ಹಿನ್ನೆಲೆ – ಕನ್ನಡ ಕಿರು ತೆರೆಯ ಕಾಮಿಡಿ ಶೋ ‘ಮಜಾ ಟಾಕೀಸ್’ ನ ಹೀರೋ/ಸ್ಟಾರ್ ಸೃಜನ್ ಲೋಕೇಶ್ ಅವರು ಕನ್ನಡ ಬಳಗ ಯು.ಕೆ.ಯ ಆಹ್ವಾನದ ಮೇರೆಗೆ ಇಂಗ್ಲೆಂಡಿಗೆ ಬಂದಿದ್ದಾರೆ. ಕನ್ನಡ ಬಳಗ ಏರ್ಪಡಿಸಿದ್ದ ದೀಪಾವಳಿ ಸಂಭ್ರಮದಲ್ಲಿ ಅವರು ವೇದಿಕೆಯ ಮೇಲೆ ಬಂದು, ಇನ್ನೊಬ್ಬ ಪಾತ್ರಧಾರಿಯೊಂದಿಗೆ ಜೊತೆಗೂಡಿನಟಿಸಿಈ ಕಿರು ನಾಟಕವನ್ನು ಪ್ರದರ್ಶಿಸಲು ಒಪ್ಪಿರುತ್ತಾರೆ. ಆ ಪಾತ್ರಧಾರಿ ಕನ್ನಡ ಬಳಗದ ಸದಸ್ಯ.
ಸೃಜನ್: ಅಲ್ಲ ನೋಡಿ, ನಾನು ಮೂರ್ ದಿವಸದಿಂದ ಇಂಗ್ಲೆಂಡ್ನಲ್ಲಿ ಇದ್ದೀನಿ. ಒಂದು ದಿವಸಾನೂ ಕೋಳಿ ಕೂಗಿದ್ದು ಕೇಳಿಸಲಿಲ್ಲ!
ಪಾತ್ರಧಾರಿ: ಸೃಜನ್, ಅದು ಹೇಗೆ ಸಾಧ್ಯ? ಇಲ್ಲಿ ಜನ ಇರೋ ಕೋಳಿಗಳನ್ನ ಹಿಡ್ಕಂಡು ತಿಂದ್ರೆ, ಕೂಗಕ್ಕೆ ಕೋಳಿ ಇದ್ರೆ ತಾನೇ!
ಒಂದು ವೇಳೆ ಕೆಲವು ಕೋಳಿ ಇನ್ನೂ ಉಳಿದಿದ್ರೆ ಅವು ಚಳಿಗೆ ಬೆಚ್ಚಗೆ ಮಲ್ಗಿರ್ತಾವೆ!
ಇನ್ನೂ ಕೆಲವು ಚುರುಕಾದ ಮರಿ ಕೂಗಿದರೂ ನಿಮ್ಗೆ ಕೇಳಿಸಿಲ್ಲ ಅಂತ ಅನಿಸುತ್ತೆ?
ಸೃಜನ್: ಹೇಯ್, ನಾನೇನು ಕೆಪ್ಪ ಅಲ್ಲ, ದೊಡ್ಡ ದೊಡ್ಡ ಶೋ ನಡುಸ್ಕೊಡ್ತೀನಿ?!
ಪಾತ್ರಧಾರಿ: ಸೃಜನ್ ನಾನು ನಿಮ್ಮನ್ನ ಕೆಪ್ಪ ಅಂದಿಲ್ಲ ರೀ, ನೋಡಿ, ನೀವು ಅಲ್ಲಿಂದ ಬಂದಿದ್ದೀರಿ, ಸ್ವಲ್ಪ ಜೆಟ್ ಲ್ಯಾಗ್ ಇರಬಹದು ಅಷ್ಟೆ … ಹಾಗೆ… ಇಲ್ಲಿ ಮನೆಗಳ ಕಿಟಕಿಗೆ ಡಬಲ್ ಗ್ಲೇಝಿನ್ಗ್ ಹೊಡೆದಿದ್ದಾರೆ. ಹೊರಗೇನಾಗ್ತಿದ್ರು ಒಳಗೆ ಕೇಳಿಸೋಲ್ಲ, ಒಳಗೆ ಕಳ್ಳ ಬಂದು ನಾವು ಬೊಬ್ಬೆ ಹೊಡಕೊಂಡ್ರು ಹೊರಗೆ ಯಾರಿಗೂ ಕೇಳಿಸೋಲ್ಲ!!
ಸೃಜನ್: ಇದ್ಯಂಥ ಲೈಫ್ ರೀ ನಿಮ್ಮದು!! ಬೆಳ್ಳಿ ಮೂಡಿತೋ ಅಂತ ಹಾಡ್ತಾ ಇದ್ದೀರಾ? ಮೂರ್ ದಿವಸದಲ್ಲಿ ನಾನು ಬೆಳ್ಳಿ ಮೂಡಿದ್ದನ್ನು ನೋಡಲೇ ಇಲ್ಲವಲ್ಲ!
ಪಾತ್ರಧಾರಿ: ಸೃಜನ್, ಇದು ಇಂಗ್ಲೆಂಡ್ ರೀ …‘ಸೂರ್ಯ ಮುಳುಗದ ಸಾಮ್ರಾಜ್ಯ’ ಇಲ್ಲಿ ಸೂರ್ಯ ಮುಳುಗಿದರೆ ತಾನೇ ಹುಟ್ಟುಕ್ಕೆ!
ಸೃಜನ್: ಅದೆಲ್ಲ ಹಳೆ ಕಂತೆ ಬಿಟ್ಟಹಾಕ್ರಿ. ನಿಮ್ಮ ಇಂಗ್ಲಂಡ್ Brexit ಆದ್ಮೇಲೆ ಅದ್ಯಾವ ‘ಸೂರ್ಯ ಮುಳುಗದ ಸಾಮ್ರಾಜ್ಯ’ ಅಂತ ಎಲ್ಲರಿಗು ಗೊತ್ತು ಬಿಡ್ರಿ ! ಇಮಿಗ್ರೇಷನ್ ಇಮಿಗ್ರೇಷನ್ ಅಂತ ಎಲ್ಲ ಬಾಗಿಲು ಮುಚ್ಚಿ ಕುತ್ಕೊಂಡ್ರೆ ದೇಶ ಉದ್ದಾರ ಆಗುತ್ತಾ ಹೇಳಿ? ಅದೇನೋ ಗಾದೆ ಇದೆಯಲ್ಲ … ‘ಮಾಡಿದ್ದು ಉಣ್ಣೋ ಮಹರಾಯ’ ಅಂತ…
ಇಂಥ lousy weather ಇದ್ದರೆ ಸೂರ್ಯ ಎಲ್ಲಿ ಕಾಣಿಸ್ತಾನೆ ಹೇಳಿ. ಅಂದ ಹಾಗೆ ಇಲ್ಲಿ ಜನ ಮೂರೂ ಮೂರೂ ದಿವಸಕ್ಕು ಅದೇನೋ Holiday ಅಂತ ಬಿಸಿಲಿರೋ ಜಾಗಕ್ಕೆ ಓಡಿಹೋಗಿ ಬಟ್ಟೆ ಬಿಚ್ಕೊಂಡು ಪಾಪ ಬಿಸಿಲು ಕಾಯಿಸ್ತಾರೆ ಅಂತ ಕೇಳಿದ್ದೆ. ಅಂದ ಹಾಗೆ ನಮ್ಮ ಗೋವ ಬೀಚ್ಗೆ ವಿಮಾನದ ತುಂಬಾ ಬಿಳಿ ಜನ ಸೂರ್ಯನ್ನ ಕಾಣಕ್ಕೆ ಬರ್ತಾರೆ!!
ಇದ್ಯಂಥ ಲೈಫ್ ರೀ ನಿಮ್ದು!
ಪಾತ್ರಧಾರಿ: ಸೃಜನ್, ಸರಿ ನಾನು ಹೊರ್ಡ್ತೀನಿ, Thank you very much.
ಸೃಜನ್: ಅಲ್ಲಾರಿ, ನಿಮ್ಮ ಇಂಗ್ಲಂಡ್ ನಲ್ಲಿ ಜನ ಯಾಕೆ ಎಲ್ಲದುಕ್ಕೂ ಥ್ಯಾಂಕ್ಸ್ ಹೇಳ್ತಾರೆ? ಕೂತರೆ ಥ್ಯಾಂಕ್ಸ್, ನಿಂತರೆ ಥ್ಯಾಂಕ್ಸ್, ಕೆಮ್ಮಿದರೆ sorry, ತೇಗಿದರೆ pardon me! ಇವರೆಲ್ಲ ನಮ್ಮ ಮದುವೆ ಮನೆಗೆ ಅಥವಾ ಸಮಾರಾಧನೆಗೆ ಬಂದು ನೋಡಬೇಕು. ಜನ ಹೇಗೆ ಸಂತೃಪ್ತಿಯಾಗೆ ತರಾವರಿ ತೇಗತಾರೆ ಅಂತ!! ನಿಮ್ಮ ಥರ ಸಾವಿರಾರು ಸಾರಿ Thank you, pardon me ಅಂತಾ ಇದ್ರೆ ನಮ್ಮ ಬಾಯಿ ಬಿದ್ದು ಹೊಗುತ್ತೆ!
ಪಾತ್ರಧಾರಿ: ಸೃಜನ್ ಅವರೇ, ಇಲ್ಲಿ ಜನ ಬರಿ ಮಾತಲ್ಲಿ thanks ಅಂತ ಹೇಳ್ತಾರೆ. ನೀವು ಯಾವತ್ತಾದ್ರು ಜಪಾನ್ ದೇಶಕ್ಕೆ ಹೋಗಿದ್ದಿರ??
ಸೃಜನ್: ಇಲ್ವಲ್ಲ, ಅಲ್ಲಿ ಏನು ವಿಶೇಷ?
ಪಾತ್ರಧಾರಿ: ಅಲ್ಲಿ ಜನ Hello ಮತ್ತೆ Thanks ಹೇಳೋದು ನೋಡಿದ್ರ?? ಪ್ರತಿ ಸಾರಿ ಬಗ್ಗಿ ಬಗ್ಗಿ ಬೆನ್ನು ಮುರ್ಕೊಬೇಕಾಗುತ್ತೆ! England ನಲ್ಲಿ ಬಾಯಿಗೆ ಸ್ವಲ್ಪ ಕೆಲಸ ಅಷ್ಟೆ. ಅಂದ ಹಾಗೆ ಇಲ್ಲಿ ಇರೋ ಮೊಳೆ ಡಾಕ್ಟರ್ಗಳು ಅವ್ರಿಗೆನಾದ್ರು ಜಪಾನೀಸ್ ಭಾಷೆ ಬಂದಿದ್ರೆ … ಅಲ್ಲಿ ಹೋಗಿ ಪ್ರೈವೇಟ್ ಪ್ರಾಕ್ಟೀಸ್ ಮಾಡೇ ಬಿಡ್ತಾಯಿದ್ರು.
ಪಾತ್ರಧಾರಿ: ಅಂದ ಹಾಗೆ Orthpoedic ಡಾಕ್ಟರ್ ಗಳ ಬಗ್ಗೆ ಒಂದು ಜೋಕು ಜ್ಞಾಪಕ್ಕೆ ಬಂತು…
ಸೃಜನ್: ಹೇಳಿ ನೋಡೋಣ…
ಪಾತ್ರಧಾರಿ: ನಮ್ಮ ಪಕ್ಕದ ಮನೆ ಪುಟ್ಟ ಹುಡುಗಿ ಕಾಜಲ್ ಅವಳ ಪ್ರೈಮರಿ ಸ್ಕೂಲ್ನಲ್ಲಿ ಮೇಡಂ ನಿಮ್ಮಪ್ಪ ಏನು ಕೆಲಸ ಮಾಡ್ತಾರೆ ಮರಿ ಅಂತ ಕೇಳಿದಾಗ ಅವಳು ನಮ್ಮಪ್ಪ Octopus surgeon ಅಂದಳಂತೆ. ಮೇಡಂ ಗೆ ತಲೆಬುಡ ಏನು ತಿಳಿಲಿಲ್ಲ. ಅವತ್ತು ಸಂಜೆ ಕಾಜಲ್ ಅಪ್ಪ ಗಿರೀಶ್ ಸ್ಕೂಲಿಗೆ ಬಂದಾಗ ಅಪ್ಪನನ್ನೇ ಮೇಡಂ ನೇರವಾಗಿ ಕೇಳಿದರು. ಅಪ್ಪ ತಾನು Orthopedic surgeon ಅಂದಾಗಾ ಮೇಡಂ ಗೆ ಸಕತ್ ನಗುಬಂತು, ಅಪ್ಪ ಮತ್ತು ಕಾಜಲ್ ಕೂಡ ಬಿದ್ದು ಬಿದ್ದು ನಕ್ಕಿದ್ರು.
ಎಲ್ಲ Orthopedic surgeonಗಳು ಇದರ ಬಗ್ಗೆ ಯೋಚಿಸಿರಬೇಕು. ಎಲ್ಲ ಮನುಷ್ಯರಿಗೂ Octopus ತರಹ ಎಂಟು ಕೈ ಕಾಲುಗಳಿದ್ದರೆ ತಮ್ಮ ಪ್ರೈವೇಟ್ ಪ್ರಾಕ್ಟೀಸ್ ಇನ್ನು ಹತ್ತು ಪಟ್ಟು ಹೆಚ್ಚಾಗಿರ್ತಿತ್ತು ಅಂತ!!
ಪಾತ್ರಧಾರಿ: ಸೃಜನ್ ಅವರೇ, ನಿಮಗೆ ಈಗ ಒಂದು ಜೋಕ್ ಹೇಳಿಯಾಯಿತು. ಈಗ ಒಂದು ತಮಾಷೆ ಪದ್ಯ ಓದಬಹುದೇ?
ಸೃಜನ್: ಹೇಳಿ ನೋಡೋಣ.
ಪಾತ್ರಧಾರಿ: ನೀವು ಜನಪ್ರಿಯವಾದ ಡಾ.ಜಿ.ಎಸ್.ಎಸ್ ಅವರ ‘ಎದೆ ತುಂಬಿ ಹಾಡಿದೆನು’ ಕವಿತೆ ಕೇಳಿರಬಹುದು. ಇದನ್ನು ನಮ್ಮ ಬಳಗದ ದಿವಂಗತ ಡಾ.ರಾಜಾರಾಂ ಕಾವಳೆಯವರು ಬೇರೆ ರೀತಿಯಲ್ಲಿ ಬಳಸಿಕೊಂಡು ಹಾಸ್ಯ ಕವನವನ್ನು ರಚಿಸಿದ್ದಾರೆ.
ಇದನ್ನು ನೀವೇ ಯಾಕೆ ಹಾಡಬಾರದು?
ಸೃಜನ್: ಓ.ಕೆ. ಟ್ರೈ ಮಾಡ್ತೀನಿ… ಸೃಜನ್ ಹಾಡುತ್ತಾರೆ…
ಎಡೆಬಿಡದೆ ಮಾಡಿದೆನು ಅಡುಗೆ ನಾನು
ಮನಃ ತೃಪ್ತಿ ಮಾಡಿದಿರಿ ಊಟ ನೀವು.
ಪಾತ್ರಧಾರಿ: ಬರ್ತೀನಿ ಸೃಜನ್ ಅವರೇ, ನಮಸ್ಕಾರ.
ಚಿತ್ರ ಕಲೆ: ಲಕ್ಷ್ಮೀ ನಾರಾಯಣ ಗುಡೂರ
*****
ದೃಶ್ಯ 2 ಮತ್ತು ದೃಶ್ಯ 3
ಹಿನ್ನೆಲೆ – ಈ ದೃಶ್ಯದಲ್ಲಿ ಪಾತ್ರಧಾರಿ ಕನ್ನಡ ಬಳಗದ ಕಿರಿಯ ಸದಸ್ಯ. ಅವನು ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ಗೆ ಬಂದಿರುವವರಲ್ಲಿ ಒಬ್ಬ. ಅವನಿಗೆ ಸೃಜನ್ ಜೊತೆ ಮಂಡ್ಯ ಕನ್ನಡದಲ್ಲಿ ಮಾತಾಡುವ ಖಯಾಲಿ!
ಹಾಡುತ್ತ ಪಾತ್ರಧಾರಿಯ ಪ್ರವೇಶ, “ಗುಂಡಿನ ಮತ್ತೆ ಗಮ್ಮತ್ತು, ಅಳತೆ ಮೀರಿದರೆ ಆಪತ್ತು…”
ಸೃಜನ್: ಅಲ್ಲಾಪ್ಪ, ಇನ್ನು 3 ಘಂಟೆ! ಆಗಲೇ ಗುಂಡಿನ ಬಗ್ಗೆ ಯೋಚಿಸ್ತಾ ಇದ್ದೀಯ?!
ಪಾತ್ರಧಾರಿ: ಸೃಜನ್ ಅಣ್ಣ, ಇದು ಇಂಗ್ಲೆಂಡ್, ಇಲ್ಲಿ ಜನ ಮಧ್ಯಾನ್ಹ ರಾತ್ರಿ ಉಟಕ್ಕೆ ಬೀರ್ ವೈನು ನಾವು ನೀರ್ ಕುಡಿದಂಗೆ ಕುಡಿತಾರೆ. ಮೇಲಾಗಿ ಸ್ಕಾಚ್ ವಿಸ್ಕಿ ಕಂಡ್ ಹಿಡಿದಿದ್ದು ಪಕ್ಕದ ಸ್ಕಾಟ್ ಲ್ಯಾಂಡ್ ನಲ್ಲಿ.
ಸೃಜನ್: ಅಯ್ಯೋ ಅವ್ರ ಅರೋಗ್ಯ ಕೆಟ್ಟರೆ ಆಸ್ಪತ್ರೆಗೆ ದುಡ್ಡು ಯಾರ್ ಕಟ್ತಾರೆ? ನಾವೇನೋ ಇಂಡಿಯಾದಲ್ಲಿ ಪಾರ್ಟಿ ಗೀರ್ಟಿನಲ್ಲಿ ಸೂರ್ಯ ಕೆಳಗೊದ್ಮೇಲೆ ಕುಡಿತೀವಿ.
ಪಾತ್ರಧಾರಿ: ಅಣ್ಣಾ ಇದು ರಾಮರಾಜ್ಯ. ಇಲ್ಲಿ ಆಸ್ಪತ್ರೆ Free, ಕೆಲಸ ಇಲ್ಲ ಅಂತ ಕೈ ಎತ್ ದವ್ರಗೆ ಮನೆ ಮತ್ತೆ ಊಟ ಎಲ್ಲ free!
ಸೃಜನ್: ಎ ಹಂಗಾರೆ ನಾನು ಇಮಿಗ್ರೇಷನ್ ತಗೊಂಡ್ರೆ ಹೇಗೆ, ಪರ್ಮೆನೆಂಟ್ ಆಗಿ ಇಲ್ಲೇ ಇದ್ ಬಿಡನ ಅಂತ ಆಸೆ ಆಗ್ತಾ ಇದೆ!!
ಪಾತ್ರಧಾರಿ: ಪರ್ಪಂಚ್ ದಲ್ಲಿ ಇರೊ ಜನ ಇಂಗ್ಲಂಡ್ ನಲ್ಲಿ ಬಂದು ಸೆಟ್ಲ್ ಆಗ್ತಾರೆ ಅಂತ ಇಲ್ಲಿ ಜನ ಅದೇನೋ Brexit ಅಂತ ಬಾಗಲ್ ಮುಚ್ತಾ ಅವ್ರೆ. ನೀವೇನಾದ್ರು ಇಲ್ಲಿ ಸೆಟ್ಲ್ ಆದ್ರೆ ನಿಮ್ಮ ಕನ್ನಡ ಭಾಷೆ ಇಂಡಿಯಾದಲ್ಲಿ ಬಿಟ್ ಬನ್ನಿ.
ಇಲ್ಲಿ ಯು. ಕೆ. ಕನ್ನಡಿಗರು ಕನ್ನಡ ಮಾತನ್ನು ಮರೆತು ಎಲ್ಲ ಟಸ್ಸ್ ಪುಸ್ ಅಂತ… ಇಂಗ್ಲಿಷಲ್ಲಿ ಮಾತಾಡಿಕೊಂಡು ಮಕ್ಕಳಿಗೂ ಕನ್ನಡ ಕಲಿಸ್ತಿಲ್ಲ, ನೀವು ಅವರಿಗೆಲ್ಲ ಸ್ವಲ್ಪ ಬುದ್ಧಿವಾದ ಹೇಳಿ ಸೃಜನ್ ಅಣ್ಣ…
ಸೃಜನ್: ಹೌದ, ನಾನು ಈಗ ಕನ್ನಡದ ಬಗ್ಗೆ, ಭಾಷೇ ಅಭಿಮಾನದ ಬಗ್ಗೆ ಯು.ಕೆ ಕನ್ನಡಿಗರಿಗೆ ಭಾಷಣ ಶುರುಮಾಡಬಹುದಾ?
ಪಾತ್ರಧಾರಿ: ಅಣ್ಣ ಹಾಗ್ ಮಾಡಬೇಡಿ. ಯಾಕೆ ಅಂದ್ರೆ ಯು.ಕೆ ಕನ್ನಡಿಗರಿಗೆ ಭಾಷಣ ಅಂದ್ರೆ ಅಲರ್ಜಿ! ಭಾಷಣ ಬೇಕಾದ್ರೆ ನೀವು ಇಲ್ಲಿ ಒಂದು ಬುದ್ಧಿ ಜೀವಿಗಳ ಗುಂಪು KSSVV ಅಂತ ಐತೆ, ಅಲ್ಲಿ ಮಾಡ್ ಬಹದು. ಕನ್ನಡ ಬಳಗದಲ್ಲಿ ಭಾಷಣ ತಂದು ನಮ್ಮ ಕಾರ್ಯದರ್ಶಿ ಡಾ.ಪ್ರಸಾದ್ ಅವರು ಎಲ್ರಿಂದ ಸಾಕಷ್ಟು ಚೀಮಾರಿ ಹಾಕುಸ್ಕೊಂಡವ್ರೆ.
ಡಾ.ಪ್ರಸಾದ್ ಅವರು ಹಿಂದೆ ಭಾಷಣ ಮಾಡಿ ಮಾಡಿ… ಅವರು ಎದ್ನಿಂತ್ರೆ ಜನ ಭಾಷ್ಣ ಮಾಡಕ್ಕೆ ನಿಂತವ್ರೆ ಅಂತ ಗಾಬ್ರಿ ಬೀಳ್ತಾರೆ. ಅದ್ಕೆ ಡಾ.ಪ್ರಸಾದ್ ಅವ್ರು ಕನ್ನಡ ಬಳಗದ್ ಫಂಕ್ಷನ್ ನಲ್ಲಿ ಕುಂತೆ ಇರ್ತಾರೆ! ನೀವೇನಾದ್ರು ಈ ಜನಕ್ಕೆ ಹೇಳ್ಬೇಕ್ ಅಂದ್ರೆ ಅವರಿಗೆ ಹಾಡು ಅಥವಾ ಡ್ಯಾನ್ಸ್ ಮೂಲ್ಕ ಹೇಳಿದ್ರೆ ಮಾತ್ರ ಅರ್ಥವಾಗೋದು.
ನೀವು ಇವತ್ತಿನ ಪ್ರೊಗ್ರಾಮ್ ನೋಡಿಲ್ವಾ ಅದು ಬರಿ ಹಾಡು ಅಥ್ವಾ ಡ್ಯಾನ್ಸ್ ಅಷ್ಟೆ…
ಸೃಜನ್: ತುಂಬಾ ಒಳ್ಳೆ ಆಲೋಚನೆ, ಸರಿ ನಾನು ಹಾಡಲ್ಲಿ ಕನ್ನಡಿಗರಿಗೆ ಅಭಿಮಾನ ತುಂಬತೀನಿ… (ಕಂಠ ಸರಿ ಮಾಡಿಕೊಳ್ಳುತ್ತಾ ಹಾಡು ಶುರು ಮಾಡುತ್ತಾರೆ)
ಸೃಜನ್: ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು… (ಎಂದು ಕೆಲವು ನಿಮಿಷ ಹಾಡುತ್ತಾರೆ)
ಪಾತ್ರಧಾರಿ: ಸೃಜನ್ ಅಣ್ಣ ಒಳ್ಳೆ ಸಂದೇಶ ಬಿಡಿ, ಮತ್ತೊoದು ವಿಚಾರ…
ಸೃಜನ್: ಇನ್ನೆನಪ್ಪ?
ಪಾತ್ರಧಾರಿ: ಇತ್ತೀಚ್ಗೆ ಯು.ಕೆ ನಲ್ಲಿ ಇರೋ ಕನ್ನಡಿಗ್ರು ಹಾದಿಗೊಂದು ಬೀದಿಗೊಂದು ಕನ್ನಡ ಸಂಘ ಕಟ್ಕೊಂಡ್ ಅವ್ರೆ. ಎಲ್ಲ ಒಟ್ಟಾಗಿ ಅಂತ ರಾಮ್ ಮೂರ್ತಿ, ವಿವೇಕ್, ಮತ್ತೆ ಭಾನುಮತಿ ಅವ್ರು ಹೋದ್ಕಡೆ ಎಲ್ಲಾ ಬೇಡ್ ಕೊಂಡ್ರು. ಆದ್ರೆ ಜನ ಮುಂದಕ್ ಹೋಗಿ ಅಂತಾರೆ! ರಾಮ್ ಮೂರ್ತಿ, ವಿವೇಕ್, ಮತ್ತೆ ಭಾನುಮತಿ ಅವ್ರು Mission Impossible ಅಂತ ತಲೆಮೇಲೆ ಕೈ ಹೊತ್ಕೊಂಡು ಕುಂತವ್ರೆ. ಸೃಜನ್ ಅಣ್ಣ ನೀವಾದ್ರೂ ವಸಿ ಯು.ಕೆ. ಕನ್ನಡಿಗ್ರ್ನ ಒಟ್ಟಿಗೆ ಸೇರ್ಸಿ…
ಸೃಜನ್: ಇದು ಬಹಳ ಜವಾಬ್ದಾರಿ ಕೆಲಸ. ಒಂದ್ ಹಾಡಿನ ಮೂಲಕ ಪ್ರಯತ್ನ ಮಾಡ್ ಬಿಡ್ತೀನಿ (ಕಂಠ ಸರಿ ಮಾಡಿಕೊಳ್ಳುತ್ತಾ ಹಾಡು ಶುರು ಮಾಡುತ್ತಾರೆ). “ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನೀವಾದವೆನ್ನಿ.” (ಎರಡು ನಿಮಿಷ ಹಾಡುತ್ತಾರೆ)
****
ಚಿತ್ರ ಕಲೆ: ಲಕ್ಷ್ಮೀ ನಾರಾಯಣ ಗುಡೂರ
ದೃಶ್ಯ 3
ಪಾತ್ರಧಾರಿ: ಸೃಜನ್ ಅಣ್ಣ, ನೀವು ಬೆಂಗಳೂರಿನಲ್ಲಿ ಅದೇನೋ ‘ನಿಜ ಟಾಕೀಸ್ ‘ ಅಂತ ನಡಸಿ ತುಂಬಾ ಫೇಮಸ್ ಆಗ್ಬುಟ್ಟು ಈಗ ಸೆಲಿಬ್ರಿಟಿ ಅಂತ ಎಲ್ಲ ಹೇಳ್ತಾವ್ರೆ.
ಸೃಜನ್: ಎ ಬೆಪ್ ತಕಡಿ, ಅದು ‘ಮಜಾ ಟಾಕೀಸ್’ ಕಣೋ!!
ಪಾತ್ರಧಾರಿ: ಅಲ್ಲ ನೀವು ಸಿನ್ಮ ಸೆಟ್ ಹಾಕಿ ಆಡಿಯನ್ಸ್ ಕರಸಿ ಸಿನಮಾ ನಟ ನಟಿಯರನ್ನ ಕರ್ದು ಲೈವ್ ಮ್ಯೂಸಿಕ್ ಬ್ಯಾಂಡ್ ಇಟ್ಮೇಲೆ ಅದು ‘ನಿಜಾ ಟಾಕೀಸ್’ ಅಲ್ದೆ ಇನ್ನೇನು?
ಸೃಜನ್: ಅಲ್ಲ ನೀ ಹೇಳದೇನೋ ಸರಿ ಇರಬಹದು. ಅಂದ ಹಾಗೆ ‘ನಿಜ’ ಅಂದ್ರೆ ಒಂದು ಅರ್ಥದಲ್ಲಿ ‘Reality’ ಅಂತ. ಮುಂದಕ್ಕೆ ‘ನಿಜಾ ಟಾಕೀಸ್’ ಅಂತ ಒಂದು ‘Reality’ ಷೋ ಮಾಡೋದಕ್ಕೆ ಒಳ್ಳೆ ಐಡಿಯಾ ಕೊಟ್ಟೆ ಕಣೋ, ಭೇಷ್! ನಾನು ಇಂಗ್ಲೆಂಡ್ಗೆ ಬಂದಿದಿಕ್ಕೆ ಒಂದು ಒಳ್ಳೆ ಐಡಿಯಾ ಸಿಕ್ತು ಬಿಡು!!
ಪಾತ್ರಧಾರಿ: ಅಣ್ಣ ನಿಮ್ಮ ಷೋ ನಲ್ಲಿ ಇಂದ್ರಜಿತ್ ಅಂತ ಒಬ್ಬರು ಹೋಸ್ಟ್ ಸೋಫಾ ಮೇಲೆ ಕುಂತ್ಕಂಡು ಮಾತ್ ಮಾತ್ಗೆ ಚಪ್ಪಾಳೆ ತಟ್ಟಿ ನಗ್ತಾರಲ್ಲ ಅವ್ರು ವಾರಾ ವಾರಾ ತಿರುಪತಿಗೆ ಹೋಗ್ತಾರ? ತಲೆ ಯಾಕ್ ಅಂಗೆ ಬೋಳುಸ್ಕಂಡವ್ರೆ?!
ಸೃಜನ್: ಏ ಅವ್ರು ಯಾರ್ ಗೊತ್ತ? ನಮ್ಮ ಕನ್ನಡ ಸಾಹಿತಿ, ಮೇಸ್ಟ್ರು, ಲಂಕೇಶ್ ಪತ್ರಿಕೆಯ ಲಂಕೇಶಪ್ಪ ಅವ್ರ ಮಗ ಕಣೋ. ಅವ್ರು ಅಪ್ಪಂತರ ಒಬ್ಬ ಸೆಲೆಬ್ರಿಟಿ. ಕನ್ನಡದ ಪತ್ರಕರ್ತ ಮತ್ತೆ ಫಿಲಂ ನಿರ್ದೇಶಕರು. ಈಗಿನ್ ಕಾಲ್ದಲ್ಲಿ ಬಾಲ್ಡ್ ಆಗಿರವ್ರು ಗುಂಡ್ ಹೊಡಸ್ಕೊಳದೆ ಫ್ಯಾಷನ್ನು. ಅವ್ರು ಎದ್ರಿಗೆ ಕುಳ್ತಿದ್ರೆ ನಂಗೆ ಕನ್ನಡಿನೆ ಬೇಡ!
ಪಾತ್ರಧಾರಿ: ಅಣ್ಣ ಅವ್ರು ಅವರಪ್ಪನ ಪತ್ರಿಕೆ ನಡೆಸೋದ್ಬಿಟ್ಟು ನಿಮ್ಮ ಷೋ ನಲ್ಲಿ ಯಾಕೆ ಕುಂತ್ಕೊತಾರೆ?
ಸೃಜನ್: ಅವ್ರ ಖುಷಿ! ನಿನಗ್ಯಾಕೋ ಅದು?
ಪಾತ್ರಧಾರಿ: ನಿಮ್ಮ ಟಿ.ವಿ ಷೋದಲ್ಲಿ ಅಪರ್ಣ ಅಂತ ತುಂಬಾ ಚನ್ನಾಗಿ ಕನ್ನಡ ಮಾತ್ ಆಡ್ತಾರಲ್ಲ, ಅವ್ರು ಕನ್ನಡ ಮೇಡಂ ಅ? ಇಂಗ್ಲೆಂಡ್ ಗೆ ಬಂದು ಮಕ್ಕಳಿಗೆ ಕನ್ನಡ ಹೇಳ್ಕೊಡ್ತಾರ? ಯು ಕೆ ಕನ್ನಡ ಬಳಗ್ ದವರು ಇಲ್ಲಿ ‘ಕನ್ನಡ ಕಲಿ’ ಕ್ಲಾಸ್ ಮಾಡ್ತಿವಿ ಅಂತ ಕರ್ನಾಟ್ಕ ಗೊವೆರ್ ಮೆಂಟ್ ಇಂದ ದುಡ್ಡ್ ಇಸ್ಕಂಡ್ ಅವ್ರೆ, ಅವ್ರ್ಗೆ ಒಳ್ಳೆ ಕನ್ನಡ ಮೇಡಂ ಇನ್ನು ಸಿಕ್ಕಿಲ್ಲ?!
ಸೃಜನ್: ಎ ಅವ್ರುನ ಜನ ಮರ್ಯಾದೆ ಇಂದ ‘ಅಪರ್ಣ ಮೇಡಂ’ ಅಂತ ಕರಿತಾರೆ ಅವ್ರು ನಿಜವಾದ ಸ್ಕೂಲ್ ಮೇಡಂ ಅಲ್ವೋ. ಅವ್ರು ಎಲ್ಲಾ ಸಭೆಯಲ್ಲಿ ಚನ್ನಾಗಿ ಕನ್ನಡ ಮಾತಾಡಿ Compere ಮಾಡ್ತಾರೆ. ಮತ್ತೆ ಒಳ್ಳೆ ಸಿನಿಮಾ ಮತ್ತೆ ಟಿವಿ ಆಕ್ಟರ್, ಪ್ರೆಸೆಂಟರ್ ಕಣೋ… In fact ‘one and only’ Aparna, ಕನ್ನಡಿಗರ ಅಪರಂಜಿ!!
ಪಾತ್ರಧಾರಿ: ನಿಮ್ಮ ಷೋದಲ್ಲಿ ‘ಡಿಂಗಿಚಿಕ’ ಅಂತ ಡ್ಯಾನ್ಸ್ ಮಾಡಿ ಬಣ್ಣ ಬಣ್ಣ ಬಟ್ಟೆ ಹಾಕೊಂಡು ಕೂಲಿಂಗ್ ಗ್ಲಾಸ್ ಹಾಕೊಂಡು ಜನನ ನಗಸ್ತರಲ್ಲ, ಅವ್ರು ಸ್ಟೇಜ್ ಮೇಲೆ ಕತ್ಲೆ ಹೊತ್ತಲ್ಲಿ ಅದ್ಯಾಕೆ ಕೂಲಿಂಗ್ ಗ್ಲಾಸ್ ಹಾಕೊಂಡ್ ಅವ್ರೆ. ಇಂಗ್ಲೆಂಡಿಗೆ ಅವ್ರೆನಾದ್ರು ಬಂದ್ರೆ ಪಾಪ ಕುರುಡಾ ಅಂತ ಒಂದು ಕಡ್ಡಿನೋ ಅಥವಾ ಒಂದ್ ಗೈಡ್ ನಾಯಿನೋ ಕೊಡ್ತಾರೆ!!
ಪಾತ್ರಧಾರಿ: ಸೃಜನ್ ಅಣ್ಣ, ನಿಮ್ಮ ‘ಮಜಾ ಟಾಕೀಸ್’ ಬಗ್ಗೆ ನಮ್ಮ ಕನ್ನಡ ಬಳಗದವ್ರ್ಗೆ ಸ್ವಲ್ಪ Detail ಆಗಿ ತಿಳಸ್ತೀರ?
ಸೃಜನ್: ನಾನ್ ಯಾಕ್ ತಿಳಸ್ ಬೇಕು?! ನೀವೆಲ್ಲ ಇಲ್ಲಿ ಟಿ.ವಿ ನಲ್ಲಿ ನೋಡ್ಕಳಿ!
ಪಾತ್ರಧಾರಿ: ಅಣ್ಣ ಇಲ್ಲಿ ಕನ್ನಡ ಚಾನಲ್ ಬರಕ್ಕಿಲ್ಲ, ನಮಗೆಲ್ಲ You tubeನಲ್ಲಿ ಹಳಸಿದ್ದು ಮಾತ್ರ ಸಿಕ್ಕತ್ತೆ. ಇಲ್ಲಿ ತಮಿಳ್ ಚಾನೆಲ್ ಇದೆ, ಹಿಂದಿ ಇದೆ, ಬಂಗಾಳಿ ಇದೆ. ಕನ್ನಡ ಮಾತ್ರ ಇಲ್ಲ. ನಾವು ಕನ್ನಡ ಜನ, ನಮ್ಮ ಭಾಷೆ ಬಗ್ಗೆ ಅಭಿಮಾನ ಕಡಿಮೆ, ನಮಗೆ ಗಲಾಟಿ ಮಾಡಿ ಗೊತ್ತಿಲ್ಲ, ನಾವು ಸಾಧು ಜನಗಳು ನೋಡಿ. ನಮ್ಮ ಕನ್ನಡ ಬಳಗದ ಫಂಕ್ಷನ್ ಗೆ ಬನ್ನಿ ಬನ್ನಿ ಅಂತ ಜನಕ್ಕೆ ಅರಿಶಿನ ಕುಂಕುಮ ಕೊಟ್ಟು ಕರಿಬೇಕು. ಮಾತ್ ಎತ್ತಿದರೆ ಅವರ್ಗೆ ಬಳಗದ ಫಂಕ್ಷನ್ ನಲ್ಲಿ ಡಿಸ್ಕೌಂಟ್ ಕೊಡಿ ಅಂತ ಕೇಳ್ತಾರೆ. ನಿಮ್ ತರ ಫಿಲಂ ಸ್ಟಾರ್ ಕರ್ಸೋದಿಕ್ಕೆ ಎಷ್ಟು ಕರ್ಚ್ ಆಗುತ್ತೆ ಅಂತ ಯೋಚನೆ ಮಾಡಲ್ಲ. “ಕೊಡೋದು ಮೂರ್ ಕಾಸು, ಕೋಣೆ ತುಂಬಾ ಹಾಸು” ಅಂದ್ರೆ ಹೆಂಗೆ ಸಾಧ್ಯ?
ಸೃಜನ್: ನೀವೆಲ್ಲ ಏನು ಬೇಜಾರ್ ಮಾಡ್ಕೋಬೇಡಿ. ಹೀಗೆ ಕನ್ನಡಕ್ಕೆ ಅಂತ ಒಳ್ಳೆ ಕೆಲಸ ಮಾಡಿ, ಎಲ್ಲ ಒಂದಾಗಿ ಕನ್ನಡ ಉಳಿಸಿ ಬೆಳಸಿ. ನಾನು ನಮ್ಮ ಕಲರ್ಸ್ TV ಮತ್ತೆ ಬೇರೆ ಬೇರೆ ಚಾನಲ್ ಗಳ್ಗೆ ಶಿಫಾರಸ್ ಮಾಡ್ತೀನಿ. ನೀವೆಲ್ಲ ಮುಂದೆ ಮಜಾ ಟಾಕೀಸ್ ಲೈವ್ ಪ್ರೊಗ್ರಾಮ್ ನೋಡಬಹುದು. ಸರಿ, ನಾನು ವಾಪಸ್ ಬೆಂಗಳೂರಿಗೆ ಹೊರಡಬೇಕು. ಯು ಕೆ ಕನ್ನಡಿಗರು ನಮ್ಮ ಷೋಗೆ ಬರಬೇಕು. ಅದಕ್ಕೆ ವ್ಯವಸ್ಥೆ ಮಾಡ್ತೀನಿ.
ನಾವೆಲ್ಲಾ ಕನ್ನಡ ಬಳಗ ಯು.ಕೆ. ಸದಸ್ಯರು ಕರುನಾಡ ಹೊರಗಿದ್ದರೂ ನಮ್ಮ ತೌರುಮನೆಯ ಕರ್ನಾಟಕದ ದರ್ಶನ ನಮಗೆಲ್ಲಾ ಅಂದು ಸಿಕ್ಕೇಬಿಟ್ಟಿತು. ಯಾವತ್ತು ಎನ್ನುವುದನ್ನು ನೀವು ಸರಿಯಾಗೇ ಊಹಿಸಿದಿರಿ. ಇಂಗ್ಲೆಂಡಿನಲ್ಲಿ, ಕುರ್ಚಿಯಲ್ಲಿ ಕೂತಿದ್ದ ಹಾಗೇ ಒಂಥರಾ ಮಾಯಾ ಬಜಾರ್ ರೀತಿಯಲ್ಲಿ ನಮ್ಮನ್ನೆಲ್ಲಾ ನಮ್ಮೂರಿಗೆ ವಾಪಸ್ ಕರೆದೊಯ್ದವರು ಯಾರು, ಆ ಒಂದು ಮಾಯೆಯನ್ನು ಅವರು ಹೇಗೆ ಸೃಷ್ಟಿ ಮಾಡಿದರು? ಆ ಮೋಡಿಯ ಹಿಂದೆ ನಡೆದ ಕಾರುಬಾರುಗಳು ಏನೇನು? ಸ್ಟೇಜ್ ಮೇಲೆ ಬಂದ ಕರ್ನಾಟಕ ದರ್ಶನ ಮತ್ತು ಮೈಸೂರು ದಸರಾಗಳನ್ನ ನೋಡಿದ ಪ್ರೇಕ್ಷಕರು ಏನನ್ನುತ್ತಾರೆ? ಇವತ್ತಿನ ಲೇಖನಗಳನ್ನ ಓದಿ ವಿವರಗಳನ್ನು ತಿಳಿದುಕೊಳ್ಳೋಣ, ಬನ್ನಿ. ಅಂದು ಸೃಷ್ಟಿಯಾದ ಅದ್ಭುತ ಲೋಕದ ಕಿರು ವಿಡಿಯೋಗಳು ಕೂಡ ಇವೆ. ಎಂಜಾಯ್ ಮಾಡಿ, ಹಂಚಿಕೊಳ್ಳಿ. ಸಂ.
ಡಾರ್ಬಿ ಕನ್ನಡಿಗರ ಒಗ್ಗಟ್ಟಿನ ಉತ್ಸಾಹದ ಫಲ -ಕರ್ನಾಟಕ ದರ್ಶನ, ಮೈಸೂರು ದಸರಾ
‘ಅನಿವಾಸಿ’ಗಾಗಿ ಶ್ರೀದೇವಿ ಮತ್ತು ಹರೀಶ್ ರನ್ನ ಮಾತನಾಡಿಸಿ, ಲೇಖನವನ್ನು ಸಿದ್ಧಪಡಿಸಿದವರು ರಾಮ್ ಶರಣ್
ಇತ್ತೀಚೆಗೆ ಡಾರ್ಬಿಯಲ್ಲಿ ನಡೆದ ಕನ್ನಡ ಬಳಗದ ದೀಪಾವಳಿ ಕಾರ್ಯಕ್ರಮದಲ್ಲಿ ಡಾರ್ಬಿ ಕನ್ನಡಿಗರು ಪ್ರಸ್ತುತ ಪಡಿಸಿದ ‘ಕರ್ನಾಟಕ ದರ್ಶನ’ ಹಾಗು ‘ಮೈಸೂರು ದಸರಾ’ ರೂಪಕಗಳು ಪ್ರೇಕ್ಷಕರನ್ನು ತಾಯ್ನಾಡಿಗೆ ಸೆಳೆದೊಯ್ದವು ಎಂದು ಬಹಳಷ್ಟು ಪ್ರೇಕ್ಷಕರು ಹೇಳಿದರು. ಅದಲ್ಲದೆ, ಇಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿ, ಬೆಳೆಯುತ್ತಿರುವ ಕಿರಿಯರಿಗೂ ನಾನು ಕನ್ನಡಿಗ ಎನ್ನುವ ಹೆಮ್ಮೆ, ವೈಯಕ್ತಿಕತೆ ಹುಟ್ಟಿಸಿತು ಎಂದು ಹೇಳಿ ಬೆನ್ನು ತಟ್ಟಿದಾಗ ಅದರಲ್ಲಿ ಪಾಲ್ಗೊಂಡ ನಮಗೆಲ್ಲ ಹೃದಯ ತುಂಬಿ ಬರುವುದು ಸಹಜವೇ. ‘ಈ ಕಾರ್ಯಕ್ರಮಗಳು ಹೊಸ ಹಾದಿ ಹಾಕಿವೆ, ಇದೆಲ್ಲದರ ಹಿನ್ನೆಲೆ ಕನ್ನಡ ಬಳಗದವರೊಂದಿಗೆ ಹಂಚಿಕೊಳ್ಳಬೇಕು, ಬರೆದು ಕೊಡಿ’ ಎಂದು ‘ಅನಿವಾಸಿ’ ಯ ಸಂಪಾದಕ ಬಳಗ ಕೇಳಿಕೊಂಡಾಗ ಆನಂದಾಶ್ಚರ್ಯವಾಯಿತು!
ತಮ್ಮ ತನುಮನ ಧನಗಳನ್ನರ್ಪಿಸಿ, ಕನ್ನಡಿಗರನ್ನೊಂದು ಮಾಡಿ, ಇವೆರಡೂ ನೃತ್ಯ ರೂಪಕಗಳನ್ನು ಕಲ್ಪಿಸಿ ಸಾಕಾರ ಮಾಡಿದ ಶ್ರೀದೇವಿ ವಲ್ಲೀಶ್ ಹಾಗೂ ಹರೀಶ್ ರಾಮಯ್ಯ ಅವರಿಂದಲೇ ಹಿನ್ನೆಲೆಯ ಕಥೆ ಹೇಳಿಸುವ ಪ್ರಯತ್ನ ಮಾಡಿದ್ದೇನೆ, ಕೇಳಿ… ರಾಮ್ ಶರಣ್
ಹರೀಶ್: ಇಂಗ್ಲೆಂಡಿನ ಮಹಾನಗರಗಳ ಹೊರಗೆ ಇರುವ ಡಾರ್ಬಿ ಭಾರತೀಯ ಸಮುದಾಯ ಅನನ್ಯವಾದದ್ದು. ಸಾಂಪ್ರದಾಯಿಕವಾಗಿ ತಲೆ ತಲಾಂತರಗಳಿಂದ ನೆಲೆಸಿರುವ ಸಿಖ್ ಹಾಗು ಕೆಲವು ಗುಜರಾತಿ ಕುಟುಂಬಗಳು, ಜೊತೆಗೆ ಎನ್.ಎಚ್.ಎಸ್. ವೈದ್ಯರ ಗುಂಪಿನೊಂದಿಗೇ ಸಾಕಷ್ಟು ಇಂಜಿನಿಯರ್ ಕುಟುಂಬಗಳೂ ಬಂದು ನೆಲೆ ನಿಂತಿವೆ. ದಕ್ಷಿಣ ಭಾರತದಿಂದ ಸದ್ಯ ವಲಸೆ ಬಂದವರನ್ನು ಒಟ್ಟುಗೂಡಿಸುವ ಪ್ರಯತ್ನವಾಗಿ ಸೌತ್ ಇಂಡಿಯನ್ ಅಸೋಸಿಯೇಷನ್ (ಸಿಯಾ) ಎಂಬ ಸಂಸ್ಥೆಯನ್ನು ಸುಮಾರು ೯ ವರ್ಷಗಳ ಹಿಂದೆ ಹುಟ್ಟು ಹಾಕಿದ್ದಾಯ್ತು. ರೋಲ್ಸ್ ರಾಯ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿದ್ದ ಹಲವಾರು ಕನ್ನಡಿಗರನ್ನೆಲ್ಲ ಸಿಯಾ ದೀಪಾವಳಿಗೆ ಹುರಿದುಂಬಿಸಿ ಕರೆದುಕೊಂಡು ಹೋಗ್ತಿದ್ದೆ. ಆದರೆ ಅಲ್ಲಿ ಕನ್ನಡ ಕಾರ್ಯಕ್ರಮಗಳೇ ಇರ್ತಿರಲಿಲ್ಲ.
ಶ್ರೀದೇವಿ: ನಾನು ಬಂದ ವರ್ಷ ಸಿಯಾ ದೀಪಾವಳಿಯಲ್ಲಿ ಕನ್ನಡದವರ ಪರಿಚಯವಾದ್ರೂ ಕನ್ನಡ ಪ್ರೋಗ್ರಾಮ್ ಇಲ್ದೆ ಇರೋವಾಗ ಊಟ ಸಪ್ಪೆಯೆನಿಸ್ತು. ಅಲ್ಲೇ ನನಗೆ ಹರೀಶ್ ಪರಿಚಯ ಆಗಿದ್ದು. ಆ ವರ್ಷ ಕನ್ನಡದವ್ರದ್ದೇ ಯುಗಾದಿ ಮಾಡೋಣ ಅಂತ ಯೋಜನೆ ಹಾಕಿದ್ವು.
ಯಕ್ಷಗಾನದ ಕಿರೀಟ
ಹರೀಶ್: ಯುಗಾದಿ ಕಾರ್ಯಕ್ರಮದ ಸ್ಟೇಜ್ ಅಲಂಕಾರಕ್ಕೆ ಚೆನ್ನಾಗಿರುತ್ತೆ ಅಂತ ಹಳ್ಳಿ ಮನೆ ಕಟ್ದೆ. ಕಟ್ಟೋವಾಗ ಹುರುಪು ಬರಲಿ ಅಂತ, ವಾಟ್ಸ್ಯಾಪ್ ಗುಂಪಿನಲ್ಲಿ ಚಿತ್ರಗಳನ್ನ ಹಾಕ್ದೆ. ಅದಕ್ಕೆ ಬಣ್ಣ ಬಳಿದು ಸಿಂಗಾರ ಮಾಡೋ ಕೆಲಸಕ್ಕೆ ಕನ್ನಡದವರೆಲ್ಲ ನಾ ಮುಂದು, ತಾ ಮುಂದು ಅಂತ ಬಂದಾಗ ನಾನು ದಂಗು ಬಡದ್ಹೋದೆ. ಆ ವರ್ಷದ ಯುಗಾದಿ, ಡಾರ್ಬಿ ಕನ್ನಡಿಗರನ್ನು ಒಗ್ಗೂಡಿಸ್ತು ಅಂತ ಹೇಳಬಹುದು.
ಶ್ರೀ, ಹ: ಆ ಹಳ್ಳಿ ಮನೆ ಹಿಂದಿಟ್ಕೊಂಡು ಸಿಯಾ ಬಳಗಕ್ಕೆ ಕನ್ನಡದ ಹಳ್ಳಿ ಜೀವನ, ಹಬ್ಬದ ಸಡಗರ ತೋರಿಸುವ ಉದ್ದೇಶದಿಂದ ಬೆಳಕಿಗೆ ಬಂದಿದ್ದು ‘ಕರ್ನಾಟಕ ದರ್ಶನ’ ರೂಪಕ. ಕರ್ನಾಟಕದ ಹಳ್ಳಿಯ ದೈನಂದಿನ ಜೀವನದ ನೋಟ ತೋರಿಸಬೇಕೆಂಬ ಕನಸಿನ ಕೂಸು ಅದು.
ಶ್ರೀದೇವಿ ತಯಾರಿಸುತ್ತಿರುವ ತಟ್ಟೀರಾಯ ಮುಖವಾಡಗಳು
ನಾವು ಮಾಡಿದಂಥ ಎರಡೂ ಕಾರ್ಯಕ್ರಮಗಳಿಗೆ ಹಿನ್ನಲೆ ಸಂಗೀತ ಹೊಂದಿಸಿದ್ದು ದೊಡ್ಡ ತಲೆನೋವಿನ ವಿಚಾರ. ಹಾಡು ಇಂಪಾಗಿ, ಕುಣಿಸುವಂತಿರಬೇಕು; ಸಂದರ್ಭಕ್ಕೆ ಸರಿಯಾಗಿರಬೇಕು; ನೃತ್ಯಕ್ಕೆ ಹೊಂದಿಸೋ ಹಾಗಿರ್ಬೇಕು. ಹಾಡಿನ ಹುಡುಕಾಟಕ್ಕೇ ಒಂದು ವಾರ ಪ್ರತಿ ರಾತ್ರಿ ೨-೩ ಗಂಟೆವರೆಗೆ ಪರದಾಡಿದ್ದೇವೆ. ಹಾಡುಗಳನ್ನು ಆರಿಸಿದ ಮೇಲೆ, ಒಳ್ಳೆ ಗುಣಮಟ್ಟದ್ದನ್ನ ಹುಡುಕೋದು, ಅದನ್ನ ಬೇಕಷ್ಟೇ ಉದ್ದಕ್ಕೆ ಕತ್ತರಿಸೋದು ದೊಡ್ಡ ಪರದಾಟ.
ಶ್ರೀದೇವಿ: ಹಾಡಿನ ಅರಸಾಟ ಮುಗಿದ ಮೇಲೆ ಅದಕ್ಕೆ ಬೇಕಾಗಿದ್ದು ನೃತ್ಯ ಸಂಯೋಜನೆ. ವೇಷ-ವಿಭೂಷಣಗಳ ಆಯ್ಕೆ. ‘ಕರ್ನಾಟಕ ದರ್ಶನ’ದ ನೃತ್ಯ ಸಂಯೋಜನೆಗೆ ನಮ್ಮಲ್ಲೇ ಇದ್ದ ಪೃಥಾ ತುಂಬಾ ಸಹಾಯ ಮಾಡಿದ್ರು. ‘ಮೈಸೂರು ದಸರಾ’ಕ್ಕೆ ಅಮೆರಿಕಾದಲ್ಲಿರೋ ತಂಗಿ, ಲಂಡನ್ ನಲ್ಲಿರೋ ನಾದಿನಿ, ಹೀಗೆ ಹತ್ತಿರದವರು, ದೂರದವರನ್ನ ಕಾಡಿ-ಬೇಡಿ, ಯಾವ ಹೆಜ್ಜೆಗಳೂ ಪುನರಾವರ್ತಿತವಾಗದಂತೆ ನೃತ್ಯ ಸಂಯೋಜನೆ ಮಾಡಬೇಕಾಯ್ತು. ಇದನ್ನೆಲ್ಲಾ ವಿಡಿಯೋ ಮಾಡಿ ಇಟ್ಟುಕೊಂಡಾಯ್ತು.
ಶ್ರೀ, ಹ: ನಮ್ಮಲ್ಲಿ ಯಾರೂ ವೃತ್ತಿನಿರತ ಕಲಾವಿದರಲ್ಲ, ಹೆಚ್ಚಿನವರು ಪ್ರವೃತ್ತಿ ಕಲಾವಿದರೂ ಅಲ್ಲ. ಅಂಥದ್ದರಲ್ಲಿ ಪ್ರತಿಯೊಬ್ಬರೂ ಶಕ್ತಿ ಮೀರಿ ಕಾರ್ಯಕ್ರಮವನ್ನ ಯಶಸ್ವಿ ಮಾಡಿ, ಸಭಿಕರೆಲ್ಲರ ಮೆಚ್ಚುಗೆ ಪಡೆದಿದ್ದು ಈ ವರ್ಷ ದಸರಾ ಕಾರ್ಯಕ್ರಮದ ಯೋಜನೆ ಹಾಕೋದಕ್ಕೆ ಸ್ಫೂರ್ತಿ ಆಯ್ತು. ಹಾಗೇ ಕನ್ನಡದ ಶ್ರೀಮಂತ ಪರಂಪರೆ, ಚರಿತ್ರೆ ಇವೆರಡನ್ನೂ ನಮ್ಮ ಮಕ್ಕಳಿಗೆ, ಜನರಿಗೆ ತೋರಿಸುವ ವಿಚಾರ ಬಂತು. ಮೈಸೂರು ದಸರಾ ಜಗತ್ಪ್ರಸಿದ್ಧಿ. ದಸರಾ ಮೆರವಣಿಗೆ ನಾಡಿನ ಎಲ್ಲ ಜಿಲ್ಲೆಗಳ ಸೊಗಡಿನ ಪಕ್ಷಿ ನೋಟ ಬಂದವರಿಗೆ ತೋರಿಸುತ್ತೆ. ಅದನ್ನೇ ಮಾಡಿದರೆ ಸೂಕ್ತ ಅಂತ ಸಾಕಷ್ಟು ಚರ್ಚೆ ಮಾಡಿ ನಿರ್ಧರಿಸಿದ್ವು. ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ವೇದಿಕೆಯ ಮೇಲೆ ಸೀಮಿತ ಅವಧಿಯಲ್ಲಿ ಪ್ರತಿನಿಧಿಸೋದು ತುಂಬಾನೇ ಕಷ್ಟ. ಹಾಗಾಗಿ ಕೆಲವೇ ಪ್ರಾಂತ್ಯಗಳನ್ನು ಆರಿಸಿಕೊಂಡ್ವಿ. ಪ್ರತಿಯೊಂದು ಪ್ರಾಂತ್ಯದ್ದೂ ಮುಖ್ಯ ಪಾರಂಪರಿಕ/ಚಾರಿತ್ರಿಕ ಛಾಪನ್ನು ಪ್ರತಿನಿಧಿಸುವಂತೆ ರೂಪಕ/ನೃತ್ಯಗಳ ಪ್ಲಾನ್ ಹಾಕಿದ್ವಿ.
ಹರೀಶ್: ಇದಕ್ಕೆ ಸುಮಾರು ೬೦ ಜನ ಬೇಕಾಗೋದ್ರಿಂದ ಎಲ್ಲಾರನ್ನೂ ಒಂದೇ ಸಲ ಸೇರಿಸಿ ಪ್ರ್ಯಾಕ್ಟೀಸ್ ಮಾಡ್ಸೋದು ಅಂದ್ರೆ ಕಪ್ಪೆಗಳನ್ನ ತಕ್ಕಡಿಗೆ ಹಾಕಿದ ಹಾಗೆ ಅನ್ನೋ ಅಂಥ ಅನುಭವ ಆಗಿತ್ತು, ಕರ್ನಾಟಕ ದರ್ಶನ ತಯ್ಯಾರಿಯಲ್ಲಿ. ಸಾಮರ್ಥ್ಯ, ದೇಹಕಟ್ಟು ಇವನ್ನೆಲ್ಲ ಗಮನದಲ್ಲಿಟ್ಟಕೊಂಡು, ನಾನು, ಶ್ರೀದೇವಿ ಪಾತ್ರಧಾರಿಗಳನ್ನು ಆಯ್ಕೆ ಮಾಡಿದ್ವಿ. ಹೆಚ್ಚಿನವರನ್ನೆಲ್ಲ ಒಂದಿನ ಒಟ್ಟು ಹಾಕಿ ಯೋಜನೆಯನ್ನ ವಿವರಿಸಿ ಪಾತ್ರಗಳನ್ನೂ ಹಂಚಿದ್ದಾಯ್ತು. ಪ್ರತಿ ಒಂದು ರೂಪಕಕ್ಕೂ ಬೇರೆ ಬೇರೆ ವ್ಹಾಟ್ಸ್ಯಾಪ್ ಗುಂಪು ಮಾಡಿ, ಅವರ ಗುಂಪಿಗೆ ಮಾತ್ರ ಬೇಕಾದ ನೃತ್ಯದ ತುಣುಕನ್ನ ಕಳ್ಸಿದ್ವಿ. ಗುಂಪುಗಳಿಗೆ ಅವರವರ ತಾಲೀಮಿನ ಜವಾಬ್ದಾರಿ ಕೊಟ್ಟಿದ್ರಿಂದ ಮೇಲ್ವಿಚಾರಕರಾದ ನಮ್ಮಿಬ್ಬರಿಗೆ ಬಾಕಿ ಉಳಿದ ವೇಷ-ಭೂಷಣಗಳ ತಯಾರಿಗೆ ಸ್ವಲ್ಪ ಅವಕಾಶವಾಯ್ತು.
ಶ್ರೀ, ಹ: ಕರ್ನಾಟಕ ದರ್ಶನ, ದಸರಾ ಎರಡೂ ಕಾರ್ಯಕ್ರಮಗಳ ವೇಷ-ಭೂಷಣ, ಕತ್ತಿ, ಕಠಾರಿ, ಮನೆ, ಹಸು, ಗಾಡಿ ಹೀಗೆ ಉಪಯೋಗಿಸಿದ ಹಲವಾರು ವಸ್ತುಗಳನ್ನ ಕಲ್ಪಿಸಿ, ತಯಾರಿಸಿದ್ದು ನಮ್ಮಿಬ್ಬರ ಪರಿಶ್ರಮವಾದರೂ, ನಮ್ಮ ಗುಂಪಿನ ಸದಸ್ಯರ ಸಹಾಯವಿಲ್ದೇ ಅದೆಲ್ಲ ಸಾಧ್ಯವಾಗ್ತಿರಲಿಲ್ಲ.
ಹರೀಶ್: ಎಲ್ಲದಕ್ಕಿಂತ ಹೆಚ್ಚು ಸವಾಲೊಡ್ಡಿದ ಕಾರ್ಯ – ದಸರಾ ಆನೆಯನ್ನ ಸಾಕಾರಗೊಳಿಸಿದ್ದು. ಮೊದಲಲ್ಲಿ ನೆರಳಿನಾಟವಾಗಿ ಅಂಬಾರಿ-ಆನೆ ತೋರಿಸೋದು ಸುಲಭ ಅನ್ನಿಸ್ತು. ಆದರೆ ಅದು ಕಳೆ ಕಟ್ಟೋದಿಲ್ಲ ಅನ್ನಿಸ್ತು. ತಂತಿಗಳನ್ನೆಲ್ಲ ಕಟ್ಟಿ ಮಾಡ್ಬಹುದಲ್ಲಾ ಅಂತಾನೂ ವಿಚಾರ ಬಂತು. ಅಂತರ್ಜಾಲ ಜಾಲಾಡಿದಾಗ ನಾಟಕಕ್ಕೆ ಪ್ರಾಪ್ಸ್ ಮಾಡುವ ಕಂಪನಿ ಪತ್ತೆಯಾಯ್ತು. ಅವರಿಗೆ ದುಂಬಾಲು ಬಿದ್ದಾಗ, ದಶಕಗಳ ಹಿಂದೆ ಅವರೇ ಮಾಡಿದ್ದ ಆನೆ ವೇಲ್ಸ್ ನಲ್ಲಿರೋದು ಪತ್ತೆಯಾಯ್ತು. ಅಲ್ಲಿಗೆ ಹೋಗಿ ಜೀರ್ಣಾವಸ್ಥೆಯಲ್ಲಿದ್ದ ಆನೆ ಓಡಿಸಿಕೊಂಡು ಬಂದೆ. ಅದರ ಜೀರ್ಣೋದ್ಧಾರ ಮಾಡಿ, ಅದಕ್ಕೆ ಹಬ್ಬದ ಆನೆಯ ಕಳೆ ತಂದಾಯ್ತು.
ಆನೆ ಹಾಗೂ ಇತರ ರಂಗ ಪರಿಕರಗಳ ತಯ್ಯಾರಿಯಲ್ಲಿ ಹರೀಶ್
ಶ್ರೀ, ಹ: ಹೇಳ್ತಾ ಹೋದ್ರೆ, ಮುಗಿಯದ ಕಥೆ ಇದು. ಕಾರ್ಯಕ್ರಮ ಕೊಡೋ ದಿನದವರೆಗೂ ಒಂದಲ್ಲ ಒಂದು ತೊಂದರೆಗಳು, ಸಡ್ಡು ಹೊಡೆದು ನಿಂತ ಸಮಸ್ಯೆಗಳು… ಇವನ್ನೆಲ್ಲ ಎರಡು ತಿಂಗಳ ಕಾಲ ಹಗಲುರಾತ್ರಿ ಉಂಡು-ಹೊದ್ದು ಮಲಗಿದ್ದೇವೆ. ನಮ್ಮ ಕರೆಗೆ ಓಗೊಟ್ಟು, ಹೆಗಲಿಗೆ ನಿಂತು ಪ್ರೋತ್ಸಾಹಿಸಿದವರು ಲೋಕೇಶ್ ಗಂಗೊಳ್ಳಿಯಂಥ ಆತ್ಮೀಯರು.
ಕರೆದಾಗಲೆಲ್ಲಾ ಬಂದು, ಬೇಸರವಿಲ್ಲದೇ ತಾಲೀಮು ಮಾಡಿ ಪಾತ್ರವಹಿಸಿದ ಗೆಳೆಯ-ಗೆಳತಿಯರಿಲ್ಲದೆ ಈ ಕಾರ್ಯಕ್ರಮ ಯಶಸ್ವಿ ಆಗ್ತಿರಲಿಲ್ಲ. ನಮ್ಮ ಮಹಿಳಾ ಕೂಟ ‘ಅನ್ನಪೂರ್ಣೆ’ ಯಾಗಿರದಿದ್ದರೆ ತಾಲೀಮಿನ ಸಂಜೆಗಳಿಗೆ ರಸವಿರುತ್ತಿರಲಿಲ್ಲ. ಡಾರ್ಬಿ ಕನ್ನಡಿಗರ ಒಪ್ಪಂದದ, ಒಗ್ಗಟ್ಟಿನ ಉತ್ಸಾಹ-ಪ್ರೋತ್ಸಾಹ ಇಲ್ಲದೆ ಯು.ಕೆ ಕನ್ನಡಿಗರಲ್ಲಿ ಕರ್ನಾಟಕದ ಜಾನಪದ ಕಲೆ, ಸೊಗಡಿನ ಸುವಾಸನೆ ಹರಡೋಕ್ಕೆ ಆಗ್ತಿರಲಿಲ್ಲ. ಕನ್ನಡ ಬಳಗದ ಕಾರ್ಯಕ್ರಮದಲ್ಲಿ ಕಡೆ ಕಾಲದಲ್ಲಿ ಥಟ್ಟಂತ ಒಪ್ಕೊಂಡು ಅರುಣ್ ಅರಸ್ ಹಾಗೂ ಸಾಹಿಲ್ ಹೆಗ್ಡೆ ಆನೆಗೆ ಜೀವ ತರದೇ ಇದ್ದಿದ್ರೆ ಮಕ್ಕಳು ಮರಿಗಳೆಲ್ಲ ಬೆಕ್ಕಸ ಬೆರಗಾಗ್ತಿರಲಿಲ್ಲ. ಆ ಯುಗಾದಿ ಹಬ್ಬಕ್ಕೆ ಹಳ್ಳಿ ಮನೆ ಕಟ್ಟದೇ ಇದ್ದಿದ್ರೆ, ಕರ್ನಾಟಕ ದರ್ಶನಾನೂ ಇರ್ತಿರಲಿಲ್ಲ, ಮೈಸೂರ್ ದಸರಾನೂ ಇರ್ತಿರಲಿಲ್ಲ!
ರಾಮ್ ಶರಣ್ – (ಚಿತ್ರಗಳನ್ನು ಒದಗಿಸಿದ್ದು ಶ್ರೀದೇವಿ ಮತ್ತು ಹರೀಶ್)
ಕಿರು ವಿಡಿಯೋ/short video
“ಕರ್ನಾಟಕ ದರ್ಶನ” ಹಾಗೂ “ಮೈಸೂರು ದಸರಾ” ಹೇಗಿತ್ತು?
ಲಕ್ಷ್ಮೀನಾರಾಯಣ ಗುಡೂರ ಬರೆದ ವರದಿ
ಡಾರ್ಬಿ ದೀಪಾವಳಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಡಾರ್ಬಿ ಕನ್ನಡ ಸಂಘದ ಪ್ರಸ್ತುತಿಗಳಾದ “ಕರ್ನಾಟಕ ದರ್ಶನ” ಹಾಗೂ “ಮೈಸೂರು ದಸರಾ”ಗಳ ಬಗೆಗಿನ ನನ್ನ ಚಿಕ್ಕ ವರದಿ.
ಡಾರ್ಬಿ ಕನ್ನಡ ಸಂಘದ ಮೊದಲನೆಯ ಕಾರ್ಯಕ್ರಮವಾದ “ಕರ್ನಾಟಕ ದರ್ಶನ”ದ ಪ್ರಾರಂಭ ಹಳ್ಳಿಯ ಮನೆಯ ಸುಂದರ ಹಿನ್ನೆಲೆಯಲ್ಲಿ ಆಯಿತು. ಸಹಜಸುಂದರ ಮುಂಜಾವಿನ ಚಿತ್ರಣದೊಂದಿಗೆ ಹವ್ಯಾಸಿ ಕಲಾವಿದರು ಕಾರ್ಯಕ್ರಮವನ್ನು ಆರಂಭಿಸಿದರು. ಅದರೊಂದಿಗೆ ಹಳ್ಳಿಯ ದೈನಂದಿನ ಜೀವನದ ಮೊದಲ ಪುಟವನ್ನು ನಮ್ಮ ಮುಂದೆ ತಂದರು. ಕುಂಟಬಿಲ್ಲೆಯಂತಹ ಮಕ್ಕಳ ಆಟಗಳು ಮುಖ್ಯ ದೃಶ್ಯಗಳೊಂದಿಗೆ ಮಧ್ಯಮಧ್ಯ ಪಾಯಸದಲ್ಲಿಯ ಒಣಹಣ್ಣುಗಳಂತೆ ರುಚಿಯನ್ನು ಹೆಚ್ಚಿಸಿದವು.
ಕೋಲಾಟ, ಒರಳು-ಒನಕೆಗಳೊಂದಿಗೆ ಬತ್ತ ಕುಟ್ಟುವ ಮಹಿಳೆಯರು, ಹೊಲ ಉಳುವ, ಬಿತ್ತನೆಯ, ಸುಗ್ಗಿಕಾಲದ ಚಿತ್ರಣ, ಬಳೆಗಳನ್ನು ಮಾರುವ ಬಳೆಗಾರ, ಹೂಮಾರುವವಳು ಇತ್ಯಾದಿಗಳೊಂದಿಗೆ ಕರ್ನಾಟಕದ ಜಾನಪದ ಸೊಗಡನ್ನು ನೋಡುಗರಿಗೆ ಹಂಚಲಾಯಿತು. ನಂದಿಕೋಲು ಕುಣಿತ, ಕೋಲುಮಂಡೆ ಜಂಗಮರು ಮತ್ತು ಕೀಲುಕುದುರೆ ನೃತ್ಯಗಳು ಕರುನಾಡಿನ ಜಾನಪದ ನೃತ್ಯಗಳ ಪರಂಪರೆಯನ್ನು ನೆನಪಿಸಿದವು. ರಂಗದ ಮೇಲಿನ ದೃಶ್ಯಗಳಿಗೆ ತಕ್ಕಂತೆ ಸುಂದರವಾದ ಹಿನ್ನೆಲೆಯ ಹಾಡುಗಳನ್ನು ಹೊಂದಿಸಲಾಗಿತ್ತು. ಚೆಲ್ಲಿದರೊ ಮಲ್ಲಿಗೆಯಾ, ಬಳೆಗಾರನ ಹಾಡು, ಸುಗ್ಗಿಕಾಲ ಹಿಗ್ಗಿಬಂದಿತೊ, ಶುಭವಾಗತೈತಮ್ಮೊ (ಜನುಮದ ಜೋಡಿ ಚಿತ್ರದ ಗೀತೆ) ಮುಂತಾದ ಹಿನ್ನೆಲೆಯ ಹಾಡುಗಳು ಪ್ರೇಕ್ಷಕರನ್ನು ೮೦-೯೦ರ ದಶಕದ ಜನಪ್ರಿಯ ಹಾಡುಗಳ ಕಾಲಕ್ಕೆ ಕರೆದೊಯ್ದವು.
ಒಟ್ಟಿನಲ್ಲಿ ೩೨ ಬೇರೆ ಬೇರೆ ವಯೋಮಾನದ ಕಲಾವಿದರನ್ನೊಳಗೊಂಡ ಈ ಕಾರ್ಯಕ್ರಮ ತುಂಬಾ ಸುಂದರವಾಗಿ ಮೂಡಿಬಂದಿತು. ಎಲ್ಲಾ ಕಲಾವಿದರ, ನಿರ್ದೇಶಕರ ಪ್ರಯತ್ನ ಯಶಸ್ವಿಯಾಯಿತೆಂದೇ ಹೇಳಬೇಕು.
ಕಿರು ವಿಡಿಯೋ/short video
ಎರಡನೆಯ ಪ್ರಸ್ತುತಿ “ಮೈಸೂರು ದಸರಾ” – ಇದರಲ್ಲಿ ೬೪ ಕಲಾವಿದರಿದ್ದು, ಇಡೀ ದೃಶ್ಯಕಾವ್ಯವನ್ನು ಸೀಮ್ಲೆಸ್ (seamless) ಆಗಿ ಹೆಣೆಯಲಾಗಿತ್ತು. ನಿರ್ವಾಹಕರು ಮೊದಲೇ ಹೇಳಿದಂತೆ ತಂಡಕ್ಕೆ ದೊರೆತ ಸಮಯದ ಪರಿಧಿಯಲ್ಲಿ ಕೆಲವೇ ಜಿಲ್ಲೆಗಳನ್ನು ಪ್ರತಿನಿಧಿಸುವುದು ಸಾಧ್ಯವಿದ್ದು, ದೊರೆತ ಸಮಯವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಲಾಗಿತ್ತು. “ಕರ್ನಾಟಕ ದರ್ಶನ” ಮಾಡಿಸಿ, ಮುಂದಿನ, ಅದಕ್ಕೂ ದೊಡ್ಡ, ಕಾರ್ಯಕ್ರಮ ಹೇಗಿರಬಹುದೆಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿಸುವಲ್ಲಿ ಡಾರ್ಬಿ ಕನ್ನಡ ಸಂಘ ಯಶಸ್ವಿಯಾಗಿತ್ತು.
ಬೆಂಗಳೂರಿನ ಕರಗದೊಂದಿಗೆ ಆರಂಭವಾದ ದಸರಾ ಮೆರವಣಿಗೆ, ಕೊಡಗಿನ ಸಾಂಪ್ರದಾಯಿಕ ನೃತ್ಯ, ಮಂಗಳೂರಿನ ಮೀನುಗಾರರ ಹಾಡು, ಚಿತ್ರದುರ್ಗದ ಡೊಳ್ಳುಕುಣಿತ, ಉತ್ತರ-ಪಶ್ಚಿಮ ಕರ್ನಾಟಕದ ಲಾವಣಿ ಮತ್ತು ಹಾಸನದ ವೀರಗಾಸೆಗಳೊಂದಿಗೆ ಮುಂದುವರೆಯಿತು. ಆಯಾ ಜಿಲ್ಲೆಗಳ ಜಾನಪದ ನೃತ್ಯಗಳೊಂದಿಗೆ ಅಲ್ಲಲ್ಲಿಯ ಇತಿಹಾಸದ ಪುಟಗಳನ್ನು, ದಂತಕಥೆ, ಪುರಾಣಕಥೆಗಳನ್ನು ತಳುಕು ಹಾಕಿದ್ದು ಮನಸ್ಸಿಗೆ ಮೆಚ್ಚುಗೆಯಾಯಿತು. ಉದಾಹರಣೆಗೆ – ಚಿತ್ರದುರ್ಗದ ಒನಕೆ ಓಬವ್ವ, ಕಿತ್ತೂರಿನ ರಾಣಿ ಚೆನ್ನಮ್ಮ, ಮೈಸೂರಿನ ಚಾಮುಂಡಿ-ಮಹಿಷರ ಕಾಳಗ ಇತ್ಯಾದಿ. ಬೇಲೂರು – ಹಳೇಬೀಡಿನ ಬಾಲೆಯರ ಶಾಸ್ತ್ರೀಯ ನೃತ್ಯ, ಲಾವಣಿ ಮತ್ತು ಇವೆಲ್ಲದರ ಜೊತೆಗೆ ಸಂದರ್ಭಕ್ಕೆ ತಕ್ಕಂತೆ ಅಳವಡಿಸಿದ್ದ ಹಿನ್ನೆಲೆ ಸಂಗೀತ, ನೋಡುಗರ ಕಣ್ಣು – ಮನಸ್ಸಿಗೆ ಮುದವನ್ನು ನೀಡಿದವು.
ಕೊನೆಯಲ್ಲಿ ಮೈಸೂರಿನ ದಸರಾ ಮೆರವಣಿಗೆ, ಆನೆ (ಅರ್ಜುನ) – ತಾಯಿ ಭುವನೇಶ್ವರಿ ಮಂಟಪದ ಅಂಬಾರಿಯೊಂದಿಗೆ ಸಂಪೂರ್ಣವಾಯಿತು. ಆನೆಯ ಮುಂದೆ ಮೈಸೂರಿನ ಮಹಾರಾಜರೇ ಸ್ವತಃ ನಡೆದು ಬಂದು ಎಲ್ಲರನ್ನು ವಂದಿಸಿದರು!
ಈ ಎರಡೂ ನೃತ್ಯಗೀತಗಳು ಯುಕೆ ಕನ್ನಡ ಬಳಗ ಆಯೋಜಿಸಿದ್ದ ೨೦೧೬ರ ಡಾರ್ಬಿ ದೀಪಾವಳಿ ಮಿಲನದ ಸಾಂಸ್ಕೃತಿಕ ಕಾರ್ಯಕ್ರಮದ ಹೈಲೈಟ್ಗಳಲ್ಲಿ ಒಂದಾಗಿದ್ದವೆಂದರೆ ತಪ್ಪೇನಿಲ್ಲ. ಅದರ ಯಶಸ್ಸಿನ ಪಾಲು ಪ್ರತಿಯೊಬ್ಬ ಕಲಾವಿದರನ್ನು ಸೇರಿ, ನೃತ್ಯಗೀತಗಳ ಪರಿಕಲ್ಪನೆ ಮಾಡಿದ ಶ್ರೀದೇವಿ ವಲ್ಲೀಶ್ ಮತ್ತು ಹರೀಶ್ ರಾಮಯ್ಯ, ನಿರ್ದೇಶಕಿ ಶ್ರೀದೇವಿ ವಲ್ಲೀಶ್ ಮತ್ತು ತಾಂತ್ರಿಕ ನಿರ್ವಾಹಕ ಹರೀಶ್ ರಾಮಯ್ಯ ಅವರೆಲ್ಲರದೂ ಹೌದು. ಆನೆಯಲ್ಲಿ ಅಡಗಿ, ಕಣ್ಣಿಲ್ಲದ ಆನೆಯ ಕಾಲುಗಳಾಗಿ, ಭುವನೇಶ್ವರಿಯ ಅಂಬಾರಿ ಹೊತ್ತು ಪೂರ್ತಿ ಮೆರವಣಿಗೆಯನ್ನು ಮುಗಿಸಿದ ಸಾಹಿಲ್ ಹೆಗ್ಡೆ ಹಾಗೂ ಅರುಣ ಅರಸ್ ಅವರನ್ನು ಮರೆಯುವಂತಿಲ್ಲ.
ಅಷ್ಟು ದೊಡ್ಡ ಗುಂಪನ್ನು, ಸಣ್ಣ ಸಣ್ಣ ಗುಂಪುಗಳನ್ನಾಗಿ ವಿಂಗಡಿಸಿ, ಪ್ರತಿ ಗುಂಪಿನ ನೃತ್ಯ – ಸಂಗೀತಗಳ ಅಭ್ಯಾಸವನ್ನು ಬೇರೆ ಬೇರೆಯಾಗಿ ಮಾಡುವಂತೆ ನೋಡಿಕೊಂಡು, ನಂತರ ಅವೆಲ್ಲ ಬಿಡಿಭಾಗಗಳನ್ನು flat-pack furnitureನಂತೆ ಚೊಕ್ಕಟವಾಗಿ ಜೋಡಿಸಿ ರಂಗದ ಮೇಲೆ ಪ್ರಸ್ತುತ ಪಡಿಸುವುದು ಚಿಕ್ಕ ಕಾರ್ಯವೇನಲ್ಲ.
ಅಂದು ನಡೆದ ಕಾರ್ಯಕ್ರಮ ಹೆಸರಿಗೆ ದೀಪಾವಳಿಯದಾದರೂ, ಕಣ್ಮನ ಸೂರೆಗೊಂಡ ಕರುನಾಡನ್ನು ಎತ್ತಿಹಿಡಿವ ದೃಶ್ಯಗೀತಗಳಿಂದ ಆ ದಿನವನ್ನು ಹೊರನಾಡ ಕನ್ನಡಿಗರಿಗಾಗಿ “ನಾಡಹಬ್ಬ”ವನ್ನಾಗಿ ಮಾರ್ಪಡಿಸಿದ್ದವೆಂದು ಹೇಳಿದರೆ ತಪ್ಪೇನಿಲ್ಲ. ಈ ನಿಟ್ಟಿನಲ್ಲಿ ಯಶಸ್ವಿಯಾದ ಡಾರ್ಬಿ ಕನ್ನಡ ಸಂಘದ ಎಲ್ಲ ೬೪ ಉತ್ಸಾಹಿ ಕಲಾವಿದರು, ಶ್ರೀದೇವಿ ವಲ್ಲೀಶ್ ಹಾಗೂ ಹರೀಶ್ ರಾಮಯ್ಯ ಅವರಿಗೆ, ನೋಡಿ ಆನಂದಿಸಿದ ಪ್ರೇಕ್ಷಕರ ಪರವಾಗಿ ನನ್ನ ಅಭಿವಂದನೆಗಳು ಮತ್ತು ಅಭಿನಂದನೆಗಳು.