ರಾಮನಾಮ ಪಾನಕ ,,

ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ. ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ..,” ಎಂದರು ಸಂತ ಪುರಂದರದಾಸರು . ಆದರೆ,  ನನ್ನನಂಥಹ ಮರುಳನ ಮನಸ್ಸು, ರಾಮನವಮಿ ಎಂದಾಗೆಲ್ಲ, ಶ್ರೀರಾಮ್, ಜೈರಾಮ್ ಅಂತ ಭಜಿಸುವ ಬದಲು  “ರಾಮನವಮಿಯ ಪಾನಕಕ್ಕೆ ”  ಎಂದು ಗುಣುಗುಣಿಸಲು ಶುರು ಹಚ್ಚಿಬಿಡುತ್ತದೆ. ಇದಕ್ಕೆ ನನ್ನ ಬಾಲ್ಯದ ನೆನಪು ಕಾರಣವೆನ್ನಬಹುದು.

ಉಗಾದಿ ಹಬ್ಬದ ಹಿಂದೆಯೇ ಬಂದುಬಿಡುವುದು  ರಾಮ ನವಮಿ. ವಿಷ್ಣುವಿನ  ಏಳನೇ ಅವತಾರ ರಾಮ ಎನ್ನುತ್ತಾರೆ . ರಾಮನ ಜನ್ಮದಿನವನ್ನು ರಾಮನವಮಿಯೆಂದು ಭಾರತದ ಎಲ್ಲೆಡೆಯಲ್ಲೂ ಆಚರಿಸಲಾಗುತ್ತದೆ. ವಸಂತ ಮಾಸದ ಆಗಮನದ ಜೊತೆ, ಜೊತೆಯಲ್ಲಿ ಆರಂಭ ಈ ಹಬ್ಬ. ಈ ಹಬ್ಬ ಹಿಂದೂ ಧರ್ಮದ ಪರಂಪರೆಯಾದರೂ, ನನ್ನ ಬಾಲ್ಯದ ದಿನಗಳಲ್ಲಿ, ನನ್ನ ಮುಸಲ್ಮಾನ, ಕಿರಿಸ್ತಾನ  ಸ್ನೇಹಿತರೂ ಆನಂದದಿಂದ ಇದರಲ್ಲಿ  ಭಾಗವಹಿಸುತ್ತಿದ್ದರು. ರಾಮನ ಜನ್ಮದಿನದ ಆಚರಣೆ  ಸಮುದಾಯದ ಹಬ್ಬವಾಗಿದ್ದು, ಅವರ ಪೋಷಕರಿಗಾಗಲಿ, ನಮ್ಮ ಪೋಷಕರಿಗಾಗಲಿ ಈ ಧರ್ಮ ದ್ವಂದದ  ಬಗ್ಗೆ ಯಾವ ಕಾಳಜಿಯೂ  ಇರದಿಲ್ಲದ  ಕಾಲವದು. ಸಮುದಾಯ ಹಬ್ಬಗಳು ಜಾತ್ಯತೀತ ಭಾರತದ ಉತ್ತಮ  ಉದಾಹರಣೆಯೆನ್ನಬಹುದು.

ಈ ಹಬ್ಬವನ್ನು ನಮ್ಮ ಮನೆಯಲ್ಲಿ ವೈಭವದಿಂದ ಆಚರಿಸದಿದ್ದರೂ, ಅಕ್ಕ ಪಕ್ಕದ ಮನೆಗಳಿಗೆ ನಾವು ತಪ್ಪದೇ ಆಗಾಗ ಭೇಟಿ ಕೊಡುತ್ತಿದುದ್ದರಿಂದ ಹಬ್ಬದ ಸಂಭ್ರಮಕ್ಕೇನು ಕೊರತೆಯಿರಲಿಲ್ಲ. ನಮ್ಮ ನೆರಮನೆಯ ಶೆಟ್ಟರ (ವೈಶ್ಯರ) ಮನೆಯಲ್ಲಿ ಏಗ್ಗಿಲ್ಲದೆ  ಕೊಟ್ಟಿದ್ದೆಲ್ಲ ತಿನ್ನುವುದು ನಿಯಮಿತ ಕಾರ್ಯವಾಗಿದ್ದುದರಿಂದ, ಹಬ್ಬದ ದಿನ,  ಊಟ ಉಪಚಾರ ಮಾಡಿಸಿಕೊಳ್ಳಲು ನಮಗೆ ನಾಚಿಕೆಯ ಪ್ರಶ್ನೆಯೇ ಇರಲಿಲ್ಲ. ನೆರೆಹೊರೆಯ ಸ್ನೇಹ, ಸಹಾಯ ಬಯಸದೇ ಇದ್ದರೂ ದೊರಕುತ್ತಿದ್ದ ಸಮಾಜ ನಮ್ಮದಾಗಿದ್ಧ ಕಾಲವದು ಅಥವಾ ಟೆಲಿವಿಷನ್ / ಇಂಟರ್ನೆಟ್ ಇರದಿದ್ದ ದಶಕಗಳವು.

ರಾಮನವಮಿಯ ದಿನ ಎಲ್ಲಕ್ಕಿಂತ ಮುಖ್ಯವಾದ  ನೆನಪೆಂದರೆ ಪಾನಕ ಮತ್ತುಕೋಸುಂಬರಿಯದು. ಬೆಲ್ಲದ ಪಾನಕ ಬಹಳ ಸಾಮಾನ್ಯ.  ಅದರಲ್ಲೂ ಕೆಲವರು ಕರಬೂಜ ಹಣ್ಣಿನ  ಮತ್ತು ಬೆಲ್ಲದ ಹಣ್ಣಿನ ಪಾನಕ ಮಾಡಿ ಹಂಚುತ್ತಿದ್ದರು. ಕರಬೂಜದ ಹಣ್ಣನ್ನ ಸಣ್ಣಗೆ ಹೆಚ್ಚಿ ಬೆಲ್ಲದ ನೀರಿನ ಜೊತೆ ಬೆರೆಸಿ  ಅಥವಾ  ಬೇಲದ ಹಣ್ಣಿನ ತಿರುಳನ್ನ ಕೆರೆದು, ತಿರುಳನ್ನು ಸೂಸಿ ತೆಗೆದು ಪಾನಕಕ್ಕೆ ಬೆರೆಸುತ್ತಿದ್ದರು.  ಬರಿಯ ಬೆಲ್ಲದ ಪಾನಕಕ್ಕಿಂತ ಈ ಹಣ್ಣಿನ ಪಾನಕಕ್ಕೆ ಹೆಚ್ಚಿನ ರುಚಿ. ಪಾನಕ ಕುಡಿಯಲು ಹೇಳಿ ಮಾಡಿಸಿದಂತ ಸುಡು ಬಿಸಿಲಿನ ದಿನಗಳವು. ಆಗಿನ್ನೇನು ಫ್ರಿಡ್ಜ್ ಅಥವಾ ಐಸ್ ಕ್ಯೂಬ್ಸ್ ಅದೆಲ್ಲ ಏನಿರಲಿಲ್ಲ.  ಕಪ್ಪು / ಕೆಂಪು ಮಡಿಕೆಯ ತಂಪಿನ ಸೊಗಡೂ (ವಾಸನೆ) ಸೇರಿ ಪಾನಕಕ್ಕೆ ರುಚಿಯೋ ರುಚಿ. ಈಗ ಬಿಸಿಲಿನ ದಿನಗಳಲ್ಲಿ ಅತಿ ಬೆಲೆ ತೆತ್ತು ಚೆಂದದ ಪ್ಯಾಕ್ ನಲ್ಲಿರುವ ಐಸ್ಕ್ರೀಂ ತಿಂದರೂ, ಆ ತೃಪ್ತಿ ಸಿಗುವುದಿಲ್ಲ. ಸಿಹಿ ಎಂದರೆ ಮೂಗುಮುರಿಯುವ ನನಗೂ ಸಹ  ಹಣ್ಣು ಹಾಕಿದ, ತಣ್ಣನೆ ಬೆಲ್ಲದ ಪಾನಕ ರುಚಿಸುತ್ತಿತ್ತು.  ಬಾಲ್ಯದ, ಸ್ನೇಹದ , ಉತ್ಸಾಹದ, ನೆನಪಿನ ಪದಾರ್ಥಗಳು ಪಾನಕದಲ್ಲಿ  ಬೆರೆತು, ಸವಿರುಚಿ ಎನಿಸಿರಬಹುದು. ಈಗ ಅದೇ ಪಾನಕ  ಯಾರಾದರೂ ಕೊಟ್ಟರೆ  “ಸ್ವಲ್ಪವೂ ಚೆನ್ನಾಗಿಲ್ಲ” ಎಂದು ನಾನೇ ಮುಖ ತಿರಿಗಿಸುವ ಸಾಧ್ಯತೆ ಇದೆ.  ವಯಸ್ಸಾದಂತೆಲ್ಲ ನನ್ನ ಆಯ್ಕೆಗಳ ನಿರ್ಬಂಧವೂ  ಹೆಚ್ಚಾದಂತೆ ಕಾಣುತ್ತದೆ.

ನೆರ ಮನೆಯ ಪಾನಕದ ಸೇವೆಯಾದ ನಂತರ, ಸ್ನೇಹಿತರ ಜೋಡಿ ಹತ್ತಿರದ ದೇವಸ್ಥಾನಕ್ಕೆ ಭೇಟಿ. ನಮ್ಮ ಮನೆಯ ಬಳಿಯಿದ್ದ ಆ ರಾಮನ ದೇವಸ್ಥಾನಕ್ಕೆ ದೊಡ್ಡ ಪ್ರಾಂಗಣವಿದ್ದು , ಅದರಲ್ಲಿ ದೊಡ್ಡ ಆಲದ ಮರವಿತ್ತು.  ಸಾಯಂಕಾಲ ಆಯಿತೆಂದರೆ, ಮರದ ತುಂಬಾ ಕೋತಿಗಳು. ಬೆಳೆಗ್ಗೆ ಎದ್ದು ಆಹಾರ ಹುಡುಕಲು ಹೋದ ಕೋತಿಗಳೆಲ್ಲ ಕತ್ತಲಾಗುವ ಮುನ್ನ ಮರ ಸೇರಿಬಿಡುತ್ತಿದ್ದವು.  ಶಾಲೆಗೆ ರಜೆ ಬಂತೆಂದರೆ ಆ ದೇವಸ್ಥಾನದಲ್ಲಿ ಬೆಳಗಿನಿಂದ ಸಂಜೆಯವರೆಗೂ, ನಾನು, ನನ್ನ ತಮ್ಮ ಆಟವಾಡಲು ಅ ಹೋಗುತ್ತಿದ್ದೆವು. ದೇವಾಲಯ ಮೂಲೆ, ಮೂಲೆಯೂ ನಮಗೆ ಪರಿಚಿತವಾದ ಜಾಗ. ಪಾನಕ, ಚೆರುಪು ಹಂಚುತ್ತಿದ್ದವರಿಗೆ ನಾವೊಂದು ಉಪದ್ರವ ಎನಿಸರಬಹುದು, ಆದರೆ ಆ ಜಾಗ ಮಕ್ಕಳಿಗೆ ಶಾಲೆಯ ಕೋಣೆಯಷ್ಟೇ ಪರಿಚಿತ. ಅದು ದೇವರ ನೆಲೆ, ಪವಿತ್ರ ಸ್ಥಳ ಎನ್ನುವ ಭಾವ ಬಂದ ನೆನಪು ನನಗಿಲ್ಲ. ಆ ರಾಮನ ದೇವಸ್ಥಾನ ನನ್ನ ಬಾಲ್ಯದ ನೆನಪುಗಳಲ್ಲಿ ಪ್ರತಿಷ್ಟಾಪಿಸಿ ಬಿಟ್ಟಿದೆ. 

ಪಾನಕದ ಜೊತೆಗೇ ನೆನಪಾಗುವುದು, ರಾಮನವಮಿ ಸಂಜೆಯ ಕಾರ್ಯಕ್ರಮವಾದ ಸಂಗೀತ ಕಚೇರಿಗಳು.  ವಾರಗಟ್ಟಲೆ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಕೆಲವೊಮ್ಮೆ ಹಿಂದೂಸ್ತಾನಿ ಸಂಗೀತದ ಕಚೇರಿಗಳು ನಡೆಯುತ್ತಿದ್ದವು. ಸಂಗೀತದಲ್ಲಿ ಆಸಕ್ತಿಯಿದ್ದವರಿಗೆ ಇದು ರಸದೌತಣ. ಮಕ್ಕಳಿಗೆ ಓದು ತಪ್ಪಿಸಿಕೊಳ್ಳಲು ಮತ್ತೊಂದು ನೆವ. ಕೆಲವು ಹಾಡುಗಳ ಮೊದಲಿನ ಸಾಲುಗಳು ಮತ್ತು ಕೆಲ ಹಾಡುಗಾರರ ಪರಿಚಿತ ಮುಖಗಳು ಇಷ್ಟೇ ಆಗ ನಮ್ಮ ಸಂಗೀತ ಪ್ರಪಂಚ. ಎಂಟು ಘಂಟೆಗೆ ಮನೆ ಸೇರಲೇ ಬೇಕು ಇಲ್ಲದಿದ್ದರೆ ಮುಂಗೋಪಿ ತಂದೆಯನ್ನ ಎದುರಿಸಬೇಕು ಎನ್ನುವ ಭಯದಿಂದ ಓಡಿ ಬಂದು ಮನೆಸೇರಿ ನೆಪಕ್ಕೆ ಪಠ್ಯ ಪುಸ್ತಕ ಹಿಡಿಯುವುದರೊಂದಿಗೆ  ನಮ್ಮ ರಾಮನವಮಿಯ ಆಚರಣೆ ಮುಗಿಯುತ್ತಿತ್ತು.

ಕರ್ನಾಟಕದ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಬೇರೆ, ಬೇರೆ ರೀತಿಯಲ್ಲಿ ಆಚರಿಸುತ್ತಿರಬಹುದು. ಆಂಧ್ರ ಪ್ರದೇಶದ ಗಡಿಯಲ್ಲಿ ವಾಸಿಸುತ್ತಿದ್ದಾಗಿನ ನನ್ನ ಬಾಲ್ಯದ ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಬಾಲ್ಯದ ಕೆಲ ನೆನಪುಗಳನ್ನು ಈ ಲೇಖನ ಕೆದಕಿರಬಹುದಲ್ಲವೆ?

ರಾಮನವಮಿಯ ಶುಭಾಶಯಗಳು.

ಡಾ . ದಾಕ್ಷಾಯಿನಿ ಗೌಡ 

ಇನ್ನು ಯಾಕ ಬರಲಿಲ್ಲವ್ವ…

-ಅಮಿತಾ ರವಿಕಿರಣ್ 
ಅನಿವಾಸಿಗಳಾದ ನಮಗೆ ನಮ್ಮ ಜನ್ಮಭೂಮಿ ಭೇಟಿ ಮಾಡುವ ಅವಕಾಶ ಒದಗಿ, ಒಂದಷ್ಟು ದಿನ ತಾಯಿನೆಲದ ಗಾಳಿ ಬೆಳಕಿನಲ್ಲಿ ನಾವು ತೋಯ್ದು ಬರುವ ಗಳಿಗೆಗಳು ಒದಗಿ ಬಂದಾಗ ವ್ಯಕ್ತಪಡಿಸಲಾಗದ ಒಂದು ಖುಷಿ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಅದಕ್ಕೆ ನಾನು ಕೂಡ  ಹೊರತಲ್ಲ. ನಾನು ಈ ಬಾರಿ ಭಾರತಕ್ಕೆ ಭೇಟಿ ಕೊಟ್ಟಿದ್ದು ನಾಲ್ಕು ವರ್ಷ ಒಂಬತ್ತು ತಿಂಗಳುಗಳ ಧೀರ್ಘ ಅಂತರದ ನಂತರ. ಯುಕೆ ಗೆ ಬಂದ ನಂತರ ನಾನು ಭಾರತಕ್ಕೆ ಹೋಗಿದ್ದು ಮೂರೇ ಬಾರಿ ಹೋದಾಗಲೆಲ್ಲ ಕೆಲವು ಜವಾಬ್ದಾರಿಗಳನ್ನು ಹೊತ್ತುಕೊಂಡೇ ಹೋಗಿದ್ದೆ, ತಂಗಿ ಮದುವೆ, ಮಗನ ಉಪನಯನ, ಪುಟ್ಟ ಮಗಳನ್ನು ಎತ್ತಿಕೊಂಡು ಹೀಗೆ ಏನಾದರೊಂದು ಕಾರಣಗಳಿಂದ ನನಗೆ ಬೇಕಾದೆಡೆ ಬೇಕಾದಂತೆ ನನ್ನ ರಜಾ ಕಾಲವನ್ನು ಕಳೆಯುವುದು ಸಾಧ್ಯವಾಗಿರಲಿಲ್ಲ. ಜೊತೆಗೆ ಅದು ಅಗತ್ಯ ಅಂತ ಕೂಡ ಅನಿಸಿರಲಿಲ್ಲ. ಹೋದಾಗಲೆಲ್ಲ ಅಮ್ಮನ ಕಯ್ಯಡಿಗೆ ತಿಂದು. ಅತ್ತೆಮನೆಗೆ ಹೋದಾಗ ಏಕಮೇವ ಸೊಸೆಯಾದ ಕಾರಣ ಅವರ ಇಚ್ಛೆ, ಬಯಕೆಗಳಂತೆ  ಸುತ್ತಮುತ್ತಲಿನ ದೇವಸ್ಥಾನ ಸುತ್ತಿ ,ಸಂಬಂಧಿಕರ ಮನೆಗೆ ಹೋಗಿ ಅವಕಾಶ ಆದರೆ  ಯಾವುದೋ ಒಂದೆರಡು ಪೂಜೆಯಲ್ಲಿ ಆರತಿ ಹಾಡು ಹೇಳಿದರೆ  ನನ್ನ ಭಾರತ ಪ್ರಯಾಣ ಮುಗಿದಿರುತ್ತಿತ್ತು. ಇದಕ್ಕಿಂತ ಭಿನ್ನವಾಗಿ ನಾನು ಕೂಡ ಎಂದೂ ಯೋಚಿಸಿಯೂ ಇರಲಿಲ್ಲ.
ಆದರೆ ಈ ಬಾರಿ ಭಾರತ ಭೇಟಿ ನನ್ನ ಪಾಲಿಗೆ ಅತೀ ವಿಶೇಷ, ಕೋವಿಡ್,lockdown ಅಂತೆಲ್ಲ ಎರಡುಬಾರಿ ನನ್ನ ವಿಮಾನ ರದ್ದಾಗಿತ್ತು,ಮಕ್ಕಳ ಶಾಲೆ ,ಪತಿಯ ಉದ್ಯೋಗ ,ಇದೆಲ್ಲ ನನ್ನ ಮನಸಿಗೆ ಬಂದಾಗ ಟ್ರಿಪ್ ಪ್ಲಾನ್ ಮಾಡಲು ಸಹಕಾರಿಯಾಗಿರಲಿಲ್ಲ. ಹೀಗಾಗಿ ನಾಲ್ಕು ವರ್ಷ ಒಂಬತ್ತು ತಿಂಗಳ ನಂತರ ನಾನು ತಾಯ್ನೆಲವನ್ನು ನೋಡಲಿದ್ದೆ , ತನ್ನ ಪರಿವಾರ ಕುಟುಂಬವನ್ನು ಭೇಟಿಯಾಗಲಿದ್ದೆ. ಗೋವಿನ ಹಾಡು ಪೂರ್ಣ ಪಾಠವನ್ನ ರೆಕಾರ್ಡ್ ಮಾಡಬೇಕೆನ್ನುವ ಪೂರ್ವ ನಿಯೋಜನೆ ಬಿಟ್ಟರೆ ನಾನು ಬೇರೆ ಯಾವುದೇ ಪ್ಲಾನ್ಗಳನ್ನು ಮಾಡದೆ ಸುಮ್ಮನೆ ಹೋಗಿದ್ದೆ. ಸಮಷ್ಟಿ ತನ್ನಷ್ಟಕ್ಕೆ ತಾನೇ ನನ್ನ ೫೦ ದಿನಗಳನ್ನು ಅತ್ಯಂತ ಸುಂದರವಾಗಿ  ಯೋಜಿಸಿ ಕೊಟ್ಟಿತ್ತು . ನಾನು ಖುಷಿಯನ್ನ ಆಸ್ವಾಧಿಸಲೋ ಸಮಷ್ಟಿಗೆ ಧನ್ಯವಾದ ಹೇಳಲೋ ತಿಳಿಯದಾಗಿತ್ತು . ಸಿಕ್ಕ ಗಳಿಗೆಗಳನ್ನು ನನ್ನ ಪುಟ್ಟ ಕ್ಯಾಮರಾದಲ್ಲಿ ಫ್ರೀಜ್ ಮಾಡಿ ಇಡುವುದೊಂದೇ ನನಗಿದ್ದ ಆಯ್ಕೆ ಎಷ್ಟೋ ಬಾರಿ ಅದು ಕೂಡ ಆಗಲಿಲ್ಲ. ಅನಿವಾಸಿ ಗುಂಪು ನನ್ನ ಮಟ್ಟಿಗೆ ನನ್ನ ಯುಕೆಯ ತವರುಮನಿ ಇದ್ದಂತೆ, ನನ್ನ ಪುಟ್ಟ ಪುಟ್ಟ ಪ್ರಯತ್ನಗಳನ್ನು ಶ್ಲಾಘಿಸಿ ಮತ್ತಷ್ಟು ಸಾಧನೆಗೆ, ಓದಿಗೆ ಹಚ್ಚುವ ನನ್ನ ಅತ್ಯಾಪ್ತ ಬಳಗ, ನಿಮ್ಮೆಲ್ಲರೊಂದಿಗೆ ನನ್ನ ಭಾರತ ಭೇಟಿಯ ಅತ್ಯಂತ ಖುಷಿಯ ಕೆಲ ತಾಸುಗಳ ಅನುಭವ ಹಂಚಿಕೊಳ್ಳುವ ಇಚ್ಛೆ ನನ್ನದು. 

ಊರಿಗೆ ಹೋದರೆ ಧಾರವಾಡಕ್ಕೆ ಹೋಗದಿದ್ದರೆ ನನ್ನ ಪ್ರವಾಸವೇ ಅಪೂರ್ಣ,ನನ್ನ ಊರಿಂದ ಧಾರವಾಡ ೭೦ಕಿಲೋಮೀಟರ ದೂರ, ಹೀಗೆ ಮನಸು ಬಂದಾಗಲೆಲ್ಲ ಹೋಗಿ ಬರಬಹುದು.ಮತ್ತು ಧಾರವಾಡ್ ಹೋಗಲು ಯಾವುದೇ ಕಾರಣ ನೆವಗಳು,ಬೇಡ ಇದೊಂದು ರೀತಿ ಮನಸು ಬಂದಾಗ ಗುಡಿಗೆ ಹೋಗುತ್ತೀವಲ್ಲ ಹಾಗೆ. ಆದರೆ ಈ ಸಲದ ಮೊದಲ ಧಾರವಾಡದ ಭೇಟಿ ಸಾಧ್ಯ ಆಗಿದ್ದು  ಪ್ರಜಾವಾಣಿಯ ೭೫ನೇ ವರ್ಷದ ಸಂಭ್ರಮಾಚರಣೆಯ ನಿಮಿತ್ತ ಏರ್ಪಡಿಸಿದ್ದ ಒಂದು ಚಂದದ ಕವಿಗೋಷ್ಠಿ, ಮತ್ತು ಸಂಗೀತ ವಿದ್ಯಾಲಯದ ಮಕ್ಕಳಿಂದ ವಿಶೇಷ ಗಾಯನ ಕಾರ್ಯಕ್ರಮ ಜೊತೆಗೆ ನನ್ನ ಗಾಯನ ಕಾರ್ಯಕ್ರಮವನ್ನೂ ಆಯೋಜಿಸಿದ್ದರಿಂದ. 

ಆನಂದಕಂದರು ಬರೆದ 'ನಲ್ವಾಡಗಳು' ಕವನ ಸಂಕಲನವನ್ನು ಕೆಲವರ್ಷಗಳಿಂದ ಹುಡುಕುತ್ತಿದ್ದೆ, ಎಲ್ಲಿ ಪ್ರಯತ್ನಿಸಿದರೂ ಸಿಗಲಿಲ್ಲ. ಫೇಸಬುಕ್ ನಿಂದ ಪರಿಚಿತರಾದ ರಾಜ್ ಕುಮಾರ್ ಮಡಿವಾಳರ್ ಅವರಿಗೆ ಬೆಲ್ಫಾಸ್ಟ್ ನಲ್ಲಿ ಇರುವಾಗಲೇ ಒಂದು ಮೆಸೇಜ್ ಮಾಡಿ ಕೇಳಿದ್ದೆ ನಿಮ್ಮಲ್ಲಿ ಅಪ್ಪಿತಪ್ಪಿ ನಲ್ವಾಡುಗಳು ಸಂಕಲನ ಇದ್ದರೇ ಅದರದೊಂದು copy ಸಿಗಬಹುದೇ ? ಎಂದು. ಬಂದಾಗ ಬರ್ರಿ ಐತಿ ಕೊಡ್ತೀನಿ ಅಂದ್ರು.
ಸಪ್ತಾಪುರದಲ್ಲಿ ಇರುವ ಅವರ ಅಂಗಡಿಗೆ ಹೋಗಿ ಪುಸ್ತಕ collect ಮಾಡಲು ಹೋದವಳು ಅವರು ಹೇಳುವ ಸಾಹಿತ್ಯ ಲೋಕದ ಚಂದದ ಕಥೆಗಳನ್ನ ಕೇಳುತ್ತ,ಹಾಡುಗಳ ಬಗ್ಗೆ ಮಾತಾಡುತ್ತ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಅವರಿಗೆ ಎಂದು ತಂದುಕೊಂಡಿದ್ದ ಬುತ್ತಿಯಲ್ಲಿ ನನಗೊಂದು ಪಾಲು ಕೊಟ್ಟು ಅವರ ಶ್ರೀಮತಿ ಸುಮಾ ಮತ್ತು ರಾಜ್ಕುಮಾರ್ ಅವರು ನನ್ನ ಜೀವ ಬಂಧುಗಳೇ ಆಗಿದ್ದರು. 
ಇನ್ನೇನು ಹೊರಡಬೇಕು ಅನ್ನುವಾಗ 'ಇಲ್ಲೇ ಹಳ್ಳಿಯೊಳಗ ಒಂದು ಕನ್ನಡ ಸಾಲಿ ಐತ್ರಿ ನಿಮಗ ಆಗತದ ಅಂದ್ರ ಒಂದೈದು ನಿಮಿಷ ಹೋಗಿ ಬರೋಣ,?' ಅಂದ್ರು ನನಗೆ ಇಲ್ಲ ಅನ್ನುವ ಮನಸು ಇಚ್ಛೆ ಎರಡು ಇರಲಿಲ್ಲ. ಅವರ ಕಾಕಾನ ಕಾರಿನಲ್ಲಿ ನಾನು ಹೊರಟಿದ್ದು ಧಾರವಾಡ ಹತ್ತಿರದ ಹಳ್ಳಿ ಮುಗಧ ಕ್ಕೆ. ಹೆಸರಿನಷ್ಟೇ ಚಂದ ಊರು ಅದು. 'ಬೇಂದ್ರೆಯವರು ಮೇಘದೂತ ಬರೆಯಲು ಶುರು ಮಾಡಿದ್ದು ಇದೆ ಊರಿನ ದೇವಿ ಗುಡಿಯ ಕಟ್ಟಿ ಮ್ಯಾಲೆ' ಅನ್ನುವ ಮಾತು ಕೇಳುತ್ತಲೇ ನನಗೆ ಮಾತೆ ಹೊರಡಲಿಲ್ಲ .ಒಂದುರೀತಿಯ ಖುಷಿಯ ಗುಂಗು. 
 
ಮುಗದದ  ಶಾಲೆಯ ಅತೀ ಉತ್ಸಾಹಿ ,ಸಾಹಿತ್ಯಪ್ರೇಮಿ ಶಿಕ್ಷಕರು ನನ್ನನು ೧೦ ನೇ ತರಗತಿಯ ಮಕ್ಕಳೊಂದಿಗೆ ಮಾತಾಡಲು ತರಗತಿಗೆ ಕರೆದುಕೊಂಡು ಹೋದರು, ಮಕ್ಕಳು ಬೇಂದ್ರೆಯವರ ಎರಡು ಗೀತೆಗಳನ್ನು ಚಂದದ ರಾಗದಲ್ಲಿ ಹಾಡಿದರು. ಹಕ್ಕ್ಕಿಹಾರುತಿದೆ ನೋಡಿದಿರಾ? ಎಂಬ ಗೀತೆ ಕೇಳಿದ್ದ ನನಗೆ, ಮಕ್ಕಳು ಆ ಗೀತೆಯ ಹಿಂದೆಯೇ  ಬೆಕ್ಕು ಹಾರುತಿದೆ ನೋಡಿದಿರಾ ಅಂತೇ ಅದೇ ರಾಗದಲ್ಲಿ ಹಾಡಿದಾಗ ಮತ್ತು ಈ ಗೀತೆಯು ಬೇಂದ್ರೆಯವರೇ ಬರೆದದ್ದು ಎಂದು ತಿಳಿದಾಗ ಅತೀವ ಆಶ್ಚರ್ಯವಾಯಿತು. ಮಕ್ಕಳಿಗೆ ನಾನೂ ಒಂದೆರಡು ಹಾಡು ಹೇಳಿಕೊಟ್ಟೆ. ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಉತ್ತರಿಸುವಾಗ , ಕೆಲವೇ ವರ್ಷಗಳ ಹಿಂದೆ ನಾನುಕೂಡ  ಈ  ಮಕ್ಕಳಂತೆ ಇಂಥದೇ ಶಾಲೆಯಲ್ಲಿ ಹೀಗೆ ಖುಷಿ ಖುಷಿಯಾಗಿ ಹಾಡು ಹೇಳುತ್ತಾ ಕುಳಿತಿದ್ದಿದು ನೆನಪಾಯಿತು. ಆ ಶಾಲೆಯಿಂದ ವಾಪಸ್ ಧಾರವಾದ ತಲುಪುವ ಹೊತ್ತಿಗೆ ಮನಸೆಲ್ಲ ಬೇಂದ್ರೆ , ಮೇಘದೂತ , ರಾಜಕುಮಾರ್ ಅಣ್ಣ ಹೇಳಿದ ಬೇಂದ್ರೆ ಅಜ್ಜನ ಕಥೆಗಳು. ಇಷ್ಟು ಹತ್ತಿರ ಬಂದು ಬೇಂದ್ರೆಅಜ್ಜನ ಮನೆಯ ಆವರಣಕ್ಕೆ ಒಮ್ಮೆ ಹೋಗಿ ಬರದಿದ್ದರೆ ಅಂತ ಅನ್ನಿಸಿದ್ದರೂ ಆದಿನ ಸಮಯ ಮೀರಿ ಹೋಗಿತ್ತಾದ್ದರಿಂದ ಸುಮ್ಮನೆ ಮನೆಗೆ ಮರಳಿದೆ. 

ಇನ್ನೇನು ಸೂಟಿ ಮುಗೀತು ಮತ್ತ ಗಂಟುಮೂಟಿ ಕಟಗೊಂಡು ವಾಪಸ್ ಕರ್ಮಭೂಮಿಗೆ ಹೊರಡ್ಲಿಕ್ಕೆ ಬರೀ ಐದ ದಿನ ಉಳದಾವು ಅನ್ನೋ ಹೊತ್ತಿನಲ್ಲಿ ಮತ್ತೊಮ್ಮೆ ಧಾರವಾಡ ಹೋಗುವ ಗಳಿಗೆ ಕೂಡಿ ಬಂತು., ದೂರದಿಂದ ಬಂದ ಸ್ನೇಹಿತರೊಬ್ಬರಿಗೆ ಬೇಂದ್ರೆಯವರ ಮನೆ ನೋಡಬೇಕಿತ್ತು, ಬೇಂದ್ರೆ ಭವನದಲ್ಲಿ ಇದ್ದ ಸಿಬ್ಬಂದಿಯನ್ನು ಮನೆಯ ಗೇಟಿನೊಳಕ್ಕೆ ಹೋಗಲು ಅನುಮತಿ ಕೇಳಿದೆವು, ಆರಂ ಆಗಿ ಹೋಗಿ ಬರ್ರಿ , ನೀವು ಒಳಗೂ ಹೋಗಬಹುದು. ಅಲ್ಲೇ ಬೇಂದ್ರೆಯವರು ಬಳಸಿದ ವಸ್ತುಗಳು ಅದಾವು ಅದನ್ನೂ ನೋಡಿ ಬರ್ರಿ, ಆಮೇಲೆ ಅವರ ಭಾವಚಿತ್ರಗಳ ಸಂಗ್ರಹ ನೋಡ್ಲಿಕ್ಕೆ ಇಲ್ಲಿ ಬರ್ರಿ ಎಂದರು. 

ನಾವು ಗೇಟಿನೊಳಗೆ ಕಾಲು ಇಟ್ಟಾಗ ಚಂದದ  ಬೆಳಗು ಹಳದಿ ಗೋಡೆಯ ಮನೆಯನ್ನು ಇನ್ನೂ ಚಂದ ಮಾಡಿತ್ತು, ಅವರ ಮೊಮ್ಮೊಗಳು ಮತ್ತವರ ಪತಿ ತುಂಬಾ ಆತ್ಮೀಯವಾಗಿ ಮಾತನಾಡಿದರು, ನಾನು ಮೆತ್ತಗೆ 'ನಾನು ಹುಟ್ಟಿದ್ದು ಬೇಂದ್ರೆಯವರ ಜನ್ಮದಿನದಂದು' ಅಂದೆ.  ಹಂಗಾದ್ರ ನೀವೂ ಬರೀತೀರಿ? ಅಂದ್ರು, ನಾನು `ಇಲ್ಲ ರೀ ಹಾಡ್ತೀನಿ` ಅಂದೇ, ಅದು ಹೆಂಗ ಸಾಧ್ಯ ? ಅವರ ಹುಟ್ಟಿದ ದಿನ ಹುಟ್ಟಿ ಬರೆಯಲ್ಲ ಅಂದ್ರ ? ಅಂದು ನಕ್ಕರು. ಫೋಟೋ ವಿಡಿಯೋಗ್ರಫಿ ಹುಚ್ಚು ಇರುವ, ಅದಕ್ಕಿಂತ ಹೆಚ್ಚು ಬೇಂದ್ರೆ ಅವರನ್ನು ಪ್ರೀತಿಸುವ ನನ್ನ ಸ್ನೇಹಿತರು `ನಾವು ಕೆಲ ಹಾಡುಗಳನ್ನ ರೆಕಾರ್ಡ್ ಮಾಡ್ಕೊಬಹುದಾ? ಎಂದು ಕೇಳಿದಾಗ ಬೇಂದ್ರೆ ಅಜ್ಜನ ಮೊಮ್ಮಗಳು ಅರ್ರೆ ,ಅದ್ಯಾಕ್ ಕೇಳ್ತೀರಿ ಮಾಡ್ಕೋರಿ ಅಂತ ಖುಷಿಯಿಂದ ಒಪ್ಪಿಕೊಂಡರು. 
ಹಾಡುವ ಯಾವುದೇ ತಯಾರಿ ಮಾಡಿಕೊಳ್ಳದ ನಾನು ಅವರು ಹಾಡು ಅಂದ ತಕ್ಷಣ ನೆನಪಿಗೆ ಬಂದಿದ್ದು - ಇನ್ನು ಯಾಕ ಬರಲಿಲ್ಲವ್ವ ... ಕವಿತೆಯ ಸಾಲುಗಳು. 
ವಾಹನಗಳ  ಸದ್ದಿನ ನಡುವೆ ನಾನು ಹಾಡಿದ್ದು ಅದೆಷ್ಟು ಸರಿಯಾಗಿದೆಯೋ ಗೊತ್ತಿಲ್ಲ ,ಆದರೆ ಕನ್ನಡದ ಇಬ್ಬರು ಮೇರು ಕವಿಗಳು ವಾಸಿಸಿದ, ಓಡಾಡಿದ ಸ್ಥಳದಲ್ಲಿ ನನಗೆ ಅವರ ಹಾಡುಗಳನ್ನು ಹಾಡುವ ಅವಕಾಶ, ಅದೃಷ್ಟ ಭಗವಂತ ಒದಗಿಸಿಕೊಟ್ಟಿದ್ದಕ್ಕೆ ನಾ ಅವನಿಗೆ ಋಣಿ. (ಇಲ್ಲಿಗೆ ಬರುವ ಮೊದಲು ಮೈಸೂರಲ್ಲಿ ಕುವೆಂಪು ಅವರ ಮನೆಯ ಆವರಣದಲ್ಲಿ ಕೂತು ಸಹ ಅವರ ಒಂದು ಕವನವನ್ನು ಹಾಡಿದ್ದೆ.)
ಡಾ ದ ರಾ ಬೇಂದ್ರೆ ಅವರ ಮನೆಯ ಆವರಣ ,ಸಾಧನಕೇರಿ ಧಾರವಾಡ