ರಾಬರ್ಟ್ ಕ್ಲೈವ್ ಜೀವನಗಾಥೆ – ಬೇಸಿಂಗ್ ಸ್ಟೋಕ್ ರಾಮಮೂರ್ತಿ 

ಬ್ರಿಟಿಷರ ಆಡಳಿತದಲ್ಲಿ ಭಾರತ ದೇಶವನ್ನು “ಲೂಟಿ” ಮಾಡಿದ್ದವರು ಅನೇಕರು, ಇವರಲ್ಲಿ ರಾಬರ್ಟ್ ಕ್ಲೈವ್ (೧೭೨೫-೧೭೭೪) ಒಬ್ಬ. ಈತ, ಅಂದಿನ ಈಸ್ಟ್ ಇಂಡಿಯಾ ಕಂಪನಿಯಲ್ಲಿ ೧೭೪೪ ನಲ್ಲಿ ಗುಮಾಸ್ತನಾಗಿ ಸೇರಿ  ಕೆಲವೇ ವರ್ಷಗಳ ನಂತರ ಬಂಗಾಳದ ಆಡಳಿತದ ಗವರ್ನರ್ ಆದ. ಇವನ ಜೀವನ ಚರಿತ್ರೆ ಬಹಳ ಸಾರಸ್ಯವಾಗಿದೆ, ಇಲ್ಲಿ ಕೆಲವು ಮುಖ್ಯವಾದ ವಿಷಯಗಳನ್ನು ಮಾತ್ರ ಪ್ರಸ್ತಾಪಿಸಿದ್ದೇನೆ. 

ಜನನ ಶ್ರಾಪ್-ಶೈರಿನ (Shropshire) ಮಾರ್ಕೆಟ್ ಡ್ರೆಟನ್ (Market Drayton ), ಸೆಪ್ಟೆಂಬರ್ ೨೯, ೧೭೨೫ ರಲ್ಲಿ ಎಸ್ಟೇಟ್ ಸ್ಟೈಚ್ ಹಾಲಿನಲ್ಲಿ (Estate Styche Hall). ತಂದೆ ರಿಚರ್ಡ್ ಮತ್ತು ತಾಯಿ ರೆಬೆಕ್ಕಾ, ರಿಚರ್ಡ್ ಕ್ಲೈವ್ ಪಾರ್ಲಿಮೆಂಟ್ಟಿನ ಸದಸ್ಯನಾಗಿದ್ದರೂ ಆದಾಯ ಕಡಿಮೆ ಮತ್ತು ಹದಿಮೂರು ಮಕ್ಕಳ  ದೊಡ್ಡ ಕುಟುಂಬ. ರಾಬರ್ಟ್ ಮಗುವಾಗಿದ್ದಾಗ ಅವನನ್ನು ಮ್ಯಾಂಚೆಸ್ಟರ್-ನಲ್ಲಿದ್ದ ರೆಬೆಕ್ಕಳ ತಂಗಿಯ ಮನೆಗೆ ಕಳಿಸಿದರು (ಈಗಿನ ಹೋಪ್ ಆಸ್ಪತ್ರೆ ). ನಂತರ ಮಾರ್ಕೆಟ್ ಡ್ರೇಟನ್-ನ ಗ್ರಾಮರ್ ಶಾಲೆ, ಲಂಡನ್ನಿನ ಮರ್ಚಂಟ್ ಟೇಯ್ಲರ್ಸ್ (Merchant Taylors) ಶಾಲೆ (೧೭೩೭-೩೯). ಬಾಲ್ಯದಲ್ಲಿ ಕೆಟ್ಟ ಸಹವಾಸ ಮತ್ತು  ನಡವಳಿಕೆಯಿಂದ  ಇವನ ಮನೆತನಕ್ಕೆ ಅವಮಾನವಾಗಿದೆ.  ರೌಡಿಗಳ ಗುಂಪು ಕಟ್ಟಿ ವ್ಯಾಪಾರಸ್ತರ ಮೇಲೆ ದಾಳಿ ಮಾಡಿ ಹಣ ವಸೂಲಿ ರಸ್ತೆಯಲ್ಲಿ ಹೊಡೆದಾಟ ಇತ್ಯಾದಿ ಕೆಲಸಗಳ ಮುಖಂಡನಾಗಿದ್ದ. ಕೊನೆಗೆ ಹೆಮೆಲ್ ಹ್ಯಾಂಪ್-ಸ್ಟೆಡ್ (Hemel Hampstead)ನಲ್ಲಿ ಹಣಕಾಸಿನ ದಾಖಲೆಯನ್ನು (Book Keeping ) ಕಲಿತು ೧೭೪೨ ರಲ್ಲಿ,  ಈಸ್ಟ್ ಇಂಡಿಯಾ ಕಂಪನಿಯಲ್ಲಿ ಗುಮಾಸ್ತನಾಗಿ ಮದ್ರಾಸಿನಲ್ಲಿ ತಂದೆಯ ಶಿಫಾರಸಿನಿಂದ ಕೆಲಸ ದೊರಕಿತು. 

ಮಾರ್ಚ್ ೧೭೪೨ ರಂದು  ಈತ ಲಂಡನ್ನಿಂದ ಹಡಗಿನಲ್ಲಿ ಮದ್ರಾಸ್ ಗೆ  ಪ್ರಯಾಣ.  ಕಾರಣಾಂತರಗಳಿಂದ ಬ್ರೆಜಿಲ್ ದೇಶ ಮುಟ್ಟಿ ನಂತರ ಮದ್ರಾಸ್ ತಲಪಿದ್ದು ಸುಮಾರು ಹದಿನೈದು ತಿಂಗಳ ನಂತರ !! 

೧೭೪೦ನ  ಈಸ್ಟ್ ಇಂಡಿಯಾ ಕಂಪನಿ ಒಂದು ವ್ಯಾಪಾರಿ ಸಂಸ್ಥೆ ಮಾತ್ರ ವಾಗಿತ್ತು , ರಾಜಕೀಯದಲ್ಲಿ  ಇನ್ನೂ ಕೈ ಹಾಕಿರಲಿಲ್ಲ, ಆಮದು ಮತ್ತು ರಫ್ತು ವ್ಯಾಪಾರಕ್ಕೆ ಬಾಂಬೆ , ಕಲ್ಕತ್ತ ಮತ್ತು ಮದ್ರಾಸ್ ಪಟ್ಟಣಗಳಲ್ಲಿ ಶಾಖೆಗಳು ಇದ್ದವು. ಕಂಪನಿಯ ರಕ್ಷಣೆಗೆ ಹಲವಾರು ಶಸ್ತ್ರಸಜ್ಜಿತ ಜನರನ್ನು ನೇಮಿಸಿದ್ದರು , ಸ್ಥಳೀಯ ಪುಟ್ಟ ಪುಟ್ಟ ರಾಜ್ಯದವರು ಮತ್ತು  ಯುರೋಪ್ ದೇಶದ ವ್ಯಾಪಾರಸ್ಥರಿಂದ ಆಗಾಗ್ಗೆ  ಇವರಿಗೆ ತೊಂದರೆ ಇರುತಿತ್ತು.  ಆದರೆ ತಮ್ಮದೇ ಸೈನ್ಯವಿರಲಿಲ್ಲ. 

ಕ್ಲೈವ್ ಕೆಲಸಕ್ಕೆ ಸೇರಿದಾಗ ಅವನ ಆರ್ಥಿಕ ಪರಿಸ್ಥಿತಿ ಬಹಳ ಶೋಚನೀಯವಾಗಿತ್ತು,  ಹಡಗಿನ ಪ್ರಯಾಣ ಹದಿನೈದು ತಿಂಗಳು, ಬ್ರೆಜಿಲ್ ದೇಶದಲ್ಲಿ ಕೆಲವು ವಾರ ತಂಗಿದ್ದ ಕಾರಣ ಅವನಲ್ಲಿ ಏನೂ ಹಣವಿರಲಿಲ್ಲ, ಜನರ ಪರಿಚಯಗಳಾಗುವುದು  ಕಷ್ಟವಾಯಿತು, ಕೆಲವೇ ವಾರದಲ್ಲಿ ಮಾನಸಿಕ ಕಾಯಿಲೆ ಖಿನ್ನತೆ (Depression) ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಸಹ  ಬಂದಿತ್ತು ಅನ್ನುವುದನ್ನು ಕ್ಲೈವ್ ಹೇಳಿಕೊಂಡಿದ್ದಾನೆ. 

೧೭೪೬ರಲ್ಲಿ ಕಂಪನಿಯ ಹಣಕಾಸಿನ ಇಲಾಖೆಗೆ (Accounts) ವರ್ಗವಾಗಿ ಅಲ್ಲಿ ಕಂಪನಿಯ ವ್ಯಾಪಾರದ ಬಗ್ಗೆ ಹೆಚ್ಚು ಅನುಭವ ಪಡೆದ, ಆದರೆ ಆ ವರ್ಷ ಯುರೋಪಿನಲ್ಲಿ ನಡೆಯುತ್ತಿದ್ದ ಯುದ್ಧದಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ಎದುರಾಳಿಗಳಾಗಿದ್ದರು.  ಇದರ ಪರಿಣಾಮ ದಕ್ಷಿಣ ಭಾರತಕ್ಕೂ ತಾಕಿ ಫ್ರಾನ್ಸ್ ದೇಶದ ಸೈನ್ಯಾಧಿಕಾರಿ ಡ್ಯೂಪ್ಲೆ ಮದ್ರಾಸ್ ಪ್ರದೇಶವನ್ನು ಆಕ್ರಮಿಸಿಕೊಂಡು ಸಾಕಷ್ಟು ಲೂಟಿ ಮಾಡಿದ. 

ಕ್ಲೈವ್, ಕಂಪನಿಯ ರಕ್ಷಣಾ ಪಡೆಗೆ ಸೇರಿ  ಫ್ರಾನ್ಸ್ ವಶದಿಂದ ಕುಡುಲೂರು (Cuddalore ) ಬಿಡುಗಡೆ ಆಗುವುದಕ್ಕೆ ಸಹಾಯ ಮಾಡಿದ್ದನ್ನು ಮೇಜರ್ ಲಾರೆನ್ಸ್ ಅನ್ನುವ ಸೈನ್ಯದ ಮುಖ್ಯಸ್ಥ ಗಮನಿಸಿ, ಆಗತಾನೆ ಇಂಗ್ಲೆಂಡಿನಿಂದ  ಸಹಾಯಕ್ಕೆ ಆಗಮಿಸಿದ್ದ  ಪಡೆಗೆ ಸೇರುವಂತೆ ಮಾಡಿ  ಈಗಿನ ಪುದುಚೆರಿ (ಪಾಂಡಿಚೆರಿ) ಮೇಲೆ ದಾಳಿ ನಡೆಸಿದ. ಆದರೆ ಇದು ಸಫಲವಾಗದಿದ್ದರೂ ,ಇವನ ಸಾಹಸವನ್ನು  ಮೇಲಧಿಕಾರಿಗಳು ಗಮನಿಸಿ ಲೆಫ್ಟಿನೆಂಟ್-ನ್ನಾಗಿ ಮಾಡಿದರು (೧೭೪೯).  ತಂಜಾವೂರಿನಲ್ಲಿ ಆಳುತ್ತಿದ್ದ ಮರಾಠ ರಾಜನಿಗೆ ತನ್ನ ರಾಜ್ಯವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಈಸ್ಟ್ ಇಂಡಿಯಾ ಕಂಪನಿ ನೆರವು ಕೇಳಿ ಸಮುದ್ರ ಬಂದರು ದೇವಕೊಟ್ಟೈಯನ್ನು ಅವರ ವಶಕ್ಕೆ ಕೊಡುವ ಒಪ್ಪಂದ ಮಾಡಿದ. ಆದರೆ ಈ ಬಂದರನ್ನು ವಶಪಡಿಸುವ ಮೊದಲ ಪ್ರಯತ್ನ ಸಫಲವಾಗಲಿಲ್ಲ . 

ಎರಡನೆ ಪ್ರಯತ್ನ ಸಮುದ್ರದ ಕಡೆಯಿಂದ ಕ್ಲೈವ್ ನೇತೃತ್ವದಲ್ಲಿ ನಡೆದ ದಾಳಿ ಯಶಸ್ವಿ ಆಯಿತು, ಇವನ ಪಾತ್ರ ಎಲ್ಲರ ಗಮನಕ್ಕೆ ಬಂದಿತ್ತು. ಆಂಗ್ಲೋ ಫ್ರೆಂಚ್ ಒಪ್ಪಂದದ ಪ್ರಕಾರ ಮದ್ರಾಸ್ ಪ್ರಾಂತ್ಯ ಪುನಃ ಆಂಗ್ಲರ ವಶವಾಗಿ ಕ್ಲೈವ್ ಕಂಪನಿಯ ರಕ್ಷಣೆಗೆ ಬೇಕಾಗಿದ್ದ ಸರಕು ಮತ್ತು ಧಾನ್ಯಗಳನ್ನು ಸರಬರಾಜು ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡ. ಇದು ಅವನಿಗೆ ಬಹಳ ಲಾಭಕಾರಿಯಾಗಿ ಅವನ ವರಮಾನವೂ ಹೆಚ್ಚಾಯಿತು. ಆದರೆ ಇವನ ಆರೋಗ್ಯ ಸಹ ಹದಗೆಟ್ಟಿತ್ತು . ಕಂಪನಿ ಇವನನ್ನು ಕೆಲವು ತಿಂಗಳು ಕಲಕತ್ತದಲ್ಲಿ ವಿಶ್ರಾಂತಿ ಪಡೆಯಲು ಕಳಿಸಿತು,    

ನಂತರ ಮದ್ರಾಸಿಗೆ ಹಿಂತಿರುಗಿದಾಗ, ಮತ್ತೆ ಆಂಗ್ಲೋ ಫ್ರೆಂಚ್ ಕಿತ್ತಾಟ ಹೆಚ್ಚಾಗಿ ದಕ್ಷಿಣ ಭಾರತ ಪ್ರದೇಶದ ಮೇಲೆ  ರಾಜಕೀಯ ಮತ್ತು ಮಿಲಿಟರಿ ಶ್ರೇಷ್ಠತೆಯನ್ನು ಪಡೆಯುವ ಯೋಜನೆ ಸಾಗಿತ್ತು. ಆಗ ಕಂಪನಿಯ ಸೈನ್ಯ ಇತ್ತು ಮತ್ತು ಕ್ಲೈವ್ ಇದರಲ್ಲಿ ಕ್ಯಾಪ್ಟನ್  ಪದವಿ ಪಡೆದ. 

ತಿರುಚಿನಾಪಳ್ಳಿ ಮತ್ತು ಆರ್ಕಾಟ್ ಪ್ರದೇಶದಲ್ಲಿ ಕಂಪನಿ ಪರವಾಗಿ ಹೋರಾಟ ನಡಸಿ ಸಾಕಷ್ಷ್ಟು ಹೆಸರು ಮಾಡಿದ ಮತ್ತು ಹಣವನ್ನೂ  ಸಂಪಾದಿಸಿದ.  ಆದರೆ ಅವನ ದೇಹಸ್ಥಿತಿ ಪುನಃ ಹದಗೆಟ್ಟಿದ  ಕಾರಣದಿಂದ ಇಂಗ್ಲೆಂಡಿಗೆ  ಮರಳಿ ಬರುವ ಆಲೋಚನೆ ಬಂತು. ಇದಕ್ಕೆ ಮುಂಚೆ  ಮಾರ್ಗರೆಟ್ ಎನ್ನುವವಳ ಸ್ನೇಹ ಬೆಳದು ೧೮/೨/೧೭೫೩ರಂದು ಮದ್ರಾಸಿನಲ್ಲಿ ಈಕೆಯನ್ನು ಮದುವೆಯಾಗಿ  ಮಾರ್ಚ್ ೨೩ರಂದು ಮದ್ರಾಸಿನಿಂದ ಇಬ್ಬರು ಇಂಗ್ಲೆಂಡಿಗೆ ಹೊರಟರು. ಹೊರಡುವುದಕ್ಕೆ ಮುಂಚೆ, ಸ್ಥಳೀಯ ದಾಖಲೆಗಳ ಪ್ರಕಾರ, ಸಂಪಾದಿಸಿದ  ಅಪಾರ ಸಂಪತ್ತನ್ನು ವಜ್ರಗಳಲ್ಲಿ ಹೂಡಿಕೆ ಮಾಡಿದ.

೧೭೫೩-೧೭೫೫ ಇಂಗ್ಲೆಂಡ್ ವಾಸ 

ಇಂಗ್ಲೆಂಡಿನಲ್ಲಿ ಇವನಿಗೆ ಈಸ್ಟ್ ಇಂಡಿಯಾ ಕಂಪನಿ ಮತ್ತು ಹಲವಾರು ಶ್ರೀಮಂತರಿಂದ ಸಾಕಷ್ಟು ಬಹುಮಾನಗಳು ಬಂದವು.  ಆಗಿನ ಕಾಲಕ್ಕೆ ಈ ಮೊತ್ತ ಸುಮಾರು £೪೦೦೦೦.  ತನ್ನ ಮನೆತನೆದ ಸಾಲಗಳನ್ನು, (£೮೦೦೦ ಸ್ಟೈಚ್ ಹಾಲ್-ನ ಮೇಲಿದ್ದ ಸಾಲ)  ತೀರಿಸಿ ಕೆಲವು ಸಂಬಂಧೀರಿಗೆ  ಪಿಂಚಣಿ ಬರುವಂತೆ ಏರ್ಪಾಡು ಮಾಡಿದ.* 

ರಾಜಕೀಯಕ್ಕೆ ಇಳಿಯುವ ಯೋಚನೆ ಸಹ ಬಂದು ಏಪ್ರಿಲ್ ೧೭೫೪ ನಡೆದ ಪಾರ್ಲಿಮೆಂಟ್ ಚುನಾವಣೆಗೆ ಕಾರ್ನ್ವ ವಾಲ್ ಪ್ರದೇಶದಿಂದ ಸ್ಪರ್ದಿಸಿ ಕೇವಲ ೫೦ ಓಟಿನ ಅಂತರದಲ್ಲಿ ಚುನಾಯಿತನಾದರೂ ಇತರ ಅಭ್ಯರ್ಥಿಗಳಿಂದ ಅನೇಕ ಆಕ್ಷೇಪಣೆಗಳು ಬಂದು, ಅನೇಕ ತಿಂಗಳ ನಂತರ , ೨೪/೩/೧೭೫೫ ರಂದು  ಪಾರ್ಲಿಮೆಂಟಿನಲ್ಲಿ ಕ್ಲೈವ್ ಚುನಾವಣೆ ಅಕ್ರಮ ಎಂದು ಘೋಷಿಸಲಾಯಿತು. ಈ ಚುನಾವಣೆಗೆ ಸಾಕಷ್ಟು ದುಡ್ಡು ಖರ್ಚು ಮಾಡಿದ್ದರಿಂದ ಅವನ ಮಾಡಿದ್ದ ಉಳಿತಾಯ ಕ್ಷೀಣಿಸಿತು. ಈ ಸಮಯದಲ್ಲಿ  ಫ್ರೆಂಚರ ಬೆಂಬಲ ಪಡೆದಿದ್ದ ಹೈದರಾಬಾದಿನ ನಿಜಾಮ್ ಮೇಲೆ ದಾಳಿ ಮಾಡುವ  ಸಂಚು ನಡೆಯುತಿತ್ತು. ಕಂಪನಿಯವರು ಕ್ಲೈವ್  ಇಂಡಿಯಾಗೆ ವಾಪಸ್ಸು ಹೋಗುವ ಸಲಹೆ ಕೊಟ್ಟು ತಮ್ಮ ಸೈನ್ಯದ ಎರಡನೇ ಮುಖ್ಯಸ್ಥ  ಮತ್ತು ಫೋರ್ಟ್ ಸೈನ್ಟ್ ಡೇವಿಡ್ ಪ್ರದೇಶದ ರಾಜ್ಯಪಾಲನನ್ನಾಗಿ ನೇಮಕ ಮಾಡಿದರು.   ಕೇವಲ ಮೂವತ್ತು ವರ್ಷದವನಿಗೆ ಮತ್ತು ಕೆಲವು ವರ್ಷ ಗಳ ಹಿಂದೆ ಗುಮಾಸ್ತೆಯಾಗಿದ್ದವನಿಗೆ  ಈ ಪದವಿ ಮತ್ತು ಅವಕಾಶ ಹೀಗೆ ಬರುವುದು ಆಶ್ಚರ್ಯದ ಸಂಗತಿ. ಕ್ಲೈವ್ ಈ ಹೊಸ ಅಧಿಕಾರಕ್ಕೆ ಒಪ್ಪಿಗೆ ನೀಡಿ ಆಕ್ಟೊಬರ್  ೧೭೫೫ರಲ್ಲಿ ಕ್ಲೈವ್  ಮತ್ತು ಮಾರ್ಗರೆಟ್ ಬಾಂಬೆ ತಲುಪಿದರು. 

೧೭೫೫- ೧೭೬೦ ಇಂಡಿಯಾದಲ್ಲಿ ಕಂಪನಿಯ ಹೋರಾಟಗಳು  

ಆದರೆ ಅಲ್ಲಿನ ಪರಿಸ್ಥಿತಿ ಬದಲಾಗಿತ್ತು , ಹೈದರಾಬಾದ್ ನಿಜಾಮನ ಮೇಲೆ ನಡೆಯಬೇಕಾಗಿದ್ದ ದಾಳಿಯ ಬದಲು, ಮಲಬಾರ್ ತೀರದ ಘರಿಯ ಬಂದರಿನ ಮೇಲೆ ನಡೆಯಿತು. ಇಲ್ಲಿ  ಒಬ್ಬ ಮರಾಠನ ನೌಕಾಪಡೆ ಯುರೋಪ್ ದೇಶದಿಂದ ಬರುತ್ತಿದ್ದ  ಹಡಗುಗಳ ಮೇಲೆ ದಾಳಿ ಮಾಡಿ ಕೊಳ್ಳೆ ಮಾಡುತ್ತಿತ್ತು. ಅಡ್ಮಿರಲ್ ವಾಟ್ಸನ್-ನ ನೇತೃತ್ವದಲ್ಲಿ  ಈಸ್ಟ್ ಇಂಡಿಯಾ ಕಂಪನಿಯ ನೌಕಾಪಡೆ ಘರಿಯ ಮೇಲೆ ಐದು ಘಂಟೆ ನಿರಂತವಾಗಿ ಹಡಗಿನಿಂದ ಗುಂಡು ಹಾರಿಸಿ ಬಂದರನ್ನು ನಾಶಮಾಡಿತು. ಇದರಲ್ಲಿ ಕ್ಲೈವ್ ಸಹ ಭಾಗಿಯಾಗಿದ್ದ. ಇದಾದ ಮೇಲೆ ಮದ್ರಾಸ್ ಪ್ರದೇಶಕ್ಕೆ ಈ ನೌಕಾದಳ ಪ್ರಯಾಣ ಮಾಡಿತು. ೨/೦೬/೧೭೫೬ರಲ್ಲಿ  ಕ್ಲೈವ್ ಫೋರ್ಟ್ ಡೇವಿಡ್  ರಾಜ್ಯಪಾಲನಾದ.  ಆದರೆ ದೂರದ ಬಂಗಾಳ ದೇಶದಲ್ಲಿ ತರುಣ ನವಾಬ ಸಿರಾಜ್- ಉದ್-ದೌಲ್ ಕಲ್ಕತ್ತ ಪಟ್ಟಣವನ್ನು ಆಕ್ರಮಿಸಿಕೊಂಡ, ಕಂಪನಿಯ ಮುಖ್ಯ ಕಚೇರಿ ಹತ್ತಿರದ ಫೋರ್ಟ್-ವಿಲಿಯಂನಲ್ಲಿ ಇತ್ತು . ಈ ಆಕ್ರಮಣ ಕಂಪನಿ ಅವರಿಗೆ ತೊಂದರೆ ಆಗುವ ಸಂಭವ ಇತ್ತು. ಈ ಸಮಯದಲ್ಲೇ  ಸುಮಾರು ೪೦ ಯುರೋಪ್ ಪಂಗಡದವರು ಮಡಿದ ಅಪ್ರಸಿದ್ದ ಪ್ರಕರಣ ” Black Hole of Calcutta “.  

ಕಂಪನಿಯ ಪತಿಕ್ರಿಯೆ, ಅಡ್ಮಿರಲ್ ವಾಟ್ಸನ್ ಮತ್ತು ಕ್ಲೈವ್ ಸಹಾಯದಿಂದ ನವಾಬನಿಂದ ಕಲ್ಕತ್ತನಗರವನ್ನು ವಶಪಡಿಸಿಕೊಳ್ಳುವುದು, ಅಕ್ಟೊಬರ್ ೧೬, ೧೭೫೬ರಂದು ಇವರ ನೌಕಾಪಡೆ ಮದ್ರಾಸಿನಿಂದ  ನೌಕಾಯಾನ ಮಾಡಿತು. ಈ ಪ್ರಯಾಣದಲ್ಲಿ ಕ್ಲೈವ್ ಮತ್ತು ನೌಕಾದಳದವರಿಗೆ ಈ ದಾಳಿ ನಡೆಸುವ ತಂತ್ರದ ಮೇಲೆ ಚರ್ಚೆ ನಡೆದು ಅನೇಕ ಭಿನ್ನಾಭಿಪ್ರಾಯಗಳು ಬಂದು ಒಂದು ನಿರ್ಧಾರಕ್ಕೆ ಬರುವುದು ಕಷ್ಟವಾಯಿತು. ಆದರೂ ೨/೦೧/೧೭೫೭ ರ ದಿನ ಬುಡ್ಜ್ ಬುಡ್ಜ್-ನಲ್ಲಿದ್ದ ನವಾಬನ ಸಣ್ಣ ಸೈನ್ಯವನ್ನು ಸೋಲಿಸಿ ಕಲ್ಕತ್ತ ನಗರವನ್ನು ವಶಪಡಿಸಿಕೊಂಡರು. ಆದರೆ ಕೆಲವೇ ದಿನಗಳಲ್ಲಿ ನವಾಬ ತನ್ನ ದೊಡ್ಡ ಸೈನ್ಯದೊಂದಿಗೆ ರಾತ್ರಿ ಮುತ್ತಿಗೆ ಹಾಕಿದ. ಕ್ಲೈವ್-ನ ಸೈನ್ಯದ ಹೋರಾಟದಿಂದ ನವಾಬನಿಗೆ ಗೆಲವು ಖಚಿತವೆಂದು ಅನ್ನಿಸಲಿಲ್ಲ. ಇದೆ ರೀತಿ ಕ್ಲೈವ್-ಗೂ ಸಹ ನವಾಬನೊಂದಿಗಿಗೆ ಒಂದು ಒಪ್ಪಂದಕ್ಕೆ ಬರುವ ಯೋಚನೆ ಬಂತು. ಇದೇ ೯/೦೨/೧೭೫೭ರಂದು  ಮಾಡಿದ  ಕಲ್ಕತ್ತ ಒಪ್ಪಂದ. ಕಂಪನಿಗೆ ಬೇಕಾದ ನೆರವು ಸಿಕ್ಕಿ ನವಾಬನೊಂದಿಗೆ ಪುನಃ ಯುದ್ಧ ಮಾಡುವ  ಸಾಧ್ಯತೆ ಇರಲಿಲ್ಲ. ಆದರೆ ನವಾಬ ಫ್ರೆಂಚರ ಸ್ನೇಹ ಬೆಳಸಿ ತಿರುಗಿ ಬೀಳುವ ಸಂಶಯ ಇದ್ದಿದ್ದರಿಂದ ಕ್ಲೈವ್ ಕಲ್ಕತ್ತದಲ್ಲೇ ಇರಬೇಕಾಯಿತು

ನವಾಬನ ಆಡಳಿತದಲ್ಲಿ ಅನೇಕ ಪಿತೂರಿಗಳು ಹುಟ್ಟಿ ಅವನ ನವಾಬನಾಗಿ ಉಳಿಯುವುದು ಅನುಮಾನಾಸ್ಪದವಾಗಿತ್ತು. ಕಂಪೆನಿಯವರಿಗೆ ನವಾಬನ ಅಥವಾ ಅಂಥವನ ನೆರವು ಬೇಕಾಗಿತ್ತು. ಕ್ಲೈವ್ ಈ ಉದ್ದೇಶದಿಂದ ಕಲ್ಕತ್ತದ ವ್ಯಾಪಾರಸ್ಥ ಅಮಿರ್-ಚಂದ್ ಮೂಲಕ ನವಾಬನ ಸೇನಾಧಿಪತಿ ಮಿರ್ ಜಾಫರ್-ನನ್ನು ಸಂಪರ್ಕಸಿ, ನವಾಬ ಅವನ ಸ್ಥಾನ ಕಳೆದ ಕೊಂಡರೆ ಮೀರ್-ಜಾಫರ್ ಆ ಜಾಗಕ್ಕೆ ಬರಲು ಕಂಪನಿ ನೆರವು ನೀಡುತ್ತದೆ ಎನ್ನುವ ಆಸೆ ತೋರಿಸಿದ. ಅಮಿರ್ ಚಂದ್, ಇದು ಈಡೇರಿದರೆ, ತನಗೆ ದೊಡ್ಡ ಪ್ರತಿಫಲ ಬೇಕೆಂದು ಆಗ್ರಹಿದ. ಮೀರ್ ಜಾಫರ್ ಸಹ ಕ್ಲೈವ್-ನಿಂದ ಒಪ್ಪಂದ ಪತ್ರವನ್ನು ನಿರೀಕ್ಷಿಸಿದ್ದ. ಇಲ್ಲೇ ನೋಡಿ ಕ್ಲೈವ್ ಮಾಡಿದ “double game “. ಎರಡು ಒಪ್ಪಂದ ಪತ್ರಗಳನ್ನು ತಯಾರಿಸಿದ: ಒಂದು, ಮಿರ್ ಜಾಫರ್ ನವಾಬ ಆದರೆ ಅಮರ್ ಚಂದ್ ದೊಡ್ಡ ಮೊತ್ತ ಕೊಡುವುದಾಗಿ ಮತ್ತು ಮಿರ್ ಜಾಫರ್ ಒಪ್ಪಂದದ ಪತ್ರದಲ್ಲಿ ಅಮಿರ್ ಚಂದ್-ನ  ವಿಚಾರ ಪ್ರಸ್ತಾಪ ಮಾಡಿರಲೇ ಇಲ್ಲ! 

ಹೀಗೆ ನಡೆದ ನೈತಿಕ ಸನ್ನಿವೇಶಗಳು ಇರಲಿ, ನವಾಬನನ್ನು ಓಡಿಸಿ, ಮಿರ್ ಜಾಫರ್-ನನ್ನು  ನವಾಬನಾಗಿ ಮಾಡಿ ಕಂಪನಿಗೆ ಇನ್ನು ಹಣ ಮತ್ತು ಪ್ರಭಾವ ತರುವ ಪ್ರಯತ್ನ ಇದು. ಈ ಕಾರಣದಿಂದ ಜೂನ್ ೧೭೫೭ರಲ್ಲಿ ನಡೆದ ಪ್ಲಾಸ್ಸಿ ಯುದ್ಧದಲ್ಲಿ ನವಾಬನ ಕಡೆಯವರಿಂದ ಪಿತೂರಿ ಮಾಡಿ ಅವನನ್ನು ಸೋಲಿಸಿ ಮಿರ್ ಜಾಫರ್-ನನ್ನು ಆ ಜಾಗಕ್ಕೆ ತಂದರು. 

ದಾಖಲೆಗಳ ಪ್ರಕಾರ £೧.೨ ಮಿಲಿಯನ್ ( ಗ  £೧೫೦ ಮಿಲಿಯನ್ !!!) ಅಷ್ಟು ಉಡುಗೊರೆ ಮತ್ತು ಪ್ರತಿಫಲಗಳನ್ನು ಅವನಿಂದ ವಸೂಲಿ ಮಾಡಲಾಯಿತು. ಕ್ಲೈವ್-ನ ವೈಯಕ್ತಿಕ ಆದಾಯ ಇದರಿಂದ £೨೩೪,೦೦೦, ಅಂದರೆ ಈಗಿನ ಮೌಲ್ಯ £೩೫ ಮಿಲಿಯನ್ !!**

ಇಷ್ಟೇ ಅಲ್ಲ, ಎರಡು ವರ್ಷದ ನಂತರ ದೆಹಲಿಯ ಮೊಗಲ್ ಚಕ್ರವರ್ತಿಯ ಮಗ  ಮಿರ್ ಜಾಫರ್ ಮೇಲೆ ಯುದ್ಧ ಮಾಡಿದಾಗ ಕ್ಲೈವ್ ನೆರವಿನಿಂದ ಬಂಗಾಳವನ್ನು ರಕ್ಷಣೆ ಮಾಡಿದ್ದರಿಂದ, ನವಾಬ ಅವನಿಗೆ ವರ್ಷಕ್ಕೆ £೨೭೦೦೦ ಆದಾಯ ಬರುವಂತಹ ಜಮೀನನ್ನು “ಜಾಗೀರ್ ” ಕೊಟ್ಟ ದಾಖಲೆ ಇದೆ.   

ಫ್ರೆಂಚ್ ಮತ್ತು ಡಚ್ ಪಡೆಗಳು ಬಂಗಾಲದ ಮೇಲೆ ಧಾಳಿ ನಡೆಸುವ ವದಂತಿ ಮತ್ತು ಬೆದರಿಕೆ ಸದಾ ಇದ್ದಿದ್ದರಿಂದ ಕ್ಲೈವ್ ಮದ್ರಾಸಿಗೆ  ವಾಪಸ್ಸು ಹೋಗುವ ಅವಕಾಶ ಬರಲಿಲ್ಲ. ಅದೂ ಅಲ್ಲದೆ ಬಂಗಾಳದ  ರಾಜ್ಯಪಾಲನಾಗಿ ನೇಮಕವಾದ ಮೇಲೆ ಇಲ್ಲಿ ಮಾಡಬೇಕಾದ ಕೆಲಸಗಳು ಅನೇಕವಿದ್ದವು. 

೧೭೫೯ ರಲ್ಲಿ ಬ್ರಿಟಿಷ್ ಪ್ರಧಾನಮಂತ್ರಿ ಸರ್ ವಿಲಿಯಂ ಪಿಟ್ಟ್-ನನ್ನು  ಸಂಪರ್ಕಸಿ,  ಈಸ್ಟ್ ಇಂಡಿಯಾ  ಕಂಪನಿ ಬರೀ  ವ್ಯಾಪಾರದ ಸಂಸ್ಥೆ ಆದ್ದರಿಂದ ಈ ಪ್ರದೇಶವನ್ನು ಬ್ರಿಟಿಷ್ ಸರ್ಕಾರದ ಆಡಳಿತಲ್ಲಿ ಬಂದರೆ ಒಳಿತು ಮತ್ತು ಇದರಿಂದ ದೇಶಕ್ಕೆ (ಬ್ರಿಟಿಷ್ ) ಲಾಭವಾಗುತ್ತೆ ಎಂಬುದೇ ನನ್ನ ಅಭಿಲಾಷೆ ಎಂದು ಬರೆದ. 

ಕ್ಲೈವ್ ಬಂಗಾಳ ರಾಜ್ಯಪಾಲನಾದ ನಂತರ  ಕಂಪನಿ  ಮಾಲೀಕರು ಮತ್ತು ಅವರ ಸೈನ್ಯದ ಅಧಿಕಾರಿಗಳ ಜೊತೆ  ಅನೇಕ ಭಿನ್ನಾಭಿಪ್ರಾಯಗಳು ಬಂದವು. ಅಲ್ಲದೆ ಕ್ಲೈವ್ ಮಾಡಿದ ಅಪಾರ ಆಸ್ತಿಯನ್ನು ನೋಡಿ ಸಹಿಸಲಾಗಲಿಲ್ಲ.  ಇದನ್ನು ತಡೆಯಲಾರದೆ , ಕ್ಲೈವ್ ಇಂಗ್ಲೆಂಡ್ ಗೆ ಮರಳಿ ಹೋಗುವ ನಿರ್ಧಾರಕ್ಕೆ ಬಂದ. ಕೋಟ್ಯಂತರ ಸಂಪಾಸಿದ್ದರಿಂದ  ಚಿಂತೆ ಇಲ್ಲದೆ ತನ್ನ ದೇಶದಲ್ಲಿ ಸುಖವಾಗಿರುವ ಕನಸು ಕಂಡ. 

೧೭೬೦-೧೭೬೪ ಇಂಗ್ಲೆಂಡ್  ರಾಜಕೀಯಕ್ಕೆ ಪ್ರವೇಶ  

 ಕ್ಲೈವ್ ಫೆಬ್ರುವರಿ ೧೭೬೦ರಂದು ಬಂಗಾಲದಿಂದ ಪ್ರಯಾಣ ಬೆಳಿಸಿ ಜುಲೈ ೧೭೬೦ ಲಂಡನ್  ತಲುಪಿದಮೇಲೆ, ಬ್ರಿಟಿಷ್ ಸರ್ಕಾರ ಅವನಿಗೆ ಅನೇಕ ಮರ್ಯಾದೆಗಳನ್ನು ಮಾಡಿದರು, ಆದರೆ  ಅವನ ಆಸೆ ಇಂಗ್ಲಿಷ್ Peerage  ಅಂದರೆ Lord ಅನ್ನುವ ಪದವಿ ಪಡೆಯುವುದು,  ಆದರೆ ಇದು ಸಿಗಲಿಲ್ಲ. ಇದರ ಬದಲು Irish Baron Clive of Plassey ಆದ.  ಆದರೆ ಇವನ  ನಡತೆ ಮತ್ತು ದುಡ್ಡು ಮಾಡಿದ ರೀತಿ ಬಗ್ಗೆ ತೀವ್ರ ಟೀಕೆಗಳೂ ಆಯಿತು. ತನ್ನ ಅಪಾರ ಆಸ್ತಿ ಮತ್ತು ಪ್ರಭಾವ ದಿಂದ ಪಾರ್ಲಿಮೆಂಟ್ ಗೆ ಶ್ರೂಷಬರಿ (Shrewsbury ) ಕ್ಷೇತ್ರ ದಿಂದ ಅವಿರೋಧವಾಗಿ ಆಯ್ಕೆ ಆದ. ಆದರೆ ಇಂಡಿಯಾದಲ್ಲಿ ಕಂಪನಿಯ ಸ್ಥಿತಿ ಹದಗೆಟ್ಟಿತು, ಕಂಪನಿಯ ಷೇರುದಾರರು ಕ್ಲೈವ್ ಪುನಃ ಬಂಗಾಳಕ್ಕೆ ಹಿಂತಿರಿಗಿ ಉಸ್ತುವಾರಿ ವಹಿಸಿಕೊಳ್ಳುವುದಕ್ಕೆ ಬಲವಂತ ಮಾಡಿದರು. 

೧೭೬೫- ೧೭೬೭ ಕೊನೆಯ ಇಂಡಿಯ ದಿನಗಳು  

೪/೦೬/೧೭೬೪ ಲಂಡನ್ನಿಂದ, ಮಾರ್ಗರೇಟ್ ಮತ್ತು ಮಕ್ಕಳ ಜೊತೆಯಲ್ಲಿ ಇಲ್ಲದೆ ಹೊರಟು, ಬ್ರೆಸಿಲ್-ನಲ್ಲಿ ತಡವಾಗಿ ಕೊನೆಗೆ ಮದ್ರಾಸ್ ಮೂಲಕ  ಮೇ ತಿಂಗಳು ೧೭೬೫  ಬಂಗಾಳ ಸೇರಿದ. ಆಗತಾನೆ ಕಂಪನಿಯವರು ಅನೇಕ ಶತ್ರುಗಳಮೇಲೆ ಹೋರಾಟ ನಡಿಸಿ ಜಯಪಡದಿದ್ದರು. ಹೆಕ್ಟರ್ ಮನ್ರೋ ನೇತೃತ್ವದಲ್ಲಿ ಕಂಪನಿಯ ಪಡೆಗಳು ತಮ್ಮ ಪ್ರಭಾವವನ್ನು ದೆಹಲಿಯವರೆಗೆ ಹರಡುವ ಆಲೋಚನೆ ಇತ್ತು, ಇದನ್ನು ಕ್ಲೈವ್  ನಿರಾಕರಿಸಿ ಕಂಪನಿಯ  ರಾಜಕೀಯ ಮತ್ತು ಆಡಳಿತವನ್ನು ಕ್ರೋಢೀಕರಿಸುವುದು ಮುಖ್ಯವಾದದ್ದು ಎಂದು ಅಲಹಾಬಾದ್ ಒಪ್ಪಂದವನ್ನು ನೆರೆಯ ರಾಜ್ಯದೊಂದಿಗೆ ಮಾಡಿ, ಕಂಪನಿಗೆ ದಿವಾನಗಿರಿನಿಂದ  ಬಂಗಾಳ, ಬಿಹಾರ ಮತ್ತು  ಒರಿಸ್ಸಾ ಪ್ರದೇಶದಿಂದ ತೆರಿಗೆ ವಸೂಲು ಮಾಡುವ ಹಕ್ಕು ಪಡೆಯಿತು. ಪ್ರತಿಯಾಗಿ ಕಂಪನಿಯ ಪಡೆಗಳು ಈ ರಾಜ್ಯದ ನೆರವಿಗೆ ಬೇಕಾದಾಗ ಬರುವುದು ಮತ್ತು ವರ್ಷಕ್ಕೆ ೨೬ ಲಕ್ಷ ರೂಪಾಯಿ ನವಾಬನಿಗೆ ಕೊಡುವದು. ಪರೋಕ್ಷವಾಗಿ ಕಂಪನಿಯವರು ಈ ರಾಜ್ಯಗಳ ಆಡಳಿತದ ಮೇಲೆ ತಮ್ಮ ಪ್ರಭಾವನ್ನು ಬೀರಿದ್ದರು. ಕಂಪನಿಯ ಲಾಭ ಹೆಚ್ಚಿತು ಮತ್ತು ದಿವಾನಗಿರಿ ವಿಷಯ ಲಂಡನ್ನಿಗೆ ತಲುಪಿ ಶೇರುಕಟ್ಟೆಯಲ್ಲಿ ಕಂಪನಿಯ ಮೌಲ್ಯ ಹೆಚ್ಚಾಯಿತು. ಅವನ ಸ್ನೇಹಿತರು ಮತ್ತು ಮನೆಯವರು ಕಂಪನಿಯ ಒಳ ಸಮಾಚಾರ (Inside Information ) ಕ್ಲೈವ್-ನಿಂದ  ತಿಳಿದು ಸಾಕಷ್ಟು ದುಡ್ಡು ಮಾಡಿದರು. ೧೭೬೭ ರಲ್ಲಿ, ದಾಖಲೆಗಳ ಪ್ರಕಾರ, ಕ್ಲೈವ್-ನ ಷೇರುಗಳ ಮೊತ್ತ £೭೫೦೦೦. ಇಂಗ್ಲೆಂಡ್ ನಲ್ಲಿ ಇವನು ದುಡ್ಡು ಮಾಡಿರುವ ಬಗ್ಗೆ  ಅನೇಕ  ವದಂತಿಗಳು ಹರಡಿದ್ದವು , ಪಾರ್ಲಿಮೆಂಟಿನಲ್ಲೂ ಚರ್ಚೆ ನಡೆಯಿತು , ಆದರೆ ಇವನ ಬೆಂಬಲಿಗರು ಅನೇಕರು ಮತ್ತು ಇವರಿಗೆ ಹಣ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದ.  ಆದ್ದರಿಂದ ಇವನ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರಶ್ನೆ ಬರಲಿಲ್ಲ. 

ಕಂಪನಿಯಲ್ಲಿ ಅನೇಕ ಸುಧಾರಣೆಗಳನ್ನು ತರಬೇಕಾಯಿತು , ಅನೇಕ ಕೆಲಸದವರು ಭ್ರಷ್ಟಾಚಾರ ದಲ್ಲಿ ತೊಡಗಿ ಬೆಲೆ ನಿಗದಿ (Price  fixing ) ಮಾಡುವದು ಸಾಕಷ್ಟು ಸಾಮಾನ್ಯವಾಗಿತ್ತು.  

ಅಲ್ಲದೇ  ಹೊರಗಿನಿಂದ ಬರುತ್ತಿದ್ದ ಬಹುಮಾನಗಳನ್ನು ನಿಷೇಧಿಸಿದ. ಕಂಪನಿಯ ಸೈನ್ಯದ ಕಲ್ಯಾಣದ ಬೆಗ್ಗೆ ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ತನಗೆ ಬರುತ್ತಿದ್ದ ಜಾಗೀರ್ ವರಮಾನವನ್ನು ಕಂಪನಿಯ ಸೈನಿಕರು ಹೋರಾಡಿ ಅಂಗವಿಕಲರಾದವರಿಗೆ ಪಿಂಚಣಿ ಬರುವಂತೆ ಮಾಡಿದ.  

ಆದರೆ ಈ ಸುಧಾರಣೆಗಳು ಎಲ್ಲರಿಗೂ ಹಿಡಿಸಲಿಲ್ಲ. ತನ್ನ ನಿರ್ಧಾರಗಳೇ ಸರಿ ಎನ್ನುವ ಬಿಗುಮಾನ ಮತ್ತು ಅಹಂಕಾರ ಇವನಿಲ್ಲಿತ್ತು. ೧೭೬೬ ರಲ್ಲಿ ಇವನ ಅರೋಗ್ಯ ಕ್ಷೀಣವಾಗಿ ನರಗಳ  ದುರ್ಬಲತೆ ಹೆಚ್ಚಾಗಿ ಬಂಗಾಳದ  ರಾಜ್ಯಪಾಲ ಮತ್ತು ಕಂಪನಿಯ ಆಡಳಿತ ಮುಂದೆವರೆಸುವುದು ಕಷ್ಟವಾಯಿತು. ಅಲ್ಲದೆ ಮಾರ್ಗರೇಟ್ ಇಲ್ಲದಿರುವ ಕೊರತೆ ಹೆಚ್ಚಾಯಿತು. ಕೊನೆಗೆ ಬಂಗಾಳ  ಕೊನೆಯ ಬಾರಿಗೆ ಬಿಟ್ಟು ತನ್ನ ದೇಶಕ್ಕೆ ಹಿಂತಿರುಗುವ ನಿರ್ಧಾರ ಮಾಡಿ,  ೨೦/೦೧/೧೭೬೭ ರಂದು ಕಲ್ತತ್ತದಿಂದ  ಪ್ರಯಾಣ ಬೆಳಿಸಿ ಜುಲೈ  ೧೭೬೭ ಲಂಡನ್ ತಲುಪಿದ. 

ಇವನ ವೈಯಕ್ತಿಕ ಅಸ್ತಿ £೪೦೦೦೦೦( ಈಗಿನ ಮೌಲ್ಯ £೮೫ ಮಿಲಿಯನ್ ). ಕಂಪನಿಯ ವ್ಯವಹಾರಗಳ ತನಿಖೆ ಪಾರ್ಲಿಮೆಂಟಿನಲ್ಲಿ ಪುನಃ ಪ್ರಾರಂಭವಾಯಿತು . ಆದರೆ ಇವನಿಗೆ ಇಂತಹ ವಿಚಾರದಲ್ಲಿ ಆಸಕ್ತಿ ಇರಲಿಲ್ಲ ಅವನ ಆರೋಗ್ಯಕ್ಕೆ ಗಮನ ಕೊಟ್ಟು ಬಾತ್ ಮತ್ತು ಯುರೋಪಿನಲ್ಲಿ ವಿಶ್ರಾಂತಿ ತೆಗಿದುಕೊಂಡ. ಆದರೆ ೧೭೬೮ ನಲ್ಲಿ ನಡೆದ ಚುನಾವಣೆಯಲ್ಲಿ ತನ್ನ ಕಡೆಯವರನ್ನು ನಿಲ್ಲಿಸಿ ಗೆಲ್ಲಿಸಬೇಕಾದ ಉದ್ದೇಶದಿಂದ ಅನೇಕ ಕಡೆ ಹಣ ಖರ್ಚು ಮಾಡಿದರೂ, ಪರಿಣಾಮ ತೃಪ್ತಿಕರವಾಗಿರಲಿಲ್ಲ, ಕೊನೆಗೆ ತಾನೇ Shrewsbury ಇಂದ ಅವಿರೋಧವಾಗಿ ಆಯ್ಕೆ ಆದ. 

ಕಂಪನಿ ವ್ಯವಹಾರದ ಬಗ್ಗೆ ಪಾರ್ಲಿಮೆಂಟ್ ನಲ್ಲಿ  ಆಗಾಗ್ಯೆ ಚರ್ಚೆ ನಡೆಯುತ್ತಲೇ ಇತ್ತು ಮತ್ತು ಆದರೆ ಕ್ಲೈವ್ ಇದರ ಬಗ್ಗೆ ಜಾಸ್ತಿ  ಗಮನ ಕೊಡುತ್ತಿರಲಿಲ್ಲ. ಆದರೆ ಒಂದು ಚರ್ಚೆಯಲ್ಲಿ ಭಾಗವಹಿಸಿ ಸುಮಾರು ಎರಡು ಗಂಟೆ ಮಾತನಾಡಿ ತನ್ನ ಆಡಳಿತತ ಕ್ರಮಗಳನ್ನು ಸಮರ್ಥಿಸಿಕೊಂಡು , ಈ ಮಾತುನ್ನು ಹೇಳಿ ತನ್ನ ಭಾಷಣವನ್ನು ಮುಗಿಸಿದ, ” Mr Chairman, at  this moment I stand astonished at my own moderation “, ಅಂದರೆ,  ಇದರ ಅರ್ಥ, ಬೇಕಾಗಿದ್ದರೆ ಇನ್ನೂ  ಹೆಚ್ಚಿಗೆ ಹಣ ಸಂಪಾದಿಸಬಹುದಾಗಿತ್ತು ಆದರೆ ಮಾಡಲಿಲ್ಲ! 

ಲಂಡನ್ Berkley Square ನಲ್ಲಿ ಇದ್ದ ಭವ್ಯವಾದ ಮನೆಯಲ್ಲಿ ವಾಸವಾಗಿದ್ದಾಗ, ಒಂದು ಸಾಯಂಕಾಲ ರಂದು ೨೨/೧೧/೧೭೭೪,  ಸ್ನೇಹಿತರ ಜೊತೆಯಲ್ಲಿ ಹರಟುತ್ತ ಇದ್ದ ಕ್ಲೈವ್, ಅವರ ಕ್ಷಮೆ  ಕೋರಿ ಪಕ್ಕದ ಕೊಣೆ ಸೇರಿ ಹೊರಗೆ ಬಹಳ ಹೊತ್ತು ಹೊರಗೆ ಬರಲಿಲ್ಲ. ಬಹಳ ವರ್ಷದಿಂದ ನೆರಳುತಿದ್ದ ನರಗಳ ದುರ್ಬಲತೆಯಿಂದ  ನೋವು ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಸಣ್ಣ ಚೂರಿಯಿಂದ ತನ್ನ ಗಂಟಲಿಗೆ ತೂರಿಸಿ ಪ್ರಾಣ ಬಿಟ್ಟ ಅನ್ನುವುದು ಅನೇಕರ ಅಭಿಪ್ರಾಯ. ಆದರೆ ನೋವಿಗೆ ಪರಿಹಾರ ಸಿಗಲೆಂದು ಓಪಿಯಂ ಹೆಚ್ಚಿಗೆ ಪ್ರಮಾಣದಲ್ಲಿ ಸೇವನೆ ಮಾಡಿ ಪ್ರಾಣ ಕಳೆದುಕೊಂಡ ಅನ್ನುವುದು ಮುಖ್ಯ ಕಾರಣ ಇರಬಹುದು. ಆಗ ಇವನಿಗೆ ಕೇವಲ ೪೯ ವರ್ಷ. 

ನಂತರ ಅವನ ಮಗ ಎಡ್ವರ್ಡ್ ಕ್ಲೈವ್ (೧೭೫೪-೧೮೩೯) ಸಹ ಮದ್ರಾಸ್ ಪ್ರದೇಶಕ್ಕೆ ರಾಜ್ಯಪಾಲನಾಗಿ ಕೆಲಸಮಾಡಿದ. ೧೭೯೯ ನಡೆದ ಟಿಪ್ಪು ಸುಲ್ತಾನ್ ಮೇಲೆ ಯುದ್ಧದಲ್ಲಿ ಇವನು ಭಾಗಿಯಾಗಿದ್ದ. 

ಮುಂದೆ ಸುಮಾರು ಇನ್ನೂರು ವರ್ಷಗಗಳು  ಬ್ರಿಟಿಷರು ಭಾರತವನ್ನು ಆಳಿದರು, ಕ್ಲೈವ್ ಮತ್ತು ಇತರರು ವ್ಯಾಪಾರಕ್ಕೆ ಬಂದು ಕೊನೆಗೆ ಇಡೀ ದೇಶವನ್ನೇ  ಕಬಳಿಸಿದರು.  ದಾಖಲೆ ಪ್ರಕಾರ ಭಾರತ ದೇಶದ  GDP  ೧೮ನೇ  ಶತಮಾನದಲ್ಲಿ ೨೫%.  ಆದರೆ ಬ್ರಿಟಿಷರು ಬಿಟ್ಟ  ೧೯೪೭ ರಲ್ಲಿ ಭಾರತ ಒಂದು ಬಡ ದೇಶವಾಗಿತ್ತು!  ಕಾರಣ ನಮ್ಮ ದೇಶದಲ್ಲಿ ಒಗ್ಗಟ್ಟು ಮತ್ತು ರಾಜ್ಯಗಳ  ಸಹಕಾರ ಇರಲಿಲ್ಲ ಅಂದರೆ ತಪ್ಪು ಆಗಲಾರದು.

ಕ್ಲೈವ್ ಪ್ರತಿಮೆ ಮಾರ್ಕೆಟ್ ಡ್ರೇಟನ್ (ಅವನ ಊರು ) ನಲ್ಲಿದೆ. ಅದನ್ನು ತೆಗೆದು ಹಾಕುವುದಕ್ಕೆ  ಸಾಕಷ್ಟು ಬೇಡಿಕೆ ಇತ್ತು, ಈಗಲೂ ಇದೆ. ವೇಲ್ಸ್ ನಲ್ಲಿರುವ Powis Castleನಲ್ಲಿ ಕ್ಲೈವ್ ಮನೆತನಕ್ಕೆ ಸಂಬಂದಪಟ್ಟ ವಸ್ತುಗಳ ಸಂಗ್ರಹ ಇದೆ.

ಕನ್ನಡ ಭಾಷೆಯ ಮೇಲೆ ಒಂದಿಷ್ಟು ಆಲೋಚನೆಗಳು – ಕೇಶವ ಕುಲಕರ್ಣಿ

ನಾನು ಇಂಗ್ಲೆಂಡಿಗೆ ಬಂದ ಹೊಸತಿನಲ್ಲಿ ಕನ್ನಡವನ್ನು ಓದಬೇಕೆಂದರೆ ಭಾರತದಿಂದ ತಂದ ಪುಸ್ತಕಗಳು ಮಾತ್ರ ಆಸರೆಯಾಗಿದ್ದವು. ಆಗತಾನೆ ಕನ್ನಡದಲ್ಲಿ ಬ್ಲಾಗುಗಳು ಆರಂಭವಾಗುತ್ತಿದ್ದವು. ದಾಟ್ಸ್ ಕನ್ನಡ ಎನ್ನುವ ಜಾಲದಲ್ಲಿ ಕನ್ನಡದ ವಾರ್ತೆಗಳನ್ನು ಓದಲು ಸಿಗುತ್ತಿತ್ತು. ವರುಷಗಳು ಕಳೆದಂತೆ ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳು ಜಾಲದಲ್ಲಿ ಓದಲು ಸಿಗಹತ್ತಿದವು. ಸುಧಾ, ತರಂಗ, ಮಯೂರ, ತುಷಾರ, ರೂಪತಾರಾಗಳೂ ಓದಲು ಸಿಗತೊಡಗಿದವು. ಇತ್ತೀಚೆಗೆ ವಿವಿಡ್‍ಲಿಪಿ, ಮೈಲಾಂಗ್ ಎನ್ನುವ ಆ್ಯಪ್‍ಗಳು ಕನ್ನಡದ ಇ-ಪುಸ್ತಕಗಳನ್ನು ಫೋನಿಗೆ ತಂದು ಹಾಕುತ್ತಿವೆ. ಯುಟ್ಯೂಬಿನಲ್ಲಿ ಕನ್ನಡ ಸಾಹಿತಿಗಳ ಚರ್ಚೆ ಮತ್ತು ಸಂದರ್ಶನಗಳನ್ನು ನೋಡಲು ಸಿಗುತ್ತಿವೆ. ಅವಧಿ ಮತ್ತು ಕೆಂಡಸಂಪಿಗೆ ತರಹದ ಕನ್ನಡ ಸಾಹಿತ್ಯಕ್ಕೇ ಮೀಸಲಾದ ಜಾಲತಾಣಗಳಿವೆ. 

ಕನ್ನಡನಾಡಿನಿಂದ ದೂರ ಬಂದಿದ್ದರೂ ಕನ್ನಡದಲ್ಲಿ ವಾರ್ತೆಗಳನ್ನು, ಕನ್ನಡದ ಕತೆ-ಕಾದಂಬರಿಗಳನ್ನು, ಕವನಗಳನ್ನು ಓದುವುದು ನಿರಂತರವಾಗಿ ನಡೆಯುತ್ತಲೇ ಇದೆ. ನಾನು ಇಂಗ್ಲೆಂಡಿನಲ್ಲಿ ಕಳೆದ ಈ ಹತ್ತು ಹದಿನೈದು ವರ್ಷಗಳಲ್ಲಿ ಕನ್ನಡ ಭಾಷೆಯ ಬಳಕೆಯಲ್ಲಿ ಅಗಾಧವಾದ ಬದಲಾವಣೆಗಳಾಗಿವೆ ಎಂದು ಅನಿಸುತ್ತದೆ. ಅಂಥ ಕೆಲವು ವಿಷಯಗಳನ್ನು ಈ ಅಂಕಣ ಬರಹದಲ್ಲಿ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ (ನಾನೇ ಮೊದಲನೇಯನಲ್ಲ ಎಂದು ಗೊತ್ತು). ನಾನು ಕನ್ನಡದ ಪಂಡಿತನೂ ಅಲ್ಲ ಮತ್ತು ಕನ್ನಡ ಭಾಷೆಯ ಇತಿಹಾಸವನ್ನು ಓದಿಕೊಂಡವನೂ ಅಲ್ಲ ಎಂದು ಮೊದಲು ತಪ್ಪೊಪ್ಪಿಕೊಂಡೇ (ಡಿಸ್‍ಕ್ಲೇಮರ್) ಇದನ್ನೆಲ್ಲ ನಿಮ್ಮ ಮುಂದಿಡುತ್ತಿದ್ದೇನೆ. 

ಸಾಯುತ್ತಲಿರುವ ಕನ್ನಡಪದಗಳು, ಹೆಚ್ಚುತ್ತಲಿರುವ ಇಂಗ್ಲೀಷ್ ಶಬ್ದಗಳು:

ದೊಡ್ಡಪಟ್ಟಣಗಳಲ್ಲಿ ನೆಲೆಸುವ ಕನ್ನಡಿಗರು ಕನ್ನಡದಲ್ಲಿ ಮಾತನಾಡುವಾಗ ಒಂದು ವಾಕ್ಯದಲ್ಲಿ ಒಂದಾದರೂ ಇಂಗ್ಲೀಷ್ ಶಬ್ದವನ್ನು ಉಪಯೋಗಿಸುತ್ತಾರೆ ಎನ್ನುವುದು ನನ್ನ ಅನಿಸಿಕೆ. ಕೇವಲ ಒಂದು ಪೀಳಿಗೆಯ ಹಿಂದೆ ದಿನಬಳಕೆಯಲ್ಲಿದ್ದ ಎಷ್ಟೊಂದು ಕನ್ನಡದ ಶಬ್ದಗಳನ್ನು ಇಂಗ್ಲೀಷ್ ಶಬ್ದಗಳು ಕೊಂದು ಹಾಕಿರುವುದರೆ ನೇರ ಪರಿಣಾಮವಿದು  (ಪ್ರೊಫೇಸರ್ ಕೃಷ್ಣೇಗೌಡರು ‘ಕೋಡಗನ ಕೋಳಿ ನುಂಗಿತ್ತ‘ದ ಮಾದರಿಯಲ್ಲಿ ಇದರ ಬಗ್ಗೆ ಒಂದು ಹಾಡು ಮಾಡಿದ್ದಾರೆ ಕೂಡ). 

ಪಾನಕವನ್ನು ಜ್ಯೂಸ್, ಪಚಡಿಯನ್ನು ಸಲಾಡ್, ಅನ್ನವನ್ನು ರೈಸ್, ಮೊಸರನ್ನವನ್ನು ಕರ್ಡ್‌-ರೈಸ್, ಚಿತ್ರಾನ್ನವನ್ನು ಲೆಮನ್-ರೈಸ್ ಅನ್ನುತ್ತಿದ್ದೇವೆ. ಪಡಸಾಲೆಯನ್ನು ಡ್ರಾಯಿಂಗ್-ರೂಮ್, ಅಡುಗೆಮನೆಯನ್ನು ಕಿಚನ್, ಬಚ್ಚಲುಮನೆಯನ್ನು ಬಾತ್‌-ರೂಮ್ ಅನ್ನುತ್ತಿದ್ದೇವೆ. ಅಪ್ಪ ಡ್ಯಾಡಿಯಾಗಿ, ಅಮ್ಮ ಮಮ್ಮಿಯಾಗಿ ಆಗಲೇ ಒಂದು ಪೀಳಿಗೆಯೇ ಮುಗಿದಿದೆ. ಮಾಮಾ, ಕಾಕಾ, ಸೋದರಮಾವ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲ ಶಬ್ದಗಳೂ ‘ಅಂಕಲ್’ ಆಗಿಬಿಟ್ಟಿವೆ. ಮಾಮಿ, ಕಾಕು, ದೊಡ್ಡಮ್ಮ, ಚಿಕ್ಕಮ್ಮರೆಲ್ಲ ‘ಆಂಟಿ’ಗಳಾಗಿದ್ದಾರೆ. ಮೆಣಸು ಪೆಪ್ಪರ್ ಆಗಿದೆ, ಶುಂಠಿ ಜಿಂಜರ್ ಆಗಿದೆ, ಬೆಳ್ಳುಳ್ಳಿ ಗಾರ್ಲಿಕ್ ಆಗಿದೆ, ಅರಿಶಿಣ ಪುಡಿ ಟರ್ಮರಿಕ್ ಆಗಿದೆ. ವರ್ಷಗಳು ಉರುಳಿದಂತೆ ನಿಧನಿಧಾನವಾಗಿ ದಿನನಿತ್ಯ ಬಳಸುವ ಕನ್ನಡದ ಪದಗಳನ್ನು ಇಂಗ್ಲೀಷ್ ಪದಗಳು ಆಕ್ರಮಿಸುತ್ತಿವೆ.   

ತಂತ್ರಜ್ಙಾನದಿಂದ ಬಂದ ಹೊಸ ಅವಿಷ್ಕಾರಗಳಾದ ಫೋನು, ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳಿಗೆ ದೂರವಾಣಿ, ಗಣಕಯಂತ್ರ, ಜಂಗಮವಾಣಿ ಎಂದೆಲ್ಲ ಹೊಸ ಶಬ್ದಗಳನ್ನು ತರುವ ಪ್ರಯತ್ನ ನಡೆಯಿತಾದರೂ ಕೊನೆಗೆ ಕನ್ನಡಿಗರ ಮಾತಿನಲ್ಲಿ ಉಳಿದದ್ದು ಮೂಲ ಇಂಗ್ಲೀಷ್ ಪದಗಳೇ. ಪೋಲೀಸರಿಗೆ ಆರಕ್ಷಕ, ಇಂಜಿನಿಯರನಿಗೆ ಅಭಿಯಂತರ, ಮ್ಯಾನೇಜರನಿಗೆ ವ್ಯವಸ್ಥಾಪಕ (ಕಾರ್ಯನಿರ್ವಾಹಕ) ಎಂದೆಲ್ಲ ಹೊಸ ಶಬ್ದಗಳ ಪ್ರಯೋಗ ಪತ್ರಿಕೆಗಳಿಗೆ ಸೀಮಿತವಾಗಿ, ಕೊನೆಗೆ ಪತ್ರಿಕೆಗಳೂ ಅವುಗಳ ಬಳಕೆಯನ್ನು ಬಿಟ್ಟಿಕೊಟ್ಟವು.

ಕನ್ನಡ ಭಾಷೆಯಲ್ಲಿ ಪಾರಿಭಾಷಿಕ ಪದಗಳನ್ನು ಸೃಷ್ಟಿಸುವ ಕೆಲಸದ ಹಿಂದಿರುವ ಪರಿಶ್ರಮವೆಲ್ಲ ನಷ್ಟವಾಗುತ್ತಲಿದೆ. ಇದೇ ಪ್ರವೃತ್ತಿ ಮುಂದುವರೆದರೆ ಹೊಸ ಕನ್ನಡ ಶಬ್ದಗಳನ್ನು ಹುಟ್ಟುಹಾಕುವ ಪ್ರಯತ್ನವನ್ನೇ ಪಂಡಿತರು ಬಿಟ್ಟುಬಿಡುತ್ತಾರೆ ಅನಿಸುತ್ತದೆ. 

ಮಾತನಾಡುವಾಗ ಇಲ್ಲದ ಮಡಿವಂತಿಕೆ ಬರೆಯುವಾಗ ಇರಬೇಕೇ?:

ಹೀಗೆ ಸಾವಿರಾರು ಇಂಗ್ಲೀಷ್ ಪದಗಳು ದಿನ ಬಳಕೆಯ ಕನ್ನಡದ ಬದುಕಲ್ಲಿ ಹಾಸುಹೊಕ್ಕಾಗಿ, ಕನ್ನಡದ ಪದಗಳೇ ಆಗಿ ಹೋಗಿದ್ದರೂ, ನಾನು ಇಂಗ್ಲೆಂಡಿಗೆ ಬಂದು ಇಷ್ಟು ವರ್ಷಗಳಾದರೂ, ದಿನನಿತ್ಯ ಬಳಸುವ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ನನ್ನ ಕೈ ಓಡುವುದಿಲ್ಲ, ಆ ಶಬ್ದಗಳಿಗೆ ಸರಿಸಮನಾದ ಕನ್ನಡ ಶಬ್ದವನ್ನೋ, ಕನ್ನಡ ಶಬ್ದ ಸಿಗದಿದ್ದಾಗ ಸಂಸ್ಕೃತ ಶಬ್ದವನ್ನೋ ಮೆದುಳು ಹುಡುಕುತ್ತದೆ. ಕನ್ನಡದಲ್ಲಿ ಅಷ್ಟಾಗಿ ಬಳಕೆಯಲ್ಲಿ ಇಲ್ಲದ ಅಂತರ್ಧಾನ, ಸ್ವರೂಪ, ವ್ಯಾಧಿಗ್ರಸ್ತ, ಜಾಜ್ವಲ್ಯಮಾನ, ವಾಕ್ಚಾತುರ್ಯ ಇತ್ಯಾದಿ ಸಂಸ್ಕೃತದ ಶಬ್ದಗಳನ್ನು ಬರೆಯುವಾಗ ಇಲ್ಲದ ಮಡಿವಂತಿಕೆ, ದಿನಬಳಕೆಯ ಇಂಗ್ಲೀಷ್ ಶಬ್ದಗಳಾದ ಹಾಸ್ಪಿಟಲ್, ಕೀಬೋರ್ಡ್, ಮಾನಿಟರ್ ಎಂದೆಲ್ಲ ಬರೆಯುವಾಗ ಅಡ್ಡಬರುತ್ತದೆ. ನಾನು ಚಿಕ್ಕನಿದ್ದಾಗ ಆಗಲೇ ಕನ್ನಡೀಕರಣಗೊಂಡ ಬಸ್ಸು, ಕಾರು, ರೈಲು, ರೋಡು ಎಂದು ಬರೆಯುವಾಗ ಇಲ್ಲದ ಮುಜುಗರ, ಇತ್ತೀಚಿನ ವರ್ಷಗಳಲ್ಲಿ ಕನ್ನಡೀಕರಣಗೊಂಡ ಇಂಗ್ಲೀಷ್ ಶಬ್ದಗಳನ್ನು ಬರೆಯುವಾಗ ಆಗುತ್ತದೆ. ಪಾರ್ಸಿಯಿಂದ ಬಂದ `ಅರ್ಜಿ` ಎಂದು ಬರೆದಾಗ ಏನೂ ಅನಿಸುವುದಿಲ್ಲ, ಆದರೆ `ಅಪ್ಲಿಕೇಷನ್` ಎಂದು ಕನ್ನಡದ ಲಿಪಿಯಲ್ಲಿ ಬರೆಯುವಾಗ ಇರಿಸುಮುರುಸಾಗುತ್ತದೆ. ಈ ಗೊಂದಲ ಕನ್ನಡದ ಬೇರೆ ಲೇಖಕರನ್ನು ಎಷ್ಟರಮಟ್ಟಿಗೆ ಕಾಡುವುದೋ ನನಗೆ ಗೊತ್ತಿಲ್ಲ. ಪ್ರಶ್ನೆ ಇರುವುದು ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದಲ್ಲ, ಯಾವುದನ್ನು ಬರೆದರೆ ಕನ್ನಡದ ಓದುಗರನ್ನು ಸುಲಭವಾಗಿ ತಲುಪಬಹುದು ಎನ್ನುವುದು.

ವಿರಾಮಚಿಹ್ನೆಗಳ (ದುರು)ಪಯೋಗ: 

ನಾವು ಬರೆಯುವಾಗ ಬಹಳಷ್ಟು ವಿರಾಮಚಿಹ್ನೆಗಳನ್ನು (punctuation) ಬಳಸುತ್ತೇವೆ, ಪೂರ್ಣವಿರಾಮ, ಅಲ್ಪವಿರಾಮ, ಅರ್ಧವಿರಾಮ, ಪ್ರಶ್ನಾರ್ಥಕ,  ಉದ್ಗಾರವಾಚಕ ಇತ್ಯಾದಿ. ಇಷ್ಟೊಂದು ವಿರಾಮ ಚಿಹ್ನೆಗಳನ್ನು ಭಾರತೀಯ ಭಾಷೆಗಳು ಕಲಿತದ್ದು ಬಹುಷಃ ಇಂಗ್ಲೀಷಿನಿಂದಲೇ ಇರಬೇಕು. 

ಅವುಗಳಲ್ಲಿ ಒಂದು ಚಿಹ್ನೆಯನ್ನು ಕನ್ನಡ ಸಾಹಿತ್ಯದ ಓದುಗರೆಲ್ಲರೂ ಖಂಡಿತ ಓದಿರುತ್ತೀರಿ (ಅಥವಾ ನೋಡಿರುತ್ತೀರಿ), ಅದು ಮೂರು ಡಾಟ್‍ಗಳು (…), ಇಂಗ್ಲೀಷಿನಲ್ಲಿ ಅದಕ್ಕೆ ellipse (ಎಲಿಪ್ಸ್) ಎನ್ನುತ್ತಾರೆ. ಈ ಎಲಿಪ್ಸಿಗೆ ಕನ್ನಡ ವ್ಯಾಕರಣಕಾರರು ಯಾವ ಕನ್ನಡ/ಸಂಸ್ಕೃತ ಶಬ್ದವನ್ನು ಕೊಟ್ಟಿದ್ದಾರೋ ಗೊತಿಲ್ಲ. 

ವಾಕ್ಯದ ಕೊನೆಗೆ ಎಲಿಪ್ಸನ್ನು ಉಪಯೋಗಿಸಿದರೆ, ಇನ್ನೂ ಏನೋ ಮಾತು ಉಳಿದಿದೆ ಎಂದು ಅರ್ಥ. ಸಂಭಾಷಣೆಯ ರೂಪದಲ್ಲಿರುವ ವಾಕ್ಯದ ನಡುವೆ ಎಲಿಪ್ಸ್ ಬರೆದರೆ, ಮಾತನಾಡುವ ವ್ಯಕ್ತಿ ಮಾತನ್ನು ನುಂಗಿದ ಎಂದು ಅರ್ಥ. ಒಟ್ಟಿನಲ್ಲಿ ಎಲಿಪ್ಸನ್ನು ಬಳಸಿದರೆ ಎಲ್ಲೋ ಏನೋ ಬಿಟ್ಟುಹೋಗಿದೆ ಎಂದು ಅರ್ಥ. ಆದ್ದರಿಂದ ಈ ಎಲಿಪ್ಸನ್ನು ಎಷ್ಟು ಕಡಿಮೆಯಾಗುತ್ತೋ ಅಷ್ಟು ಕಡಿಮೆ ಬಳಸುವುದು ಒಳ್ಳೆಯದು ಎನ್ನುತ್ತದೆ ಇಂಗ್ಲೀಷ್ ವ್ಯಾಕರಣ. ಎಲಿಪ್ಸ್ ಚಿಹ್ನೆಯನ್ನು ಎಲ್ಲಿ ಉಪಯೋಗಿಸಬೇಕು, ಎಲ್ಲಿ ಉಪಯೋಗಿಸಬಾರದು ಎನ್ನುವುದನ್ನು ತಿಳಿಯಲು ಇಂಗ್ಲೀಷ್ ಭಾಷೆಯಲ್ಲಿ ಸಾಕಷ್ಟು ಲೇಖನಗಳಿವೆ, ವ್ಯಾಕರಣ ಪುಸ್ತಕಗಳಲ್ಲಿ ಅಧ್ಯಾಯಗಳಿವೆ. 

ಈ ಎಲಿಪ್ಸ್ ಚಿಹ್ನೆಯು ಕನ್ನಡದ ಕತೆ ಮತ್ತು ಕವನಗಳಲ್ಲಿ ಲಂಗುಲಗಾಮಿಲ್ಲದೇ ಎಲ್ಲಿಬೇಕೆಂದರಲ್ಲಿ ಒಕ್ಕರಿಸಿಬಿಡುತ್ತದೆ. ನಾವು ಶಾಲೆಯಲ್ಲಿ ಇದ್ದಾಗ ‘ಬಿಟ್ಟ ಸ್ಥಳ ತುಂಬಿ‘ ಎಂದು ಇರುತ್ತದಲ್ಲ, ಹಾಗೆ. ಕತೆ ಬರೆಯುವಾಗ ಪ್ಯಾರಾಗ್ರಾಫಿನ ಕೊನೆಯಲ್ಲಿ ‘…‘ ಬಂದುಬಿಡುತ್ತದೆ. ಓದುಗರೇ, ನೀವೇ ಈ ಕತೆಯನು ಮುಂದುವರೆಸಿ ಎನ್ನುವಂತೆ. ಕತೆ ಕಾದಂಬರಿಗಳಲ್ಲಿ ಸಂಭಾಷಣೆಗಳನ್ನು ಬರೆಯುವಾಗ ಕನ್ನಡದ ಪ್ರಸಿದ್ಧ ಲೇಖಕರೂ ಈ ಎಲಿಪ್ಸನ್ನು ಎಲ್ಲಿ ಬೇಕೆಂದರಲ್ಲಿ ಬಳಸುತ್ತಾರೆ. ಇನ್ನು ಕವನಗಳಲ್ಲಿ ಎಲಿಪ್ಸ್ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕವನದ ಶೀರ್ಷಿಕೆಯಲ್ಲೇ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸಾಲಿನ ಕೊನೆಗೆ ಬರುತ್ತದೆ, ಕೆಲವೊಮ್ಮೆ ಕವನದ ಕೊನೆಯಲ್ಲಿ. ಎಲಿಪ್ಸ್ ಬಳಸುವುದರಿಂದ ಆ ಕವನದ ಅರ್ಥಕ್ಕೆ ಯಾವ ಬದಲಾವಣೆಯೂ ಆಗುವುದಿಲ್ಲ. ಓದುವವರಿಗೆ ಮಾತ್ರ ಕವನ ಅಪೂರ್ಣ ಅನ್ನಿಸದೇ ಇರದು. ಹೆಸರಾಂತ ಪತ್ರಿಕೆಗಳೂ ಎಪಿಪ್ಸನ್ನು ತಿದ್ದಿವ ಗೋಜಿಗೆ ಹೋಗುವುದಿಲ್ಲ. ಕನ್ನಡದಲ್ಲಿ ವಿರಾಮಚಿಹ್ನೆಗಳ ಬಗ್ಗೆ, ಅದರಲ್ಲೂ ಎಲಿಪ್ಸ್ ಚಿಹ್ನೆಯ ಬಗ್ಗೆ ಒಂದು ತರಹದ ಅಸಡ್ಡೆ ಇದೆ ಅನಿಸುತ್ತದೆ.  

ಅಷ್ಟೇ ಅಲ್ಲ, ಇನ್ನೂ ಕೆಲವು ವಿರಾಮ ಚಿಹ್ನೆಗಳನ್ನು ತಮಗೆ ಹೇಗೆ ಬೇಕೋ ಹಾಗೆ ಬರೆಯುತ್ತಾರೆ, ಅದನ್ನು ಪತ್ರಿಕೆಗಳು ಪ್ರಕಟಿಸುತ್ತಾರೆ ಕೂಡ. ಎರಡು, ಮೂರು ಅಥವಾ ನಾಲ್ಕೆ ಉದ್ಗಾರ ವಾಚಗಳನ್ನು ಒಟ್ಟಿಗೇ ಬಳಸುತ್ತಾರೆ. ಉದ್ಗಾರದ ನಂತರ ಪ್ರಶ್ನಾರ್ಥಕವನ್ನೂ, ಪ್ರಶ್ನಾರ್ಥಕವಾದ ಮೇಲೆ ಉದ್ಗಾರವಾಚಕವನ್ನೂ ವಿನಾಕಾರಣ ಬಳಸುತ್ತಾರೆ (ಇಂಗ್ಲೀಷಿನಲ್ಲಿ ಇದಕ್ಕೆ interrobang ಎನ್ನುತ್ತಾರೆ). ಕೆಲವರಂತೂ ಎಲಿಪ್ಸ್ ಆದ ಮೇಲೆ ಉದ್ಗಾರವಾಚಕವನ್ನು ಬಳಸುತ್ತಾರೆ. ಭಾಷೆಯನ್ನು ಕಲಿಯುವಾಗ ಪದಭಂಡಾರ ಮತ್ತು ಕಾಗುಣಿತ ಎಷ್ಟು ಮುಖ್ಯವೋ ವಿರಾಮ ಚಿಹ್ನೆಗಳನ್ನು ಸರಿಯಾಗಿ ಬಳಸುವುದೂ ತುಂಬ ಮುಖ್ಯವಾಗುತ್ತದೆ. 

ಹೆಸರುಗಳನ್ನು ಬರೆಯುವುದು:

ನಾವು ಚಿಕ್ಕವರಿದ್ದಾಗ ಹೆಂಗಸರ ಹೆಸರನ್ನು ಗೀತಾ, ಸವಿತಾ, ಮಾಲಾ, ಸೀತಾ ಎಂದು, ಗಂಡಸರ ಹೆಸರುಗಳನ್ನು ರಮೇಶ, ಗಣೇಶ, ಸಂತೋಷ, ರಾಜೇಶ ಎಂದು ಎಲ್ಲ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಬರೆಯುತ್ತಿದ್ದರು, ನಮ್ಮ ಪೀಳಿಗೆಯವರೂ ಹಾಗೆಯೇ ಬರೆಯುತ್ತಿದ್ದೆವು. ಇತ್ತೀಚಿನ ಒಂದೆರೆಡು ದಶಕಗಳಿಂದ, ಅದರಲ್ಲೂ ಕನ್ನಡ ಟಿವಿ ವಾಹಿನಿಗಳ ಸಂಖ್ಯೆ ಹೆಚ್ಚಾದ ಮೇಲೆ, ಹೆಂಗಸರ ಹೆಸರುಗಳು ಗೀತ, ಸವಿತ, ಮಾಲ, ಸೀತ ಎಂದೂ, ಗಂಡಸರ ಹೆಸರುಗಳನ್ನು ರಮೇಶ್, ಗಣೇಶ್, ಸಂತೋಷ್, ರಾಜೇಶ್ ಎಂದೂ ಬರೆಯುತ್ತಾರೆ. ಅಂದರೆ ಇಂಗ್ಲೀಷ್ ಭಾಷೆಯಲ್ಲಿ ಮೊದಲು ಹೆಸರುಗಳನ್ನು ಬರೆದುಕೊಂಡು, ನಂತರ ಕನ್ನಡಕ್ಕೆ ಭಾಷಾಂತರ ಮಾಡಿದಂತೆ ಕಾಣಿಸುತ್ತವೆ, ಈ ಹೆಸರುಗಳು. ಇದು ಕನ್ನಡ ಭಾಷೆ ಬೆಳೆಯುತ್ತಿರುವ ಸಂಕೇತವೋ ಅಥವಾ ವಿನಾಶದತ್ತ ಹೊರಟಿರುವ ಸಂಕೇತವೋ ಎನ್ನುವುದನ್ನು ಕನ್ನಡ ಪಂಡಿತರೇ ಉತ್ತರಿಸಬೇಕು.  

ಕನ್ನಡದಲ್ಲಿ ಸ್ಪೆಲ್ಲಿಂಗ್:

ಇಂಗ್ಲೀಷಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗುವಂತೆ ಕನ್ನಡದಲ್ಲಿ ಕಾಗುಣಿತ ದೋಷಗಳು ಆಗುತ್ತವೆ. ಅದನ್ನು ಅಮೇರಿಕದಲ್ಲಿ ನೆಲೆಸಿರುವ ಕನ್ನಡದ ಹೆಸರಾಂತ ಅಂಕಣಕಾರರಾದ ಶ್ರೀವತ್ಸ ಜೋಶಿಯವರು ಪ್ರತಿ ವಾರ ತಪ್ಪದೇ ‘ಸ್ವಚ್ಛ ಭಾಷೆ ಅಭಿಯಾನ‘ದಲ್ಲಿ ಬರೆದು ವಾಟ್ಸ್ಯಾಪ್ ಮಾಡುತ್ತಾರೆ, ಫೇಸ್ಬುಕ್ಕಿನಲ್ಲಿ ಬರೆಯುತ್ತಾರೆ. ನಾನು ಈಗ ಬರೆಯುತ್ತಿರುವುದು ಕಾಗುಣಿತ ದೋಷದ ಬಗ್ಗೆ ಅಲ್ಲ. ಕನ್ನಡದಲ್ಲಿ ಪ್ರತಿ ಶಬ್ದಕ್ಕೂ ಇರುವ ನಿಖರವಾದ ಸ್ಪೆಲಿಂಗ್ ಇರುವ ಬಗ್ಗೆ. ಏನು ಎನ್ನುವುದನ್ನು ಸ್ವಲ್ಪ ವಿವರಿಸುತ್ತೇನೆ.

‘ಅಂಚೆ‘ಯನ್ನು ‘ಅಞ್ಚೆ‘ ಎಂದೂ ಬರೆಯಬಹುದು. ನಿಜವಾಗಿ ನೋಡಿದರೆ ನಾನು ‘ಅಂಚೆ‘ಯನ್ನು ಉಚ್ಚಾರ ಮಾಡುವುದು ‘ಅಞ್ಚೆ‘ ಎಂದೇ.  ‘ಮಂಗ‘ನನ್ನು ‘ಮಙ್ಗ‘ ಎಂದು ಉಚ್ಚಾರ ಮಾಡುತ್ತೇವೆ, ಆದರೆ ‘ಮಂಗ‘ ಎಂದು ಬರೆಯುತ್ತೇವೆ. ಆದರೆ ‘ಅಂಚೆ‘, ‘ಮಂಗ‘ ಎಂದು ಬರೆದರೆ ಮಾತ್ರ ಓದುವವರಿಗೆ ಅರ್ಥವಾಗುತ್ತದೆ.  ‘ಅಞ್ಚೆ‘ ಅಥವಾ ‘ಮಙ್ಗ‘ ಎಂದು ಬರೆದರೆ ಎಂಥ ಕನ್ನಡ ಓದುಗನೂ ತಬ್ಬಿಬ್ಬಾಗುವುದು ಸಹಜ. ‘ನಿನ್ನನ್ನು‘ ಎನ್ನುವುದನ್ನು ‘ನಿಂನಂನು‘ ಎಂದು ಕೂಡ ಬರೆಯಬಹುದು, ಓದುವುದರಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ, ಆದರೆ ಅದು ತಪ್ಪು ಸ್ಪೆಲ್ಲಿಂಗ್ ಆಗುತ್ತದೆ. ಏಕೆಂದರೆ ರೂಢಿಯಲ್ಲಿ ಇರುವುದು ‘ನಿನ್ನನ್ನು‘ ಎಂದು. ‘ವಿಪರ್ಯಾಸ‘ವನ್ನು ‘ವಿಪರ‍್ಯಾಸ‘ ಎಂದೂ ಬರೆಯಬಹುದು, ಆದರೆ ಅದು ರೂಢಿಯಲ್ಲಿ ಇಲ್ಲದಿರುವುದರಿಂದ ತಪ್ಪು ಸ್ಪೆಲಿಂಗ್ ಆಗುತ್ತದೆ. ಬೀಚಿಯವರು ‘ತಿಮ್ಮ‘ನನ್ನು ‘ತಿಂಮ‘ ಎಂದು ಬರೆಯುತ್ತಿದ್ದರು, ಈಗ ‘ತಿಮ್ಮ‘ ಅದರ ಸರಿಯಾದ ಸ್ಪೆಲಿಂಗ್ ಆಗಿದೆ. .  

ಒಂದೇ ಶಬ್ದವನ್ನು ಸರಿಯಾಗಿಯೇ ಬೇರೆ ಬೇರೆ ರೀತಿಯಲ್ಲಿ ಬರೆಯಲು ಸಾಧ್ಯವಿದ್ದರೂ, ನಮಗೆ ಗೊತ್ತಿಲ್ಲದಂತೆಯೇ ಕನ್ನಡದಲ್ಲಿ ಕನ್ನಡ ಶಬ್ದಗಳ ಸ್ಪೆಲಿಂಗ್ ಇದೆ. ‘ತಂದೆ‘ಯನ್ನು ‘ತನ್ದೆ‘ ಎಂದು ಬರೆದರೆ ಅದು ‘ತಂದೆ‘ಯ ತಪ್ಪು ಸ್ಪೆಲಿಂಗ್ ಆಗುತ್ತದೆ. 

ಇದನ್ನೆಲ್ಲ ಏಕೆ ಬರೆಯುತ್ತಿದ್ದೇನೆ ಎಂದರೆ, ನಾವು ಇತ್ತೀಚೆಗೆ ಬಹಳಷ್ಟು ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೇವಷ್ಟೇ. ಆದರೆ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ  ಎರಡು ಅಥವಾ ಮೂರು ಒತ್ತಕ್ಷರಗಳು ಬರುತ್ತವೆ, ಅದನ್ನು ಹಾಗೆಯೇ ಬರೆದರೆ ಓದುವವರಿಗೆ ಕಷ್ಟವಾಗುತ್ತದೆ, ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಏಕರೂಪವನ್ನು ತರುವ ಅವಶ್ಯಕತೆ ಇದೆ, ಇಲ್ಲದಿದ್ದರೆ ಒಬ್ಬಬ್ಬರೂ ಒಂದೊಂದು ರೀತಿ ಬರೆಯುತ್ತಾರೆ. 

ಉದಾಹರಣೆಗೆ, ‘ಸಾಫ್ಟ್ವೇರ್‘ ಎಂದು ಬರೆಯುವ ಬದಲು ‘ಸಾಫ್ಟ್‌ವೇರ್‘ ಎಂದು ಬರೆದರೆ ಓದುವುದು ಸುಲಭ.“ಹಾರ್ಡ್ವೇರ್‘ ಎಂದು ಬರೆಯುವ ಬದಲು ‘ಹಾರ್ಡ್‌ವೇರ್‘ ಎಂದು ಬರೆದರೆ ಆರ್ಥಮಾಡಿಕೊಳ್ಳುವುದು ಸುಲಭ. ನಾನು ಈಗ ನೆಲೆಸಿರುವ ‘ಬರ್ಮಿಂಗ್ಹ್ಯಾಮ್‘ ನಗರವನ್ನು ‘ಬರ್ಮಿಂಗ್‍ಹ್ಯಾಮ್‘ ಎಂದು ಬರೆದರೆ ಓದುವವರಿಗೆ ಸುಲಭ. ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಸ್ಟ್ಯಾಂಡರ್ಡಾಜೇಶನ್ (ಸ್ಟ್ಯಾಂಡರ್ಡೈಜೇಷನ್) ಮಾಡುವ ಅವಶ್ಯಕತೆ ಇದೆ. 

ಕನ್ನಡದ ಅಕ್ಷರಗಳು:

ನಾನು ಶಾಲೆಯಲ್ಲಿ ಓದುವಾಗ ಕನ್ನಡದ ಅಕ್ಷರಮಾಲೆಯಲ್ಲಿ ಒಂದು ಅಕ್ಷರವಿತ್ತು (ಈಗಲೂ ಇದೆಯೋ ಇಲ್ಲವೋ ಗೊತ್ತಿಲ್ಲ), ಆದರೆ ಅದನ್ನು ಇದುವರೆಗೂ ಉಪಯೋಗಿಸಿದ ನೆನಪೇ ಇಲ್ಲ. ಆ ಅಕ್ಷರವೇ ‘ೠ‘. ಅನುನಾಸಿಕಗಳಾದ ಙ ಮತ್ತು ಞ ಗಳ ಉಪಯೋಗಗಳೂ ವಿರಳವೇ ಆದರೂ ‘ಅಂಚೆ‘, ‘ಮಂಗ‘ ಶಬ್ದಗಳ ಉಚ್ಚಾರವನ್ನು ಹೇಳಿಕೊಡಲು ಉಪಯುಕ್ತವಾಗಿವೆ. ಕೆಲವು ಅಕ್ಷರಗಳು ಕನ್ನಡದಲ್ಲಿ ಇದ್ದವು, ಅವು ಪೂರ್ತಿ ಮರೆಯಾಗಿವೆ. ಉದಾಹರಣೆಗೆ: ಱ ಮತ್ತು ೞ. ಈ ಅಕ್ಷರಗಳನ್ನು ಉಪಯೋಗಿಸಿ ಕನ್ನಡದಲ್ಲಿ ಈಗ ಯಾವ ಶಬ್ದಗಳೂ ಉಳಿದಿಲ್ಲ, ಅವುಗಳನ್ನು ಹೇಗೆ ಉಚ್ಚರಿಸಬೇಕು ಎನ್ನುವುದನ್ನು ಕೂಡ ಕನ್ನಡಿಗರು ಮರೆತಾಗಿದೆ. ಹೀಗೆ ಕೆಲವು ಅಕ್ಷರಗಳು ಮರೆಯಾಗಿವೆ, ಕೆಲವು ಅನುಪಯುಕ್ತವಾಗಿವೆ. 

ಈಗಿರುವ ಕನ್ನಡದ ಅಕ್ಷರಗಳಿಂದ ದಿನ ನಿತ್ಯ ಉಪಯೋಗಿಸುವ ಕೆಲವು ಶಬ್ದಗಳ ಉಚ್ಚಾರಗಳನ್ನು ತರುವುದು ಕಷ್ಟವಾಗುತ್ತದೆ. ಅದರಲ್ಲೂ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬಳಸುವಾಗ, ಕನ್ನಡದ ಅಕ್ಷರಗಳನ್ನು ಬಳಸಿ ಆ ಉಚ್ಚಾರಗಳನ್ನು ತರುವುದು ಸಾಧ್ಯವಾಗುವುವಿಲ್ಲ.

ಉದಾಹರಣೆಗೆ: ‘loss‘ ಶಬ್ದವನ್ನು ‘ಲಾಸ್‘ ಎಂದು ಬರೆದರೆ ಅದರ ಮೂಲ ಉಚ್ಚಾರ ಅದರಲ್ಲಿ ಬರುವುದಿಲ್ಲ. ನಾನು ಚಿಕ್ಕವನಿದ್ದಾಗ ‘ಲಾ‘ ದ ಮೇಲೆ ‘ಅರ್ಧ ಚಂದ್ರಾಕಾರ (U)‘ ಹಾಕಿ ‘loss’ನಲ್ಲಿರುವ ‘ಆ‘ ಉಚ್ಚಾರವನ್ನು ತರುತ್ತಿದ್ದೆವು. ಆದರೆ ಈ ಅರ್ಧಚಂದ್ರಾಕರಾದ ಪ್ರಯೋಗವನ್ನು ನಾನು ಪುಸ್ತಕಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ನೋಡಿದ ನೆನಪಿಲ್ಲ. 

ಹಾಗೆಯೇ ‘Apple‘ ಶಬ್ದವನ್ನು“ಆ್ಯಪಲ್‘ ಎಂದು ಬರೆದರೆ ಓದಲು ಸುಲಭ, ‘ಆಪಲ್‘ ಎಂದೋ ‘ಯಾಪಲ್‘ ಎಂದೋ ಬರೆದರೆ ‘Apple’ ಎಂದು ಉಚ್ಚಾರ ಮಾಡುವುದು ಕಷ್ಟ. ಆದರೆ ಈ ‘ಆ್ಯ‘ ಎನ್ನುವ ಶಬ್ದ ಕನ್ನಡದ ವ್ಯಾಕರಣದ ಮಟ್ಟಿಗೆ ನಿಷಿದ್ಧ. 

‘ಫ‘ ಮತ್ತು ‘ಜ‘ ಅಕ್ಷರಗಳನ್ನು ಸ್ವಲ್ಪ ಬದಲಾಯಿಸಿ ‘ಫ಼‘ ಮತ್ತು ‘ಜ಼‘ ಎಂದಾಗಿಸಿ ‘fool‘ ಮತ್ತು ‘zoom‘ ಗಳನ್ನು ಸರಿಯಾಗಿ ಕನ್ನಡದಲ್ಲಿ ಬರೆಯಬಹುದು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರುವ ವಿಚಾರವೇ. ಆದರೆ ಈ ಅಕ್ಷರಗಳ ಬಳಕೆಯನ್ನು ಪತ್ರಿಕೆಗಳಲ್ಲಿ ಪುಸ್ತಕಗಳಲ್ಲಿ ನಾನು ನೋಡಿಲ್ಲ. 

ಱ ಮತ್ತು ೞ ಅಕ್ಷರಗಳನ್ನು ಕನ್ನಡದ ಅಕ್ಷರಮಾಲೆಯಿಂದ ಅಧೀಕೃತವಾಗಿ ಕೈಬಿಟ್ಟಂತೆ, ಫ಼ ಮತ್ತು ಜ಼ ಅಕ್ಷರಗಳನ್ನು ಅಧೀಕೃತವಾಗಿ ಸೇರಿಸಬೇಕಾದ ಅವಶ್ಯಕತೆ ಇದೆಯೇ ಅನ್ನುವುದನ್ನು ತಜ್ಞರು ನೋಡಬೇಕು. ಹಾಗೆಯೇ ‘ಆ್ಯ‘ ಉಪಯೋಗಕ್ಕೆ ಮನ್ನಣೆ ಕೊಡಬೇಕು. ಅಕ್ಷರಗಳ ಮೇಲೆ ಅರ್ಧ ಚಂದ್ರಾಕಾರ(U)ವನ್ನು ಅರೆಸ್ವರವಾಗಿ ಕನ್ನಡದಲ್ಲಿ ಸೇರಿಸಬೇಕು ಎನ್ನುವುದು ನನ್ನ ಅನಿಸಿಕೆ. . 

ಕನ್ನಡದ ಅಂಕಿಗಳು:

ಕನ್ನಡದ ಯಾವುದೇ ಪತ್ರಿಕೆ ತೆಗೆದುಕೊಂಡರೂ, ಯಾವುದೇ ಟಿವಿ ಚಾನೆಲ್ ತೆರೆದರೂ ಅಂಕಿಗಳನ್ನು ಕನ್ನಡದಲ್ಲಿ ಬರೆಯದೇ ಹಿಂದೂ-ಅರೇಬಿಕ್‍ನಲ್ಲಿ ಬರೆಯುತ್ತಾರೆ. ನಾನು ಚಿಕ್ಕವನಿದ್ದಾಗ ಎಲ್ಲ ಪತ್ರಿಕೆಗಳೂ ಕನ್ನಡದಲ್ಲೇ ಅಂಕಿಗಳನ್ನು ಪ್ರಕಟಿಸುತ್ತಿದ್ದರು. ಇತ್ತೀಚಿನ ದಶಕಗಳಲ್ಲಿ ಈ ಬದಲಾವಣೆಯಾಗಿದೆ. ಬರೆಯುವಾಗ ಕನ್ನಡದ ಶಬ್ದಗಳಂತೆ ಚಂದವಾಗಿ ಕಾಣುತ್ತಿದ್ದ ಕನ್ನಡದ ಅಂಕಿಗಳು ಶಾಶ್ವತವಾಗಿ ಸತ್ತು ಹೋಗಿರುವುದನ್ನು ನೋಡಿದರೆ ನನ್ನ ಪೀಳಿಗೆಯವರಿಗಾದರೂ ನೋವಾಗದೇ ಇರದು. 

ಲ್ಯಾಟಿನ್ (ರೋಮನ್) ಲಿಪಿಯಲ್ಲಿ ಕನ್ನಡ:

ಕನ್ನಡದ ಅಂಕಿಗಳನ್ನು ಹಿಂದೂ-ಅರೇಬಿಕ್ ಅಂಕಿಗಳು ನಿರ್ನಾಮ ಮಾಡಿದಂತೆ, ಕನ್ನಡದ ಲಿಪಿಯನ್ನು ಲ್ಯಾಟಿನ್/ರೋಮನ್ ಲಿಪಿ ನಿರ್ನಾಮ ಮಾಡುವ ನಿಟ್ಟಿನಲ್ಲಿ ಅಂಬೆಗಾಲಿಡುತ್ತಿದೆ.   

ಇತ್ತೀಚಿನ ವರ್ಷಗಳಲ್ಲಿ ಯುಟ್ಯೂಬಿನಲ್ಲಿ ಹಾಡುಗಳ ‘ಲಿರಿಕಲ್ ವಿಡಿಯೋ‘ಗಳನ್ನು ಬಿಡುತ್ತಾರೆ. ಹೆಚ್ಚು ಕಡಿಮೆ ಎಲ್ಲ ಕನ್ನಡ ಹಾಡುಗಳ ಬರವಣಿಗೆ ಲ್ಯಾಟಿನ್ ಲಿಪಿಯಲ್ಲಿಯೇ ಇರುತ್ತವೆ. ಇದು ಬರೀ ಕನ್ನಡದಲ್ಲಿ ಆಗಿರುವ ಬದಲಾವಣೆಯಲ್ಲ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಹಾಡಿನ ಸಾಹಿತ್ಯವನ್ನು ಲ್ಯಾಟಿನ್ನಿನಲ್ಲೇ ಬರೆಯುತ್ತಾರೆ. ಹಾಗೆಯೇ ಬಹಳಷ್ಟು ಕನ್ನಡಿಗರು ವಾಟ್ಸ್ಯಾಪ್ ಮಾಡುವಾಗ, ಮೆಸೇಜುಗಳನ್ನು ಕಳಿಸುವಾಗ ಕನ್ನಡವನ್ನು ಕನ್ನಡದಲ್ಲಿ ಬರೆಯದೇ ಲ್ಯಾಟಿನ್ ಲಿಪಿಯಲ್ಲಿ ಬರೆಯುವುದೇ ಹೆಚ್ಚು. ಕನ್ನಡ ಭಾಷೆಯನ್ನು ಲ್ಯಾಟಿನ್ ಲಿಪಿಯಲ್ಲಿ ಬರೆದರೆ ಮಾತ್ರ ಓದಬಲ್ಲ ಕನ್ನಡಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರೆದರೆ ಕನ್ನಡದ ಲಿಪಿಯನ್ನು ಓದುವ ಮತ್ತು ಬರೆಯುವ ಜನರು ಪೀಳಿಗೆಯಿಂದ ಪೀಳಿಗೆಗೆ ಕಡಿಮೆಯಾಗುತ್ತಾರೆ ಅನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ.