ಮತ್ತೇಕೆ ಯುಗಾದಿ ಬರುತಿದೆ? – ಕೇಶವ ಕುಲಕರ್ಣಿ ಬರೆದ ಕವನ

ಯುಗ ಯುಗಾದಿ ಕಳೆದರೂ
ಮತ್ತೇಕೆ ಯುಗಾದಿ ಬರುತಿದೆ?

Photo by the author

ಹೊಸ ವರುಷ ನಮಗೆ ಜನೆವರಿ ಒಂದಾಗಿ
ಆಗಲೇ ಇದು ಎರಡನೇ ತಲೆಮಾರು.
ವಸಂತ ಮಾಸ ಯಾಕೆ ಯಾವಾಗಲೂ
ಮಾರ್ಚ್ ಯಾ ಎಪ್ರಿಲ್ ಒಂದನೇ ತಾರೀಖು
ಶುರುವಾಗಬಾರದು? ಎನ್ನುವ ಜನಾಂಗ ನಾವು.
ನಿಮ್ಮ ಈ ‘ಸಂವತ್ಸರ’
ಪ್ರನೌನ್ಸ್ ಮಾಡೋದೂ ಕಷ್ಟ ನೋಡಿ.

ಹೊಂಗೆ ಹೇಗಿರುತ್ತೇಂತ ನೋಡಿಲ್ಲ
ಭೃಂಗದಿಂದ ಕಚ್ಚಿಸಿಕೊಂಡಿದ್ದು ಮಾತ್ರ ಗೊತ್ತು.
ಬೇವಿನ ಮರ ಬಿಡಿ, ಜಾಲಿ ಮರಕ್ಕೂ
ಈ ನಗರಗಳಲ್ಲಿ ಜಾಗವಿಲ್ಲ.
ಅಷ್ಟಕ್ಕೂ ಬೇವಿನ ಮರ ಹೂ ಬಿಟ್ಟಿದೆ ಅಂದುಟ್ಟುಕೊಳ್ಳಿ!
ಅದಕ್ಕೇನು ವೆನಿಲಾದ ತರ ಬೇರೆ ದೇಶದಲ್ಲಿ ಬೆಲೆ ಇದೆಯೇ?

ಮಾವಿನ ಹಣ್ಣಿಗೆ ಈಗ ವಸಂತ ಬರಲು
ಕಾಯಬೇಕಾಗಿಲ್ಲ
ವರ್ಷದ ಹನ್ನೆರಡೂ ತಿಂಗಳೂ
ಫ್ರೂಟಿ ಲಭ್ಯ

ಹಾಗೆಂದು ನಮಗೆ ವಸಂತ, ಚೈತ್ರ
ಅಂದು ಕನ್ಫೂಸ್ ಮಾಡಬೇಡಿ
ಅವು ಹುಡುಗಿ ಹೆಸರು ಅಂದುಕೋತೀವಿ
ನಿಯತ್ತಾಗಿ ’ಸ್ಪ್ರಿಂಗ್’ ಎನ್ನಲು ಆಗೋದಿಲ್ಲವೇ ನಿಮಗೆ?

ಈ ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ
ಅದೆಲ್ಲ ಬೇಂದ್ರೆಯಲ್ಲೇ ಕಾಲವಾಯಿತು
ಈಗ ನಮಗೋ
ಯಾವಾಗ ಬೇಕೋ ಆವಾಗ ಹೊಸ ಜನ್ಮ
ಹೊಸ ಮುಖ ಹೊಸ ತಿಕ

ಅರವತ್ತರ ಮಡೋನಾ ಕೂಡ
ಕಾಸ್ಮೆಟಿಕ್ ಸರ್ಜರಿಯಲ್ಲಿ
ಮೂವತ್ತರ ಬೆಡಗಿ
ಮುದಿ ಯಯಾತಿಯ ಜೇಬಿನಲ್ಲಿ ವಯಾಗ್ರ
ಸಾವಿನ ಕಟೆಕಟೆಯಲ್ಲಿ ಕೂಡ
ನಮಗೆ ಸನತ್ಕುಮಾರ
ನೆನಪಾಗುವುದಿಲ್ಲ ಬಿಡಿ

ಇಷ್ಟೆಲ್ಲ ಆದ್ರೂ
ಮತ್ತೇಕೆ ಯುಗಾದಿ ಬರುತಿದೆ?

ಇಂಗ್ಲಂಡಿನಲ್ಲಿ ಮಾವಿನ ಹಣ್ಣು – ಕೇಶವ ಕುಲಕರ್ಣಿ ಬರೆದ ಕವಿತೆ

ಇಂಗ್ಲಂಡಿನಲ್ಲಿ ಮಾವಿನ ಹಣ್ಣು

mango‘ಮಾವು’ ಎಂದೆ ನೋಡಿ
ಮನೆಯೆಲ್ಲ
ಮನವೆಲ್ಲ
ಕಂಪು, ಬಣ್ಣ, ಸ್ವಾದ, ನಾರು, ಗೊರಟ,
ಜೊತೆಗೆ ಭಾರತ

ಗೆಳೆಯ,
ಮಾವಿನ
ಸಿಹಿ ಗೊತ್ತಿದ್ದೂ
ಒಗರು ಗೊತ್ತಿದ್ದೂ
’I am not missing it’ ಎಂದು
ದ್ರಾಕ್ಷಿಯ ವೈನು ಹಿಡಿದು ಕೂತಿದ್ದೇನೆ

ನಿದ್ದೆಗೆ ಜಾರುವಾಗ ಕನಸಿನಲ್ಲಿ
ಬೆನ್ನುಹುರಿಯಲ್ಲಿ ಅಳುಕಿದಂತಾಗಿ
ಎದೆಯೆಲ್ಲ ಹಿಂಡಿದಂತಾಗಿ
ಹುಳಿದ್ರಾಕ್ಷಿಯ ತೇಗಿನಲ್ಲೂ
ಮಾವಿನ ವಾಸನೆ

ತ್ರಿಶಂಕುವಿನ ಸ್ವರ್ಗದಲ್ಲಿ
ಮಾವು ಸಿಗುವುದಿಲ್ಲ
ಸಿಕ್ಕರೂ ತಿಂದಂತಾಗುವುದಿಲ್ಲ

ಅಭಿಮನ್ಯುವಿನ ಚಕ್ರವ್ಯೂಹವಿದು
ಎಂದು ಯಾರಿಗೆ ಗೊತ್ತಿತ್ತು?

ಮಾವನ್ನು ದಿಟ್ಟಿಸುತ್ತ ಕೂತಿದ್ದೇನೆ
ಇಂಟರ್ನೆಟ್ಟಿನ ಮುಂದೆ
ಇನ್ನು ಒಂದೇ ಕ್ಲಿಕ್ಕು
ಆನ್‍ಲೈನ್ ಆರ್ಡರು
ರತ್ನಾಗಿರಿಯಿಂದ ಸೀದಾ ಮನೆಗೆ ಆಪೂಸು!