ಸನ್ಮಿತ್ರ ಓದುಗರೇ !!!!
ಈ ವಾರದ ಸಂಚಿಕೆಯಲ್ಲಿ ಒಂದು ವಿಶೇಷ ಪ್ರೇಮ ಪ್ರಸಂಗ ಕವನ ‘ ಈ ಪ್ರೇಮ ಸಂಭಾಷಣೆ ‘ಎಂಬ ಶೀರ್ಷಿಕೆಯಲ್ಲಿ ಡಾ।। ದಾಕ್ಷಾಯಿಣಿ ಗೌಡ ಅವರಿಂದ ಹಾಗು ಹಸಿರು ಉಸಿರು ಸರಣಿಯಲ್ಲಿ ವಿಜಯನರಸಿಂಹ ಅವರ ಗೃಹದೋಟದಲ್ಲಿ ಅರಳಿದ ಗುಲಾಬಿಯ ‘ಜೀವಕಳೆ’ ಎಂಬ ಶೀರ್ಷಿಕೆಯಲ್ಲಿ ಮಗದೊಂದು ಕವನ ನಿಮ್ಮ ಮುಂದೆ. ಓದಿ ಪ್ರತಿಕ್ರಿಯಿಸಿ. -ಸವಿ.ಸಂ
ನನ್ನ ಮದುವೆಯಾದ ಹೊಸತರಲ್ಲಿ, ನನ್ನ ಅತ್ತೆಯ ಮನೆಗೆ ಭೇಟಿಕೊಟ್ಟಾಗಲೆಲ್ಲ, ಅಜ್ಜ ಅಜ್ಜಿಯರ ಈ ಹೊಸಬಗೆಯ ಜಗಳವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದೆ. ಅವರ ಮೊಮ್ಮಕ್ಕಳಿಗೆ ಇದು ಹೊಸದಾಗಿರಲಿಲ್ಲ, ಹಾಗಾಗಿ ಅವರುಗಳು,
ಇವರಿಬ್ಬರ ಕಲಹವನ್ನ ಉದಾಸೀನ ಮಾಡುತ್ತಿದ್ದರು ಅಥವಾ ಮಾಡಿ ತಮಾಷೆ ಮಾಡಿ ನಗುತ್ತಿದ್ದರು.
ಅವರ ಗೇಲಿಗೆ ವಾಗಲೂ ಗುರಿಯಾಗುತ್ತಿದ್ದುದು ಅಜ್ಜನೇ ಹೊರತು ಅಜ್ಜಿಯಲ್ಲ. ನಾನು ಸದಾ ಅಜ್ಜನ ಪರವಹಿಸಿ, ಅಜ್ಜಿಯ ಸಿಡಿಮಿಡಿ ಸ್ವಭಾವನ್ನು ಖಂಡಿಸುತ್ತಿದ್ದೆ.
ಪ್ರೀತಿಗೆ ಹಲವು ಮುಖ. ಬಾರಿ ಬಾರಿಗೆ ” ಲವ್ ಯೂ” ಎಂದು ಮುತ್ತು ಕೊಡುವುದು ಪಾಶ್ಚಿಮಾತ್ಯರ ರೀತಿ. ಕುಂಟುಂಬದ ಮುಂದೆ ಸಹ ಪತ್ನಿ/ ಪತಿಯ ಬಗೆಗಿನ ಪ್ರೇಮವನ್ನು ವ್ಯಕ್ತಪಡಿಸಲು ಸಂಕೋಚಿಸುವುದು ನಮ್ಮ ಹಿರಿಯರ ಪೀಳಿಗೆಯ ಪರಿಯಾಗಿತ್ತು. ಅಜ್ಜ ಅಜ್ಜಿಯರ ಈ ವಿಚಿತ್ರ, ದಿನನಿತ್ಯದ ಕಲಹದ ಹಿಂದಿರುವ ಕಾಳಜಿ, ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ನನಗೆ ಕೆಲ ವರ್ಷಗಳೇ ಬೇಕಾದವು. ಈ ಹೊಸ ರೀತಿಯ, ನಿಜಕ್ಕೂ ನಡೆಯುತ್ತಿದ್ದ ಈ ಪ್ರೇಮ ಸಂಭಾಷಣೆಯನ್ನು ನಿಮ್ಮೊಡನೆ ಇಂದು ಹಂಚಿಕೊಳ್ಳುತ್ತಿದ್ದೇನೆ.
💘 ಈ ಪ್ರೇಮ ಸಂಭಾಷಣೆ 💘
ನಮ್ಮ ಮದುವೆಯಾಗಿ ಅಯಿತು ಅರವತ್ತು ವರುಷ,
ಆರಾಮಕುರ್ಚಿ ತೂಗುತ್ತ, ನಗುತ್ತ ನುಡಿದ ವೃದ್ಧ ಪುರುಷ.
ಮೊಮ್ಮಕ್ಕಳು, ಮರಿಮಕ್ಕಳು, ಬದುಕೆಲ್ಲ ಹರುಷ,
ನಮಗಿನ್ನೇನು ಬೇಕು, ನಮ್ಮದಾಗಿರೆ ಆರೋಗ್ಯ, ಆಯುಷ್ಯ.
ವರ್ಷಗಳು ಉರುಳುತ್ತವೆ ತಂತಾನೆ, ಬೇಕಿಲ್ಲದಿದ್ದರೂ ಮುದುಕ,
ದಿನಾ ಸಂಜೆ ಅದ ಮತ್ತೆ, ಮತ್ತೆ ವದರುತ್ತೀಯ ಯಾಕ?
ಸುಕ್ಕುಗಟ್ಟಿದ, ಲಕ್ಷಣದ, ಬಿಳಿಮೊಗವ ತಿರುಗಿಸಿದಳಾಕೆ,
ತುಟಿಯಂಚಿನಲ್ಲಿ ಹುದುಗಿಸಿ ಕಿರುನಗೆಯ ಪುಳಕ.
ಬಿಳಿಧೋತರ ಕೊಡವಿ, ಊರುಗೋಲ ಅದುಮಿ ಎದ್ದು,
ಪೊಟ್ಟಣದಲ್ಲಿ ಕಟ್ಟಿದ್ದ ಬಿಸಿಬೋಂಡ ಮೆಲ್ಲಗೆ ಮೆದ್ದು.
ಅಜ್ಜನುಲಿದ, “ಹಿಡಿ, ಹಿಡಿ ಬಾಯಿಗೆ ಹಿತ, ನೀನೂ ತಗೋ ಸ್ವಲ್ಪ,
ಮರೆಯದೆ ಕುಡಿ ಹಾರ್ಲಿಕ್ಸನ್ನು, ನೀನು ತಿನ್ನುವುದು ಅಲ್ಪ.”
ಇದಕ್ಕಾಗಿ ಹೋದೆಯಾ ನೀನು ಸಂಜೆಯ ಸಂತೆಗೆ,
ವಾಹನಗಳ, ಎಳುಬೀಳುಗಳ ಭಯವಿಲ್ಲವೆ ನಿನಗೆ.
ನಿನ್ನ ಒಳಿತಿನ ಬಗೆಗೆ ಸದಾ ಚಿಂತೆ ನನಗೆ
ದೂಡುವೆ ಬಹುಬೇಗ ನನ್ನ ನೀ ಚಿತೆಗೆ.
ವಾರಕ್ಕೆರಡು ಬಾರಿಯಾದರೂ ನಡೆವ ಈ ಕದನ,
ರಾಜಿಯಾಗದ, ಮುಗಿಯದ ವಿಚಿತ್ರ ಕವನ.
ಅಜ್ಜ ಅಜ್ಜಿಯ ಜೀವನದ ಈ ಪ್ರಯಾಣ,
ಮೊಮ್ಮಕ್ಕಳಿಗಿದು ಮುಗಿಯದ ಪುರಾಣ.
ಆಳ ಅಂತ್ಯವಿಲ್ಲದ ಈ ಪ್ರೀತಿ,
ಕವಿ ಲೇಖನಿಗರಿವಿಲ್ಲಇದರ ರೀತಿ.
ಕಷ್ಟಸುಖದಲ್ಲಿ ಸಾಗಿ, ಮಾಗಿಬಂದ ಈ ಪ್ರೇಮ,
ಇದಕ್ಕಿಲ್ಲ ಹೋಲಿಕೆ, ಈ ಪ್ರೇಮ ಅನುಪಮ.
–ಡಾ. ದಾಕ್ಷಾಯಿಣಿ ಗೌಡ
🌹 🌹 🌹 🌹 🌹 🌹 🌹 🌹 🌹 🌹 🌹 🌹 🌹 🌹 🌹 🌹 🌹 🌹 🌹

ಜೀವ ಕಳೆ
ಮೈ ತುಂಬಿ ಅರಳಿವೆ ಇಲ್ಲಿ ಒಂದೊಂದು ಗುಲಾಬಿ
ಕಣ್ ತುಂಬಲು ನಡೆಸಿವೆ ಒಂದೊಂದು ದಳವೂ ಲಾಬಿ
ಮೊಗ್ಗಲಿ ಕಂಡರೂ ಕಾಣದ ಸಣ್ಣ ಹರಳುಗಳಂತೆ
ಮತ್ತೆ ಬೆರೆತ ಕೆಂಪು ಬಣ್ಣದೋಕುಳಿಯಂತೆ
ದಳಗಳು ಬಲಿತಂತೆ ಬಣ್ಣ ಬದಲಿಸುತ ಬೆಳೆವುದು
ಸುಂದರದ ಹಂದರವದು ಮನಸನು ಸೆಳೆವುದು
ಒಂದೇ ಗಿಡದಲಿ ಕಂಡಂತೆ ಸುಮ ವನವನು
ಸವಿದಿದೆ ಮನಸು ಅಮೃತದ ಒಂದೊಂದು ಹನಿಯನು
ಬಣ್ಣಗಳ ಮೆರುಗು ನೋಡುವ ಕಣ್ಣು ಧನ್ಯವೋ
ಮೆರುಗನು ಸವಿದು ಮೈ ಮರೆವ ಮನಸು ಧನ್ಯವೋ
ಗಿಡಗಳು ಮಾತನಾಡವು ಎಂಬುದನು ಬಲ್ಲಿರಿ
ಹೂಗಳ ನಗುವಿಗೆ ನಮ್ಮ ಕಣ್ಗಳು ಕಿವಯಾದವು ಅರಿಯಿರಿ
ಧನ್ಯವಾದಗಳನಿಲ್ಲಿ ಸಲ್ಲಿಸುವುದು ಹೇಳಿ ಯಾರಿಗೋ
ಮಾಲೀಕರಿಗೋ, ಮೇಲೆ ಮಣ್ಣಿಗೋ, ಒಳಗೆ ಬೇರಿಗೋ
ಜೀವ ಕಳೆಯಿಲ್ಲಿ ಎದುರಿಗಿದೆ, ಮರೆ ಮಾಚಿದೆ
ಮುಳ್ಳುಗಳ
ಅಂತೆಯೇ ನಮ್ಮ ಜೀವನವಿರಬೇಕು ಸುಖಿಸುತ
ಮರೆ ಮಾಚುತ ಕಹಿಗಳ
–ವಿಜಯನರಸಿಂಹ






