ವಸಂತದ  ಸುವಾಸಂತಿ

ಫೋಟೋ ಕೃಪೆ; ಗೂಗಲ್
ವಸಂತ ಋತುವಿನಲ್ಲಿ ಮತ್ತು ಬೇಸಿಗೆಯಲ್ಲಿ  ಮೂಡಿ ಬರುವ ಗುಲಾಬಿ ಮನಮೋಹಕವಾಗಿ ನವುರಾಗಿ  ಪದರುಗಳಲ್ಲಿ ಅರಳಿ ಸುವಾಸನೆಯನ್ನು ಬೀರುತ್ತಾ, ತಿಳಿಗಾಳಿಯಲ್ಲಿ ಬಳುಕುತ್ತ ವಿಜೃಂಭಿಸುವ ಪುಷ್ಪವಾಗಿದೆ. ಗುಲಾಬಿಗೆ ಸಂಪಿಗೆಯಂತೆ, ಮಲ್ಲಿಗೆಯಂತೆ ನಿರ್ದಿಷ್ಟ ಬಣ್ಣದ ಬದ್ಧತೆಗಳಿಲ್ಲ. ಹೀಗಾಗಿ ಅದು ಹೊಸ ಹೊಸ ತಳಿಗಳನ್ನು ಕಂಡಂತೆ ಹಲವಾರು ರಂಜಕ ಬಣ್ಣಗಳನ್ನು ಪಡೆಯುತ್ತಾ ವಿಕಾಸಗೊಂಡಿದೆ.  ಹಲವಾರು ಸಂಸ್ಕೃತಿಗಳಲ್ಲಿ ಅದಕ್ಕೆ ವಿಶೇಷ ಸ್ಥಾನಮಾನಗಳಿವೆ. ಇದು ಒಂದು ಪುರಾತನವಾದ ಹೂವು ಕೂಡ. ಇಂಗ್ಲಿಷ್ ಇತಿಹಾಸವನ್ನು ಗಮನಿಸಿದಾಗ ೧೫ನೇ ಶತಮಾನದ ರಾಜಮನೆತನಗಳಾದ ಹೌಸ್ ಆಫ್ ಯಾರ್ಕ್ ಬಿಳಿ ಗುಲಾಬಿಯನ್ನು ಮತ್ತು ಹೌಸ್ ಆಫ್ ಲ್ಯಾಂಕಾಸ್ಟರ್ ಕೆಂಪು ಗುಲಾಬಿಯನ್ನು ತಮ್ಮ ಲಾಂಛನಗಳಾಗಿ ಮಾಡಿಕೊಂಡಿದ್ದು ಮುಂದಕ್ಕೆ  ಈ ಎರಡು ಮನೆತನಗಳ ನಡುವೆ ಸಂಭವಿಸಿದ ಯುದ್ಧವು  'ವಾರ್ ಆಫ್ ರೋಸಸ್ ಎಂದು ಪ್ರಖ್ಯಾತಿಗೊಂಡಿತು. ಗುಲಾಬಿ ಹೂವು ಪ್ರೇಮ ಪ್ರಣಯಗಳ ಸಂಕೇತ ಕೂಡ. ಪ್ರತಿ ವರ್ಷ ವ್ಯಾಲಂಟೈನ್ಸ್ ಡೇ ಸಂದರ್ಭದಲ್ಲಿ ಪ್ರೇಮಿಗಳ ನಡುವೆ ಕೆಂಪು ಗುಲಾಬಿ ಹೂಗಳ ವಿತರಣೆ ನೆಡಯುತ್ತದೆ. 

ಗುಲಾಬಿ ಹೂವಿನ ಉಲ್ಲೇಖ  ಪ್ರಪಂಚದ ಹಲವಾರು ಸಾಹಿತ್ಯಗಳಲ್ಲಿ ಬೆಸೆದುಕೊಂಡಿದೆ. ಇಂಗ್ಲಿಷ್ ಸಾಹಿತ್ಯದ ಮೇರು ಕವಿ ರಾಬರ್ಟ್ ಬರ್ನ್ಸ್ ಅವರ 'ಎ ರೇಡ್ ರೇಡ್ ರೋಸ್' ಒಂದು ಅವಿಸ್ಮರಣೀಯ ಪ್ರೇಮಗೀತೆಯಾಗಿ ಅದರ ಕೆಲವು ಸಾಲುಗಳು ಹೀಗಿವೆ; 

O my luve is like a red, red rose 
That’s newly sprung in June
O my luve is like the melody
That’s sweetly played in tune 

ಇದೇ  ಕವಿತೆಯನ್ನು ಬಿ.ಆರ್.ಎಲ್ ಅವರು "ಕೆಂಪು ಕೆಂಪು, ಕೆಂಗುಲಾಬಿ ನನ್ನ ಪ್ರೇಯಸಿ, ಮಧುರವಾದ ವೇಣು ನಾದ ನನ್ನ ಪ್ರೇಯಸಿ" ಎಂದು ಅನುವಾದಿಸಿ ಸಿ. ಅಶ್ವಥ್ ಅವರ ಧ್ವನಿಯಲ್ಲಿ ಈ ಅನುವಾದಿತ ಕವಿತೆ ಸುಂದರವಾದ ಭಾವಗೀತೆಯಾಗಿದೆ. ಗುಲಾಬಿ ಹೂವನ್ನು ಸಿನಿಮಾ ದೃಶ್ಯಗಳಲ್ಲಿ ಯಥೇಚ್ಛವಾಗಿ ಬಳಸಿಕೊಂಡು ಅದು ಸಿನಿಮಾ ಸಾಹಿತ್ಯದಲ್ಲೂ ವಿಜೃಂಭಿಸಿದೆ. ಚಿ.ಉದಯ ಶಂಕರ್ ಅವರು ರಚಿಸಿರುವ " ನಗುವಾ ಗುಲಾಬಿ ಹೂವೆ, ಮುಗಿಲಾ ಮೇಲೇರಿ ನಗುವೇ, ನಿನಗೆ ನನ್ನಲ್ಲಿ ಒಲವೋ, ಅರಿಯೆ ನನ್ನಲ್ಲಿ ಛಲವೋ, ನಲಿವಾ ಗುಲಾಬಿ ಹೂವೆ ' ಎಂಬ ಚಿತ್ರಗೀತೆ ಎಸ್.ಪಿ.ಬಿ ಅವರ ಧ್ವನಿಯಲ್ಲಿ ಅಮರತ್ವವನ್ನು ಪಡೆದಿದೆ. ಅಂದ ಹಾಗೆ ಗುಲಾಬಿ ಹೂವಿನ ಕೋಮಲತೆ ಮತ್ತು ಸೌಂದರ್ಯದ ಜೊತೆ ಮುಳ್ಳುಗಳು ಬೆರೆತಿವೆ! ಜೈವಿಕವಾಗಿ ಈ ಒಂದು ಸುಂದರ ಹೂವು ತನ್ನ ರಕ್ಷಣೆಗೆಂದು ಅದನ್ನು ಪಡೆದುಕೊಂಡಿರಬಹುದು. ಗುಲಾಬಿ ಹೂವನ್ನು ಪಡೆಯಲು ಹೋಗಿ ಮುಳ್ಳು ಚುಚ್ಚಿದ್ದಾಗ ಅದನ್ನು ಭಗ್ನಪ್ರೇಮಿಗಳ ವಿಫಲ ಪ್ರಯತ್ನದ ಸಂಕೇತವಾಗಿ, ಮಾರ್ಮಿಕವಾಗಿ, ರೂಪಕವಾಗಿ ವ್ಯಾಖ್ಯಾನಿಸುವುದು ಸಾಮಾನ್ಯ. 

ಇದೇ ಗುಲಾಬಿ ಹೂವಿನ ವಿಶೇಷತೆಯನ್ನು ಅನಿವಾಸಿ ಕವಿಯಿತ್ರಿ ಶ್ರೀಮತಿ ರಾಧಿಕಾ ಜೋಶಿ ಅವರು ತಮ್ಮ ಒಂದು ಕವಿತೆಯಲ್ಲಿ ಬಣ್ಣಿಸಿದ್ದಾರೆ. ಗುಲಾಬಿ ಹೂವು ನಮ್ಮೆಲ್ಲರ ಮನೆಯಂಗಳದಲ್ಲಿ ಅರಳಿರುವ ಈ ಸಂದರ್ಭದಲ್ಲಿ ಅವರ  ಕವನ ಸಮಯೋಚಿತವಾಗಿದೆ. ರಾಧಿಕಾ ಅವರು ತಮ್ಮ ಕವನದ ಕೊನೆಗೆ ಗುಲಾಬಿ ಹೂವನ್ನು ಆರೈಕೆ ಮಾಡಿ ಬೆಳೆಸಿದ ಮಾಲಿಗೆ; ಗುಲ್ಮಾಲಿಗೆ ( ಗುಲ್ (ಬಿ) + ಮಾಲಿ = ಗುಲ್ಮಾಲಿ ) ಧನ್ಯತೆಯನ್ನು ಸೂಚಿಸಿದ್ದಾರೆ. ರಾಧಿಕಾ 'ಗುಲ್ಮಾಲಿ' ಎಂಬ ಹೊಸ ಪದವನ್ನು ಸೃಷ್ಟಿಸಿರುವ ಸಾಧ್ಯತೆಗಳಿವೆ. ಈ ಪದ ಕನ್ನಡ ನಿಘಂಟಿನಲ್ಲಿ ಇಲ್ಲ ಎಂದು ತರ್ಕಿಸುವ ಬದಲು "ಎದೆಯ ಭಾವ ಹೊಮ್ಮುವುದಕೆ ಭಾಷೆ ಒಂದು ಸಾಧನ” ಎಂಬ ಕವಿ ವಾಣಿಯನ್ನು ಒಪ್ಪಿಕೊಳ್ಳುವುದು ಒಳಿತು. 
 -ಸಂಪಾದಕ


 ವಸಂತದ  ಸುವಾಸಂತಿ 



ಮಲ್ಲಿಗೆಯೆಂದೇ ಭ್ರಾಂತಿ 
ಮುಗಿಲೆತ್ತರಕ್ಕೆ ಹಂದರ 
ಮನೆಯಂಗಳಕ್ಕೆ ಚಪ್ಪರ 

ನಾಜೂಕು ಗೋಂಚುಲು ಬಾಗಿ 
ನೂರಾರು ಬಗೆಯ ಗುಲಾಬಿ
ಸುವಾಸನೆಯಲ್ಲಿ ಸೌಗಂಧಿಕಾ 
ಈ ಆಂಗ್ಲನಾಡಿನ  ಮಣಿಮುಕ್ತಾ

ಮುಗ್ಧ ಗುಲಾಬಿ ಬಿಳಿ ತಿಳಿ ಹಳದಿ ನಸು ಪಾಟಲ  
ಸೂಕ್ಷ್ಮ ಪಕಳೆಯ ಮನಮೋಹಕ  ಗೊಂಚಲ  
ಹೂವಿನ ತಳಿಗಳ ನಾಮಕರಣ ಗೌರವಾರ್ಥ   
ಐತಿಹಾಸಿಕ ಘಟನೆಗಳ ಹೆಮ್ಮೆಯ ಸ್ಮರಣಾರ್ಥ

ಯಾವ ಬೀದಿ ತಿರುಗಿದರೂ ಗುಲಾಬಿಯ ಸರಮಾಲೆ 
ನಾನಿಂತು ಆನಂದಿಸಿದರೆ ಗುಲ್ಮಾಲಿಗೆ  ಚಪ್ಪಾಳೆ 
ಈ ವಸಂತದ  ಸುವಾಸಂತಿ 
ಮಲ್ಲಿಗೆಯೆಂದೇ ಭ್ರಾಂತಿ


ರಾಧಿಕಾ ಜೋಶಿ

ಆಮಿಷ ಮತ್ತು ದರ್ಪಣ ಸುಂದರಿ       

ವಿಜಯ್ ಅವರ 'ಆಮಿಷ' ಮತ್ತು ಡಾ ಗುಡೂರ್ ಅವರ 'ದರ್ಪಣ ಸುಂದರಿ' ಎಂಬ ಎರಡು ಕವಿತೆಗಳು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಕಂಡುಬರುವ ಶೃಂಗಾರ ರಸದ ಪ್ರತಿನಿಧಿಗಳಾಗಿವೆ. ಒಂದುವರೆ ಸಾವಿರ ವರುಷಗಳ ಹಿಂದೆ ಕಾಳಿದಾಸನ ಕೃತಿಗಳಲ್ಲಿ ಮೂಡಿಬಂದಿರುವ ಶೃಂಗಾರ ರಸ ಇಂದಿಗೂ ಕಾವ್ಯವಸ್ತುವಾಗಿ ಎಲ್ಲರ ಆಸಕ್ತಿಯನ್ನು ಕೆರಳಿಸಿದೆ. ಡಿವಿಜಿ ಅವರ ಅಂತಃಪುರಗೀತೆಗಳಲ್ಲಿ ಶೃಂಗಾರ ರಸ ಚೆನ್ನಕೇಶವನನ್ನು ಒಲಿಸುವ ಭಕ್ತಿ ಭಾವವೂ ಆಗಿ ಪರಿಣಮಿಸಿದೆ. ಈ ಗೀತೆಗಳಲ್ಲಿ ತರುಣಿಯ ಹಾವ, ಭಾವ, ನಟನೆ, ನೃತ್ಯ, ಕೇಶ, ವೇಷ, ಲಾವಣ್ಯಗಳು ಸುಂದರವಾಗಿ ಅಭಿವ್ಯಕ್ತಗೊಂಡಿದೆ. ಬೇಲೂರಿನ ದೇವಸ್ಥಾನದಲ್ಲಿ ಶಿಲ್ಪಕಲೆಯ ರೂಪದಲ್ಲಿ ಇದೆ ಶೃಂಗಾರ ರಸ ಇನ್ನೊಂದು ಆಯಾಮವನ್ನು ಪಡೆದುಕೊಂಡಿವೆ. ಪ್ರೇಮ, ಕಾಮ, ಪ್ರಕೃತಿ-ಪುರುಷ ಸಮ್ಮಿಲನ ವಿಷಯಗಳನ್ನು ಕುರಿತು ಕನ್ನಡದ ಅನೇಕ ಖ್ಯಾತ ಕವಿಗಳು ಬರೆದಿದ್ದರೆ. 

ಕುವೆಂಪು ಅವರ "ಬಾ ಚಕೋರಿ ಚಂದ್ರ ಮಂಚಕೆ, ಜೊನ್ನ ಜೇನಿಗೆ ಬಾಯಾರಿದೆ ಚಕೋರ ಚುಂಬನ, ನಿಕುಂಜ ರತಿವನ ಮದನ ಯಾಗಕೆ, ಅನಂಗ ರಕ್ತಿಯ ಬಿಂಬ ಭೋಗಕೆ, ಕಾಂಕ್ಷಿಯಾಗಿದೆ ನಗ್ನ ಯಾಗಕೆ" ಎಂಬ ಸಾಲುಗಳಲ್ಲಿ ಅನುರಕ್ತಿಯ ಆಕಾಂಕ್ಷೆಗಳು ಅಡಗಿವೆ. "ನೀನನಗೆ ನಾನಿನಗೆ ಜೇನಾಗುವ, ರಸದೇವ ಗಂಗೆಯಲಿ ಮೀನಾಗುವ, ರತಿ ರೂಪ ಭಗವತಿಗೆ ಮುಡಿಪಾಗುವ" ಎಂಬ ಕವನ ದಾಂಪತ್ಯ ಜೀವನದ ಸಿಹಿ ಸಂಬಂಧದ ಪ್ರತೀಕವಾಗಿದೆ ಮತ್ತು ಆ ಸಂಬಂಧದಲ್ಲಿನ ಒಂದು ಪಾವಿತ್ರ್ಯತೆಯನ್ನು ತೆರೆದಿಟ್ಟಿದೆ. ಜಿ.ಎಸ್.ಎಸ್ ಅವರ “ನೀನು ಮುಗಿಲು ನಾನು ನೆಲ, ನಿನ್ನ ಒಲವೇ ನನ್ನ ಬಲ, ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ. “ನಾನಚಲದ ತುಟಿಯೆತ್ತುವೆ ನೀ ಮಳೆಯೊಳು ಮುತ್ತನೀಡುವೆ, ಹಸಿರಾಯಿತು ಹೂವಾಯಿತು ಚೆಲುವಾಯಿತು ಈ ನೆಲ”! ಎನ್ನುತ್ತಾ ಗಂಡು ಹೆಣ್ಣುಗಳ ಮಿಲನವನ್ನು ನಿಸರ್ಗದ ಮಿಲನಕ್ಕೆ ಪ್ರತಿಮೆಗಳಾಗಿ ಬಳಸಿದ್ದಾರೆ. 

ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರು 'ಲಿಬಿಡೊ ಬಿಡುವುದಿಲ್ಲ' ಎಂಬ ಬಿಡಿ ಬರಹಗಳಲ್ಲಿ ಪುರುಷ-ಸ್ತ್ರೀ  ಸಂಬಂಧವನ್ನು ಕವಿ- ಕವಿತೆ  ಸಂಬಂಧಕ್ಕೆ ಹೋಲಿಸಿದ್ದಾರೆ. ಅವರದೇ ಒಂದು ಕವಿತೆಯ ಸಾಲು ಹೀಗಿದೆ; "ಕವಿ ವಿಶ್ವಾಮಿತ್ರನಿಗೂ ಖಾತ್ರಿ ತಪೋಭಂಗ, ಕವಿತೆ ಸ್ತ್ರೀ ಲಿಂಗ". 

 ಕೊನೆಯದಾಗಿ, ಪ್ರೇಮ ಕಾಮ ವಿಚಾರಗಳನ್ನು ಸಾಹಿತ್ಯದಲ್ಲಿ ತಂದಾಗ ಸಭ್ಯತೆಗೂ ಮತ್ತು ಅಶ್ಲೀಲಕ್ಕೂ ಇರುವ ಅಂತರ ಅತಿ ಸೂಕ್ಷ್ಮ. ಹೀಗಿರುವಾಗ ನಮ್ಮ ಕವಿಗಳಾದ ವಿಜಯ್ ಮತ್ತು ಡಾ. ಗುಡೂರ್ ಈ ವಿಷಯಗಳನ್ನು ಹದವಾಗಿ ನಿಭಾಯಿಸಿದ್ದಾರೆ. ಗುಡೂರ್ ಅವರು 'ಆಮಿಷ' ಎಂಬ ವಿಜಯ್ ಅವರ ಕವನಕ್ಕೆ ಒಪ್ಪುವ ರೇಖಾಚಿತ್ರವನ್ನು ಬರೆದು ಅಂದಗೊಳಿಸಿದ್ದಾರೆ. ಈ ಕವನ ಗುಚ್ಛ ವ್ಯಾಲಂಟೈನ್ ಡೇ ಸಂಚಿಕೆಗೆ ಸೂಕ್ತವಾಗಿದ್ದಿರಬಹುದು ಅಲ್ಲಿಯವರೆಗೆ ಕಾಯುವ ತಾಳ್ಮೆ ಕವಿಗೂ ಮತ್ತು ಕವಿತೆಗೂ ಇರಲಿಲ್ಲ! ಹೀಗಾಗಿ ಇಂಗ್ಲೆಂಡಿನ ಬೇಸಗೆಯಲ್ಲಿ ತಂಗಾಳಿಯಂತೆ ಇವು ಮೂಡಿಬಂದಿದೆ.

  -ಸಂಪಾದಕ 
ಆಮಿಷ
ರೇಖಾ ಚಿತ್ರ – ಡಾ. ಗುಡೂರ್ ಅವರಿಂದ
ಆಮಿಷ - ಕವನ 
ಕವಿ - ವಿಜಯ್ ನರಸಿಂಹ
 
ನಿನ್ನ 
ಹಣೆಗೊಂದು ಮುತ್ತನಿಟ್ಟೆ
ಕಂಗಳು ಮುನಿದವು 
ಕಂಗಳಿಗೆ ಮುತ್ತನಿಟ್ಟೆ 
ಕೆನ್ನೆಗಳು ಮುನಿದವು 
ಕೆನ್ನೆಗೆ ಮುತ್ತನಿಟ್ಟೆ 
ಗದ್ದ ಮುನಿಯಿತು 
ಗದ್ದಕೆ ಮುತ್ತನಿಟ್ಟೆ 
ತುಟಿಗಳು ಮುನಿದವು 
ತುಟಿಗಳ ಜೇನ ಸವಿದೆ 
ಕೊರಳು ಮುನಿಯಿತು 
ಕೊರಳ ಕಂಬಕೆ ಮುತ್ತನಿಟ್ಟೆ

ಮುನಿ-ಮುತ್ತಿನ ಮತ್ತಿನಾಟದಲಿ
ಮುಂದೇನಾಯಿತೆಂದು ತಿಳಿವಷ್ಟರಲ್ಲಿ 
ನಿನ್ನೊಳಗೆ ನಾನು
ನನ್ನೊಳಗೆ ನೀನು

********************************************************

ದರ್ಪಣ ಸುಂದರಿ - ಕವನ 
 
ಕವಿ - ಡಾ. ಲಕ್ಷ್ಮೀನಾರಾಯಣ ಗುಡೂರ್ 

ಮೊಗವ ತೋರು ಬಾರೆ ಸಖಿ, ಕನ್ನಡಿಯೊಳೆನ್ನ
ಮೊಗವ ತೋರು ಬಾರೆ ಸಖಿ ||
ಪ್ರಿಯಕರನ ಆಗಮನದ ನಿರೀಕ್ಷೆಯಲಿ ಕೆಂಪಾದ ||

ನಾಚಿಕೆಯೋ ಉತ್ಸಾಹವೋ ಒಂದೂ 
ನಾನು ಅರಿಯೆ |
ಇರಲಾರೆ ಒಂದೆಡೆಗೆ ಅದುರುತಿದೆ
ಮೈ ಬರಿಯೆ ||

ಪ್ರಿಯನ ತುಟಿ ಮುಟ್ಟದೆಯೇ ಕೆನ್ನೆ
ಏತಕೆ ಕೆಂಪು |
ಬರುವ ಮುನ್ನವೆ ನಾಸಿಕದಿ ಏಕೆ
ನಲ್ಲನ ಕಂಪು ||

ಇರು ನೀನು ಹತ್ತಿರದಿ ಸಖಿ, ಅವ
ಬರುವ ವರೆಗೆ |
ಹೆಜ್ಜೆ ಸದ್ದಾದೊಡನೆ, ಎಳೆ ಪರದೆ, ಹೋಗು
ನೀ ಹೊರಗೆ ||

***********************************************************