ಇಂಗ್ಲೆಂಡಿನ ಪುರಾತನ ಪಬ್-ಗಳು  – ಬೇಸಿಗ್-ಸ್ಟೋಕ್ ರಾಮಮೂರ್ತಿ

ಇಂಗ್ಲೆಂಡಿನ ಪಬ್-ಗಳು ಪ್ರಪoಚದಾದ್ಯಂತ ಪ್ರಸಿದ್ದ. ಪಬ್-ಗಳು ಕೇವಲ ಬಿಯರ್ ಅಥವಾ ವೈನ್ ಕುಡಿಯುವ ಸ್ಥಳಗಳಲ್ಲ, ಇವು ಸಮುದಾಯವು ಸಾಮಾಜಿಕವಾಗಿ ಭೇಟಿಯಾಗುವ ಸ್ಥಳಗಳು. ಉದಾಹರಣೆಗೆ, ಅನೇಕ ಧರ್ಮಾರ್ಥಿಕ (Charity ) ಸಂಸ್ಥೆಗಳು ಇಲ್ಲಿ ಹಣ ಸಂಗ್ರಹಿಸುವದಾಗಲಿ, Quiz Team ಆಗಲಿ ಪಬ್-ಗಳಲ್ಲಿ ಸೇರುತ್ತಾರೆ. ಈ ಪಬ್-ಗಳ ಇತಿಹಾಸವನ್ನು ನೋಡೋಣ. ಇಂಗ್ಲೆಂಡಿನಲ್ಲಿ ಪಬ್-ಗಳಿಗೆ ಸುಮಾರು ಎರಡು ಸಾವಿರ ವರ್ಷಗಳ ಆಕರ್ಷಕ ಮತ್ತು ಆಸಕ್ತಿದಾಯಕವಾದ ಇತಿಹಾಸವಿದೆ.

ಇದರ ಮೂಲ ರೋಮನ್ ಕಾಲದಿಂದ ಬಂದಿದ್ದು. ರೋಮನ್ನರು ಬಂದು ಇಂಗ್ಲೆಂಡ್ ದೇಶವನ್ನು ಆಕ್ರಮಿಸಿಕೊಂಡಾಗ ಅವರು ತಯಾರಿಸುತ್ತಿದ್ದ ವೈನ್ (wine ), ಅವರ ಜನಕ್ಕೆ ಮತ್ತು ಸೈನ್ಯದವರಿಗೆ  ಮಾರಾಟಕ್ಕಿತ್ತು. ಇಂದಿನ ಪಬ್ (Public  House), ಆಗ ಅವರ ಭಾಷೆಯಲ್ಲಿ ಟೆಬರ್ನೆ (Tebernae), ಇದು ಕಡೆಯಲ್ಲಿ ಟ್ಯಾವರ್ನ್ಸ್ (Taverns) ಆಯಿತು. ಇವು ಪ್ರಯಾಣಿಕರ ಅನುಕೂಲಕ್ಕೆ ಪ್ರಾರಂಭಿಸಿದ ವ್ಯಾಪಾರ ಸಂಸ್ಥೆಗಳು.  ಸ್ಥಳೀಯ ಜನರಿಗೆ  ವೈನ್  ಮಾಡುವ ವಿಧಾನ ಅಥವಾ ದ್ರಾಕ್ಷಿ ಬೆಳೆಯುವ ತಿಳುವಳಿಕೆ ಇರಲಿಲ್ಲ. ಇಲ್ಲಿ ಏಲ್ (Ale), ಬಾರ್ಲಿ ಇಂದ ಭಟ್ಟಿ ಇಳಿಸಿ ತಯಾರಿಸಿದ ಮಾದಕದ ಅರಿವಿತ್ತು. ಇವುಗಳನ್ನು ನಡೆಸಿಕೊಂಡು ಬಂದಿದ್ದವರು ಮಹಿಳೆಯರು, ಮನೆಯಲ್ಲಿ ಭಟ್ಟಿ ಇಳಿಸಿ ಮದ್ಯದ  ಮಾರಾಟ ಮಾಡುತಿದ್ದರು. ಇವು ಹಳ್ಳಿಗಳಲ್ಲಿ ಅನೌಪಚಾರಿಕ ಮತ್ತು ಸಮುದಾಯ ಆಧಾರಿತವಾಗಿದ್ದರಿಂದ  ಜನಗಳ ಹೊಂದಾಣಿಕೆ ಮತ್ತು ಪರಸ್ಪರ ಪರಿಚಯಕ್ಕೆ ಅನುಕೂಲವಾಗುತ್ತಿತ್ತು. ಕ್ರಮೇಣ ಈ ಟೆಬರ್ನೆಗಳಲ್ಲಿ ವೈನ್ ಮಾರಾಟ ಕಡಿಮೆ ಆಗಿ, ಸ್ಥಳೀಯ ಏಲ್ ಹೆಚ್ಚಾಗಿ ಮಾರಾಟವಾಗುತಿತ್ತು. ಈ ಮದ್ಯದ ಅಂಗಡಿಗಳೂ ಮಿತಿ ಇಲ್ಲದೆ ಬೆಳೆಯುತ್ತಿದ್ದವು. ಈ ಕಾರಣಗಳಿಂದ, ಹತ್ತನೇ ಶತಮಾನದಲ್ಲಿ ಆಳಿದ ಎಡ್ಗರ್ ದೊರೆ ಇವುಗಳ ಸಂಖ್ಯೆಯನ್ನು ಮಿತಿಗೊಳಿಸಿದ. ಇವನ ಕಾಲದಲ್ಲೇ ಪೆಗ್ (Peg) ಅನ್ನುವ ಪದ ಮದ್ಯದ ಅಳತೆಗೆ ಜಾರಿಗೆ ಬಂದಿದ್ದು. ಮದ್ಯದ ಮಾರಾಟಕ್ಕೆ ಸಹ ಅನುಮತಿಬೇಕಾಗಿತ್ತು.  ಆದ್ದರಿಂದ ಮನೆಯಲ್ಲಿ ತಯಾರಿಸಿದ ಮದ್ಯದ ಮಾರಾಟಕ್ಕೆ ಅನುಮತಿ ಸಿಗುತ್ತಿರಲಿಲ್ಲ. 
 
ಟ್ಯಾವರ್ನ್-ಗಳು ಹೆಚ್ಚಾಗಿ ಮುಖ್ಯರಸ್ತೆ ಮತ್ತು ಹೆದ್ದಾರಿಗಳಲ್ಲಿ ಇದ್ದು ಪ್ರಯಾಣಿಕರಿಗೆ ಪಾನೀಯ ಮತ್ತು ಆಹಾರ ಸಿಗುತ್ತಿತ್ತು. ನಂತರ ಊರಿಂದ ಊರಿಗೆ ಕುದರೆಗಾಡಿಗಳ ಸಂಚಾರ ಶುರುವಾದಾಗ, ರಾತ್ರಿ ತಂಗುವುದಕ್ಕೆ ಇನ್ (Inn), ಅಂದರೆ ತಂಗುವ ಜಾಗ ಸಹ ಪ್ರಾರಂಭವಾಯಿತು. ಇಲ್ಲಿ ಕುದರೆಗಳ ವಿಶ್ರಾಂತಿಗೆ ಮತ್ತು ಆಹಾರಕ್ಕೆ ಸಾಕಷ್ಟು ವ್ಯೆವಸ್ಥೆಗಳಿದ್ದವು. 

ಲಂಡನ್-ನಿಂದ ವಿಂಚೆಸ್ಟರ್-ಗೆ (Winchester) ಹೋಗುವ ಎ೩೦ ಎನ್ನುವ ರಸ್ತೆ ಸುಮಾರು ೬೦ ಮೈಲಿ ಉದ್ದ. ಇಲ್ಲಿ ಈಗಲೂ ಈ ದಾರಿಯಲ್ಲಿ ಅನೇಕ ಪುರಾತನ ಪಬ್ ಅಥವಾ ಇನ್-ಗಳನ್ನೂ ನೋಡಬಹುದು. ಹಳೆಯ ಪಬ್-ಗಳಲ್ಲಿ ಸಲೂನ್ ಬಾರ್ (Saloon Bar) ಮತ್ತು ಪಬ್ಲಿಕ್ ಬಾರ್ (Public Bar) ಎನ್ನುವ ಫಲಕಗಳು (sign board) ಇರುತ್ತವೆ. ಇದರ ಹಿನ್ನಲೆ, ಈ ದೇಶದಲ್ಲಿದ್ದ ವರ್ಗವ್ಯತ್ಯಾಸ (Class distinction). ಕುದುರೆಗಾಡಿ ಪ್ರಯಾಣದಲ್ಲಿ ಎರಡು ತರ ಪ್ರಯಾಣಿಕರು, ಗಾಡಿ ಒಳಗೆ ಕೂರುವರು ಮತ್ತು ಗಾಡಿ ಹೊರಗೆ (ಬಹಳ ಕಡಿಮೆ ದರ ಕೊಟ್ಟು) ಕೂರುವರು. ಒಳಗಿದ್ದವರು ಶ್ರೀಮಂತರು, ಇವರಿಗೆ ಮರ್ಯಾದೆಯಿಂದ ಸಲೂನ್ ಬಾರ್-ನಲ್ಲಿ ಉಪಚಾರ. ಹೊರಗೆ ಕೂತವರಿಗೆ ಕೊಟ್ಟಿಗೆ ಹತ್ತಿರ ಜಾಗ, ಇಲ್ಲಿಇವರು ಪಬ್ಲಿಕ್ ಬಾರ್-ನಲ್ಲಿ ಕುಡಿಯುವುದು ಮತ್ತು ಊಟ ಮಾಡುವುದು. 

ಸುಮಾರು ಹದಿನಾರನೇ ಶತಮಾನದಲ್ಲಿ, ಟ್ಯಾವರ್ನ್ಸ್ ಮತ್ತು ಇನ್-ಗಳು ಒಂದಾಗಿ ಪಬ್ಲಿಕ್ ಹೌಸ್ (Public House) ಅಥವಾ ಪಬ್ (Pub) ಗಳಾದವು. ೧೫೫೨ರಲ್ಲಿ  ಬಂದ ಕಾಯಿದೆಯಿಂದ ಇದನ್ನು ನಡೆಸುವುದಕ್ಕೆ ಲೈಸನ್ಸ್ (License) ಬೇಕಾಗಿತ್ತು. ೧೬೦೦ ನಂತರ ಈ ದೇಶದಲ್ಲಿ ಹೊರದೇಶದಿಂದ ತರಿಸಿದ ಕಾಫಿ ಮತ್ತು ಟೀ ಕುಡಿಯುವುದು ಪ್ರಾರಂಭವಾಯಿತು. ಆದರೆ ಕೆಲವು ಪಬ್-ಗಳಲ್ಲಿ ಮಾತ್ರ ಇದು ಮಾರಾಟಕ್ಕಿತ್ತು; ಕಾರಣ, ಅತಿ ಹೆಚ್ಚಿನ ಬೆಲೆ. 

ಹದಿನೆಂಟನೇ ಶತಮಾನದ ಪ್ರಾರಂಭದಲ್ಲಿ ಫ್ರಾನ್ಸ್ ದೇಶದಿಂದ ಬ್ರಾಂಡಿ (Brandy) ಮತ್ತು ಹಾಲೆಂಡ್-ನಿಂದ ಜಿನ್ (Gin) ಮಾದಕಗಳು ಬಂದು ಈ ದೇಶದಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳು ಉಂಟಾದವು. ಇದನ್ನು ಪ್ರಸಿದ್ಧ ಚಿತ್ರಗಾರ ಹೊಗಾರ್ತ್ (Hogarth) ಜಿನ್ ಲೇನ್ (Gin lane) ಅನ್ನುವುದರಲ್ಲಿ ಚಿತ್ರೀಕರಣ ಮಾಡಿದ್ದಾನೆ.  ಅನೇಕ ಬಡ ಮತ್ತು ಶ್ರೀಮಂತರ ಜೀವನ ಈ ಕುಡಿತದಲ್ಲಿ ಹಾಳಾಗಿತ್ತು. ನಂತರ ಬಂದ ಜಿನ್ ಆಕ್ಟ್ (Gin Act) ಕಾಯಿದೆಯಿಂದ  (೧೭೩೬ ಮತ್ತು ೧೭೫೧ ) ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿತು. 

ಹೆದ್ದಾರಿಯಲ್ಲಿ ಇರುವ ಇನ್-ಗಳು ಸುಮಾರು ೧೮೪೦-೫೦ರವರೆಗೆ ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಈ ಸಮಯದಲ್ಲಿ ರೈಲ್ವೇ  ಸಂಪರ್ಕ ಉಂಟಾದ ಮೇಲೆ ಕುದುರೆಗಾಡಿಯಲ್ಲಿ ಸಂಚರಿಸುವುದು ಕ್ರಮೇಣ ಕಡಿಮೆಯಾಗಿ ಇವುಗಳ ವ್ಯಾಪಾರ ಕುಗ್ಗಿತು. 

ಪ್ರತಿಯೊಂದು ಪಬ್-ಗೆ ಒಂದು ಹೆಸರು ಇರತ್ತದೆ. ಹದಿನಾಲ್ಕನೇ ಶತಮಾದಲ್ಲಿ ಆಳಿದ ಎರಡೆನೆಯ ರಿಚರ್ಡ್ ಹೊರಡಿಸಿದ  ಆಜ್ಞೆಯಲ್ಲಿ ಪ್ರತಿಯೊಂದು ಇನ್-ಗೂ ಹೆಸರು ಇಡಬೇಕಾಗಿತ್ತು ಮತ್ತು ಈ ಹೆಸರು ಕಾಣಿಸುವಂತಲೂ ಇರಬೇಕಾಗಿತ್ತು. ಬಹುಷಃ, ರೆಡ್ ಲಯನ್ (Red Lion) ಹೆಸರಿನ ಪಬ್ ತುಂಬಾ ಸಾಮಾನ್ಯ. ಆದರೆ ವಿಚಿತ್ರ ಹೆಸರಿನ ಪಬ್-ಗಳನ್ನೂ ನೋಡಬಹುದು. ಉದಾಹರಣೆಗೆ, ದ ಬಕೆಟ್ ಆಫ್ ಬ್ಲಡ್ (The Bucket of Blood) ಅಥವಾ ದ ಕ್ಯಾಮಲ್ ಆಂಡ್ ದ ಆರ್ಟಿಚೋಕ್ ( The camel and The Artichoke). ಇವು ಅರ್ಥಹೀನವಾದ ಹೆಸರುಗಳು ಅನ್ನಿಸಿದರೂ, ನೂರಾರು ವರ್ಷದಗಳಿಂದ ಈ ಹೆಸರುಗಳು ಉಳಿದಿವೆ. 

ಪುರಾತನ ಪಬ್-ಗಳ ಬಗ್ಗೆ ಎರಡು ಮಾತು, ಇದರ ಬಗ್ಗೆ ಬಹಳ ಚರ್ಚೆ ನಡೆದಿದೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ (Guinness Book of Records) ಪ್ರಕಾರ, ಇದು ಕ್ರಿ.ಶ ೯೪೭ ನ ಸ್ಟವ್-ಆನ್-ವೋಲ್ಡ್ (Stow -on -Wold)ನ ದ ಪಾರ್ಚ್ ಹೌಸ್ (The Porch House). ಎರಡನೆಯದು ಕ್ರಿ.ಶ ೧೧೮೯ರ ನಾಟಿಂಗ್-ಹ್ಯಾಮ್-ನಲ್ಲಿರುವ ಯೆ ಓಲ್ಡ್ ಟ್ರಿಪ್ ಟು ಜೆರುಸಲೆಮ್ (Ye Olde Trip To Jerusalem). ಪವಿತ್ರಸ್ಥಳವಾದ ಜೆರೂಸಲಂಗೆ ಹೋಗುವ ಪ್ರಯಾಣಿಕರು ಇಲ್ಲಿ ಕೆಲವು ರಾತ್ರಿ ತಂಗುತ್ತಿದ್ದರಂತೆ.  ಇದೆ ರೀತಿ  ನೂರಾರು ವರ್ಷದಿಂದ  ನಡೆದುಕೊಂಡು ಬಂದ  ಪಬ್-ಗಳು  ಅನೇಕ.

ಲಂಡನ್-ನಲ್ಲಿ ಹಲವಾರು ಪುರಾತನ ಪಬ್-ಗಳಿವೆ.  ಈಗ ಮೇ-ಫೇರ್ (Mayfair) ಲಂಡನ್ನಲ್ಲಿ ಅತಿ ಹೆಚ್ಚಿನ ದುಬಾರಿ ಪ್ರದೇಶ. ಆದರೆ ೧೪೨೩ರಲ್ಲಿ ಇಲ್ಲಿ ವಾಸವಾಗಿದ್ದವರು ಕಾರ್ಮಿಕ ವರ್ಗದವರು ಮಾತ್ರ. ಇವರು ಸೇರುತ್ತಿದ್ದು ದ ಗಿನಿ (The Guinea) ಅನ್ನುವ ಏಲ್ ಹೌಸ್-ನಲ್ಲಿ. 

ಕ್ರಿ.ಶ ೧೫೮೫ರ ದ ಸ್ಪೀನಿಯಾರ್ಡ್ಸ್ ಇನ್ (The Spaniards Inn) ಕತೆ ಆಸಕ್ತಿದಾಯಕದದ್ದು. ದಂತಕಥೆಯ ಪ್ರಕಾರ, ಒಮ್ಮೆ ಇದರ ಮಾಲೀಕ 
ಪ್ರಸಿದ್ಧ ದರೋಡೆಕಾರ ಡಿಕ್ ಟರ್ಪಿನ್ (Dick Turpin) ನ ತಂದೆ.  ಕವಿ ಜಾನ್ ಕೀಟ್ಸ್ ಇಲ್ಲಿ ಕೆಲವು ಕವಿತೆಗಳನ್ನು ಬರೆದನಂತೆ. ಚಾರ್ಲ್ಸ್ ಡಿಕ್ಕಿನ್ಸ್ (Charles Dickens) ಬರೆದ ದ ಪಿಕ್-ವಿಕ್ ಪೇಪರ್ಸ್ (The  Pickwick Papers) ನಲ್ಲಿ ಈ ಪಬ್-ನ ವಿಚಾರವಿದೆ. 
   
೧೬೬೬ರಲ್ಲಿ ಲಂಡನ್-ನಲ್ಲಿ ಅತಿ ದೊಡ್ಡ ಬೆಂಕಿ ಅನಾಹುತವಾಯಿತು,  ಪುಡ್ಡಿಂಗ್ ಲೇನ್ (Pudding Lane) ನಲ್ಲಿದ್ದ ಬೇಕರಿಯಲ್ಲಿ ಶುರುವಾಗಿದ್ದ ಬೆಂಕಿಯಿಂದ  ಸಾವಿರಾರು ಮನೆಗಳು ನಾಶವಾಗಿದ್ದವು. ನಂತರ ಈ ಪ್ರದೇಶದ ಪುನನಿರ್ಮಾಣ  ಪ್ರಾರಂಭ ವಾಯಿತು, ಈಗಿನ ಫ್ಲೀಟ್ ಸ್ಟ್ರೀಟ್ (Fleet Street) ನಲ್ಲಿರುವ ದ ಓಲ್ಡ್ ಬೆಲ್ (The Old  Bell) ೧೬೭೦ರಲ್ಲಿ ಪ್ರಸಿದ್ಧ ಆರ್ಕಿಟೆಕ್ಟ್  ಸರ್ ಕ್ರಿಸ್ಟೋಫರ್ ರೆನ್ (Christopher Wren) ರಚಿಸಿದ್ದ ಕಟ್ಟಡ. ಇದು ನಿರ್ಮಾಣದ ಕೆಲಸಗಾರರಿಗೆ ಕಟ್ಟಿದ ಏಲ್ ಹೌಸ್. ಕೆಲವು ವರ್ಷದ ಹಿಂದೆ ಫ್ಲೀಟ್ ಸ್ಟ್ರೀಟ್-ನಲ್ಲಿ ದಿನಪತ್ರಿಕೆಗಳನ್ನು ಇಲ್ಲಿಯೇ ಮುದ್ರಿಸುತ್ತಿದ್ದರು. ಈಗ ಇದು ಹಣಕಾಸಿನ ಕೇಂದ್ರವಾಗಿದೆ. 

ಮೇಲೆ ಉಲ್ಲೇಖಿಸಿದ ಸಂಗತಿಗಳಿಗೆ ಆಧಾರಗಳಿವೆ, ಆದರೆ ಕೆಲವು ಪಬ್-ನ ಕಥೆಗಳು ಬಿಯರ್ ಮಾರುವುದಕ್ಕೆ ಅನುಕೂಲವಾಗಲಿ ಎಂದು ಮಾಡಿದ ಸಂಶಯ ಬರುತ್ತದೆ. ಒಂದು ಉದಾಹರಣೆ ಕೊಡಬಲ್ಲೆ. ನನಗೆ ಹತ್ತಿರದಲ್ಲಿರುವ ಎ೩೪ ರಸ್ತೆಯಲ್ಲಿ ದ ಬ್ಲೀಡಿಂಗ್ ವೂಲ್ಫ್ (The Bleeding Wolf) ಎನ್ನುವ ಪಬ್ ಇದೆ. ಇಲ್ಲಿ ಈ ಪಬ್-ನ ಚರಿತ್ರೆ(?)ಯನ್ನು ಬರೆದಿದ್ದಾರೆ.

ಅದು ಹೀಗಿದೆ: ಬಹಳ ಹಿಂದೆ, ಕಿಂಗ್ ಜಾನ್, ಬೇಟೆಗಾಗಿ ತನ್ನ ಜೊತೆಗಾರರೊಂದಿಗೆ ಬಂದಾಗ, ದಾರಿ ತಪ್ಪಿ ಒಬ್ಬನೇ ದಟ್ಟ ಕಾಡಿಗೆ ಬಂದ, ಒಂದು ತೋಳ ಇವನ ಕುದುರೆಯ ಮೇಲೆ ಹಾರಿದಾಗ ಇವನು ಕೆಳಗೆ ಬಿದ್ದ. ಆದರೆ ಹತ್ತಿರದಲ್ಲೇ ಇದ್ದ ಒಬ್ಬ ಬೇಟೆಗಾರ ಇದನ್ನು ನೋಡಿ ತನ್ನ ಚಾಕುವನ್ನು ತೋಳದ ಕಡೆ ಎಸದಾಗ ತೋಳಕ್ಕೆ ಗಾಯವಾಗಿ ಓಡಿ ಹೋಯಿತು. ಬೇಟೆಗಾರ ಹತ್ತಿರ ಬಂದು ನೋಡಿದಾಗ ಇನ್ನಾರು ಅಲ್ಲ,ಸಾಕ್ಷಾತ್  ಕಿಂಗ್ ಜಾನ್. ಅಯ್ಯಾ, ನನ್ನ ಪ್ರಾಣ ಉಳಿಸಿದ್ದಿಯ, ನಿನಗೆ ಏನು ಬೇಕು ಕೇಳು, ಅಂದ ಕಿಂಗ್. ಇದೇ  ಸಮಯ ಅಂತ ಬೇಟೆಗಾರ, ನನಗೆ ಸಾಕಷ್ಟು  ಜಾಮೀನು ದಯಪಾಲಿಸಿ, ಅಂತ ಬೇಡಿದ. ಕಿಂಗ್ ಜಾನ್, ಸರಿ ಆಗಲಿ, ನಿನಗೆ ಇಲ್ಲಿಯ ಜಾಮೀನು ಇನಾಮು ಕೊಡುತ್ತೇನೆ, ಅಂದ.  ಈ  ಪಬ್ ಇರುವ ಜಾಗದಲ್ಲೇ ಈ ಘಟನೆ ನಡೆದದ್ದು!  ಇದನ್ನು ನಂಬುತ್ತಿರೋ ಇಲ್ಲವೋ ನಿಮಗೆ ಬಿಟ್ಟಿದ್ದು. ಕಿಂಗ್ ಜಾನ್ ಇಷ್ಟು ದೂರ ಬೇಟೆಗೆ ಏಕೆ ಬಂದ ಅಂತ ಕೇಳಬೇಡಿ.  ಈ ರೀತಿಯ ಕಥೆಗಳು ಅನೇಕ, ಕೆಲವು ನಿಜವಿರಬಹುದು, ಆದರೆ ಹೆಚ್ಚಾಗಿ ಕಾಲ್ಪನಿಕ.

ಇಲ್ಲಿಯ ಪಬ್-ಗಳ ಅನನ್ಯತೆ ಪ್ರಪಂಚದಲ್ಲಿ ಇನ್ನೆಲ್ಲೂ ಇಲ್ಲ.  ಪುರಾತನ ಪಬ್-ಗಳು ಈಗಲೂ ಆ ವಾತಾವರಣವನ್ನು ಕಾಪಾಡಿಕೊಂಡು ಬಂದಿದೆ. ನನ್ನ ವೈಯಕ್ತಿಕ ಇಷ್ಟವಾದ ಪಬ್, ಬೆಸಿಂಗ್-ಸ್ಟೋಕ್-ನ ಹತ್ತಿರ ಇರುವ ಡಮ್ಮರ್ (Dummer) ಅನ್ನುವ ಸಣ್ಣ ಹಳ್ಳಿಯಲ್ಲಿ ಇರುವ ಕ್ವೀನ್ ಇನ್ (Queen inn),
೪೦೦ ವರ್ಷಗಳ ಹಳೆಯ ಪಬ್.  ಶತಮಾನಗಳಿಂದ  ಏನು ಬದಲಾಯಿಸಿಲ್ಲವೇನೋ ಅನ್ನುವ ಭಾವನೆ ಬರುತ್ತದೆ.  

ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಪಬ್-ಗಳ ಭವಿಷ್ಯ ಶೋಚಿನೀಯವಾಗಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ, ಸಮೀಕ್ಷೆಯ ಪ್ರಕಾರ ಪಬ್-ಗಳ ಸಂಖ್ಯೆ ಕಾಲು ಭಾಗ ಕಡಿಮೆ ಆಗಿದೆ . ಅನೇಕ ಕಾರಣಗಳನ್ನು ಇಲ್ಲಿ ಕೊಡಬಹುದು. ಪ್ರತಿವರ್ಷ, ಬಜೆಟ್-ನಲ್ಲಿ ಮದ್ಯಗಳಮೇಲೆ ತೆರಿಗೆ ಹೆಚ್ಚಾಗುವುದು, ಸೂಪರ್ ಮಾರ್ಕೆಟ್ಟಿನಲ್ಲಿ ಸಿಗುವ ಅಗ್ಗವಾದ ಪಾನೀಯಗಳು, ಆದರೆ ಒಂದು ಮುಖ್ಯವಾದ ಕಾರಣ, ತರುಣ ಜನಾಂಗದವರು, ಅಂದರೆ ೧೮-೩೦ ವರ್ಷದವರು, ಮದ್ಯ ಕುಡಿಯುವುದನ್ನು ಕಡಿಮೆ ಮಾಡಿರುವುದು ಅಥವಾ ತ್ಯಜಿಸಿರುವ ಸಂಖ್ಯೆ  ಹೆಚ್ಚಾಗಿರುವದಕ್ಕೆ ಪುರಾವೆ ಇದೆ. ಕಳೆದ ಕೋವಿಡ್ ಸಾಂಕ್ರಾಮಿಕ ನಂತರ ಜನರು ಅತ್ಯಂತ ಜಾಗರೂಕರಾಗಿದ್ದಾರೆ. ಇದು ಇಂಗ್ಲೆಂಡ್ ದೇಶದಲ್ಲಿ ಇರುವ ಪರಿಸ್ಥಿತಿ. 

ಪತ್ರಿಕೆಯ ವರದಿ ಪ್ರಕಾರ, ಭಾರತದಲ್ಲಿ ಮದ್ಯಪಾನದಿಂದ ಸತ್ತವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಗ್ರಾಮಗಳಲ್ಲಿ ಅಕ್ರಮವಾಗಿ ತಯಾರಿಸಿದ ಮದ್ಯಗಳಿಂದಲೂ ಈ ಸಾವು ಹೆಚ್ಚಾಗಿದೆ. ಸಾಲದ್ದಕ್ಕೆ ಕುಡಿದು ಓಡಿಸು (Drink Drive) ವುದರಿಂದ ಉಂಟಾಗುವ ಸಾವು ಸ್ವೀಕಾರಾರ್ಹವಲ್ಲ.

ಇಬ್ಬರು ವ್ಯಕ್ತಿಗಳು ಭೇಟಿಯಾಗುವ ಕತೆಗಳು – ಕೇಶವ ಕುಲಕರ್ಣಿ

ಬಹಳ ವರ್ಷಗಳಾದ ಮೇಲೆ ಅಥವಾ ದಶಕಗಳು ಗತಿಸಿದ ಮೇಲೆ ಬೇರ್ಪಟ್ಟ ಪ್ರೇಮಿಗಳು ಮತ್ತೆ ಭೇಟಿಯಾದರೆ ಏನಾಗಬಹುದು ಎನ್ನುವ ಪ್ರಶ್ನೆ ಕತೆ ಬರೆಯುವವರಿಗೆ ಮತ್ತು ಸಿನೆಮಾ ಮಾಡುವವರಿಗೆ ತುಂಬ ಇಷ್ಟದ ವಿಷಯ. ಕತೆಯಲ್ಲಿ ಇಬ್ಬರದೂ ಈಗಾಗಲೇ ಮದುವೆಯಾಗಿರಬಹುದು, ಆಗದೆಯೂ ಇರಬಹುದು. ಒಬ್ಬರದು ಮಾತ್ರ ಆಗಿ, ಇನ್ನೊಬ್ಬರು ಭಗ್ನಪ್ರೇಮಿಯಾಗಿರಬಹುದು. ಒಬ್ಬರ ವಿಚ್ಚೇದನವಾಗಿರಬಹುದು. ಒಬ್ಬರಿಗೆ ಕೊನೆಗಾಲದ ಕ್ಯಾನ್ಸರ್ ಆಗಿರಬಹುದು. ಅವರಿಬ್ಬರು ಅಚಾನಕ್ಕಾಗಿ ಭೇಟಿಯಾಗಲು ಒಂದು ಕಾರಣ ಅಥವಾ ಘಟನೆ ಬೇಕು ಆಷ್ಟೇ,  ಕತೆ ಅಲ್ಲಿಂದ ಹಿಂದೆ ಮತ್ತು ಮುಂದೆ ಸಾಗುತ್ತ, ಓದುಗರನ್ನು/ನೋಡುಗರನ್ನು ತಮ್ಮ ಟೀನೇಜ್ ಮತ್ತು ಹದಿಕರೆಯದ ದಿನಗಳಿಗೆ ಕರೆದೊಯ್ಯುತ್ತ, ಯಾರದೋ ನೆನಪನ್ನು ತರುತ್ತ, ಮನಸ್ಸಿನಲ್ಲೊಂದು ಪ್ರೀತಿಯ ಸಂವೇದನೆಯನ್ನು ಹುಟ್ಟಿಸುತ್ತವೆ. ಇಂಥ ಬಹುತೇಕ ಸಿನೆಮಾಗಳು ವಾಸ್ತವದ ತಳಹದಿಯಲ್ಲಿ ಇದ್ದರೂ ರೋಮ್ಯಾಂಟಿಸಿಸಂನ ಭಾಷೆಯನ್ನು ಉಪಯೋಗಿಸುತ್ತವೆ. 

ಇಂಥ ನೂರಾರು ಪರ್-ಮ್ಯುಟೇಶನ್ ಮತ್ತು ಕಾಂಬಿನೇಶನ್-ನಿಂದ ಇಂಗ್ಲೀಷ್ ಭಾಷೆಯಲ್ಲಿ ನೂರಾರು ಕಾದಂಬರಿಗಳು ಮತ್ತು ಸಿನೆಮಾಗಳು ಬಂದಿವೆ. ಹಿಂದಿ ಭಾಷೆಯಲ್ಲಿ ಗುಲ್ಜಾರ್ ಬರೆದು ನಿರ್ದೇಶಿಸಿದ `ಇಜಾಜತ್` ಸಿನೆಮಾ ಆಗಿನ ದಿನಗಳಲ್ಲಿ ತುಂಬ ಕಾಡಿದ ಸಿನೆಮಾ. ಆ ಚಿತ್ರದಲ್ಲಿ ವಿಚ್ಛೇದನಗೊಂಡ ದಂಪತಿಗಳು ರೈಲುನಿಲ್ದಾಣದ ವೇಟಿಂಗ್-ರೂಮಿನಲ್ಲಿ ಭೇಟಿಯಾಗುವ ಕತೆ –  ಆ ಸಿನೆಮಾದ ಅಂತ್ಯ ಬಹಳ ಇಷ್ಟವಾಗಿತ್ತು. ಓ ಹೆನ್ರಿ ಕಥೆಯನ್ನು ಆಧರಿಸಿದ ಋತುಪರ್ಣ ಘೋಷ್ ನಿರ್ದೇಶನದ `ರೇನ್-ಕೋಟ್` ಸಿನೆಮಾ (ಅಜಯ್ ದೇವಗಣ್ ಮತ್ತು ಐಶ್ವರ್ಯಾ ರೈ) ಕೂಡ ಇಂಥದೇ ಕತೆ. `೯೬` ಎನ್ನುವ ತಮಿಳು ಸಿನೆಮಾ (ಕನ್ನಡದಲ್ಲಿ ಅದನ್ನೇ ೯೯ ಎಂದು ರಿಮೇಕ್ ಮಾಡಿದರು)ದಲ್ಲಿ ಪ್ರೇಮಿಗಳು ದಶಕಗಳಾದ ಮೇಲೆ ರಿ-ಯುನಿಯನ್ನಿನ ನೆಪದಲ್ಲಿ ಭೇಟಿಯಾಗುತ್ತಾರೆ. ಅವಳ ಮದುವೆಯಾಗುತ್ತದೆ, ಮಕ್ಕಳಾಗಿವೆ. ಆದರೆ ಈತ ಭಗ್ನಪ್ರೇಮಿ. ರೀ-ಯುನಿಯನ್ ಮುಗಿದ ಮೇಲೆ ಒಂದು ರಾತ್ರಿಯನ್ನು ಅವರು ಒಟ್ಟಿಗೇ ಕಳೆಯುತ್ತಾರೆ. ಕತೆ ಪದರು ಪದರಾಗಿ ತೆರೆದುಕೊಳ್ಳುತ್ತ ಆಪ್ತವಾಗುತ್ತ ಸಾಗುತ್ತದೆ. 

ಆದರೆ ಪ್ರೇಮಿಗಳಲ್ಲದ ಇಬ್ಬರು ವ್ಯಕ್ತಿಗಳ ನಡುವಿನ ಕತೆಗಳು ಮತ್ತು ಸಿನೆಮಾಗಳು ವಿರಳವೆಂದೇ ಹೇಳಬಹುದು. ಅಂಥ ಕತೆಗಳನ್ನು ಬರೆಯುವುದು, ಅದರಲ್ಲೂ ಸಿನೆಮಾ ಮಾಡುವುದು ತುಂಬ ಕಷ್ಟದ ಕೆಲಸ. ಎರಡೂ ವ್ಯಕ್ತಿಗಳು ಒಂದೇ ಲಿಂಗದವರಾಗಿರಬೇಕು (ಸಹೋದರ/ಪಿತೃ ಬಾಂಧವ್ಯವಿಲ್ಲದಿದ್ದರೆ). ಅವರು ಅಪರಿಚಿತರಿರಬಹುದು. ತುಂಬ ವರ್ಷಗಳಾದ ಮೇಲೆ ಭೇಟಿಯಾದ ಗೆಳೆಯರಿರಬಹುದು. ದಶಕಗಟ್ಟಲೇ ಭೇಟಿಯಾಗದ ಅಪ್ಪ-ಮಗನಿರಬಹುದು, ದಾಯಾದಿಗಳಿರಬಹುದು, ಸಹೋದರ-ಸಹೋದರಿಯರಿರಬಹುದು. ಇಂಥ ಕತೆಗಳ ವ್ಯಾಪ್ತಿ ಮತ್ತು ಆಳ ಎರಡೂ ಆಯಾ ಕತೆಗಾರನ ಅನುಭವ, ಓದು  ಮತ್ತು ಏನನ್ನು ಹೇಳಬೇಕು ಎನ್ನುವ ತುಡಿತದ ಮೇಲೆ ಅವಲಂಬಿಸಿಸಿರುತ್ತದೆ. 

ಇದನ್ನೆಲ್ಲ ಬರೆಯಲು ಕಾರಣ, ಇತ್ತೀಚೆಗೆ ಅಂಥ ಎರಡು ಸಿನೆಮಾಗಳನ್ನು ನೋಡಿದೆ. 

ಅಡಿಯೋಸ್ ಅಮಿಗೋ

ಸ್ಪ್ಯಾನಿಷ್ ಭಾಷೆಯಲ್ಲಿ ‘ಅಡಿಯೋಸ್ ಅಮಿಗೋ’ ಎಂದರೆ ‘ವಿದಾಯ ಗೆಳಯನೇ`’ ಎಂದು. ಆದರೆ ಇದು ಸ್ಪ್ಯಾನಿಷ್ ಚಿತ್ರವಲ್ಲ, ಕೇರಳದಲ್ಲಿ ಜರಗುವ ಶುದ್ಧ ಮಲಯಾಳಂ ಚಿತ್ರ! 

ಸಂಪೂರ್ಣವಾಗಿ ವಿಭಿನ್ನ ಹಿನ್ನೆಲೆಯ ಇಬ್ಬರು ಅಪರಿಚಿತರು ಆಕಸ್ಮಿಕವಾಗಿ ಭೇಟಿಯಾದರೆ ಏನಾಗಬಹುದು?  

ಒಬ್ಬ ಶ್ರೀಮಂತ ಮತ್ತು ಇನ್ನೊಬ್ಬ ಬಡವ. 

ಒಬ್ಬ ತುಂಬ ತೊಂದರೆಯಲ್ಲಿದ್ದಾನೆ, ಇನ್ನೊಬ್ಬ ಬೇಕಾಬಿಟ್ಟಿ ಬದುಕುತ್ತಿದ್ದಾನೆ. 

ಒಬ್ಬ ನಿರಾತಂಕದಲ್ಲಿರುವಂತೆ ತೋರುತ್ತಾನೆ, ಇನ್ನೊಬ್ಬ ಆತಂಕದಲ್ಲೇ ಕಾಯುತ್ತಿದ್ದಾನೆ. 

ಒಬ್ಬ ಹಣವನ್ನು ಹೇಗೆ ಬೇಕೆಂದ ಹಾಗೆ ಖರ್ಚು ಮಾಡುತ್ತಾನೆ,,ನ್ನೊಬ್ಬ ತನ್ನ ತಾಯಿಯ ಆಸ್ಪತ್ರೆಯ ಬಿಲ್‌ಗಳಿಗಾಗಿ ಹತಾಶರಾಗಿದ್ದಾನೆ. 

ಇಂಥ ವ್ಯತಿರಿಕ್ತ ಅಪರಿಚಿತರು ಬಸ್-ಸ್ಟ್ಯಾಂಡಿನಲ್ಲಿ ಭೇಟಿಯಾಗುತ್ತಾರೆ. ಕೇರಳದಾದ್ಯಂತ ಬಸ್, ಕಾರು ಮತ್ತು ದೋಣಿಯಲ್ಲಿ ೨೪ ಗಂಟೆಗಳ ಕಾಲ ಸುಮಾರಾಗಿ ಗೊತ್ತುಗುರಿಯಿಲ್ಲದ ಅರ್ಥಹೀನ ಪ್ರವಾಸಕ್ಕೆ ಹೋಗುತ್ತಾರೆ. ಇಡೀ ಸಿನೆಮಾ ನಮ್ಮನ್ನು ಉದ್ದೇಶರಹಿತ ಪ್ರಯಾಣಕ್ಕೆ ಕರೆದೊಯ್ಯುತ್ತದೆ.

ಇಂಥ ಸಂಪೂರ್ಣ ವಿರುದ್ಧದ ಇಬ್ಬರ ಯಾತ್ರೆ, ಕಪ್ಪುಬಿಳಿಪಾಗಿ ಸಾಗುವುದಿಲ್ಲ. ಶ್ರೀಮಂತ ಮತ್ತು ಬಡವರ ನಡುವಿನ ವ್ಯತ್ಯಾಸವನ್ನು ಅನ್ವೇಷಿಸುವುದಿಲ್ಲ. ಯಾವುದೇ ಪಾತ್ರವನ್ನು ನಿರ್ಣಯಿಸುವುದಿಲ್ಲ. ಬೋಧನೆ ಇಲ್ಲ. ನೈತಿಕತೆಯ ಪಾಠಗಳಿಲ್ಲ.  ನಾನ್-ಜಡ್ಜ್-ಮೆಂಟಲ್ ಆಗಿ ದೈನಂದಿನ ಜೀವನದ ಸಾಮಾನ್ಯ ದೃಶ್ಯಗಳಲ್ಲಿ ವೈಭವೀಕರಣವಿಲ್ಲದೇ ತೋರಿಸುತ್ತ ಮನುಷ್ಯನ ಒಳಪದರುಗಳನ್ನು ಬಿಡಿಸುತ್ತ ಹೋಗುತ್ತದೆ. 

ಮೇಯಗನ್

ಮೇಯೞಗನ್, ಹೆಸರೇ ಹೇಳುವಂತೆ, ತಮಿಳು ಸಿನೆಮಾ. ಕನ್ನಡದಲ್ಲಿ ತಿಲಾಂಜಲಿ ಕೊಟ್ಟಿರುವ `ೞ` (ಳ) ಇರುವ ಅಚ್ಚ ತಮಿಳು ಹೆಸರಿನ ಸಿನೆಮಾ. 

ಈ ಸಿನೆಮಾದಲ್ಲೂ ಇಬ್ಬರು ಭೇಟಿಯಾಗುತ್ತಾರೆ. ಆದರೆ ಸಂಪೂರ್ಣ ಅಪರಿಚಿತರಲ್ಲ. ಆದರೆ ಕೆಲವು ದಶಕಗಳ ಮೇಲೆ ಭೇಟಿಯಾಗುತ್ತಾರೆ. 

ಒಬ್ಬ ನಗರ ನಿವಾಸಿಯ ಪ್ರತಿರೂಪ, ಇನ್ನೊಬ್ಬ ಹಳ್ಳಿಯ ಭೂಪ. 

ಒಬ್ಬ ತುಂಬ ಮಿತಭಾಷಿ, ಇನ್ನೊಬ್ಬ ಅರಳು ಹುರಿದಂತೆ ಮಾತಾಡುವ.

ಒಬ್ಬ ರಿಸರ್ವ್ಡ್, ಇನ್ನೊಬ್ಬ ಓಪನ್. 

ಒಬ್ಬನದು ಯಾರನ್ನೂ ಹೆಚ್ಚಾಗಿ ನಂಬದ ಬದುಕು, ಇನ್ನೊಬ್ಬನ ಬದುಕೇ ನಂಬುಗೆಯ ಮೇಲೆ ನಿಂತಿರುವುದು. 

ಒಬ್ಬನದು ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದ ನಡೆ,  ಇನ್ನೊಬ್ಬನದು ಎಲ್ಲರೂ ನಮ್ಮವರೇ ಎನ್ನುವ ಬಾಳು. 

ಒಬ್ಬನದು ಇತರರೊಂದಿಗೆ ಸಂಪರ್ಕ ಸಾಧಿಸಲು ಹೆಣಗಾಡುವ ಸ್ವಭಾವ, ಇನ್ನೊಬ್ಬ ಪ್ರಾಣಿಗಳನ್ನೂ ಮಾತನಾಡಿಸಬಲ್ಲ. 

ದಶಕಗಳಾದ ಮೇಲೆ ಈ ನಗರವಾಸಿ ತಾನು ಹುಟ್ಟಿಬೆಳೆದ ಹಳ್ಳಿಗೆ ಹೋಗಬೇಕಾಗುವ ಪ್ರಸಂಗ ಬರುತ್ತದೆ, ಒಂದು ಮದುವೆಯ ಕಾರಣಕ್ಕಾಗಿ. ಅಲ್ಲಿ ನಗರವಾಸಿಯ ಉಪಚಾರವನ್ನು ನೋಡಿಕೊಳ್ಳಲು ಈ ಹಳ್ಳಿಯ ಭೂಪ. ಹಳ್ಳಿಯ ಭೂಪನಿಗೆ ನಗರವಾಸಿಯನ್ನು ನೋಡುತ್ತಿದ್ದಂತೆ ತನ್ನ ಅತ್ಯಂತ ಆಪ್ತಬಂಧು ಬಂದಂತೆ ವ್ಯವಹರಿಸುತ್ತಾನೆ.  ಆದರೆ ನಗರವಾಸಿಗೆ ಈ ಹಳ್ಳಿಯ ಭೂಪ ಯಾರೆಂದು ಏನು ಮಾಡಿದರೂ ಗೊತ್ತಾಗುತ್ತಿಲ್ಲ, ಅವನನ್ನೇ ನೀನಾರೆಂದು ಕೇಳಲು ಸಂಕೋಚ. ಮದುವೆಯ ಮಂಟಪದಲ್ಲಿ ಏನೆಲ್ಲ ಸಾಹಸ ಮಾಡಿದರೂ ಈ ಹಳ್ಳಿಯ ಭೂಪ ತನಗೆ ಹೇಗೆ ಸಂಬಂಧವಾಗಬೇಕು, ಅವನ ಹೆಸರೇನು ಎಂದು ಹರಸಾಹಸ ಮಾಡಿದರೂ ಗೊತ್ತಾಗುವುದೇ ಇಲ್ಲ!

ಈ ಸಿನೆಮಾದ ನಿರೂಪಣೆ ಮಾಸ್ತಿಯವರ ಅವರ ಸಣ್ಣ ಕಥೆಗಳಂತಿದೆ –  ಸರಳ, ಅಷ್ಟೇ ಆಳ. ಈ ಚಿತ್ರವೂ `ಅಡಿಯೋಸ್ ಅಮಿಗೋ` ಚಿತ್ರದಂತೆ ಬಹುತೇಕಕ ೨೪ ಗಂಟೆಗಳಲ್ಲಿ ನಡೆಯುತ್ತದೆ. ಪದರು ಪದರಾಗಿ ಮನುಷ್ಯನ ದೊಡ್ಡತನ ಮತ್ತು ಸಣ್ಣತನಗಳನ್ನು ಎಳೆ ಎಳೆಯಾಗಿ ಬಿಡಿಸುತ್ತ ಸಾಗುತ್ತದೆ. ನಗರಪ್ರಜ್ಞೆ ಮತ್ತು ಗ್ರಾಮೀಣ ನಂಬುಗೆಗಳು ರೋಮ್ಯಾಂಟಿಕ್ ಪದರುಗಳಲ್ಲಿ ಬಿಡಿಸಿಕೊಳ್ಳುತ್ತ ಹೋಗುತ್ತದೆ (ಕೆಲವೊಮ್ಮೆ ವ್ಯಾಚ್ಯವೂ ಆಗುತ್ತದೆ). 

(ಅಂದ ಹಾಗೆ  `ಮೇಯೞಗನ್` ಸಿನೆಮಾದ ನಿರ್ದೇಶಕನ ಮೊದಲ ಸಿನೆಮಾ ನಾನು ಮೇಲೆ ಹೇಳಿದ ೯೬). 

ಇಂಥ ಕೆಲವು ಕತೆಗಳು

ಆರ್ ಕೆ ನಾರಾಯಣರು ಬರೆದ `ಜ್ಯೋತಿಷಿಯ ದಿನ` ಕತೆಯೊಂದಿದೆ. ಅದರಲ್ಲಿ ವಿದ್ಯುಚ್ಛಕ್ತಿ ಇಲ್ಲದ ಆಗಿನ ಕಾಲದಲ್ಲಿ ಕತ್ತಲಾಗುವ ಹೊತ್ತಿನಲ್ಲಿ ಜ್ಯೋತಿಷಿಯ ಬಳಿ ವ್ಯಕ್ತಿಯೊಬ್ಬ ಬಂದು ತನ್ನನ್ನು ತುಂಬ ವರ್ಷಗಳ ಹಿಂದೆ ಹೆಚ್ಚು-ಕಡಿಮೆ ಕೊಂದೇ ಹಾಕಿದ ವ್ಯಕ್ತಿ ಎಲ್ಲಿರಬಹುದೆಂದು ಕೇಳುತ್ತಾನೆ. ಜ್ಯೋತಿಷಿಗೆ ಭವಿಷ್ಯ ಕೇಳಲು ಬಂದ ವ್ಯಕ್ತಿ ಯಾರು ಎನ್ನುವುದು ಗೊತ್ತು, ಆದರೆ ಆ ವ್ಯಕ್ತಿಗೆ ಜ್ಯೋತಿಷಿ ಯಾರೆಂದು ಗೊತ್ತಿಲ್ಲ, `ಮೇಯೞಗನ್` ಸಿನೆಮಾದಲ್ಲಿ ಆಗುವಂತೆ. ಆ ಕತೆಯ ವಸ್ತು, ಅದನ್ನು ಬರೆದ ಶೈಲಿ ಮತ್ತು ಕೊನೆಯವರೆಗೂ ಕಾದಿಡುವ ರಹಸ್ಯ ಈಗಲೂ ಕತೆ ಬರೆಯುವವರಿಗೆ ಹೇಳಿ ಮಾಡಿಸಿದ ಪಾಠದಂತಿದೆ.  

ವಿವೇಕ ಶಾನಭಾಗರು ಬರೆದ `ನಿರ್ವಾಣ` ಎನ್ನುವ ಕತೆಯೊಂದಿದೆ (ಘಾಚರ್ ಘೋಚರ್ ಸಂಕಲನ). ನಗರ ಜೀವನದ, ಕಾರ್ಪೋರೇಟ್ ಬದುಕಿನ ಪುಳ್ಳುತನವನ್ನು ಎಲ್ಲಿಯೂ ವ್ಯಾಚ್ಯವಾಗಿಸದೇ ಸಶಕ್ತವಾಗಿ ಬರೆದ ಕತೆ.  ಈ ಕತೆಯಲ್ಲೂ ಇಬ್ಬರು ವ್ಯಕ್ತಿಗಳು ಭೇಟಿಯಾಗುತ್ತಾರೆ, `’ಅಡಿಯೋಸ್ ಅಮಿಗೋ’ ತರಹ. `ಮೇಯೞಗನ್` ತರಹ. ಕಾರ್ಪೋರೇಟ್ ಜಗತ್ತಿನಲ್ಲಿ ಮ್ಯಾನೇಜರ್ ಜಾಗದಲ್ಲಿ ಇರುವ ಇಬ್ಬರು ಪರದೇಶದ ಹೊಟೇಲೊಂದರಲ್ಲಿ ಭೇಟಿಯಾಗುತ್ತಾರೆ. ಇಬ್ಬರೂ ಬಹಳ ವರ್ಷಗಳಾದ ಮೇಲೆ ಸಿಕ್ಕವರು. ಕಥಾನಾಯಕನಿಗೆ ಅವನನ್ನು ಮುಂಚೆ ನೋಡಿದ ಮಾತನಾಡಿಸಿದ ನೆನಪಿದೆ, ಆದರೆ ಪೂರ್ತಿ ನೆನಪಾಗುತ್ತಿಲ್ಲ. ಇರಲಿ, ಏನಂತೆ, ಇದೆಲ್ಲ ಕಾರ್ಪೋರೇಟ್ ಜಗತ್ತಿನಲ್ಲಿ ಸಾಮಾನ್ಯವಲ್ಲವೇ? ಇಬ್ಬರೂ ಸೇರಿ ಆತನ ರೂಮಿನಲ್ಲಿ ಗುಂಡು ಹಾಕುತ್ತಾ ಪರಸ್ಪರ ಉಭಯ ಕುಶಲೋಪರಿಯನ್ನು ಮಾತನಾಡುತ್ತಾರೆ. ಮಾತನಾಡುತ್ತ ಕಥಾನಾಯಕನಿಗೆ ಆತ ತಾನು ಅಂದುಕೊಂಡ ಆತನಲ್ಲ ಎಂದು ಗೊತ್ತಾಗುತ್ತದೆ! ಮುಂದೆ ಇನ್ನೂ ಏನೇನೋ ಆಗುತ್ತೆ, ಸಸ್ಪೆನ್ಸ್ ಹಾಗೇ ಇರಲಿ. 

ಇನ್ನೂ ಕೆಲವು ಕತೆಗಳಿರುತ್ತವೆ. ಆ ಕತೆಗಳಲ್ಲಿ ಒಂದೇ ವ್ಯಕ್ತಿ ಎರಡು ಹೋಳಾಗಿ ಎರಡು ವಿರುದ್ಧ ವ್ಯಕ್ತಿತ್ವದ ಮನುಷ್ಯರಾಗಿ, ಬೇರೆ ಬೇರೆಯಾಗಿ, ಮತ್ತೆ ಎದುರಾಗುತ್ತಾರೆ. ಹಾಗೆ ಎದುರಾದಾಗ ಎಂಥ ತೀವ್ರ ಸಂಘರ್ಷವಾಗುತ್ತದೆ ಅಲ್ಲವೇ!  ಕಾರ್ನಾಡರ `ನಾಗಮಂಡಲ` ಮತ್ತು ಕಂಬಾರರ `ಸಿರಿಸಂಪಿಗೆ` ಇದಕ್ಕೆ ಉದಾಹರಣೆಗಳು. ಅಮೋಲ್ ಪಾಲೇಕರ್ ನಿರ್ದೇಶಿಸಿದ `ಪಹೇಲಿ` (ಶಾರೂಕ್ ಖಾನ್ ನಟನೆ)ಯದೂ ಇಂಥದೇ ಕತೆ. ಎ ಕೆ ರಾಮಾನುಜನ್ ಬರೆದ `ಮತ್ತೊಬ್ಬನ ಆತ್ಮ ಚರಿತ್ರೆ`ಯನ್ನೂ ಇಂಥ ಕತೆಗಳ ಸಾಲಿಗೆ ಸೇರಿಸಬಹುದೇನೋ. 

ನಿಮಗೂ ಇಂಥ ಕಥೆಗಳು ಮತ್ತು ಸಿನೆಮಾಗಳು ಗೊತ್ತಿದ್ದರೆ, ಅವು ನಿಮ್ಮನ್ನು ಸ್ವಲ್ಪವಾದರೂ ಕಾಡಿದ್ದರೆ ನಿಮ್ಮ ಪ್ರತ್ರಿಕ್ರಿಯೆಯಲ್ಲಿ ಬರೆಯಲು ಮರೆಯಬೇಡಿ.