ಗೌರಿ ಗಣೇಶ ಹಬ್ಬದ ವಿಶೇಷಾಂಕ – ಭಾಗ ೧

ಫೋಟೋ ಕೃಪೆ ಗೂಗಲ್
ಎಲ್ಲರಿಗೂ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು. 
ವಕ್ರತುಂಡ, ಮಹಾಕಾಯ, ಏಕದಂತ, ಡೊಳ್ಳುಹೊಟ್ಟೆಯ ಗಜವದನನಾದರೂ ಗಣೇಶ ವಿಘ್ನೇಶ್ವರ ಮತ್ತು ಎಲ್ಲರ ಪ್ರೀತಿಯ ಗಣ( ಜನರ) ಈಶ ( ನಾಯಕ). ಹಿಂದೂ ಧರ್ಮದ ಒಳಗೆ ಅದೆಷ್ಟೋ ಪಂಗಡಗಳಿದ್ದರೂ, ಅವೆಲ್ಲಕ್ಕೂ ಬೇರೆ ಬೇರೆ ದೇವರುಗಳಿದ್ದರೂ ಗಣೇಶ ನಮ್ಮೆಲ್ಲರನ್ನೂ ಒಂದುಗೂಡಿಸಿದ ದೇವರು! ಈ ಗೌರಿ  ಪುತ್ರನಿಗೆ ಜೈವಿಕ ತಂದೆ ಇಲ್ಲದೆ, ಸ್ವತಃ ಗೌರಿಯೇ ತನ್ನ ಶಕ್ತಿಯಿಂದ ಅವನನ್ನು ಸೃಷ್ಟಿಸಿದ್ದರೂ, ಕುಪಿತನಾದ ಶಿವ ಅವನ ತಲೆತೆಗೆದು ಆನೆ ತಲೆ ಜೋಡಿಸಿದ್ದರೂ, ಅವನಲ್ಲಿ ಹಲವಾರು ಅಪೂರ್ಣತೆಗಳಿದ್ದರೂ ಅವನನ್ನು ಜನ ಸಾಮಾನ್ಯರು ದೇವರೆಂದು ಒಪ್ಪಿಕೊಂಡಿರುವುದು ನಮ್ಮಲ್ಲಿಯ ಸಹಿಷ್ಣುತೆಗೆ ಸಾಕ್ಷಿಯಾಗಿದೆ. ಗಣೇಶ ಜನ ಸಾಮಾನ್ಯರರಾದ ನಮ್ಮೊಳಗೇ ಇರುವ ಕುಂದು ಕೊರತೆಗಳ, ನಮ್ಮ ನಮ್ಮ ವಿಕಲತೆಯ, ನ್ಯೂನತೆಗಳ, ಅಪೂರ್ಣತೆಯ ತದ್ರೂಪ. ಬಹುಶ ಈ ಕಾರಣಕ್ಕಾಗಿ ಅವನು ಎಲ್ಲರ ಕಲ್ಪನೆಗೆ ನಿಲುಕುವ ದೈವ ಎನ್ನ ಬಹುದು. ದೇವರು ಎಂದ ಕೂಡಲೇ  ಸ್ಫುರದ್ರೂಪಿಯಾಗಿ, ಪ್ರಕೃತಿಯ ವೈಭವಗಳ ನಡುವೆ ಕೈಲಾಸದಲ್ಲಿ, ಹಿಮಾವೃತ ಉತ್ತುಂಗ  ಶಿಖರಗಳಲ್ಲಿ  ಅಥವಾ ವೈಕುಂಠದಲ್ಲಿ ಇಲ್ಲವೇ ಬೃಂದಾವನದಲ್ಲಿ ಸುಂದರನಾಗಿ ಗೋಪಿಕಾ ಸ್ತ್ರೀಯರ ನಡುವೆ ಇರಬೇಕಿಲ್ಲ! ಗಣೇಶನಂತೆ ವಕ್ರವಾಗಿದ್ದರೂ ಅವನು ಇತರರಿಗಿಂತ ಹೆಚ್ಚು ಪ್ರಸ್ತುತ ! ಅವನಿಗೆ ಎಲ್ಲ ದೇವರಿಗಿಂತ ಅಗ್ರಸ್ಥಾನ. ವಿಘ್ನಗಳು ನಮ್ಮ ಬದುಕಿನ ಹಾಸುಹೊಕ್ಕು, ಅದನ್ನು ಎದುರಿಸುತ್ತಲೇ ಸಾಗುವುದು ನಮ್ಮ ಪಯಣ. ಅದನ್ನು ಹತ್ತಿಕ್ಕಲು ನಾವು ಮೊರೆಹೋಗುವ ದೈವ ವಿನಾಯಕ. ಅಜ್ಞಾನವೆಂಬ ಕತ್ತಲೆ ಕಳೆದು ಜ್ಞಾನವೆಂಬ ಬೆಳಕು ಮೂಡ ಬೇಕಾದರೆ ನಮಗೆ ವಿನಾಯಕನ ಕೃಪೆ ಬೇಕು. ಈ ಕಾರಣಕ್ಕಾಗಿಯೇ ಅವನನ್ನು "ಸಿದ್ಧಿ ವಿನಾಯಕ ಬುದ್ಧಿ ಪ್ರಕಾಶಕ" ಎಂದು ಸಂಭೋದಿಸುತ್ತೇವೆ. ಈ ಮೇಲಿನ ಕಾರಣಕ್ಕಾಗಿ ಶಾಲಾ ಮಕ್ಕಳಿಗೆ ಗಣೇಶ ಇಷ್ಟ ದೈವ ವಾಗಿದ್ದಾನೆ. ಅಂದ ಹಾಗೆ ಸಿದ್ಧಿ ಬುದ್ಧಿ ಎಂಬ ಇಬ್ಬರ ಹೆಂಡಿರನ್ನು ಗಣೇಶ ಮದುವೆಯಾಗಿದ್ದಾನೆ.  ಶಾರೀರಿಕವಾಗಿ ಅಷ್ಟು ದೊಡ್ಡ ದೇಹವುಳ್ಳ ಗಣಪತಿ ಒಂದು ಸಣ್ಣ ಇಲಿಯನ್ನು ವಾಹನವನ್ನಾಗಿ ಮಾಡಿಕೊಂಡಿರುವುದು ಕುತೂಹಲವಾದ ವಿಷಯ. ಇಲಿ ಸಣ್ಣದಾದರೂ ಅದು ಎಲ್ಲಕಡೆ ತೂರಿ ಅಡಚಣೆಗಳನ್ನು ದಾಟಿ ತನಗೆ ಬೇಕಾದುದನ್ನು ಪಡೆಯಲು ಶಕ್ತವಾಗಿರುವ ಪ್ರಾಣಿ, ಹೀಗಾಗಿ ವಿನಾಯಕನಿಗೆ ವಾಹನವಾಗಿರುವುದು ಸಾಂಕೇತಿಕವಾಗಿ ಸರಿಯಾಗಿದೆ. 

ಗಣೇಶ ಹಬ್ಬದ ಮುಂಚೆ ಬರುವ ಗೌರಿ ಹಬ್ಬ ನಮ್ಮ ಸಂಸ್ಕೃತಿಯಲ್ಲಿ ನಾವು ಸ್ತ್ರೀಯರಿಗೆ, ತಾಯಿಗೆ ನೀಡಿರುವ ಗೌರವ, ಸ್ಥಾನಮಾನಗಳ ಪ್ರತೀಕ ಎನ್ನಬಹುದು. ಹೆಣ್ಣಿಗೆ ಗಂಡನ ಮನೆ ಕರ್ಮಭೂಮಿಯಾದರೆ, ತವರು ಮನೆ ಜನ್ಮ ಭೂಮಿ.  ಅವಳ ಮೂಲ ಬೇರು, ಬಾಂಧವ್ಯಗಳು ಇರುವದೇ ಅಲ್ಲಿ.  ಗೌರಿ ವರ್ಷಕೊಮ್ಮೆಯಾದರೂ ತವರುಮನೆಗೆ ಬಂದು ಹೋಗುವ ಈ ಆತ್ಮೀಯ ಘಳಿಗೆಯೇ ಗೌರಿ ಹಬ್ಬ. ಗೌರಿ ಹಬ್ಬದ ಆಚರಣೆಯಲ್ಲಿ ಗೌರಿಗೆ ಯಾವ ಆಕಾರ, ರೂಪ ಕೊಡುವುದು? ಎಂಬ ವಿಚಾರ ಹಿಂದೆ ಸಮಸ್ಯೆಯಾಗಿರಬಹುದು. ಒಂದು ಆಕಾರ ಕೊಟ್ಟಮೇಲೆ ಅದನ್ನು ಹೇಗೆ ಸಿಂಗರಿಸುವುದು ಎನ್ನುವುದು ಇನ್ನೊಂದು ಜಟಿಲವಾದ ಸಮಸ್ಯೆ. ಅಕಾರ ಕೊಟ್ಟ ಸುಂದರ  ಶಿಲಾಕೃತಿಯನ್ನು ಹಣ್ಣ ಕೊಟ್ಟು ಎಲ್ಲರೂ ಪಡೆಯಲು ಸಾಧ್ಯವಾಗದಿರಬಹುದು. ಹೀಗಾಗಿ ಬಡವರನ್ನು ಒಳಗೊಂಡಂತೆ, ಪ್ರತಿಯೊಂದು ಮನೆಯನ್ನು ಗೌರಿ ತಲುಪಲು ಸಾಧ್ಯವಾಗುವಂತಹ ಒಂದು ತಂಬಿಗೆಯಲ್ಲಿ, ತೆಂಗಿನಕಾಯಿ ಕಳಶವಿಟ್ಟು  ಸೀರೆ ಅರಿಶಿನ ಕುಂಕುಮ ಬಳೆಗಳನ್ನು ಇರಿಸಿ ಗೌರಿ ಎಂದು ಭಾವಿಸುವುದು ಸರಳವಾದ ಕಲ್ಪನೆ. ಮುತ್ತೈದಿಯರಿಗೆ ಬಾಗಿಣ ಕೊಡುವ ಪದ್ಧತಿ ಸಮೃದ್ಧಿಯ, ಫಲವಂತಿಕೆಯ ಪ್ರತೀಕವಾಗಿದೆ. ಇತ್ತೀಚಿಗೆ ನಗರಗಳಲ್ಲಿ ಗಣೇಶನ ಜೊತೆ ಗೌರಿ ಕಲಾಕೃತಿಗಳು ದೊರೆಯುತ್ತವೆ. ನಮ್ಮ ನಮ್ಮ ಭಾವನೆಗಳಿಗೆ ಕಲ್ಪನೆಗಳಿಗೆ ಯಾವಾ ಯಾವ ಆಕಾರ, ರೂಪ ನಿಲುಕುವುದೋ ಅದೇ ದೇವರು! ಆದಿವಾಸಿಗಳಿಗೆ ಒಂದು ಕಲ್ಲು, ಮರದ ತುಂಡು, ಒಂದು ಮರ, ಒಂದು ನದಿ ಅದೇ ದೇವರು!

ಈ ವಾರದ ಅನಿವಾಸಿ ತಾಣದ  ಗೌರಿ-ಗಣೇಶ ವಿಶೇಷ ಸಂಚಿಕೆ ಭಾಗ ಒಂದರಲ್ಲಿ, ಹಬ್ಬದ ಈ ಸಂದರ್ಭದಲ್ಲಿ ಕಿರಣ ರವಿಶಂಕರ್ ಆ ಹಬ್ಬದ ನೆನಹುಗಳನ್ನು ಕುರಿತು ಒಂದು ಕಿರು ಲೇಖನದ ಜೊತೆ ಒಂದು ಕವಿತೆಯನ್ನು ಸಹ ಬರೆದಿದ್ದಾರೆ. ಅವರಿಗೆ ಅನಿವಾಸಿ ಬಳಗದ ಪರವಾಗಿ ಸುಸ್ವಾಗತ. ಅವರ ಕಿರು ಪರಿಚಯವನ್ನು ಒದಗಿಸಿದ ಡಾ.ದೇಸಾಯಿ ಅವರಿಗೆ ಕೃತಜ್ಞತೆಗಳು. ಡಾ.ದಾಕ್ಷಾಯಿಣಿಯವರು  ಗಣೇಶ ಹಬ್ಬದ ಕೆಲವು ಬಾಲ್ಯ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಶ್ರೀ ರಂಜನಿ ಸಿಂಹ ಅವರು ಗಣೇಶ ಸ್ತುತಿಯನ್ನು ಸುಮಧುರವಾಗಿ ಹಾಡಿ ಹಬ್ಬಕ್ಕೆ ಒಪ್ಪುವ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಿದ್ದಾರೆ. ಅವರ ವಿಡಿಯೋವನ್ನು ಕೆಳಗೆ ಒದಗಿಸಲಾಗಿದೆ. 
   -ಸಂಪಾದಕ
  
ಫೋಟೋ ಕೃಪೆ ಡಾ. ಕಿರಣ ರವಿಶಂಕರ್
ಗೌರಿ ಹಬ್ಬದ ನೆನಪುಗಳು - ಡಾ ಕಿರಣ ರವಿಶಂಕರ್, ಡೋಂಕಾಸ್ಟರ್
(’ನೀವು ಕನ್ನಡ ಮಾತಾಡುತ್ತೀರಾ?’ ನಮ್ಮೂರಿನ ಕೆರೆಯ ದಂಡೆಗುಂಟ ಮಾತನಾಡುತ್ತ ಹೊರಟ ನಮ್ಮ ಕಿವಿಯ ಮೇಲೆ ಬಿದ್ದ ಈ ವಾಕ್ಯವನ್ನು ಆನಂದಾಶಚರ್ಯದಿಂದ ಕೇಳಿ ತಿರುಗಿ ನೋಡಿದಾಗ ಕಂಡರು ತನ್ನಿಬ್ಬರು ಮಕ್ಕಳೊಂದಿಗೆ ಹೊರಟಿದ್ದ ಕಿರಣ! ಆಗ (2007) ನಮ್ಮ ಊರಲ್ಲಿ ಕನ್ನಡಿಗರು ಅಪರೂಪ. ಕನ್ನಡ ಬಳಗದ ಯಾರ್ಕ್ ಶೈರ್ ಶಾಖೆ (YSKB) ಆಗಿನ್ನೂ ಹುಟ್ಟಿರಲಿಲ್ಲ. ಅಂದಿನಿಂದ ಅಪ್ಪಟ ಕನ್ನಡ ಮಾತಾಡುವ, ಸಂಪ್ರದಾಯ ತಿಳಿದ ಕಿರಣ ಮತ್ತು ರವಿಯವರ ಮೈತ್ರಿ ಮತ್ತು ಅಡಿಗೆಯನ್ನು ಸವಿಯುತ್ತ ಬಂದಿದ್ದೇನೆ.ಇಲ್ಲಿ ಅವರು ತಮ್ಮ ಗೌರಿ ಹಬ್ಬದ ಸುಂದರ ನೆನಪುಗಳನ್ನು ಹಂಚಿ ಕೊಂಡಿದ್ದಾರೆ. -- ಶ್ರೀವತ್ಸದೇಸಾಯಿ)




ನಾವು ಪರದೇಶಕ್ಕೆ ಹೋಗುವಾಗ ನಮ್ಮ ಜೊತೆಗೆ ಭಾಷೆಯನ್ನಷ್ಟೇ ಅಲ್ಲದೆ ನಮ್ಮ ಮನೆ, ಕುಟುಂಬ, ಸಂಸ್ಕಾರ ಮತ್ತು ಬಾಲ್ಯದ ಹಿಂದಿನ ನೆನಪುಗಳನ್ನು ಸಹ ಒಯ್ದು ಗೂಡು ಕಟ್ಟಿಕೊಂಡಿರುತ್ತೇವೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಹಬ್ಬ-ಹರಿದಿನಗಳ ಆಚರಣೆ ತವರಿನ ನೆನಪಿಗೆ ಮುಖ್ಯ. ನಮ್ಮ ತಂದೆತಾಯಿಗಳಿಗೆ ದೊಡ್ಡ ಬಳಗ. ಅಜ್ಜಿ ತಾತರ ಒಂದು ಪುಟ್ಟ ಮನೆಯಲ್ಲಿ ಎಲ್ಲರೂ ಸೇರಿ 30ರಿಂದ 40 ಜನ ಗೌರಿ-ಗಣೇಶ ಹಬ್ಬ ಆಚರಿಸುತ್ತಿದ್ದುದು ಮತ್ತು ಭಜನೆ, ಸ್ತೋತ್ರ, ಹಾಡುಗಳನ್ನು ಹಾಡುತ್ತಿದ್ದುದರ ನೆನಪು ಇಂದಿಗೂ ಹಚ್ಚ ಹಸಿರಾಗಿದೆ. ಆ ಶಿವ -ಪಾರ್ವತಿಯರ ಸರಸ ಸಲ್ಲಾಪದ ಸಂಪ್ರದಾಯದ ಹಾಡಿನಲ್ಲಿ ಮತ್ತೆ ಮತ್ತೆ ಬರುವ ”ನಮ್ಮವರು ಬಡವರು ಇನ್ನೇನು ಕೊಡುವರು” ಅನ್ನುವ ಸಾಲನ್ನು ಭಾವಪೂರ್ವಕವಾಗಿ ನನ್ನ ತಾಯಿ ಹಾಡುತ್ತಿದ್ದುದು ನನ್ನ ತಲೆಯಲ್ಲಿ ಸ್ಥಿರವಾಗಿ ಉಳಿದಿದೆ. ಜಗನ್ಮಾತೆಯಾಗಿದ್ದರೂ ತವರಿನಿಂದ ಬಂದ ಪಾರ್ವತಿಗೆ ಶಿವ ’ಬೇಗನೆ ಹೇಳು, ಈಗಲೇನಿತ್ತರು, ಇನ್ನೇನು ಕೊಡುವರು?’ ಅನ್ನುವ ಪ್ರಶ್ನೆಗೆ ಆಕೆ ಕೊಡುವ ಉತ್ತರದಲ್ಲಿ ಬರುವ ಸಾಲುಗಳಲ್ಲಿ ’ನನ್ನ ತಂದೆ ಮುದುಕ, ಬಡವ ನಮಗೇನು ಕೊಟ್ಟರೆಂದು ಭಾವಪೂರ್ವಕವಾಗಿ ಹಾಡುತ್ತಿದ್ದರು. ಆನಂತರ ಬರುವ ಕೊನೆಯ ಸಾಲುಗಳಲ್ಲಿ ಕೊಟ್ಟದ್ದು ಸಮೃದ್ಧವಾಗಿಯೇ ಇರುತ್ತದೆ, ಲೋಕನಾಥನಿಗೆ ಇನ್ನೇನು ಕೊಟ್ಟಾರು,ಅದೇನೋ ನಿಜ. ಅದೇ ಥರ ಈ ದೇಶದಲ್ಲಿ ಬಂದಾಗ ಪ್ರತಿವರ್ಷವೂ ಗೌರಿ ಹಬ್ಬವನ್ನು ಸಾಧ್ಯವಾದ ಮಟ್ಟಿಗೆ ತಪ್ಪದೆ ಆಚರಿಸುತ್ತ ಬಂದಿದ್ದೇನೆ. 1999ರಲ್ಲಿ ಡಾನ್ ನದೀತೀರದ ಡಾಂಕಾಸ್ಟರಿಗೆ ಬಂದೆವು. ನಂತರ ವರ್ಷಗಳಲ್ಲಿ ಸಹ ಗೌರಿಗಾಗಿ ಊರಲ್ಲಿದ್ದಂತೆ ಬೆಳ್ಳಿ ಮುಖವಾಡವಾಗಲಿ, ಸರಿಯಾದ ದೇವರ ಮನೆಯಾಗಲಿ, ಪೀಠವಾಗಲಿ ಇರಲಿಲ್ಲ. ಈ ತರಹ  ’ಇಂಪ್ರೋವೈಸ್’ ಮಾಡಿ ಆಚರಿಸಿದ ಗೌರಿ ಗಣೇಶ ಹಬ್ಬದ ಸಂಕ್ಷಿಪ್ತ ವರ್ಣನೆ ಇಲ್ಲಿದೆ. 2015ರಲ್ಲಿ ಮುತ್ತೈದೆಯರನ್ನು ಕರೆದು ಗೌರಿ ಹಬ್ಬ ಮಾಡಿದಾಗ ಕಪಾಟಿನಡಿಯ ವರ್ಕ್ ಟಾಪ್ ಮೇಲೆಯೇ ಗೌರಿಯನ್ನು ಸ್ಥಾಪಿಸಿದ್ದೆ; ಕೆಳಗೆ ಕೂಡ್ರಲು ಗ್ರನೈಟ್ ಕುಟಾಣಿ, ಮೇಲೆ ಕಳಸಕ್ಕೆ ಇಟ್ಟ ತೆಂಗಿನಕಾಯಿಗೆ ಕಣ್ಣು ಮೂಗು ಬರೆದು, ಆ ಸಲ ಊರಿಗೆ ಹೋದಾಗ ನನ್ನ ತಮ್ಮ ಕೊಟ್ಟ ಹೊಸ ಸೀರೆಯನ್ನು ಸಡಗರದಿಂದ ಉಡಿಸಿ, ಮಾಂಗಲ್ಯ, ಬಳೆ, ಸೇವಂತಿಗೆಗಳಿಂದ ಸಿಂಗರಿಸಿಕೊಂಡಿದ್ದ ನನ್ನ ಪುಟ್ಟ ಗೌರಿ ನನ್ನ ಮನೆ ಮತ್ತು ಎಲ್ಲರ ಮನ ತುಂಬಿದ್ದಳು. ಎಲ್ಲರಿಗೂ ಜಗನ್ಮಾತೆಯಾಗಿದ್ದ ಗೌರಿ, ನಮ್ಮ ಮಗಳಾಗಿ ಬಂದಿದ್ದು, ನಾನಿತ್ತ ವೈಭವ ಅನುಭವಿಸಿ  ನಮ್ಮನ್ನೆಲ್ಲ ಹರಸಿದ್ದಳು. ಮುತ್ತೈದೆಯರಿಗೆಲ್ಲ ಬಾಗಣ ಕೊಟ್ಟಿದ್ದಾಯಿತು.  ಮರು ದಿನ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗಲು ಬರುವ ಗಣೇಶನ ಪೂಜೆ. ಒಂದು ಪುರಾಣ ಕಥೆಯ ಪ್ರಕಾರ ಗೌರಿ ನಮ್ಮಗಳ ಮನೆಮಗಳಾಗಿ ಬರುವುದು ತವರು ಮನೆಗೆ ಹೋಗುವದರ ಪ್ರತೀಕ. ಅವಳನ್ನು ಮತ್ತೆ ಕರೆತರಲು ಶಿವನ ಆದೇಶವನ್ನು ಶಿರಸಾ ವಹಿಸಿ ಗಣೇಶ ಮನೆ ಮನೆಗೆ ಬರುತ್ತಾನೆ (ಅದಕ್ಕೇ ಮರುದಿನ ಆತನ ಪೂಜೆ). ಆತನೊಡನೆ ತಾಯಿಯನ್ನು ವಾಪಸ್ ಕಳಿಸಲಾಗುತ್ತದೆ.ಇಷ್ಟು ಕಥೆ.   ’ನಮ್ಮ ಪರದೇಶಿ ಪುಟ್ಟ ಗೌರಿ’ ನನಗೆ ಒಂದು ಕವಿತೆಯನ್ನು ಬರೆಯಲು ಸಹ ಸ್ಫೂರ್ತಿಯಿತ್ತಿದ್ದಳು ಅದನ್ನೇ ಇಲ್ಲಿ ಕೆಳಗೆ ಚಿತ್ರದೊಂದಿಗೆ ಹಂಚಿಕೊಂಡಿರುವೆ. ನನ್ನ ತಾಯಿ ಹಾಡಿದ ಅಪರೂಪದ ಸಂಪ್ರದಾಯದ ಹಾಡನ್ನು ಕೊಂಡಿ ಒತ್ತಿ ಕೇಳಿರಿ. (ಕ್ಷಮೆಯಿರಲಿ, ಅವರಿಗೆ ಆ ದಿನ ಇನ್ನೂ ನೆಗಡಿ ಇತ್ತು.)
ನಮ್ಮ ಪುಟ್ಟ  ಗೌರಿ  - ಬರೆದರು ಕಿರಣ ರವಿಶಂಕರ್


ಕಿಚನ್ ವರ್ಕ್ ಟಪ್  ಮೇಲೆ  ಹಾರಿ
ಕಪಾಟಿ ನ ಅಡಿಯಲ್ಲಿ
ಅಡುಗಿ ಕುಳಿರುವ ಈ ನಮ್ಮ ತುಂಟ ಪುಟ್ಟ ಗೌರಿ
ತ್ತರವಾಗಿ ತೋರಲು  ಹಸಿರು ಬಣ್ಣದ
 ಗ್ರಾನೈಟ್ ಕುಟ್ಟಾಣಿಯನ್ನೇ 
ಸಿಂಹಾಸನವೆಂದು ತಿಳಿದು
ಹೆಮ್ಮೆಯಿಂದ ಕುಳಿತಿರುವ
ಈ ನಮ್ಮ ಮುಗ್ಧ ಪುಟ್ಟ ಗೌರಿ

ಸೇವಂತಿಗೆ ಹೂವಿನ ಜಡೆಯನ್ನೇ  
ಕೇಶರಾಶಿಯೆಂದು  ತಿಳಿದು 
ಗತ್ತಿನಿಂದ ಕುಳಿತಿರುವ  
ಈ ನಮ್ಮ ಜುಟ್ಟಿಲ್ಲದ ಪುಟ್ಟ ಗೌರಿ   

ನನ್ನ ಸೋದರ ಕೊಡಿಸಿದ 
ಅಪ್ಪಟ ಮೈಸೂರಿನ ರೇಶಿಮೆಯ ಸೀರೆಯನ್ನು ಮೈಧರಿಸಿ
ಮಾಂಗಲ್ಯ, ಅರಿಶಿನ-ಕುಂಕುಮ ಬಳೆಗಳನ್ನು ತೊಟ್ಟು
ಇತರೇ ಮುತ್ತೈದೆ ಶೃಂಗಾರ ಸಿಂಗರಿಸಿ
ಪೂಜಿಸಿಕೊಳ್ಳಲು ಕಾದಿರುವ ತಾಯಿ 
ಈ ನಮ್ಮ ಮುತ್ತೈದೆ ಪುಟ್ಟ ಗೌರಿ

ನಮ್ಮ ಮನೆಯ ಗೌರಿಯ ಕಳಸದಲ್ಲಿಟ್ಟ
ಡಾಂಕಾಸ್ಟರ್ ನ ಡಾನ್ ನದಿಯ ನೀರನ್ನೇ
ಕೈಲಾಸವಾಸಿ ಶಿವನ ಜಟೆಯ
ಗಂಗಾಜಲವೆಂದು ತಿಳಿದು,
ನಮ್ಮ ಮನೆಯಂಗಳದಿ ಬೆಳೆದ 
ದೇಸಿ ಹೂ-ಹಣ್ಣುಗಳನ್ನು 
ಸ್ವರ್ಣಗೌರಿ ಪೂಜೆಗಾಗಿ ಅರ್ಪಿಸಿಕೊಂಡಿರುವ   
ಈ ನಮ್ಮ ಪರದೇಶಿ ಪುಟ್ಟ ಗೌರಿ!

ನಾನು ಕೆಲಸಕ್ಕೆ ಹೋಗಿ  ಬರುವ ತನಕ
ಕಾದು ಹಸಿದು  ಸೋತು ಮುನಿದು 
ಹೊತ್ತು ಗೊತ್ತಿಲ್ಲದ  ವೇಳೆಯಲ್ಲಿ ಪೂಜಿಸಿಕೊಂಡಿದ್ದರೂ 
ಭಾವ ಪೂರ್ಣ ಭಕ್ತಿಗೊಲಿದು ಹಸನ್ಮುಖಳಾಗಿ
ಮನೆಬೆಳಗಿ ನಮ್ಮನ್ನೆಲ್ಲ ಹರಸಿದ 
ದಯಾಮಯಿ ಈ ನಮ್ಮ ಪುಟ್ಟ ಗೌರಿ!

ಹೇಗಿರುವಳು ಈ ನಮ್ಮ ಪರದೇಶಿ ಪುಟ್ಟ ಗೌರಿ?

ಡಾ ಕಿರಣ ರವಿಶಂಕರ್ 


****************************************





ಗಣೀಶ ಬಂದ...
ಡಾ ದಾಕ್ಷಾಯಿಣಿ ಬಸವರಾಜ್ 

ಗಣಪತಿ ಹಬ್ಬವೆಂದರೆ ಈಗ ನನ್ನ ಮನ ಗುಣುಗುಣಿಸುವುದು ಕನಕದಾಸರ '' ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮಳಗಿಹನ್ಯಾರಮ್ಮ'' ಎನ್ನುವ ಹಾಡು. ನಮ್ಮ ಮನೆಯಲ್ಲಿ ಗಣೀಶನಿಗಿರುವಷ್ಟೇ ಆದ್ಯತೆ ಗೌರಮ್ಮನಿಗೂ ಉಂಟು. ಹಾಗಾಗಿ ಹಬ್ಬದ ಸಂಭ್ರಮ ಹಿಂದಿನ ದಿನವೇ ಶುರುವಾಗಿಬಿಡುತ್ತಿತ್ತು . ಅಮ್ಮನ ಹಿಂದೆಯೇ ಕಡುಬು ತಿನ್ನಲು ಬರುವ ''ಹೊಟ್ಟೆಯ ಗಣನಾಥ ' ನಷ್ಟು ಮುಖ್ಯವಾದ ಹಿಂದೂ ದೈವವಿಲ್ಲ. ಭಾರತದಾದ್ಯಂತ ಗಣಪತಿಗೆ ಪೂಜೆ ಸಲ್ಲುತ್ತದೆ. ವಿದ್ಯಾದಾನ ಮಾಡುವ, ವಿಘ್ನಗಳನ್ನ ನಿವಾರಿಸುವ, ಓದದ್ದಿದ್ದರೂ ಪರೀಕ್ಷೆಗಳಲ್ಲಿ ಉತ್ತೀರ್ಣಗೊಳಿಸುವ ಗಜಾನನನಿಗಿಂತ ಒಳ್ಳೆಯ ದೇವರುಂಟೆ?

ಬಡವರು ಸಿರಿವಂತರೆನ್ನದೆ, ಗಣೀಶ ಎಲ್ಲರ ಮನೆಗೂ ಭೇಟಿ ಇತ್ತು ಹರಸುತ್ತಾನೆ ಗಣೀಶ ಚತುರ್ಥಿಯ ದಿನ.

ನನ್ನ ಬಾಲ್ಯದ ನೆನೆಪೆಂದರೆ ' ಗಣೀಶ ಬಂದ, ಕಾಯಿಕಡುಬು ತಿಂದ' ಎಂದು ಹಾಡಿಕೊಂಡು ಅಮ್ಮ ಹಸಿಕಾಯಿ ತುರಿದು, ಹುರಿದು, ಬೆಲ್ಲ ಏಲಕ್ಕಿ ಸೇರಿಸಿ ಮಾಡಿದ ಕಾಯಿ ಕರ್ಜಿಕಾಯಿಗಳನ್ನು ಪ್ರಸಾದವೆನ್ನುವ ಹೆಸರಿನಲ್ಲಿ ರುಚಿ ನೋಡಿ ಅದರ ಜೊತೆಗೇ ತಯಾರಾಗುವ ಮತ್ತಿತರ ತಿಂಡಿಗಳನ್ನು ತಿಂದು ತೇಗಿ, ಕೆಲ ಕಾಲ ವಿಶ್ರಮಿಸಿದ ನಂತರದ ಮುಖ್ಯ ಕೆಲಸವೆಂದರೆ, ನನ್ನ ಪ್ರಾಥಮಿಕ ಶಾಲೆಯ ಕೆಲ ಸ್ನೇಹಿತರೊಡನೆ ೧೦೧ ಗಣಪತಿಗಳಿಗೆ ಅಕ್ಷತೆ ಹಾಕುವ ಕಾರ್ಯಕ್ರಮದಲ್ಲಿ ಭಾಗಿಯಾಗುವುದು. ಭಕ್ತಿಗಿಂತ ಸ್ನೇಹಿತರ ಜೊತೆ ಕಾಲಕಳೆದು ಓದು ತಪ್ಪಿಸಿಕೊಳ್ಳುವ ಸಂಭ್ರಮವೇ ಹೆಚ್ಚು.

ಒಂದು ಸಣ್ಣ ಬಟ್ಟಲಲ್ಲಿ ಅಕ್ಷತೆ ಹಿಡಿದು, ಯಾವ ರೀತಿಯ ಆಹ್ವಾನವಿಲ್ಲದೆ ರಾಜಾರೋಷವಾಗಿ ಸಿಕ್ಕಿದ ಮನೆಗಳಿಗೆಲ್ಲ ನುಗ್ಗುತ್ತಿದ್ದೆವು. ಈಗಿನ ಹಾಗೆ ಗೇಟುಗಳು ಇದ್ದ ಮನೆಗಳು ಕಡಿಮೆ. ಸೆಕ್ಯೂರಿಟಿ ಕ್ಯಾಮೆರಾದ ಬಗ್ಗೆ ಕೇಳಿಯೂ ತಿಳಿದಿರುವಂತ ಕಾಲವದು. ನಮ್ಮ ಗಲಾಟೆಯಿಂದ ಕೆಲ ಅಜ್ಜಿ, ತಾತಗಳಿಂದ ಬೈಗುಳ ಆಶೀರ್ವಾದವು ಸಹ ದೊರೆಯುತ್ತಿತ್ತು. ಹಬ್ಬಗಳು, ಸಿರಿವಂತಿಕೆಯ ಹೆಗ್ಗಳಿಕೆಯನ್ನು ತೋರಿಸಿಕೊಳ್ಳಲು ಬಳಸುವ ಆಯುಧವಲ್ಲದ ಕಾಲವಾಗಿರಲಿಲ್ಲ ಅದು. ಈಗಿನ ಕಾಲದ ಜನ ಲಕ್ಷ್ಮಿ ಹಬ್ಬದ  ದಿನ ಅವರ ಬೆಳ್ಳಿ, ಬಂಗಾರದ ಜೊತೆಗೆ ಕಂತೆ, ಕಂತೆ ಹಣದ ಪ್ರದರ್ಶನ ಮಾಡುವುದನ್ನು ನೀವು ನೋಡಿರಬಹುದು, ಭಾಗವಹಿಸಿರಬಹುದು ಅಥವಾ ಕೇಳಿರಬಹುದು. ಬಹಳ  ಜನರ ಬಳಿ ಹಣವೂ ಕಡಿಮೆಯಿದ್ದು, ದೇಶದಲ್ಲೇ ಬಡತನ ಹೆಚ್ಚಿದ್ದ  ದಶಕಗಳವು. ಗಣೀಶನನ್ನು ಮಂಟಪದಲ್ಲಿ ಕೂರಿಸಿರದ ಮನೆಗಳವರು( ಬಡತನದ ಕಾರಣದಿಂದಿರಬಹುದು), 'ಅಕ್ಷತೆಯನ್ನು ಗೋಡೆಯ ಮೇಲಿರುವ ಗಣೀಶನ ಫೋಟೋಗೆ ಹಾಕಿ' ಎಂದು ಹೇಳಿದರೆ ನಮಗೆಲ್ಲಿಲ್ಲದ ಕೋಪ ನಿರಾಸೆ. ನಮ್ಮ ೧೦೧ ಸಂಖ್ಯೆಯಿಂದ ಫೋಟೋಗಳ ಗಣಪನನ್ನು, ನಿರ್ದ್ಯಾಕ್ಷಿಣ್ಯವಾಗಿ ಮೈನಸ್ ಮಾಡಿಬಿಡುತ್ತಿದ್ದೆವು. ನಮ್ಮ ಅಜ್ಞಾನದ ಬಗ್ಗೆ, ನಮಗರಿಯದೆಯೇ ಕೆಲ ಮಕ್ಕಳ ಮತ್ತು ಹಿರಿಯರ ಮನ ನೋಯಿಸಿರಬಹುದಾದ ಸಾಧ್ಯತೆಯ ಬಗ್ಗೆ ನೆನೆದರೆ ಈಗಲೂ ಮನಸ್ಸಿಗೆ ಖೇದವಾಗುತ್ತದೆ. ಏಕದಂತ ತನ್ನ ಎಣೆಯಿಲ್ಲದ ಕರುಣೆಯಿಂದ ನಮ್ಮನ್ನು ಕ್ಷಮಿಸಿದನೆನ್ನುವುದರ ಬಗೆಗೆ ಅನುಮಾನ ನನಗಿಲ್ಲ.

ಅಕ್ಷತೆ ಹಿಡಿದು ಸಾಯಂಕಾಲವೆಲ್ಲ ತಿರುಗಿ, ರಾತ್ರಿಯೇ ಮನೆಗೆ ಮರಳುತ್ತಿದುದು. ಮೋಡಗಳಿಲ್ಲದ ಆ ರಾತ್ರಿಯ ದಿನ, ಚಂದ್ರನ ಕಡೆಗೆ ಅಪ್ಪಿತಪ್ಪಿಯೂ ಕಣ್ಣು ಹಾಯಿಸುವಂತಿಲ್ಲ. ಅಕಸ್ಮಾತ್ ಚಂದ್ರನನ್ನ ನೋಡಿಯೇ ಬಿಟ್ಟರೆ, ಏನಾಗುತ್ತದೋ ಎನ್ನುವ ಭಯದಿಂದ ' ಶಮಂತಕ ಮಣಿ ಮತ್ತು ಕೃಷ್ಣ ' ಕತೆಯನ್ನು ದೋಷನಿವಾರಣೆಗಾಗಿ ಗಮನವಿಟ್ಟು ಕೇಳುತ್ತಿದ್ದ ನೆನಪು ಮನದಲ್ಲಿ, ಕಡುಬಿನ ರುಚಿಯಷ್ಟೇ ಸಿಹಿ ಮತ್ತು ಹಸಿ.

ಸ್ನೇಹಿತರೆ, ಮೋದಕ ಹಸ್ತದ ಆಶೀರ್ವಾದವು ನಿಮಗೆ ಲಭಿಸಲಿ. ಚತುರ್ಥಿಯ ದಿನ ಚಂದ್ರನ ಕಡೆಗೆ ಕಣ್ಣು ಹಾಯಿಸಬಾರದೆಂದು ನೆನಪಿರಲಿ.

ದಾಕ್ಷಾಯಿಣಿ



ಗಣೇಶ ಸ್ತುತಿ – ಶ್ರೀ ರಂಜನಿ ಅವರಿಂದ

ಭಾರತ ಸ್ವಾತಂತ್ರ್ಯ ದಿನಾಚರಣೆಯಂದು ಹಲವು ಪ್ರಶ್ನೆಗಳು ಮತ್ತು ನೆನಪುಗಳು

ಇತ್ತೀಚಿಗಷ್ಟೇ  ಭಾರತ ತನ್ನ ೭೬ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು. ಈ ೭೬ ವರ್ಷಗಳಲ್ಲಿ ಭಾರತ ಸಾಕಷ್ಟು ಪ್ರಗತಿಯನ್ನು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಗಳಿಸಿದೆ. ಇದರಿಂದಾಗಿ ಭಾರತೀಯರ ಆತ್ಮ ವಿಶ್ವಾಸ ಸ್ವಾಭಿಮಾನ ಹೆಚ್ಚಾಗಿದೆ. ಇದು ಅತ್ಯಂತ ಹೆಮ್ಮೆಯ ವಿಷಯ. ಭಾರತದ ನಗರಗಳಲ್ಲಿ ಮಧ್ಯಮ ವರ್ಗದವರ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಸಾಂಸಾರಿಕ ಜೀವನಗಳಲ್ಲಿ ನೆಮ್ಮೆದಿ ಸಂತೋಷಗಳಿವೆ. ಈ ಪ್ರಗತಿಗೆ ಯಾವುದೇ ಒಬ್ಬ ಜನ ನಾಯಕ ಅಥವಾ ರಾಜಕೀಯ ಪಕ್ಷ ಕಾರಣವಲ್ಲ. ಕಳೆದ ಹಲವಾರು ದಶಕಗಳಲ್ಲಿ ಹಲವಾರು ಜನನಾಯಕರ, ರಾಜಕೀಯ ಪಕ್ಷಗಳ, ದಕ್ಷ ಅಧಿಕಾರಿಗಳ, ವಿವಿಧ ಧಾರ್ಮಿಕ ಹಿನ್ನೆಲೆಯ ಪ್ರಾಮಾಣಿಕ ಜನಸಾಮಾನ್ಯರ, ವಿಜ್ಞಾನಿಗಳ, ಕಲಾವಿದರ ಪರಿಶ್ರಮ, ಧಾರ್ಮಿಕ ಸಹಿಷ್ಣುತೆ ಮತ್ತು ಜಾತ್ಯಾತೀತ ಭಾವನೆಗಳು ಮತ್ತು ಕರ್ತವ್ಯ ನಿಷ್ಠೆ ಈ ಪ್ರಗತಿಗೆ ಕಾರಣವಾಗಿದೆ. ನಾವು ನಿಂತ ನೆಲೆಯ ಹಿನ್ನೆಲೆ ಮತ್ತು  ಪರಂಪರೆಯನ್ನು ಅರಿಯಬೇಕಾಗಿದೆ. ಇಂದಿನ ಪ್ರಸಕ್ತ ಸಾಮಾಜಿಕ -ರಾಜಕೀಯ ಸನ್ನಿವೇಶದಲ್ಲಿ ಕೆಲವು ವಿಚಾರಗಳನ್ನು ತಮ್ಮ ನಿಲುವಿಗೆ ಒಪ್ಪುವಂತೆ ಬದಲಾಯಿಸುವ ಪ್ರಯತ್ನ ಕೆಲವರಿಂದ ನಡೆದಿದೆ. ಕೆಲವರಿಗೆ ಗಾಂಧಿ ಒಬ್ಬ ಕ್ಷುಲಕ ಮತ್ತು ಅಪ್ರಸ್ತುತ ವ್ಯಕ್ತಿಯಾಗಿದ್ದಾರೆ, ಸ್ವಾತಂತ್ರ್ಯ ಹೋರಾಟ ನಡೆಸಿದ ಪಿತಾಮಹರನ್ನು ಪಕ್ಕಕ್ಕೆ ತಳ್ಳಿ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿರುವುದು ವಿಪರ್ಯಾಸವಾದ ಮತ್ತು ವಿಷಾದದ ಸಂಗತಿ. ಒಂದು ದೇಶ ತನ್ನ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದರೂ ಅಲ್ಲಿ ಎಲ್ಲರಿಗೂ ವೈಯುಕ್ತಿಕ ನೆಲೆಯಲ್ಲಿ ಸ್ವಾತಂತ್ರ್ಯ ದೊರಕಿದೆ ಎಂದು ಹೇಳಲಾಗುವುದಿಲ್ಲ. ದೇಶವನ್ನು ಆಳುವ, ಸ್ವಾತಂತ್ರ್ಯವನ್ನು ನಿಯಂತ್ರಿಸುವ ರಾಜಕೀಯ,ಆರ್ಥಿಕ, ಧಾರ್ಮಿಕ, ಜಾತಿ ಮುಂತಾದ ವ್ಯವಸ್ಥೆ ಈ ಸ್ವಾತಂತ್ರ್ಯವನ್ನು ಕಸಿದು ಕೊಳ್ಳಬಹುದು. ಒಂದು ದೇಶ ಒಟ್ಟಾರೆ ಪರಿಶ್ರಮದಿಂದ ಗಳಿಸಿದ ಸ್ವಾತಂತ್ರ್ಯ ಯಾರಿಗೆ? ಎಷ್ಟರ ಮಟ್ಟಿಗೆ ತಲುಪಿದೆ? ಎಂಬುದನ್ನು ಕುರಿತು ಕವಿ ಸಿದ್ದ ಲಿಂಗಯ್ಯ ಹೀಗೆ ಬರೆಯುತ್ತಾರೆ; 
( ಆಯ್ದ ಸಾಲುಗಳು) 

ಯಾರಿಗೆ ಬಂತು? ಎಲ್ಲಿಗೆ ಬಂತು? ನಲವತ್ತೇಳರ ಸ್ವಾತಂತ್ರ್ಯ 
 ಜನಗಳ ತಿನ್ನುವ ಬಾಯಿಗೆ ಬಂತು, ಕೋಟ್ಯಧೀಶರ ಕೋಣೆಗೆ ಬಂತು 
ಮಹಡಿಯ ಮನೆಗಳ ಸಾಲಿಗೆ ಬಂತು, ಪೋಲಿಸರ  ಬೂಟಿಗೆ ಬಂತು 
ಬಂದೂಕದ ಗುಂಡಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ 

ಬಡವರ ಮನೆಗೆ ಬರಲಿಲ್ಲ, ಬೆಳಕಿನ ಕಿರಣ ತರಲಿಲ್ಲ 
ಗೋಳಿನ ಕಡಲನು ಬತ್ತಿಸಲಿಲ್ಲ, ಸಮತೆಯ ಹೂವನು ಅರಳಿಸಲಿಲ್ಲ  
ಯಾರಿಗೆ ಬಂತು? ಎಲ್ಲಿಗೆ ಬಂತು? ನಲವತ್ತೇಳರ ಸ್ವಾತಂತ್ರ್ಯ 

 
ಕವಿ ಸಿದ್ದಲಿಂಗಯ್ಯ ಈ ಕವಿತೆಯನ್ನು ಬರೆದು ಹಲವಾರು ವರ್ಷಗಳು ಸಂದಿವೆ. ಇದೇ ಮೇಲಿನ ಪ್ರಶ್ನೆಯನ್ನು ಡಾ ಗುರುಪ್ರಸಾದ್ ಪಟ್ವಾಲ್ ಅವರು ಭಾರತದ ಪ್ರಸಕ್ತ ರಾಜಕೀಯ-ಸಾಮಾಜಿಕ  ಪರಿಸ್ಥಿತಿಗೆ ಹೋಲಿಸಿ ತಮ್ಮ ಕವನದಲ್ಲಿ ಚಿಂತಿಸಿದ್ದಾರೆ ಮತ್ತು ತಮ್ಮ ವ್ಯಥೆಯನ್ನು ದಾಖಲಿಸಿದ್ದಾರೆ. " ಎಲ್ಲಿದೆ ಸ್ವಾಮೀ ಸ್ವಾತಂತ್ರ್ಯ?" ಎಂಬ ಪ್ರಶ್ನೆಯಲ್ಲಿ ಕೊನೆಗೊಳ್ಳುವ ಈ ಕವಿತೆಯನ್ನು ಓದಿ, ನಮ್ಮ ದೇಶದಲ್ಲಿ ಯಾರಿಗೆ? ಎಷ್ಟರ ಮಟ್ಟಿಗೆ? ಸ್ವಾತಂತ್ರ್ಯ ಇದೆ ಎನ್ನುವುದನ್ನು  ಓದುಗರೇ ಅರಿತುಕೊಳ್ಳಬೇಕು.   

ಸ್ವಾತಂತ್ರ್ಯ ದಿನಾಚರಣೆ ಎಲ್ಲ ಭಾರತೀಯರಿಗೆ ಹೆಮ್ಮೆಯ ವಿಷಯ. ಅದರಲ್ಲೂ ಶಾಲಾ ಮಕ್ಕಳಿಗೆ  ದಿನಾಚರಣೆಯ ಸಡಗರ ಸಂಭ್ರಮಗಳು, ಸಿದ್ಧತೆಗಳು, ಉತ್ಸವದ ಆಚರಣೆ ಉಲ್ಲಾಸಕರವಾಗಿದ್ದು, ಅಲ್ಲಿ ಇತಿಹಾಸ, ಶಿಸ್ತು, ಕವಾಯಿತು, ಮತ್ತು ದೇಶಭಕ್ತಿ ಗೀತೆಗಳ ಪರಿಚಯವಾಗುತ್ತದೆ. ಅಲ್ಲಿಯ ಸಾಮೂಹಿಕ ಆಚರಣೆ ಮಕ್ಕಳಲ್ಲಿ ಒಗ್ಗಟ್ಟಿನ ಮತ್ತು ಸಮತೆಯ ಭಾವನೆಯನ್ನು ನೀಡುತ್ತದೆ. ರಾಧಿಕಾ ಜೋಶಿ ಅವರು ಹಿಂದೆ ತಾವು ಖುದ್ದಾಗಿ ಭಾಗವಹಿಸಿದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು,  ಹಳೆ ನೆನಪುಗಳನ್ನು  ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

            - ಸಂಪಾದಕ 
***
ಫೋಟೋ ಕೃಪೆ ಗೂಗಲ್
ಸ್ವಾತಂತ್ರ್ಯ..?


ಅತಂತ್ರ ಕುತಂತ್ರಗಳ ದಿನಗಳ ನಡುವೆ 
ಬಂತು ಸ್ವಾತಂತ್ರ್ಯದ ದಿನ

ಎಲ್ಲೆಂದೆರಲ್ಲಿ ಧ್ವಜ 
ಕೆಲಸಕ್ಕಿಂದು ರಜ 

ಅಂದು ಯಾರದ್ದೋ ಬಲಿದಾನ
ಇಂದು ಯಾರಿಗೋ ಸನ್ಮಾನ

ಕೆಂಪು ನೆತ್ತರು ಹರಿಸಿದವರಾರೋ
ಕೆಂಪು ಕೋಟೆ ದರ್ಪದಿ ಹತ್ತಿದವರಾರೋ 

ತಿರಂಗದ ಬಣ್ಣಗಳಲ್ಲೇ ವರ್ಣಭೇದ
ಹಸಿರು ಕೇಸರಿಯಲ್ಲೇ ಜಾತಿವಾದ 

ಹುಟ್ಟಬಹುದೇ ಇಂದು ರಾಮವಾಣಿಯ ಕಬೀರ
ರಾಮ ರಹೀಮರು ಸರಿದರೇ ಇನ್ನೂ ದೂರ

ಕಬೀರನ ರಾಮವಾಣಿಗೆ ಇಂದು ಬೆಲೆ ಎಲ್ಲಿ
ಸಂತ ಶರೀಫನಿಗಿಂದು ನೆಲೆ ಎಲ್ಲಿ

ಸಿಹಿ ಉಣಿಸುವ ಉರ್ದು ಇಂದು ವಾರ್ತೆ ಮಾತ್ರ
ನೋವಳಿಸುವ ಯೋಗವಾಯಿತು ಹಿಂದೂ ಮಂತ್ರ
ಎಲ್ಲಿದೆ ಸ್ವಾಮೀ  ಸ್ವಾತಂತ್ರ್ಯ..?

ಡಾ . ಗುರುಪ್ರಸಾದ್ ಪಟ್ವಾಲ್

ಸುವರ್ಣ ವರ್ಷದ ನೆನಪು ಅಮೃತ ಘಳಿಗೆಯಲ್ಲಿ 
-  ರಾಧಿಕಾ ಜೋಷಿ 
ये शुभ दिन है हम सबका
लहरा लो तिरंगा प्यारा  

 
ನಮ್ಮ ದೇಶದ ಸ್ವತಂತ್ರ ಹೋರಾಟದ ಇತಿಹಾಸ ನಮ್ಮ ಪಠ್ಯದಲ್ಲಿ ಹಾಗು ಸಿನೆಮಾಗಳಲ್ಲಿ ನೋಡಿದ್ದೇವೆ. ನಮ್ಮ ಸ್ವತಂತ್ರ ಹೋರಾಟದ ಕಥೆಗಳು ನಮ್ಮನ್ನು ಭಾವುಕರನ್ನಾಗಿಸುವುದರ  ಜೊತೆಗೆ ನಮ್ಮಲ್ಲಿ ಆಕ್ರೋಶವನ್ನು ಉಂಟುಮಾಡುತ್ತದೆ. ಆದರೆ ಭಾರತ ಈಗ ಪ್ರಪಂಚವನ್ನೇ ಎದುರಿಸಿ ಎಲ್ಲ ಕ್ಷೇತ್ರದಲ್ಲೂ ಬೃಹದ್ಸಾಧನೆ ಮಾಡುತ್ತಲೇಯಿದೆ. ಆಗಸ್ಟ್ ೧೫ ಹತ್ತಿರ ಬಂದಂತೆ ನಮ್ಮಲಿ ದೇಶ ಪ್ರೇಮ ಹೆಚ್ಚಾಗಿ ಹುಚ್ಚಾಗುತ್ತೇವೆ. ಆದರೆ ಈ ಬಾರಿ ''ಹರ್ ಘರ್ ತಿರಂಗ'' ಅಭಿಯಾನ ಒಂದೇ ವಿಶೇಷ ವಿಚಿತ್ರ ಭಾವನೆ ನಮ್ಮೆಲ್ಲರ ಮನದಲ್ಲಿ ಮೂಡಿಸುತು.
ಎಲ್ಲರು ಹೋರಾಡಿದ ಭಾರತೀಯರೆಂಬ ಹೆಮ್ಮ ಸಹಜವಾಗಿಯೇ ಮೂಡಿತು. ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಲಿಲ್ಲವಾದರೂ ಅದರ ಶಾಲೆಯ ಆಚರಣೆಯ ಸಂಭ್ರಮದಲ್ಲಿ ಭಾಗಿಯಾಗಿದ್ದೆ ಅಂತ ಹೆಮ್ಮೆಯಿಂದೆ ಹೇಳಿಕೊಳ್ಳುತ್ತೇನೆ.  ''ಏ ಮೇರೇ ವತನ್ ಕೆ ಲೋಗೋ ಝರ ಆಂಖ ಮೇ ಭರಲೋ ಪಾನಿ''  ಈಹಾಡು ನಾನು ಮೊದಲ ಬಾರಿಗೆ ಯಾವಾಗ ಕೇಳಿದ್ದೇನೋ ಗೊತ್ತಿಲ್ಲ ಆದರೆ ಎಂಟನೆಯ ತರಗತಿಯಲ್ಲಿ ಸ್ವಾತಂತ್ರ  ದಿನದ  ಅಂಗವಾಗಿ ನಡೆಯಲಿದ್ದ ಕಾರ್ಯಕ್ರಮಕ್ಕೆ ನಮ್ಮ ಶಾಲೆ ಆಯ್ಕೆ ಆಗಿದ್ದು ಒಂದು ದೊಡ್ಡ ಸುದ್ದಿ. ಈ ಕಾರ್ಯಕ್ರಮ ನಮ್ಮ ಶಾಲೆಯ ಕ್ರೀಡಾ ಮೈದಾನದಲ್ಲ! ಮೈಸೂರಿನ ಪ್ರತಿಷ್ಠಿತ ಬನ್ನಿ ಮಂಟಪದಲ್ಲಿ. ಏಕೆಂದರೆ ಆ ವರ್ಷ ಸ್ವಾತಂತ್ರ ಸಿಕ್ಕ ಸುವರ್ಣ ವರುಷ ಅಂದರೆ 1997. ಮೈಸೂರು ಕೂಡ ದೊಡ್ಡ ಪ್ರಮಾಣದಲ್ಲಿ ತಯ್ಯಾರಿ ನಡೆಸಿತ್ತು. ನಗರದ ಸಚಿವರು ಮತ್ತು ಗಣ್ಯರು ಅಲ್ಲಿ ನೆರೆದು ಅಧಿಕೃತ ಧ್ವಜಾರೋಹಣ ಸಮಾರಂಭಕ್ಕೆ ವೇದಿಕೆ ಸಜ್ಜಾಗುತ್ತಿತ್ತು. ನಮಗೆ ಈವೆಲ್ಲರ ಅರಿವಿರಲಿಲ್ಲ.ತಿಂಗಳ ಮುಂಚಿತವಾಗಿಯೇ ಇಡೀ ಶಾಲೆಯ ಮಕ್ಕಳಿಗೆ ನೃತ್ಯಾಭ್ಯಾಸ. ನಮಗೆ ಖುಷಿನೋ ಖುಷಿ. ಯಾಕಂದ್ರೆ ಪಾಠವಿಲ್ಲ ಹೋಂ ವರ್ಕ್ ಇಲ್ಲ. ಅಷ್ಟೇ ಅಲ್ಲ ಎಲ್ಲಾ ಮಕ್ಕಳಿಗೂ ಬಾದಾಮಿ ಹಳದಿಯ ಚೂಡಿ ದಾರ್ ಸಮವಸ್ತ್ರ ಈ ನೃತ್ಯ ಪ್ರದರ್ಶನದ ಸಲುವಾಗು. ನಮ್ಮ ಶಾಲೆಯ ಆಡಿಟೋರಿಯಂ ಅನ್ನು ಒಂದು ಪುಟ್ಟ ಕಾರ್ಖಾನೆಯನ್ನಾಗಿ  ಪರಿವರ್ತಿಸಿ ೧೦-೨೦ ದರ್ಜಿಯನ್ನು ಕರೆತಂದು ನಮ್ಮ ಅಳತೆಯ  ಪ್ರಕಾರ ಚೂಡಿ ದಾರ್ ಹೋಲಿಸಲಾಯಿತು. ಇಡೀ  ದಿನ ಮೈದಾನದಲ್ಲಿ ಡಾನ್ಸ್ ಪ್ರಾಕ್ಟೀಸ್ !  2-3 ತಿಂಗಳು ಬೆಳಗಿನಿಂದ  ಸಂಜೆಯತನಕ ''ಏ ಮೇರೇ ವತನ್ ಕೆ ಲೋಗೋ ಝಾರ ಆಂಖ ಮೇ ಭರಲೋ ಪಾನಿ''!. ಎಲ್ಲಾ ಮಕ್ಕಳಿಗೂ ಬಾಯಿಪಾಠ. ನಮ್ಮ ಹಿಂದಿ ಬಹಳ ಶುದ್ಧವಾದ ಕರಣ ಪದಗಳ   ಅರ್ಥ ಸರಿಯಾಗಿ ತಿಳಿಯದೆ ಬರಿ ಕುಣಿದ್ದಾಯ್ತು. ಕನ್ನಡದ ಹಾಡು ಬದಲು ಹಿಂದಿ ಹಾಡು ಯಾಕೆ ಹಾಡಿನ ಅರ್ಥ ಪೂರ್ತಿಯಾಗಿ ತಿಳಿಯುವ ತಿಳುವಳಿಕೆ ಕೂಡ ಇರಲಿಲ್ಲ,ಯಾರನ್ನಾದರೂ ಕೇಳೋಣ ಅಂತ ನಮ್ಮ ತಲೆಗೆ ಬರಲೇ ಇಲ್ಲ. ಆದರೆ ಈ ದಿನಗಳು ಮಾತ್ರ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ.
ಭಾರತದ ನಕ್ಷೆ ಮಾಡಿ ಎಲ್ಲ ಮಕ್ಕಳನ್ನು ಅದ್ರೊಳಗೆ ನಿಲ್ಲಿಸಿ ಒಂದು ರಾಜ್ಯದಿಂದ ಮತ್ತೊಂದಕ್ಕೆ ಕುಣಿಯುತ್ತ ಹೋಗೋದು.ಮೈದಾನಲ್ಲಿ NCC ಕ್ಯಾಡೆಟ್ಸ್ ಸೈನಿಕರಾಗಿ ಗಡಿಯಲ್ಲಿ  ನಕಲಿ ಬಂದೂಕು ಗುಂಡಿನ ಸದ್ದು, ಅಶ್ರುವಾಯು ಎಲ್ಲವೂ  ಒಂದು ನೃತ್ಯ ನಾಟಕ ರೂಪಕ ಒಂದು ಸಮರದ ನೈಜ ದೃಶ್ಯಾವಳಿ ಸೃಷ್ಟಿಸಿತ್ತು. ನಮ್ಮ ನೃತ್ಯ ಪ್ರದರ್ಶನಕ್ಕೆ ನಮ್ಮ ಶಾಲೆಗೆ ಪ್ರಥಮ ಸ್ಥಾನ! ಅಷ್ಟೇ ಅಲ್ಲ .. ಇದೇ ಮತ್ತೆ ರಿಪೀಟ್ ದಸರಾ ಉತ್ಸವಕ್ಕೆ. ನಮಗೆ ಮಜಾ.. ಓದಿಲ್ಲ ಬರಿಯಿಲ್ಲ ! 

ಈ ಹಾಡು ಕೆಲ ವರಷುಗಳ ಹಿಂದೆ ಮತ್ತೆ ಕೇಳಿದೆ ಮೈ ಝಂಮ್ ಅಂತು! ಕವಿ ಪ್ರದೀಪ್ ಮನಸ್ಸಿನ್ನಲ್ಲಿ ಅದೆಷ್ಟು ದುಃಖ ರೋದನೆ! 1962 ರಲ್ಲಿ ಭಾರತ ಚೀನಾ ನಡುವಿನ ಯುದ್ಧದಲ್ಲಿ ಹುತಾತ್ಮರಾದ ವೀರ ಸೇನಾನಿಗಳಿಗೆ   ಶ್ರದ್ಧಾಂಜಲಿ ರೂಪದಲ್ಲಿ ಹೊರಬಂದ ಅಕ್ಷರ ಕಂಬನಿ. ಈ ಹಾಡನ್ನು ರಾಷ್ಟ್ರ ಗೀತೆಯಷ್ಟೇ ಸರಾಗವಾಗಿ ಹಾಡಬಲ್ಲ ನಾನು ಅರ್ಥಗೊತಿಲ್ಲದೆ ಬಡಬಡಿಸುತ್ತಿದ್ದೆ. ಈ ಗೀತೆಯ ಹಿನ್ನೆಲೆ ತಿಳಿದಿರಲಿಲ್ಲ. ಬಹಳಷ್ಟು ರೋಚಕ ಕಥೆಗಳಿವೆ. ಇವೆಲ್ಲವೂ ಈಗ ಬಹುಷಃ ಮುಖ್ಯವಲ್ಲ. ಆದರೆ 1963  ಗಣತಂತ್ರ ದಿನದ ಕಾರ್ಯಕ್ರಮದಲ್ಲಿ ಹಾಡಿದ ಲತಾ ಮಂಗೇಶ್ಕರ್ ಅವರಿಗೆ ಈ ಹಾಡಿನ ಯಶಸ್ಸಿನ ಮೇಲೆ ನಂಬಿಕೆಯಿರಲಿಲ್ಲ ಯಾಕೆಂದರೆ ಈಹಾಡು ಯಾವುದೇ ಸಿನಿಮಾಕ್ಕೆ ಬಳಸಿರಲಿಲ್ಲ.ಆದರೆ ಜವಾಹರ್ ಲಾಲ್ ನೆಹರು  ಅವರ ಪ್ರತಿಕ್ರಿಯೆ ಹಾಗು ಪದಗಳ ಸೂಕ್ಷ್ಮ ಹಾಗು ದೇಶಭಕ್ತಿಯ ಭಾವನೆ ಈ ಹಾಡನ್ನು ತಕ್ಷಣವೇ ಜನಪ್ರಿಯ ಮಾಡಿತು. ಈ ಹಾಡು ಈ ಪ್ರಸ್ತುತ ದಿನಕ್ಕೂ ಅಳವಡಿಸುತ್ತದೆ. ಪ್ರಪಂಚದ ಎಲ್ಲೋ ಮೂಲೆಯಲ್ಲಿ ಇಂತಹ  ಪರಿಸ್ಥಿತಿ ಇದ್ದೇಇದೆ. ಆದರೆ ನಾವು ಆಚರಿಸಬಹುದಾದ ಎಷ್ಟೋ ಹೆಮ್ಮೆಯ ವಿಷಯಗಳು ಇವೆ. ಭಾರತದ ಹಿರಿಮೆ ಗರಿಮೆಯ ಬಗ್ಗೆ ಮಾತಾಡಲು ನಾವು ಹಂಜರಿದಿದ್ದರೆ ನಾವು ಎಲ್ಲೇ ಇದ್ದರೂ  ಅದೇ ನಮ್ಮನ್ನು ಮತ್ತಷ್ಟು ಭಾರತದ ಸಮೀಪ ಕರೆದೊಯ್ಯುತ್ತದೆ. 
ಈಗ ಪ್ರತಿಬಾರಿ ಈ ಹಾಡು ಕೇಳಿದಾಗ ನನಗೆ ನಮ್ಮ ಶಾಲೆಯ ಆ ಅಮೃತ ದಿನಗಳು ಅಜಾದಿಯ ಮಹೋತ್ಸವ ಎಲ್ಲಾ ಕಣ್ಣ ಮುಂದೆ ಬರುತ್ತದೆ. ಭಾರತದ ಮೇಲೆ ಮತ್ತಷ್ಟು ಪ್ರೀತಿ ಗೌರವ ಹೆಚ್ಚಾಗುತ್ತದೆ.

***

ಫೋಟೋ ಕೃಪೆ ಕವಿತ ಕುಮಾರ್