ವೆಸ್ಟನ್ ಬಿರ್ಟ್ ಅರ್ಬೊರೇಟಂ – ರಜನಿ ರಾಜು

ಪ್ರಿಯ ಓದುಗರೇ !!!
ವಾರದ ಸಾಪ್ತಾಹಿಕ ಸಂಚಿಕೆಯಲ್ಲಿ ನಮ್ಮ ಅನಿವಾಸಿ ತಂಗುದಾಣಕ್ಕೆ ನೂತನ ಸೇರ್ಪಡಿತ ಸದಸ್ಯೆ , ಬೇಸಿಂಗ್ ಸ್ಟೋಕ್ ನಿವಾಸಿಯಾದ ರಜನಿ ರಾಜು ರವರು ಯುನೈಟೆಡ್ ಕಿಂಗ್ಡಮ್ ನಲ್ಲಿ ಶರತ್ ಋತುವಿನ ಪ್ರಾಕೃತಿಕ ವಿಸ್ಮಯವನ್ನು ‘ವೆಸ್ಟನ್ ಬಿರ್ಟ್ ಅರ್ಬೊರೇಟಂ’ ಎಂಬ ಶೀರ್ಷಿಕೆಯಲ್ಲಿ ಕೋಟ್ಸ್ ವೊಲ್ಡ್ಸ್ ನಲ್ಲಿರುವ ಈ ವಿಸ್ಮಯ ತಾಣದ ಕಡೆಗೆ ತಮ್ಮ ಲೇಖನದಲ್ಲಿ ಕೊಂಡೊಯ್ದಿದ್ದಾರೆ . ಓದಿ ಪ್ರತಿಕ್ರಿಯಿಸಿ !! – ಸವಿ. ಸಂ

ಲೇಖಕಿಯ ಕಿರು ಪರಿಚಯ

ರಜನಿ ರಾಜು ರವರು ಹುಟ್ಟಿದ್ದು, ಶಿಕ್ಷಣಾಭ್ಯಾಸ ಮುಗಿಸಿದ್ದು ಬೆಂಗಳೂರಿನಲ್ಲಿ . ನೌಕರಿಯ ಸಲುವಾಗಿ ಯುನೈಟೆಡ್ ಕಿಂಗ್ಡಮ್ ಗೆ ಬಂದು ಹತ್ತು ವರುಷಗಳಾಗಿ ಪ್ರಸ್ತುತ ಬೇಸಿಂಗ್ಸ್ಟಾಕ್ ನಿವಾಸಿ.
B.E. ಎಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ಸ್ ಪದವೀಧರೆ , ಖಾಸಗಿ ಕಂಪನಿ ಒಂದರಲ್ಲಿ ಸಾಫ್ಟ್ವೇರ್ ಎಂಜಿನೀರ್ ಆಗಿ ನೌಕರಿ ಮಾಡುತ್ತಿದ್ದಾರೆ . ಕನ್ನಡಿಗರು ಯು ಕೆ ಕನ್ನಡ ಕಲಿ ಶಿಬಿರದಲ್ಲಿ ಶಿಕ್ಷಕಿಯಾಗಿದ್ದಾರೆ.  
ಕನ್ನಡದ ಖ್ಯಾತ ಬರಹಗಾರರಾದ ಶ್ರೀ ಬಿ ಎಂ ಶ್ರೀ ಅವರ ವಂಶದ ದೂರದ ಕುಡಿ ಇವರು ಎಂಬುದು ಹೇಳಲು ಹೆಮ್ಮೆಯ ವಿಷಯ.
ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು. ಪ್ರವಾಸಕ್ಕೆ ಹೋಗುವುದು, ರುಚಿಯಾದ ಅಡಿಗೆ ಮಾಡುವುದು ಇಷ್ಟವಾದ ಚಟುವಟಿಕೆಗಳು.

ವೆಸ್ಟನ್ ಬಿರ್ಟ್ ಅರ್ಬೊರೇಟಂ

ಬೇಸಿಗೆ ಮುಗಿಯಿತೆಂದರೆ ಸಾಕು ನಾವೆಲ್ಲರು ಅಯ್ಯಯ್ಯೋ ರಜ ದಿನಗಳು ಹೊರಟೆ ಹೋದವಲ್ಲ, ಇನ್ನು ಏನಿದ್ದರೂ ಬರಿ ಮಳೆ ಚಳಿ ಎಂದು ಆಕ್ರಂದಿಸುತ್ತೇವೆ. ಆದರೆ ನಮ್ಮ ಪರಿಸರ ಎಂತಹ ಅದ್ಭುತವೆಂದರೆ ಪ್ರತಿ ಒಂದು ಋತುವಿನಲ್ಲೂ ಒಂದೊಡನು ವಿಸ್ಮಯವನ್ನು ನಮಗೆ ಕೊಡುಗೆಯಾಗಿ ನೀಡುತ್ತದೆ.  ಬೇಸಿಗೆಗೂ ಚಳಿಗಾಲಕ್ಕೂ ಇರುವ ನಡುವಿನ ಋತುವಿನ ಹೆಸರು ಶರತ್ಕಾಲ. ಪಾಶ್ಚತ್ಯ ದೇಶಗಳಲ್ಲಿ ಇದನ್ನು autumn, ಇಲ್ಲವೇ fall, ಎಂದು ಸಹ ಕರೆಯುತ್ತಾರೆ.
ವೈಜ್ನ್ಯಾನಿಕವಾಗಿ ನಮಗೆ ತಿಳಿದಿರುವ ಹಾಗೆ ಈ ಋತುವಿನಲ್ಲಿ ಗಿಡ ಮರಗಳೆಲ್ಲವೂ ತಮ್ಮ ಎಲೆಗಳನ್ನು ಉದುರಿಸಲು ಸಿದ್ಧವಾಗುತ್ತವೆ ಏಕೆಂದರೆ ಚಳಿಗಾಲದಲ್ಲಿ ನೀರಿನ ಅಭಾವ ಇರುವುದರಿಂದ ಮತ್ತು ಮಂಜು ಬೀಳುವ ಕಾರಣ ಭೂಮಿಯಲ್ಲಿ ನೀರಿನ ಅಂಶವನ್ನು ಹೀರಿಕೊಳ್ಳಲಾಗದೆ ಇರುವುದರಿಂದ ಜಡಗಳಲ್ಲಿ ಅಂತರ್ಜಲವನ್ನು ಹಿಡಿದಿಟ್ಟು ಮೇಲಿನ ಎಲೆಗಳನ್ನು ಉದುರಿಸಿ ಚಳಿಗಾಲದಲ್ಲಿ ತಮ್ಮ ರಕ್ಷಣೆ ಸ್ವತಃ ಮಾಡಿಕೊಳ್ಳುತ್ತವೆ. ನಿಜಕ್ಕೂ ನಮ್ಮ ಪ್ರಕೃತಿಯ ವಿಸ್ಮಯಗಳು ಒಂದೇ ಎರಡೇ.
ಮನುಷ್ಯರು ಹೇಗೆ ತಮ್ಮ ಜೀವನಾವಧಿಯಲ್ಲಿ ಮಗುವಿನಿಂದ ಮುಪ್ಪಿನವರೆಗೂ ದೈಹಿಕವಾಗಿ ಬದಲಾವಣೆಗಳನ್ನು ಕಾಣುತ್ತಾರೋ ಅದೇ ರೀತಿ ಎಲೆಗಳು ಸಹ ಉದುರುವುದರ ಮುನ್ನ ಎಳೆಯ ವಯಸ್ಸಿನ ತಮ್ಮ ಹಚ್ಚ ಹಸಿರನ್ನು ಕಳೆದುಕೊಂಡು ಬರುತ್ತಾ ಬರುತ್ತಾ ಕೆಂಪು, ನಸುಗೆಂಪು, ಹಳದಿ ಮತ್ತು ಕಡೆಯದಾಗಿ ಕಂದು  ಬಣ್ಣಕ್ಕೆ ತಿರುಗಿ ಉದುರಿ ಹೋಗುತ್ತವೆ.
ಈ ಬಣ್ಣ ಬದಲಾಯಿಸುವ ವೃಕ್ಷಗಳಲ್ಲಿ ಮೇಪಲ್ ಮರಗಳು ಅತ್ಯಂತ ಪ್ರಸಿದ್ಧ. ತ್ರಿಕೋನಾಕಾರದ ಎಲೆಗಳು ರಂಗುಗಳನ್ನು ಬದಲಾಯಿಸುವುದನ್ನು ನೋಡಲು ಅತ್ಯಂತ ಸುಂದರ. ಈ ರೀತಿ ಒಂದೊಂದು ಮರವು ಒಂದೊಂದು ಹಂತದಲ್ಲಿ ತನ್ನ ಎಲೆಗಳಲ್ಲಿ  ಬಣ್ಣಗಳನ್ನು ಬಯಲು ಮಾಡಿದಾಗ ಆ ದೃಶ್ಯ ನೋಡುವುದಕ್ಕೆ ರಮ್ಯ ಮನೋಹರ.


ಈ ಸುಂದರ ದೃಶ್ಯವು ಕೇವಲ ಪಾಶ್ಚಿಮಾತ್ಯ ದೇಶಗಳಲ್ಲಿ ಸಿಗುವುದರಿಂದ ಪ್ರಪಂಚದ ಹಲವೆಡೆ ಜನರು ಇದನ್ನು ಅನುಭವಿಸಲು ಬೇರೆ ದೇಶಗಳಿಗೆ ಹೋಗುತ್ತಾರೆ.
ಈ ಮಾಯೆಯನ್ನು ಯು ಕೆ ಯ ಜನಗಳು ಬಹಳ ದೂರವೆಲ್ಲೂ ಹೋಗದೆ  ಇಲ್ಲೇ ಇಂಗ್ಲೆಂಡ್ ನಲ್ಲಿರುವ ವೆಸ್ಟನ್ ಬಿರ್ಟ್ ಅರ್ಬೊರೇಟಂ ನಲ್ಲಿ ಕಾಣಬಹುದು. ಅರ್ಬೊರೇಟಂ ಎಂದರೆ ಸಸ್ಯಶಾಸ್ತ್ರೀಯವಾಗಿ ಮರಗಿಡಗಳನ್ನು ನೋಡಿಕೊಳ್ಳುವ ಒಂದು ಜಾಗ.
 ವೆಸ್ಟನ್ ಬಿರ್ಟ್ ಅರ್ಬೊರೇಟಂ ಇಂಗ್ಲೆಂಡಿನ ಕೋಟ್ಸ್ ವೊಲ್ಡ್ಸ್ ಎಂಬ ಪ್ರದೇಶದಲ್ಲಿ ನೆಲೆಸಿದೆ. ಸೆಪ್ಟೆಂಬರ್ ತಿಂಗಳಿನಿಂದ ನವೆಂಬರ್ ತಿಂಗಳ ವರೆಗೂ ಶರತ್ಕಾಲದ ಆಗಮನದ ಜೊತೆಗೆ ಇಲ್ಲಿನ ಇಡೀ ಜಾಗವು ಪ್ರಾಕೃತಿಕ ನರ್ತನೆ ಮಾಡುತ್ತದೆ. ಇದು ಎಷ್ಟು ಸುಂದರವಾಗಿರುತ್ತದೆಯೆಂದರೆ ನಾವು ಯಾವುದು ಒಂದು ಮಾಯಾಲೋಕಕ್ಕೆ ಸಾಗಿದ್ದವೇನೋ ಎಂಬಷ್ಟು ವಿಚಿತ್ರ, ವಿಸ್ಮಯ.
ಒಂದು ದಿನದ ಮಟ್ಟಿಗೆ ಹೋಗಬಹುದಾದ ಇಲ್ಲಿಗೆ ಲಂಡನ್ ನಿಂದ ನೇರ ರೈಲು ಗಳು ಓಡಾಡುತ್ತವೆ. ಹಾಗೆಯೇ ಕಾರಿನಲ್ಲಿ ಹೋಗುವವರು ಕೂಡ ಸುಲಭವಾಗಿ ಎಲ್ಲಿಂದ ಬೇಕಾದರೂ ಒಂದೆರಡು ತಾಸುಗಳಲ್ಲಿ ಇಲ್ಲಿಗೆ ಬಂದು ಸೇರಬಹುದು. ಇಲ್ಲಿಗೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳುಗಳಲ್ಲಿ ಹೋಗುವುದು ಬಹಳ ಜನಪ್ರಿಯ. ಅರ್ಬೊರೇಟಂಗೆ ಬೇರೆ ಮಾಸಗಳಲ್ಲೂ ಕೂಡ ಹೋಗಬಹುದು ಆದರೆ ಬೇರೆ ಬೇರೆ ಋತುಗಳಲ್ಲಿ ಬೇರೆ ಬೇರೆ ತರಹದ ಸಸ್ಯವರ್ಗಗಳನ್ನು ನೋಡಬಹುದು ಇಲ್ಲವೇ ಒಂದು ಶಾಂತ ವಾತಾವರಣದ ಅನುಭವವನ್ನು ಪಡೆದುಕೊಂಡು ಬರಬಹುದು.  ಇಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೂ ಎಲ್ಲರೂ ಅಡ್ಡಾಡಿ ಆನಂದಿಸಬಹುದು.
 ಅರ್ಬೊರೇಟಂನನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ, ಒಂದು ಕೆಂಪು ಮಾರ್ಗ ಮತ್ತೊಂದು ಪರ್ಪಲ್ ಮಾರ್ಗ. ಎರಡರಲ್ಲೂ ಅವುಗಳದ್ದೇ ಆದ ವಿಶೇಷಗಳಿವೆ. Red. route. ನಲ್ಲಿ Acer.Glade. ಎಂಬ ಮೇಪಲ್ ಮರಗಳ ಸಂಗ್ರಹವಿದೆ. ಈ ಮರಗಳು ನಾನಾ ತರಹದ ಬಣ್ಣಗಳನ್ನು ಕಾಣಿಸುವುದನ್ನು ನೋಡುವುದು ಕಣ್ಣಿಗೆ ಹಬ್ಬ.
Purple. route. ಸ್ವಲ್ಪ ಉದ್ದವಾದ ಮಾರ್ಗವಾಗಿದ್ದು ಇಲ್ಲಿನ ವಿಶೇಷತೆ ಜಪಾನೀಸ್ ಮೇಪಲ್ ಟ್ರೀಸ್. ಈ ಮೇಪಲ್ ವೃಕ್ಷಗಳು ಬಹಳ ಗಿಡ್ಡ ಮತ್ತು ದಟ್ಟವಾಗಿದ್ದು ಬಣ್ಣಗಳ ಪ್ರದರ್ಶನ್ನಕ್ಕೇನು ಕೊರತೆ ಇರುವುದಿಲ್ಲ.
ಅಲ್ಲೇ ಅತಿಥಿ ಕೇಂದ್ರದಲ್ಲಿ ಒಂದು ಮ್ಯಾಪ್ ಪಡೆದು ಅದನ್ನು ಹಿಡಿದು ಶುರುವಿನಿಂದ ಕೊನೆಯವರೆಗೂ ನಡೆದರೂ ಸಂಪೂರ್ಣ ಅರ್ಬೊರೇಟಂನನ್ನು ಆರಾಮಾಗಿ ಒಂದು 5-6 ಘಂಟೆಗಳಲ್ಲಿ ನೋಡಿ ಮುಗಿಸಬಹುದು.ನಡೆದು ದಣಿವಾದರೆ ಅಲ್ಲಲ್ಲಿ ಇರುವ ಕೆಫೆಟೇರಿಯ ಗಳಲ್ಲಿ ಬಿಸಿ ಚಹಾ ಕಾಫಿ ಗಳು ಮತ್ತು ಉಪಹಾರಗಳನ್ನು ಸೇವಿಸಿ ಸುಧಾರಿಸಕೊಳ್ಳಬಹುದು.
ಒಟ್ಟಾರೆ ನೀವು ಪ್ರಕೃತಿ ಪ್ರೇಮಿಯಾಗಿದ್ದರು ಸರಿಯೇ ಇಲ್ಲವೇ ನಿಸರ್ಗದ  ಸಂಗವನ್ನು ಹೆಚ್ಚಾಗಿ ಇಷ್ಟ ಪಡದವರಾಗಿದ್ದರು ಸರಿಯೇ ವೆಸ್ಟನ್ ಬಿರ್ಟ್ ಅರ್ಬೊರೇಟಂ ತನ್ನ ಸ್ಥಿರ, ಶಾಂತ ಮತ್ತು ವೈವಿಧ್ಯಮಯ ವಾತಾವರಣದಿಂದ ಎಲ್ಲರನ್ನು ಆಕರ್ಷಿಸಿ ಕೈ ಬೀಸಿ ಕರೆಯುತ್ತದೆ.

-ರಜನಿ ರಾಜು.

ಲೇಕ್ ಡಿಸ್ಟ್ರಿಕ್ಟಿನ ಶಿಖರಗಳಲ್ಲಿ ( ಭಾಗ – ೨)-ಡಾ|| ಜಿ. ಎಸ್. ಶಿವಪ್ರಸಾದ್

ಪ್ರಿಯ ಓದುಗರೇ !!
ಕಳೆದ ವಾರ ಲೇಕ್ ಡಿಸ್ಟ್ರಿಕ್ಟಿನ ಶಿಖರಗಳಲ್ಲಿ ( ಭಾಗ
೧) ದೀರ್ಘ ಲೇಖನದಲ್ಲಿ ಶಿವಪ್ರಸಾದ್ ರವರು ಈ ಪ್ರವಾಸೋದ್ಯಮದ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿ ನಿಮ್ಮ ಮುಂದಿಟ್ಟಿದ್ದರು. ಈ ವಾರದ ಸಂಚಿಕೆಯಲ್ಲಿ ಇದೇ ಶೀರ್ಷಿಕೆಯ ಎರಡನೆಯ ಭಾಗದ ಸುದೀರ್ಘ ಲೇಖನದಲ್ಲಿ ಈ ರಮ್ಯತಾಣದ ಮಗದೊಂದು ಮೋಹಕ, ವೈಚಾರಿಕ ಪ್ರಸ್ತುತಿ ಹಾಗು ಹಸಿರು ಉಸಿರು ಸರಣಿಯಲ್ಲಿ ಶಿವಪ್ರಸಾದ್ ಅವರ ಸ್ವಗೃಹದ ಪೋಷಣೆಯ ಹೂದೋಟದ ಚಿತ್ರಗಳು ನಿಮ್ಮ ಮುಂದೆ. ಓದಿ ಪ್ರತಿಕ್ರಿಯಿಸಿ !! -ಸವಿ.ಸಂ

ಸ್ಕಾಫೆಲ್ ಪೈಕ್ ಇಂಗ್ಲೆಂಡಿನ ಅತಿ ಎತ್ತರದ ಕಡಿದಾದ ಪರ್ವತವಾಗಿದ್ದು ಅದರ ಶಿಖರವನ್ನು ಸಾಧ್ಯವಾದಷ್ಟು
ಎತ್ತರಕ್ಕೆ ಹತ್ತುವುದು ನನ್ನ ಹಂಬಲವಾಗಿತ್ತು. ಹೀಗಾಗಿ ಒಂದು ದಿನ ಬೆಳಗ್ಗೆ ಅಂಬಲ್ ಸೈಡಿನಿಂದ ಸ್ಕಾಫೆಲ್ ಬೆಟ್ಟ
ತಲುಪಲು ನಿರ್ಧರಿಸಿದೆವು. ನಾವು ಉಳಿದಿದ್ದ ಅಂಬಲ್ ಸೈಡಿನಿಂದ ಸ್ಕಾಫೆಲ್ ಬೆಟ್ಟ ತಲುಪಲು ಹತ್ತಿರದ ದಾರಿ
ರೈನೋಸ್ ಮತ್ತು ಹಾರ್ಡ್ನಾಟ್ ಪಾಸ್ ಗಳ ಮೂಲಕವೇ ಸಾಧ್ಯ ಇಲ್ಲದಿದ್ದಲ್ಲಿ ಸುತ್ತಿ ಬಳಸಿ ತೆರಳಬೇಕು. ಈಗಾಗಲೇ
ಹಾನಿಸ್ಟರ್ ಪಾಸಿನಲ್ಲಿ ಕಾರು ಓಡಿಸಿದ್ದ ನನಗೆ ಹಾರ್ಡ್ನಾಟ್ ಪಾಸ್ ದಾಟ ಬೇಕೆಂಬ ಹಂಬಲ ಹೆಚ್ಚಾಯಿತು. ಈ
ರಸ್ತೆಯಲ್ಲಿ ಕೆಲವು ಮೈಲಿಗಳನ್ನು ಕ್ರಯಿಸಿ ಮುಂದಕ್ಕೆ ಹೋದಂತೆ ಇಲ್ಲಿಯ ಇಳಿಜಾರು 33% ಇದ್ದು ಇಲ್ಲಿಯ ರಸ್ತೆ
ಸಿಂಗಲ್ ಲೇನ್ ಎಂಬುದು ಅರಿವಾಯಿತು. ನಮ್ಮ ದಾರಿಗೆ ಎದುರಾಗಿ ಇನ್ನೊಂದು ವಾಹನ ಬಂದರೆ ನಾವು ಅಥವಾ
ಅವರು ಸಮಜಾಯಿಸಿಕೊಂಡು ನಿಧಾನಿಸಿ, ಹಿಂದಕ್ಕೆ ರಿವರ್ಸ್ ಮಾಡಿ ಅಥವಾ ಮುಂದಕ್ಕೆ ಬದಿಯಲ್ಲಿ ನಿಂತು
ಕಾಯಬೇಕು. ಇದಷ್ಟೇ ಅಲ್ಲ, ಇಲ್ಲಿ ರಸ್ತೆ ಹಲವಾರು ಅಂಕು ಡೊಂಕಾದ ಹೇರ್ ಪಿನ್ ತಿರುವುಗಳಿಂದ ಕೂಡಿದೆ. ನನ್ನ
ಶ್ರೀಮತಿಗೆ ಟ್ರಾವೆಲ್ ಸಿಕ್ನೆಸ್ ಇರುವುದರಿಂದ ಇನ್ನು 25 ಮೈಲಿ ಮುಂದಕ್ಕೆ ಈ ಕಠಿಣ ರಸ್ತೆಯಲ್ಲಿ ಪ್ರಯಾಣ
ಮಾಡುವುದು ಅಸಾಧ್ಯವಾಗಿ ನಾವು ಹಿಂದಕ್ಕೆ ತಿರುಗುವುದು ಸೂಕ್ತವೆಂದು ನಿರ್ಧರಿಸಿದೆವು. ಸ್ಕಾಫೆಲ್ ಪೈಕ್
ಹತ್ತುವುದರ ಬದಲು ನಮಗೆ ಹತ್ತಿರದಲ್ಲೇ ಇದ್ದ ಗ್ರೇಟ್ ಲ್ಯಾ೦ಗ್ ಡೇಲ್ ವ್ಯಾಲಿಯ ಎತ್ತರದ ಹ್ಯಾರಿಸನ್ ಸ್ಟಿಕಲ್
ಹತ್ತುವ ನಿರ್ಧಾರಕ್ಕೆ ಬಂದೆವು. ಈ ಬೆಟ್ಟದ ಬುಡದಲ್ಲಿ ನ್ಯೂ ಡಂಜನ್ ಗಿಲ್ ಹೋಟೆಲ್ ಇದ್ದು ಇಲ್ಲಿ ಕಾರ್ ಪಾರ್ಕ್
ವ್ಯವಸ್ಥೆ ಇದೆ (ಈ ಸ್ಥಳವನ್ನು ತಲುಪಲು ಅಂಬಲ್ ಸೈಡಿನಿಂದ A 5343 ಹಿಡಿದು ಅಗಲವಾದ ರಸ್ತೆಯಲ್ಲಿ
ತಲುಪಬಹುದು ಸ್ಯಾಟ್ ನ್ಯಾವ್ ಕೊಡ್ LA22 9JX) ಇಲ್ಲೇ ಪಕ್ಕದಲ್ಲೇ ನ್ಯಾಷನಲ್ ಟ್ರಸ್ಟ್ ಕಾರ್ ಪಾರ್ಕ್ ಇದ್ದು
ಶೌಚಾಲಯ ಮತ್ತು ಕೆಫೆಗಳಿವೆ.

ನ್ಯೂ ಡಂಜನ್ ಗಿಲ್ ಹೋಟೆಲ್ ಬಳಿ ನನ್ನ ಶ್ರೀಮತಿ ಡಾ. ಪೂರ್ಣಿಮಾ.

ನಾವು ನ್ಯೂ ಡಂಜನ್ ಗಿಲ್ ಹೋಟೆಲ್ ಬಳಿ ಕಾರು ನಿಲ್ಲಿಸಿದಾಗ ಆಗಲೇ ಮಟ ಮಟ ಮಧ್ಯಾನ್ಹ ವಾಗಿತ್ತು. ನಮ್ಮ
ಬ್ಯಾಕ್ ಪ್ಯಾಕ್ ಏರಿಸಿ ವಾಕಿಂಗ್ ಪೋಲ್ ಹಿಡಿದು ಹುಮ್ಮಸ್ಸಿನಿಂದ ಬೆಟ್ಟವನ್ನು ಹತ್ತಲು ಶುರುಮಾಡಿದೆವು. ಹ್ಯಾರಿಸನ್
ಸ್ಟಿಕಲ್ ಬಹಳ ಕಡಿದಾದ ಬೆಟ್ಟ. ಬಹಳಷ್ಟು ಕಿರಿಯರು ನಮನ್ನು ದಾಟಿ ಸರಾಗವಾಗಿ ಹತ್ತುತ್ತಿದರು. ನಾವು ಅಲ್ಲಲ್ಲೇ
ಕುಳಿತು ನೆರಳು ಕಂಡಾಗ ವಿಶ್ರಮಿಸುತ್ತಾ ಹತ್ತುತ್ತಿದ್ದೆವು. ನಮಗೆ ನಮ್ಮ ವಯಸ್ಸಿನವರು ಹೆಚ್ಚಾಗಿ ಕಾಣ ಸಿಗದಿದ್ದು
ಆತಂಕ ಭಾವನೆಗಳನ್ನು ತಂದವು. ಅಷ್ಟೇ ಅಲ್ಲದೆ ಬುಡದಲ್ಲಿ ಪ್ರಕಟಿಸಿರುವ ಮಾಹಿತೆಯಂತೆ ಈ ಚಾರಣ
ಚಾಲೆಂಜಿಂಗ್ ಆದುದರಿಂದ ಇದಕ್ಕೆ ಕೈಹಾಕಿದ್ದು (ಕಾಲು ಹಾಕಿದ್ದು!) ಸಾಹಸವೇ ಸರಿ. ಡಂಜನ್ ಗಿಲ್ ಫೋರ್ಸ್ ಎಂಬ
ಸುಂದರ ಜಲಪಾತ, ಹಾಗೂ ಇನ್ನೂ ಮೇಲೆಕ್ಕೇರಿದರೆ ಸ್ಟಿಕಲ್ ಸರೋವರ ಸಿಗುವುದೆಂದು ಮತ್ತು ಮೇಲಿಂದ ಬಹಳ
ಸುಂದರ ನೋಟಗಳು ಸಿಗುವುದೆಂದು ಹತ್ತಿ ಇಳಿಯುತ್ತಿರುವವರಿಂದ ತಿಳಿಯಿತು. ಅವರು ನಮನ್ನು ಹುರಿದುಂಬಿಸಿ
ಆಸೆ ತೋರಿಸಿ ಕೆಳಗೆ ಇಳಿದು ಹೋಗುತ್ತಿದ್ದರು.
ನಾವು ಮೇಲೆ ಏರಿದಂತೆ ಸೂರ್ಯನ ಪ್ರಖರತೆ ಹೆಚ್ಚಾಯಿತು. ಬಿಸಿಲಿನಲ್ಲಿ ಹತ್ತುವುದು ಕಷ್ಟವೆನಿಸಿತು.
ಸಾಮಾನ್ಯವಾಗಿ ಮಳೆ ಮೋಡಗಳಿಂದ ಆವೃತ್ತವಾಗಿರುವ ಇಲ್ಲಿಯ ಪರಿಸರ ಇಂದು ಧಗೆಯಿಂದ ಕುದಿಯುತ್ತಿತ್ತು.
ನಾವು ಬ್ಯಾಕ್ ಪ್ಯಾಕಿನಲ್ಲಿ ಇಟ್ಟುಕೊಂಡಿದ್ದ ನೀರು ಕೆಲವೇ ಕ್ಷಣಗಳಲ್ಲಿ ನಮ್ಮೊಳಗಿಳಿದು ಖಾಲಿಯಾಯಿತು. ಒಂದು
ಹಂತದ ನಂತರ ಬೆಟ್ಟಗಳ ಮೇಲೆ ಮರಗಳು ಬೆಳೆಯುವುದಿಲ್ಲ. ಹೀಗಾಗಿ ನೆರಳಿನಾಸರೆ ಕಾಣದಾಯಿತು. ಅಂತೂ
ಇಂತೂ ಕಷ್ಟ ಪಟ್ಟು ಡಂಜನ್ ಗಿಲ್ ಫೋರ್ಸ್ ಎಂಬ ಜಲಪಾತದ ತಡಿಗೆ ತಲುಪಿದೆವು. ಈ ಜಲಪಾತ ತಲುಪಲು
ನಾವು ಒಂದು ಸಾವಿರಕ್ಕೂ ಹೆಚ್ಚಿನ ಅಡಿಗಳನ್ನೇರಿದ್ದೆವು. ನಾವು ನಿಂತ ಈ ಸ್ಥಳದಿಂದ ಕಣಿವೆಯ ನೋಟ
ಭವ್ಯವಾಗಿತ್ತು. ಕೆಳಗಿದ್ದ ಮನೆಗಳು, ರಸ್ತೆ ಮತ್ತು ಕಾರು ಚುಕ್ಕಿಗಳಂತ್ತಿದ್ದು ಆಟಿಕೆಯಂತೆ ತೋರುತ್ತಿದ್ದೆವು. ವರ್ಡ್ಸ್
ವರ್ಥ್ ಕವಿಯು ಡಂಜನ್ ಗಿಲ್ ಫೋರ್ಸ್ ಬಹಳ ಸುಂದರವಾದ ನೋಟವೆಂದು, ಈ ಜಲಪಾತದವನ್ನು ಸುತ್ತುವರಿದ
ಬಂಡೆಯನ್ನು ಆಕಾಶದಿಂದ ಬಿದ್ದ ಕಲ್ಲಿನ ರಾಶಿಗಳೆಂದು ಜಲಪಾತದ ತಳವನ್ನು ಕರಿಯ ಪಾತ್ರವೆಂದು ತನ್ನ ‘ದಿ ಐಡಲ್
ಶೆಫರ್ಡ್ ಬಾಯ್’ ಎಂಬ ಕವಿತೆಯಲ್ಲಿ ಪ್ರಸ್ತಾಪಿಸಿದ್ದಾನೆ. ಈ ಸುಂದರ ತಾಣದಲ್ಲಿ ಕೆಲಕಾಲ ವಿಶ್ರಮಿಸಿ ನಾವು ತಂದಿದ್ದ
ಸ್ಯಾಂಡ್ ವಿಚ್ ತಿಂದು ವಿಶ್ರಮಿಸಿದೆವು.

ಬೇಸಿಗೆಯ ಝಳಕ್ಕೆ ಸೊರಗಿದ್ದ ಜಲಪಾತ

ಇಲ್ಲಿಂದ ಸ್ಟಿಕಲ್ ಸರೋವರಕ್ಕೆ ಇನ್ನು ಐನೂರು ಅಡಿಗಳಷ್ಟು ಹತ್ತ ಬೇಕಿತ್ತು. ಹತ್ತುವಾಗ ಶಿಖರ ಇನ್ನು ಕೆಲವೇ
ಹೆಜ್ಜೆಗಳಲ್ಲಿ ಸಿಕ್ಕಿಬಿಡುತ್ತದೆ ಅನ್ನುವ ಭಾವನೆ ಮೂಡುವುದು ಸಹಜ. ಒಂದು ಹಂತಕ್ಕೆ ಹತ್ತಿದರೆ ಇನ್ನೊಂದು ಹಂತ
ನಮನ್ನು ಸೆಳೆಯುತ್ತದೆ, ಶಿಖರ ತಟಸ್ಥವಾಗಿ ನಿಂತು ನಮಗೆ ಸವಾಲನ್ನು ಒಡ್ಡುತ್ತದೆ. ಇದು
ಪರ್ವತಗಳ ಆರೋಹಣದಲ್ಲಿ ಆರೋಹಿಗಳು ಅನುಭವಿಸುವ ಭ್ರಮೆ ಎನ್ನ ಬಹುದು! ಇದು ಪರ್ವತಗಳ ಆಕರ್ಷಣೆಯೇ
ಅಥವಾ ಪರ್ವತಗಳನ್ನು ಹತ್ತಿ ಜಯಿಸಿ ಬಿಡುವ ನಮ್ಮ ಮಾನವ ಸಹಜ ಛಲವೇ ಎಂಬುದನ್ನು ನಿರ್ದಿಷ್ಟವಾಗಿ
ಬಿಡಿಸಿ ಹೇಳಲು ಸಾಧ್ಯವಿಲ್ಲ. ಆಂಗ್ಲ ಪರ್ವತಾ ರೋಹಿ ಜಾರ್ಜ್ ಮೇಲೊರಿ ಎವರೆಸ್ಟ್ ಬೆಟ್ಟ ಹತ್ತುವ ಕಾರ್ಯದಲ್ಲಿ
ತೊಡಗಿದ್ದಾಗ ಅವನನ್ನು ನೀನು ಎವರೆಸ್ಟ್ ಬೆಟ್ಟ ಏಕೆ ಹತ್ತುತ್ತಿದ್ದೀಯ? ಎಂದು ಕೇಳಿದಾಗ ಆ ಬೆಟ್ಟ ಅಲ್ಲಿರುವುದರಿಂದ
( Just because it is there) ಎಂದು ಉತ್ತರಿಸಿದ!

ಡಂಜನ್ ಗಿಲ್ ಜಲಪಾತ ತಾಣದಿಂದ ಲ್ಯಾಂಗ್ ಡೇಲ್ ಕಣಿವೆಯ ವಿಹಂಗಮ ನೋಟ

ನಾವು ತಲುಪಿದ ಸ್ಥಳದಿಂದ ಮುಂದಿನ ಏರು ಕಾದ ಕಲ್ಲು ಬಂಡೆಗಳ ಹಾದಿಯಾಗಿದ್ದು ಬಂಡೆಗಳೇ ಮೆಟ್ಟಲಾಗಿರುವಾಗ
ಈ ಬಿಸಿಲಿನ ಝಳದಲ್ಲಿ ಮುಂದಕ್ಕೆ ಹತ್ತುವುದು ಮೂರ್ಖತನವೆಂದು ನನ್ನ ಒಳ ಮನಸ್ಸು ಕೂಗಿ ಹೇಳುತಿತ್ತು. ಅಂದ
ಹಾಗೆ ದೈಹಿಕ ಸಾಮರ್ಥ್ಯವನ್ನು ನಿರ್ಲಕ್ಷಿಸಿ ಈ ಶಿಖರಗಳನ್ನು ಜಯಿಸಲು ಹೊರಟ ಕೆಲವರು ಬೆಟ್ಟದ ಮೇಲೆ
ಹೃದಯಾಘಾತವನ್ನು ಅನುಭವಿಸಿದ್ದು ಇನ್ನು ಕೆಲವರು ಜಾರಿ ಕಮರಿಗೆ ಬಿದ್ದದ್ದು, ಕೆಲವರು ತಪ್ಪು ಹೆಜ್ಜೆ ಇಟ್ಟು ಕಾಲು
ಮುರಿದುಕೊಂಡಿದ್ದು ಈ ವಿಚಾರಗಳ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ವರದಿಗಳಿದ್ದವು. ಈ ವಿಚಾರ ನಮ್ಮ ಅರಿವಿಗೆ
ಬಂದು ನಮ್ಮ ಇತಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಏರುವ ಆಸೆಯನ್ನು ಬಿಟ್ಟು ಹಿಂದಕ್ಕೆ ತಿರುಗುವುದು

ಒಳಿತೆಂದು ತೀರ್ಮಾನಿಸಿದೆವು. ಬೆಟ್ಟದಿಂದ ಕೆಳಗಿಳಿಯುವುದು ಮಂಡಿಗಳಿಗೆ ಪ್ರಯಾಸಕರ, ನಮ್ಮ ವಾಕಿಂಗ್ ಪೊಲ್
ಬಹಳಷ್ಟು ಪ್ರಯೋಜನಕ್ಕೆ ಬಂದಿತು. ಕೆಳಗಿಳಿದು ಅಲ್ಲಿಯ ಕೆಫೆಯಲ್ಲಿ ಕುಡಿದ ತಂಪು ಪಾನೀಯ ಅಮೃತವಾಗಿತ್ತು!
ಪರ್ವತದಲ್ಲಿ ಚಾರಣ ಮಾಡಲು ಮೋಡಕವಿದ ಅನುಕೂಲಕರ ಹವೆ ಅಗತ್ಯ, ಹಾಗೆಯೇ ನಾವು ತಾರುಣ್ಯದಲ್ಲಿ ಇದ್ದಿದ್ದರೆ
ಇದನ್ನು ಖಂಡಿತಾ ಹತ್ತುತ್ತಿದ್ದೆವು ಎಂಬ ಆಶ್ವಾಸನೆಯ ಮಾತುಗಳನ್ನಾಡುತ್ತಾ ಅಂಬಲ್ ಸೈಡ್ ತಲುಪಿದೆವು. ನಾವು
ಅಂದು ಮಾಡಿದ ಚಾರಣ ನಮಗೆ ಹೆಮ್ಮೆಯ ವಿಷಯವಾಗಿತ್ತು.
ಗ್ರಾಸ್ ಮಿಯರ್ ಕಣಿವೆ ಬಹಳ ಪ್ರಶಸ್ತವಾದ ಸ್ಥಳ. ಇಲ್ಲಿ ವರ್ಡ್ಸ್ ವರ್ಥರ ಸಮಾಧಿ ಇದ್ದು ಇಲ್ಲೂ ಸುತ್ತಲೂ ಬೆಟ್ಟಗಳು
ಹಬ್ಬಿವೆ. ಈ ಬೆಟ್ಟಗಳಲ್ಲಿ ಅಲ್ಕಾಕ್ ಟಾರ್ನ್ ಎಂಬ ಪುಟ್ಟ ಬೆಟ್ಟದ ಮೇಲಿನ ಸರೋವರವಿದ್ದು ಅಲ್ಲಿಗೆ ಚಾರಣಮಾಡಲು
ಪಾರಂಭಿಸಿದೆವು. ಗ್ರಾಸ್ ಮಿಯರ್ ಊರನ್ನು ಬಿಟ್ಟು ಅಲ್ಲಿಯ ರಹದಾರಿ A591 ಕಡೆಗೆ ಅರ್ಧಮೈಲಿ ನಡೆದರೆ ಅಲ್ಲಿ
ಪ್ರಖ್ಯಾತವಾದ ಸ್ವಾನ್ ಪಬ್ ಸಿಗುತ್ತದೆ. ಈ ಪಬ್ಬನ್ನು ಸುತ್ತುವರೆದು ಅದರ ಹಿಂಭಾಗದ ಟಾರ್ ರಸ್ತೆಯಲ್ಲಿ ಹತ್ತು ಹೆಜ್ಜೆ
ನಡೆದರೆ ಇದೇ ರಸ್ತೆಯಲ್ಲಿ ಬಲಕ್ಕೆ ‘ಫುಟ್ ಪಾತ್ ಟು ಅಲ್ಕಾಕ್ ಟಾರ್ನ್’ ಎಂಬ ಫಲಕ ಕಾಣಸಿಗುತ್ತದೆ. ಬೆಟ್ಟದ ಏರು
ಇಲ್ಲಿಂದಲೇ ಶುರುವಾಗುತ್ತದೆ. ಒಂದು ಸಣ್ಣನೆ ತೊರೆಯ ಪಕ್ಕದಲ್ಲೇ ಸಾಗುವ ಈ ದಾರಿಯಲ್ಲಿ ಅಂದ ಚಂದದ ಖಾಸಗಿ
ಮನೆಗಳನ್ನು ದಾಟಿ ಮುಂದಕ್ಕೆ ನಡೆದರೆ ಅಲ್ಲಿ ಒಂದು ಮರದ ಸೇತುವೆ ಅಡ್ಡವಾಗುತ್ತದೆ. ಇನ್ನು ಏರಿದಂತೆ ಇಲ್ಲಿ ಪೈನ್
ಮರಗಳ ಅರಣ್ಯ ಸಿಕ್ಕು ಅದನ್ನು ದಾಟಿ ಮೇಲಕ್ಕೇರಿದರೆ ಒಂದು ಸಮತಟ್ಟಾದ ಪುಟ್ಟ ಸ್ಥಳದಲ್ಲಿ ಯಾರದೋ ಸತ್ತವರ
ನೆನಪಿನಲ್ಲಿ ಒಂದು ಬೆಂಚ್ ಸ್ಥಾಪಿಸಲಾಗಿದೆ. ಈ ವ್ಯಕ್ತಿಯ ಪರಿಚಯ ಇರದ ನಮ್ಮಂತಹ ಪ್ರವಾಸಿಗರು ಅಲ್ಲಿ ಕುಳಿತು
ಒಂದು ಕ್ಷಣ ಈ ಸುಂದರ ದೃಶ್ಯವನ್ನು ಆಸ್ವಾದಿಸಲು ಮತ್ತು ನಮ್ಮ ದಣಿವನ್ನು ನೀಗಿಸಿಕೊಳ್ಳಲು ಸಾಧ್ಯ. ಸತ್ತವರ
ಹೆಸರಿನಲ್ಲಿ ಪ್ರಕೃತಿಯ ಸುಂದರ ಹಂದರದಲ್ಲಿ ಆ ಆಸನವನ್ನು ಒದಗಿಸುವ ಆಂಗ್ಲ ಸಂಸ್ಕೃತಿಯನ್ನು ನಾನು ಬಹಳ
ಮೆಚ್ಚಿದ್ದೇನೆ. ಅಂಥವರ ಸತ್ತ ಸ್ಮರಣೆಯ ದಿನ ಹೂಗುಚ್ಛವನ್ನು ಇಟ್ಟು ಅವರನ್ನು ಸ್ಮರಿಸುವುದು ಎಷ್ಟು ಹೃದಯಸ್ಪರ್ಶಿ
ಕಲ್ಪನೆ! ಈ ವಿಚಾರಗಳನ್ನು ಮೆಲುಕುತ್ತ, ಸುತ್ತ ಸೊಂಪಾಗಿ ಬೆಳೆದ ಬ್ರೇಕನ್ ಎಂಬ ಹಸಿರು ಗಿಡಗಳ ನಡುವೆ ಇದ್ದ
ಕಾಲ್ದಾರಿಯನ್ನು ಗಮನಿಸುತ್ತಾ ಇನ್ನು ಎತ್ತರಕ್ಕೆ ಏರಿದೆವು. ಸುಮಾರು ಒಂದು ಸಾವಿರ ಅಡಿ ಬೆಟ್ಟವನ್ನು ಏರಿದಾಗ
ನನಗೆ ಆಲ್ಪ್ಸ್ ಪರ್ವತ ಶ್ರೇಣಿಗಳು, ಮತ್ತು ಅಲ್ಪೈನ್ ಮೆಡೋಗಳು ನೆನಪಿಗೆ ಬಂದವು. ಮೇಲಿನಿಂದ ಕಂಡ ವಿಹಂಗಮ
ನೋಟ, ನಾನು ಇಂಗ್ಲೆಂಡಿನಲ್ಲಿ ಕಂಡ ಅಭೂತಪೂರ್ವ ಸುಂದರ ದೃಶ್ಯಗಳಲ್ಲಿ ಒಂದಾಗಿತ್ತು.

ಸ್ವಾನ್ ಪಬ್ಬಿನ ಬಳಿಯೇ ಕಾರು ನಿಲ್ಲಿಸುವಂತೆ ನನ್ನ ಗೈಡ್ ಪುಸ್ತಕದಲ್ಲಿ ಏಕೆ ಹೇಳಿಲ್ಲ? ಗ್ರಾಸ್ ಮಿಯರ್ ನಿಂದ ನಡೆದು
ಬರುವಂತೆ ಪುಸ್ತಕ ಏಕೆ ಸೂಚಿಸಿದೆ? ಎಂದು ಪುಸ್ತಕವನ್ನು ಮನಸ್ಸಿನಲ್ಲೇ ಶಪಿಸಿದೆ. ಇಲ್ಲಿಯ ಜನರಿಗೆ ಮೈಲಿಗಟ್ಟಲೆ
ಚಾರಣ ಮಾಡುವುದು ಬದುಕಿನ ಒಂದು ಅಂಗ ಮತ್ತು ಉಲ್ಲಾಸದಾಯಕ ಹವ್ಯಾಸ. ಇದ್ದಕ್ಕೆ ವಿಭಿನ್ನವಾಗಿ ಭಾರತದಲ್ಲಿ
ಜನ ಪ್ರೇಕ್ಷಣೀಯ ಸ್ಥಳಗಳಲ್ಲಿ ನಾಲ್ಕು ಹೆಜ್ಜೆ ನಡೆಯುವುದಕ್ಕಿಂತ ಎಲ್ಲೆಡೆ ಕಾರಿನಲ್ಲಿ ಬಂದು ವೀಕ್ಷಿಸುವುದು ಸಾಮಾನ್ಯ.
ಚಾರಣ ಸಂಸ್ಕೃತಿಯ ಅರಿವು ಭಾರತದಲ್ಲಿ ಈಗ ಮೂಡುತ್ತಿದೆ. ಇನ್ನೊಂದು ವಿಚಾರವೆಂದರೆ ಬ್ರಿಟೀಷರು ಭಾರತಕ್ಕೆ
ಬಂದು ಮಡಿಕೇರಿ, ನಂದಿಬೆಟ್ಟ, ಊಟಿ, ಶಿಮ್ಲಾ ಈ ಪ್ರದೇಶಗಳಲ್ಲಿ ಹಿಲ್ ಸ್ಟೇಷನ್ನುಗಳನ್ನು ಕಟ್ಟಿ , ಬೆಟ್ಟದ ರಸ್ತೆಗಳ
ಮೇಲೆ ಕೆಲವು ವ್ಯೂ ಪಾಯಿಂಟ್ ಗಳನ್ನೂ ಒದಗಿಸಿದ್ದಾರೆ. ಆದರೆ ತಮ್ಮ ದೇಶದಲ್ಲಿ, ಲೇಕ್ ಡಿಸ್ಟ್ರಿಕ್ಟ್ ಬೆಟ್ಟಗಳಲ್ಲಿ
ಮಕ್ಕಳು ಮತ್ತು ವಯಸ್ಸಾದವರೂ ಸೇರಿ ತಲುಪಬಹುದಾದ ಬೆಟ್ಟಗಳ ಮೇಲಿನ ವೀಕ್ಷಣಾ ತಾಣಗಳನ್ನು ಕಟ್ಟುವ
ಗೋಜಿಗೆ ಹೋಗಿಲ್ಲ ಎಂಬುದನ್ನು ಗಮನಿಸಬಹುದು. ಇಲ್ಲಿ ಎಲ್ಲರೂ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಸುಂದರ
ದೃಶ್ಯಗಳನ್ನು ನೀವೇ ನೋಡಿಕೊಳ್ಳಿ ಎಂಬ ನಿಲುವನ್ನು ತಳೆದಂತಿದೆ. ಸ್ವಿಟ್ಜರ್ ಲ್ಯಾಂಡಿನ ರೀತಿಯಲ್ಲಿ ಬೆಟ್ಟಕ್ಕೆ

ರೋಪ್ವೇ ಗಳನ್ನು ಹಾಕುವುದು ಮತ್ತು ಬೆಟ್ಟದ ಮೇಲೆ ರೆವಾಲ್ವಿಂಗ್ ರೆಸ್ಟೋರೆಂಟ್ಗಳನ್ನು ತೆರೆಯುವುದು ಇಂಗ್ಲಿಷ್
ಸಂಸ್ಕೃತಿಯಲ್ಲಿಲ್ಲ ಎಂಬುದನ್ನು ಗಮನಿಸಬಹುದು. ಇದಕ್ಕೆ ಇಲ್ಲಿಯ ಹವಾಮಾನ, ಮಳೆ, ಹಿಮಪಾತ ಇತ್ಯಾದಿ
ಕಾರಣಗಳಿರಬಹುದು, ಇದರ ಜೊತೆಗೆ ಪರಿಸರ ಪ್ರೇಮಿಗಳ ಒತ್ತಡ, ವಿರೋಧಗಳೂ ಇರಬಹುದು.
ಕೆಸಿಕ್ ಊರಿನ ಬಳಿ ಇರುವ ಡರ್ವೆಂಟ್ ವಾಟರ್ ಸರೋವರದ ಬದಿಯಲ್ಲಿ ಬೆಟ್ಟದ ಮೇಲೆ ಇರುವ ಆಶ್ ನೆಸ್ ಬ್ರಿಡ್ಜ್,
ಲೇಕ್ ಡಿಸ್ಟ್ರಿಕ್ಟಿನಲ್ಲಿ ಕಲಾವಿದರ ಕುಂಚಕ್ಕೆ ಮತ್ತು ಕ್ಯಾಮೆರಾಗಳಿಗೆ ಒದಗುವ ಸುಂದರ ತಾಣ. (Most
photographed and painted Bridge) ನಾನು ಲೇಕ್ ಡಿಸ್ಟ್ರಿಕ್ಟಿಗೆ ಬಂದಾಗಲೆಲ್ಲಾ ಈ ಸುಂದರ ತಾಣವನ್ನು
ವೀಕ್ಷಿಸುವುದಲ್ಲದೆ, ಫೋಟೋ ತೆಗೆಯುವ ಅವಕಾಶವನ್ನು ಮರೆಯದೆ ಕಲ್ಪಿಸಿಕೊಂಡಿದ್ದೇನೆ. ಇಲ್ಲಿ ನಿಂತು ನೋಡಿದರೆ
ಡರ್ವೆಂಟ್ ಸರೋವರ ಅದರ ಸುತ್ತ ಕಾಡುಗಳು, ಹಿಂದಕ್ಕೆ ಸ್ಕಿಡಾ ಎಂಬ ಅಲೆಅಲೆಯಾಗಿ ಹಬ್ಬಿದ ಪರ್ವತದ ದೃಶ್ಯ
ಎಲ್ಲರನ್ನೂ ಬೆರಗುಗೊಳಿಸುತ್ತದೆ.

ಈ ಆಶ್ ನೆಸ್ ಬ್ರಿಡ್ಜ್, ಬಹಳ ಪುರಾತನವಾದ ಪ್ಯಾಕ್ ಹಾರ್ಸ್ ಸೇತುವೆ. ಇದಕ್ಕೆ ನೂರಾರು ವರ್ಷಗಳ
ಇತಿಹಾಸವಿದೆ! ಇಂಗ್ಲೆಂಡಿನಲ್ಲಿ ಹಿಂದೆ ವ್ಯಾಪಾರ ಮಾರ್ಗಗಳಲ್ಲಿ ನದಿ ದಾಟಲು ಈ ರೀತಿಯ ಪುಟ್ಟ ಸೇತುವೆಯನ್ನು
ಕಟ್ಟುತ್ತಿದ್ದರು. ಈ ಸೇತುವೆಯು ಕುದುರೆ ತನ್ನ ಸರಕುಗಳನ್ನು ಹೊತ್ತು ನದಿ ದಾಟಲು ಬೇಕಾದ ಆರು ಅಡಿ ಅಷ್ಟೇ
ಅಗಲವಿದ್ದು ಕುದುರೆ ಆಚೆ ಈಚೆ ಬದಿಯಲ್ಲಿ ತೂಗಿರುವ ಸರಂಜಾಮುಗಳಿಗೆ ಅಡ್ಡ ಬಾರದಿರಲಿ ಎಂಬ ಉದ್ದೇಶದಿಂದ
ಸೇತುವೆಯ ಬದಿಯ ಗೋಡೆಗಳು ಕುಬ್ಜವಾಗಿರುತ್ತವೆ. ಈ ಸೇತುವೆಯನ್ನು ಗಾರೆ ಇಲ್ಲದೆ ಬರಿಯ ಕಲ್ಲಿನಿಂದ
ಕಮಾನಿನ ಆಕೃತಿಯಲ್ಲಿ ಕಟ್ಟಲಾಗಿರುತ್ತದೆ. ಕಿರಿದಾದ ಅಶ್ ನೆಸ್ ಬ್ರಿಡ್ಜಿನ ಮೇಲೆ ಇಂದಿಗೂ ಕಾರುಗಳು
ಓಡಾಡುವುದಕ್ಕೆ ಸಾಧ್ಯವಾಗಿದೆ! ಇದರ ದುರಸ್ತಿಯನ್ನು ನ್ಯಾಷನಲ್ ಟ್ರಸ್ಟ್ ನಿಭಾಯಿಸುತ್ತಿದೆ. ಈ ಸ್ಥಳಕ್ಕೆ ಬೆಟ್ಟದ ಮೇಲಿನವರೆಗೂ ಟಾರ್ ರಸ್ತೆಯಿದ್ದು ಕಾರಿನಲ್ಲಿ ತಲುಪಿ ಅಲ್ಲಿಯ ಕಾರ್ ಪಾರ್ಕಿಂಗ್ ಸೌಲಭ್ಯವನ್ನು ಪ್ರವಾಸಿಗರು ಉಪಯೋಗಿಸಬಹುದು. ಅಶ್ ನೆಸ್ ಸೇತುವೆಯಿಂದ ಅರ್ಧ ಮೈಲಿ ಮೇಲಕ್ಕೇರಿದರೆ ಸರ್ಪ್ರೈಸ್ ವ್ಯೂ ಎಂಬ ಇನ್ನೊಂದು ತಾಣ ಸಿಗುತ್ತದೆ. ಇದು ಕೂಡ ಲೇಕ್ ಡಿಸ್ಟ್ರಿಕ್ಟಿನಲ್ಲಿ ನೋಡಬೇಕಾದ ಒಂದು ಸ್ಥಳ ಏಕೆಂದರೆ ಇಲ್ಲಿ ಸರೋವರದ, ಪರ್ವತಗಳ ಮತ್ತು ಕಣಿವೆಯ ಪೂರ್ಣ ಪ್ರಮಾಣದ ಮೋಹಕ ನೋಟ ದೊರೆಯುತ್ತದೆ.

ಅನಿವಾಸಿ ಭಾರತೀಯರಾದ ನಾವುಗಳು ಯಾವ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಟ್ಟರೂ ಅಲ್ಲಿ ನಮಗೆ ನಮ್ಮ
ತಾಯ್ನಾಡು ನೆನಪಿಗೆ ಬರುತ್ತದೆ. ಇಲ್ಲಿ ಹೀಗೆ ಅಲ್ಲಿ ಹೇಗೆ? ಎಂಬ ತುಲನಾತ್ಮಕ ಚಿಂತನೆಗಳು ಮೂಡುತ್ತವೆ. ಲೇಕ್
ಡಿಸ್ಟ್ರಿಕ್ಟ್ ನೋಡಿದಾಗ ನಮಗೆ ನಮ್ಮ ಮಲೆನಾಡು ನೆನಪಿಗೆ ಬರುತ್ತದೆ. ಲೇಕ್ ಡಿಸ್ಟ್ರಿಕ್ಟಿನಲ್ಲಿಯ ನೋಟ ಸೌಮ್ಯ ಮತ್ತು
ರಮ್ಯ. ನಿಸರ್ಗ ಇಲ್ಲಿ ಹದವಾದ ಚಹರೆಯನ್ನು ತೋರಿದೆ . ಇಲ್ಲಿಯ ಕಾಡು ಭೀಕರವಾಗಿಲ್ಲ, ಹುಲಿ, ಆನೆ,
ಚಿರತೆಗಳಿಲ್ಲ, ಕಾಲ ಅಡಿಯಲ್ಲಿ ವಿಷಸರ್ಪಗಳ ಭಯವಿಲ್ಲ. ನಮ್ಮ ಮಲೆನಾಡಿನಲ್ಲಿ ಕುವೆಂಪು ಹೇಳಿದ ಹಾಗೆ
ಊರೆಂದರೆ ಒಂದು ಮನೆ. ಇಲ್ಲಿ ಗಗನಚುಂಬಿಸುವ ಮೇರು ಪರ್ವತಗಳಿವೆ, ಧಾರಾಕಾರವಾಗಿ ಸುರಿಯುವ
ಜಲಪಾತಗಳಿವೆ , ಇಲ್ಲಿ ಹುಲಿಗುಡುಗಿನ ಕಾಡುಗಳಿವೆ. ಒಟ್ಟಾರೆ ಮಲೆನಾಡ ಸೌಂದರ್ಯ ರೌದ್ರ, ರಮಣೀಯ,
ರೋಮಾಂಚನ ! ಎಂದು ಹೇಳಬಹುದು. ಲೇಕ್ ಡಿಸ್ಟ್ರಿಕ್ಟಿನಲ್ಲಿ ವರ್ಡ್ಸ್ ವರ್ಥರಂತಹ ರಸಿಕ ಕವಿ ಹುಟ್ಟಿದ್ದರೆ
ಮಲೆನಾಡಿನಲ್ಲಿ ನಿಸರ್ಗ ಪ್ರಿಯ ಕವಿ ಕುವೆಂಪು ಅವರು ಹುಟ್ಟಿದ್ದಾರೆ. ಈ ಒಂದು ವಿಚಾರವನ್ನು ಡಾ. ಜಿ. ಎಸ್. ಎಸ್
ತಮ್ಮ ‘ಇಂಗ್ಲೆಂಡಿನಲ್ಲಿ ಚತುರ್ಮಾಸ’ ಎಂಬ ಪ್ರವಾಸ ಕಥನದಲ್ಲಿ ವಿಸ್ತರಿಸಿ ಹಾಗೆಯೇ ‘ಲೇಕ್ ಡಿಸ್ಟ್ರಿಕ್ಟಿನಲ್ಲಿ’ ಎಂಬ
ಕವನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆ ಕವನದ ಕೆಲವು ಸಾಲುಗಳು ಹೀಗಿವೆ:


“ಇಲ್ಲಿ ಅಲೆ, ಅಲೆಯಾಗಿ ಹಬ್ಬಿರುವ ಬೆಟ್ಟಗಳಿವೆ
ಬೆಟ್ಟಗಳ ನಡುವೆ ಥಟ್ಟನೆ ತೆರೆಯುವ ಸರೋವರಗಳಿವೆ
ಕಣಿವೆ ದಾರಿಗಳಲ್ಲಿ ಕನವರಿಸುತ್ತ ಮಲಗಿರುವ ಹಳ್ಳಿಗಳಿವೆ
ಆದರೂ ಸಹ್ಯಾದ್ರಿ ಪರಿಸರದ ಮಲೆನಾಡಿಗಿರುವ ಭೀಷ್ಮ ಭವ್ಯತೆಯಿಲ್ಲ

ಅಲ್ಲಿನ ಹಾಗೆ ದೈತ್ಯ ಶಿಖರ ಕಂದರ ಮಹಾಕಾನನದ ವಿಜೃಂಭಣೆಯಿಲ್ಲ
ಇಲ್ಲಿ ಎಲ್ಲವೂ ರಮ್ಯ ಪ್ರಶಾಂತ ನಿರ್ಭಯ ಗಂಭೀರ
ವರ್ಡ್ಸ್ ವರ್ತನ ಕವಿತೆಯ ಹಾಗೆ, ಕುವೆಂಪು ಕಾವ್ಯದಂತಲ್ಲ

ಅಲ್ಲಿನ ಕಾಡು ಕುವೆಂಪುವಿನ ಕೃತಿಗಳಲ್ಲಿ ಮಾತ್ರವೇ
ಉಳಿದುಕೊಂಡಿದ್ದರೆ, ಇಲ್ಲಿನ ನಿಸರ್ಗ ನಿಜವಾಗಿಯೂ
ಅಂದಿನ ಹಾಗೆ ಇಂದೂ ಉಳಿದು, ಮತ್ತೊಬ್ಬ
ವರ್ಡ್ಸ್ ವರ್ತನಿಗೆ ತುದಿಗಾಲಲ್ಲಿ ಕಾಯುತ್ತಿದೆ.

ಈ ಮೇಲಿನ ಕವನದ ಕೊನೆ ಪಂಕ್ತಿಯಲ್ಲಿ, ಪರಿಸರದ ನಾಶದ ಬಗ್ಗೆ ಕಾಳಜಿ ಇದೆ. ಜಿ. ಎಸ್. ಎಸ್ ಈ ಕವನವನ್ನು
ಬರೆದು ಇಪ್ಪತ್ತಕ್ಕೂ ಹೆಚ್ಚಿನ ವರುಷಗಳು ಸಂದಿವೆ. ಇಂದಿಗೂ ಇಲ್ಲಿಯ ಪರಿಸರ ಹಸುರಾಗಿ ಶುಭ್ರವಾಗಿದೆ, ಇಲ್ಲಿ
ಹರಿಯುವ ನದಿಗಳು ತಿಳಿಯಾಗಿದ್ದು ತಮ್ಮ ಒಡಲನ್ನು ನಮ್ಮ ಮುಂದೆ ಬಿಚ್ಚಿಡುತ್ತವೆ. ನದಿ ಪಾತ್ರದ ಒಂದೊಂದು
ನುಣುಪಾದ ಕಲ್ಲುಗಳನ್ನೂ ಕಾಣಬಹುದು. ಇಲ್ಲಿ ವರ್ಡ್ಸ್ ವರ್ತ್, ಕೋಲ್ ರಿಡ್ಜ್ ರಂತಹ ಕವಿಗಳ ಹೆಜ್ಜೆಗಳಿವೆ, ಡರೊತಿ
ವರ್ಡ್ಸ್ ವರ್ತ್ ಮತ್ತು ಮಕ್ಕಳ ಸಾಹಿತ್ಯ ಬರೆದ ಬೀಟ್ರಿಕ್ಸ್ ಪಾಟರ್ ಮುಂತಾದ ಮಹಾನ್ ಮಹಿಳಾ ಲೇಖಕಿಯರು,
ಮಹಾತ್ಮಾ ಗಾಂಧಿ ಅವರ ಮೇಲೆ ಪ್ರಭಾವ ಬೀರಿದ ಲೇಖಕ, ಚಿಂತಕ ಜಾನ್ ರಸ್ಕಿನ್ ಬಾಳಿ ಬದುಕಿದ್ದಾರೆ. ಈ
ಪ್ರಶಸ್ತವಾದ ಪ್ರದೇಶ ವಾಯುವಿಹಾರ, ದೋಣಿವಿಹಾರ, ಜಲಕ್ರೀಡೆ, ಚಾರಣ, ಪರ್ವತಾರೋಹಣ ಹೀಗೆ ನಾನಾ
ರೀತಿಯ ಚಟುವಟಿಕೆಗಳಿಗೆ ಪೂರಕವಾಗಿದೆ. ಲೇಕ್ ಡಿಸ್ಟ್ರಿಕ್ಟ್ ನನ್ನ ಅಚ್ಚುಮೆಚ್ಚಿನ ಪ್ರೇಕ್ಷಣೀಯ ತಾಣ. ಈ ಬಾರಿ ಲೇಕ್
ಡಿಸ್ಟ್ರಿಕ್ಟಿನ ಪ್ರವಾಸದಲ್ಲಿ ಹಲವಾರು ಒಳದಾರಿಯನ್ನು ಅನ್ವೇಷಿಸಿದ ನನಗೆ ಲೇಕ್ ಡಿಸ್ಟ್ರಿಕ್ಟಿನ ಹಲವು ಮುಖಗಳ
ಪರಿಚಯವಾಯಿತು. ನಾವು ಇಲ್ಲಿ ಕಳೆದ ಪ್ರತಿ ಕ್ಷಣವೂ ನಿತ್ಯೋತ್ಸವವಾಗಿತ್ತು!
ನನ್ನ ಈ ಕಿರುಪ್ರವಾಸ ಕಥನ ನಿಮಗೆ ಲೇಕ್ ಡಿಸ್ಟ್ರಿಕ್ಟ್ ನೋಡುವ ಅಥವಾ ಹಿಂದೆ ನೋಡಿದ್ದರೆ ಮತ್ತೊಮ್ಮೆ ನೋಡುವ
ಅಭಿಲಾಷೆಯನ್ನು ಮೂಡಿಸಿದ್ದಲಿ ಇದು ಸಾರ್ಥಕ ಬರಹ ಎಂದು ನಂಬಿರುತ್ತೇನೆ.

-ಡಾ|| ಜಿ. ಎಸ್. ಶಿವಪ್ರಸಾದ್

ಪ್ರಸಾದ್ ಅವರ ಛಾಯಾಗ್ರಹಣಕ್ಕೆ ಅವರೇ ಕನ್ನಡದ ಜನಪ್ರಿಯ ಹಾಡುಗಳನ್ನು ಗೂಗಲ್ ಕೃಪೆಯಿಂದೆ
ಆಯ್ದುಕೊಂಡು ಸಂಗೀತ ಅಳವಡಿಸಿದ್ದಾರೆ. ಕೆಳಗಿನ ವಿಡಿಯೋ ಲಿಂಕುಗಳನ್ನು ಕ್ಲಿಕ್ಕಿಸಿ.

https://drive.google.com/file/d/1IbH601J6vbrtnCqUN-XylKlnMOAnOkMf/view?usp=drivesdk

https://drive.google.com/file/d/1IeLVK2YhbhazsUb41U25sjhpZlvWAwm0/view?usp=drivesdk

https://drive.google.com/file/d/1IlPkBQxLHvK6XkL0uHteXZYj0AiGksOY/view?usp=drivesdk

🌺 🌺 🌺 🌺 🌺 🌺 🌺 🌺 🌺 🌺 🌺 🌺 🌺 🌺 🌺 🌺 🌺

ಶಿವಪ್ರಸಾದ್ ಅವರು ಬೆಳಸಿದ ಹೂದೋಟ.

ಪ್ರೀತಿ ಇಲ್ಲದ ಮೇಲೆ
ಹೂವು ಅರಳಿತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?
( ಜಿ.ಎಸ್. ಎಸ್ ಕವಿತೆಯ ಸಾಲುಗಳು)

ಕರೋನ ಪಿಡುಗಿನಲ್ಲಿ ಅಡಗಿ ಹೋಗಿದ್ದ
ನನ್ನ ಬದುಕಿನ ಪ್ರೀತಿ, ಭರವಸೆಗಳು ಮತ್ತೆ ಈ ಹೂಗಳಲ್ಲಿ ಪುಟಿದೆದ್ದಿವೆ.
ನನ್ನ ಅನಿಸಿಕೆಗಳನ್ನು ಈ ಸುಂದರ ಹೂಗಳು ಅವೇ ಇಲ್ಲಿ ಹೇಳಿವೆ !
ನೋಡಲು ಕಣ್ಣು, ಕೇಳಲು ಕಿವಿ ಇದ್ದಾರೆ ಸಾಕು.

ಶಿವಪ್ರಸಾದ್ ಅವರ ಚಿಕ್ಕ ಚೊಕ್ಕ ಇಂಗ್ಲಿಷ್ ಗಾರ್ಡನ್!