ಚಿತ್ರಕವನಗಳು; ಚಿತ್ತ ಮತ್ತು ಚಿತ್ತಾರಗಳ ಸಮಾಗಮ   

ಈ ವಾರದ ಸಂಚಿಕೆಯ ವಿಶೇಷ – ‘ಫೋಟೋ (ಚಿತ್ರ) ಕವನ’. ಒಂದು ಚಿತ್ರಕಲೆಯನ್ನು ನೋಡಿದಾಗ ನಮ್ಮ ಮನಸ್ಸುಗಳು ನಮ್ಮ ಜೀವನ ಅನುಭವಕ್ಕೆ ತಕ್ಕಂತೆ ಮತ್ತು ಆ ಒಂದು ಕ್ಷಣದಲ್ಲಿ ನಮ್ಮ ಚಿತ್ತ ಸ್ಥಿತಿಯ ಆಧಾರದ ಮೇಲೆ ಕಲೆಯನ್ನು ವಿಶ್ಲೇಷಿಸಲು ಶುರುಮಾಡುತ್ತವೆ. ಹಲವಾರು ಭಾವನಾ ತರಂಗಳು ಉದ್ಭವಿಸುತ್ತವೆ. ಕೆಲವೊಮ್ಮೆ ನಾಲ್ಕಾರು ಸಾಧ್ಯತೆಗಳೂ ಮೂಡುತ್ತವೆ. ಒಮ್ಮೊಮೆ  ಆ ಕಲೆ ಗೋಜಲಾಗಿ ಅದರ ಅರ್ಥ ಹೊಳೆಯದಿರಬಹುದು. ಅರ್ಥ ಹೊಳೆಯಲೇ ಬೇಕೆಂದಿಲ್ಲ. ಆ ಚಿತ್ರ ಒಂದು ವಿಶೇಷ ಅನುಭವನ್ನು ಕೊಡಬಹುದು, ಅದು ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿಯೂ ಇರಬಹುದು. ಅದನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಾಗದೆ ಇರಬಹುದು. ಈ ವಿಚಾರ ಒಂದು ಕವಿತೆಯ ಓದಿಗೂ ಅನ್ವಯವಾಗಬಹುದು. ಇನ್ನು ಫೋಟೋ ಕರ್ತೃ (ಕ್ಯಾಮರಾ ಹಿಡಿದು ಹೊರಟವರು) ನೋಡುವ ನೋಟಕ್ಕೆ ಬೇರೊಂದು ದೃಷ್ಟಿಕೋನವೇ ಇರಬಹುದು. ಒಂದು ರೂಪಕ ಅಥವಾ ಪ್ರತಿಮೆಯಾಗಿ ಕಾಣುತ್ತಿರುವ ಚಿತ್ರ ವಾಸ್ತವವನ್ನೂ ಮೀರಿ ಇನ್ನೊಂದು ವಿಚಾರವನ್ನು ಹೇಳುತ್ತಿರಬಹುದು. ಹೀಗೆ ಒಂದು ಚಿತ್ರ ಕಲೆ ಹಲವಾರು ವ್ಯಾಖಾನಗಳನ್ನು ಮೂಡಿಸುತ್ತದೆ.  ಫೋಟೋ ಕಲೆಯನ್ನು ಭಾವನಾತ್ಮಕ ನೆಲೆಯಲ್ಲಷ್ಟೇ ಅಲ್ಲದೆ ತಾಂತ್ರಿಕ ನೆಲೆಯಲ್ಲೂ ಅಳೆಯಬಹುದು. ಕತ್ತಲೆ, ನೆರಳು, ಬೆಳಕು, ಬಣ್ಣ, ಕೋನ, ಆಳ, ವಿಸ್ತಾರ ಹೀಗೆ ಅನೇಕ ತಾಂತ್ರಿಕ ಲಕ್ಷಣಗಳ ಹಿನ್ನೆಲೆಯಲ್ಲಿ ಗ್ರಹಿಸಬಹುದು. ಜನ ಸಾಮಾನ್ಯರು ತೆಗೆಯಬಹುದಾದ ಹಲವಾರು ಫೋಟೋಗಳ ಹಿಂದೆ ಯಾವ ಉದ್ದೇಶವು ಇಲ್ಲದೆ ಅದು ಒಂದು ಉಲ್ಲಾಸ ಘಳಿಗೆಯ ನೆನಪಿನ ಗುಚ್ಛವಾಗಿರಬಹುದು. ಸ್ಮರಣ ಸಂಚಿಕೆಯಾಗಿರಬಹುದು. ಒಂದು ಫೋಟೋ ನಮ್ಮದೇ ವ್ಯಕ್ತಿಚಿತ್ರವಾದಾಗ ನಮ್ಮ ರೇಖಾರೂಪಗಳನ್ನು ನೋಡಿಕೊಂಡು ನಮ್ಮ ಆತ್ಮವಿಶ್ವಾಸ ಹಿಗ್ಗಿ ಅರಳಬಹುದು ಅಥವಾ ಒಪ್ಪಿಗೆಯಾಗದಿದ್ದಲ್ಲಿ ಬೇಸರವೂ ಉಂಟಾಗಬಹುದು. 

 ಡಾ.ಲಕ್ಷ್ಮಿನಾರಾಯಣ ಗುಡೂರ್ ಅವರು ತೆಗೆದಿರುವ ಸುಂದರ ಚಿತ್ರಗಳಿಗೆ ಅವರೇ ಶೀರ್ಷಿಕೆಯನ್ನು ಕೊಟ್ಟು ನೋಡುಗರ ಕಲ್ಪನೆಗಳಿಗೆ ರೆಕ್ಕೆಯನ್ನು ಒದಗಿಸಿದ್ದಾರೆ. ಈ ಚಿತ್ರಗಳನ್ನು ಸಂಪಾದಕರು, ಡಾ. ಗುಡೂರ್ ಅವರ ಅನುಮತಿ ಪಡೆದು ನಮ್ಮ ಆಶುಕವಿಗಳಾದ ಡಾ.ಮುರಳಿ ಹತ್ವಾರ್ ಅವರಿಗೆ ಕವನವನ್ನು ಬರೆಯಲು ಕೋರಿ ಅವರು ಸಮ್ಮತಿಸಿ ಚಿತ್ರಕ್ಕೆ ಸರಿದೂಗುವ ಒಂದಲ್ಲ, ಎರಡು ಕವಿತೆಯನ್ನು ಬರೆದುಕೊಟ್ಟಿದ್ದಾರೆ ಮತ್ತು ಅವರು ತಮ್ಮ ಬರಹದ ಕೊನೆಗೆ ಟಿಪ್ಪಣಿಯಲ್ಲಿ ಇದರ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಕವಿಯ ಇಂಗಿತವನ್ನು ಅರ್ಥಮಾಡಿಕೊಳ್ಳಲು ಈ ಟಿಪ್ಪಣಿಯನ್ನು ಓದುವುದು ಒಳಿತು. 
 -ಸಂಪಾದಕ
ಬುದ್ಧನಂತೆ ಕುಳಿತಿದೆ


ರೆಕ್ಕೆ ಬಿಚ್ಚಿ ಹಾರಲು
ನೀಲ ಗಗನ ಕರೆದಿದೆ
ಹಸಿರ ತೇರನೇರಿ ನಭಕೆ
ಕನಸ ತೂರು ಎಂದಿದೆ

ಹಕ್ಕಿ ಲಯದ ಯಾನಕೆ
ನೀರಿನಲೆಯ ನರ್ತನ
ವಾದ್ಯ ಬೆಳೆದ ಗಾನಕೆ
ರಾಗದಲೆಯ ತನನನ

ಸಂಜೆ ಇಳಿದು ಕಡಲಿಗೆ
ನೆರಳ ಹಾಸು ಹರಡಿದೆ
ಇರುಳ ಕಾಯ್ವ ಕೊಂಬಿಗೆ
ದೀಪವಂಟಿ ಬೆಳಗಿದೆ

ಕೆರೆಯ ತುದಿಯ ಪೀಠಕೆ
ಮರದ ನೆರಳು ಚಾಚಿದೆ
ದಡವ ಹಿಡಿದ ಮನವದು
ಬುದ್ಧನಂತೆ ಕುಳಿತಿದೆ

 -ಮುರಳಿ ಹತ್ವಾರ್
*
ಕಥೆಗಳು ಸಾರ್ ಕಥೆಗಳು


ಕಥೆಗಳು ಸಾರ್ ಕಥೆಗಳು
ತಳ ಕಾಣದ ಬಾವಿಯ ಕಪ್ಪೆಗಳು
ವಟಗುಟ್ಟುವ ಕಥೆಗಳು
 
ಆಸೆಯ ಕೈ ಹಿಗ್ಗಿಸುತ ಚಾಚಿ
ಸಿಕ್ಕ ಮೋಡವನೆಲ್ಲ ಆಪೋಶನ ಮಾಡಿ
ಊದಿದ ಬಿಸಿಯುರಿಗೆ ಹಂಡೆಯ ನೀರೆಲ್ಲ ಬಿಸಿ.
ಆಹಾ! ಎಂದು ಅಲೆ-ಅಲೆಯಲಿ ಮಿಂದ ಮೈಗಳು
 
ರಾಕೆಟ್ಟು ಹಾರಿಸಲು ತೋಡಿದ ಗುಂಡಿಯ ತುಂಬಾ
ಪ್ಲಾಸ್ಟೀಕಿನ ಸರಕುಗಳ ದುರ್ನಾತದ ರಾಶಿ
ದೂರದ ಚುಕ್ಕಿಯಲೊಂದು ಮನೆ ಕಟ್ಟುವ
ಹುಚ್ಚು ಕನಸಿನ ಮನಸುಗಳು

ಬುದ್ಧನ ಮರ, ಪೋಪನ ನಗರ
ಎಲ್ಲೆಂದರಲ್ಲಿ ವಾಲಗ ಊದಿ
ಜಂಗಮ ಗುರುವಿಗೆ ಸ್ಥಾವರ ಕಟ್ಟುವ
ಹಮ್ಮಿನ ಖಾಲಿ ಕತ್-ತಲೆಗಳು

ಬಣ್ಣ-ಬಣ್ಣದ ಬಾಂಬುಗಳ ಸ್ಫೋಟದಲಿ
ಮನೆಯ ಗೋಡೆ ತಾರಸಿಯೆಲ್ಲಾ ತೂತು
ಚಿತ್ರ ವಿಚಿತ್ರ ಫೋಟೋಗಳಲೆಲ್ಲ ಮುಚ್ಚಿಟ್ಟು
ನಕ್ಕ ಹಾಗೆ ನಟಿಸುವ ಮುಖಗಳು
 
ತಾನೆಷ್ಟೇ ಬೆಳಕೆಂದುಕೊಂಡರೂ, ಮಾನವ ಜಾತಿ,
ದಿನ ಕಳೆದಂತೆ ಮಲಗುವ ಉದ್ದುದ್ದ ನೆರಳು;
ತಿರುಳಿಲ್ಲದ ಕರಿ ಇರುಳು ಬರೆದ ಹುರುಳಿಲ್ಲದ ಕಥೆಗಳು 
ಹಳಿಯ ಮೇಲೂ ಉರುಳದ ಚಕ್ರಗಳು

ತಳ ಒಡೆದು ನೀರುಕ್ಕಿ ಹರಿವ ಅಕ್ಷರಗಳು
ಬರೆವ ಹೊಸ ಹಗಲಿನ ಕಥೆಗಳಿಗೆ
ಕಾದಿವೆ ಬಾವಿಯ ಕಪ್ಪೆಗಳು.

  -ಮುರಳಿ ಹತ್ವಾರ್
*
ಟಿಪ್ಪಣಿ


1. ಪ್ರಸಾದರು ಚಿತ್ರ-ಕವಿತೆ ಬೇಕೆಂದು ಕೇಳಿ ಸ್ವಲ್ಪ ಸಮಯಕ್ಕೆ ಬಂದ ಗೂಡೂರರ ಚಿತ್ರ ಸರಣಿಯ ಮೊದಲ ಚಿತ್ರ ಏಂಜೆಲ್ ಅಫ್ ದ ನಾರ್ಧ್. ಅದನ್ನು ನೋಡಿದಾಗ ಕಣ್ಕಟ್ಟಿದ್ದು ದೊಡ್ಡ ಕಪ್ಪು ರೆಕ್ಕೆಗಳು. ಬಿಳಿಯ ಮೋಡವನ್ನೆಲ್ಲ ನುಂಗುತ್ತಿರುವ ದುರಾಸೆಯ ರಕ್ಕಸನಂತೆ ಕಂಡ ಆ ಕಪ್ಪು ಬೆಳೆದ ಮಸೂರದಲ್ಲೇ ಉಳಿದ ಚಿತ್ರಗಳನ್ನು ನೋಡಿದ್ದರಿಂದ ಎಲ್ಲಾ ಚಿತ್ರಗಳ ಕಪ್ಪು ನೆರಳು ‘ಕಥೆಗಳು ಸಾರ್ ಕಥೆಗಳು’ಕವಿತೆಯ ಭಾವ ಮತ್ತು ಅಕ್ಷರಗಳಾದವು. ಹಾಗಾಗಿ ಕಪ್ಪೇ ಇಲ್ಲದ ಹಾರಲು ನಿಂತ ಹಕ್ಕಿಯ ಚಿತ್ರದಲ್ಲೂ, ಶೀರ್ಷಿಕೆಯ ‘ವ್ಯಾಟಿಕನ್ ಅಲ್ಲಿ ಕಪ್ಪು ಹುಡುಕಿದ್ದು.

2. ಎರಡನೇ ಬಾರಿ, ಉದ್ದೇಶ ಪೂರ್ವಕವಾಗಿ ಆ ಹಾರುವ ಹಕ್ಕಿಯ ಚಿತ್ರದಿಂದ ಮೊದಲು ಮಾಡಿ ಬೆಳಕನ್ನು ದಿಟ್ಟಿಸಿದಾಗ, ಹುಟ್ಟಿದ ಭಾವ ಗಗನ ದಾಟುವ ಹೆಬ್ಬಯಕೆ (ambition). ಆ ಮಸೂರದಲ್ಲಿ ಬೆಳೆದದ್ದು ಬೆಳಕನ್ನು ಬರೆದ ಕವನವಾಯಿತು. 

3. ಹತ್ತು-ಹನ್ನೆರಡು ವರ್ಷದ ಹಿಂದೆ ಬೆಳೆಸಿಕೊಂಡ ಫೋಟೋಗ್ರಪಿ ಹವ್ಯಾಸದ ಅಭ್ಯಾಸದಲ್ಲಿ ನನ್ನ ತಿಳುವಳಿಕೆಯನ್ನ ಹೆಚ್ಚಿಸಿದ್ದು ರಾಬರ್ಟ ಆಡಮ್ಸನ ಈ ಸಾಲುಗಳು:

" the photography I care most about shares some assumptions with painting of the past. The effort, as I see it, is to document coherence in an apparently incoherent situation. Which means that first you have to believe in coherence, though that can't itself be photographed, and then you have to find a visual metaphor to suggest it. Of course when you're working you don't think at all about doing such a thing, or what you'd end up with a piece of mystical goo"

Robert Adams. Landscape: theory. 1980. P8.

ಮೇಲಿನ ಸಾಲುಗಳನ್ನು ಮೊದಲ ಬಾರಿ ಓದಿದಾಗ ನೆನಪಾದದ್ದು ಮಂಕುತಿಮ್ಮನ ಈ ಕಗ್ಗ:

ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು
ಅಸಮಂಜಸದಲಿ ಸಮನ್ವಯ ಸೂತ್ರ ನಯವ
ವ್ಯಸನಮಯ ಸಂಸಾರದಲಿ ವಿನೋದವ ಕಾಣ್ವ ರಸಿಕತೆಯೇ ಯೋಗವೆಲೋ ಮಂಕುತಿಮ್ಮ

ಹೀಗೆ, ಆಗಾಗ ಓದಿದ್ದು, ನೋಡಿದ್ದು, ಮಾಡಿದ್ದು ಎಲ್ಲ ಸೇರಿ ಮೂಡಿಸಿದ್ದು ಮೇಲಿನ ಎರಡು ಕವನಗಳು

-ಮುರಳಿ ಹತ್ವಾರ್

ಗಿರೀಶ್ ಕಾರ್ನಾಡರ ಜನ್ಮ ದಿನೋತ್ಸವ;  ಯಯಾತಿ, ಹಯವದನ ಒಂದು ನೆನಪು

ಚಿತ್ರ ಕೃಪೆ: ಗೂಗಲ್
ಮೇ ೧೯ ಗಿರೀಶ್ ಕಾರ್ನಾಡ್ ಅವರ ೮೪ ನೇ ಜನ್ಮ ದಿನೋತ್ಸವ. ಕಾರ್ನಾಡರು ಭಾರತದ ಒಬ್ಬ ಶ್ರೇಷ್ಠ ನಾಟಕಕಾರ, ಲೇಖಕ, ನಟ, ಚಿತ್ರ ನಿರ್ದೇಶಕ ಮತ್ತು ಸಮಾಜವಾದಿ. ೧೯೯೮ ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು. ಪದ್ಮಶ್ರೀ, ಪದ್ಮಭೂಷಣ, ಕಾಳಿದಾಸ ಸಮ್ಮಾನ ಮತ್ತು ಇನ್ನೂ ಅನೇಕ ಪ್ರಶಸ್ತಿಯನ್ನು ಪುರಸ್ಕಾರಗಳನ್ನು ಪಡೆದವರು. ಇಂಗ್ಲೆಂಡಿನ ಕೆಲವು ಅನಿವಾಸಿ ಕನ್ನಡಿಗರಿಗೆ ಕಾರ್ನಾಡರು ಲಂಡನ್ನಿನ ನೆಹರು ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿದ್ದಾಗ ಅವರ ಪರಿಚಯವಿರಬಹುದು. ಯಯಾತಿ, ತುಘಲಕ, ಹಯವದನ, ನಾಗಮಂಡಲ, ತಲೆದಂಡ ಹೀಗೆ ಇನ್ನು ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅವರ ನಾಟಕಗಳು ಭಾರತದ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿವೆ. ಕಾರ್ನಾಡರಿಗೆ ತಮ್ಮ ಕಾಲೇಜ್ ದಿನಗಳಲ್ಲಿ ಒಬ್ಬ ಕವಿಯಾಗ ಬೇಕೆಂಬ ತೀವ್ರ ಹಂಬಲ ಇತ್ತು. ಅದೇ ವಿಚಾರವಾಗಿ ಅವರ ಆಡಾಡತ ಆಯುಷ್ಯ ಎಂಬ ಆತ್ಮಕಥೆಯಲ್ಲಿ ಹೀಗೆ ಬರೆದಿದ್ದಾರೆ; "ನನಗೆ ನೆನಪಿದ್ದಾಗಿನಿಂದಲೂ ನಾನು ಬಯಸಿದ್ದು ಕವಿಯಾಗಬೇಕು ಎಂದು. ಕಾಲೇಜಿನಲ್ಲಿ ಕವಿತೆಗಳನ್ನು ಬರೆದೆ, ಓದಿದೆ, ಅನುಕರಿಸಿದೆ, ಕವಿಗಳನ್ನು ಕಂಡು ಅಸೂಯೆ ಪಟ್ಟೆ. ಆದರೆ ಈಗ ಹಿಂದಿರುಗಿ ನೋಡಿದಾಗ ನನ್ನ ವ್ಯಕ್ತಿತ್ವದ ವಿಕಾಸವಾದದ್ದೆಲ್ಲ ನಾಟಕಗಳಿಂದಾಗಿಯೇ ಎಂಬುದು ಅರಿವಾಗುತ್ತದೆ." ಬಹಳ ಎಳೆ ವಯಸ್ಸಿನಿಂದ ನಾಟಕ ಯಕ್ಷಗಾನ ನೋಡಿಕೊಂಡು ಬೆಳೆದ ಕಾರ್ನಾಡರಿಗೆ ತಾವು ನಾಟಕ ಬರೆಯುವವರೆಗೆ ಅವರ ಸಾಮರ್ಥ್ಯದ ಅರಿವು ಬಹುಶ ಇರಲಿಲ್ಲ.  ಅವರ ಮೊದಲ ನಾಟಕ ಯಯಾತಿ ಬರೆದಾಗ ಅವರಿಗೆ ಕೇವಲ ೨೨ವರ್ಷ ವಯಸ್ಸಾಗಿತ್ತು. ಆ ನಾಟಕ ಬರೆಯುವ ಹೊತ್ತಿಗೆ ಗಿರೀಶ್ ಕಾರ್ನಾಡರು ಇಂಗ್ಲೆಂಡಿಗೆ ಹೊರಟು ನಿಂತಿದ್ದರು. ಅವರ ತಂದೆ ತಾಯಿ ಅವರಿಗೆ ಇಂಗ್ಲೆಂಡಿನಲ್ಲಿ ನೆಲೆಸಬಾರದು, ಅಲ್ಲಿ ಬಿಳಿ ಹೆಂಗಸೊಂದಿಗೆ ಮದುವೆ ಮಾಡಿಕೊಳ್ಳಬಾರದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದು ಈ ನಾಟಕ ಬರೆಯಲು ಪ್ರೇರಣೆ ನೀಡಿತು ಎಂಬುದಾಗಿ ತಿಳಿಸಿದ್ದಾರೆ.  ಯಯಾತಿ ನಾಟಕದಲ್ಲಿ ತಂದೆಗಾಗಿ ಯೌವನ್ನವನ್ನು ತ್ಯಜಿಸುವ ಮಗ, ಮತ್ತು ತಂದೆ ತಾಯಿಯ ನಿರೀಕ್ಷೆ ನಿರ್ಬಂಧಗಳ ನಡುವೆ ತ್ಯಾಗ ಮನೋಭಾವದಿಂದ ಇಂಗ್ಲೆಂಡಿಗೆ ಹೋರಾಟ ಯುವಕ ಕಾರ್ನಾಡ್ ಈ ಎರಡು ಸನ್ನಿವೇಶದಲ್ಲಿ ಅವರು ಸಾದೃಶ್ಯವನ್ನು ಕಂಡುಕೊಳ್ಳುತ್ತಾರೆ. 'ಈ ನಾಟಕ ಬರೆಯುವ ವೇಳೆಗೆ ಯಾವುದೋ ಅಗೋಚರ ಶಕ್ತಿ ಮೈಮೇಲೆ ಬಂದು ಆವರಿಸಿಕೊಂಡಿತ್ತು. ಕಣ್ಣೆದುರೇ ಯಯಾತಿ, ಪುರು ಈ ಪಾತ್ರಗಳೆಲ್ಲ ಮಾತನಾಡಲು ಶುರು ಮಾಡಿತ್ತು. ನಾನು ಒಬ್ಬ ಗುಮಾಸ್ತನಂತೆ ಈ ಸಂಭಾಷಣೆಗಳನ್ನು ಬರೆಯುತ್ತಿದೆ' ಎಂದು ಹೇಳಿದ್ದಾರೆ.

ಅಲ್ಲಿಂದ ಮುಂದಕ್ಕೆ ಕಾರ್ನಾಡರ ಯಯಾತಿಗೆ ಉತ್ತಮ ಪ್ರತಿಕ್ರಿಯೆಗಳ ಪ್ರವಾಹವೇ ಹರಿದುಬಂತು. ಇಂಗ್ಲೀಷಿನಲ್ಲಿ ಬರೆಯುವ ಮತ್ತು ಇಂಗ್ಲೆಂಡಿನಲ್ಲಿ ನೆಲೆಸುವ ತೀವ್ರ ಆಸೆ ಇದ್ದ ಕಾರ್ನಾಡರಿಗೆ ಭಾರತ ಬಿಟ್ಟು ವಿದೇಶದಲ್ಲಿ ನೆಲಸಬೇಕು ಎಂಬ ಯೋಚನೆ ನಿರರ್ಥಕ ಮಾತ್ರವ್ಲಲ ತಕ್ಕ ಮಟ್ಟಿಗೆ ಆತ್ಮಘಾತಕವೆಂಬಂತೆ ಮನದಟ್ಟಾಯಿತು. ಅವರಿಗೆ ಆಕ್ಸ್ ಫೋರ್ಡ್ ಮುಗಿಸಿ ಭಾರತಕ್ಕೆ ಮರಳುವುದು ಎಂಬ ನಿರ್ಧಾರ ಮಾಡುವುದು ಸುಲಭವಾಯಿತು. (ಆಡಾಡತಾ ಆಯುಷ್ಯ ಪುಟ ೧೨೦) ಯಯಾತಿ ನಾಟಕ ಕಾರ್ನಾಡರ ಲೇಖನಿಯಿಂದ ಬಂದದ್ದು ಅವರ ಬದುಕಿನ ದಿಕ್ಕನ್ನೇ ಬದಲಿಸಿತು, ಒಬ್ಬ ಶ್ರೇಷ್ಠ ಲೇಖಕನ ಪ್ರತಿಭೆ ಅನಾವರಣ ಗೊಂಡಿತು, ಕನ್ನಡ ಸಾಹಿತ್ಯಲೋಕ ಹಾಗೂ ರಂಗಭೂಮಿ ಶ್ರೀಮಂತಗೊಂಡಿತು. ಸಾಹಿತ್ಯ, ರಂಗಭೂಮಿ, ಚಿತ್ರಕಲೆ ಈ ಕ್ಷೇತ್ರಗಳಲ್ಲಿ ಇಷ್ಟೊಂದು ಸಾಧನೆ ಮಾಡಿದ ಮಾನವತಾವಾದಿ, ಬಾಲಿವುಡ್ಡಿನ ಗ್ಲಾಮರ್ ತಾರೆಗಳ ನಡುವೆ ಹೆಸರು ಮಾಡಿದ್ದ  ಜನಪ್ರಿಯ ನಟ, ನಿರ್ದೇಶಕ, ಬಹುಮುಖ ಪ್ರತಿಭೆ ಕಾರ್ನಾಡರು ಸಾವಿನಲ್ಲಿ ಯಾವುದೇ ಆಡಂಬರ, ಅಲಂಕಾರ, ಮೆರವಣಿಗೆ, ಗಣ್ಯರ ಶ್ರದ್ಧಾಂಜಲಿ ಇವೆಲ್ಲವನ್ನು  ತಿರಸ್ಕರಿಸಿ ಸದ್ದಿಲ್ಲದೆ  ಮುಳುಗುವ ಸೂರ್ಯನಂತೆ ಜಾರಿಕೊಂಡದ್ದು ಅವರ ವಿನಯ ಶೀಲ ಬದುಕಿಗೆ ಸಾಕ್ಷಿಯಾಗಿತ್ತು.

ಅವರ ಈ ೮೪ ಹುಟ್ಟು ಹಬ್ಬದ ಸಂಧರ್ಭದಲ್ಲಿ ಯಯಾತಿ ನಾಟಕದ ಬಗ್ಗೆ ಕೇಶವ್ ಕುಲಕರ್ಣಿ ತಮ್ಮ ಒಂದೆರಡು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಸ್ಮರಣೀಯ ಸಾಲುಗಳನ್ನು ಉಲ್ಲೇಖಿಸಿದ್ದಾರೆ.
*

ಕಾರ್ನಾಡರ ಹಯವದನ ನಾಟಕದ ಗೀತೆ 'ಬಂದಾನೋ ಬಂದ ಸವಾರ' ಮತ್ತು 'ಗಜವದನ ಹೇ ರಂಭಾ' ಈ ರಂಗಗೀತೆಗಳನ್ನು ನಾಟಕದಲ್ಲಿ ಅಥವಾ ಬರಿ ಗೀತೆಯಾಗಿ ನೀವೆಲ್ಲಾ ಕೇಳಿರಬಹುದು. ಬಿವಿ ಕಾರಂತರ ಸಂಗೀತ ನಿರ್ದೇಶನದಲ್ಲಿ ಈ ಗೀತೆಗಳು ಅತ್ಯಂತ ಜನಪ್ರಿಯವಾಗಿವೆ. ಇಲ್ಲಿ ಅಳವಡಿಸಿರುವ ಜಾನಪದ ಶೈಲಿ ಮತ್ತು ಕೋರಸ್ ಬಹಳ ಪರಿಣಾಮಕಾರಿಯಾಗಿದೆ. ಖ್ಯಾತ ರಂಗ ನಟಿ, ಗಾಯಕಿ ಶ್ರೀಮತಿ ಬಿ ಜಯಶ್ರೀ ಅವರು 'ಗಜವದನ ಹೇ ರಂಭಾ' ಎಂಬ ಗೀತೆಯನ್ನು  ಕನ್ನಡ ಬಳಗದ ಯುಗಾದಿ ಕಾರ್ಯಕ್ರಮವೊಂದರಲ್ಲಿ ಹಾಡಿದ್ದು ಹಲವರ ನೆನಪಿನಲ್ಲಿ ಉಳಿದಿರಬಹುದು. ಅಮಿತ ಅವರು ಇಂದಿನ ಕಾರ್ನಾಡರ ಜನ್ಮ ದಿನೋತ್ಸವ ಸಂಚಿಕೆಯಲ್ಲಿ 'ಬಂದಾನೋ ಬಂದ ಸವಾರ' ಗೀತೆಯನ್ನು ಪ್ರಸ್ತುತ ಪಡಿಸಿದ್ದಾರೆ.  
    - ಸಂಪಾದಕ 

**************************************************************************************

ಕಾರ್ನಾಡರ ಯಯಾತಿ - ಡಾ. ಕೇಶವ್ ಕುಲಕರ್ಣಿ 

ಪುರಾಣ, ಜನಪದ ಮತ್ತು ಇತಿಹಾಸದ ಪುಟಗಳಿಂದ ತಮಗೆಷ್ಟು ಬೇಕೋ ಅಷ್ಟನ್ನು ತೆಗೆದುಕೊಂಡು, ತಾವು ನಂಬಿಕೊಂಡಿರುವ ವಾದಗಳನ್ನು ಎತ್ತಿಕೊಂಡು, ಅವುಗಳನ್ನು ಆಧುನಿಕ ರಾಜಕೀಯ, ಸಾಮಾಜಿಕ ಮತ್ತು ಮಾನಸಿಕ ಕಾಲಕ್ಕೆ ಪ್ರಚಲಿತವನಿಸುವಂತೆ ಬರೆದು ಭಾರತದ, ಅದರಲ್ಲೂ ಕನ್ನಡದ, ಓದುಗರನ್ನು, ನಾಟಕದ ಪೇಕ್ಷಕರನ್ನು ಮತ್ತು ಒಂದು ಜನಾಂಗದ ರಂಗಕಲಾವಿದರನ್ನು ಬಡಿದೆಬ್ಬಿಸಿದರು ಕಾರ್ನಾಡರು.

ಅವರ ಮೊದಲ ನಾಟಕ, `ಯಯಾತಿ`; ಬರೆದದ್ದು ೧೯೬೧ ರಲ್ಲಿ, ಅದೂ ಇಂಗ್ಲೆಂಡಿನ ಆಕ್ಸ್-ಫರ್ಡ್-ನಲ್ಲಿ ವ್ಯಾಸಾಂಗ ಮಾಡುತ್ತಿರುವಾಗ. ವಿ.ಸ. ಖಾಂಡೇಕರ್ ಅವರು `ಯಯಾತಿ` ಕಾದಂಬರಿಯನ್ನು ಬರೆದದ್ದು ೧೯೫೯ರಲ್ಲಿ, ಕಾರ್ನಾಡ್ ಅವರಿಗೆ ಮರಾಠಿಯೂ ಬರುತ್ತಿತ್ತು. `ಯಯಾತಿ` ನಾಟಕವನ್ನು ಬರೆಯುವ ಮೊದಲು `ಯಯಾತಿ` ಕಾದಂಬರಿಯನ್ನು ಅವರು ಓದಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ. ಕಾರ್ನಾಡರ `ಯಯಾತಿ`ಗೂ ಖಾಂಡೇಕರರ ‘ಯಯಾತಿ`ಗೂ ಸಾಕಷ್ಟು ಸಾಮ್ಯತೆಗಳಿವೆ. ಹಾಗೆಯೇ ಬೇಧಗಳೂ ಇವೆ. ಇದರ ಬಗ್ಗೆ ಯಾರಾದರೂ ಕನ್ನಡ ಅಥವಾ ಭಾರತದ ವಿಮರ್ಶಕರು ಬರೆದಿದ್ದಾರೆ ಎಂದುಕೊಂಡಿದ್ದೇನೆ. `ಯಯಾತಿ`ಯನ್ನು ಪ್ರಕಟಿಸಿದ್ದು ಧಾರವಾಡದ ಪ್ರಸಿದ್ಧ `ಮನೋಹರ ಗ್ರಂಥಮಾಲೆ` (ಅಲ್ಲಿಯೇ ನಾನು ಕಾರ್ನಾಡರನ್ನೂ ಭೀಟಿಯಾಗಿದ್ದೆ ಎನ್ನುವುದೂ ನನಗೆ ಮರೆಯಲಾಗದ ಅನುಭವ).

ನಾನು `ಯಯಾತಿ’ ನಾಟಕವನ್ನು ನೋಡುವ ಮೊದಲು ಓದಿರಲಿಲ್ಲ. ಆಗ ನನಗಿನ್ನೂ ಹದಿನಾರೋ ಹದಿನೇಳೋ  ವಯಸ್ಸು. ವಿಚಿತ್ರವೆಂದರೆ ಅದೇ ಸಮಯದಲ್ಲಿ ಕನ್ನಡ ವಾರಪತ್ರಿಕೆಯಲ್ಲಿ (ತರಂಗ ಇರಬೇಕು)  ಖಾಂಡೇಕರರ `ಯಯಾತಿ` ಧಾರಾವಾಹಿಯಾಗಿ ಬರುತ್ತಿತ್ತು ಅಥವಾ ಬಂದಿತ್ತು. ಈ ಎರಡೂ ಕೃತಿಗಳು ಬರೆದ ಸುಮಾರು ೨೫ ವರ್ಷಗಳಾದ ಮೇಲೆ ನಾನು ಅವುಗಳನ್ನು ನೋಡಿದ್ದು ಮತ್ತು ಓದಿದ್ದು. ಅದೇ ಹರೆಯಕ್ಕೆ ಕಾಲಿಡುತಿದ್ದ ನನ್ನ ಮೇಲೆ ಈ `ಯಯಾತಿಗಳು` ಮಾಡಿದ ಪ್ರಭಾವ ಅಪಾರ, ಅಲ್ಲೋಲಕಲ್ಲೋಲ ಅಗಾಧ.

ಕಾರ್ನಾಡರ `ಯಯಾತಿ` ನಾಲ್ಕು ಅಂಕಗಳ ನಾಟಕ. ಯಯಾತಿಯ ಕತೆಯು ಎಲ್ಲರಿಗೂ ಗೊತ್ತಿರುವದರಿಂದ ಅದನ್ನು ಬರೆದು ಬೋರು ಹೊಡೆಸುವುದಲ್ಲ. ಆದರೆ ಈ ನಾಟಕದಲ್ಲಿ ಬರುವ ಕೆಲವು ಸಂಭಾಷಣೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ:

ಸೂತ್ರಧಾರ ಆರಂಭದಲ್ಲೇ, `ನಾವು ಕಟ್ಟಿದ ಅಜ್ಜಿಯ ಕತೆಯನ್ನು ನಾವೇ ಬಾಳಬೇಕು.` ಎಂದು ಸ್ವವಿಮರ್ಶೆಯೊಂದಿಗೇ ನಾಟಕವನ್ನು ಆರಂಭಿಸುತ್ತಾನೆ. 

ಯಯಾತಿಗೆ ಶರ್ಮಿಷ್ಠೆ ಹೇಳುತ್ತಾಳೆ,` ನೀವು ನನ್ನ ಕತೆಯನ್ನು ನಂಬಬೇಕೆಂದು ಹಟವಿಲ್ಲ. ದೇವಯಾನಿ ತನ್ನ ಕತೆಯನ್ನು ನಿಮಗೆ ಹೇಳಿರಬಹುದು. ಅದನ್ನು ನಂಬರಿ.`

ಇನ್ನೊಂದು ಸಲ ಶರ್ಮಿಷ್ಠೆ ಹೇಳುತ್ತಾಳೆ, `ಈಗ ದಾಸ್ಯ ನನಗೆ ಚಟವಾಗಿ ಬಿಟ್ಟಿದೆ. ದಾಸ್ಯದಲ್ಲಿ ಹೊಣೆಯ ಭಾರವಿಲ್ಲ. ಈಗ ನನಗೆ ಸ್ವಾತಂತ್ರ್ಯದಲ್ಲೇ ಶೃಂಖಲೆ ಕಾಣುತ್ತಿದೆ.`

ದೇವಯಾನಿ ಇನ್ನೊಂದು ಸಲ ಶರ್ಮಿಷ್ಠೆಗೆ ಹೇಳುತ್ತಾಳೆ, `ನಿನ್ನನ್ನು ದಾಸ್ಯದಿಂದ ಬಿಡಿಸಿದ್ದೇನೆ. ಬೇಕಿದ್ದರೆ ಈ ಸ್ವಾತಂತ್ರ್ಯದಿಂದ ಉರುಲು ಹಾಕಿಕೊ.`

ಪುರುವಿನ ಪತ್ನಿ ಚಿತ್ರಲೇಖೆ ಒಂದು ಕಡೆ ಹೇಳುತ್ತಾಳೆ, `ಹೇಡಿಗಳಿಗೆ ಮತ್ತು ಸುಳ್ಳು ಹೇಳುವವರಿಗೆ ತರ್ಕ ಅನಿವಾರ್ಯವಾಗುತ್ತದೆ.`

ಕಾರ್ನಾಡರು ಯಯಾತಿ ಮತ್ತು ಪುರು ಎನ್ನುವ ಎರಡು ಗಂಡು ಪಾತ್ರಗಳು ಮತ್ತು ಶರ್ಮಿಷ್ಠೆ, ದೇವಯಾನಿ, ಚಿತ್ರಲೇಖೆ ಮತ್ತು ದಾಸಿ ಎನ್ನುವ ಹೆಣ್ಣು ಪಾತ್ರಗಳ ಮೂಲಕ ಒಂದು ಸಂಕೀರ್ಣವಾದ ತೊಳಲಾಟವನ್ನು ನಮ್ಮೊಳಗೆ ಉರಿಯಲು ಬಿಟ್ಟು ನಾಟಕವನ್ನು ಮುಗಿಸುತ್ತಾರೆ.

`ಯಯಾತಿ` ನಾಟಕವು ಮೊದಲ ಬಿಡುಗಡೆ ಆದಾಗ, ಮೊದಲ ಸಲ ರಂಗಪ್ರಯೋಗವಾದಾಗ ರಂಗಭೂಮಿಯಲ್ಲಿ ಸಂಚಲನವನ್ನೇ ಉಂಟುಮಾಡಿತ್ತು ಎಂದು ಓದಿದ್ದೇನೆ. ಬಹುಭಾಷಾ ಕೋವಿದರೂ ಆಗಿದ್ದ ಕಾರ್ನಾಡರು ತಮ್ಮ ಸಾಮಾಜಿಕ ಸಂಪರ್ಕಗಳ ಮೂಲಕ, ತಮ್ಮ ಅಕಾಡೆಮಿಕ್ ಹಿನ್ನೆಲೆಯ ಮೂಲಕ ಪ್ಯಾನ್-ಇಂಡಿಯನ್ ನಾಟಕಕಾರರಾದರು. `ಯಯಾತಿ` ಹಿಂದಿಯ ರಂಗಭೂಮಿಯಲ್ಲೂ ಅಗಾಧವಾದ ಪ್ರಭಾವವನ್ನು ಬೀರಿತು. ನಾಟಕವನ್ನು ಕನ್ನಡದಲ್ಲಿ ಬರೆದರೂ ಮೊದಲ ನಾಟಕದಲ್ಲೇ ಕಾರ್ನಾಡ್ ಇಡೀ ಭಾರತವನ್ನು ಆವರಿಸಿದರು. ಮುಂದೆ ಆದದ್ದು ಈಗ ಇತಿಹಾಸ.  ಹಿಂದಿಯ ಮೋಹನ್ ರಾಕೇಶ್, ಮರಾಠಿಯ ವಿಜಯ್ ತೆಂಡೂಲ್ಕರ್ ಅವರಿಗೆ ಸರಿಸಮಾನರಾಗಿ ಕಾರ್ನಾಡ್ ಭಾರತದ ರಂಗಭೂಮಿಯನ್ನು ಬೆಳೆಸಿ ಭಾರತದ ರಂಗಭೂಮಿಯಲ್ಲಿ ಒಂದು ಶಾಶ್ವತ ಸ್ಥಾನವನ್ನು ಪಡೆದರು. ಈಗ ಈ `ಯಯಾತಿ` ನಾಟಕ ಎಷ್ಟರ ಮಟ್ಟಿಗೆ ಪಸ್ತುತ ಎನ್ನುವುದನ್ನು ಈಗಿನ ಓದಗ ಮತ್ತು ಪ್ರೇಕ್ಷಕ ನಿರ್ಧರಿಸಬೇಕು. 

******************************************************************************

ಹಯವದನ ನಾಟಕದ ಗೀತೆ ಬಂದಾನೋ ಬಂದ ಸವಾರ - ಅಮಿತಾ ರವಿಕಿರಣ  

******************************************************************************