ಕನ್ನಡಿಯಾತ…. ! ಪೀಟರ್ ಡೇಲ್ ವಿಂಬ್ರೌ ೧೯೩೪ರಲ್ಲಿ ಬರೆದ ‘The Man in the Glass’ ಕವನದ ಭಾವಾಂತರ ಮುರಳಿ ಹತ್ವಾರ ಅವರಿಂದ

ಪೀಠಿಕೆ: ಬಹುಮುಖ ಪ್ರತಿಭೆ ಪೀಟರ್ ಡೇಲ್ ವಿಂಬ್ರೊ ೧೯೩೪ರಲ್ಲಿ ಬರೆದ  ಒಂದು ಕವನ ‘ದಿ ಮ್ಯಾನ್ ಇನ್ ದಿ ಗ್ಲಾಸ್’
ಮನುಷ್ಯನ ಅಂತರಂಗ ಮತ್ತು ಬಹಿರಂಗದ ನೈಜ ಮುಖಗಳನ್ನು ತೆರೆದಿಡುತ್ತದೆ.
ಬಾಹ್ಯ ಪ್ರಪಂಚಕ್ಕೆ ನಮ್ಮ ವ್ಯಕ್ತಿತ್ವ ಬಹುಮುಖಿಯಾಗಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ಬದಲಾಗುವ ನಾಟಕ ರಂಗವನ್ನು ಸೃಷ್ಟಿಸಿಕೊಳ್ಳುವ ಉದಾಹರಣಿಗಳಿವೆ.ಆದರೆ ಎಲ್ಲದಕ್ಕೂ ಮೀರಿ ಅಂತರಂಗದ ಮೂಲೆಯಲ್ಲಿ ಆತ್ಮಸಾಕ್ಷಿಯೊಂದು ನಮ್ಮೆಲ್ಲಾ ಕಾರ್ಯಗಳ ಉದ್ದೇಶ ಮತ್ತು ಅವುಗಳ ಫಲಿತಾಂಶದ ಸತ್ಯಾಸತ್ಯತೆಯನ್ನು ಹೇಳುತ್ತಿರುತ್ತದೆ.
ಎಷ್ಟೋ ಸಾರಿ ನಮ್ಮ ಆತ್ಮಸಾಕ್ಷಿಯ ಮಾತಿಗೆ ಜಾಣ ಕಿವುಡರಾಗಿಬಿಡುತ್ತೇವೆ ನಂತರ ಒಬ್ಬರೇ ಇರುವಾಗ ಆ ಮಾತು ನಮ್ಮನ್ನು ಅಂತರಂಗದ ನ್ಯಾಯಾಲಯಕ್ಕೆ ಕರೆದೊಯ್ದು ನಮ್ಮ ವಾದ ತಪ್ಪು ಎಂದು ಮನವರಿಕೆ ಮಾಡಿಸುತ್ತದೆ.

ಅಂತಹ ಭಾವವುಳ್ಳ ಮೂಲ ಕವನವನ್ನು ಮುರಳಿ ಹತ್ವಾರರು ಬಹಳ ಅರ್ಥಪೂರ್ಣವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ, ನೀವೂ ಓದಿ, ಮತ್ತೆ ಮತ್ತೆ ಓದಬೇಕೆನಿಸುವ ಕವನವಿದು.

The man in the glass

 

ಕನ್ನಡಿಯಾತ…. !

ನೀ ಸುರಿಸಿದ ಬೆವರೆಲ್ಲ ಸೇರಿ

ಬಯಕೆ ಬಟ್ಟಲು ತುಂಬಿ ಸೋರಿ

ತಲೆಯ ಮೇಲೇರೆ ಜಂಭದ ಗರಿ

ಕನ್ನಡಿಯಲಿ ಇಣುಕಿ ಒಂದು ಬಾರಿ

ಕೇಳವನ ನುಡಿ, ಅದು ನಿನ್ನ ಸಿರಿ!

ಹೆತ್ತಮ್ಮ, ಅಪ್ಪ, ಕೈ ಹಿಡಿದ ನಾರಿ

ಅಳೆಯುವ ದೂರವಲ್ಲ ಬದುಕಿನ ಗುರಿ

ಕನ್ನಡಿಯೊಳಗಿಂದ ಕಣ್ಣು ತೂರಿ

ಅವನು ತೋರಿದ್ದೇ ನಿನ್ನ  ಸರಿ ದಾರಿ.

ಬೇಕಿಲ್ಲ ಉಳಿದೋರ ಉಸಾಬರಿ

ಅವನಿರಲು ನಿನ್ನುಸಿರಿನಲಿ ಸೇರಿ

ಕಡುಕಷ್ಟದಾಪತ್ತುಗಳ ದಾಟುವೆ ಹಾರಿ

ಜೊತೆಯಿರೆ ಕನ್ನಡಿಯಾತನ ಸ್ನೇಹಸಿರಿ!

ಜಗಕೆಲ್ಲ ಊದುತ್ತ ಸುಳ್ಳಿನ ತುತ್ತೂರಿ

ಹತ್ತಿ ಕುಳಿತರೂ ಶಹಬ್ಬಾಸ್- ಗಿರಿ

ಕಡೆಗುಳಿವ ಗರಿ – ಕಣ್ಣೀರು, ಎದೆಯುರಿ

ಕಣ್ಕಟ್ಟಿ ನಿಲ್ಲೆ ನೀ ಕನ್ನಡಿಯಾತಗೆ ಬೆನ್ನುತೋರಿ!

                                                                -ಮುರಳಿ ಹತ್ವಾರ್ (ಜುಲೈ ೨೦೧೮)

(ಪೀಟರ್ ಡೇಲ್ ವಿಂಬ್ರೌ ೧೯೩೪ರಲ್ಲಿ ಬರೆದ The Man in the Glass ಕವನದ ಭಾವಾಂತರ)

ಚಿತ್ರ ಕೃಪೆ: ಗೂಗಲ್

 

The Man in The Glass

When you get what you want in your struggle for self
And the world makes you king for a day
Just go to the mirror and look at yourself
And see what that man has to say.

For it isn’t your father, or mother, or wife
Whose judgment upon you must pass
The fellow whose verdict counts most in your life
Is the one staring back from the glass.

He’s the fellow to please – never mind all the rest
For he’s with you, clear to the end
And you’ve passed your most difficult, dangerous test
If the man in the glass is your friend.

You may fool the whole world down the pathway of years
And get pats on the back as you pass
But your final reward will be heartache and tears
If you’ve cheated the man in the glass

-Peter Dale Wimbrow

‘ಹಳದಿ ಹೂಗಳು’ ವಿಲಿಯಮ್ ವರ್ಡ್ಸ್ವರ್ತ್ ಕವಿಯ ‘Daffodils/ I wandered lonely as a cloud’ ಕವಿತೆಯ ಅನುವಾದ- ಮುರಳೀಧರ ಹತ್ವಾರ ಅವರಿಂದ

daffodils2daffodils

 

ಪೀಠಿಕೆ:‘ ಡ್ಯಾಫ್ಫೋಡಿಲ್ಸ್’ ಎನ್ನುವುದು ಇಂಗ್ಲಿಷಿನ ಒಂದು ವಿವಿಧಾರ್ಥಕ ಪದ. ಹೊಸತನ, ಸ್ಫೂರ್ತಿ ,ಸೃಜನಶೀಲ, ಕ್ಷಮೆ, ನೆನಪು,ಅಂತರಂಗ ದರ್ಶನ ಎನ್ನುವ ಅರ್ಥಗಳು ಈ ಪದಕ್ಕೆ ಇವೆ.ಇಂತಹ ಪದದ ಹೆಸರನ್ನು ಹೊತ್ತ ಹೂವು ಮೇಲಿನ ಎಲ್ಲ ಅರ್ಥಗಳ ದ್ಯೋತಕವಾಗಿದೆ, ನೋಡಿದ ಕೂಡಲೇ ಎಂತಹವರೂ ಸಹ ಮೋಡಿಗೊಳಗಾಗುತ್ತಾರೆ. ಹಳದಿ, ಹಳದಿ ಮಿಶ್ರಿತ ಕೇಸರಿ, ಬಿಳಿ ಮಿಶ್ರಿತ ಹಳದಿ ಬಣ್ಣಗಳಲ್ಲಿ ಕಾಣಸಿಗುವ ಈ ಹೂಗಳು ವಸಂತ ಮಾಸದ ಸಂತಸ ಸುಮಗಳು ಎಂದರೆ ತಪ್ಪಾಗಲಾರದು.ಇಂಗ್ಲಿಷಿನ ಪ್ರಸಿದ್ಧ ಕವಿಯಾದ ವಿಲಿಯಮ್ ವರ್ಡ್ಸ್ವರ್ತ್ ಬರೆದ ‘Daffodils/ I wandered lonely as a cloud’ ಕವಿತೆಯನ್ನು ಕನ್ನಡಕ್ಕೆ ಮುರಳೀಧರ ಹತ್ವಾರ ಅವರು ಬಹಳ ಸೊಗಸಾಗಿ ಅನುವಾದಿಸಿದ್ದಾರೆ, ನೀವೂ ಓದಿ ಆಸ್ವಾದಿಸಿ.

ಮುರಳೀಧರ ಅವರ ಮಾತುಗಳಲ್ಲಿ-

ವಿಲಿಯಂ ವರ್ಡ್ಸ್ವರ್ತ್ (William Wordsworth) (1770-1850) ಇಂಗ್ಲೆಂಡಿನ ಬಹು ಪ್ರಸಿದ್ಧ ಕವಿ. ಅವನ ಡ್ಯಾಫೊಡಿಲ್ ಕವಿತೆ ಹೆಚ್ಚಿನವರ ಮನದಲ್ಲಿ ಇ೦ದಿಗೂ ಅವನ ನೆನಪನ್ನ ಉಳಿಸಿರುವ, ಬಹು ಜನರು ಮೆಚ್ಚಿದ ಕವಿತೆ. ಈ ಕವಿತೆಯ ಕನ್ನಡ ಅನುವಾದದ ಒಂದು ಪ್ರಯತ್ನ. ಜೊತೆಗೆ ಅವನ ಮನೆಯ(ಎಡಬದಿಯ ಚಿತ್ರ) ಮತ್ತು ಬಲಬದಿಯಲ್ಲಿ ಅವನ ಈ ಕವಿತೆಗೆ   ಸ್ಫೂರ್ತಿಯಾದ ಉಲ್ಸವಾಟರ್ (Ullswater lake) ಕೆರೆಯ ಚಿತ್ರಗಳು ನಿಮಗಾಗಿ:

 

 

ಹಳದೀ ಹೂಗಳು……..


ನಡೆದಿದ್ದೆ ನಾ ಒಂಟಿಯಾಗಿ, ಕಣಿವೆ-ಗುಡ್ಡಗಳ 
ಮೇಲೆ ಎತ್ತರದಲಿ ತೇಲುವ ಮೋಡವೊಂದರಂತೆ.
ಕಂಡೆನೊಮ್ಮೆಲೆ ಬಹುದೊಡ್ಡ, ಹೊಂಬಣ್ಣದ 
ಹಳದಿ-ಹೂಗಳ ಗುಂಪೊಂದ;
ಕೆರೆಯ ತಡಿಯಲಿ, ಮರಗಳಡಿಯಲಿ
ಪಟಪಟಿಸಿ ಕುಣಿಯುತಿದ್ದವವು ತಂಗಾಳಿಯಲಿ.

ಮಿಂಚುತ, ಹೊಳೆಯುವ ಆಕಾಶ ಗಂಗೆಯ
ನಿರಂತರ ನಕ್ಷತ್ರಗಳಂತೆ, ಹರಡಿದ್ದವವು
ಎಂದೂ ಮುಗಿಯದ ಸಾಲಿನಂತೆ, ಆ ದಡದಂಚಿನಲಿ:
ಹತ್ತು ಸಾವಿರವ ಕಂಡೆ ಒಂದೇ ನೋಟದಲಿ,
ನರ್ತಿಸುತ್ತಿದ್ದವವು ನಲಿವಿನಲಿ ತಲೆದೂಗಿ.

ಪಕ್ಕದ ನೀರ ಅಲೆಗಳೂ ಕುಣಿಯುತಿದ್ದವು; ಆದರೆ
ಹೂಗಳು ಹಿಂದಿಕ್ಕಿದ್ದವು ಮಿಂಚುವಲೆಗಳ ಹರ್ಷದಿಂದಲಿ:-
ಕವಿಯೊಬ್ಬಗೆ ಸಂತಸವಲ್ಲದೆ ಮತ್ತೇನು
ಉಲ್ಲಸಿತರ ಇಂತಹ ಸಂಗದಲ್ಲಿ:
ನೋಡಿದೆ—ನೋಡುತ್ತಲೇ ಇದ್ದೆ—ಒಂದಿಷ್ಟೂ ಯೋಚಿಸದೆ
ಏನು ಸಿರಿಯ ತಂದಿಹುದು ಹೂಗಳೀ ಆಟ ನನಗೆಂದು:

ಏಕೆಂದರೆ ಮಂಚದ ಮೇಲೆ ಸುಮ್ಮನೆಯೋ,
ಮನನ ಮಾಡುತ್ತಲೋ ಮಲಗಿದಾಗಲೆಲ್ಲ
ನನ್ನೊಳಗಣ್ಣ ಹೊಳಪಿಸುವವೀ ಹೂಗಳು
ಅದುವೇ ನನಗೆ ಏಕಾಂತದ ಪರಮಾನಂದ,
ಮತ್ತೆ ನನ್ನ ಹೃದಯ ಹರುಷದಿಂದ ತುಂಬಿ,
ಕುಣಿಯುವುದು ಹಳದೀ ಹೂಗಳೊಟ್ಟಿಗೆ.


(ವಿಲಿಯಂ ವರ್ಡ್ಸವರ್ತ, ೧೮೧೫)

ಅನುವಾದ: ಮುರಳಿ ಹತ್ವಾರ , ಚಿತ್ರ ಕೃಪೆ : ಗೂಗಲ್ ಮತ್ತು ಲೇಖಕರು

 

ಈ ಹಿಂದೆ ಶ್ರೀವತ್ಸ ದೇಸಾಯಿ ಮತ್ತು ವಿನತೆ ಶರ್ಮ ಅವರು ಇದೇ ಕವಿತೆಯ ಬಗ್ಗೆ ಬರೆದಿದ್ದು, ಹೆಚ್ಚು ಮಾಹಿತಿಗಳನ್ನು ಒಳಗೊಂಡಿವೆ. ಈ ಕೆಳಗಿನ ಸಂಪರ್ಕ ಕೊಂಡಿಯನ್ನು ಬಳಸಿ

https://wordpress.com/post/anivaasi.com/1357

https://wordpress.com/post/anivaasi.com/5573