ಈಗ:
ನಮ್ಮ ೫೦ ನೆ ವರ್ಷದ wedding anniversary ಯನ್ನು ನಮ್ಮ ಇಬ್ಬರು ಮಕ್ಕಳು ಬಹಳ ಸಂಭ್ರಮದಿಂದ ಆಚರಿಸದರು. ಅಗಸ್ಟ್ ೧೫ ಭಾರತಕ್ಕೆ ಸ್ವತಂತ್ರ ಬಂದ ದಿನ ಇರಬಹುದು, ಆದರೆ ಆ ದಿನ ನನ್ನ ಸ್ವಾತಂತ್ರ ಕಳೆಯಿತು ಅಂತ ಕೆಲವರು ಪಿಸುಗುಟ್ಟಿದ್ದು ನನ್ನ ಕಿವಿಗೊ ಬಿತ್ತು ಅನ್ನಿ!!
ನಮಗೆ ಮಕ್ಕಳಿಂದ ಒಂದೇ ಒಂದು ಮೆಸೇಜ್ ಸುಮಾರು ೨ ತಿಂಗಳ ಹಿಂದೆ, ನೀವಿಬ್ಬರು ನಮ್ಮ ಜೊತೆ ೩ ದಿನ ಇರುತ್ತೀರ ಆದರೆ ಎಲ್ಲಿ ಏನು ಅಂತ ಕೇಳಬೇಡಿ ನಾವು ಎಲ್ಲ arrangements ಮಾಡುತ್ತೇವೆ. ಸರಿ, ಹಿಂದಿನ ದಿನ ನಮ್ಮ ಮಗ ಮತ್ತು ಸೊಸೆ ಇಬ್ಬರು ದುಬೈ ಇಂದ ಬಂದರು, ಮಾರನೆ ದಿನ ೧೦ ಗಂಟೆಗೆ ಟ್ಯಾಕ್ಸಿ ಬಂತು ಎಲ್ಲಿಗೆ ಹೋಗ್ತೀವಿ ಅಂತ ನಾವು ಕೇಳಲಿಲ್ಲ ಅವರು ಹೇಳಲಿಲ್ಲ. ಸ್ಟೇಷನ್ ನಲ್ಲಿ ತಿಳೀತು ಲಂಡನ್ ಅಂತ. ವಾಟರ್ಲೂನಲ್ಲಿ ನಮ್ಮ ಮಗಳು ಅಳಿಯ ಇಬ್ಬರು ನಮ್ಮನ್ನು ಸ್ವಾಗತಿಸದರು.
The Hoxton ನಲ್ಲಿ ನಮ್ಮ ೩ ದಿನದ ವಾಸ ಅಂತ ತಿಳೀತು. ನಾಬ್ಬರು ಸಸ್ಯಾಹಾರಿಗಳು, ಅದರಲ್ಲೂ ನನ್ನ ಪತ್ನಿ ಸೀತು ಸ್ವಲ್ಪ fussy ಅಂತ ಹೇಳಿದರೆ ಏನು ತಪ್ಪಿಲ್ಲ. ಸುಪ್ರಸಿದ್ದ ಲಂಡನ್ ಹೋಟೆಲ್ The Savoy ನಲ್ಲಿ ನಮ್ಮಊಟಕ್ಕೆ ( champagne lunch) ಏರ್ಪಾಡು ಆಗಿತ್ತು. ನಮ್ಮ ಮಗಳು ಹೋಟೆಲ್ ಗೆ ಫೋನ್ ಮಾಡಿದಾಗ menu ವಿಚಾರ ಬಂತು. “ನಮ್ಮ ತಂದೆ ಪರವಾಗಿಲ್ಲ ಎಲ್ಲ ತಿಂತಾರೆ ಆದರೆ ನಮ್ಮ ತಾಯಿಗೆ chips ಅಂದರೆ ಬಹಳ ಇಷ್ಟ, ಅದು ಮಾಡುತ್ತೀರ ?” ಪಾಪ Savoy ನವರಿಗೆ ಚೇತರಿಸಿಕೊಳ್ಳುವುದಕ್ಕೆ ಕೆಲವು ನಿಮಿಷಗಳು ಬೇಕಾಯಿತು ಅಂತ ಕಾಣತ್ತೆ , ಇದುವರೆಗೂ ಅವರನ್ನ ಯಾರೋ ಚಿಪ್ಸ್ ಕೇಳಿರಲ್ಲಿಲ್ಲ “let me talk to the chef ” ಅಂತ ಹೇಳಿ ಕೆಲವು ನಿಮಷದ ನಂತರ ಬಂದು “chef will be pleased to accommodate your special request” ಹೇಳಿದಳಂತೆ. ಯಾರೋ ಇಲ್ಲಿ ಚಿಪ್ಸ್ ಕೇಳಿರಲ್ಲಿಲ್ಲ ಅಂತ ಅವರೆಲ್ಲಾ ಮಾತನಾಡಿ ನಕ್ಕಿರಬೇಕು. ಆದರೆ ಒಂದು ಮಾತು ಹೇಳಬಲ್ಲೆ ಈ ಚಿಪ್ಸ್ ತಿಂದಮೇಲೆ, Savoy ನಲ್ಲಿ ಮಾಡುವ ಹಾಗೆ ಇನ್ನಾರು ಇಷ್ಟು ರುಚಿಯಾಗಿ ಮಾಡಲಾರು. ವಿಪರೀತ ಬೆಲೆ ಇರಬಹುದು ಆದರೆ ಅದರ ಮಜಾ ಇನ್ನೆಲ್ಲಿ ?
ಹೀಗೆ ಮೂರು ದಿನ ಲಂಡನ್ನಿನಲ್ಲಿ ಕಳೆದು ಎಲ್ಲ ಕಡೆ ಚೆನ್ನಾಗಿ ಸುತ್ತಿ Bend it like Beckham musical ನೋಡಿ ಆನಂದಿಸಿದೆವು. ಇಲ್ಲಿ ಬಹಳ ಹಳೇ ಕಾಲದ Pub ಗಳು ಇವೆ. ಇವುಗಳನ್ನು(ಕೆಲವು ಮಾತ್ರ!) ಭೇಟಿ ಮಾಡಿ. ಆಕ್ಸಫ಼ರ್ಡ್ ರಸ್ತೆ ಹತ್ತಿರ ಒಂದು ಸೊಗಸಾದ ರೋಟಿ ಚಾಯ್ ಅನ್ನುವ ಕೆಫೆ ಇದೆ. ಇಲ್ಲಿ ತಿಂಡಿ ಚೆನ್ನಾಗಿರುತ್ತೆ.
ಸರಿ, ಮನೇಗೆ ಬಂದಮೇಲೆ ನಮಗೆ ಒಳ್ಳೇ ಪ್ರೆಸೆಂಟ್ ಇತ್ತು. ನಮ್ಮ ಅಳಿಯ, ಟೋನಿ , ಈಗ ಸುಮಾರು ೬ ತಿಂಗಳಿಂದ pottery ಕಲಿತ ಇದ್ದಾನೆ. ಅಲ್ಲಿ ಒಂದು ಗಣೇಶನ ಮೂರ್ತಿ ಅದಕ್ಕೆ ತಾನೆ ಫ್ರೇಮ್ ಹಾಕಿದ್ದಾನೆ. ಒಟ್ಟಿನಲ್ಲಿ ಈ ಕೆಲವು ದಿನಗಳು ಬಹಳ ಚೆನ್ನಾಗಿತ್ತು
ಸರಿ, ಇದು ಈಗಿನ ಕಥೆ.
೫೦ ವರ್ಷದ ಹಿಂದೆ ಏನಾಯ್ತು ಅಂತ ಕೇಳಿ (ಇಷ್ಟ ಇದ್ದರೆ).
ಆಗ:
ನೀವು ಈಚೆಗೆ, ಅಂದರೆ ಸುಮಾರು ಹದಿನೈದು ವರ್ಷಗಳ ಹಿಂದೆ ಬಂದಿದ್ದರೆ, ತುಂಬಾ ಪುಣ್ಯವಂತರು. ಏಕೆ ಅಂದರೆ, ನೀವು ಬರೋ ಹೊತ್ತಿಗೆ ಎಲ್ಲ ಪ್ರಾಬ್ಲಮ್ ಗಳೂ ಮುಕ್ಕಾಲು ಭಾಗ ಸಾಲ್ವ್ ಆಗಿತ್ತು.
ಉದಾಹರಣೆಗೆ,
• Race Relations Act ಜಾರಿಗೆ ಬಂದು ಅನೇಕ ವರ್ಷಗಳಾಗಿತ್ತು, ಅದ್ದರಿಂದ ಕೆಲಸದಲ್ಲಿ ತೊಂದರೆ ಕಡಿಮೆ
• ಮನೆಗಳು ಬಾಡಿಗೆ ಅಥವಾ ಕ್ರಯಕ್ಕೆ ಸಿಗತ್ತೆ
• ನಿಮ್ಮ ಮಕ್ಕಳ ಶಾಲೆಯಲ್ಲಿ ದೀಪಾವಳಿ ಆಚರಿಸುತ್ತಾರೆ
• ನಿಮ್ಮ ಮಕ್ಕಳಿಗೆ ಸಂಗೀತ ಅಥವಾ ನೃತ್ಯ ಪಾಠಕ್ಕೆ ಏನೂ ತೊಂದರೆ ಇಲ್ಲ
• ನಿಮ್ಮ ಮನೇಗೆ ಬೇಕಾದ ಸಾಮಾನುಗಳು -ಅಕ್ಕಿ, ಬೇಳೆ ತರಕಾರಿ ಎಲ್ಲ ಕಡೇ ಧಾರಾಳವಾಗಿ ಸಿಗುತ್ತೆ
• Do you speak English? ಅಂತ ಯಾರು ಕೇಳಲ್ಲ,
• ನಾನು ಸಸ್ಯಾಹಾರಿ ಅಂದರೆ ಯಾರಿಗೋ ಶಾಕ್ ಆಗೋಲ್ಲ,
• ಬೇಕಾದಷ್ಟು ದೇವಸ್ಥಾನಗಳು ಇದೆ
ಈ ದೇಶದ ಪ್ರಧಾನ ಮಂತ್ರಿ ಆಗಿದ್ದ Sir Herald McMillan ೧೯೬೦ರಲ್ಲಿ ಇಲ್ಲಿ ಜನಗಳಿಗೆ ಹೇಳಿದಂತೆ “You never had it so good” ಇದು ನಿಮಗೆ ಅನ್ವಯಿಸುತ್ತೆ ಈಗ.
ಮಹಾಯುದ್ದ ಮುಗಿದು ಕೇವಲ ಇಪ್ಪತ್ತು ವರ್ಷ ಆಗಿತ್ತು ನಾನು ಬಂದಾಗ. ಲಂಡನ್ ಕೆಲವು ಭಾಗದಲ್ಲಿ ಇನ್ನು ಮನೆಗಳು ಪಾಳು ಬಿದ್ದದನ್ನು ನೋಡಿದ್ದೇನೆ. ನಮ್ಮ ಮೊದಲನೇ ಮನೆ, ಅಂದರೆ ಫ್ಲಾಟ್ ಇಲ್ಫ಼ರ್ಡ್ ನಲ್ಲಿ ಗ್ಯಾಂಟ್ಸ್ ಹಿಲ್ ಹತ್ತಿರ. ವಾರಕ್ಕೆ ೭ ಪೌಂಡ್ ಬಾಡಿಗೆ. ಅಂದ ಹಾಗೆ, Estate agent ನಿಮ್ಮ ಬಣ್ಣ ನೋಡಿ ಅಥವಾ ಐರಿಶ್ ಜನಗಳಿಗೆ ಮನೆ ಇಲ್ಲ ಅಂತ ಸುಳ್ಳು ಹೇಳಿದ್ರೆ ಏನು ಆಶ್ಚರ್ಯ ಇರಲಿಲ್ಲ, (not illegal). ಕೆಲವು ಕೆಲಸಗಳನ್ನ ಬಿಳಿ ಜನಗಳಿಗೆ ಮಾತ್ರ ಇತ್ತು. ಬ್ಯಾಂಕ್ ನಲ್ಲಿ ಮತ್ತು ಸಿಟಿಯಲ್ಲಿ, ಈಗ ನೋಡಿ, ನಮ್ಮಂಥವರು ಇಲ್ಲದೇ ಇರುವ ಜಾಗವೇ ಇಲ್ಲ.
ಏನು ಹೇಳಬಲ್ಲೆ ಅಂದರೆ, ಈಗಿನ ಇಂಗ್ಲೆಂಡ್ ೧೯೬೫ ಇಂಗ್ಲೆಂಡ್ ಬೇರೆ ಬೇರೆ ದೇಶಗಳು, ಅಷ್ಟೊಂದು ಬದಲಾವಣೆ ಆಗಿದೆ.
೧೯೬೫/೬೬ ರ ಸಂಸಾರದ ಬಗ್ಗೆ ಕೆಲವು ಮಾತನ್ನು ಹೇಳಬಹುದು. ನೋಡಿ ಅಗ ನನಗೆ ಸುಮಾರು ವರ್ಷಕ್ಕೆ £೧೪೦೦(ತಿಂಗಳಿಗಲ್ಲ!) Average National earnings ಆವಾಗ ಇದ್ದಕ್ಕಿಂತ ಕಡಿಮೆ ಇತ್ತು. ನಮ್ಮ ಸ್ನೇಹಿತರು ಇಬ್ಬರು ವೈದ್ಯರು ಆವಾಗ ತಾನೆ ಇಲ್ಲಿಗೆ ಬಂದಿದ್ದರು. ಪಾಪ ಅವರು ವಾರಕ್ಕೆ ೯೦ ಗಂಟೆ ಕೆಲಸ ಮಾಡಿ ಕೇವಲ £೧೦೦೦ ಸಂಬಳ !! ಆದರೆ ವಾರಕ್ಕೆ £೫ ನಮ್ಮ ದಿನಸಿಗೆ ಸಾಕಾಗಿತ್ತು. ಆವಾಗ decimal currency ಬಂದಿರಲ್ಲಿಲ್ಲ, ಹಳೆ ದುಡ್ಡು ೧೨ ಪೆನ್ಸ್ ಒಂದು ಶಿಲ್ಲಿಂಗ್, ೨೦ ಶಿಲ್ಲಿಂಗ್ ಒಂದು ಪೌಂಡ್. ಲಂಡನ್ ಟ್ಯೂಬ್ ನಲ್ಲಿ ೪ ಪೆನ್ನಿಗೆ ಎಲ್ಲಿ ಬೇಕಾದರು ಸುತ್ತಬಹುದಾಗಿತ್ತು
೧೯೭೦ ರ ಹಿಂದೆ ಹುಟ್ಟಿದ್ರೆ ಭಾರತದಲ್ಲಿ Afghan Snow ಅಂತ ಕ್ರೀಂ ನಿಮಗೆ ಗೊತ್ತಿರಬೇಕು. ಇದು ಹೆಂಗಸರ
( ಕೆಲವು ಗಂಡಸರು ಸಹ ) ಬ್ಯೂಟಿ ಏಡ್. ಅಂಗಡಿಲಿ ಸ್ನೋ ಅಂತಿದ್ದರು ೧೯೬೬ ಜೂನ್ ನಲ್ಲಿ ನನ್ನ ಪತ್ನಿ ಸೀತು ಇಲ್ಲಿಗೆ ಬಂದಳು. ಅವಳನ್ನು ಇಂಪ್ರೆಸ್ ಮಾಡುವುದಕ್ಕೆ ನಾನು ಎರಡು ದಿನದ ಹಿಂದೆ Timothy Whites (ಈಗ Boots) ಹೋಗಿ ಸ್ನೋ ಕೇಳಿದೆ. ಪಾಪ ಆಕೆ ಈ ಹುಡುಗನಿಗೆ (ಹುಡುಗನೆ, ನನಗೇನು ಅಷ್ಟೇನು ವಯಸ್ಸು ಆಗಿರಲ್ಲಿಲ್ಲ!) ಏನೂ ಗೊತ್ತಿಲ್ಲ ಅಂತ ತಿಳಿದು, “I am sorry, you can’t buy snow, to see snow you must wait until winter” ಅಂದಳು. ನಾನು ಬಿಡಲಿಲ್ಲ, ಇಲ್ಲ ನೋಡಿ ಇದು ಸಣ್ಣ ಬಾಟಲ್ನಲ್ಲಿ ಬರತ್ತೆ, ಹೆಂಗಸರು ಇದನ್ನು ಮುಖಕ್ಕೆ ಹಚ್ಚುತ್ತಾರೆ ಅಂದೆ. ಅನಂತರ ಅವಳಿಗೆ ಗೊತ್ತಾಯಿತು “Foundation Cream” ಬೇಕು ಅಂತ. ಇದೆ ರೀತಿ ಅನೇಕ ಪ್ರಸಂಗಗಳು ಆಗಿದೆ. ಅಂಗಡಿಲಿ Match box ಕೇಳಿದರೆ ಅವನಿಗೆ ಅರ್ಥ ಆಗಲ್ಲಿಲ್ಲ, ಇದು Box of Matches, ಬೆಂಕಿಪೊಟ್ಟಣ.
ಆ ಸಮಯದಲ್ಲಿ ರಾಜಕೀಯ ಪರಿಸ್ಥಿತಿ ನಮಗೆ ಅಷ್ಟೇನು ಸರಿ ಇರಲಿಲ್ಲ, ಕೆಲವು racist ಪಂಗಡಗಳು ಇದ್ದವು (National Front), ಲಂಡನ್ ನಗರದ ಕೆಲವು ಕಡೆ ಬಹಳ ಹಾವಳಿ ಇತ್ತು. ಈಗ East ಲಂಡನ್ ಬಹಳ “upmarket” ಆಗ ಆ ಕಡೆ ಹೋಗುವುದಕ್ಕೆ ಹೆದರಿಕೆ ಆಗ್ತಾ ಇದ್ದ ಕಾಲ.
೧೯೬೮ ನಲ್ಲಿ Enoch Powell ಅನ್ನುವ ಬಹಳ ಪ್ರಸಿದ್ಧ Conservative MP “Rivers of Blood” ಅನ್ನುವ ಭಾಷಣ ಬಹಳ ಜನಕ್ಕೆ, ರಾಜಕಾರಣಿಗಳಿಗೂ ತುಂಬಾ ತಲೆನೋವು ತಂದಿತ್ತು. ಆತನ ಪ್ರಕಾರ, ಸರ್ಕಾರ immigration ನಿಲ್ಲಿಸದೆ ಹೋದರೆ ಈ ದೇಶದಲ್ಲಿ ಬೇರೆ ಪಂಗಡದಲ್ಲಿ ಹೋರಾಟ ಆಗುತ್ತೆ ಮತ್ತು ರಕ್ತಪಾತವಾಗುತ್ತೆ . ಈತ ಬಹಳ ದೊಡ್ಡ ವಿದ್ವಾಂಸ, ೨೬ ನೆಯ ವಯಸ್ಸಿಗೆ ಗ್ರೀಕ್ ಮತ್ತು ಲ್ಯಾಟಿನ್ ಪ್ರೊಫೆಸರ್, ಯುದ್ದದ ಸಮಯದಲ್ಲಿ ೨೯ ನೆ ವರ್ಷಕ್ಕೆ ಬ್ರಿಗೇಡಿಯರ್, ಇಂತಹ ಪ್ರಚಂಡ ಬುದ್ದಿವಂತ. ಆದರೆ ಇವರ ಭಾಷಣ ಪ್ರಧಾನ ಮಂತ್ರಿ ಟೆಡ್ ಹೀತ್ ಅವರಿಗೆ ಹಿಡಸಲಿಲ್ಲ. Enoch Powell ಅವರನ್ನು ಮಂತ್ರಿ ಕೆಲಸದಿಂದ ತೆಗೆದು ಹಾಕಿದ್ದರು. ಸುಧಾರಣೆಗಳು ಇಲ್ಲಿಂದ ಶುರು ಆಯಿತು ಅಂದರೆ ತಪ್ಪಿಲ್ಲ. ಕೆಲವು ವರ್ಷದಲ್ಲಿ Race Relations Act ಜಾರಿಗೆ ಬಂತು ಬಹಳ ರಿಫ಼ಾರ್ಮ್ಸ್ ಆಯಿತು.
೧೯೭೦ ರಿಂದ ಇನ್ನೂ ನಮ್ಮ ಕನ್ನಡದವರು ಬರುವುದಕ್ಕೆ ಶುರು ಆಯಿತು. ೯೦% ವೈದ್ಯರು. ೧೯೮೩ ರಲ್ಲಿ ಕನ್ನಡ ಬಳಗ ಶುರು ಆಯಿತು, ಅವಾಗ ಕೆಲವರ ಪರಿಚಯ. ಆದರೆ ೧೯೮೮ ರಲ್ಲಿ ಡಾ. ಭಾನುಮತಿ ಅವರ ನೇತೃತ್ವದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸಮಯದಲ್ಲಿ ಇಲ್ಲಿನ ಕನ್ನಡಿಗರು ಒಂದು ಮನೆತನದವರಾದರು ಎಂದರೆ ತಪ್ಪಲಾಗದು ಈ ೪೦/೫೦ ವರ್ಷದಲ್ಲಿ ಇಲ್ಲಿಯ ಜನಗಳ “perception” ತುಂಬಾ ಬದಲಾಯಿಸಿದೆ. ೧೦೦ ವರ್ಷದ ಹಿಂದೆ ಈ ದೇಶ ಪ್ರಪಂಚದ ಮುಕ್ಕಾಲು ಭಾಗವನ್ನು ಆಳಿದ್ದರೂ ಶೇಕಡಾ ೯೦ ಜನರಿಗೆ ಇದರಿಂದ ಏನು ಸುಖ ಇರಲ್ಲಿಲ್ಲ. ಇಲ್ಲಿ working class ಜನಗಳು ಬಹಳ ಕಷ್ಟ ಪಟ್ಟಿದ್ದಾರೆ. ಈಗ Equality and Dignity of labour ಈ ದೇಶದಲ್ಲಿ ಇರುವ ಹಾಗೆ ಅನೇಕ ಕಡೆ ಇಲ್ಲ. ಒಂದು ಹೆಮ್ಮೆಯ ವಿಚಾರ, ಭಾರತದಿಂದ ಬಂದು ಇಲ್ಲಿ ನೆಲಸಿದವರು ಬಹಳ ಒಳ್ಳೆ ಹೆಸರು ತಂದಿದ್ದಾರೆ. ನೋಡಿ, ನಮ್ಮ ಮಕ್ಕಳು ಶಾಲೆಯಲ್ಲಿ ಎಷ್ಟು ಮುಂದೆ ಇದ್ದಾರೆ, ನಮ್ಮವರು ಬಹಳ ಜನ ಉನ್ನತ ಸ್ಥಾನದಲ್ಲಿ ಕೆಲಸ ಮಾಡಿ ಹೆಸರು ಗಳಿಸಿದ್ದಾರೆ.
