ನಮಸ್ಕಾರ ಅನಿವಾಸಿ ಬಂಧುಗಳೇ. ತಮಗೆಲ್ಲರಿಗೂ ನಾಡಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಭುವನೇಶ್ವರಿಯ ಕೃಪೆ ನಮ್ಮೆಲ್ಲರನ್ನು ಪೊರೆಯಲಿ.
ಇಂದಿನ ಸಂಚಿಕೆಯಲ್ಲಿ ನಮ್ಮ ಹೆಮ್ಮೆಯ ಹಾಡುಗಾರ್ತಿ ಅಮಿತಾ ಅವರು ನವರಾತ್ರಿಗೆಂದೇ ವಿಶೇಷವಾಗಿ ಹಾಡಿದ 'ಶಕ್ತಿ' ಎಂಬ ವರಕವಿಯ ಹಾಡು ನಿಮಗಾಗಿ. ಅಪರೂಪದ ಹಾಡು- ಅತ್ಯಪರೂಪದ ಹಾಡುಗಾರಿಕೆ. ಕೇಳಿ ಆನಂದಿಸಿ. ಆಸಕ್ತರಿಗಾಗಿ ಹಾಡಿನ ಸಾಹಿತ್ಯವೂ ಸಹ ಇದೆ.
ನಾನು ಗೌರಿಪ್ರಸನ್ನ , ಅಂದಿನಿಂದ ಇಂದಿನವರೆಗಿನ ನಾ ಕಂಡ ನವರಾತ್ರಿಯ ನೆನಪಿನ ಮೆರವಣಿಗೆಯನ್ನು ನಿಮಗೂ ತೋರಿಸಬಂದಿದ್ದೇನೆ. ನೋಡಿ ನಿಮ್ಮ ನೆನಪುಗಳೂ ಹೊರಗಿಣುಕಿದರೆ ನಮಗೂ ತೋರಿಸಿ. ಎಲ್ಲ ಸೇರಿ ಖುಷಿಪಡೋಣ. ಖುಷಿಯೇ ತಾನೇ ನಿಜದ ಹಬ್ಬ?
~ ಸಂಪಾದಕಿ
ಶಕ್ತಿ
ನಮಸ್ತೇ,
ಈ ಸಲದ ಶರನ್ನವರಾತ್ರಿಯ ಸಂಭ್ರಮದಲ್ಲಿ ಬೇಂದ್ರೆ ಅಜ್ಜ ದೇವಿಯ ಕುರಿತು ಬರೆದ ಅಸಂಖ್ಯ ಪದ್ಯಗಳಲ್ಲಿ ಆಯ್ದ ಕೆಲವು ಕವಿತೆಗಳಿಗೆ ರಾಗ ಹಾಕಿ, ಅವರನ್ನ ಇಷ್ಟ ಪಡುವ, ಅವರ ಹಾಡು,ಸಾಹಿತ್ಯ ಉಸಿರಾಡುವ ಕೆಲವರೊಂದಿಗೆ ಹಂಚಿಕೊಳ್ಳೋಣ ಅನ್ನಿಸಿತು. ಇದು ಆ ಸರಣಿಯ ಎರಡನೇ ಹಾಡು.
'ಶಕ್ತಿ' ಎಂಬ ಶೀರ್ಷಿಕೆಯಡಿಯಲ್ಲಿ ಇರುವ ಈ ಕವಿತೆಯಲ್ಲಿ ಬೇಂದ್ರೆ ಅಜ್ಜ ಜೀವನದ ಮಹಾಮಾತೆಯರಾದ ಸರಸ್ವತಿ ದುರ್ಗೆ, ಲಕ್ಷಿಯರನ್ನು ಕುರಿತು ಪ್ರಾರ್ಥಿಸಿದ್ದಾರೆ. ಇದು ಅವರ ತಾಯಿ ಅಂಬಿಕೆ ಮೆಚ್ಚಿದ ಅವರ ಮೊದಲ ಕವಿತೆಯೂ ಹೌದು!
ಬಿಡುವಾದಾಗ ಖಂಡಿತ ಒಮ್ಮೆ ಕೇಳಿ.
ಪ್ರೀತಿಯಿಂದ , ಅಮಿತಾ
ನೆನಪುಗಳ ಜಂಬೂಸವಾರಿ
ಅಕ್ಟೋಬರ್ ನ ಚುಮುಚುಮು ಚಳಿಯೊಂದಿಗೆ ಶರನ್ನವರಾತ್ರಿಯ ಪಾದಾರ್ಪಣೆ. ಭರ್ತಿ ಹತ್ತುದಿನಗಳ ಹಬ್ಬ. ಸಡಗರ, ಸಂಭ್ರಮ, ರಂಗುರಂಗಿನ ದಿರಿಸು, ವಿಧವಿಧ ತಿನಿಸು. ಪೂಜೆ-ಪುನಸ್ಕಾರ-ಅಲಂಕಾರ- ಮೈಸೂರಿನ ಜಂಬೂಸವಾರಿ- ನಾಡದೇವಿಯ ಮೆರೆಸುವ ನಾಡಹಬ್ಬ - ಜಾತ್ರೆ-ರಾಮಲೀಲಾ- ಶ್ರೀನಿವಾಸ ಕಲ್ಯಾಣದ ಭಕ್ತಿ ಆರಾಧನೆ- ದುರ್ಗೆಯ ನವರೂಪಗಳ ಶಕ್ತಿ ಉಪಾಸನೆ -ಗರಬಾ,ದಾಂಡಿಯಾಗಳ ನೃತ್ಯ ನಿವೇದನೆ, ಪಟ್ಟದ ಗೊಂಬೆಗಳಿಂದೊಡಗೂಡಿದ ಸಾಲು ಸಾಲು ಗೊಂಬೆಗಳ ದೃಶ್ಯಾವಳಿ.. ಹೆಮ್ಮೆಯೆನಿಸುತ್ತದೆ ನಾವೆಂಥ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ವಾರಸುದಾರರೆಂದು.
ಬಾಲ್ಯದ ನವರಾತ್ರಿಯ ಖುಷಿಯ ನೆನಪೆಂದರೆ ಭರ್ತಿ ಹತ್ತುದಿನಗಳ ಥರಾವರಿ ಭೋಜ್ಯ ವಿಶೇಷಗಳೇ ಆಗಿತ್ತೆನ್ನಿ.(ಈಗ? ಎಂದು ಕೇಳಬೇಡಿ. ಬಹುಶ: ಈಗಲೂ ಅದುವೇ. ಆದರೀಗ ಮಾಡಿ ಬಡಿಸುವ ಹೊರೆಯ ಜೊತೆಗೆ) ವಿಜಯದಶಮಿಯಂದು ಆಗಿನ ನಮ್ಮ ಬಿಜಾಪೂರದ ಏಕೈಕ ಪ್ರಸಿದ್ಧ ಕೋವಳ್ಳಿ ಹಾಲಿನ ಡೇರಿಯಿಂದ 4-6 ಕಿಲೋ ಚಕ್ಕಾ( ಮೊಸರನ್ನು ರಾತ್ರಿಯಿಡೀ ಬಟ್ಟೆಯಲ್ಲಿ ಕಟ್ಟಿ ತೂಗುಹಾಕಿ ನೀರಿನಂಶ ತೆಗೆದು ಗಟ್ಟಿಯಾದ ಮೊಸರು) ತಂದು ಒಂದು ಕೊಳಗ ಥಣ್ಣಗಿನ ಏಲಕ್ಕಿ-ಕೇಸರಿಯುಕ್ತ ಶ್ರೀಖಂಡ ಬಿಸಿ ಬಿಸಿ ಉಬ್ಬಿದ ಪುರಿ, ಬಿಸಿಬೇಳೆ ಅನ್ನದೊಂದಿಗೆ ಸವಿಯಲು ಸಿದ್ಧವಾಗುತ್ತಿತ್ತು. ಅದಿಲ್ಲದಿದ್ದರೆ ಜಿನಗಾರ ಓಣಿಯ ತಾಜಾ ‘ಖವಾ’ ದ ಉಂಡೆ ಗಾತ್ರದ ಹೊಂಬಣ್ಣದ ಗುಲಾಬ್ ಜಾಮೂನ್ ಗಳು ನಮ್ಮಜ್ಜಿಯ ನೇತೃತ್ವದಲ್ಲಿ ಸಕ್ಕರೆಯ ಪಾಕದಲ್ಲಿ ಮುಳುಗೇಳುತ್ತಿದ್ದವು. ಅವತ್ತು ಕಡಬು-ಹೋಳಿಗೆ ಇರುತ್ತಿರಲಿಲ್ಲ. ಕಾರಣ ಗೊತ್ತೆ? ಹಬ್ಬದ ಮರುದಿನ ಏಕಾದಶಿ. ಮುಸುರೆ ತಿನ್ನುವಂತಿಲ್ಲ. ಇಂಥ ಸಿಹಿಗಳನ್ನು ‘ಛಲೋ ಕೈ’ ಲೆ ಮಾಡಿದರೆ ಮಕ್ಕಳು ಮರುದಿನವೂ ತಿನ್ನುತ್ತವೆಂಬ ತಾಯಂಥಕರಣದ ಅಜ್ಜಿಯ ಮುಂದಾಲೋಚನೆ. ಅದಕ್ಕೇ ಹೂರಣವೇನಿದ್ದರೂ ಪಾಡ್ಯ ಅಥವಾ ಮಾನವಮಿಗೇ ಮೀಸಲು.
ಸಂಜೆಯಾದೊಡನೆ ವೆಂಕಟೇಶ ಪಾರಿಜಾತ, ಇಬ್ರಾಹಿಂಪುರದ ವೆಂಕಪ್ಪನ ಗುಡಿಗೆ ಟಾಂಗಾಸವಾರಿ, ಲಕ್ಷ್ಮೀಗುಡಿಯೆದುರಿಗಿನ ಆ ಪುಟ್ಟ ಜಾತ್ರೆಯಲ್ಲಿ ಗೆಳತಿಯರೊಡನೆ ಗಲಗಲ.. ಇರೂಬರೂ ಪುಸ್ತಕಗಳನ್ನೆಲ್ಲ ಸರಸ್ವತಿ ಪೂಜಾ ಅಂತ ದೇವರ ಮುಂದೆ ಮಣೆಯ ಮೇಲಿಟ್ಟು ಕೈ ಮುಗಿದುಬಿಡುವ ಆ ನಿರಾಳ. ಮಾನವಮಿಯಂದು ಮನೆಯಲ್ಲಿನ ಹೊಲಿಗೆ ಯಂತ್ರ, ಗಾಡಿಗಳು, ಚಾಕು ಕತ್ತರಿಯಂಥ ಕಬ್ಬಿಣಗಳಿಗೆಲ್ಲ ಚೆಂಡು ಹೂವನ್ನೋ, ಶೇವಂತಿಗೆಯನ್ನೋ ತಲೆಗೇರಿಸಿಕೊಂಡು ಹಳದಿಯ ಹೊನ್ನಾಗಿಬಿಡುವ ಭಾಗ್ಯ.. ದಸರಾದ ದಿನ ಮನೆ ಮನೆಗೆ ಹೋಗಿ ‘ ಬಂಗಾರ ತಗೊಂಡು ಬಂಗಾರದ್ಹಂಗ ಇರೂಣು’ ಅಂತ ಬನ್ನಿ ಕೊಡುವ ಸಂಭ್ರಮ.
ಮುಂದೆ ದೆಹಲಿಗೆ ಬಂದಮೇಲೆ ಅಲ್ಲಿಯ ನವರಾತ್ರಿಯ, ದಶೇರಾಗಳ ಸಂಭ್ರಮವೇ ಬೇರೆ. ಅಷ್ಟಮಿಯವರೆಗೆ ‘ವ್ರತ್’ ಇಟ್ಟು (ದೇವಿಯ ಹೆಸರಲ್ಲಿ ಉಪವಾಸವಿದ್ದು) ಅಷ್ಟಮಿಯ ದಿನ ‘ಕಂಜಕ್” ಎಂದು ಪುರಿ, ಹಲ್ವಾ, ಕಡಲೆಕಾಳಿನ ಸಮೇತ ಪುಟ್ಟ ಬಾಲೆಯರನ್ನು ಕರೆದು ಪಾದ ತೊಳೆದು ಪೂಜಿಸಿ ದಕ್ಷಿಣೆಯ ಜೊತೆಗೆ ಏನಾದರೂ ಗಿಫ್ಟ್ ಕೊಡುವ ಪದ್ಧತಿ. ಓಹ್! ಅವತ್ತು ನನ್ನ ಅವಳಿ-ಜವಳಿಗಳಿಗೆ ಡಿಮ್ಯಾಂಡೋ ಡಿಮ್ಯಾಂಡು..ಕಮಾಯಿಯೋ ಕಮಾಯಿ. ನನಗೆ ಅಂದು ಚಪಾತಿ-ಪುರಿ ಲಟ್ಟಿಸುವ ಗೋಜಿರುತ್ತಿರಲಿಲ್ಲ. ಸುಮಾರು 50- 60 ಪುರಿಗಳು, ಬುಟ್ಟಿ ‘ಶಿರಾ’ ಜಮಾ ಆಗಿರುತ್ತಿತ್ತು .
ರಾತ್ರಿ ಬೇಗ ಊಟ ಮುಗಿಸಿ ರಾಮಲೀಲಾ ಮೈದಾನಕ್ಕೆ ಹೊರಡುವ ಸಡಗರ. ಅಲ್ಲಿ ಮೊದಲ ಸಲ ಆ ಮೇಲಾ ನೋಡಿದಾಗಲೇ ನನಗರ್ಥವಾದದ್ದು ನಮ್ಮ ಬಾಲಿವುಡ್ ಮೂವಿಗಳಲ್ಲಿ ‘ ಬಚಪನ್ ಮೆ ಮೇಲೆ ಮೆ ಬಿಛಡ್ ಗಯೆ ಥೆ’ ಅನ್ನುವ ಥೀಮು ಹೇಗೆ ಬಂತು ಎಂದು. ನಿಜಕ್ಕೂ ಅದರಲ್ಲಿ ಕಿಂಚಿತ್ತೂ ಅತಿಶಯೋಕ್ತಿಯಿಲ್ಲ. ಈಗಲೂ ಅಲ್ಲಿ ಸ್ಟೇಜ್ ಬಳಿ ಯಾವುದಾದರೂ ಗಾಬರಿಯಾಗಿ ಅಳುತ್ತ ನಿಂತಿರುವ ಮಗುವೋ, ಆತಂಕದಲ್ಲಿರುವ ಅಪ್ಪ-ಅಮ್ಮನೋ, ‘ಶ್ರೀವಾಸ್ತವ್, ಗುಪ್ತಾ, ಮಿತ್ತಲ್, ಚೋಪ್ಡಾ’ ಹೀಗೆ ಯಾರದೋ ಹೆಸರನ್ನು ಮೈಕ್ ನಲ್ಲಿ ಕೂಗಿ ಸ್ಟೇಜ್ ಬಳಿ ಕರೆಯುತ್ತಿರುವ ಸ್ವಯಂ ಸೇವಕರೋ ನಿಮಗೆ ಸಿಕ್ಕೇ ಸಿಗುತ್ತಾರೆ. ದೆವ್ವನಂಥಾ ಆ ಮೈದಾನದಲ್ಲಿ ಅದೆಷ್ಟು ಥರಾವರಿ ಸ್ಟಾಲ್ ಗಳು..ಯಕಶ್ಚಿತ್ ಸೂಜಿಯಿಂದ ಹಿಡಿದು Yamah , Suzuki ಅಂಥ ಗಾಡಿಗಳವರೆಗೂ . ಬಟ್ಟೆ-ಬರೆ, ಪಾತ್ರೆ-ಪಗಡೆ, ಕರಕುಶಲ ವಸ್ತುಗಳು, ಆಟಿಕೆ ಸಾಮಾನುಗಳು, ಸ್ವೀಟು-ನಮಕೀನ್ ಗಳು, ಉಪ್ಪಿನಕಾಯಿ- ಮೊರಬ್ಬಗಳು, ಮಸಾಲೆ-ಸಾಂಬಾರ್ ಪದಾರ್ಥಗಳು, ಚುಸ್ಕಿ,ಕುಲ್ಫಿ,ಐಸ್ ಕ್ರೀಂ ತಳ್ಳುಗಾಡಿಗಳು, ಬಾಯಲ್ಲಿ ನೀರೂರಿಸುವ ಚಾಟ್ ಅಂಗಡಿಗಳು, ಸಣ್ಣ-ದೊಡ್ಡ ನೂರಾರು ರೈಡ್ ಗಳು ಒಂದೆಡೆಯಾದರೆ ಮತ್ತೊಂದೆಡೆ ವಿಶಾಲವಾದ, ಭವ್ಯವಾದ ಸ್ಟೇಜ್ ಹಾಗೂ ಅದರ ಮೇಲೆ ನಡೆಯುವ ರಾಮಲೀಲಾ. ಪ್ರತಿ ನವರಾತ್ರಿಗೂ ಅದೇ ರಾಮಾಯಣ ಆದರೂ ಪ್ರತಿ ಸಲವೂ ಹೊಸತೆನಿಸುವ, ಅರಿಯದ್ದನ್ನೇನೋ ಹೊಳೆಯಿಸಿಬಿಡುವ ಸೊಬಗಿನ ಸೋನೆ. ಭರ್ಜರಿ ಆಕಾರದ ಮುಗಿಲೆತ್ತರದ ರಾವಣನಂತೂ ರಾಮನ ಬಾಣದ ಬೆಂಕಿಗಾಗಿಯೇ, ತಪ್ಪುಗಳ ಸುಡುವ ಪಾವನ ಪಾವಕರೂಪಿಗಾಗಿಯೇ ಕಾದವರಂತೆ ಆ ಬಯಲಲ್ಲಿ ನಿಂತಂತೆ ಅನ್ನಿಸುತ್ತದೆ.
ಈಗ ಇಲ್ಲಿ ಯುಕೆ ಗೆ ಬಂದ ಮೇಲಂತೂ ನಮ್ಮ ಹಬ್ಬ ಇನ್ನೂ ಸಮೃದ್ಧ. ರಾಯರ ಮಠದ ಶ್ರೀನಿವಾಸ ಕಲ್ಯಾಣ-ಚಂಡೀ ಹೋಮ, ಕುಂಕುಮಾರ್ಚನೆಗಳಲ್ಲಿ, ಅವರಿವರ ಮನೆಯ ಗೋಲು-ಅರಿಶಿಣಕುಂಕುಮಗಳಲ್ಲಿ, ರಾತ್ರಿ ಹಿಂದೂ ಟೆಂಪಲ್ ನಲ್ಲಿ ನಡೆವ ಗರಬಾ-ದಾಂಡಿಯಾಗಳಲ್ಲಿ, ದುರ್ಗಾ ಪೆಂಡಾಲ್ ನ ಪುಷ್ಪಾಂಜಲಿ-ಸಿಂಧೂರ್ ಉತ್ಸವಗಳಲ್ಲಿ ಇದರ ಮೇಲೆ ಮನೆಯ ದೇವರ ಪೂಜೆ-ದೀಪ-ನೈವೇದ್ಯಗಳ ಗದ್ದಲದಲ್ಲಿ ಅದ್ಹೇಗೆ ಪಾಡ್ಯದಿಂದ ದಶಮಿ ಬಂತೋ, ಮುಗೀತೋ ತಿಳಿಯುವುದೇ ಇಲ್ಲ.
ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು. ‘ಬನ್ನಿ ತಗೊಂಡು ಬಂಗಾರದ್ಹಂಗ ಇರೂಣು’
~ ಗೌರಿಪ್ರಸನ್ನ.
ನಮಸ್ಕಾರ. ಕನ್ನಡ ಬಳಗದ ನಲ್ವತ್ತರ ‘ಸಂಭ್ರಮ’ ನಮ್ಮ ಮಹಾರಾಜರ ಹಾಗೂ ಅನೇಕ ಹೆಸರಾಂತ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ಹಾಗೂ ಅದ್ಧೂರಿಯಾಗಿ ಜರುಗಿತು. ಜೊತೆಗೇ KSSVV, ಅನಿವಾಸಿ ಸಮಾನಾಂತರ ಸಭೆಗಳೂ ಕೂಡ ಅಷ್ಟೇ ಯಶಸ್ವಿಯಾಗಿ ಜರುಗಿದ್ದು, ಅತಿಥಿಗಳೆಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಎರಡೂ ದಿನದ ಸಭೆಯ ವಿವರವಾದ ‘ವೀಕ್ಷಕ ವಿವರಣೆ’ಯನ್ನು ತಮ್ಮೆದಿರು ಪ್ರಸ್ತುತಪಡಿಸಲಿದ್ದಾರೆ ಶ್ರೀ ರಾಮಶರಣ ಹಾಗೂ ಶ್ರೀ ಕೇಶವ್ ಅವರು. ಅನಿವಾಸಿಯ ಸಾಧನೆಗಳು ಮುಂಬರುವ ದಿನಗಳಲ್ಲಿ ಇನ್ನೂ ಕಳೆಗಟ್ಟಲಿ ಎಂಬ ಸದಾಶಯಗಳೊಂದಿಗೆ
– ಸಂಪಾದಕಿ.
ಅನಿವಾಸಿ ಸಮಾನಾಂತರ ಸಭೆ (ದಿನ-೧; ಚರ್ಚೆ ಹಾಗೂ ವಿಶ್ಲೇಷಣೆ)
ಕನ್ನಡ ಬಳಗದ ಮಾಣಿಕ್ಯೋತ್ಸವಕ್ಕೆ ಕರ್ನಾಟಕದ ಮೂವರು ಅತಿಥಿಗಳು ಅನಿವಾಸಿ ಸಭೆಗೆ ಬರುವರೆಂದು ನಿಗದಿಯಾಗಿತ್ತು. ಪ್ರೊ. ಗುರುರಾಜ ಕರ್ಜಗಿಯವರು ಹೆಸರಾಂತ ಶಿಕ್ಷಣ ತಜ್ಞರು, ಉತ್ತಮ ವಾಗ್ಮಿ. ಅಧ್ಯಯನ ಮಾಡಿ, ಜಗತ್ತಿನ ಹಲವಾರು ದೇಶಗಳನ್ನು ತಜ್ಞನಾಗಿ ಸಂದರ್ಶಿಸಿದ ಅನುಭವಿ. ಶ್ರೀ. ವಿಶ್ವೇಶ್ವರ ಭಟ್ಟರು ಪ್ರಸಿದ್ಧ ಪತ್ರಕರ್ತ (ವಿಶ್ವ ವಾಣಿ ಪತ್ರಿಕೆಯ ಮಾಲಕ ಹಾಗೂ ಪ್ರಧಾನ ಸಂಪಾದಕ) ಹಾಗೂ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಬರಹಗಾರ. ಶ್ರೀ. ರವಿ ಹೆಗಡೆ ಕನ್ನಡ ಪ್ರಭಾ ದಿನ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಹಾಗೂ ಸುವರ್ಣ ಸುದ್ದಿವಾಹಿನಿಯ ಮುಖ್ಯ ಸಂಪಾದಕ. ಅತಿಥಿಗಳ ವಿಶೇಷತೆಗನುಗುಣವಾಗಿ ಅನಿವಾಸಿ ಸಭೆಗೆ ಸ್ವರೂಪ ಕೊಡುವುದೊಂದು ವಾಡಿಕೆ. ಈ ಬಾರಿ ಎರಡು ಬಗೆಯ ವಿಶೇಷತೆಗಳನ್ನು ಹೊಂದಿಸಿ ನಡೆಸುವ ಕಾರ್ಯಕ್ರಮದ ಬಗ್ಗೆ ಚರ್ಚಿಸಿ, ಎರಡು ವಿಷಯಗಳ ಮೇಲೆ ಅನಿವಾಸಿ ಸದಸ್ಯರು ವೇದಿಕೆಯ ಮೇಲೆ ಚರ್ಚಿಸುವುದೆಂದು ನಿರ್ಧರಿಸಲಾಯಿತು. ಅತಿಥಿಗಳ ವಿಶೇಷತೆಗನುಗುಣವಾಗಿ ಸದಸ್ಯರು ಎರಡು ವಿಷಯಗಳನ್ನು ಆರಿಸಿದರು: ಶಿಕ್ಷಣ ನೀತಿ ಸಮಾಜಕ್ಕೆ ಅನುಗುಣವಿರಬೇಕು; ಮಾಧ್ಯಮಗಳು ಪ್ರಬಲವಾಗುತ್ತಿವೆ. ಮೊದಲನೆಯ ವಿಷಯಕ್ಕೆ ಪರವಾಗಿ ಲೇಖಕ, ಡಾ.ಶಿವಪ್ರಸಾದ್, ಡಾ.ವತ್ಸಲಾ ರಾಮಮೂರ್ತಿ, ವಿರೋಧವಾಗಿ ಡಾ. ಕೇಶವ ಕುಲಕರ್ಣಿಯವರು; ಎರಡನೇ ವಿಷಯದ ಪರವಾಗಿ ಡಾ.ಶಿವಪ್ರಸಾದ್, ಡಾ. ಕೇಶವ ಕುಲಕರ್ಣಿ ಹಾಗೂ ವಿರೋಧವಾಗಿ ಲೇಖಕ ವಾದಿಸುವ ಆಯ್ಕೆ ಮಾಡಿಕೊಂಡರು.
ಮೊದಲ ದಿನದ ಸಭೆಯ ಅಧ್ಯಕ್ಷತೆ ಹಾಗೂ ನಿರ್ವಹಣೆಯನ್ನು ಡಾ. ಪ್ರೇಮಲತಾ ವಹಿಸಿದರು. ಕಾರ್ಯಕ್ರಮ ಕು. ಅನನ್ಯ ಕದಡಿಯ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿಕೊಟ್ಟಿದ್ದಲ್ಲದೆ, ಕಾರ್ಯಕ್ರಮದ ಸ್ವರೂಪವನ್ನು ನಿವೇದಿಸಿದರು. ಮೊದಲ ವಿಷಯದ ಪರವಾಗಿ ಮಂಡಿಸಿದ ಸದಸ್ಯರು ಸಮಾಜ ಹಾಗು ಶಿಕ್ಷಣದ ಬೆಳವಣಿಗೆಯನ್ನು ಅವಲೋಕಿಸಿದರು. ಶಿಕ್ಕ್ಷಣ ಸಮಾಜ ಮುಖಿಯಾಗಿರಬೇಕು, ಮೌಲಿಕವೂ ನೈತಿಕವಾಗಿಯೂ ಇರಬೇಕು. ಸಮಾಜದಲ್ಲಿರುವ ಸಂಬಂಧಗಳನ್ನು ಗೌರವಿಸುವಂತಿರಬೇಕು. ಶಿಕ್ಷಣ ಸಮಾಜಕ್ಕೆ ವಿಮುಖವಾಗಿದ್ದರೆ ಉತ್ತಮ ನಾಗರೀಕರನ್ನು ಬೆಳೆಸಲಾರದೆಂದು ಅಭಿಪ್ರಾಯಪಟ್ಟರು. ಶಿಕ್ಷಣದಲ್ಲಿ ರಾಜಕೀಯ ಹಾಗೂ ಧಾರ್ಮಿಕ ಹಸ್ತಕ್ಷೇಪಗಳಿಲ್ಲದೆ ಸ್ವತಂತ್ರವಾಗಿ ಬೆಳೆಯಬೇಕು ಎಂದು ಪ್ರತಿಪಾಸಿದರು. ವಿರುದ್ಧವಾಗಿ ವಾದಿಸಿದ ಕೇಶವ್ ಶಿಕ್ಷಣ ಎಂದಿಗೂ ಸಮಾಜದ ವಿರುದ್ಧವಾಗಿಯೇ ಕಾರ್ಯವಹಿಸಿದೆ ಎಂದರು. ಈ ವಿರೋಧಿ ನಿಲುವಿನಿಂದ ಶಿಕ್ಷಣ ಸಮಾಜದ ಹಲವು ಡೊಂಕುಗಳನ್ನು ತಿದ್ದುವಲ್ಲಿ ಸಫಲವಾಗಿದೆ. ಎಂದು ಶಿಕ್ಷಣ ನೀತಿ ಹಾಗೂ ಸಮಾಜದ ರೀತಿ ಅನುಸರಿಸಲು ತೊಡಗುವವೋ, ಅಂದಿನಿಂದ ಸಮಾಜ ನಿಂತ ನೀರಾಗಿ ಕೊಳೆಯುವುದೆಂದು ಅಭಿಪ್ರಾಯ ಪಟ್ಟರು. ಪ್ರೊ. ಕರ್ಜಗಿ ಎಲ್ಲರ ವಾದಸರಣಿಗಳನ್ನು ವಿಶ್ಲೇಷಿಸುತ್ತ, ತಮ್ಮ ನಿಲುವು ವಿಷಯದ ಪರ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ಪರ ವಾದಿಗಳನ್ನ ಅಂಗೀಕರಿಸಿ, ಸಮಾಜ ಸದಾ ಬದಲಾಗುವ ವ್ಯವಸ್ಥೆ, ಅದಕ್ಕನುಗುಣವಾಗಿ ಶಿಕ್ಷಣ ವ್ಯವಸ್ಥೆ ಬದಲಾಗುವುದು ಅವಶ್ಯ, ಈ ವ್ಯವಸ್ಥೆ ರಾಜಕೀಯ ಯಾ ಧಾರ್ಮಿಕ ಹಸ್ತಕ್ಷೇಪದಿಂದ ಸ್ವತಂತ್ರವಾಗಿರಬೇಕೆಂಬುದನ್ನು ಅನುಮೋದಿಸಿದರು. ಶಿಕ್ಷಣ ನೀತಿ ಸಮಾಜದ ರೀತಿಗೆ ವಿರೋಧವಾಗಿದ್ದರೆ ಸಮಾಜದ ಮೂಲಭೂತ ತತ್ವಕ್ಕೆ ಧಕ್ಕೆ ತರುವ ಸಾಧ್ಯತೆಗಳಿವೆ, ಶಿಕ್ಷಣ ಸಮಾಜ ಡೊಂಕನ್ನು ತಿದ್ದುತ್ತಿರುವುದು ಅದರೊಡನೆ ಸಹಭಾಗಿಯಾಗಿರುವುದರಿಂದಲೇ ಹೊರತು ವಿರೋಧವಾಗಿರುವುದರಿಂದಲ್ಲವೆಂದು ಅಭಿಪ್ರಾಯಪಟ್ಟರು. ಶಿಕ್ಷಣ ಮಕ್ಕಳನ್ನು ಬದುಕನ್ನೆದುರಿಸಲು ತಯಾರು ಮಾಡಬೇಕು, ಸ್ವತಂತ್ರ ಮನೋಭಾವವನ್ನು ಬೆಳೆಸಬೇಕು, ಅಸಮಾನತೆಯನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನೀಡಬೇಕೆಂದರು. ಶಿಕ್ಷಣ ಮಕ್ಕಳನ್ನು ಸುಸಂಸ್ಕೃತರನ್ನಾಗಿಸಬೇಕು, ಇಲ್ಲದಿದ್ದರೆ ಅದು ಸಮಾಜದ ಅವನತಿಗೆ ಹಾದಿಯಾದೀತೆಂದು ಎಚ್ಚರಿಸಿದರು. ಉತ್ತಮ ಶಿಕ್ಷಣದ ಬೆಳವಣಿಗೆಗೆ ಸೂಕ್ತ ಶಿಕ್ಷರನ್ನು ಬೆಳೆಸಬೇಕು; ಶಿಕ್ಷಣ ಕೇವಲ ಪರೀಕ್ಷೆಯವರೆಗೆ ಮಿತಿಯಾಗದೇ ಬಾಳಿನುದ್ದಕ್ಕೂ ಅನುಭವಗಳನ್ನು ಹೀರಿ ವ್ಯಕ್ತಿತ್ವ ಬೆಳೆಸುವ ಸಲಕರಣೆಯಾಗಿರಲಿ ಎಂದು ಆಶಿಸಿದರು.
ಎರಡನೇ ವಿಷಯದ ಪರವಾಗಿ ವಾದ ಮಂಡಿಸಿದ ಸದಸ್ಯರು ಪ್ರಮುಖವಾಗಿ ಸಾಮಾಜಿಕ ಹಾಗೂ ದೃಶ್ಯ ಮಾಧ್ಯಮಗಳ ಹಾವಳಿ ಹಾಗೂ ಪ್ರಭಾವಗಳ ಮೇಲೆ ಹೆಚ್ಚಿನ ಒತ್ತನ್ನು ಕೊಟ್ಟಿದ್ದು ಕಂಡುಬಂದಿತು. ಸಾಮಾಜಿಕ ಮಾಧ್ಯಮಗಳ ಪ್ರಭಾವ ಹೇಗೆ ಮಾನವ ಸಂಬಂಧಗಳನ್ನು ಕಲುಷಿತಗೊಳಿಸುತ್ತಿದೆ ಎಂದು ವಿವರಿಸಿದರು. ವೈಯಕ್ತಿಕ ಭಾವನೆಗಳನ್ನು ಇತರರನ್ನು ಕೆರಳಿಸುವ ಶಕ್ತಿ ಹೊಂದಿದ್ದು, ಇತ್ತೀಚಿಗೆ ಈ ಮಾಧ್ಯಮಗಳು ಮನುಕುಲಕ್ಕೆ ಹೆಚ್ಚಿನ ಹಾನಿ ಮಾಡುತ್ತಿವೆ. ಆಧುನಿಕ ಯುಗದಲ್ಲಿ ಮಾಧ್ಯಮಗಳ ಸಂಖ್ಯೆ ಅತಿಯಾಗಿದ್ದು; ದಿನವಿಡೀ ತೋರಿಸಲ್ಪಡುವ ಸುದ್ದಿವಾಹಿನಿಗಳ ಹಾವಳಿ, ಸುದ್ದಿ ಸ್ಫೋಟದ ಮೇಲಿನ ಅತೀವ ಅವಲಂಬನೆ ಹಾಗೂ ಇದರಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿ, ಇಂದಿನ ಶತಮಾನದಲ್ಲಿ ಮಾಧ್ಯಮಗಳು ಅಗತ್ಯಕ್ಕಿಂತ ಹೆಚ್ಚು ಪ್ರಬಲವಾಗಿವೆ ಎಂದು ಪ್ರತಿಪಾದಿಸಿದರು. ಪಕ್ಷಪಾತಿಯಾದ ಮಾಧ್ಯಮಗಳು ಪ್ರಬಲವಾಗಿರುವುದರಿಂದಲೇ ವಿರೂಪಗೊಂಡ ಅಭಿಪ್ರಾಯಗಳು ಜನರ ಮೇಲೆ ತಪ್ಪಾದ ಪ್ರಭಾವ ಬೀರುತ್ತಿವೆ ಎಂಬುದು ಅವರ ಅಭಿಪ್ರಾಯವಾಗಿತ್ತು. ವಿರುದ್ಧವಾಗಿ ಲೇಖಕ, ಮಾಧ್ಯಮ ಇಂದಿನ ದಿನಗಳಲ್ಲಿ ದುರ್ಬಲವಾಗುತ್ತಿದೆ ಎಂದು ವಾದಿಸಿದರು. ಮಾಧ್ಯಮಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದರೂ, ಗಟ್ಟಿ ಸುದ್ದಿಗಿಂತ ಜೊಳ್ಳು ಜಾಸ್ತಿ; ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಪಟ್ಟಭದ್ರ ಹಿತಾಸಕ್ತಿಗಳು ಮಾಧ್ಯಮದ ಮೇಲೆ ಹೆಚ್ಚಿನ ಹಿಡಿತ ಸಾಧಿಸುತ್ತಿದ್ದಾರೆ. ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರುವ ಮಾಧ್ಯಮ ಸೊರಗುತ್ತಿದೆ ಎಂದು ವಾದಿಸಿದರು. ಶ್ರೀ ರವಿ ಹೆಗಡೆ ಮಾಧ್ಯಮ ಹಿಂದೆಯೂ ಪ್ರಬಲವಾಗಿತ್ತು, ಇಂದೂ ಅಷ್ಟೇ ಶಕ್ತಿಯುತವಾಗಿದೆ ಎಂದು ಉದಾಹರಣೆಗಳನ್ನು ಕೊಟ್ಟು ವಿವರಿಸಿದರು. ಸಾಮಾಜಿಕ ಮಾಧ್ಯಮಗಳು ಅಂಕೆಯಿಲ್ಲದಂತೆ ವರ್ತಿಸುತ್ತಿದ್ದರೂ ಜನ ಸಾಮಾನ್ಯರು ಆ ಮಾಹಿತಿಗಳನ್ನು ಒಪ್ಪುವ/ಬಿಡುವ, ಉಪಯೋಗಿಸುವ/ತಿರಸ್ಕರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ದಿನವಿಡೀ ಬಿತ್ತರಗೊಳ್ಳುವ ಸುದ್ದಿ ನಮಗೆ ಮಾಧ್ಯಮದ ಪ್ರಬಲತೆ ಅತಿಯಾಗಿದೆ ಎಂದು ಅನಿಸುವುದು ಸಹಜ. ಸಿಗುವ ಮಾಹಿತಿಯನ್ನೋ, ಮನರಂಜನೆಯನ್ನೋ ಪಡೆಯುವ ಆಯ್ಕೆಮಾಡುವ ಅವಕಾಶ ಗ್ರಾಹಕರಲ್ಲಿದೆ. ಕೈಯಲ್ಲಿರುವ ಆಯುಧವನ್ನು ಒಳಿತಿಗೆ ಉಪಯೋಗಿಸಬೇಕೋ ಅಥವಾ ಧ್ವಂಸತ್ವಕ್ಕೆ ಬಳಸಬೇಕೋ ಎನ್ನುವುದು ನಮ್ಮ ಕೈಯಲ್ಲಿದೆ. ತಂತ್ರಜ್ನಾದ ಬಳಕೆಯನ್ನು ಉತ್ತಮವಾಗಿ ಉಪಪಯೋಗಿಸುವ ಬುದ್ಧಿವಂತಿಕೆ ನಮ್ಮಲ್ಲಿರಬೇಕೇ ಹೊರತು ಮಾಧ್ಯಮಗಳ ಪ್ರಬಲತೆ/ದುರ್ಬಲತೆಯನ್ನು ಚರ್ಚಿಸುವುದರಲ್ಲಿ ಹೆಚ್ಚಿನ ಅರ್ಥವಿಲ್ಲವೆಂದರು. ಉತ್ತಮ ಗುಣಮಟ್ಟದ ಮಾಹಿತಿಗೆ ಮುದ್ರಿತ ಮಾಧ್ಯಮಗಳು ಇಂದಿಗೂ ಶ್ರೇಷ್ಠ ಎಂದು ಅಭಿಪ್ರಾಯ ಪಟ್ಟರು. ಶ್ರೀ. ವಿಶ್ವೇಶ್ವರ ಭಟ್ಟರು ತಮ್ಮ ದೀರ್ಘ ವೃತ್ತಿಪರ ಅನುಭವವನ್ನು ವಿಸ್ತರಿಸುತ್ತ ಮಾಧ್ಯಮ ಪ್ರಬಲವಾಗಿಯೂ ಪರಿಣಾಮಕಾರಿಯೂ ಆಗಿರಬೇಕು; ಇದ್ದರೆ ಮಾತ್ರ ದೇಶ ಸಧೃಡವಾಗಿರಲು ಸಾಧ್ಯವೆಂದರು. ಮಾಧ್ಯಮ ಸಮಾಜವನ್ನು ಪ್ರತಿಫಲಿಸುತ್ತದೆ, ಯಾವುದನ್ನೇ ಕೃತಕವಾಗಿ ಸೃಷ್ಟಿ ಮಾಡದು. ದೃಶ್ಯ ಮಾಧ್ಯಮ ವೈಚಾರಿಕತೆಯನ್ನು ಹತ್ತಿಕ್ಕುತ್ತದೆ. ಮುದ್ರಿತ ಮಾಧ್ಯಮ ಎಂದೆಂದಿಗೂ ಪ್ರಸ್ತುತ; ದೂರದರ್ಶನ ಹಾಗೂ ಸಾಮಾಜಿಕ ಮಾಧ್ಯಮಗಳು ಭಾವನೆಗಳನ್ನು ಕೆರಳಿಸುವ, ಮನೋಲ್ಲಾಸಕಾರಿ ಮನರಂಜನೆಗಷ್ಟೇ ಸೀಮಿತ ಎಂದು ಅಭಿಪ್ರಾಯಪಟ್ಟರು. ಜನರ ಅಭಿರುಚಿಗನುಗುಣವಾಗಿ ಈ ಮಾಧ್ಯಮಗಳು ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆಯೇ ಹೊರತು ವೈಚಾರಿಕತೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುವಲ್ಲಿ ಸೋತಿವೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ಮುದ್ರಿತ ಮಾಧ್ಯಮಗಳ ಪ್ರಾಬಲ್ಯ ಅತಿ ಆಗುತ್ತಿಲ್ಲ, ಕಡಿಮೆಯೂ ಆಗುತ್ತಿಲ್ಲ ಆದರೆ ಪ್ರಬಲ ಮಾಧ್ಯಮ ಸಮಾಜಕ್ಕೆ ಅತ್ಯವಶ್ಯಕ ಎಂದರು.
ಈ ಬಾರಿಯ ಸಭೆ ಹಿರಿದಾದ ಕೊನೆಯಲ್ಲಿದ್ದುದ್ದಲ್ಲದೆ, ಉತ್ತಮ ಧ್ವನಿ ವ್ಯವಸ್ಥೆಯನ್ನೂ ಪಡೆದಿದ್ದು ವಿಶೇಷ. ಶ್ರೀ. ಆನಂದ ಕೇಶವಮೂರ್ತಿಯವರು ನೀಡಿದ ಉತ್ತಮ ತಂತ್ರಜ್ಞಾನ ಬೆಂಬಲ ಕೇಳುಗರಿಗೆ ಯಾವುದೇ ವ್ಯತ್ಯಯವಾಗದಂತೆ ಸಹಕರಿಸಿತು. ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಸಭಿಕರು ಸಕ್ರಿಯವಾಗಿ ಅತಿಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಭಾಗವಹಿಸಿದರು. ಅವರಲ್ಲನೇಕರು ವೈಯಕ್ತಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅನಿವಾಸಿ ಸದಸ್ಯರಿಗೆ ಮಾರನೆಯ ದಿನದ ಕಾರ್ಯಕ್ರಮಕ್ಕೆ ಹೆಚ್ಚಿನ ಹುರುಪು ನೀಡಿತು. ಶ್ರೀಮತಿ ಅನ್ನಪೂರ್ಣ ಆನಂದ್ ಚೊಕ್ಕದಾಗಿ ವಂದನಾರ್ಪಣೆ ಕಾರ್ಯ ನಿರ್ವಹಿಸಿದರು.
- ರಾಮಶರಣ
ಅನಿವಾಸಿ ಸಮಾನಾಂತರ ಸಭೆ( ದಿನ-2 ಅತಿಥಿಗಳ ಮಾತು ಹಾಗೂ ಪ್ರಶ್ನೋತ್ತರಗಳು)
ಎರಡನೇ ದಿನ ಅಂದುಕೊಂಡಿದ್ದಕ್ಕಿಂತ ತುಂಬ ತಡವಾಗಿ ಕಾರ್ಯಕ್ರಮ ಆರಂಭವಾದರೂ, ಅಂದುಕೊಂಡಿದ್ದಕ್ಕಿಂತ ಹೆಚ್ಚು ಜನರು ಸೇರಿದ್ದರು. ಕಾರ್ಯಕ್ರಮದ ಉಸ್ತುವಾರಿಯನ್ನು ಶ್ರೀಮತಿ ಗೌರಿ ಪ್ರಸನ್ನ ಅವರು ವಹಿಸಿಕೊಂಡಿದ್ದರು. `ದೇಶ ಸುತ್ತು ಕೋಶ ಓದು,` ಎನ್ನುವ ಗಾದೆಮಾತನ್ನು ಹೇಳಿ, ಬಹಳಷ್ಟು ದೇಶಗಳನ್ನು ಸುತ್ತಿದ, ಸಹಸ್ರಾರು ಕೋಶಗಳನ್ನು ಓದಿರುವುದಲ್ಲದೇ ಹಲವಾರು ಕೃತಿಗಳನ್ನು ರಚಿಸಿರುವ, ವಾಗ್ಮಿಗಳಾದ ಶ್ರೀ ಗುರುರಾಜ ಕರ್ಜಗಿಯವರು ಮತ್ತು ಶ್ರೀ ವಿಶ್ವೇಶ್ವರ ಭಟ್ಟರು, `ಕನ್ನಡ ಬಳಗ`ದ `ಕೆ ಎಸ್ ಎಸ್ ವಿ ವಿ` ಯ ಪರ್ಯಾಯ ಕಾರ್ಯಕ್ರಮಕ್ಕೆ ಬಂದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು. ಸುವರ್ಣ ವಾಹಿನಿ ಮತ್ತು ಕನ್ನಡ ಪ್ರಭದ ಉಸ್ತುವಾರಿ ವಹಿಸಿಕೊಂಡಿರುವ ಶ್ರೀ ರವಿ ಹೆಗಡೆಯವರೂ ವೇದಿಕೆಯ ಮೇಲೆ ಮತ್ತೋರ್ವ ಅತಿಥಿಯಾಗಿ ಉಪಸ್ಥಿತರಿದ್ದರು.
ಮೊದಲ ದಿನದ ಗಂಭೀರ ಚರ್ಚೆಗಳನ್ನು ಬದಿಗಿಟ್ಟು, ಎರಡನೇ ದಿನ, `ವಿದೇಶದಲ್ಲಿ ಎದುರಿಸಿದ ಪೇಚಿನ ಮತ್ತು ಮೋಜಿನ ಪ್ರಸಂಗಗಳು.` ಎನ್ನುವ ವಿಷಯದ ಬಗ್ಗೆ ಮಾತನಾಡಲು ಅತಿಥಿಗಳನ್ನು ಕೇಳಿಕೊಳ್ಳಲಾಯಿತು.
ಮೊದಲು ಮಾತನಾಡಿದ ರವಿ ಹೆಗಡೆಯವರು, ಶ್ರೀಲಂಕಾದಲ್ಲಿ ನಡೆದ ಪೇಚಿನ ಪ್ರಸಂಗವನ್ನು ಹೇಳಿ ನಮಗೆ ಮೋಜು ನೀಡಿದರು. ಶ್ರೀಲಂಕಾದಲ್ಲಿ `ಮರಿಯಾನೆಯ ಕುಣಿತ`ವನ್ನು ತೋರಿಸುತ್ತೇನೆಂದು ಮೋಸಮಾಡಿದ ಪ್ರಸಂಗವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ನಮ್ಮನ್ನು ನಗಿಸಿದರು.
ನಂತರ ಮಾತನಾಡಿದ ಶ್ರೀ ಗುರುರಾಜ ಕರ್ಜಗಿಯವರು, ಅಮೇರಿಕದಲ್ಲಿ ತಾವು ಕಣ್ಣಾರೆ ಕಂಡ `ಟು ಫಾರ್ ಅಸ್, ಒನ್ ಫಾರ್ ದ ವಾಲ್`ಪ್ರಸಂಗವನ್ನು ಹೇಳಿದರು. ಆ ಪ್ರಸಂಗದ ಬಗ್ಗೆ ಲೇಖನ ಬರೆದಾಗ, ಅದನ್ನು ಓದಿದ, `ವಿದ್ಯಾರ್ಥಿ ಭವನ`ದ ಶ್ರೀ ಅರುಣ ಅಡಿಗರು, ಕೊರೋನಾ ಸಮಯದಲ್ಲಿ ಅದರಿಂದ ಸ್ಪೂರ್ತಿಯನ್ನು ಪಡೆದು ಸಹಸ್ರಾರು ಜನರಿಗೆ ಆಹಾರ ಸರಬುರಾಜು ಮಾಡಿದ್ದನ್ನು ನೆನಪಿಸಿಕೊಂಡರು.
ಗಂಟಲು ಕೈಕೊಟ್ಟ ಕಾರಣಕ್ಕೆ ಮಾತನಾಡಲಾರೆ ಎಂದಿದ್ದ ಶ್ರೀ ವಿಶ್ವೇಶ್ವರ ಭಟ್ಟರು ಇಬ್ಬರ ಭಾಷಣದಿಂದ ಉತ್ಸಾಹಗೊಂಡು, `ಒನ್ ಫಾರ್ ದ ಬುಕ್,` ಎನ್ನುವ ವೇಲ್ಸ್-ನಲ್ಲಿರುವ ಹೇ-ಆನ್-ವೈ ಎನ್ನುವ ಪುಸ್ತಕ ಗ್ರಾಮದ ಬಗ್ಗೆ ಮಾತನಾಡಿದರು. ಆ ಪುಸ್ತಕಗ್ರಾಮ ಪುಸ್ತಕಗಳ್ಳನ ಮೇಲೆ ಮಾಡಿದ ಅದಮ್ಯ ಪರಿಣಾಮದ ಬಗ್ಗೆ ಹೇಳಿದರು.
ಇದಾದ ಮೇಲೆ ಸಭಿಕರ ಜೊತೆ ಪ್ರಶ್ನೋತ್ತರದ ಕಾರ್ಯಕ್ರಮ ನಡೆಯಿತು.
ಶ್ರೀ ರವಿ ಹೆಗಡೆಯವರು `ಅನಿವಾಸಿ ಕನ್ನಡಿಗರು ಇಲ್ಲಿಯೂ ಅಲ್ಲಿಯೂ ಸಲ್ಲದವರೋ ಅಥವಾ ಎರಡೂ ಕಡೆ ಸಲ್ಲುವವರೋ?` ಎನ್ನುವ ಪ್ರಶ್ನೆಯನ್ನು ಎತ್ತಿಕೊಂಡು, `ಜಾಗತೀಕರಣದ ಕಾಲದಲ್ಲಿ ಅನಿವಾಸಿ ಕನ್ನಡಿಗರು ಕರ್ನಾಟಕದ ರಾಯಭಾರಿಗಳು, ಎಲ್ಲೆಲ್ಲಿಯೂ ಸಲ್ಲುವವರು,` ಎಂದು ಮನಮುಟ್ಟುವಂತೆ ಹೇಳಿದರು.
ಶ್ರೀ ವಿಶ್ವೇಶ್ವರ ಭಟ್ಟರು ಪತ್ರಕರ್ತರಿಗೆ ಭಾಷೆಯ ಸ್ವಚ್ಛತೆಯ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತ, ತಾವು ಇಂಗ್ಲೆಂಡಿನಲ್ಲಿ ಜರ್ನಲಿಸಂ ಓದುವಾಗ ಸನ್ ಪತ್ರಿಕೆಯು ಹೇಗೆ ಕೆಲವೇ ಪದಗಳಲ್ಲಿ ಸ್ಪಷ್ಟವಾಗಿ ಬರೆಯುವ ತರಬೇತಿಯನ್ನು ಪತ್ರಕರ್ತರಿಗೆ ಕೊಡುತ್ತದೆ ಎನ್ನುವುದರಿಂದ ಹಿಡಿದು, ತಾವು ಹೇಗೆ ಹೊಸ ಪತ್ರಕರ್ತರನ್ನು ಆಯ್ಕೆ ಮಾಡುತ್ತೇವೆ ಎನ್ನುವವರೆಗೆ ಹೇಳಿದರು.
ಶ್ರೀ ಗುರುರಾಜ ಕರ್ಜಗಿಯವರು ಪ್ರಶೆಗಳನ್ನು ಎತ್ತಿಕೊಂಡು, ವಸುಧೈವ ಕುಟುಂಬಕಮ್, ಜಾತಿ ತಾರತಮ್ಯ, ಲಿಂಗ ಬೇಧ, ಮೀಸಲಾತಿ, ಶಿಕ್ಷಕರು ಇತ್ಯಾದಿಗಳ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. `ಟೀನೇಜ್ ಮಗಳಿಗೆ ಏನುಪದೇಶ ಕೊಡುವುದು?` ಎನ್ನುವ ಪ್ರಶ್ನೆಗೆ, `ಅವಳು ಸರಿಯಾಗಿದ್ದಾಳೆ, ಸುಮ್ಮನೇ ತಡುವಬೇಡಿ, ನಿಯಮಗಳು ಎಲ್ಲರಿಗೂ ಒಂದೇ ಟೀನೇಜ್ ಮಗಳಿರಲಿ ಅಥವಾ ಮಗನಿರಲಿ, ಲಿಂಗಬೇಧವಿರಬಾರದು,` ಎಂದು ಹೇಳಿದರು.
ಆಭಾರ ಮನ್ನಣೆಯನ್ನು ಶ್ರೀಮತಿ ವತ್ಸಲಾ ರಾಮಮೂರ್ತಿ ನಡೆಸಿಕೊಟ್ಟರು.
- ಕೇಶವ್ ಕುಲಕರ್ಣಿ