ಬಾಲ್ಯದ ಆಟ,ಹುಡುಗಾಟದ ಸವಿನೆನಪು –ಅರುಣ ಹಾಲಪ್ಪ

 

ಹೊಸ ಪರಿಚಯ     

IMG_1554
ಅರುಣ ಹಾಲಪ್ಪ    

ಅರುಣಾ  ಮೂಲತಃ  ಶಿವಮೊಗ್ಗದವರು . ಕಳೆದ ೧೦ ವರ್ಷಗಳಿಂದ U K ಯ  ಶೆಫೀಲ್ಡ್ ನಗರದಲ್ಲಿ  ವಾಸವಾಗಿದ್ದಾರೆ. ಇಂಜಿನಿಯರಿಂಗ್ ಪದವಿ ಮುಗಿಸಿದ್ದು ಶಿವಮೊಗ್ಗದಲ್ಲಿ.ನಂತರ ಬೆಂಗಳೂರಿನಲ್ಲಿ ಸಾಫ್ಟ್ವೇರ್  ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಈಗ ಶೆಫೀಲ್ಡ್  ನ Sheffield Futures ಸಂಸ್ಥೆಯಲ್ಲಿ  Project Admin  ಆಗಿ ಕೆಲಸ ಮಾಡ್ತಾ ಇರುವ ಅರುಣಾ ಅವರಿಗೆ ಕನ್ನಡ ಭಾಷೆಯ ಬಗ್ಗೆ ಯಾವಾಗಲು ಅಭಿಮಾನ ಜಾಸ್ತಿ.

ಕನ್ನಡ ದಲ್ಲಿ  ಅವರು  ಬರೆದಿರುವ ಮೊದಲ ಲೇಖನ ಇದು .  ಮೊದಲ ಪ್ರಯತ್ನದಲ್ಲೆ ಉತ್ತಮ ಲೇಖನವನ್ನು ಕನ್ನಡದಲ್ಲಿ ಬರೆದು ಚಿತ್ರ ಸಮೇತ ಕಳಿಸಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು. ಬರಹದಲ್ಲಿ ಅವರಿಗೆ ಉಜ್ವಲ ಭವಿಷ್ಯವನ್ನು ಕೋರೋಣ. ಅನಿವಾಸಿ ವೇದಿಕೆ  ಈ ಬಗೆಯಲ್ಲಿ ಕನ್ನಡ ಲೇಖಕ/ಕಿ ಯರನ್ನು ಸೃಷ್ಟಿಸಬಲ್ಲದಾದರೆ ಅದಕ್ಕಿನ್ನ ಸಾರ್ಥಕತೆ ಬೇರೊಂದಿಲ್ಲ–ಸಂ

 

 


ಅವತ್ತು ಒಂದು ದಿನ ಹೀಗೆ ತರಕಾರಿ ತರೋಕೆ ಹೋಗಿದ್ದೆ, ಒಂದು ಫೋನ್ ಕಾಲ್ ಬಂತು, ಯಾರಪ್ಪಾ  ಅಂತ ಫೋನ್ ರಿಸೀವ್ ಮಾಡಿದೆ .ಪ್ರೇಮಲತಾ ಕೇಳಿದ್ರು “ಅನಿವಾಸಿ” ಗೆ ಒಂದು ಬರಹ ಬರೀತೀರಾ ಅಂತ. ಹೂಂ ಅಂತ ಏನೋ ಅಂದೆ, ಆದ್ರೆ ಏನಪ್ಪಾ ಬರೀಬೇಕು ಅನ್ನೋ ಚಿಂತೆ ಶುರು ಆಯಿತು. ಯೋಚನೆ ಮಾಡಿ ಮಾಡಿ ಏನೂ  ಹೊಳೀತಿಲ್ಲ ಏನಪ್ಪಾ ಮಾಡೋದು ಅಂತ ಇದ್ದಾಗ , ನನ್ನ ಸ್ನೇಹಿತರು ಯಾರೋ  ಬುಗುರಿ ತಂದು ಕೊಟ್ಟಿದ್ರು ,ಅದನ್ನ ಕೈಯಲ್ಲಿ  ಹಿಡ್ಕೊಂಡು ‘ಅಮ್ಮ ಇದನ್ನ ಹೇಗೆ ಆಡೋದು’ ಅಂತ ನನ್ನ ಮಗ ಶಿವಾಂಶ್ ಕೇಳಿದ…..ಬುಗುರಿ ಅಂದ ತಕ್ಷಣ ಹೊಳೆದಿದ್ದು ನನ್ನ ಅಜ್ಜಿ ಮನೆ ಅನುಭವಗಳು ಹಾಗು ನನ್ನ ಬಾಲ್ಯದ ಆಟಗಳು.ನಾನು ಚಿಕ್ಕವಳು ಇದ್ದಾಗ ಆಡ್ತಾ ಇದ್ದ ಆಟಗಳ ಹಾಗೂ ಅವುಗಳ ಲಾಭಗಳ ಬಗ್ಗೆ ಒಂದು ಚಿಕ್ಕ ವಿಶ್ಲೇಷಣೆ ಬರಿಯೋಣ ಅಂತ ಅನ್ಸ್ತು.

ಆಹಾ ಎಂಥಾ ದಿನಗಳು ಅವು ,ನೆನಸಿಕೊಂಡ್ರೆ ಮನಸ್ಸಿಗೆ ಏನೋ ಸಂತಸ  ಹಾಗು ಮುದ. ನನ್ನ ಅಜ್ಜಿ ಮನೆ ಸೊರಬ, ಅಪ್ಪಟ ಮಲೆನಾಡು. ಮೂರು ಹೊತ್ತು ಸೋ  ಅಂತ ಸುರಿಯೋ ಮಳೆ, ತಂಪು ಗಾಳಿ, ಘಮ್  ಅಂತ ಮಣ್ಣಿನ ಪರಿಮಳ, ಬಿಸಿ ಬಿಸಿ ಕೆಂಡದಲ್ಲಿ ಸುಟ್ಟಿರೋ ಅಕ್ಕಿ ಹಪ್ಪಳ ,ಗೆಣಸು, ಹೀಗೆ ಮಲೆನಾಡಿನ ಬಗ್ಗೆ ಹೇಳ್ತ ಇದ್ದ್ರೆ ವಿಶೇಷಣಗಳು ಸಾಲಲ್ಲ. ಬೇಸಿಗೆ ರಜಾ ಬಂತು ಅಂದ್ರೆ ಅಜ್ಜಿ ಮನೆಗೆ ಹೋಗೋ ತವಕ ಹಾಗು ಸಂತಸ ನನಗೆ .ಎರಡು ತಿಂಗಳು ಅಪ್ಪ ಅಮ್ಮ ಅಕ್ಕ ಯಾರದ್ದೂ ನೆನಪು ಇರ್ತಾ ಇರ್ಲಿಲ್ಲ .ಹಾಗೆ ಕಳಿತಾ ಇತ್ತು ನನ್ನ ರಜಾ ದಿನಗಳು.

ಮಲೆನಾಡಿನ ಮನೆಗಳು ಅಂದ್ರೆ ಹೆಚ್ಚು ಕಮ್ಮಿ ಒಂದೇ ತರಹ  ಮಂಗಳೂರು ಹಂಚಿನ ಮನೆಗಳು ,ದೊಡ್ಡ ಅಂಗಳ, ಅಂಗಳದ  ತುಂಬಾ ಬೆಳ್ಳಗೆ ಚೆಂದದ ರಂಗೋಲಿ, ಮನೆ ಮುಂದೆ ಜಗಲಿ ಕಟ್ಟೆ. ಮಲೆನಾಡಿನ ಆ ಸೊಗಡು ತುಂಬಾ ಚೆಂದ .ನಾನು ಹಾಗು  ನನ್ನ ಮಾಮನ  ಮಗಳು ಕಟ್ಟೆ ಸವಿಯೋ ತನಕ ಕಲ್ಲಾಟ ಆಡ್ತಾ ಇದ್ದ್ವಿ .ಈಗಿನ ಕಾಲದ ಮಕ್ಕಳು ಹೇಗೆ ವೀಡಿಯೋ ಗೇಮ್ಸ್ನಲ್ಲಿ  ನಾನು ಅಷ್ಟು ಸ್ಕೋರ್ ಮಾಡಿದೆ, ನಾನು ಇಷ್ಟನೇ ಲೆವೆಲ್ ಗೆ ಹೋದೆ ಅಂತ ಬೀಗ್ತಾರೋ ಹಾಗೆ ನಾವು ಯಾರ ಕಲ್ಲು ಎಷ್ಟು ದುಂಡಗೆ ಆಗತ್ತೆ ಅಂತ  ಪೈಪೋಟಿ  ಮಾಡ್ತ ಇದ್ದ್ವಿ. ಆಗ ಮನೆಯೊರೆಲ್ಲ ಹೇಳೋರು ಅಷ್ಟು ಕಲ್ಲಾಟ ಆಡಿದರೆ ಮಳೆ ಬರಲ್ಲ ಆಡಬೇಡಿ ಅಂತ. ಆಗಿನ ಆಟಗಳು ಆಗಿನ ಮುಗ್ಧತೆ ಈಗಿಲ್ಲ ಅಂತ ತುಂಬಾ ಬೇಸರ ಆಗತ್ತೆ. ಆಧುನಿಕತೆಯ ಘೀಳಲ್ಲಿ ನಾವು, ನಮ್ಮ ಮಕ್ಕಳು ನಮ್ಮ ಮೂಲವನ್ನೇ ಕಳೆದು ಕೊಳ್ತಾ ಇದೀವಿ ಅಂತ ಅನ್ಸತ್ತೆ.

aruna 1        aruna 3

 

ನನಗೆ ಅಜ್ಜಿ ಮನೆಗೆ ಹೋಗೋಕೆ ಮುಖ್ಯವಾದ ಆಕರ್ಷಣೆ ಅಂದ್ರೆ ಕಾಡಿಗೆ ಹೋಗೋದು ,ಕವಳೆ ಹಣ್ಣು ಕಿತ್ತು ತಿನ್ನೋದು. ಈಗಲೂ ನೆಂಸ್ಕೊಂಡ್ರೆ ಬಾಯಲ್ಲಿ ನೀರು ಬರತ್ತೆ .ಮಾಮ ನನ್ನ ಹಾಗೂ ನನ್ನ ತಂಗೀನ ಬಜಾಜ್ ಸ್ಕೂಟರ್ ನಲ್ಲಿ ಕಾಡಿಗೆ ಕವಳೆ ಹಣ್ಣು  ಮತ್ತು ಚಳ್ಳೆ ಕಾಯಿ ಕಿತ್ತುಕೊಂಡು ಬರೋಕೆ  ಕರ್ಕೊಂಡು ಹೋಗ್ತಾ ಇದ್ದ್ರು. ನಮಗೆ ಕಾನಲ್ಲಿ ಅಲೆದಾಡೋದು ಅಂದ್ರೆ ಅದೇನೋ ದೊಡ್ಡ ಉಡುಗೊರೆ ಸಿಕ್ಕಿರೋ ಅಷ್ಟು ಸಂತಸ . ಕಾಡಿಗೆ ಹೋದ್ಮೇಲೆ ಮಾಮ ಮುತ್ತಲ ಎಲೆಯಲ್ಲಿ ಒಂದು ಬಟ್ಟಲು ಮಾಡಿ ಕೊಡ್ತಾ ಇದ್ದ್ರು. ಮುಳ್ಳು ಅಂತಾನೂ ನೋಡದೆ ನಾವು ಕವಳೆ ಕಾಯಿ, ಹಣ್ಣು ಎಲ್ಲಾ ಕಿತ್ತಿದ್ದೋ  ಕಿತ್ತಿದ್ದು.  ಅದರಲ್ಲಿ ಬಟ್ಟಲಿಗೆ ಹೋಗಿದ್ದು ಕಮ್ಮಿ , ಜಾಸ್ತಿ ಹೊಟ್ಟೆಗೆ ಹೋಗ್ತಾ ಇತ್ತು.ಪೂರ್ಣಚಂದ್ರ ತೇಜಸ್ವಿ ಅವರ “ಪರಿಸರದ ಕಥೆ” ಪುಸ್ತಕದಲ್ಲಿ ಇರೋ ತರಾನೆ ಇರ್ತ ಇತ್ತು ನನ್ನ ಅನುಭವಗಳು. ನಿಸರ್ಗದ ಮಧ್ಯ ಬೇಳಿಯೊ ಸುಖನೇ ಬೇರೆ.

aruna5

ನಮ್ಮದೆಲ್ಲ ಆಗ “Organic” ಆಟಗಳು ಅಂತಾನೆ ಹೇಳಬಹುದು. ಹುಣಸೆ ಬಿಕ್ಕದಲ್ಲಿ , ಬಳೆ ಚೂರುಗಳಲ್ಲಿ , ಪರಕೆ ಕಡ್ಡಿಗಳಲ್ಲಿ, ಎಲೆ, ಕಲ್ಲು , ಮಣ್ಣು ,ಹೀಗೆ ಇನ್ನೂ ಹಲವಾರು ನೈಸರ್ಗಿಕ ವಸ್ತುಗಳಲ್ಲಿ  ಆಟ  ಆಡ್ತಾ ಇದ್ದ್ವಿ. ಹಾಗಾಗಿ ಇತ್ತೀಚಿನ ದಿನಗಳ ಹಾಗೆ  ಆಟ  ಆಡುವುದರಿಂದ  ದುಷ್ಪರಿಣಾಮಗಳು ಆಗ್ಬಹುದು ಅನ್ನೋದೇ ಇರ್ಲಿಲ್ಲ. “ಆಡು ಮುಟ್ಟದ ಸೊಪ್ಪಿಲ್ಲ” ಅನ್ನುವ  ಗಾದೆ ಮಾತಿನ ಹಾಗೆ ನಾವು ಆಡದೆ ಇರೋ ಆಟಗಳಿಲ್ಲ . ಈಗಲೂ ಕಣ್ಣು ಮುಂದೆ ಕಟ್ಟಿದ ಹಾಗಿದೆ ನಾವು ಆಡ್ತಾ ಇದ್ದದ್ದು. ನಾನು ಆಗ್ಲೇ ಹೇಳಿದ ಹಾಗೆ ವಿಧ ವಿಧವಾದ ಆಟಗಳನ್ನ ಆಡ್ತಾ ಇದ್ದ್ವಿ. ಅದ್ರಲ್ಲಿ  ಒಂದು ಬಳೆ ಆಟ. ಈ ಆಟದಲ್ಲಿ ಚೂರಾಗಿರೋ ಬಳೆ ತುಂಡುಗಳನ್ನ ಕೈ ಮೇಲೆ ಹಾಕಿ, ಪ್ರತಿಸ್ಪರ್ಧಿ ಯಾವ ಬಳೆ  ಚೂರನ್ನ ಹೇಳ್ತಾರೋ ಆ ಚೂರನ್ನ ಬಿಟ್ಟು ಬೆರೆಲ್ಲದನ್ನ ಕೆಳಗೆ ಹಾಕಬೇಕಿತ್ತು. ಇದೆ ತರಹದ ಇನ್ನೊಂದು ಆಟ “ಕಡ್ಡಿ ಆಟ” ,ಇದು ಹೇಗೆ ಅಂದ್ರೆ ಒಣಗಿರೋ ತೆಂಗಿನ ಗರಿಯನ್ನ  ಸ್ವಲ್ಪ ಸ್ವಚ್ಛಗೊಳಿಸಿ ೧೨ ಕಡ್ಡಿಗಳನ್ನ ತಯ್ಯಾರು ಮಾಡಿ ಅದರಲ್ಲಿ ಒಂದು ಕಡ್ಡಿ ಸ್ವಲ್ಪ ಉದ್ದ ಇರ್ತ ಇತ್ತು.  ರಾಜ ಕಡ್ಡಿ ಅಂತ ಹೆಸ್ರು ಅದಕ್ಕೆ. ರಾಜ ಕಡ್ಡಿ ಮಿಸುಕಾಡದೆ ಇರೋ ಹಾಗೆ ,ಒಂದೊಂದೇ ಕಡ್ಡಿಗಳನ್ನ ಎತ್ತಬೇಕಿತ್ತು.ಇಂತಹ ಆಟಗಳಿಂದ ಸೈರಣಿಕೆ, ಏಕಾಗ್ರತೆ  ಎಲ್ಲ ಬೆಳೀತಾ ಇತ್ತು ಅನ್ನೋದು ನನ್ನ ಅಭಿಪ್ರಾಯ.

ನಾವುಗಳು ಮನೆ ಒಳಗೆ ಇರ್ತಾ ಇದ್ದದ್ದೇ ಕಮ್ಮಿ ಅಂತಾನೆ  ಹೇಳಬಹುದು. ಮೂರು ಹೊತ್ತು ಹೊರಗೆ ಕಾಲ ಕಳಿತಾ  ಇದ್ದ್ವಿ. ಹೀಗಿದ್ದಾಗ ಹೊರ ಜಗತ್ತಿನ ವಡನಾಟ ಜಾಸ್ತಿ ಆಗ್ತಾ ಇತ್ತು, ಸ್ನೇಹಿತರೇ ಆಗ್ಬೇಕು ಅಂತಿಲ್ಲ ,ಯಾರನ್ನ ಬೇಕಾದ್ರೂ ಸೇರಿಸಿಕೊಂಡು  ಆಟ  ಆಡೋ ಮನೋಭಾವ ನಮ್ಮಲ್ಲಿ ಇತ್ತು. ಈಗಿನ ವಿಪರ್ಯಾಸ ಏನಪ್ಪಾ ಅಂದ್ರೆ ,ಮನೆಯ ಮೂರು ಗೋಡೆಯ ಮಧ್ಯ ಕೂತು ಜಗತ್ತಿನ ಯಾವುದೋ ಮೂಲೆಯಲ್ಲಿ ಕಂಡು ಕಾಣದೆ ಇರೋ ವ್ಯಕ್ತಿಯ ಜ್ಯೋತೆ ವೀಡಿಯೋ ಗೇಮ್ಸ್ ಆಡುವುದು. ಪ್ರಪಂಚ ಜ್ಞಾನ, ಆತ್ಮೀಯತೆ ಎಲ್ಲಾ ಜನರ ಖುದ್ದು ಸಂಪರ್ಕದಿಂದ ಬರುತ್ತೆ ಹೊರೆತು ಮನೆಯ ಮೂರು ಗೋಡೆ ಮಧ್ಯೆ ಕೂತ್ಕೊಂಡು ಅಲ್ಲ. ಗೋಲಿ, ಚಿನ್ನಿ ದಾಂಡು,ಲಾಗೋರಿ, ಬುಗುರಿ, ಗಾಳಿಪಟ ಹಾರಿಸೋದು ಹೀಗೆ ಇನ್ನೂ ತರಾವರಿ ಆಟಗಳು ನಮ್ಮದು. ಈ ತರಹದ ಆಟಗಳನ್ನ ಆಡ್ತಾ ಇದ್ದಿದ್ದರಿಂದ “motor skills” , “hand eye coordination” ಇನ್ನೂ ಹಲವಾರು ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅನೂಕೂಲವಾಯಿತು ಅನ್ನೋದು ನನ್ನ ಅನಿಸಿಕೆ. ಇತ್ತೀಚಿನ ಮಕ್ಕಳು ಈ ತರಹದ ಆಟಗಳನ್ನ ಆಡಿದ್ದೇ  ನೋಡಿಲ್ಲ ನಾನ. ಯಾವಾಗ್ಲೂ Ipad ಅಥ್ವಾ smart phone ನಲ್ಲಿ ಆಟ, ಬರೀ ಒಂದೇ ಬೆರಳಿನ ಉಪಯೋಗ ನೋಡಿದ್ರೆ  Charles Darwin ನರ  Theory of Evolution ನೆನಪಾಗಿ, ಮುಂದಿನ ಪೀಳಿಗೆಯ ಬಗ್ಗೆ ಭಯ ಆಗತ್ತೆ.

ಇನ್ನೂ ಆಟಗಳನ ಬಿಟ್ಟು ಅಜ್ಜಿ ಮನೆಯ ಬೇರೆ ಅನುಭವಗಳ ಬಗ್ಗೆ ಹೇಳ್ಬೇಕು ಅಂದ್ರೆ ಮೊದಲು ನೆನಪಾಗೋದು,ಮಾವಿನ ಮರ. ನನ್ನ ಅಜ್ಜಿ ಮನೆಯ ಹಿತ್ತಲಲ್ಲಿ ಎರಡು ದೊಡ್ಡ ದೊಡ್ಡ ಮಾವಿನ ಮರಗಳಿದ್ದ್ವು. ನನಗೆ ಅವೆರೆಡು ಮರಗಳು ಬರೀ ಮರಗಳಲ್ಲ ಒಂಥರಾ ಸ್ನೇಹಿತರ ತರಹ ಅನ್ಸ್ತಾ ಇತ್ತು. ಈ  ಮರಗಳು ಇಲ್ಲದೆ ಅಜ್ಜಿ ಮನೆನ  ನೆಂಸ್ಕೊಳೋಕೆ ಸಾಧ್ಯನೇ ಇರ್ತ ಇರ್ಲಿಲ್ಲ. ಆ ಮರಗಳ ನೆರಳಿನ ತಂಪು ಈಗ್ಲೂ ಹಿತ ಕೊಡತ್ತೆ ಮನಸ್ಸಿಗೆ. ಒಂದು ಮಜವಾದ ಸಂಗತಿ ನೆನಪಾಗತ್ತೆ ಮಾವಿನ ಮರ ಅಂದ್ರೆ, ಈ ಎರಡು ಮಾವಿನ ಮರಗಳಲ್ಲಿ ಒಂದು ಗಿಣಿ ಮೂತಿ ಮಾವಿನ ಕಾಯಿ ಮರ. ಗಿಣಿ ಮೂತಿ ಮಾವಿನ ಕಾಯಿ ಅಂದ್ರೆ ಕೇಳಬೇಕೆ ಯಾರಿಗಾದ್ರೂ ಬಾಯಲ್ಲಿ ನೀರು ಬರತ್ತೆ. ನನ್ನ ಅಜ್ಜಿ ಮನೆ ಹತ್ತಿರ ಒಂದು  ಶಾಲೆ ಬೇರೆ ಇತ್ತು, ಇನ್ನು  ಮುಗೀತಲ ಕಥೆ . ಪ್ರತಿದಿನ ಶಾಲೆ ಬಿಟ್ಟ ಮೇಲೆ ಮಕ್ಕ್ಳು ಕಲ್ಲು ತೂರೊದು,ನಾವು ಅದಕ್ಕೆ ಶಾಲೆ ಬಿಡುವ ಮೊದಲೇ ಕಾವಲು ನಿಲ್ತ ಇದ್ದ್ವಿ. ಯಾರು ಕಲ್ಲು ಹೊಡೀತಾರೋ ಅವರನ್ನ ಹಿಡಿಯೋಕೆ ಪ್ರಯತ್ನ ಮಾಡೋದು. ಈ ಕೆಲಸವನ್ನ ಅದೆಷ್ಟು ಹೆಮ್ಮೆ ,ನಿಷ್ಠೆ ಇಂದ  ಮಾಡ್ತ ಇದ್ದ್ವಿ ಅಂದ್ರೆ ನೋಡಿದವ್ರು ಮೆಚ್ಚ್ಕೋಬೇಕು.  ನನಗೆ ತಿರುಗಿ ಸ್ಪಂದಿಸದೆ ಇರೋ ಒಂದು ಮರದ ಬಗ್ಗೆ ನನಗೆ ಅಷ್ಟು ಒಲವು  ಇರೋಕೆ ಕಾರಣ , ಆಗಿನ ನಿಷ್ಕಲ್ಮಶ ವಾತಾವರಣ ಹಾಗು ನಿಸರ್ಗದ ಜ್ಯೋತೆಗೆ ನನಗಿದ್ದ  ಒಡನಾಟ ಅನ್ಸತ್ತೆ. ಈಗಲೂ ನೆನಪಿದೆ  ಇರುವೆ ಸಾಲು ಹೋಗ್ತಾ ಇದ್ದ್ರೆ ,ನಾನು ಅದಕ್ಕೆ ದಾರಿ ಮಾಡಿ ಕೊಡ್ತಾ ಇದ್ದೇ. ಅಮ್ಮ ಯಾವಾಗ್ಲೂ ಸಕ್ಕರೆ ಅಥವಾ ಪುಟಾಣಿ ಕೊಡ್ತಾ ಇದ್ದ್ರು  ಹೋಗಿ ಆ ಸಾಲಿಗೆ ಹಾಕೋಕೆ. ಆ ಇರುವೆಗಳು ಸಕ್ಕರೆ ಹರಳನ್ನ ಎತ್ತಿಕೊಂಡು ಹೋಗ್ತಾ ಇದ್ರೆ ಅದನ್ನೇ  ಘಂಟೆ ಗಟ್ಟಲೆ ನೋಡ್ತಾ ಕೂತ್ಕೊತಾ  ಇದ್ದೇ. ಅದೇ ಇಂದಿನ ಮಕ್ಕಳಿಗೆ ಏನೇ ಹೊಸ ಆಟದ ಸಾಮಾನು ಕೊಡಿಸಿದ್ರು ಕೇವಲ ೫ ನಿಮಿಷ ,ಆಮೇಲೆ ಅಮ್ಮ “Bore” ಅಂತ ಶುರು ಮಾಡ್ತಾರೆ. ನನಗೆ ಇದ್ದ ಆ ತರಹದ ವಾತಾವರಣ ನನ್ನ ಮಗನಿಗೆ ಇಲ್ಲ ಅಂತ ತುಂಬಾ ಬೇಸರ ಆಗತ್ತೆ ಕೇಳೊವೊಮ್ಮೆ.

aruna 2

ಮಲೆನಾಡು ಅಂದ ತಕ್ಷಣ “ಯಕ್ಷಗಾನ” ದ ಬಗ್ಗೆ ಹೇಳಿಲ್ಲ ಅಂದ್ರೆ ತಪ್ಪಾಗತ್ತೆ. ಎಂಥಾ ಅದ್ಭುತವಾದ ಅನುಭವ ಅಂತೀನಿ. ಆಹಾ ಕಣ್ಣಿಗೆ ಹಬ್ಬ.’ಇವತ್ತು ರಾತ್ರಿ ಯಕ್ಷಗಾನ ಇದೆ’ ಅಂತ ಮಾಮ ಹೇಳಿದ್ರೆ ಸಾಕು ಕುಶಿನೋ ಕುಶಿ ನಮಿಗೆಲ್ಲ. ಬೇಗ ಬೇಗನೆ  ಊಟ ಮಾಡಿ ,ಊರ ದೇವಸ್ಥಾನದ ಹತ್ರ ಹೋಗಿ ಮುಂದಿನ ಸಾಲಿನಲ್ಲಿ ಕೂತ್ಕೊಂಡು ಬಿಡ್ತಾ ಇದ್ದ್ವಿ. ರಾತ್ರಿ ಸರಿಯಾಗಿ ೯.೩೦ ಗೆ ಆರಂಭ ಆಗಿದ್ದು ಬೆಳಗಿನ ಜಾವ ಮುಗಿಯೋದು. ಮನೆಗೆ ಬಂದ ಮೇಲೆ ಎರಡು ಮೂರು ದಿನ ಯಕ್ಷಗಾನದ ಪಾತ್ರಗಳನ್ನೇ ಮೆಲುಕು ಹಾಕ್ತಾ ಇದ್ದ್ವಿ. ಯಾವ 3D /4D ಸಿನಿಮಾನೂ ಅಷ್ಟು ಕುಶಿ ಕೊಡಲ್ಲ, ಅಷ್ಟು ಸವಿತಾ ಇದ್ದ್ವಿ ಯಕ್ಷಗಾನದ ಅನುಭವವನ್ನ. ಇನ್ನು ವಾರದ ಸಂತೆ ಬಗ್ಗೆ ಹೇಳಲೇಬೇಕು ನಾನು. ಏನು ಹುಮ್ಮಸ್ಸು ನಮಗೆ  ಸಂತೆಗೆ ಹೋಗೋದು ಅಂದ್ರೆ. ಎಷ್ಟು ವರ್ಣರಂಗೀತವಾಗಿ ಇರ್ತಾ ಇತ್ತು ಸಂತೆ. ಒಂದು ಕಡೆ ಊರಿಂದ ಬೆಣ್ಣೆ ಹೊತ್ತು  ತಂದು ಮಾರ್ತಿರೋ ಅಜ್ಜಿಗಳು, ಇನ್ನೊಂದೆಡೆ ಬಣ್ಣ ಬಣ್ಣದ ಅಂಗಿ, ಪೇಟಿಕೋಟ್ ,ಚಡ್ಡಿ ಮಾರ್ತಿರೋರು, ತರತರಾವರಿ ಕಾಳುಗಳನ್ನ  ನೋಡಿದ್ದೆ ನಮ್ಮೋರ ಸಂತೇಲಿ ನಾನು. ಜೇಡಿ  ಮಣ್ಣಿನಲ್ಲಿ ಮಾಡಿದ ಮಕ್ಕಳ ಅಡುಗೆ ಸಾಮಾನು, ಗಿರ್ಗಿಟ್ಲೆ,ಇನ್ನೂ ಹತ್ತು ಹಲವಾರು ರಂಗು ರಂಗಿನ ಸಾಮಾನುಗಳ ಸಾಗರ ಆಗಿತ್ತು ನಮ್ಮೋರ ಸಂತೆ. ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ ಸಂತೆಯ ಚಿತ್ರಣ. ನಮ್ಮ  ಮನೆಗೆ ಧೈಯಣ್ಣ  ಅಂತ ಒಬ್ಬ್ರೂ ಬರೋರು. ಅವ್ರು ಸಂತೇಲಿ ಖರೀದಿ ಮಾಡಿದ ಸಾಮಾನು ಹೊತ್ತುಕೊಂಡು ಬರೋಕೆ ಸಹಾಯ ಮಾಡೋಕೆ ಅಂತಾನೆ ಬರ್ತಾ ಇದ್ದ್ರು. ಮಂಗಳವಾರ ಬಂತು ಅಂದ್ರೆ  ಸರಿಯಾಗಿ ಬೆಳಗ್ಗೆ ೯ ಘಂಟೆಗೆ ದೊಡ್ಡ ದೊಡ್ಡ ಚೀಲಗಳನ್ನ ಹಿಡ್ಕೊಂಡು ಹಾಜರಿ ಹಾಕ್ತಾ ಇದ್ದ್ರು . ನಾವೂ  ಅಷ್ಟೇ ಅವತ್ತು ಬೇಗ ಎದ್ದು ಸಂತೆಗೆ ಹೋಗೋಕೆ ತಯಾರು. ಸಂತೇಲಿ ಮಾಮಾನ ಹಿಂದೆ ಧೈಯಣ್ಣ ,ಅವರ ಹಿಂದೆ ನಾವು ಸಾಲಾಗಿ ಹೋಗೋದು. ಸೌತೆಕಾಯಿ, ಗಜ್ಜರಿ  ತಗೊಂಡ್ರೆ ಚೀಲಕ್ಕೆ ಹೋಗೋ ಮೊದ್ಲು ಎರಡು ಸೌತೆಕಾಯಿ ನಮ್ಮ ಕಯ್ಯಿಗೆ ಬರೋದು, ತೊಳಿಯೋದೆಲ್ಲ ದೂರದ ಮಾತು ,ಸೀದಾ ಬಾಯಿಗೆ ಹೋಗ್ತಾ ಇತ್ತು. ಹೀಗೆ ಏನೇ ತಗೊಂಡ್ರು ಮೊದ್ಲು ನಮಗೆ ನೈವೇಧ್ಯ ಆಗ್ತಾ ಇತ್ತು. ಆಗಿನ ಖರೀದಿಯ ಇನ್ನೊಂದು ವಿಶೇಷತೆ ಏನಂದ್ರೆ ಪ್ಲಾಸ್ಟಿಕ್ ಬಳಕೆ ಬಹಳ ಕಮ್ಮಿ, ನಾವು ಏನೇ ಖರೀದಿ ಮಾಡಿದ್ರು ಅದನ್ನ ಒಂದೇ ಚೀಲಕ್ಕೆ ಹಾಕಿಸ್ತಾ ಇದ್ದ್ವಿ, ಅನಂತರ ಮನೆಗೆ ಬಂದು ಹಿತ್ತಲಲ್ಲಿ ಚಿಕಮ್ಮ ಹಾಗು  ಅಮ್ಮನ ಜ್ಯೋತೆ  ಕೂತು ಎಲ್ಲಾ ತರಕಾರಿ, ಹಣ್ಣುಗಳನ್ನ ಬೇರ್ಪಡಸ್ತಾ ಇರುವಾಗ ಯಾವ ತರಕಾರಿ ಹೇಗೆ? ಎಲ್ಲಿ? ಬೆಳೆಯತ್ತೆ ,ಹೀಗೆ  ಇನ್ನೂ ಎಷ್ಟೊಂದು ಮಾಹಿತಿಗಳನ್ನ ತಿಳಿದುಕೊಳ್ಳ್ತ ಇದ್ದ್ವಿ. ಮಕ್ಕಳಲ್ಲಿ ತರಕಾರಿಗಳ ಬಗ್ಗೆ ಒಟ್ಟಾಗಿ ಹಸಿರಿನ ಬಗ್ಗೆ ಆಸಕ್ತಿ ,ಒಲವು ಹುಟ್ಟಿಸಲು ಎಷ್ಟು ಚೆಂದದ ವಿಧಾನ ಅಲ್ವಾ?!

 

aruna 4  aruna 6

ಹೀಗೆ ಇನ್ನೂ ಹೇಳ್ತಾ ಹೋದ್ರೆ ನನ್ನ ಅಜ್ಜಿ ಮನೆ ಕಥೆಗಳ  ಪಟ್ಟಿ ಮುಗಿಯಲ್ಲ. ನಾನು ಆಧುನಿಕತೆಯ ವಾತಾವರಣದಿಂದ  ದೂರ, ಪರಿಸರದ ಜ್ಯೋತೆಗೆ ಬೆಳೆಯಲು ಎಷ್ಟು ಪುಣ್ಯ ಮಾಡಿದ್ದೆ ಅನ್ಸತ್ತೆ. ಪ್ರಕೃತಿ ಒಂದು ಅದ್ಭುತ ಪಾಠಶಾಲೆ,ತನ್ನದೇ ಆದ ವಿಸ್ಮಯ ಹಾಗು ಸರಳ ರೀತಿಯಲ್ಲಿ ನಮಗೆ ಎಲ್ಲವನ್ನು ಹೇಳಿಕೊಡತ್ತೆ. ನಾನು ಬಾಲ್ಯದಲ್ಲಿ ಕಲಿತ ಆಟ, ಪಾಠಗಳು  ,ಅತ್ಯಾಮೂಲ್ಯವಾದದ್ದು,ನನ್ನ ಅನುಭವಗಳು ಕೇವಲ ನನ್ನ ಸ್ವತ್ತು , ನಾನು ಆಸ್ವಾಧಿಸಿರೋದನ್ನ ಯಾರಿಂದಲೂ ಕಸಿಯಲು ಸಾಧ್ಯ ಇಲ್ಲ ಅನ್ನೋ ಸಂತಸ ನನ್ನದು.ನಾನು ಈ ಲೇಖನ ಬರೆಯುತ್ತಿದ್ದಾಗ ನನಗೆ ಚಿ ಉದಯ್ ಶಂಕರ್ ಅವರ  ಸಾಹಿತ್ಯ  “ಮುನಿಯನ ಮಾದರಿ” ಚಿತ್ರದ  ಹಾಡು ನೆನಪಾಯಿತು

“ಇಂದಿಗಿಂತ ಅಂದೇನೆ ಚೆಂದವು ,ಆಹಾ ಎಂಥ ಸೊಗಸು ಆ ನಮ್ಮ ಕಾಲವು

ಅಂಥ ವಯಸು , ಅಂಥ ಮನಸು ಬಾರದು ಬಯಸಲು ,ದೊರಕದು ಬೇಡಲು

ಯಾರೇ ಬರಲಿ ಯಾರೇ ಇರಲಿ ನಮ್ಮ ಮಾತೆ  ನಮ್ಮದು,

ಕಲ್ಲು ಮುಳ್ಳೇನು  ಚಳಿ ಗಾಳಿ ಮಳೆಯೇನು ನಮ್ಮ ತಡೆಯೋರು ಯಾರು

ತೋಟ ನಮ್ಮದು, ಬಾವಿ ನಮ್ಮದು ,ಊರು ಕೇರಿ ನಮ್ಮದು

ಮೀನು ನೀರಲ್ಲಿ ,ಮರ ಕೋತಿ ಮರದಲ್ಲಿ ,ಏನು  ಆ ನಮ್ಮ ಜೋರು

ಅಂದು ಯಾರಿಲ್ಲ ನಮ್ಮನ್ನು ಹಿಡಿಯೋರು.

ನಾವು ಕಳೆದ ಅಂದಿನ ದಿನಗಳು ಮತ್ತೆ ಹಿಂದಿರುಗಿ ಬರಲಿ, ಇಂದಿನ ಮಕ್ಕಳು  ಕೇವಲ ತಂತ್ರಜ್ಞಾನ ಅಷ್ಟೇ ಅಲ್ಲದೆ  ಪ್ರಕೃತಿ ಬಗ್ಗೆ ಹೆಚ್ಚು ಹೆಚ್ಚು  ಆಸಕ್ತಿ ಬೆಳಸಿಕೊಳ್ಳಲಿ ಹಾಗು ಅದರ ಬಗ್ಗೆ ಒಲವು ಮೂಡಿಸಿಕೊಳ್ಳಲ್ಲಿ ಅನ್ನೋದು ನನ್ನ ಆಶಯ .

ಚಿತ್ರ -ಲೇಖನ  -ಅರುಣಾ ಹಾಲಪ್ಪ

ಚಿತ್ರ ಕೃಪೆ-Google Images

ದಶವರ್ಷಗಳ ಸಂಭ್ರಮದಲ್ಲಿ ಗಗನರಾಣಿ –ಯೋಗೀಂದ್ರ ಮರವಂತೆ

           ಹೊಸ ಪರಿಚಯ

yogi 4
ಯೋಗೀಂದ್ರ ಮರವಂತೆ

ಯೋಗೀಂದ್ರ  ಮರವಂತೆ,  ಕಳೆದ ಹನ್ನೆರಡು  ವರ್ಷಗಳಿಂದ ಇಂಗ್ಲಂಡ್ ನ ಬ್ರಿಸ್ಟಲ್ ಎನ್ನುವ ಊರಿನ ವಿಮಾನ ತಯಾರಿಕೆಯ   ಕಂಪನಿ  ಏರ್ಬಸ್ ಅಲ್ಲಿ  ವಿಮಾನ  ತಂತ್ರಜ್ಞರಾಗಿ  ಉದ್ಯೋಗಮಾಡುತ್ತಿದ್ದಾರೆ.  ಇವರ ಬರಹಗಳು ಪ್ರಜಾವಾಣಿ ,ಸುಧಾ ಮತ್ತು ಉದಯವಾಣಿ ಪತ್ರಿಕೆಗಳಲ್ಲಿ  ಪ್ರಕಟ ಆಗುತ್ತಿರುತ್ತವೆ .ಮೊದಲು ಕೆಂಡಸಂಪಿಗೆ ಎನ್ನುವ ಅಂತರ್ಜಾಲ  ಪತ್ರಿಕೆಯಲ್ಲಿ ನಿಯಮಿತವಾಗಿ ಅಂಕಣ ಬರೆಯುತ್ತಿದ್ದರು. ಬರವಣಿಗೆಯ ಜೊತೆಗೆ  ಯಕ್ಷಗಾನ ಮತ್ತೆ ಸಾಕ್ಶ್ಯ ಚಿತ್ರ ನಿರ್ಮಾಣದಲ್ಲಿ ಕೂಡ ವಿಶೇಷ  ಆಸಕ್ತಿ ಹೊಂದಿದ್ದಾರೆ. ಬ್ರಿಟನ್ ಆದ್ಯಂತ ಹಲವು ಯಕ್ಷಗಾನ ಪ್ರದರ್ಶನಗಳನ್ನು  ನೀಡಿದ್ದಾರೆ .  ಬ್ರಿಸ್ಟಲ್ ಅಲ್ಲಿ ಪತ್ನಿ ಸೀಮಾ ಅಡಿಗ ಮತ್ತೆ ಮಗಳು ಸುನಿಧಿಯರ ಜೊತೆಗೆ ನೆಲೆಸಿದ್ದಾರೆ .

ಯು.ಕೆ. ಯಲ್ಲಿರುವ ಒಬ್ಬ ಪ್ರತಿಭಾವಂತ ಬರಹಗಾರರು, ಕಲಾವಿದರು ಮತ್ತು  ಏರೋನಾಟಿಕಲ್ ಪರಿಣತರಾದ ಇವರ ಲೇಖನಗಳನ್ನು ಅನಿವಾಸಿ ಬಳಗದ ಹಲವರು ಓದಿದ್ದರೂ, ಅನಿವಾಸಿಯಲ್ಲಿ ಇವರು ಬರೆಯುತ್ತಿರುವುದು ಇದೇ ಮೊದಲು-ಸಂ

 

____________________________________________________________________________________________

yogi 1
ದಶವರ್ಷಗಳ ಸಂಭ್ರಮದಲ್ಲಿ ಗಗನರಾಣಿ

ಬ್ರಿಟನ್ ಅಲ್ಲಿ  ವಿಮಾನಹತ್ತಿ   ದುಬೈ ಅಥವಾ ಕತಾರ ಮೂಲಕ ಭಾರತವನ್ನು ತಲುಪುವವರಿಗೆಲ್ಲ ಇವಳ  ಪರಿಚಯ ಇರಬೇಕಲ್ಲ! ಇವಳನ್ನು ಇವಳು ಎನ್ನುವಷ್ಟು ಇವಳಲ್ಲಿ  ಸಲಿಗೆ ನನಗೆ . ಕಳೆದ ಹನ್ನೆರಡು  ವರ್ಷ ಇವಳನ್ನು ಹತ್ತಿರದಿಂದ ನೋಡಿದ್ದೇನೆ ಇವಳಿಗಾಗಿ ದುಡಿದಿದ್ದೇನೆ . ಇವಳ ಮಟ್ಟಿಗೆ ಇದು ಸಂಭ್ರಮದ  ಹೊತ್ತು ; ಅಂದರೆ ಗಗನಲೋಕದಲ್ಲಿ ವಿಮಾನವೊಂದರ   ದಶಮಾನೋತ್ಸವ ಆಚರಣೆ ನಡೆಯುತ್ತಿರುವ ಹೊತ್ತು . ಪ್ರತಿ ಪ್ರಯಾಣದಲ್ಲಿ 500 ಕ್ಕೂ ಹೆಚ್ಚು ಜನರನ್ನು ಸಾಗಿಸಬಲ್ಲ ಜಗತ್ತಿನ ಅತಿ ದೊಡ್ಡ ನಾಗರಿಕ   ವಿಮಾನ, ಆಕಾಶದ ರಾಣಿ ಎಂದು ಕರೆಸಿಕೊಳ್ಳುವ  A380 ವಿಮಾನ ಹತ್ತು ವರ್ಷಗಳ ಸೇವೆಯನ್ನು  ಪೂರೈಸಿದೆ.  ಈಗ ಸುಮಾರು  200 A380 ವಿಮಾನಗಳು ಸೇವೆಯಲ್ಲಿವೆ ; ಮುಂದಿನ ಐದು ವರ್ಷಗಲ್ಲಿ ಇನ್ನೂ 100 ವಿಮಾನಗಳು ಸೇವೆ ಆರಂಭಿಸಲಿವೆ . ವಿಮಾನಗಳನ್ನು  ಹೆಣ್ಣಿಗೆ ಹೋಲಿಸುವ ಪದ್ಧತಿ ಎಂದು ಆರಂಭ ಆಯಿತೋ ಗೊತ್ತಿಲ್ಲ , ಆದರೆ ಇವತ್ತಿನ ನಮ್ಮ ಕಥೆಯ  ನಾಯಕಿ  A380 ವಿಮಾನದ ಕಥೆ ಹೇಳಬೇಕೆಂದರೆ ಯುರೋಪಿಯನ್ನರ ಅಮೆರಿಕನ್ನರ ಎಂದೂ ಮುಗಿಯದ ಸರಸ-ವಿರಸಗಳ   ಪುರಾಣದಿಂದಲೇ ಆರಂಭಿಸಬೇಕು  !

ಎರಡನೆಯ ಮಹಾಯುದ್ಧ ಮುಗಿದು ಸುಮಾರು ಮೂವತ್ತು ವರ್ಷಗಳ  ನಂತರ , ಹಳೆಯ ಕಹಿಯೋ ಅಲ್ಲ ಹೊಸ ಹುಳಿಯೋ ಯುರೋಪಿಯನ್ನರು  ಅಮೆರಿಕಕ್ಕೆ ಸಡ್ಡು ಹೊಡೆಯಬೇಕೆಂದುಕೊಂಡರು. ಅಮೇರಿಕಾದಲ್ಲಿ ಬೋಯಿಂಗ್ ಆಗಲೇ ಗಟ್ಟಿಯಾಗಿ ಬೆಳೆದಿತ್ತು .ವಿಮಾನ ತಂತ್ರಜ್ಞಾನ ಅಮೆರಿಕದವರಿಗೆ ಮಾತ್ರ ಮೀಸಲಲ್ಲ ಅಂದು ತೋರಿಸಲು ಯುರೋಪಿಯನ್ನರು   ಶಬ್ದದ ವೇಗಕ್ಕಿಂತ ಎರಡು ಪಾಲು ಹೆಚ್ಚಿನ ವೇಗದಲ್ಲಿ ಹಾರುವ ವಿಮಾನವನ್ನು ಹಾರಿ ಬಿಟ್ಟರು  .ಫ್ರೆಂಚ್ ರು ಮತ್ತು ಆಂಗ್ಲರು ಸೇರಿ 1970 ರಲ್ಲಿ   ಕಾಂಕರ್ಡ್ ಎನ್ನುವ ವಿಮಾನ ವಿನ್ಯಾಸಗೊಳಿಸಿದ್ದು ,ಹಾರಿಸಿದ್ದು ,ಅದು  ಮೂರು ದಶಕಗಳ  ಸೇವೆ ಸಲ್ಲಿಸಿ,2003ರಲ್ಲಿ  ತನ್ನ ಸೇವೆಯಿಂದ ನಿವೃತ್ತ ಆಗಿರುವುದು ಈಗ ಇತಿಹಾಸ. ಕಾಂಕಾರ್ಡ್ ಸೇವೆ ಆರಂಭಿಸಿದ ನಂತರ   ಆಂಗ್ಲರು ಫ್ರೆಂಚರು ಜೊತೆಗೆ ಜೆರ್ಮನರು ಹಾಗುಸ್ಪೇನ್  ನವರು ಸೇರಿ ವಿಮಾನ ತಯಾರಿಕೆಯ  ಯುರೋಪಿಯನ್ ಒಕ್ಕೂಟ ಸ್ಥಾಪಿಸಿಕೊಂಡರು ಅದರ ಹೆಸರು ಏರ್ಬಸ್ (Airbus). ಏರ್ಬಸ್ ಬೆಳೆದು ಬೆಳೆದು  ಅವರ ಉದ್ದೇಶಗಳು ಫಲಿಸುವಂತೆ ,ನಾಗರಿಕ  ವಿಮಾನ ಮಾರುಕಟ್ಟೆಯ ಅರ್ಧ ಭಾಗವನ್ನು ಅಮೇರಿಕನ್ನರಿಂದ ಕಸಿದುಕೊಂಡರು. ಮಹತ್ವಾಕಾಂಕ್ಷೆಗಳ ಸಮರವೂ ಒಂದು ನಶೆಯೇ ಇರಬೇಕು. ಈ ನಶೆಯನ್ನು ಏರಿಸಿಕೊಂಡದ್ದು ಬರಿಯ ಎರಡು ವಿಮಾನ ತಯಾರಿಸುವ  ಕಂಪೆನಿಗಳಲ್ಲ , ಅವುಗಳ ಹಿಂದಿರುವ ದೇಶಗಳ ಸರಕಾರಗಳು ಕೂಡ .

yogi 2

ವಿಶ್ವ ಸಂಸ್ಥೆಯ ಅಂತರಾಷ್ಟ್ರೀಯ ವ್ಯಾಪಾರಗಳ ನ್ಯಾಯಾಲಯದಲ್ಲಿ (W.T.O ) ಬೋಯಿಂಗ್ ಮತ್ತು ಏರ್ಬಸ್ ಗಳು, ಸರಕಾರಗಳು ಹೊಸ ವಿಮಾನಗಳ ತಯಾರಿಗೆ ಸಬ್ಸಿಡಿ ಅಥವಾ ಸಾಲ ನೀಡಬಾರದು ಅದು ಎರಡು ವಿಮಾನ ಕಂಪೆನಿಗಳ ಸ್ಪರ್ಧೆ ಆಗದೆ ದೇಶಗಳ ಸರಕಾರಗಳ ನಡುವಿನ ಸ್ಪರ್ಧೆ ಆಗುತ್ತದೆ ಎಂದೆಲ್ಲ ಉದಾತ್ತ ಮೌಲ್ಯಗಳ ಮಾತಾಡುತ್ತಾ ಒಬ್ಬರು ಇನ್ನೊಬ್ಬರ ಮೇಲೆ ಅಪಾದನೆ ಮಾಡಿ ಕೇಸು ಹಾಕಿಕೊಂಡು  ಕುಳಿತಿದ್ದಾರೆ .W.T.O ದ ಕಟಕಟೆಯಲ್ಲಿ ನಡೆಯುತ್ತಿರುವ ಸುದೀರ್ಘವಾದ ಕೇಸು ಇದು.  ಅಮೆರಿಕದ ಮತ್ತು ಯುರೋಪಿನ ದೇಶಗಳ ಸರಕಾರಗಳು ತಮ್ಮ ವಿಮಾನ ಉದ್ಯಮದ ಹಿತಾಸಕ್ತಿಗೋಸ್ಕರ ಸಾಲ ಸಬ್ಸಿಡಿ ನೀಡುವುದು ನಿಲ್ಲಿಸಿಲ್ಲ, ನಿಲ್ಲಿಸುವುದೂ ಇಲ್ಲ. ಯಾಕೆದಂರೆ ಮೇಲ್ನೋಟಕ್ಕೆಕಟ್ಟಿ ಬೀಸುತ್ತಿರುವುದು  ಏರ್ಬಸ್ ಮತ್ತು ಬೋಯಿಂಗ್ ಮಧ್ಯವಾಗಿ ಕಂಡರೂ ಹಿಂದೆ ನಿಂತು ಶಕ್ತಿ ತುಂಬುತ್ತಿರುವವರು ಆಯಾಯ ದೇಶದ ಸರಕಾರಗಳೇ .  ೨೦೦೦ನೆಯ ಇಸವಿಯ ಆಸುಪಾಸಿಗೆ ಏರ್ಬಸ್ ಕಂಪೆನಿಯಲ್ಲೊಬ್ಬರಿಗೆ  ಜಗತ್ತಿನ ಅತ್ಯಂತ ದೊಡ್ಡ ವಿಮಾನವನ್ನು  ತಾವು ಯುರೋಪಿಯನ್ನರು  ತಯಾರಿಸಬೇಕೆಂಬ ಬೆಳಗಿನ ಜಾವದ ಕನಸು ಬಿತ್ತು.ಆ ಕಾಲದಲ್ಲಿ  ಬೋಯಿಂಗ್  ಕಂಪೆನಿಯ ‘747’ ವಿಮಾನವೇ ಜಗತ್ತಿನ ಅತಿ ದೊಡ್ಡ ನಾಗರಿಕ ವಿಮಾನ ಆಗಿತ್ತು . ಯುರೋಪಿನ ಮಿತ್ರರ ಕನಸಿಗೆ ಅಮೆರಿಕನ್ನರು ನಕ್ಕು, ಈ ಯುರೋಪಿನನವರು ಬರೇ ಭಾವವೇಶದಲ್ಲೇ ಬದುಕುವವರು ಎಂದು   ನುಡಿದರು. ಜಗತ್ತಿನ ಅತಿ ದೊಡ್ಡ (ಡಬಲ್ ಡೆಕ್ಕರ) ವಿಮಾನ ಮಾಡಿದರೆ ಅದಕ್ಕೆ   ಮಾರುಕಟ್ಟೆಯಲ್ಲಿ ಯಶಸ್ಸು ಸಿಕ್ಕೀತೆ  ಇಲ್ಲವೇ, ಸುರಿದ ಬಿಲಿಯನ್ ಗಟ್ಟಲೆ ಯುರೋ ಹಣ ವಸೂಲಿ ಆದೀತೆ ಇಲ್ಲವೇ ಎಂದು ಶಾಂತ ಮನಸ್ಸಿನಿಂದ ಯೋಚಿಸದೆ ,ಬರಿಯ  ಹೃದಯದ ಬಡಿತವನ್ನು  ಆಲಿಸಿ  ಏರ್ಬಸ್  ತೆಗೆದುಕೊಂಡ ನಿರ್ಧಾರ ಅದಾಗಿತ್ತು.

 

ಹತ್ತಿಪ್ಪತ್ತು ಸಾವಿರ  ಜನರಿಗೆ , ವಿಮಾನ ಬದುಕಿರುವವರೆಗೆ ಅಂದರೆ ಇಪ್ಪತ್ತು ಮೂವತ್ತು ವರ್ಷಗಳ ಕಾಲ ನಿರಂತರ ಉದ್ಯೋಗ ಒದಗಿಸಬಲ್ಲದು ಮತ್ತು ತಮ್ಮ ಪತಾಕೆಯನ್ನು ಇನ್ನೂ ಮೇಲೆ ಹಾರಿಸಬಲ್ಲುದು  ಎಂದು ಫ್ರಾನ್ಸ್ ,ಜರ್ಮನಿ, ಬ್ರಿಟನ್ , ಸ್ಪೇನ್ ಸರಕಾರಗಳು ಈ ನಿರ್ಧಾರಕ್ಕೆ ಹೂಂ ಗುಟ್ಟಿದ್ದೆ ತಡ, ಜಗತ್ತಿನ ಅತಿ ದೊಡ್ಡ ವಿಮಾನದ ಕೆಲಸ ಆರಂಭ ಆಯಿತು. ಏರ್ಬಸ್ ಸಂಸ್ಥೆಯ ಎಲ್ಲ ವಿಮಾನಗಳ ಹೆಸರು ‘A3xx’ ನಿಂದ ಆರಂಭ ಆಗುತ್ತದೆ. ವಿಮಾನದ ಮೂಗಿನಿದ ಬಾಲದ ವರೆಗೂ ಎಂಭತ್ತು ಮೀಟರು  ಉದ್ದ , ಎಡ ರೆಕ್ಕೆಯ ಇಚೆ ತುದಿಯಿಂದ ಬಲ ರೆಕ್ಕೆಯ ಆಚೆ ತುದಿಗೂ ಎಂಭತ್ತು ಮೀಟರು ಆಗಲ, ಹಾಗಾಗಿ ಒಳ್ಳೆ ಮುಹೂರ್ತ ನೋಡಿ ಯಾರೋ ಈ ಕೂಸಿಗೆ ‘A380′  ಎಂದು ನಾಮಕರಣ ಮಾಡಿದರು. ಅಲ್ಲಿಂದಾಚೆಗೆ ಯುರೋಪಿನ ಸುದ್ದಿ ಮಾಧ್ಯಮಗಳಲ್ಲಿ ಇವಳದೇ ಕಲರವ . ಯುದ್ಧ , ವಿಮಾನಗಳು ಎಂದರೆ ಮಾತೆ ಮುಗಿಸದ ಯುರೋಪಿನ ಜನರಿಗೆ  ಈ ವಿಮಾನದ ಬೆಳವಣಿಗೆಯೇ ರೋಚಕ ಅನುಭವ ಆಯಿತು .’A380’  ಬಾಲ್ಯ, ಯೌವ್ವನ ಕಳೆದು , ಇನ್ನೇನು ಇವಳು ಆಕಾಶದಲ್ಲಿ ಮೊದಲ ಬಾರಿ ಹಾರಬೇಕು, ಜಗತ್ತು ನಿಬ್ಬೆರಗಾಗಿ ನೋಡಬೇಕು. ಆ ಸಮಯಕ್ಕೆ ವಿಮಾನ ಜೋಡಣೆಯಲ್ಲಿ ಕೆಲವು  ಅಡಚಣೆಗಳು  ಎದುರಾಗಿ, ವಿಮಾನ ಆಕಾಶಕ್ಕೆ ಏರುವುದು ಮುಂದೂಡಲ್ಪಟ್ಟಿತು. ಇಂತಹ ಅಡಚಣೆಗಳು, ಹೊಸ ತರದ ವಿಮಾನದ ತಯಾರಿಯಲ್ಲಿ ಸಾಮಾನ್ಯ. ತೀರ ಕ್ಷುಲ್ಲಕ ಎನ್ನುವ ಕಾರಣಗಳು, ಕಣ್ಣ ತಪ್ಪುಗಳು , ವಿಮಾನದ ಸಿದ್ಧವಾಗುವುದನ್ನು  ವರುಷದಷ್ಟು ತಡ ಮಾಡಬಲ್ಲದು  , ಮುಂದೂಡ ಬಲ್ಲದು. ಅಮೆರಿಕದ ವಿಷಯ ಬಂದರೆ ಒಗ್ಗಟ್ಟಾಗಿ ತಾವು ಯುರೋಪಿಯನ್ನರೆಂದು ಎದೆ ತಟ್ಟಿ ಮಾತಾಡಿದರೂ, ಫ್ರಾನ್ಸ್ ,ಜರ್ಮನಿ, ಬ್ರಿಟನ್ , ಸ್ಪೇನ್ ಗಳನ್ನು .ಅವರ ನಡುವಿನ ತಪ್ಪು ತಿಳುವಳಿಕೆಗಳು, ಸಂಶಯ, ಮುನಿಸು, ಅಸೂಯೆ, ಅಹಂಕಾರ ಮತ್ತೆ ವಿಮಾನ ವಿನ್ಯಾಸದ ಎಂದಿನ ಸವಾಲುಗಳು  ಸಂಕೀರ್ಣತೆಗಳು  ತೊಡಕಾಗಿ ಕಾಡುತ್ತಿರುತ್ತವೆ. ಯುರೋಪಿನ ಭಿನ್ನ ಭಿನ್ನ ಸಂಸ್ಕೃತಿಯ, ಭಾಷೆಯ  ನಾಲ್ಕು ಪಾಲುದಾರ ದೇಶಗಳು ಕೆಲಸ ಹಂಚಿಕೊಂಡು , ಇನ್ನುಳಿದ ಚೂರುಪಾರು ಕೆಲಸಗಳನ್ನು ಸ್ವೀಡನ್, ಜಪಾನ್, ಮಲೇಶಿಯ , ಭಾರತ ಇನ್ನಿತರೆಡೆಗಳಿಗೆ ಹಂಚಿ , ಆಮೇಲೆ ಎಲ್ಲವನ್ನು ಜೋಡಿಸಿ ಪ್ರಯೋಗ ಪರೀಕ್ಷೆಗಳಲ್ಲಿ ಉತೀರ್ಣಗೊಂಡು , ಸರ್ಟಿಫಿಕೆಟ್ ಹಿಡಿದು ಕುಣಿಯುತ್ತ ವಿಮಾನ ಮಾರುಕಟ್ಟೆಗೆ ಬರುವ ಹೊತ್ತಿಗೆ ಬೆವರಿಳಿದಿರುತ್ತದೆ  . ಹಳೆಯ ತಪ್ಪುಗಳ ಬಗ್ಗೆ ಚರ್ಚಿಸುತ್ತ , ಹೊಸ ಪಾಠಗಳನ್ನು ಕಲಿಯುತ್ತ, ಸುರಕ್ಷತೆಯ ಜಪ ಮಾಡುತ್ತಾ ವಿಮಾನಗಳು ರೂಪ ಪಡೆಯುತ್ತವೆ. 2005 ರ ಹೊತ್ತಿಗೆ ನೂರೆಂಟು ವಿಘ್ನಗಳಿಂದ ಪಾರಾಗಿ ಪರೀಕ್ಷಾರ್ಥವಾಗಿ A380 ಮೊದಲ ಬಾರಿಗೆ ಆಕಾಶಕ್ಕೆ ಹಾರಿತು  . ನಂತರ 2007ರಲ್ಲಿ ಸಿಂಗಾಪುರ ಏರ್ಲೈನ್ಸ್ ಮುಖಾಂತರ ತನ್ನ ನಾಗರಿಕ  ಸೇವೆ ಆರಂಭಿಸಿತು.

yogi 3

ತನ್ನ ಪ್ರಸಿದ್ಧಿ, ಗಾತ್ರ , ತೂಕ , ಗಂಬೀರ ಚಲನೆಯಿಂದ ಆಕಾಶಕ್ಕೆ ತಾನೇ ಯಜಮಾನತಿಯಂತೆ ಓಡಾಡುತ್ತಾ ಗಗನಯಾನದ  ಹತ್ತು ವರ್ಷ ಮುಗಿಸಿತು. ಆಕಾಶದಲ್ಲಿ ಹಾರುತ್ತಿರಲಿ ಅಥವಾ ನಿಲ್ದಾಣದಲ್ಲಿ ಇಳಿದಿರಲಿ ,ಇನ್ಯಾವ ವಿಮಾನ ಇವಳ  ಪಕ್ಕಕ್ಕೆ ನಿಂತಿರಲಿ A380 ವಿಮಾನಕ್ಕೆ  ಎಲ್ಲರ ನೋಟವನ್ನು  ಸುಲಭವಾಗಿ ತನ್ನತ್ತ ಆಕರ್ಷಿಸುವ ಶಕ್ತಿ ಇದೆ  .ಈ ಆಕರ್ಷಣೆಗೆ ಕಾರಣ ಇವಳ  ರೂಪವೋ,ಗಾತ್ರವೋ ,ಬಣ್ಣವೋ, ಅಂದವೋ  ಅಥವಾ ಇವಳ ಇತಿಹಾಸವೋ ನೋಡಿದವರು  ಹೇಳಬೇಕು .  ಇವಳ ಜೊತೆ ಒಮ್ಮೆ ಪ್ರಯಾಣ ಮಾಡಿದವರು ಮತ್ತೆ ಇವಳ ಜೊತೆ ಯಾನ ಮಾಡಬೇಕು ಎಂದು ಬಯಸುತ್ತಾರೆ ಎಂದು ಏರ್ಲೈನ್ಸ್ ಅವರು ಹೇಳುತ್ತಾರೆ . ನೆಲ ಬಿಡುವಾಗಲೂ ನೆಲಮುಟ್ಟುವಾಗಲೂ  ಅಲುಗಾಡದೆ ಹೆಚ್ಚು ಸದ್ದು  ಮಾಡದೆ ತನ್ನೊಳಗೆ ಕೂತವರನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾಳೆ ಎನ್ನುವ ಹೆಗ್ಗಳಿಕೆಯೂ ಇವಳದ್ದು. ಪ್ರಯಾಣಿಕರಿಂದ ಹೊಗಳಿಸಿಕೊಳ್ಳುತ್ತ  , ಇವಳ ಮಾಲಕ  ಏರ್ಲೈನ್ಸ್ ಗಳಿಂದ ಮುದ್ದಿಸಿಕೊಳ್ಳುತ್ತ  ಮತ್ತೆ ಈಕೆಯ ಹುಟ್ಟಿಗೆ ಕಾರಣರಾದ   ಯುರೋಪಿಯನ್ ರಿಂದ ಭೇಷ್ ಅನ್ನಿಸಿಕೊಳ್ಳುತ್ತ 10 ವರ್ಷಗಳ ಗಗನಯಾನ ಕಳೆದಿದೆ . ವಿಮಾನಗಳ ವ್ಯವಹಾರ ಎಂದರೆ ಬರಿಯ  ಹೆಗ್ಗಳಿಕೆ ಹೊಗಳಿಕೆಗಳಿದ್ದರೆ ಸಾಲದು. ವಿಮಾನವೊಂದನ್ನು ಹೆಚ್ಚು ಏರ್ಲೈನ್ ಗಳು ಕೊಳ್ಳಬೇಕು ಸೇವೆಗೆ ಬಳಸಬೇಕು .  ಆಗ ಮಾತ್ರ ವಿಮನವೊಂದು ದೀರ್ಘ ಕಾಲ ಸೇವೆಯಲ್ಲಿರುತ್ತದೆ . ಕಳೆದ ಕೆಲವು ವರ್ಷಗಳಿಂದ ಹೊಸ ಗ್ರಾಹಕ ಏರ್ಲೈನ್ ಗಳನ್ನು ಪಡೆಯದ A380 ಯ ಭವಿಷ್ಯ ಸದ್ಯಕ್ಕೆ ತೂಗುಯ್ಯಾಲೆಯಲ್ಲಿದೆ . ಕಳೆದ ವಾರ ನಡೆದ ಪ್ಯಾರಿಸ್ ಏರಶೋ ದಲ್ಲಿ ಎ ೮೦ ವಿಮಾನ ಸಣ್ಣ ಬದಲಾವಣೆ ಗಳೊಂದಿಗೆ ಹೊಸ ರೂಪ ಪಡೆಯಲಿದೆ ಎನ್ನುವ ಘೋಷಣೆ ಆಗಿದೆ . ದಶಕದ ಸಂಭ್ರಮ ಮತ್ತೆ ತನ್ನ ವಿನ್ಯಾಸಕ್ಕೆ ಹೊಸ ಸೇರ್ಪಡೆಗಳೊಂದಿಗೆ A380 ಇನ್ನೂ ಹಲವು ವರ್ಷ ಹಾರುತ್ತಿರಲಿ ; ಗಗನರಾಣಿಯಾಗಿ ಮೆರೆಯುತ್ತಿರಲಿ .

ಚಿತ್ರ ಲೇಖನ   — ಯೋಗೀಂದ್ರ ಮರವಂತೆ