ವಿಜಯ್ ಖುರ್ಸಾಪೂರ ಬರೆದ ಕವಿತೆಗಳು

ವೃತ್ತಿಯಿಂದ ಏರೋಸ್ಪೇಸ್ ಇಂಜಿನಿಯರ್ ಆಗಿರುವ ವಿಜಯ್ ಖುರ್ಸಾಪೂರ, ಹುಟ್ಟಿದ ಊರು ಶಿಗ್ಗಾವಿ (ಜಿಲ್ಲೆ ಹಾವೇರಿ ), ಓದಿದ್ದು ಧಾರವಾಡ, ಗದಗ. ಬೆಂಗಳೂರು. ಹೈದರಾಬಾದ ಮತ್ತು ಕೆನಡಾದಲ್ಲಿ ನೆಲೆಸಿ, ೪ -೫ ಏರೋಸ್ಪೇಸ್ ಕಂಪನಿಗಳಲ್ಲಿ ಕೆಲಸ ಮಾಡಿ, ಅವರು ಕಳೆದ ೧೦ ವರ್ಷಗಳಿಂದ ಇಂಗ್ಲೆಂಡ್ ನಲ್ಲಿ ನೆಲೆಸಿದ್ದಾರೆ. ಅವರ ಕೆಲವು ಕವನಗಳು ಇಲ್ಲಿವೆ, ನಿಮ್ಮ ಓದಿಗೆ. ನಿಮ್ಮ ಪ್ರೋತ್ಸಾಹ ಮತ್ತು ವಿಮರ್ಶೆ ಅವರಿಗೆ ಇನ್ನಷ್ಟು ಬರೆಯಲು ಮತ್ತು ತಿದ್ದಿಕೊಳ್ಳಲು ಅನುವುಮಾಡಿಕೊಡುತ್ತದೆ. – ಸಂ 

ಹಣತೆ

ಬೆಳಗಿದಾಗಲೆಲ್ಲ ಬೆಳಕು
ತನ್ನ ತಾ ಸುಟ್ಟರೂ ಜಗಕೆಲ್ಲ
ತೋರುತಿಹುದು ದಾರಿ,
ನಿರಂತರವಾಗಿ ಹೊಡೆದಾಡುತ
ಕತ್ತಲನು ಕಳೆಯಲು ಹೆಣಗಾಡುತಿದೆ..

ಸುತ್ತಲೂ ಕತ್ತಲು ಕವಿದ
ಬಡ ಹೃದಯಗಳಿಗೆ
ಬೆಳಕಿನ ಕಣ್ಣಂತೆ
ನಾಳೆಯ ಮುಟ್ಟುವ
ಭರವಸೆಯ ಆಸರೆಯಂತೆ
ಬೆಳಗುತಿದೆ ತನ್ನ ತಾ ಸುಡುತ

ದಾರಿ ತಪ್ಪಿಸುವುದಿಲ್ಲ
ನಂಬಿ ಹಿಂಬಾಲಿಸಿ ನೆಡೆದರೆ
ತುಂಬಿದ ಆಸೆಯ
ಕಣ್ಣುಗಳಿಗೆ ಶಾಂತಿಯ ಸಿರಿ
ತೋರುತ ಬೆಳಗಿದೆ
ತನ್ನ ತಾ ಸುಡುತ

ಮೇಲು ಕೀಳು ವರ್ಣ
ಸಂಪತ್ತಿಗೆ ಬದಲಾಗದ
ಬೆಳಕನು ಚಲ್ಲುತ ಸಾಗಿದೆ
ಕತ್ತಲೆಯ ಹಿಮ್ಮೆಟ್ಟಲು
ದುಡಿಯುತಿದೆ
ತನ್ನ ತಾ ಸುಡುತ.

ನೆಮ್ಮದಿಯ ಉಸಿರು

ಬೆಳಕ ನಾಚಿಸುವ
ನಗುವೊಂದು ಹರೆದಿದಿತ್ತು
ಕಲ್ಲೆದೆಯ ನಾಟಿ
ಹೃದಯಾನ ಮೀಟಿ
ನಡುಕಾನ ಹುಟ್ಟಿಸಿತ್ತು

ಕಾಣಲಾರದ ಚಂದಕೆ,
ಬೆರಗಾಗಿ ಕಣ್ಣು ಅರಳಿತ್ತು
ಹೊಸ ರಾಗದ ಮದ್ದಳೆ
ಮನಸಲ್ಲಿ ಮೂಡಿ ಎದೆ
ಗೂಡು ಕನಸೊಂದ ಕಟ್ಟಿತ್ತು

ಕತ್ತಲೆಯ ಮನಕೆ
ಕಿಟಕಿಯ ಮೂಲೆಯಲಿ
ನಂಬಿಕೆಯ ಆಸರೆ ಹನಿ
ಹನಿಯಾಗಿ ಸೊರಿತ್ತು
ಬೆಚ್ಚಗಿನ ಸೂರಲ್ಲಿ
ಹೊದಿಕೆಯ ಅಡಿಯಲ್ಲಿ
ನೆಮ್ಮದಿಯ ಉಸಿರು ಬಿಟ್ಟಿತ್ತು

ಆಸೆಯ ಗುರಿ

ಹಚ್ಚ ಹಸುರಿನ ತೋಟದಲ್ಲಿ, ಅತ್ತಿತ್ತ
ಹರಿದಾಡಿದ್ದ ಚಿಟ್ಟೆಯನು,
ಅರಳಿದ್ದ ಸೊಗಸೊಂದು ಒಲವಿನ
ನಗೆಯ ಬೀರಿ ಕರೆಯುತಿರಲು
ಆಗದಿರಲಿ ಕನಸಿನ ಸುಲಿಗೆ; ತೆರೆ
ಬಿಳದಿರಲಿ, ಇನ್ನೇನು ಉಲ್ಲಾಸದಿ ತೇಲುವ ಆಸೆಯ ಗುರಿಗೆ

ಸಾಧನೆಯ ಫಲಗಳೆಲ್ಲ ಕಣ್ಮುಂದೆ ಕಂಡು,
ಸಂತಸದಲಿ ಮನ, ಗರಿ ಬಿಚ್ಚಿ
ಕುಣಿಯಲು ಅಣಿಯಾಗುತಿರಲು
ಆಗದಿರಲಿ ಕನಸಿನ ಸುಲಿಗೆ; ತೆರೆ
ಬಿಳದಿರಲಿ, ಇನ್ನೇನು ಉಲ್ಲಾಸದಿ ತೇಲುವ ಆಸೆಯ ಗುರಿಗೆ

ನಿದ್ದೆ

ಗೊತ್ತು ಗುರಿ ಇಲ್ಲದೆ
ನಾ ಸುಮ್ಮನೆ ಗುಮ್ಮನಂತೆ
ಸಾಗುತ್ತಿರಲು ನಿನ್ನ
ದರುಶನದ ಭಯಕೆಯೇ
ನನಗೆ ಸ್ಫೂರ್ತಿ .

ಹೊತ್ತು ಹೋದಂತೆ
ದೇಹ ಸೋತು,
ನಿನಗಾಗಿ ಅರಸಿ ನಾ
ಸೊರಗಿರುವೆ ಪೂರ್ತಿ

ತಡವಾದರೂ ಚಿಂತೆಯಿಲ್ಲ
ಮಲಗುವ ವೇಳೆ ಮೀರಿದರೆ
ಹಿತವಲ್ಲ,
ಮರೆಯದೆ ಬಂದು
ಆವರಿಸಿ ಬೆಳಗು ಕೀರ್ತಿ

ಭಾವನೆಗೆ ಬೆಲೆ

ಸಂತಸವ ಅರಸಿ ಬಾಳನ್ನು ಸವೆಸಿ
ನೆಡೆಯುತ್ತ ಹೋದ ದಾರಿಯಲಿ
ಕಲ್ಲು ಮುಳ್ಳು ಗಳೇ ಹೆಚ್ಚು ಇಲ್ಲಿ
ದಾಹ ಮರೆತು ಹೆಜ್ಜೆ ಮುಂದಿಡುತ್ತ
ನೆಡೆದರೂ ಹನಿ ನೀರ ಎರಚುವರ
ಸಂಖ್ಯೆ ಅತೀ ಕಡಿಮೆ ಇಲ್ಲಿ
ಬಿದ್ದಾಗ ಚುಚ್ಚುತ್ತ ಗೆದ್ದಾಗ
ಕಿಚ್ಚಿನಲ್ಲಿ ಹೊರಳಾಡುವರರ
ಸಂಖ್ಯೆಗೇನು ಕಮ್ಮಿ ಇಲ್ಲಿ?
ಭಾವನೆಗೆ ಬೆಲೆ ಕೊಡುವವರು ಯಾರಿಲ್ಲಿ

ಕ್ಷಣಿಕ ಸುಖಕ್ಕೆ ಬೆಲೆ ಕೊಟ್ಟು
ನಂಬಿದವರ ಕೈ ಬಿಟ್ಟು
ಮತ್ತೆ೦ಬ ಮದವ ಕುಡಿದು
ಕಾಣದ ಆಸೆಗೆ ತುಡಿದು
ಮೋಸ ಮಾಡುವವರೇ ಹೆಚ್ಚು ಇಲ್ಲಿ
ಭಾವನೆಗೆ ಬೆಲೆ ಕೊಡುವವರು ಯಾರಿಲ್ಲಿ

ಅಳುತಿರಲು ಹೃದಯ ಮೌನದಲಿ
ಭಾವನೆಗೆ ಬೆಲೆ ಕೊಡುವವರು ಯಾರಿಲ್ಲಿ?

ಎರಡು ಕವನಗಳು – ಕೇಶವ ಕುಲಕರ್ಣಿ

ಕಿನ್ಸುಗಿ

ಹೇಳದೇ ಉಳಿದ ಮಾತು
ಧಡಕ್ಕನೇ ಹಾಕಿದ ಬಾಗಿಲು
ಕಣ್ಣಲ್ಲೇ ಉಳಿದ ಕಂಬನಿ
ಎದೆಯಲ್ಲೇ ಕುದಿವ ಅವಮಾನ
ತಲೆಯನ್ನು ತಿನ್ನುವ ಅನುಮಾನ

ಒಂದು ದಿನ ನಮ್ಮ ಬದುಕುಗಳು
ಅಕಾಲದಲ್ಲಿ ಚೆಲ್ಲಾಪಿಲ್ಲಿಯಾಗಿ
ಬಿದ್ದ ಪಾರಿಜಾತದ ಹೂಗಳಂತೆ
ನಿಶ್ಶಬ್ದವಾಗಿ ಪಚ್ಚೆಯಾಗಿ ಬಣ್ಣ ಒಣಗಿ ಬಿದ್ದುಕೊಂಡಿರುತ್ತವೆ
ಎತ್ತಿಕೊಳ್ಳಲು ಹೋದರೆ ನೆಲಕ್ಕೆ ಅಂಟಿಕೊಂಡು ನರಳುತ್ತವೆ
ಹಸಿ ಕೊಳಕು

ಡೈನಿಂಗ್ ಟೇಬಲ್ಲಿನ ಊಟಕ್ಕೆ ನಿಶ್ಶಬ್ದದ ರುಚಿ
ಸಾಂಬಾರಿಗೆ ಹಿಂದಿನ ದಿನದ ಸುಳ್ಳಿನ ವಾಸನೆ
ಸಾಮಾಜಿಕ ತಾಣಗಳು ಸಾವಿರ ಕಣ್ಣುಗಳಿಂದ
ದುರುಗುಟ್ಟಿ ನೋಡುತ್ತವೆ ಅಪ್-ಡೇಟಿಗೆ ಕಾಯುತ್ತ

ಮೂವ್ ಆನ್ ಅನ್ನುತ್ತಾನೆ ಥೆರಪಿಸ್ಟು
ದುಃಖ ಎನ್ನುವುದೇನು ನೇರ ದಾರಿಯೇ?
ಅದೊಂದು ಕಾಲುದಾರಿಯೂ ಇರದ ಬೆಟ್ಟ
ಪ್ರತಿಯೊಂದು ಹೆಜ್ಜೆಯೂ
ಸೋಲುಗಳನ್ನು ನೋವುಗಳನ್ನು ಅವಮಾನಗಳನ್ನು
ನೆನಪಿಸುತ್ತಲೇ ಇರುತ್ತದೆ
“ಏಕೆ, ಹೇಗೆ, ನನಗೇ ಯಾಕೆ, ನಾನೇನು ತಪ್ಪು ಮಾಡಿದೆ?”
ಎಂದು ಪ್ರತಿಧ್ವನಿಸುತ್ತವೆ

ಗಾಜಿನಂತೆ ಒಂದೇ ಸಲ ಚೂರು ಚೂರಾಗುವುದಿಲ್ಲ
ಮೊದಲು ನೆಗ್ಗುತ್ತೇವೆ
ಆಮೇಲೆ ನಿಧಾನವಾಗಿ ಸೀಳುತ್ತೇವೆ
ಬಿ ರು ಕು ಬಿಡುತ್ತೇವೆ
ತುಂಡಾ
ಗುತ್ತೇವೆ

ಜಪಾನೀಜರು ಬಿರುಕುಗಳನ್ನು
ಚಿನ್ನದಿಂದ ಕಿನ್ಸುಗಿ ಮಾಡುತ್ತಾರಂತೆ
ಬಿರುಕುಗಳು ಎದ್ದು ಕಾಣುವಂತೆ ಸುಂದರ
ಅಚ್ಚಹೊಸ ಬದುಕನ್ನು ಕಟ್ಟಲು
ಭೂತವನ್ನು ಅಳಿಸಬೇಕಾಗಿಲ್ಲ

ಬಹುಶಃ ಎಲ್ಲವನ್ನೂ
ಮೊದಲಿನಂತೆಯೇ ಜೋಡಿಸಬೇಕಾಗಿಲ್ಲ
ಹೊಸ ಆಕಾರದಲ್ಲೂ
ದೀಪವನ್ನು ಹಚ್ಚಬಹುದು
ಬಿರುಕುಗಳಲ್ಲಿಯೇ
ಪ್ರೀತಿ ಬೆಳಗಬಹುದಲ್ಲವೇ ಸಖಿ?

ಎತ್ತಿಕೊಳ್ಳಬಹುದಾದುದನ್ನು ಎತ್ತಿಕೊಳ್ಳೋಣ
ಒಂದು ನೆನಪಿನ ನಗು
ಕಾರಣವಿಲ್ಲದೆ ಹಿಡಿದ ಕೈ
ವಿನಾಕರಣ ನಗು
ಅಕಾರಣ ಪ್ರೀತಿ
ನಿಧಾನವಾಗಿ ಜೋಪಾನವಾಗಿ
ಒಂದೊಂದಾಗಿ ಒಟ್ಟುಗೂಡಿಸೋಣ

ಅನ್ನೋ ಜನರು

`ನಿನಗೆ ಹೇಗೆ ಬೇಕೋ ಹಾಗೆ ನಗು,
ಆದರೆ ಗಂಡಸರ ಮುಂದೆ ಅಷ್ಟು ಜೋರಾಗಿ ನಗಬೇಡ.

ನಿನಗೇನು ಬೇಕೋ ಹಾಕಿಕೊ,
ಆದರೆ ಸ್ಕರ್ಟನ್ನು ಮೊಣಕಾಲ ಕೆಳಗೆ ಹಾಕಿಕೊ,
ಎದೆಯ ಸೀಳು ಮತ್ತು ಹೊಕ್ಕುಳ ಕಾಣದಂಥ ಟಾಪ್ ಹಾಕಿಕೊ,`

ಎಂದ ಅಮ್ಮನ ಮಾತಿಗೆ ಸುಮ್ಮನೆ ನಕ್ಕೆ.
ಪೇಪರ್ ಓದುತ್ತ ಕೂತ ಅಪ್ಪ ಸಮ್ಮತಿಸುತ್ತಿದ್ದ.

`ನಿನ್ನ ಗಂಡ ಏನೂ ಅನ್ನುವುದಿಲ್ಲವೇನೇ?
ಎಂದು ಮತ್ತೆ ಕೇಳಿದಳು.

`ಮಕ್ಕಳನ್ನೂ ಸಲಹಬಲ್ಲೆ,
ಮನೆಯನ್ನೂ ನಡೆಸಬಲ್ಲೆ,
ವಾಹನವನ್ನೂ ಓಡಿಸಬಲ್ಲೆ,
ಆಫೀಸನ್ನೂ ನಡೆಸಬಲ್ಲೆ,

ಮಣಭಾರದ ಸೀರೆಯುಟ್ಟು
ಕಲ್ಯಾಣಮಂಟಪದಲ್ಲಿ
ದಿನವಿಡೀ ಓಡಾಡಬಲ್ಲೆ,
ಹೈಹೀಲ್ಸ್ ಹಾಕಿಕೊಂಡು
ಕ್ಲಬ್ಬಿನಲ್ಲಿ ಪಾರ್ಟಿಯಲ್ಲಿ
ರಾತ್ರಿಯಿಡೀ ಕುಣಿಯಬಲ್ಲೆ.

ಎಲ್ಲರ ಮಾತು ಕೇಳುವಂತೆ
ನಿನ್ನ ಮಾತನ್ನೂ
ನನ್ನ ಗಂಡನ ಮಾತನ್ನೂ
ಕೇಳಿಸಿಕೊಳ್ಳುತ್ತೇನೆ
(ನನ್ನ ಗಂಡ ನಿನ್ನಂತೆ ನೇರ ಹೇಳುವುದಿಲ್ಲ, ಅಷ್ಟೇ)
ಅನ್ನೋ ಜನರು ಅನ್ನಲಿ ಬಿಡಿ, ಅಮ್ಮ.