ನಮಸ್ಕಾರ ಎಲ್ಲರಿಗೂ.
ಇವತ್ತಿನ ಆವೃತ್ತಿಯಲ್ಲಿ ಅನಿವಾಸಿ ಭಾರತೀಯ ವೈದ್ಯ ಕವಿಗೋಷ್ಠಿಯ ಎರಡನೆಯ ಅಂತಿಮ ಭಾಗವಿದೆ. ಇಲ್ಲಿ ನಮ್ಮ ಅನಿವಾಸಿ ಗುಂಪಿನ ಇಬ್ಬರು ಕವಿಗಳ ಕವನಗಳೊಂದಿಗೆ, ಆಯೊಜಕರಾಗಿದ್ದ ಡಾ. ಗಡ್ಡಿ ದಿವಾಕರ ಹಾಗೂ ಡಾ. ವೀಣಾ ಎನ್ ಸುಳ್ಯ ಅವರ ರಚನೆಗಳೂ ಇವೆ. ಕಾರ್ಯಕ್ರಮವನ್ನು ಸುರಳೀತವಾಗಿ ನಡೆಸಿಕೊಡುವ ಜವಾಬ್ದಾರಿಯ ಜೊತೆಗೆ, ಎರಡು ಒಳ್ಳೆಯ ಕವನಗಳನ್ನು ಅಂದಿನ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ್ದಕ್ಕೂ, ಅವನ್ನು ಅನಿವಾಸಿ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿಸಿದ್ದಕ್ಕೂ ಡಾ. ದಿವಾಕರ ಹಾಗೂ ಡಾ. ಸುಳ್ಯ ಅವರಿಗೆ ನನ್ನ ಕೃತಜ್ಞತೆಗಳು.
ಹೆಚ್ಚೇನೂ ಬರೆಯುವುದು ಬೇಕಿಲ್ಲ ಸಂಪಾದಕನಿಗೆ. ಮುಂದಿನ ಕೆಲಸ ನಿಮ್ಮದು, ಪ್ರಸ್ತುತಿಯನ್ನು ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸುವುದು.
- ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ).
*********************************************************

ರಾಮಶರಣ ಲಕ್ಷ್ಮೀನಾರಾಯಣ: ಅನಿವಾಸಿಯ ಸಕ್ರಿಯ ಸದಸ್ಯರಾದ ರಾಮ್ ಬಗ್ಗೆ ಹೇಳುವುದು ಬೇಕೇ? ಮಡಿಕೇರಿಯಲ್ಲಿ ಹುಟ್ಟಿ, ಅಂಕೋಲಾ ಮತ್ತು ದಾಂಡೇಲಿಯಲ್ಲಿ ಬೆಳೆದು, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜಿನಲ್ಲಿ ಎಂ ಬಿ ಬಿ ಎಸ್ ಪದವಿ ಪಡೆದರು. ಮುಂಬೈನಲ್ಲಿ ಜನರಲ್ ಮೆಡಿಸಿನ್ ಎಂಡಿ ಮುಗಿಸಿ, ಪ್ರಸ್ತುತ ಯುಕೆಯಲ್ಲಿ ರುಮಟಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು 2024 ರ ವೈದ್ಯ ಸಂಪದ ಸಂಪಾದಕೀಯ ಮಂಡಳಿಯಲ್ಲಿ NRI ವೈದ್ಯ ವಿಭಾಗದ ಸಹ ಸಂಪಾದಕರಾಗಿದ್ದಾರೆ.
ಉಡುಗೊರೆ
ಅಪ್ಪ-ಅಮ್ಮ ಮಾಡಿದ ಕೋಪ,ಮಾಸ್ತರರ ಬೆತ್ತ
ಬಿಸಿಲಲ್ಲಿ ಅಜ್ಜಿ ಕೊಟ್ಟ ಮಜ್ಜಿಗೆ
ಇಂದು ತುಪ್ಪಟ ಹಾಸಿದ ಹಾಸಿಗೆ
ಜೊತೆಗಾರನ ತೋಳು, ಮಗುವಿನ ಮುಗ್ಧ ನಗು
ಗಟ್ಟಿ ಗೆಳೆಯರ ಪೊಗರು
ಇದ್ದರೆ ಸಂಸಾರ ಹಗುರು
ಲಿಂಗ ಭೇದವಿಲ್ಲದ ಪ್ರೀತಿ, ಮತಭೇದವಿಲ್ಲದ ದೋಸ್ತಿ
ವೀಸಾ ಹಮ್ಮಿಲ್ಲದೇ ಹಾರುವ ಹಕ್ಕಿಗಳ ವ್ಯಾಪ್ತಿ
ಒರೆಯಿಡದೇ ಬೆರೆತ ತೃಪ್ತಿ
ಸೋತು ಕಲಿತ ಪಾಠ, ಸ್ಪರ್ಧೆಯಿಲ್ಲದ ಓಟ
ಹಸಿರೇ ಹರಿಯುವ ನೋಟ
ಕೈಗೆಟುಕುವ ಹಣ್ಣಿನ ತೋಟ
ಬಕಾಸುರನಾಗದ ಬದುಕು, ಜಗ ಸುತ್ತಿ ಬರದ ಸರಕು
ಪೋಲಾಗದ ನೀರು, ಹಂಚಿ ಕುಡಿದರೆ ಸಾರು
ಉಳಿದೀತು ಬರಡಲ್ಲದ ನಾಡು
ಗೀತೆ, ಬೈಬಲ್, ಕುರಾನ್, ಗ್ರಂಥ ಸಾಹಿಬ್ ಗಳ ಸಾರ
ಬುದ್ಧ, ಶರಣರ ಉದ್ಗಾರ
ಸಂತೃಪ್ತ ಜೀವನಕೆ ಆಧಾರ
-ರಾಂ.
****************************

ಡಾ. ಶಿವಶಂಕರ ಮೇಟಿ: ಅನಿವಾಸಿಯ ಬಳಗಕ್ಕೆ ತಮ್ಮ ಕಥೆ-ಕವನಗಳ ಮೂಲಕ ಈಗಾಗಲೇ ಪರಿಚಿತರಾಗಿರುವ ಮೇಟಿಯವರ ಹುಟ್ಟೂರು – ಬೆಳಗಾವಿ ಜಿಲ್ಲೆಯ ಧೂಪದಾಳ ಎಂಬ ಹಳ್ಳಿ. ಎಂ ಬಿ ಬಿ ಎಸ್ ಮಾಡಿದ್ದು ಕೆ ಎಂ ಸಿ ಹುಬ್ಬಳ್ಳಿಯಿಂದ; ಸದ್ಯ ನೆಲೆಸಿರುವುದು – ಸ್ಕಾಟ್ಲೆಂಡಿನ ಗ್ಲ್ಯಾಸ್ಗೋ ಪಟ್ಟಣದಲ್ಲಿ. ವೃತ್ತಿ – ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ.
ನಲ್ಲೆಗೊಂದು ನಲ್ಮೆಯ ಕವನ
ರವಿವರ್ಮನ ಕುಂಚದಲ್ಲಿ ಬಳಕಿರುವ ಬಾಲೆ ನೀನು
ಕಾಳಿದಾಸನ ಕಲ್ಪನೆ ನೀನು
ನಿನ್ನಂದವ ಬಣ್ಣಿಸಲೆನಗೆ ಈ ಜನ್ಮ ಸಾಲದಿನ್ನು
ಮರು ಜನ್ಮ ಬಾರದೇನು?
ಬೇಲೂರಿನ ಶಿಲೆಗಳಲ್ಲಿ
ಶಿಲ್ಪಿಗಳ ಕಲ್ಪನೆಯಲ್ಲಿ
ಏನೋ ಒಂದು ಕೊರತೆ ಇತ್ತು
ಏನೋ ಒಂದು ಕೊರತೆ ಇತ್ತು!!
ಬಾಲೆಯರ ಸಾಲಿನಲ್ಲಿ ನಿನಗೂ
ಒಂದು ಸ್ಥಳ ಬೇಕಿತ್ತು
ಯಮುನಾ ನದಿ ತೀರದಲ್ಲಿ
ಶಿಲ್ಪಿಗಳ ಮನಸಿನಲ್ಲಿ
ಏನೋ ಒಂದು ಕೊರತೆ ಇತ್ತು
ಏನೋ ಒಂದು ಕೊರತೆ ಇತ್ತು!!
ತಾಜಮಹಲಿನ ಗೋಡೆಯ ಮೇಲೆ
ನಿನ್ನ ಬಿಂಬಕೆ ಸ್ಥಳ ಬೇಕಿತ್ತು
- ಶಿವಶಂಕರ ಮೇಟಿ.
*********************************

ಡಾ. ಗಡ್ಡಿ ದಿವಾಕರ: ಮೂಲತಃ ಬಳ್ಳಾರಿಯವರಾದ ಡಾ। ಗಡ್ಡಿ ದಿವಾಕರ ಇವರು ತಮ್ಮ ಎಂಬಿಬಿಎಸ್ ಹಾಗೂ ಎಂಎಸ್ (ಶಸ್ತ್ರ ಚಿಕಿತ್ಸೆ) ಪದವಿಯನ್ನು ಬಳ್ಳಾರಿಯ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ (ಈಗ ವಿಮ್ಸ್ ಅಂದರೆ ವಿಜಯನಗರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ದಲ್ಲಿ ಪಡೆದ ನಂತರ ಮಕ್ಕಳ ಶಸ್ತ್ರಚಿಕಿತ್ಸೆಯಲ್ಲಿ ಎಂ.ಸಿಎಚ್. ಪದವಿಯನ್ನು ಮುಂಬೈನ ಸೇಟ್ ಜಿ ಎಸ್ ಮೆಡಿಕಲ್ ಕಾಲೇಜಿನಿಂದ ಪಡೆದಿದ್ದಾರೆ. ಪ್ರಸ್ತುತ ಬಳ್ಳಾರಿಯ ವಿಮ್ಸ್ ನಲ್ಲಿಯೇ ಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಕನ್ನಡದಲ್ಲಿ ಆಸಕ್ತಿ ಹಾಗೂ ಭಾರತೀಯ ವೈದ್ಯ ಸಂಘದ ಹಾಗೂ ಐಎಂಎ ಕನ್ನಡ ವೈದ್ಯ ಬರಹಗಾರರ ಸಂಘದ ಸಕ್ರಿಯ ಸದಸ್ಯರು ಆಗಿದ್ದಾರೆ. ಬಳ್ಳಾರಿಯಲ್ಲಿ ೨೦೨೨ ರಲ್ಲಿ ನಡೆದ ಸಂಗಮ ಅಂತರರಾಷ್ಟ್ರೀಯ ಕವಿ ಸಮ್ಮೇಳನದ ಆಯೋಜಕ ತಂಡದ ಸದಸ್ಯರೂ ಹೌದು.
ಸಪ್ತಸಾಗರದಾಚೆ
ಸಪ್ತಸಾಗರದಾಚೆ ಬದುಕು
ಅರಸಿ ವಲಸೆ ಹೋದವರು,
ಮಾಂಸಮಜ್ಜೆಗಳ
ತನುವಿಹುದಿಲ್ಲಿ
ಮನವೆಲ್ಲ ತಾಯ್ನೆಲದಲ್ಲಿ!
ಹೆತ್ತವರು ಒಡಹುಟ್ಟಿದವರು
ಎಲ್ಲ ತಾಯ್ನೆಲದಲ್ಲಿ,
ನಿತ್ಯನಿರತರು ನಾವು
ಪರಕೀಯರಾಗಿ ಪರದೇಶದಲ್ಲಿ
ಜೋಳಿಗೆ ತುಂಬುವಲ್ಲಿ !
ಅಮ್ಮನ ಕೈತುತ್ತಿನ ಬಯಕೆ
ಅಪ್ಪನ ಸಾಂತ್ವಾನಕ್ಕೆ ಚಡಪಡಿಕೆ,
ಅಂಬೆಗಾಲಿಟ್ಟು ಆಡಿದ
ತಾಯ್ನಾಡು
ಕೈಬೀಸಿ ಕರೆದಂತಿದೆ ನೋಡು!
ವಯಸ್ಸು ನಿರ್ದಾಕ್ಷಿಣ್ಯ
ಅಮ್ಮನಿಗೆ ಮಧುಮೇಹ
ಅಪ್ಪನಿಗೆ ವಯಸ್ಸಿನ ಕ್ಷಯ!
ನಾವು ಊರುಗೋಲಾಗದ ಸಂಧಿವಾತ
ಹಿತಸಾಂತ್ವಾನ ಕೇವಲ
ಬಾನುಲಿಗೆ ಸೀಮಿತ!
ಅಪ್ಪನ ಉಸಿರು ನಿದ್ದೆಯಲೆ ನಿಂತಂತೆ ದುಸ್ವಪ್ನ,
ಅಪರಾಧಿ ಭಾವದಲಿ
ಮನ ಕನಸಲ್ಲೆ ಮಾಡಿದೆ ಕಾಲ್ಜಾರಿ
ಬೀಳುವ ಅಮ್ಮನ ಹಿಡಿಯುವ ಯತ್ನ!
ಇದ್ದುಇಲ್ಲದ ಬದುಕು
ಸಪ್ತಸಾಗರದಾಚೆ
ಮುಟ್ಟಿದೆ ಸಾಗಿ,
ನಡೆದಿದೆ ಜೀವಚ್ಛವವಾಗಿ
ಹಾಗೆ ಸುಮ್ಮನೆ!
- ಡಾ॥ ಗಡ್ಡಿ ದಿವಾಕರ.
*****************************

ಡಾ. ವೀಣಾ ಎನ್ ಸುಳ್ಯ: ವೃತ್ತಿಯಲ್ಲಿ ಸ್ತ್ರೀ ಆರೋಗ್ಯ ಹಾಗೂ ಪ್ರಸೂತಿ ತಜ್ಞೆ. ಪ್ರವೃತ್ತಿಯಿಂದ ಲೇಖಕಿ, ಕಲಾವಿದೆ. ಕೃತಿಗಳು: ಸ್ತ್ರೀ ಸ್ವಾಸ್ಥ್ಯ, ಭಾವಾರ್ಣವ, ಹೃದಯಾರ್ಣವ, ಪಾಂಚಜನ್ಯದ ಘೋಷ, ಭಾವಯಾನ (ಗಝಲ್ ಲೋಕದಲ್ಲಿ ಒಂದು ಪಯಣ), ಕುಣಿಯೋಣು ಬಾರ (ಶಿಶುಗೀತೆ) ಎಂಬ ಕವನ ಸಂಕಲನ. ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಬೋಧನೆ ಜೊತೆಗೆ ವಿವಿಧ ಶಾಲಾಕಾಲೇಜುಗಳಲ್ಲಿ ಕವಿ-ಕೃತಿ-ಬದುಕು ಬಗ್ಗೆ, ಸಾಹಿತ್ಯದ ವಿಚಾರಗಳ ಕಾರ್ಯಕ್ರಮ ಸಂಘಟನೆ; ಭಾರತೀಯ ವೈದ್ಯಕೀಯ ಸಂಘ, ಕನ್ನಡ ವೈದ್ಯ ಬರಹಗಾರರ ವೇದಿಕೆ ಮತ್ತು ವಾಸವಿ ಸಾಹಿತ್ಯ ಕಲಾ ವೇದಿಕೆ ವತಿಯಿಂದ “ಸಾಹಿತಿಗಳಿಗೊಂದು ಸಂಜೆ” ಎಂಬ ವಿಶೇಷ ಆನ್ ಲೈನ್ ಕಾರ್ಯಕ್ರಮವನ್ನ ಪ್ರತಿ ಭಾನುವಾರ. ಜೊತೆಗೆ ವಾಸವಿ ಸಾಹಿತ್ಯ ಕಲಾ ವೇದಿಕೆ ವತಿಯಿಂದ 200ಕ್ಕೂ ಹೆಚ್ಚು ಸರಣಿ ಕಾರ್ಯಕ್ರಮ; ವೈದ್ಯಕೀಯ, ಸಾಹಿತ್ಯ, ಸಂಗೀತ, ಯಕ್ಷಗಾನ, ಸಂಘಟನೆ ಸೇರಿದಂತೆ ನಿರಂತರ ಕ್ರಿಯಾಶೀಲರಾಗಿ ಇರುವವರು.
ಭೋಗದಲಿ ಮುಳುಗದಿರಿ
ಜಗದ ಬಯಕೆಯು ಜೀವ ತಳೆಯುತ
ಹುಟ್ಟಿ ಬಂದಿಹ ಮನುಜ ಕುಲಜರೆ
ಮರೆತು ಬಿಟ್ಟಿರೆ ಬಂದ ಕಜ್ಜವ ಮುಳುಗಿ ಭೋಗದಲಿ|
ತಂದೆ ತಾಯಿಯ ನೀತಿ ನಿಯಮದ
ಮಾತ ಕೇಳುತ ಬೆಳೆದು ಬಂದರೂ
ಎಲ್ಲಿ ಹೋಯಿತು ಸತ್ಯ ತ್ಯಾಗದ ಶಾಂತಿ ಮಂತ್ರವದು||
ಎಲ್ಲಿ ನೋಡಲು ಅಲ್ಲಿ ನಡೆಯುವ
ಮೋಸ ಜಾಲದ ಕುಟಿಲ ತಂತ್ರವ
ನೋಡು ನೋಡುತ ಶಿಥಿಲವಾಗಿದೆ ಮನದ ಭಾವಗಳು|
ಮನದ ಕಣ್ಣನು ಒಮ್ಮೆ ತೆರೆಯುತ
ನಡೆದು ಬಂದಿಹ ದಾರಿ ನೋಡಲು
ತಪ್ಪು ಸರಿಗಳ ಮುಸುಕು ಸರಿಯಲು ನಿಜವು ಕಾಣುವುದು||
- ಡಾ. ವೀಣಾ ಎನ್ ಸುಳ್ಯ
***********************************************************



