ಗ್ರೇಟ್ ಬ್ರಿಟನ್ನಿಗೆ ತುರಾಯಿಯಂತಿರುವ ಸ್ಕಾಟ್ ಲ್ಯಾನ್ಡ್, ಪ್ರಕೃತಿ ಸೌಂದರ್ಯಕ್ಕೂ ಶಿಖರಪ್ರಾಯವಾಗಿದೆ ಈ ದೇಶಕ್ಕೆ ಎನ್ನುವುದರಲ್ಲಿ ಸಂಶಯವಿಲ್ಲ. ಇಲ್ಲಿನ ಉತ್ತರದ ನಗರವಾದ ಇನ್ವರ್ನೆಸ್ ನ ಉತ್ತರಕ್ಕೆ ಗುಡ್ಡ ಹಾಗು ಸರೋವರಗಳೇ (ಇಲ್ಲಿ ಇದಕ್ಕೆ ಲಾಕ್ ಎಂದು ಕರೆಯುತ್ತಾರೆ) ತುಂಬಿರುವ ಹರವಾದ ಭೂ ಪ್ರದೇಶ ಪ್ರಕೃತಿ ಆರಾಧಕರಿಗೆ, ಚಾರಣಿಗರಿಗೆ ಆತ್ಮೀಯವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಈ ಭೂ ಪ್ರದೇಶವನ್ನು ಸುತ್ತಿರುಗಲು ಸ್ಕಾಟ್ ಲ್ಯಾನ್ಡ್ ರೂಟ್ ೫೦೦ ಎಂಬ ರಸ್ತೆಯನ್ನು ನಿರ್ಮಿಸಿ, ಇಲ್ಲಿನ ಪ್ರವಾಸಿ ಇಲಾಖೆಯ ಮುಖಾಂತರ ಪ್ರಚಲಿತಗೊಳಿಸಲಾಗಿದೆ. ಈ ರಸ್ತೆಗೆ ಹಲವು ಟಿಸಿಲುಗಲ್ಲಿದ್ದು, ಕೆಲವೇ ದಿನಗಳಿಂದ, ತಿಂಗಳುಗಳ ಕಾಲ ಈ ಭಾಗದ ವಿಹಂಗಮ ನೋಟವನ್ನೋ, ವಿವರವಾದ ಪರಿಚಯವನ್ನೋ ನಮಗಾದಷ್ಟು ಮಾಡಿಕೊಳ್ಳ ಬಹುದು. ಪತ್ರಿಕೆಯೊಂದರ ಪ್ರವಾಸೀ ವಿಭಾಗದಲ್ಲಿ ಈ ಪಯಣ ಜಗತ್ತಿನ ಅತಿ ಸುಂದರ ಹತ್ತು ರಸ್ತೆ ಪಯಣಗಲ್ಲಿ ಒಂದು ಎಂದು ಓದಿದ್ದೆ. ಹಿತ್ತಲಲ್ಲೇ ರಸ್ತೆ ಪಯಣಕ್ಕೆ ಇಂತಹ ಅವಕಾಶವಿರುವಾಗ ಹೋಗಿಯೇ ಬಿಡೋಣ ಎಂದು ನನ್ನ ಗೆಳೆಯರ ಮುಂದೆ ಪ್ರಸ್ತಾವಿಸಿದೆ. ಗೆಳೆಯರಾದ ಕೇಶವ ಕುಲಕರ್ಣಿ ಹಾಗು ದೇವ್ ಪೈ ಪರಿವಾರದೊಂದಿಗೆ ಹಿಂದೆ ಕೆಲವು ಪ್ರವಾಸಗಳನ್ನು ಜೊತೆಯಲ್ಲಿ ಮಾಡಿದ್ದೆವು. ನಮ್ಮ ಅಭಿರುಚಿಗಳು, ಮಕ್ಕಳ ನಡುವಿನ ಗೆಳೆತನಗಳೂ ಈ ಪ್ರವಾಸಗಳಿಗೆ ಪೂರಕವಾಗಿದ್ದು ಅನುಕೂಲವೇ ಆಗಿತ್ತು. ಇನ್ನೊಬ್ಬ ಗೆಳೆಯ ದಿನೇಶ್ ಯಾವುದೋ ಕಾರಣಕ್ಕಾಗಿ ನಮಗೆ ಸಾಥ್ ನೀಡಲಾಗದು ಎಂದು ಕೈಕೊಟ್ಟ.
ಇಂತಹ ಪ್ರಯಾಣ ಮಾಡಲು ಕೆಲವು ಮುಹೂರ್ತಗಳನ್ನು ಹಾಕಿಕೊಳ್ಳುವುದು ಅವಶ್ಯ ಎಂಬುದು ನಮ್ಮ ಅನುಭವ. ಪ್ರಯಾಣದ ರಸ್ತೆಯ ಸಮೀಕ್ಷೆಯಾಗಬೇಕು. ಈಗ ಅಂತರ್ಜಾಲದಲ್ಲೇ ಈ ಸಮೀಕ್ಷೆ ಸುಲಭ ಸಾಧ್ಯ. ದಾರಿ ಗುರುತು ಹಾಕಿಕೊಂಡರೆ ಸಾಕೇ? ಆ ರಸ್ತೆಯಗುಂಟ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಬೇಕು; ಇಳಿದುಕೊಳ್ಳಲು ವಸತಿ ಗೃಹಗಳ ವ್ಯವಸ್ಥೆಯಾಗಬೇಕು. ಎಲ್ಲಕ್ಕಿಂತಲೂ ಹೆಚ್ಚು ಪ್ರವಾಸದಗುಂಟ ಮೆಲ್ಲಲು, ಮೆಲಕು ಹಾಕಲು ಪ್ರಶಸ್ತವಾದ ಜಾಗಗಳ ಆಯ್ಕೆಯೂ ಆಗಬೇಕು. ಇದ್ಕಕೆಂದೇ ಒಂದು ದಿವಸವನ್ನು ಮೀಸಲಾಗಿಡುತ್ತೇವೆ. ಮೂರು ಲ್ಯಾಪ್ ಟಾಪ್ ಗಳನ್ನು ಇಟ್ಟುಕೊಂಡು, ಚಹಾ ಕುಡಿಯುತ್ತ, ವಿವರವಾದ ಯೋಜನೆ ಸುಮಾರು ಮೂರು ನಾಲ್ಕು ತಿಂಗಳುಗಳ ಮೊದಲು ತಯಾರಾಗುತ್ತದೆ. ವಸತಿ ಗೃಹಗಳ ಆರಕ್ಷಣೆ ಈ ಹಂತದಲ್ಲೇ ಮುಗಿದುಹೋಗುತ್ತದೆ. ಪ್ರೇಕ್ಷಣೀಯ ಸ್ಥಳಗಳ ಆಯ್ಕೆ ರಮಣೀಯರು ಉತ್ಸಾಹದಿಂದ ಮಾಡುವುದರಿಂದ, ಅವರಿಗೆ ಅದರ ಜವಾಬ್ದಾರಿ ಕೊಡುವುದರಿಂದ ಪ್ರವಾಸ ಸುರಳೀತವಾಗುತ್ತದೆ ಎಂಬುದು ನಮ್ಮ ಅನುಭವ.
ಮೇ ತಿಂಗಳ ಕೊನೆಯ ಬ್ಯಾಂಕ್ ಹಾಲಿಡೇ ವಾರಾಂತ್ಯದಲ್ಲಿ ಈ ಪ್ರವಾಸ ಕೈಕೊಳ್ಳುವುದು ಎಂಬ ನಿರ್ಧಾರ ಮಾಡಿದೆವು. ಮಕ್ಕಳ ವಾರ್ಷಿಕ ಪರೀಕ್ಷೆ ಮುಗಿದಿರುವುದರಿಂದ ಅವರಿಗೂ ಶಾಲಾ ಕೆಲಸದಿಂದ ಮನಸ್ಸು ನಿರಾಳವಾಗಿರುವುದು ಇದಕ್ಕೆ ಇನ್ನೊಂದು ಕಾರಣವಾಗಿತ್ತು. ಹೊರಡುವ ಹಿಂದಿನ ದಿನ ರಾತ್ರಿ ಎಲ್ಲರು ಡಾರ್ಬಿಯಲ್ಲಿರುವ ನಮ್ಮ ಮನೆಯಲ್ಲಿ ಒಟ್ಟಾಗುವುದು ಎಂದು ನಿಶ್ಚಯಿಸಿದೆವು. ಪ್ರವಾಸದ ದಿನ ಎರಡು ಕಾರುಗಳಲ್ಲಿ ಹತ್ತು ಜನ ಡಾರ್ಬಿಯಿಂದ ಇನ್ವರ್ನೆಸ್ಸಿಗೆ ಪ್ರಯಾಣ ಮಾಡಿ ತಂಗುವುದು ನಮ್ಮ ಯೋಜನೆ. ಎರಡನೇ ದಿನ ಬೆಳಿಗ್ಗೆ ನಗರಕ್ಕೊಂದು ಸುತ್ತು ಹಾಕಿ, ಗ್ಲೆನ್ ಮೊರಂಜಿ ವ್ಹಿಸ್ಕಿ ಭಟ್ಟಿ ಕೇಂದ್ರಕ್ಕೆ ಭೇಟಿ. ಅದಾದಮೇಲೆ ಡನ್ರೋಬಿನ್ ಕಾಸಲ್ ನೋಡಿ, ತುತ್ತ ತುದಿಯಲ್ಲಿರುವ ಹಳ್ಳಿ ಜಾನ್ ಓ ಗ್ರೋಟ್ಸ್ ನ್ನು ಕಂಡು ಪಕ್ಕದ ಹಳ್ಳಿಯಲ್ಲಿ ತಂಗುವುದೆಂದು ನಿಶ್ಚಯಿಸಿದೆವು. ಮೂರನೇ ದಿನ ಸ್ಕಾಟ್ ಲ್ಯಾನ್ಡ್ ನ ಉತ್ತರ ತೀರದಗುಂಟ ಚಲಿಸಿ, ಪಶ್ಚಿಮ ಭಾಗದಲ್ಲಿ ಕೆಳಗಿಳಿದು ಉಲ್ಲಾಪೂಲ್ ಎಂಬ ಊರಿನಲ್ಲಿ ಮುಕ್ಕಾಂ ಹಾಕಲು ವಸತಿ ಗೃಹದ ಬುಕ್ಕಿಂಗ್ ಮಾಡಿದೆವು. ನಾಲ್ಕನೇ ದಿನ ಉಲ್ಲಾಪೂಲ್ ಹತ್ತಿರದ ನದಿಯ ಕಣಿವೆಯಲ್ಲಿ ನಿರ್ಮಿಸಿರುವ ಪ್ರಕೃತಿಧಾಮವನ್ನು ವೀಕ್ಷಿಸಿ ಮನೆಗೆ ಮರಳುವುದೆಂದು ನಿರ್ಧರಿಸಿದೆವು. ಪ್ರವಾಸದ ಹಿಂದಿನ ದಿನ ನಮ್ಮನೆಯಲ್ಲಿ ಹಬ್ಬದ ವಾತಾವರಣ. ಬೆಳಗ್ಗೆ ಬೇಗ ಎದ್ದು ಹೊರಟಾಗ, ಮಕ್ಕಳ ಕಣ್ಣಲ್ಲಿನ್ನೂ ಜೋಂಪು. ನಮ್ಮಲ್ಲಿಂದ ಸ್ಕಾಟ್ ಲ್ಯಾನ್ಡ್ ಗೆ M6 ಮುಖ್ಯ ಹೆದ್ದಾರಿ. ಮುಕ್ಕಾಲು ಗಂಟೆಯಲ್ಲಿ ಗೆಳೆಯ ದಿನೇಶನ ಮನೆ. ಅಲ್ಲಿಗೇ ನಮ್ಮ ಬೆಳಗಿನ ತಿಂಡಿಗಾಗಿ ದಾಳಿ ಮಾಡುವುದಾಗಿ ಮುನ್ಸೂಚನೆ ಕೊಟ್ಟಿದ್ದೆವು. ತಲುಪಿದಾಗ ಎಲ್ಲರ ಮೆಚ್ಚಿನ ಶಲನ್ ಮಾಡಿದ ಬಿಸಿ ಬಿಸಿ ಮಂಗಳೂರು ಬನ್ಸ್, ಖಡಕ್ ಚಹಾ ನಮ್ಮನ್ನು ಕಾಯುತ್ತಿತ್ತು. M6 ಲ್ಯಾನ್ಕಾಸ್ಟರ್ ದಾಟಿದ ಮೇಲೆ, ಗುಡ್ಡಗಳ ನಡುವೆ ಬಳಕುತ್ತ, ತಬ್ಬಿಕೊಂಡು ಸಾಗುವಾಗ ಬೇಂದ್ರೆ ಅಜ್ಜನ “ಹರನ ತೊಡೆಯಿಂದ ನುಸುಳಿ ಬಾ” ಎಂಬ ಸಾಲು ನೆನಪಾಗುತ್ತದೆ. ಹೆದರ್ ಪೊದೆಗಳ ಹೊದಿಕೆಯಲ್ಲಿ ಮಲಗಿರುವ ನುಣುಪಾದ ಬೆಟ್ಟಗಳ ಸೌಂದರ್ಯ ಹೆದರ್ ಹೂ ಬಿಟ್ಟಾಗ ನೂರ್ಪಾಲು ಹೆಚ್ಚಾಗುತ್ತದೆ. ಹೆದ್ದಾರಿಯಲ್ಲಿ ಸಿಗುವ ಆನಂಡೇಲ್ ಸರ್ವೀಸ್ ಸ್ಥಾನ ಪ್ರಯಾಣಿಗರ ಪಾಲಿಗೆ ಓಯಸಿಸ್. ಇಲ್ಲಿರುವ ಕೆರೆಯನ್ನು ನೋಡುತ್ತಾ, ಹಬ್ಬಿದ ಹಸಿರನ್ನು ಆಸ್ವಾದಿಸುತ್ತ, ಕಾಫಿ ಹೀರುತ್ತ, ರಸ್ತೆಯ ಏಕತಾನತೆಯನ್ನು ಮರೆಯಬಹುದು.
ಮಧ್ಯಾಹ್ನದ ಊಟದ ಸಮಯಕ್ಕೆ ಗ್ಲ್ಯಾಸ್ಗೋ ನಗರದ ಬುಡ ತಲುಪಿದ್ದೆವು. ಊಟದ ನಂತರ ಒಂದು ಚಿಕ್ಕ ನಿದ್ದೆ ಬೇಕೆಂದು ದೇವ್ ನ ಮನಸ್ಸು ಬಯಸುತ್ತದೆ, ಡ್ರೈವ್ ಮಾಡುವಾಗ ಜೋಂಪು ಹತ್ತದಿರಲೆಂದು. ಆತ ಕಾರಿನಲ್ಲಿ ಪವಡಿಸಿದರೆ, ನಮ್ಮ ಕ್ರಿಕೆಟ್ ಹುಚ್ಚಿನ ಚಿಣ್ಣರು (ಕೇಶವ್ ಈ ವಿಷಯದಲ್ಲಿ ಚಿಣ್ಣನೇ) ಸರ್ವಿಸ್ ಸ್ಟೇಷನ್ ಪಕ್ಕದ ಹುಲ್ಲು ಹಾಸಿನಲ್ಲಿ ಆಡಿ ಮೈ ಕೈ ಚುರುಕಾಗಿಸಿಕೊಂಡರು. ಗ್ಲಾಸ್ಗೋ ಸಮೀಪಿಸುತ್ತಿದ್ದಂತೆ ಕಾಣುವ ಗಾಳಿ ಗಿರಣಿಗಳ ಮಂದೆ ಪರ್ಯಾಯ ವಿದ್ಯುಚ್ಛಕ್ತಿ ಕೊಯ್ಲಿನ ಅನುಭವ, ನಮ್ಮ ಕಾರಿನ ಪ್ರದೂಷಣೆ ಇವನ್ನೆಲ್ಲ ತೂಗಿಸಿ ನೋಡುವ ಅವಕಾಶ ಮಾಡಿಕೊಡುತ್ತದೆ. ಹಾಡುಗಳನ್ನು ಕೇಳುತ್ತ, ಸ್ಕಾಟ್ ಲ್ಯಾನ್ಡ್ ನ ಹಸಿರಿನ ಹಾವೇ ಕುಡಿಯುತ್ತ ಸ್ಟರ್ಲಿಂಗ್ ನಗರವನ್ನು ದಾಟುತ್ತಿದ್ದಂತೆ ಹೈಲ್ಯಾನ್ಡ್ ಘಟ್ಟ ಶುರುವಾಗುತ್ತದೆ. ಕಣಿವೆಯ ಬುಡದಲ್ಲಿ ತೆವಳುವ ನದಿಗಳು, ಪಕ್ಕದಲ್ಲಿ ಮಲಗಿರುವ ರೈಲಿನ ಹಳಿಗಳು, ಥಟ್ಟನೆ ಎದುರಾಗುವ ಮೋಡದ ತುಣುಕುಗಳು, ಆಗಾಗ ಮುಖಕ್ಕೆ ಬಡಿಯುವ ತುಂತುರು ಹನಿಗಳು ಯಾವುದೇ ಅರಸಿಕನನ್ನೂ ಭಾವುಕನಾಗಿಸುವ ದೃಶ್ಯಗಳು.
(ನಕ್ಷೆ ಕೃಪೆ : ವಿಕಿಪೀಡಿಯಾ)
ನಮ್ಮ ಮೂಲ ಧ್ಯೇಯ ರೂಟ್ ೫೦೦ನ ಅನ್ವೇಷಣೆ ಯಾಗಿದ್ದರಿಂದ, ಇನ್ವರ್ನೆಸ್ ನಗರದ ಕಾಸಲ್ ದರ್ಶನ ಮುಗಿಸಿ ಟೈನ್ ಎಂಬಲ್ಲಿರುವ ಗ್ಲೆನ್ ಮೊರಂಜಿ ವ್ಹಿಸ್ಕಿ ಭಟ್ಟಿಗೆ ಹೊರಟೆವು. ಗ್ಲೆನ್ ಮೊರಂಜಿ ವ್ಹಿಸ್ಕಿಯ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ವಿಶಿಷ್ಟ ಹಳದಿ ಬಣ್ಣದ ಲೇಬಲ್ ಇದರ ಗುರುತಿನ ಚೀಟಿ, ವ್ಹಿಸ್ಕಿ ಅಭಿಮಾನಿಗಳಿಗೆ ಚಿರಪರಿಚಿತ. ಇದರ ಸುತ್ತಲೂ ಸುಂದರ ಉದ್ಯಾನವನವಿದೆ. ನಾವು ಹೋದ ದಿನ ಇದು ಮುಚ್ಚಿದ್ದರಿಂದ ಭಟ್ಟಿಯ ಒಳಗಡೆ ಹೋಗುವ, ವ್ಹಿಸ್ಕಿಯ ರುಚಿ ಅನುಭವಿಸುವ ಅವಕಾಶದಿಂದ ವಂಚಿತರಾದೆವು. ಮಕ್ಕಳು ಭಟ್ಟಿಯ ಹೊರಗಿನ ಹುಲ್ಲಿನ ದಿಬ್ಬದಿಂದ ಉರುಳಿ ಮಜಾ ತೆಗೆದುಕೊಂಡರು. ಇಲ್ಲಿಗೆ ಬರುವ ಹಾದಿಯಲ್ಲಿ ವಿಶೇಷವಾದದ್ದೇನೂ ಕಾಣಲಿಲ್ಲ. ಗ್ಲೆನ್ ಮೊರಂಜಿಯಿಂದ ಮುಂದಿನ ಹಾದಿ ಮನಮೋಹಕವಾಗಿತ್ತು. ಬಲ ಭಾಗದಲ್ಲಿ ಸಮುದ್ರ ಮರಗಳ ನಡುವೆ ಕಣ್ಣಾಮುಚ್ಚಾಲೆ ಆಡುತ್ತ ತುಂಟ ನಗೆ ಬೀರುತ್ತಿತ್ತು. ಮತ್ತೆ, ಥಟ್ಟನೆ ಖಾರಿಯಾಗಿ ರಸ್ತೆಗೆ ಅಡ್ಡಾಗಿ ಮಲಗುತ್ತಿತ್ತು. ಇದೇನು ಅಲೆಗಳ ಅಬ್ಬರದ ಸಮುದ್ರವಲ್ಲ, ನಮ್ಮಲ್ಲಿ ನದಿಯೊಂದು ಅಡ್ಡ ಬಂದಂತನಿಸುತ್ತದೆ.
(ಖಾರಿಯ ನೋಟ)
(ಗ್ಲೇನ್ ಮೊರಂಜಿ ಭಟ್ಟಿಯ ಪ್ರವೇಶದ್ವಾರ)
ಡನ್ರೋಬಿನ್ ಕಾಸಲ್ : ಸದರ್ಲೆಂಡ್ ಎಂಬ ವಂಶಕ್ಕೆ ಸೇರಿದ ಈ ಅರಮನೆ ರೂಟ್ ೫೦೦ ರಲ್ಲಿರುವ ಎರಡು ಪ್ರಮುಖ ಮಾನವ ನಿರ್ಮಿತ ರಚನೆಗಳಲ್ಲಿ ಒಂದೆಂಬುದು ನನ್ನ ಅಭಿಪ್ರಾಯ. ಡಿಸ್ನಿ ಅರಮನೆಯನ್ನು ಹೋಲುವ ರಚನೆ ಇದಾಗಿದ್ದು, ಯಾವುದೇ ಪಾಶ್ಚಾತ್ಯ ಪಾಳೇಗಾರರ ನಿವಾಸದಂತೇ ಇದೆ. ೧೫ನೇ ಶತಮಾನದಲ್ಲಿ ನಿರ್ಮಿತ ಅರಮನೆಯ ಒಳ ಹೊರಗನ್ನು ನೋಡುವ ಅವಕಾಶವಿದೆ. ದಿಬ್ಬದ ಮೇಲಿರುವ ಅರಮನೆ, ಸಮುದ್ರ ವೀಕ್ಷಣೆಗೆ ಆಯಕಟ್ಟಿನ ಜಾಗದಲ್ಲಿದೆ. ಬುಡದಲ್ಲಿರುವ ಫ್ರೆಂಚ್ ಪ್ರಭಾವಿತ ತೋಟ ಹಸಿರಾಗಿ ನಳನಳಿಸುತ್ತಿತ್ತು. ಇಲ್ಲಿ ನಡೆಯುವ ಹದ್ದು-ಗಿಡುಗಗಳ ಪ್ರದರ್ಶನ ನಮಗೆ ಈ ಭವ್ಯ ಪಕ್ಷಿಗಳನ್ನು ಮುಟ್ಟಿ ಮಾತಾಡಿಸುವ ಅವಕಾಶ ಮಾಡಿಕೊಟ್ಟಿತು, ಮಕ್ಕಳಿಗೆ ಇದು ಉತ್ತಮ ಅನುಭವ.
ಡನ್ರೋಬಿನ್ ಕಾಸಲ್ ನಿಂದ ಜಾನ್ ಓ ಗ್ರೋಟ್ಸ್ ಗೆ ಹೋಗುವ ಹಾದಿ ರುದ್ರರಮಣೀಯವಾದದ್ದು. ರಸ್ತೆಯ ಬಲಬದಿಗೆ ಆಳವಾದ ಪ್ರಪಾತದ ಬುಡದಲ್ಲಿ ಸಮುದ್ರ ಬಾಯ್ತೆರೆದು ಕಾಯುತ್ತಿರುತ್ತದೆ. ಈ ರಸ್ತೆಗಳ ತಿರುವುಗಳು ನನಗೆ ಖಂಡಾಲಾ ಘಾಟಿಯನ್ನು ನೆನಪಿಸಿದವು. ಮಧ್ಯದಲ್ಲಿ ವಿಕ್ ಎಂಬ ಪುಟ್ಟ ಊರೊಂದು ಸಿಗುತ್ತದೆ. ಇಲ್ಲಿ ಬ್ರಿಟನ್ನಿನ ಉತ್ತರ ತುದಿಯ ಆಸ್ಪತ್ರೆ ಇದೆ (ಶೆಟ್ ಲ್ಯಾನ್ಡ್ ಆಸ್ಪತ್ರೆ ದ್ವೀಪ ಸಮೂಹಗಳಲ್ಲಿದ್ದು, ವಿಕ್ ನ ಆಸ್ಪತ್ರೆ ಬ್ರಿಟನ್ನಿನ ಮುಖ್ಯ ಭಾಗದ ಉತ್ತರ ತುದಿಯಲ್ಲಿದೆ). ೧೯೯೯ ರಲ್ಲಿ ಉದ್ಯೋಗಾರ್ಥಿಯಾಗಿ ಗುಜರಾಯಿಸಿದ ನೂರಾರು ಆಸ್ಪತ್ರೆಗಳ ಲಿಸ್ಟಿನಲ್ಲಿ ವಿಕ್ ಆಸ್ಪತ್ರೆಯೂ ಇದ್ದದ್ದು ನೆನಪಾಯಿತು. ಆಗ, ನಾನೊಮ್ಮೆ ಈ ಊರನ್ನು ಹಾದು ಹೋಗುತ್ತೇನೆಂದೂ ಊಹಿಸಿರಲಿಲ್ಲ.
ಜಾನ್ ಓ ಗ್ರೋಟ್ಸ್ : ಸಾಹಸ ಪ್ರಿಯರಿಗೆ, ಆಂಗ್ಲರಿಗೆ, ಇಲ್ಲಿ ನೆಲೆಸಿರುವ ಪರಕೀಯರಿಗೆ ಈ ಊರು ಪರಿಚಿತ. ಇದು ಬ್ರಿಟನ್ನಿನ ತುತ್ತ ತುದಿಯ ಊರು. ನೈಋತ್ಯ ಮೂಲೆಯಲ್ಲಿರುವ ಲ್ಯಾನ್ಡ್ಸ್ ಎಂಡ್ ನಿಂದ ಇಲ್ಲಿಗೆ ಸಾಹಸದ ತೆವಲಿನವರು, ಉತ್ತಮ ಕೆಲಸಕ್ಕೆ ಚಂದಾ ಎತ್ತುವವರು ನಡೆದೋ, ಸೈಕಲ್ ಸವಾರರಾಗಿ ಬರುವುದು ವಾಡಿಕೆ. ಇದು ಚಿಕ್ಕ ಮೀನುಗಾರಿಕಾ ಬಂದರು. ಇಲ್ಲಿಂದ ಒರ್ಕ್ನಿ ದ್ವೀಪಗಳಿಗೆ ಹೋಗಲು ಅನುಕೂಲತೆ ಇದೆ. ಇಲ್ಲಿ ನಿಲ್ಲಿಸಿರುವ ಕೈಕಂಬ ಜಗತ್ತಿನ ಇತರ ಪ್ರಮುಖ ನಗರಗಳಿಗಿರುವ ದೂರವನ್ನು, ದಿಕ್ಸೂಚಿಯಾಗಿ ಇಲ್ಲಿನ ನೀರವತೆಯಲ್ಲೂ ನಗರಗಳ ಗಿಜಿಗಿಜಿಯನ್ನು ಮಾರ್ದನಿಸುವ ಪ್ರಯತ್ನ ಮಾಡುತ್ತದೆ. ನನಗೆ ಪಕ್ಕದ ದಿಬ್ಬದಾಚೆ ಸಮುದ್ರದಲ್ಲಿ ಶತಮಾನಗಳ ಕೊರೆತದ ಪರಿಣಾಮವಾಗಿ ಉದ್ಭವಿಸಿದ ಮೂರು ಸಹೋದರಿ ಶಿಖರಗಳು ಮುಖ್ಯ ಆಕರ್ಷಣೆ ಎನಿಸಿತು. ಸೂರ್ಯೋದಯದ ಕಾಲದಲ್ಲಿ ಇಲ್ಲಿನ ನೋಟ ಅದ್ಭುತವಾಗಿದ್ದೀತು. ನಾವು ತಲುಪಿದಾಗ ಸೂರ್ಯನ ಕಿರಣಗಳು ಸಹೋದರಿಯರ ಬೆನ್ನನ್ನು ಮುತ್ತಿಕ್ಕುತ್ತಿದ್ದವು. ಇಲ್ಲೇ ಹತ್ತಿರದ ಊರೊಂದರಲ್ಲಿ ಹೋಟೆಲ್ ಕಾದಿರಿಸಿಟ್ಟಿದ್ದೆವು ರಾತ್ರಿ ತಂಗಲು. ಪಕ್ಕದಲ್ಲೊಂದು ಬಾಂಗ್ಲಾ ದೇಶದವರ ಊಟದ ಹೋಟೆಲ್ ಇತ್ತು. ಅದು ರಂಜಾನ್ ತಿಂಗಳು. ಅಲ್ಲಿನ ಕೆಲಸದವರು ತಮ್ಮ ಸಂಜೆಯ ಪ್ರಾರ್ಥನೆ ಮುಗಿಸಿ ಸ್ವಾದಿಷ್ಟ ಭೋಜನ ಆದರದಿಂದ ಬಡಿಸಿದ್ದು ನನಗಿನ್ನೂ ಕಣ್ಮುಂದೆ ನಿಂತಿದೆ.
ಇಲ್ಲಿಂದ ಉಲ್ಲಾಪೂಲ್ ನ ಯಾನವನ್ನು ಶಬ್ದಗಳಿಂದ ಬಣ್ಣಿಸಲಸದಳ. ಮುಗಿಲ ಮುತ್ತುವ ಬೋಳು ಗುಡ್ಡಗಳು, ಅವುಗಳ ಪಾದ ತೊಳೆಯುವ ನಿರ್ಮಲ ನೀರಿನ ತೊರೆಗಳು, ದಾರಿಯುದ್ದಕ್ಕೂ ಕಾಣುವ ಪಚ್ಚೆ ಬಣ್ಣದ ಸಮುದ್ರ, ನಿಷ್ಕಲ್ಮಶ ಶುಭ್ರ ನಿರ್ಜನ ತೀರ ಯಾವುದನ್ನ ವರ್ಣಿಸುವುದು, ಯಾವುದನ್ನ ಬಿಡುವುದು? ಎಲ್ಲವೂ ಎಸ್. ದಿವಾಕರರು ಹೇಳುವಂತೆ ಕ್ಲೀಷೆಗಳಲ್ಲೇ ಕೊನೆ ಗಂಡೀತು. ಶಬ್ದಗಳ ಬದಲು ಚಿತ್ರಗಳನ್ನೇ ನಿಮ್ಮೆದುರಿಡುವೆ. ನಿಮಗನಿಸಿದಂತೆ ವರ್ಣಿಸಿಕೊಳ್ಳಬಹುದು. ದಾರಿಯಲ್ಲಿ ಸಿಕ್ಕಿದ ತೀರದಲ್ಲಿಳಿದಾಗ ತೀರದ ಮೇಲೆ ಝಿಪ್ ವಯರ್ ಮೇಲೆ ಜಾರುವ ಸಿಕ್ಕಿದ್ದು ಅವಕಾಶ ಅಪುರ್ವವಾಗಿತ್ತು. ಇಲ್ಲಿ ತೀರದ ಮೇಲೆ ಆಡಿದ ಕ್ರಿಕೆಟ್ ಆಟ ನಮ್ಮ ಜೀವನದಲ್ಲಿ ಜಗತ್ತಿನ ಉತ್ತರ ತುದಿಯಲ್ಲಿ ಆಡಿದ ದಾಖಲೆಯಾಗಿದೆ.
ಹಾದಿಯಲ್ಲಿ ಸಿಗುವ ಕೇಯರ್ನ್ ಭಾಯನ್ ಲಾಕ್ ಮೇಲೆ ಕಟ್ಟಿರುವ ಕೈಲೆಸ್ಕು ಸೇತುವೆ ಇನ್ನೊಂದು ಮಾನವ ನಿರ್ಮಿತ ರಚನೆಗಳಲ್ಲಿ ನೋಡುವಂಥದ್ದು ಈ ಭೂಭಾಗದಲ್ಲಿ. ಇದರ ಚಿತ್ರ ಮೇಲಿದೆ.
ಉಲ್ಲಾಪೂಲ್ ತಲುಪಿದಾಗ ಸರಿಸುಮಾರು ಮಧ್ಯರಾತ್ರಿ. ಅಲ್ಲಿನ ಹೊಟೆಲ್ ಲಾಕ್ ಒಂದರ ತೀರದಲ್ಲಿತ್ತು. ಆ ಹೊತ್ತಿನಲ್ಲಿ ಕಂಡ ಚಿತ್ತಾರದ ಆಗಸದ ಚಿತ್ರ ನಾನೆಂದೂ ಮರೆಯಲಾರೆ. ಆ ಚಿತ್ರವನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯುವಾಗ ಸ್ಕಾಟ್ ಲ್ಯಾಂಡಿನ ವಿಶೇಷ ನುಸಿ (ಮಿಡ್ಜಸ್) ಗಳ ದಾಳಿಯನ್ನೂ ಮರೆಯಲಾರೆ.
ರೂಟ್ ೫೦೦ ರ ಕೊನೆಯ ಭಾಗವನ್ನು ಸಮಯಾಭಾವದಿಂದ ಮೊಟಕುಗೊಳಿಸಿದರೂ ಸುಮಾರು ೯೦% ಭಾಗವನ್ನು ಕ್ರಮಿಸಿ, ಮನಸೋ ಇಚ್ಛೆ ಆನಂದಿಸಿದ್ದಕ್ಕೆ ಮಕುಟವಿಟ್ಟಿದ್ದು ಗೆಳೆಯರ ಗುಂಪಿನ ಒಡನಾಟ.
ನಾನು `ಕಿಲಿಮಾಂಜಾರೋ` ಎನ್ನುವ ಹೆಸರನ್ನು ಮೊಟ್ಟಮೊದಲು ಕೇಳಿದ್ದು, ಆರನೇ ಇಯತ್ತೆಯಲ್ಲಿ ನಾನು ಭಾಗವಹಿಸಿದ ಅಂತರಶಾಲಾ ರಸಪ್ರಶ್ನೆಯ ಸ್ಪರ್ಧೆಯಲ್ಲಿ: `ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ ಯಾವುದು?` ಎನ್ನುವುದು ಪ್ರಶ್ನೆ. ಮೌಂಟ್ ಎವರೆಸ್ಟ್ ಎನ್ನುವುದು ಪ್ರಪಂಚದ ಅತ್ಯಂತ ಎತ್ತರದ ಪರ್ವತ ಅನ್ನುವುದನ್ನು ಬಿಟ್ಟರೆ ಬೇರೆ ಪರ್ವತಗಳ ಬಗ್ಗೆ ಏನೂ ಗೊತ್ತಿರಲಿಲ್ಲ. ಕಿಲಿಮಾಂಜಾರೋ ಎನ್ನುವುದು ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ ಎನ್ನುವುದು ಗೊತ್ತಾದದ್ದೇ ಅವತ್ತು. ಸದ್ಯ, ಆ ಪ್ರಶ್ನೆ ಬೇರೆ ತಂಡಕ್ಕೆ ಬಂದಿತ್ತು ಮತ್ತು ಆ ತಂಡಕ್ಕೂ ಸರಿಯಾದ ಉತ್ತರ ಗೊತ್ತಿರಲಿಲ್ಲ ಎನ್ನುವುದು ಬಹಳ ಖುಷಿಕೊಟ್ಟಿತ್ತು, ಆದರೆ ನನಗೆ ಉತ್ತರ ಗೊತ್ತಿರಲಿಲ್ಲ ಎನ್ನುವ ಬಗ್ಗೆ ಖೇದವೂ ಆಗಿತ್ತು. ಅವತ್ತು ಸಂಜೆ ಮನೋರಮಾ ಇಯರ್ ಪುಸ್ತಕದಲ್ಲಿ ಕಿಲಿಮಾಂಜಾರೋ ಬಗ್ಗೆ ಓದಿದ್ದು.
ನಾನಾಗ ಪಿಯುಸಿಯಲ್ಲಿದ್ದೆ. ಹೆಮಿಂಗ್ವೆಯ `ಓಲ್ಡ್ ಮ್ಯಾನ್ ಆಂಡ್ ಸೀ` ಎನ್ನುವ ನೀಳ್ಗತೆಯ ಬಗ್ಗೆ ಲಂಕೇಶ್ ತಮ್ಮ `ಮರೆಯುವ ಮುನ್ನ`ದಲ್ಲಿ ಬರೆದಿದ್ದರು. ಗ್ರಂಥಾಲಯದಲ್ಲಿ ಹುಡುಕಿದಾಗ ಹೆಮಿಂಗ್ವೇಯ ಆ ಪುಸ್ತಕದ ಜೊತೆ ಅವನ ಇನ್ನೊಂದು ಕಥಾಸಂಕಲನವೂ ಸಿಕ್ಕಿ, ಅದರಲ್ಲಿ `ದ ಸ್ನೋಸ್ ಆಫ್ ಕಿಲಿಮಾಂಜಾರೋ` ಎನ್ನುವ ಕತೆಯ ತಲೆಬರಹವನ್ನು ನೋಡಿವವರೆಗೂ ಮತ್ತೆ ಕಿಲಿಮಾಂಜಾರೋದ ನೆನಪೇ ಇರಲಿಲ್ಲ.
ಇಂಗ್ಲೆಂಡಿಗೆ ಬಂದ ಮೇಲೆ ಕಿಲಿಮಾಂಜಾರೋ ಎನ್ನುವ ಹೆಸರು ಮತೆ ಮತ್ತೆ ಕೇಳಲಾರಂಭಿಸಿತು. ಎ ಶ್ರೇಣಿಯಲ್ಲಿ ಓದುವ ಮಕ್ಕಳನ್ನು ಕರೆದುಕೊಂಡು ಕೆಲವು ಖಾಸಗಿ ಶಾಲೆಯವರು ಕಿಲಿಮಾಂಜಾರೋಗೆ ಹೋಗುವಾಗ, ಹೋಗಿ ಬಂದ ಮೇಲೆ ಆ ಫೋಟೋಗಳನ್ನು ನೋಡಿದಾಗ, ಕಿಲಿಮಾಂಜಾರೋ ಎನ್ನುವುದು ಹದಿಹರೆಯದವರು ಮಾತ್ರ ಹತ್ತಬಲ್ಲ ಪರ್ವತ ಎಂದುಕೊಂಡಿದ್ದೆ.
`ಕಿಲಿಮಾಂಜಾರೋ`ವನ್ನು ಕೆಲವು ವರ್ಷಗಳ ಹಿಂದೆ ವಸುಧೇಂದ್ರ ಬರೆದ `ಮೋಹನಸ್ವಾಮಿ` ಕಥಾಸಂಕಲನದಲ್ಲಿ ಓದಿದೆ. ಆ ಕಥೆ ನನ್ನನ್ನು ತುಂಬ ಕಾಡಿತ್ತು. ಪರ್ವತದ ಚಾರಣ ಮನುಷ್ಯನಿಗೆ ತನ್ನನ್ನು ತಾನು ಕಂಡುಕೊಳ್ಳಲು ಅಥವಾ ತೆರೆದುಕೊಳ್ಳಲು ಸಾಧ್ಯವಾಗುವ ಸಾಧ್ಯತೆಯ ಬಗ್ಗೆ ಪ್ರಶ್ನೆ ಎತ್ತುವ ಕಥೆ. ಆ ಕಥೆಯಲ್ಲಿ ಕಿಲಿಮಾಂಜಾರೋ ಪರ್ವತದ ಬಗ್ಗೆ ಮತ್ತು ಚಾರಣದ ಬಗ್ಗೆ ಕೆಲವು ವಿವರಗಳು ಬರುತ್ತವೆ. ಓಹೋ, ಇದು ಬರೀ ಚಿಕ್ಕ ವಯಸ್ಸಿನವರಿಗೆ ಮಾತ್ರವಲ್ಲ, ನಾನೂ ಮಾಡಬಹುದು ಎನಿಸಿದ್ದು ಆಗಲೇ!
ನನ್ನ ಮಿತ್ರರೊಬ್ಬರಲ್ಲಿ ಮಾತನಾಡುವಾಗ ಆಗಾಗ ನಾವೆಲ್ಲ ಸೇರಿ ಕಿಲಿಮಾಂಜಾರೋಗೆ ಹೋಗಬೇಕು, ಎವರೆಸ್ಟ್ ಅಡಿಗೆ ಹೋಗಬೇಕು ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದೆವು. ಇಂಗ್ಲೆಂಡಿನ ಪೀಕ್ ಡಿಸ್ಟ್ರಿಕ್ಟ್ ಮತ್ತು ವೇಲ್ಸಿನ ಸ್ನೋಡೋನ್ ಹತ್ತಿ ಇಳಿದಿದ್ದನ್ನು ಬಿಟ್ಟರೆ ಯಾವ ಚಾರಣವನ್ನೂ ಮಾಡಿದವನಲ್ಲ. ನಾನು ಉತ್ತರ ಕರ್ನಾಟಕದ ಬಯಲುಸೀಮೆಯ ಬರಭೂಮಿಯವನು; ಗುಡ್ಡಗಾಡುಗಳಲ್ಲಿ ಹುಟ್ಟಿದವನೂ ಅಲ್ಲ, ಬೆಳೆದವನೂ ಅಲ್ಲ; ಪರ್ವತಗಳು, ಕಾಡುಗಳು ನನ್ನನ್ನು ಕಾಡುವುದೂ ಇಲ್ಲ. ಆದರೂ ನನ್ನ `ಬಕೆಟ್ ಲಿಸ್ಟ್`ನಲ್ಲಿ, ಕಿಲಿಮಾಂಜಾರೋವನ್ನು ಬರೆದುಕೊಂಡಿದ್ದೆ. ಆದರೆ ನಾನೂ ಕಿಲಿಮಾಂಜಾರೋ ಪರ್ವತವನ್ನು ಹತ್ತಿ ಸುರಕ್ಷಿತವಾಗಿ ಇಳಿದು ಬರುವೆನೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.
ಆದರೆ ಈಗ ಆರೆಂಟು ತಿಂಗಳ ಹಿಂದೆ, ನನ್ನ ಮಿತ್ರನೊಬ್ಬ ‘(No) Country for Old Men’ ಎನ್ನುವ ವಾಟ್ಸ್ಯಾಪ್ ಗ್ರುಪ್-ಅನ್ನು ನಲವತ್ತು ದಾಟಿದ ತನ್ನಂಥ ಮಧ್ಯವಯಸ್ಕರಿಗಾಗಿ ಶುರುಮಾಡಿ, ಅದರಲ್ಲಿ ನನ್ನನ್ನೂ ಸೇರಿಸಿದ. ಎರಡು ತಿಂಗಳಿಗೊಮ್ಮೆ ಬರೀ ಗಂಡಸರೇ ಸೇರಿ ಎಲ್ಲಾದರೂ ಯುನೈಟೆಡ್ ಕಿಂಗ್ಡಮ್ಮಿನಲ್ಲಿ ಟ್ರೆಕಿಂಗ್ ಹೋಗುವುದು, ಆ ನೆಪದಲ್ಲಿ ಪಬ್ಬಿಗೆ ಹೋಗಿ ಕುಡಿದು ತಿಂದು ಬರುವುದು, ಇದರ ಮುಖ್ಯ ಉದ್ದೇಶ. ಈ ಗುಂಪಿನಲ್ಲಿ ಕಿಲಿಮಾಂಜಾರೋದ ಕನಸುಗಳೆದ್ದು ನನ್ನನ್ನೂ ತಟ್ಟಿದವು. ಅಷ್ಟು ಜನರ ಗುಂಪಿನಲ್ಲಿ ಗೋವಿಂದನಾದೆ.
ಕಿಲಿಮಾಂಜಾರೋದ ಕಿರುಪರಿಚಯ:
ಕಿಲಿಮಾಂಜಾರೋ ಆಫ್ರಿಕಾ ಖಂಡದ ತಾಂಜಾನಿಯಾ ದೇಶದಲ್ಲಿರುವ ಪರ್ವತ. ಇದೊಂದು ಜ್ವಾಲಾಮುಖಿ ಪರ್ವತ. ಆಫ್ರಿಕಾ ಖಂಡದ ಅತ್ಯಂತ ಎತ್ತರ ಪರ್ವತ, ಜಗತ್ತಿನ ಅತ್ಯಂತ ಎತ್ತರದ ಒಂಟಿ ಪರ್ವತ. ಜಗತ್ತಿನ ನಾಲ್ಕನೇ ಎತ್ತರದ ಪರ್ವತ.
ಈ ಪರ್ವತಕ್ಕೆ ಮೂರು ಶಿಖರಗಳಿವೆ: ಕಿಬೋ, ಮಾವೆಂಝಿ ಮತ್ತು ಶಿರಾ. ಇದರಲ್ಲಿ ಕಿಬೋ ಎಲ್ಲಕ್ಕಿಂತ ಎತ್ತರದಲ್ಲಿರುವ ಶಿಖರ ಮತ್ತು ಎಲ್ಲರೂ ಹತ್ತುವುದೂ ಇದನ್ನೇ. ಜಗತ್ತಿನ ಅತ್ಯಂತ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟಿಗೆ ಹೋಲಿಸಿದರೆ ಕಿಲಿಮಾಂಜಾರೋ ಅದಕ್ಕಿಂತ ೨೯೫೫ ಮೀಟರ್ ಚಿಕ್ಕದು. ಕಿಲಿಮಾಂಜಾರೋ ಸಮುದ್ರದ ಮಟ್ಟದಿಂದ ೫೮೯೫ ಮೀಟರ್ (ಹತ್ತಿರ ಆರು ಕಿಲೋಮೀಟರ್) ಎತ್ತರದಲ್ಲಿದೆ, ಅಡಿಗಳಲ್ಲಿ ಲೆಕ್ಕ ಹಾಕಿದರೆ ಸುಮಾರು ೨೦ ಸಾವಿರ ಅಡಿಗಳು. ಮೆಟ್ಟಿಲುಗಳ ಲೆಕ್ಕದಲ್ಲಿ ಹೇಳಿದರೆ ಸುಮಾರು ೨೫ ರಿಂದ ೨೮ ಸಾವಿರ ಮೆಟ್ಟಿಲುಗಳು. ಇಂಗ್ಲೆಂಡಿನ ದೊಡ್ಡ ಕಟ್ಟಡಗಳನ್ನು ತೆಗೆದುಕೊಂಡರೆ, ಒಂದು ಅಂತಸ್ತಿನಿಂದ ಇನ್ನೊಂದು ಅಂತಸ್ತಿಗೆ ಹೋಗಲು ಸುಮಾರು ೨೫ ಮೆಟ್ಟಿಲುಗಳಿರುತ್ತವೆ. ಅಂದರೆ ಈ ಪರ್ವತವನ್ನು ಹತ್ತುವುದು ಎಂದರೆ ಒಂದು ಸಾವಿರ ಮಹಡಿಯ ಕಟ್ಟಡವನ್ನು ಹತ್ತಿದಂತೆ! ಬರೀ ಮೇಲೆ ಹತ್ತುವುದಲ್ಲ, ಮುಂದೆ ಕೂಡ ನಡೆಯಬೇಕಲ್ಲ! ಬೆಟ್ಟದ ತಪ್ಪಲಿನಿಂದ ತುದಿಯನ್ನು ಮುಟ್ಟಲು ಒಟ್ಟು 40 ಕಿಲೋಮೀಟರ್ (೨೫ ಮೈಲುಗಳು, ಹತ್ತಿರ ಫುಲ್ ಮ್ಯಾರಥಾನ್), ಮತ್ತು ಅಷ್ತೇ ಇಳಿಯಬೇಕು, ಒಟ್ಟು ೮೦ ಕಿಲೋಮೀಟರಿನ ದಾರಿ. ಇದನ್ನು ನಾಲ್ಕರಿಂದ ಏಳುದಿನದವರೆಗೆ ಕ್ರಮಿಸಲಾಗುತ್ತದೆ.
ಕಿಲಿಮಾಂಜಾರೋ ಪರ್ವತವನ್ನು ಮೊಟ್ಟಮೊದಲು ಹತ್ತಿದ ಲಿಖಿತ ದಾಖಲೆ ಮಾಡಿರುವುದು ೧೮೮೯ರಲ್ಲಿ ಜರ್ಮನಿಯ ಜೊಹಾನ್ನೆಸ್ ರೆಬ್ಮನ್. ಅಂದಿನಿಂದ ಇಂದಿನವರೆಗೆ ಲಕ್ಷಾಂತರ ಜನರು ಈ ಪರ್ವತದ ಶೃಂಗವನ್ನು ಮುಟ್ಟಿ ಬಂದಿದ್ದಾರೆ. ಭೂಮಧ್ಯರೇಖೆಯ ಹತ್ತಿರದಲ್ಲಿದ್ದರೂ ಪರ್ವತದ ತುದಿಯಲ್ಲಿ ಹಿಮಗಡ್ಡೆಗಳಿವೆ. ಮೊದಲಿನ ಐತಿಹಾಸಿಕ ದಾಖಲೆಯಿಂದ ಇಂದಿನವರೆಗೆ ಹಿಮದ ಗುಡ್ಡೆಗಳು ಕಡಿಮೆಯಾಗುತ್ತ ಬಂದಿವೆ ಮತ್ತು ೨೦೩೫ರ ಹೊತ್ತಿಗೆ ಸಂಪೂರ್ಣವಾಗಿ ಮಾಯವಾಗಬಹುದು ಎನ್ನುವುದು ವಿಜ್ಞಾನಿಗಳ ಲೆಕ್ಕಾಚಾರ.
ಮೋಶಿ ಎನ್ನುವ ಊರು ಕಿಲಿಮಾಂಜಾರೋ ಪರ್ವತದ ತಪ್ಪಲಿನಲ್ಲಿದೆ. ಕೇವಲ ೪೦ ಕಿಲೋಮೇಟರ್ ದೂರದಲ್ಲಿ `ಕಿಲಿಮಾಂಜಾರೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ`ವಿದೆ.
ದಾರಿ ಯಾವುದಯ್ಯ, ಕಿಲಿಮಾಂಜಾರೋವಿಗೆ?
ಈ ಮಹಾನ್ ಪರ್ವತದ ತುದಿಯನ್ನು ಮುಟ್ಟಲು ಬಹಳಷ್ಟು ದಾರಿಗಳಿವೆ. ನಾಲ್ಕರಿಂದ ಏಳು ದಿನಗಳವರೆಗೆ ಈ ದಾರಿಗಳು ಶಿಖರದ ತುದಿಗೆ ಕರೆದುಕೊಂಡು ಹೋಗಿ ಇಳಿಸಿಕೊಂಡು ಬರುತ್ತವೆ. ಕೊಕೋಕೋಲಾ ಮಾರ್ಗ, ಮರಂಗು ಮಾರ್ಗ, ಲೆಮೊಶೋ ಮಾರ್ಗ ಇತ್ಯಾದಿ ಮಾರ್ಗಗಳಿವೆ. ನಮ್ಮ ಪ್ರವಾಸದ ಉಸ್ತುವಾರಿ ಹೊತ್ತ ಸಂಸ್ಠೆಯು ಏಳು ದಿನಗಳ ಚಾರಣವನ್ನು ನಿಗದಿಪಡಿಸಿತು. ಹೆಚ್ಚು ದಿನ ತೆಗೆದುಕೊಂಡಷ್ಟೂ ಕಡಿಮಯಾಗುವ ಆಮ್ಲಜನಕಕ್ಕೆ ಹೊಂದಿಕೊಳ್ಳಲು ಅನುಕೂಲವಾಗುತ್ತದೆ ಮತ್ತು ಪರ್ವತದ ತುದಿಯನ್ನು ತಲುಪುವ ಸಾಧ್ಯತೆಗಳು ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ನಮಗೆ ಏಳು ದಿನಗಳ ಚಾರಣವನ್ನು ಸೂಚಿಸಿದರು. ಈ ದಾರಿಗೆ `ಮಚಾಮೆ ಮಾರ್ಗ` ಎಂದು ಕರೆಯುತ್ತಾರೆ.
ಮೊದಲ ದಿನ:
ಮಚಾಮೆ ದ್ವಾರದಿಂದ ನಮ್ಮ ಪ್ರಯಾಣ ಆರಂಭ. ಮಚಾಮೆ ದ್ವಾರವು ಸಮುದ್ರದ ಮಟ್ಟದಿಂದ ೧೮೦೦ ಮೀಟರ್ ಎತ್ತರದಲ್ಲಿದೆ. ಅಲ್ಲಿಂದ ಸುಮಾರು ೧೮ ಕಿಲೋಮೀಟರ್ ನಡೆದು ೧೨೦೦ ಮೀಟರ್ ಮೇಲೆ ಹತ್ತಿ ೩೦೦೦ ಮೀಟರ್ ಎತ್ತರವನ್ನು ತಲುಪುವುದು ಮೊದಲ ದಿನದ ಚಾರಣ. ಮೊದಲ ದಿನದ ಚಾರಣವು ದಟ್ಟವಾದ ರೇನ್-ಫಾರೆಸ್ಟ್ ನಡುವೆ. ಸೂರ್ಯನ ಕಿರಣಗಳು ಒಳಗೆ ಬರದಷ್ಟು ದಟ್ಟ ಕಾಡು. ೨೬ ಡಿಗ್ರಿ ಸೆಲ್ಸಿಯಸ್ ಉಷ್ಣಾಂಷದಲ್ಲಿ ಒಂದು ತೆಳು ಟಿ-ಶರ್ಟ್ ಹಾಕಿಕೊಂಡು, ಬೆನ್ನ ಹಿಂದೆ ರಕ್-ಸ್ಯಾಕ್ ತಗುಲಿಸಿಕೊಂಡು ಹೊರಟೆವು.
ಗೈಡ್ ನಮ್ಮನ್ನು ನಿಧಾನವಾಗಿ ನಡೆಯಲು ಹೇಳುತ್ತಾನೆ. ತಾಂಜಾನಿಯಾದ ಮುಖ್ಯ ಭಾಷೆ, ಸ್ವಾಹಿಲಿ. ಸ್ವಾಹಿಲಿಯಲ್ಲಿ, `ಪೋಲೆ ಪೋಲೆ` ಎಂದರೆ `ನಿಧನಿಧಾನವಾಗಿ`. ಇದು ಕಿಲಿಮಾಂಜಾರೋ ಹತ್ತುವ ಮಂತ್ರ. ಇಲ್ಲಿ ನಿಧಾನವೇ ಪ್ರಧಾನ. ಗೈಡ್ ನಮ್ಮ ನಡೆಯುವ ವೇಗವನ್ನು ನಿರ್ಧರಿಸುತ್ತಾನೆ. `ಪೋಲೆ ಪೋಲೆ,` ಎಂದು ಆಗಾಗ ಹೇಳುತ್ತ ನಿಧಾನವಾಗಿ ದಟ್ಟ ಕಾಡಿನ ಮಧ್ಯ ಹತ್ತಿಸಿಕೊಂಡು ಹೋಗುತ್ತಾನೆ.
ಹಾದಿಯಲ್ಲಿ ಮಧ್ಯ ಮಧ್ಯ ನಿಂತು ಹಾಡು ಹೇಳಿ ಕುಣಿದು ನಲಿಸುತ್ತಾರೆ. ಕಿಲಿಮಾಂಜಾರೋ ಹತ್ತುವಷ್ಟರಲ್ಲಿ ಅವರು ಹಾಡುವ `ಹಕೂನ ಮಟಾಟ` ಹಾಡು ಬಾಯಿಪಾಠವಾಗಿ ಬಿಡುತ್ತದೆ. `ಹಕೂನ ಮಾಟಾಟ,` ಎನ್ನುವ ಫ್ರೇಸ್ `ಲಯನ್ ಕಿಂಗ್` ಸಿನೆಮಾದಿಂದಾಗಿ ಬಹಳ ಪ್ರಖ್ಯಾತವಾದ ಸಾಲು ಮತ್ತು ಹಾಡು ಕೂಡ: `ಹಕೂನ ಮಟಾಟ, ಮೀನ್ಸ್ ನೋ ವರೀಸ್`
ನಮ್ಮದು ೨೧ ಜನ ಮಧ್ಯವಯಸ್ಕ ಗಂಡಸರ ಗುಂಪು. ನಮ್ಮನ್ನು ನೋಡಿಕೊಳ್ಳುವ ಮುಖ್ಯ ಗೈಡ್, ಬ್ರೂಸ್, ನಲವತ್ತರ ಆಸುಪಾಸಿನಲ್ಲಿರುವ ಎತ್ತರದ ಆಳು. ಜೊತೆಗೆ ನಾಕಾರು ಜನ ಜ್ಯೂನಿಯರ್ ಗೈಡುಗಳು. ಅಷ್ಟೇ ಅಲ್ಲದೇ, ಅಡುಗೆಯವನು, ಅಡುಗೆಯ ಸಹಾಯಕರು, ನಮ್ಮ ಡಫೆಲ್ ಬ್ಯಾಗ್ (ಒಬ್ಬೊಬ್ಬರ ಡಫಲ್ ಬ್ಯಾಗ್ ೧೫ ಕಿಲೋ!) ಹೊರುವವರು, ನಮ್ಮ ಟೆಂಟ್ ಹೊರುವವರು, ಊಟಕ್ಕೆ ಬೇಕಾಗುವ ತಟ್ಟೆ, ಅಡುಗೆ ಸಾಮಗ್ರಿ, ಟೇಬಲ್, ಚೇರ್ ಹೊರುವವರು, ಟೆಂಟ್ ಟಾಯ್ಲೆಟ್ ಹೊರುವವರು, ಟಾಯ್ಲೆಟ್ಟನ್ನು ಶುಚಿಯಾಗಿ ಇಡುವವರು, ಎಲ್ಲ ಸೇರಿ ಸುಮಾರು ೬೦ ಜನ ಸಹಾಯಕರು ಇರಬಹುಸು! ಗೈಡುಗಳನ್ನು ಬಿಟ್ಟರೆ ಉಳಿದವರೆಲ್ಲರೂ ತಮ್ಮ ಹೆಗಲು ಮತ್ತು ತಲೆಯ ಮೇಲೆ ೨೦ ರಿಂದ ೩೦ ಕಿಲೋ ಭಾರದ ಸಾಮಗ್ರಿಗಳನ್ನು ಇಟ್ಟುಕೊಂಡು ಭರಭರನೇ ಮುಂದೆ ಸಾಗಿ, ನಮ್ಮ ಟೆಂಟು, ಟಾಯ್ಲೆಟ್ಟು ಮತ್ತು ಅಡಿಗೆಗಳನ್ನು ತಯಾರು ಮಾಡುತ್ತಾರೆ.
ನಾವು ಸಂಜೆಯ ಹೊತ್ತಿಗೆ ನಮ್ಮ ಮೊದಲ ದಿನದ ಟೆಂಟನ್ನು ತಲುಪಿದಾಗ, ನಮ್ಮ ಟೆಂಟುಗಳು ನಮಗಾಗಿ ಕಾಯುತ್ತಿದ್ದವು. ಬಿಸಿ ಬಿಸಿ ಊಟ ಕೂಡ ತಯಾರಾಗಿತ್ತು. ನಾವು ತಲುಪಬೇಕಾದ `ಕಿಬೋ` ಶೃಂಗ ಕಾಣುತ್ತಿತ್ತು. ಒಂದು ಟೆಂಟಿನಲ್ಲಿ ಇಬ್ಬರು. ಇಬ್ಬರು ಕೂತುಕೊಳ್ಳಬಹುದು, ಇಬ್ಬರು ಮಲಗಿಕೊಂಡರೆ ಟೆಂಟು ತುಂಬಿಹೋಗುವಂಥ ಚಿಕ್ಕ ಟೆಂಟು. ಊಟ ಮಾಡಿ ಮಲಗಿದೆವು. ಮೊದಲ ದಿನದ ಚಾರಣ ಆರಾಮವಾಗಿತ್ತು.
ಎರಡನೇ ದಿನ:
ಎರಡನೇ ದಿನ ಮಚಾಮೆ ಕ್ಯಾಂಪಿನಿಂದ ಶಿರಾ ಕ್ಯಾಂಪಿಗೆ ೧೦ ಕಿಲೋಮೀಟರ್, ೮೪೦ ಮೀಟರ್ ಮೇಲಕ್ಕೆ ಹತ್ತಿ, ೩೮೪೦ ಮೀಟರ್ ತಲುಪಿದೆವು. ಮೊದಲ ದಿನದ ದಟ್ಟಕಾಡು ಮಾಯವಾಗಿ ಎರಡನೇ ದಿನ ನಮಗೆ ಸಿಕ್ಕಿದ್ದು ಚಿಕ್ಕ ಚಿಕ್ಕ ಗಿಡಗಳು, ಕಳ್ಳೆ ಕಂಟೆಗಳು. ಶಿರಾ ಕ್ಯಾಂಪಿನಲ್ಲಿ ನಮ್ಮ ರಕ್-ಸ್ಯಾಕ್ ಇಟ್ಟು, ಕ್ಯಾಂಪಿನಿಂದ ಹತ್ತಿರದಲ್ಲಿರುವ ನೈಸರ್ಗಿಕವಾದ ಶಿರಾ ಗುಹೆಗೆ ಹೋದೆವು. ಅದರೊಳಗೆ ಹೋಗಿ, ಗುಹೆಯ ಗುಡ್ಡದ ಮೇಲೆ ಹತ್ತಿ ಫೋಟೊ ತೆಗೆದುಕೊಂಡು ಬಂದೆವು. ಸಂಜೆಯಾಗಿತ್ತು, ಮೊದಲಬಾರಿಗೆ ಸಣ್ಣಗೆ ಚಳಿಯ ಅನುಭವ ಶುರುವಾಯಿತು. ನಡೆದದ್ದು ಕೇವಲ ೧೦ ಕಿಲೋಮೀಟರ್ ಆಗಿದ್ದರೂ ಎರಡನೇ ದಿನದ ಚಾರಣ ಮೊದಲನೇ ದಿನಕ್ಕೆ ಹೋಲಿಸಿದರೆ ಸ್ವಲ್ಪ ಕಷ್ಟಕರವಾಗಿತ್ತು.
ಮೂರನೇ ದಿನ:
ಮೂರನೇ ದಿನ ೭೬೦ ಮೀಟರ್ ಹತ್ತಿ, ೪೬೦೦ ಮೀಟರ್ ಎತ್ತರದಲ್ಲಿರುವ ಲಾವಾ ಟಾವರ್ ತಲುಪಿದೆವು! ಆಮ್ಲಜನಕ ಕಡಿಮಾಯಾಗುವುದು ಯಾರೂ ಹೇಳದಿದ್ದರೂ ಮೊದಲ ಸಲ ಅನುಭವಕ್ಕೆ ಬರುತ್ತದೆ. ಅಷ್ಟು ಮೇಲೆ ಹತ್ತಿದ ಮೇಲೆ ಮತ್ತೆ ೬೫೦ ಮೀಟರ್ ಕೆಳಗೆ ಇಳಿಯಬೇಕು! ಒಟ್ಟು ೧೫ ಕಿಲೋಮೀಟರ್ ನಡೆದು ಬರಾಂಕೋ ಕ್ಯಾಂಪ್ ತಲುಪಿದೆವು. ದಾರಿಯುದ್ದಕ್ಕೂ ಆಗಾಗ ನೀರು ಕುಡಿಯಲು ಗೈಡ್ ಎಲ್ಲರಿಗೂ ಜ್ಞಾಪಿಸುತ್ತಿದ್ದ. ಸ್ವಾಹಿಲಿಯಲ್ಲಿ ನೀರಿಗೆ `ಮಾಜಿ` ಎನ್ನುತ್ತಾರೆ. ನಾವೆಲ್ಲ ಆಗ, `ಮಾಜಿ ಮಾಜಿ,` ಎಂದು ಕೂಗಿ ನೀರು ಕುಡಿಯುತ್ತಿದೆವು. ಲಾವಾ ಟಾವರಿನಿಂದ ಕಿಲಿಮಾಂಜಾರೋದ ಶೃಂಗ ನಯನ ಮನೋಹರವಾಗಿ ಕಾಣುತ್ತಿತ್ತು, ಆದರೆ ಊಹೆಗೂ ಮೀರಿದ ಎತ್ತರದಲ್ಲಿತ್ತು. ನಿಜವಾಗಿಯೂ ನಾನು ಇದರ ಶೃಂಗ ಮುಟ್ಟಲು ಸಾಧ್ಯವೇ ಎಂದು ಸಣ್ಣ ಅಳುಕು ಕೂಡ ಮೂಡಿತು. ದಾರಿಯುದ್ದಕ್ಕೂ ಚಿಕ್ಕ ಚಿಕ್ಕ ಪೊದೆಗಳು ಮತ್ತು ಕುರುಚಲು ಗಿಡಗಳು. ತೆಂಗಿನಗಿಡವನ್ನು ಮೇಲಿನಿಂದ ಜೋರಾಗಿ ಒತ್ತಿದಂತೆ ಕಾಣುವ ಚಿಕ್ಕ ಚಿಕ್ಕ ಸೆನಿಸಿಯೋ ಗಿಡಗಳು. ಮೂರನೇ ದಿನ ನಾವು ಒಟ್ಟು ಬರೀ ೧೧೦ ಮೀಟರ್ ಮೇಲೆ ಬಂದಿದ್ದೆವು. ಎಂಥಹ ನಷ್ಟ!
ಆಗ ನಮ್ಮ ಚೀಫ್ ಗೈಡ್ ಹೇಳಿದ, `ಮೂರನೇ ದಿನ ಅಷ್ಟು ಮೇಲೆ ಹತ್ತಿ ಮತ್ತೆ ಇಳಿಯುವುದಿದೆಯಲ್ಲ, ಇದು ಕಡಿಮೆಯಾಗುತ್ತಿರುವ ಆಮ್ಲಜನಕ್ಕೆ ಹೊಂದಿಕೊಳ್ಳಲು ಬಹಳ ಉಪಯುಕ್ತವಾದ ಚಾರಣದ ದಿನ. ನೀವು ಅಷ್ಟು ಮೇಲೆ ಹತ್ತಿ ಅಲ್ಲಿ ಊಟ ಮಾಡಿದ್ದೀರಿ, ಆಗ ನಿಮ್ಮಲ್ಲಿ ಆಗಲೇ ಕೆಲವರಿಗೆ ತಲೆನೋವು ಕಾಣಿಸಿಕೊಂಡಿದೆ, ನಂತರ ಕೆಳಗೆ ಇಳಿದಿದ್ದೀರಿ, ಇಲ್ಲಿ ಮಲಗುತ್ತೀರಿ, ಇದು ಮುಂದಿನ ಎರಡು ದಿನಗಳಿಗೆ ಮುಖ್ಯವಾದ ಪೂರ್ವ ತಯಾರಿ,` ಎಂದ. ಇದ್ದರೂ ಇರಬಹುದು ಎಂದುಕೊಂಡೆ. ಒಟ್ಟು ಹದಿನೈದು ಕಿಲೋಮೀಟರ್ ಹತ್ತಿ ಇಳಿಯುವಷ್ಟರಲ್ಲಿ ಎಲ್ಲರೂ ಸುಸ್ತು ಹೊಡೆದು ಹೋಗಿದ್ದೆವು. ಕೆಲವರಿಗೆ ತಲೆ ನೋವು ಕಾಣಿಸಿಕೊಂಡಿತ್ತು. ಚಳಿ ಕೂಡ ಜಾಸ್ತಿಯಾಗಿತ್ತು.
ನಾಲ್ಕನೇ ದಿನ:
ನಾಲ್ಕನೇ ದಿನ ಬರಾಂಕೋ ಕ್ಯಾಂಪಿನಿಂದ ಕರಂಗಾ ಕ್ಯಾಂಪಿಗೆ ಹತ್ತು ಕಿಲೋಮೀಟರ್, ೩೯೫೦ ಮೀಟರಿನಿಂದ ೪೨೦೦ ಮೀಟರಿನವರೆಗೆ (೨೫೦ ಮೀಟರ್ ಎತ್ತರ) ಚಾರಣ! ಪ್ರತಿದಿನದಂತೆ ಪ್ರಾಥರ್ವಿಧಿಗಳನ್ನು ಪೂರೈಸಿಕೊಂಡು (ಸ್ನಾನದ ಹೊರತು), ಬೆಳಗಿನ ಉಪಾಹಾರ ಮಾಡಿ, ಚಳಿಗೆ ಬೇಕಾದ ಬಟ್ಟೆಗಳನ್ನು ಹಾಕಿಕೊಂಡು, ರಕ್-ಸ್ಯಾಕಿನಲ್ಲಿ ಕೆಲವು ಬಟ್ಟೆ ಸ್ನ್ಯಾಕ್-ಗಳನ್ನು ಇಟ್ಟುಕೊಂಡು, ಕ್ಯಾಮಲ್ ಬ್ಯಾಗಿನಲ್ಲಿ ನೀರು ತುಂಬಿಕೊಂಡು, ಸನ್-ಸ್ಕ್ರೀನ್ ಹಾಕಿಕೊಂಡು ಹೊರಟೆವು. ಕರಂಗಾ ಕ್ಯಾಂಪ್ ತಲುಪಿದಾಗ ಲೇಟ್- ಮಧ್ಯಾಹ್ನ. ಈಗ ನಾವು ಎಲ್ಲ ಮೋಡಗಳಿಗಿಂತ ಮೇಲೆ ಇದ್ದೆವು. ಮೋಡಗಳು ನಮ್ಮ ಕೆಳಗೆ ಸುಮುದ್ರದಂತೆ ಕಾಣುತ್ತಿದ್ದವು! ಅವತ್ತು ನಾವು ಸ್ವಾಹಿಲಿಯ `ಕಿಲಿಮಾಂಜಾರೋ` ಹಾಡನ್ನು ಕನ್ನಡ ಮತ್ತು ಹಿಂದಿಗೆ ಭಾಷಾಂತರ ಮಾಡಿ ಅದೇ ಧಾಟಿಯಲ್ಲಿ ಹೇಳಿ ಕುಣಿದು, ಸಾಕಷ್ಟು ಫೋಟೋ ತೆಗೆದುಕೊಂಡೆವು. ಹಿಂದಿನ ದಿನಕ್ಕೆ ಹೋಲಿಸಿದರೆ ಚಳಿ ಹೆಚ್ಚಾಗಿತ್ತು.
ಐದನೇ ದಿನ:
ಐದನೇ ದಿನ ಕರಂಗಾ ಕ್ಯಾಂಪಿನಿಂದ ಬರಾಫು (ಬರಾಫು ಎಂದರೆ ಹಿಮ, ಹಿಂದಿಯಲ್ಲಿ `ಬರ್ಫ್` ಶಬ್ದಕ್ಕೆ ಎಷ್ಟು ಹತ್ತಿರವಿಲ್ಲವೇ?) ಕ್ಯಾಂಪಿಗೆ ಚಾರಣ, ೪೨೦೦ರಿಂದ ೪೬೬೦ ಮೀಟರಿನವರೆಗೆ, ಹತ್ತಿರ ಅರ್ಧ ಕಿಲೋಮೀಟರ್ ಮೇಲಕ್ಕೆ. ಸಮುದ್ರ ಮಟ್ಟದಿಂದ ನಾಲ್ಕು ಸಾವಿರ ಮೀಟರ್ ಮೇಲೆ ಹೋದ ಮೇಲೆ ವಾತಾವರಣದಲ್ಲಿ ಆಮ್ಲಜನಕ ಸಾಕಷ್ಟು ಕಡಿಮೆಯಾಗಲು ಶುರುವಾಗುತ್ತದೆ. ಐದನೇ ದಿನ ನಾವು ನಡೆದದ್ದು ೮ ಕಿಲೋಮೀಟರ್, ನಡೆಯಲು ತೆಗೆದುಕೊಂಡ ಅವಧಿ ೫ ಗಂಟೆ! ಆಗಲೇ ಸ್ವಲ್ಪ ಏದುಸಿರು ಶುರುವಾಗಿತ್ತು, ಚಳಿಕೂಡ ತನ್ನ ಕೈಚಳಕವನ್ನು ತೋರಿಸುತ್ತಿತ್ತು. ಮೋಡಗಳಿಲ್ಲದ ನಗ್ನ ಕಿಬೋ ಶೃಂಗ ಕಣ್ಣಳತೆಯಲ್ಲಿ ಕರೆಯುತ್ತಿತ್ತು. ಬರಾಫು ಕ್ಯಾಂಪಿನಲ್ಲಿ ವಾತಾವರಣದ ಆಮ್ಲಜನಕ ೨೧%ನಿಂದ ೧೦%ಗೆ ಇಳಿದಿತ್ತು!
ಮಧ್ಯಾಹ್ನವಾಗುವಷ್ಟರಲ್ಲಿ ಬರಾಫು ಕ್ಯಾಂಪ್ ತಲುಪಿದೆವು. ಯಥಾಪ್ರಕಾರ ಬಿಸಿಬಿಸಿ ಊಟ ಮಾಡಿದೆವು. ನಂತರ ನಮಗೆಲ್ಲ ಮಲಗಲು ಹೇಳಿದರು! ಆ ಚಳಿಯಲ್ಲಿ, ಅಷ್ಟು ಕಡಿಮೆ ಆಮ್ಲಜನಕದಲ್ಲಿ ಅದೂ ಮಧ್ಯಾಹ್ನ ಎಲ್ಲಿಂದ ತಾನೆ ನಿದ್ದೆ ಬಂದೀತು? ಆದರೆ ಹೊರಗೆ ಅಸಾಧ್ಯ ಚಳಿ, ಜೊತೆಗೆ ನಾಲ್ಕು ಹೆಜ್ಜೆ ಜೋರಾಗಿ ನಡೆದರೆ ಏದುಸಿರು ಬೇರೆ, ಟೆಂಟಿಗೆ ಬಂದು ಮಾಡಿದ್ದು ಮಲಗುವ ನಾಟಕವಷ್ಟೇ!
ಸಂಜೆ ಏಳು ಗಂಟೆಗೆ ರಾತ್ರಿಯ ಭೋಜನ. ಇದು ಕೊನೆಯ ಆರೋಹಣದ ಕೊನೆಯ ಭೋಜನ. ಊಟ ಮಾಡಿದ ಮೇಲೆ ಮತ್ತೆ ಮಲಗಲು ಹೇಳಿದರು, ಏಕೆಂದರೆ ಕೊನೆಯ ಆರೋಹಣ ಶುರುವಾಗುವುದು ಮಧ್ಯರಾತ್ರಿ ೧೨ ಗಂಟೆಗೆ! ಇಲ್ಲಿಯವರೆಗೂ ನಮ್ಮ ಚಾರಣವೆಲ್ಲ ಹಾಡುಹಗಲಿನಲ್ಲೇ ಆಗಿತ್ತು. ನಾವಿನ್ನೂ ಹತ್ತಬೇಕಾಗಿರುವುದು ೧೨೩೫ ಮೀಟರ್! ಆಗಲೇ ಗಾಳಿಯ ಆಮ್ಲಜನಕಕ್ಕೆ ಒದ್ದಾಡುತ್ತಿದ್ದೇವೆ. ರಾತ್ರಿಯ ಹೊತ್ತು ಚಳಿ ಕೂಡ ಜಾಸ್ತಿ. ಬರಾಫು ಕ್ಯಾಂಪಿನಲ್ಲಿ ಉಷ್ಣಾಂಶ ಆಗಲೆ ೮ ಡಿಗ್ರಿ ಸೆಲ್ಸಿಯಸ್ ತೋರಿಸುತ್ತಿತ್ತು. ಇದನ್ನೆಲ್ಲ ನೆನೆಸಿಕೊಂಡು ವೇಳೆ ಕಳೆದದ್ದು, ನಿದ್ದೆ ಮಾತ್ರ ಬಾರದು! ಎದ್ದಿದ್ದು ಬೆಳಿಗ್ಗೆ ೭ ಗಂಟೆಗೆ, ಇನ್ನು ರಾತ್ರಿ ಪೂರ್ತಿ ಏರಬೇಕು. ಇದೆಲ್ಲ ನನ್ನಿಂದ ಸಾಧ್ಯವೇ, ಅಥವಾ ಇದೆಲ್ಲ ಕನಸೇ?
ಐದನೇ ರಾತ್ರಿ ಮತ್ತು ಆರನೇ ದಿನ:
ಐದನೇ ರಾತ್ರಿ ಹನ್ನೊಂದು ಗಂಟೆಯಿಂದ ಕೊನೆಯ ಆರೋಹಣಕ್ಕೆ ತಯಾರಾಗಲು ಶುರುವಾದೆವು. ಅಂತಿಮಾರೋಹಣಕ್ಕೆ ಎರಡರಿಂದ ಮೂರು ಲೇಯರ್ ಕಾಲುಚೀಲಗಳು, ಮೂರರಿಂದ ನಾಲ್ಕು ಲೇಯರ್ ಉಡುಗೆಗಳು ಕಾಲು, ಕೈ ಮತ್ತು ದೇಹಕ್ಕೆ, ಕತ್ತಿಗೆ ಬಲಕ್ಲಾವಾ, ತಲೆ ಮತ್ತು ಕಿವಿ ಮುಚ್ಚಿಕೊಳ್ಳಲು ಟೋಪಿ, ಬೆರಳುಗಳನ್ನು ಮುಚ್ಚಿಕೊಳ್ಳಲು ಕೈಗವಸು, ನಡೆಯಲು ಸಹಾಯಕ್ಕಾಗಿ ಊರುಗೋಲುಗಳು, ತಲೆಗೆ ಹೆಡ್-ಲೈಟು, ರಕ್-ಸ್ಯಾಕಿನಲ್ಲಿ ಕ್ಯಾಮೆಲ್ ಬ್ಯಾಗಿನಲ್ಲಿ ನೀರು, ಸ್ನ್ಯಾಕ್, ಇನ್ನೆರೆಡು ಇರಲಿ ಎಂದು ಹೆಚ್ಚುವರಿ ದಿರಿಸುಗಳು! ಮಧ್ಯರಾತ್ರಿ ಹನ್ನೆರಡಕ್ಕೆ ನಮ್ಮ ಕೊನೆಯ ಆರೋಹಣಕ್ಕೆ ನಮ್ಮ ಗೈಡ್ ನಾಂದಿ ಹಾಡಿದ, `ಹಕೂನ ಮಟಾಟ`.
ನಾವು ಹೊರಟ ರಾತ್ರಿ ಅಮಾವಾಸ್ಯೆ! `ಅಮಾಸಿಯ ನಡುರಾತ್ರಿ ಎಲ್ಲೂ ಹೋಗಬ್ಯಾಡ,` ಎಂದು ಚಿಕ್ಕವನಿದ್ದಾಗ ಹಿರಿಯರಿಂದ ಕೇಳಿಸಿಕೊಳ್ಳುವ ಮಾತು ನೆನಪಾಯಿತು. ಅವತ್ತು ಅಮಾವಾಸ್ಯೆಯ ಮಧ್ಯರಾತ್ರಿ ನಾನೆಂದೂ ಮಾಡಿರದ ಆರೋಹಣಕ್ಕೆ ಅಣಿಯಾಗಿದ್ದೆ! ನಮ್ಮಂತೆಯೇ ಹತ್ತಾರು ಗುಂಪುಗಳು ನಮಗಿಂತೆ ಮೊದಲೇ ಮುಂದೆ ಸಾಗುತ್ತಿದ್ದರು. ಗೈಡ್ ದಾರಿ ತೋರಿಸುತ್ತಿದ್ದ. ನಾವು ಒಬ್ಬರ ಹಿಂದೆ ಒಬ್ಬರು ಹೆಡ್-ಲೈಟಿನಲ್ಲಿ ಮುಂದಿನವರ ಕಾಲನ್ನು ಅನುಸರಿಸಿ ಮೇಲೆ ಹತ್ತಲು ತೊಡಗಿದೆವು. `ಪೋಲೆ ಪೋಲೆ` ಹೆಜ್ಜೆ ಹಾಕುವ ಬರೀ ಕಲ್ಲು ಮಣ್ಣುಗಳಿಂದ ತುಂಬಿದ ಕಡಿದಾದ ಆರೋಹಣ. ನಮ್ಮ ಗೈಡ್ ತುಂಬ ನಿಧಾನವಾಗಿ ಹೆಜ್ಜೆ ಹಾಕುತ್ತ ನಮ್ಮ ಹತ್ತುವ ಗತಿಯನ್ನು ನಿರ್ಧರಿಸಿದ್ದ.
ಅವನು ಅಷ್ಟು ಮೆಲ್ಲ ಹತ್ತುತ್ತಿದ್ದರೂ, ನಮಗೆ ಅದೂ ಕಷ್ಟವೆನಿಸಲು ಶುರು ಹತ್ತಿತು. ಕೈಗವಸು ಹಾಕಿಕೊಂಡಿದ್ದರೂ ಹತ್ತು ನಿಮಿಷದಲ್ಲಿ ಕೈ ಮರಗಟ್ಟಲು ಶುರುವಾಯಿತು. ಇನ್ನೊಂದು ಕೈಗವಸನ್ನು ಅದರ ಮೇಲೆ ಹಾಕಿಕೊಂಡೆ. ಕೈಯ ಚಳಿ ಸ್ವಲ್ಪ ಕಡಿಮೆಯಾಯಿತು, ಆದರೆ ಊರುಗೋಲು ಹಿಡಿಯುವುದು ಕಷ್ಟವೆನಿಸಲು ಶುರುವಾಯಿತು. ಇನ್ನೂ ಹತ್ತು ನಿಮಿಷವಾಗುವಷ್ಟರಲ್ಲಿ ಎದೆ ಮತ್ತು ಬೆನ್ನನ್ನು ಯಾರೋ ಕಟ್ಟಿ ಅಮುಕುತ್ತಿರುವ ಭಾವನೆ. ಸದ್ಯ ಮೂರು ಕಾಲುಚೀಲ ಹಾಕಿಕೊಂಡಿದ್ದು ಒಳ್ಳೆಯದಾಯಿತು, ಕಾಲ್ಬೆರಳುಗಳು ಸುರಕ್ಷಿತವಾಗಿದ್ದವು.
ಸುಮಾರು ಒಂದು ಗಂಟೆ ಹತ್ತಿದ ಮೇಲೆ ಒಂದು ಸಣ್ಣ ಬ್ರೇಕ್! ಆಗ ಒಬ್ಬ ಗೈಡ್ ನನ್ನ ಕಷ್ಟವನ್ನು ನೋಡಿ, ನನ್ನ ಬಳಿ ಬಂದು, ಕೈಗವಸನ್ನು ಸರಿಯಾಗಿ ಹಾಕಿದ. ನಾನು ಹಾಕಿಕೊಂಡ ಲೇಯರ್-ಗಳಲ್ಲಿ ಒಂದು ಲೇಯರ್ ಅನ್ನು ಕಡಿಮೆ ಮಾಡಲು ಹೇಳಿದ. ನಾನು ಇಲ್ಲಿಯವರೆಗೂ ಊರುಗೋಲನ್ನು ಉಪಯೋಗಿಸಿಯೇ ಇರಲಿಲ್ಲ, ಆದರೆ ಊರುಗೋಲಿಲ್ಲದೇ ಅಂತಿಮ ಆರೋಹಣ ಮಾಡಬೇಡಿ ಎಂದು ನಮ್ಮ ಚೀಫ್ ಗೈಡ್ ಹೇಳಿದ್ದ. ನನ್ನ ಜೊತೆಗಾರರೆಲ್ಲ್ರೂ ಊರುಗೋಲನ್ನು ಹಿಡಿದು ನಡೆಯುತ್ತಿದ್ದರು. ನನಗೆ ಮಾತ್ರ ಇಂಥ ರಾತ್ರಿಯಲ್ಲಿ ಕೈಗವಸಿನಲ್ಲಿ ಊರುಗೋಲನ್ನು ಊರಿ ನಡೆಯುವುದು ತುಂಬ ಕಷ್ಟವಾಗುತ್ತಿತ್ತು. ಗೈಡ್ ನನ್ನ ಊರುಗೋಲುಗಳನ್ನು ಮಡಚಿ ನನ್ನ ರಕ್-ಸ್ಯಾಕಿಗೆ ಹಾಕಿದ. ತನ್ನಂತೆ ಊರುಗೋಲಿಲ್ಲದೇ ಹತ್ತಬಹುದು ಎಂದು ಭರವಸೆ ಕೊಟ್ಟ. ಕುಡಿಯಲು ನೀರುಕೊಟ್ಟ, ತಿನ್ನಲು ನನ್ನ ಬ್ಯಾಗಿನಿಂದ ಬಿಸ್ಕೀಟು ಕೊಟ್ಟ. ಹೋದ ಜೀವ ಬಂದಂತಾಯಿತು.
ಮತ್ತೆ ಚಾರಣ ಮುಂದುವರೆಯಿತು. ನಾವೀಗ ಎಲ್ಲ ಮೋಡಗಳಿಗಿಂತ ಆಗಲೇ ಮೇಲಕ್ಕೆ ಬಂದ್ದಿದ್ದೆವಲ್ಲ, ಅಮವಾಸ್ಯೆಯ ರಾತ್ರಿ ಬೇರೆ, ಆಕಾಶದಲ್ಲಿ ಪ್ರತಿ ನಕ್ಷತ್ರಗಳೂ ಕಾಣಿಸುತ್ತಿದ್ದವು. ಅಷ್ಟು ಶುಭ್ರವಾದ ಅಷ್ಟೊಂದು ಚುಕ್ಕೆಗಳಿರುವ ಆಕಾಶವನ್ನು ನಾನು ಅವತ್ತೇ ನೋಡಿದ್ದು. ಆದರೆ ತಲೆ ಮೇಲೆತ್ತಿ ನಡೆಯುವಂತಿಲ್ಲ, ಮುಂದಿನವರ ಕಾಲನ್ನು ನೋಡಿ ಹತ್ತಬೇಕು. ನಾವು ಹೀಗೆ ಹತ್ತಬೇಕಾದರೆ ಬೇರೆ ಗುಂಪಿನಿಂದ ಕೆಲವರನ್ನು ಇಳಿಸಿಕೊಂಡು ಹೋಗುತ್ತಿದ್ದರು, ಅವರಿಗೆಲ್ಲ `ತೀವ್ರ ಪರ್ವತ ಕಾಯಿಲೆ` (acute mountain syndrome) ಆಗಿತ್ತು. ಬಾಯಿಯವರೆಗೂ ಬಂದು ಗಂಟಲಿಗೆ ಇಳಿಯಲಿಲ್ಲ ಎನ್ನುವಂತೆ, ಇಷ್ಟು ಎತ್ತರ ಬಂದು ಪರ್ವತದ ಶೃಂಗ ತಲುಪದವರನ್ನು ನೋಡುತ್ತ ನಿಧನಿಧಾನವಾಗಿ ಮೇಲೆ ಹತ್ತುತ್ತಿದ್ದೆವು. ನಮಗೂ ಅದೇ ಪಾಡು ಬರದಿರಲಿ ಎಂದು ಮನಸ್ಸಿನಲ್ಲೇ ಪ್ರಾರ್ಥಿಸುತ್ತ. ಚಳಿಯ ಹೊಡೆತಕ್ಕೆ ಕ್ಯಾಮೆಲ್ ಬ್ಯಾಗಿನಲ್ಲಿ ನೀರು ಪೂರ್ತಿ ಮಂಜುಗಡ್ಡೆಯಾಗಿಬಿಟ್ಟಿದೆ. ಉಷ್ಣಾಂಶ -೧೦, ಅನುಭವಿಸುವ ಉಷ್ಣಾಂಶ -೧೫ ಡಿಗ್ರೈ ಸೆಂಟಿಗ್ರೇಡ್!
ಕಿಬೋ ಶಿಖರದ ಮೊದಲ ಶೃಂಗದ ಹೆಸರು, ಸ್ಟೆಲ್ಲಾ ಪಾಯಿಂಟ್. ನಾವು ಅದನ್ನು ತಲುಪಲು ಸುಮಾರು ೭೫% ಹತ್ತಿರಬಹುದು, ಸೂರ್ಯೋದಯದ ಮೊದಲ ಕುರುಹುಗಳು ಶುರುವಾದವು. ನಾವು ಹತ್ತುವ ಪರ್ವತವನ್ನು ಬಿಟ್ಟರೆ, ಸುತ್ತಲಿನ ೨೭೦ ಡಿಗ್ರ ಒಂದು ಸರಳರೇಖೆಯನ್ನು ಎಳೆದಂತೆ, ನಸುಗೆಂಪು ಬಣ್ಣದ ಬೆಳಕು! ಅಲ್ಲಿ ಕಾಣುವ ದೃಶ್ಯವನ್ನು ಮತ್ತು ಅನುಭವವನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ, ಫೋಟೋಗಳಲ್ಲಿ ವಿಡಿಯೋಗಳಲ್ಲಿ ಹಿಡಿದಿಡುವುದು ಸಾಧ್ಯವೇ ಇಲ್ಲ. ಮುಂದಿನ ಹದಿನೈದು ನಿಮಿಷ ಸೂರ್ಯ ಹುಟ್ಟುವ ಅದ್ಭುತ ಕ್ರಿಯೆ ನಾವು ಮೇಲೆ ಹತ್ತುವ ಕಾರ್ಯಕ್ಕೆ ಹುಮ್ಮಸ್ಸು ಕೊಡುತ್ತಿತ್ತು. ಎರಡೂ ಬದಿಯಲ್ಲಿ ಹಿಮಾಚ್ಛಾಧಿತ ಕಲ್ಲುಗಳು ಕಣ್ಣಿಗೆ ತಂಪನ್ನುಣಿಸುತ್ತಿದ್ದವು.
ಸ್ಟೆಲ್ಲಾ ಪಾಯಿಂಟ್ ೫೭೫೬ ಮೀಟರ್ ಎತ್ತರದಲ್ಲಿದೆ. ನಾವು ಅಲ್ಲಿ ತಲುಪುವಷ್ಟರಲ್ಲಿ ಆಗಲೇ ಕೆಲವರು ಕೆಳಗೆ ಇಳಿಯುತ್ತಿದ್ದರು! ಅಲ್ಲಿ ಫೋಟೋ ತೆಗೆದುಕೊಂಡು ಸ್ವಲ್ಪ ಹೊತ್ತು ವಿರಮಿಸಿ, ನಮ್ಮ ಕೊನೆಯ ಆರೋಹಣವನ್ನು ಆರಂಭಿಸಿದೆವು, `ಉಹುರು` ಎನ್ನುವ ತುದಿಯನ್ನು ಮುಟ್ಟಲು. ಅಸಾಧ್ಯ ಚಳಿ. ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ಏದುಸಿರು. ಆದರೆ `ಊರಿಗೆ ಬಂದವಳು ನೀರಿಗೆ ಬಾರದಿರುವಳೇ?` ಎನ್ನುವ ಗಾದೆಯಂತೆ, `ಸ್ಟೆಲ್ಲಾ ಪಾಯಿಂಟ್ ತಲುಪಿದ ಮೇಲೆ ಉಹುರು ತಲುಪದಿರಲು ಸಾಧ್ಯವೇ?`
ಸ್ಟೆಲ್ಲಾ ಪಾಯಿಂಟ್-ನಿಂದ `ಉಹುರು` ಸುಮಾರು ಒಂದು ಕಿಲೋಮೀಟರ್, ಸ್ಟೆಲ್ಲಾ ಪಾಯಿಂಟಿಗಿಂತ ಕೇವಲ ೧೪೦ ಮೀಟರ್ ಎತ್ತರ. ನಡೆಯುವ ಎರಡೂ ಬದಿ ದೂರದಲ್ಲಿ ಹಿಮದ ಬಂಡೆಗಳು, ದೂರದಲ್ಲಿ ಕೆಳಗೆ ಮೋಡಗಳು. ನನಗೆ `ನಾರದ ವಿಜಯ್` ಸಿನೆಮಾದಲ್ಲಿ ಆಕಾದಲ್ಲಿ ನಡೆಯುವ ನಾರದನ ನೆನಪಾಯಿತು. ಹೆಜ್ಜೆಯ ಮೇಲೊಂದು ಹೆಜ್ಜೆಯ ನಿಕ್ಕುತ ಒಂದೂವರೆ ಗಂಟೆಯಲ್ಲಿ ಉಹುರು ತಲುಪಿದೆವು. ಅಸಾಧ್ಯ ಎಂದುಕೊಂಡ ಕಿಲಿಮಾಂಜಾರೋ ಪರ್ವತದ ತುಟ್ಟತುದಿ `ಉಹುರು`ದ ಮೇಲೆ ನಾನು ನಿಂತಿದ್ದೆ.
ಉಹುರು ಎಂದು ಬರೆದಿರುವ ಫಲಕದ ಮುಂದೆ ನಿಂತಾಗ, ನನಗೆ ಕಿಲಿಮಾಂಜಾರೋ ಗೆದ್ದ ಭಾವನೆ ಬರಲಿಲ್ಲ. ನನ್ನನ್ನು ಗೆದ್ದ ಭಾವನೆಯೂ ಬರಲಿಲ್ಲ. ನನಗಿಂತ ಮೊದಲು ಲಕ್ಷಾಂತರ ಜನ ಕಿಲಿಮಾಂಜಾರೋ ಹತ್ತಿದ್ದಾರೆ, ನಾನಾದ ಮೇಲೆ ಕೂಡ ಮಿಲಿಯನ್-ಗಟ್ಟಲೇ ಜನರು ಹತ್ತುತ್ತಾರೆ. ಗೈಡುಗಳು ಪೋರ್ಟರುಗಳಿಲ್ಲದೇ ಇದ್ದಿದ್ದರೆ ಇದೆಲ್ಲ ಸಾಧ್ಯವಾಗುವ ಮಾತೇ? `ಉಹುರು` ಎಂದರೆ `ಬಿಡುಗಡೆ` ಎಂದು ಅರ್ಥ; ಎಂಥಹ ಅನ್ವರ್ಥನಾಮ! `ಉಹುರು` ಆ ಕ್ಷ ನನ್ನನ್ನು ಎಲ್ಲದರಿಂದ ಬಿಡುಗಡೆ ಮಾಡಿ ವಿನೀತನನ್ನಾಗಿಸಿತು. ಪ್ರಕೃತಿಯ ಅಗಾಧತೆಯ ಮುಂದೆ ನಾನು ಅಕ್ಷರಷಃ ಇರುವಯಾಗಿಬಿಟ್ಟೆ. ನಮ್ಮನ್ನು ಇಲ್ಲಿಯವರೆಗೆ ಹರೆತಂದ ಗೈಡುಗಳು, ಪೋರ್ಟರುಗಳು, ಅಡುಗೆಯವರು ಮಾಡುವ ಕೆಲಸವನ್ನು ಹಣದಲ್ಲಿ ಅಳೆಯಲು ಸಾಧ್ಯವೇ ಇಲ್ಲ ಎಂದು `ಉಹುರು` ಹೇಳಿದಂತಾಗುತ್ತದೆ, ನಾನು ವಿನಮ್ರನಾಗಿ `ಉಹುರು` ಎಂದು ಬರೆದ ಫಲಕದ ಬಳಿ ಕೂತುಕೊಂಡೆ. .
ಮಿತ್ರರೆಲ್ಲ ಸೇರಿದೆವು. ಎಲ್ಲ ೨೧ ಜನರೂ ಉಹುರು ಮುಟ್ಟಿದೆವು ಎನ್ನುವುದು ದೊಡ್ಡ ಸಮಾಧಾನ. ನೂರಾರು ಫೋಟೋಗಳನ್ನು ತೆಗೆದುಕೊಂಡು, ಉಹುರುದವರೆಗೂ ತಂದ ಥೇಪ್ಲಾ ತಿಂದು, ಹಾಡಿ, ಕುಣಿದೆವು. ನಂತರ ನಾನೊಬ್ಬನೇ ಇನ್ನೂ ಸ್ವಲ್ಪ ಮುಂದೆ ನಡೆದು ಹೋದೆ. ಚಳಿ ಸ್ವಲ್ಪ ಕಡಿಮೆಯಾಗಿತ್ತು ಅಥವಾ ಕಡಿಮೆ ಅನಿಸುತ್ತಿತ್ತು. ಹತ್ತು ನಿಮಿಷ ಏಕಾಂತದಲ್ಲಿ ಕುಳಿತುಕೊಂಡು ಸುತ್ತಲಿನ ದೃಶ್ಯ ವೈಭವನ್ನು ನೋಡುತ್ತ ಕುಳಿತುಕೊಂಡು ಬಿಟ್ಟೆ. ಇದು ನಿಜವಾ, ಕನಸಾ, ಭ್ರಮೆಯಾ, ವಾಸ್ತವವಾ, ಕತೆಯಾ ಎನಿಸುತ್ತಿತ್ತು. ಆಗುತ್ತಿರುವುದು ಸಂತೋಷವಾ, ಆನಂದವಾ, ಶಾಂತಿಯಾ, ಶೂನ್ಯವಾ, ಖಾಲಿತನವಾ, ರಾಹಿತ್ಯವಾ? ಏನೆಂದು ಕರೆಯಲಿ ಆ ಭಾವಕ್ಕೆ? ಕಿಲಿಮಾಂಜಾರೋದ ತುಟ್ಟತುದಿಯಲ್ಲಿ `ಉಹುರು`ವಿನ ಅನುಭವವಾಯಿತು ಎನ್ನುವುದೇ ಸರಿಯೇನೋ!
ಎಷ್ಟು ಹೊತ್ತು ಅಂತ ಅಲ್ಲೇ ಇರಲು ಸಾಧ್ಯ? ಒಲ್ಲದ ಮನಸ್ಸಿನಿಂದ ಒಬ್ಬೊಬ್ಬರಾಗಿ ಹೊರಟೆವು. ಕೆಳಗಿಳಿಯಲು ಮಾತ್ರ ಊರುಗೋಲು ಬೇಕೇ ಬೇಕು. ಹೊಸ ಹುಮ್ಮಸ್ಸಿನಲ್ಲಿ ಊರುಗೋಲುಗಳನ್ನು ಊರುತ್ತ ಕೆಳಗೆ ಇಳಿಯಲು ಶುರುಮಾಡಿದೆವು. ಹಿಂದಿನ ದಿನ ಬೆಳಗಿನ ಆರುವರೆಯಿಂದ ನಿದ್ದೆ ಮಾಡಿಲ್ಲದಿದ್ದರೂ ಒಂಚೂರೂ ನಿದ್ದೆ ಬರುತ್ತಿಲ್ಲ, ಆಗಿರುವ ಸುಸ್ತು ಕೂಡ ಮರೆತು ಹೋಗಿತ್ತು. ಮತ್ತೆ ಬರಾಫು ಕ್ಯಾಂಪು ಸೇರಿದಾಗ ಮಧ್ಯಾಹ್ನವಾಗಿತ್ತು. ಅಲ್ಲಿ ಊಟಮಾಡಿ ಸ್ವಲ್ಪ ಹೊತ್ತು ವಿರಾಮ. ದೇಹಕ್ಕೆ ಹೊಸ ಉತ್ಸಾಹ ಬಂದಿತ್ತು. ಅಲ್ಲಿಂದ ನಾವು ಮಲಗುವ `ಹೈ ಕ್ಯಾಂಪಿ`ಗೆ ಮತ್ತೆ ಎರಡೂವರೆ ಗಂಟೆ ಇಳಿತ. ಹೈ ಕ್ಯಾಂಪ್ ಸೇರಿದಾಗ ಸೂರ್ಯ ಮುಳುಗಲು ಕಾಯುತ್ತಿದ್ದ. ಹೈ ಕ್ಯಾಂಪ್ ೩೯೫೦ ಮೀಟರ್ ಎತ್ತರದಲ್ಲಿದೆ.
ಒಟ್ಟಿನಲ್ಲಿ ಮಧ್ಯರಾತ್ರಿಯಿಂದ ೧೨೪೦ ಮೀಟರ್ ಹತ್ತಿ ಉಹುರು ಮುಟ್ಟಿ, ಮತ್ತೆ ೧೯೪೫ ಮೀಟರ್ ಕೆಳಗೆ ಇಳಿದು ಬಂದಿದ್ದೆವು! ಅಲ್ಲಿ ಊಟಮಾಡಿ ಟೆಂಟ್ ಒಳಗೆ ಸೇರಿದೆವು. ಕಳೆದ ೩೮ ಗಂಟೆಯಿಂದ ನಿದ್ದೆ ಮಾಡಿರಲಿಲ್ಲ. ತಲೆ ಇಟ್ಟ ತಕ್ಷಣ ನಿದ್ದೆ ಬಾರದಿರುತ್ತದೆಯೇ?
ಏಳನೇ ದಿನ:
ಮಾರನೇಯ ದಿನ ಎದ್ದು, ತಿಂಡಿ ತಿಂದು, ಮತ್ತೆ ರೇನ್-ಫಾರೆಸ್ಟ್-ನಲ್ಲಿ ೧೪ ಕಿಲೋಮೀಟರ್ ಇಳಿಯುತ್ತ ಮ್ವೇಕಾ ಬಾಗಿಲನ್ನು ತಲುಪಿ, ಕಿಲಿಮಾಂಜಾರೋಗೆ ವಿದಾಯ ಹೇಳಿದೆವು. ಮ್ವೇಕಾ ದ್ವಾರದಿಂದ ಹೊರಬಂದು, ನಮಗಾಗಿ ಕಾಯುತ್ತಿದ್ದ ಬಸ್ಸಿನಲ್ಲಿ ಕೂತು ಮತ್ತೆ ನಮ್ಮ ಹೊಟೇಲು ಸೇರಿದೆವು.