ಈ ವಾರ ನಾನು ಬರೆದ ಐದು ಕವನಗಳಿವೆ. ವಿಭಿನ್ನ ರೀತಿಯ ಪ್ರಯತ್ನದ ಕವನಗಳು ಎಂದು ನನ್ನ ಅನಿಸಿಕೆ. ನಿಮ್ಮ ಅನಿಸಿಕೆ, ಪ್ರತಿಕ್ರಿಯೆ ಮತ್ತು ವಿಮರ್ಶೆಗಳನ್ನು ಮರೆಯಬೇಡಿ. ಇಲ್ಲಿರುವ ಎಲ್ಲ ಚಿತ್ರಗಳನ್ನು ಬರೆದದ್ದು ಕೃತಕ ಬುದ್ಧಿಮತ್ತೆ (AI)! – ಕೇಶವ ಕುಲಕರ್ಣಿ
ಸ್ಕ್ರಿಪ್ಟ್

ನನಗೆ ಬೇಕಾದಂತೆ
ನನ್ನ ಬದುಕಿನ ಸ್ಕ್ರಿಪ್ಟ್ ಬರೆಯಬೇಕು
ಆದರೆ ನನ್ನೊಳಗಿನ ಕತೆಗಾರನ ಪಕ್ಕದಲ್ಲಿ
ಕೂತಿದ್ದಾನೆ ನಿರ್ಮಾಪಕ
He needs a hit.
BLOCK BUSTER!
M-O-N-E-Y-S-P-I-N-N-E-R !!
ಹೇಳುತ್ತಾನೆ ಕತೆಗಾರನಿಗೆ,
“ನಿನ್ನಂತೆ ಬರೆದರೆ
ಒಂದೇ ಒಂದು ಥೇಟರು ಸಿಗುವುದಿಲ್ಲ
ಸಿಕ್ಕರೂ ಎರಡನೇ ದಿನ ನೊಣ ಹೊಡೆಯಲೂ ಜನ ಸಿಗುವುದಿಲ್ಲ
ಅವಾರ್ಡು ಬರುತ್ತೆ ಅನ್ನುತ್ತೀಯಾ?
ಆ ಕಾಲವೂ ಮುಗಿಯಿತಯ್ಯಾ
ಅಲ್ಲಿ ಕೂತವರೂ ನನ್ನಂಥವರೇ
ನಿನ್ನ ಭಾಷೆ ನಮಗೆ ಅರ್ಥವಾಗುವುದಿಲ್ಲ
ಅಪ್ಪಿ ತಪ್ಪಿ ಅವಾರ್ಡು ಬಂತು ಅಂದುಕೋ
ಹೊಟ್ಟೆಗೆ ಏನು ಮಾಡ್ತೀಯಾ?
ಹಾಕಿದ ದುಡ್ಡು ಹೇಗೆ ವಾಪಸ್ಸು ತೆಗೀತೀಯಾ?
ಮಾಡಿದ ಸಾಲ ಹೇಗೆ ತೀರಸ್ತೀಯಾ?”
ಕತೆಗಾರ ಬರೆಯುತ್ತಿದ್ದಾನೆ
ನಿರ್ಮಾಪಕ ಹೇಳಿದಂತೆ…
ಪೆಂಡಾಲು ಕಟ್ಟುವ ಹುಡುಗ

ಕತ್ತಲಿನ ಕೊಳಕಲ್ಲಿ ಚರಂಡಿ ಗಲ್ಲಿಗಳಲ್ಲಿ ಚಿಂದಿ ಬಟ್ಟೆಗಳಲ್ಲೇ ಬೆಳೆದ ನನ್ನ
ಕಾಯಿಸಿದೆ ಪ್ರೀತಿಸಿದೆ ಚುಂಬಿಸಿದೆ ಕಾಮಿಸಿದೆ ನಿನ್ನ ಪ್ರೀತಿಗೆ ನನ್ನೇ ಎರಕಹೊಯ್ದೆ
ರದ್ದಿಹಾಳೆಯ ಖಾಲಿ ಜಾಗಗಳ ಮೂಲೆಯಲಿ ನಿನ್ನದೇ ಕನಸುಗಳ ಕವಿತೆಗಾಗಿ
ಬರೆದ ಪದಗಳ ಮೇಲೇ ಪದಗಳನು ಬರೆಬರೆದು ಹಾಳೆಹರಿದಿತ್ತು ಮಸಿಯ ನುಂಗಿ
ನಿನ್ನ ಪ್ರೀತಿಗೆ ನನ್ನ ಮಾತುಗಳ ಮುತ್ತುಗಳು, ನುಣುಪು ಕೊರಳಿಗೆ ನನ್ನ ತೋಳು ಸರಮಾಲೆ
ನಿನ್ನ ಪ್ರೇಮದ ಮದಕೆ ನಾ ಮದಿರೆಯಾದೆ, ನಿನ್ನಿಷ್ಟದಂತೆ ನಾ ಎಲ್ಲ ಮುಚ್ಚಿಟ್ಟೆ
ನನ್ನ ಬಳಿಯಿದ್ದ ಹಣ ವಿದ್ಯೆ ಜಾತಿಗಳಿಂದ ನಿಮ್ಮಪ್ಪ ಬಗ್ಗುವುದೇ ಇಲ್ಲವೆಂದು…
ಅವರಿವರ ಬಳಿಯಿದ್ದ
ಅವುಗಳನ್ನು ಗಳಿಸಲು
ಏನನ್ನೂ ಕದಿಯಲಿಲ್ಲ
ಬಾಗಿಸಲಿಲ್ಲ ಬೆನ್ನನ್ನು
ಮಂಡೆಯೂರಿ ಬಿಕ್ಕಿ ಬೇಡಲಿಲ್ಲ
ಗೋಗೆರೆಯಲಿಲ್ಲ, ಅಳಲಿಲ್ಲ, ಕನಿಕರವ ಬೇಡಲಿಲ್ಲ
ನೀನದನ್ನು ಸೊಕ್ಕಾದರೂ ಅನ್ನು
ತಿಕ್ಕಲುತನವಾದರೂ ಅನ್ನು
ನಿನ್ನ ಮದುವೆಯ ದಿನ
ಯಾವ ಮುಜುಗರವಿಲ್ಲದೇ ಪೆಂಡಾಲು ಕಟ್ಟಿದ್ದೇನೆ
’ಎಲ್ಲ ಮಾನವ ನಿರ್ಮಿತ, ಇದೆಲ್ಲ ಮಾಯೆ’
ಎನ್ನುವ ನಿಮ್ಮಪ್ಪನ ವೇದಾಂತ
ಮಾಡಿದ ಕೆಲಸಕ್ಕೆ ದುಡ್ಡು ಎಣಿಸುವಾಗ ಚೌಕಾಸಿಗಿಳಿದಿತ್ತು
ಅದೇ ಮೊಟ್ಟಮೊದಲ ಬಾರಿಗೆ
ನಾನು ಮುಖವನೆತ್ತಿ ನಿಮ್ಮಪ್ಪನ
ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದ್ದು
ಮುಖಕ್ಕೆ ಉಗಿದು ಬಾಯಿ ಒರೆಸಿಕೊಂಡಿದ್ದು
ನಮ್ಮ ಮನೆಯ ನಾಯಿ

ನಮ್ಮ ಮನೆಯ ನಾಯಿ
ಅಂಗಳದಲ್ಲಿ
ಬಿಸಿಲನ್ನು ಕಾಯಿಸಿಕೊಳ್ಳುತ್ತ
ನೆರಳಿನ ಜೊತೆ ಜಗಳವಾಡುತ್ತ
ಕಿವಿ ಕೆರೆದುಕೊಳ್ಳುತ್ತ
ಮುಚ್ಚಿದ ಗೇಟಿನವರೆಗೂ ಓಡುತ್ತ
ಮತ್ತೆ ತಲಬಾಗಿಲವರೆಗೂ ತೇಗುತ್ತ
ನಾಲಗೆಯಿಂದ ಮೈಯನ್ನೆಲ್ಲ ನೆಕ್ಕಿಕೊಳ್ಳುತ್ತ
ಆಗಾಗ ಆಕಳಿಸಿತ್ತ, ಮೈಮುರಿಯುತ್ತ, ಮೈಕೊಡವುತ್ತ
ಇರಲು
ಆಚೆ ಓಣಿಯ ಬೀದಿನಾಯೊಂದು
ನಮ್ಮ ಮನೆ ಮುಂದಿನ ರಸ್ತೆಯಲಿ
ವಯ್ಯಾರದಲ್ಲಿ ಬರುತ್ತಿರುವ
ವಾಸನೆ ಮೂಗಿಗೆ
ಬಡಿದದ್ದೇ
ಈ ನಮ್ಮ ನಾಯಿ
ತಲೆಯೆತ್ತಿ
ಕಿವಿ ನಿಮಿರಿಸಿ
ಬಾಲ ನಿಗುರಿಸಿ
ಗೇಟಿನವರೆಗೂ ಧಡಪಡಿಸಿ
ಇಸ್ಟಗಲ ಬಾಯಿ ತೆರೆದು
ಬೊಗಳಿದ್ದೇ ಬೊಗಳಿದ್ದು
ಆದರೆ ಆ ನಾಯಿ
ಈ ನಮ್ಮ ನಾಯಿಯನ್ನು
ನೋಡೇ ಇಲ್ಲ ಎನ್ನುವಂತೆ
ತನ್ನ ಪಾಡಿಗೆ ತಾನು
ಕ್ಯಾರೇ ಎನ್ನದೇ
ಆರಾಮವಾಗಿ ನಮ್ಮ ಓಣಿಯನ್ನು
ದಾಟಿ ಹೊರಟುಹೋಯಿತು
ಆ ನಾಯಿ ಕಣ್ಣಿಂದ ದೂರಾಗುವವರೆಗೂ
ಬೊಗಳಿದ ನಮ್ಮ ನಾಯಿ
ಮರಳಿ
ನೆರಳಲ್ಲಿ ಕಾಲು ಚಾಚಿ
ಎಲ್ಲಂದರಲ್ಲಿ ತನ್ನ ಮೈಯ
ನೆಕ್ಕತೊಡಗಿತು
ಇದೆಲ್ಲ ನಡೆಯುತ್ತಲೇ ಇಲ್ಲ
ಅಥವಾ ನಡೆದರೂ ಏನಂತೆ
ಎನ್ನುವ ದಿವ್ಯ ನಿರ್ಲಿಪ್ತತೆಯಲ್ಲಿ
ಅಂಗಳದಲ್ಲೇ ಕುಳಿತಿದ್ದ ನನ್ನ ಅಜ್ಜಿ
ಹೂಬತ್ತಿ ಗೆಜ್ಜೆವಸ್ತ್ರ ಬಸಿಯುತ್ತ
ದಾಸರ ಪದ ಒಟಗುಟ್ಟುತ್ತಿದ್ದಳು,
‘ಬಂದದ್ದೆಲ್ಲ ಬರಲಿ
ಗೋವಿಂದನ ದಯವೊಂದಿರಲಿ’
ಬ್ಯೂಟಿಫುಲ್ ಹುಡ್ಗೀರು

ಈ ಬ್ಯೂಟಿಫುಲ್ ಹುಡ್ಗೀರು ಬಿಎಂಟಿಸಿ ಬಸ್ಸಿದ್ದಂಗೆ
ಕಾದಿದ್ದೂ ಕಾದಿದ್ದೇ!
ಅಗೋ ಒಂದು
ಬಂತು
ನಿಂತು
ಅನ್ನುತ್ತಿರುವಾಗಲೇ
ಒಂದರ ಹಿಂದೆ ಮತ್ತೊಂದು ಮುಗದೊಂದು!
ಯಾವುದು ಫುಲ್ಲು ಯಾವುದು ಎಂಪ್ಟಿ
ಯಾವುದು ಹೋಗೋದು ಎಲ್ಲಿಲ್ಲಿಗೆ
ಟೈಮು ಬಹಳಷ್ಟಿಲ್ಲ ಡಿಸೈಡು ಮಾಡೊಕ್ಕೆ
ಒಂಚೂರು ಮಿಸ್ಟೀಕು ಆಯ್ತೋ
ಆಯ್ತು!
ಏನ್ಮಾಡೋಕಾಗುತ್ತೆ?
ಜಂಪ್ ಮಾಡಿದ್ರೆ ಕಾಲ್ ಮುರೀಬೌದು
ಫುಲ್ ಇದ್ರೆ ನಿಂತು ಕಾಲ್ ನೋಯಬೌದು
ತಪ್ಪು ಬೋರ್ಡಾಗಿದ್ರೆ ಮುಂದಿನ ಸ್ಟಾಪು ಇಳಿಬೌದು
ಖಾಲಿ ಇದ್ರೆ ನಿದ್ದೆ ಮಾಡಬೌದು
ಇಲ್ಲಾ ಕಿಟಕಿಯಿಂದ
ಮಾರುತಿಯಿಂದ ಹಿಡಿದು ಬೆಂಜ್ವರೆಗೆ
ಸಾಗುವ ನೂರಾರು ಕಾರುಗಳನ್ನು
ನೋಡುತ್ತ
ಹೊಟ್ಟೆ ಉರಿಸಿಕೊಳ್ಳಬಹುದು
(ಪ್ರೇರಣೆ: Wendy Cope ಬರೆದ ‘Serious Concerns’ ಸಂಕಲನದ ’Bloody men’ ಕವನ)
ಪಾಪ ಪುಣ್ಯ

ಈ ಭೂಮಿಯಾಚೆ ದೂರದೊಂದು ಗ್ರಹದಲ್ಲಿ
ಜನ ಬದುಕಿದ್ದಾರಂತೆ
ಅಲ್ಲಿ ಸತ್ತವರೆಲ್ಲ ಈ ಭೂಮಿ ಮೇಲೆ
ನಾವು ನೀವಾಗಿ ಹುಟ್ಟುತ್ತಾರಂತೆ
ಅಲ್ಲಿ ಪಾಪ ಮಾಡಿದವರು
ಇಲ್ಲಿ ಬದುಕುತ್ತಾರಂತೆ ಕಷ್ಟಪಟ್ಟು
ಸಾಲೊಲ್ಲ ತಿಂಗಳ ಸಂಬಳ ತಿಂಗಳಿಗೆ
ಸೇದಲ್ಲ ಕುಡದಿಲ್ಲ
ಹೆಂಡತಿಯ (ಅಥವಾ ಗಂಡನ)ಬಿಟ್ಟಿನ್ನೊಬ್ಬರನು ಮುಟ್ಟಿಲ್ಲ
ಮಗನಗಿನ್ನೂ ನೌಕರಿಯಿಲ್ಲ
ಮಗಳಿಗೆ ಮದುವೆಯಾಗಿಲ್ಲ
ಜೊತೆಗಿದೆ ಬಿಪಿ ಸಕ್ಕರೆಕಾಯಿಲೆ
ಆಸ್ಪತ್ರೆಯಲ್ಲಿ ನರಳಿ ತಿಂಗಳುಗಟ್ಟಲೇ
ಸಾಲಬಿಟ್ಟು ಸಾಯುತ್ತಾರೆ
ಮತ್ತೆ ಆ ಲೋಕದಲ್ಲಿ ಹುಟ್ಟುತ್ತಾರೆ
ಅಲ್ಲಿ ಪುಣ್ಯ ಗಳಿಸಿದವರು
ಬೆಳ್ಳಿ ಚಮಚ ಬಾಯಲ್ಲಿಟ್ಟು ಇಲ್ಲಿ ಹುಟ್ಟುತಾರಂತೆ
ಬ್ಲ್ಯಾಕ್ ಮನಿ ಮನೆ ತುಂಬಿ
ಮಗನ ಅಮೇರಿಕಕೆ ಕಳಿಸುತ್ತಾರೆ
ನೆಗಡಿಯಾದರೆ ಸಾಕು
ಅಪೋಲೊ ಆಸ್ಪತ್ರೆ ಸೇರುತ್ತಾರೆ
ಹೆಂಡತಿ (ಅಥವಾ ಗಂಡ)ಯ ಹಿಂದಿಂದೆ
ಮಗಳ (ಅಥವಾ ಮಗನ) ವಯಸಿನ ಸುಂದರಿಯ ಸವರಿ
ಎಪ್ಪತ್ತರಲ್ಲಿ ವಯಾಗ್ರ ನುಂಗಿ ಯಯಾತಿಯಾಗುತ್ತಾರೆ








