‘ಕೋವಿಡ್: ಸಿಂಹದ ಬಾಯಿಂದ’ ನೈಜ ಕಥೆ ಮತ್ತು ‘ಕರಾಳ ಕರೋನ’ ಕವಿತೆ

ಕೊರೋನಾ ವೈರಸ್ ಈಗ   ಜಗತ್ತಿನಾದ್ಯಂತ ಒಂದು ಮಿಲಿಯನ್ ಗೂ ಹೆಚ್ಚು ಜನರಿಗೆ ಹರಡಿದ್ದು, ಬಿಲಿಯನ್ ಗಟ್ಟಲೆ ಜನರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಅನೇಕ ಕಡೆಗಳಲ್ಲಿ ಇದರ ಪಸರಿಸುವಿಕೆ ಗರಿಷ್ಠ ಮಟ್ಟ ತಲುಪುತ್ತಿರುವಾಗ, ವೈದ್ಯಕೀಯ ಮತ್ತು ಪ್ರಮುಖ ಸೇವಾ ಕ್ಷೇತ್ರಗಳಲ್ಲಿರುವ ನಮ್ಮ ಸ್ನೇಹಿತರು ಹಾಗೂ ಬಂಧುಗಳು ಈ ವೈರಾಣುವಿನ ಸಂಪರ್ಕ ದಲ್ಲಿ ಬರಬಹುದು ಮತ್ತು ಕೋವಿಡ್೧೯ ಖಾಯಲೆಗೆ ಗುರಿಯಾಗಬಹುದು. ಹೀಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡಿಗ ವೈದ್ಯರೊಬ್ಬರು  ವೈರಾಣುವಿನ ಕಪಿಮುಷ್ಠಿಗೆ ಸಿಲುಕಿದ ಹಾಗೂ ಅದರಿಂದ ಪಾರಾಗಿಬಂದ ನೈಜ ಕಥೆಯನ್ನು ಈ ವಾರ ಅನಿವಾಸಿಗಾಗಿ ಡಾ|| ರಾಮಶರಣ ಲಕ್ಷ್ಮೀನಾರಾಯಣ ರವರು  ಬರೆದಿದ್ದಾರೆ. 
ಕರೋನ ವೈರಸ್ ನ ಕರಾಳ ಸ್ವರೂಪವನ್ನು ‘ಕರಾಳ ಕರೋನ‘ ಎಂಬ ಕವಿತೆಯಲ್ಲಿ ಡಾ||  ಜಿ.  ಎಸ್.  ಶಿವಪ್ರಸಾದ್ ರವರುಬಣ್ಣಿಸಿದ್ದಾರೆ.  ಡಾ।। ಲಕ್ಷೀನಾರಾಯಣ ಗುಡೂರ್ ರವರು ಈ ಕವಿತೆಯ ಸಾರವನ್ನು ತಮ್ಮ ರೇಖಾಚಿತ್ರದಲ್ಲಿ ಸೆರೆಹಿಡಿದಿದ್ದಾರೆ.  (ಸಂ)

ಕೋವಿಡ್: ಸಿಂಹದ ಬಾಯಿಂದ

ಯು.ಕೆ. ಕನ್ನಡಿಗ ವೈದ್ಯರೊಬ್ಬರು ಕೊರೋನಾ ಸೋಂಕು ತಗಲಿ, ಬಳಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನೈಜ ಕಥಾನಕ ಇದು. ಇಲ್ಲಿ ಬರುವ ಪಾತ್ರಗಳ ಹೆಸರನ್ನು ಬದಲಾಯಿಸಲಾಗಿದೆ. ಸೋಂಕು ಪೀಡಿತ ವೈದ್ಯರ ರೋಗ ಲಕ್ಷಣಗಳು ಹಾಗೂ ಅವರ ಅನುಭವ ಯಾವುದನ್ನೂ ಕಲ್ಪಿಸಿಕೊಳ್ಳಲಾಗಿಲ್ಲ. ಅವರ ಮನೋಸ್ಥಿತಿಯನ್ನು ಲೇಖಕರು ಕಥೆಗೆ ಬೇಕಂತೆ ಹೊಂದಿಸಿದ್ದಾರೆ.                                                                                        ಲೇಖಕರು: ಡಾ||ರಾಮಶರಣ್ ಲಕ್ಷ್ಮಿನಾರಾಯಣ್

“ನಿನಗೆ ಇಂಗ್ಲೀಷ್ ಅಡುಗೆ ಇಷ್ಟವಾಗಲಿಕ್ಕಿಲ್ಲ ಡಾ. ನಾಗ್ಸ್, ಅದಕ್ಕೇ ಹಲಾಲ್ ವೆಜ್ ಊಟ,” ಎನ್ನುತ್ತಲೇ ಸಿಸ್ಟರ್ ಸೂಸನ್ ಕೋಣೆ ಒಳಗೆ ಬಂದಳು. ನರ್ಸ್ ವಿಶೇಷ ಮುತುವರ್ಜಿಯಿಂದ ತರಿಸಿದ ಅನ್ನ-ದಾಲ್ ಬಾಯಿಗೆ ಹಾಕುವಂತಿರಲಿಲ್ಲ. ಬರೇ  ಕಾಳು ಮೆಣಸಿನ ಖಾರ, ಅರೆ ಬೆಂದ ಅನ್ನ ತಿಂದ ನಾಗೇಂದ್ರ ಅರ್ಧ ಗಂಟೆಯಲ್ಲೇ ಎಲ್ಲವನ್ನು ಕಕ್ಕಿದ.  ಹೊಟ್ಟೆ ಚುರುಗುಟ್ಟುತ್ತಿತ್ತು. ಹಸಿವೆ ಆದರೂ, ನರ್ಸಿಗೆಕರುಣೆ ಇದ್ದರೂ, ಊಟ ತಂದುಕೊಡಲು ಆಸ್ಪತ್ರೆಯೇನು ಹೋಟೆಲ್ಲೇ? ಇಲ್ಲಿ ಸಂಜೆಯ ಊಟದ ಆರ್ಡರ್ ಬೆಳಗ್ಗೆಯೇ ಆಗಿರುತ್ತದೆ. ಇನ್ನು ರಾತ್ರಿಯೆಲ್ಲ ಜ್ಯುಸ್ ಹೀರುತ್ತಲೇ ಕಳೆಯಬೇಕಷ್ಟೆ ಎನ್ನುವ ಸತ್ಯಕ್ಕೆ ಶರಣಾಗಿ ಅಡ್ಡಾದ ನಾಗೇಂದ್ರ. ದಿವಸಗಳಿಂದ ಕಾಡಿದ ಜ್ವರ, ಕೆಮ್ಮು, ಉಸಿರಾಟದ ತೊಂದರೆಗಳಿಂದ ಬಸವಳಿದ ನಾಗೇಂದ್ರನಿಗೆ ತಲೆ ತಿರುಗಿದಂತಾಯ್ತು. ಹಾಗೆಯೇ ಕಳೆದ ಎರಡು ವಾರಗಳಿಂದ ನಡೆದ ವಿದ್ಯಮಾನಗಳೆಲ್ಲ ಸಿನಿಮಾ ರೀಲಿನಂತೆ ಬಿಚ್ಚಿಕೊಳ್ಳತೊಡಗಿದವು.

 ಗುರುವಾರ ಬೆಳಗ್ಗೆ ತಡ ಆಯಿತು ಅಂತ ಸಿಡಿ-ಮಿಡಿಗೊಳ್ಳುತ್ತಲೇ ಎದ್ದ ನಾಗೇಂದ್ರ. ರೈಲಿಗೆ ಇನ್ನು ಕೇವಲ 45 ನಿಮಿಷ ಇತ್ತು. ರಾತ್ರೆಯೇ ಟ್ಯಾಕ್ಸಿಗೆ ಬರಲು ಹೇಳಿದ್ದ. ಸಧ್ಯ ಹಿಂದಿನ ದಿನವೇ ಚೀಲ ತುಂಬಿಟ್ಟದ್ದಕ್ಕೆ ತನ್ನ ಬೆನ್ನು ತಾನೇ ತಟ್ಟಿಕೊಂಡ. ಗಡಿಬಿಡಿಯಲ್ಲಿ ಪ್ರಾತಃವಿಧಿಗಳನ್ನು ಮುಗಿಸಿ ತಯ್ಯಾರಾಗುವಷ್ಟಲ್ಲಿ ಹೊರಗಡೆ ಟ್ಯಾಕ್ಸಿ ಬಂತು. ಮಕ್ಕಳಿನ್ನೂ ಸಕ್ಕರೆ ನಿದ್ರೆಯಲ್ಲಿದ್ದರು. ಅರೆ ನಿದ್ದೆಯಲ್ಲೇ ಕರುಣ ಬೈ ಹೇಳಿದ್ದನ್ನೂ ಕೇಳಿಸಿಕೊಳ್ಳದವನಂತೆ ಹೊರಗೆ ಧಾವಿಸಿದ.  ನಾಗೇಂದ್ರ ರಾಯಲ್ ಕಾಲೇಜಿನ ವಾರ್ಷಿಕ ಮೀಟಿಂಗ್ ಎಂದು ಲಂಡನ್ನಿಗೆ ಹೊರಟಿದ್ದ. ಎರಡು ದಿನದ ಕಾರ್ಯಕ್ರಮ, ಕಾಲೇಜಿನವರೇ ಪಕ್ಕದ ಹೋಟೆಲ್ಲಿನಲ್ಲಿ ವಸತಿ ಸೌಕರ್ಯ ಒದಗಿಸಿದ್ದರು ಎಂದಿನಂತೆ. ನಾಗೇಂದ್ರನಿಗೆ ಈ ಹೋಟೆಲ್ ತುಂಬಾ ಇಷ್ಟ. ಸ್ಪ್ಯಾನಿಷ್ ಕಂಪನಿ ನಡೆಸುವ ಹೋಟೆಲ್ ಐಷಾರಾಮವಾಗಿತ್ತು, ಹಾಸಿಗೆ ಮೃದುವಾಗಿ ಆರಾಮದಾಯಕವಾಗಿರುತ್ತಿತ್ತು; ಬೆಳಗಿನ ಉಪಾಹಾರ ರುಚಿಕಟ್ಟಾಗಿ ಆರೋಗ್ಯಕರವಾಗಿರುತ್ತಿತ್ತು. ಒಂದು ರಾತ್ರಿಯ ವಸತಿಗೆ ಇದಕ್ಕಿಂತೇನೂ ಜಾಸ್ತಿ ಬೇಕಲ್ಲವೇ?

ರಾಬ್ ಆಗಲೇ ಬಂದು ತನ್ನ ಲ್ಯಾಪ್ ಟಾಪ್ ತಯ್ಯಾರಿಟ್ಟಿದ್ದ. ಒಬ್ಬೊಬ್ಬರೇ ಸದಸ್ಯರು ಮುಂದಿನ 20 ನಿಮಿಷಗಳಲ್ಲಿ ಬಂದು ಸೇರಿದರು. ಉಭಯಕುಶಲೋಪರಿ ಮುಗಿಸಿದ ಮೇಲೆ ಎಲ್ಲರ ಬಾಯಲ್ಲೂ ಕೋವಿಡ್ ಮಾತೇ, ಇಟಲಿಯಲ್ಲಿ ಹಾಗೆ- ಹೀಗೆ ಅಂತ. ನಮ್ಮ ಸ್ಪೆಷಲ್ಟಿ ತಮ್ಮ ಮಾರ್ಗದರ್ಶನ ಪ್ರಕಟಿಸಬೇಕಲ್ಲವೇ ಎಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಎರಡು ದಿನಗಳ ಕೆಲಸ ಸರಾಗವಾಗಿ ಮುಗಿದು ಅಂದುಕೊಂಡಕ್ಕಿಂತಲೂ ಬೇಗನೆ ಶುಕ್ರವಾರ ನಾಗೇಂದ್ರ ಮನೆಗೆ ಬಂದಿದ್ದಕ್ಕೆ ತನ್ನಲೇ ಬೀಗಿಕೊಂಡ. ದೊಡ್ಡ ಮಗಳಿಗಿನ್ನೂ  ಕೆಮ್ಮು ಇತ್ತು. ಎಂದಿನಂತೇ ಮೃದುಲಾ ಎಲ್ಲರ ಮುಂದೇ ಕೆಮ್ಮುತ್ತ ತಿರುಗಿದ್ದಕ್ಕೆ ಕರುಣಾಳ ಹತ್ತಿರ ಬೈಸಿಕೊಂಡಳು. ಅಕ್ಕ ಬೈಸಿಕೊಂಡಳೆಂದು ಚಿಕ್ಕ ಮಗ ಮೃಣಾಲ್ ಅವಳನ್ನು ಅಣಕಿಸಿ, ಬೆನ್ನ ಮೇಲೆ ಗುದ್ದಿಸಿಕೊಂಡು ಸಣ್ಣ ಕುರುಕ್ಷೇತ್ರವನ್ನೇ ಸೃಷ್ಟಿಸಿದರು ಎಂದಿನಂತೇ.

ಸೋಮವಾರ ಏಳುವಾಗ ನಾಗೇಂದ್ರನಿಗೆ ಸಣ್ಣ ತಲೆನೋವು, ಆಲಸ್ಯ. ಕೆಲಸಕ್ಕೆ ಹೋದಾಗ ನಿರುತ್ಸಾಹ. ವಾರ್ಡ್ನಲ್ಲಿ ನರ್ಸ್ ಹತ್ತಿರ ಪ್ಯಾರಾಸಿಟಮೋಲ್ ತೊಕೊಂಡು ಮಧ್ಯಾಹ್ನ ಕ್ಲಿನಿಕ್ ಹೇಗೋ ಮುಗಿಸಿದ. ಮಂಗಳವಾರ ಮತ್ತೆ ಸ್ವಲ್ಪ ಚಳಿ ಎನ್ನಿಸುತ್ತಿತ್ತು, ಮಧ್ಯಾಹ್ನದ ಹೊತ್ತಿಗೆ ಮೈ-ಕೈ ನೋವು, ತಲೆ ನೋವು ಜಾಸ್ತಿ ಆಗಿದ್ದಕ್ಕೆ ಸೆಕ್ರೆಟರಿಗೆ ಹೇಳಿ ಮನೆಗೆ ಬಂದುಬಿಟ್ಟ. ರಾತ್ರಿ ಚಳಿ ಜಾಸ್ತಿ ಆಯ್ತು, ಜ್ವರ ಶುರು ಆಯ್ತು, ನಿದ್ದೆಯೂ ಬರಲಿಲ್ಲ. ಸಣ್ಣಗೆ ಒಣ ಕೆಮ್ಮು. ಮಾರನೇ ದಿನ ಡಬಲ್ ಕ್ಲಿನಿಕ್ ಬೇರೆ, ಕೆಮ್ಮು ಜ್ವರ ಕೊಟ್ಟುಬಿಟ್ಟಳಲ್ಲ ಎಂದು ಮಗಳಿಗೆ ಹಿಡಿ ಶಾಪ ಹಾಕಿ ಮುದುರಿ ಡುವೆ ಹೊದ್ದು, ಹಾಸಿಗೆ ಪಕ್ಕದ ವಿದ್ಯುತ್ ಹೀಟರ್ ಹಾಕಿ ಮುದುರಿ ಬಿದ್ದುಕೊಂಡ. ಜ್ವರ-ಕೆಮ್ಮು ಬಂದಾಗೆಲ್ಲ ಕರುಣಾ, ಕರುಣೆಯಿಲ್ಲದೇ ಅತಿಥಿ ಕೋಣೆಗೆ ತಳ್ಳಿ ಬಿಡುತ್ತಾಳೆ. ಬೆಳಗ್ಗೆ ಏಳಲಾಗದಷ್ಟು ನೋವು-ಜ್ವರ. ಪ್ಯಾರಾಸಿಟಮೋಲ್ ತೊಕೊಂಡರೂ ಈ ಸಲ ಯಾಕೋ ಜ್ವರ ಇಳಿಯುತ್ತಲೇ ಇಲ್ಲ. ಬ್ರುಫೆನ್ ಮೊರೆ ಹೋದಾಗಲೇ ಜ್ವರ ಕೆಲವು ಗಂಟೆ ತಹಬಂದಿಗೆ ಬಂದಿತ್ತು.

ಸಾಯಂಕಾಲ ಕರುಣಾಳ ಮುಖ ಕುಂದಿತ್ತು. ಎಂದಿಗಿಂತಲೂ ಹೆಚ್ಚಿನ ಕಕ್ಕುಲತೆಯಿಂದ ವಿಚಾರಿಸಿಕೊಂಡಳು. ಅವಳಕಣ್ಣಲ್ಲಿ ತುಂಬಿದ ನೀರು ಕಂಡು ನಾಗೇಂದ್ರನ ಎದೆಯಲ್ಲೇಕೋ ಸಣ್ಣ ನಡುಕ. ಕರುಣಾ ಹಾಗೆಲ್ಲ ಧೈರ್ಯಗೆಡುವವಳಲ್ಲ. ಅವಳಿಗೆ ಯಾರೋ ಸುದ್ದಿ ಕೊಟ್ಟಿದ್ದರು, ನಾಗೇಂದ್ರನ ಸಹೋದ್ಯೋಗಿ ಮೈಕೆಲ್ ಕರೋನ ಸೋಂಕಿನಿಂದ ತೀವ್ರ ಚಿಕಿತ್ಸಾ ಘಟಕದಲ್ಲಿದ್ದಾನೆಂದು. “ನೀನೇನಾದ್ರೂ ಅವನ ಸಂಪರ್ಕಕ್ಕೆ ಬಂದಿದ್ಯ? ನೀನು ಈ ಕೋಣೆಯಿಂದ ಹೊರಗೆಬರಬೇಡ, ನಾನೇ ಎಲ್ಲಇಲ್ಲಿಗೇ ತಂದುಕೊಡ್ತೇನೆ”, ಅಂತ ತಾಕೀತು ಮಾಡಿ ಹೋದಳು. ಯಾವಾಗಲೂ ಬಂದು ಅಪ್ಪಿಕೊಳ್ಳುವ ಮೃಣಾಲ್ ಕೂಡ ಬಾಗಿಲಲ್ಲೇ ಗುಡ್ ನೈಟ್ ಹೇಳಿ ಓಡಿಬಿಟ್ಟ. ರಾತ್ರೆಯಿಡಿ ಜ್ವರ, ಚಳಿ, ಮೈಕೈ ನೋವು, ಜೊತೆಗೆ ವಿಚಿತ್ರಕನಸುಗಳು.

ಹಗಲಿಡೀ ಮನೆಯಲ್ಲಿಒಬ್ಬನೆ; ಮಕ್ಕಳು ಶಾಲೆಯಲ್ಲಿ, ಕರುಣಾ ಸರ್ಜರಿಯಲ್ಲಿ. ಮನದ ತುಂಬೆಲ್ಲ ದುಗುಡ. ಪ್ರತಿಸಲಬರುವ ಫ್ಲ್ಯೂಗಿಂತ ಈ ಸಲದ ಜ್ವರಕ್ಕೆ ಲಕ್ಷಣವೇ ಬೇರೆ ಅನಿಸುತ್ತಿತ್ತು. ಯಾಕೋ ಅಸಮಾಧಾನ, ಚಡಪಡಿಕೆ. ತನಗೂ ಕೊರೋನ ಹೊಡೆದಿಯೇ ಎಂಬ ಸಂಶಯ. ಹಾಳಾದ ಡಯಾಬಿಟಿಸ್ ಎರಡು ವರ್ಷದಿಂದ ತಗಲು ಹಾಕ್ಕೊಂಡಿದೆ. ಜೊತೆಗೆ ಸ್ವಲ್ಪ ರಕ್ತದೊತ್ತಡ ಬೇರೆ. ಇಂಥವರಿಗೆ ಕೊರೋನ ಹತ್ತೋದು, ಉಸಿರಾಟದ ತೊಂದರೆ ಜಾಸ್ತಿಯಾಗೋದು ಅಂತ ಕೇಳಿದ್ದ. ಇದರ ಜೊತೆಗೆ ಇಡೀ ದಿನ ವಾಟ್ಸ್ಯಾಪ್ ನಲ್ಲಿ ಬರೋ ಸಂದೇಶಗಳೆಲ್ಲ ನಾಗೇಂದ್ರನ ಎದೆಯನ್ನು ತುಸುತುಸುವೇ ಹಿಚುಕುತ್ತಿದ್ದವು. ಬಾಯಿರುಚಿಯೇ ಇರಲಿಲ್ಲ, ನೀರು ಕಂಡರೂ ವಾಕರಿಕೆ ಬರುತ್ತಿತ್ತು. ಮೂಗಿನ ಹೊಳ್ಳೆಯ ಸುತ್ತಲೂ ಹಿಮಪಾತದಲ್ಲಿ ನಿಂತ ತಣ್ಣಗಿನ ಕೊರೆತದ ಅನುಭವ. ಪ್ಯಾರಾಸಿಟಮೋಲ್-ಬ್ರುಫೆನ್ ನಾಲಿಗೆಯ ಮೇಲೆ ದಪ್ಪನೆಯ ಪದರವನ್ನೆ ಕಟ್ಟಿದಂತಾಗಿತ್ತು. ಕರುಣಾಳ ಒತ್ತಾಯಕ್ಕೆ ಎರಡು ಚಮಚ ಟೊಮ್ಯಾಟೋ ಸೂಪ್ ಕುಡಿದ. ರಾತ್ರೆ ಗೆಳೆಯ ವಿವೇಕ ಫೋನ್ ಮಾಡಿದ. ನಾಗೇಂದ್ರನ ಚಡ್ಡಿ ದೋಸ್ತು, ಇಬ್ಬರೂ ಜೊತೆಗೇ ಇಂಗ್ಲೆಂಡಿಗೆ ಬಂದಿದ್ದರು 20 ವರ್ಷಗಳ ಹಿಂದೆ.  ನಾಗೇಂದ್ರನ ಸುದ್ದಿಕೇಳಿ ಅವನ ಮುಖವೂ ಕಪ್ಪಿಟ್ಟಿತೆಂದು ನಾಗೇಂದ್ರನಿಗೆ ಅನಿಸಿತು. ಅಷ್ಟರಲ್ಲೇ ಸಹೋದ್ಯೋಗಿ ಪಾರ್ಥ ಗಂಗೂಲಿ, ಮೈಕೆಲ್ ನ ಸ್ಥಿತಿಗಂಭೀರವಾಗಿ, ಹತ್ತಿರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿಫ್ಟ್ ಮಾಡಿದರೆಂದು ಸಂದೇಶ ಕಳಿಸಿದ. ಇದನ್ನುಓದುತ್ತಲೇ ನಾಗೇಂದ್ರನ ಜಂಘಾಬಲವೇ ಉಡುಗಿದಂತಾಯಿತು. ಕರುಣಾಳನ್ನು ಕರೆದು ತೋರಿಸಿದ. ಅವಳೋ, ಗಳಗಳನೆ ಅಳಲು ಶುರು ಮಾಡಿಬಿಟ್ಟಳು. ಅವಳನ್ನು ಸಮಾಧಾನ ಮಾಡುವಲ್ಲಿ ನಾಗೇಂದ್ರನಿಗೆ ಸಾಕೋಬೇಕಾಯಿತು. ಮಕ್ಕಳಿಬ್ಬರೂ ಬಾಗಿಲಲ್ಲೇ ಗರಬಡಿದವರಂತೆ ನಿಂತಿದ್ದರು. ಕರುಣಾ ಓಡಿ, ಕಾರಿನಲ್ಲಿದ್ದ ತನ್ನ ಹತ್ಯಾರು ತಂದು ಪುಪ್ಪುಸದ ಪರೀಕ್ಷೆ, ಆಮ್ಲಜನಕದ ಮಟ್ಟವನ್ನು ನೋಡಿ ಎಲ್ಲ ಸರಿ ಇದೆಯೆಂದು ಖಚಿತಪಡಿಸಿಕೊಂಡು ತನ್ನ ಶಯನಾಗಾರಕ್ಕೆ ತೆರಳಿದಳು.

ರಾತ್ರೆಗಳನ್ನು ನಾಗೇಂದ್ರ ದ್ವೇಷಿಸತೊಡಗಿದ್ದ. ಬಾರದ ನಿದ್ದೆಯಲ್ಲಿ ಬೇಡದ ಯೋಚನೆಗಳೇ ತಲೆ ತಿನ್ನುತ್ತಿದ್ದವು. ಇದರೆಡೆ ಮೈಕೆಲ್ನ ಸುದ್ದಿ ಅವನ ಬುಡವನ್ನೇ ಅಲ್ಲಾಡಿಸಿತ್ತು. ನನಗೂ  ಅದೇ ಸ್ಥಿತಿ ಬಂದರೆ ಎಂಬ ಕರಾಳ ಚಿಂತನೆಯೇ ತಲೆ ತುಂಬ. ತಮ್ಮ ಗುಂಪಿನ ಅನಧಿಕೃತ ಸಲಹೆಗಾರ ಅಲ್ತಾಫ್ ಹೇಳಿದಂತೆ ವಿಲ್ ಮಾಡಿಸಿಬೇಕಿತ್ತು, ಇಂದು-ನಾಳೆ ಅಂತ ಎಂದಿನಂತೆ  ಕಾಲಹರಣ ಮಾಡಿದೆನಲ್ಲ ಎಂದು ಶಪಿಸಿಕೊಂಡ. ಪ್ರಯಾಣಕ್ಕೆ ಹೋಗುವಾಗಲೆಲ್ಲ ಕರುಣಾ ಎಚ್ಚರಿಸುತ್ತಿದ್ದಳು, ಎಲ್ಲ ಬ್ಯಾಂಕ್ ಖಾತೆಗಳ ವಿವರ ಬರೆದಿಡು; ಎಲ್ಲ ಹಣಕಾಸಿನ ಸೈಟ್, ಪಾಸ್ಸ್ವರ್ಡ್ ಎಲ್ಲ ವಿವರಗಳನ್ನು ಬರೆದು ಎಲ್ಲಿದೆ ಅಂತ ಹೇಳಿಡು  ಅಂತ ಹೇಳುತ್ತಿದ್ದಳು. ಅದನ್ನೂ  ನಾಗೇಂದ್ರ ನಿರ್ಲಕ್ಷ್ಯ ಮಾಡಿದ್ದ. ಇನ್ನು ತಡ ಮಾಡಬಾರದು ಅಂತ ಅವನಿಗೆ ಅನ್ನಿಸ ತೊಡಗಿತು. ಬಸವಳಿಸುವ ಜ್ವರದ ಬೇಗೆಯಲ್ಲೇ ಎಲ್ಲ ಬ್ಯಾಂಕಿಂಗ್ ವಿವರಗಳನ್ನು ಕೈಲಾದಷ್ಟು ಬರೆದಿಟ್ಟ. ಇದು ತನ್ನ ಮರಣ ಶಾಸನವೇ ಎಂದು ಅವನಿಗೆ ಅನಿಸತೊಡಗಿತು. ಹಲವಾರು ಬಾರಿ ಆಮ್ಲಜನಕ ಮಟ್ಟ ನೋಡಿಕೊಂಡ.  ಮೆಲ್ಲನೆ ಅದು ೯೬ ರಿಂದ ೯೪ಕ್ಕೆ ಇಳಿದಿತ್ತು.

ಬೆಳಗ್ಗೆ ಎದ್ದ ಕರುಣಾ ಕೂಡಲೇ ತನಗೆ ಪರಿಚಯವಿದ್ದ ಹತ್ತಿರದ ಆಸ್ಪತ್ರೆಯ ವೈದ್ಯನೊಬ್ಬನಿಗೆ ಫೋನಾಯಿಸಿದರೆ, ಆತ ”NHS111ಗೆ ಫೋನ್ಮಾಡು,” ಅಂತ ಕೈತೊಳಕೊಂಡ. ಅವರೋ ಅರ್ಧಗಂಟೆಕಾಯಿಸಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ, ನಾಗೇಂದ್ರನ ಸಹನೆಯನ್ನು ಪರೀಕ್ಷಿಸಿ, “ಮನೆಯಲ್ಲೇ ತೆಪ್ಪಗಿರು,” ಎಂಬ  ಮಹಾನ್ ಸಲಹೆಕೊಟ್ಟು ಫೋನ್ ಕುಕ್ಕಿದರು. ಮೆಲ್ಲನೆ ಆಮ್ಲಜನಕದ ಮಟ್ಟ 90 ರೆಡೆ ಪುಟ್ಟ ಪುಟ್ಟ ಹೆಜ್ಜೆ ಹಾಕತೊಡಗಿತ್ತು. ತಡೆಯಲಾಗದೇ ನಾಗೇಂದ್ರ ಪಾರ್ಥನಿಗೆ ಸಂದೇಶ ಕಳಿಸಿದ. ಮರುಕ್ಷಣದಲ್ಲಿ ಪಾರ್ಥ ಫೋನ್ಮಾಡಿ, “ನಾಗ್ಸ್. ನನಗ್ಯಾಕೋ ಈ ಕೊರೋನಾ ಪರಿಸ್ಥಿತಿಯಲ್ಲಿ ನಿನ್ನನ್ನು ಯಾವುದೇ ತಪಾಸಣೆಯಿಲ್ಲದೇ ಮನೆಯಲ್ಲೇಕೊಳೆಯಲು ಬಿಡುವುದು ಸರಿ ಕಾಣೋದಿಲ್ಲ, ಈ ಕ್ಷಣ ನೀನು ನಮ್ಮಆಸ್ಪತ್ರೆಗೆ ಬಾ. ನಾನೇ ಬಾಗಿಲಲ್ಲಿ ಕಾಯುತ್ತಿರುತ್ತೇನೆ,” ಅಂತ ಆಜ್ಞೆ ಕೊಟ್ಟ. ಕೂಡಲೇ ಸುದ್ದಿ ತಿಳಿದ ಕರುಣಾ ಸರ್ಜರಿಯಿಂದ ಬಂದು, ನಾಗೇಂದ್ರನನ್ನು ಧಾವಂತದಿಂದ ಆಸ್ಪತ್ರೆಗೆ ಕರೆದೊಯ್ದಳು. ದೇವರೇ ಬಂದರೂ ಈ ದೇಶದಲ್ಲಿ ರೂಲ್ ಪಾಲಿಸಲೇ ಬೇಕು. ಸ್ವಾಗತಕಕ್ಷೆಯ ಹೆಂಗಸಿಗೆ ತನ್ನ ಗೋತ್ರಪ್ರವರಗಳನ್ನೆಲ್ಲ ಒಪ್ಪಿಸಿದ ಮೇಲೆ, ಪಕ್ಕದ ಬಾಗಿಲಿನಿಂದ ಒಬ್ಬನೇ ಒಳಗೆ ಹೋಗಲು ಆಜ್ಞಾಪಿಸಿದಳು. ಇದರ ಮಧ್ಯೆ ಒಬ್ಬಳು ನರ್ಸಮ್ಮ ಪ್ರತ್ಯಕ್ಷಳಾಗಿ “ಹೀಗೆಲ್ಲ ಆಸ್ಪತ್ರೆಗೆ ಬರಬಾರದು, ಇದು ಸದ್ಯದ ಸರ್ಕಾರದ ಆಜ್ಞೆಗೆ ಮೀರಿದ ನಡವಳಿಕೆ,” ಎಂದೆಲ್ಲ ತಗಾದೆ ತೆಗೆದಾಗ ಪಾರ್ಥನೇ ಅವಳನ್ನು ಸಮಜಾಯಿಸಿ ಸಾಗ ಹಾಕಿದ. ಕೂಡಲೇ ಬಂದ ಇನ್ನೊಬ್ಬ ನರ್ಸ್ ತಡಬಡನೇ ನಾಡಿ, ರಕ್ತದೊತ್ತಡ ಆಮ್ಲಜನಕದಮಟ್ಟ ಎಲ್ಲವನ್ನೂ ತಪಾಸಣೆ ಮಾಡಿ, ಮೂಗು-ಗಂಟಲನ್ನು ಕೆರೆದು, ಕ್ಷ-ಕಿರಣದ ವ್ಯವಸ್ಥೆ ಮಾಡಿ, ನರದೊಳಗೆ ಸೂಜಿ ತುರಿಕಿಸಿ ರಕ್ತ ತಪಾಸಣೆಗೆ ಕಳಿಸಿದಳು. ರಾತ್ರೆಯಿಂದ ಏನೂ ತಿಂದಿಲ್ಲವೆಂದು ಟೋಸ್ಟ್-ಚಹಾದ ವ್ಯವಸ್ಥೆಯನ್ನೂ ಮಾಡಿದಳು. ಪಾರ್ಥ ಯಾವಾಗಲೂ ಹಸನ್ಮುಖಿ. ಏನಾದರೂ ತಮಾಷೆ ಮಾಡಿಕೊಂಡೇ ಇರುವಂಥವನು. ಇವತ್ತು ಅವನ ಮುಖ ಗಂಭೀರವಾಗಿತ್ತು. ನಾಗೇಂದ್ರನಿಗೆ ಇದು ಒಳ್ಳೆ ಶಕುನದಂತೆ ಕಾಣಲಿಲ್ಲ. “ನಾಗ್ಸ್, ಕ್ಪ-ಕಿರಣದಲ್ಲಿ ನ್ಯೂಮೋನಿಯಾ ಥರ ಕೆಲವು ಛಾಯೆಗಳಿವೆ, ನಿನ್ನ ಬಿಳಿ ರಕ್ತಕಣ ಸ್ವಲ್ಪ ಕಡಿಮೆ ಇದೆ. ನಿನಗೆ ರಕ್ತ ನಾಳದಲ್ಲೇ ಆಂಟಿಬಯೋಟಿಕ್ಸ್ ಕೊಡೋಣ. ಆಮ್ಲಜನಕಾನೂ ಬೇಕು. ವಾರ್ಡಿಗೆ ಸೇರಿಸ್ತಿದ್ದೀನಿ. ಸದ್ಯಕ್ಕೇನೂ ಒಂಟಿ ಕೊಠಡಿ ಸಿಗೋ ಸಾಧ್ಯತೆ ಇಲ್ಲ,” ಎಂದು ತನ್ನ ಕೆಲಸಕ್ಕೆ ತೆರಳಿದ. ಕರುಣಾ ಹೊರಗೇ ಕಾಯ್ತಾ ಇದ್ದಳು. ಅವಳಿಗೆ ನಾಗೇಂದ್ರನನ್ನು ನೋಡುವ ಅವಕಾಶನೂ ಇರಲಿಲ್ಲ. ಕೊರೋನಾ ಎಂದು ರೋಗಿಗಳನ್ನು ಬಿಟ್ಟರೆ ಯಾರನ್ನೂ ಆಸ್ಪತ್ರೆ ಒಳಗೆ ಬಿಡುತ್ತಿರಲಿಲ್ಲ. ಅವಳಿಗೆ “ಅತ್ಯವಶ್ಯಕ ಸಾಮಾನುಗಳನ್ನು ವಾರ್ಡಿಗೆ ತಂದು ನರ್ಸಿನ ಕೈಯಲ್ಲಿ ಕೊಡು,” ಎಂದು ಫೋನಾಯಿಸಿ ಹಾಸಿಗೆಯಲ್ಲೊರಗಿದ. ಒಂದೆಡೆ ಆಸ್ಪತ್ರೆಯಲ್ಲಿದೇನೆ ಎಂಬ ಸಮಾಧಾನ, ಇನ್ನೊಂದೆಡೆ ತನ್ನ ತಲೆಯ ಮೇಲೆ ನೇತಾಡುವ ಕತ್ತಿಯಿನ್ನೂ ಮಾಯವಾಗಿಲ್ಲವೆಂಬ ತಲ್ಲಣ. ವಾರ್ಡಿನಲ್ಲಿ ನಾಲ್ಕೈದು ಜನ ಕೆಮ್ಮುತ್ತಿದ್ದರು. ಪಕ್ಕದ ಹಾಸಿಗೆಯ ಕೆವಿನ್ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದಾನಂತೆ, ಅವನಿಗೂ ಜ್ವರ ಬಿಡದೇ ಬರುತ್ತಿತ್ತು. ಬೆಳಿಗ್ಗೆ ತಿಂದದ್ದೆಲ್ಲ ನಾಗೇಂದ್ರ ಕಕ್ಕಿದ. ಇವನೇನೂ ತಿನ್ನುತ್ತಿಲ್ಲಅಂತ ನರ್ಸ್ ಸಲೈನ್ ಹಚ್ಚಿಟ್ಟಳು. ವಾಂತಿ ಆಗಬಾರದೆಂದು ಕೊಟ್ಟ ಔಷದಿಗೆ ಮೈಯೆಲ್ಲಾ ಝುಮ್-ಝುಮ್ಗುಟ್ಟಿ, ಇನ್ನು ಅದನ್ನು ಕೇಳಬಾರದು ಅಂತ ನಿಶ್ಚಯಿಸಿದ. ರಾತ್ರಿ ಬಂದ ನರ್ಸ್ ಇನ್ನೊಮ್ಮೆ ಎಲ್ಲರ ಮೂಗು ಗಂಟಲುಗಳನ್ನೆಲ್ಲ ಕೆರೆದು ಇದನ್ನು ಬೇರೆ ಪ್ರಯಾಗಶಾಲೆಗೆ ಕಳಿಸುತ್ತಿದ್ದೇವೆಂದು ಡಂಗುರ ಬೀರಿದಳು. ಯಾಕೆ, ಎಲ್ಲಿಗೆ ಎಂದು ಕೇಳುವ ಶಕ್ತಿ ಯಾರಲ್ಲೂ ಇರಲಿಲ್ಲ.

ಮುಂದಿನ ಇಪ್ಪತ್ನಾಕು ಗಂಟೆ ನಾಗೇಂದ್ರನಿಗೆ  ಯುಗಗಳಾದವು. ಹಾಸಿಗೆಯಲ್ಲಿ ಸತ್ತ ಹಾಗೆ ಬಿದ್ದವನಿಗೆ ಸುತ್ತ ಅಪ್ಪ-ಅಮ್ಮ, ಬಂಧುಗಳು, ಮಿತ್ರರು ಅಂತಿಮ ಪ್ರದಕ್ಷಿಣೆ ಹಾಕುತ್ತಿದ್ದಾರೆಂದೆನಿಸುತ್ತಿತ್ತು. ನಾಗೇಂದ್ರ ಹತಾಶ ಜೀವಿಯೇನಲ್ಲ. ಕೊರೋನದ ಸುದ್ದಿಗಳೆಲ್ಲ ಕರಾಳವಾಗಿರುವಾಗ, ಉದಾತ್ತ ಯೋಚನೆಗಳು ಬರುವುದು ಕಷ್ಟವೇ. ಅದನ್ನೆಲ್ಲ ದೂರವಿಡಲು ಫೋನಿನ ಅಂತರ್ಜಾಲದ ಸಂಪರ್ಕವನ್ನೇ ಕಡಿದುಹಾಕಿದ್ದ. ಆದರೆ ಪಾರ್ಥ ತಂದ ಮೈಕೆಲ್ನ ಮರಣದ ಸುದ್ದಿ ನಾಗೇಂದ್ರನ ಮನೋಸ್ಥಿತಿಯನ್ನು ಇನ್ನೂ ಹದಗೆಡಿಸಿತ್ತು. ಮೈಕೆಲ್ ಸಾಮಾನ್ಯನೇನಲ್ಲ. ಎವರೆಸ್ಟ್ ಪರ್ವತದ ಬುಡಮುಟ್ಟಿ ಬಂದವನು. ಅಂತಹ ಗಟ್ಟಿ ಮನುಷ್ಯನನ್ನೇ ಈ ಮಾರಿ ಬಲಿ ತೆಗೆದುಕೊಂಡರೆ,  ನನ್ನಂಥ ಹುಲು ಮಾನವನ ಗತಿ ಕೈಲಾಸವೇ ಎಂದು ಹತಾಶನಾಗಿಬಿಟ್ಟ. ರಾತ್ರೆ ನರ್ಸ್ ಬಂದವಳೇ ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿ ಎಂದು ಹುಕುಂ ಕೊಟ್ಟಳು. ಇದು, ಯುದ್ಧಕಾಲದಲ್ಲಿ ಕೊಡುವ ಬಾಂಬ್ ಸೈರನ್ ಥರ ಕೇಳಿಸಿತು ನಾಗೇಂದ್ರನಿಗೆ. ಏನೋ ವಿಪತ್ತು ಕಾದಿದೆ ಎಂದು ಖಚಿತವಾದಂತಿತ್ತು. ರಾತ್ರೆ ಪಾಳಿಯ ವೈದ್ಯನೊಬ್ಬ ಮೈ-ಮುಖಗಳನ್ನೆಲ್ಲ ಮುಚ್ಚಿಕೊಂಡು ತನ್ನೆಡೆಗೆ ಬರುವುದನ್ನುಗಮನಿಸಿದ. ಇವನೇನು ದೇವದೂತನೋ ಯಮದೂತನೋ ಎಂದು ಅವನಿಗರಿಯದಾಯಿತು. ಹಾಸಿಗೆಯ ಬುಡದಲ್ಲಿ ನಿಂತು ಮೃದುವಾದ ಸ್ವರದಲ್ಲಿ, “ನಿನ್ನೆ ಕಳಿಸಿದ ಪರೀಕ್ಷೆಯಲ್ಲಿ ನಿನಗೆ ಕೋವಿಡ್ ರೋಗ ಖಚಿತವಾಗಿದೆ. ನಿನ್ನ ಮನೆಯವರೆಲ್ಲ ಇನ್ನು 14 ದಿವಸ ಮನೆಬಿಟ್ಟು ಹೋಗುವಂತಿಲ್ಲ. ಅವರಿಗೆ ಕೂಡಲೇ ತಿಳಿಸಬೇಕು. ನೀನೇ ತಿಳಿಸುತ್ತೀಯೋ ಇಲ್ಲಾ ನಿನಗೆ ಸುಸ್ತಾಗಿದ್ದಾರೆ ನಾನೇ ನಿನ್ನಹೆಂಡತಿಗೆ ತಿಳಿಸುತ್ತೇನೆಂದು,” ಸಹಾಯ ಹಸ್ತ ಚಾಚಿದ. ಈ ಮಧ್ಯರಾತ್ರಿಯಲ್ಲಿ ಕರುಣಾಳನ್ನು ಫೋನ್ ಮಾಡಿ ಎಬ್ಬಿಸುವುದು ಅಸಾಧ್ಯ ಎಂಬುದನ್ನು ನಾಗೇಂದ್ರ ಬಲ್ಲ. ಆ ವೈದ್ಯನಿಗೆ ಧನ್ಯವಾದಗಳನ್ನರುಹಿ, ತಾನೇ ಸುದ್ದಿ ತಿಳಿಸುವುದಾಗಿ ಹೇಳಿದ. ಪರೀಕ್ಷೆಯ ಫಲಿತಾಂಶ ಕೇಳಿ ಒಂದು ಬಗೆ ಮನ ನಿರುಮ್ಮಳವಾದರೂ, ಬಂದೇನೇ ಈ ಮಾರಿಯ ಬಾಯಿಂದ ಸುರಕ್ಷಿತವಾಗಿ ಎಂಬ ದುಗುಡ ಇನ್ನೊಂದೆಡೆ. ಯೋಚಿಸುತ್ತಿರುವಾಗಲೇ, ಇಬ್ಬರು ದಾಯಿಯರು ಬಂದು ನಾಗೇಂದ್ರನನ್ನು ಒಂಟಿಕೋಣೆಗೆ ಸ್ಥಲಾಂತರಿಸಿದರು.

ಪವಾಡವೆಂಬಂತೆ ಮತ್ತೆರಡು ದಿನಗಳಲ್ಲಿ ಮೈ ಹಗುರವಾಗತೊಡಗಿತು. ಜ್ವರ ಇಳಿದು ಹುರುಪು ಹೆಚ್ಚಾಯಿತು. ಮರುದಿನ ಬಂದ ವೈದ್ಯ ಆಮ್ಲಜನಕದ ಅಗತ್ಯ ಕಡಿಮೆಯಿದೆಯೆಂದು ಇನ್ನೂ ಧೈರ್ಯ ತುಂಬಿದ. ಕಣ್ಮುಂದೆ ಯಮರಾಜನ ಬದಲು ಮೃದುಲಾ-ಮೃಣಾಲ್ ರ ನಗುಮುಖ ಕುಣಿಯತೊಡಗಿತು. ಮಾರನೇ ದಿನ ಬಂದ ಪಾರ್ಥ, “ನಾಡಿ, ರಕ್ತದೊತ್ತಡ, ಆಮ್ಲಜನಕದ ಲೆವೆಲ್ ಎಲ್ಲ ಸರಿಯಾಗಿದೆ. ಇವತ್ತು ಸಾಯಂಕಾಲ ಮನೆಗೆ ಹೋಗಬಹುದು,” ಎಂದು ಮುಗುಳ್ನಕ್ಕ. ನಾಗೇಂದ್ರನ ಕಣ್ಣುಗಳಿಂದ ಧಾರಾಕಾರವಾಗಿ ಕಂಬನಿ ಸುರಿದವು. ಪಾರ್ಥ ಹತ್ತಿರ ಬಂದು ಸಂತೈಸಲಾರ, ಬಿಡಲಾರ. ದೂರದಿಂದಲೇ, “ರಿಲ್ಯಾಕ್ಸ್ ಯಾರ್ ನಾಗ್ಸ್. ಥ್ಯಾಂಕ್ ದಿ ಗಾಡ್. ಇಟ್ ಆಲ್ ಎಂಡೆಡ್ ವೆಲ್. ಇನ್ನು ಎರಡು ವಾರ ಆಸ್ಪತ್ರೆ ಕಡೆ ಮುಖ ಹಾಕಬೇಡ,” ಎಂದು ಧೈರ್ಯ ಹೇಳಿ ರಜೆ ಚೀಟಿ ಬರೆದು ಕೊಟ್ಟ.

ಕಿಟಕಿಯ ಹೊರಗೆ ಎಂದಿಗೂ ಕವಿದಿರುವ ಕಾರ್ಮೋಡದ ತೆರೆ ಸರಿದು, ಹೊಂಬಿಸಿಲು ಮೂಡಿತ್ತು. ಅಂತರ್ಜಾಲದ ಸಂಪರ್ಕಕ್ಕೆ ಬಂದ ಫೋನ್ ನೂರಾರು ಸಂದೇಶಗಳನ್ನು ಮುಂದೆ ಸುರುವಿ ಹಾಕಿತ್ತು. ಎಲ್ಲದರ ಮೊದಲಿತ್ತು ಗೆಳೆಯನೊಬ್ಬನ ಸಂದೇಶ, “ಸಿಂಹದ ಬಾಯಿಂದ ಹೊರಬಂದಿದದ್ದಕ್ಕೆ ಅಭಿನಂದನೆಗಳು” 

ವಿ.ಸೂ: ಡಾ. ನಾಗೇಂದ್ರ ಗುಣಮುಖರಾಗಿದ್ದು, ಸಾಧ್ಯವೇ ಕೆಲಸಕ್ಕೆ ಹಿಂದಿರುಗಲಿದ್ದಾರೆ. ಕೊರೋನಾ ಸೋಂಕು ಹೆಚ್ಚಿನವರಲ್ಲಿ ಮರಣಕ್ಕೆ ದಾರಿಯಲ್ಲ ಎಂಬುದಕ್ಕೆ ಈ ಕಥೆಯೇ ಸಾಕ್ಷಿ. ಓದುಗರು ಇದನ್ನು ಓದಿ, ರೋಗ ಲಕ್ಷಣಗಳನ್ನು ತಿಳಿದು ಹೆಚ್ಚಿನ ಜಾಗರೂಕತೆ ತೆಗೆದುಕೊಳ್ಳಲಿ, ಸೋಂಕು ಬಂದರೆ ಧೈರ್ಯವಾಗಿ ಎದುರಿಸುವ ಮನೋಭಾವನೆ ಇರಲಿ ಎಂಬುದೇ ಲೇಖಕರ ಆಷಯ.

ಕರಾಳ ಕರೋನ

ಡಾ. ಜಿ. ಎಸ್. ಶಿವಪ್ರಸಾದ್

ಕರೋನ ಬರುವಿಕೆಯ ಭೀತಿಯಲ್ಲಿ
ಕದವ ಮುಚ್ಚಿ ಕುಳಿತ್ತಿದ್ದೇವೆ
ಇಂದು-ಎಂದು , ಹೇಗೆ, ಕಣ್ ತಪ್ಪಿಸಿ
ಬರುವನೆಂಬ ಶಂಕೆಯಲಿ ನಡುಗಿದ್ದೇವೆ

ಕಟ್ಟಾಜ್ಞೆಯ ಹಿಡಿದ ಯಮದೂತ
ಬಾಗಿಲಬಳಿ ನಿಂದು ಕದವ ತಟ್ಟಿದ್ದಾನೆ
ಬಾಗಿಲು ಮುರಿದು ಮುನ್ನುಗ್ಗಿ
ಸೆರೆ ಹಿಡಿವ ಸಂಚು ಹೂಡಿದ್ದಾನೆ

ಮನೆ ಮನೆಗೆ ಲಗ್ಗೆ ಇಟ್ಟು
ಎಲ್ಲರ ಮೈಮನಗಳ ಆವರಿಸಿದ್ದಾನೆ
ಅಮೂರ್ತ ಭೀಕರ ಭಯೋತ್ಪಾದಕ
ಅಲ್ಲಿ-ಇಲ್ಲಿ, ಎಲ್ಲೆಲ್ಲೂ ಅವತರಿಸಿದ್ದಾನೆ

ಜಾತಿ, ಮತ, ಧರ್ಮ
ದೇಶ ಗಡಿಗಳ ಹಂಗಿಲ್ಲ
ಎಲ್ಲರನ್ನೂ ನುಂಗುವ ತವಕ
ಇವನ ದಾಹಕ್ಕೆ ಕೊನೆಯಿಲ್ಲ

ಕಾಣದ ವೈರಿಯ ಬಳಿ
ಖಡ್ಗ, ಕವಚ, ಕಹಳೆಗಳಿಲ್ಲ
ರಣ ರಂಗದಲಿ ರಕ್ತಪಾತಗಳಿಲ್ಲ,
ಸಮರದಲಿ ಒಪ್ಪಂದಕ್ಕೆ ಆಸ್ಪದವಿಲ್ಲ

ಮೊರೆ ಹೋದ ದೇವ ದೇವತೆಗಳು
ತಮ್ಮ ಗುಡಿಗಳ ಮುಚ್ಚಿದ್ದಾರೆ
ಪವಾಡ ಪುರುಷರು, ಬಾಬಾಗಳು
ಅಂಜಿ ಆಶ್ರಮಗಳಲಿ ಅಡಗಿಕೊಂಡಿದ್ದಾರೆ

ಕೆಮ್ಮು ದಮ್ಮುಗಳ ನಡುವೆ
ನಿಶಬ್ದ, ನಿರ್ಜನ ಬೀದಿಗಳು
ಸೆರೆಮನೆಯಾದ ಮನೆ ಮಠಗಳು
ಭುಗಿಲೆದ್ದು ನರ್ತಿಸುವ ಚಿತೆಯುರಿಗಳು

ಹೋರಾಡಿ ನಿಶಕ್ತರಾದ ಹಲವರಿಗೆ
ಸಮರದಲಿ ಸೋಲು ಅನಿವಾರ್ಯ
ಗೆದ್ದು ಬದುಕುಳಿದವರಿಗೆ ನಾಳೆ
ಹೊಸ ಭರವಸೆಯ ಅರುಣೋದಯ

ಕವಿ: ಡಾ. ಜಿ. ಎಸ್. ಶಿವಪ್ರಸಾದ್, ಶೆಫೀಲ್ಡ್ , ಯು. ಕೆ .

ರೇಖಾಚಿತ್ರ ಕೃಪೆ : ಲಕ್ಷ್ಮಿನಾರಾಯಣ ಗುಡೂರ್

'ಬೇವು-ಬೆಲ್ಲ' ದ ಯುಗಾದಿ 

ಸುತ್ತಮುತ್ತಲಿನ ಋಣಾತ್ಮಕ ಬೆಳವಣಿಗೆಗಳು ನಮ್ಮನ್ನಾವರಿಸಿರುವ ಈ ಸಂಧರ್ಭದಲ್ಲಿ, ಇನ್ನು ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬವಿದೆ  ಎಂಬುದು ಕೆಲವರಿಗೆ ಮರೆತು ಹೋಗಿದ್ದರೆ ಯಾವುದೇ ಆಶ್ಚರ್ಯವಿಲ್ಲ.ಇದೇ ತಿಂಗಳ ಕೊನೆಯಲ್ಲಿ ನಡೆಯಬೇಕಾಗಿದ್ದ ಅನೇಕ ಯುಗಾದಿ ಕಾರ್ಯಕ್ರಮಗಳು ರದ್ದಾಗಿವೆ. ಸಾಮಾಜಿಕ ಪ್ರಾಣಿಗಳಾಗಿರುವ ನಾವೆಲ್ಲರೂ, ನಮ್ಮ ಗುಣಕ್ಕೆ ವಿರುದ್ಧವಾಗಿ ಸಾಮಾಜಿಕವಾಗಿ ಪ್ರತ್ಯೇಕವಾಗಿ ಮನೆಯ ನಾಲ್ಕು ಗೋಡೆಗಳಿಗೆ ನಮ್ಮನ್ನು ಸೀಮಿತಗೊಳಿಸಿಕೊಳ್ಳಬೇಕಾಗಿರುವದು ಇಂದಿನ ಸ್ಥಿತಿ. ಪ್ರತೀ ವರುಷ  ಬೇವು ಸಾಂಕೇತಿಕವಾಗುತ್ತಿತ್ತು ಆದರೆ  ಈ ವರುಷದ ಯುಗಾದಿಯ ಬೇವು-ಬೆಲ್ಲದಲ್ಲಿ ಬೇವಿನ ಪ್ರಮಾಣ ಸ್ವಲ್ಪ ಹೆಚ್ಚಾದಂತೆಯೇ ಕಾಣುತ್ತಿದೆ. ಜೀವನದ ಸಿಹಿ ಕಹಿಗಳನ್ನು ಸಮನಾಗಿ ಕಾಣಬೇಕು ಎಂಬ ಹಬ್ಬದ ಪ್ರತೀತಿಯನ್ನು ನಾವು ಈ ವರುಷ ಸಾಮೂಹಿಕವಾಗಿ ಪಾಲನೆಗೆ ತರಲೇಬೇಕಾಗಿದೆ. ಈ ಸಂಧರ್ಭದಲ್ಲಿ  ಡಿ.ವಿ. ಜಿ ರವರ ಒಂದು ಮುಕ್ತಕ ನೆನಪಾಗುತ್ತಿದೆ.  

ವಹಿಸು ಕೆಲ ಭಾರಗಳ; ಸಹಿಸು ಕೆಲ ನೋವುಗಳ ।
ಪ್ರಹರಿಸರಿಗಳನನಿತು ಯುಕ್ತಗಳನರಿತು ॥
ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು ।
ವಿಹರಿಸಾತ್ಮಾಲಯದಿ- ಮಂಕುತಿಮ್ಮ ॥

ಬದುಕಿನಲ್ಲಿ ಕೆಲವು ಭಾರಗಳನ್ನು ಹೊತ್ತುಕೋ, ಕೆಲವು ನೋವುಗಳನ್ನು ಸಹಿಸಿಕೋ, ನಿನ್ನ ಶತ್ರುಗಳನ್ನು ಆದಷ್ಟು ಬಗ್ಗುಬಡಿ, ಬದುಕುವಾಗ ಯುಕ್ತ-ಅಯುಕ್ತಗಳನ್ನು ಅರಿತು, ನಿನಗೆ ವಹಿಸಿದ ಈ ಭೂಮಿಯ ಮೇಲಿನ ನಾಟಕದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ನಿನ್ನ ಪಾತ್ರವನ್ನು ವಹಿಸು. ಹಾಗೆ ಮಾಡುವಾಗ ನೀನು ಆತ್ಮದ ಆಲಯದಲ್ಲಿ ವಿಹರಿಸು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ(ರಸಧಾರೆ-೯೦೪). ಅದರಂತೆ ನಾವು ನಮ್ಮ ಶತ್ರುವನ್ನು ಅರಿತುಕೊಂಡು, ಅದನ್ನು ಬಗ್ಗು ಬಡೆಯಲು ಸಾಮಾಜಿಕ ಪ್ರತ್ಯೇಕತೆ (Social Distancing) ಎಂಬ ಭಾರವನ್ನು ಹೊರಬೇಕಾಗಿದೆ, ಕೆಲವು ನೋವುಗಳನ್ನು ಸಹಿಸಬೇಕಾಗಿದೆ ಮತ್ತು  ಈ ವರುಷದ ಯುಗಾದಿಯನ್ನು ಮನೆಗಷ್ಟೇ ಸೀಮಿತಗೊಳಿಸಿ ಆಚರಿಸಬೇಕಾಗಿದೆ. ಈ ಸಂಧರ್ಭದಲ್ಲಿ ನಂಬಿಕೆಯ ಬೆಲ್ಲವ ನೆನೆದು, ಮಾನವೀಯತೆಗೆ ಮೆರಗು ತರಲು ಸದಾವಕಾಶವೆಂದು ತಿಳಿದು ನಮ್ಮ ಕೈಲಾದಷ್ಟು ಸಮಾಜಮುಖಿಯಾಗುವುದರ ಮೂಲಕ ಯುಗಾದಿಯನ್ನು ಆಚರಿಸೋಣ. ನಿಮಗೆಲ್ಲರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು

ಯುಗಾದಿ ಹಬ್ಬದ ಪ್ರಯುಕ್ತ ಈ ವಾರ ‘ಅನಿವಾಸಿ’ಯಲ್ಲಿ ಗೋಪಾಲಕೃಷ್ಣ ಹೆಗ್ಡೆ ರವರು ಬರೆದಿರುವ ಲೇಖನ ಮತ್ತು ಅನಿತಾ ಹೆಗ್ಡೆ ರವರು ಬರೆದಿರುವ ಒಂದು ಕವನವನ್ನು ಪ್ರಕಟಿಸುತ್ತಿದ್ದೇವೆ, ಓದಿ ಪ್ರೋತ್ಸಾಹಿಸಿ. 
                                                                                (ಸಂ : ಶ್ರೀನಿವಾಸ ಮಹೇಂದ್ರಕರ್)

೨೦೨೦ರ ಮೌನ ಯುಗಾದಿಯ ವಿಚಾರಗಳು 

Image result for karona virus on briton
ಗೋಪಾಲಕೃಷ್ಣ ಹೆಗ್ಡೆ

ವರ್ಷಕ್ಕೊಮ್ಮೆ ಬರುವ ದಕ್ಷಿಣ  ಭಾರತೀಯ ಹಬ್ಬಗಳಲ್ಲಿ ಒಂದಾದ  ಯುಗಾದಿ ಹಬ್ಬ, ಈ ವರ್ಷ ಕೇವಲ ಸಾಂಕೇತಿಕವಾಗಿ ಸಂಭವಿಸುತ್ತಿದೆ, ಸಂಭ್ರಮದಲ್ಲಿ ಅಲ್ಲ . ಯಾವುದೇ ವಸ್ತು ಅಥವಾ ಘಳಿಗೆ – ಘಟನೆಯನ್ನು, ಸಾಂಕೇತಿಕವಾಗಿ ಅನುಭವಿಸುವದು, ಅಂದರೆ ಅದನ್ನು ಹಾಗೆ ಕಲ್ಪಿಸಿಕೊಳ್ಳುವದು ಅಥವಾ ಅದು ಅಂದರೆ ಏನು ಎಂದು ವಿಚಾರಿಸುವದು, ಚರ್ಚಿಸುವದು, ಎಲ್ಲ   ಕೇವಲ ಮನೋಮಂಥನದ ಚಟುವಟಿಕೆಯೇ ಸರಿ. ಆದರೇನಂತೆ ?

ಈ ಯುಗಾದಿ, ಕಾವಿಡ್-೧೯ ಎಂಬ ವೈರಾಣು, ಕಳೆದ ೩-೪ ತಿಂಗಳಲ್ಲಿ, ಈ ನಮ್ಮ ಮನುಕುಲದ ಲಕ್ಷಾಂತರ  ಜನರನ್ನು ಮುಖ್ಯವಾಗಿ, ಅವರ ಶ್ವಾಸಕೋಶವನ್ನೇ ತನ್ನ  ಭಯಂಕರ ವಜ್ರಮುಷ್ಠಿಯಲ್ಲಿ ಹಿಡಿದು ಕಾಡಿ ಕೊಲ್ಲಲು, ಜಗತ್ತಿನಾದ್ಯಂತ ದಿನೇ- ದಿನೇ, ಬೆಳೆದುಕೊಳ್ಳುತ್ತಿರುವದು ಒಂದು ಪ್ರಳಯದ ಚಿತ್ರಣವೇ ಸರಿ. ಪ್ರಾಣದಾತ ವಾಯುವಿನ ಸಂಬಧವನ್ನೇ ಧಿಕ್ಕರಿಸಿಯೂ, ಅವನಿಗಿಂತ ಪ್ರಬಲನಾಗಿ ಹರಡಬಲ್ಲೆನೆಂಬ  ಅಹಂನಲ್ಲಿ, ಹೂಂಕರಿಸಿ ಘರ್ಜಿಸುತ್ತಿರುವ, ಕಣ್ಣಿಗೂ ಕಾಣಸಿಗದ ಈ ವೈರಾಣು, ವಾಯುವಿನ ಕಾರ್ಯಕೇಂದ್ರವಾದ ಶ್ವಾಸಕೋಸಕ್ಕೇ ಧಕ್ಕೆಯಿಟ್ಟು, ಅವನನ್ನು ಹೀಯಾಳಿಸಿ ಕುಣಿಯುತ್ತಿರುವ ಈ ಸಂದರ್ಭ ಒಂದು ಪ್ರಳಯ ಸಂಕೇತವೇ -ಅಥವಾ  ಸ್ಮಶಾನದ ಮಹಾ ಪ್ರೇತವೇ ಎಂದೆಲ್ಲ ಪರಿಗಣಿಸಿದಲ್ಲಿ ಉತ್ಪ್ರೇಕ್ಷೆಯೇನೂ ಅಲ್ಲ ಅನ್ನಿಸಿದೆ.

ಮೇಲೆ ಅಂದುಕೊಂಡಂತೆ ಗಾಳಿಯ ಸಂಭಂಧವಿಲ್ಲದೆಯೂ , ಬಿರುಗಾಳಿಯಂತೆ ದೇಶ ದೇಶಗಳಿಗೂ ಹರಡುತ್ತಿರುವ ಈ ವೈರಾಣು ಖಾಯಿಲೆ, ನಾವಿಂದು ಹಂಬಲಿಸಿ ಬಂದು ತಂಗಿದ    ಯುನೈಟೆಡ್ ಕಿಂಗ್ಡಮ್ ಅನ್ನು ಸುತ್ತಿಕೊಳ್ಳುತ್ತಿರುವಂತ  ಈ ಉಗ್ರಚಿತ್ರಣದಲ್ಲಿ, ಈ ವೈರಾಣುವೆಂಬ  ಖಳನಾಯಕ-ಚಿತ್ರಕಾರ, ಮಾಮೂಲಾಗಿ ನಡೆದುಕೊಂಡು ಹೋಗಬೇಕಾಗಿದ್ದ ದಿನನಿತ್ಯದ ಕಾರ್ಯಾಚರಣೆಗಳನ್ನೆಲ್ಲವನ್ನು ಅವನ ಕಪ್ಪುಬಣ್ಣ ಒಂದರಲ್ಲೇ ಗಾಬಳಿಸಿ ನುಂಗಿ, ಅವೆಲ್ಲ ಒಂದೊಂದಾಗಿ ಅಳಿಸಿ ಹೋಗುವಂತೆ ಮಾಡುತ್ತಿರುವ ತನ್ನ ಕಾರ್ಯಾಚರಣೆಯಲ್ಲಿ, ನಮ್ಮಂತ ಅನಿವಾಸಿಗರೆಲ್ಲ ಜಗತ್ತಿನಾದ್ಯಂತ, ಅಲ್ಲಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಹಬ್ಬಕ್ಕೇ ಕಪ್ಪು ಸುರಿದುಬಿಟ್ಟಿದ್ದಾನೆ. ಹೀಗಾಗಿ ಈ ೨೦೨೦ರ ವರ್ಷದಲ್ಲಿ ಯುಗಾದಿ ಸಂಭ್ರಮ ಇಲ್ಲವಾಯಿತು, ಸಡಗರ ಸುಮ್ಮನಾಯಿತು. ಈ ಮೌನದ ಗಳಿಗೆಯಲ್ಲಿ  ರಾಗ ಚಾರುಕೇಶಿ ಸಮಂಜಸವಾಗಿದ್ದರೂ, ಸುಮ್ಮನಾದ ಈ ಯುಗಾದಿಯ(ಸಮಯದ)ನೆನಪಿನಲ್ಲಿ ಅದರ ಸಾಂಕೇತಿಕವೋ ಎಂಬಂತೆ ಒಂದು ‘ಹೊಸರಾಗ’ ಕಲ್ಪಿಸಿಕೊಳ್ಳಲು ಪ್ರಯತ್ನಿಸಿದರೆ, ಅದನ್ನು ಈ ಸಮಯ ಪ್ರಳಯಕಾಲೀನ ಎಂದು ಇಲ್ಲಿಯವರೆಗೆ ಚಿತ್ರಿಸಿದ್ದಕ್ಕಾಗಿ, ಈ ನನ್ನ ಪ್ರಯತ್ನಅಪ್ರಸ್ತುತ  ಎಂದು ಜರಿದುಬಿಟ್ಟೀರೇನೋ  ಎಂಬ  ಭಯ, ಬರೆಯುವ ನನ್ನ ಈ ಲೇಖನಿಯನ್ನು ಕಾಡಿರುವುದು ಓದುಗರಿಗೆ  ಕಾಣಸಿಗದಿರಬಹುದು! ಹತ್ತಿರದ ಸ್ನೇಹಿತರೋ ಅಥವಾ ಸಂಬಂಧಿಯೊಬ್ಬರೋ ಅಕಸ್ಮಾತ್ ಅನಾರೋಗ್ಯರು ಎಂಬ ಸುದ್ದಿಯ ಭಯಾನಕ ಸ್ವಪ್ನ ನಿಜವಾದ ಕ್ಷಣಗಳು,  ನಮ್ಮನ್ನೆಲ್ಲ ಇಂದಿನ ದಿನಗಳಲ್ಲಿ ಬೆನ್ನತ್ತು ಕಾಡಿವೆ ಎಂದು ಬಹಿರಂಗದಲ್ಲಿ ಸೂಚಿಸದೆಯೇ, ನನ್ನ ಈ ಮೇಲಿನ ಹೊಸರಾಗದ  ಆಸೆ, ಅಕಾಲಿಕವಾದರೂ ಆಂತರಂಗಿಕ ಮತ್ತು ಆದರಣೀಯ ಎಂಬ ಯೋಚನೆ, ನಿಮ್ಮೆಲ್ಲ ಓದುಗರ  ಚಿತ್ರಣಕ್ಕೂ ಬಂದೀತೆ? ದಿಬ್ಬಣವಿಲ್ಲದ ಇಂತಹ ದಿನಗಳು ಕೇವಲ ದಾರಿದ್ರ್ಯದ , ದಾರುಣ ಕ್ಷಣಗಳೇ -ಮತ್ತೇನು ಎಂಬುದೂ, ಇನ್ನೊಂದು ಯೋಚನೆ. 

ಪ್ರತಿವರ್ಷ ಯುಗಾದಿಯ ಸಂದರ್ಭದಲ್ಲಿ ಹಲವಾರು ಸಡಗರವರ್ಣಿತ ಬರಹಗಳನ್ನು ಓದಿದಾಗಲೆಲ್ಲ, ಜಗತ್ತಿನ ಬೇರೊಂದು ಕಡೆ, ಹಲವಾರುಕಡೆ ನಡೆಯುತ್ತಿದ್ದ, ರೂಪಿತವಾಗುತ್ತಿದ್ದ ಅಮಾನುಷಿಕ ಕ್ರತ್ಯಗಳ ಬೆಂಕಿಯನ್ನು, ಅದರಿಂದ ಮುಸುಕಿದ ಹೊಗೆಯನ್ನು, ಈ ಸಡಗರವರ್ಣಿತ ಬರಹದೊಂದಿಗೆ ಜೊತೆ-ಜೊತೆಯಾಗಿ ಸೇವಿಸಲಾಗದೆ ಚಡಪಡಿಸಿದ್ದುಂಟು. ಆದರೂ ಅಂದಿನ, ಇಂದಿನ ಮತ್ತು ಮುಂದೆಂದಿನ ಸಡಗರದ ಆಚರಣೆ ಅಸಂಗತವೇನೂ ಅಲ್ಲವೇ ಅಲ್ಲ; ಆದರೆ ಮೇಲೆ ಸೂಚಿಸಿಕೊಟ್ಟ ‘ಕಾಡಿದ-ಕಾಣಸಿಗದ ‘ ವಿನಮ್ರಿತ ರೀತಿಯ ಭಾವನೆಗಳನ್ನೂ, ಸಡಗರದಂತರಂಗದಲ್ಲಿ ಅಳವಡಿಸಿಕೊಂಡಲ್ಲಿ ಸಡಗರದ ಚಿತ್ರಣ ಸಂಪೂರ್ಣವಲ್ಲವಾದರೂ, ಪೂರ್ಣವಾದೀತೇನೋ ಎಂಬ ಆಶಯ, ಈ ಮೌನ ಯುಗಾದಿಯ ಆಶಯವಾಗಿ ನನ್ನಲ್ಲಿ ಬೆಳಿದಿದೆ .   

ಹೀಗೆಲ್ಲ  ವಿಚಾರ ಮಾಡುತ್ತಾ ಹೋದಾಗ ಅನ್ನಿಸಿದ್ದು, ಕಂಡುಕೊಂಡಿದ್ದು  ಸ್ವಲ್ಪ ಮಟ್ಟಿಗಾದರೂ,ಈ ಯುಗಾದಿಯ ಸಾಂಕೇತಿಕ ಸಂದೇಶ, ಪ್ರಳಯವೇ ಆಗಬೇಕಾಗಿಲ್ಲವಾದರೂ, ಯೋಚಿಸಿದಾಗ ಪ್ರತಿಯುಗದ ಆದಿಯಲ್ಲಿ ಅದು ಆದಂತಿದೆ; ಪ್ರಳಯದ ಭಯಾನಕತೆಯ ಭಾವವನ್ನೂ ಮತ್ತೆ ಅದರ ನೋವನ್ನು ತಿರಸ್ಕರಿಸದೆ, ಬದಲಾಗಿ ಅಳವಡಿಸಿಕೊಂಡ, ಆದರಿಸಿದಂತೆಯೇ ಧರಿಸಿಕೊಂಡ  ನಮ್ಮ ಧರಿತ್ರಿ, ಹೊಸಯುಗವನ್ನು ಪ್ರತಿಬಾರಿ ವಿಶ್ವರೂಪ ಸೌಂದರ್ಯದಲ್ಲಿ ರೂಪಿಸಿಕೊಳ್ಳುತ್ತದೆಯಲ್ಲವೇ? ಪ್ರಳಯಗರ್ಭಿತ  ಯುಗ-ಯುಗಗಳಲ್ಲಿ ಕಾಣುವದು ಈ ಯುಗಾದಿಯ ಸಂಕೇತ, ನೋವು ಮುನ್ಸೂಚಿಸುವ ಸುಖ ಸಂದೇಶ ವಿಪರ್ಯಾಸವೇ ಅಲ್ಲ . ಹೀಗಾಗಿ, ಇಂದಿನ ಭಯವನ್ನು ಮತ್ತು ನೋವನ್ನು ತ್ಯಜಿಸದೆ, ಅದನ್ನು, ಇದು ಈಗ ನನಗೆ ಈ ರೂಪದಲ್ಲಿ ಯಾಕಾಯಿತು ಎಂದು ಆತ್ಮವಿಶ್ಲೇಷಣೆ ಮಾಡಿಕೊಂಡಂತೆ, ಈ ಮೌನ ಯುಗಾದಿಯ ಅಂತರಂಗದ ಸಂದೇಶ ಸಂಕೇತ, ನಮ್ಮ ಮಾನಸಿಕ ವಿಕಾಸನೆಯ ಮಾರ್ಗವಾದೀತೇ, ಒಪ್ಪವಿದೆಯೇ  ಅಕಾಲಿಕ ಪ್ರಶ್ನೆಗೆ? ಹೀಗೆ ಸಾಗಿವೆ ನನ್ನ ಮೌನಲೋಚನೆಗಳು. 

 ವಸಂತ ಚಿಗುರು

Image result for spring
ಅನಿತಾ ಹೆಗ್ಡೆ

ಯುಗಾದಿ ಮತ್ತೆ ಬಂತು ವಸಂತ ಋತುವಿನಲಿ
ಚಿಗುರೊಡೆಯಿತು ಮಾವು
ಸಾಕಿಷ್ಟು ಕೋಗಿಲೆಗೆ ಮಧುರಗಾನ
ಚಿಗುರೊಡೆಯಿತು ಬೇವು
ಬೆಲ್ಲದ ಹದ ಸಮ್ಮಿಳಿತ
ಸಾಕಿಷ್ಟು ಮಾನವಗೆ ಸಮತೋಲನ
ಎಲ್ಲೆಡೆ ವಸಂತ ಚಿಗುರು, ವಸಂತ ವಿಸ್ಮಯ!

ಹಿಮ ಕರಗಿ ಧುಮ್ ಎಂದಿತು
ಭೂಶಿರಕಾಯಿತು, ಸೂರ್ಯನ ಆಲಿಂಗನ ಚುಂಬನ
ಎಳೆ ಬಿಸಿಲು ಮಂಜಿನ ಮೇಲೆ, ಹೊಳೆಯುವ ಮುತ್ತಿನ ಹಾರ
ಎಲ್ಲೆಡೆ ಹೂವಿನ ಸಾಲು, ದುಂಬಿಗೂ ಹಬ್ಬದ ಕಾಲ!
ಕಂಪಿಸಿತು ಕೈಗಳು, ಜರಿ ಜರಿದು ಧರೆಗಿಳಿದ ಆ ಶಂಖ ಪುಷ್ಪ
ಇಬ್ಬನಿಯ ಮಸುಬಿನಲೂ ಸ್ಪಷ್ಟ ಆ ಮೋಹಕ ನೋಟ
ಹೇಳಲೇನಾದರೆಂಬ ಕಾತುರ, ಮೌನವೇ ಎಲ್ಲದಕೂ ಉತ್ತರ
ಬರಲಿ ಮಗದೊಮ್ಮೆ ಯುಗಾದಿ, ಮಗೆ ಮಗೆದು ಹಬ್ಬದ ಸಂಭ್ರಮ
ಮತ್ತೊಡೆಯಿತು ಚಿಗುರು, ಹೂವರಳಿ ಹೊಸತನ
ಎಲ್ಲೆಡೆ ವಸಂತ ಚಿಗುರು, ಸೃಷ್ಟಿಯ ವಿಸ್ಮಯ!

ರೇಶಿಮೆ ಸೀರೆ ಹಬ್ಬಕೆ, ಸವಿ ನೆನಪುಗಳ ಮಿಶ್ರಣ
ಶೃಂಗಾರದ ಸಂಭ್ರಮ, ಮುತ್ತಿನ ನತ್ತು
ಕತ್ತಿಗೆ ಮುತ್ತಿನ ಸರ, ಅದಕೊಪ್ಪುವ ಕಿವಿಯೋಲೆ
ಬಿಸಿ ಉಸಿರು ಸನಿಹದಲಿ, ನಾಚಿ ರಂಗಾದಳು ಆಸರೆಯಲಿ
ಇಟ್ಟು ದುಂಡನೆಯ ಕುಂಕುಮದ ಬೊಟ್ಟು, ಜಡೆಗೆ ಮಲ್ಲಿಗೆ ದಂಡೆ
ಪಿಸುರಿದ ಮೆಲ್ಲಗೆ ಸನಿಹದಲಿ, ಇದು ನನ್ನವಳಿಗೆ ಶೋಭೆ ಎಂದು
ಮತ್ತೊಡೆಯಿತು ಚಿಗುರು, ಹಬ್ಬದ ಸಂಭ್ರಮ
ಎಲ್ಲೆಡೆ ಹೊಸ ಚಿಗುರು, ವಸಂತ ತನ್ಮಯ!

ಚಿಗುರೊಡೆದು ಒಂದಿದ್ದು ನಾಲ್ಕಾಗಿ
ಬೆಳೆದು ಹಣ್ಣಾಗು, ಹೆಬ್ಬಾವಲ್ಲ
ಉದುರುವುದು ಅನೀವಾರ್ಯ, ಬೀಳುವುದಲ್ಲ
ಹುಟ್ಟು ಸಾವುಗಳ ಅಂತರದಲಿ, ದ್ವಂದ್ವ, ತಿಳಿ ನೀರ ಅರಿಯೇನೇ ಇರಲಿ
ಮತ್ತೊಡೆಯಿತು ಚಿಗುರು, ಜೀವನ ಉತ್ಸಾಹದ
ಎಲ್ಲೆಡೆ ವಸಂತ ಚಿಗುರು, ಇದುವೇ ಕಾಲಚಕ್ರದ ವಿಸ್ಮಯ!

ಬೆಳ್ಳಂ ಬೆಳಿಗ್ಗೆ ಮೂಡಲ ಮನೆಯ ರವಿ ಕಿರಣ
ತೊಯ್ದ ತೊಯ್ದ ಮನೆಯೆಲ್ಲಾ ಮನವೆಲ್ಲಾ
ದೇವರಿಗೆ ನಂದಾದೀಪ, ಗಂಧ ಚಂದನದ ಲೇಪ
ಲವಲವಿಕೆ ಗಾಜಿನ ಬಳೆಗಳಿಗೆ, ಗೆಜ್ಜೆ ಕಾಲ್ಗಳಿಗೆ ಹೊಸತನ
ಘಮ್ ಘಮ್ ಪಾಯಸ, ಹೋಳಿಗೆ ಹೂರಣ
ಕಹಿ ಮೊದಲು ಪಾನಕಕೆ ಹೊಸ ಬೆಲ್ಲ, ಹಳಸಲ್ಲ ಹೊಸತನ
ಮತ್ತೊಡೆಯಿತು ವಸಂತ ಚಿಗುರು, ಸಂತೋಷದ
ನವೋಲ್ಲಾಸದ, ಪಥದಿ ಸಾಗುವ ಜೀವನ ಪಯಣ!