ನಮ್ಮ ಆಹಾರ ಮತ್ತು ಆರೋಗ್ಯ – ಬಾಲ್ಯದ ನೆನಪುಗಳು ಮತ್ತು ಈಗಿನ ಜ್ಞಾನ: ರವಿರಾಜ್ ಉಪ್ಪೂರ್ ಭಟ್.

"You can’t just eat good food. You’ve got to talk about it too. And you’ve got to talk about it to somebody who understands that kind of food." - Kurt Vonnegut

"Most of us have fond memories of food from our childhood. Whether it was our mom's homemade lasagna or a memorable chocolate birthday cake, food has a way of transporting us back to the past." - Homaro Cantu.

ನಮಸ್ಕಾರ ಅನಿವಾಸಿ ಬಳಗಕ್ಕೆ.
ಮೇಲಿನ ಎರಡೂ ಹೇಳಿಕೆಗಳನ್ನು ಒಪ್ಪದೇ ಇರಲು ಸಾಧ್ಯವಿಲ್ಲ. ಊಟ ಎಲ್ಲಿಯದಾದರೇನು, ಅಮ್ಮನ ಕೈಯಡಿಗೆಯ ರುಚಿ ಬೇರೆಡೆ ಬಂದೀತೇ? ಇದನ್ನೇ ಮಿತ್ರ ರವಿರಾಜ ಉಪ್ಪೂರ್ ಭಟ್ ಅವರ ಮಾತಿನಲ್ಲಿ ಕೇಳೋಣ. ಎಂದಿನಂತೆ ಓದಿ, ನಿಮ್ಮ ಅನಿಸಿಕೆ, ಪ್ರತಿಕ್ರಿಯೆ ಹಂಚಿಕೊಳ್ಳಿ. - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).
**********************************************************
ಊಟ ಬಲ್ಲವನಿಗೆ ರೋಗವಿಲ್ಲ; ಮಾತು ಬಲ್ಲವನಿಗೆ ಜಗಳವಿಲ್ಲ ...

ಎಷ್ಟು ಚೆನ್ನಾಗಿ ಈ ಒಂದು ಗಾದೆ ಮಾತು ನಮಗೆ ಹೇಗೆ ಆರೋಗ್ಯದ ಬಗ್ಗೆ ಒಂದು ಕಿವಿಮಾತು ಹೇಳಿದೆ ನೋಡಿ. ನಮ್ಮ ಈಗಿನ ಹೊಸ ಪೀಳಿಗೆಯವರಿಗೆ ಇದರ ಬಗ್ಗೆ ಅರಿವು ತುಂಬಾ ಇದ್ದಂತಿಲ್ಲ. ಇದೇನೇ ಇದ್ದ್ರೂ ನಮ್ಮ ಪೀಳಿಗೆಯವರ ಆಹಾರ ಪದ್ಧತಿ ಹೇಗಿತ್ತೆಂದು ನೋಡೋಣ.

ನಾನು ಮೂಲತಃ ಉಡುಪಿಯವನು ಮಾರಾಯ್ರೆ. ಉಡುಪಿಯವ್ರು ಅಂದ್ರೆ ನಿಮಗೆಲ್ಲ ಮೊದ್ಲು ನೆನಪಾಗುದೇ ಹೋಟೆಲ್ ಅಂತ ನಂಗೆ ಗೊತ್ತುಂಟು ಮಾರಾಯ್ರೆ ... ಅದೇನೇ ಇದ್ದ್ರೂ ನಂಗೂ ಉಡುಪಿ ಹೋಟೆಲ್ಗೂ ಯಂತ ಕನೆಕ್ಷನ್ ಇಲ್ಲ ಮಾರಾಯ್ರೆ ....

ನಾನು ಹುಟ್ಟಿ ಬೆಳೆದಿದ್ದೆಲ್ಲಾ ಉಡುಪಿಯ ಒಂದು ಸಣ್ಣ ಹಳ್ಳಿಯಲ್ಲಿ. ನಮ್ಮ ಮನೆ ಒಂದು ಹಳೆ (ಸಾಧಾರಣ 200 ವರ್ಷ ಹಳೆಯ ಮನೆ) ಬಂಗ್ಲೊ. ಅದ್ರಲ್ಲಿ ನನ್ನ ಅಜ್ಜ, ಅಪ್ಪ, ಅಮ್ಮ, ನನ್ನ ಅಣ್ಣ, ತಮ್ಮ, ನಾನು ಹಾಗೂ ನಮ್ಮ ಚಿಕ್ಕಪ್ಪ ಮತ್ತು ಅವರ ಕುಟುಂಬ ಇದ್ದೆವು. ನಮ್ಮನೆ ಎಲ್ಲರ ಊಟ ತಿಂಡಿಯ ವ್ಯವಸ್ಥೆ ಮಾಡುವುದು ನಮ್ಮಮ್ಮನೇ.

ನಂಗೆ ಇನ್ನೂ ಹಚ್ಚ ಹಸಿರಾಗಿಯೇ ಇದೆ ಆ ಹಳೆ ನೆನಪುಗಳು ... ಮನೆ ತುಂಬಾ ಜನ ... ಮಳೆಗಾಲದಲ್ಲಿ ನಟ್ಟಿಯ ಸಮಯ ಮನೆಯ ಕೆಲಸದಾಳುಗಳು, ನಟ್ಟಿ ನಡುವೆ ಹೆಂಗಸರೂ, ಹಾಗೂ ಹೂಟೆಗೆ ಕಟ್ಟುವ ಒಂದು ಜೊತೆ ಎತ್ತು ಹಾಗು ಕೋಣ ಮತ್ತೆ 3-4 ದನ ಎಮ್ಮೆಗಳು ಕರಾವಿಗೆ ಇರುತ್ತಿದ್ದವು. ಅಮ್ಮ ಹಾಗೂ ನಿತ್ಯದ ಕೆಲಸದಾಳು ಕೂಸ ಸುಮಾರಿಗೆ ಬೆಳಿಗ್ಗೆ 5 ಗಂಟೆಗೆಲ್ಲ ಎದ್ದು ಮನೆಯವರಿಗೆಲ್ಲ ಬೆಳಿಗ್ಗಿನ ಕೊಚ್ಚಿಗೆ ಅಕ್ಕಿ ಗಂಜಿ ಹಾಗೂ ಹಟ್ಟಿಯ ಗಂಟಿಗಳಿಗೆಲ್ಲ 'ಬಾಯಿರು' (ಗಂಟಿಗಳಿಗೆ ಹಾಕುವ ಕಲಗಚ್ಚು ಮಿಶ್ರಿತ ಅನ್ನ ಹಾಗೂ ತೌಡು) ತಯಾರು ಮಾಡುವರು. ನಾವು ಶಾಲೆಗೆ ಹೋಗುವ ಮಕ್ಕಳೆಲ್ಲ 6- 6:30ರ ಸುಮಾರಿಗೆ ಎದ್ದು ಬಚ್ಚಲು ಒಲೆಯಲ್ಲಿ ಬಾಯಿರು ಬಿಸಿಮಾಡುವ ಒಲೆಯ ಎದುರು ಕೂತು ಸ್ವಲ್ಪ ಹೊತ್ತು ಚಳಿ ಕಾಸಿ ಕೂಸನೊಂದಿಗೆ (ಮನೆ ಕೆಲಸದವನು) ಹರಟೆ ಹೊಡೆಯುವುದು ದಿನನಿತ್ಯದ ಪದ್ಧತಿ. ನಮ್ಮೊಟ್ಟಿಗೆ ಮನೆಯ 'ರಾಜು' ನಾಯಿ ಕೂಡ ಪಕ್ಕದಲ್ಲೇ ಕೂತಿರುವುದು ಒಂದು ವಾಡಿಕೆ. ಹಾಗೆ ಚಳಿ ಕಾಸುವಾಗ ಒಲೆಯೊಳಗೆ ಹುಣಸೆ ಬೀಜವನ್ನೋ, ಹಲಸಿನ ಹಣ್ಣಿನ ಒಣಗಿದ ಬೀಜವನ್ನೋ ಕೆಂಪಿನ ಕೆಂಡದೊಳಗೆ ಹಾಕಿ ಹದನಾಗಿ ಸುಡುವುದು ನಾವು ಶಾಲೆ ಹುಡುಗರ ಒಂದು 'ಹೋಮ್ ವರ್ಕ್'. ಹೀಗೆ ಹದನಾಗಿಸಿದ ಹುಣಸೆ ಬೀಜ ಮತ್ತೆ ದಾಣಿ (ಹಲಸಿನ ಬೀಜಕ್ಕೆ ನಮ್ಕಡೆ ದಾಣಿ ಅಂತಲೂ ಹೇಳುವುದು ಒಂದು ವಾಡಿಕೆ ... ಬಹುಶಃ ಆಡುಭಾಷೆ ತುಳುವಿನಿಂದ ಬಂದದ್ದಿರಬೇಕು) ಎರಡೂ ಸರಿಯಾಗಿ ಪಾಲಾಗಿ ನಮ್ಮ ಕಂಪಾಸ್ ಪೆಟ್ಟಿಗೆಯೊಳಗೋ, ಇಲ್ಲ ಕಾಲಿ ಬೆಂಕಿಪೆಟ್ಟಿಗೆಯೊಳಗೋ , ಇಲ್ಲ ಶಾಲೆಯ ಚೀಲದೊಳಗೋ ಹೋಗಿ ಸೇರುತ್ತಿತ್ತು. ಇದೇ ನಮ್ಮ ಶಾಲೆಯ ವಿರಾಮದ ಸಮಯ್ದ 'tuck time ಫುಡ್'. ನೆನೆಸಿದರೆ ಈಗಲೂ ನನ್ನ ಬಾಯಲ್ಲಿ ನೀರೂರುತ್ತದೆ.

ಬೆಳಿಗ್ಗಿನ ನಿತ್ಯಕರ್ಮಗಳನ್ನೆಲ್ಲಾ ಕ್ಲಪ್ತವಾಗಿ ಮುಗಿಸಿ ಕುಚ್ಚಲಕ್ಕಿ ಗಂಜಿ ಊಟ ಮಾಡಬೇಕಿತ್ತು. ಗಂಜಿಯೊಂದಿಗೆ ತುಪ್ಪ, ಚಿಟಿಕೆ ಉಪ್ಪು ಹಾಗೂ ನೆಂಜಿಕೊಳ್ಳಲು ಉಪ್ಪಿನಕಾಯಿಯೋ, ಕೊತ್ತಂಬರಿಸೊಪ್ಪಿನ ಚಟ್ನಿಯೋ, ಮಾವಿನಕಾಯಿಯ ತೊಕ್ಕು ಇಲ್ಲ ಮಜ್ಜಿಗೆ ಮೆಣಸು ಅಥವಾ ಹಿಂದಿನ ದಿನದ ಹುಳಿ (ನಮ್ ಕಡೆ ತೆಂಗಿನಕಾಯಿ ರುಬ್ಬಿ ಮಸಾಲೆ ಹಾಕಿ ಮಾಡಿದ 'ಸಾಂಬಾರು'). ನನ್ನ ಅಣ್ಣ ಹಾಗೂ ಅಪ್ಪನಿಗೆ ಗಂಜಿ ಊಟ ಅಂದ್ರೆ ಪಂಚ ಪ್ರಾಣ. ನನಗೆ ಹಾಗು ನನ್ನ ತಮ್ಮನಿಗೆ ಗಂಜಿ ಊಟ ಅಂದ್ರೆ ಅಷ್ಟಕ್ಕಷ್ಟೇ. ನಾನು ಅರ್ಧ ಗಂಜಿ ತಿಂದು ಉಳಿದರ್ಧ ನನ್ನ ಪ್ರೀತಿಯ ರಾಜು ನಾಯಿಯ ಕೊರಿಕೆಗೆ (ನಾಯಿಗೆ ತಿನ್ನಲು ಹಾಕುವ ಕಲ್ಲಿನ ದಪ್ಪ 'ತಟ್ಟೆ') ಹಾಕುತ್ತಿದ್ದೆ. ಅದಕ್ಕೆ ದಿನಾ ಅಮ್ಮನಿಂದ ಬೈಸಿಕೊಳ್ಳಬೇಕಿತ್ತು. ಅಜ್ಜನಂತೂ ನನ್ನ ಗಂಜಿ ಊಟದ ಸ್ಪೀಡ್ ನೋಡಿ ಯಾವಾಗಲೂ ಹೇಳುವವರು “ಇಷ್ಟು ಮೆಲ್ಲ ತಿಂದ್ರೆ ಹ್ಯಾಂಗೆ ತಿಂದಿದ್ದು ಮೈಗೆ ಹಿಡಿತ್ ... ಆಡು ಮೆಂದ ಹಾಗೆ ತಿನ್ನಬೇಕಂತೆ ... ಆನೆ ಮಿಂದಹಾಗೆ ಮೀಯಬೇಕಂತೆ (ಸ್ನಾನ ಮಾಡಬೇಕಂತೆ)” ಅಂತ.

ಆ ಗಂಜಿ ಊಟಕ್ಕೆ ಮುಕ್ತಿ ಸಿಕ್ಕಿದ್ದು ನಾ ಮೆಡಿಕಲ್ ಮಾಡಲು ಬಳ್ಳಾರಿಗೆ ಹೋದಮೇಲೆಯೇ. ಈಗಿನ ನನ್ನ ಮಕ್ಕಳಿಗಂತೂ ಗಂಜಿ ಊಟದ ಮಜವೇ ಗೊತ್ತಿಲ್ಲ..... ಹಾಗೆಯೇ ಸುಟ್ಟ ಹುಣಸೇ ಬೀಜ, ಹದವಾಗಿ ಸುಟ್ಟ ದಾಣಿ, ಉಪ್ಪು ಕಾರಪುಡಿ ಹಾಕಿದ ಹುಳಿ ಹಪ್ಪಟೆ ಮಾವಿನ ಕಾಯಿ - ಇದ್ಯಾವುದೂ ಗೊತ್ತೇ ಇಲ್ಲ! ಅದ್ರ ಮಜವೇ ಬೇರೆ. ನಾವು ಮಕ್ಕಳಿಗೆಲ್ಲ ಬೆಳಿಗ್ಗೆ ಗಂಜಿ ಕಡ್ಡಾಯ, ಆದ್ರೆ ಅಜ್ಜನಿಗೆ ಬೆಳಿಗ್ಗೆ ತಿಂಡಿ ಆಗಬೇಕಿತ್ತು. ಅಜ್ಜನಿಗೆ ಗೋಧಿಯಿಂದ ಮಾಡಿದ ಏನಾದ್ರೂ ತಿಂಡಿ ಅಂದ್ರೆ ಶ್ರೇಷ್ಠ ..... ಗೋಧಿ ಹಿಟ್ಟಿನ ತೆಳ್ಳಗಿನ ನೀರು ದೋಸೆ ಅಥವಾ ರವೆ ಉಪ್ಪಿಟ್ಟು ಹೀಗೆ ಏನಾದ್ರೂ ತಿಂಡಿ ಆಗಲೇ ಬೇಕು. ಹೀಗೆ ಅಜ್ಜನಿಗೆ ಮಾಡಿದ ತಿಂಡಿ ಸ್ವಲ್ಪ ಏನಾದ್ರೂ ಉಳಿದ್ರೆ ನಂಗೆ ಗಂಜಿಯೊಟ್ಟಿಗೆ ಅಮ್ಮ ಸ್ವಲ್ಪ ಕೊಡ್ತಿದ್ದ್ರು... ಅದೂ ಅಜ್ಜ ಆಚೆ ಕಡೆ ಹೋದ ಮೇಲೆ. ಅಜ್ಜ ಏನಾದ್ರೂ ನೋಡಿದ್ರೆ ನನ್ನ ಅಮ್ಮನ್ನ ಬೈಯ್ಯುವರು .... ಮಕ್ಕಳು ಬೆಳಿಗ್ಗೆ ತಿಂಡಿ ತಿಂದ್ರೆ ಹೊಟ್ಟೆ ಹಾಳಾಗ್ತದೆ ಅಂತ!

ಸಾಯಂಕಾಲ ಶಾಲೆ ಮುಗಿಸಿ ಬರುವಾಗ ದಾರಿಯಲ್ಲಿ ಮಾವಿನಕಾಯಿಗೆ ಗುರಿ ಇಟ್ಟು ಕಲ್ಲು ಹೊಡೆದುರುಳಿಸಿ ಅದರ ಸೊನೆ ಅಲ್ಲೇ ಕೆಳಗೆ ಹುಲ್ಲಿನಲ್ಲಿ ಒರೆಸಿ ತಿಂದರೆ ಅದ್ರ ಹುಳಿ ಹಪ್ಪಟೆ ರುಚಿಗೆ ಒಂದು ಸರ್ತಿ ಮೈಯೆಲ್ಲಾ ಜುಂ ಅನ್ನುವ ಮಜಾನೇ ಬೇರೆ. ಈಗೆಲ್ಲಿದೆ ಅದರ ಸುಖ ??...

ಮಾವಿನ ಕಾಯಿಯ ಸೀಸನ್ ಅಲ್ಲದೆ ಇದ್ರೆ ಬೇಲಿಯಲ್ಲಿರುವ ಕರಂಡೆ ಕಾಯಿ ಇಲ್ಲ ಹಣ್ಣು, ಕಿಸ್ಕಾರ್ ಹಣ್ಣು, ನೇರಳೆ ಹಣ್ಣು, ಜಂಗಮನ ಹಣ್ಣು, ಪೇರಳೆ ಹಣ್ಣು, ರೆಂಜೆ ಹಣ್ಣು ...ಹೀಗೆ ಏನಾದ್ರೂ ಒಂದು ಸಿಕ್ಕೇ ಸಿಗುತ್ತದೆ.

ಇನ್ನೂ ಶನಿವಾರ ಮಧ್ಯಾಹ್ನದ ಮೇಲೆ ರಜೆ.
ಹಾಗೆ ಭಾನುವಾರ ನಮ್ಮ ಮನೆಯಲ್ಲಿ ಗಂಜಿಗೂ ರಜೆ. ಸಾದಾರಣವಾಗಿ ಆವತ್ತು ಇಡ್ಲಿ ಅಥವಾ ದೋಸೆ. ಹಾಗಾಗಿ ನಂಗಂತೂ ಭಾನುವಾರ ಅಂದ್ರೆ ಇಷ್ಟ. ತಿಂಡಿ ತಿಂದು ಟಿವಿಯಲ್ಲಿ ಹೀಮ್ಯಾನ್, Tom & Jerry ನೋಡಿ ಮುಗಿಯುವಷ್ಟರಲ್ಲಿ ರಾಮಾಯಣ ಇಲ್ಲ ಮಹಾಭಾರತ ಸೀರಿಯಲ್ ಶುರುವಾಗುವುದು.

ಹೀಗೆ ಮುಂದುವರಿದು ಮೆಡಿಕಲ್ ಕಾಲೇಜ್ ಸೇರಿದಮೇಲೆ ಈ ದಿನಚರಿಗೆ ಒಂದು ಮುಕ್ತಾಯ ಹಾಡಿದೆವು. ಆಮೇಲೆ ಬಳ್ಳಾರಿಯಲ್ಲಿ ಹಾಸ್ಟೆಲ್ ದಿನಚರಿ ಆರಂಭ. ಹಾಸ್ಟೆಲ್ ಅಂದಮೇಲೆ ನಿಮಗೆಲ್ಲಾ ಗೊತ್ತೇ ಇದೆಯಲ್ಲ .... ಬೆಳಿಗ್ಗಿನ ತಿಂಡಿಗೆ ಚೌ ಚೌ ಬಾತ್, ಕಾಂಕ್ರೀಟ್ (ಉಪ್ಪಿಟ್ಟಿಗೆ ಹಾಸ್ಟೆಲ್ ನಲ್ಲಿ ನಾವಿಟ್ಟಿದ್ದ ಹೆಸರು), ಇಡ್ಲಿ, ದೋಸೆ, ಬ್ರೆಡ್, ಚಿತ್ರಾನ್ನ, ವಾಂಗೀಬಾತ್ .... ಹೀಗೆ ನಾನಾ ವಿಧದ ಟಿಫನ್ ಗಳು. ಅದರಲ್ಲೂ ಬಳ್ಳಾರಿಯ ಸ್ಪೆಷಲ್ ತಿಂಡಿ ... ಮೆಣಸಿನ ಕಾಯಿ ಬಜ್ಜಿ (ಪುಗ್ಗಿ) ಹಾಗೂ ಮಂಡಕ್ಕಿ (ಮಂಡಾಳು) ಒಗ್ಗರಣೆಯನ್ನು ಹೇಳದಿದ್ದರೆ ಹೇಗೆ? ಇವತ್ತು ಬೆಳಿಗ್ಗೆ ಏನಾದ್ರೂ ಇದನ್ನು ತಿಂದ್ರೆ .... ಅದ್ರ ಪರಿಣಾಮ ಮಾರನೆಯ ದಿನ ಬೆಳಿಗ್ಗೆ ಬಹಿರ್ದೆಸೆಗೆ ಹೋದಾಗಲೇ ಗೊತ್ತಾಗುವುದು!

ನನ್ನ ಇಷ್ಟದ ತಿಂಡಿ ವಾಂಗೀಬಾತ್ ಆಗಿತ್ತು. ವಾಂಗಿಬಾತ್ ಮಾಡಿದ ದಿನ ನನ್ನ ತಟ್ಟೆಯ್ಲಲಿ ಒಂದು ಸಣ್ಣ ಗುಡ್ಡೆಯಾಕಾರದಲ್ಲಿ ವಾಂಗೀಬಾತ್ ಇರುತ್ತಿತ್ತು. ಇದರಿಂದಾಗಿ ನನ್ನ ಫ್ರೆಂಡ್ಸ್ ಎಲ್ಲ ನನ್ನನ್ನು ವಾಂಗಿಪ್ರಿಯ ಅಂತಲೇ ಕರೆಯಲು ಶುರು ಮಾಡಿದ್ರು.
ಹೀಗೆ ಮುಂದುವರಿದು ಒಂದು ತಿಂಗಳಿಗೆ ನಾನೂ ಕೂಡ ಮೆಸ್ಸ್ prefect ಆದೆ. ಆ ತಿಂಗಳು ನನಗೆ ಇಷ್ಟವಾದ ತಿಂಡಿಗಳನ್ನು ಹೇಳಿ ಮಾಡಿಸಿಕೊಂಡು ತಿಂದಿದ್ದೇ ತಿಂದಿದ್ದು. ಒಮ್ಮೆ ಭಾನುವಾರ, ನನ್ನ ಇಬ್ಬರು ಗೆಳೆಯರ ಜೊತೆ ದೋಸೆ ತಿನ್ನುವ ಸ್ಪರ್ಧೆ ನಡೆಯಿತು. ಆವತ್ತು ಮಸಾಲೆ ದೋಸೆ ಟಿಫನ್. ನನ್ನ ಇಬ್ಬರು ಆಪ್ತ ಗೆಳೆಯರು ಒಬ್ಬೊಬ್ಬರೂ ಹತ್ತೋ ಹನ್ನೆರಡೋ ಮಸಾಲೆ ದೋಸೆ ಭುಂಜಿಸಿದರು ... ಕೊನೆಗೆ ನನ್ನ ಸರಣಿ .... ಲೆಕ್ಕ ಮಾಡಿ ನಾನು ಅಂದು 16 ಮಸಾಲೆ ದೋಸೆ ಗುಳುಂಮಾಯಿಸಿದೆ.
ಹಾಗೇ ಇನ್ನೊಂದು ಸಲ ಯಾವುದೋ ಒಂದು ಹಾಸ್ಟೆಲ್ ಡೇ celeberation ದಿನದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ 2 ನಿಮಿಷದಲ್ಲಿ 21 ಇಡ್ಲಿ ತಿಂದು 2ನೇ ಸ್ಥಾನ ಗಿಟ್ಟಿಸಿಕೊಂಡವ ನಾನು.
ಈಗ ನೋಡಿದ್ರೆ ಅದೆಲ್ಲ ಗತ ವೈಭವ ಅನ್ನಿಸುತ್ತೆ 😁
ಎಡಗಡೆ ಮೇಲಿನಿಂದ, ಗಡಿಯಾರದ ಚಲನೆಯಂತೆ: ೧. ಕುಚ್ಚಲು ಅಕ್ಕಿ ಗಂಜಿ ಉಪ್ಪಿನ ಕಾಯಿ, ಮಜ್ಜಿಗೆ ಮೆಣಸು, ಚಟ್ನಿ, ಹಲಸಿನ ಹಪ್ಪಳ; ೨. ಹುಳಿ ಹಪ್ಪಟೆ ಮಾವಿನ ಕಾಯಿ ಉಪ್ಪು ಖಾರ; ೩. ಮಂಡಕ್ಕಿ ಒಗ್ಗರಣೆ ಹಾಗೂ ಮೆಣಸಿನ ಕಾಯಿ ಬಜ್ಜಿ – ಬಳ್ಳಾರಿ ಮೆಸ್ಸ್ ಸ್ಪೆಷಲ್; ೪. ಉಪ್ಪಿಟ್ಟು – ಶಿರಾದ ಚೌ ಚೌ ಭಾತ್.
(ಎಲ್ಲಾ ಚಿತ್ರಗಳು ಲೇಖಕರು ಗೂಗಲ್ ನಿಂದ ಪಡೆದದ್ದು.)
ಫಾಸ್ಟ್ ಫಾರ್ವರ್ಡ್ .... ಕೋವಿಡ್ ನಂತರದ ದಿನಗಳು ...ಈಗಿನ ಆಹಾರ ಪದ್ದತಿಯ ಬಗ್ಗೆ ಒಂದು ಇಣುಕು ನೋಟ ಹಾಕೋಣ -
ಇತ್ತೀಚಿನ ದಿನಗಳಲ್ಲಿ ನಮ್ಮ ಊಟ ತಿಂಡಿಗಳಲ್ಲೆಲ್ಲಾ ಪ್ರೋಸೆಸ್ಸ್ಡ್ ಫುಡ್ ಹಾಗೂ ಫಾಸ್ಟ್ ಫುಡ್ ಗಳದ್ದೇ ಕಾರುಬಾರು .....
ಬರಬರುತ್ತಾ ನಮ್ಮ ದೇಹಶ್ರಮ ಕೂಡ ಕಡಿಮೆ ಆಗುತ್ತಾ ಬರುತ್ತಿದೆ! ತಿಂದ ಆಹಾರದ ಪಚನಕ್ರಿಯೆ ಹಾಗು ಮೈಗೆ ಹತ್ತಲು ಸಮತೂಕದ ಆಹಾರ ಹಾಗೂ ಸಾಧಾರಣ ಮಟ್ಟದ ದೇಹಶ್ರಮ ಕೂಡಾ ಅಗತ್ಯ
ನಮ್ಮ ಆದುನಿಕ ಸರ್ವಜ್ಞ ಡಿವಿಜಿ ಅವರು ಹೇಳಿದಂತೆ -
ಎಷ್ಟು ನೀನುಂಡರೇಂ ಪುಷ್ಟಿ ಮೈಗಾಗುವುದು ।
ಹೊಟ್ಟೆ ಜೀರ್ಣಿಸುವಷ್ಟೆ ಮಿಕ್ಕುದೆಲ್ಲ ಕಸ ।।
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು ।
ಮುಷ್ಠಿ ಪಿಷ್ಟವು ತಾನೆ ಮಂಕುತಿಮ್ಮ ।।

ನೀನು ಎಷ್ಟು ಆಹಾರವನ್ನು ತಿಂದರೂ, ಅದರಿಂದ ದೇಹಕ್ಕೆ ಪುಷ್ಟಿಸಿಗುವುದು, ನಿನ್ನ ದೇಹ ಜೀರ್ಣಿಸಿಕೊಳ್ಳುವಷ್ಟು ಮಾತ್ರ. ಅಧಿಕವಾಗಿ ತಿಂದದ್ದೆಲ್ಲ ಜೀರ್ಣವಾಗದೆ, ಮಲರೂಪದಲ್ಲಿ ಕಸವಾಗಿ ಹೊರಬರುತ್ತದೆ. ಎಷ್ಟು ಸಂಪತ್ತನ್ನು ಗಳಿಸಿದರೂ ಹಸಿವಾದಾಗ ನೀನು ಸೇವಿಸಲಾಗುವುದು ಕೇವಲ ಒಂದು ಮುಷ್ಠಿ ಅನ್ನ ತಾನೆ? ಎಂದು ಕೇಳುತ್ತಾ ನಮ್ಮ ಮಿತಿಗಳನ್ನು ಅರ್ಥ ಮಾಡಿಕೊಳ್ಳುವಂತೆ ನಮಗೆ ಸೂಚನೆಯನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದ ಮಾತಿನಲ್ಲಿ.

ಹಾಗಾಗಿ ಮಿತಿಯರಿಯಬೇಕು. ಮಿತಿಯಿಂದಿದ್ದರೆ ಬಾಳು ಹಿತ. ಇದು ಕೇವಲ ಆಹಾರಕ್ಕಷ್ಟೇ ಸೀಮಿತವಲ್ಲ. ಬದುಕಿನ ನಮ್ಮ ಎಲ್ಲ ಆಯಾಮಗಳಿಗೂ ಇದನ್ನು ಅನ್ವಯಿಸಿಕೊಳ್ಳಬೇಕು. ನಮ್ಮ ಕ್ಷಮತೆ ಮತ್ತು ಯೋಗ್ಯತೆಗನುಗುಣವಾಗಿ ಒಂದು ‘ಗೆರೆ’ ಎಳೆದುಕೊಳ್ಳಬೇಕು. ಆ ಮಿತಿಯ ವೃತ್ತದ ಪರಿಧಿಯಲ್ಲೇ ನಮ್ಮ ಕಾರ್ಯಕ್ಷೇತ್ರವಿರಬೇಕು. ನಮ್ಮ ಕ್ಷಮತೆಯನ್ನು ಹೆಚ್ಚಿಸಿಕೊಂಡ ಹಾಗೆ ಆ ವೃತ್ತದ ಪರಿಧಿಯೂ ಹೆಚ್ಚುತ್ತಾ ಹೋಗುತ್ತದೆ. ದೇಹವು ಆಹಾರದಲ್ಲಿನ ಸತ್ವವನ್ನು ಮಾತ್ರ ಸ್ವೀಕರಿಸಿ ಮಿಕ್ಕದ್ದನ್ನು ತ್ಯಜಿಸುವಹಾಗೆ, ನಾವು ಈ ಜಗತ್ತಿನಲ್ಲಿ ಸತ್ವವನ್ನು ಮಾತ್ರ ಹೀರಿಕೊಳ್ಳಬೇಕು.
ಮಿತವಾಗಿ ಉಂಡರೆ ಅಮಿತ ಸುಖದಲಿ ಹಿತವಾಗಿ ಬದುಕುವೆ.
ನಾವೆಲ್ಲ ನೆನಪಿನಲ್ಲಿ ಇಡಬೇಕಾದ್ದು:
* ಮಿತವಾಗಿ ತಿನ್ನುವುದು,
* ಸಮತೂಕದ ಆಹಾರವಿರಲಿ: 40-50% ಶರ್ಕರ ಪಿಷ್ಟ (carbohydrates), 20-30% - ಕೊಬ್ಬಿನ ಅಂಶ (fats), 10-30% ಪ್ರೊಟೀನ್, 10-20% - ನಾರಿನ ಅಂಶ (fibre).
* ಸಾಧ್ಯವಾದಷ್ಟೂ ಕಡಿಮೆ ಸಂಸ್ಕರಿಸಿದ ಆಹಾರದ (processed food) ಉಪಯೋಗ.
* ಸಂಸ್ಕರಿಸಿದ ಸಕ್ಕರೆಯನ್ನು ಸಾಧ್ಯವಾದಷ್ಟೂ ಕಡಿಮೆ ಉಪಯೋಗಿಸುವುದು.
* ಊಟಗಳ ಮದ್ಯೆ ಕುರುಕಲು ತಿಂಡಿಗಳನ್ನು (snacks) ತಿನ್ನುವುದನ್ನು ಸಾಧ್ಯವಾದಷ್ಟೂ ಕಡಿತಗೊಳಿಸುವುದು.
* ಊಟವಾದ ಮೇಲೆ 15-20 ನಿಮಿಷ ಮೆಲ್ಲಗೆ ನಡೆದಾಟ / ಅಡ್ಡಾಡುವುದನ್ನು ರೂಢಿಗೊಳಿಸಿಕೊಳ್ಳುವುದು, ಇಲ್ಲವೇ ಸಣ್ಣ ಪುಟ್ಟ ಮನೆ ಕೆಲಸ ಮಾಡುವುದು.
* ಕರಿದ ತಿಂಡಿಯನ್ನು ತಿನ್ನುವುದನ್ನು ಸಾಧ್ಯವಾದಷ್ಟೂ ಮಿತಗೊಳಿಸುವುದು.
* ಸಿಹಿ ತಿನ್ನಬೇಕೆನಿಸಿದರೆ ಕಾಲಿ ಹೊಟ್ಟೆಯಲ್ಲಿ ತಿನ್ನುವುದಕ್ಕಿಂತ ಊಟ ಆದ ಮೇಲೆ ತಿನ್ನುವುದು ಒಳ್ಳೆಯದು. ಸಿಹಿಯ ಜೊತೆ ಬಾದಾಮಿ ಇಲ್ಲ ಪಿಸ್ತಾ (ಯಾವುದೇ dry fruits / nuts ) ಬೆರಸಿ ತಿನ್ನುವುದು. ಇಲ್ಲ ಹೋಳಿಗೆ ತಿನ್ನುವುದಾದರೆ ಅದರ ಜೊತೆ ಸ್ವಲ್ಪ(ವೇ!) ತುಪ್ಪ ಸೇರಿಸಿ ತಿನ್ನುವುದು.

ಕೊನೆಯ ಕೊಸರು:
- ನಮ್ಮ ದೇಹದ ಆರೋಗ್ಯ (ಅಕ್ಷರಶಃ) ನಮ್ಮ ಕೈಯಲ್ಲಿ (ಅಥವಾ ಚಮಚೆಯಲ್ಲಿ) ಇದೆ ಹಾಗೂ ಬಹುತೇಕ ನಾವು ತಿನ್ನುವ ಆಹಾರವನ್ನು ಅವಲಂಬಿಸಿದೆ.
- ನೆನಪಿನಲ್ಲಿರಲಿ - ಊಟ ಬಲ್ಲವನಿಗೆ ರೋಗವಿಲ್ಲ.... ಮಾತು ಬಲ್ಲವನಿಗೆ ಜಗಳವಿಲ್ಲ!

ಡಾ. ರವಿರಾಜ್ ಉಪ್ಪೂರ್ ಭಟ್.
ಲ್ಯಾಂಕಾಸ್ಟರ್.

**********************************************************

ರಾಜಕುಮಾರಿ ಸೋಫಿಯಾ ದುಲೀಪ್ ಸಿಂಗ್ (೧೮೭೬-೧೯೪೮) – ರಾಮಮೂರ್ತಿ ಎಚ್ ಎನ್.

ನಮಸ್ಕಾರ.  ನಮ್ಮ ಅನಿವಾಸಿ ಬಳಗದ ಉತ್ಸಾಹಿ ಬರಹಗಾರ, ಇತಿಹಾಸದ ಅಧ್ಯೇತೃ (ಬೇಸಿಂಗ್‍ಸ್ಟೋಕ್) ರಾಮಮೂರ್ತಿ ಅವರು ಬರೆದಿರುವ ಇನ್ನೊಂದು ಲೇಖನ. ಪಂಜಾಬಿನ ಕೊನೆಯ ರಾಜ ದುಲೀಪ್ ಸಿಂಹರ ಮಗಳು ರಾಜಕುಮಾರಿ ಸೋಫಿಯಾ ಅವರ ಜೀವನ ಚಿತ್ರಣ ಇಲ್ಲಿದೆ.  ಬರಿಯ ರಾಜಕುಮಾರಿಯಾಗಿ ಉಳಿಯದೇ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ, ಮೊದಲ ಮಹಾಯುದ್ಧದ ವೇಳೆಯಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದ, ಆ ಕಾರಣಕ್ಕಾಗಿ ಬ್ರಿಟಿಷ್ ಸರಕಾರದಿಂದ ಗೌರವಿಸಲ್ಪಟ್ಟ ಮಹಿಳೆ.  
ಎಂದಿನಂತೆ ಓದಿ, ಪ್ರತಿಕ್ರಯಿಸಿ, ನಿಮ್ಮ ಅನಿಸಿಕೆಗಳನ್ನು ಬ್ಲಾಗಿನಲ್ಲಿ ಹಂಚಿಕೊಳ್ಳಿ. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಈ ವಾರದ ಸಂಪಾದಕಿ ಅಮಿತಾ ರವಿಕಿರಣ ಅವರ ಪರವಾಗಿ).

********************

ದುಲೀಪ್ ಸಿಂಹ ಮತ್ತು ರಾಜಕುಮಾರಿ ಸೋಫಿಯಾ (ಚಿತ್ರಕೃಪೆ: ವಿವಿಧ ಅಂತರ್ಜಾಲತಾಣಗಳು)
೨೦ನೇ ಶತಮಾನದ ಆದಿಯಲ್ಲಿ ಇಂಗ್ಲೆಂಡ್ ದೇಶದ ಮಹಿಳೆಯರು ಮೂಲಭೂತ ಮತ್ತು ಮತದಾನದ ಹಕ್ಕು ಪಡೆಯಲು ನಡೆಸಿದ ಚಳುವಳಿಗಳಿಗೆ (Suffragette Movement) ಹೋರಾಡಿದ ಭಾರತ ಮೂಲದ ರಾಜಕುಮಾರಿ ಸೋಫಿಯಾ.  ಈಕೆ, ಭಾರತದ ಮತ್ತು ಇಂಗ್ಲೆಂಡಿನ ಶ್ರೀಮಂತ ಕುಟುಂಬದ ಆಶ್ರಯದಲ್ಲಿ ಬೆಳೆದರೂ ಅವಳ ಹೋರಾಟ ರಾಜಕೀಯ ಚಟುವಟಿಕೆಯಲ್ಲೇ ಇತ್ತು.

ಇವಳ ತಂದೆ ಪಂಜಾಬಿನ ಕೊನೆಯ ಮಹಾರಾಜ ದುಲೀಪ್ ಸಿಂಗ್. ಪಂಜಾಬಿನ “ಸಿಂಹ” ಮಹಾರಾಜ ರಂಜಿತ್ ಸಿಂಗ್‍ರ (೧೭೮೦-೧೮೩೯) ನಿಧನವಾದಮೇಲೆ ಆ ಪಟ್ಟಕ್ಕೇರಲು ಅನೇಕರು ಹೋರಾಡಿ, ಕೊನೆಗೆ ಐದು ವರ್ಷದ ದುಲೀಪ್ ಸಿಂಗ್‍ನನ್ನು ರಾಜನನ್ನಾಗಿ ಮಾಡಿದರು. ಆದರೆ ರಾಜ್ಯದಲ್ಲಿ ಅಸ್ಥಿರತೆ ಇರುವುದನ್ನು ಕಂಡು ೧೮೪೯ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಎರಡನೆಯ ಆಂಗ್ಲೋ-ಸಿಖ್ ಯುದ್ಧದ ನಂತರ ಪಂಜಾಬ್ ಪ್ರಾಂತ್ಯವನ್ನು ಆಕ್ರಮಿಸಿಕೊಂಡು ಹತ್ತು ವರ್ಷದ ದುಲೀಪ್ ಸಿಂಗ್‍ನಿಂದ ಅವನ ಜಮೀನು ಮತ್ತು ಕೊಹಿನೂರ್ ವಜ್ರವನ್ನು ಕಸಿದುಕೊಂಡರು. ನಂತರ ದುಲೀಪ್ ಸಿಂಗನಿಗೆ ಪಿಂಚಿಣಿ ಕೊಟ್ಟು ಇಂಗ್ಲೆಂಡ್‍ನಲ್ಲಿ ವಾಸಮಾಡುವುದಕ್ಕೆ ಏರ್ಪಾಡು ಮಾಡಿದರು, ಇದಲ್ಲದೆ ಸಿಖ್ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ, ಬಹುಶಃ ಬಲವಂತದಿಂದ, ಮಾಡಿದರು.

ಸೋಫಿಯಾ ೮/೦೮/೧೮೭೬ ರಂದು ಲಂಡನ್ ನಗರದ ಬೆಲ್‍ಗ್ರೇವಿಯದಲ್ಲಿ ಜನಿಸಿದಳು. ತಾಯಿ, ಬಾಂಬ ಮುಲ್ಲರ್ (ಜರ್ಮನ್ ಮತ್ತು ಇಥಿಯೋಪಿಯಾ ಮೂಲದವಳು). ದುಲೀಪ್ ಸಿಂಗ್ ೧೮೬೩ರಲ್ಲಿ Suffolk ನಲ್ಲಿ ಇರುವ ೧೭,೦೦೦ ಎಕರೆ Elvedon Hall ಕೊಂಡಿದ್ದ (ಲಂಡನ್‍ನಲ್ಲಿದ್ದ India Office ನ ಸಹಾಯದಿಂದ). ಅವನ ಕುಟುಂಬ ಲಂಡನ್‍ನಿಂದ ಇಲ್ಲಿಗೆ ಬಂದು ನೆಲೆಸಿದರು. ರಾಣಿ ವಿಕ್ಟೊರಿಯಾ ದುಲೀಪ್ ಸಿಂಗನ ಮಕ್ಕಳನ್ನು, ಅದರಲ್ಲೂ ಸೋಫಿಯಾಳನ್ನು, ಸಾಕುಮಕ್ಕಳಂತೆ ಪರಿಗಣಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಳು.

೧೮೮೭ ರಲ್ಲಿ ಬಾಂಬ ಮುಲ್ಲರ್ ಜ್ವರದಿಂದ ನಿಧನಳಾದ ಮೇಲೆ, ದುಲೀಪ್ ಸಿಂಗ್ ೧೮೮೯ರಲ್ಲಿ ಪುನಃ ಮದುವೆಯಾದ. ಆದರೆ ಇವನ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ಹದಗೆಟ್ಟು ೧೮೮೦ ರಲ್ಲಿ Elvendon Hall ಬಿಡಬೇಕಾಯಿತು. ಸೋಫಿಯಾ ಹತ್ತು ವರ್ಷವಾಗಿದ್ದಾಗ, ದುಲೀಪ್ ಸಿಂಗ್ ತನ್ನ ಸಂಸಾರದ ಜೊತೆಯಲ್ಲಿ ಪಂಜಾಬಿಗೆ ಹಿಂತಿರುಗಲು ಮಾಡಿದ ಪ್ರಯತ್ನ ವಿಫಲವಾಯಿತು. ಹಡಗು ಏಡನ್ ತಲಪಿದಾಗ ಇವರ ಬಂಧನಕ್ಕೆ ಬ್ರಿಟಿಷ್ ಸರ್ಕಾರದ ವಾರಂಟ್ ಕಾದಿತ್ತು. ನಂತರ ದುಲೀಪ್ ಸಿಂಗ್ ಪ್ಯಾರಿಸ್ ನಗರದಲ್ಲಿ ಹಲವು ವರ್ಷಗಳನ್ನು ಕಳೆದು ೫೫ ನೇ ವಯಸ್ಸಿನಲ್ಲಿ ೧೮೯೩ರಲ್ಲಿ ನಿಧನನಾದ.

ರಾಣಿ ವಿಕ್ಟೋರಿಯಾ ಈ ಮಕ್ಕಳ ಯೋಗಕ್ಷೇಮವನ್ನು ಆಲಿಫಂಟ್ ಕುಟುಂಬಕ್ಕೆ ವಹಿಸಿ, ಬ್ರೈಟನ್ ನಗರದಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದಕ್ಕೆ ಮತ್ತು ವಾಸಕ್ಕೆ ರಾಜ ಮನೆತನದ ಹ್ಯಾಂಪ್ಟನ್ ಕೋರ್ಟ್ ಆವರಣದಲ್ಲಿ ಏರ್ಪಾಡು ಮಾಡಲಾಯಿತು.

ಸೋಫಿಯಾ ಮೊದಲ ಕೆಲವು ವರ್ಷಗಳು ಅತ್ಯಂತ ಆರಾಮದ ಜೀವನವನ್ನು ಕಳೆದಳು. ಆದರೆ ೧೯೦೭ ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಟ್ಟಾಗ, ಅಲ್ಲಿನ ಜನರ ಬಡತನ ಮತ್ತು ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿ ಅವಳ ಮನಸ್ಸು ಪರಿವರ್ತನೆ ಆಯಿತು.
೧೯೧೦ ರವರೆಗೂ ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಯಾವ ರೀತಿಯ ಹಕ್ಕುಗಳೂ ಇರಲಿಲ್ಲ. ಇದನ್ನು ಪ್ರತಿಭಟಿಸಿ "Women's Social and Political Union" (WSPU) ಅನ್ನುವ ಸಂಸ್ಥೆ ಎಮೆಲೀನ್ ಪ್ಯಾಂಕ್‍ಹರ್ಸ್ಟ್ (Emmeline Pankhurst) ಳ ನೇತೃತ್ವದಲ್ಲಿ ಪ್ರಾರಂಭವಾಗಿತ್ತು. ಸೋಫಿಯಾ ಈ ಚಳುವಳಿಯಲ್ಲಿ ಭಾಗವಹಿಸಿವುದಕ್ಕೆ ನಿರ್ಧರಿಸಿ, ಈ ಸಂಸ್ಥೆಯ ಸದಸ್ಯೆ ಆಗಿ ಅನೇಕ ರೀತಿಯಲ್ಲಿ ಸಹಾಯ ಮಾಡಿದಳು. ಸೋಫಿಯಾ ತಾನು ವಾಸವಾಗಿದ್ದ ಹ್ಯಾಂಪ್ಟನ್ ಕೋರ್ಟ್ ಹೆಬ್ಬಾಗಿಲಿನ ಮುಂದೆ ನಿಂತು The Suffragette ಪತ್ರಿಕೆಯ ಮಾರಾಟವನ್ನು ಸಹ ಮಾಡುತಿದ್ದಳು.

೧೯೧೦ ರಲ್ಲಿ ಲಂಡನ್ ನಗರದಲ್ಲಿ ನಡೆದ Black Friday ಪ್ರತಿಭಟನೆಯಲ್ಲಿ ೩೦೦ ಮಹಿಳೆಯರ ತಂಡದೊಂದಿಗೆ ಸೋಫಿಯಾ ಭಾಗವಹಿಸಿ ಕ್ಯಾಸ್ಟನ್ ಹಾಲ್‍ನಿಂದ ಪಾರ್ಲಿಮೆಂಟಿನವರೆಗೆ ನಡೆದು, ಅಲ್ಲಿ ಪ್ರಧಾನ ಮಂತ್ರಿಗಳನ್ನು ಭೆಟ್ಟಿಯಾಗಲು ಪ್ರಯತ್ನಿಸಿದರು. ಆದರೆ ಅವರು ನಿರಾಕರಿಸಿದ್ದರಿಂದ ಈ ತಂಡ ಅಲ್ಲೇ ಕುಳಿತು ಘೋಷಣೆಗಳನ್ನು ಕೂಗುವುದಕ್ಕೆ ಪ್ರಾರಂಭಿಸಿದಾಗ ಪೊಲೀಸರು ಇವರ ಮೇಲೆ ಅತ್ಯಂತ ದೌರ್ಜನ್ಯದಿಂದ ವರ್ತಿಸಿದರು. ಈ ತಂಡದ ಅನೇಕರು ಗಾಯಗೊಂಡು ಇಬ್ಬರ ಮರಣಕ್ಕೂ ಪೋಲೀಸರ ದೌರ್ಜನ್ಯ ಕಾರಣವಾಯಿತು. ಅಂದಿನ ಗೃಹಮಂತ್ರಿ ಸರ್ ವಿನ್ಸ್ಟನ್ ಚರ್ಚಿಲ್ ಪೊಲೀಸರಿಗೆ ಉತ್ತೇಜನ ಕೊಟ್ಟರು ಅನ್ನುವ ಆರೋಪ ಸಹ ಬಂದಿತ್ತು.

೧೯೧೧ ರಲ್ಲಿ ನಡೆದ ಜನಗಣತಿಯಲ್ಲಿ (Census) ಭಾಗವಹಿಸುವುದಕ್ಕೆ ಸೋಫಿಯಾ ಮತ್ತು ಸಂಸ್ಥೆಯವರು ನಿರಾಕರಿಸಿದರು. ಸೋಫಿಯಾ ಜನಗಣತಿಯ ಚೀಟಿಯ ಮೇಲೆ ಈ ರೀತಿ ಬರೆದು ಚೀಟಿಯನ್ನು ಹಿಂತಿರಿಗಿಸಿದಳು (ಕೆಳಗೆ ಚಿತ್ರ ನೋಡಿ) - No Vote, No Census. As women do not count, they refuse to be counted; I have a conscientious objection to filling up this form.
No Vote, No Tax.

ಮತದಾನದ ಹಕ್ಕು ಇಲ್ಲದೆ ವರಮಾನ ತೆರಿಗೆ ಕೊಡುವುದಕ್ಕೂ ಸೋಫಿಯಾ ನಿರಾಕರಿಸಿದ್ದರಿಂದ ನ್ಯಾಯಾಲಯ £೧೨ ದಂಡ ಹಾಕಿತು. ಆದರೆ ಇದನ್ನು ಪ್ರತಿಭಟಿಸಿ ದಂಡವನ್ನು ಕಟ್ಟಲಿಲ್ಲವಾದ ಕಾರಣದಿಂದಿಂದ ಅವಳ ಕೆಲವು ಆಭರಣಗಳನ್ನು ವಶಪಡಿಸಿಕೊಂಡು ಹರಾಜು ಮಾಡಲಾಯಿತು. ಆದರೆ WSPUನ ಕಾರ್ಯದರ್ಶಿ ಈ ಹರಾಜಿನಲ್ಲಿ ಭಾಗವಹಿಸಿ ಆಭರಣಗಳನ್ನು ಕೊಂಡುಕೊಂಡು ಸೋಫಿಯಾಗೆ ವಾಪಸ್ಸು ಕೊಟ್ಟರು.

೧೯೧೪ ನಲ್ಲಿ ಮೊದಲನೇ ಮಹಾಯುದ್ಧ ಪ್ರಾರಂಭವಾದ್ದರಿಂದ ಮಹಿಳೆಯರು ತಮ್ಮ ಹೋರಾಟವನ್ನು ನಿಲ್ಲಿಸಿ, ದೇಶದ ಮತ್ತು ಸರಕಾರದ ಪರವಾಗಿ ನಿಂತು ಸಹಾಯ ಮಾಡುವುದಕ್ಕೆ ಸಿದ್ದರಾದರು. ಲಕ್ಷಾಂತರ ಭಾರತೀಯ ಸೈನಿಕರು ಈ ಯುದ್ಧದಲ್ಲಿ ಭಾಗವಹಿಸಿದ್ದರು, ಇವರ ಯೋಗಕ್ಷೇಮ ಕಾಯಲು ಸೋಫಿಯಾ ನೆರವಾಗಿ Red Cross ಸಂಸ್ಥೆಯ ಪರವಾಗಿ ಹಣ ಸಂಗ್ರಹಣೆ ಮಾಡಿದಳು. ಸ್ವತಃ ೧೯೧೫ರಲ್ಲಿ ಮಿಲಿಟರಿ ಆಸ್ಪತ್ರೆಯಲ್ಲಿ ಬ್ರಿಟಿಷ್ ರೆಡ್‍ಕ್ರಾಸ್ ನರ್ಸ್ ಆಗಿ ಸೇರಿ ಸೇವೆ ಮಾಡಿದಳು. ೧೯೧೮ ರಲ್ಲಿ YMCA War Emergency Committee ಯ ಕಾರ್ಯದರ್ಶಿಯಾಗಿ, ಲಂಡನ್‍ನಲ್ಲಿ “ಧ್ವಜ ದಿವಸ” (Flag Day) ನಡೆದ ನಂತರ “ಭಾರತೀಯ ದಿವಸ” (India day)ದ ಆಚರಣೆಯನ್ನು ಮಾಡಿ, ೫೦೦೦೦ ವಸತಿಗೃಹಗಳನ್ನು ಗಾಯಗೊಂಡ ಭಾರತೀಯ ಸೈನಿಕರು ವಾಸಕ್ಕೆ ಒದಗಿಸಲು ಕಾರಣಳಾದಳು.
ಯುದ್ಧ ಮುಗಿದ ಮೇಲೆ (೧೯೧೮) ಆಂಗ್ಲ ಸರ್ಕಾರ "The Representation of the People Act" ಕಾನೂನು ಜಾರಿಯಾದಾಗ ೩೦ ವರ್ಷ ಮೀರಿದ ಮಹಿಳೆಯರಿಗೂ, ೧೯೨೮ ರ “Franchise Act” ಕಾನೂನು ಹೊರಬಂದಾಗ ೨೧ ವರ್ಷ ಮೀರಿದ ಮಹಿಳೆಯರಿಗೂ ಮತದಾನದ ಹಕ್ಕು ಬಂತು.

ಈ ದೇಶದಲ್ಲಿ ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಇರುವ ಹಕ್ಕು ಮತ್ತು ಸ್ವಾತಂತ್ರಕ್ಕೆ ಕಾರಣ ಸೋಫಿಯಾ ಮತ್ತು ಅವಳ ಸಂಗಡಿಗರ ಹೋರಾಟವೇ ಕಾರಣ ಅನ್ನುವುದರಲ್ಲಿ ಸಂದೇಹವೇ ಇಲ್ಲ.
೨೨/೦೮/೧೯೪೮ ರಲ್ಲಿ ಸೋಫಿಯಾ ಬಕಿಂಗ್‍ಹ್ಯಾಮ್‍ಶೈರ್ನಲ್ಲಿರುವ ಪೆನ್ನ್ ಊರಿನಲ್ಲಿ ಅವಳ ತಂಗಿಯ ಮನೆಯಲ್ಲಿ ತನ್ನ ೭೨ನೇ ವಯಸ್ಸಿನಲ್ಲಿ ನಿಧನಾದಳು.  ರಾಜಕುಮಾರಿ ಸೋಫಿಯಾಳ ಅಂತ್ಯಕ್ರಿಯೆ Golders Green crematorium ನಲ್ಲಿ ೨೬/೦೮/೧೯೪೮ ರಂದು ನಡೆಯಿತು. ಅವಳ ಕೊನೆ ಇಚ್ಛೆ ತನ್ನ ಅಂತಕ್ರಿಯೆಯು ಸಿಖ್ ಪದ್ಧತಿಯಲ್ಲಿ ನಡೆಯಬೇಕೆಂದು ಇತ್ತು. 

ಸೋಫಿಯಾಗೆ ದೊರೆತ ಮರಣೋತ್ತರ ಮಾನ್ಯತೆಗಳು ಅನೇಕ; ರಾಯಲ್ ಮೇಲ್‍ನವರ "Votes for Women" ದಿನಾಚರಣೆಯಲ್ಲಿ ೧೫/೦೨/೨೦೧೮ ಸೋಫಿಯಾ The Suffragette ಪತ್ರಿಕೆಯನ್ನು ಮಾರುತ್ತಿರುವ ಚಿತ್ರವುಳ್ಳ ಅಂಚೆಚೀಟಿ (postage stamp) ಬಿಡುಗಡೆ ಆಯಿತು.

ಏಪ್ರಿಲ್ ೨೦೧೮ ರಲ್ಲಿ ಪಾರ್ಲಿಮೆಂಟ್ ಮುಂದಿರುವ ಕಂಬದ ಮೇಲೆ ಸೋಫಿಯಾಳ ಚಿತ್ರ ಮತ್ತು ಹೆಸರನ್ನು ಕೆತ್ತಲಾಗಿದೆ.
A Princess' Guide to Burning Issue ಅನ್ನುವ ಮಕ್ಕಳಿಗಾಗಿ ಮಾಡಿದ ನಾಟಕ ಅನೇಕ ಶಾಲೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.
English Heritage ನವರು ಹ್ಯಾಂಪ್ಟನ್ ಕೋರ್ಟ್‍ನ ಹತ್ತಿರದ ಮನೆಯ ಮೇಲೆ ನೀಲಿ ಫಲಕದ (Blue Plaque) ಅನಾವರಣೆಯನ್ನು ೨೦೨೩ರಲ್ಲಿ ಮಾಡಿದರು.

ಸೋಫಿಯಾ ಜೀವನ ಚರಿತ್ರೆಯ ಬಗ್ಗೆ ಅನೇಕ ಲೇಖನಗಳು ಮತ್ತು ಪುಸ್ತಕಗಳು ಪ್ರಕಟವಾಗಿವೆ. ಉದಾಹರಣೆಗೆ, ಅನಿತಾ ಆನಂದ್ ಅವರ Suffragette Revolutionary (೨೦೧೫, ISBN ೯೭೮೧೪೦೮೮೩೫೪೫೬).

ಕೊನೆಯ ಮಾತು: ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ೧೯೨೮ರಲ್ಲಿ, ಅದೂ ೨೧ ವರ್ಷಕ್ಕೆ ಮೀರಿದವರಿಗೆ ಮಾತ್ರ ದೊರೆತಿತ್ತು; ದಕ್ಷಿಣ ಭಾರತದಲ್ಲಿ, ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ೧೯೨೩ ರಲ್ಲಿಯೇ ಮಹಿಳೆಯರಿಗೆ ಈ ಹಕ್ಕನ್ನು ಕೊಟ್ಟಿದ್ದರ ಮಹತ್ವವನ್ನು ಇಲ್ಲಿ ಮರೆಯಬಾರದು.

- ರಾಮಮೂರ್ತಿ ಎಚ್ ಎನ್.
ಕಾಂಗಲ್‍ಟನ್, ಚೆಶೈರ್.

********************