ಮರೆಯಲಾಗದ ಮಿತ್ರರು-ಟಾಮಿ ಮತ್ತು ಸೋಮು

ಟಾಮಿ

tommy picture

ನಾವಾಗ ಬೆಂಗಳೂರು ಸಮೀಪದ ಮಾಗಡಿ ತಾಲ್ಲೂಕಿನಲ್ಲಿದ್ದೆವು. ದಿವಂಗತ ತಂದೆ ಆಗ ಪುರಸಭಾ ಮುಕ್ಯಾಧಿಕಾರಿಯಾಗಿದ್ದ ಕಾರಣ ಸರ್ಕಾರೀ ಬಂಗಲೆಯಲ್ಲಿ ವಾಸ. ನಾಲ್ಕು ಮಕ್ಕಳಲ್ಲಿ ಎರಡನೆಯವಳಾದ   ನನ್ನ ಅಕ್ಕ ದಾಕ್ಷಾಯಣಿ ತುಂಬಾ ತುಂಟಿಯೆಂದೇ ಹೆಸರು ಪಡೆದಿದ್ದಳು. ಪಕ್ಕದಲ್ಲೇ ಇದ್ದ  ಟ್ರಾವೆಲ್ಲರ್ಸ ಬಂಗಲೋ (ಟಿ.ಬಿ.)ದ ಮೇಟಿ ಒಂದು ಹೆಣ್ಣು ನಾಯಿಯನ್ನು ಸಾಕಿದ್ದ.  ಟಿ.ಬಿ.ಯ ಬಳಿ ಯಾರೇ ಸುಳಿದರೂ  ಈ ನಾಯಿ  ಅತ್ಯಂತ ಚುರುಕಾಗಿ ತನ್ನ ಗಡಿಯನ್ನು ಕಾದುಕೊಂಡು ಬಹಳ ಹೆಸರು ಮಾಡಿತ್ತು.

ನಾವು ಮಾಗಡಿಯಲ್ಲಿದ್ದ ಕಾಲದಲ್ಲಿ ಈ  ಹೆಣ್ಣು ನಾಯಿ ಮರಿ ಹಾಕಿತು. ಈ ವೀರಮಾತೆಗೆ ಹುಟ್ಟಿದ ಮರಿಗಳೂ ಅಷ್ಟೇ ಚುರುಕಾಗಿದ್ದ ಕಾರಣ ನನ್ನಕ್ಕ ದಾಕ್ಷಾಯಣಿ  ಆಫೀಸರನ ಮಗಳೆಂಬ ಎಲ್ಲ ವಶೀಲಿ ಉಪಯೋಗಿಸಿ ಮೇಟಿಯ ಮೂಲಕ, ಆ ಅಮ್ಮನ ಕಣ್ಣು ತಪ್ಪಿಸಿ ಒಂದು ನಾಯಿ ಮರಿಯನ್ನು ಹಿಡಿದು ತಂದೇ ಬಿಟ್ಟಳು!  ಅವಳು ಹೀಗೆ ನಾಯಿ ಮರಿಯನ್ನು ಹಿಡಿದು ತಂದದ್ದು ಇದೇ ಮೊದಲೇನಾಗಿರಲಿಲ್ಲ!!

ತಾಯಿಯಿಂದ ಬೇರಾಗಿ ಅಪರಿಚಿತರ  ಮನೆ ಸೇರಿದಾಗ ಈ ಮರಿಗಳು ರಾತ್ರಿಯೆಲ್ಲ ಕುಂಯ್ ಗುಟ್ಟಿ , ಮನೆಯಲ್ಲೆಲ್ಲ ಉಚ್ಚೆ ಹೊಯ್ದು ಮಿಲಿಟರಿ ಆಫೀಸರಂತೆ ಕಟ್ಟು ನಿಟ್ಟಾದ ತಂದೆಯ ಕೋಪಕ್ಕೆ ಕಾರಣವಾಗಿದ್ದವು. ಅಕ್ಕನಿಗೆ ಮತ್ತು ಅವಳ ಜೊತೆ ಸರೀಕಾಗಿರುತ್ತಿದ್ದ ನಮಗೆಲ್ಲ ಸರಿಯಾಗಿ ಬಯ್ಗುಳಗಳಾಗುತ್ತಿದ್ದವು .  “ಎಲ್ಲಿಂದ ತಂದಿರೋ ಅಲ್ಲಿಗೇ ಬಿಟ್ಟು ಬನ್ನಿ…” ಎಂಬ ಅಣತಿ, ತಂದೆಯಿಂದ ಹೊರಟು, ಅತ್ತೂ ಕರೆದು ಹಿಂತಿರುಗಿ  ಬಿಟ್ಟು , ಪೆಚ್ಚು ಮೋರೆ ಹೊತ್ತು ವಿಧಿಯಿಲ್ಲದೆ ಮರಳಿದ್ದೆವು. ಹೀಗಾಗಿ ಈ ಬಾರಿ ಮೇಟಿಯ ಮನೆಯ  ನಾಯಿ ಮರಿಯನ್ನು ಉಳಿಸಿಕೊಳ್ಳಲು ನಾವೆಲ್ಲ ಪಣ ತೊಟ್ಟಿದ್ದೆವು.

ಮೆತ್ತನೆ ಗೋಣೀಚೀಲದ ಹಾಸಿಗೆ ಮಾಡಿದ್ದೆವು. ಅದನ್ನು ನಮ್ಮ ಹಾಸಿಗೆಯ ಸಮೀಪಕ್ಕೇ ಇಟ್ಟುಕೊಂಡು, ತೆಂಗಿನ ಚಿಪ್ಪಿನಲ್ಲಿ ಹಾಲಿಟ್ಟಿದ್ದೆವು. ಆ ಕಾಲದಲ್ಲಿ ಅದೇಕೋ ಏನೋ ನಾಯಿ -ಬೆಕ್ಕುಗಳಿಗೆ ಇಂಗ್ಲೀಷ್ ಹೆಸರಿಡುವ ರೂಢಿಯಿದ್ದ ಕಾರಣ  ಈ ಗಂಡುಮರಿಗೆ  ’ಟಾಮಿ’ ಎಂದು ನಾಮಕರಣ ಮಾಡಿದ್ದೆವು. ಆ ಮರಿಯನ್ನು ನೆಲಕ್ಕೇ ಬಿಡದೆ ಕೈಯಿಂದ ಕೈಗೆ ರವಾನಿಸಿ ಎಲ್ಲರೂ ಮುದ್ದು ಮಾಡಿ ಅದರಿಂದ ಮೈ-ಕೈ ಮುಖಗಳನ್ನೆಲ್ಲ ನೆಕ್ಕಿಸಿಕೊಂಡು ತಂದೆ ಆಫೀಸಿನಿಂದ ಹಿಂತಿರುಗಿ ಬರುವುದನ್ನೇ  ಅದೈರ್ಯದಿಂದ ಕಾಯತೊಡಗಿದೆವು. ಕಾಫಿ, ಮುಖಾರ್ಜನೆ, ಊಟ ಎಲ್ಲ ಮುಗಿಯುವವರೆಗೆ ಟಾಮಿಯನ್ನು ಕಷ್ಟ ಪಟ್ಟು ಮುಚ್ಚಿಟ್ಟು ನಂತರ ತಂದೆಯ ಮುಂದೆ ಅನಾವರಣ ಮಾಡಿದೆವು.ಅದೇಕೋ ಏನೋ ಅವರೇನೂ ಹೇಳಲಿಲ್ಲ! ಇನ್ನು ಉಳಿದದ್ದು ಅಪ್ಪಾಜಿಯ ಜೊತೆಗಿನ ಟಾಮಿಯ ಮೊದಲ ರಾತ್ರಿ!!

ಚೆನ್ನಾಗಿ ಹಿಚುಕಿ ಹಣ್ಣು ಮಾಡಿದ್ದರಿಂದಲೋ, ಹೆಚ್ಚಾಗಿ ಹಾಲು ಕುಡಿಸಿದ್ದರಿಂಲೋ, ಬೆಚ್ಚಗಿನ ಮೆತ್ತೆಯಿಂದಲೋ ಟಾಮಿ ಯಾರನ್ನೂ ಎಚ್ಚರಿಸದೆ  ಮೊದಲ ರಾತ್ರಿಯನ್ನು ಕಳೆದು ಪರೀಕ್ಷೆಯಲ್ಲಿ ಉತ್ತೀರ್ಣನಾಗಿಬಿಟ್ಟಿತ್ತು. ನಮಗೆ ನಾಯಿಯನ್ನು ಸಾಕಲು ಪರವಾನಗಿ ಸಿಕ್ಕಿತ್ತು!

ಇಡೀ ದಿನ ಟಾಮಿಯ ಚಾಕರಿ ಅಮ್ಮನದೇ ಆದರೂ ಶಾಲೆಯಿಂದ ಬಂದ ನಂತರ  ಟಾಮಿ ನಮ್ಮೆಲ್ಲರ ಕಣ್ಮಣಿಯಾಯ್ತು. ಮೊದಲ ಆರು ತಿಂಗಳು ಟಾಮಿ ಎತ್ತರಕ್ಕೆ ಬೆಳೆದು ಅದರಮ್ಮನಂತೇ ಚೂಪು ಕಿವಿಯ, ಬಿಳಿ ಉದ್ದದ ನಾಮದ, ಕರಿಯ ಮೂಗಿನ ತೀಕ್ಷ್ಣಮತಿ ನಾಯಿಯಾಗಿತ್ತು. ಆದರೆ ಆಗಬಾರದ್ದು ಆಗಿಹೋಯಿತು!!

ಒಂದು ದಿನ ಟಾಮಿಯ  ದೇಹದ ಹಿಂಬಾಗಕ್ಕೆ ಲಕ್ವ ಹೊಡೆದು ಬಿಟ್ಟಿತು. ಹಿಂದಿನ ಎರಡೂ ಕಾಲುಗಳ ಸ್ವಾದೀನ ತಪ್ಪಿಹೋಯಿತು.ಯಾವ ವೈದ್ಯರಿಂದಲೂ ಚಿಕಿತ್ಸೆ ದೊರೆಯದಾಯಿತು.

ಆದರೆ ಟಾಮಿಯ ಚೈತನ್ಯ ಅದರ ದುರ್ಬಲ ವಿಧಿಗಿಂತ ಶಕ್ತಿಯುತವಾಗಿತ್ತು. ಮೊದಲು ಹಿಂದಿನ ದೇಹವನ್ನು ಎಳೆದೆಳೆದು ತೆವಳುತ್ತಿದ್ದ ಟಾಮಿ, ನಿಧಾನವಾಗಿ  ಸೊರಟಿಕೊಂಡ ಒಂದು  ಹಿಂದಿನ ಕಾಲನ್ನು ಗೂಟದಂತೆ ಊರಿ  ಮುಂದಿನೆರಡು ಕಾಲು ಮತ್ತು ಹಿಂದಿನ ಒಂದು  ಗೂಟದ ಸಹಾಯದಿಂದ ನಡೆಯುವುದನ್ನು ಮತ್ತೆ ಕಲಿಯಿತು. ಎಲ್ಲಕ್ಕೂ ಅಮ್ಮನದೇ ಆರೈಕೆ. ಅದೇ ಸಮಯಕ್ಕೆ ತಂದೆಗೆ ತುಮಕೂರಿಗೆ ವರ್ಗವಾಯಿತು.

“ಈ ಕುಂಟನಾಯಿ ಯಾಕೆ ಬೇಕು..?ಹೋಗಿ ಅದನ್ನು ವೆಟರಿನರಿ ಆಸ್ಪತ್ರೆಯ ಬಳಿ ಕಟ್ಟಿಬನ್ನಿ, ಯಾರಾದರೂ ಒಂದಿಷ್ಟು ಬ್ರೆಡ್ಡು ಹಾಕುತ್ತಾರೆ..” ಅಂತ ತಂದೆಯ   ಕಟ್ಟಾಗ್ಞೆಯಾಯ್ತು. ನಮಗೆ ಅಳುವೋ ಅಳು! ಟಾಮಿಗೆ ತಿನ್ನಿಸಿ, ಕುಡಿಸಿ, ಮುತ್ತಿಟ್ಟು ಅತ್ತಿದ್ದಕ್ಕೆ ಅದೂ ವಿಹ್ವಲವಾಗಿ ನಮ್ಮನ್ನೆಲ್ಲ ನೆಕ್ಕಿ ತನಗೆ ತಿಳಿಯಿತೇನೋ ಎಂಬಂತೆ ಆಡಿತು. ನೌಕರರು ಹೋಗಿ  ಟಾಮಿ ಯನ್ನು ಕಟ್ಟಿಬಂದರು. ಮುಂದಿನ ನಾಯಿಗಿರಲಿ ಎಂದು ಅದರ ಚೈನು ಮತ್ತು ಕೊರಳಿನ ಬೆಲ್ಟ್ ನ್ನು ಬಿಚ್ಚಿ ನಮಗೆ ಹಿಂತಿರುಗಿಸಿದರು. ಟಾಮಿಯನ್ನು  ಹುರಿ ದಾರದಲ್ಲಿ ಕಟ್ಟಿಬಂದಿದ್ದರು.

ಮರುದಿನ ಲಾರಿಗೆ ಸಾಮಾನು ತುಂಬುತ್ತಿದ್ದೆವು. ನಮ್ಮ ಹೃದಯದಲ್ಲೆಲ್ಲ ಸ್ಮಶಾನ ಮೌನ! ತಂದೆಗೆ ಯಾಕೆ ವರ್ಗವಾಗಬೇಕಿತ್ತೋ ಅಂತ ಹಿಡಿ-ಹಿಡಿ ಶಾಪ ಹಾಕಿದೆವು. ಆದರೆ ಮಕ್ಕಳಾಗಿ ನಾವು ಅಸಹಾಯುಕರಾಗಿದ್ದೆವು.

ಯಾವ ಮಾಯೆಯಲ್ಲಿ ಇದು ಟಾಮಿಯ ಅಂತರಾಳಕ್ಕೆ ತಿಳಿಯಿತೋ ಗೊತ್ತಿಲ್ಲ. ಕಟ್ಟಿದ್ದ ದಾರವನ್ನು ಹಲ್ಲುಗಳಿಂದ ತುಂಡರಿಸಿ. ವೆಟರಿನರಿ ಆಸ್ಪತ್ರೆಯ ಸಿಬ್ಬಂದಿಯ ಕಣ್ಣು ತಪ್ಪಿಸಿ ಮನೆಯ ದಾರಿಯನ್ನು ಮೂಸಿ, ಮೂಸಿ ಒಂದೂವರೆ ಮೈಲು ಕುಂಟುತ್ತ  ಹಿಂತುರಿಗಿ ಬಂದು ಬಿಟ್ಟಿತ್ತು!! ಈಗದನ್ನು ತಂದೆಯ ಕಣ್ತಪ್ಪಿಸಿ ಲಾರಿಗೆ ಹೇಗಾದರೂ ತುಂಬಿ ಬಿಟ್ಟರೆ, ತುಮಕೂರು ಬಂದ ನಂತರ ಏನಾದರೂ ಮಾಡಿ ಟಾಮಿಯನ್ನು ಮತ್ತೆ ನಮ್ಮದನ್ನಾಗಿ ಮಾಡಿಕೊಳ್ಳಬಹುದಿತ್ತು.

ನಮಗಾದ ಸಂತೋಷ, ಸಂಭ್ರಮ, ಸೋಜಿಗಕ್ಕೆ ಲೆಕ್ಕವೇ ಇಲ್ಲ. ಆದರೆ ಅದನ್ನೆಲ್ಲ ಮುಚ್ಚಿಟ್ಟು ಆಳುಗಳಿಗೆ ಕಣ್ಸನ್ನೆ, ಬಾಯ್ಸನ್ನೆಯಲ್ಲಿ ತೆಪ್ಪಗಿರಲು ಹೇಳಿ, ಟಾಮಿಯನ್ನು ಸಾಮಾನುಗಳ ಸಂದಿಯಲ್ಲಿ ತುಂಬಿಯೇ ಬಿಟ್ಟೆವು. ಲಾರಿಯ ಕ್ಯಾಬಿನ್ನಿನಲ್ಲಿ ಕುಳಿತಿದ್ದ ತಂದೆಗೆ ಇದ್ಯಾವುದರ ಅರಿವೂ ಇರಲಿಲ್ಲ. ಅಣ್ಣ ಮತ್ತು ಅಕ್ಕ ಬಹಳ ವಿಧೇಯ ಮಕ್ಕಳಂತೆ ಲಾರಿಯ ಹಿಂಭಾಗದಲ್ಲೇ ಕುಳಿತು ಬರುತ್ತೇವೆಂದು ಹೇಳಿದಾಗ, ಜೊತೆಗೆ ಆಳುಗಳೂ ಇದ್ದ ಕಾರಣ ತಂದೆ ತಕರಾರು ಮಾಡಲಿಲ್ಲ. ನನಗಾಗ ಕೇವಲ ಐದು ವರ್ಷ.

ಲಾರಿ ತುಮಕೂರು ತಲುಪಿದ ನಂತರ ತಂದೆಯ ಕೋಪದ ಅರಿವಿದ್ದ ನೌಕರರು, ಟಾಮಿಯನ್ನು ಗೌಪ್ಯವಾಗಿ ಇಳಿಸಿ ಕೊಟ್ಟರು. ಅದನ್ನು ಹೊಸ ಮನೆಯ ಹಿತ್ತಿಲ್ಲಲ್ಲಿ ಬಚ್ಚಿಟ್ಟೆವು. ನಮ್ಮ  ಅವಸ್ಥೆಯನ್ನು ಗಮನಿಸುತ್ತಿದ್ದ ನೌಕರರು ತಂದೆಗೆ ಏನೂ ಹೇಳದೆ, ಕೊನೆಗೂ ಆಫೀಸರನಿಗೆ ಚಳ್ಳೆ ಹಣ್ಣು ತಿನ್ನಿಸಿದ ಖುಷಿಯಿಂದಲೋ ಏನೋ ಕಿರು ನಗೆ ನಗುತ್ತಲೇ  ಕೈ ಬೀಸಿ ಮರಳಿ ಹೋದರು!! ಟಾಮಿ ನಮ್ಮನ್ನು ಹುಡುಕಿಕೊಂಡು,ದಾರ ಕಡಿದುಕೊಂಡು ಓಡಿ ಬಂದದನ್ನು  ಅಮ್ಮ ತಂದೆಗೆ ನಿಧಾನವಾಗಿ ಹೇಳಿ ಮನಸ್ಸು ಕರಗಿಸಿದರು. ಟಾಮಿ ನಮ್ಮೊಡನೆ ಉಳಿಯಿತು.

ಈ ಹೊಸ ಊರಿನಲ್ಲಿ  ಟಾಮಿ ಕುಂಟನಾದರೂ ಎಂಟೆದೆಯ ಭಂಟನೆಂಬ ಹೆಸರು ಗಳಿಸಿತು. ಮನೆಯ ಮುಂಭಾಗದಲ್ಲಿದ್ದ ತಂದೆಯ  ಆಫೀಸು  ಕೋಣೆಗೆ ಅವರನ್ನು ಹುಡುಕಿಕೊಂಡು ಯಾರೇ ಬರಲಿ , ಟಾಮಿ ಅವರ ಮುಂದೆ ಕಾವಲು ಕೂರುತ್ತಿತ್ತು.ಅವರು ಅಲ್ಲಿದ್ದ  ನ್ಯೂಸ್ ಪೇಪರಿಗೆ ಕೈ  ಹಾಕಿದರೆ ಸುಮ್ಮನಿರುತ್ತಿದ್ದ  ಟಾಮಿ, ಅವರು ಟೇಬಲ್ಲಿನ ಮೇಲಿನ ಪೆನ್ನಿಗೆ ಕೈ ಚಾಚಿದರೆ ವಸಡನ್ನು ಮೇಲೇರಿಸಿ ತನ್ನ ಉದ್ದ ಕೋರೆಹಲ್ಲನ್ನು ಬಿಚ್ಚಿ ಗುರ್ ರ್ ರ್ … ಎಂದು ಶುರುಮಾಡಿಬಿಢುತ್ತಿತ್ತು,  ಎಷ್ಟೇ ಹಸಿವಾದರೂ ಅಪ್ಪಿ ತಪ್ಪಿಯೂ ಅಡಿಗೆ ಮನೆಗಯೊಳಗೆ ಕಾಲಿಡುತ್ತಿರಲಿಲ್ಲ. ವಸಿಲ ಬಳಿಯೇ ಕುಳಿತು ಕುಂಯ್ ಗುಡುತ್ತಿತ್ತು. ಜಮೀನಿನಿಂದ ಬಂದ ಕಡಲೇಕಾಯಿಯ ರಾಶಿಯೇ ಬಿದ್ದಿದ್ದರೂ ಅದರಿಂದ ಒಂದು ಕಾಯಿಗೂ ಬಾಯಿ ಹಾಕುತ್ತಿರಲಿಲ್ಲ. ನಾವಾಗಿ ಸುಲಿದು ಮುಂದೆ ಹಾಕಿ ತಿನ್ನು ಎನ್ನುವವರೆಗೆ ಮುಟ್ಟುತ್ತಿರಲಿಲ್ಲ. ನಮ್ಮ ಬೀದಿ, ಕೇರಿಯ ಎಲ್ಲ ನಾಯಿಗಳ ಮೇಲೂ ಕಾಲ್ಕೆರೆದು ಜಗಳವಾಡಿ, ಹಲವಾರು ಬಾರಿ ರಕ್ತ-ಸಿಕ್ತವಾಗಿ ಮನೆಗೆ ಮರಳಿದರೂ ಮರುದಿನ ತನ್ನ ಕೆಚ್ಚನ್ನು ಮತ್ತೆ ತೋರಿಸುತ್ತಿತ್ತು. ಅದರ ಮನದಲ್ಲಿದ್ದ ಚೈತನ್ಯ ದೇಹದ ಊನವನ್ನೂ ಮೀರಿ ಕುಣಿಯುತ್ತಿತ್ತು. ಅಗೆದು ಬಿಟ್ಟಿರುತ್ತಿದ್ದ ಪಾಯದ ಗುಂಡಿಗಳನ್ನೂ, ದೊಡ್ಡ ಚರಂಡಿಗಳನ್ನೂ ನೆಗೆಯಲು ಹೋಗಿ ಹಲವಾರಿ ಬಾರಿ ಬಿದ್ದು ಬಿಡುತ್ತಿತ್ತು. ಅದನ್ನು ಎತ್ತು ತಂದು ,ಸ್ನಾನ ಮಾಡಿಸಿ ಬಿಸಿಲಲ್ಲಿ ಒಣಗಿಸುತ್ತಿದ್ದೆವು. ಸಸ್ಯಹಾರಿಗಳಾದ ನಮ್ಮ ಮನೆಯಲ್ಲಿ ಅದಕ್ಕೆ ನಮ್ಮದೇ ಆಹಾರ ಸಿಗುತ್ತಿತ್ತು. ಒಂದೆರಡು ಮನೆಗಳ ನಂತರವಿದ್ದ ಅಯ್ಯಂಗಾರರ ಬೇಕರಿಯಲ್ಲಿ ಬ್ರೆಡ್ಡು ಬೇಯುತ್ತಿದ್ದರೆ ಟಾಮಿಯ ಬಾಯಲ್ಲಿ ಜೊಲ್ಲು ಸುರಿಯುತ್ತಿತ್ತು. ಹೀಗಾಗಿ ನಿಯಮಿತವಾಗಿ ಟಾಮಿಗೆ ಬ್ರೆಡ್ಡು ಹಾಕಿಸುತ್ತಿದ್ದೆವು. ಟಾಮಿಯ ನಿಯತ್ತನ್ನು  ಪರೀಕ್ಷೆಮಾಡಲು ಅಯ್ಯಂಗಾರರ ಮಾಲೀಕ ಬಹಳ ಪ್ರಯತ್ನ ಮಾಡುತ್ತಿದ್ದ. ಆತ ಟಾಮಿಗೆ ಏನೇ ಎಸೆದರೂ, ಟಾಮಿಯ ಬಾಯಿಂದ ಜೊಲ್ಲು ತಟತಟನೆ ಸುರಿಯುತ್ತಿದ್ದರೂ ನಾವು ತಿನ್ನು ಎನ್ನುವವರೆಗೆ ಮುಟ್ಟುತ್ತಿರಲಿಲ್ಲ. ಅವನಿಗೇ ಪ್ರತಿ ಬಾರಿ ಸೋಲು!!

ಇದಕ್ಕೆಲ್ಲ ನಾವು ಟಾಮಿಗೆ ನೀಡಿದ್ದ ತರಭೇತಿ ಸೊನ್ನೆ. ತಾನಾಗಿ ಈ ಎಲ್ಲ ಕಟ್ಟಳೆಗಳನ್ನು ಟಾಮಿ ಯೇ ಹಾಕಿಕೊಂಡಿತ್ತು!  ಪ್ರಾಣಿಗಳಿಗೆ ಪ್ರಿನ್ಸಿಪಲ್ಸ್ ಇರುವುದಿಲ್ಲವೆನ್ನುವವರಿಗೆ ಟಾಮಿಯ ನಡತೆ ವ್ಯತಿರಿಕ್ತವಾಗಿತ್ತು. ಹೀಗಾಗಿ ’ಕುಂಟ ನಾಯಿಯ ಮನೆಯವರು ’ ಎಂದು ನಮ್ಮನ್ನು ಹಲವರು ಗುರುತಿಸುತ್ತಿದ್ದುದು ಗೌರವದಿಂದಲೇ ಹೊರತು ಅಸಡ್ಡೆಯಿಂದಲ್ಲ!! ಟಾಮಿಯ ಪ್ರತಾಪಗಳು,ನಿಯತ್ತು, ಕೋಪ,ಸ್ವಾಮಿನಿಷ್ಟೆಯ ಬಗ್ಗೆ ಬರೆಯುವುದಾದರೆ ಅದು ಇನ್ನೊಂದು ಲೇಖನವೇ ಆಗುತ್ತದೆ.

ಹೀಗೆ 12 ವರ್ಷ ಬದುಕಿದ್ದ ಟಾಮಿಯ ಕೊನೆಯ ವರ್ಷದಲ್ಲಿ ಅದಕ್ಕೆ ಒಂದಲ್ಲ ಎಂದು ಎರಡು ಬಾರಿ ಮತ್ತೆ-ಮತ್ತೆ ಲಕ್ವ ಹೊಡೆಯಿತು. (ಪ್ಯಾರಲಿಸಿಸ್  ಸ್ಟ್ರೋಕ್) ಓಡಾಡುವುದಿರಲಿ, ತಿಂದದ್ದು ಏನೂ ಅದಕ್ಕೆ ದಕ್ಕದಾಯಿತು. ವೈದ್ಯರು ಕೈ ಚೆಲ್ಲಿದರು ಯಾವ ಮನುಷ್ಯ ರೋಗಿಗಿಂತಲೂ ಹೆಚ್ಚಿನದಾಗಿ ಅದಕ್ಕೆ ಅಮ್ಮನ  ಆರೈಕೆ ನಡೆಯಿತು. ಟಾಮಿಗೂ ಅದರ  ಅರಿವಿತ್ತು. ತಾಯಿಯನ್ನು ನೋಡುವ ರೀತಿಯಲ್ಲೇ ಅವರೊಡನೆ ವರ್ತಿಸುತ್ತಿತ್ತು.ಅದರ ಯಾತನೆಯನ್ನು ನೋಡಲಾಗದ ನಾವು ಕೊನೆಗೆ ಟಾಮಿಗೆ ದಯಾಮರಣ ನೀಡಲು ನಿರ್ಧರಿಸಿದೆವು. ಇದೊಂದು ಕಠಿಣ ನಿರ್ದಾರವಾಗಿತ್ತು.

ಈ ಬಾರಿ ನಾನು ಮತ್ತು ನನ್ನ ಅಣ್ಣ ಟಾಮಿಯನ್ನು ವೆಟರಿನರಿ ಆಸ್ಪತ್ರೆಗೆ ಕರೆದೊಯ್ದೆವು. ಆ ದಿನದ ಟಾಮಿಯ ಕಣ್ಣಿನ ಭಾವಗಳು ಇವತ್ತೂ ನನ್ನಲ್ಲಿ ಅಚ್ಚಳಿಯದೆ ಉಳಿದಿವೆ! ವೈದ್ಯರು ನಿರ್ದಾಕ್ಷಿಣ್ಯವಾಗಿ  ಸಾವಿನ ಇಂಜೆಕ್ಷನ್ನನ್ನು ಚುಚ್ಚಿ ಹೋದ ಬಹುಕಾಲದ ನಂತರವೇ ಟಾಮಿ ಸತ್ತಿತು. ಟಾಮಿಯ ದೇಹವನ್ನು ಹೊತ್ತು ತಂದು ನಮ್ಮ ಮನೆಯ ತೆಂಗಿನ ಮರದಡಿಯೇ ಹೂತೆವು. ಟಾಮಿಯ ಯಾತನಾಮಯ ಮರಣದ ಕಾರಣ ಬಹುಕಾಲ ಮತ್ತೆ ನಾವು ನಾಯನ್ನು ಸಾಕಲಿಲ್ಲ.

ಹಲವು ವರ್ಷಗಳ ನಂತರ ’ಮಿಂಟಿ’ ಎನ್ನುವ  ನಾಯನ್ನು ಸಾಕಿದೆವು. ಟಾಮಿಯ ಪಾದ ದೂಳಿಯಷ್ಟೂ ಗುಣಗಳಿಲ್ಲದ ಈ ನಾಯಿ ಯಾರ ಮನವನ್ನೂ ಗೆಲ್ಲಲಿಲ್ಲ. ನಮ್ಮನ್ನು ಕಡೆಗಣಿಸಿ  ಮನೆಗೆ ಬಂದ ಅತಿಥಿಗಳ ಹಿಂದೆ ಬಾಲ ಅಲ್ಲಾಡಿಸುತ್ತ ಓಡುತ್ತಿದ್ದ  ಈ ನಾಯಿ ಸೋಮಾರಿಯೂ,ಮಂದಮತಿಯೂ ಆಗಿ ಬೇಗನೆ ನಮ್ಮ ಮನದಿಂದಲೂ, ಮನೆಯಿಂದಲೂ ದೂರ ಸರಿಯಿತು.

ನಾಯಿಗಳಿಗೂ ವ್ಯಕ್ತಿತ್ವವಿರುತ್ತದೆ. ತನ್ನ ಅಂಗ ವಿಕಲತೆಯಿಂದ ಟಾಮಿ ಚುರುಕಾಯಿತೋ, ನಮ್ಮಲ್ಲಿ ಅಪರಿಮಿತ ವಿಶ್ವಾಸವಿಟ್ಟಿತೋ ಗೊತ್ತಿಲ್ಲ. ಇಡೀ ಮನೆಮಂದಿಯ ಮನಸ್ಸಿನಲ್ಲೆಲ್ಲ ಇವತ್ತು ಉಳಿದಿರುವುದು ಒಂದೇ ನಾಯಿ. ಅದು ಪ್ರೀತಿ ಪಾತ್ರ, ಸ್ವಾಮಿನಿಷ್ಟ ಅಪರಿಮಿತ ಪ್ರೀತಿಯನ್ನು ನಮಗೆ ನೀಡಿದ ಟಾಮಿ ಮಾತ್ರ !

-ಡಾ. ಪ್ರೇಮಲತ ಬಿ.

Read More »

ಬಾಲ್ಯದ ಆಟ,ಹುಡುಗಾಟದ ಸವಿನೆನಪು –ಅರುಣ ಹಾಲಪ್ಪ

 

ಹೊಸ ಪರಿಚಯ     

IMG_1554
ಅರುಣ ಹಾಲಪ್ಪ    

ಅರುಣಾ  ಮೂಲತಃ  ಶಿವಮೊಗ್ಗದವರು . ಕಳೆದ ೧೦ ವರ್ಷಗಳಿಂದ U K ಯ  ಶೆಫೀಲ್ಡ್ ನಗರದಲ್ಲಿ  ವಾಸವಾಗಿದ್ದಾರೆ. ಇಂಜಿನಿಯರಿಂಗ್ ಪದವಿ ಮುಗಿಸಿದ್ದು ಶಿವಮೊಗ್ಗದಲ್ಲಿ.ನಂತರ ಬೆಂಗಳೂರಿನಲ್ಲಿ ಸಾಫ್ಟ್ವೇರ್  ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಈಗ ಶೆಫೀಲ್ಡ್  ನ Sheffield Futures ಸಂಸ್ಥೆಯಲ್ಲಿ  Project Admin  ಆಗಿ ಕೆಲಸ ಮಾಡ್ತಾ ಇರುವ ಅರುಣಾ ಅವರಿಗೆ ಕನ್ನಡ ಭಾಷೆಯ ಬಗ್ಗೆ ಯಾವಾಗಲು ಅಭಿಮಾನ ಜಾಸ್ತಿ.

ಕನ್ನಡ ದಲ್ಲಿ  ಅವರು  ಬರೆದಿರುವ ಮೊದಲ ಲೇಖನ ಇದು .  ಮೊದಲ ಪ್ರಯತ್ನದಲ್ಲೆ ಉತ್ತಮ ಲೇಖನವನ್ನು ಕನ್ನಡದಲ್ಲಿ ಬರೆದು ಚಿತ್ರ ಸಮೇತ ಕಳಿಸಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು. ಬರಹದಲ್ಲಿ ಅವರಿಗೆ ಉಜ್ವಲ ಭವಿಷ್ಯವನ್ನು ಕೋರೋಣ. ಅನಿವಾಸಿ ವೇದಿಕೆ  ಈ ಬಗೆಯಲ್ಲಿ ಕನ್ನಡ ಲೇಖಕ/ಕಿ ಯರನ್ನು ಸೃಷ್ಟಿಸಬಲ್ಲದಾದರೆ ಅದಕ್ಕಿನ್ನ ಸಾರ್ಥಕತೆ ಬೇರೊಂದಿಲ್ಲ–ಸಂ

 

 


ಅವತ್ತು ಒಂದು ದಿನ ಹೀಗೆ ತರಕಾರಿ ತರೋಕೆ ಹೋಗಿದ್ದೆ, ಒಂದು ಫೋನ್ ಕಾಲ್ ಬಂತು, ಯಾರಪ್ಪಾ  ಅಂತ ಫೋನ್ ರಿಸೀವ್ ಮಾಡಿದೆ .ಪ್ರೇಮಲತಾ ಕೇಳಿದ್ರು “ಅನಿವಾಸಿ” ಗೆ ಒಂದು ಬರಹ ಬರೀತೀರಾ ಅಂತ. ಹೂಂ ಅಂತ ಏನೋ ಅಂದೆ, ಆದ್ರೆ ಏನಪ್ಪಾ ಬರೀಬೇಕು ಅನ್ನೋ ಚಿಂತೆ ಶುರು ಆಯಿತು. ಯೋಚನೆ ಮಾಡಿ ಮಾಡಿ ಏನೂ  ಹೊಳೀತಿಲ್ಲ ಏನಪ್ಪಾ ಮಾಡೋದು ಅಂತ ಇದ್ದಾಗ , ನನ್ನ ಸ್ನೇಹಿತರು ಯಾರೋ  ಬುಗುರಿ ತಂದು ಕೊಟ್ಟಿದ್ರು ,ಅದನ್ನ ಕೈಯಲ್ಲಿ  ಹಿಡ್ಕೊಂಡು ‘ಅಮ್ಮ ಇದನ್ನ ಹೇಗೆ ಆಡೋದು’ ಅಂತ ನನ್ನ ಮಗ ಶಿವಾಂಶ್ ಕೇಳಿದ…..ಬುಗುರಿ ಅಂದ ತಕ್ಷಣ ಹೊಳೆದಿದ್ದು ನನ್ನ ಅಜ್ಜಿ ಮನೆ ಅನುಭವಗಳು ಹಾಗು ನನ್ನ ಬಾಲ್ಯದ ಆಟಗಳು.ನಾನು ಚಿಕ್ಕವಳು ಇದ್ದಾಗ ಆಡ್ತಾ ಇದ್ದ ಆಟಗಳ ಹಾಗೂ ಅವುಗಳ ಲಾಭಗಳ ಬಗ್ಗೆ ಒಂದು ಚಿಕ್ಕ ವಿಶ್ಲೇಷಣೆ ಬರಿಯೋಣ ಅಂತ ಅನ್ಸ್ತು.

ಆಹಾ ಎಂಥಾ ದಿನಗಳು ಅವು ,ನೆನಸಿಕೊಂಡ್ರೆ ಮನಸ್ಸಿಗೆ ಏನೋ ಸಂತಸ  ಹಾಗು ಮುದ. ನನ್ನ ಅಜ್ಜಿ ಮನೆ ಸೊರಬ, ಅಪ್ಪಟ ಮಲೆನಾಡು. ಮೂರು ಹೊತ್ತು ಸೋ  ಅಂತ ಸುರಿಯೋ ಮಳೆ, ತಂಪು ಗಾಳಿ, ಘಮ್  ಅಂತ ಮಣ್ಣಿನ ಪರಿಮಳ, ಬಿಸಿ ಬಿಸಿ ಕೆಂಡದಲ್ಲಿ ಸುಟ್ಟಿರೋ ಅಕ್ಕಿ ಹಪ್ಪಳ ,ಗೆಣಸು, ಹೀಗೆ ಮಲೆನಾಡಿನ ಬಗ್ಗೆ ಹೇಳ್ತ ಇದ್ದ್ರೆ ವಿಶೇಷಣಗಳು ಸಾಲಲ್ಲ. ಬೇಸಿಗೆ ರಜಾ ಬಂತು ಅಂದ್ರೆ ಅಜ್ಜಿ ಮನೆಗೆ ಹೋಗೋ ತವಕ ಹಾಗು ಸಂತಸ ನನಗೆ .ಎರಡು ತಿಂಗಳು ಅಪ್ಪ ಅಮ್ಮ ಅಕ್ಕ ಯಾರದ್ದೂ ನೆನಪು ಇರ್ತಾ ಇರ್ಲಿಲ್ಲ .ಹಾಗೆ ಕಳಿತಾ ಇತ್ತು ನನ್ನ ರಜಾ ದಿನಗಳು.

ಮಲೆನಾಡಿನ ಮನೆಗಳು ಅಂದ್ರೆ ಹೆಚ್ಚು ಕಮ್ಮಿ ಒಂದೇ ತರಹ  ಮಂಗಳೂರು ಹಂಚಿನ ಮನೆಗಳು ,ದೊಡ್ಡ ಅಂಗಳ, ಅಂಗಳದ  ತುಂಬಾ ಬೆಳ್ಳಗೆ ಚೆಂದದ ರಂಗೋಲಿ, ಮನೆ ಮುಂದೆ ಜಗಲಿ ಕಟ್ಟೆ. ಮಲೆನಾಡಿನ ಆ ಸೊಗಡು ತುಂಬಾ ಚೆಂದ .ನಾನು ಹಾಗು  ನನ್ನ ಮಾಮನ  ಮಗಳು ಕಟ್ಟೆ ಸವಿಯೋ ತನಕ ಕಲ್ಲಾಟ ಆಡ್ತಾ ಇದ್ದ್ವಿ .ಈಗಿನ ಕಾಲದ ಮಕ್ಕಳು ಹೇಗೆ ವೀಡಿಯೋ ಗೇಮ್ಸ್ನಲ್ಲಿ  ನಾನು ಅಷ್ಟು ಸ್ಕೋರ್ ಮಾಡಿದೆ, ನಾನು ಇಷ್ಟನೇ ಲೆವೆಲ್ ಗೆ ಹೋದೆ ಅಂತ ಬೀಗ್ತಾರೋ ಹಾಗೆ ನಾವು ಯಾರ ಕಲ್ಲು ಎಷ್ಟು ದುಂಡಗೆ ಆಗತ್ತೆ ಅಂತ  ಪೈಪೋಟಿ  ಮಾಡ್ತ ಇದ್ದ್ವಿ. ಆಗ ಮನೆಯೊರೆಲ್ಲ ಹೇಳೋರು ಅಷ್ಟು ಕಲ್ಲಾಟ ಆಡಿದರೆ ಮಳೆ ಬರಲ್ಲ ಆಡಬೇಡಿ ಅಂತ. ಆಗಿನ ಆಟಗಳು ಆಗಿನ ಮುಗ್ಧತೆ ಈಗಿಲ್ಲ ಅಂತ ತುಂಬಾ ಬೇಸರ ಆಗತ್ತೆ. ಆಧುನಿಕತೆಯ ಘೀಳಲ್ಲಿ ನಾವು, ನಮ್ಮ ಮಕ್ಕಳು ನಮ್ಮ ಮೂಲವನ್ನೇ ಕಳೆದು ಕೊಳ್ತಾ ಇದೀವಿ ಅಂತ ಅನ್ಸತ್ತೆ.

aruna 1        aruna 3

 

ನನಗೆ ಅಜ್ಜಿ ಮನೆಗೆ ಹೋಗೋಕೆ ಮುಖ್ಯವಾದ ಆಕರ್ಷಣೆ ಅಂದ್ರೆ ಕಾಡಿಗೆ ಹೋಗೋದು ,ಕವಳೆ ಹಣ್ಣು ಕಿತ್ತು ತಿನ್ನೋದು. ಈಗಲೂ ನೆಂಸ್ಕೊಂಡ್ರೆ ಬಾಯಲ್ಲಿ ನೀರು ಬರತ್ತೆ .ಮಾಮ ನನ್ನ ಹಾಗೂ ನನ್ನ ತಂಗೀನ ಬಜಾಜ್ ಸ್ಕೂಟರ್ ನಲ್ಲಿ ಕಾಡಿಗೆ ಕವಳೆ ಹಣ್ಣು  ಮತ್ತು ಚಳ್ಳೆ ಕಾಯಿ ಕಿತ್ತುಕೊಂಡು ಬರೋಕೆ  ಕರ್ಕೊಂಡು ಹೋಗ್ತಾ ಇದ್ದ್ರು. ನಮಗೆ ಕಾನಲ್ಲಿ ಅಲೆದಾಡೋದು ಅಂದ್ರೆ ಅದೇನೋ ದೊಡ್ಡ ಉಡುಗೊರೆ ಸಿಕ್ಕಿರೋ ಅಷ್ಟು ಸಂತಸ . ಕಾಡಿಗೆ ಹೋದ್ಮೇಲೆ ಮಾಮ ಮುತ್ತಲ ಎಲೆಯಲ್ಲಿ ಒಂದು ಬಟ್ಟಲು ಮಾಡಿ ಕೊಡ್ತಾ ಇದ್ದ್ರು. ಮುಳ್ಳು ಅಂತಾನೂ ನೋಡದೆ ನಾವು ಕವಳೆ ಕಾಯಿ, ಹಣ್ಣು ಎಲ್ಲಾ ಕಿತ್ತಿದ್ದೋ  ಕಿತ್ತಿದ್ದು.  ಅದರಲ್ಲಿ ಬಟ್ಟಲಿಗೆ ಹೋಗಿದ್ದು ಕಮ್ಮಿ , ಜಾಸ್ತಿ ಹೊಟ್ಟೆಗೆ ಹೋಗ್ತಾ ಇತ್ತು.ಪೂರ್ಣಚಂದ್ರ ತೇಜಸ್ವಿ ಅವರ “ಪರಿಸರದ ಕಥೆ” ಪುಸ್ತಕದಲ್ಲಿ ಇರೋ ತರಾನೆ ಇರ್ತ ಇತ್ತು ನನ್ನ ಅನುಭವಗಳು. ನಿಸರ್ಗದ ಮಧ್ಯ ಬೇಳಿಯೊ ಸುಖನೇ ಬೇರೆ.

aruna5

ನಮ್ಮದೆಲ್ಲ ಆಗ “Organic” ಆಟಗಳು ಅಂತಾನೆ ಹೇಳಬಹುದು. ಹುಣಸೆ ಬಿಕ್ಕದಲ್ಲಿ , ಬಳೆ ಚೂರುಗಳಲ್ಲಿ , ಪರಕೆ ಕಡ್ಡಿಗಳಲ್ಲಿ, ಎಲೆ, ಕಲ್ಲು , ಮಣ್ಣು ,ಹೀಗೆ ಇನ್ನೂ ಹಲವಾರು ನೈಸರ್ಗಿಕ ವಸ್ತುಗಳಲ್ಲಿ  ಆಟ  ಆಡ್ತಾ ಇದ್ದ್ವಿ. ಹಾಗಾಗಿ ಇತ್ತೀಚಿನ ದಿನಗಳ ಹಾಗೆ  ಆಟ  ಆಡುವುದರಿಂದ  ದುಷ್ಪರಿಣಾಮಗಳು ಆಗ್ಬಹುದು ಅನ್ನೋದೇ ಇರ್ಲಿಲ್ಲ. “ಆಡು ಮುಟ್ಟದ ಸೊಪ್ಪಿಲ್ಲ” ಅನ್ನುವ  ಗಾದೆ ಮಾತಿನ ಹಾಗೆ ನಾವು ಆಡದೆ ಇರೋ ಆಟಗಳಿಲ್ಲ . ಈಗಲೂ ಕಣ್ಣು ಮುಂದೆ ಕಟ್ಟಿದ ಹಾಗಿದೆ ನಾವು ಆಡ್ತಾ ಇದ್ದದ್ದು. ನಾನು ಆಗ್ಲೇ ಹೇಳಿದ ಹಾಗೆ ವಿಧ ವಿಧವಾದ ಆಟಗಳನ್ನ ಆಡ್ತಾ ಇದ್ದ್ವಿ. ಅದ್ರಲ್ಲಿ  ಒಂದು ಬಳೆ ಆಟ. ಈ ಆಟದಲ್ಲಿ ಚೂರಾಗಿರೋ ಬಳೆ ತುಂಡುಗಳನ್ನ ಕೈ ಮೇಲೆ ಹಾಕಿ, ಪ್ರತಿಸ್ಪರ್ಧಿ ಯಾವ ಬಳೆ  ಚೂರನ್ನ ಹೇಳ್ತಾರೋ ಆ ಚೂರನ್ನ ಬಿಟ್ಟು ಬೆರೆಲ್ಲದನ್ನ ಕೆಳಗೆ ಹಾಕಬೇಕಿತ್ತು. ಇದೆ ತರಹದ ಇನ್ನೊಂದು ಆಟ “ಕಡ್ಡಿ ಆಟ” ,ಇದು ಹೇಗೆ ಅಂದ್ರೆ ಒಣಗಿರೋ ತೆಂಗಿನ ಗರಿಯನ್ನ  ಸ್ವಲ್ಪ ಸ್ವಚ್ಛಗೊಳಿಸಿ ೧೨ ಕಡ್ಡಿಗಳನ್ನ ತಯ್ಯಾರು ಮಾಡಿ ಅದರಲ್ಲಿ ಒಂದು ಕಡ್ಡಿ ಸ್ವಲ್ಪ ಉದ್ದ ಇರ್ತ ಇತ್ತು.  ರಾಜ ಕಡ್ಡಿ ಅಂತ ಹೆಸ್ರು ಅದಕ್ಕೆ. ರಾಜ ಕಡ್ಡಿ ಮಿಸುಕಾಡದೆ ಇರೋ ಹಾಗೆ ,ಒಂದೊಂದೇ ಕಡ್ಡಿಗಳನ್ನ ಎತ್ತಬೇಕಿತ್ತು.ಇಂತಹ ಆಟಗಳಿಂದ ಸೈರಣಿಕೆ, ಏಕಾಗ್ರತೆ  ಎಲ್ಲ ಬೆಳೀತಾ ಇತ್ತು ಅನ್ನೋದು ನನ್ನ ಅಭಿಪ್ರಾಯ.

ನಾವುಗಳು ಮನೆ ಒಳಗೆ ಇರ್ತಾ ಇದ್ದದ್ದೇ ಕಮ್ಮಿ ಅಂತಾನೆ  ಹೇಳಬಹುದು. ಮೂರು ಹೊತ್ತು ಹೊರಗೆ ಕಾಲ ಕಳಿತಾ  ಇದ್ದ್ವಿ. ಹೀಗಿದ್ದಾಗ ಹೊರ ಜಗತ್ತಿನ ವಡನಾಟ ಜಾಸ್ತಿ ಆಗ್ತಾ ಇತ್ತು, ಸ್ನೇಹಿತರೇ ಆಗ್ಬೇಕು ಅಂತಿಲ್ಲ ,ಯಾರನ್ನ ಬೇಕಾದ್ರೂ ಸೇರಿಸಿಕೊಂಡು  ಆಟ  ಆಡೋ ಮನೋಭಾವ ನಮ್ಮಲ್ಲಿ ಇತ್ತು. ಈಗಿನ ವಿಪರ್ಯಾಸ ಏನಪ್ಪಾ ಅಂದ್ರೆ ,ಮನೆಯ ಮೂರು ಗೋಡೆಯ ಮಧ್ಯ ಕೂತು ಜಗತ್ತಿನ ಯಾವುದೋ ಮೂಲೆಯಲ್ಲಿ ಕಂಡು ಕಾಣದೆ ಇರೋ ವ್ಯಕ್ತಿಯ ಜ್ಯೋತೆ ವೀಡಿಯೋ ಗೇಮ್ಸ್ ಆಡುವುದು. ಪ್ರಪಂಚ ಜ್ಞಾನ, ಆತ್ಮೀಯತೆ ಎಲ್ಲಾ ಜನರ ಖುದ್ದು ಸಂಪರ್ಕದಿಂದ ಬರುತ್ತೆ ಹೊರೆತು ಮನೆಯ ಮೂರು ಗೋಡೆ ಮಧ್ಯೆ ಕೂತ್ಕೊಂಡು ಅಲ್ಲ. ಗೋಲಿ, ಚಿನ್ನಿ ದಾಂಡು,ಲಾಗೋರಿ, ಬುಗುರಿ, ಗಾಳಿಪಟ ಹಾರಿಸೋದು ಹೀಗೆ ಇನ್ನೂ ತರಾವರಿ ಆಟಗಳು ನಮ್ಮದು. ಈ ತರಹದ ಆಟಗಳನ್ನ ಆಡ್ತಾ ಇದ್ದಿದ್ದರಿಂದ “motor skills” , “hand eye coordination” ಇನ್ನೂ ಹಲವಾರು ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅನೂಕೂಲವಾಯಿತು ಅನ್ನೋದು ನನ್ನ ಅನಿಸಿಕೆ. ಇತ್ತೀಚಿನ ಮಕ್ಕಳು ಈ ತರಹದ ಆಟಗಳನ್ನ ಆಡಿದ್ದೇ  ನೋಡಿಲ್ಲ ನಾನ. ಯಾವಾಗ್ಲೂ Ipad ಅಥ್ವಾ smart phone ನಲ್ಲಿ ಆಟ, ಬರೀ ಒಂದೇ ಬೆರಳಿನ ಉಪಯೋಗ ನೋಡಿದ್ರೆ  Charles Darwin ನರ  Theory of Evolution ನೆನಪಾಗಿ, ಮುಂದಿನ ಪೀಳಿಗೆಯ ಬಗ್ಗೆ ಭಯ ಆಗತ್ತೆ.

ಇನ್ನೂ ಆಟಗಳನ ಬಿಟ್ಟು ಅಜ್ಜಿ ಮನೆಯ ಬೇರೆ ಅನುಭವಗಳ ಬಗ್ಗೆ ಹೇಳ್ಬೇಕು ಅಂದ್ರೆ ಮೊದಲು ನೆನಪಾಗೋದು,ಮಾವಿನ ಮರ. ನನ್ನ ಅಜ್ಜಿ ಮನೆಯ ಹಿತ್ತಲಲ್ಲಿ ಎರಡು ದೊಡ್ಡ ದೊಡ್ಡ ಮಾವಿನ ಮರಗಳಿದ್ದ್ವು. ನನಗೆ ಅವೆರೆಡು ಮರಗಳು ಬರೀ ಮರಗಳಲ್ಲ ಒಂಥರಾ ಸ್ನೇಹಿತರ ತರಹ ಅನ್ಸ್ತಾ ಇತ್ತು. ಈ  ಮರಗಳು ಇಲ್ಲದೆ ಅಜ್ಜಿ ಮನೆನ  ನೆಂಸ್ಕೊಳೋಕೆ ಸಾಧ್ಯನೇ ಇರ್ತ ಇರ್ಲಿಲ್ಲ. ಆ ಮರಗಳ ನೆರಳಿನ ತಂಪು ಈಗ್ಲೂ ಹಿತ ಕೊಡತ್ತೆ ಮನಸ್ಸಿಗೆ. ಒಂದು ಮಜವಾದ ಸಂಗತಿ ನೆನಪಾಗತ್ತೆ ಮಾವಿನ ಮರ ಅಂದ್ರೆ, ಈ ಎರಡು ಮಾವಿನ ಮರಗಳಲ್ಲಿ ಒಂದು ಗಿಣಿ ಮೂತಿ ಮಾವಿನ ಕಾಯಿ ಮರ. ಗಿಣಿ ಮೂತಿ ಮಾವಿನ ಕಾಯಿ ಅಂದ್ರೆ ಕೇಳಬೇಕೆ ಯಾರಿಗಾದ್ರೂ ಬಾಯಲ್ಲಿ ನೀರು ಬರತ್ತೆ. ನನ್ನ ಅಜ್ಜಿ ಮನೆ ಹತ್ತಿರ ಒಂದು  ಶಾಲೆ ಬೇರೆ ಇತ್ತು, ಇನ್ನು  ಮುಗೀತಲ ಕಥೆ . ಪ್ರತಿದಿನ ಶಾಲೆ ಬಿಟ್ಟ ಮೇಲೆ ಮಕ್ಕ್ಳು ಕಲ್ಲು ತೂರೊದು,ನಾವು ಅದಕ್ಕೆ ಶಾಲೆ ಬಿಡುವ ಮೊದಲೇ ಕಾವಲು ನಿಲ್ತ ಇದ್ದ್ವಿ. ಯಾರು ಕಲ್ಲು ಹೊಡೀತಾರೋ ಅವರನ್ನ ಹಿಡಿಯೋಕೆ ಪ್ರಯತ್ನ ಮಾಡೋದು. ಈ ಕೆಲಸವನ್ನ ಅದೆಷ್ಟು ಹೆಮ್ಮೆ ,ನಿಷ್ಠೆ ಇಂದ  ಮಾಡ್ತ ಇದ್ದ್ವಿ ಅಂದ್ರೆ ನೋಡಿದವ್ರು ಮೆಚ್ಚ್ಕೋಬೇಕು.  ನನಗೆ ತಿರುಗಿ ಸ್ಪಂದಿಸದೆ ಇರೋ ಒಂದು ಮರದ ಬಗ್ಗೆ ನನಗೆ ಅಷ್ಟು ಒಲವು  ಇರೋಕೆ ಕಾರಣ , ಆಗಿನ ನಿಷ್ಕಲ್ಮಶ ವಾತಾವರಣ ಹಾಗು ನಿಸರ್ಗದ ಜ್ಯೋತೆಗೆ ನನಗಿದ್ದ  ಒಡನಾಟ ಅನ್ಸತ್ತೆ. ಈಗಲೂ ನೆನಪಿದೆ  ಇರುವೆ ಸಾಲು ಹೋಗ್ತಾ ಇದ್ದ್ರೆ ,ನಾನು ಅದಕ್ಕೆ ದಾರಿ ಮಾಡಿ ಕೊಡ್ತಾ ಇದ್ದೇ. ಅಮ್ಮ ಯಾವಾಗ್ಲೂ ಸಕ್ಕರೆ ಅಥವಾ ಪುಟಾಣಿ ಕೊಡ್ತಾ ಇದ್ದ್ರು  ಹೋಗಿ ಆ ಸಾಲಿಗೆ ಹಾಕೋಕೆ. ಆ ಇರುವೆಗಳು ಸಕ್ಕರೆ ಹರಳನ್ನ ಎತ್ತಿಕೊಂಡು ಹೋಗ್ತಾ ಇದ್ರೆ ಅದನ್ನೇ  ಘಂಟೆ ಗಟ್ಟಲೆ ನೋಡ್ತಾ ಕೂತ್ಕೊತಾ  ಇದ್ದೇ. ಅದೇ ಇಂದಿನ ಮಕ್ಕಳಿಗೆ ಏನೇ ಹೊಸ ಆಟದ ಸಾಮಾನು ಕೊಡಿಸಿದ್ರು ಕೇವಲ ೫ ನಿಮಿಷ ,ಆಮೇಲೆ ಅಮ್ಮ “Bore” ಅಂತ ಶುರು ಮಾಡ್ತಾರೆ. ನನಗೆ ಇದ್ದ ಆ ತರಹದ ವಾತಾವರಣ ನನ್ನ ಮಗನಿಗೆ ಇಲ್ಲ ಅಂತ ತುಂಬಾ ಬೇಸರ ಆಗತ್ತೆ ಕೇಳೊವೊಮ್ಮೆ.

aruna 2

ಮಲೆನಾಡು ಅಂದ ತಕ್ಷಣ “ಯಕ್ಷಗಾನ” ದ ಬಗ್ಗೆ ಹೇಳಿಲ್ಲ ಅಂದ್ರೆ ತಪ್ಪಾಗತ್ತೆ. ಎಂಥಾ ಅದ್ಭುತವಾದ ಅನುಭವ ಅಂತೀನಿ. ಆಹಾ ಕಣ್ಣಿಗೆ ಹಬ್ಬ.’ಇವತ್ತು ರಾತ್ರಿ ಯಕ್ಷಗಾನ ಇದೆ’ ಅಂತ ಮಾಮ ಹೇಳಿದ್ರೆ ಸಾಕು ಕುಶಿನೋ ಕುಶಿ ನಮಿಗೆಲ್ಲ. ಬೇಗ ಬೇಗನೆ  ಊಟ ಮಾಡಿ ,ಊರ ದೇವಸ್ಥಾನದ ಹತ್ರ ಹೋಗಿ ಮುಂದಿನ ಸಾಲಿನಲ್ಲಿ ಕೂತ್ಕೊಂಡು ಬಿಡ್ತಾ ಇದ್ದ್ವಿ. ರಾತ್ರಿ ಸರಿಯಾಗಿ ೯.೩೦ ಗೆ ಆರಂಭ ಆಗಿದ್ದು ಬೆಳಗಿನ ಜಾವ ಮುಗಿಯೋದು. ಮನೆಗೆ ಬಂದ ಮೇಲೆ ಎರಡು ಮೂರು ದಿನ ಯಕ್ಷಗಾನದ ಪಾತ್ರಗಳನ್ನೇ ಮೆಲುಕು ಹಾಕ್ತಾ ಇದ್ದ್ವಿ. ಯಾವ 3D /4D ಸಿನಿಮಾನೂ ಅಷ್ಟು ಕುಶಿ ಕೊಡಲ್ಲ, ಅಷ್ಟು ಸವಿತಾ ಇದ್ದ್ವಿ ಯಕ್ಷಗಾನದ ಅನುಭವವನ್ನ. ಇನ್ನು ವಾರದ ಸಂತೆ ಬಗ್ಗೆ ಹೇಳಲೇಬೇಕು ನಾನು. ಏನು ಹುಮ್ಮಸ್ಸು ನಮಗೆ  ಸಂತೆಗೆ ಹೋಗೋದು ಅಂದ್ರೆ. ಎಷ್ಟು ವರ್ಣರಂಗೀತವಾಗಿ ಇರ್ತಾ ಇತ್ತು ಸಂತೆ. ಒಂದು ಕಡೆ ಊರಿಂದ ಬೆಣ್ಣೆ ಹೊತ್ತು  ತಂದು ಮಾರ್ತಿರೋ ಅಜ್ಜಿಗಳು, ಇನ್ನೊಂದೆಡೆ ಬಣ್ಣ ಬಣ್ಣದ ಅಂಗಿ, ಪೇಟಿಕೋಟ್ ,ಚಡ್ಡಿ ಮಾರ್ತಿರೋರು, ತರತರಾವರಿ ಕಾಳುಗಳನ್ನ  ನೋಡಿದ್ದೆ ನಮ್ಮೋರ ಸಂತೇಲಿ ನಾನು. ಜೇಡಿ  ಮಣ್ಣಿನಲ್ಲಿ ಮಾಡಿದ ಮಕ್ಕಳ ಅಡುಗೆ ಸಾಮಾನು, ಗಿರ್ಗಿಟ್ಲೆ,ಇನ್ನೂ ಹತ್ತು ಹಲವಾರು ರಂಗು ರಂಗಿನ ಸಾಮಾನುಗಳ ಸಾಗರ ಆಗಿತ್ತು ನಮ್ಮೋರ ಸಂತೆ. ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ ಸಂತೆಯ ಚಿತ್ರಣ. ನಮ್ಮ  ಮನೆಗೆ ಧೈಯಣ್ಣ  ಅಂತ ಒಬ್ಬ್ರೂ ಬರೋರು. ಅವ್ರು ಸಂತೇಲಿ ಖರೀದಿ ಮಾಡಿದ ಸಾಮಾನು ಹೊತ್ತುಕೊಂಡು ಬರೋಕೆ ಸಹಾಯ ಮಾಡೋಕೆ ಅಂತಾನೆ ಬರ್ತಾ ಇದ್ದ್ರು. ಮಂಗಳವಾರ ಬಂತು ಅಂದ್ರೆ  ಸರಿಯಾಗಿ ಬೆಳಗ್ಗೆ ೯ ಘಂಟೆಗೆ ದೊಡ್ಡ ದೊಡ್ಡ ಚೀಲಗಳನ್ನ ಹಿಡ್ಕೊಂಡು ಹಾಜರಿ ಹಾಕ್ತಾ ಇದ್ದ್ರು . ನಾವೂ  ಅಷ್ಟೇ ಅವತ್ತು ಬೇಗ ಎದ್ದು ಸಂತೆಗೆ ಹೋಗೋಕೆ ತಯಾರು. ಸಂತೇಲಿ ಮಾಮಾನ ಹಿಂದೆ ಧೈಯಣ್ಣ ,ಅವರ ಹಿಂದೆ ನಾವು ಸಾಲಾಗಿ ಹೋಗೋದು. ಸೌತೆಕಾಯಿ, ಗಜ್ಜರಿ  ತಗೊಂಡ್ರೆ ಚೀಲಕ್ಕೆ ಹೋಗೋ ಮೊದ್ಲು ಎರಡು ಸೌತೆಕಾಯಿ ನಮ್ಮ ಕಯ್ಯಿಗೆ ಬರೋದು, ತೊಳಿಯೋದೆಲ್ಲ ದೂರದ ಮಾತು ,ಸೀದಾ ಬಾಯಿಗೆ ಹೋಗ್ತಾ ಇತ್ತು. ಹೀಗೆ ಏನೇ ತಗೊಂಡ್ರು ಮೊದ್ಲು ನಮಗೆ ನೈವೇಧ್ಯ ಆಗ್ತಾ ಇತ್ತು. ಆಗಿನ ಖರೀದಿಯ ಇನ್ನೊಂದು ವಿಶೇಷತೆ ಏನಂದ್ರೆ ಪ್ಲಾಸ್ಟಿಕ್ ಬಳಕೆ ಬಹಳ ಕಮ್ಮಿ, ನಾವು ಏನೇ ಖರೀದಿ ಮಾಡಿದ್ರು ಅದನ್ನ ಒಂದೇ ಚೀಲಕ್ಕೆ ಹಾಕಿಸ್ತಾ ಇದ್ದ್ವಿ, ಅನಂತರ ಮನೆಗೆ ಬಂದು ಹಿತ್ತಲಲ್ಲಿ ಚಿಕಮ್ಮ ಹಾಗು  ಅಮ್ಮನ ಜ್ಯೋತೆ  ಕೂತು ಎಲ್ಲಾ ತರಕಾರಿ, ಹಣ್ಣುಗಳನ್ನ ಬೇರ್ಪಡಸ್ತಾ ಇರುವಾಗ ಯಾವ ತರಕಾರಿ ಹೇಗೆ? ಎಲ್ಲಿ? ಬೆಳೆಯತ್ತೆ ,ಹೀಗೆ  ಇನ್ನೂ ಎಷ್ಟೊಂದು ಮಾಹಿತಿಗಳನ್ನ ತಿಳಿದುಕೊಳ್ಳ್ತ ಇದ್ದ್ವಿ. ಮಕ್ಕಳಲ್ಲಿ ತರಕಾರಿಗಳ ಬಗ್ಗೆ ಒಟ್ಟಾಗಿ ಹಸಿರಿನ ಬಗ್ಗೆ ಆಸಕ್ತಿ ,ಒಲವು ಹುಟ್ಟಿಸಲು ಎಷ್ಟು ಚೆಂದದ ವಿಧಾನ ಅಲ್ವಾ?!

 

aruna 4  aruna 6

ಹೀಗೆ ಇನ್ನೂ ಹೇಳ್ತಾ ಹೋದ್ರೆ ನನ್ನ ಅಜ್ಜಿ ಮನೆ ಕಥೆಗಳ  ಪಟ್ಟಿ ಮುಗಿಯಲ್ಲ. ನಾನು ಆಧುನಿಕತೆಯ ವಾತಾವರಣದಿಂದ  ದೂರ, ಪರಿಸರದ ಜ್ಯೋತೆಗೆ ಬೆಳೆಯಲು ಎಷ್ಟು ಪುಣ್ಯ ಮಾಡಿದ್ದೆ ಅನ್ಸತ್ತೆ. ಪ್ರಕೃತಿ ಒಂದು ಅದ್ಭುತ ಪಾಠಶಾಲೆ,ತನ್ನದೇ ಆದ ವಿಸ್ಮಯ ಹಾಗು ಸರಳ ರೀತಿಯಲ್ಲಿ ನಮಗೆ ಎಲ್ಲವನ್ನು ಹೇಳಿಕೊಡತ್ತೆ. ನಾನು ಬಾಲ್ಯದಲ್ಲಿ ಕಲಿತ ಆಟ, ಪಾಠಗಳು  ,ಅತ್ಯಾಮೂಲ್ಯವಾದದ್ದು,ನನ್ನ ಅನುಭವಗಳು ಕೇವಲ ನನ್ನ ಸ್ವತ್ತು , ನಾನು ಆಸ್ವಾಧಿಸಿರೋದನ್ನ ಯಾರಿಂದಲೂ ಕಸಿಯಲು ಸಾಧ್ಯ ಇಲ್ಲ ಅನ್ನೋ ಸಂತಸ ನನ್ನದು.ನಾನು ಈ ಲೇಖನ ಬರೆಯುತ್ತಿದ್ದಾಗ ನನಗೆ ಚಿ ಉದಯ್ ಶಂಕರ್ ಅವರ  ಸಾಹಿತ್ಯ  “ಮುನಿಯನ ಮಾದರಿ” ಚಿತ್ರದ  ಹಾಡು ನೆನಪಾಯಿತು

“ಇಂದಿಗಿಂತ ಅಂದೇನೆ ಚೆಂದವು ,ಆಹಾ ಎಂಥ ಸೊಗಸು ಆ ನಮ್ಮ ಕಾಲವು

ಅಂಥ ವಯಸು , ಅಂಥ ಮನಸು ಬಾರದು ಬಯಸಲು ,ದೊರಕದು ಬೇಡಲು

ಯಾರೇ ಬರಲಿ ಯಾರೇ ಇರಲಿ ನಮ್ಮ ಮಾತೆ  ನಮ್ಮದು,

ಕಲ್ಲು ಮುಳ್ಳೇನು  ಚಳಿ ಗಾಳಿ ಮಳೆಯೇನು ನಮ್ಮ ತಡೆಯೋರು ಯಾರು

ತೋಟ ನಮ್ಮದು, ಬಾವಿ ನಮ್ಮದು ,ಊರು ಕೇರಿ ನಮ್ಮದು

ಮೀನು ನೀರಲ್ಲಿ ,ಮರ ಕೋತಿ ಮರದಲ್ಲಿ ,ಏನು  ಆ ನಮ್ಮ ಜೋರು

ಅಂದು ಯಾರಿಲ್ಲ ನಮ್ಮನ್ನು ಹಿಡಿಯೋರು.

ನಾವು ಕಳೆದ ಅಂದಿನ ದಿನಗಳು ಮತ್ತೆ ಹಿಂದಿರುಗಿ ಬರಲಿ, ಇಂದಿನ ಮಕ್ಕಳು  ಕೇವಲ ತಂತ್ರಜ್ಞಾನ ಅಷ್ಟೇ ಅಲ್ಲದೆ  ಪ್ರಕೃತಿ ಬಗ್ಗೆ ಹೆಚ್ಚು ಹೆಚ್ಚು  ಆಸಕ್ತಿ ಬೆಳಸಿಕೊಳ್ಳಲಿ ಹಾಗು ಅದರ ಬಗ್ಗೆ ಒಲವು ಮೂಡಿಸಿಕೊಳ್ಳಲ್ಲಿ ಅನ್ನೋದು ನನ್ನ ಆಶಯ .

ಚಿತ್ರ -ಲೇಖನ  -ಅರುಣಾ ಹಾಲಪ್ಪ

ಚಿತ್ರ ಕೃಪೆ-Google Images