‘ನಿರ್ದಯಿ’- ಶ್ರೀವತ್ಸ ದೇಸಾಯಿಯವರ ಭಾವಗೀತೆ

ಪೀಠಿಕೆ:
ನವರಸಗಳಲ್ಲಿ ಒಂದು ಶೃಂಗಾರ. ಅದರ ಒಂದು ಪ್ರಕಾರ ವಿರಹ ಎನ್ನುತ್ತಾರೆ ಕೆಲವರು.
ಪ್ರೇಮ-ಪ್ರಣಯ ಇದ್ದಲ್ಲಿ ವಿರಹ ಇರಲೇ ಬೇಕಲ್ಲವೆ?
ಇಂಗ್ಲಿಷಿನಲ್ಲಿ ಒಂದು ಮಾತು ಇದೆ: Absence makes the heart grow fonder.
ಅಗಲುವಿಕೆಯಿಂದ ಎದೆ ಇನ್ನೂ ತುಂಬಿ ಬರುತ್ತದೆ, ಅಂತ.

ಈ ಹಾಡಿನ ಸನ್ನಿವೇಶ ಹೀಗಿದೆ:
ಇಲ್ಲಿ ಪ್ರೇಮಿಗಳು ಅಗಲಿದ್ದಾರೆ. ಆಕೆ ದೂರ ಸರಿದಿದ್ದಾಳೆ; ಬಲು ದೂರ. ಆಕೆ ಯಾವ ಊರಿಗೆ ಹೋಗಿರಬಹುದು?
ಆತ ದೂರುತ್ತ ಪ್ರಶ್ನಿಸುತ್ತಾನೆ: ನೀನಲ್ಲವೇ ನಿರ್ದಯಿ?

(ಕನ್ನಡ ಬಳಗ, ಯು.ಕೆ ದ ಯುಗಾದಿ ಸಂಭ್ರಮದಲ್ಲಿ ಬಿಡುಗಡೆಯಾದ ‘ಪ್ರೀತಿಯೆಂಬ ಚುಂಬಕ’ ಧ್ವನಿಮುದ್ರಿಕೆ (CD) ಯಲ್ಲಿ ಕೆಳಗಿನ ಕವನ ಸೇರ್ಪಡೆಯಾಗಿದೆ)

                               -ಶ್ರೀವತ್ಸ ದೇಸಾಯಿ

nirdayi-1

ನಿರ್ದಯಿ

ನಾನಲ್ಲ, ನೀನಲ್ಲವೆ ನಿರ್ದಯಿ?
ನನ್ನನ್ನೇ ನಿನಗಿತ್ತೆ ನನ್ನವಳೆಂದೆಣಿಸಿ
ನನ್ನಲ್ಲೀಗ ಬರೀ ನೆನಪುಗಳ ರಾಶಿ
ನನ್ನ ತಪ್ಪಿದ್ದರೆ ಮರಳಿ ಬಾ ಕ್ಷಮಿಸಿ

ನಿಮ್ಮೂರಲ್ಲಿ ಹುಟ್ಟು-ಸಾವಿಲ್ಲಂತೆ
ಎಲ್ಲೆಲ್ಲೂ ಹಸಿರಂತೆ, ಅದು ನಂದನವಂತೆ
ಅದಕ್ಕೆ ತಾನೆ ನೀನು ನನ್ನನ್ನು ಮರೆತೆ?
ನನ್ನ ಬಳಿಯಿಲ್ಲ ಸತ್ತ ಕನಸುಗಳಿಗೆ ಕೊರತೆ!

ಕೇಳುತಿದೆ ಇಡದ ಹೆಜ್ಜೆಗಳ ಸದ್ದು
ಕಾಡುತಿವೆ ಸತತ ನೆನಪುಗಳು ಎದ್ದು
ಕಳಿಸಿಲ್ವೆ ಹೋದಾಗ ಕೊಟ್ಟು ಮುತ್ತು
ನನ್ನನ್ನಳಿಸಿದ ನೀನಲ್ಲವೆ ನಿರ್ದಯಿ?

-ಶ್ರೀವತ್ಸ ದೇಸಾಯಿ

ಕನಸಿನ ರಾಣಿ – ಬೆಳ್ಳೂರು ಗದಾಧರ್ ಅವರ ಕವನ

ಕವನದ ಪರಿಚಯ ಬೆಳ್ಳೂರು ಗದಾಧರ್ ಅವರದೇ ಮಾತುಗಳಲ್ಲಿ –

ವಯಸ್ಸಿಗೆ ಬಂದ  ಹುಡುಗರು ತಮ್ಮ ಜೀವನ ಸಂಗಾತಿ ಹೇಗಿರಬೇಕು ಎಂಬುದರ  ಬಗ್ಗೆ ಏನೇನೋ ಕನಸು ಕಾಣುತ್ತಿರುತ್ತಾರೆ.

ಭರ್ತೃಹರಿ ಬರೆದಂತೆ

‘ಕಾರ್ಯೇಷು ದಾಸಿ, ಕರಣೇಷು ಮಂತ್ರಿ 

ಪೂಜ್ಯೇಷು ಮಾತಾ, ರೂಪೇಷು ಲಕ್ಷ್ಮೀ

ಕ್ಷಮಯಾ ಧರಿತ್ರೀ, ಶಯನೇಷು ರಂಭಾ’

ಈ ಆರು ಗುಣಗಳಿರುವ ideal ಸಂಗಾತಿ  ಸಿಗುವುದಿಲ್ಲವೆಂದು ಗೊತ್ತಿದ್ದರೂ ಅಂತಹವಳ ಬಗ್ಗೆ ಕನಸು ಕಾಣುತ್ತಿರಬಹುದು.

ದಿನಗಳು ಕಳೆದಂತೆ ವಾಸ್ತವ್ಯದ ಅರಿವಾಗಿ  ಈ dreamer ಗಳ ಕನಸುಗಳೂ ಬದಲಾಗುತ್ತವೆ.

ಅದಕ್ಕಾಗಿ ನನ್ನ ಈ ಕವನದಲ್ಲಿ  ಕನಸಿನ ರಾಣಿಯನ್ನು ಹುಡುಕುವುದರ ಪ್ರಯತ್ನವೇ ಹೊರತು ಆ ರಾಣಿಯ ವರ್ಣನೆಯಿಲ್ಲ.

ಕಾವ್ಯದ ಸ್ವರೂಪ, ಸ್ವಭಾವ, ಛಂದಸ್ಸು ಪ್ರಾಸ ಇವುಗಳ ಬಗ್ಗೆ ಹೆಚ್ಚು ಯೋಚಿಸದೆ ಮನಸ್ಸಿಗೆ ಬಂದ  ಒಂದು ಕಲ್ಪನೆ  ಈ ಕವನ

 

kanasina rani

“ಕನಸಿನ ರಾಣಿ “

ಎಲ್ಲೋ ದೂರದ ಬೆಟ್ಟಗಳಾಚೆ

ಎಲ್ಲೋ ಕಾಮನ ಬಿಲ್ಲಿನ ಕೆಳಗೆ

ಎಲ್ಲೋ ಸಾಗರ ದಾಟಿದಮೇಲೆ

ಇರುವಳು ನನ್ನ ಕನಸಿನ ರಾಣಿ

 

ಎಲ್ಲೋ ಹುಣ್ಣಿಮೆ ಚಂದ್ರನ ಬೆಳಕಲಿ

ಎಲ್ಲೋ ಫಲಭರಿತ ಮರದಡಿ

ಎಲ್ಲೋ ಇಂದಿನ ತುಂಬಿದ ಜಗದಲಿ

ಇರುವಳು ನನ್ನ ಕನಸಿನ ರಾಣಿ

 

ಎಲ್ಲೋ ಗಜಿಬಿಜಿ ನಗರಗಳಾಚೆ

ಎಲ್ಲೋ ತಂಪಿನ ನದಿ ತೀರದಲಿ

ಎಲ್ಲೋ ಕಂಪಿನ ಹೂಗಳ ಮಧ್ಯೆ

ಇರುವಳು ನನ್ನ ಕನಸಿನ ರಾಣಿ

 

ನಡೆಯುವೆ ನಾನು ಮುಳ್ಳಿನ ಹಾದಿ

ಏರುವೆ ಪರ್ವತ ಶಿಖರ ಶ್ರೇಣಿ

ಹುಡುಕುವೆ ನಾನು ಹಗಲೂ ಇರುಳೂ

ಸಿಗುವವರೆಗೂ ನನ್ನ ಕನಸಿನ ರಾಣಿ

 

ಬೆಳ್ಳೊರು ಗದಾಧರ