ಹಾಡು ಹಳೆಯದಾದರೇನು?.. ಜಿ.ಎಸ್.ಎಸ್.ಭಾವನಮನ

ಕಬ್ಬಿಗರ ಓದಿನಲ್ಲಿ, ಆಸಕ್ತರ ಅಧ್ಯಯನದಲ್ಲಿ, ಸಹೃದಯರ ರಸಾಸ್ವಾದದಲ್ಲಿ, ಅಭಿಮಾನಿಗಳ ಎದೆಯ ಗುಡಿಯಲ್ಲಿ ಕವಿ ಬೆಳಗುತ್ತಲೇ ಇರುತ್ತಾನೆ;ಬೆಳಕು ಚೆಲ್ಲುತ್ತಲೇ ಇರುತ್ತಾನೆ. 

ಬರುವ ಫೆಬ್ರುವರಿಯ ಏಳರಂದು,  ತಮ್ಮ ಕಾವ್ಯದಿಂದ ನವನವೀನ ಭಾವಗಳನ್ನು ಉಣಬಡಿಸಿದ  ನಮ್ಮೆಲ್ಲರ ನೆಚ್ಚಿನ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಜನುಮದಿನ. ನಿಷ್ಕಾರಣದೊಲುಮೆ ಇವರ ಕಾವ್ಯ ಹಾಗೂ ಬದುಕು ಎರಡರ ಜೀವಾಳ. ‘ನಿನ್ನೊಲವಿನಂಬುಧಿಗೆ ನನ್ನೆದೆಯ ಕರೆಯ ತೊರೆ ಸಂತತವೂ ಹೊನಲಾಗಿ ಹರಿಯುತಿರಲಿ’.

ಸ್ವತ: ಉತ್ತಮ ಕವಿ, ಬರಹಗಾರ, ಕಾದಂಬರಿಕಾರರಾದ ಕವಿಯ ಪುತ್ರರೂ ಆದ ಡಾ.ಶಿವ ಪ್ರಸಾದ್ ಅವರು ತಮ್ಮ ತಂದೆಯನ್ನೂ, ತಂದೆಯೊಳಗಿನ ಕವಿಯನ್ನೂ, ಕವಿಯೊಳಗಿನ ಅಪ್ಪಟ ಮಾನವತಾವಾದಿಯನ್ನೂ ನೆನೆಸಿಕೊಂಡು ತಮ್ಮ ಭಾವಗಂಗೆಯನ್ನು ಹರಿಯಬಿಟ್ಟಿದ್ದಾರೆ. ಅವರು ಈ ಹಿಂದೆಯೂ ಅನಿವಾಸಿಯಲ್ಲಿ ಬಾಲ್ಯದ ನೆನಪುಗಳು ಸರಣಿಯಲ್ಲಿ ತಮ್ಮ ತಂದೆಯವರ  ನೆನಪುಗಳನ್ನು ಆತ್ಮೀಯವಾಗಿ ಹಂಚಿಕೊಂಡಿದ್ದರು. ಅವೆಲ್ಲ ಒಟ್ಟುಗೂಡಿ ಪುಸ್ತಕ ರೂಪದಲ್ಲಿ ಹೊರಬರಲೆಂಬುದು  ಅನಿವಾಸಿಗಳ ಆಶಯ ಹಾಗೂ ಆಗ್ರಹ.

ಒಳ್ಳೆಯ ನೃತ್ಯಪಟುವಾದ ಡಾ.ಸುಮನಾ.ನಾರಾಯಣ ಅವರು ಚಿಕ್ಕಂದಿನಿಂದಲೂ ತಾವು ಅದ್ಹೇಗೆ ಜಿ.ಎಸ್.ಎಸ್.ಹಾಡಿನ ಮೋಡಿಗೆ  ಸಿಕ್ಕಿದ್ದರೆಂಬುದನ್ನುಮತ್ತು ತಮ್ಮ ನೃತ್ಯಗಳಿಗೆ ಕವಿಯ ಹಾಡುಗಳು ಹೇಗೆ ಹಿನ್ನೆಲೆಯಾಗಿ ಒದಗಿಬಂದವೆನ್ನುವುದನ್ನು ತುಂಬು ಅಭಿಮಾನದಿಂದ ಆಪ್ತವಾಗಿ ಹಂಚಿಕೊಂಡಿದ್ದಾರೆ.

ಉತ್ತಮ ಸಂಗೀತಗಾರರಾದ ಶ್ರೀಯುತ ಅರುಣ್ ಕುಕ್ಕೆಯವರು ಜಿ.ಎಸ್.ಎಸ್. ಅವರ ‘ಎಲ್ಲಿದೆ ಬೃಂದಾವನ’ ಎಂಬ ಅಪರೂಪದ ಭಾವಗೀತೆಯೊಂದನ್ನು ಭಾವದುಂಬಿ ಹಾಡಿದ್ದಾರೆ. ನೀವೆಲ್ಲ ಕುತೂಹಲದಿಂದ ಕಾಯುತ್ತಿದ್ದ  ಶಿವ್ ಮೇಟಿಯವರ ‘ಯಾರಿವಳು?’..ಕಥಾನಾಯಕಿಯ ರಹಸ್ಯಇವತ್ತಿನ   ಕೊನೆಯ ಕಂತಿನಲ್ಲಿ ಬಯಲಾಗುತ್ತದೆಯೇ? ಓದಿನೋಡಿ.

ಇಂದಿನ ಸಂಚಿಕೆಯನ್ನೂ ಅಂದಿನಂತೆಯೇ ಕುಳಿತು ಓದುವಿರೆಂಬ ವಿಶ್ವಾಸದಿಂದ , ನಿಮ್ಮ ಅನಿಸಿಕೆಗಳನ್ನು ಎದಿರು ನೋಡುತ್ತಿರುವೆ.

~ ಸಂಪಾದಕಿ

ಜಿ. ಎಸ್. ಎಸ್. ಅವರ ಬದುಕಿನ ವಿಶೇಷ ಮೌಲ್ಯಗಳು

ಒಬ್ಬ ಪ್ರಮುಖ ಲೇಖಕನ ಬದುಕಿನ ಧ್ಯೇಯವನ್ನು, ಮೌಲ್ಯಗಳನ್ನು, ಸಂದೇಶಗಳನ್ನು ಅರ್ಥಮಾಡಿಕೊಳ್ಳಲು ಅವರ ಆತ್ಮಕಥೆಯನ್ನು ಓದುವುದು ಅಗತ್ಯ. ಕನ್ನಡದ ಅನೇಕ ಸಾಹಿತಿಗಳು, ಗಣ್ಯರು ತಮ್ಮ ಆತ್ಮ ಕಥೆಯನ್ನು ಬರೆದುಕೊಂಡಿದ್ದಾರೆ. ಜಿ. ಎಸ್. ಎಸ್ ತಮ್ಮ ಆತ್ಮ ಕಥೆಯನ್ನು ಚತುರಂಗ ಎಂಬ ಶೀರ್ಷಿಕೆಯಲ್ಲಿ ನೂರು ಪುಟದ ಒಳಗೇ ಸಂಕ್ಷಿಪ್ತವಾಗಿ ಬರೆದು ಅದನ್ನು ಅಸಮಗ್ರ ಆತ್ಮಕಥೆ ಎಂದು ಕರೆದಿದ್ದಾರೆ. ಅದರಲ್ಲಿ ಬಾಲ್ಯದ, ತಾರುಣ್ಯದ, ವೃತ್ತಿ ಜೀವನದ ಮತ್ತು ಇನ್ನು ಅನೇಕ ಸ್ವಾರಸ್ಯಕರವಾದ ಬಿಡಿ ನೆನಪುಗಳಿವೆ. ಅವರು ಏಕೆ ತಮ್ಮ ಈ ಬರಹವನ್ನು ಅಸಮಗ್ರಕಥೆ ಎಂದು ಕರೆದಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಹೊತ್ತಿಗೆಯ ಮುನ್ನುಡಿಯಲ್ಲಿ ಜಿ.ಎಸ್.ಎಸ್ ಹೇಳಿರುವ ಹಾಗೆ " ಒಬ್ಬ ಸೃಜನ ಶೀಲ ಲೇಖಕ ವಾಸ್ತವವಾಗಿ ತನ್ನ ಬರಹಗಳಲ್ಲೇ ತನ್ನ ನಿಜವಾದ ಆತ್ಮಕಥೆಯನ್ನು ಬರೆದುಕೊಂಡಿರುತ್ತಾನೆ" ಹೀಗಿರುವಾಗ ಮತ್ತೊಂದು ಆತ್ಮಕಥೆಯನ್ನು ಸುದೀರ್ಘವಾಗಿ ಬರೆಯುವ ಅಗತ್ಯ ಅವರಿಗೆ ಕಂಡುಬಂದಿಲ್ಲ. ಜಿ.ಎಸ್.ಎಸ್ ಅವರ ಬದುಕಿನ ಮೌಲ್ಯಗಳನ್ನು ಗ್ರಹಿಸಬೇಕಾದರೆ ಅವರ ಕವನಗಳತ್ತ ಗಮನ ಹರಿಸಬೇಕು. ನಾನು ಅವರ ಮಗನಾಗಿ ಅವರ ಹತ್ತಿರದ ಒಡನಾಟದಿಂದ ಅವರ ಬದುಕಿನ ಮೌಲ್ಯಗಳನ್ನು ಗುರುತಿಸುತ್ತಾ ಬಂದಿದ್ದೇನೆ ಮತ್ತು ಅವುಗಳನ್ನು ನನ್ನದಾಗಿಸಿಕೊಂಡಿದ್ದೇನೆ. ಹಲವು ದಶಕಗಳಿಂದ ಅವರ ಕವನಗಳನ್ನು ಓದುತ್ತ ಕೇಳುತ್ತ ಅದರಲ್ಲಿ ಅಡಗಿರುವ ಸಂದೇಶವನ್ನು ಮತ್ತೆ ಮತ್ತೆ ಅವಲೋಕಿಸಿದ್ದೇನೆ. ಅವರು ಈ ಮೌಲ್ಯಗಳನ್ನು ಬರಿ ಕವಿತೆಗೆ ಅಷ್ಟೇ ಸೀಮಿತಗೊಳಿಸದೆ ಅದನ್ನು ತಮ್ಮ ನಿಜಜೀವನದಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ ಎಂಬ ವಿಚಾರದಲ್ಲಿ ನನಗೆ ಸಂದೇಹವಿಲ್ಲ. ಒಬ್ಬ ಲೇಖಕನ ಬರಹ ಅವನ ಬದುಕಿನ ವಿಸ್ತರಣೆಯಷ್ಟೇ. ಲೇಖಕರ ಬರಹವನ್ನು ಮತ್ತು ಬದುಕನ್ನು ಬೇರ್ಪಡಿಸಿದೆ ಅದನ್ನು ಒಟ್ಟಾರೆಯಾಗಿ ಗ್ರಹಿಸಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯ. ನನಗೆ ತಿಳಿದ ಮಟ್ಟಿಗೆ ನನ್ನ  ತಂದೆ ಜಿ.ಎಸ್.ಎಸ್ ಅವರ ಬದುಕಿನ ಕೆಲವು ಘಟನೆಗಳನ್ನು ಉದಾಹರಿಸಿ ಅವರ ಮೌಲ್ಯಗಳನ್ನು ಕೃತಿಗಳಲ್ಲಿ ಕಾಣಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.

ಅನುಕಂಪೆ ಅಪ್ಪನ ವ್ಯಕ್ತಿತ್ವದ ವಿಶೇಷ ಲಕ್ಷಣ. ಬಡವರ ಬಗ್ಗೆ, ಶೋಷಿತರ ಬಗ್ಗೆ ಅವರಿಗೆ ತೀವ್ರ ಕಾಳಜಿ ಇದೆ. ಅವರು ತಮ್ಮ ಬಾಲ್ಯದಲ್ಲಿ, ವಿದ್ಯಾರ್ಥಿದೆಸೆಯಲ್ಲಿ ಬಡತನವನ್ನು ಅನುಭವಿಸಿದವರು. ಹಿಂದೊಮ್ಮೆ ಬಡತನದ ಬವಣೆಯಲ್ಲಿದ್ದು ಶಾಲೆಯಲ್ಲಿ ಓದುತ್ತಿದ್ದ ಒಬ್ಬ ಹುಡುಗಿ ತನ್ನ ಓದನ್ನು ಬಿಟ್ಟು ನಮ್ಮ ಮನೆಗೆಲಸಕ್ಕೆ ಬರುವ ಪರಿಸ್ಥಿತಿ ಅನಿವಾರ್ಯವಾಗಿತ್ತು. ಅವಳ ತಾಯಿ ತೀರಿಕೊಂಡಿದ್ದು, ಹಲವಾರು ಮಕ್ಕಳಿರುವ ಸಂಸಾರವನ್ನು ನಿಭಾಯಿಸಲು ಹೆಣಗುತ್ತಿದ್ದ ಅವಳ ತಂದೆ ಈ ಬಾಲಕಿಯನ್ನು ಶಾಲೆಯಿಂದ ಬಿಡಿಸಿ ಕೆಲಸಕ್ಕೆ ಇರಿಸಿರುವ ತೀರ್ಮಾನಕ್ಕೆ ಬಂದಿದ್ದ. ಸ್ವಲ್ಪ ವರ್ಷದ ನಂತರ ಈ ಹುಡುಗಿ ಹಾಗು ಹೀಗೂ ಪಿಯುಸಿ ಓದಿಕೊಂಡ ನಂತರ ತನಗೆ ಎಲ್ಲಾದರೂ ಕೆಲಸ ಕೊಡಿಸಬೇಕೆಂದು ಜಿ.ಎಸ್.ಎಸ್ ಅವರನ್ನು ಬೇಡಿಕೊಂಡಳು. ಅವಳ ಹಿನ್ನೆಲೆಯನ್ನು ತಿಳಿದಿದ್ದ ಅಪ್ಪ, ತಾವೇ ಮೈಸೂರಿಗೆ ಖುದ್ದಾಗಿ ಹೋಗಿ ಜೆ.ಎಸ್.ಎಸ್ ಮಠದ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಕಂಡು ಈ ಬಡ ಹುಡುಗಿಗೆ ಜೆ.ಎಸ್.ಎಸ್ ಸಂಸ್ಥೆಯಲ್ಲಿ ಕೆಲಸ ಕೊಡಿಸಲು ವಿನಂತಿಸಿಕೊಂಡರು. ಸ್ವಾಮಿಜಿಯವರು ಈ ಹುಡುಗಿಯನ್ನು ಕೆಲಸಕ್ಕೆ ತೆಗೆದುಕೊಳ್ಳುವ ಬದಲು ವೃತ್ತಿಪರ ಶಿಕ್ಷಣದ ಕಾಲೇಜಿನಲ್ಲಿ ಒಂದು ಕೋರ್ಸಿಗೆ ಸೀಟು ಕೊಡುವುದಾಗಿ ಆಶ್ವಾಸನೆ ನೀಡಿದರು. ಇವಳ ಶಿಕ್ಷಣದ ವೆಚ್ಚವನ್ನು ಅಪ್ಪ ಭರಿಸುವುದಾಗಿ ಒಪ್ಪಿಕೊಂಡರು, ಸ್ವಾಮೀಜಿ ಈ ಬಡಹುಡುಗಿಯ ಮೇಲೆ  ಕರುಣೆಯಿಟ್ಟು ಅವಳಿಗೆ ಹಾಸ್ಟೆಲಿನಲ್ಲಿ ಉಚಿತ ವ್ಯವಸ್ಥೆಗೆ ಅನುವುಮಾಡಿಕೊಟ್ಟರು. ಮುಂದಕ್ಕೆ ಈ ಹುಡುಗಿಗೆ ಒಳ್ಳೆ ಕೆಲಸ ಸಿಕ್ಕಿತ್ತು, ಅವಳ ಮದುವೆಯೂ ಆಯಿತು. ಇದಾದ ಹತ್ತಾರು ವರುಷಗಳ ನಂತರ ಅಪ್ಪ ಮತ್ತು ಜೆ.ಎಸ್.ಎಸ್ ದೇಶಿಕೇಂದ್ರ ಸ್ವಾಮಿಗಳು ಯಾವುದೋ ಒಂದು ಸಮಾರಂಭದಲ್ಲಿ ಅತಿಥಿಗಳಾಗಿ ವೇದಿಕೆಯಲ್ಲಿ ಭೇಟಿಯಾದಾಗ ಈ ಹುಡುಗಿಯ ಕ್ಷೇಮವನ್ನು ಸ್ವಾಮೀಜಿಯವರು ವಿಚಾರಿಸಿಕೊಂಡರಂತೆ.  ಅಪ್ಪ, ಸ್ವಾಮೀಜಿಯವರಿಗೆ "ನೀವು ಅಸಂಖ್ಯಾತ ಕಾರುಬಾರುಗಳ ನಡುವೆ ಇಷ್ಟು ಸಣ್ಣ ವಿಚಾರವನ್ನು  ನೆನಪಿಟ್ಟುಕೊಂಡಿದ್ದೀರಲ್ಲ" ಎಂದಾಗ ಸ್ವಾಮಿಜಿ ನಕ್ಕು ಹೇಳಿದರಂತೆ; "ಯಾವುದೂ ಸಣ್ಣದಲ್ಲ"! ನಂತರದಲ್ಲಿ ಅಪ್ಪ ಈ ಪ್ರಸಂಗವನ್ನು ಕುರಿತಾದ ಲೇಖನವನ್ನು ಒಳಗೊಂಡಂತೆ "ಯಾವುದೂ ಸಣ್ಣದಲ್ಲ" ಎಂಬ ಪ್ರಬಂಧ ಸಂಕಲವನ್ನು ಹೊರತಂದರು. ನಮ್ಮ ಮನೆಯಲ್ಲಿ ಕಾರು ತೊಳೆಯಲು ಬರುತ್ತಿದ್ದ ಒಬ್ಬ ಬಡ ಮುಸ್ಲಿಂ ಯುವಕನಿಗೆ ಅಪ್ಪನ ಸಹಾಯದಿಂದ ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಕೆಲಸ ದೊರೆಯಿತು. ಅಂದಹಾಗೆ ಬಡತನದ ಕಷ್ಟದಲ್ಲಿದ್ದವರಿಗಷ್ಟೇ ಅಪ್ಪ ಶಿಫಾರಸ್ ಮಾಡುತ್ತಿದ್ದರು.  ಅನೂಕೂಲವಾಗಿರುವ ಎಷ್ಟೋ ಹತ್ತಿರದ ಮತ್ತು ದೂರದ ಬಳಗದವರು ಶಿಫಾರಸ್ ಕೇಳಿಕೊಂಡು ಬಂದರೆ ಅಪ್ಪ ಅದನ್ನು ಸಮ್ಮತಿಸುತ್ತಿರಲಿಲ್ಲ. ಮಕ್ಕಳಾದ ನಮಗೂ ಯಾವ ರೀತಿಯಲ್ಲೂ ಅಪ್ಪ ಶಿಫಾರಸ್ ಮಾಡಲಿಲ್ಲ. ಪ್ರತಿಭೆ ಮತ್ತು ಅರ್ಹತೆ ಅವರಿಗೆ ಬಹಳ ಮುಖ್ಯವಾಗಿತ್ತು ಆದರೆ ಹಿಂದುಳಿದವರಿಗೆ ಮೀಸಲಾತಿಯನ್ನು ಕೊಡುವುದು ಸಾಮಾಜಿಕ ನ್ಯಾಯ ಎಂದು ಭಾವಿಸಿದ್ದರು. ಮೀಸಲಾತಿಯನ್ನು ದುರುಪಯೋಗ ಪಡಿಸಿಕೊಂಡವರ ವಿಚಾರ ಇಲ್ಲಿ ಉಲ್ಲೇಖಿಸುತ್ತಿಲ್ಲ.

ಬಹಳ ಹಿಂದೆ ನಾವು ರಾಜು ಎಂಬ ನಾಯಿಯನ್ನು ಸಾಕಿಕೊಂಡಿದ್ದೇವು. ಅದರ ಬಗ್ಗೆ ಅಪ್ಪನಿಗೆ ವಿಶೇಷ ಕಾಳಜಿ. ನಾಯಿಗೆ ಊಟ ಹಾಕಿದ್ದೀಯಾ? ಎಂದು ಅಮ್ಮನನ್ನು ಪದೇ ಪದೇ ಕೇಳುತ್ತಿದ್ದರು. ಅವರ ಕಾಳಜಿ ನಾಯಿಗೂ ತಿಳಿದಿತ್ತು! ಊಟದ ಕೋಣೆಗೆ ಬಂದರೆ ಅದನ್ನು ಆಚೆಗೆ ಅಟ್ಟುತ್ತಿದ್ದ ನಮನ್ನು ಬಿಟ್ಟು ಅಪ್ಪನ ಕಾಲ ಬಳಿ ಬಂದು ರಾಜು ಕುಂಯ್ ಗುಟ್ಟುತ್ತಿದ್ದ. ಪ್ರತಿಯಾಗಿ ಅಪ್ಪನ ತಟ್ಟೆಯಿಂದ ಅವನಿಗೆ ರೊಟ್ಟಿ ಚಪಾತಿಯ ತುಣುಕುಗಳು ದೊರೆಯುತ್ತಿದ್ದವು. ಇದೊಂದು ತಿಂಡಿ ಪೋತ ಎಂದು ನಾವೆಲ್ಲಾ ದೂರುತ್ತಿದ್ದೆವು.  ನಮ್ಮ ಮನೆಯ ಪ್ರಾಣಿಯೂ ಅಪ್ಪನ ಅನುಕಂಪೆಗೆ ಪಾತ್ರವಾಗಿತ್ತು. ಮನೆ ಕೆಲಸದವರನ್ನು ಪ್ರೀತಿ ವಿಶ್ವಾಸ ಮತ್ತು ಗೌರವದಿಂದ ಅಪ್ಪ ಕಾಣುತ್ತಿದ್ದರು. ನನ್ನ ಅಣ್ಣ ಜಯದೇವ ಅಪ್ಪನ ಈ ಅನುಕಂಪೆಯ ಮೌಲ್ಯಗಳನ್ನು ಹೀರಿಕೊಂಡು ಮುಂದಕ್ಕೆ ಗಿರಿಜನರ, ಅನಾಥರ ದೀನಬಂಧುವಾದ. 

ಅಪ್ಪನ ಅನುಕಂಪೆಯನ್ನು ಅವರ ಕವನಗಳಲ್ಲಿ ಯಥೇಚ್ಛವಾಗಿ ಕಾಣಬಹುದು. ಕೆಳಗಿನ ಸಾಲುಗಳು ಅದಕ್ಕೆ ಸಾಕ್ಷಿಯಾಗಿದೆ;

"ದೀಪವಿರದ ದಾರಿಯಲ್ಲಿ ತಡವರಿಸುವ ನುಡಿಗಳೇ 
ಕಂಬನಿಗಳ ತಲಾತಲದಿ ನಂದುತಿರುವ ಕಿಡಿಗಳೇ 
ಉಸಿರ ನಿಡುವೆ ಹೆಸರ ಕೊಡುವೆ, ಬನ್ನಿ ನನ್ನ ಹೃದಯಕೆ"

ಈ ಕವನದಲ್ಲಿ  ತಲಾಂತರದಿಂದ ಶೋಷಣೆಗೊಂಡು ಕತ್ತಲಲ್ಲಿ ತಡವರಿಸುವ ,ಬಾಯಿಲ್ಲದೆ ಮೌನದಲ್ಲಿರುವ, ಜಲವಿಲ್ಲದೆ ಕಮರುತಿರುವ, ಬಿರು ಬಿಸಿಲಿನ ತುಳಿತದಲ್ಲಿ ಸೊರಗಿರುವ, ಹೆಸರಿಲ್ಲದ ಜನರಿಗೆ ಅಸ್ತಿತ್ವವನ್ನು ನೀಡಿ ಉಸಿರನ್ನು ಕೊಡುವ ಕವಿಯ ಅನುಕಂಪೆ ಬಹಳ ಸುಂದರವಾಗಿ ಮೂಡಿದೆ. 

 ಅಪ್ಪ ಬರೆದ ಇನ್ನೊಂದು ಕವನ ‘ಯಾವಹಾಡ ಹಾಡಲಿ’ ಬಹಳ ಜನಪ್ರಿಯ ಭಾವ ಗೀತಯೂ ಆಗಿದೆ. ಅದರ ಕೆಲ ಸಾಲುಗಳು ಹೀಗಿವೆ;

“ಯಾವ ಹಾಡ ಹಾಡಲಿ 
ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲಿ 
ಸುತ್ತ ಮುತ್ತ ಮನೆಮಠಗಳು ಹೊತ್ತಿಕೊಂಡು ಉರಿಯುವಲ್ಲಿ   
ಸೋತು ಮೂಕವಾದ ಬದುಕು ನಿಟ್ಟುಸಿರೊಳು ತೇಲುವಲ್ಲಿ 
ಯಾವ ಹಾಡ ಹಾಡಲಿ 

ಬರಿ ಮಾತಿನ ಜಾಲದಲ್ಲಿ, ವಂಚನೆಗಳ ಸಂಚಿನಲ್ಲಿ, ಶೋಷಣೆಗಳ ಶೂಲದಲ್ಲಿ, ಹಸಿದ ಹೊಟ್ಟೆ ನರಳುವಲ್ಲಿ, ಇರುವ ಕನಸು ಸೀಯುವಲ್ಲಿ, ಕುರುಡು ಪಯಣ ಸಾಗುವಲ್ಲಿ ಯಾವ ಹಾಡ ಹಾಡಲಿ? ಅಂತ ಕವಿ ಮರುಗುತ್ತಾರೆ. ಈ ಹಾಡನ್ನು ನಮ್ಮ ಮನೆಗೆ ಬಂದು ಹಲವಾರು ಸಾರಿ ಹಾಡಿದ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಮ್ಮ ಕಣ್ಣುಗಳಲ್ಲಿ ನೀರು ಬರುವಂತೆ ಹಾಡಿ ಕೊನೆಗೆ ಅವರೇ ಭಾವುಕರಾಗಿ ಎಷ್ಟೋ ಸಾರಿ ಅತ್ತುಬಿಡುತ್ತಿದ್ದರು. ಒಬ್ಬ ಕವಿ ತನ್ನ ಕವಿತೆಯಲ್ಲಿ ಬರಿ ಪ್ರೀತಿ, ಪ್ರೇಮ, ನಿಸರ್ಗ ಇದನ್ನಷ್ಟೇ ವರ್ಣಿಸಿದರೆ ಸಾಲದು ಅವನಿಗೆ ಸಾಮಾಜಿಕ ವಿಚಾರಗಳ ಬಗ್ಗೆ ಕಾಳಜಿ ಇರಬೇಕು ಎಂದು ನನ್ನ ಹತ್ತಿರ ಅವರು ಹೇಳಿದ್ದುಂಟು.  

ಮಾಡುವ ಕೆಲಸದಲ್ಲಿ ಅಪ್ಪನಿಗೆ ಬಹಳ ಶ್ರದ್ಧೆ. ತಮ್ಮ ಒಂದು ಕಾರು ತೊಳೆಯುವ ಸಣ್ಣ ಕೆಲಸದಿಂದ ಹಿಡಿದು ತಮ್ಮ ಪ್ರೊಫೆಸ್ಸರ್ ಹುದ್ದೆಯವರೆಗೆ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಅವರು ಎಂಎ ವಿದ್ಯಾರ್ಥಿಗಳಿಗೆ ಪಾಠಮಾಡುವ ಮುನ್ನ ಸಾಕಷ್ಟು ತಯಾರಿಯನ್ನು ಮಾಡಿಕೊಂಡು ಅದಕ್ಕೆ ಬೇಕಾದ ಟಿಪ್ಪಣಿಗಳನ್ನು ಸಾರಾಂಶವನ್ನು ಸಣ್ಣ ಕಾಗದದಲ್ಲಿ ಪಟ್ಟಿಮಾಡಿಕೊಂಡು ಉಲ್ಲೇಖಿಸುತ್ತಾ ಪಾಠ ಹೇಳುತ್ತಿದ್ದರು. ಕೊಂಚ ತಡವಾಗಿ ಬಂದು, ಯಾವ ಸೃಜನಶೀಲತೆ ಇಲ್ಲದೆ, ಹೇಳಿದ್ದನ್ನೇ ಹೇಳುವ ಪ್ರೊಫೆಸ್ಸರ್ ಅವರಾಗಿರಲಿಲ್ಲ ಎಂದು ಅವರ ವಿದ್ಯಾರ್ಥಿಗಳು ಹೇಳುವುದನ್ನು ಕೇಳಿದ್ದೇನೆ. ಅವರು ಬರೆಯುತ್ತಿದ್ದ ಲೇಖನದ ಮೂಲ ಹಸ್ತಪ್ರತಿಯನ್ನು ನಾನು ಖುದ್ದಾಗಿ ಕಂಡಿದ್ದೇನೆ. ಅವರ ಮುದ್ದಾದ ಅಕ್ಷರಗಳು ಮಣಿ ಪೋಣಿಸಿದಂತೆ ಕಾಣುತ್ತಿದ್ದವು. ಅಲ್ಲಿ ತಿದ್ದುಪಡಿಗಳು ಕಾಟು ಹಾಕಿದ ಸಾಲುಗಳು ಇರುತ್ತಿರಲಿಲ್ಲ. ಅಲ್ಲಿ ಎಲ್ಲವೂ ಸ್ಪುಟವಾಗಿದ್ದು ಅವರ ಶ್ರದ್ಧೆಗೆ ಸಾಕ್ಷಿಯಾಗಿದ್ದವು. ಯಾವ ಕೆಲಸವನ್ನು ಕೈಗೆತ್ತಿಕೊಂಡರೂ
ಅದನ್ನು ಸಂಪೂರ್ಣವಾಗಿ ಮಾಡಿ ಮುಗಿಸುವವರೆಗೆ ಅವರಿಗೆ ಸಮಾಧಾನವಿರುತ್ತಿರಲಿಲ್ಲ. ಅಪ್ಪ ಸ್ಪರ್ಧೆಗಿಂತ ಶ್ರದ್ಧೆಗೆ ಹೆಚ್ಚು ಬೆಲೆನೀಡುತ್ತಿದರು. ಅವರಿಗೆ ತೋರ್ಪಡಿಕೆ, ಆಡಂಬರ ಮುಜುಗರದ ವಿಚಾರ. ಶ್ರದ್ಧೆ ಅವರ ಬದುಕನ್ನು ಪ್ರಚೋದಿಸಿದ ರೂಪಿಸಿದ ಶಕ್ತಿ ಎಂದು ಹೇಳಬಹುದು. ಒಂದು ಕಡೆ ಅವರೇ ಹೇಳಿದಂತೆ; “ಶ್ರದ್ಧೆಗೆ ನಿರಾಡಂಬರವೇ  ಇಷ್ಟವಾದರೆ ಸ್ಪರ್ಧೆಗೆ ಆಡಂಬರ ಅಟ್ಟ ಹಾಸಗಳೇ ಇಷ್ಟ, ಶ್ರದ್ಧೆ ಮುಗ್ಧವಾದರೆ ಸ್ಪರ್ಧೆ ಕುಟಿಲವಾದದ್ದು. ಸ್ಪರ್ಧೆಯ ಪಾಲಿಗೆ ಜಗತ್ತೆಲ್ಲ ರಣರಂಗ. ಪ್ರತಿಯೊಂದೂ, ಪ್ರತಿಯೊಬ್ಬರೂ ತನಗೆ ಪ್ರತಿಸ್ಪರ್ಧಿಯಾಗಿದ್ದರೆಂಬ ಭ್ರಮೆಯೇ ಅದಕ್ಕೆ ಪ್ರಚೋದಕ. ಎಲ್ಲರನ್ನೂ ಹಿಂದೆ ಹಾಕುವುದು ತಾನು ಮಾತ್ರ ಮುಂದುವರಿಯುವುದು ಹೇಗೆ ಎನ್ನುವುದೇ ಅದರ ಧ್ಯಾಸ
ಶ್ರದ್ಧೆಗೆ ಎಲ್ಲರೊಂದಿಗೆ ಸಹಯಾತ್ರಿಯಾಗುವುದಲ್ಲೇ ಆಸಕ್ತಿ ಮತ್ತು ಜಗತ್ತೆಲ್ಲಾ ಸ್ನೇಹರಂಗವೆಂಬ ವಿಶ್ವಾಸವಿದೆ. ಸ್ಪರ್ಧೆಗೆ ಸ್ವಾರ್ಥ ಮೂಲವಾದರೆ ಶ್ರದ್ಧೆಗೆ ಪರಾರ್ಥ ಪ್ರಿಯವಾದದ್ದು”. 

ಜಿ. ಎಸ್. ಎಸ್ ಅವರ ಯಶಸ್ವಿಯಾಗಿರುವ ಶಿಷ್ಯ ವರ್ಗವನ್ನು ಗಮನಿಸಿದಾಗ ಜಿ.ಎಸ್.ಎಸ್ ಹೇಗೆ ತಾವು ಬೆಳೆಯುವುದರ ಜೊತೆಗೆ ಎಲ್ಲರನ್ನು ಬೆಳೆಸಿದರು ಎಂಬ ವಿಚಾರ ತಿಳಿದು ಬರುತ್ತದೆ. ಅವರ ಹಲವಾರು ಶಿಷ್ಯರು ಅಪ್ಪನ ಎತ್ತರಕ್ಕೆ ಬೆಳೆದದ್ದು ಅವರಿಗೆ ಹೆಮ್ಮೆಯಾದ ವಿಷಯ ಎನ್ನುವುದನ್ನು ಮೇಲಿನ ಶ್ರದ್ಧೆ -ಸ್ಪರ್ಧೆಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಹಲವು ದಶಕಗಳ ಹಿಂದೆ ಕಿರಿಯ ಉದಯೋನ್ಮುಖ ಕವಿಗಳಾಗಿದ್ದ (ಇಂದು ಹನಿಗವನ ಖ್ಯಾತಿಯ) ಡುಂಡಿರಾಜ್ ಒಮ್ಮೆ ತಮ್ಮ ಪದ್ಯವನ್ನು ಒಂದು ಪತ್ರಿಕೆಯಲ್ಲಿ ಪ್ರಕಟಿಸಿದ್ದು ಅದನ್ನು ಓದಿದ ಜಿ.ಎಸ್.ಎಸ್ ಕೂಡಲೇ ಅವರಿಗೆ ಒಂದು ಪೋಸ್ಟ್ ಕಾರ್ಡಿನಲ್ಲಿ ಅವರನ್ನು ಪ್ರಶಂಸಿಸಿ ಮುಂದಕ್ಕೆ ಇನ್ನು ಹೆಚ್ಚಿನ ಕವನವನ್ನು ಬರೆಯುವಂತೆ ಪ್ರೋತ್ಸಾಹಿಸಿದ್ದರೆಂದು ಡುಂಡಿ ರಾಜರು ನನಗೆ ತಿಳಿಸಿದರು. ಹಲವಾರು ಯುವ ಲೇಖಕ ಲೇಖಕಿಯರಿಗೆ ಅಪ್ಪ ಮೆಚ್ಚುಗೆಯನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಅಪ್ಪ ನಡೆಸುತ್ತಿದ್ದ ಸೆಂಟ್ರಲ್ ಕಾಲೇಜಿನ ಅನೇಕ ವಿಚಾರ ಸಂಕಿರಣಗಳ ವೇದಿಕೆಯಲ್ಲಿ ತಮ್ಮ ಶಿಷ್ಯರಿಗೆ ಮತ್ತು ಇತರ ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ಅವರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿದ್ದಾರೆ ಎಂದು ನಾನು ಕೇಳಿದ್ದೇನೆ. ಅವರು ಕಿರಿಯ ಸಾಹಿತ್ಯ ಮಿತ್ರರೊಂದಿಗೆ ಅನ್ಯೋನ್ಯವಾಗಿ ಸಾಹಿತ್ಯ ಸಂವಾದಕ್ಕೆ, ಚರ್ಚೆಗೆ ತೊಡಗಿಸಿಕೊಳ್ಳುತ್ತಿದ್ದರು ಎಂಬ ವಿಚಾರವನ್ನು ಖ್ಯಾತ ವಿಮರ್ಶಕರಾದ ಟಿ.ಪಿ ಅಶೋಕ್ ಅವರಿಂದ ತಿಳಿದೆ.  

ಸ್ಪರ್ಧೆಗೆ ಬದುಕೇ ರಣರಂಗವಾದರೆ, ಶ್ರದ್ಧೆಗೆ ಬದುಕು ಸ್ನೇಹರಂಗ, ಈ ಮೇಲಿನ ಜಿ.ಎಸ್.ಎಸ್ ಸಂದೇಶವನ್ನು ಇಂದಿನ ಬದುಕಿನ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ. ನಾನು, ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಧರ್ಮ ಶ್ರೇಷ್ಠವೆಂಬ ಸ್ಪರ್ಧೆಗೆ ಇಳಿದರೆ ಅದು ರಣರಂಗವಾಗಿ ಸಂಭವಿಸುವುದರಲ್ಲಿ ಸಂದೇಹವಿಲ್ಲ.  ಬದಲಿಗೆ ಎಲ್ಲರು ತಮ್ಮ ತಮ್ಮ ಕಾರ್ಯಗಳನ್ನು ಶ್ರದ್ಧೆ ,ಪ್ರೀತಿ, ವಿಶ್ವಾಸಗಳಿಂದ  ಮಾಡಿದರೆ ಬದುಕು ಒಂದು ಸ್ನೇಹ ರಂಗವಾಗಿ ಶಾಂತಿ ನಿಮ್ಮದಿಗಳು ಸಿಗುತ್ತದೆ. ಎಲ್ಲರು ಜತೆ ಜೊತೆಯಾಗಿ ಬೆಳೆಯಬಹುದು. 

ಅಪ್ಪ ಬಹಳ ಸ್ವಾಭಾಮಾನಿ. ಅವರಿಗೆ ಇತರರನ್ನು ಅವಲಂಬಿಸುವುದು ಸಲ್ಲದ ವಿಷಯ. ನಾನು ಇಂಗ್ಲೆಂಡಿನಲ್ಲಿ ನೆಲೆಸಿದ ಮೇಲೆ ಹಲವು ಬಾರಿ ಅವರನ್ನು ಆಹ್ವಾನಿಸಿ ಅವರ ಪ್ರಯಾಣದ ಏರ್ ಟಿಕೆಟ್ ಕೊಳ್ಳಲು ಮುಂದಾದಾಗ ಅದನ್ನು ಸ್ವೀಕರಿಸದೆ ತಾವೇ ಖರ್ಚುಹಾಕಿಕೊಂಡು ಬರುತ್ತೇನೆ ಎಂದು ಹಠ ಹಿಡಿಯುತ್ತಿದ್ದರು. ಒಂದೇ ಒಂದು ಬಾರಿ ಅವರಿಗೆ ಎಂಬತ್ತು ತುಂಬಿದಾಗ ನಾನು ಅವರಿಗೆ ಉಡುಗೊರೆಯಾಗಿ ಪ್ಯಾರಿಸ್ ಮತ್ತು ವಿಯನ್ನ ನಗರದ ಪ್ರವಾಸವನ್ನು ಸೂಚಿಸದಾಗ ಅವರು ನನ್ನ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಮತಿಸಿದರು. ಅಪ್ಪನಿಗೆ ಕೊನೆಯಲ್ಲಿ
ನರರೋಗ ಉಂಟಾಗಿ ನಡೆಯಲು ತೊಂದರೆಯಾದಾಗ ಅವರು ಇತರರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂತು. ಆ ಅವಲಂಬನೆ ಅವರಿಗೆ ಹಿತವಾಗಿರಲಿಲ್ಲ, ಬೇರೆ ದಾರಿಯೂ ಇರಲಿಲ್ಲ. ಅಪ್ಪನಿಗೆ ಪ್ರಾಮಾಣಿಕತೆ ಬಹಳ ಮೌಲಿಕವಾದದ್ದು. ಖಾಸಗಿ ವಿಷಯ ಮತ್ತು ಆಫೀಸ್ ವಿಷಯ ಎರಡೂ ಬೇರೆ ಬೇರೆ. ಕೆಲವೊಮ್ಮೆ ಇರುವ ಸವಲತ್ತುಗಳನ್ನು ಬಳಸಿಕೊಳ್ಳುವ ಆಸಕ್ತಿ ಇರಲಿಲ್ಲ. ಯಾವುದೇ ಕುರ್ಚಿ, ಅವಾರ್ಡ್ ಇತ್ಯಾದಿಗಳ ಹಿಂದೆ ಅವರು ಲಾಬಿ ಮಾಡಲಿಲ್ಲ. "ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ" ಎಂಬ ಒಂದು ನಿರ್ಲಿಪ್ತ ಮನೋಭಾವವಿದ್ದು ರಾಷ್ತ್ರ ಕವಿ, ಪಂಪ ಪ್ರಶಸ್ತಿ, ಮತ್ತು ಇನ್ನು ಅನೇಕ ಪ್ರಶಸ್ತಿಗಳೇ ಅವರನ್ನು ಹುಡುಕಿಕೊಂಡು ಬಂದವು ಎನ್ನಬಹುದು. "ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ” ಎಂಬ ಸಾಲುಗಳಲ್ಲಿ  ಅವರ ಶ್ರದ್ಧೆ ಪ್ರಾಮಾಣಿಕತೆಗಳನ್ನು ಗುರುತಿಸಬಹುದು.

ಅಪ್ಪನ ಬದುಕಿನಲ್ಲಿ ಸಮಯ ಪ್ರಜ್ಞೆ, ಶಿಸ್ತು, ಕ್ರಮ ಅವರಿಗೆ ಅತಿ ಮುಖ್ಯ. ಅವರು ನನಗೆ ಕೆಲವೊಮ್ಮೆ ಮಿಲಿಟರಿ ಕರ್ನಲ್ ಅಂತೆ ಕಾಣುತ್ತಿದ್ದರು. ಹೊತ್ತು ಹೊತ್ತಿಗೆ ಊಟ, ನಿದ್ರೆ, ಓದು ಅವರ ಆದ್ಯತೆಯಾಗಿತ್ತು. ಅವರನ್ನು ಭಾಷಣಕ್ಕೆಂದು ಅಥವಾ ಮುಖ್ಯ ಅತಿಥಿಯಾಗಿ ಆಹ್ವಾನಿಸಿದಾಗ ಕಾರ್ಯಕ್ರಮವನ್ನು ತಡಮಾಡದೆ ನಿಗದಿಯಾದ ವೇಳೆಗೆ ಶುರುಮಾಡಬೇಕೆಂದು ಸಂಘಟಿಕರಿಗೆ ಸೂಚಿಸುತ್ತಿದ್ದರು. ಈ ವಿಚಾರದಲ್ಲಿ ಲೋಪಗಳಾದರೆ ಅವರು ಸಹಿಸುತ್ತಿರಲಿಲ್ಲ. ಕೆಲವು ಕಾರ್ಯಕ್ರಮದ ವ್ಯವಸ್ಥಾಪಕರು ನಿರೀಕ್ಷೆಗಿಂತ ತೀರಾ ತಡವಾಗಿ ಕಾರು ಕಳುಹಿಸಿದಾಗ ಅಪ್ಪ ಇಷ್ಟು ತಡವಾದದ್ದರಿಂದ ತಾವು ಬರುವುದಿಲ್ಲವೆಂದು ಗಾಂಧೀಜಿಯ ರೀತಿಯಲ್ಲಿ ಹಠ ಹಿಡಿದು ಕೂರುತ್ತಿದ್ದರು. ಸಂಘಟಿಕರು ಇಂತಹ ಪರಿಸ್ಥಿತಿಯಲ್ಲಿ ಅಮ್ಮನನ್ನು "ನೀವು ಸ್ವಲ್ಪ  ಹೇಳಿ ಮೇಡಂ" ಎಂದು ಗೋಗರೆಯುತ್ತಿದ್ದರು. ಅಪ್ಪನಿಗೆ ಗರ್ವ ಇರಲಿಲ್ಲ ಬದಲಾಗಿ ಜನರ ಸಮಯ ಪ್ರಜ್ಞೆಯ ಬಗ್ಗೆ ಅಸಮಾಧಾನವಿತ್ತು ಎಂದು ಹೇಳಬಹುದು. ಅಪ್ಪನ ಪುಸ್ತಕಗಳನ್ನು ಪ್ರಕಾಶಕರು, ಪ್ರಿಂಟಿಂಗ್ ಪ್ರೆಸ್ ಕೆಲಸದವರು ಅಪ್ಪನ ನಿರೀಕ್ಷೆಗೆ ಸರಿಯಾಗಿ ಸಿದ್ಧ ಪಡಿಸದಿದ್ದರೆ ಅವರು ಚಡಪಡಿಸುತ್ತಿದ್ದರು, ಕೆಲವೊಮ್ಮೆ ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅಪ್ಪನ ಸಿಟ್ಟಿನಲ್ಲಿ ತಿರಸ್ಕಾರ ದುರುದ್ದೇಶಗಳು ಇರಲಿಲ್ಲ, ಅದು ಒಂದು ರೀತಿ ಜನರನ್ನು ತಿದ್ದುವ ಸದುದ್ದೇಶದ ಕೋಪ ಎನ್ನಬಹುದು. ಅವರು ಎಷ್ಟೇ ಸಿಟ್ಟಿಗೆದ್ದರು ಅಷ್ಟೇ ಬೇಗ ತಣ್ಣಗಾಗುತ್ತಿದ್ದರು, ತಮ್ಮ ಸಿಟ್ಟನ್ನು ಹೊಗೆಯಾಡಲು ಬಿಡುತ್ತಿರಲಿಲ್ಲ.  ಅಪ್ಪನ ಸಮಯ ಪ್ರಜ್ಞೆ ಕೆಲವು ನಿಧಾನಸ್ಥರಿಗೆ ಮತ್ತು ನಿರಾಸಕ್ತರಿಗೆ ಕಿರಿಕಿರಿ ಉಂಟು ಮಾಡಿರಬಹುದು.

ವೈಚಾರಿಕತೆ ಅಪ್ಪನ ಚಿಂತನೆಗಳಲ್ಲಿ, ಕಾವ್ಯದಲ್ಲಿ, ಬರಹದಲ್ಲಿ, ಅವರ ಬದುಕಿನಲ್ಲಿ ಎದ್ದು ತೋರುತ್ತದೆ.  ಅಪ್ಪ ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಇದ್ದರೂ ಅಂಧ ಶ್ರದ್ಧೆ, ಮೂಢ ನಂಬಿಕೆಗೆ ಶರಣಾಗಲಿಲ್ಲ. ಜನ ಸಾಮಾನ್ಯರು ತಮ್ಮ ಸ್ವಾರ್ಥಕ್ಕಾಗಿ ದೇವರಿಗೆ ಮೊರೆ ಹೋಗುವುದು ಸಾಧಾರಣ. ಆದರೆ "ಶಕ್ತಿಯ ಕೊಡು ಶಕ್ತಿಯ ಕೊಡು ಹೇ ಪ್ರಭು,   ಸತ್ಯಕಾಗಿ  ನಿಲುವ ಛಲವ ದೀಪ್ತಿ ಗೊಳಿಸು ಎನ್ನೊಳು" ಎನ್ನುತ್ತಾ ದೇವರನ್ನು ಅವರು ಬೇಡುವುದು ಸತ್ಯಕಾಗಿ ನಿಲುವ ಸಹನಾ ಶಕ್ತಿಯನ್ನು! ಈ ಕವನ ಒಂದು ನಿರ್ಮಲ ಪ್ರಾರ್ಥನೆ.  

ಆಚಾರ, ಪೂಜೆ, ಸಂಪ್ರದಾಯ ಇವುಗಳಲ್ಲಿ ಅವರಿಗೆ ನಂಬಿಕೆಯಿರಲಿಲ್ಲ. ಈ ಒಂದು ಹಿನ್ನೆಲೆಯಲ್ಲಿ ಅವರು "ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಎಂದು ಬರೆಯುತ್ತಾರೆ. ಅದು ನಾಸ್ತಿಕ ವಾದವಲ್ಲ. ದೇವಸ್ಥಾನದ ನಿರಾಕರಣೆಯೇ ಹೊರತು ದೇವರ ನಿರಾಕರಣೆಯಲ್ಲ. ದೇವರ ಹೆಸರಲ್ಲಿ ನಡೆಯುವ ವ್ಯಾಪಾರ ಶೋಷಣೆ ಇವುಗಳನ್ನು ಕಂಡು "ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೇ" ಎಂದು ಹೇಳುತ್ತಾರೆ.  ಅವರು ಶರಣರ ವಚನಗಳಲ್ಲಿಯ ಸಾಮಾಜಿಕ ವಿಚಾರಗಳ ಬಗ್ಗೆ ಅದರಲ್ಲೂ ವೈಚಾರಿಕತೆಯನ್ನು ಪ್ರತಿಪಾದಿಸುವ ವಚನಗಳನ್ನು ಹಲವಾರು ವೇದಿಕೆಗಳಲ್ಲಿ ವ್ಯಾಖ್ಯಾನಿಸಿದ್ದಾರೆ. 

“ಪ್ರೀತಿ ಕರುಣೆ ಸ್ನೇಹ ಮರುಕ ಇವೇ ನಮ್ಮ ದೇವರು 
ಕಂಬನಿಯೇ ಇಲ್ಲಿ ತೀರ್ಥ ನಿಟ್ಟುಸಿರೇ ಧೂಪವು 
ಬೇಡ ಬೇರೆ ದೇಗುಲ ಇಲ್ಲಿ ಎಲ್ಲ ನಿರ್ಮಲ” 

ಎಂಬ ಅವರ ಕವನದ ಸಾಲುಗಳಲ್ಲಿ ಅವರ ದೇವರ ಪರಿಕಲ್ಪನೆಯನ್ನು ತಿಳಿಸಿದ್ದಾರೆ. ಅವರ ಅನೇಕ ಚಿಂತನೆಗಳನ್ನು ಒಳಗೊಂಡ ‘ಗಂಗೆಯ ಶಿಖರಗಳಲ್ಲಿ’ ಎಂಬ ಪ್ರವಾಸ ಕಥನದಲ್ಲಿ ಗಂಗೆಯ ಬಗ್ಗೆ ಜನಕ್ಕಿರುವ ಗಾಢವಾದ ನಂಬಿಕೆಯ ಬಗ್ಗೆ ಬರೆಯುತ್ತ "ಈ ಎಲ್ಲ ನಂಬಿಕೆಗಳನ್ನು ಒಂದು ಹಂತದಲ್ಲಿ ಮೆಚ್ಚಿಕೊಳ್ಳ ಬಹುದಾದರೂ ಅವುಗಳಿಂದ ಆಗುವ ಅಪಾಯವನ್ನು ಕಡೆಗಣಿಸುವುದು ಒಳ್ಳೆಯದಲ್ಲ. ಗಂಗೆಯಲ್ಲಿ ಸ್ನಾನ ಮಾಡಿದರೆ ಸಮಸ್ತ ಪಾಪಗಳು ಪರಿಹಾರವಾಗುತ್ತವೆ ಎಂಬ ಪುರಾಣದ ಮಾತನ್ನು ನಂಬಿಕೊಂಡು ಬದುಕಿನುದ್ದಕ್ಕೂ ಮಾಡಬಾರದ್ದನ್ನು ಸಲೀಸಾಗಿ ಮಾಡಿದರೆ ಆಶ್ಚರ್ಯವೇನಿಲ್ಲ" ಎಂದು ಹೇಳುತ್ತಾರೆ.  ಇದನ್ನು ಮುಂದಕ್ಕೆ ವಿಸ್ತರಿಸಿ "ವಿಚಾರ ಮಾಡುವ ತಲೆಗಳಿಗಿಂತ ಭಜನೆ ಮಾಡುವ ಬಾಯಿಗಳೇ ಹೆಚ್ಚಾಗಿರುವ ಈ ದೇಶದಲ್ಲಿ ಏನು ಮಾಡಿದರೂ ಹಳೆಯ ನಂಬಿಕೆಗಳದ್ದೇ ಮೇಲುಗೈ" ಎನ್ನುತ್ತಾರೆ. ಜಿ.ಎಸ್. ಎಸ್ ಈ ಮಾತುಗಳನ್ನು ಹೇಳಿ ಮೂರು ದಶಕಗಳಾಗಿವೆ. ನಾನು ಕಂಡಂತೆ ವೈಜ್ಞಾನಿಕವಾಗಿ ಭಾರತ ಮುನ್ನಡೆದಿದ್ದರೂ ಜನರು ಅವೈಚಾರಿಕ ಮನೋಭಾವಗಳನ್ನು ಪೋಷಿಸಿಕೊಂಡು ಬಂದಿದ್ದಾರೆ. ಧರ್ಮ ಪ್ರಚೋದಕರನ್ನು ಪ್ರಶ್ನಿಸಲು ಮುಂದಾದರೆ “ಜನರ ನಂಬಿಕೆ” ಎನ್ನುವ ಭಾವೋದ್ವೇಗ ಸಮರ್ಥನೆ ವೈಚಾರಿಕತೆಯನ್ನು ಮೂಲದಲ್ಲೇ ಧ್ವಂಸ ಮಾಡಿಬಿಡುತ್ತದೆ. ಶತಮಾನಗಳಿಂದಲೂ ಹೀಗೆ ಭಾರತದಲ್ಲಿ ನಂಬಿಕೆಗಳದ್ದೇ ಮೇಲುಗೈ! ನನಗೆ ತಿಳಿದಂತೆ ಅಪ್ಪ ಜಾತಿ ವಿರೋಧಿ. ಜಾತಿ ರಾಜಕೀಯದಿಂದ ಅವರು ದೂರ ಉಳಿದಿದ್ದರು. ಅಪ್ಪನ ಅಂತಿಮ ಸಂಸ್ಕಾರದಲ್ಲಿ ಜಮಾಯಿಸಿದ್ದ ಅಭಿಮಾನಿಗಳು "ಜಿ.ಎಸ್.ಎಸ್ ಮತ್ತೆ ಹುಟ್ಟಿ ಬನ್ನಿ, ಜಾತೀಯತೆ ತೊಲಗಲಿ ಮಾನವೀಯತೆ ಉಳಿಯಲಿ" ಎಂಬ ಹಾರೈಕೆಯ ವಿದಾಯವನ್ನು ಕೂಗಿ ಹೇಳಿದ್ದು ಹೃದಯ ಸ್ಪರ್ಶಿಯಾಗಿತ್ತು. 

ಅಪ್ಪ ಬದುಕನ್ನು ವಿಶೇಷವಾಗಿ ಪ್ರೀತಿಸಿದವರು, ಕನ್ನಡದ ವರ್ಡ್ಸ್ ವರ್ಥ್, ರೋಮ್ಯಾಂಟಿಕ್ ಕವಿ ಎಂದು ಗುರುತಿಸಲ್ಪಟ್ಟವರು. "ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ" ಹಣತೆ ಹಚ್ಚುತ್ತೇನೆ ಎನ್ನುವ ಕವಿಗೆ ಹಣತೆ ಉರಿಯುವವರೆಗೂ ಎಲ್ಲರೊಡನೆ ಪ್ರೀತಿ ಸ್ನೇಹ ವಿಶ್ವಾಸಗಳೊಂದಿಗೆ ಬಾಳುವ ಹಂಬಲ. ಹಣತೆ ಎಂಬ ಕವಿತೆಯ ಈ ಸಾಲು ಅವರ ಬದುಕಿನ ಪ್ರೀತಿಗೆ ಸಾಕ್ಷಿಯಾಗಿದೆ.  ಅಪ್ಪನ ಬದುಕಿನ ಮೌಲ್ಯಗಳು ಅವರ ಕಾಲಘಟ್ಟದ ಮೌಲ್ಯಗಳೂ ಆಗಿದ್ದವು. ಅವರ ಸಮಕಾಲೀನರು, ಗುರುಗಳು ಈ ಶ್ರದ್ಧೆ, ಶಿಸ್ತು, ಪ್ರಾಮಾಣಿಕತೆ, ಸಮಯ ಪ್ರಜ್ಞೆ, ಇವುಗಳಿಗೆ ಹೆಚ್ಚಿನ ಬೆಲೆ ನೀಡುತ್ತಿದ್ದರು. ಬಹುಶಃ ಇದು ದಕ್ಕಿದ್ದು ಇನ್ನೂರು ವರ್ಷಗಳ ಕಾಲದ ಬ್ರಿಟಿಷ್ ಆಳ್ವಿಕೆಯಿಂದ ಎಂದು ನನ್ನ ಊಹೆ. ಬ್ರಿಟನ್ನಿನಲ್ಲಿರುವ ಅನಿವಾಸಿ ಕನ್ನಡಿಗರ ಬದುಕಿನಲ್ಲಿ ಈ ಮೌಲ್ಯಗಳು ಹಾಸುಹೊಕ್ಕಾಗಿವೆ. ಜಿ.ಎಸ್.ಎಸ್ ಪರಿವಾರದಲ್ಲಿ ನನ್ನ ಹುಟ್ಟು ಆಕಸ್ಮಿಕ ಮತ್ತು ಅದು ನನ್ನ ಒಂದು ಸೌಭಾಗ್ಯವೆಂದು ನಾನು ಪರಿಗಣಿಸಿದ್ದೇನೆ. ಅಪ್ಪನ ಈ ಮೌಲ್ಯಗಳನ್ನು ಪ್ರಜ್ಞಾ ಪೂರ್ವಕವಾಗಿ ಮತ್ತು ಕೆಲವೊಮ್ಮೆ ಉಪಪ್ರಜ್ಞೆಯಲ್ಲಿ ಹೀರಿಕೊಂಡು ನನ್ನದಾಗಿಸಿಕೊಂಡಿದ್ದೇನೆ.   ಇವು ನನ್ನ ಬದುಕಿನ ಯಶಸ್ಸಿಗೆ ಸೂತ್ರವಾಗಿದ್ದು ನನ್ನ ವ್ಯಕ್ತಿತ್ವವನ್ನೂ ರೂಪಿಸಿವೆ. 

~ ಡಾ. ಜಿ.ಎಸ್. ಶಿವಪ್ರಸಾದ್

ಉಡುಗಣ ವೇಷ್ಟಿತ ಚಂದ್ರಸುಶೋಭಿತ

ಪರಿಚಯ ಸುಮನ ನಾರಾಯಣ್ -  ಹನುಮಂತನಗರ ಬಸವನಗುಡಿಯಲ್ಲಿ ಹುಟ್ಟಿ ಬೆಳೆದ ಪಕ್ಕಾ ಬೆಂಗಳೂರು ಸೌತ್ ಹುಡುಗಿ. ಸಧ್ಯ ನಾಟಿಂಗ್ಹ್ಯಾಮ್ ನಲ್ಲಿ  ಪತಿ ಡಾ ದಿವ್ಯತೇಜ ಮತ್ತು ಅವಳಿ ಮಕ್ಕಳೊಂದಿಗೆ  ವಾಸ. ವೃತ್ತಿಯಲ್ಲಿ ಪ್ರಸೂತಿ ತಜ್ಞೆ (Obstetrician) ಮತ್ತು ಭರತನಾಟ್ಯ ಕಲಾವಿದೆ.
ಎಂದಿನಂತೆ busy ಇದ್ದ  ಶನಿವಾರ. ರಾತ್ರಿ ಫೋನ್ ಟ್ರಿಂಣಿಸಿತು. ಗೌರಿ ಅವರಿಂದ ಮೆಸೇಜ್ ಹೀಗಿತ್ತು- "  ಫೆಬ್ರವರಿ ೭ ಕ್ಕೆ  ಡಾ. ಜಿ. ಎಸ್. ಎಸ್ ರವರ ಜನ್ಮದಿನ . ಇದಕ್ಕೆ  ನೀವು ಒಂದು ಲೇಖನ  ಬರೆದು ಕೊಡಬಹುದೇ?" ಇದನ್ನು ನೋಡಿ ಆಶ್ಚರ್ಯ ಮತ್ತು ಗಾಬರಿ ಒಟ್ಟಿಗೆ ಆಯಿತು....ಅಯ್ಯೋ ನಾನೇ!!! ಇವರೇನಾದ್ರೂ ತಪ್ಪು ನಂಬರಿಗೆ ಮೆಸೇಜ್ ಕಳುಹಿಸಿದ್ದಾರ ಅಂತ. ಆದರೆ ಅವರ gentle but  persistent ಪ್ರೋತ್ಸಾಹದ ಮಾತುಗಳಿಗೆ ಕಟ್ಟುಬಿದ್ದು, ನನ್ನ ಇಷ್ಟವಾದ ಕವಿಯ ಕೆಲ ಕವನಗಳು ಹಾಗು ಅದನ್ನು ನಾನು ಅರ್ಥಮಾಡಿಕೊಂಡ ಬಗೆ  ಹಾಗೆ ಕೆಲವನ್ನು ನೃತ್ಯಕ್ಕೆ ಅಳವಡಿಸಿಕೊಂಡು ಅನುಭವಿಸಿದ ಬಗೆ- ಇದನ್ನು ಬರೆಯುವ ಸಾಹಸ ಮಾಡಿರುತ್ತೇನೆ.  
ಬೆಂಗಳೂರಿನ  ಬಸವನಗುಡಿಯಲ್ಲಿ ಕಲೆ ಮತ್ತು ಸಾಹಿತ್ಯ ಪ್ರಿಯರ ಮನೆಯಲ್ಲಿ ಹುಟ್ಟಿ ಬೆಳೆದ ನಾನು ಚಿಕ್ಕಂದಿನಿಂದ  ಡಾ. ಜಿ.ಎಸ್.ಎಸ್ ರವರ ಕವನಗಳನ್ನ ಹಲವಾರು ಬಾರಿ ರೇಡಿಯೋ ಮತ್ತು ಟಿ.ವಿಯಲ್ಲಿ ಕೇಳಿದ್ದು, ನೋಡಿದ್ದು ಉಂಟು. ಆದರೆ ಮನಸ್ಸಿಗೆ ಮುಟ್ಟಿದ ಅನುಭವವೆಂದರೆ  ಅವರ ಉಡುಗಣ ವೇಷ್ಟಿತ ಕವನದ ನೃತ್ಯ. ಆಗ ನನಗೆ ಸುಮಾರು ೭ ಅಥವಾ ೮ ವರ್ಷ ಇದ್ದಿರಬಹುದು. ನಮ್ಮ ನೃತ್ಯ ಶಾಲೆಯ ಸೀನಿಯರ್ students ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮವೊಂದಕ್ಕೆ ಈ ಕವನದ ನೃತ್ಯ ಮಾಡಿದ್ದರು. ಅದರ ಅಭ್ಯಾಸ ಮತ್ತು Rehearsal  ಗಳಿಗೆ free audienceಆಗಿ ಕೂತಿದ್ದ ನೆನಪು!  ಶಿವನ ಪಾತ್ರಧಾರಿ ನನ್ನ favourite ಅಕ್ಕ (ಸೀನಿಯರ್).  ಶಿವನ ವರ್ಣಿಸುವ ಈ ಕವನದ ವಿಶಿಷ್ಟ ಸಾಲುಗಳು ಮತ್ತು  ಆಕೆಯ ಮನೋಜ್ಞ ಅಭಿನಯ ಮನಸ್ಸಿನಲ್ಲಿ ಅಚ್ಚಾಯ್ತು.  ಆದರೆ ಗಹನವಾದ ಈ  ಕವನವನ್ನ ಅರ್ಥ ಮಾಡಿಕೊಳ್ಳುವುದು ದೂರ, ಪೂರ್ಣ ಕವಿತೆಯನ್ನೂ ಸರಿಯಾಗಿ ಹೇಳಲು ಬಾರದ ನಾನು "ತಣ್ಣ ನೀರಿನಲಿ ಮಣ್ಣ ಧೂಳಿನಲಿ" ಅಂತ  ಹಾಡುತ್ತಿದ್ದುದನ್ನು ನೋಡಿ ಅಲ್ಲಿದ್ದ ಹಿರಿಯರೊಬ್ಬರು  ನನ್ನ ಕರೆದು "ಅದು ತಣ್ಣೀರು ಅಲ್ಲಮ್ಮ ಕಣ್ಣೀರು" ಅಂತ ತಿದ್ದಿದ್ದು ನೆನಪಿದೆ!  ಮುಂದೆ ಹೈ ಸ್ಕೂಲ್ಗೆ ಬಂದಾಗ ಈ ಕವಿತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಆ ದೇವನ dual characterisation- ವಿರೋಧಾಭಾಸವೆನಿಸುವ ಮೂರ್ತ ಮತ್ತು ಅಮೂರ್ತ ಸ್ವರೂಪವನ್ನು ಎಷ್ಟು ಚೆಂದವಾಗಿ ಚಿತ್ರಿಸಿದ್ದನ್ನು ಕಂಡು  ಬೆರಗಾದೆ. ಮುಂದೆ ಹಲವು ಬಾರಿ ನೃತ್ಯ ಸಂಯೋಜನೆ ಮಾಡಿ ಖುಷಿ ಪಟ್ಟೆ.
ನನಗೆ ಬಹಳ ಇಷ್ಟವಾದ ಇನ್ನೊಂದು ಕವಿತೆಯೆಂದರೆ "ಎಲ್ಲೊ ಹುಡುಕಿದೆ ಇಲ್ಲದ ದೇವರ." ಇದನ್ನು ಮೊದಲ ಬಾರಿ ಕೇಳಿದ್ದು, ಕಲಿತಿದ್ದು ನನ್ನ ಸೋದರತ್ತೆಯಿಂದ. ಇದರ ಸಾಲುಗಳು  ನನ್ನ ಮೇಲೆ  ಬಹಳಷ್ಟು ಪರಿಣಾಮ ಬೀರಿತು. ಇದನ್ನು ಹಾಡುವಾಗಲ್ಲೆಲ್ಲ ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರಚೋದಿಸುತ್ತದೆ. ನಮ್ಮ ಅಹಮ್ಮಿನ ಕೋಟೆ ಒಡೆಯಬೇಕು, ಆದಷ್ಟು ಹೊಂದಿಕೊಂಡು ಹೋಗಬೇಕು ಎಂದೆನಿಸದೆ ಇರಲಾರದು.
ಹೋದ ವರ್ಷ  ಡಾ. ಜಿ.ಎಸ್.ಎಸ್ ರವರ ೯೫ನೇ ಹುಟ್ಟು ಹಬ್ಬದ  ಪ್ರಯುಕ್ತ ನೆಡೆದ ಆನ್ಲೈನ್ ಸಮಾರಂಭಕ್ಕೆ,ಕವಿವರ್ಯರ  ಯಾವುದಾದರು ಭಾವಗೀತೆಗೆ ನೃತ್ಯ ಮಾಡೆಂದು ಡಾ. ಶಿವಪ್ರಸಾದ್ ರವರು  ಒಂದೆರಡು ಭಾವಗೀತೆಗಳ ಲಿಂಕ್ ಅನ್ನು ಕಳುಹಿಸಿದ್ದರು. ಅವುಗಳಲ್ಲಿ ನನ್ನ ಮನ ಸೆಳೆದದ್ದು ಶ್ರೀಮತಿ ರತ್ನಮಾಲಾ ಪ್ರಕಾಶ್ ರವರ ಸುಮಧುರ ಧ್ವನಿಯಲಿದ್ದ "ಯಾರವರು ಯಾರವರು"  ಹಾಡು. ಹಿಂದೆಂದೂ ಕೇಳದ ಈ  ಗೀತೆಯನ್ನು ನಾನು ಮೊದಲು  ಬಾರಿಗೆ ಕೇಳಿದ್ದು  ಕೆಲಸಕ್ಕೆ  (Leicester ) ಡ್ರೈವ್ ಮಾಡ್ಕೊಂಡು ಹೋಗುವಾಗ.  ಆಗ ನನಗನಿಸಿದ್ದು ಇದೊಂದು ಪ್ರೇಮ ಕವಿತೆ- ಒಬ್ಬ  ನಾಯಕಿ/ ನಾಯಕನೋ  ತನ್ನ ಪ್ರೇಯಸಿ/ಪ್ರಿಯಕರನ ಬಗ್ಗೆ ಹೇಳಿದಂತಿದೆ. ಕೆಲಸ ಮುಗಿಸಿ ವಾಪಸ್ಸು ಬರ್ತಾ ಕೇಳಿದಾಗ - ಇಲ್ಲ ಇದು ಒಬ್ಬ ತಾಯಿ ತನ್ನ ಜೀವನದ ಪುಟಗಳನ್ನ ತಿರುವಿದಂತಿದೆ ಅನ್ನಿಸಿತ್ತು. ಹಾಗೆ ಮತ್ತೊಮ್ಮೆ ಕೇಳಿದಾಗ ಇದು ಎಲ್ಲವನ್ನು ಬಿಟ್ಟು ಆಧ್ಯಾತ್ಮದ ಬಾಗಿಲ ಬಳಿ ನಿಂತವನ ಕವಿತೆಯಂತೆ ಭಾಸವಾಯ್ತು!  ಡಾ ಶಿವಪ್ರಸಾದ್ ಹೇಳಿದಂತೆ ಇದನ್ನು ಅರ್ಥ ಮಾಡಿಕೊಳ್ಳುವುದು ಓದುಗರಿಗೆ/ಕೇಳುಗರಿಗೆ ಬಿಟ್ಟಿದ್ದು.  ಹಾಗಾಗಿ ನನ್ನೆಲ್ಲಾ ಆನಿಸಿಕೆಗಳನ್ನ ಅಳವಡಿಸಿಕೊಂಡು   ಈ ಕವಿತೆ ಯನ್ನು ಒಂದು ಹೆಣ್ಣಿನ   ಬದುಕಿನಲ್ಲಿ  ಬರುವ "ಯಾರವರು" ಗಳನ್ನ  ಚಿತ್ರಿಸಿ ನರ್ತಿಸಿದ್ದು ಅದ್ಭುತ ಅನುಭವ.  ನಮ್ಮೊಳಗಿನ  ಕುತೂಹಲ ಕೆರಳಿಸಿ, ವೈಚಾರಿಕತೆ ಬೆಳಸಿ  ಹಾಗು ವಿಮರ್ಶಾ ಶಕ್ತಿಯನ್ನೂ ವೃದ್ಧಿಸುವುದು ಶ್ರೇಷ್ಠ ಕವಿ ಧರ್ಮವಲ್ಲವೆ?

ಹೀಗೆ ಹೇಳ್ತಾ ಹೋದರೆ ಜಿ.ಎಸ್. ಎಸ್ ರವರ ಕವಿತೆಗಳಿಗೇನು ಬರವೇ? 
ಶಿಶುಗೀತೆ ಎಳೆ ಬೆಳದಿಂಗಳಿಂದ ಹಿಡಿದು, ಮುಂಗಾರಿನ ಅಭಿಷೇಕವೋ,  ಎದೆ  ತುಂಬಿ ಹಾಡಿದ ಹಾಡೋ ಅಥವಾ ಆಧ್ಯಾತ್ಮದ ಎಲ್ಲೆ ಮೀರಿಸುವ ಕಾಣದ ಕಡಲಿಗೆ ನಮ್ಮನ್ನು ಕರೆದೊಯ್ಯಬಲ್ಲ ಈ ಶ್ರೇಷ್ಠ ಕವಿಪುಂಗವರಿಗೆ ಹೀಗೊಂದು ನಮನ. 
ಇವರ ಇನ್ನಷ್ಟು ಕವನಗಳನ್ನ ನೃತ್ಯಕ್ಕೆ ಅಳವಡಿಸುವ ಆಸೆ ಹೊತ್ತ

~ ಸುಮನ

ಎಲ್ಲಿದೆ ಬೃಂದಾವನ

ಶ್ರೀಯುತ ಅರುಣ್ ಕುಕ್ಕೆ ಅವರು ಕರ್ನಾಟಕೀ ಶಾಸ್ತ್ರೀಯ ಸಂಗೀತಗಾರರು ಭದ್ರಾವತಿ ಆಕಾಶವಾಣಿಯಲ್ಲಿ ಕೆಲಸ ಮಾಡಿದವರು.ಪ್ರಸ್ತುತ O2 ನಲ್ಲಿ ರೇಡಿಯೋ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳು-ದೊಡ್ಡವರಾದಿಯಾಗಿ ಆಸಕ್ತರಿಗೆ ಸಂಗೀತ ಪಾಠ ಹೇಳಿಕೊಡುತ್ತಾರೆ. ಕನ್ನಡ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆಗಳ ಬಗ್ಗೆ ಇವರಿಗೆ ಅಪರಿಮಿತ ಆಸಕ್ತಿ.


ಗೀತ ನಮನ – ಎಲ್ಲಿದೆ ಬೃಂದಾವನ
ಸಂಗೀತ ಸಂಯೋಜನೆ – ಶ್ರೀ ಪ್ರಸನ್ನ ವೆಂಕಟೇಶ

ಯಾರಿವಳು??(ವೊ ಕೌನ್ ಥಿ?) 3

ಫೋನಿನ ಮುಖಾಂತರ ಅವಳ ಬಗ್ಗೆ  ವಿಷಯವನ್ನು ಸಂಗ್ರಹಿಸಲು ಪ್ರಯತ್ನಿಸಿದೆ.ಆದರೆ ಸಾಧ್ಯವಾಗಲಿಲ್ಲ . ಏನೋ ಅರ್ಜೆಂಟ್  ಕೆಲಸ ಎಂದು ಮನೆಯಲ್ಲಿ ಸುಳ್ಳು ಹೇಳಿ ಇಂಡಿಯಾಗೆ ಹೋದೆ.
ಅವಳ ಅನ್ವೇಷಣೆಯಲ್ಲಿ  ಇನ್ನೊಮ್ಮೆ ಹಳ್ಳಿಗೆ  ಭೇಟಿಕೊಟ್ಟಿದ್ದಾಯಿತು . ಗುರ್ಜಿಯ ಮನೆಗೆ ಬೀಗ ಹಾಕಿತ್ತು.  ಆದರೆ ಊರ ಜನರಿಂದ ಅವಳ ವಿಷಯವೆಲ್ಲಾ ಗೊತ್ತಾಯಿತು .
ಅವಳು ಸ್ವಲ್ಪ ಸಮಯದ ನಂತರ ಬೆಳಗಾವಿಯಲ್ಲಿ ಖಾಸಗಿ  ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ತನ್ನ ಚಾಣಾಕ್ಷತನ ಮತ್ತು ಕರ್ತವ್ಯ ನಿಷ್ಠೆಯಿಂದ ಒಳ್ಳೆಯ ಹೆಸರನ್ನು ಗಳಿಸಿದ್ದಳು. ಹಾಗೆಯೇ ಕೆಲವು ವರ್ಷಗಳ ನಂತರ ಭಡ್ತಿ ದೊರೆತು  ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಿನ ಪರಿಸರ ಮತ್ತು ಉರುಳಿ ಹೋದ ಕಾಲ ಜೀವನದಲ್ಲಿ ಅವಳಿಗೆ ಒಳ್ಳೆಯ ಪಾಠವನ್ನೇ ಕಲಿಸಿದ್ದವು. ಸ್ತ್ರೀ ಸಮಾನತೆ  ಮತ್ತು ಸ್ವಾತಂತ್ರ್ಯದ ಬಗ್ಗೆ ತುಂಬಾ ಅರಿವಾಗಿತ್ತು . ಕಟ್ಟಿಕೊಂಡವನು ತನ್ನನ್ನು ಬಿಟ್ಟು ಇನ್ನೊಬ್ಬರೊಂದಿಗೆ ಹಾಯಾಗಿರುವಾಗ  ತಾನೇಕೆ ಹೀಗೆ ಬದುಕಬೇಕೆಂಬ ಪ್ರಶ್ನೆ ಹುಟ್ಟಿತ್ತು . ತನಗೂ  ಬದುಕಿದೆ, ಬಾಳುವ ಆಸೆಯಿದೆ ಎಂಬುದನ್ನು ಕಂಡುಕೊಂಡಿದ್ದಳು. ಮನೆಯಲ್ಲಿ ಯಾರಿಗೂ ಹೇಳದೆ ತಾನೇ ಕೋರ್ಟಿನ ಕಟ್ಟೆಯನ್ನು ಏರಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಳು. ಸ್ತ್ರೀ ಸಂಘಟನೆಗಳಲ್ಲಿ  ಭಾಗಿಯಾಗಿ ತನ್ನ ಧ್ವನಿಯನ್ನು ಎತ್ತಿದ್ದಳು. ಅಕ್ಕ ಪಕ್ಕದ  ಹಳ್ಳಿಗಲ್ಲಿ ತನ್ನಂತೆ ಅನ್ಯಾಯಕ್ಕೆ ಒಳಗಾದ ಸ್ತ್ರೀಯರಿಗೆ ಸಂಘಟನೆಗಳ ಮೂಲಕ ನ್ಯಾಯವನ್ನು ಕೊಡಿಸಲು ನೆರವಾಗಿದ್ದಳು . ಹಳ್ಳಿಯ ಮಣ್ಣಿನ ಬಣ್ಣವನ್ನು ಬದಲಿಸಿದ್ದಳು .
ಹಾಗೆಯೇ ಎಷ್ಟೋ ಗಂಡಸರೊಂದಿಗೆ ವೈರತ್ವವನ್ನೂ  ಬೆಳೆಸಿಕೊಂಡಿದ್ದಳು. ತಾನು ನಡೆಯುತ್ತಿರುವ ದಾರಿ ಅಪಾಯಕಾರಿಯೆಂದು , ಏನಾದರು ಪರಿವರ್ತನೆ ತರಬೇಕಾದರೆ ಇದನ್ನು ಎದುರಿಸುವುದು   ಅನಿವಾರ್ಯವೆಂಬುದರ ಅರಿವು ಅವಳಿಗಿತ್ತು .
ಟಾಟಾ ಸಂಘಟನೆಯು ಸ್ಕಾಟ್ಲೆಂಡಿನ ಸ್ಕಾಟಿಷ್ ಎನರ್ಜಿ್   ಫಾರ್ಮನೊಂದಿಗೆ ಒಪ್ಪಂದ ಮಾಡಿಕೊಂಡಿದೆ . ಸ್ಕಾಟಿಷ್ ಕೆಲಸಗಾರರು  ಭಾರತಕ್ಕೂ ಮತ್ತು ಅಲ್ಲಿಯವರೂ ಇಲ್ಲಿಗೆ ಬರುವದು  ಸಹಜವಾಗಿದೆ . ಹಾಗೆಯೇ ಅವಳಿಗೆ ಕೆಲಸದ ಸ್ಥಳದಲ್ಲಿ ಸ್ಕಾಟಿಷ್ ಹುಡುಗನೊಬ್ಬನ  ಪರಿಚಯವಾಗಿತ್ತು . ಪರಿಚಯ ಸ್ನೇಹವಾಗಿ , ಸ್ನೇಹ ಪ್ರೀತಿಯಾಗಿ ಪರಿವರ್ತನೆಗೊಂಡಿತ್ತು . ಮನೆಯಲ್ಲಿ ಯಾರಿಗೂ ಹೇಳದೆ ರೆಜಿಸ್ಟ್ರಾರ್  ಆಫೀಸಿನಲ್ಲಿ  ಅವನೊಂದಿಗೆ ಮದುವೆಯನ್ನು ಮಾಡಿಕೊಂಡಿದ್ದಳು . ಕೆಲವು ಸಮಯದ ನಂತರ ತಂದೆ ಮತ್ತು ಅಣ್ಣನಿಗೆ ಹೇಳಿದ್ದಳು . ಅಣ್ಣ ಕುಪಿತನಾಗಿ ಹೋಗಿದ್ದ ' ಕುಲ ಕೆಡಿಸಿದಳು ಮುಂಡೆ ' ಎಂದು ಬೈದುಕೊಂಡಿದ್ದ. ತಂದೆ ತುಂಬಾ ನೋವನ್ನು ಮಾಡಿಕೊಂಡು ಮಾತನಾಡುವದನ್ನೇ ನಿಲ್ಲಿಸಿ ಬಿಟ್ಟಿದ್ದರು. ಊರ   ಜನರಿಗೆಲ್ಲ ವಿಷಯ ಗೊತ್ತಾಗಿತ್ತು .
ಗುರ್ಜಿಯವರಿಗೆ ಹೊರಗೆ ಮುಖ ತೋರಿಸದಂತಾಗಿತ್ತು .
ಅಣ್ಣನೇ ಮುಂದಾಗಿ ಬೆಳಗಾವಿಯಲ್ಲಿದ್ದ  ಧಾರ್ಮಿಕ ಸಂಘಟನೆಗೆ ವಿಷಯವನ್ನು
ತಿಳಿಸಿದ್ದ , ಧರ್ಮಾಂತರ ಹೊಂದಿದ್ದಾಳೆಂದು ಪಿತೂರಿ ಮಾಡಿದ್ದ . ಅವಳಿಗೂ ವಿಷಯ ಗೊತ್ತಾಗಿತ್ತು. ಇದರ ಬಗ್ಗೆ ಅವಳು ಕಿಂಚಿತ್ತೂ ತಲೆ  ಕೆಡಿಸಿಕೊಳ್ಳಲಿಲ್ಲ . ಆದರೆ ಅಪಾಯ ಅಷ್ಟು ಬೇಗ  ಬರುತ್ತದೆ ಎಂಬುದರ ಅರಿವು ಅವಳಿಗೆ ಇರಲಿಲ್ಲ . ಅಚಾನಕಾಗಿ ಅದೊಂದು ದಿನ ಅವಳು ತನ್ನ ಗಂಡನೊಂದಿಗೆ  ಮಾಯವಾಗಿ ಬಿಟ್ಟಿದ್ದಳು, ಮತ್ತೆ  ಅವಳು  ಯಾರಿಗೂ ಕಾಣಿಸಿಕೊಳ್ಳಲೇ ಇಲ್ಲ . ಯಾರೋ ಅವರಿಬ್ಬರನ್ನು ಅಪಹರಿಸಿ ಕೊಲೆ ಮಾಡಿರುವರೆಂದು ಎಲ್ಲರ ಬಲವಾದ ನಂಬಿಕೆ ಹಾಗು ಧರ್ಮ  ಸಂಘಟನೆಯ ಕೈವಾಡ ಅದರಲ್ಲಿದೆಯೆಂದು ಎಲ್ಲರ ಊಹಾಪೋಹ. ವಿಷಯ ತಿಳಿದ ಗುರ್ಜಿ ಕುಸಿದು ಹೋಗಿದ್ದರು , ಊರನ್ನು  ಬಿಟ್ಟು ಬೆಳಗಾವಿಯಲ್ಲಿ ಮಗನೊಂದಿಗೆ ವಾಸಿಸಲು ತೊಡಗಿದ್ದರು. ರಘು ಇದ್ದ ಜಮೀನನ್ನು ಮಾರಿಬಿಟ್ಟಿದ್ದ ಆದರೆ ಮನೆಯನ್ನು ಮಾತ್ರ ಯಾರೂ ಕೊಂಡುಕೊಳ್ಳಲಿಲ್ಲ . ಮಂಜು ಭೂತವಾಗಿದ್ದಾಳೆಂದು  ಹಾಗು ಅಮಾವಾಸೆಯ ರಾತ್ರಿ ಮನೆಯ ಸುತ್ತ ತಿರಗುತ್ತಾಳೆಂದು ಹಳ್ಳಿಯ ಜನರ ಬಲವಾದ ನಂಬಿಕೆ . ವಿಷಯ ತಿಳಿದು ನನಗೆ ತುಂಬಾ ಬೇಜಾರಾಯಿತು . ಈ ಹಳ್ಳಿಗಳ ಮಣ್ಣನ್ನು ಬದಲಿಸಲು ಇನ್ನೂ ಸಾವಿರ ಮಂಜುಗಳ ಅವಶ್ಯಕತೆಯಿದೆ ಎಂದು ಅಂದುಕೊಂಡೆ . ಅವಳ ಧೈರ್ಯಕ್ಕೆ ಒಂದು ದೊಡ್ಡ ಸಲಾಮು ಹಾಕಿದೆ . ದೇಶದಲ್ಲಿ ಎಷ್ಟೊಂದು ಬದಲಾವಣೆ  ಆಗುತ್ತಿದ್ದರೂ ಹಳ್ಳಿಗಳಲ್ಲಿ ಇಂಥ ಸಮಸ್ಯೆಗಳು ಇನ್ನೂ ಬೇರು ಬಿಟ್ಟಿರುವದು ದುಃಖಕರ ಸಂಗತಿ ಎನಿಸಿತು. ನನ್ನ ಸಾಹಿತಿ ಗೆಳೆಯನೊಬ್ವನಿಗೆ ಅವಳ ಬಗ್ಗೆ ಕಥೆ ಬರೆಯಲು ಹೇಳಿದ್ದಕ್ಕೆ " ಇದೇನು ದೊಡ್ಡ ಘಟನೆಯಂತ ಕಥೆ ಬರೆಯುವದು , ಇಂಥ  ಘಟನೆಗಳು ಸರ್ವೇ ಸಾಮಾನ್ಯ , ಯಾರು ಈ ಕಥೆಗಳನ್ನು ಓದುತ್ತಾರೆ " ಎಂದು ಅಂದಿದ್ದ . ಅವನು ಹೇಳಿದ್ದು ನಿಜ  ಎನಿಸಿತು . ಇಂಥ  ಸಾವಿರಾರು ಹೆಣ್ಣುಗಳು ತಮ್ಮ ಕಥೆಯನ್ನು ತಾವೇ ಬರೆದುಕೊಂಡು ಒಂದು ದೊಡ್ಡ ಗ್ರಂಥವನ್ನೇ ಸೃಷ್ಟಿಸಿದ್ದಾರೆ , ಆ  ಪುಸ್ತಕದಲ್ಲಿ ಇವಳೂ ಒಂದು ಪುಟವಾಗಿ ಹೋಗಿರುವದು ಸತ್ಯ ಎಂದು ಅನಿಸಿತು.
ಯಾಕೋ ಗುರ್ಜಿಯನ್ನು ಭೇಟಿಯಾಗಲು  ಮನಸು ಬರಲಿಲ್ಲ . ಅವಳು ಈ ಲೋಕದಲ್ಲಿ ಇಲ್ಲದ್ದು ಮಾತ್ರ  ಖಚಿತವಾಗಿತ್ತು.
ಹಾಗಾದರೆ ನನಗೆ ಸ್ಕಾಟ್ಲೆಂಡಿನಲ್ಲಿ  ಭೇಟಿಯಾಗಿ ಮಾತನಾಡಿದ್ದು ಯಾರು ಎಂಬುದು ಮಾತ್ರ  ಯಕ್ಷಪ್ರಶ್ನೆಯೇ ಆಗಿತ್ತು . ಈ ವಿಷಯವನ್ನು ನನ್ನ ಹಳ್ಳಿಯ ಮಿತ್ರನೊಬ್ಬನಿಗೆ ಹೇಳಿದೆ . ಅವನು ಸುಸ್ತಾಗಿ ಹೋಗಿ ಅಂದ " ಏನಪ್ಪಾ ! ಅವಳ ಭೂತ ನೀನಿದ್ದ ಕಡೆಗೂ ಬಂದು ಬಿಟ್ಟಿತಾ? ಹುಷಾರಾಗಿರು,  ಹೆಣ್ಣು ಭೂತಗಳು  ತುಂಬಾ ಕೆಟ್ಟ " ಎಂದು ಭೂತಗಳಲ್ಲೂ ಲಿಂಗ ಭೇದವನ್ನು ತೋರಿಸಿದ್ದ. ಇವನ ನಂಬಿಕೆಗೆ  ಬೆಂಕಿ ಹಾಕಾ ಎಂದೆಂದುಕೊಂಡು ಸುಮ್ಮನಾದೆ.
ವಿಷಯ ನಮ್ಮಣ್ಣನಿಗೂ ಗೊತ್ತಾಗಿ ದೇವರಿಗೆ ಒಂದು ದೊಡ್ಡ ಪೂಜೆಯನ್ನೂ ಮಾಡಿಸಿದ್ದ , ಮಂತ್ರಿತ ದಾರವನ್ನು ಕೈಯ್ಯಲ್ಲಿ ಕಟ್ಟಿಕೊಳ್ಳಲು ಹೇಳಿದ್ದ . ಹೆಂಡತಿ ತುಂಬಾ ಚಿಂತಿತಳಾಗಿದ್ದಳು . ನನಗೆ ಭೂತ ಬಡಿದಿರುವದು ಖಚಿತ ಎಂದು ಅಂದುಕೊಂಡಿದ್ದಳು . ಗುಣಪಡಿಸಲು ದೇವರಿಗೆ  ಹತ್ತು ಸಾವಿರ ರೂಪಾಯಿಯನ್ನು ಹರಕೆಯ ರೂಪದದಲ್ಲಿ ಕೊಡುವದಾಗಿ ಬೇಡಿಕೊಂಡು ದೇವರಿಗೂ ಸಹ ಲಂಚವನ್ನು ಕೊಡಲು ಮುಂದಾಗಿದ್ದಳು .
ಸ್ಕಾಟ್ಲ್ಯಾಂಡಿಗೆ  ವಾಪಸ್ ಬಂದಾದ ಮೇಲೆ ಈ ವಿಷಯ ನನ್ನ ಪರಿವಾರದ ಆಪ್ತ ಗೆಳೆಯರಿಗೂ ಗೊತ್ತಾಯಿತು . ಮಾನಸಿಕ ರೋಗ ತಜ್ಞನೊಬ್ಬ ಹೇಳಿದ ' ನನಗೆ ಆಡಿಯೋ ವಿಜುವಲ್ ಹಾಲುಸಿನೇಶನ್  (ಭ್ರಮೆ )' ಇದೆ ಎಂದು ಹಾಗು ಚಿಕಿತ್ಸೆ ಬೇಕಿದೆಯೆಂದು . ಫಿಸಿಷಿಯನ್ ಒಬ್ಬ ಮೆದುಳಿನ MRI ಕೂಡ ಮಾಡಿಸು ಎಂದ . ಇನ್ನೊಬ್ಬ ನನಗೆ 'ಸಿಕ್ಸ್ತ್ ಸೆನ್ಸ್' ಇದೆ ಎಂದು  ಗೇಲಿಯನ್ನೂ ಮಾಡಿದ್ದ.
ಅವರವರು ಅವರವರ ಅನಿಸಿಕೆ ಕೊಡಲಿ ಬಿಡು ಎಂದು ಸುಮ್ಮನಾದೆ. ನನಗೆ ಗೊತ್ತಿತ್ತು  ನನಗೇನು ಆಗಿಲ್ಲವೆಂದು. ಭೂತ ಪ್ರೇತಗಳಲ್ಲಿ ನನಗೆ ಎಳ್ಳಷ್ಟೂ ನಂಬಿಕೆ  ಇಲ್ಲ .
ಹಾಗಾದರೆ ;
ಅವಳ್ಯಾರು ? ವೊ ಕೌನ್ ಥಿ ?
ನನ್ನ  ಅಂತರಂಗದಲ್ಲಿ ಸುಪ್ತವಾಗಿ  ಅಡಗಿದ್ದ  ಅವಳ  ಬಗೆಗಿನ ಭಾವನೆಗಳು ಅವಳ ರೂಪವಾಗಿ ಕಾಣಿಸಿಕೊಂಡು ನನಗೆ ಅವಳ ಕಥೆಯನ್ನು ಹೇಳಿದವು ಎಂದು ನಾನು ಭಾವಿಸಿದ್ದೇನೆ.
ನೀವೇನೆನ್ನುತ್ತೀರಿ?  
ನನಗೆ ಅವಳು ಮತ್ತೆ ಕಂಡಿಲ್ಲ, ಕಂಡರೆ ಮನಬಿಚ್ಚಿ ಇನ್ನಷ್ಟು ಮಾತನಾಡಬೇಕು  ಎಂದು ಅನಿಸುತ್ತದೆ 

ಮುಗಿಯಿತು (ಕಥೆಯಲ್ಲಿ ಮಾತ್ರ )

~ ಶಿವ ಮೇಟಿ

ವೈಚಾರಿಕ ಲೇಖನ ಮತ್ತು ಹೊಸ ಬರಹಗಳ ಸರಣಿ ‘ಬದುಕು ಬದಲಿಸಿದ ಪುಸ್ತಕ’.

ಆತ್ಮೀಯ ಓದುಗರೇ, 
ಕಳೆದ ವಾರ ಪ್ರಕಟಗೊಂಡ 'ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ' ಲೇಖನದ ಮೊದಲ ಭಾಗವನ್ನು ತಾವೆಲ್ಲರೂ ಓದಿ ಮೆಚ್ಚಿಕೊಂಡು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿದ್ದೀರಿ. ನೀವೆಲ್ಲರೂ ಕಾಯುತ್ತಿರುವ ಈ ಲೇಖನದ ಎರಡನೇ ಭಾಗ ಈ ವಾರ ಪ್ರಕಟವಾಗುತ್ತಿದೆ. ಜೊತೆಗೆ ಕೆಲ ವಾರಗಳ ಹಿಂದೆ ಓದುಗರಿಗೆ ಅವರ ಮೆಚ್ಚಿನ, ಬದುಕಿನ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಹಾಯ ಮಾಡಿದ  ಆ ಬದುಕು ಬದಲಿಸಿದ ಪುಸ್ತಕದ ಬಗ್ಗೆ ಕಿರು ಲೇಖನವನ್ನು ಬರೆಯುವಂತೆ ವಿನಂತಿಯನ್ನು ಮನ್ನಿಸಿ ಹಲವಾರು ತಮ್ಮ ಆ ಸರಣಿಯ ಮೊದಲ ಬರಹ ಈ ವಾರ ಪ್ರಕಟವಾಗುತ್ತಿದೆ. ಶ್ರೀರಂಜನಿ ಸಿಂಹ ಅವರು ತಮ್ಮ ಮನಸಿಗೆ ಸಾಂತ್ವನ ನೀಡಿ ಆಶಾಭಾವ ಹೊಮ್ಮಿಸಿದ ಪುಸ್ತಕಗಳ ಬಗ್ಗೆ ಬರೆದಿದ್ದಾರೆ. 
ಈ ಸರಣಿಗೆ ತಾವೆಲ್ಲರೂ ಬರೆಯಿರಿ. ಈ ರೀತಿಯಲ್ಲಿ ಹೊಸ ಪುಸ್ತಕಗಳ ಬಗ್ಗೆ ನಾವೆಲ್ಲರೂ ತಿಳಿಯುವಂತಾಗಲಿ ಎಂಬ ಆಶಯದೊಂದಿಗೆ 
ಈ ವಾರದ ಓದಿಗೆ ತಮಗಿದೋ ಸ್ವಾಗತ. 
-ಸಂಪಾದಕಿ   

ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ-ಭಾಗ ೨

ಲೇಖಕರು-ಡಾ ಜಿ ಎಸ್ ಶಿವಪ್ರಸಾದ್,ಶೇಫೀಲ್ಡ್ ಯು.ಕೆ

ಉದಾರತೆ, ವೈಚಾರಿಕತೆ, ಮತ್ತು ಸಾಮಾಜಿಕ ಜವಾಬ್ದಾರಿ ಈ ಮೂರು ಏಕ ಕಾಲಕ್ಕೆ ಮೇಳವಿಸಿದ್ದು ೧೨ನೇ ಶತಮಾನದ ಬಸವಕೇಂದ್ರಿತ ಶರಣ ಚಳುವಳಿಯಲ್ಲಿ, ಇವು ಶರಣ ತತ್ವದ ಮೂರು ಮುಖಗಳು ಎಂದು ಜಿ. ಎಸ್. ಎಸ್. ಕರೆದಿದ್ದಾರೆ. ಅವರು ಇದನ್ನು ಮುಂದಕ್ಕೆ ವಿಸ್ತರಿಸಿ ಸಮಾಜದ ಎಲ್ಲ ಸ್ತರಗಳನ್ನು ಸಮಾನವೆಂದು ಪರಿಗಣಿಸಲು ಉದಾರತೆ ಬೇಕು, ವ್ಯವಸ್ಥೆಯೊಳಗಿನ ತಾರತಮ್ಯಗಳನ್ನು ಪ್ರಶ್ನಿಸುವುದಕ್ಕೆ ವೈಚಾರಿಕತೆ ಬೇಕು, ಇದಕ್ಕೆ ಅನುಗುಣವಾಗಿ ಹೊಸ ಸಮಾಜವೊಂದನ್ನು ನಿರ್ಮಿಸಲು ಸಾಮಾಜಿಕ ಜವಾಬ್ದಾರಿ ಬೇಕು ಎನ್ನುತ್ತಾರೆ. ಜಿ.ಎಸ್.ಎಸ್ ಚಿಂತನೆಗಳ ಸಂಗ್ರಹವಾದ 'ಶರಣ ಪಥ' ಎಂಬ ಸಂಕಲನದಲ್ಲಿ ಈ ವಿಚಾರಗಳು ಪ್ರಸ್ತಾಪಗೊಂಡಿವೆ. 

ಈ ವೈಜ್ಞಾನಿಕ ಯುಗದಲ್ಲಿ ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವುದು ಬಹಳ ಅವಶ್ಯವಾಗಿದೆ. ಅಮೇರಿಕದ  'ನ್ಯಾಸ' ಕೇಂದ್ರದವರು ಉಡಾಯಿಸಿದ ಅಪೋಲೊ ೧೩ ರಾಕೆಟ್ ವಿಫಲಗೊಂಡ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ  ದೇಶಗಳಲ್ಲಿ ೧೩ ಎಂಬ ಸಂಖ್ಯೆಯ ಬಗ್ಗೆ ಮೂಢನಂಬಿಕೆಗಳು ಹುಟ್ಟಿಕೊಂಡಿವೆ. ಇಲ್ಲಿಯ ವಸತಿಗಳಲ್ಲಿ, ಬಹು ಅಂತಸ್ತಿನ ಕಟ್ಟಡಗಳಲ್ಲಿ, ಹೋಟೆಲ್ ಕೊಠಡಿಗಳಲ್ಲಿ ೧೩ ಸಂಖ್ಯೆ ಕಾಣೆಯಾಗಿದೆ. ೧೩ ಎಂಬ ಸಂಖ್ಯೆ ದುರದೃಷ್ಟದ ಕುರುಹಾಗಿ ಅದು ಅಮಂಗಳವೆಂದು ಪರಿಗಣಿಸಲಾಗಿದೆ. ಹೀಗೆ ವೈಜ್ಞಾನಿಕವಾಗಿ ಮುನ್ನಡೆದ ಸುಶೀಕ್ಷಿತ ಪಾಶ್ಚಿಮಾತ್ಯ   ದೇಶಗಳಲ್ಲಿ ಮೂಢನಂಬಿಕೆ ಸ್ವಲ್ಪ ಮಟ್ಟಿಗೆ ಪ್ರಚಲಿತವಾಗಿರುವಾಗ ಅಭಿವೃದ್ಧಿ ಗೊಳ್ಳುತ್ತಿರುವ ಮತ್ತು ಧಾರ್ಮಿಕ ನಂಬಿಕೆಗಳಿಂದ  ತುಂಬಿರುವ  ಭಾರತದಲ್ಲಿ ಮೂಢನಂಬಿಕೆಗಳು ಸಾವಿರಾರು ವರ್ಷಗಳಿಂದ ಮನೆಮಾಡಿಕೊಂಡಿವೆ. ೮೦೦ ವರ್ಷಗಳ ಹಿಂದೆಯೇ ಈ ಮೂಢನಂಬಿಕೆಗಳನ್ನು ಪ್ರಶ್ನಿಸುವ ವೈಚಾರಿಕ ಮನೋಭಾವವನ್ನು ಜನರಲ್ಲಿ ಬೆಳೆಸುವ ಪ್ರಯತ್ನವನ್ನು ಬಸವಾದಿ ಶರಣರು ಮಾಡಿದ್ದಾರೆ. 
'ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತೆ ಉಂಟೆ'? ಎಂದು ಪ್ರಶ್ನಿಸಿ ಮುಂದಕ್ಕೆ ‘ಸತ್ಯ ನುಡಿವುದೇ ದೇವಲೋಕ, ಮಿಥ್ಯ ನುಡಿವುದೇ ಮರ್ತ್ಯ ಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎನ್ನುತ್ತಾ ಇಹ-ಪರ ಲೋಕಗಳ ಪರಿಕಲ್ಪನೆಗಳನ್ನು ಶರಣರು ತಿರಸ್ಕರಿಸಿದ್ದಾರೆ. ಇಂದಿನ ದಿನಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಚಾಲನೆಯಲ್ಲಿರುವ ಎಷ್ಟೋ ಸಂಗತಿಗಳನ್ನು ನಾವು ನಂಬುವುದೇ ಕಷ್ಟೆ.  ಕೆಲವರು  ತಮ್ಮ ಆಲೋಚನಾ ಕ್ರಮಕ್ಕೆ, ತಮ್ಮ ಸಿದ್ಧಾಂತಕ್ಕೆ, ರಾಜಕೀಯ ನಿಲುವಿಗೆ  ಸರಿದೂಗುವಂತೆ  ನಿಜವಾದ ಸಂಗತಿಗಳನ್ನು ತಿರುಚಿ ವ್ಯವಸ್ಥಿತವಾಗಿ ಅದನ್ನು ವಾಟ್ಸ್ ಆಪ್ ಗುಂಪುಗಳಲ್ಲಿ ಹಂಚಿ ಪ್ರಚಾರಕ್ಕಾಗಿ ಬಳೆಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 'ಮಿಥ್ಯ ನುಡಿವುದೇ ಮರ್ತ್ಯಲೋಕ' ಎಂಬ ಬಸವ ತತ್ವದ ಬಗ್ಗೆ ನಾವೆಲ್ಲಾ ಧೀರ್ಘವಾಗಿ ಚಿಂತಿಸಬೇಕಾಗಿದೆ.

'ಭಕ್ತನಿರ್ದ ತಾಣವೇ ದೇವಲೋಕ, ಭಕ್ತನಂಗಳವೇ ವಾರಣಾಸಿ, ದೇಹವೇ ದೇಗುಲ' ಎಂದು ಹೇಳುತ್ತಾ ದೇವಸ್ಥಾನಗಳನ್ನು ಶರಣರು ನಿರಾಕರಿಸಿದ್ದಾರೆ. ದೇವಸ್ಥಾನದ ಒಂದು ಚೌಕಟ್ಟಿನಲ್ಲಿ ಮೂರ್ತವಾದ ದೇವರನ್ನು ಧಿಕ್ಕರಿಸಿ, ಬಯಲೆಂಬ ಮುಕ್ತ ಪರಿಸರದಲ್ಲಿ, ನಿರಾಕಾರದಲ್ಲಿ, ಇಷ್ಟಲಿಂಗದಲ್ಲಿ  ದೇವರನ್ನು ಕಾಣುವ ಪರಿಕಲ್ಪನೆಯನ್ನು ಒದಗಿಸಿದ್ದಾರೆ. ನಾವು ಆಚರಿಸುವ ಕೆಲವು ಪೂಜೆ ಪುನಸ್ಕಾರಗಳ, ಧಾರ್ಮಿಕ ವಿಧಿಗಳ ಬಗ್ಗೆ ಆಲೋಚಿಸಿ; 
 

ಕಲ್ಲ ನಾಗರ  ಕಂಡರೆ  ಹಾಲನೆರೆಯಂಬರು 
ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ 
ಉಂಬ ಜಂಗಮ ಬಂದರೆ ನಡೆಯಂಬರು 
ಉಣ್ಣದ ಲಿಂಗಕೆ ಬೋನವ ಹಿಡಿ ಎಂಬರಯ್ಯ 

ಎನ್ನುತ್ತಾ  ನಮ್ಮ ಆಚರಣೆಗಳನ್ನು ವಿಮರ್ಶಿಸಿದ್ದಾರೆ. ಇನ್ನು ಕೆಲ ಶರಣರು ವೇದ ಶಾಸ್ತ್ರ ಪುರಾಣಗಳನ್ನು, ಆಗಮಗಳನ್ನು , ಪಾಪ -ಪುಣ್ಯ ಕರ್ಮವೆಂಬ ಕಲ್ಪನೆಗಳನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ನಮ್ಮ ಸಮಾಜದಲ್ಲಿ ಅರ್ಥಹೀನವಾದ ಅವೈಜ್ಞಾನಿಕ ನಂಬಿಕೆಗಳು ಅನುಷ್ಠಾನ ದಲ್ಲಿದ್ದು ಈ ವೈಜ್ಞಾನಿಕ ಯುಗದಲ್ಲಿ,  ಬದಲಾಗುತ್ತಿರುವ ಸಮಾಜದಲ್ಲಿ ವೈಚಾರಿಕತೆಯನ್ನು ಬೆಳಸಿಕೊಳ್ಳಬೇಕಾಗಿದೆ. ಧರ್ಮದ ನೆಪದಲ್ಲಿ ಮೂಡುವ ಭಾವೋದ್ವೇಗವನ್ನು ಪಕ್ಕಕ್ಕಿಟ್ಟು ಚಿಂತಿಸಬೇಕಾಗಿದೆ.

'ಎನಗಿಂತ ಕಿರಿಯರಿಲ್ಲಯ್ಯ ಮತ್ತು ತನ್ನ ಬಣ್ಣಿಸಬೇಡ'ಎಂಬ ವಚನದ ಸಾಲುಗಳು ತನ್ನ ಪ್ರಸ್ತುತತೆಯನ್ನು ಇಂಗ್ಲೆಂಡಿನಲ್ಲಿ ವಿಶೇಷವಾಗಿ ಕಂಡುಕೊಂಡಿದೆ. ಈ ಭಾವನೆಗಳನ್ನು ನಾವು ಅನಿವಾಸಿಗಳು ಇಲ್ಲಿ ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ. ವೃತ್ತಿಯ ಪರಿಸರದಲ್ಲಿ ಕಿರಿಯರು ಹಿರಿಯರಿಗೆ 'ಸರ್' ಎನ್ನುತ್ತಾ ತಲೆಬಾಗಿಸುವುದಿಲ್ಲ, ಅತಿಯಾದ ವಿನಮ್ರತೆ ಮತ್ತು ವಿಧೇಯತೆಗಳನ್ನು ತೋರುವುದು ಇಲ್ಲಿ ಕಂಡುಬರುವುದಿಲ್ಲ. ಹಿರಿಯರು ಅದನ್ನು ನಿರೀಕ್ಷಿಸುವುದೂ ಇಲ್ಲ. ಒಂದು ಕಛೇರಿಯಲ್ಲಿ ಮೇಲಧಿಕಾರಿಯೂ ಸಾಮಾನ್ಯ ಉದ್ಯೋಗಿಯೂ ಬಿಡುವಿನ ವೇಳೆಯಲ್ಲಿ ಒಟ್ಟಿಗೆ ಕುಳಿತು ಕಾಫಿ ಹೀರುವುದು, ಹರಟುವುದು ಮತ್ತು ಎಲ್ಲರು ಒಂದು ತಂಡದಂತೆ ಕೆಲಸ ಮಾಡುವುದನ್ನು ಕಾಣಬಹುದು. ಇವರ ವ್ಯಕ್ತಿತ್ವದಲ್ಲಿ ದರ್ಪವಾಗಲಿ ಅಥವಾ ಆಡಂಬರವಾಗಲಿ ಇರುವುದಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ಮತ್ತು ನೋಬಲ್ ಪ್ರಶಸ್ತಿ ಪಡೆದ ಪ್ರಖ್ಯಾತ ನಾಯಕರು, ಸಾಹಿತಿಗಳು, ವಿಜ್ಞಾನಿಗಳು ಬಾಳಿ ಬದುಕಿದ್ದಾರೆ. ಇವರು ಯಾವುದೇ ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಹೆಗ್ಗಳಿಕೆಯ ಬಗ್ಗೆ ಮಾತನಾಡುವುದಿಲ್ಲ. ಹೊಗಳಿಕೆ ಇವರಿಗೆ ಸಂಕೋಚದ ವಿಚಾರವಾಗಿರುತ್ತದೆ. ಈ ವಿನಯಶೀಲರು 'ಎನಗಿಂತ ಕಿರಿಯರಿಲ್ಲಯ್ಯ' ಎಂಬ ಭಾವನೆಯಲ್ಲಿ ಬದುಕುತ್ತಿದ್ದಾರೆ.  'ತನ್ನ ಬಣ್ಣಿಸಬೇಡ' ಎಂಬ ಸಾಲುಗಳ ಬಗ್ಗೆ ಚಿಂತಿಸುವಾಗ ಪ್ರಪಂಚದ ನಾನಾ ದೇಶಗಳಲ್ಲಿ ನೂರಾರು ವರ್ಷಗಳಿಂದ ರಾಜ ಮಹಾರಾಜರಿಗೆ ಹೊಗಳು ಭಟ್ಟರು ಇದುದ್ದನ್ನು  ನಾವು ಇತಿಹಾಸದಲ್ಲಿ ಗಮನಿಸಬಹುದು. ಈಗಿನ ಕಾಲಕ್ಕೆ ಆ ಹೊಗಳುಭಟ್ಟರ ಹೊಗಳಿಕೆಗಳ ಹಳೆಯ ಸಂಪ್ರದಾಯವನ್ನು ರಾಜಕಾರಣಿಗಳ ಅನುಯಾಯಿಗಳು ಉಳಿಸಿಕೊಂಡಿದ್ದಾರೆ. ಇದನ್ನು ನಾವು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಬಹುದು

'ಎನ್ನವರೊಲಿದು ಹೊನ್ನ ಶೂಲದಲಿ ಇಕ್ಕಿದರೆನ್ನ 
ನಿಮ್ಮ ಮನ್ನಣೆಯೇ ಅಲುಗಾಗಿ ತಾಕಿತ್ತಲ್ಲಾ 
ಅಯ್ಯ ನೊಂದೆನು ಸೈರಿಸಲಾರೆನು 
ನೀ ನನಗೆ ಒಳ್ಳಿದನಾದರೆ 
ಎನ್ನ ಹೊಗಳತೆಗೆ ಅಡ್ಡ ಬಾರ'

ಎನ್ನುವ ಈ ಬಸವಣ್ಣನವರ ಸರಳ ವಚನ ಜನ ಸಾಮಾನ್ಯರಿಂದ ಹಿಡಿದು ಅಧಿಕಾರದಲ್ಲಿ ಮತ್ತು ಉನ್ನತ ಸ್ಥಾನದಲ್ಲಿರುವ ಎಲ್ಲರಿಗೂ ಪ್ರಸ್ತುತವಾದ ಸಂದೇಶ ಎನ್ನಬಹುದು. ಒಮ್ಮೆ ‘ಸೂರ್ಯ ಮುಳುಗದ ಸಾಮ್ರಾಜ್ಯ’ವೆಂದು ತಮ್ಮನು ತಾವು ಹೊಗಳಿಕೊಂಡು, ತಮ್ಮ ದೇಶವನ್ನು ಗ್ರೇಟ್ ಬ್ರಿಟನ್ ಎಂಬ ಹೆಸರಿನಲ್ಲಿ ಕರೆದು ಕೊಳ್ಳುತ್ತಿದ್ದ ಇಂಗ್ಲೆಂಡ್ ಈಗ ಕಾಲ ಬದಲಾದಂತೆ ತನ್ನ ಹಿಂದಿನ ತಪ್ಪುಗಳನ್ನು, ಸ್ವಾಭಿಮಾನವನ್ನು ಸಂಕೋಚದಿಂದ ಪಕ್ಕಕ್ಕೆ ತಳ್ಳಿ ಈಗ ವಿನಮ್ರವಾಗಿದೆ.  'ಕಾಯಕವೇ ಕೈಲಾಸ' ಎಂಬ ಬಸವ ತತ್ವ ಪಾಶ್ಚಿಮಾತ್ಯ ದೇಶಗಳಲ್ಲಿ ಅನುಷ್ಠಾನದಲ್ಲಿದೆ. ಇಲ್ಲಿ ಎಲ್ಲ ವೃತಿಯೂ ಸಮಾನವೆಂದು ಪರಿಗಣಿಸಲ್ಪಡುತ್ತದೆ. ಇಲ್ಲಿ ವೃತ್ತಿಗಿಂತ ಅದರ ಹಿಂದೆ ಇರುವ ವ್ಯಕ್ತಿ, ಅವನ ಶ್ರದ್ಧೆ ಮುಖ್ಯವಾಗುತ್ತದೆ. ಇಲ್ಲಿಯ ಜನ ಸಂಭಾಷಣೆಯಲ್ಲಿ ತೊಡಗಿದಾಗ; 'ನೀನು ಯಾವ ವೃತ್ತಿಯಲ್ಲಿದ್ದೀಯಾ? ನಿನಗೆ ಸಂಬಳವೆಷ್ಟು? ಎಂಬ ಪ್ರಶ್ನೆಯನ್ನು ಯಾರು ಯಾರಿಗೂ ಕೇಳುವುದಿಲ್ಲ. ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಹಂಬಲ ಮತ್ತು ಛಲ ಇವು ಇಲ್ಲಿಯ ಬದುಕಿನ ರೀತಿ ನೀತಿಗಳಾಗಿವೆ.  

ಅನಿವಾಸಿಗಳಾದ ನಮಗೆ ಕನ್ನಡ ಮಾತೃಭಾಷೆಯಾದರೆ ಇಂಗ್ಲಿಷ್ ಪರಿಸರದ ಭಾಷೆ. ಹಾಗೆ ನಮ್ಮ ಧರ್ಮ ಹಿಂದೂ ಧರ್ಮವಾದರೆ ಪರಿಸರದ ಧರ್ಮ ಕ್ರೈಸ್ತ ಧರ್ಮವಾಗಿದೆ. ಕ್ರೈಸ್ತ ಧರ್ಮಧ ಕೆಲವು ಬೋಧನೆಗಳನ್ನು ಗಮನಿಸಿದಾಗ ಅಲ್ಲಿ ನಮಗೆ ಬಸವಣ್ಣನವರ ತತ್ವ ಕಾಣಿಸಿಕೊಳ್ಳುತ್ತದೆ. "ದಯವೇ ಧರ್ಮದ ಮೂಲವಯ್ಯ' ಎಂದು ಬಸವಣ್ಣ ಹೇಳಿದ್ದರೆ, ಕ್ರೈಸ್ತ ಧರ್ಮವು, ‘ದೇವರಿಗೆ ಧನ್ಯತೆಯನ್ನು ಸೂಚಿಸು, ಅವನ ದಯೆ ಎಂದೆಂದಿಗೂ ಇರುತ್ತದೆ, ದಯೆ, ನ್ಯಾಯ ತೀರ್ಪುಗಳನ್ನು ಮೀರಿದ್ದು’ ಎಂಬುದಾಗಿ ಸಾರುತ್ತದೆ. ‘ಕ್ರೈಸ್ತ ಧರ್ಮದಲ್ಲಿ ನಿನ್ನ ದೇಹವು ನಿನ್ನ ಪವಿತ್ರ ಚೇತನದ ಮಂದಿರ, ಆ ಚೇತನವನ್ನು ವಿಜೃಂಭಿಸಿ ಆರಾಧಿಸು’ ಎಂದು ಹೇಳಿದರೆ, ಬಸವಣ್ಣನವರು 'ದೇಹವೇ ದೇಗುಲ' ಎಂಬ ಕಲ್ಪನೆಯನ್ನು ಒದಗಿಸಿದ್ದಾರೆ. "ಯಾರಾದರೂ ನಿನ್ನ ಬಲ ಕೆನ್ನೆಗೆ ಹೊಡೆದರೆ ಅವರಿಗೆ ನಿನ್ನ ಎಡಕೆನ್ನೆಯನ್ನು ತೋರಿಸು ಎಂಬ ಸಹನೆಯ ಮಾತನ್ನು ಜೀಸಸ್ ಹೇಳಿದ್ದಾರೆ ಇದೇ ಮಾತನ್ನು;

" ತನಗೆ ಮುನಿದವರಿಗೆ ತಾ ಮುನಿಯಲೇಕೆಯ್ಯಾ  
ತನುವಿನಕೋಪ ತನ್ನ ಹಿರಿಯತನದ ಕೇಡು 
ಮನೆಯೊಳಗಿನ ಕಿಚ್ಚು ಮನೆಯ ಸುಟ್ಟಲ್ಲದೆ 
ನೆರೆಮನೆಯ ಸುಡದು, ಕೂಡಲ ಸಂಗಮದೇವ" 

ಎಂದು ಬಸವಣ್ಣ ಹೇಳುತ್ತಾರೆ. ಎರಡು ಸಾವಿರ ವರುಷಗಳ ಹಿಂದೆ ದೂರದ ಬೆಥ್ಲೆಹೆಮ್ ನಗರದಲ್ಲಿ  ಹುಟ್ಟಿದ ಮಹಾನ್ ಪುರುಷ ಜೀಸಸ್ ಮತ್ತು ಅಲ್ಲಿಂದ ಒಂದುಸಾವಿರ ವರುಷಗಳ ನಂತರ ಕರ್ನಾಟಕದಲ್ಲಿ ಹುಟ್ಟಿದ ಮಹಾನುಭಾವಿ  ಬಸವಣ್ಣನವರ ತತ್ವಗಳು ಎಷ್ಟು ಸಾದೃಶ್ಯವಾಗಿವೆ ಎನ್ನುವ ವಿಚಾರ ಆಶ್ಚರ್ಯಕರವಾಗಿದೆ. 'ದೇವನೊಬ್ಬ ನಾಮ ಹಲವು' ಎಂದು ಬಸವಣ್ಣ ಹೇಳಿದ್ದರೇ 'ಎಷ್ಟು ಮತಗಳೋ ಅಷ್ಟು ಪಥಗಳು ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ. "ಅವರವರ ದರುಶನಕೆ, ಅವರವರ ದೇಶದಲಿ, ಅವರವರಿಗೆಲ್ಲ ಗುರು ನೀನೊಬ್ಬನೇ" ಎಂದು ಮುಪ್ಪಿನ ಷಡಕ್ಷರಿ ಹೇಳಿದ್ದಾರೆ.  ಹೀಗೆ ಪ್ರಪಂಚದ ಸಾಧು ಸಂತರ, ಮಹಾಪುರುಷರ ಅನುಭಾವದಲ್ಲಿರುವ ಸಾಮ್ಯ ಗಮನಾರ್ಹವಾದದ್ದು ಮತ್ತು ಎಲ್ಲ ಮತಗಳನ್ನು ಗೌರವದಿಂದ ಸಮಾನವಾಗಿ ಕಾಣುವ ಸಂದೇಶ ಇಂದಿನ ಸಾಮಾಜಿಕ ಪರಿಸ್ಥಿತಿಗೆ ಪ್ರಸ್ತುತವಾಗಿದೆ. 

ಇಂಗ್ಲೆಂಡಿನಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೂಡಿದ 'ಸಫ಼್ರಜೆಟ್ ಚಳುವಳಿ' ಚಾರಿತ್ರಿಕವಾಗಿ ಮಹತ್ವವಾದದ್ದು. ೧೯೧೮ ರಲ್ಲಿ ತೀವ್ರವಾದ ಈ ಚಳುವಳಿಯಿಂದ ಸ್ತ್ರೀಯರ ಸ್ಥಾನಮಾನಗಳಿಗೆ ವಿಶೇಷ ಅರ್ಥದೊರಕಿತು. ಸ್ತ್ರೀಯರು ಚುನಾವಣೆಯಲ್ಲಿ ಮತಚಲಿಸುವುದಕ್ಕೆ ಅನುವುಮಾಡಿಕೊಟ್ಟಿತು. ಇತಿಹಾಸದ ಎಲ್ಲ ಹಂತಗಳಲ್ಲಿ ಸ್ತ್ರೀಯರು ಸಮಾಜದಲ್ಲಿ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಯಿತು. ಈ ಆಧುನಿಕ ಯುಗದಲ್ಲೂ ಮೂಲಭೂತವಾದಿ ಧಾರ್ಮಿಕ ಆಲೋಚನೆಯುಳ್ಳ ಕೆಲವು ದೇಶಗಳಲ್ಲಿ ಸ್ತ್ರೀಯರು ತಮ್ಮ ಅಸ್ತಿತ್ವವನ್ನು ಮತ್ತು ಮೂಲಭೂತ ಹಕ್ಕುಗಳನ್ನು     ಉಳಿಸಿಕೊಳ್ಳುವುದರ ಬಗ್ಗೆ ಆತಂಕವಿದೆ. ಈ ಹೋರಾಟ ಇನ್ನೂ ನಡೆಯುತ್ತಿದೆ. ಆದರೆ ೮೦೦ ವರ್ಷಗಳ ಹಿಂದೆಯೇ ಬಸವಣ್ಣನವರು ಸ್ತ್ರೀಯರಿಗೆ ಸಮಾಜದಲ್ಲಿ ಪುರುಷ ಸಮಾನ ಹಕ್ಕುಗಳನ್ನು ಒದಗಿಸಿ ಕೊಟ್ಟರು. ಪೂಜೆ ಮಾಡಲು ಸ್ತ್ರೀ ಅರ್ಹಳಲ್ಲ ಎಂಬ ಪರಿಸ್ಥಿತಿಯಲ್ಲಿ "ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎನ್ನುತ್ತಾ 'ಶರಣ
ಸತಿ-ಲಿಂಗ ಪತಿ' ಎಂಬ ಪರಿಕಲ್ಪನೆಯನ್ನು ಕೊಟ್ಟು ಗಂಡು ಹೆಣ್ಣಿನ ಮಧ್ಯ ಇರುವ ಭೇದಗಳನ್ನು ತೊಡೆದು ಹಾಕಿದರು. 

ಪ್ರಜಾಪ್ರಭುತ್ವದ ತವರೂರಾದ ಇಂಗ್ಲೆಂಡಿನಲ್ಲಿ ಕುಳಿತು ಪ್ರಜಾಪ್ರಭುತ್ವದ ಬಗ್ಗೆ ಯೋಚಿಸುವಾಗ ೮೦೦ ವರ್ಷಗಳ ಹಿಂದೆ ಬಸವಣ್ಣನವರು ಜ್ಯಾತ್ಯಾತೀತವಾದ, ಲಿಂಗ ಬೇಧವಿಲ್ಲದ ವಿಚಾರವಂತರ, ವೇದಿಕೆಯನ್ನು ಕಲ್ಪಿಸಿದ್ದರು, ಅಲ್ಲಿ ಜನಪರ ಸಾಮಾಜಿಕ ಹಾಗು ಆಧ್ಯಾತ್ಮಿಕ ವಿಚಾರಗಳನ್ನು ಅನುಭವ ಮಂಟಪದಲ್ಲಿ ವಿನಿಮಯ ಮಾಡಿಕೊಂಡು ಚರ್ಚಿಸುತ್ತಿದ್ದರು ಎಂಬ ವಿಚಾರ ಅತ್ಯಂತ ಶ್ಲಾಘನೀಯವಾದದ್ದು. ಸಮಾನತೆ ಮತ್ತು ಮಾನವೀಯ ಮೌಲ್ಯಗಳು ಅಲ್ಲಿ ಪ್ರಧಾನವಾಗಿದ್ದು ಅದು ಪ್ರಜಾಪ್ರಭುತ್ವದ ಒಂದು ಮಾದರಿಯಾಗಿತ್ತು. ಈ ವಿಚಾರಗಳು ಇಡೀ ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.

ದಯೆ, ಕರುಣೆ, ಅನುಕಂಪೆ, ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆ, ಕಾಯಕದಲ್ಲಿ ಶ್ರದ್ಧೆ, ದಾಸೋಹ, ವಿನಯ ಶೀಲತೆ ಮುಂತಾದ ಉತ್ತಮ ಮೌಲ್ಯಗಳನ್ನು ಬಸವಾದಿ ಶರಣರು ಎತ್ತಿ ಹಿಡಿದಿದ್ದಾರೆ. ಈ ಮೌಲ್ಯಗಳು ಪ್ರಪಂಚದ ಯಾವ ದೇಶದಲ್ಲಾದರೂ ಒಂದು ಆರೋಗ್ಯಕರವಾದ ಸಮಾಜವನ್ನು ಕಟ್ಟಲು ಬೇಕಾಗಿರುವ ಅಡಿಗಲ್ಲುಗಳು. ಹೀಗಾಗಿ ಈ ಮೌಲ್ಯಗಳನ್ನು ಒಳಗೊಂಡ ಶರಣ ತತ್ವ ವೈಯುಕ್ತಿಕ ಮತ್ತು ಸಾಮೂಹಿಕ ನೆಲೆಯಲ್ಲಿ, ಎಲ್ಲ ದೇಶಗಳಿಗೂ ಎಲ್ಲ ಕಾಲಕ್ಕೂ ಪ್ರಸ್ತುತವಾದದ್ದು.

ಬದುಕು ಬದಲಿಸಿದ ಪುಸ್ತಕ

ಲೇಖಕಿ-ಶ್ರೀರಂಜನಿ ಸಿಂಹ

ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು,'ನಮ್ಮ ಬದುಕಿನಲ್ಲಿ ಸ್ನೇಹಿತರ ಕೊರತೆ ಯಾವತ್ತೂ ಇರಲ್ಲ ಪುಸ್ತಕ ಒಂದಿದ್ದರೆ ಸಾಕು'ಎಂದು. ಬೇಸಿಗೆ ರಜೆ ಬರಲಿ, ದಸರಾ ರಜೆ ಇರಲಿ ಆ ರಜೆಯಲ್ಲಿ ಪುಸ್ತಕ ಓದುವುದು, ಗ್ರಂಥಾಲಯಕ್ಕೆ ಹೋಗಿ ಪುಸ್ತಕ ತರುವುದು ನನ್ನ ದೈನಂದಿನ ಕೆಲಸವಾಗಿತ್ತು. ನಾನು ಸದ್ವಿದ್ಯಾ ಶಾಲೆಯಲ್ಲಿ ಓದುತ್ತಿದ್ದಾಗ ಪುಸ್ತಕ ಓದುವ ಹವ್ಯಾಸ ಇನ್ನೂ ಹೆಚ್ಚಾಯಿತು,tinkle ಪಂಚತಂತ್ರ Competitive success, Wisdom, Tell me why ನಂತಹ ಪುಸ್ತಕಗಳನ್ನು ಓದುತ್ತಿದ್ದೆ. ಇವೆಲ್ಲ ಪುಸ್ತಕಗಳಲ್ಲಿ ಯಾವುದಾದರೂ ಪದ ಅರ್ಥ ಆಗದೆ ಇದ್ದರೆ, ಆ ಪದವನ್ನು Oxford Dictionary ( ಆಂಗ್ಲ ಭಾಷೆ -ಕನ್ನಡ) ಯಲ್ಲಿ ಹುಡುಕಿ ಹೊಸ ಪದಗಳೆಂದು ಕಲಿಯುವ ವಾಡಿಕೆ. (ಇವೆಲ್ಲ tables, square root, cube root ಜೊತೆಗೆ ಓದುತ್ತಿದ್ದ ಪದಗಳು). ಕಾಲ ಕಳೆದಂತೆ ಪುಸ್ತಕ ಓದುವ ಆಸಕ್ತಿ ಹೆಚ್ಚಾಗಿ, ನನಗೆ ಇಷ್ಟವಾಗುವ ಆಂಗ್ಲ ಭಾಷೆಯ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ.

ನನಗೆ ತುಂಬಾ ಬೇಸರ ಆದಾಗ ಮೂರು ಕೆಲಸ ಮಾಡುತ್ತೇನೆ - ಗಿಡಗಳನ್ನು ಬೆಳೆಸುವುದು, ಗಿಡಗಳ ಜೊತೆ ಮಾತನಾಡುವುದು, ಅಡುಗೆ ಮಾಡುವುದು, ಪುಸ್ತಕ ಓದುವುದು. ಪುಸ್ತಕ ಎಂದರೆ ಸ್ನೇಹಿತರಿದ್ದಹಾಗೆ, ಈವಾಗಲಂತೂ ಎಲ್ಲೆಂದರಲ್ಲಿ digital ರೂಪದಲ್ಲಿ ಪುಸ್ತಕ ಓದುವ ಅನುಕೂಲವಿದೆ, ಹೀಗಾಗಿ ಪುಸ್ತಕ ಓದುವುದರಿಂದ ವಿಚಾರ ವಿನಿಮಯ, ದೇಶದ ಆಗು ಹೋಗುಗಳ ಬಗ್ಗೆ ತಿಳುವಳಿಕೆ, ಹೊಸಪದ ಪರಿಚಯ, ಸಾಂಸ್ಕೃತಿಕ ವೈವಿಧ್ಯತೆ ಎಲ್ಲದರ ಅನುಭವವಾಗುತ್ತದೆ. ಅಂತಹ ಪುಸ್ತಕಗಳಲ್ಲಿ ನನಗೆ ಬಹಳ ಹತ್ತಿರವಾದ ಪುಸ್ತಕಗಳು ಎಂದರೆ - You can Win (By Shiv Khera) , ನಾ ಕಂಡ ಕಲಾವಿದರು - ಶ್ರೀ ಮೈಸೂರು ವಾಸುದೇವಾಚಾರ್ಯರು, What Can I give? - (By Abdul Kalam Sir Personal Assistant - Srijan Pal Singh)

ನಾನು ನಮ್ಮ ತಂದೆಯನ್ನು ಕಳೆದುಕೊಂಡ ನಂತರ ಓದಿದ ಪುಸ್ತಕ ಎಂದರೆ - You can Win. ನನ್ನ ವಿಚಲಿತವಾದ ಮನಸನ್ನು, ಆ ಪುಸ್ತಕವನ್ನು ಓದಿ ನಿಧಾನವಾಗಿ ಸಮಾಧಾನ ಮಾಡಿಕೊಂಡೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ, ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋ ಮಾತುಗಳು, ಹೇಳಕ್ಕೆ ಕೇಳಕ್ಕೆ ಚಂದ ಆದರೆ ಅಂತಹ ಪರಿಸ್ಥಿತಿ ನಮಗೆ ಬಂದಾಗ ನಮ್ಮ ಮನಸ್ಸು ತುಂಬಾ ನಿಧಾನ ಗತಿಯಲ್ಲಿ ಒಪ್ಪಿಕೊಳ್ಳುತ್ತದೆ. ಈ ಪುಸ್ತಕದಿಂದ ನನಗೆ ನಿಧಾನವಾಗಿ ಈ ವಿಷಯ ಅರಿವಾಯಿತು, ಮತ್ತೊಂದು ವಿಷಯ ಎಂದರೆ " Always count on blessings" ನಾವು  ಹಿರಿಯರಲ್ಲಿ ಯಾವಾಗಲೂ ಆಶೀರ್ವಾದ ಪಡೆಯುತ್ತೇವೆ. ಯಾಕೋ ಏನೋ ನಮ್ಮ ತಂದೆಯವರನ್ನು ಕಳೆದುಕೊಂಡ ನಂತರ ನನಗೆ ಆಶೀರ್ವಾದ ಇಲ್ಲವೇನೋ ಅನ್ನಿಸುತಿತ್ತು, ಈ ವಾಕ್ಯ ಮತ್ತೆ ಮತ್ತೆ ಓದಿದ ನಂತರ ಒಂದಂತೂ ಅನ್ನಿಸಿದ್ದು ನಿಜ ಲಕ್ಷ್ಮೀನರಸಿಂಹ ಕಾಪಾಡಪ್ಪ ಎಂದು ಕೇಳಿಕೊಂಡೆ ಎಲ್ಲ ನೆರವೇರಿದೆ. 

ನಾನು ದ್ವಿತೀಯ ಪದವಿ ಪೂರ್ವ ಮುಗಿಸಿದ ನಂತರ, BE in Industrial Production ಅಧ್ಯಯನ ಮಾಡಿದ್ದು SJCE ಕಾಲೇಜ್ ನಲ್ಲಿ. ಹದಿ ಹರೆಯದ ವಯಸ್ಸಿನಲ್ಲಿ  ಬರೀ fiction ಪುಸ್ತಕಗಳೇ ಓದಿದ್ದು, ಮಧ್ಯದಲ್ಲಿ ನಾ ಓದಿದ ಒಂದು ಪುಸ್ತಕ - ''ನಾ ಕಂಡ ಕಲಾವಿದರು''ನಮ್ಮ ಊರಿನ ವಿದ್ವಾಂಸರಾದ ಶ್ರೀ ವಾಸುದೇವಾಚಾರ್ಯರು ಬರೆದ ಈ ಪುಸ್ತಕದಲ್ಲಿ ಅವರು ಕಂಡ ಹಲವಾರು ಕಲಾವಿದರ ಬಗ್ಗೆ ಬರೆದಿದ್ದಾರೆ. ಅವರು ಕಲಿಕೆಯ ಮಹತ್ವವನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಅಂಥ ವಿದ್ವಾಂಸರೇ ವಯಸ್ಸಿನ ಅಡ್ಡಿಯಿಲ್ಲದೇ ಕಲಿಯುವ ಪ್ರಯತ್ನ ಮಾಡುತ್ತಾರೆ ಅಂದರೆ ನಮ್ಮ ಕೈಯಲ್ಲೂ ಸಾಧ್ಯ ಎಂದು ಮನದಟ್ಟು ಮಾಡಿಸಿದ ಪುಸ್ತಕ ಇದು . ಈ ಪುಸ್ತಕ ನನ್ನನು ಮುಂದೆ ಕರ್ನಾಟಕ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಪ್ರೇರೇಪಿಸಿತು ಎಂದರೆ ತಪ್ಪಿಲ್ಲ.

ನನಗಿಷ್ಟವಾದ ಇನ್ನೊಂದು ಪುಸ್ತಕ  - What Can I give? by Sir Srijan Pal Singh. ಈ ಪುಸ್ತಕ ನಾನು ಮೊಟ್ಟ ಮೊದಲ ಬಾರಿಗೆ ಓದಿದ್ದು ಚುನಾವಣೆಯಲ್ಲಿ ಮತ ಚಲಾಯಿಸುವ ಮೊದಲು. ದಿವಂಗತ ರಾಷ್ಟ್ರಪತಿ A P J Abdul Kalam sir ಅವರ ಒಂದೊಂದು ಅನುಭವದ ಮಾತು, ದೇಶಕ್ಕೆ ನಾವು ಎಂತಹ ಪ್ರಜೆಗಳಾಗಿ ಇರಬೇಕೆನ್ನುವ ಕುರಿತು ನನ್ನನು ಚಿಂತನೆ ಮಾಡಲು ಹಚ್ಚಿತು. 
...................................................................................................................................................