ಈ ವಾರ ಪ್ರಥಮ ಬಾರಿ 'ಅನಿವಾಸಿಗೆ' ಮೂಲತಃ ಮಂಗಳೂರಿನವರಾದ ಹೊಸ ಲೇಖಕಿ ಉಮೈರಾವನ್ನು ಸ್ವಾಗತಿಸುತ್ತಿದ್ದೇವೆ. ಅವರು ಮೂರು ವರ್ಷಗಳಿಂದ ಗ್ಲಾಸ್ಟರಿನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಬಗ್ಗೆ ಅವರಮಾತಿನಲ್ಲೇ ಅವರ ಪರಿಚಯವನ್ನು ಕೇಳೋಣ:
"ನಾನು ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ಇಲೆಕ್ಟ್ರಾನಿಕ್ & ಕಮ್ಯುನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದು ಈಗ UKಯಲ್ಲಿ Aerospace Engineer ಆಗಿ ಕೆಲಸ ಮಾಡುತ್ತಿದ್ದೇನೆ. ಪತಿ ಹನೀಫ್ ಕೂಡ ಇಲ್ಲಿ Aerospace Engineer. ನನಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿದ್ದು ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸ ಮೈಗೂಡಿಸಿಕೊಂಡಿದ್ದೇನೆ.
ನನ್ನ ಜೀವನದ ಅನುಭವಗಳನ್ನು, ಮನದಲ್ಲಿ ಮೂಡುವ ಭಾವನಾತ್ಮಕ ವಿಚಾರಗಳನ್ನು ಅಕ್ಷರಗಳಲ್ಲಿ ವ್ಯಕ್ತಪಡಿಸಿ ಬರೆಯುವಲ್ಲಿ ಆಸಕ್ತಳಾಗಿದ್ದೇನೆ. ಪುಸ್ತಕಗಳ ಓದುವುದು ಮತ್ತು ಬರವಣಿಗೆ ನನ್ನ ಪ್ರಮುಖ ಹವ್ಯಾಸಗಳು."
ತಮ್ಮ ನೆರೆಹೊರೆಯಲ್ಲೇ ವಾಸಿಸುವ ವೇದಕ್ಕನ ಹೃದಯಸ್ಪರ್ಶಿ ವ್ಯಕ್ತಿಚಿತ್ರವನ್ನು ಇಲ್ಲಿ ಬರೆದಿದ್ದಾರೆ. ಓದಿ ಪ್ರೋತ್ಸಾಹಿಸಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
ಸಂಪಾದನೆಗೆ ಸಹಾಯ ಮಾಡಿ, ಸ್ವಲ್ಪೇ ಸಮಯದಲ್ಲಿ ಚಿತ್ರವನ್ನು ಬರೆದು ಶೋಭೆಹೆಚ್ಚಿಸಿದ ಗುಡೂರ್ ಅವರಿಗೆ ಋಣಿ. (-ಸಂ )
******************************************
ಮುಂಜಾನೆ ಹಂಡೆಯಲ್ಲಿ ಕಾದ ಬಿಸಿನೀರ ಸ್ನಾನ ಮುಗಿಸಿ ಬಂದ ನನಗೆ, ಬಿಸಿ ಬಿಸಿಯಾದ ನೀರ್ದೋಸೆ ಮಾಡಿಟ್ಟ ಅಮ್ಮ, ‘ಬೇಗ ರೆಡಿಯಾಗಿ ಇದನ್ನು ತಿಂದು ಹೋಗು’ ಅಂದಾಗ, ‘ಅಮ್ಮಾ…… ನಾನು ಮತ್ತು ಸ್ಮಿತಾ ಒಂದೇ ಬಸ್ಸಲ್ಲಿ ಹೋಗ್ಬೇಕು’ ಅಂತ ಹೇಳಿ ‘ಒಂದೇ ಒಂದು ದೋಸೆ ಸಾಕಮ್ಮ’ ಅಂದು ಬೇಗ ಬೇಗನೆ ತಿಂದು ಬಸ್ಸಿಗೆ ಓಡಿಬಿಟ್ಟೆ. ಅಮ್ಮ ಏನೋ ಗೊಣಗುತ್ತಿರುವುದು ಕೇಳಿಸ್ತಿತ್ತು. ‘ಇವರಿಬ್ಬರ ಮಾತು ಮುಗಿಯೋದೇ ಇಲ್ಲ ಎಂದಿರಬಹುದು’ ಅಂತ ಮನಸ್ಸಲ್ಲೇ ಮುಸಿಮುಸಿ ನಗ್ತಾ ಓಡಿ ಹೋದೆ. ನಾನು ಮತ್ತು ಸ್ಮಿತಾ ಇಬ್ಬರೂ ಮಾತಿನಲ್ಲಿ ಒಬ್ಬರನ್ನೊಬ್ಬರು ಮೀರಿಸುವವರು. ನನ್ನ ಮಾತಿನಲ್ಲಿ ನಾನು ಕಂಡದ್ದು, ಕೇಳಿದ್ದು, ಸಂಬಂಧಿಕರು, ನೆರೆಹೊರೆಯವರೆಲ್ಲರ ವಿಷಯವೂ ಒಳಗೊಂಡಿರುತ್ತಿದ್ದರೆ ಅವಳು ನನಗಿಂತಲೂ ಇನ್ನೂ ಎರಡು ಹೆಜ್ಜೆ ಮುಂದೆ. ಅದೆಷ್ಟೋ ವಿಷಯ ತಂದು ಸಾಸಿವೆ ಹುರಿದಂತೆ ಮಾತನಾಡುತ್ತಿದ್ದಳು. ಆ ದಿನ ಕಾಲೇಜು ಮುಗಿಸಿ ಬರುವಾಗ ನಾನು ಆ ತಿಂಗಳ ‘ತುಷಾರ’ ಎತ್ತಿಕೊಂಡೆ. ಅದೇನೋ ಮಾತಾಡುವಾಗ ಅವಳು ಕೇಳಿದ್ಲು “ಉಮೈರಾ, ಅದು ಹೇಗೆ ಮೊನ್ನೆ ನೀನು ಮಹಾಭಾರತದ ಕ್ವಿಜ್ ಅಲ್ಲಿ ಬಹುಮಾನ ತಗೊಂಡೆ? ನೀವು ನಮ್ಮ ಹಿಂದೂ ಗ್ರಂಥಗಳನ್ನು ಓದಲ್ಲ ಅಲ್ವಾ?’ ‘ಹ್ಮ್, ಹಾಗೇನಿಲ್ಲ ಸ್ಮಿತಾ, ನಮ್ಮ ಕುರಾನಿನ ಮೊದಲ ಸೂಕ್ತವೇ “ಇಖ್ರಅ್” ಅಂದ್ರೆ “ಓದು” ಎಂದಾಗಿದೆ. ನಮ್ಮಜ್ಜಿಯ ಹತ್ರ ಪುರಾಣ ಸೇರಿದಂತೆ ಹಲವಾರು ಪುಸ್ತಕಗಳಿವೆ. ಅದರಲ್ಲಿದ್ದ “ಸಂಕ್ಷಿಪ್ತ ಮಹಾಭಾರತ“ ಅನ್ನುವ ಒಂದು ಪುಸ್ತಕ ನಾನು ಓದಿದ್ದೆ’ ಅಂದೆ. ಹೀಗೆ ನಮ್ಮ ಮಾತಿನ ಸರಣಿಗಳು ದಿನದಿನವೂ ಇಂತಹ ವಿಭಿನ್ನ ಸಂಪ್ರದಾಯದ ಪರಸ್ಪರರ ನಡುವಿನ ಕೌತುಕದ ನಾನಾ ಸುದ್ದಿಗಳೊಂದಿಗೆ ಸಾಗುತ್ತಲೇ ಇರುತ್ತಿತ್ತು. ‘ಅಜ್ಜಿನೂ ಓದ್ತಾರೆ’ ಅಂತ ಕೇಳಿದಾಗ ಚಕಿತಗೊಂಡಿದ್ದ ಅವಳಿಗೆ ಅವರಿಗಿದ್ದ ಅತಿಯಾದ ಓದಿನ ಹವ್ಯಾಸವನ್ನು ನಾನು ಬಲು ಖುಶಿ ಮತ್ತು ಹೆಮ್ಮೆಯಿಂದ ಹೇಳಿದ ಆ ನೆನಪು ಮೊನ್ನೆ ಮೊನ್ನೆ ನಡೆದಂತಿದೆ. ನನ್ನ ಮಾತುಗಳ ನಡುವೆ ಪದೇಪದೇ ಅಜ್ಜಿಯ ವಿಷಯ ಬರುತ್ತಿದ್ದರೆ, ಅವಳ ಮಾತುಗಳ ನಡುವೆ ಪದೇಪದೇ ಬರುತಿದ್ದ ಹೆಸರು ಅವಳ ಇಷ್ಟದ ‘ವೇದಾ’ ಎಂಬ ಹೆಂಗಸಿನದ್ದು. ಆ ವೇದಕ್ಕನಿಗೂ ಅವಳು ನನ್ನ ಬಗ್ಗೆ ಹೇಳಿ ಹೇಳಿ, ವೇದಕ್ಕನಲ್ಲಿ ನನ್ನ ಬಗ್ಗೆ ಒಂದು ಕುತೂಹಲದ ಪ್ರಪಂಚವನ್ನೇ ಸೃಷ್ಟಿಸಿದ್ದಳು ಸ್ಮಿತಾ. ನನಗಂತೂ ಆ ವೇದಕ್ಕನ್ನ ಅಲ್ಲೀ ತನಕ ನಾನು ನೋಡದೇ ಇದ್ರೂ, ಅವರಂದ್ರೆ ಅದೇನೋ ತೀವ್ರ ಕುತೂಹಲ ಹುಟ್ಟಿ ಬಿಟ್ಟಿತ್ತು. ವೇದಕ್ಕ ಏನೋ ಒಬ್ಬ ಮಹಾನ್ ಸಾಧಕಿ ಎಂಬ ಮನೋಭಾವ ಬೆಳೆದು ಬಿಟ್ಟಿತ್ತು. ಒಂದು ದಿನ ಸ್ವಲ್ಪ ಲೇಟಾಗಿ ಶಾಲೆಗೆ ಬಂದ ಸ್ಮಿತ, ನಾನು ಸಿಕ್ಕಿದ ಕೂಡಲೇ ‘ಅಯ್ಯೋ, ಇವತ್ತೇನ್ ಗೊತ್ತ ವೇದಕ್ಕನ ಮಗಳು ಮೊದಲ ಬಾರಿ ಶಾಲೆಗೆ ಹೋಗ್ತಿದ್ದಾಳೆ. ಅವ್ಳು ಹೊರಟು ನಿಂತು ಅಳೋದೇನು, ವೇದಕ್ಕನೂ ಅಳೋದೇನು… ಅದನ್ನು ನೋಡ್ತಾ ಮನೆಯಲ್ಲಿ ನಾವೆಲ್ಲ ತಮಾಷೆ ಮಾಡ್ತಾ ನಿಂತುಕೊಂಡೆವು. ಹಾಗೆ ಸ್ವಲ್ಪ ಲೇಟ್ ಆಯಿತು’ ಅಂದಳು. ಯಕ್ಷಗಾನದಲ್ಲಿ ಮಹಿಷಾಸುರ, ರಾವಣ ಹೀಗೆ ಯಾವುದೇ ಕಠೋರಹೃದಯಿಯ ಪಾತ್ರವನ್ನು ಕೊಟ್ರೂ ಅಚ್ಚುಕಟ್ಟಾಗಿ ನಿಭಾಯಿಸುವ ವೇದಕ್ಕ ಮಾತ್ರ ನಿಜ ಜೀವನದಲ್ಲಿ ಬಲು ಭಾವ ಜೀವಿ. ಬದುಕಿನ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಅರಿತವರಂತೆ ಇರುವ ಅವರ ಆಪ್ತತೆ ಉಕ್ಕಿಸುವ ಮಾತುಗಳು, ಯಾವುದೇ ಕುಹಕ-ಕುತಂತ್ರಗಳಿಲ್ಲದ ಅವರ ನೈಜ ಸಾಧುಸ್ವಭಾವ ಯಾರ ಹೃದಯದಲ್ಲೇ ಆದರೂ ಅವರ ಬಗ್ಗೆ ಪ್ರೀತಿ ಹುಟ್ಟಿಸುವಂತಿತ್ತು. ಮನಸ್ಸಲ್ಲಿರೋದನ್ನೆಲ್ವಾ ಒಮ್ಮೆಲೇ ಸುರಿಯುವ ಮಳೆಯಂತೆ ಅವರ ಮೆಲು ಮಾತುಗಳಲ್ಲೇ ಸುರಿಸಿಬಿಡುತ್ತಿದ್ದರು. ನನ್ನ ಮತ್ತು ವೇದಕ್ಕನ ಮೊದಲ ಭೇಟಿಯನ್ನಂತೂ ನಾನೆಂದೂ ಮರೆಯಲು ಸಾಧ್ಯವೇ ಇಲ್ಲ. “ಅಷ್ಟಮಿ ಹಬ್ಬಕ್ಕೆ ನಾವು ಕೊಟ್ಟಿಗೆ ಮಾಡ್ತೇವೆ, ಉಮೈರಾಳನ್ನು ಇನ್ವೈಟ್ ಮಾಡಿದ್ರೆ ಏನು ಅಂದ್ಕೊಂಡೆ ಆಂದ್ರಂತೆ” ಹಾಗೆ ನಮ್ಮ ಭೇಟಿ ಅವರ ಮನೆಯಲ್ಲಿ ಅಷ್ಟಮಿ ದಿನದಂದಾಗಿತ್ತು . ಮೂರು ಕಲ್ಲುಗಳ ಆ ಮೂಗುತಿ, ಕಣ್ಣಿಗೆ ಕಾಡಿಗೆ, ದೊಡ್ಡ ಬಿಂದಿ, ಕರ್ಲಿ (ಗುಂಗುರು) ಕೂದಲು ಮತ್ತು ಕಲಾವಿದೆ ಎಂದು ಗುರುತಿಸಲು ಸಾಧ್ಯವಾಗುವ ಅವರ ಚೈತನ್ಯಯುತ ಲವಲವಿಕೆಯ ಮಾತುಗಳು. ಅದೆಷ್ಟು ಲವಲವಿಕೆ, ಅತಿಯಾದ ಅತಿಥಿ ಸತ್ಕಾರ, ಪ್ರೀತಿ ವಾತ್ಸಲ್ಯ ತುಂಬಿದ ವೇದಕ್ಕನ ಆಗಾಗ ತಾರಕಕ್ಕೇರುವ ನಗು ನಮ್ಮ ಆ ದಿನವನ್ನು ಸಂಪನ್ನವಾಗಿಸಿತು. “ನಾನೆಷ್ಟು ಮಾತಾಡ್ತೇನೆ ಅಲ್ವಾ? ನನ್ನ ಗಂಡ ಹೇಗೆ ಸಹಿಸಿಕೊಳ್ತಾರೋ ಪಾಪ” ಅಂತ ತನ್ನನ್ನೇ ತಮಾಷೆ ಮಾಡಿಕೊಂಡರು. “ನಂಗೆ ಮಾಸ್ಟರ್ಸ್ ಮಾಡ್ಬೇಕು ಅಂತ ತುಂಬಾ ಇಷ್ಟ ಇತ್ತು “ “ಇನ್ನೂ ಮಾಡ್ಬಹುದಲ್ವಾ?” ಅಂದೆ. “ಅಯ್ಯೋ ಈ ಮರುಭೂಮಿಗೆ ಎಷ್ಟು ನೀರು ಸುರಿದರೂ ಸರಿಯೇ ಇನ್ನು” ಅಂತ ಮತ್ತೊಮ್ಮೆ ನಗು. “ಅಲ್ಲ ಅಕ್ಕ, ಮಕ್ಕಳು ಸ್ಕೂಲ್ಗೆ ಹೋದ್ರೆ ಇಡೀ ದಿನ ನೀವೇನ್ ಮಾಡ್ತೀರ?” ಅಂತ ಅಮ್ಮನನ್ನು ಕೇಳಿದಾಗ “ಬೆಳಗ್ಗೆ ಬಂದ ಉದಯವಾಣಿಯನ್ನು ದಿನದಲ್ಲಿ ೪ ಸಲ ಓದಿ ಮುಗಿಸುತ್ತೇನೆ” ಎಂದರು. ಯಕ್ಷಗಾನ ಲೋಕದಲ್ಲಿ ಅವರ ಸಾಧನೆಗೆ ಸಂದ ಪ್ರಶಸ್ತಿಗಳನ್ನು ತೋರಿಸಿ ಅವರ ಪ್ರೊಫೆಷನಲ್ ವಲಯದ ಬಗ್ಗೆ ಮಾತಾಡಿಕೊಂಡರು. ಅದು ಹೇಗಪ್ಪ ಆ ತರ ಪಾತ್ರಗಳೆಲ್ಲ ಮಾಡುತ್ತಾರೋ ಈಕೆ ಅಂತ ನಾನು ಯೋಚಿಸುವಂತಾಯಿತು. ಮಾತಲ್ಲಿ ಪ್ರೀತಿ, ವಾತ್ಸಲ್ಯ ತುಂಬಿಕೊಂಡೇ ಮಾತಾಡುವ ಅವರ ಜೊತೆ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಮನುಷ್ಯರಿಗೇನು ಬೇಕು ಮತ್ತೆ – ತನ್ನ (ಸುತ್ತಲೂ) ಸರೌಂಡಿಂಗ್ನಲ್ಲಿ ಪ್ರೀತಿ, ಕರುಣೆ, ವಾತ್ಸಲ್ಯ ತೋರುವವರಿದ್ದರೆ ಎಲ್ಲವನ್ನೂ ಜಯಿಸಿದಂತೆ ಖುಷಿ ಅಲ್ಲವೇ? ಅದೆಷ್ಟೋ ಭೇಟಿಗಳು; ಆ ನಂತರದ ದಿನಗಳಲ್ಲಿ ನಮ್ಮದು ನಡೆಯುತ್ತಲೇ ಇತ್ತು. ಮನೆಯಲ್ಲಿ ಏನಾದ್ರೂ ತರಕಾರಿ ಬೆಳೆದ್ವಿ ಅಂದ್ರೆ ವೇದಕ್ಕನ ಮನೆಗೂ ಕಳುಹಿಸಿಕೊಡುವ ಪದ್ದತಿ ಇತ್ತು. ಪಿಯುಸಿ ಮುಗಿದು ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಸೇರುವ ದಿನವೊಂದು ಬಂದಿತ್ತು. ಮನೆಯವರ ಬೀಳ್ಕೊಡುಗೆಯ ಜೊತೆಗೆ ನಮ್ಮ ಆಪ್ತರಾಗಿದ್ದ ವೇದಕ್ಕ ಕೂಡ ಬೀಳ್ಕೊಡಲು ಬಂದಿದ್ದರು. ನಮ್ಮನ್ನು ನೆನಪಿಸ್ಕೊಳ್ತಾ ಇರು, ಕಾಲ್ ಮಾಡು ನಂಗೆ, ಲ್ಯಾಂಡ್ಲೈನ್ ನಂಬರ್ ಗೊತ್ತಿದೆ ಅಲ್ವಾ ಅಂದಿದ್ದರು. ಅದೊಂದು ದಿನ ಅಮ್ಮ ಕಾಲ್ ಮಾಡಿದವರು ’ವೇದಕ್ಕನಿಗೆ ತುಂಬಾ ಹುಷಾರಿಲ್ಲ, ಕ್ಯಾನ್ಸರ್ ಅದೇನೋ ಫೈನಲ್ ಸ್ಟೇಜಲ್ಲಿ ಇದೆ ಅಂತೆ’, ಅಂತ ಆಘಾತಕಾರಿ ಸುದ್ದಿಯನ್ನು ಹೇಳಿದ್ರು. ನನ್ನ ಮನಸ್ಸಲ್ಲೇನೋ ವೇದಕ್ಕನಿಗೇನಾಗುತ್ತೋ ಅನ್ನುವ ಭಯ. ಆ ದಿನದಿಂದ ಹಾಸ್ಟೆಲಲ್ಲಿ ಅವರದ್ದೇ ನೆನಪು, ಫ್ರೆಂಡ್ ಒಬ್ಬಳತ್ರ ನನ್ನ ದುಗುಡವನ್ನು ಹಂಚಿಕೊಂಡಿದ್ದೆ ಕೂಡ. ದೇವ್ರೇ ಅವ್ರು ಬೇಗ ಗುಣಮುಖರಾಗಿ ಬರಲಿ ಅಂತ ಮನಸ್ಸು ಪೂರ್ತಿಯಾಗಿ ಬೇಡ್ಕೊಂಡಿದ್ದೆ. ಕೆಲವೇ ದಿನದ ಪರಿಚಯವಾದ್ರೂ, ಮರೆಯಲಾಗದಂತಹ ಆಪ್ತತೆ ಇತ್ತು ನಮ್ಮಲ್ಲಿ. ಮತ್ತಿನ ದಿನಗಳಲ್ಲಿ ಕಿಮೊತೆರಪಿ ಮಾಡಿಸಿಕೊಂಡ ವೇದಕ್ಕನನ್ನು ನೋಡಲು ಅಮ್ಮ ಹೋಗಿದ್ರಂತೆ. ಆದ್ರೆ ಕೆಲವೇ ದಿನಗಳಲ್ಲಿ ವೇದಕ್ಕ ನಮ್ಮನ್ನು ಬಿಟ್ಟು ಅಗಲಿದ ಸುದ್ದಿ ಬಂದಾಗ ಅರಗಿಸಿಕೊಳ್ಳಲು ಆಗಲಿಲ್ಲ. ಕೂದಲು ಎಲ್ಲ ಹೋಯ್ತಕ್ಕ, ಟೋಪನ್ ಹಾಕಿ ಆದ್ರೂ ನಿಮ್ಮ ಮಗಳ ಮದುವೆಗೆ ಬರ್ತೇನೆ ಅಮ್ಮನಿಗೆ ಹೇಳಿದ ಅವರ ಮಾತು, ಇನ್ನೂ ನೆನಪಾಗಿಯೇ ಉಳಿದಿದೆ. - ಉಮೈರಾ.
**************************************









