ಹಾರುವ ಹಕ್ಕಿಗಳು ತೇಲುವ ವಿಮಾನಗಳು

ಈ ವಾರ ಅನಿವಾಸಿಯಲ್ಲಿ ಎರಡು ಲೇಖನಗಳು ಮತ್ತು ಕಣ್ಣೋಟ. ಮೊದಲಿಗೆ, ಕಳೆದ ಶನಿವಾರ ಲೆಸ್ಟರ್ ನಲ್ಲಿ ನಡೆದ ಯುಗಾದಿ ಕಾರ್ಯಕ್ರಮದ ಸಂಕ್ಷಿಪ್ತ ವರದಿ. ಎರಡನೆಯದು, ಯೋಗಿಂದ್ರ ಮರವಂತೆಯವರ ಲೇಖನ. 
 
ಎಂದಿನಂತೆ, ಕಣ್ಣೋಟದಲ್ಲಿ ಎರಡು ಚಿತ್ರಗಳು – ಈ ವಾರದ ಚಿತ್ರಗಳು ಮ್ಯಾಂಚೆಸ್ಟರ್ ನ ಶಾಂತಲಾ ರಾವ್ ತಮ್ಮ ಮೊಬೈಲ್ ಫೋನಿನಲ್ಲಿ ಸೆರೆ ಹಿಡಿದವು. ಮೊಬೈಲ್ ತಂತ್ರ ಬೆಳೆದಂತೆ, ಅದರ ಕ್ಯಾಮೆರಾ ಶಕ್ತಿಯೂ ಬೆಳೆದಿದೆ. ಅದರ ಎರಡು ಉದಾಹರಣೆ ಶಾಂತಲಾ ಅವರ ಫೋಟೋಗಳು. ಅದಕ್ಕೆ ಪೂರಕವಾಗಿ, ಧಾರವಾಡದ ಕನ್ನಡದಲ್ಲಿ ಅವರೇ ಬರೆದ ಹಿನ್ನೆಲೆ ಮತ್ತು ಅವರ ಅನಿಸಿಕೆ. 

 

 
ಸವಿಗಾನದ ರಸದೌತಣ 

ಬಾಳೆಎಲೆ. ಅನ್ನದ ಮೇಲೆ ಬಿಸಿ ಸಾರು. ಆಚೆ ಈಚೆ ಕೋಸುಂಬರಿ, ಪಲ್ಯ, ಹೋಳಿಗೆ, ಹಯಗ್ರೀವ; ಪೂರಿಯ ಜೋಡಿ ಮಾವಿನ ಶೀಕರಣೆ. ಮತ್ತೆ-ಮತ್ತೆ ಕೇಳಿ ಬಡಿಸುವ ಉಪಚಾರ. ಇನ್ನೇನು ಬೇಕು ಹೇಳಿ? ಕೈಯಾಯ್ತು, ಬಾಯಾಯ್ತು. ಬಾಳೆಎಲೆ ಕೀಸಿ-ಕೀಸಿ ಉಂಡವರೇ ಎಲ್ಲ. ನಮ್ಮದು ನಾಲ್ಕನೇ ಪಂಕ್ತಿಯಾದರೂ ಉಪಚಾರದಲ್ಲಿ ಅವಸರವಿರಲಿಲ್ಲ. ನಾವು ನೆಂಟರೂ ಅಲ್ಲ, ಇದು ಯಾರ ಮನೆ ಮದುವೆಯೂ ಅಲ್ಲ. ಇದು, ಕಳೆದ ಶನಿವಾರ (೨೭/೪/೧೯) ಇಂಗ್ಲೆಂಡಿನ ಮಧ್ಯ ಭಾಗದ ಲೆಸ್ಟರ್ ಊರಿನ ಕನ್ನಡಿಗರು ಆಯೋಜಿಸಿದ್ದ ಯುಗಾದಿ ಕಾರ್ಯಕ್ರಮದ ಮಧ್ಯಾಹ್ನದ ಊಟದ ಸಂಭ್ರಮ. ನೂರಾರು ಸಂತೃಪ್ತ ಮುಖಗಳಲ್ಲಿ ಆಯೋಜಕರ ಆಲೋಚನೆ, ಶ್ರಮ ಮತ್ತು ಆತಿಥ್ಯಕ್ಕೆ ಕೃತಜ್ಞತೆ ಸೂಸುತ್ತಿತ್ತು.

 

ಔತಣ ಹೊಟ್ಟೆಯ ಒತ್ತೊತ್ತಿ ತುಂಬಿದರೆ, ಕಣ್ಣು, ಕಿವಿ ತುಂಬಿದ್ದು, ಸ್ಥಳೀಯ ಕಲಾವಿದರ, ಬಹುವಿಧದ ನೃತ್ಯ, ಹಾಡುಗಳು. ಅದು ಮುಗಿಯುತ್ತಿದ್ದಂತೆ ಮತ್ತೆ ಹೊಟ್ಟೆಗೆ ಸಿಹಿ-ಕಾರ-ಕಾಪಿ. ಇವೆಲ್ಲ ಸಂಜೆಯ ಮುಖ್ಯ ಅಂಕಕ್ಕೆ ಪೀಠಿಕೆ.

 

ಅದು, ಕರ್ನಾಟಕದ ಇಂದಿನ ಅತಿ ಪ್ರಸಿದ್ಧ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಮತ್ತು ಅವರ ತಂಡದವರ ಹಾಡುಗಾರಿಕೆ. ಮೈಸೂರಿನಿಂದ ಮುಂಬೈಗೆ ಹಾರಿ, ಸಾವಿರಾರು ಜಾಹಿರಾತುಗಳ ಜಿಂಗಲ್ಸ್ ಹಾಡಿ, ಎ. ಆರ್. ರಹಮಾನರ ‘ಜೈ ಹೋ’ ಹಾಡಿನ ಮೊದಲ ಸಾಲು ಹಾಡಿ ವಿಶ್ವವಿಖ್ಯಾತರಾದ ವಿಜಯ ಪ್ರಕಾಶ್, ಹಿನ್ನೆಲೆ ಹಾಡು; ಟಿವಿ ಕಾರ್ಯಕ್ರಮಗಳ ನಿರೂಪಣೆ, ಜಡ್ಜ್, ಹೀಗೆ ಕನ್ನಡಿಗರ ಮನದಲ್ಲಿ ಬೆಳೆದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ತಮ್ಮ ತಂದೆಯನ್ನು ಕಳೆದುಕೊಂಡರೂ, ಅವಶ್ಯ ಕ್ರಿಯೆಗಳೆಲ್ಲ ಮುಗಿದ ತಕ್ಷಣ, ಕಲೆಯನ್ನು ಹಂಚುವ ತಮ್ಮ ವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ಅದು ಅವರ ವೃತ್ತಿಪರತೆ. ಅಂದಿನ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಬೆಂಗಳೂರಿನ ಓಗರ ರೆಡಿ ಫುಡ್ಸ್ ಮಾಲೀಕರು ಸಹ ಇತ್ತೀಚಿಗೆ ತಮ್ಮ ತಂದೆಯನ್ನು ಕಳೆದುಕೊಂಡರೂ, ವಿಜಯ ಪ್ರಕಾಶರ ಒತ್ತಾಸೆಗೆ ಒಪ್ಪಿ ಬಂದೆ ಎಂದು ಹೇಳಿಕೊಂಡರು. ಒಂದು  ನಿಮಿಷ ಮೌನದೊಂದಿಗೆ ಅವರಿಬ್ಬರ ಶೋಕಕ್ಕೆ ಸಭೆ ಸ್ಪಂದಿಸಿದ್ದು ಸಮಯೋಚಿತವಾಗಿತ್ತು.

 

ಹಾಡಿನಲ್ಲಿ ವಿಜಯಪ್ರಕಾಶರ ಜೊತೆಗೆ ಅನುರಾಧ ಭಟ್ ಮತ್ತು ಶಶಿಕಲಾ ಇದ್ದರು. ಇವರಿಬ್ಬರೂ ಹಿನ್ನೆಲೆ ಗಾಯಕರಾಗಿ ಸಾಕಷ್ಟು ಹೆಸರು ಮಾಡಿದವರೇ. ಸುಮಾರು ಮೂರು ಗಂಟೆಗಳ ಕಾಲ ತಡೆಯಿಲ್ಲದೆ ಹರಿದ ಹಾಡುಗಳ ಮಳೆಯಲ್ಲಿ ಸಭಿಕರು ಕುಣಿದು, ಕುಪ್ಪಳಿಸುತ್ತ ನೆನೆದರು. ಲಘು ಹಾಸ್ಯದ ಮಾತುಗಳಲ್ಲಿ ಸಭಿಕರನ್ನು ಛೇಡಿಸುತ್ತ, ಉತ್ಸಾಹಿಸುತ್ತ ತನ್ನೊಂದಿಗೆ ಕರೆದೊಯ್ಯುತ್ತಿದ್ದ ವಿಜಯಪ್ರಕಾಶರ ಶೈಲಿ ಅವರ ಕಂಠದಷ್ಟೇ ಅಪೂರ್ವ.

 

ಬೇರೆ-ಬೇರೆ ಭಾಷೆಗಳ ಹಾಡುಗಳಲ್ಲಿ ಬೆಳೆದರೂ, ತನ್ನೊಳಗಿನ ಕನ್ನಡತನವನ್ನು ಮೆರೆಸುತ್ತಿರುವ ವಿಜಯಪ್ರಕಾಶ್ ಮತ್ತು ಬೇರೆ ಭಾಷೆ ಸಂಸ್ಕೃತಿಯ ದೇಶದಲ್ಲೂ ಕನ್ನಡತನವನ್ನ ಉಳಿಸಿ, ಬೆಳೆಸಿ, ಹಂಚುತ್ತಿರುವ ಸಭಿಕರ ನಡುವೆ ಹಾಡುಗಳಲ್ಲಿ ನಡೆದ ಸಂವಾದ ಮತ್ತು ಸ್ಪಂದನ, ಬಹಳ ವರ್ಷಗಳ ನಂತರ ತವರಿಗೆ ಮರಳಿದ ಅಕ್ಕ-ತಂಗಿಯರಿಬ್ಬರು ಯಾರಿಗೆ ಅಮ್ಮನ ಮೇಲಿನ ಪ್ರೀತಿ ಹೆಚ್ಚು ಎಂದು ವಾದಿಸಿದಂತಿತ್ತು. ಕಡೆಗೆ ಗೆದ್ದದ್ದು ಕನ್ನಡಮ್ಮನ ಪ್ರೀತಿ.

 

 

 

———————————————–

ಹಾರುವ ಹಕ್ಕಿಗಳು ತೇಲುವ ವಿಮಾನಗಳು

ತನ್ನಿಷ್ಟದ ಪ್ರಪಂಚವನ್ನು ಕಟ್ಟುವಲ್ಲಿ, ಪ್ರಕೃತಿಯೊಂದಿಗಿನ ಸಮರಸವ ಮರೆತು ಮೆರೆಯುತ್ತಿರುವ ಮಾನವ ತನಗೆ ಬಳುವಳಿಯಾಗಿ ದೊರೆತ ತನ್ನ ಸುತ್ತಲಿನ ಸಿರಿಯನ್ನು ಒಂದೊಂದಾಗಿ ನುಂಗುತ್ತಿದ್ದಾನೆ. ಮಾನವನ ಬುದ್ಧಿಗೆ ಯಂತ್ರಗಳ ಶಕ್ತಿ ಸಿಕ್ಕು ಅವು ಹೆಚ್ಚಿದಂತೆ, ಅವನ ಸಾವಿರಾರು ವರ್ಷಗಳ ಕಲ್ಪನೆಗಳಿಗೆ ರೆಕ್ಕೆ-ಪುಕ್ಕ ಸಿಕ್ಕಿ, ಕಳೆದ ಶತಮಾನದ ಆರಂಭಕ್ಕೆ ಮೊದಲು ಹಾರಿದ ಯಂತ್ರದ-ಹಕ್ಕಿ ಆಗಸದ ದಾರಿ ತೆರೆದು ಕೊಟ್ಟಿತು. ಅಲ್ಲಿಗೆ ಹಕ್ಕಿಗಳ ಸ್ವಚ್ಛಂದ ಹಾರಾಟದ ಕೊನೆಗೆ ನಾಂದಿಯಾಯಿತು. ಹಾರುವ ಜನ ಬೆಳೆದಷ್ಟೂ ಹೆಚ್ಚಿದ ವಿಮಾನಗಳು ನುಂಗಿದ ಹಕ್ಕಿಗಳ ಲೆಕ್ಕ ಇಲ್ಲ. ಹಾಗೆಯೇ,  ದೊಡ್ಡ-ದೊಡ್ಡ ನಗರಗಳ ಎತ್ತೆತ್ತರದ ಕಟ್ಟಡಗಳು ಕೊಲ್ಲುತ್ತಿರುವ ಹಕ್ಕಿಗಳ ಲೆಕ್ಕವೂ. ಹೀಗೆ, ಮಾನವ ಮತ್ತು ಹಕ್ಕಿಯ ನಡುವಿನ ದ್ವಂದ್ವವನ್ನ ಯಂತ್ರದ-ಹಕ್ಕಿಯ ರೆಕ್ಕೆ ಹಿಡಿದು ಹೇಳುತ್ತಾ ಯೋಗೀಂದ್ರ ಮರವಂತೆ ಮತ್ತೊಮ್ಮೆ ಅನಿವಾಸಿಯತ್ತ ಹಾರಿದ್ದಾರೆ.

ಯೋಗೀಂದ್ರರು, ಬ್ರಿಸ್ಟಲ್ಲಿನ ದೊಡ್ಡ ವಿಮಾನ ತಯಾರಾಕ ಸಂಸ್ಥೆಯೊಂದರ ಉದ್ಯೋಗಿ. ಇವರ ಬರಹಗಳು ಕನ್ನಡದ ಪ್ರತಿಷ್ಠಿತ ದಿನ ಪತ್ರಿಕೆಗಳು, ವಾರ ಪತ್ರಿಕೆಗಳು, ಕೆಂಡಸಂಪಿಗೆ.ಕಾಮ್ ಗಳಲ್ಲಿ ಪ್ರಕಟವಾಗಿವೆ. ಇತ್ತೀಚಿಗೆ, ಉದಯವಾಣಿ ಯುಗಾದಿ ವಿಶೇಷಾಂಕದಲ್ಲಿ ಇವರ ಪ್ರಬಂಧವೊಂದಕ್ಕೆ ಬಹುಮಾನ ಸಿಕ್ಕಿದೆ. 
_______________

image.pngಇದು ಬ್ರಿಸ್ಟಲ್. ಇಲ್ಲೊಂದು ವಿಮಾನ ಕಚೇರಿ. ಅದರೊಳಗಿನ ಹಲವು ಕಟ್ಟಡಗಳು,ಅವುಗಳಲ್ಲಿ  ಹಲವು ಕಿಟಕಿಗಳು.ಅವುಗಳಲ್ಲೊಂದು ಕಿಟಕಿಯ ಬಳಿ ಸದ್ಯಕ್ಕೆ ನಾನು. ಎಲ್ಲರ ಅನುಭವದ  ಕಿಟಕಿಗಳ ಹಾಗಿನದೇ ಇದೂ ಒಂದು, ಹೊರಗಿನದನ್ನು  ತೋರಿಸುವ ಕಾಣಿಸುವ ಕೇಳಿಸುವ ಕೆಲಸ ಇದಕ್ಕೆ, ಆದರೆ ಅವೆಲ್ಲವೂ ಒಂದು ಚೌಕಟ್ಟಿನೊಳಗೇ. ಎಷ್ಟು ತೋರಿಸುತ್ತದೆ ಎಷ್ಟು ಬಿಡುತ್ತದೆ ಎನ್ನುವುದಕ್ಕೆ ಒಂದು ಮಿತಿ ಪರಿಧಿ ಇದೆ. ಈ ಕಿಟಕಿಯಿಂದ ಹಕ್ಕಿಗಳಿಗಿಂತ ಹೆಚ್ಚು ವಿಮಾನಗಳೇ  ಕಾಣಿಸುತ್ತವೋ  ಕೇಳಿಸುತ್ತವೋ ಎನ್ನುವ ಅನುಮಾನ ನನಗೆ. ಇಲ್ಲಿ ಚಿತ್ರಗಳೂ ಕಾಣಿಸಬಲ್ಲವು ಸದ್ದುಗಳು ಕೇಳಿಸಬಲ್ಲವು. ವಿಮಾನಗಳು ಕಚೇರಿಯ ಆವರಣದೊಳಗೆ ಇರುವ ಇಳಿಯುವ ಪಥದಿಂದ (ರನ್ ವೆ)  ಆಕಾಶವನ್ನು ಸರಸರನೆ ಹತ್ತಿ ಇಳಿಯುತ್ತಿರುತ್ತವೆ. ಯಾರು ಕಲಿಸಿದರೋ ಇವಕ್ಕೆ ಹತ್ತುವುದು ಇಳಿಯುವುದು. ಕಣ್ಣಿಗೆ ಕಾಣುವ ಕಬ್ಬಿಣದ ಏಣಿಯಲ್ಲಿ ಹತ್ತಿಳಿಯುವಾಗ ಎಡವುವ ನಾನು ಈ ವಿಮಾನಗಳು ಕಾಣದ ಗಾಳಿಯ ಮೆಟ್ಟಿಲುಗಳ ಮೇಲೆ ಪರಿಣತಿಯಲ್ಲಿ ಹತ್ತಿಳಿಯುವುದನ್ನು ಅವಕ್ಕಾಗಿ ನೋಡುತ್ತೆನೆ. ನಮ್ಮ ಕಂಪೆನಿಯ ಶಾಖೆಗಳು ಫ್ರಾನ್ಸ್, ಜರ್ಮನಿ ಸ್ಪೇನ್ ಗಳಲ್ಲಿ ಹಬ್ಬಿರುವುದರಿಂದ, ಅಲ್ಲಿಂದ ಇಲ್ಲಿ ಬರುವುದು  ಇಲ್ಲಿನವರು ಅಲ್ಲಿ ಹೋಗುವುದು ವಿಮಾನಗಳ ಮೂಲಕವೇ ನಿತ್ಯವಿಧಿಯಂತೆ ನಡೆಯುತ್ತಿದೆ . ಆಸುಪಾಸಿನ ಕೆಲವು ಹವ್ಯಾಸಿ ವಿಮಾನ ಚಾಲಕರು ಪಾತಿದೋಣಿಯಂತಹ (ಸಣ್ಣ ದೋಣಿ) ಪುಟ್ಟ ವಿಮಾನ ತೆಗೆದುಕೊಂಡು ನಮ್ಮ ರನ್ ವೆ ಬಳಸಿ ಮೇಲೆ ನೆಗೆಯುತ್ತಾರೆ. ಬ್ರಿಸ್ಟಲ್ ನ ಪೊಲೀಸರು ಊರಿನ ಮೇಲೆ ಹದ್ದಿನ ಕಣ್ಣಿಡಲು ಬಳಸುವ ಹೆಲಿಕಾಪ್ಟರ್ ಗೆ ಕೂಡ ನಮ್ಮ ಕಚೇರಿಯೇ ನಿಲ್ದಾಣ. ಮತ್ತೆ ಅಪಘಾತ ತುರ್ತು ಚಿಕಿತ್ಸೆಗೆಂದು  (air ambulance) ಬ್ರಿಸ್ಟಲ್ ನ   ನಗರಸಭೆ ಬಳಸುವ  ಹೆಲಿಕಾಪ್ಟರ್ ದಿನಕ್ಕೊಂದು ಬಾರಿಯಾದರೂ ಗಾಳಿಯನ್ನು ಕತ್ತರಿಸುತ್ತ ಸುತ್ತುತ್ತಿರುತ್ತದೆ. ರನ್ ವೆ ಸುತ್ತಲಿನ ವಿಶಾಲ ಬಯಲಿನ ಒಂದು ಮೂಲೆಯಲ್ಲಿ ಹದಿನಾರು  ವರ್ಷಗಳ ಹಿಂದೆ (2003ರಲ್ಲಿ ) ಕೊನೆಯ ಹಾರಾಟ ಮುಗಿಸಿ  ನಿವೃತ್ತಿಯ ನಿಟ್ಟುಸಿರು ಬಿಟ್ಟು “ಕಾಂಕರ್ಡ್” ಚಕ್ರಗಳನ್ನು  ನೆಲದಲ್ಲಿ ಖಾಯಂ ಆಗಿ ಹೂತಿದೆ. ಬಾಣದ ಮಂಚದ ಮೇಲೆ ಮಲಗಿದ ಇಚ್ಚಾಮರಣಿಯ ಪರಿಸ್ಥಿತಿಯೇ ಅದರದು .”ಕಾಂಕರ್ಡ್” ವಿಮಾನ ನೋಡಲೆಂದೇ ಬಸ್ಸು ತುಂಬಿಸಿಕೊಂಡು ಪ್ರವಾಸ ಬರುವವರೂ ಇದ್ದಾರೆ. ಶಬ್ದದ ವೇಗದ ಎರಡು ಪಟ್ಟು ವೇಗದಲ್ಲಿ ಹಾರುತ್ತಿದ್ದ “ಕಾಂಕರ್ಡ್”ಗೆ  ನಮ್ಮ ಕಚೇರಿಯಿಂದ ಹಾರಿ ಇಳಿಯುವ ಪುಟ್ಟ ವಿಮಾನಗಳ ನಡಿಗೆ ಓಟ ವೇಗ ನೋಡಿ ಬಿಳಿ ಮೀಸೆಯ ಅಡಿಯಲ್ಲಿ , ಕೆನ್ನೆಯ ಸುಕ್ಕಿನ ಒಳಗೆ ನಗೆ ಬರುವುದುಂಟು. ರನ್ ವೆ ಗೆ ಅತಿ ಹತ್ತಿರದ ಕಟ್ಟಡದ ಒಂದರಲ್ಲಿ ಕುಳಿತಿರುವ ನನಗೆ ವಿಮಾನಗಳ ಹೆಲಿಕಾಪ್ಟರ್ ಗಳ ರೆಕ್ಕೆಯ ಪಟಪಟ ಸದ್ದು ಕಿವಿಯಲ್ಲಿ ಗುಂಯ್ ಗುಟ್ಟುತ್ತಿರುತ್ತದೆ. ಇಲ್ಲಿ ನಾನು ಕೆಲಸ ಮಾಡಲು ಶುರು ಮಾಡಿದ ದಿನಗಳಲ್ಲಿ ಪ್ರತಿ ವಿಮಾನ ಏರಿ ಇಳಿಯುವಾಗ ಮಾಡುವ ಸದ್ದಿಗೆ ಇದೇನು ನಮ್ಮ ಕಟ್ಟಡದ ಮೇಲೆ ಎರಗಿತೋ ಏನೋ ಎಂದು ಹೆದರಿ ವಿಮಾನ ಇಳಿಯುವವರೆಗೂ ಕಣ್ಣು ಕಿವಿಗಳಲ್ಲೇ ಹಿಂಬಾಲಿಸುತ್ತಿದ್ದೆ. ನೂರಾರು ಏಕರೆಗಳಷ್ಟಿರುವ ಕಚೇರಿಯ ಮೇಲಿನ ಬಾನಿನಲ್ಲಿ ಹಾರಾಡಿಕೊಂಡು ಬದುಕಿರುವ ಹಕ್ಕಿಗಳ ಗುಂಪಿಗೆ ನಾವು ವಿಮಾನ ಹೆಲಿಕಾಪ್ಟರ್ಗಳೆನ್ನುವ ‘ಪಕ್ಷಿ’ ಗಳನ್ನು ಸೇರಿಸಿದ್ದೇವೆ. ಹಕ್ಕಿಗಳನ್ನು ದೂರದಿಂದ ನೋಡಿ ಕೇಳಿ ಗುರುತು ಹಿಡಿಯಬಲ್ಲ ಪಕ್ಷಿ ಶಾಸ್ತ್ರಜ್ಞರಂತೆಯೇ ವಿಮಾನಗಳ ಸದ್ದು ದೂರದ ನೋಟದಿಂದಲೇ ಇದು ಇಂತಹದ್ದು ಎಂದು ಹೇಳಬಲ್ಲವರಿದ್ದಾರೆ. ಮೊಂಡು ಮೂಗಿನವು, ಉದ್ದ ರೆಕ್ಕೆಯವು, ಡೊಳ್ಳು ಹೊಟ್ಟೆಯವು, ಅಗಲ ಬಾಲದವು ಹೀಗೆ ತರ ತರಹದ ವಿಮಾನ ಹಕ್ಕಿಗಳು! ವಿಧ ವಿಧದ ಹಕ್ಕಿಗಳ ವಿಶಿಷ್ಟ ಕೂಗಿನಂತೆ ಬೇರೆ ಬೇರೆ ತರದ ವಿಮಾನಗಳು ತಮ್ಮದೇ ಸದ್ದು ಕೇಕೆಗಳಿಂದ ಹತ್ತಿ ಇಳಿಯುತ್ತವೆ. ಹೊತ್ತಲ್ಲದ ಹೊತ್ತಿನಲ್ಲಿ ಇಳಿಯುವ, ಕಿವಿ ಹಿಡಿಯದಷ್ಟು ಸದ್ದು ಮಾಡುತ್ತಾ ಹಾರುವ ವಿಮಾನ, ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಹೋರಾಟ ವಿಮಾನ ಎನ್ನುವುದನೆಲ್ಲ ನೋಡಿ ಶುಭ ಅಶುಭಗಳ ಶಕುನ ಹೇಳುವವರೂ ನಮ್ಮಲ್ಲಿ ತಯಾರಾಗಿದ್ದಾರೆ. ನಮ್ಮ ಕಲ್ಪನೆ ಏನೇ ಇದ್ದರೂ ಹಕ್ಕಿಗಳು ವಿಮಾನಗಳೂ ಸರಿ ಸುಮಾರಿಗೆ ಒಂದೇ ಸಂತತಿಯವು ಆಗಿ ಕಂಡರೂ ಹಕ್ಕಿಗಳು ವಿಮಾನಗಳನ್ನು ತಮ್ಮ ಗುಂಪಿಗೆ ಎಂದೂ ಸೇರಿಸಿಕೊಳ್ಳಲಿಕ್ಕಿಲ್ಲ ಎಂದು ಅನಿಸುತ್ತದೆ. ಅಥವಾ ವಿಮಾನಗಳು ಹಕ್ಕಿಗಳನ್ನು ತಮ್ಮವು ಎಂದು ಸ್ವೀಕರಿಸಲಿಕ್ಕಿಲ್ಲ .

image.png

ಮನುಷ್ಯನಿಗೆ ಹಾರಲು ಕಲಿಸಿದ್ದೇ ಹಕ್ಕಿಗಳು ಅಲ್ಲವೇ? ಅಲ್ಲವೆಂದು ಮನುಷ್ಯರು ಹೇಳಿದರೂ ಹಕ್ಕಿಗಳು ನಂಬಲಿಕ್ಕಿಲ್ಲ.   ಶತಮಾನದ ಹಿಂದೆ ಮೊತ್ತಮೊದಲ ಬಾರಿಗೆ ಆಕಾಶಕ್ಕೆ ಹಾರಲು ಯತ್ನಿಸಿದ ಸಾಹಸಿಗಳು ಕನಸುಗಾರರು ದೊಡ್ಡ ರೆಕ್ಕೆಗಳನ್ನು ತಮ್ಮ ಎಡ ಬಲಗಳಿಗೆ ಕಟ್ಟಿಕೊಂಡು ನೆಗೆಯಲು ಯತ್ನಿಸಿದ್ದರು .ಅಂತಹವರಲ್ಲಿ ಹೆಚ್ಚಿನವರು ಹಾರದೇ ಬಿದ್ದರು, ಮತ್ತೆ ಕೆಲವರು ತುಸು ದೂರ ನೆಗೆದು  ತೇಲಿದರು. ಕೆಲವು ಕಾಲದವರೆಗೆ ಈ ಪ್ರಯತ್ನ ಮುಂದುವರಿಯಿತು ಕೂಡ. ಇದು ರೈಟ್ ಸಹೋದರರ ಯಂತ್ರಚಾಲಿತ ವಿಮಾನ ಆಕಾಶವನ್ನು ಏರುವುದಕ್ಕಿಂತಲೂ ಮೊದಲಿನ ಕತೆ. ಒಂದು ನೈಸರ್ಗಿಕ  ಸೃಷ್ಟಿಯಿಂದ ಸ್ಫೂರ್ತಿ ಪಡೆದ ಮನುಷ್ಯ ಕಷ್ಟಪಟ್ಟು ಹೊಡೆದ ನಕಲು – ವಿಮಾನ. ಎಷ್ಟು ಚಂದದ ನಕಲೇ ಆದರೂ ಅಸಲಿ ಆಗುವುದಿಲ್ಲವಲ್ಲ. ಹಕ್ಕಿಗಳ ಸುಲಲಿತ , ಸರಳ , ಪರಿಸರ-ಸ್ನೇಹಿ ಹಾರಾಟ ವಿಮಾನಗಳಿಗೆ ಎಂದೂ ದಕ್ಕಲಿಕ್ಕಿಲ್ಲ. ಜೊತೆಗೆ ವಿಮಾನಗಳು ಇದ್ದಷ್ಟು ದಿನವೂ ಅದರ ಆಘಾತ, ಸದ್ದು, ಮಾಲಿನ್ಯಗಳಿಗೆ ಅಂಜುತ್ತ ಹಕ್ಕಿಗಳು ಬದುಕಬೇಕಾಗಿರುವುದೂ  ಅನಿವಾರ್ಯ. ಆದರೆ ಹಕ್ಕಿಗಳಿಂದಾಗಿ ವಿಮಾನಗಳ ಬದುಕೂ ಸುಭದ್ರ ಆಗಿ ಉಳಿದಿಲ್ಲ. ಹಕ್ಕಿಗಳು ಹಾರುವಷ್ಟು ದಿನವೂ ವಿಮಾನಗಳು ಜೀವ ಭಯದಲ್ಲಿ ತತ್ತರಿಸುತ್ತ ನಿಲ್ದಾಣಗಳಲ್ಲಿ ಏರಿ ಇಳಿಯುತ್ತವೆ. ಹಕ್ಕಿಗಳ ಆಘಾತ (bird strike) ವಿಮಾನಗಳಿಗೆ ಅತ್ಯಂತ ಮಾರಕವಾದದ್ದು.  ಅರ್ಧ ಅಥವಾ ಒಂದು ಕೆಜಿ ತೂಕದ ಮಾಂಸದ ಮುದ್ದೆಯೋ ವಸ್ತುವೋ  ಘಂಟೆಗೆ ನೂರೈವತ್ತು  ಮೈಲಿವೇಗದಲ್ಲಿ ಬಂದು ಗಟ್ಟಿಯ ಲೋಹಕ್ಕೆ ಬಡಿದರೆ ಹಕ್ಕಿ ಸಾಯುವುದರ ಜೊತೆಗೆ ಲೋಹವೂ   ಘಾಸಿಗೊಳ್ಳುತ್ತದೆ. ಹಕ್ಕಿಗಳು ಆಕಾಶದಲ್ಲೇ ನಿಂತು ರೆಕ್ಕೆ ಬಡಿಯುತ್ತಿದ್ದರೂ ವೇಗವಾಗಿ ಬರುವ ವಿಮಾನದ ಘಾತ ಹಕ್ಕಿಗೂ ವಿಮಾನಕ್ಕೂ ಎರಡಕ್ಕೂ ಆಪತ್ಕಾರಿಯೇ. ಹೀಗೆ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ ಅಥವಾ ಹಕ್ಕಿಗಳ ಗುಂಪು ಛಿದ್ರವಾಗುವುದರ ಜೊತೆಗೆ ವಿಮಾನಕ್ಕೆ ಬಡಿದ ಜಗದಲ್ಲಿ ತೀವ್ರ ಆಘಾತವಾಗಿರುತ್ತದೆ.  ವಿಮಾನಶಾಸ್ತ್ರದಲ್ಲಿ ಹಕ್ಕಿಗಳ ಆಘಾತದ ಅಧ್ಯಯನವೂ ಒಂದು ವಿಭಾಗ. ಹಕ್ಕಿಗಳ ಸಮೂಹ ಆಕಾಶಕ್ಕೆ ಏರುತ್ತಿರುವ ಅಥವಾ ನೆಲಕ್ಕೆ ಇಳಿಯುತ್ತಿರುವ ವಿಮಾನದ ರೆಕ್ಕೆಗೆ, ಎಂಜಿನ್ ಗೆ ಬಡಿದು ಅಪಘಾತಗೊಂಡ ವಿಮಾನಗಳ ಉದ್ದದ ಪಟ್ಟಿಯೇ ಇದೆ. ವಿಮಾನಗಳ ವಿನ್ಯಾಸದಲ್ಲಿ ಹಕ್ಕಿಗಳ ಗಾತ್ರ ತೂಕ ಬಗೆಯನ್ನು ಕಲ್ಪಿಸಿ  ಲೆಕ್ಕಾಚಾರ ಮಾಡಿ ಒಂದು ವೇಳೆ ಹಾಗೊಂದು ಆಘಾತ ಆದರೆ ವಿಮಾನ ಎಷ್ಟು ತುರ್ತಾಗಿ ಸುರಕ್ಷಿತವಾಗಿ ನಿಲ್ದಾಣವನ್ನು ಸೇರಬಹುದು ಎನ್ನುವ ಪರಿಗಣನೆ ಇರುತ್ತದೆ .

image.png

 

ವಿಮಾನಗಳು ಆಕಾಶಕ್ಕೆ ಲಗ್ಗೆ ಇಟ್ಟ ಲಾಗಾಯ್ತಿನಿಂದ ವಿಮಾನದ ಆಘಾತಕ್ಕೋ, ಶಬ್ದಕ್ಕೋ ಅಥವಾ ವಿಮಾನ ಉಗುಳುವ ಹೊಗೆಗೋ ಬಲಿಯಾಗಿ ಉರುಳಿದ ಹಕ್ಕಿಗಳ ಲೆಕ್ಕ ಇಟ್ಟವರು ಒಬ್ಬರೂ ಇಲ್ಲ. ಅಥವಾ ಹಕ್ಕಿಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದವರೂ ಯಾರೂ ಇಲ್ಲ. ಹಾರುವ ವಸ್ತು ವಿಷಯಗಳಲ್ಲೇ ಪರಿಪೂರ್ಣ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಹೊಂದಿದ ಹಕ್ಕಿಯೊಂದು ಹುಟ್ಟಲು ಮರದ ರೆಂಬೆಯ ಮೇಲೆ ಕುಳಿತು ಕಣ್ಣು ಮಿಟುಕಿಸಿ ಮಾತಾಡುವ ಒಂದು ಗಂಡು ಇನ್ನೊಂದು ಹೆಣ್ಣು ಹಕ್ಕಿಗಳ ನಡುವಿನ ಪ್ರೀತಿ ಸಾಕು. ಮತ್ತೆ ಅವುಗಳ ಸಹಜ ಸುಂದರ ಹಾರಾಟ ಶುರು ಆಗಲು ಬಲಿತ ರೆಕ್ಕೆಗಳು ಅವುಗಳ ಸುಲಲಿತ  ಚಲನೆ ಅಷ್ಟೇ ಬೇಕು. ಹಕ್ಕಿಯೊಂದರ ಸಾಹಸಗಳನ್ನು ತಾನೂ ಮಾಡಬಲ್ಲೆ ಎಂದು ತೋರಿಸುವ ವಿಮಾನವೊಂದು ತಯಾರಾಗಲು ವರ್ಷಗಳ ಸಮಯ ಮತ್ತು ದುಡಿತ ಬೇಕು. ಮತ್ತೆ ಆ ವಿಮಾನಗಳು ನೆಗೆಯಲು ತೇಲಲು ಜ್ಞಾನ ವಿಜ್ಞಾನ ಪರೀಕ್ಷೆ ಲೆಕ್ಕಾಚಾರಗಳೂ ಬೇಕು. ಒಂದೇ ಮನೆತನದಲ್ಲಿ ಹುಟ್ಟಿದ  ಹಕ್ಕಿಗಳು ಮತ್ತು ವಿಮಾನಗಳ ನಡುವೆ ಎಷ್ಟು ಹೋಲಿಕೆಗಳು  ಹಾಗು ಎಷ್ಟು ವಿರೋಧಗಳು. ತಾವು ಹಾರುವುದನ್ನು ನೋಡುತ್ತಾ ತಮ್ಮಂತೆ ಹಾರುವ ಯಂತ್ರವನ್ನು ಮನುಷ್ಯರು ನಿರ್ಮಿಸುತ್ತಿದ್ದಾಗ ಹಕ್ಕಿಗಳಿಗೆ ಮುಂದೆ ತಮ್ಮ ಸಂಕುಲಕ್ಕೆ ಆ ಯಂತ್ರಗಳಿಂದ ಬರಬಹುದಾದ ಆಪತ್ತು ತಿಳಿದಿರಲಿಲ್ಲ. ವಿಮಾನವನ್ನು ಅಂದು  ನಿರ್ಮಿಸಿದವರು ತಾವು ಅನುಕರಿಸಿದ ಗುರು, ಹಕ್ಕಿಗಳೇ ಮುಂದೆ ತಮ್ಮನ್ನು ಆಕಾಶದಲ್ಲಿ ಕಾಡಬಹುದು ಎಂದೂ ಅಂದುಕೊಂಡಿರಲಿಲ್ಲ.

__________________________________________________________________________________
ಕಣ್ಣೋಟ
image.png
ಶರಣ್ರೀ 🙏!

 

ಈ ಜಗತ್ತಿನ ಚಲನ ವಲನ ಎಲ್ಲ ಆ ಸೂರ್ಯಾನ್ಮ್ಯಾಲೇ ನಿರ್ಭರ ಅಲ್ಲರೀ ? ಆ ಸೂರ್ಯಾ ತನ್ನ ಬೆಳ್ಕನಿಂದ ಈ ಭೂಮಿ ಮ್ಯಾಲೇ ಎಷ್ಟ್ ಛಂದ್ ಛಂದ ಬಣ್ಣ ಬಳೀತಾನೋ ಅಷ್ಟ ಛಂದ ಬಣ್ಣದ ಆಟಾ ಮುಗಿಲ್ನ್ಯಾಗ ಆಡ್ತಾನಾ.

 

ಹುಟ್ಟಬೇಕಾದ್ರ ಒಂದ್ ಥರಾ ಛಂದ್ಇದ್ರ ಮುಳಗಬೇಕಾದ್ರ ಇನ್ನೊಂದ್ ಥರಾ ಛಂದ್ ನೋಡ್ರಿ. ಇಳಿಯೋ ಸೂರ್ಯ ಒಂದ್ ಅಧ್ಭುತ ಸಂದೇಶ ಕೊಡ್ತಾನ ನಮಗೆಲ್ಲ! ಅದೇನಪಾ ಅಂದ್ರ ‘ಏರಬೇಕಾದ್ರ ಎಷ್ಟ್ ಖುಷಿ ಇರ್ತೇತ್ಯೋ ಇಳಿಬೇಕಾದ್ರು ಅಷ್ಟ ಖುಷಿ ಇರ್ಲಿ ‘ ಅಂತ! ಜೀವನಾ ಅಂದ್ರ ಏರೋದು ಇಳಿಯೂದು ಅಲ್ಲೇನ್ರಿ? 🙂

 

ಸೂರ್ಯಾಸ್ಥ ನೋಡೂ ಎಷ್ಟ್ ಜಾಗಾ ಅದಾವ್ ಅಲ್ರಿ? – ನಮ್ಮ್ ‘ಆಗುಂಬೆಯಾ ಪ್ರೇಮಸಂಜೆಯಾ’ ಹಾಡ್ ನೆನಪಾತ್ ರೀ 😀 ಅದೂ ವಸಂತ ಋತು ಬಂದ್ರಂತೂ ಹಬ್ಬಾನ ಹಬ್ಬಾ. ಸೂರ್ಯಾಸ್ಥ ಛಂದನೋ ಏನ್ ಸೂರ್ಯ ಮುಗಿಲಿನ ಎತ್ತರಕ್ಕ ಏರಿದ್ದು ನೋಡಿ ಖುಷಿ ಆಗಿ ಅರಳಿದ್ದ ಹೂವು ಹುಲ್ಲು ಛಂದನೋ ಅಂತ ಗೊತ್ತಾಗಂಗಿಲ್ಲ !

 

ಇದನ್ನ ನಾನು ನನ್ನ ಸೇರಿಹಿಡದೇನಿ ನೋಡ್ರಿ!

image.png

 

image.png
__________________________________________________________________________________
ವಿ.ಸೂ: ಇಂದಿಗೆ ನನ್ನ ಲೆಕ್ಕದ ಮೂರು ತಿಂಗಳು ಮುಗಿಯಿತು. ಲೇಖನಗಳು, ಕವನಗಳು, ಅಭಿಪ್ರಾಯಗಳು, ಆಗಾಗ ಮೆಚ್ಚುಗೆಯ ಮಾತು, ಮತ್ತೆ, ಅಪರೂಪಕ್ಕೊಮ್ಮೆ, ಟೀಕೆಯ ಚುಚ್ಚುಗಳಲ್ಲಿ ನನ್ನನ್ನು ಸಲಹಿದ ಅನಿವಾಸಿ ಓದುಗರಿಗೆ ಮತ್ತು ಲೇಖಕ ಬಳಗಕ್ಕೆ ನನ್ನ ವಿನಮ್ರ ನಮನಗಳು. ಹಾಗೆಯೇ, ಈ ಅವಕಾಶ ಕೊಟ್ಟ ಮತ್ತು ಅಲ್ಲಲ್ಲಿ ಕಂಡ ತಪ್ಪುಗಳನ್ನು ಒಪ್ಪಾಗಿಸುವಲ್ಲಿ ತಾಳ್ಮೆಯಿಂದ ತಿದ್ದಿದ ಶ್ರೀವತ್ಸ ದೇಸಾಯಿ ಮತ್ತು ಇತರ ಹಿರಿಯ ಅನಿವಾಸಿ ಸಂಪಾದಕ ತಂಡಕ್ಕೆ ಧನ್ಯತೆಯ ನಮನಗಳು. ಅನಿವಾಸಿಯ ಈ ತಾಣ ಬೆಳೆಯಲಿ; ಬರುವ  ದಿನಗಳಲ್ಲಿ ಯುಕೆಯಲ್ಲಿ ಕನ್ನಡವನ್ನು ಮುಂದಿನ ಪೀಳಿಗೆಗೆ ಕಲಿಸಿ, ಉಳಿಸುವಲ್ಲಿ ದೊಡ್ಡ ಪಾತ್ರ ವಹಿಸಲಿ ಎಂದು ಹಾರೈಸುತ್ತ … Good Bye for now.

 

ಅಮ್ಮನ ಮನೆ

ಮಾರ್ಚ್ ತಿಂಗಳ ಕೊನೆಯ ಭಾನುವಾರ ಇಂಗ್ಲೆಂಡ್ ಸೇರಿದಂತೆ ಕೆಲವು ದೇಶಗಳಲ್ಲಿ ಆಚರಿಸುವ ಮಾತೃ ದಿನವನ್ನ ಅಕ್ಷರಗಳಲ್ಲಿ ಮೆರೆಸುವ ಅನಿವಾಸಿಯ ಸರಣಿಯ ಮೂರನೇ ಮತ್ತು, ಈ ವರ್ಷದ ಕೊನೆಯ ಕಂತು ಈ ವಾರದ ಲೇಖನಗಳು. ಸೃಷ್ಟಿಯ ಆದಿಯ ಶೂನ್ಯ ಶಕ್ತಿಯನ್ನ, ಹಲವಾರು ಹೆಸರುಗಳಲ್ಲಿ ಪುರಾಣಗಳು ಉಲ್ಲೇಖಿಸಿವೆ. ಸೃಷ್ಟಿ-ಸ್ಥಿತಿ-ಲಯಗಳ ಈ ಬ್ರಹ್ಮಾಂಡದ ಜನನಿಯನ್ನ ಆದಿ ಪರಾಶಕ್ತಿಯೆಂದೂ, ಆಕೆಯ ಅನನ್ಯ ಸಾಧ್ಯತೆ, ರೂಪಗಳನ್ನ ನೂರಾರು ದೇವಿಯರ ಹೆಸರಿನಲ್ಲಿ ತಾಯಿ ಸ್ಥಾನದಲ್ಲಿಟ್ಟು ಪೂಜಿಸುವದು ಭಾರತದೆಲ್ಲೆಡೆಯ ಆಚರಣೆ. ತ್ಯಾಗ, ಕರುಣೆ, ಪ್ರೀತಿ, ಧೈರ್ಯ, ತಾಳ್ಮೆ, ಹೀಗೆ ಎಲ್ಲ ಗುಣಗಳ ಉತ್ತುಂಗದ ಉದಾರಹಣೆಗಳಿಗೆ ಅಮ್ಮನೇ ಮಾಪನ. ಇಂತಹ ತಾಯಿ ಶಕ್ತಿಯ ಮೆರವಣಿಗೆ ಈ ವಾರದ ಎರಡು ಲೇಖನಗಳು.

ಮೊದಲನೆಯದು, ಉಮಾ ವೆಂಕಟೇಶ್ ಬರೆದಿರುವ ಡೇಮ್ ಜೋಸೆಲಿನ್ ಬೆಲ್-ಬರ್ನೆಲ್ ಇವರ ಪರಿಚಯ. ಪರಿಚಯ ಎನ್ನುವದಕ್ಕಿಂತ, ಈ ಪ್ರಸಿದ್ಧ ವಿಜ್ಞಾನಿಯನ್ನ ಹತ್ತಿರದಿಂದ ನೋಡುವ, ಮಾತನಾಡುವ ಅವಕಾಶದ ಅನುಭವವನ್ನ ನಮ್ಮೊಂದಿಗೆ ಹಂಚಿಕೊಂಡ ಹಿರಿತನ – ಔತಣಕ್ಕೆ ಹೋದ ಅಮ್ಮ ಮನೆಯ ಮಕ್ಕಳಿಗೆ ಕಜ್ಜಾಯ ಕಟ್ಟಿಕೊಂಡು ಬಂದಂತೆ! ಎರಡನೆಯದು, ರಾಮಶರಣ್ ಲಕ್ಷ್ಮೀನಾರಾಯಣ ಬರೆದ ಅವರ ಅಮ್ಮನ ಜೀವನದ ಸಾರಾಂಶ. ಇಬ್ಬರಿಗೂ ಧನ್ಯವಾದ.

ಈ ಎರಡೂ ತಾಯಂದಿರದ್ದು  ಹೊರನೋಟಕ್ಕೆ ಬೇರೆ ಬೇರೆ ಪ್ರಪಂಚ. ಒಬ್ಬಾಕೆ ಬ್ರಹ್ಮಾಂಡವೇ ಮನೆಯೆನ್ನವ ಸಾಧಕಿ. ಇನ್ನೊಬ್ಬಾಕೆ ಮನೆಯೇ ಬ್ರಹ್ಮಾಂಡವೆಂಬ ಮಾತೆ. ಹುಡುಕುತ್ತ ಹೋದರೆ ಇಬ್ಬರ ನಡುವಿನ ಸಾಮ್ಯತೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ತ್ಯಾಗ, ತಾಳ್ಮೆ, ಕರುಣೆ, ಕ್ಷಮೆ, ಪ್ರೀತಿ ಹೀಗೆ ಹಲವು ರೂಪಗಳಲ್ಲಿ ಪ್ರಕಟವಾಗುವ ತಾಯಿತನದ ಶಕ್ತಿ ಒಂದೇ ಎನ್ನುವದನ್ನ ಈ ಎರಡು ಜೀವನ ರೂಪಕಗಳು ಎತ್ತಿ ಹೇಳುತ್ತವೆ.

ಸಾವಕಾಶದಲ್ಲಿ ಈ ಲೇಖನಗಳನ್ನು ಓದಿ ನಿಮ್ಮ ಸದಭಿಪ್ರಾಯಗಳನ್ನು ಅನಿವಾಸಿಯಲ್ಲಿ ಹಂಚಿಕೊಳ್ಳುವಿರೆಂದು ನಮ್ಮ ವಿಶ್ವಾಸ.

ಸೂ: ಲೇಖನಗಳನ್ನು ಜೋಡಿಸುವಾಗ ಕಣ್ತಪ್ಪಿನಲ್ಲಿ ಎಲ್ಲಾದರೂ ದೋಷ ನುಸುಳಿದ್ದರೆ ಕ್ಷಮೆಯಿರಲಿ.

 

 

ಡೇಮ್ ಜೋಸಲೀನ್ ಬೆಲ್ ಬರ್ನೆಲ್

ಕಳೆದ ತಿಂಗಳು ಜನವರಿ ೨೬ರಂದು, ಪೆನ್ಸಿಲ್ವೇನಿಯಾದಲ್ಲಿರುವ ಸ್ಟೇಟ್ ಕಾಲೇಜ್ ಪಟ್ಟಣದಲ್ಲಿ, ಪೆನ್ ಸ್ಟೇಟ್ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಬೆಳಿಗ್ಗೆ ೧೧ರ ವೇಳೆಗೆ ಸಂಭ್ರಮದ ವಾತಾವರಣ! ಇಲ್ಲಿನ ಹಕ್ ಜೀವವಿಜ್ಞಾನ ಕಟ್ಟಡದಲ್ಲಿರುವ ಸುಂದರವಾದ, ಭವ್ಯ ಬೆರ್ಗ್ ಸಭಾಂಗಣದಲ್ಲಿ ಸ್ಟೇಟ್ ಕಾಲೇಜ್ ಊರಿನ ಸಮುದಾಯ ಕಿಕ್ಕಿರಿದು ನೆರೆದಿದ್ದರು. ಹೊರಗೋ ಜನವರಿ ತಿಂಗಳ ಕೊರೆಯುವ -೧೦ ಡಿಗ್ರಿ ಸೆಲ್ಶಿಯಸ್ ತಾಪಮಾನ. ಹಲವಾರು ಪದರಗಳ ಬಟ್ಟೆಯ ಜೊತೆಗೆ, ಬೆಚ್ಚನೆಯ ಕೋಟ್, ಟೋಪಿ, ಕೈಗವಸುಗಳನ್ನು ತೊಟ್ಟ ಎಲ್ಲಾ ವಯಸ್ಸಿನ ಜನಗಳು ನೆರೆದಿದ್ದ ಆ ಸಭಾಂಗಣದಲ್ಲಿ, ಹೊರಗಿನ ಚಳಿಯ ಕೊರೆತ ಅಲ್ಲಿದ್ದವರ ಉತ್ಸಾಹವನ್ನು ತಣ್ಣಗಾಗಿಸಿದ್ದಂತೆ ಕಾಣಲಿಲ್ಲ. ಇವರೆಲ್ಲರ ಉತ್ಸಾಹಕ್ಕೆ ಕಾರಣಳಾದ ವ್ಯಕ್ತಿ, ಈ ವರ್ಷದ  Special Breakthrough Prize ಪುರಸ್ಕಾರವನ್ನು ಪಡೆದ ಪ್ರಸಿದ್ಧ ಬ್ರಿಟಿಷ್ ರೇಡಿಯೋ ಖಗೋಳತಜ್ಞೆ, ಡೇಮ್ ಜೋಸಲೀನ್ ಬೆಲ್ ಬರ್ನೆಲ್. ೧೯೬೫ರಲ್ಲಿ, ತನ್ನ ಪಿ ಎಚ್ ಡಿ ಅಧ್ಯಯನದ ದಿನಗಳಲ್ಲೇ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಆಕೆ ” ರೇಡಿಯೋ ಪಲ್ಸಾರ್”ಗಳೆಂಬ ನ್ಯೂಟ್ರಾನ್ ನಕ್ಷತ್ರಗಳಿಂದ ಹೊಮ್ಮುವ ವಿಕಿರಣ ಕಿರಣಗಳನ್ನು ಮೊತ್ತಮೊದಲ ಬಾರಿಗೆ ತನ್ನ ಪ್ರಯೋಗದಲ್ಲಿ ಪತ್ತೆಹಚ್ಚಿದ್ದಳು. ಆದರೂ, ಈಕೆಯನ್ನು ನೋಬೆಲ್ ಸಮಿತಿ ಕಡೆಗಣಿಸಿ, ಇವಳ ಸಹಶೋಧಕ ಪುರುಷರಿಬ್ಬರಿಗೆ ನೋಬೆಲ್ ಪುರಸ್ಕಾರವನ್ನು ನೀಡಿದ್ದ ಕುಖ್ಯಾತ ಸಂಗತಿ ಈಗ ಜನವಿದಿತವಾದ ಮಾತು. ನೋಬೆಲ್ ಸಮಿತಿ ಈ ರೀತಿ ಎಡವಿರುವ ಪ್ರಸಂಗಗಳಿಗೆ ಹೆಸರುವಾಸಿ! ಪೆನ್ ಸ್ಟೇಟ್ ವಿಶ್ವವಿದ್ಯಾಲಯದ ಖಭೌತಶಾಸ್ತ್ರ ವಿಭಾಗವು, ತನ್ನ ಗಣ್ಯ ಉಪನ್ಯಾಸ ಮಾಲಿಕೆಯ ೨೦೧೯ರ ಸರಣಿಯಲ್ಲಿ ಜೋಸಲೀನ್ ಬೆಲ್ಲಳನ್ನು ಆಹ್ವಾನಿಸಿದ್ದ ವಿಷಯ ಈಗ ೬ ತಿಂಗಳ ಹಿಂದೆಯೇ ನನಗೆ ತಿಳಿದಿತ್ತು. ಹಾಗಾಗಿ ಈ ದಿನಕ್ಕೆ ಬಹಳ ಕಾತುರಳಾಗಿ ಕಾಯುತ್ತಿದ್ದೆ!

ಪೆನ್ ಸ್ಟೇಟ್ ವಿಶ್ವವಿದ್ಯಾಲಯದ ಸಾರ್ವಜನಿಕ ಪ್ರಭಾವ ಚಟುವಟಿಕೆಗಳ ವಿಭಾಗದ ಸಿಬ್ಬಂದಿಯವರು ಉತ್ತಮವಾದ ಪ್ರಚಾರವನ್ನು ನೀಡಿದ್ದರೆಂಬುದು ಅಲ್ಲಿ ನೆರೆದ ಜನಸಂಖ್ಯೆಯಿಂದ ತಿಳಿದು ಬರುತ್ತಿತ್ತು. ನನಗೆ ಜೋಸಲೀನ್ ಸಂಶೋಧನೆ ಮತ್ತು ಆಕೆಯ ಜೀವನದ ಬಗ್ಗೆ ಈಗಾಗಲೇ ಸುಮಾರು ೨೫ ವರ್ಷಗಳ ಹಿಂದೆಯೇ ತಿಳಿದಿತ್ತು. ನನ್ನ ಪತಿ ಖಭೌತಶಾಸ್ತ್ರಜ್ಞನಾದ್ದರಿಂದ, ಈ ವಿಷಯದಲ್ಲಿ ಕಾರ್ಯ ನಿರ್ವಹಿಸಿರುವ ಪ್ರಖ್ಯಾತರು ನಮ್ಮ ಸಂಭಾಷಣೆ ಚರ್ಚೆಗಳಲ್ಲಿ ನುಸುಳುತ್ತಲೇ ಇರುತ್ತಾರೆ. ಇದೆಲ್ಲದರ ಜೊತೆಗೆ ನಾನು ಜನಪ್ರಿಯ ವಿಜ್ಞಾನದ ಲೇಖನಗಳನ್ನು ಬರೆಯುವ ಹವ್ಯಾಸ ಹೊಂದಿರುವುದರಿಂದ, ಪ್ರಖ್ಯಾತರ ಬಗ್ಗೆ ಓದುವ ಚಟವಿದೆ. ಈಗ ಸುಮಾರು ೪ ವರ್ಷಗಳಿಂದ, ಬಹಳ ಉತ್ಸಾಹದಿಂದ ಅನುವಾದಿಸುತ್ತಿರುವ “ದಿ ಎಡ್ಜ್ ಆಫ಼್ ಫ಼ಿಸಿಕ್ಸ್” ಎನ್ನುವ ಜನಪ್ರಿಯ ವೈಜ್ಞಾನಿಕ ಪುಸ್ತಕದ ಒಂದು ಪೂರ್ಣ ಅಧ್ಯಾಯದಲ್ಲಿ, ಜೋಸಲೀನ್ ಬೆಲ್ ನಡೆಸಿದ ಸಂಶೋಧನೆ, ಅವಳ ಹಿನ್ನೆಲೆ, ಆ ಸಮಯದಲ್ಲಿ ವಿಜ್ಞಾನ ಪ್ರಪಂಚ ಆಕೆಯನ್ನು ನಡೆಸಿಕೊಂಡ ರೀತಿ ಹಾಗೂ ರೇಡಿಯೋ ಖಭೌತಶಾಸ್ತ್ರಕ್ಕೆ ಆಕೆ ನೀಡಿರುವ ಕೊಡುಗೆಯ ಬಗ್ಗೆ ಬಹಳ ಉತ್ತಮವಾದ ವಿವರಣೆ ಇದೆ. ಆದರಿಂದ ಉತ್ತೇಜನ ಹೊಂದಿದ್ದ ನಾನು, ಆಕೆಯನ್ನು ಪ್ರತ್ಯಕ್ಷವಾಗಿ ನೋಡಿ, ಆಕೆಯ ಭಾಷಣವನ್ನು ಕೇಳುವ ಈ ಅವಕಾಶಕ್ಕೆ ಬಹಳ ಕಾತುರಳಾಗಿ ಎದಿರು ನೋಡುತ್ತಿದ್ದೆ. ಕಳೆದ ತಿಂಗಳ ೨೬ನೆಯ ತಾರೀಖು ಆ ಸುದಿನವಾಗಿತ್ತು. ನನ್ನ ಪತಿ ಈ ಉಪನ್ಯಾಸ ಮಾಲಿಕೆಯ ಸಂಘಟನಾ ಸಮಿತಿಯಲ್ಲಿ ಸದಸ್ಯನಾದ್ದರಿಂದ, ಸಭಾಂಗಣದ ಮುಂದಿನ ಸಾಲಿನಲ್ಲಿ ಕೂತು, ಜೋಸಲೀನ್ ಬೆಲ್ ಭಾಷಣವನ್ನು ಕೇಳುವ ಸುವರ್ಣಾವಕಾಶ ದೊರೆತಿತ್ತು.

image.png

(ಡೇಮ್ ಜೋಸೆಲಿನ್ ಬೆಲ್ ಬರ್ನೆಲ್ ಜೊತೆಗೆ ಲೇಖಕಿ. ಚಿತ್ರ ಕೃಪೆ: ಉಮಾ ವೆಂಕಟೇಶ್)

ಒಳಗೆ ಹೋದೊಡನೆ ಅಷ್ಟು ಹೊತ್ತಿಗೆ ಅಲ್ಲಿ ಸಿದ್ಧವಾಗಿ ಸಭಾಮಂಟಪದಲ್ಲಿ ನಿಂತಿದ್ದ ಜೋಸಲೀನ್ ನನ್ನ ಕಣ್ಣಿಗೆ ಬಿದ್ದರು. ಸುಮಾರು ೫ ಅಡಿ ಎತ್ತರದ ಸಣ್ಣ ಸ್ವರೂಪಿನ ಈಕೆ, ತನ್ನ ದೇಹದಾರ್ಢ್ಯವನ್ನು ಉತ್ತಮವಾಗಿ ಕಾಪಾಡಿಕೊಂಡಿದ್ದಾರೆ. ಅಷ್ಟೇ ಅಲ್ಲಾ, ಆಕೆಯ ಚುರುಕುತನ, ಗ್ರಹಣಾಶಕ್ತಿ ನಿಜಕ್ಕೂ ಶ್ಲಾಘನೀಯ. ಸುಮಾರು ೭೫ ವರ್ಷ ವಯಸ್ಸಿನ ಆಕೆ, ಇಂದಿಗೂ ಬಹಳ ಚಟುವಟಿಕೆಯ ಜೀವನವನ್ನು ನಡೆಸುತ್ತಿದ್ದಾರೆ ಎನ್ನುವ ವಿಷಯ ತಿಳಿದು ಬಹಳ ಹೆಮ್ಮೆಯೆನಿಸಿತು. ನನ್ನ ಪತಿ ಆಕೆಯನ್ನು ನನಗೆ ಪರಿಚಯಿಸಿದಾಗ, ಆಕೆ ನನ್ನ ಹೆಸರನ್ನು ಬಹಳ ಸ್ಪಷ್ಟವಾಗಿ ಉಚ್ಚರಿಸಿದರು. ನನಗೆ ಬಹಳ ಖುಷಿಯಾಯಿತು. ಸಾಮಾನ್ಯವಾಗಿ ಬ್ರಿಟಿಷ್ ಜನರು ನನ್ನ ಹೆಸರನ್ನು, ಊಮಾ ಅಂತಲೋ, ಅಥವಾ ಯೂಮಾ ಅಂತಲೋ ಕರೆಯುವುದು ಸಾಮಾನ್ಯ. ಸರಿ ಉಪನ್ಯಾಸ ಆಕೆಯ ಪರಿಚಯವಾದ ನಂತರ ಪ್ರಾರಂಭವಾಯಿತು. ಸಾಮಾನ್ಯವಾಗಿ ಬ್ರಿಟಿಷರು, ಅದರಲ್ಲೂ ಆಕ್ಸಫ಼ರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಪಳಗಿದ ಪಂಡಿತರ ಸ್ಪಷ್ಟವಾದ ಇಂಗ್ಲೀಷ್ ಕೇಳುವುದೇ ಒಂದು ರೀತಿಯ ಅನನ್ಯವಾದ ಅನುಭವ. ಜೋಸಲೀನ್ ಸಿದ್ಧಪಡಿಸಿದ್ದ ಸ್ಲೈಡುಗಳು ಬಹಳ ಸರಳವಾಗಿದ್ದವು. Discovery of Pulsars, A Graduate student’s Story ಎನ್ನುವ ಸ್ವಾರಸ್ಯವಾಗಿದ್ದ ಶೀರ್ಷಿಕೆಯ ಆಕೆಯ ಉಪನ್ಯಾಸದಲ್ಲಿ, ತನ್ನ ಸಂಶೋಧನೆಯನ್ನು ಅಲ್ಲಿದ್ದ ಸಾಮಾನ್ಯ ಜನಗಳಿಗೆ ತಲುಪಿಸಿದ ಆಕೆಯ ಭಾಷಣ ವೈಖರಿ ನಿಜಕ್ಕೂ ಸೊಗಸಾಗಿತ್ತು. ತನ್ನ ಕೇಂಬ್ರಿಡ್ಜ್ ದಿನಗಳ ವಿವರಣೆಯನ್ನು ಬಹಳ ಸ್ವಾರಸ್ಯಪೂರ್ಣವಾಗಿ, ಅಲ್ಲಲ್ಲೇ ಬ್ರಿಟಿಷ್ ಹಾಸ್ಯದೊಡನೆ ಬೆರೆಸಿ ಮಾತನಾಡಿದ ಶೈಲಿ ಅಲ್ಲಿ ನೆರೆದಿದ್ದ ಜನರ ಮನಸ್ಸಿಗೆ ಬಹಳ ಮೆಚ್ಚುಗೆಯಾಗಿತ್ತು ಎನ್ನುವುದಕ್ಕೆ, ನನ್ನ ಪಕ್ಕದಲ್ಲಿ ಕುಳಿತಿದ್ದ ಪ್ರೇಕ್ಷಕರ ಮೆಚ್ಚುಗೆಯ ಉದ್ಗಾರಗಳೇ ಸಾಕ್ಷಿಯಾಗಿದ್ದವು. ಹೊಸದಾಗಿ ಕೇಂಬ್ರಿಡ್ಜಿಗೆ ಬರುವ ವಿದ್ಯಾರ್ಥಿಗಳಲ್ಲಿ ಉದ್ಭವಿಸುವ ಕೀಳರಿಮೆಯನ್ನು “Imposter Syndrome” ಎನ್ನುವ ಹೆಸರಿನಿಂದ ಕರೆಯುತ್ತಾ, ನವಿರಾದ ಹಾಸ್ಯದೊಂದಿಗೆ ತಮ್ಮದೂ ಅದೇ ಪರಿಸ್ಥಿತಿಯಾಗಿತ್ತು ಎಂದ ಜೋಸಲೀನ್, ಅಂದಿನ ಕೇಂಬ್ರಿಡ್ಜಿನಲ್ಲಿ, ಶ್ರೇಷ್ಠತೆಯ ಅಹಂಭಾವದಿಂದ ಮೆರೆಯುವ ಜನಗಳ ಮಧ್ಯೆ ತಾವು ಎದುರಿಸಬೇಕಾಗಿದ್ದ ಸನ್ನಿವೇಶವನ್ನು ಬಹಳ ಚೊಕ್ಕವಾಗಿ ವರ್ಣಿಸಿದರು.

ಉದಾಹರಣೆಗೆ, ಕಾಸ್ಮಾಲಜಿಯ ತಜ್ಞರ ಬಗ್ಗೆ ಆಕೆ ಹೇಳಿದ ಒಂದು ಸಾಲನ್ನು ಇಲ್ಲಿ ಹೇಳಲೇ ಬೇಕು. ಸಾಮಾನ್ಯವಾಗಿ, ಕಾಸ್ಮಾಲಜಿ ತಜ್ಞರಿಗೆ ತಮ್ಮ ಬಗ್ಗೆ ಬಹಳ ಹೆಮ್ಮೆ ಮತ್ತು ಅಹಂಕಾರಗಳ ಭಾವನೆ ಇರುತ್ತವೆ ಎನ್ನುವುದನ್ನು ಎಲ್ಲಾ ಭೌತಶಾಸ್ತ್ರಜ್ಞರೂ ಒಪ್ಪಿಕೊಳ್ಳುತ್ತಾರೆ. ಆ ವಿಷಯವನ್ನು ಜೋಸಲೀನ್, ಪ್ರಸಿದ್ಧ ರಶ್ಯನ್ ಸೈದ್ಧಾಂತಿಕ ಭೌತವಿಜ್ಞಾನಿ ಯಾಕೋವ್ ಝೆಲ್ಡೊವಿಚ್ ಹೇಳಿರುವಂತೆ “Cosmologists are seldom right, but never in doubt” ಎನ್ನುವ ಸಾಲಿನೊಡನೆ ಬೆರೆಸಿ ಹೇಳಿದಾಗ, ಇಡೀ ಸಭಾಂಗಣದಲ್ಲಿ ನಗೆಯ ಬುಗ್ಗೆ ಉಕ್ಕಿತು. ಪಲ್ಸಾರ್ ಬಗ್ಗೆ ತಾನು ನಡೆಸಿದ ಪ್ರಯೋಗ, ಅದರ ಅನುಭವ ಮತ್ತು ಆ ಸಂಶೋಧನೆಯ ಮಹತ್ವಗಳನ್ನು ಸ್ಪಷ್ಟವಾಗಿ ಸಾಮಾನ್ಯರಿಗೆ ಮನನವಾಗುವಂತೆ ತಿಳಿಸಿಕೊಟ್ಟ ಜೋಸಲೀನ್ ಅವರಿಗೆ ಮಾತುಗಾರಿಕೆ ಬಹಳ ಕರಗತವಾದ ಕಲೆ ಎಂದು ತಿಳಿದುಬಂತು.

೧೯೬೦ರ ಮಧ್ಯಭಾಗದಲ್ಲಿ, ಅಂದು ಜೋಸಲೀನ್ ಬೆಲ್ಲಳ ಪಿ.ಎಚ್.ಡಿ ಸಲಹಾಗಾರರಾಗಿದ್ದ ಪ್ರೊಫ಼ೆಸರ್ ಆಂಥನಿ ಹ್ಯೂಯಿಶ್, ಕೇಂಬ್ರಿಡ್ಜಿನ ಹೊರವಲಯದಲ್ಲಿದ್ದ ಸುಮಾರು ೪.೫ ಎಕರೆಗಳ ಜಮೀನಿನಲ್ಲಿ ರೇಡಿಯೋ ದೂರದರ್ಶಕವೊಂದನ್ನು ವಿನ್ಯಾಸಗೊಳಿಸಿದ್ದರು. ಅದರ ಮೂಲಕ, ಕ್ವೇಸಾರುಗಳು ಮತ್ತು ಇತರ ರೇಡಿಯೋ ಗೆಲಾಕ್ಸಿಗಳನ್ನು ಹುಡುಕುವ ಪ್ರಯತ್ನ ನಡೆಸಿದ್ದರು. ಈ ಕ್ವೇಸಾರುಗಳು ಅತ್ಯಂತ ಪ್ರಬಲವಾದ ಹಾಗೂ ಬಹುದೂರದಲ್ಲಿರುವ ರೇಡಿಯೋ ತರಂಗಗಳ ಉತ್ಪತ್ತಿಸ್ಥಾನವೆಂದು ಅಂದಿನ ಖಗೋಳವಿಜ್ಞಾನಿಗಳು ನಂಬಿದ್ದರು. ಇಂದು, ಆ ಕ್ವೇಸಾರುಗಳು ಆರಂಭಿಕ ವಿಶ್ವದ ತರುಣ ಗೆಲಾಕ್ಸಿಗಳೆಂದೂ, ಅವುಗಳ ಕೇಂದ್ರಭಾಗದಲ್ಲಿ ಬೃಹತ್ ಕಪ್ಪುಕುಳಿಗಳಿವೆ ಎನ್ನುವ ಸಂಗತಿ ನಮಗೆ ತಿಳಿದಿದೆ. ಆದರೆ, ೧೯೬೦ರ ದಶಕದಲ್ಲಿ ಆ ಕ್ವೇಸಾರುಗಳು ಇನ್ನೂ ನಿಗೂಢವಾಗಿಯೇ ಇದ್ದವು. ಆಂಥೊನಿ ಹ್ಯೂಯಿಶನ ಆ ರೇಡಿಯೋ ದೂರದರ್ಶಕದಲ್ಲಿ ಸುಮಾರು ೨,೦೪೮ ದ್ವಿದೃವಿ ಆಂಟೆನಾಗಳನ್ನು ಅಳವಡಿಸಲಾಗಿತ್ತು. ಅದೊಂದು ಕ್ರಮಬದ್ಧ ವ್ಯೂಹವಾಗಿದ್ದು, ಆಂಟೆನಾಗಳ ತಂತಿಗಳನ್ನು ಒಂದುಗೂಡಿಸಿ ಸಂಪರ್ಕ ಕಲ್ಪಿಸುವ ಜವಾಬ್ದಾರಿಯ ಕಾರ್ಯವನ್ನು ೨೪ ವಯಸ್ಸಿನ ತರುಣಿ ಜೋಸಲೀನ್ ಬೆಲ್ಲಳಿಗೆ ಒಪ್ಪಿಸಿದ್ದರು. ಈ ಕಾರ್ಯವನ್ನು ನಿರ್ವಹಿಸಲು ಆಕೆಗೆ ಒಂದು ಇಕ್ಕಳ, ತಂತಿ ಕತ್ತರಿಸುವ ಸಾಧನ ಹಾಗೂ ಒಂದು ತಿರುಪುಳಿಯನ್ನು (Screwdriver) ನೀಡಲಾಗಿತ್ತು. ಕಂಬಗಳನ್ನು ಭಾರವಾದ ಸುತ್ತಿಗೆಯಿಂದ ಬಡಿದು ನಿಲ್ಲಿಸುವ ಕಾರ್ಯವನ್ನು ಜೋಸಲೀನ್ ತನ್ನ ಜೊತೆಗಿದ್ದ ಪುರುಷರಿಗೆ ಬಿಟ್ಟುಕೊಟ್ಟು, ತಂತಿ ಜೋಡಣೆಯ ಕಾರ್ಯವನ್ನು ತಾನೇ ಸ್ವತಃ ನಿರ್ವಹಿಸುತ್ತಿದ್ದಳು.

ಸುಮಾರು ಎರಡು ವರ್ಷಗಳ ಕಾಲ ಸುರಿಯುವ ಮಳೆ ಮತ್ತು ಕೊರೆಯುವ ಚಳಿಯಲ್ಲಿ ನಿರಂತರವಾಗಿ ಈ ಕಾರ್ಯವನ್ನು ಶ್ರಮವಹಿಸಿ ನಿರ್ವಹಿಸಿದ್ದರು. ೧೯೬೭ರ ಜುಲೈ ತಿಂಗಳಲ್ಲಿ ಕಾರ್ಯಸಿದ್ಧವಾದ ಈ ದೂರದರ್ಶಕದಲ್ಲಿ, ಅದರಲ್ಲಿ ಅಳವಡಿಸಿದ್ದ ಒಂದು ಲೇಖನಿಯ ಮೂಲಕ ಮಾಹಿತಿಯನ್ನು ದಾಖಲಿಸುತ್ತಿದ್ದರು. ಆ ಲೇಖನಿಯ ತುದಿಯು ಅದರ ಕೆಳಗೆ ಸುತ್ತಿದ್ದ ಕಾಗದದ ಹಾಳೆಯಲ್ಲಿ ಮೇಲೆ ಮತ್ತು ಕೆಳಗೆ ಚಲಿಸುತ್ತಾ, ಭೂಕಂಪವನ್ನು ಮಾಪಿಸುವ ಭೂಕಂಪಲೇಖಿಯನ್ನು (Seismograph) ಹೋಲುತ್ತಿತ್ತು. ಆಗಿನ್ನೂ ಕಂಪ್ಯೂಟರ್ ಯಂತ್ರಗಳು ಬಳಕೆಯಲ್ಲಿರಲಿಲ್ಲ. ಹಾಗಾಗಿ, ಜೋಸಲೀನ್ ಬೆಲ್ ಪ್ರತಿದಿನವೂ ಸುಮಾರು ೧೦೦ ಅಡಿಗಳಷ್ಟು ಉದ್ದದ ಹಾಳೆಯಲ್ಲಿ ದಾಖಲಾಗುತ್ತಿದ್ದ ದತ್ತಾಂಶವನ್ನು ವಿಶ್ಲೇಷಿಸಿ, ಅದರಲ್ಲಿ ಕ್ವೇಸಾರುಗಳನ್ನು ಬಹಿರಂಗಗೊಳಿಸುವಂತಹ ಸಂಕೇತಗಳಿಗಾಗಿ ಹುಡುಕಾಟ ನಡೆಸಬೇಕಾಗಿತ್ತು. ಈ ವಿವರಗಳನ್ನು ನೀಡುವಾಗ, ಜೋಸಲೀನ್ ತೋರಿಸಿದ ಸ್ಲೈಡುಗಳು ನಿಜಕ್ಕೂ ಪ್ರೇಕ್ಷಕರನ್ನು ಪ್ರಭಾವಗೊಳಿಸಿತ್ತು. ತಂತ್ರಜ್ಞಾನ ಇನ್ನೂ ಶೈಶವಾಸ್ಥೆಯಲ್ಲಿದ್ದ ಅಂದಿನ ವೈಜ್ಞಾನಿಕ ಸಂಶೋಧನೆಯ ರೀತಿ, ತಂತ್ರಜ್ಞಾನದ ಪರಾಕಾಷ್ಠೆಯಯಲ್ಲಿರುವ ಇಂದಿನ ತರುಣ ಜನಾಂಗಕ್ಕೆ ಒಂದು ರೀತಿಯಲ್ಲಿ ಹಾಸ್ಯವೆನಿಸಬಹುದು!

ಆ ವರ್ಷದ ಅಕ್ಟೋಬರ್ ತಿಂಗಳ ಕೊನೆಯ ವೇಳೆಗೆ, ಅವರ ಉಪಕರಣದಲ್ಲಿ ಕಾಗದದ ಮೇಲೆ ದಾಖಲಾಗಿದ್ದ ಹಲವಾರು ಅಂಕುಡೊಂಕಾದ ಸಾಲುಗೆರೆಗಳು ಅಸಮಂಜಸವಾಗಿವೆ ಎನ್ನುವುದನ್ನು ಜೋಸಲೀನ್ ಅರಿತುಕೊಂಡಳು. ಈ ಅಂಕುಡೊಂಕು ಗೆರೆಗಳು, ಹಿಂದೆಂದೂ ಕಂಡುಬರದ, ಭಿನ್ನವಾದ ರೇಡಿಯೋ ಸಂಕೇತಗಳಾಗಿದ್ದವು. ಉಪಕರಣದಲ್ಲಿದ್ದ ಕಾಗದ ಸುರುಳಿಯು ಕೇವಲ ೫ ನಿಮಿಷಗಳಿಗೊಮ್ಮೆ, ಒಂದು ಇಂಚಿನಷ್ಟು ಮಾತ್ರವೇ ಚಲಿಸುತ್ತಿದ್ದರಿಂದ, ದಾಖಲಾದ ಆ ಸಂಕೇತಗಳು, ಒಂದಕ್ಕೊಂದು ಸಂಮರ್ಧಿಸಿ ಗೋಜಲಾಗಿದ್ದವು. ಈ ಗೋಜಲಾದ ಸಂಕೇತಗಳಲ್ಲಿ ಏನಾಗುತ್ತಿದೆ ಎನ್ನುವುದನ್ನು ತಿಳಿಯಲು ಇದ್ದ ಏಕೈಕ ಮಾರ್ಗವೆಂದರೆ, ಆ ಕಾಗದದ ಮೇಲೆ ದಾಖಲಾಗಿದ್ದ ಸಂಕೇತಗಳ ಒಂದು ಭಾಗವನ್ನು ವಿಸ್ತರಿಸಿ, ಹಿಗ್ಗಿಸಿ ನೋಡುವುದಾಗಿತ್ತು. ಜೋಸಲೀನ್ ಉಪಕರಣಕ್ಕೆ ಜೋಡಿಸಿದ್ದ ಕಾಗದವನ್ನು, ಅದಕ್ಕೆ ಅಳವಡಿಸಿದ್ದ ಲೇಖನದಡಿಯಲ್ಲಿ ನಿಖರವಾಗಿ ಆ ವಿಚಿತ್ರವಾದ ಸಂಕೇತಗಳು ದಾಖಲಾಗುವ ನಿರೀಕ್ಷಿತ ಸಮಯದಲ್ಲಿ ವೇಗವಾಗಿ ತಿರುಗಿಸುವುದರ ಮೂಲಕ ಆ ಕಾರ್ಯವನ್ನು ಮಾಡಿದಳು. ಆ ವೇಗದಲ್ಲಿ, ಒಂದು ಇಡೀ ದಿನದಲ್ಲಿ ಬಳಸುತ್ತಿದ್ದ ಕಾಗದವನ್ನು, ದಾಖಲಿಸುವ ಉಪಕರಣದ ಮೂಲಕ ವೇಗವಾಗಿ ಕೇವಲ ೧೫ ನಿಮಿಷಗಳಲ್ಲಿ ಓಡಿಸಿ ನಿರ್ವಹಿಸಿದಾಗ, ಆ ಸಂಕೇತಗಳು ವಿಸ್ತಾರಗೊಂಡವು. ಜೋಸಲೀನ್ ಇದೇ ಕಾರ್ಯವನ್ನು ಸುಮಾರು ಒಂದು ತಿಂಗಳ ಕಾಲ ಸತತವಾಗಿ ಮಾಡಿದಳು. ಆದರೆ ಆಕೆಗೆ ಅಸಾಮಾನ್ಯವಾದ ಯಾವ ಯಾವ ಫಲಿತಾಂಶವೂ ದೊರಕಲಿಲ್ಲ. ನಂತರ ನವೆಂಬರ್ ತಿಂಗಳಲ್ಲಿ ದೊರೆತ ಫಲಿತಾಂಶವೊಂದು ಅವರೆಲ್ಲರ ಕಲ್ಪನೆಗೂ ಮೀರಿದ್ದಾಗಿತ್ತು. ಅವರಿಗೆ ದೊರೆತಿದ್ದ ಆ ಕಂಪಿಸುವ ಸಂಕೇತವು, ಬೆರಗುಗೊಳಿಸುವಂತಹ ನಿಯತ ಕ್ರಮದಲ್ಲಿ, ಪುನರಾವರ್ತಿಸುವ ಒಂದು ಲಘು ಪೆಟ್ಟಿನಂತಿತ್ತು.

ಈ ಫಲಿತಾಂಶವನ್ನು ನೋಡಿದ ಆಂಥನಿ, ಅಷ್ಟೊಂದು ಸುಲಭವಾಗಿ ಅದನ್ನು ಒಪ್ಪಿಕೊಳ್ಳಲಿಲ್ಲ. ಆತ ಬಹಳ ಮುಂಜಾಗೃತೆಯ ವ್ಯಕ್ತಿಯಾಗಿದ್ದನು. ಹಾಗಾಗಿ ಅವರಿಗೆ ದೊರೆತಿದ್ದ ಆ ಸಂಕೇತಗಳನ್ನು ವಿವರಿಸಲು ಸ್ಪಷ್ಟವಾದ ವಿವರಣೆಗಳನ್ನು ತಯಾರಿಸಲು ಜೋಸಲೀನ್ ಮತ್ತು ಅವಳ ತಂಡದ ಸದಸ್ಯರನ್ನು ಒತ್ತಾಯಿಸಿದನು. ಆ ಸಂಕೇತಗಳು ಭೂಮಿಯ ಮೇಲಿರುವ ಇತರ ಮೂಲಗಳಾದ ಟಾಕ್ಸಿ ರೇಡಿಯೋ ಮೀಟರುಗಳು, ವಿಮಾನದಲ್ಲಿ ಎತ್ತರವನ್ನು ಮಾಪಿಸಲು ಅಳವಡಿಸಿರುವ ಉನ್ನತಿ-ಮಾಪಕಗಳು ಅಥವಾ ಸಂಪರ್ಕಗಳ ಉಪಗ್ರಹಗಳಿಂದ ಬರುತ್ತಿರಬಹುದೇ? ಇಲ್ಲಾ ದೂರದರ್ಶಕದ ತಂತಿ ಜೋಡಣೆಯಲ್ಲಿ ಯಾವುದಾದರೂ ದೋಷಗಳಿವೆಯೇ? ಹೀಗೆ ಹಲವು ಹತ್ತು ಸಾಧ್ಯತೆಗಳ ಬಗ್ಗೆ ಎಚ್ಚರಿಕೆಯಿಂದ ನೋಡಿ ತಮ್ಮ ವಿವರಣೆಯನ್ನು ಸ್ಪಷ್ಟಪಡಿಸಲು ಆದೇಶಿದನು. ಜೋಸಲೀನ್ ಈ ಎಲ್ಲಾ ಮೂಲಗಳಿಂದ ಉತ್ಪತ್ತಿಯಾಗುವ ಯಾವ ರೀತಿಯ ಸಂಕೇತಗಳೂ ತಮ್ಮ ಉಪಕರಣವನ್ನು ಹಸ್ತಕ್ಷೇಪಗೊಳಿಸುತ್ತಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಂಡಳು. ವಾಸ್ತವವಾಗಿ, ಜೋಸಲೀನ್ ಬೆಲ್ ತಂಡದವರು ವ್ಯವಹರಿಸುತ್ತಿದ್ದ ಮೊದಲನೆಯ ನಿಜವಾದ ಸುಳಿವು, ನಾಕ್ಷತ್ರಿಕ ಕಾಲವನ್ನು ಅನುಸರಿಸಿ ನಡೆದಿದ್ದ ಒಂದು ಸಂಕೇತವಾಗಿದ್ದು, ಅದು ಪ್ರತಿ ದಿನವೂ ನಾಲ್ಕು ನಿಮಿಷಗಳು ಮುಂಚಿತವಾಗಿ ಗೋಚರವಾಗುತ್ತಿತ್ತು.

ಜೋಸಲೀನ್ ಬೆಲ್ ತಂಡದವರ ನಿರಂತರ ಪ್ರಯತ್ನವು ಒಂದು ಆಕಸ್ಮಿಕ ಸಾಧನೆಯಾಗಿ ಪರಿವರ್ತನೆಯಾಗಿತ್ತು. ಆ ರೇಡಿಯೋ ಸಂಕೇತದ ಉಗಮಸ್ಥಾನಕ್ಕಿರುವ ದೂರವನ್ನು ಲೆಕ್ಕಾಚಾರಮಾಡಿದಾಗ, ಭೂಮಿಯಿಂದ ಸುಮಾರು ೨೦೦ ಜ್ಯೋತಿರ್ವರ್ಷಗಳೆಂದು ಅಂದಾಜು ಮಾಡಿದರು. ಸಂಕೇತಗಳ ಉಗಮಸ್ಥಾನದ ಈ ದೂರವು, ಸಂಕೇತಗಳು ನಮ್ಮ ಸೌರವ್ಯೂಹದ ಆಚೆಯಿಂದ ಬರುತ್ತಿವೆ ಎನ್ನುವುದನ್ನು ತೋರಿಸುತ್ತಿತ್ತು. ಅದೇ ಸಮಯದಲ್ಲಿ ಕ್ರಿಸ್ಮಸ್ ರಜೆಗಾಗಿ ಊರಿಗೆ ತೆರಳಿದ ಜೋಸಲೀನ್, ಅಲ್ಲೂ ಅದರ ಬಗ್ಗೆಯೇ ಚಿಂತನೆ ನಡೆಸುತ್ತಾ, ಆ ಸಂಕೇತಗಳು ವಲ್ಪೆಕ್ಯುಲಾ ನಕ್ಷತ್ರಪುಂಜದ (Vulpecula Constellation) ದಿಕ್ಕಿನಿಂದ ಬರುತ್ತಿರಬಹುದೆಂದು ತೀರ್ಮಾನಿಸಿದ್ದಳು. ರಜೆಯ ನಂತರ ಕೇಂಬ್ರಿಡ್ಜಿಗೆ ವಾಪಸಾದಾಗ, ಇನ್ನೂ ಅಂತಹುದೇ ಎರಡು ಸಂಕೇತಗಳು ದಾಖಲಾಗಿರುವುದನ್ನು ನೋಡಿದ ಜೋಸಲೀನ್, ಫಲಿತಾಂಶವನ್ನು ಬಹಿರಂಗಗೊಳಿಸುವುದೇ ಮೇಲೆಂದು ನಿಶ್ಚಯಿಸಿದಳು. ಆಕಾಶಗಂಗೆಯ ವಿವಿಧ ಭಾಗಗಳಿಂದ ಉತ್ಪತ್ತಿಯಾಗಿ ಜೋರಾಗಿ ಮೀಡಿಯುತ್ತಿರುವ ನಾಲ್ಕು ಸಂಕೇತಗಳಿಗೆ ಒಂದು ವಿಶಿಷ್ಟವಾದ ಕಂಪನವಿದ್ದು, ಅವುಗಳ ಮಿಡಿತಕ್ಕೆ ಮತ್ತಾವುದೇ ಅನ್ಯಲೋಕದ ಜೀವಿಗಳೂ ಜವಾಬ್ದಾರರಾಗಿರಲಿಲ್ಲ. ಅಲ್ಲದೇ ಆ ಸಂಕೇತಗಳು, ನಿಖರವಾಗಿ ಪ್ರತಿ ೧.೩೩೭೩೦೧೧೩ ಸೆಕೆಂಡುಗಳಿಗೆ ಪುನರಾವರ್ತಿಸುತ್ತಿದ್ದವು. ಯಾವುದೋ ಒಂದು ಸಣ್ಣದಾದ, ನಿಬಿಡವಾದ ನಕ್ಷತ್ರದಂತಹ ಗಾತ್ರವುಳ್ಳ ಕಾಯವೊಂದು, ಆ ಸಂಕೇತಗಳಿಗೆ ಕಾರಣವಾಗಿತ್ತು.

ಜೋಸಲೀನ್ ಬೆಲ್ಲಳ ಸಲಹೆಗಾರ ಆಂಥೊನಿ ಹ್ಯೂಯಿಶ್, ಈ ಫಲಿತಾಂಶವನ್ನು ತಮ್ಮ ವಿಭಾಗದ ವಿಜ್ಞಾನ ವೃಂದದ ಮುಂದೆ ಬಹಿರಂಗಗೊಳಿಸುತ್ತಾ, ಆ ಸಂಕೇತಗಳ ಉಗಮಸ್ಥಾನಗಳು, ಶ್ವೇತಕುಬ್ಜ ನಕ್ಷತ್ರಗಳು ಅಥವಾ ನ್ಯೂಟ್ರಾನ್ ನಕ್ಷತ್ರಗಳು ಈ ಎರಡರಲ್ಲಿ ಯಾವುದಾದರೂ ಒಂದಾಗಿರಬೇಕು ಎಂದು ಸಲಹೆ ನೀಡಿ, ಈ ಮೂಲಗಳಿಗೆ “ಕಂಪಿಸುತ್ತಿರುವ ರೇಡಿಯೋ ಉಗಮಸ್ಥಾನಗಳು,” (Pulsating Radio Sources) ಎನ್ನುವ ಹೆಸರನ್ನೂ ನೀಡಿದ್ದನು. ಇದು ಮುಂದೆ ಪಲ್ಸಾರ್ಸ್ (Pulsars) ಎನ್ನುವ ಮೊಟಕಾದ ಹೆಸರನ್ನು ಪಡೆಯಿತು. ಈ ಪಲ್ಸಾರ್ಸ್ ಎನ್ನುವ ನಾಮಕರಣ ಮಾಡಿದವ ಒಬ್ಬ ಪೇಪರ್ ಪತ್ರಿಕೋದ್ಯಮಿ ಎಂದು ಜೋಸಲೀನ್ ತನ್ನ ಭಾಷಣದಲ್ಲಿ ಹೇಳಿದಾಗ, ಅದು ಹೊಸದಾದ ಮಾಹಿತಿಯೆನ್ನಿಸಿ, ಆಶ್ಚರ್ಯವಾಯಿತು. ನಂತರ ಒಂದು ವರ್ಷದೊಳಗೆ, ಈ ಪಲ್ಸಾರುಗಳನ್ನು, ನ್ಯೂಟ್ರಾನ್ ನಕ್ಷತ್ರಗಳೆಂದೂ, ಇವು ಬೃಹತ್ ನಕ್ಷತ್ರಗಳು ಸೂಪರ್ನೋವಾ (ಮಹಾನವ್ಯಸ್ಥಿತಿಗೆ) ಹೋದನಂತರ ಬಿಟ್ಟುಹೋದ ನಿಬಿಡ ಅವಶೇಷಗಳೆಂದೂ ಖಗೋಳತಜ್ಞರು ದೃಢಪಡಿಸಿದರು. ಈ ನಕ್ಷತ್ರಗಳ ಸಾಂದ್ರತೆ ಎಷ್ಟು ನಿಬಿಡವಾಗಿದೆ ಎಂದರೆ, “ಒಂದು ಬೆರಳು-ಟೋಪಿಯನ್ನು (Thimble) ತೆಗೆದುಕೊಂಡು, ಅದರೊಳಗೆ ಈ ಪ್ರಪಂಚದ ಸಂಪೂರ್ಣ ಜನಸಂಖ್ಯೆಯನ್ನು ಅಡಕಗೊಳಿಸಿದಂತಿರುತ್ತದೆ,” ಎಂದು ಜೋಸಲೀನ್ ನಮಗೆಲ್ಲಾ ವಿವರಿಸಿ ಹೇಳಿದರು.

ಈ ಪಲ್ಸಾರುಗಳ ಸಂಶೋಧನೆಯ ಬಗ್ಗೆ ತಾನು ನಡೆಸಿದ ಪ್ರಯೋಗವನ್ನು, ಅಲ್ಲಿ ನೆರೆದಿದ್ದ ಸಾಮಾನ್ಯರಿಗೆ ಅರ್ಥವಾಗುವಂತೆ ಸರಳರೀತಿಯಲ್ಲಿ, ಸರಾಗವಾಗಿ ತಿಳಿಸಿದ ಜೋಸಲೀನ್ ಬೆಲ್ ಅವರಿಗೆ, ಮಾತುಗಾರಿಕೆ ಕರಗತವಾದ ಕಲೆ ಎಂದು ತಿಳಿಯುತ್ತದೆ. ೧೯೬೮ರಲ್ಲಿ, ಈ ಸಂಶೋಧನೆಯ ಫಲಿತಾಂಶದ ಘೋಷಣೆಯ ನಂತರ ಅನೇಕ ವಾರಗಳ ಕಾಲ, ಹ್ಯೂಯಿಶ್ ಮತ್ತು ಬೆಲ್ ಸತತವಾಗಿ ಸಂದರ್ಶನಗಳನ್ನು ಪೇಪರ್, ರೇಡಿಯೋ ಮತ್ತು ಟೆಲಿವಿಶನ್ ಮಾಧ್ಯಮದವರಿಗೆ ನೀಡಿದ್ದರಂತೆ. ಆದರೆ, ಈ ಎಲ್ಲಾ ಸಂದರ್ಶನಗಳನ್ನೂ ಒಂದೇ ಮಾದರಿಯಲ್ಲಿ ನಡೆಸಿದ್ದ ರೀತಿಯಿಂದ ಜೋಸಲೀನ್ ಬೆಲ್ಲಳಿಗೆ ಬಹಳ ನಿರಾಶೆಯಾಗಿತ್ತು. ಕಾರಣ, ಈ ಎಲ್ಲಾ ಮಾಧ್ಯಮದವರೂ, ಸಂಶೋಧನೆಯ ಬಗ್ಗೆ ಕೇವಲ ಹ್ಯೂಯಿಶರನ್ನು ಮಾತ್ರಾ ಮಾತನಾಡಿಸಿ, ಅದರ ಖಭೌತ ಮಹತ್ವವನ್ನು ಕೇಳುತ್ತಿದ್ದರೆ ಹೊರತು, ನನ್ನ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ನನ್ನ ಕಡೆ ಕೇವಲ ಮಾನವ ಸಹಜ ಆಸಕ್ತಿಯಿಂದ ನೋಡುತ್ತಿದ್ದರೆ ಹೊರತು, ಒಬ್ಬ ವಿಜ್ಞಾನಿಯೆಂದು ಯಾವ ಗೌರವವನ್ನು ನೀಡುತ್ತಿರಲಿಲ್ಲ ಎಂದು ಮತ್ತೊಮ್ಮೆ ತಮ್ಮ ಮನದ ಕಹಿಯ ಭಾವನೆಯನ್ನು ನಮ್ಮ ಮುಂದಿಟ್ಟರು. ಮಾಧ್ಯಮದವರಲ್ಲಿ ಕೆಲವರಂತೂ ಅಸಂಬದ್ಧವಾಗಿ ಪ್ರಶ್ನಿಸುತ್ತಾ, “ನಿನಗೆ ಎಷ್ಟು ಮಂದಿ ಬಾಯ್ ಫ಼್ರೆಂಡುಗಳಿದ್ದಾರೆ?; ನಿನ್ನ ಅಂಗಾಂಗಗಳ ಪ್ರಮುಖ ಅಡ್ಡಳತೆಗಳೇನು?; ನೀನು ರಾಜಕುಮಾರಿ ಮಾರ್ಗರೆಟ್ಟಿಗಿಂತ ಹೆಚ್ಚು ಎತ್ತರವಾಗಿದ್ದೀಯಾ? ಎನ್ನುತ್ತಾ ಪತ್ರಿಕೆಯ ಮೂರನೆಯ ಪುಟದಲ್ಲಿ ಪ್ರಕಟಿಸಬಹುದಾದ ಸುದ್ದಿಗೆ ನನ್ನನ್ನು ಗುರಿಮಾಡಿದ್ದರು,” ಎಂದು ತಮ್ಮ ಅನುಭವವನ್ನು ನಸುನಗೆಯಿಂದ ಹಂಚಿಕೊಂಡರೂ, ಆ ನಗೆಯ ಹಿಂದಿನ ನೋವನ್ನು ಆಕೆ ಇನ್ನೂ ಮರೆತಿಲ್ಲ ಎನ್ನುವುದು ವ್ಯಕ್ತವಾಗುತ್ತಿತ್ತು.

ನನ್ನ ವೈಜ್ಞಾನಿಕ ಸಾಧನೆಗಳನ್ನು ಗುರುತಿಸದಿದ್ದ ಅಂದಿನ ಪತ್ರಿಕೋದ್ಯಮಿಗಳೀಗೆ, ಒಬ್ಬ ಯುವತಿ ವಿಜ್ಞಾನಿಯೊಂದಿಗೆ ಹೇಗೆ ವ್ಯವಹರಿಸಬೇಕು ಎನ್ನುವುದು ತಿಳಿದಿರಲಿಲ್ಲ. ಜೊತೆಗೆ, ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದರ ತಿಳುವಳಿಕೆ ನನಗೂ ಇರಲಿಲ್ಲ ಎಂದ ಜೋಸಲೀನ್, ತಾನೂ ಸಹಾ ಇಂತಹ ಪತ್ರಕಾರರೊಡನೆ ಎಂದೂ ಸಹಕರಿಸುತ್ತಿರಲಿಲ್ಲ ಎಂದರು. ಹಲವರಂತೂ ನನ್ನೆಡೆ ದೃಷ್ಟಿ ಬೀರಿ, “ದಯವಿಟ್ಟು ನಿಮ್ಮ ಮೇಲಂಗಿಯ ಹಲವು ಗುಂಡಿಗಳನ್ನು ಬಿಚ್ಚಲು ಸಾಧ್ಯವೇ?” ಎಂದು ಅಸಭ್ಯವಾಗಿ ವರ್ತಿಸಿದ್ದರು ಎಂದಾಗ ಸಭೆಯಲ್ಲಿದ್ದ ಜನಸಮೂಹ ಸ್ತಬ್ಧವಾದರು.

ಜೋಸಲೀನ್ ಬೆಲ್ ನಡೆಸಿದ ಸಂಶೋಧನೆಯ ತಂಡದ ನಾಯಕರಾಗಿದ್ದ ಆಂಥನಿ ಹ್ಯೂಯಿಶರಿಗೆ, ೧೯೭೪ರಲ್ಲಿ ಈ ಕಾರ್ಯಕ್ಕಾಗಿ, ನೋಬೆಲ್ ಪ್ರಶಸ್ತಿ ನೀಡಿದಾಗ, ಅನೇಕ ವಿಜ್ಞಾನಿಗಳು ಬಹಳ ಅಸಮಧಾನ ವ್ಯಕ್ತಪಡಿಸಿದ್ದಲ್ಲದೇ, ನೋಬೆಲ್ ಸಮಿತಿಗೆ ಬಹಳ ಖಾರವಾಗಿ ಪತ್ರಬರೆದು, ಮುಂದೆ ಆ ಸಮಿತಿಯ ಅವಕೃಪೆಗೆ ಪಾತ್ರರಾಗಿದ್ದರಂತೆ! ಅದೇನೆ ಇರಲಿ, ಈ ಮಧ್ಯೆ ಜೋಸಲೀನ್ ಮದುವೆಯಾಗಿ ಮೊದಲ ಮಗುವನ್ನು ಹೆತ್ತಳು. “ಈ ಪ್ರಪಂಚವಿರುವುದೇ ಹೀಗೆ, ಇಲ್ಲಿ ಪುರುಷರು ಪ್ರಶಸ್ತಿ ಗಳಿಸಿದರೆ, ಮಹಿಳೆಯರು ಕೇವಲ ಮಕ್ಕಳನ್ನು ಪಾಲಿಸಿ ಪೋಷಿಸುತ್ತಾರೆ,” ಎನ್ನುವ ಕಡುಸತ್ಯದ ಮಾತುಗಳು ನನಗರಿವಾಯಿತು ಎನ್ನುತ್ತಾ ಜೋಸಲೀನ್ ನಗುತ್ತಲೇ ತಿಳಿಸುತ್ತಾರೆ. ತಾನು ನಡೆಸಿದ ಪ್ರಮುಖವಾದ ಸಂಶೋಧನೆಗೆ ತನಗಾವ ಪುರಸ್ಕಾರ ಸಿಗದಿದ್ದರೂ, ಆ ಕಹಿ ಅನುಭವವನ್ನು ಹಾಸ್ಯದಿಂದಲೇ ಮರೆಸುತ್ತಾ, ಅಂದಿನ ವೈಜ್ಞಾನಿಕ ವಲಯ, ಮಾಧ್ಯಮಗಳು ಮಹಿಳೆಯರನ್ನು ಅವರ ಸಾಧನೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ತನಗೆ ನೋಬೆಲ್ ಪ್ರಶಸ್ತಿ ದೊರಕದಿದ್ದರೇನು, ಪಲ್ಸಾರುಗಳ ಅವಿಷ್ಕಾರವು, ನೋಬೆಲ್ ಸಮಿತಿಯವರು ಮೊಟ್ಟಮೊದಲ ಬಾರಿಗೆ ಭೌತಶಾಸ್ತ್ರದಲ್ಲಿ ನೋಬೆಲ್ ಪುರಸ್ಕಾರಕ್ಕೆಂದು ಪರಿಗಣಿಸಲಾಗಿದ್ದ ಖಗೋಳ ಶಾಸ್ತ್ರದ ಸಂಶೋಧನೆಯಾಗಿತ್ತು ಎನ್ನುವ ಬಗ್ಗೆ ತಮಗೆ ಅತೀವ ಹೆಮ್ಮೆಯಿದೆ ಎನ್ನುವ ಜೋಸಲೀನ್ ಬೆಲ್ ನಿಜಕ್ಕೂ ಒಬ್ಬ ಸಹೃದಯಿ ಮಹಿಳೆಯಲ್ಲವೇ!

ತಮ್ಮ ವೃತ್ತಿ ಜೀವನದಲ್ಲಿ ಇತರ ಅನೇಕ ಪುರಸ್ಕಾರಗಳನ್ನು ಪಡೆದಿರುವ ಜೋಸಲೀನ್ ಬೆಲ್, ಈ ವರ್ಷ ಗಳಿಸಿರುವ ವಿಶೇಷ ಬ್ರೇಕ್-ಥ್ರೂ ಪ್ರಶಸ್ತಿಯ ಮೂರು ಮಿಲಿಯನ್ ಡಾಲರ್ ಹಣವನ್ನೂ, ದುರ್ಬಲ ವರ್ಗದ, ಪ್ರತಿಕೂಲ ಪರಿಸ್ಥಿತಿಯನ್ನೆದುರಿಸುವ ಪದವಿ ಶಿಕ್ಷಣದ ವಿದ್ಯಾರ್ಥಿಗಳ ಅಭಿವೃದ್ಧಿಗೆ ದಾನವಾಗಿ ನೀಡಿರುವ ವಿಷಯ ನಿಜಕ್ಕೂ ಶ್ಲಾಘನೀಯ! ಆಕೆಯ ಭಾಷಣ ಮುಗಿದೊಡನೆ ನೆರೆದ ಸಭಿಕರಿಂದ ದೊರೆತ ದೀರ್ಘವಾದ ಕರತಾಡನ, ಆಕೆಯ ಜೀವನದ ಸಾಧನೆಗಳಿಗೆ ದೊರೆತ ಒಂದು ಸಣ್ಣ ಮೆಚ್ಚುಗೆಯೆನಿಸಿತು. ಇಂತಹ ಧೀಮಂತ ಮಹಿಳೆಯನ್ನು ಪ್ರತ್ಯಕ್ಷವಾಗಿ ಕಂಡು, ಆಕೆಯ ಭಾಷಣ ಕೇಳುವ ಅವಕಾಶ ನನ್ನ ಸೌಭಾಗ್ಯವೇ ಸರಿ! ಯಾವ ವಿಜ್ಞಾನಿಯೂ ಕೇವಲ ಪುರಸ್ಕಾರಕ್ಕಾಗಿ ಸಂಶೋಧನೆ ನಡೆಸುವುದಿಲ್ಲ. ಆದರೆ, ದೊರಕಬೇಕಾದ ಮನ್ನಣೆ, ಕೇವಲ ಮಹಿಳೆ ಎನ್ನುವ ಕಾರಣದಿಂದ ತಪ್ಪಿದರೆ ಅದು ಸಮ್ಮತವಲ್ಲ ವಿಷಯ. ಅಲ್ಲಿ ನೆರೆದಿದ್ದ ಸಭಿಕರಲ್ಲಿ, ಯುವಜನಾಂಗದ ಸಂಖ್ಯೆ ಗಣನೀಯವಾಗಿತ್ತು. ಅವರಿಂದ ಬಂದ ಪ್ರಶ್ನೆಗಳೂ ಅಷ್ಟೇ ಆಸಕ್ತಿಪೂರ್ಣವಾಗಿದ್ದವು. ಅವರೆಲ್ಲರ ಪ್ರಶ್ನೆಗಳನ್ನೂ ತಮ್ಮದೇ ಆದ ಶೈಲಿಯಲ್ಲಿ ಉತ್ತರಿಸಿದ ಜೋಸಲೀನ್ ಬೆಲ್, ಯುವ ಪೀಳಿಗೆಗೆ ನಿಜಕ್ಕೂ ಆದರ್ಶಪ್ರಾಯರು. ನನಗೆ ಆಕೆಯೊಡನೆ ಮಾತನಾಡುವ ಒಂದು ಸಣ್ಣ ಅವಕಾಶ ದೊರೆತಾಗ, “ಇಂದಿನ ಮಹಿಳೆ ಸಾಕಷ್ಟು ಗೌರವಗಳನ್ನು ತನ್ನ ಸಾಧನೆಗೆ ಪಡೆಯುತ್ತಿದ್ದಾಳೆಯೇ? ನಿಮ್ಮ ಅಭಿಪ್ರಾಯವೇನು ಎಂದಾಗ, ನನ್ನ ಸಮಯಕ್ಕೆ ಹೋಲಿಸಿದರೆ ಪರಿಸ್ಥಿತಿ ಈಗ ಬಹಳಷ್ಟು ಸುಧಾರಿಸಿದೆ. ಆದರೂ, ಇನ್ನೂ ವಿಜ್ಞಾನದಲ್ಲಿ, ಅದರಲ್ಲೂ ಭೌತಶಾಸ್ತ್ರದಲ್ಲಿ ಮಹಿಳೆಯರು ಇನ್ನೂ ಅಲ್ಪಸಂಖ್ಯಾತರೇ ಆಗಿರುವುದು ಸ್ವಲ್ಪ ವಿಶಾದನೀಯ,” ಎಂದು ತಮ್ಮ ಮಾತು ಮುಗಿಸಿದರು.

೨೦೧೮ರ ನೋಬೆಲ್ ಪ್ರಶಸ್ತಿಯ ಪಟ್ಟಿಯಲ್ಲಿ, ಭೌತಶಾಸ್ತ್ರ, ರಸಾಯನ ಮತ್ತು ವೈದ್ಯಕೀಯ ಶಾಸ್ತ್ರ, ಶಾಂತಿ ಪುರಸ್ಕಾರಗಳು ಮೂವರು ಮಹಿಳೆಯರಿಗೆ ಸಂದಿರುವುದು ಸ್ವಲ್ಪ ಸಮಾಧಾನಕರ ಸಂಗತಿ. ೧೯೬೭ರಲ್ಲಾದ ಅನ್ಯಾಯಕ್ಕೆ ಹೋಲಿಸಿದರೆ, ಇಂದು ಮಹಿಳೆಯರ ಸ್ಥಾನಮಾನ ಸುಧಾರಿಸಿರಬಹುದು. ಆದರೂ ನಮ್ಮ ಸಮಾಜದಲ್ಲಿ ಇನ್ನೂ ಎಷ್ಟು ಮಂದಿ ಜೋಸಲೀನ್ ಬೆಲ್ಲರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೋ ತಿಳಿಯದು!

____________________________________________________________________________________________

 

image.png

ವೈದ್ಯ ರಾಮಶರಣ ಲಕ್ಷ್ಮೀನಾರಾಯಣ ಅನಿವಾಸಿ ತಾಣಕ್ಕೆ ತಮ್ಮ ಲೇಖನಗಳಿಂದ ಪರಿಚಿತ ಹೆಸರು. 

ಅಮ್ಮ

ನನ್ನಮ್ಮ ಅಂಕೋಲೆಯಲ್ಲಿ ನಳಿನಿ ಬಾಯಿ, ದಾಂಡೇಲಿಯಲ್ಲಿ ನಳಿನಿ ಮೇಡಂ, ಹತ್ತಿರದವರಿಗೆ ನಳಿನಕ್ಕ ಅಥವಾ ಅತ್ತಿಗೆ. “ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ” ಸುಭಾಷಿತ ವಾಣಿ ಅಮ್ಮನ ಗುಣಕ್ಕೆ ಹೇಳಿ ಮಾಡಿಸಿದಂತಿದೆ. ಅಮ್ಮ ನಿಷ್ಠುರವಾದಿ; ಆದರೆ ಮನಸ್ಸು ತುಂಬಾ ನಾಜೂಕು. ಯಾರನ್ನೂ ನಿಂದಿಸರು, ಯಾರ ನಿಂದೆಯನ್ನೂ ತಡೆಯಲಾರರು. ಕಂಡದ್ದನ್ನು ಕಂಡ ಹಾಗೆ ಹೇಳಿ ಹಲವಾರು ಬಾರಿ ನಿಂದೆಗೆ ಒಳಗಾಗಿ ಸವೆದಿದ್ದಾರೆ. ಅಮ್ಮನಿಗೆ ಹಿಡಿದ ಕೆಲಸ ಬಿಡದ ತ್ರಿವಿಕ್ರಮನ ಛಲವಿದೆ. ಇಳಿ ವಯಸ್ಸಿನಲ್ಲಿ ಕಂಪ್ಯೂಟರ್ ಕಲಿತು, ಅಪ್ಪನ ಎಲ್ಲ ಬರಹಗಳನ್ನು ಬೆರಳಚ್ಚು ಮಾಡದಿದ್ದರೆ, ಅಪ್ಪನ ಬರಹ ಬೆಳಕು ಕಾಣಲು ಇನ್ನೆಷ್ಟು ಕಾಲ ಕಾಯಬೇಕಾಗುತ್ತಿತ್ತೋ?. “Behind every successful man there is a woman” ಕ್ಲೀಷೆ ಆದರೂ ವಿಷಯದಲ್ಲಿ ಅದು ನಿತ್ಯ ಸತ್ಯ. ನಮ್ಮ ವಿದ್ಯಾಭಾಸದ ಹೊಣೆ ಹೊತ್ತದ್ದೆಲ್ಲ ಅಮ್ಮ. “ನೀನು ಪಾಸಾದರೆ, ಮೂಗಲ್ಲಿ ಕಾಶಿಗೆ ಹೋಗಿ ಬರುತ್ತೇನೆ, “ಎಂದು ನನ್ನನ್ನು, ಅಕ್ಕನನ್ನು ಛೇಡಿಸಿ ಓದಿಸಿದರು. “ನೀವು ಇನ್ನೂ ಮೂಗಲ್ಲಿ ಕಾಶಿಗೆ ಹೋಗಿಲ್ಲ,” ಎಂದು ನಾವು ತಮಾಷೆ ಮಾಡುತ್ತಲೇ ಇರುತ್ತೇವೆ. ಬೆಳಗ್ಗೆ ಬೇಗ ಎಬ್ಬಿಸಿ, ನಿದ್ದೆ ಬರದಿರಲೆಂದು ಕಾಫಿ ಮಾಡಿ ಕೊಟ್ಟು, ತೂಕಡಿಸಿದಾಗ ಬೆನ್ನಿಗೆ ಗುದ್ದಿ ಓದಿಸಿದ್ದಕ್ಕಲ್ಲವೇ ನಾವು ದಡ ಹತ್ತಿದ್ದು?

ಅಮ್ಮ ಸರಳ ಜೀವಿ. ಇಂದಿಗೂ ಅಮ್ಮನಿಗೆ ಶಾಪಿಂಗ್, ಮೇಕಪ್ಗಳಲ್ಲಿ ಉತ್ಸುಕತೆ ಇಲ್ಲ. ಹೆಮ್ಮೆಯಿರುವುದು ತನ್ನ ನಿಸ್ವಾರ್ಥ ಸೇವೆ ಹಾಗೂ ತನ್ನ ಕುಟುಂಬದ ಮೇಲೆ ಮಾತ್ರ. ಮದುವೆಯ ಹೊಸತರಲ್ಲಿ ತಾನು ಕಟ್ ಪೀಸ್ ಸೀರೆ ಉಟ್ಟರೂ; ದುಡಿದದ್ದನ್ನೆಲ್ಲ ಅಪ್ಪನ ಕೈಗೆ ತಾನು ಸೇರಿದ ಕುಟುಂಬದ ನಿರ್ವಹಣೆಗೆ ಹಾಕುತ್ತಿದ್ದರು. ಅಮ್ಮನ ಒಮ್ಮತದ ಸಹಕಾರವಿಲ್ಲದೇ ಅಪ್ಪ ಶತಾಂಶದಲ್ಲಿ ಒಂದನ್ನೂ ಸಾಧಿಸುತ್ತಿದ್ದರೋ ಇಲ್ಲವೋ! ಅಪ್ಪ-ಅಮ್ಮ ಇಬ್ಬರಿಗೂ ಮಾವಿನ ಹಣ್ಣಿನ ಶೀಕರಣಿ ಮಹಾ ಪ್ರಾಣ. ಹೊಸತರಲ್ಲಿ ಅಮ್ಮ ದೊಡ್ಡ ಪಾತ್ರೆಯ ತುಂಬ ಕರಿ ಇಶಾಡ್ ಹಣ್ಣಿನ ರಸಾಯನ ಮಾಡಿದ್ದರಂತೆ. ಅಮ್ಮ ಬಡಿಸಿದಷ್ಟೂ ತಿಂದು ಪಾತ್ರೆ ಖಾಲಿ ಮಾಡಿದ ಮೇಲೇ ಅಪ್ಪನಿಗೆ ಅರಿವಾದದ್ದು ಹೆಂಡತಿಗೆ ಉಳಿದದ್ದು ಉಳಿದಿದ್ದು ಶೂನ್ಯ ಎಂಬುದು. ಅಮ್ಮ ಏನೂ ಹೇಳದೇ ಬಡಿಸಿದ್ದು ಗಂಡ ಹೆದರಿಕೆಯಿಂದಲ್ಲ, ಪ್ರೀತಿಯಿಂದ.

ಅಮ್ಮನಿಗೆ ಮಗುವಿನಷ್ಟೇ ಕುತೂಹಲ, ಮನಸ್ಸು ಅಷ್ಟೇ ಮುಗ್ಧ. ಹೊಸ ಊರು, ದೇಶ ನೋಡುವ ಕುತೂಹಲ ಇಂದಿಗೂ ಕಮ್ಮಿ ಆಗಿಲ್ಲ. ಹೋದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದರಲ್ಲಿ ಅಮ್ಮನದು ಎತ್ತಿದ ಕೈ. ನಮ್ಮಲ್ಲಿಗೆ ಬಂದಾಗ ನಮ್ಮ ಪಕ್ಕದ ಮನೆಯ ಆಂಗ್ಲ ಮಹಿಳೆಯ ಸ್ನೇಹ ಬೆಳೆಸಿದರು. ನಮ್ಮ ಪರಿಚಯದ ಮಹಿಳೆಯ ಗೆಳೆತನ ಮಾಡಿ, ತಮ್ಮ ವಾಕಿಂಗ್ ದಿನಚರಿಗೆ ಜೊತೆ ಮಾಡಿಕೊಂಡರು. ಅಮ್ಮನಿಗೆ ಆಟೋಟಗಳಲ್ಲಿ ತುಂಬಾ ಆಸಕ್ತಿ. ಅಂಕೋಲೆಯಲ್ಲಿ ಥ್ರೋ ಬಾಲ್, ಟೆನಿಕೋಯ್ಟ್ ಆಟಗಳ ಚಾಂಪಿಯನ್ ಆಗಿದ್ದರು. ಅಂಕೋಲೆಯಲ್ಲಿ ತಮ್ಮ ವಯಸ್ಸಿನ ಅರ್ಧದಷ್ಟು ವಯಸ್ಸಿನ ಕಿರಿಯರನ್ನು ತಾಲೂಕಾ ಮಟ್ಟದ ಸ್ಪರ್ಧೆಯಲ್ಲಿ ಸೋಲಿಸಿದಾಗ ನಾವೆಲ್ಲಾ ಹಿರಿ ಹಿಗ್ಗಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದೆ. ವಿಪರ್ಯಾಸವೆಂದರೆ, ಮಕ್ಕಳು ಓದುವುದಿಲ್ಲವೆಂದು ನಮ್ಮನ್ನು ಮಾತ್ರ ಆಟಕ್ಕೆ ಬಿಡುತ್ತಿರಲಿಲ್ಲ! ಈಗ ನಮ್ಮನ್ನು, ಮೊಮ್ಮಕ್ಕಳನ್ನು ಆಟ ಆಡಿ ಎಂದು ಹುರಿದುಂಬಿಸುತ್ತಾರೆ ಮೊಮ್ಮಕ್ಕಳೊಡನೆ ಈಗಲೂ ಫುಟ್ ಬಾಲ್ ಆಡುವ ಹುಮ್ಮಸ್ಸು ಕಡಿಮೆಯಾಗಿಲ್ಲ!

ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಅಮ್ಮನಿಗೆ ಇದ್ದ ತುಂಬಾ ಉತ್ಸುಕತೆ ಈಗಲೂ ಇದೆ. ಶಾಲೆಯ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಲು ಅಪ್ಪ-ಅಮ್ಮ ಇಬ್ಬರೂ ನಮ್ಮನ್ನು ಮುಂದೂಡಿದರು, ಆದರೆ ಎಂದೂ ಒಣ ಪ್ರತಿಷ್ಠಾ ಪೈಪೋಟಿಗೆ ಬೀಳಲಿಲ್ಲ. ನಾನು ಚಿಕ್ಕವನಿದ್ದಾಗ, ಅಂಗಡಿಯಿಂದ ಪ್ರಾಣಿ, ಪಕ್ಷಿ, ಸ್ಮಾರಕಗಳ ಚಿತ್ರಗಳನ್ನು ಕತ್ತರಿಸಿ, ಪ್ರತಿ ಚಿತ್ರಕ್ಕೂ ವಿವರಣೆ ಬರೆದು ಪುಸ್ತಕಗಳನ್ನು ಹೊಲೆದಿಟ್ಟಿದ್ದರು. ನನ್ನ ಜ್ಞಾನ ವಿಸ್ತರಣೆಗೆ ಈ ಪುಸ್ತಕಗಳು ಅಡಿಪಾಯ. ಕಥೆ ಪುಸ್ತಕಗಳನ್ನು ಓದಿ, ಓದಲು ಒತ್ತಾಯಿಸಿ ಸಾಹಿತ್ಯ ಪ್ರೇಮ ಬೆಳೆಸಿದ್ದರಲ್ಲಿ ಅಮ್ಮನ ಪಾತ್ರ ಹಿರಿದು.

ಅಮ್ಮ ತಮಾಷೆ ಪ್ರವೃತ್ತಿಯವರಲ್ಲ, ತುಂಬಾ ಸೀರಿಯಸ್. ಅಮ್ಮನ ಕಾಲೆಳೆಯುವುದು ಸುಲಭವಾದರೂ, ಆಮೇಲೆ ಸಮಾಧಾನ ಮಾಡುವುದು ಸ್ವಲ್ಪ ಕಷ್ಟ. ಅಮ್ಮನಿಗೆ ತನ್ನ ತತ್ವಗಳೆಂದರೆ ಅಭಿಮಾನ. ತನ್ನ ತತ್ವಗಳನ್ನು ಇನ್ನೊಬ್ಬರ ಮೇಲೆ ಹೇರರು, ಆದರೆ ನಂಬಿದ ತತ್ವವನ್ನು ಬಿಡರು. ಬಡತನದಲ್ಲಿ, ದೊಡ್ಡ ಕುಟುಂಬದಲ್ಲಿ ಬೆಳೆದ ಅಮ್ಮ, ಅಪ್ಪನ ಲೋಕೋಪಕಾರಿ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಅಪ್ಪನ ಯಿನ್ ಗೆ ಅಮ್ಮ ಯಾಂಗ್. ಅಮ್ಮ ತೆರೆದ ಪುಸ್ತಕ. ಅಮ್ಮನೊಂದಿಗೆ ನಾವು ಏನಾದರೂ ಚರ್ಚಿಸಬಹುದು, ತೋಡಿಕೊಳ್ಳಬಹುದು; ನಮಗೆ ಇಂದಿಗೂ ದೊಡ್ಡ ಪಂಚಿಂಗ್ ಬ್ಯಾಗ್. ಅಮ್ಮನ ಮಕ್ಕಳಾಗಿರುವುದು ನಮ್ಮ ಸುದೈವ.