೆಲ್ಲಾ ಹೇಳಿದಳು. ಈಗ ಈ ಮಹಿಳೆಗೆ ತಡೆಯಲಾಗಲಿಲ್ಲ. ಅವಳು ಕೇಳಿಯೇ ಬಿಟ್ಟಳು “ಅಲ್ಲಾ, ಇಂದಿನ ದಿನಗಳಲ್ಲಿ ಭಾರತದಲ್ಲಿಯೇ ಪತಿ ಭಕ್ತೆ ಸಿಗೋದಿಲ್ಲ, ಅಂತದರಲ್ಲಿ ಇಷ್ಟೊಂದು ಕಲಿತ ವೈದ್ಯೆಯಾದ ನೀವು ಇಂಗ್ಲೆಂಡಿನಲ್ಲಿ ಇದ್ದುಕೊಂಡು ಗಂಡನಿಗೆ ಎಷ್ಟೊಂದು ಮಾನ ಮರ್ಯಾದೆ ಕೊಡುತ್ತೀರಲ್ಲಾ”. 

ಅದನ್ನು ಕೇಳಿ ಆ ತಾಯಿ ಬಿದ್ದು ಬಿದ್ದು ನಗುತ್ತ “ಅಯ್ಯೋ ನನ್ನ ಗಂಡನಿಗೇನೂ ನಾನು ಸ್ಪೇಶಿಯಲ್ ಮರ್ಯಾದೆ ಕೊಡ್ತಾ ಇಲ್ಲ, ಅವನ ಹೆಸರೇ ಸ್ವಾಮಿ!” ಎಂದಳು . 
ಇದನ್ನು ಕೇಳಿದ ಇನ್ನೊಬ್ಬ ಕನ್ನಡತಿಗೆ ತಲೆ ಜಜ್ಜಿಕೊಳ್ಳುವುದೊಂದು ಬಾಕಿ ಇತ್ತು. 😀😀

ಡಾ. ಉಮೇಶ್ ನಾಗಲೋತಿಮಠ್

ಕಲಿಯಬೇಕಿದೆ…

ಬದುಕಿನ ಪ್ರತಿ ಕ್ಷಣದಲ್ಲೂ ಕಲಿಕೆಯ ಅವಕಾಶವಿದೆ. ನಮ್ಮ ಹಲವಾರು ಕಲಿಕೆಗಳು ಇತರರ ಸಜ್ಜನಿಕೆಯಿಂದ, ಆದರ್ಶದಿಂದ, ಸರಳ ಬದುಕಿನ ರೀತಿ ನೀತಿಗಳಿಂದ ಉಂಟಾಗುತ್ತವೆ. ಈ ರೀತಿಯ ಕಲಿಕೆ ಸಾಮಾನ್ಯವಾಗಿ ನಾವು ಕಿರಿಯರಾಗಿದ್ದಾಗ ನಮ್ಮ ವಿವೇಚನಾ ಶಕ್ತಿಯನ್ನು ಬೆಳಸಿಕೊಳ್ಳಲು ಗುರು-ಹಿರಿಯರ ಮಾರ್ಗದರ್ಶನದಿಂದ ನಮಗೆ ಒದಗಿಬರುತ್ತದೆ. ಇದು ಗುಣಾತ್ಮಕ ಕಲಿಕೆ. ನಮ್ಮ ಬಾಲ್ಯಾವಸ್ಥೆಯಿಂದ ಆಚೆ ಬೆಳೆದಾಗ ನಮ್ಮ ಸಮಾಜದಲ್ಲಿ ಇತರರ  ದುಷ್ಟತನ, ಅಹಂಕಾರ, ಸ್ವಾರ್ಥ, ದ್ವೇಷ ಈ ಲಕ್ಷಣಗಳನ್ನು ಗುರುತಿಸಲು ಸಮರ್ಥರಾಗಿರುತ್ತೇವೆ. ಬದುಕಿನ ಹಲವಾರು ಸನ್ನಿವೇಶಗಳನ್ನು ಭಾವನೆಗಳನ್ನು ನಮ್ಮ ಒಳ ಮನಸ್ಸಿನ ಸೂಕ್ಷ್ಮ ತೀಕ್ಷ್ಣ ತಕ್ಕಡಿಯಲ್ಲಿ ಇಟ್ಟು ಅಳೆಯಲು ಪ್ರಾರಂಭಿಸುತ್ತೇವೆ. ಹಲವಾರು ನಕಾರಾತ್ಮಕ ಅನುಭವಗಳು ನಮಗೆ ಪಾಠ ಕಲಿಸುತ್ತವೆ. ಹೀಗೆ ಪರಿಪಕ್ವವಾದ ಮನಸ್ಸು ತನ್ನ ವಿವೇಚನಾ ಶಕ್ತಿಯನ್ನು ರೂಢಿಸಿಕೊಳ್ಳುತ್ತದೆ. ಇದನ್ನು ಮನೋವಿಕಾಸ ಎಂದು ಕರೆಯಬಹುದು. ಇಲ್ಲಿ ಒಂದು ನೈತಿಕ ಜವಾಬ್ದಾರಿ ಉಂಟಾಗಿರುತ್ತದೆ. ಒಬ್ಬ ಹಿರಿಯ ಕವಿ ಹೇಳಿದ ಹಾಗೆ "ದೇವ ದಾನವ ಗುಣದ ಮಿಲನದಿ ಮೂಡಿ ಬಂದನೋ ಮಾನವ" ಕೆಲವೊಮ್ಮೆ ಆ ಮಾನವನ ದೈವತ್ವವು ಹಿಮ್ಮೆಟ್ಟಿ ಕ್ಷುದ್ರ ಸ್ವಾರ್ಥದ ದಾನವನಾಗುತ್ತಾನೆ. ತನ್ನ ಸ್ವಾರ್ಥಕ್ಕಾಗಿ ಆ ನೈತಿಕ ಮೌಲ್ಯಗಳನ್ನು ಪ್ರಜ್ಞಾ ಪೂರ್ವಕವಾಗಿ ಗಾಳಿಗೆ ತೂರುತ್ತಾನೆ. ಒಂದು ವೈಯುಕ್ತಿಕ ನೆಲೆಯಲ್ಲಿ ಶುರುವಾಗುವ ಈ ಅಹಂಕಾರ, ಸ್ವಾರ್ಥ ಒಂದು ಸಂಸಾರವನ್ನು, ಒಂದು ಸಮುದಾಯವನ್ನೂ ಆವರಿಸಿಕೊಳ್ಳಬಹುದು. ಒಬ್ಬರು ಇನ್ನೊಬ್ಬರನ್ನು ವಂಚನೆ, ಸುಲಿಗೆ ಇವುಗಳ ನೆಪದಲ್ಲಿ ಶೋಷಿಸಿದಾಗ ಶೋಷಿಸುವವನು ಜಾಣನೆಂದು ಶೋಷಿತಗೊಂಡವನು ಪೆದ್ದನೆಂದು ಪರಿಗಣಿಸುತ್ತೇವೆ. ಕೆಲವೊಮ್ಮೆ ಪರಿಸ್ಥಿತಿಯ ಪರಿಣಾಮಗಳಿಂದಾಗಿ, ಸಂಕೀರ್ಣತೆಯಿಂದಾಗಿ ನಾವು ಸಹನೆಯಿಂದ ವರ್ತಿಸಬೇಕಾಗುತ್ತದೆ. ಇನ್ನೊಬ್ಬರ ಸಣ್ಣತನದ ಬಗ್ಗೆ ಆಕ್ರೋಶಕ್ಕಿಂತ ವ್ಯಥೆ ಮತ್ತು ಕನಿಕರದ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಬೇಕಾಗುತ್ತದೆ.ಅರಿವಿನಲ್ಲೂ ಮುಗ್ಧತೆ ಎಂಬ ಮುಖವಾಡವನ್ನು ಧರಿಸಬೇಕಾಗುತ್ತದೆ. 

ಈ ಹಿನ್ನೆಲೆಯಲ್ಲಿ ಅಮಿತ ಅವರ 'ಕಲಿಯಬೇಕಿದೆ' ಎಂಬ ಕವನವನ್ನು ನಾವು ಓದುವುದು ಉಚಿತ. ಬದುಕಿನ ಹಲವಾರು ಸನ್ನಿವೇಶಗಳ ಮೂಲಕ ಈ ಮೇಲಿನ ಅಂಶಗಳನ್ನು ಪರಿಣಾಮಕಾರಿಯಾಗಿ ಕವನದಲ್ಲಿ ಕಟ್ಟುಕೊಟ್ಟಿದ್ದಾರೆ. 

-ಸಂಪಾದಕ






ನಾನು ಕಲಿಯಬೇಕಿದೆ,ಇಂಥವರ ನಡುವೆ 
ಬೆಳೆಯಲು ಬೆಳಗಲು 
ಮುಂದೆ ನಗುತ್ತಲೇ ಇರುವುದು 
ಅವರು ತೆರಳಿದ ಬೆನ್ನಿಗೆ 
ಉಫ್ಫ್!! ಎಂದು ಉಸಿರುಬಿಟ್ಟು,
ಚಾಡಿ ಮಾತಾಡಿ ಅದರಲ್ಲೇ ಊಟ ,
ನಿದ್ದೆಯ ಸುಖ ಪಡೆಯುವುದನ್ನ.
ನಾನು ಕಲಿಯಬೇಕಿದೆ 
ಗೊತ್ತಿಲ್ಲದ್ದನ್ನು ಗೊತ್ತಿದೆ …
ಎಲ್ಲಾ ನನಗೇ ಗೊತ್ತಿದೆ 
ಮತ್ತೆ ನನಗಲ್ಲದೆ ಇದು ಯಾರಿಗೂ ಗೊತ್ತಿರಲು 
ಸಾಧ್ಯವೇ ಇಲ್ಲ ಎಂದು ವಾದಿಸುವ ಕಲೆಯನ್ನ....
ಕಲಿಯಬೇಕಿದೆ 
ಸುಳ್ಳುಗಳ ಮೂಟೆಯಲ್ಲಿ ಸತ್ಯ ಹುಡುಕುವ 
ವ್ಯರ್ಥ ಪ್ರಯತ್ನ ಮಾಡುವುದನ್ನ 
ಮಿಥ್ಯದ ಕನ್ನಡಿಯಲ್ಲಿ ಸತ್ಯ ತೋರಲು ಒದ್ದಾಡಿ,
ಇಲ್ಲದ್ದನ್ನು ಇದೆ ಎಂದು ತೋರುವ ವಿದ್ಯೆಯನ್ನ 
ಕಲಿಯಬೇಕಿದೆ 
ಏಳಿಗೆ ಆದರೆ ಅದು ನನ್ನದೇ ಆಗಬೇಕು,
ಜಗದಲ್ಲಿ ನನ್ನ ಹೊರತು ಏಳಿಗೆಗೆ ಅರ್ಹರ್ಯಾರು?
ಎಂದು ಬೀಗುವುದನ್ನ...
ರೋಗವನ್ನುಆರೋಗ್ಯ ಎನ್ನುವುದನ್ನ 
ಕಾಗೆ ಬಂಗಾರವನ್ನು ಚಿನ್ನ ಎನ್ನುವುದನ್ನ 
ಮತ್ಯಾರಿಗಾದರೂ ಸಿಕ್ಕೀತು ದಕ್ಕಿಬಿಟ್ಟೀತು 
ಎನ್ನುವ ಹಪಹಪಿಯಲ್ಲಿ 
ಹಳಸಿದ್ದನ್ನು ಉಣ್ಣುವ ತೆವಲನ್ನ 

ಕಲಿಯಬೇಕಿದೆ,
ದುರ್ಗಂಧವನ್ನು ಸೌಗಂಧಿಕೆ ಎನ್ನುವ 
ಅನಿವಾರ್ಯತೆಯನ್ನ 
ನೀನೆ, ನೀನೆ, ನೀನೆ 
ಎಂಬ ಹೊಗಳಿಕೆಯ ನುಡಿಯನ್ನ 
ಕಲಿಯಬೇಕಿದೆ 
ಬೆಳೆಯಲು- ಬೆಳಗಲು 
ಆದರೆ ಇಷ್ಟೆಲ್ಲ ಕಲಿತ ದಿನ ನಾ 
ಬೆಳೆಯುವೆನೆ?ಬೆಳಗುವೆನೆ?
ಕೊನೆಗೆ ನನ್ನ ನಾನು
ಗುರುತಿಸಬಲ್ಲೆನೇ?
ಬಿಡು, ಹೀಗೆ ಇದ್ದು ಬಿಡುವೆ
ಪೆದ್ದು ಪೆದ್ದಾಗಿ. 
- ಅಮಿತ ರವಿಕಿರಣ್