ಎಚ್ಚೆಸ್ವಿ ಎಂಬ ಜೀವಪರತೆ..ಭಾವದೊರತೆ

ಎಚ್ಚೆಸ್ವಿ ಕೆಲವು ಆತ್ಮೀಯ ನೆನಪುಗಳು

ಎಚ್ಚೆಸ್ವಿ ಅವರು ನನ್ನ ತಂದೆ ಜಿ ಎಸ್ ಎಸ್ ಅವರ ಪ್ರತಿಭಾವಂತ ಮತ್ತು ಆಪ್ತ ಶಿಷ್ಯರು. ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ   ಕನ್ನಡ ಎಂ.ಎ ವಿದ್ಯಾರ್ಥಿಯಾದ ಮೇಲೆ (1971-1973) ನಮ್ಮ ಕುಟುಂಬಕ್ಕೆ ಪರಿಚಿತರಾದರು. ಕುವೆಂಪು ಅವರಿಗೆ ವೆಂಕಣಯ್ಯ ನವರು ಹೇಗೋ, ಜಿ ಎಸ್ ಎಸ್ ಅವರಿಗೆ ಕುವೆಂಪು ಹೇಗೋ , ಹಾಗೆ ಎಚ್ಚೆಸ್ವಿ ಅವರಿಗೆ ಜಿ ಎಸ್ ಎಸ್ ಪೂಜ್ಯ ಗುರುಗಳು. ಅದು ಅನನ್ಯವಾದ ಗುರು ಶಿಷ್ಯ ಸಂಬಂಧ. ಅಲ್ಲಿ ಪರಸ್ಪರ ಪ್ರೀತಿ, ಗೌರವ, ಸಲಿಗೆ, ಗೆಳೆತನ ಒಂದು ಹದದಲ್ಲಿ  ಇರುವಂತಹ ಒಡನಾಟ. ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸುವುದಾದರೆ "ಅಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ. ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಹತ್ತಿರವಾದದ್ದು ಬರಿಯ ವಿದ್ಯಾರ್ಥಿ ದೆಸೆಯಿಂದಲ್ಲ, ಅದಕ್ಕೆ ಮುಖ್ಯಕಾರಣ ಎಚ್ಚೆಸ್ವಿ ಒಬ್ಬ ಸೃಜನಶೀಲ ಕವಿ, ಅವರು ಸ್ನೇಹಪರರು ಮತ್ತು ಮೃದು ಸ್ವಭಾವದವರು. ಗುರು ಶಿಷ್ಯರು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಸಮ್ಮೇಳನಗಳಲ್ಲಿ ಒಟ್ಟಿಗೆ ಭಾಗವಹಿಸಿದವರು. ಒಬ್ಬರ ಕವಿತೆಯನ್ನು ಇನ್ನೊಬ್ಬರು ಮೆಚ್ಚಿಕೊಂಡವರು. ಕಾಲಕ್ರಮೇಣ ಎಚ್ಚೆಸ್ವಿ ಅವರು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅಧ್ಯಪಕರಾಗಿದ್ದಾಗ ನಾವು ವಾಸವಾಗಿದ್ದ ಬನಶಂಕರಿ ಎರಡನೆಹಂತದ ೧೮ನೇ ಮುಖ್ಯ ರಸ್ತೆಯಲ್ಲಿ, ಪಕ್ಕದಲ್ಲೇ ಅವರೂ, ಮಡದಿ ರಾಜಲಕ್ಷ್ಮಿ ಮತ್ತು ಮಕ್ಕಳ ಜೊತೆ ಒಂದು ಬಾಡಿಗೆ ಮನೆಯಲ್ಲಿ ಹಲವಾರು ವರ್ಷಗಳ ಅವಧಿಯಲ್ಲಿ ವಾಸವಾಗಿದ್ದರು. ಗುರು ಶಿಷ್ಯರು ಸಾಹಿತ್ಯ ಸಮ್ಮೇಳನಗಳ ನಡುವೆ ಹಲವಾರು ಪ್ರವಾಸವನ್ನು ಕೈಗೊಳ್ಳುತ್ತಿದ್ದರು, ಕೆಲವೊಮ್ಮೆ ಮಾರ್ನಿಂಗ್ ವಾಕ್ ಮಾಡುತ್ತಿದ್ದರು. ಸೂರ್ಯದಯವನ್ನು ಒಟ್ಟಿಗೆ ನಿಂತು ವೀಕ್ಷಿಸುತ್ತಿದ್ದರು. ಆ ವೇಳೆ ಎಚ್ಚೆಸ್ವಿ ಏನಾದರೂ ಹರಟೆಗೆ ತೊಡಗಿದರೆ, ಜಿ ಎಸ್ ಎಸ್ ಅವರು 'ಶುಶ್ ಸುಮ್ಮನಿರಿ ಸೂರ್ಯೋದಯವನ್ನು ನಿಶಬ್ದದಲ್ಲಿ ನೋಡೋಣ' ಎನ್ನುತ್ತಿದ್ದರಂತೆ! (ಇದರ ಬಗ್ಗೆ ಎಚ್ಚೆಸ್ವಿ ಅವರು ಒಂದು ಕಡೆ ಬರೆದಿದ್ದಾರೆ) ವಾಕಿಂಗ್ ಬಳಿಕ ಗುರು ಶಿಷ್ಯರು ಗಾಂಧಿಬಜಾರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಅಲ್ಲಿ ಮಸಾಲೆ ದೋಸೆ ಕಾಫಿ ಸವಿದು ಬರುತ್ತಿದ್ದರು. ಜಿ ಎಸ್ ಎಸ್ ಅವರೇ ವಿದ್ಯಾರ್ಥಿಭವನದ ಬಿಲ್ಲು ಕಟ್ಟುತ್ತಿದ್ದರೆಂದು ಎಚ್ಚೆಸ್ವಿ "ಬಿಲ್ಲೋಜ ಜಿ ಎಸ್ ಎಸ್ " ಎಂಬ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ. ಸ್ವಾರಸ್ಯಕರವಾದ ಸಂಗತಿ ಎಂದರೆ ಗುರು ಶಿಷ್ಯರಿಬ್ಬರೂ ತಮ್ಮ ಪತ್ನಿಯರಿಗೆ ವಿದ್ಯಾರ್ಥಿ ಭವನಕ್ಕೆ ಹೋಗುತ್ತಿದ್ದೇವೆ ಎಂಬ ಸುಳಿವು ಕೊಡುತ್ತಿರಲಿಲ್ಲವಂತೆ. (ಹೋಟೆಲ್ಗೆ ಹೋಗಿ ಯಾಕೆ ತಿನ್ನ ಬೇಕು ಕೇಳಿದ್ದರೆ ಮನೆಯಲ್ಲೇ ಮಾಡಿಕೊಡುತ್ತಿದ್ದೆವಲ್ಲ ಎಂಬ ಮಡದಿಯ ಆಕ್ಷೇಪಣೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ) ನಮ್ಮ ಮನೆಯಲ್ಲಿ ಪ್ರತಿ ವರ್ಷ ಮೇ ತಿಂಗಳ ಕೊನೆಗೆ ಮಾವಿನ ಹಣ್ಣಿನ ಸೀಸನ್ ಮಧ್ಯದಲ್ಲಿ ಅಪ್ಪ, ಅವರ ಆತ್ಮೀಯ ಸಾಹಿತಿ ಮಿತ್ರರನ್ನು ಹೋಳಿಗೆ ಸೀಕರಣೆ ಊಟಕ್ಕೆ ಆಹ್ವಾನಿಸುತ್ತಿದ್ದರು, ಅದರಲ್ಲಿ ಎಚ್ಚೆಸ್ವಿ ಅವರು ಇದ್ದೇ ಇರುತ್ತಿದ್ದರು. ಅಪ್ಪ ಶುರುವಿನಲ್ಲಿ ಎಚ್ಚೆಸ್ವಿ ಅವರಿಗೆ ಹೇಗೆ ಹೋಳಿಗೆಗೆ ತುಪ್ಪಕಲೆಸಿ ನಂತರ ಸೀಕರಣೆಯನ್ನು ಕಿವುಚಿ ಒಂದು ಹದದಲ್ಲಿ ಮಿಕ್ಸ್ ಮಾಡಿ ತಿನ್ನಬೇಕು ಎಂಬುದನ್ನು ತಿಳಿಸಿಕೊಟ್ಟದ್ದನ್ನು ಎಚ್ಚೆಸ್ವಿ ತಮ್ಮ ಒಂದು ಬರಹದಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಗುರು ಶಿಷ್ಯರಿಬ್ಬರು ತಮ್ಮ ಕೃತಿಗಳನ್ನು ಪರಸ್ಪರ ವಿಮರ್ಶೆ ಮಾಡಿದ್ದಾರೆ. ಎಚ್ಚೆಸ್ವಿ ಅವರು 'ಜಿ ಎಸ್ ಎಸ್ ಬದುಕು ಬರಹ' ಎಂಬ ವಿಮರ್ಶೆ ಕೃತಿಯನ್ನು ೨೦೧೨ರಲ್ಲಿ ಪ್ರಕಟಿಸಿದ್ದಾರೆ. 'ಎಚ್ಚೆಸ್ವಿ ಸಮಗ್ರ ಕವಿತೆಗಳು' ಎಂಬ ಬೃಹತ್ ಕೃತಿಯನ್ನು ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಅರ್ಪಣೆಮಾಡಿರುವುದು ಆ ಗುರು ಶಿಷ್ಯರ ಅನ್ಯೋನ್ಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ಜಿ ಎಸ್ ಎಸ್ ಅವರೂ ಎಚ್ಚೆಸ್ವಿ ಅವರ ಕೃತಿಗಳನ್ನು ಕುರಿತು ಅನೇಕ ಬರಹಗಳನ್ನು ಬರೆದಿದ್ದಾರೆ.

ವಾರಾಂತ್ಯ ಹತ್ತುಗಂಟೆಯ ನಂತರ ಎಚ್ಚೆಸ್ವಿ ನಮ್ಮ ಮನೆ ಬಾಗಿಲು ಬಡಿದಾಗ ನಾನು ಅಥವಾ ಅಮ್ಮ ಬಾಗಿಲು ತೆರದ ಕೂಡಲೇ 'ಮೇಷ್ಟ್ರು ಇದಾರ' ಎಂದು ಮುಗುಳ್ನಗುತ್ತಿದ್ದರು, 'ಬನ್ನಿ ಒಳಗೆ' ಎಂದಾಗ ಅವರು ನೇರವಾಗಿ ಅಪ್ಪನ ಲೈಬ್ರರಿ/ಸ್ಟಡಿ ಕೋಣೆಯೊಳಗೆ ಕೂತು ಅಪ್ಪನನ್ನು ಭೇಟೆಯಾಗುತ್ತಿದ್ದರು. ಈ ಗುರು ಶಿಷ್ಯರು ಗಂಟೆಗಟ್ಟಲೆ ಸಾಹಿತ್ಯ ಸಂವಾದದಲ್ಲಿ ತೊಡಗುತ್ತಿದ್ದರು. ಕೆಲವೊಮ್ಮೆ ಇವರ ಜೊತೆ ಸಿ ಅಶ್ವಥ್, ಸುಮತೀನ್ದ್ರ ನಾಡಿಗ, ಎಚ್ ಎಸ್ ರಾಘವೇಂದ್ರ ರಾವ್ ಮತ್ತಿತರು ಬಂದು ಸೇರಿಕೊಳ್ಳುತ್ತಿದ್ದರು. ಸಂವಾದ ಮುಗಿದನಂತರ ನಾನು ವೆರಾಂಡದಲ್ಲಿ ಅಥವಾ ಅಂಗಳದ ಗೇಟು ಹಾಕಲು ಬಂದಾಗ ಡಾಕ್ಟ್ರೇ ಹೇಗಿದ್ದೀರಾ, ಕ್ಲಿನಿಕ್ ಹೇಗೆ ನಡೀತಾಯಿದೆ ಇತ್ಯಾದಿ ಸಾಹಿತ್ಯದ ಆಚೆಯ ಮಾತುಗಳನ್ನು ಆಡುತ್ತಿದ್ದರು. ಯೌವ್ವನದಲ್ಲಿ ನನ್ನ ವೈದ್ಯಕೀಯ ವೃತ್ತಿ ನನ್ನನ್ನು ಆವರಿಸಿಕೊಂಡಿದ್ದು ನನಗೆ ಸಾಹಿತ್ಯದ ಬಗ್ಗೆ ಗಮನ ಕೊಡಲು ಸಮಯದ ಅವಕಾಶವೇ ಇರಲಿಲ್ಲ, ಸಾಹಿತ್ಯಾಸಕ್ತಿ ಹಿಂದೆಯೇ ಉಳಿದಿದ್ದ ಕಾಲವದು. ನಾನು ಮತ್ತು ಎಚ್ಚೆಸ್ವಿ ಸಾಹಿತ್ಯ ಸಂವಾದಕ್ಕೆ ತೊಡಗಿದ್ದು ನಾನು ಇಂಗ್ಲೆಂಡಿಗೆ ಬಂದಮೇಲೆ ಎನ್ನ ಬಹುದು. ಆ ಕಾಲಕ್ಕೆ ನನಗೆ ಸಾಹಿತ್ಯದಲ್ಲಿ ಆಸಕ್ತಿ ಉಂಟಾಗಿತ್ತು, ಓದಲು ಬರೆಯಲು ಸಮಯ ಮತ್ತು ಅವಕಾಶ ಎರಡು ದಕ್ಕಿದ್ದವು.

ಅಂದಹಾಗೆ ನನಗೆ ಎಚ್ಚೆಸ್ವಿ ಅವರ ಸಾಹಿತ್ಯ ಪರಿಚಯವಾದದ್ದು ಸುಗಮ ಸಂಗೀತದ ಮೂಲಕವೇ. ನನಗೆ ಅವರು ಹೆಚ್ಚು ಹತ್ತಿರವಾದದ್ದು ನಾನು ಕನ್ನಡದಲ್ಲಿ ಕವನಗಳನ್ನು ಪ್ರಬಂಧಗಳನ್ನು ರಚಿಸಲು ಶುರುವಾದಾಗ. ಈ ವೇಳೆಗೆ ಅಪ್ಪ ತೀರಿಕೊಂಡಿದ್ದರು. ಎಚ್ಚೆಸ್ವಿ ಅವರು ಇಂಗ್ಲೆಂಡಿಗೆ ಕನ್ನಡ ಬಳಗದ ಆಹ್ವಾನದ ಮೇರೆಗೆ ಇಲ್ಲಿ ಬಂದಾಗ ನಮ್ಮ ಬಾಂಧವ್ಯ ಹೆಚ್ಚಾಯಿತು. ನಾನು ಬೆಂಗಳೂರಿಗೆ ಹೋದಾಗ ಎಚ್ಚೆಸ್ವಿ, ಬಿ ಆರ್ ಲಕ್ಷ್ಮಣ ರಾವ್, ಡುಂಡಿರಾಜ್, ಜೋಗಿ ಇವರೊಡನೆ ಅನೇಕ ಕ್ಲಬ್ ಮತ್ತು ಹೋಟೆಲಿನಲ್ಲಿ ಭೋಜನ ಕೂಟಗಳಲ್ಲಿ ಒಡನಾಡುವ ಅವಕಾಶ ಒದಗಿ ಬಂತು. ವಿಸ್ಕಿ ಸೇವೆನಯಲ್ಲೂ ಎಚ್ಚೆಸ್ವಿ ಮಿತವಾಗಿ ಒಂದು ಪೆಗ್ ಸೇವಿಸಿ ನಂತರ ಎರಡನೇ ಪೆಗ್ಗಿಗೆ ಒತ್ತಾಯಿಸಿದಾಗ ಬೇಡವೆಂದು ‘ನನ್ನದು ಅದ್ವೈತ ಫಿಲಾಸಫಿ’ ಎಂದು ಹಾಸ್ಯ ಚಟಾಕಿಯನ್ನು ಹಾರಿಸುತ್ತಿದ್ದರು. ಎಚ್ಚೆಸ್ವಿ ಉತ್ತಮ ವಾಗ್ಮಿಗಳು, ಸಾಮಾನ್ಯವಾಗಿ ಅವರು ಸಭೆಗಳಲ್ಲಿ ಸುಮಾರು 15-20 ನಿಮಿಷಕ್ಕಿಂತ ಹೆಚ್ಚು ಮಾತನಾಡಿದ್ದನ್ನು ನಾನು ಕೇಳಿಲ್ಲ. ಆ ಮಿತವಾದ ಭಾಷಣದಲ್ಲಿ ಸರಳತೆ, ಸ್ಪಷ್ಟತೆ, ಪದಗಳ ಬಳಕೆ ಮತ್ತು ವಿಚಾರಗಳು ಸೊಗಸಾಗಿರುತ್ತಿತ್ತು. 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ವಚನದ ಸಾಲುಗಳು ನೆನಪಿಗೆ ಬರುತ್ತಿತ್ತು.

ನಾನು ಬರೆಯಲು ಶುರುಮಾಡಿದಾಗ ನನ್ನ ಕೋರಿಕೆಯ ಮೇಲೆ ಎಚ್ಚೆಸ್ವಿ ನನ್ನ ಎಲ್ಲ ಬರಹಗಳನ್ನು ಓದಿ, ಸೂಕ್ತ ಸಲಹೆಗಳನ್ನು ನೀಡಿ, ಪ್ರಕಟಿಸಲು ಉತ್ತೇಜನ ನೀಡುತ್ತಿದ್ದರು. ನನ್ನ ಚೊಚ್ಚಲ ಕವನ ಸಂಕಲನ 'ಇಂಗ್ಲೆಂಡಿನಲ್ಲಿ ಕನ್ನಡಿಗ' ಕೃತಿಗೆ ಮುನ್ನುಡಿಯನ್ನು ಬರೆದು, ನನ್ನ ‘ಪಯಣ’ ಕಾದಂಬರಿಗೆ ಬೆನ್ನುಡಿಯನ್ನು ಕೂಡ ಬರೆದುಕೊಟ್ಟರು. ನಾನು ಒಂದು ರೀತಿ ಅವರ ಶಿಷ್ಯನೂ ಹೌದು. ಅವರಿಗೆ ಕಾಣಿಕೆಯಾಗಿ ನನ್ನ ಇತ್ತೀಚಿನ 'ಮೊನಾಲೀಸಾ' ಎಂಬ ಕವನ ಸಂಕಲನವನ್ನು ಅವರಿಗೆ ಅರ್ಪಿಸಿದ್ದೇನೆ. ಎಚ್ಚೆಸ್ವಿ ಅವರು ಶೆಫೀಲ್ಡ್ ನಗರಕ್ಕೆ ಆಗಮಿಸಿ ಯುಕೆ ಕನ್ನಡ ಬಳಗದ ಆಶ್ರಯದಲ್ಲಿ ನಡೆದ 2013 ದೀಪಾವಳಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅನಿವಾಸಿ ಸಾಹಿತ್ಯ ಅಂಗದ ಉದ್ಘಾಟನೆ ಮಾಡಿದ್ದನ್ನು ನಾನು ಸ್ಮರಿಸುತ್ತೇನೆ. ಈ ಸಾಹಿತ್ಯ ಅಂಗ ಈಗ ಎತ್ತರಕ್ಕೆ ಬೆಳದಿದೆ. ಆ ಸಂದರ್ಭದಲ್ಲಿ ಎಚ್ಚೆಸ್ವಿ ಅವರು ‘ಬೆಂಗಳೂರಿಗಿಂತ ಇಲ್ಲಿ ಹೆಚ್ಚು ಕನ್ನಡ ಕೇಳಿ ಬರುತ್ತಿದೆ’ ಎಂದು ಮಾತನಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. ಆ ವಿಚಾರ ನಮ್ಮ ಯುಕೆ ಅನಿವಾಸಿ ಕನ್ನಡಿಗರಿಗೆ ಹೆಮ್ಮೆಯ ವಿಷಯ. ನನ್ನ ಮತ್ತು ಎಚ್ಚೆಸ್ವಿ ನಡುವಿನ ವಾಟ್ಸ್ ಆಪ್ ಸಂದೇಶಗಳನ್ನು ನೆನೆದು ಕೆಳಗೆ ಹಂಚಿಕೊಳ್ಳುತ್ತಿದ್ದೇನೆ. ಸಂದರ್ಭ; ನನ್ನ ‘ಪಯಣ’ ಎಂಬ ಕಾದಂಬರಿ ತಯಾರಾಗುತ್ತಿದ್ದ ಸಮಯ.

"ಪ್ರಿಯ ಡಾ.ಪ್ರಸಾದ್
ನಿಮ್ಮ ಕಾದಂಬರಿಯನ್ನು ಒಂದೇ ಪಟ್ಟಿನಲ್ಲಿ ಓದಿ ಆನಂದಿಸಿದೆ. ಇನ್ನು ನೀವು ವೈದ್ಯಕೀಯದೊಂದಿಗೆ ಸಾಹಿತ್ಯ ಕೃಷಿ ಯಲ್ಲೂ ತೊಡಗಬೇಕು. ಲೀಲಾ ಜಾಲವಾಗಿ, ಎಲ್ಲೂ ಓದುಗರ ಆಸಕ್ತಿ ಕುಂದದಂತೆ ಕಥೆಯನ್ನು ನಿರೂಪಿಸಿದ್ದೀರಿ. ನಾಯಿಯು ಇಲ್ಲಿ ನಮಗೆಲ್ಲ ಆಪ್ತವಾಗುತ್ತದೆ. ಅದರ ನೋವು ನಮ್ಮ ನೋವಾಗುತ್ತದೆ. ಮಕ್ಕಳಿಗೆ ನಾಯಿ ಯಾಕೆ ಪ್ರಿಯವಾಗುತ್ತದೆ ಎಂಬುದು ನನಗೆ ಈಗ ಮನದಟ್ಟಾಯಿತು. ಮುಗ್ಧತೆ ಮತ್ತು ಸಹಜ ಪ್ರೀತಿ ಎರಡು ಜೀವಕ್ಕೂ ಸಮಾನ. ಸಿನಿಮಾಕ್ಕೆ ಲಾಯಕ್ಕಾಗಿದೆ. ಸಿನಿಮೀಯ ಎನ್ನಿಸದು. ಇದೊಂದು ಲೋಕಪ್ರೀತಿಯ ಸಹಜ ಕಲಾಕೃತಿ"

"ಧನ್ಯವಾದಗಳು ಎಚ್ಚೆಸ್ವಿ ತುಂಬಾ ಖುಷಿಯಾಯಿತು. ಈ ಕೃತಿಗೆ ‘ಸಾರ್ಥಕ ಪಯಣ’ ಎಂಬ ಹೆಸರನ್ನು ಆಯ್ಕೆ ಮಾಡಿರುವೆ"

" ಹೆಸರು ತುಂಬಾ ಗದ್ಯಮಯ. ಯಾನ…ಅಷ್ಟೇ ಸಾಕು. ಅಥವಾ ಪಯಣ ಎಂದು ಇಡಬಹುದು"

“ಪಯಣ ಬಹುಶಃ ಸೂಕ್ತವಾಗಿರಬಹುದು. ‘ಯಾನ’ ಎನ್ನುವ ಹೆಸರಲ್ಲಿ ಭೈರಪ್ಪನವರ ಕಾದಂಬರಿ ಇದೆ. ನನ್ನ ಈ ಕಥೆ ಸರಳವಾಗಿರಬಹುದು"

"ಸರಳತೆ ಗುಣವೋ ದೋಷವೋ ಎಂಬ ವಾಗ್ವಾದ ಇನ್ನೂ ಬಗೆಹರಿದಿಲ್ಲ...!"


ಎಚ್ಚೆಸ್ವಿ ಅವರ ಹಲವಾರು ಬರಹಗಳಲ್ಲಿ, ಮಾತುಗಳಲ್ಲಿ ಸರಳತೆ ಇದ್ದುದನ್ನು ನಾವೆಲ್ಲಾ ಗಮನಿಸಿದ್ದೇವೆ. ಕಥೆ, ಕವನ ಸಂಕೀರ್ಣವಾಗಿರಬೇಕು, ಆಗ ಅದಕ್ಕೆ ಹೆಚ್ಚು ಬೆಲೆ, ಸರಳತೆ ಒಂದು ದೋಷ ಎಂಬ ನನ್ನಲ್ಲಿದ್ದ ಕಲ್ಪನೆಯ ಹಿನ್ನೆಲೆಯಲ್ಲಿ ಅವರ ಮಾತುಗಳು ಅರ್ಥಪೂರ್ಣವಾಗಿ ತೋರಿದವು. ಸರಳವಾಗಿ ಬರೆಯುವುದೂ ಒಂದು ಕಲೆ ಎಂಬ ಆಲೋಚನೆ ಮೂಡಿಬಂತು. ಎಚ್ಚೆಸ್ವಿ ಅವರು ಬಹಳ ಶ್ರದ್ಧಾವಂತರು. ಅವರು ಶೇಫಿಲ್ಡ್ ನಗರದ ನಮ್ಮ ಮನೆಯಲ್ಲಿ ಒಂದು ವಾರ ತಂಗಿದ್ದಾಗ ‘ಶೆಫೀಲ್ಡ್ ಕವಿತೆಗಳು’ ಎಂಬ ನೀಳ್ಗವನದ ರಚನೆಯಲ್ಲಿ ತೊಡಗಿದ್ದರು. ಅವರು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಕುಳಿತು, ತೀಕ್ಷ್ಣ ಕವಿಸಮಯದಲ್ಲಿ ಮೂಡಿತ್ತಿದ್ದ ಸಾಲುಗಳನ್ನು ದಾಖಲಿಸುತ್ತಿದ್ದರು. ಮುಂದಕ್ಕೆ ‘ಶೆಫೀಲ್ಡ್ ಕವಿತೆಗಳು’ ಎಂಬ ಕೃತಿಯನ್ನು ಅವರು ಹೊರತಂದರು. ಆ ಕೃತಿಯನ್ನು ಕುರಿತು ‘ಎಚ್ಚೆಸ್ವಿ ಅವರ ಶೇಫಿಲ್ಡ್ ಕವಿತೆಗಳ ಬಗ್ಗೆ ಶೆಫೀಲ್ಡ್ ನಿವಾಸಿಯ ಅನಿಸಿಕೆಗಳು’ ಎಂಬ ಬರಹವನ್ನು ನಾನು ‘ಸಮಾಹಿತ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಎಚ್ಚೆಸ್ವಿ ಅವರು ಫೋನ್ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಆ ಕೃತಿಯನ್ನು ನನಗೆ ಮತ್ತು ನನ್ನ ಶ್ರೀಮತಿ ಪೂರ್ಣಿಮಾಗೆ ಅರ್ಪಣೆಮಾಡಿದ್ದು ಅದು ನನಗೆ ಅತ್ಯಂತ ಗೌರವದ ವಿಷಯ.
*
~ ಡಾ ಜಿ ಎಸ್ ಪ್ರಸಾದ್

ಎಚ್ಚೆಸ್ವಿಯವರ ಸಂದರ್ಶನ 

ಸಂದರ್ಶಕಿ – ಡಾ. ಪ್ರೇಮಲತಾ

‘ ಉರಿಯ ಉಯ್ಯಾಲೆ’ಯ  ಆಯ್ದ ಭಾಗಗಳು

~ ಚಿನ್ಮಯಿ

~ ಅಕ್ಷತಾ

ವಿದಾಯ ಹೇಳಬಹುದೇ ಇಷ್ಟು ಸುಲಭಕ್ಕೆ ನಿಮಗೆ? 

“ ಕಥೆ ಮುಗಿಯುವಾಗ ಚಡಪಡಿಕೆ ಪಾತ್ರಕ್ಕಷ್ಟೇ.
ಕೃತಿ ಮುಗಿದ ತೃಪ್ತಿ ಬರೆದವಗೆ.
ಇಷ್ಟು ದಿನ ಎಡೆಬಿಡದೇ ಬರೆದ ಬೆರಳಿಗೆ ಬಿಡುವು.
ಹೊರೆ ಇಳಿದ ಗೆಲುವು ಮುಖದೊಳಗೆ.”
( ಒಂದು ಕಥೆ – ಉತ್ತರಾಯಣ ಮತ್ತು...)
HSV ಹೋದರಂತೆ.. ಎಂಬ ಸುದ್ದಿ ಕೇಳಿದಾಗಿನಿಂದ ಅದೇನೋ ನನ್ನ ಮನದ ಭಾವಗಳೆಲ್ಲ ಹೆಪ್ಪುಗಟ್ಟಿದಂಥ ಅನುಭವ. ಎರಡಕ್ಷರದ ಶ್ರದ್ಧಾಂಜಲಿಯನ್ನೂ ಬರೆಯಲಾಗದ ಭಾವ ಜಡತೆ. ಬರೆದು ಮುಗಿಸಿಬಿಟ್ಟರೆ ಅದೆಲ್ಲಿ ಕವಿಯೊಡನೆಯ ಕೊನೆಯ ಋಣವೂ ಹರಿದುಕೊಂಡು ಬಿಡುತ್ತದೋ ಎನ್ನುವ ತಳಮಳ..ಆತಂಕ. ಬರೆಯದೇ ಹೋದರೆ ಅತೀ ಮಹತ್ವದ ಕಾರ್ಯವನ್ನೇನೋ ಬೇಕೆಂದೇ ಅಲಕ್ಷ್ಯ ಮಾಡುತ್ತಿರುವ ಚಡಪಡಿಕೆ..ಅಪರಾಧೀ ಭಾವ. ಅಂತೂ ಕೊನೆಗೂ ಪ್ರೀತಿಯ ಕಣ್ಣ ಕಂಬನಿಯಷ್ಟೇ ಅವರಿಗೆ ನಾವು ನೀಡಬಹುದಾದ ಕಾಣಿಕೆ.
ಜೀವ-ಜೀವನ ಪ್ರೀತಿ, ಜಗದ ಚೆಲುವು- ಒಲವು, ಅತೀ ಸೂಕ್ಷ್ಮ ಅಷ್ಟೇ ಬಲವತ್ತರವಾದ ಮಾನವ ಭಾವಲೋಕದ ಅನಾವರಣ, ತಾಳುವಿಕೆ, ಒಗ್ಗುವಿಕೆ ತನ್ಮೂಲಕ ಮಾಗುವಿಕೆ ಈ ಕವಿಯ ಸಾಹಿತ್ಯದ ಮುಖ್ಯ ಪ್ರತಿಪಾದನೆಗಳು. ಈ ಜೀವ ಜಗತ್ತಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳಿಗೂ ಇವರು ಕಿವಿಯಾಗುತ್ತಾರೆ; ಕಣ್ಣಾಗುತ್ತಾರೆ; ದನಿಯಾಗುತ್ತಾರೆ; ಹಾಡಾಗುತ್ತಾರೆ. ‘ಶ್ರೀ ಸಂಸಾರಿ’ಯ ಶ್ರೀರಾಮಚಂದ್ರನನ್ನು, ‘ ಆಪ್ತ ಗೀತೆ’ ಯ ಶ್ರೀಕೃಷ್ಣನನ್ನು, ‘ ಬುದ್ಧ ಚರಣದ’ ತಥಾಗತನನ್ನು ಎಷ್ಟು ಮಣ್ಣಿನ ಮಕ್ಕಳನ್ನಾಗಿ ಮಾಡಿ ಮರ್ತ್ಯರಾದ ನಮಗೆ ಅವರೆಲ್ಲರನ್ನು ಅತ್ಯಾಪ್ತರಾಗಿಸುತ್ತಾರೆ.ಧನುರ್ಧಾರಿ ರಾಮನ ಹೆಗಲಮೇಲಿನ ಬಿಲ್ಲು-ಬಾಣ ಕೆಳಗಿಳಿಸಿ ಅಲ್ಲೊಂದು ಪುಟ್ಟ ಅಳಿಲನ್ನು ಕೂಡಿಸುತ್ತಾರೆ. ರಾಜಸೇವೆಗಷ್ಟೇ ಮಿಗಿಲಾದ ‘ ಪುಷ್ಪಕ’ ದಲ್ಲಿ ವಾನರ – ಭಲ್ಲೂಕಾದಿಗಳಿಗೂ ಸೀಟು ಕೊಡಿಸಿಬಿಡುತ್ತಾರೆ. ಗೊಲ್ಲರ ಹುಡುಗ ‘ ಯಾದವ’, ‘ಕಾದವ’, ‘ ಸೇವಕ’ , ಶ್ರಾವಕ’ ನಾದ ಕಥೆ ಬಣ್ಣಿಸುತ್ತಾರೆ. ಲೋಕದ ಕಣ್ಣಿಗೆ ಕೇವಲ ಹೆಣ್ಣಾದ ರಾಧೆಯನ್ನು ಕೃಷ್ಣನನ್ನು ಕಾಣಿಸುತ್ತಾರೆ. ದ್ರೌಪದಿ, ಪೃಥೆ, ಮಂಥರೆ, ಊರ್ಮಿಳೆಯರ ಎದೆಯಾಳಕ್ಕಿಳಿದು ಮಂಥನ ನಡೆಸುತ್ತಾರೆ; ಹೃದಯ ಸಮುದ್ರದ ಹಾಲಾಹಲ - ಸುಧಾರಸಗಳನ್ನು ಹೊರ ಚೆಲ್ಲುತ್ತಾರೆ. “ ಕೊಂದವನದಲ್ಲ ಕಾದವನದ್ದು ಹಕ್ಕಿಯ ಹಕ್ಕು” ಎಂದು ಹೇಳಿ ಬುದ್ಧನ ಶಾಂತಿ- ಕರುಣೆಗಳಲ್ಲಿ ಮನ ತೊಯ್ಯಿಸುತ್ತಾರೆ.
“ ತಾನು ಕರಗದೇ ಮಳೆ ಸುರಿಸುವುದೇ ಶ್ರಾವಣದ ಸಿರಿ ಮುಗಿಲು?”, ‘ ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ’, ‘ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ’, ‘ತಾನೇ ಕಡಲಾಗಲು ಹೊರಟ ಗಂಗೆಗೆ ಆಣೆಕಟ್ಟು ಕಟ್ಟುವರಾರು?’, ‘ ಎಣ್ಣೆ ಹುಯ್ಯುವುದಗ್ನಿ ಶಮನಕ್ಕೆ ದಾರಿಯೇ? ‘....ಎಂಥೆಂಥ ಅದ್ಭುತ ಸಾಲುಗಳನ್ನವರು ಕೊಟ್ಟಿದ್ದು..ಪಟ್ಟಿ ಮಾಡುತ್ತ ಹೋದರೆ ಬೆಳಗಾಗುತ್ತದೆ. ಅವರ ಜೀವನ ಹಾಗೂ ಕೃತಿಗಳ ಕಿರುಪರಿಚಯ ಇಂತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಗ್ರಾಮದಲ್ಲಿ 1944ರ ಜೂನ್‌ 23ರಂದು ಜನಿಸಿದರು. ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ.
ಪ್ರಾಥಮಿಕ ಶಿಕ್ಷಣ ಹೋದಿಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗದಲ್ಲಿ ಮಾಡಿದರು. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರ್‌ ಆಗಿ ಉದ್ಯೋಗ ಆರಂಭಿಸಿದರು.
ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ., ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್‌.ಡಿ ಪದವಿ ಗಳಿಸಿದರು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸುಮಾರು 30 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಎಚ್ಚೆಸ್ವಿ ರಚಿಸಿದ ಮುಖ್ಯ ಕಾವ್ಯ ಕೃತಿಗಳು: ಸಿಂದಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಗಿದ ಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ನದೀತೀರದಲ್ಲಿ, ಮೂವತ್ತು ಮಳೆಗಾಲ (ಸಮಗ್ರ ಕಾವ್ಯ). ಮಹಾಕಾವ್ಯ: ಬುದ್ಧ ಚರಣ
ನಾಟಕಗಳು: ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ (ಏಕಾಂಕ), ಚಿತ್ರಪಟ-ಅಗ್ನಿವರ್ಣ- ಉರಿಯ ಉಯ್ಯಾಲೆ, ಕಂಸಾಯಣ-ಊರ್ಮಿಳಾ-ಮಂಥರಾ, ಮೇಘಮಾನಸ (ಗೀತರೂಪಕ).
ಮಕ್ಕಳ ಸಾಹಿತ್ಯಕ್ಕೆ ಕೊಡುಗೆ: ಹಕ್ಕಿಸಾಲು, ಹೂವಿನಶಾಲೆ, ಸೋನಿ ಪದ್ಯಗಳು (ಕವಿತೆಗಳು) ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು, ಹೂವಿ ಮತ್ತು ಸಂಧಾನ, ಮುದಿದೊರೆ ಮತ್ತು ಮೂವರು ಮಕ್ಕಳು (ನಾಟಕಗಳು).
ಕಾದಂಬರಿ: ತಾಪಿ, ಕಥಾಸಂಕಲನ-ಬಾನಸವಾಡಿಯ ಬೆಂಕಿ, ಪುಟ್ಟಾಚಾರಿಯ ಮತಾಂತರ ಮತ್ತು ಇತರ ಕಥೆಗಳು. ವಿಮರ್ಶಾ ಸಂಪುಟ-ಆಕಾಶದ ಹಕ್ಕು.
ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕಿರುತೆರೆ–ಚಲನಚಿತ್ರ: ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಚಲನಚಿತ್ರಗಳಿಗೆ ಗೀತಸಾಹಿತ್ಯ, ಕೆಲವಕ್ಕೆ ಸಂಭಾಷಣೆಗಳನ್ನು ಬರೆದಿದ್ದಾರೆ. ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ.‌‌ ರಂಗಭೂಮಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು.
ಪ್ರಶಸ್ತಿಗಳು: 5 ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿಗಳು ಸೇರಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಕವಿಯ ಭೌತಿಕ ಶರೀರಕ್ಕೆ ಮಾತ್ರ ಕೊನೆ ಯಶ: ಕಾಯಕ್ಕಲ್ಲ ಎನ್ನುವುದು ಸರ್ವವಿದಿತ . ಅಕ್ಷರಗಳ ಅಕ್ಷಯವಾದ ಅಪೂರ್ವ ನಿಧಿಯನ್ನು ನಮಗಾಗಿ ಬಿಟ್ಟು ಹೋದ ನೆಚ್ಚಿನ ಕವಿಗೆ ಅಶ್ರುಪೂರ್ಣ ಭಾವನಮನ.
“ ಮುಳುಗಿದರೆ ಮುಳುಗಬೇಕೀ ರೀತಿ
ಹತ್ತು ಜನ ನಿಂತು ನೋಡುವ ಹಾಗೆ..
ಗೌರವ ಬೆರೆತ ಬೆರಗಲ್ಲಿ.
ಸೂರ್ಯ ಮುಳುಗುವ ಮುನ್ನ,
ಓಡೋಡಿ ಬರುವ ಜನ ಕೈ ಮುಗಿವ ಹಾಗೆ
ಮುಳುಗಲ್ಲಿ ಮುಳುಗಿ”
( ಆಗುಂಬೆಯ ಸೂರ್ಯಾಸ್ತ ).
ಓಂ ಶಾಂತಿರಸ್ತು
~ ಗೌರಿಪ್ರಸನ್ನ

ಒಂದು ಬಸ್ಸಿನ ಕಥೆ

ನಮಸ್ಕಾರ  ಅನಿವಾಸಿ ಬಳಗಕ್ಕೆ. ಎಲ್ಲರಿಗೂ ಹೊಸ ಸಂವತ್ಸರದ , ಚೈತ್ರಮಾಸದ ಹಾರ್ದಿಕ ಶುಭಾಶಯಗಳು. 
“ ದಿನಾ ಸಮಯಕ್ಕೆ ಬರುವ ಬಸ್ಸು ಹತ್ತು ನಿಮಿಷ ತಡ ಮಾಡಿದರೆ ಅಲ್ಲೊಂದು ಕಥೆ ಹುಟ್ಟುತ್ತದೆ” ಎನ್ನುತ್ತಾರೆ ನಮ್ಮ ನೆಚ್ಚಿನ ಕಥೆಗಾರ ಕಾಯ್ಕಿಣಿಯವರು. ಹೌದಲ್ಲವೇ ಕಥೆಯೊಂದು ಹುಟ್ಟಲು ಅದೆಷ್ಟು ಕಾರಣಗಳು?! ಅಂತೆಯೇ ನೀವೆಲ್ಲೋ ನೋಡಿದ, ಒಡನಾಡಿದ ಜೀವಗಳೂ ಅಚಾನಕ್ ಆಗಿ ಪಾತ್ರಗಳಾಗಿ ನಿಮ್ಮ ಕಥೆಯಲ್ಲಿ ನುಸುಳಿ ಸೋಜಿಗವನ್ನುಂಟು ಮಾಡುತ್ತವೆ ಎನ್ನುತ್ತಾರವರು.
ಅಂಥದೇ ಒಂದು ಹಳೆಯ ಕಥೆ ನಿಮ್ಮ ಓದಿಗಾಗಿ. ಓದಿ..ಹೇಗನ್ನಿಸಿತು ಹೇಳಿ.

~ ಸಂಪಾದಕಿ.

ಹಿರೇಕೆರೂರ ಬಸ್ಸು

ನಕಾಶೆಯಲ್ಲಿ ಹಗಲು ಹೊತ್ತಿನಲ್ಲಿ ದೀಪ ಹಚ್ಚಿಕೊಂಡು ಹುಡುಕಿದರೂ ಸಿಗದ ಒಂದು ಪುಟ್ಟ ಗ್ರಾಮ ಬಲಕುಂದಿ. ನಕಾಶೆಯಲ್ಲಿ ಅದರ ಅಸ್ತಿತ್ವ ಇರದಿದ್ದರೇನಂತೆ? ನಾರಣಪ್ಪ, ಹನುಮಪ್ಪ , ಈರಭದ್ರ, ದ್ಯಾಮವ್ವ-ದುರ್ಗವ್ವ ಇತ್ಯಾದಿ ದೇವ -ದೇವತೆಗಳ ಸಮೇತ ಬ್ರಾಂಬರು , ಶೆಟ್ಟರು, ಗೌಡರು, ಅಗಸರು , ಬ್ಯಾಗಾರು, ಮ್ಯಾಲಿನ ಓಣಿ, ಕೆಳಗಿನ ಓಣಿ , ಸಿನೀರ ಭಾವಿ, ಸಾದಾ ಭಾವಿ ,ಹಳ್ಳ , ದನಕರು, ಕೋಳಿ-ನಾಯಿ, ಜಗಳ-ಬಡಿದಾಟ, ಪ್ರೀತಿ-ಪ್ರೇಮ, ಹಾದರ…ಮಾನವ ಲೋಕದ ಸಕಲ ಸಲ್ಲಕ್ಷಣಗಳಿಂದ ಜೀವಂತವಿದ್ದ ಹಳ್ಳಿಯದು. 

ಅವತ್ತೊಂದು ದಿನ ರವಿವಾರ. ಎಂದಿನಂತೆ ಬಸ್ ಸ್ಟ್ಯಾಂಡಿನ ತನ್ನ ಗೂಡಂಗಡಿಯ  ಬಾಗಿಲು ತೆರದು, ಈಚಲು ಬಾರಿಗೆ ತಗೊಂಡು ಅಂಗಡಿ ಮುಂದ ಪರ ಪರ ಕಸ ಬಳಿದು, ನಾಲಕ್ಕು ತಂಬಿಗೆ ನೀರು ಹೊಡೆದು ಅಂಗಡಿ ಮೂಲ್ಯಾಗಿನ ಗ್ವಾಡಿಗೆ ಅಂಟಿಸಿದ್ದ ಬುತ್ತಿ ಬಸಪ್ಪನ ಫೋಟೊಕ್ಕೊಂದಿಷ್ಟು ಈಬತ್ತಿ ಬಳದು ‘ಸಿವ ಸಿವ’ ಅಂತ ಗುಬ್ಬವ್ವ ಕೈ ಮುಗಿತಿದ್ದಾಗ “ಹಿರೇಕೆರೂರ ಬಸ್ ಹೋತೇನ ಬೇ ಯತ್ತಿ” ಅಂತ ದನಿ ಕೇಳಿ ಈ ಕಡೆ ಹೊಳ್ಳಿ ನೋಡಿದಳು. ಆ ಪ್ರಶ್ನೆಗೆಉತ್ತರ  ಕೊಡೂದು ತನ್ನ  ಕೆಲಸವೇ ಅಲ್ಲ  ಅನ್ನೂಹಂಗ ‘ಅಯ್ಯ ಮುತ್ತಪ್ಪಾ ನೀನಾ? ಇವತ್ತ್ಯಾಕಲೇ ಮುಂಜಮುಂಜಾನೆ ಬ್ಯಾಗ್ ಹಾಕ್ಕೊಂಡ ತಯಾರಾಗಿಬಂದಿ? ಆಯಿತವಾರ ಸಾಲಿ-ಕಾಲೇಜು ಸೂಟಿ ಅಂತ ಮರತ ಹೋದ್ಯಾ ಏನು?’  ಅಂತ  ಕೇಳಿದಳು.  ‘ಏಯ್ ಅದ್ಹೆಂಗ ಮರೀತೈತಿ ಬೇ ,  ನೀ ಒಂದ s  ಇವತ್ತ ಬ್ಯಾಂಕಿನ exam ಐತೆ. ಅದಕ್ಕs ಹೊಂಟೀನಿ. 10:30 ಗೆ ಚಾಲೂ ಆಕ್ಕೈತಿ’ ಅಂದ.  ‘ಹೀಂಗs, ಹಂಗಾರ ಆಫೀಸರ್ ಆಗಾವಾ ಬಿಡಪಾ. ಒಂದೀಟುನಮಗೂ ಏನರೇ ಕಡಿಮಿ ಬಡ್ಡಿಗೆ ಸಾಲಾ-ಗೀಲಾ ಕೊಡಸೋ ಯಪ್ಪಾ. ದರಾ ಮಳಿಗಾಲದಾಗ ಮನಿ ಸೋರಿ ಮನ್ಯಾಗ ಇಟ್ಟ ಮಾಲು, ಕಾಳು-ಕಡಿ ಹಾಳಆಗಾಕ್ಹತ್ತಾವ. ನೀ ಏನರೇ ಹಂಗ ಸಾಲಾ ಕೊಡಿಸಿದೆಂದ್ರ ಸಿಮಿಟ್ ಗಾರೀನೇ ಹಾಕಸತೀನೋ ಯಪ್ಪಾ ನಿನ್ನ ಹೆಸರಲೇ’…. ಬಸ್ಸು ಹೋತೋ ಇಲ್ಲೋಹೇಳೂದ ಬಿಟ್ಟು ತನ್ನದೇ ಸಮಸ್ಯೆಗಳ ಸಾಗರದಾಗ ಮುಳುಗಿ ಹೋಗಿದ್ಲು ಅಕಿ. ‘ಬಸ್ ಹೋಗಿದ್ರ ನಡಕೊಂಡ ಹೊಂಟ ಬಿಡತೀನೀ ಬೇ ..ಇಲ್ಲಕಂದ್ರಒಳಗ ಬಿಡಂಗಿಲ್ಲ ಪೇಪರ್ ಬರಿಯಾಕ’  ಅಂದ ಮುತ್ತಪ್ಪನ ಮಾತಿಗೆ ‘ಅಯ್ಯ ಸಿವನ, ಈ ಹಿರೇಕೆರೂರ ಬಸ್ಸು ಎಂದರs  ಟೈಂ ಗೆ ಬಂದೈತೇನೋ ಯಪ್ಪಾ? 8 ರ  ಬಸ್ಸು ಹೆಸರಿಗಷ್ಟೇ. ಹತ್ತು  ವರಸ ಆತು,  ನಿಮ್ಮಾಂವ ಹೋದಾಗಿನಿಂದ ಈ ಅಂಗಡ್ಯಾಗ ಕುಂಡ್ರಾಕಂತು ..ಒಂದಿನಾ ಅರೇ 9 ಕ್ಕಿಂತ ಮದಲಹೋಗಿಲ್ಲ ತಗಿ ತಮ್ಮಾ’ ಅಂದು ತನ್ನ ಅಂಗಡಿಯ ಗುಟ್ಕಾ ಪ್ಯಾಕೆಟ್ ಗಳ ಸರವನ್ನು ತೂಗು ಹಾಕೂದರಾಗ, ಪಚ್ಚ ಬಾಳೆಹಣ್ಣುಗಳನ್ನು ಜೋಡಿಸಿಡೂದರಾಗಮಗ್ನ ಆದ್ಲು. ಇರುವ ಎರಡು ಗೇಣಿನ ಅವಳ ಅಂಗಡ್ಯಾಗ ಏನೇನಿಲ್ಲ? ಸುಂಠಿ ಪೆಪ್ಪರ್ ಮಿಂಟು, ಲಿಂಬಿಹುಳಿ, ಅಲೇಪಾಕು, ಸಿಹಿ ಬಿಸ್ಕೀಟು, ಖಾರಾಬಿಸ್ಕೀಟು, ಸಣ್ಣಸಣ್ಣ  ಸಿಹಿ ಬಡೇಸೋಪಿನ ಪ್ಯಾಕೆಟ್ ಗಳು, ಚಕ್ಕಲಿ,ಪಾಪಡಿ, ನಿಂಬು ಸೋಡಾ, ವೀಳ್ಯದೆಲಿ, ಅಡಿಕಿ, ಸುಣ್ಣ ಅಂತ ಪಾನಪಟ್ಟಿಗೆ ಬೇಕಾಗೂಸಾಮಾನುಗಳು, ತಂಬಾಕು, ಗಣೇಶ ಬೀಡಿ, ವ್ಹಿಲ್ಸ್ ಫ್ಲೇಕ್ ನಂಥ ಸಿಗರೇಟ್ ಪ್ಯಾಕ್ ಗಳು, ಕಡ್ಡಿಪೆಟ್ಟಿಗೆಗಳು,  ಹಿಂದಿನ ದಿನದ ವರ್ತಮಾನ ಪತ್ರಿಕೆ, ಒಂದೆರಡು ಹಳೆಯ ರಾಗಸಂಗಮಗಳು,  ಒಂದ್ನಾಕು ಥರದ ಸೀಟಿ-ಪೀಪೀಯಂಥ ಮಕ್ಕಳ ಆಟಿಕೆಗಳು, ಊದುಬತ್ತಿ, ಕಲ್ಲುಸಕ್ಕರೆ,  ಟೆಂಗಿನಕಾಯಿಗಳು..

ಅಲ್ಲಿರುವ ಮಸೀದಿಗೆ, ಹೊಸೂರಿನ ಹಣಮಪ್ಪಗ ಗುರುವಾರ, ಶನಿವಾರ ಸುತ್ತಮುತ್ತಲ  ಊರುಗಳಿಂದ ಬರುವ ಜನಕ್ಕೆಲ್ಲ ಈಕಿನೇ ಊದುಬತ್ತಿ-ಸಕ್ಕರೆ-ಕಾಯಿ ಸರಬರಾಜು ಮಾಡಾಕಿ.ಮೋಟರ್ ಸೈಕಲ್ ಮೇಲೆ ಫುರ್ ಅಂತ ಓಡಾಡೋ ಪಡ್ಡೆ ಹುಡುಗರಿಗೆ, ಕಾರು-ಜೀಪಿನಾಗ ಓಡಾಡೂ ದೊಡ್ಡಸಾಹೇಬರುಗಳಿಗೆ ಇವಳಂಗಡಿಯ ಪಾನಪಟ್ಟಿ, ಬೀಡಿ  ಸಿಗರೇಟ್ ಗಾಗಿ ಒಂದು ಬ್ರೇಕ್ ತಗೋನೇಬೇಕು.

 ಬಸ್ ನ ದಾರಿ ಕಾಯಕೋತ ಕೈಯಾಗಿನ ಪುಸ್ತಕ ತಗದು ಮ್ಯಾಲ ಕೆಳಗ ಏನೋ ಲೆಕ್ಕಾ ಮಾಡಕೋತ ಅಲ್ಲೇ ಇದ್ದ ಕಲ್ಲಬಂಡಿಮ್ಯಾಲ ಕೂತ ಮುತ್ತಪ್ಪ. ಬಡಿಗ್ಯಾರ ಈರಪ್ಪನ ಮಗನಾದ ಈ ಮುತ್ತ ಸಣ್ಣತನದಿಂದಲೂ ಓದಿನಾಗ ಮುಂದು. ಮನ್ಯಾಗೂ ಅಷ್ಟೇ ..ಜೋಡ ಕೊಡ ಹೊತ್ತು ನೀರು ತರುವಅವ್ವನಿಗೂ, ಬಡಿಗತನದ ಕೆಲಸದಲ್ಲಿ ಅಪ್ಪನಿಗೂ ತನ್ನಿಂದಾದಷ್ಟು ಸಹಾಯ ಕೇಳದೇ ಮಾಡುವವ. ಫಸ್ಟ್ ಕ್ಲಾಸಿನಾಗ ಮ್ಯಾಟ್ರಿಕ್ ಪರೀಕ್ಷಾ ಪಾಸ್ ಆಗಿ ವಿಜಯ ಮಹಾಂತೇಶ ಕಾಲೇಜಿನಾಗ ಕಾಮರ್ಸ್ ಗೆ ಎಡ್ಮಿಶನ್ ಮಾಡಿಸಿದ್ದ. ಹುಡುಗನ ಚುರುಕುತನ ಕಂಡ ಹೈಸ್ಕೂಲಿನ ಹಾದಿಮನಿ ಮಾಸ್ತರು ಹೆಂಗಓದಬೇಕು, ಫ್ರೀಶಿಪ್, ಸ್ಕಾಲರ್ ಶಿಪ್ ಗಳಿಗೆಲ್ಲ ಅರ್ಜಿ ಹೆಂಗ ತುಂಬಬೇಕು, B.com ಮಾಡಕೋತನs ಬ್ಯಾಂಕಿನ ಪರೀಕ್ಷಾಕ್ಕ ಹೆಂಗ ತಯಾರಿಮಾಡಕೋಬೇಕು ಇತ್ಯಾದಿಯಾಗಿ ಎಲ್ಲ ಸೂಕ್ತ ಮಾರ್ಗದರ್ಶನ, ಆಗಾಗ ಒಂದಿಷ್ಟು ರೊಕ್ಕದ ಸಹಾಯ ಎಲ್ಲ ಮಾಡುತ್ತಿದ್ದರು. ‘ಗುಣಕ್ಕೆ ಮತ್ಸರವೇ?’ ಅನ್ನೂಹಂಗ ಯೋಗ್ಯತೆಯಿದ್ದ ಎಲ್ಲ ಮಕ್ಕಳ ಬಗ್ಗೆಯೂ ಅವರಿಗೆ ಅಷ್ಟೇ ಕಾಳಜಿ. ‘ಹಿಂದಿನ ದಿನವೇ ಬೇಕಾರ ಇಲ್ಲೇ  ಬಂದು ಮನ್ಯಾಗಿರು..ಅಲ್ಲೆ ಹಳ್ಳ್ಯಾಗಲೈಟೇ ಇರಂಗಿಲ್ಲ  ಓದಾಕ’ ಅಂತ ಇಲಕಲ್ಲಿನಲ್ಲಿರುವ ತಮ್ಮ ಮನೆಗೆ ಬಂದು ಇರುವಂತೆ ಮುತ್ತಪ್ಪನನ್ನು ಕರೆದಿದ್ದರೂ ಹಾಗೆಲ್ಲ ಹೋಗಿ ಅವರಿಗೆ, ಅವರಮನೆಯವರಿಗೆ ಒಜ್ಜೆ ಆಗಬಾರದು ಅನ್ನೋದು ಮುತ್ತನ ಸಭ್ಯತೆ.

‘ಒಂದೀಟು ಕೈ ಕೊಡ ಬೇ ಇಳಸಾಕ’  ವೀಳ್ಯದೆಲೆಯ ಬುಟ್ಟಿಯನ್ನು ಹೊರಲಾರದೇ ಹೊತಗೊಂಡು ಬಂದ ಪಾತಜ್ಜಿ ಗುಬ್ಬವ್ವನ್ನ ಕರದ್ಲು.’ಅಯ್ಯ, ಒಂದ್ನಾಕುಪಿಂಡಿ ಕಮ್ಮಿ ಹೊತಗೊಂಡ ಬರಬೇಕಿಲ್ಲs,  ಈ ವಯಸ್ಸನಾಗ ನಡ ಗಿಡ ಮುರದ್ರ ಯಾರ ದಿಕ್ಕ ಅದಾರ ನಿಂಗ? ಇದ್ದೊಬ್ಬ ಮಗಳನ್ನ ದೂರ ಕೊಟ್ಟ ಕುಂತಿ’ ಅಂತ ಬಯ್ಯಕೋತನ ಕಾಳಜಿ ತೋರಸಿ ಕೈ ಹಿಡದು ಬುಟ್ಟಿ ಇಳುಹಾಕ ನೆರವಾದ್ಲು. ‘ಅಂದ ಹಂಗ ಏಟರಾಗ ಗಿರಿಜಿಗೆ ಈಗ? ಆರಾಂ ಅದಾಳ ಅಕಿ? ಗಂಡ,ಅತ್ತಿ ಭೇಷ್ ನೋಡಕೋಂತಾರ?’ಎಂದು ಕೇಳಿ ‘ ಇಷ್ಟ ಯಾಕ  ಹೊತಗೊಂಡ ಹೊಂಟಿ? ಇವತ್ತೇನ ಸಂತಿನೂ ಇಲ್ಲ’  ಎಂದು ಕೇಳಿದಳು. ಜೋಶಿಗಲ್ಲಿ ಜಾಗೀರದಾರರ  ಮನ್ಯಾಗ ಲಗ್ನ ಐತಿ. ಅವರ ಎರಡೂ ಹೆಣ್ಣಮಕ್ಕಳದೂ ಒಮ್ಮೇ ಲಗ್ನ ಇಟಗೊಂಡಾರು. ಇವತ್ತ ದೇವರ ಕಾರ್ಯ ಐತಿ ಬೇ. ಎರಡ ಸಾವಿರ ಎಲಿ ಕೇಳ್ಯಾರು. ಅದಕ್ಕs  ಹೊಂಟೀನಿ. ಆ ಜಾಗೀರದಾರರು ದೊಡ್ಡ ಮನಷಾರು. ‘ತಾಜಾ ಹಸರ ಎಲಿ ತಂದುಕೊಡು. ಛಲೋ ಕಾರ್ಯ. ನಾ ಏನ ಚೌಕಾಸಿ ಮಾಡಂಗಿಲ್ಲ. ಹಂಗs ಬಳಿ ಇಟಗೊಂಡು, ಊಟಾ ಮಾಡಿ, ಸೀರಿ ಉಟಗೊಂಡು ಹೋಗು’ ಅಂದಾಳ ಯವ್ವಾ ಆ ಪುಸ್ಪಕ್ಕ. ‘ಆತಯವ್ವಾ ತರತೀನಿ.ಒಂದು ಮಾತು ಸೀರಿ ಜರದ ಅಂಚಿಂದು, ಹಸರದು ಕೊಟ್ರ..ನನ್ನ ಮಗಳು ಇನ್ನೊಂದು ತಿಂಗಳದಾಗ ಹಡ್ಯಾಕ ಬರಾಕ್ಹತ್ತಾಳು. ಅಕಿಗೆಅದನ್ನೇ ಉಡಿಅಕ್ಕಿ ಹಾಕತೀನಿ’ ಅಂದಿದ್ದಕ್ಕ , ನಕ್ಕೋತ ‘ಆಗಲೇಳು, ಛಲೋ ಸೀರಿನೇ ಕೊಡತೀನಿ ನಿನ್ನ ಮಗಳು ಉಡೋ ಅಂಥಾದ್ದು’ ಅಂದಾಳವ್ವ. ಅಕಿನ್ನ ಹೊಟ್ಟಿ ತಣ್ಣಗಿರಲಿ. ಬಸ್ಸೇನೂ ಹೋಗಿಲ್ಲ ಹೌದಿಲ್ಲ ಬೇ..’ ಅಂತ ಕೇಳಿದ್ಲು. ‘ ನಾ ಅಂಗಡಿ ಕದಾ ತಗದು ತಾಸೊಪ್ಪತ್ತು ಆದಮ್ಯಾಗs ಬರತೈತಿಅದು.ಆ ಮುತ್ತಪ್ಪನೂ ಇಲ್ಲೇ ಅಡ್ಡಾಡಕ್ಹತ್ತಾನು..ನೋಡಲ್ಲೆ.’ ಅಂದು ಎಲೆಗಳ ತುದಿ ಕತ್ತರಿಸಿ ನೀರು ತುಂಬಿದ ಪ್ಲಾಸ್ಟಿಕ್ ಬುಟ್ಟಿಯೊಳಗ ಇಟ್ಟು , ಅಡಕೊತ್ತಿನಿಂದ ಅಡಿಕೆ ಕತ್ತರಿಸತೊಡಗಿದಳು.

 ಮದುವೆಯಾಗಿ ಹದಿನೈದು ವರುಷವಾದರೂ ಮಕ್ಕಳಾಗದ ಪಾರೋತವ್ವ, ಪಾತಜ್ಜಿ  ಸಂತಾನಕ್ಕಾಗಿ ಹರಸಿಕೊಳ್ಳದ ದೈವಗಳಿರಲಿಲ್ಲ; ಮಾಡಲಾಗದನಾಟಿವೈದ್ಯವಿರಲಿಲ್ಲ. ಅಂತೂ ದೈವ ಕಣ್ತೆರೆದು ಅಕಿ ಬಸುರಿ ಅಂತ ತಿಳಿಯೂದರಾಗ ನಾಟಕದ ಖಯಾಲಿಯಿಂದ ಪಾತ್ರಕ್ಕಂತ ಊರೂರು ಅಲೆಯುತ್ತಿದ್ದಅವಳ ಗಂಡ ನಿಂಗಪ್ಪ ಏನಾಯ್ತೋ ಗೊತ್ತಿಲ್ಲ  ಊರಿಗೆ ಮರಳಲೇ ಇಲ್ಲ.  ಯಾರೋ ಪಾತರದವಳ ಬೆನ್ನು ಹತ್ತಿ ಹಾಳಾದ ಅಂತಲೂ, ಏನೋ ಬರಬಾರದರೋಗ ಬಂದು ಸತ್ತ ಅಂತಲೂ, ಮಕ್ಕಳಿಲ್ಲದ ಗೊಡ್ಡಿ ಅಂತ ಇಕಿನ್ನ ಬಿಟ್ಟು ಬೇರೊಂದು ಸಂಸಾರ ಕಟಗೊಂಡು ದೂರದೂರಿನಾಗ ಇದ್ದಾನೆಂತಲೂ.. ಜನತಲೆಗೊಂದರಂತೆ ಆಡಿ ಅಂತೂ ಕೊನೆಗೆ ಮೌನವಾದರು. ಹೀಗಾಗಿ ಪಾರೋತಿಗೆ ಮಗಳು ಗಿರಿಜೆಯೇ ಸರ್ವಸ್ವ. ಗುಣ, ರೂಪದಲ್ಲಿ ಅಪ್ಪಟಬಂಗಾರದಂತಿರುವ ಅಕಿಯನ್ನು ಮಹಾಂತೇಶ ತಾನಾಗಿಯೇ ಕೇಳಿಕೊಂಡು ಬಂದು ಮದುವೆಯಾದ. ದೂರದ ಗೋಕಾಕ್ ನ ಸಕ್ಕರೆ ಫ್ಯಾಕ್ಟರಿಯಲ್ಲಿ ಅವನಕೆಲಸ. ತನ್ನ ಮನೆಯ ಹಿತ್ತಲು, ಅಂಗಳದಲ್ಲೇ ವೀಳ್ಯದೆಲೆಯ ಬಳ್ಳಿಗಳನ್ನು ಹಬ್ಬಿಸಿರುವ ಪಾರೋತೆವ್ವ ಹಳ್ಳಿಯ ಯಾರ ಮನೆಯಲ್ಲೇಮಂಗಳಕಾರ್ಯಗಳಾಗಲಿ, ಬಾಣಂತನವಾಗಲಿ ಹೋಗಿ ಹಸಿರಾದ ನಳನಳಿಸೋ ವೀಳ್ಯದೆಲೆಗಳನ್ನು ಒಂದು ತುಂಡು ಅಡಿಕೆಯಿಟ್ಟು ಬಾಯಿ ತುಂಬ ಹರಸಿಕೊಟ್ಟು ಬರುತ್ತಾಳೆ. ಉಳಿದಂತೆ ಗುಬ್ಬವ್ವನಂಥಾ ಸಣ್ಣ ಗೂಡಂಗಡಿಗಳಿಗೆ, ಇಲಕಲ್, ಹನುಮಸಾಗರದ ಸಂತೆಗಳಿಗೆ ಹೋಗಿ ಮಾರಾಟ ಮಾಡಿ ಬರುತ್ತಾಳೆ. ಈಗ ಮಗಳ ಚೊಚ್ಚಲ ಬಾಣಂತನದ ಸಂಭ್ರಮದಲ್ಲಿದ್ದಾಳೆ.

‘ ಯಕ್ಕಾ, ಈ ಸೂಟಕೇಸ್ ನೋಡತಿರಬೇ..ಇನ್ನೂ ಎರಡು ಬ್ಯಾಗ್ ಅದಾವು ಗೌರಕ್ಕಂದು. ತಗೊಂಡ ಬರತೀನಿ’ ಅಂತ ಹೇಳಿದ ಮಾದಪ್ಪನ ಕಡೆ ನೋಡಿದಗುಬ್ಬವ್ವ ‘ಹೌದಾ? ಊರಿಗೆ ಹೊಂಟಾಳೇನ ಇವತ್ತ? ಭಾಳ ಸಾಮಾನು ಮಾಡಕೊಂಡಾಳಲ್ಲಾ? ಕೂಸಿನ ಕಟಗೊಂಡು ಹೆಂಗ ಒಯ್ತಾಳೋ?’ ಅಂತಸ್ವಗತದಲ್ಲೇ ಗೊಣಗುತ್ತ ಕಾಲಾಗಿನ ಸೂಟಕೇಸ್ ಸರಿಸಿ ಬಾಜೂಕಿಡೂದರಾಗ ಒಂದೂವರೆ ವರುಷದ ಮಗನ ಜೋಡಿ ಗೋಣಿಚೀಲದಂಥ ವ್ಯಾನಿಟಿಬ್ಯಾಗ್ ಹೊತಗೊಂಡು ಗೌರಿ ಅಲ್ಲಿಗೆ ಬಂದ್ಲು. ಜೋಡಿಗೆ ತಂಗ್ಯಂದ್ರು, ಅವ್ವ-ಅಪ್ಪನೂ ಇದ್ರು.  ‘ಅಯ್ಯ, ಇಷ್ಟ ಜಲ್ದಿ ಹೊಂಟ್ಯಾ? ಇನ್ನೊಂದ ನಾಕದಿನಾಇರಬೇಕ ಬ್ಯಾಡ’ ಅಂದ ಗುಬ್ಬವ್ವನಿಗೆ – ‘ಅಯ್ಯ, ಅಕಿನ್ನ ಗಂಡ ಇಷ್ಟ ದಿನಾ ಬಿಟ್ಟದ್ದs ಹೆಚ್ಚು. ದಿನಾ ಬೆಳಗಾದ್ರ ಫೋನ್ ಬರೂದು ಗೌಡ್ರ ಮನೀಗೆ’  ಉತ್ತರ ಕೊಟ್ಟ ದೇವಕ್ಕನ ದನಿಯಲ್ಲಿ ಮಗಳನ್ನು ಪ್ರೀತಿಸುವ ಅಳಿಯನ ಬಗ್ಗೆ ಅಭಿಮಾನ ಎದ್ದು ಕಾಣುತ್ತಿತ್ತು. ‘ಅಲ್ಲ ಯವ್ವಾ, ಇವತ್ತ ಆಯಿತವಾರ. ಇವತ್ತ್ಯಾಕ ಕಳಸಾಕತ್ತೀ ಗೌರಕ್ಕನ್ನ? ಆಯಿತವಾರ ತಾಯಿ-ಮಗಳು ಅಗಲಬಾರದು’ ಅಂದ್ಲು ಗುಬ್ಬವ್ವ.  ‘ಹೌದವಾ, ಆದ್ರ ಈಗಿನ ಕಾಲದ ಹುಡುಗೂರುಅದನ್ನೆಲ್ಲ ಎಲ್ಲಿ ನಂಬತಾರ? ಅಲ್ಲದ s   ನೌಕರದಾರ ಮಂದಿ ನೋಡು. ನಾಳೆ ಸ್ವಾಮವಾರದಿಂದ ಈಕಿನೂ ಕಾಲೇಜಿಗೆ ಹೋಗಬೇಕು ಕೆಲಸಕ್ಕ. ಇನ್ನಅಕಿನ್ನ ಗಂಡಗೂ ಆಯಿತವಾರ ಅಂದ್ರ ಆಫೀಸ್ ಇರಂಗಿಲ್ಲ. ಬಸ್ ಸ್ಟ್ಯಾಂಡಿಗೆ ಬಂದು ಕರಕೊಂಡು ಹೋಗಲಿಕ್ಕೆ ಅನುಕೂಲ ಆಗತದ ನೋಡು. ಅದಕ್ಕs  ಮೊನ್ನೆನೇ ಪ್ರಯಾಣಕ್ಕ ಛಲೋ ದಿವಸ ಅಂತ ಪ್ರಸ್ಥಾನಗಂಟು ತಗದು ತುಳಸಿಕಟ್ಟ್ಯಾಗ ಇಟ್ಟಿದ್ದೆ ನೋಡು.’ ಅಂದ ದೇವಕ್ಕ ಮಗಳೆಡೆ ತಿರುಗಿ, ಅಂದಹಂಗಆ ಪ್ರಸ್ಥಾನಗಂಟು ಇಟಗೊಂಡಿ ಇಲ್ಲೊ?  ಆ ಕೂಸಿನ half-sweater ಅಲ್ಲೇ ಶೇಂಗಾ ಚೀಲದ ಮ್ಯಾಲಿತ್ತು.ತಗೊಂಡ್ಯೋ ಇಲ್ಲೋ’ ಅಂತ ಕಾಳಜಿ ಶುರುಮಾಡಿದ್ಲು. ‘ ಸಣ್ಣ ಡಬ್ಬ್ಯಾಗ ಇಡ್ಲಿಗೆ ತುಪ್ಪ ಹಚ್ಚಿಟ್ಟೀನಿ ಆ ಕೂಸಿನ ಸಲುವಾಗಿ. ಪಾರ್ಲೆ ಜಿ ಬಿಸ್ಕೀಟೂ ಅವ. ನಿಂಗ ಅವಲಕ್ಕಿ, ಖೊಬ್ರಿವಡಿ ಹಾಕೀನಿ.ಬಸ್ನಾಗ ಮಂದಿ ಇರತಾರ ಹೆಂಗ ತಿನ್ನೂದಂತ  ಉಪವಾಸ ಕೂಡಬ್ಯಾಡ. ಹಸಿವಾದ್ರ ತಿನ್ನು..ಅದಕ್ಕೂ ತಿನಸು. ಅಮ್ಮ-ಅಪ್ಪ-ತಂಗ್ಯಂದಿರ ಅಂತ:ಕರಣಕ್ಕೆಮೂಕವಾಗಿದ್ದ ಗೌರಿಗೆ ತೌರ ಬಿಟ್ಟು ಹೊರಡುವ ದು:ಖ. ಕಣ್ಣಂಚಲ್ಲಿ ಇಳಿಯಲು ತಯಾರಾಗಿ ನಿಂತಿದ್ದ ಗಂಗಾ-ಭಾಗೀರಥಿ. “ಯವ್ವಾ ದೇವಕ್ಕಾ,  ಏಟಇದ್ರೂ ಹೆಣಮಕ್ಕಳು ಬ್ಯಾರೆಯವರ ಸ್ವತ್ತs  ನೋಡು. ಆ ಸಿವಾ ಒಂದು ಗಣಮಗಾ ಕೊಡಲಿಲ್ಲ ನೋಡು ನಿನಗ’ ಅಂದ ಗುಬ್ಬವ್ವ ಮತ್ತೆ ತನಗೆ ತಾನೇ ‘ ಇರಲಿ ತಗಿ, ಎದಿ ಸೀಳಿದ್ರ ಎರಡಕ್ಷರ ಇರಲಾರದ ಅಡ್ನಾಡಿ ಗಂಡಮಕ್ಕಳಿಗಿಂತ ಇದ್ಯಾ,ಬುದ್ಧಿ, ನಯಾ-ನಾಜೂಕು ಎಲ್ಲಾ ಇದ್ದ ಇಂಥಾ ಹೆಣಮಕ್ಕಳ ಎಷ್ಷೋಬೇಸಿ ಬೇ ಯವ್ವಾ’ ಅಂದು ‘ಅಂದ್ಹಂಗ ಈಕಿ ಸಾಲಿ ಕಲಸಾಕ ಹೋದ್ರ ಕೂಸಿನ್ನ ಯಾರು ನೋಡಕೊಂತಾರು?’ ಅಂತ ತೆಹಕೀಕಾತ್ ಶುರು ಮಾಡಿದ್ಲು. ‘ಅಕಿನ ಅತ್ತಿ ಅದಾರವ್ವಾ. ಮೊಮ್ಮಗ ಅಂದ್ರ ಜೀವಾ. ಅವರ ಮನ್ಯಾಗೂ ಮದಲನೇ ಕೂಸು ನೋಡು. ಅಂಗೈಯಾಗ ಇಟಗೊಂಡಾರ. ಈಕಿ ಸಾಲಿಗೆಹೋಗಿ ಬರೂತನಾ ಏನು ಬಂದ ಮ್ಯಾಲೂ ಅದರ ದೇಖರೇಕಿ ಎಲ್ಲಾ ಅವರ ಅಜ್ಜೀದೇ..’ಮಗಳು ಒಳ್ಳೆಯ ಮನೆಗೆ ಸೇರಿ ಒಳ್ಳೆಯ ಜನರ ನಡುವೆ ಇರುವಸಮಾಧಾನ ಆ ತಾಯಿಗೆ. 

ಅಷ್ಟರಲ್ಲೇ ಎದುರಿಗಿನ ‘ ಸಂಗಮೇಶ್ವರ ಟೀ ಕ್ಲಬ್’ ನಿಂದ ಹೊರಬಂದ ನಾಲ್ಕು ಜನರ ಗುಂಪು ಕಂಡು ‘ ನೀವೆಲ್ಲ ಅತ್ತಾಗ ಸರೀರಿ ಬೇ. ಗೌರಕ್ಕ ಬೇಕಾರಕುಂದರಲಿ ಕೂಸಿನ್ನ ತಗೊಂಡು. ಗಿರಾಕಿ ಬರತಾವು’ ಅಂತ ಅಷ್ಟೊತ್ತು ಆಪ್ತವಾಗಿ ಮಾತಾಡುತ್ತಿದ್ದವಳು ಈಗ ಯಾವ ಮುಲಾಜಿಲ್ಲದೆಯೂ ಎಲ್ಲರನ್ನೂತನ್ನಂಗಡಿಯ ಕಟ್ಟೆಯ ಮೇಲಿಂದ ಎಬ್ಬಿಸಿದಳು.

ಹಂಗ ನೋಡಿದ್ರ ಬಸ್ಸು ನಿಲ್ಲತಾವು ಅಂತ ಬಸ್ ಸ್ಟ್ಯಾಂಡ್ ಅನ್ನಬೇಕೇ ಹೊರತು ಅಲ್ಲಿ ಮಾಮೂಲು ಬಸ್ ಸ್ಟ್ಯಾಂಡಿನ ಯಾವ ಕುರುಹುಗಳೂ ಇರಲಿಲ್ಲ. ಊದ್ದಕ್ಕೂ ಹಾಸಿದ ಡಾಂಬರ್ ರಸ್ತೆ, ರಸ್ತೆ ಆಚೆ ಬದಿ ‘ ಸಂಗಮೇಶ್ವರ ಟೀ ಕ್ಲಬ್ಬು’.. ‘ಏರಿ ಮೇಲೆ ಏರಿ ಮೇಲೆಕೆಳಗೆ ಹಾರಿ ಹಕ್ಕಿ ಬಂದು ಕುಂತೈತಲ್ಲೋ ಓಮಾವಾ’ ಅಂತ ಯಾವಾಗಲೂ ನಡೆಯುತ್ತಿದ್ದ ಜೋರಾದ  ಹಾಡಿನ ರೆಕಾರ್ಡು. ಅನತಿ ದೂರದಲ್ಲೇ ಸದಾ ನೆರಳು ಕೊಡುವ ಒಂದು ದೊಡ್ಡಅರಳೀಮರ.ಅದರ ಕೆಳಗಿನ ಕಟ್ಟೆಯಲ್ಲಿ ಹೆಗಲ ಮೇಲೆ  ಟವೆಲ್ಲು ಹಾಕಿಕೊಂಡು ಪ್ಯಾಟಿ ಧಾರಣಿ ಮಾತಾಡುತ್ತಲೋ, ಇಸ್ಪೀಟು ಆಡುತ್ತಲೋ ಕುಳಿತ,ಹಲಕೆಲವು ಜನರು..ರಸ್ತೆಯ,ಈ ಕಡೆ ಗುಬ್ಬವ್ವನ ಅಂಗಡಿ. ರಾಷ್ಟ್ರೀಯ ಹೆದ್ದಾರಿ ಆದ್ದರಿಂದ ಓಡಾಡೋ ಬಸ್ಸುಗಳಿಗೆ ಬರವೇನಿರಲಿಲ್ಲ. ಆದರೆ ಎಲ್ಲಾ nonstop express ಬಸ್ಸುಗಳೇ. ಇಲ್ಲಿ, ಈ ಹಳ್ಳಿಯಲ್ಲಿ ನಿಲ್ಲಬೇಕಾದ ಕಿಂಚಿತ್ ಪ್ರಮೇಯವೂ ಅವುಗಳಿಗಿರಲಿಲ್ಲ. ಎಲ್ಲೋ ಹಿರೇಕೆರೂರು, ಅಕ್ಕಿಆಲೂರನಂಥಒಂದೆರಡು ಬಸ್ಸುಗಳು ಮಾತ್ರ ನಿಲ್ಲುತ್ತಿದ್ದವು. ಇಷ್ಟಕ್ಕೂ ಅವೂ ಕೂಡ ಬಸ್ಸಿನೊಳಗೆ ಜಾಗ ಇದ್ರ, ಕಂಡಕ್ಟರ್ ಗ ಸೀಟಿ ಊದಿ ಬಸ್ಸು ನಿಲ್ಲಿಸೋ ಮೂಡ್ಇದ್ರ, ಕೈ ಮಾಡುತ್ತಿದ್ದ ಯಾವುದೋ ಪ್ರಯಾಣಿಕರ ಆಸೆಕಂಗಳು ಡ್ರೈವರ್ ನಿಗೆ ಕರುಣೆ ಉಕ್ಕಿಸಿದ್ರ ನಿಲ್ಲತಿದ್ವು ಅನ್ನಿ. ಇಳಿವ ಒಬ್ಬಿಬ್ರು ಪ್ಯಾಸೆಂಜರಗಳನ್ನುಅರ್ಧ ಕಿಲೋ ಮೀಟರ್ ಹಿಂದೆ ಅಥವಾ ಮುಂದೆ ಇಳಿಸಿ ಪಿ.ಟಿ. ಉಷಾನಗತೆ ಓಡಿಹೋದ ಒಬ್ಬಿಬ್ಬರನ್ನು ಮಾತ್ರ ಹತ್ತಿಸಿಕೊಂಡು ಬುರ್ ಅಂತಧೂಳೆಬ್ಬಿಸಿಕೊಂಡು ಹೋಗಿಬಿಡೂದು ಅಂದ್ರ ಆ KSRTC ಬಸ್ ಗಳಿಗೆ ಆಟವಾಗಿತ್ತೇನೋ?! ಆದ್ರೂ ಕೆಲವು ಮಂದಿಗೆ ಅವುಗಳನ್ನು ನೆಚ್ಚದೇ ಬ್ಯಾರೆಹಾದಿಯಿದ್ದಿಲ್ಲ. ಹಂಗಂತ ಯಾರೂ ಅವುಗಳ ಬಗ್ಗೆ ಕಂಟ್ರೋಲರ್ ಮುಂದಾಗಲೀ, KSRTC ಗಾಗಲೀ ಕಂಪ್ಲೇಂಟ್ ಕೊಡಲೂಹೋಗುತ್ತಿರಲಿಲ್ಲ.ಯಾಕಂದ್ರ ಭಾಳಷ್ಟು ಊರಾಗಿನ ಮಂದಿಗೆ ಬಸ್ಸಿನ ದರಕಾರನೇ ಇದ್ದಿಲ್ಲ  ಗೌಡ್ರು, ಶೆಟ್ಟರಂಥ ದೊಡ್ಡ ಕುಳಗಳು ಹೊಂಡಾ, ರಾಜದೂತ್ನಂಥ ಮೋಟಾರುಬೈಕ್ ಗಳನ್ನೋ, ಒಂದಿಬ್ಬರು ಮಾರುತಿ 800 ನ್ನೋ ಇಟ್ಟುಕೊಂಡಿದ್ದರು. ಗ್ರೈನೆಟ್ ವ್ಯವಹಾರದ Gem ಕಂಪನಿ ಲಾರಿಗಳಂತೂತಾಸಿಗೊಮ್ಮೆ ಓಡಾಡೂವು. ಎಷ್ಟೋ ಜನ ಅವುಗಳನ್ನೇರಿ ಹೊರಟುಬಿಡುವರು. ಕೆಲವು ಶ್ರಮಜೀವಿಗಳು, ಬಿಸಿರಕ್ತದ ಉತ್ಸಾಹಿಗಳು ‘ಈ ಬಸ್ಸಿನ ಹೆಣಾಯಾರು ಕಾಯತಾರು? ದೊಡ್ಡದೊಡ್ಡ ಹೆಜ್ಜಿ ಇಟ್ರ ಬಾಯಾಗಿನ ಅಡಿಕಿ ಮುಗಿಯೂದ್ರಾಗ ಇಲಕಲ್ ಮುಟ್ಟತೀವಿ’ ಅಂತ ಒಳಹಾದಿ ಹಿಡಿದುನಡೆದುಬಿಡುವವರು.ಇನ್ನು ಟೆಂಪೊಗಳಂತೂ ಗಜೇಂದ್ರಗಡ, ಹನುಮಸಾಗರದಿಂದ ಇಲಕಲ್ ಗೆ ಸಾಕಷ್ಟು ಓಡಾಡತಿದ್ವು. ಆದ್ರ 15 ಸೀಟಿನ ಅದರೊಳಗಕ್ಲೀನರ್ರು ಕನಿಷ್ಠ 35 ಮಂದಿಯನ್ನಾದರೂ ತುರುಕುತ್ತಿದ್ದ. ಒಮ್ಮೊಮ್ಮೆ ಕೋಳಿ, ಕುರಿಗಳೂ ಇರತಿದ್ವು.

  ಹೊತ್ತು ಸರಿಯುತ್ತಿದ್ದಂತೆ ತಮ್ಮ ತಮ್ಮ ಗಮ್ಯಗಳತ್ತ ಹೊರಡಲು ತಯಾರಾಗಿ ನಿಂತಿದ್ದ ಮೂರೂ ಜನ ಪ್ರಯಾಣಿಕರಿಗೂ ಸ್ವಲ್ಪ ಸ್ವಲ್ಪವೇ ಆತಂಕ. ಮುತ್ತಪ್ಪನಿಗೆ ಪರೀಕ್ಷೆಯ ಸಮಯ ಮೀರಿದರೆ ಅಂತ ಚಡಪಡಿಕೆಯಾದರೆ, ‘ 10 ಗಂಟೆ ಒಳಗೆ ಎಲಿ ತಂದುಬಿಡು. ಬಳೆಗಾರ ಸಾಬನೂ ಅಪ್ಟೊತ್ತಿಗೆಬರತಾನು.ಹಂದರ ಪೂಜಾ,ಗಣಪತಿ ಪೂಜಾ, ಮುತ್ತೈದೆಯರಿಗೆ ಅರಿಶಿನ-ಕುಂಕುಮ ಕೊಡಲಿಕ್ಕೆ ..ಎಲ್ಲಾಕ್ಕೂ ಎಲಿ ಬೇಕಾಗತಾವ – ಅಂತ ಜಾಗೀರದಾರಅವ್ವ ಮದಲೇ ಹೇಳ್ಯಾಳು..ಹೊತ್ತಿಗೆ ಹೋಗದಿದ್ರ ಅವರೇನು ರೊಕ್ಕಸ್ತರು..ಒಂದಕ್ಕ ಎರಡು ಕೊಟ್ಟ ಯಾಕಾಗವಲ್ತು ಬ್ಯಾರೆ ಎಲ್ಲಿಂದರ ಪ್ಯಾಟಾಗಿಂದ ಎಲಿತರಸಗೊಂಡು ನಂಗ ‘ಬ್ಯಾಡ  ಯವ್ವಾ, ನೀ ಭಾಳ ತಡಮಾಡಿದಿ’ ಅಂತ ವಾಪಸ್ ಕಳಿಸಿಬಿಟ್ರ ಅನ್ನೂ ಆತಂಕ ಪಾತಜ್ಜಿಗೆ. ಹತ್ತು ಸಲ ಎದ್ದು ನಿಂತು ಕಣ್ಣಿಗೆಕೈ ಅಡ್ಡ ಹಿಡಿದು ದೂರದತನಕಾ ದಿಟ್ಟಿಸಿದರೂ ಬಸ್ಸಿನ ಸುಳಿವೇ ಇಲ್ಲ. ‘ತಡ ಆದಷ್ಟು ಬಸ್ಸು ಭಾಳ ರಶ್ ಆಗಿಬಿಡತದ ಸುಡ್ಲಿ. ನೀವು ಡೈರೆಕ್ಟ್ ಬಿಜಾಪೂರಸೀಟ್ ಅದ ಅಂತ ಆ ಕಂಡಕ್ಟರ್ ಗ ಹೇಳ್ರಿ’ ಅಂತ ತನ್ನ ಪತಿಯತ್ತ ಹೊರಳಿ ನಿರ್ದೇಶನ ಕೊಡಲಿಕ್ಹತ್ತಿದ್ಲು ದೇವಕ್ಕ. 

8:30 ಹೋಗಿ 9 ಆಗಿ 9:30 ಹೊಡಿಲಿಕ್ಕೆ ಬಂದ್ರೂ ಬಸ್ ಬರಲಿಲ್ಲ. ಆದ್ರ ಬಸ್ ಸ್ಟ್ಯಾಂಡ್ ಮಾತ್ರ ಗಿಜಿಗಿಜಿ ಅನತಿತ್ತು. ಹಂಗಂತ ಬಸ್ಸ್ಟ್ಯಾಂಡಿನಲ್ಲಿದ್ದವರೆಲ್ಲ ಬಸ್ ಹತ್ತಲಿಕ್ಕೇನೂ ಬಂದಿರಲಿಲ್ಲ. ಸಂಗಮೇಶ್ವರ ಟೀ ಕ್ಲ ಬ್ಬಿನ ಚಾ-ಮಿರ್ಚಿ, ಖಾರಾ-ಚುನಮುರಿಗಳ ಸಲುವಾಗಿ ಬಂದವರೆಷ್ಟೋ? ಗುಬ್ಬವ್ವ ನಂಗಡಿ ಗುಟಕಾದ ಸಲುವಾಗಿ ಬಂದವರೆಷ್ಟೋ? ಹಂಗs ಮುಂಜಾನೆದ್ದು ಒಂಚೂರು ಗಾಳಿ ಕುಡದು ಗಾಸಿಪ್ ಮಾಡಿ ತಾಜಾ ಆಗಲುಬಂದವರೆಷ್ಟೋ? ಬಯಲುಕಡೆ ಹೋಗಿ ಹಂಗs ಒಂದಿಷ್ಟು ಪಟ್ಟಾಂಗ ಹೊಡೀತಾ ನಿಂತವರೆಷ್ಟೋ? ಹೊತ್ತಾರೆ ಎದ್ದು ಬಿಸಿಲು ಮ್ಯಾಲೆ ಬರೂದರಾಗಕಟ್ಟಿಗೆ ಮಾಡಿಕೊಂಡು ದೊಡ್ಡ ಹೊರೆ ತಲೆಯಮೇಲಿಟ್ಟುಕೊಂಡು , ಸುಂದರ,  ಕಸೂತಿ-ಕನ್ನಡಿಗಳ ಬಣ್ಣ ಬಣ್ಣದ ಲಂಗಗಳನ್ನು ಧರಿಸಿ, ಸೊಗಸಾದಲಂಬಾಣಿ ಭಾಷೆಯಲ್ಲಿ ಹಾಡುತ್ತ ಕ್ಯಾಟ್ ವಾಕ್ ಮಾಠುತ್ತ ನಡೆವ  ಲಂಬಾಣಿ ಯುವತಿಯರನ್ನು ನೋಡಲೆಂದೇ ಬರುವರೆಷ್ಟು ಮಂದಿನೋ? ಅಂತೂಬಸ್ ಸ್ಟ್ಯಾಂಡ್ ಅಂತೂ ಗಿಜಿಗುಡುತ್ತಿತ್ತು.ಇನ್ನು ಇಷ್ಟು ಜನರನ್ನು ನೋಡಿ ಡ್ರೈವರ್ ಬಸ್ ನಿಲ್ಲಿಸಿಯಾನೇ ಎಂಬ ಚಿಂತೆ ಮೂವರನ್ನೂ ಕಾಡುತ್ತಿತ್ತು.

  ‘ಫಟ್ ಫಟ್ ಫಟ್’ ಸಪ್ಪಳ ಮಾಡುತ್ತ ತನ್ನ ಫಟಫಟಿಯನ್ನು ಒಂಟಿಗಾಲಿಯ ಮೇಲೆ ತಂದು ಸೀದಾ ಗೂಡಂಗಡಿಯ ಬಾಗಿಲಿಗೇ ಹಚ್ಚಿ ‘ಹೆಂಗದಿ ಬೇಯತ್ತಿ’ ಅಂದ ಲಮಾಣ್ಯಾರ ಪರಶ್ಯಾಗೆ ‘ಲೇ ಕುರಸ್ಯಾಲಾ, ಮೈಮ್ಯಾಗ ಖಬರ್ ಐತೆ ಇಲ್ಲೋ? ಹೀಂಗಾ ಗಾಡಿ ಹೊಡ್ಯೂದು..ಅದರ ಸಂಗಾಟs ನೀನೂಕುಣ್ಯಾಗ ಹೋಕ್ಕಿಯಲೇ ಒಂದಿನಾ’ ಎಂದು ಬಯ್ದಳು. ‘ಸಿನೆಮಾದಾಗ ಹೀಂಗs ಹೊಡಿತಾರಬೇ ಹಿರೋಗಳು..’  ಅಂದ ಅವನಿಗೆ, ‘ಅವರಿಗೇನಲೇಆಸ್ತಿ,ರೊಕ್ಕ ಅಳತಿರತೈತಿ ಹಿಂದ..ಆ ಯಮಧರ್ಮಗೂ ತಿನಿಸಿ ಬಚಾವ್ ಆಕ್ಕಾರು. ನಿಂದs ನೋಡಕೋಲೆ’  ಅಂದ ಅವಳ ಮಾತಲ್ಲಿ ಕಟುಸತ್ಯ ಅಡಗಿತ್ತು. ‘ಎನಗಿಂತ ಮಿಗಿಲಾದ ಯಮಧರ್ಮನವನಾರಿಹನು? ಹೇಳೈಎಲೆ ಬಾಲೆ’ ಎಂದು ಬಯಲಾಟದ ದಾಟಿಯಲ್ಲಿ ಹಾಡಿದ ಪರಶ್ಯಾಗೆ ‘ದೀಡ್ ಶ್ಯಾಣ್ಯಾ ಅದಿಬಿಡು. ರ ಅಂದ್ರ ಠ ಅನ್ನಾಕ ಬರದಿದ್ರೂ ಇಂಥದ್ದಕ್ಕೇನೂ  ಕಮ್ಮಿ ಇಲ್ಲ. ತಗೋ..ನಡಿ ಅತ್ತಾಗ..ಗಿರಾಕಿಗೆ ಜಾಗಾ ಬಿಡು.’ ಅಂತ ಹುಸಿಮುನಿಸಿನಿಂದಬಯ್ಯುತ್ತ ಗುಟಕಾ ಪ್ಯಾಕೆಟ್ ಗಳನ್ನು ಕೊಟ್ಟಳು. ಊರಿನ ಪಡ್ಡೆ ಹುಡುಗರಿಗೆಲ್ಲ ಈ ಗುಬ್ಬವ್ವ ಯತ್ತಿನೇ; ಯಾರಿಗೂ ಚಿಗವ್ವ,ದೊಡ್ಡವ್ವ ಅಲ್ಲ.  ಚೆಲುವೆಯರಾದ ಹದಿಹರೆಯಕ್ಕೆ ಕಾಲು ಇಡುತ್ತಿರುವ ಹೆಣ್ಣುಮಕ್ಕಳಿಬ್ಬರ ತಾಯಿ ಅಕಿ ಅಂತ ಬೇರೆ ಹೇಳಬೇಕಾಗಿಲ್ಲ.

‘ ಈ ಬಸ್ ಏನ ಇವತ್ತ ಬರಾಂಗ ಕಾಣಂಗಿಲ್ಲ. ನೀ ಇಲಕಲ್ ಗ ಹೊಂಟಿದ್ರ ನಾನೂ ನಿನ್ನ ಜತೀಲೇ ಬರತೀನಲೇ’ ಅಂದ ಮುತ್ತಪ್ಪನಿಗೆ ಪರಶ್ಯಾ ‘ಕುಂಡ್ರಹಂಗಾರ’ ಅಂತ ತನ್ನ ಹಿಂದಿನ ಸೀಟಿನಲ್ಲಿ ಕೂಡಿಸಿಕೊಂಡು ಭರ್ರನೇ ಗಾಡಿ ಚಾಲೂ ಮಾಡಿದ. ‘ಆ ಹುಡುಗಂದು ಪರೀಕ್ಸಾ ಐತಿ ಅಂತಲೇ. ಜ್ವಾಕ್ಯಾಗಿಕರಕೊಂಡ ಹೋಗಲೇ ಪರಶ್ಯಾ’ ಅಂತ ಅವನನ್ನು ಎಚ್ಚರಿಸಲು ಮರೆಯಲಿಲ್ಲ ಗುಬ್ಬವ್ವ.

 ಹತ್ತೂವರೆಯಾದರೂ ಬಸ್ಸು ಬರದಿದ್ದಾಗ ‘ಯವ್ವಾ, ಇವತ್ತೇನ ಆತs ಈ ಬಸ್ಸಿಗೆ’ ಅಂತ ಬಸ್ಸಿಗೂ, ತನ್ನ ಹಣೆಬರಹಕ್ಕೂ ಹಿಡಿಶಾಪ ಹಾಕುತ್ತ  ಒಮ್ಮೆ ಎದ್ದು, ಒಮ್ಮೆ ಕೂತು, ಮಗದೊಮ್ಮೆ ನಾಕ್ಹಜ್ಜೆ ಹಿಂದೆ ಮುಂದೆ ಓಡಾಡಿ ತನ್ನ ಆತಂಕವನ್ನು ಮರೆಸುತ್ತಿದ್ದಳು ಪಾತಜ್ಜಿ. ಬೆಳಗ್ಗೆ ಕುಡಿದ ಹಾಲು ಅರಗಿ ಪುಟ್ಟ ಪ್ರಣವ್ನೂ ಹಸಿವು-ನಿದ್ದೆಗಾಗಿ  ಕಿರಿಕಿರಿ-ಚಿರಿಪಿರಿ ಶುರು ಮಾಡಿದ.  ಬಿಸಿಲಿನ  ಝಳವೂ  ಏರಿದಂತೆ  ಹಂಗೇ ಒಟ್ಟಿಬಂದ ಕೆಲಸವನ್ನೆಲ್ಲ ನೆನೆದು ದೇವಕ್ಕನೂಚಡಪಡಿಸತೊಡಗಿದಳು. ಅಷ್ಟರಲ್ಲಾಗಲೇ 2-3 ಟೆಂಪೊಗಳು ತುಂಬಿ ತುಳುಕುತ್ತ ಬಂದು ನಿಂತವಾದರೂ ಅವು ಪಾತಜ್ಜಿಯನ್ನು ಹತ್ತಿಸಿಕೊಳ್ಳುವ ಸಾಹಸಮಾಡಲಿಲ್ಲ- ಅವಳ ದೊಡ್ಡ ಎಲೆಬುಟ್ಟಿಯನ್ನು ನೋಡಿ.’ತಮ್ಮಾ, ಒಂದೆರಡು ರೂಪಾಯಿ ಹೆಚ್ಚಿಗಿ ತಗೋಳೋ ಬುಟ್ಟೀದೂ’ ಅಂತ ಅಕಿಅಲವತ್ತುಕೊಂಡರೂ .. ‘ಏಯ್ ರೊಕ್ಕದ್ದಲ್ಲ ಬೇ, ಬುಟ್ಟಿ ಇಡಾಕ ಜಾಗಾ ಎಲ್ಲೈತಿ? ನೋಡಿದ್ಯೋ ಇಲ್ಲೋ ಟೆಂಪೋ ಮ್ಯಾಗನೂ ಹೆಂಗ ಕುಂತಾರ ಮಂದಿ’ ಅಂತ ಉತ್ತರ ಕೊಟ್ಟು ‘ರೈಟ್ ರೈಟ್’ ಅಂತ ಕೂಗಿ ಗಾಡಿ ಹೊರಡಿಸಿಯೇಬಿಟ್ಟರು ಆ ಕಿನ್ನರುಗಳು. ಗೌರಿಗಂತೂ ಡೈರೆಕ್ಟ್ ಬಿಜಾಪೂರಕ್ಕೇಹೋಗಬೇಕಾದ್ದರಿಂದ ಟೆಂಪೊ ಹತ್ತಿ ಇಲಕಲ್ಲದಲ್ಲಿಳಿವ ಮಾತೇ ಇರಲಿಲ್ಲ.ಹೀಗಾಗಿ ಪಾತಜ್ಜಿ- ಗೌರಿಯರಿಬ್ಬರಿಗೂ ಹಿರೇಕೆರೂರ ಬಸ್ಸನ್ನು ಧ್ಯಾನಿಸುತ್ತಕುಳಿತಿರಬೇಕಾಯಿತು. ಮಧ್ಯಾಹ್ನದ ಊಟಕ್ಕೆಂದು ಗುಬ್ಬವ್ವನೂ ಅಂಗಡಿ ಬಂದ್ ಮಾಡುವ ಗಡಿಬಿಡಿಯಲ್ಲಿ ‘ ಇವತ್ತೇನ ಬಸ್ ಬರಂಗಿಲ್ಲ ಬಿಡ ಯವ್ವಾ, ಮನಿಗಿ ಹೋಗಿ ಉಂಡ ಮಕ್ಕೊ. ನಾಳಿಗಿ ಹೋಗಾಕಂತಿ.’ಅಂದಳು ಗೌರಿಗೆ. ಗೌರಿ ಸಮ್ಮಿಶ್ರ  ಭಾವದಲ್ಲಿದ್ದಳು. ಒಂದೆಡೆ ಒಂದಿನ ಹೆಚ್ಚಿಗೆ ತೌರಲ್ಲಿ ಉಳಿವಸಂಭ್ರಮ ಮತ್ತೊಂದೆಡೆ ದಾರಿ ಕಾಯ್ದು ನಿರಾಶನಾಗುವ ಮನದನ್ನನ ಸಲುವಾಗಿ ಬೇಸರ. ಅಂತೂ ಬಂದ ದಾರಿಗೆ ಸುಂಕವಿಲ್ಲ ಎಂದು 12 ಗಂಟೆಯಹೊತ್ತಿಗೆ ಬಸ್ ಸ್ಟ್ಯಾಂಡ ಖಾಲಿ ಮಾಡಿದರು. ಬಿಸಿಲು ರಣರಣ ಅನತಿತ್ತು. ಪಾತಜ್ಜಿ ಮರುದಿನದ ಹನುಮಸಾಗರದ ಸಂತೀಗರೆ ಹೋಗಿ ಎಲೆ ಮಾರುವವಿಚಾರ ಮಾಡುತ್ತ ಸೋತ ಕಾಲುಗಳೊಂದಿಗೆ ವಾಪಸ್ ಹೊರಟಳು.

ಇಡೀ ದಿನ ರಣರಣ ಬಿಸಿಲು ಕಾಯ್ದು ಸಂಜೆ ಆಗುತ್ತಿದ್ದಂತೆಯೇ ಅಚಾನಕ್ ಆಕಾಶವೆಲ್ಲ ಕಪ್ಪು ಆವರಿಸಿ, ಮಂದಿಗೆ ಬೆಳಕಿಂಡಿ ಹಾಕಲಿಕ್ಕೂ ಪುರುಸೊತ್ತುಕೊಡದೇ ಧಪಾಧಪಾ ಅಂತ ಒಮ್ಮಿಂದೊಮ್ಮೆಲೇ  ಶುರುವಾದ ಮಳಿ ಎರಡು ದಿನ ಒಂದು ನಿಮಿಷನೂ ನಿಲ್ಲದs ಸುರದೇ ಸುರೀತು.  ಊರ ಮುಂದಿನಬೆಣ್ಣಿ ಹಳ್ಳ ಕಟ್ಟಿ ಬಸ್ಸು, ಟೆಂಪೊ ಎಲ್ಲಾ ಬಂದ್ ಆಗಿ, ಸೂರ್ಯನೂ ಇಲ್ಲದs, ಕರೆಂಟೂ ಇಲ್ಲದs ಇಡೀ ಹಳ್ಳಿ ಎರಡು ದಿನ ಪೂರಾ ‘ಗವ್’ ಅಂತ ಕತ್ತಲಾಗಇರೂ ಹಂಗ ಆಗಿ ಅಂತೂ ಬುಧವಾರದ ಹೊತ್ತಿಗೆ ಮಳಿಯ ಆರ್ಭಟ ಕಡಿಮೆಯಾಗಿ ಗುರುವಾರ ಮತ್ತ ಯಥಾಪ್ರಕಾರ ಸೂರ್ಯ ಹೊಳಕೋತ ಬಂದುಹಳ್ಳ ಇಳಿದು ಬಸ್ಸು ಗಿಸ್ಸು ಎಲ್ಲಾ ಚಾಲೂ ಆದ್ವು.

 ಇತ್ತ,ಪಾತಜ್ಜಿಯ ಎಲೆಗಳೆಲ್ಲ ಪಾಪ ಅಕಿನ ಕನಸಿನ ಹಂಗೆನೇ ಬುಟ್ಟ್ಯಾಗೇ ಅರ್ಧ ಕೊಳೆತು, ಅರ್ಧ ಹಳದಿಯಾಗಿ ಕೂತಿದ್ವು. ಒಮ್ಮಿಂದೊಮ್ಮೆ ಅಡ್ಡಮಳಿಶುರು ಆದಾಗ, ಮಗಳ ಬಾಣಂತನಕ್ಕ ಅಗ್ಗಿಷ್ಟಿಗಿಗೆ ಬೇಕಂತ ಆಯ್ದು ತಂದ ಕಾಕುಳ್ಳು,ಇದ್ಲಿಚೀಲ ಎಲ್ಲ ಒಳಗ ತರಬೇಕಂತ ಗಡಿಬಿಡಿನಾಗ ಮಳ್ಯಾಗಹಿತ್ತಲದಾಗ ಹೋಗಿ ಅವನ್ನ ಹೊತಗೊಂಡು ಅವಸರಲೇ ಒಳಗ  ಬರೂಮುಂದ ಕಾಲು ಜರದು ಬಿದ್ದು, ಕಾಲು ಉಳಕಿಸಿಕೊಂಡು ತಿಂಗಳುಗಟ್ಟಲೇಸರಿಯಾಗಿ ಅಡ್ಡಾಡಲಾಗದೇ ಪೂರಾ ಲುಕ್ಸಾನದಾಗ ಮುಳುಗಿಹೋದ್ಲು ಪಾತಜ್ಜಿ. ಮಗಳ ಕುಬಸದ ಕಾರ್ಯ,ಅಳ್ಯಾಗೊಂದು ಬಂಗಾರದ ಉಂಗುರ, ಮಗಳ ಸಿಜೇರಿಯನ್ ಹೆರಿಗೆ, ಕೂಸಿನ ತೊಟ್ಟಲಾ-ಬಟ್ಟಲಾ , ಕೂಸಿಗೊಂದು ಜರದಂಗಿ ಕುಂಚಗಿ, ಮುತ್ತಿನ ಜಬಲಾ, ಆಲದೆಲಿ ದುಬಟಿ,ಬೆಳ್ಳಿ ಗಿಲಕಿ, ಹಾಲ್ಗಡಗ.. ಅಂತೆಲ್ಲ ಸಿಕ್ಕಾಪಟ್ಟೆ ಖರ್ಚು ಬಂದು ಊರ ಸಾವಕಾರ ಈಶಪ್ಪನ ಹತ್ರ ಸಾಲ ಮಾಡಬೇಕಾತು. ಅದಕ್ಕಂತ ಇದ್ದೊಂದು ಮನೀದೂ ಪತ್ರ ಅಡಇಡಬೇಕಾತು.

  ಆ ಕಡೆ ಪರಶ್ಯಾನ ಗಾಡಿ ಮ್ಯಾಲೆ ಹೊಂಟಿದ್ದ ಮುತ್ತ, ‘ಲೇ ಸಾವಕಾಶಲೇ ಪರಶ್ಯಾ’ ಅಂತ ಹೇಳತಿದ್ರೂ ವೇಗ ತಗ್ಗಿಸದೇ ಇಲಕಲ್ ಕ್ರಾಸ್ ನ ಮಹಾಂತೇಶಟಾಕೀಜ್ ಹತ್ರ ತಿರುವು ತಗೋ ಮುಂದ ಒಮ್ಮಿಂದೊಮ್ಮೆಲೇ ಎದುರಾದ ಟ್ರ್ಯಾಕ್ಟರಿಗೆ ಢಿಕ್ಕಿ ಹೊಡದು ಗಾಡಿ ಉರುಳಿಬಿದ್ದು ಪಕ್ಕದಲ್ಲಿದ್ದ

ದೊಡ್ಡ ಕಲ್ಲುಬಂಡೆಗೆ ಮುತ್ತನ ಬಲಗೈ ಬಡಿದು ‘ಯವ್ವಾ’ ಅಂದವನೇ ಅಸಾಧ್ಯ ನೋವಿನಿಂದ ಒದ್ದಾಡಿದ. ಸಣ್ಣಪುಟ್ಟ ತರಚು ಗಾಯಗಳಾಗಿದ್ದ ಪರಶ್ಯಾಟಾಕೀಜಿನ ಕಾವಲುಗಾರನ ಸಹಾಯದಿಂದ ಗಾಡಿ ಎತ್ತಿ ನಿಲ್ಲಿಸಿ ಮುತ್ತನ್ನ ಮೆತ್ತಗ ನಡೆಸಿಕೊಂಡು ಗಾಡಿ ಮೇಲೆ ಕೂಡಿಸಿಕೊಂಡು ಅಲ್ಲೇ ಹತ್ರ ಇದ್ದಕಾಖಂಡಕಿ ಡಾಕ್ಟರ್ ಹತ್ರ ಕರಕೊಂಡು ಹೋದ. ಕೈಯ ಬಾವು,ನೋವು ಗಮನಿಸಿದ ಅವರು ‘ಕೈಗೆ ಫ್ರಾಕ್ಚರ್ ಆದ್ಹಂಗ ಕಾಣಸತದ. ದೊಡ್ಡಾಸ್ಪತ್ರೆಗೆಕರಕೊಂಡು ಹೋಗು.’ಅಂತ್ಹೇಳಿ ಮುತ್ತನಿಗೆ ನೀರು ಕುಡಿಸಿ, ಪ್ರಥಮೋಪಚಾರ ಮಾಡಿ ಕಳಿಸಿದ್ರು. ಪಾಪ! ಬ್ಯಾಂಕಿನ ಪರೀಕ್ಷೆ ಬರೀಬೇಕಾಗಿದ್ದ ಮುತ್ತ ಕೈಗೆಬ್ಯಾಂಡೇಜ್ ಸುತಕೊಂಡು ಸರಕಾರಿ ದವಾಖಾನಿ ಕಾಟ್ ಮ್ಯಾಲ ಮಕ್ಕೊಳ್ಳೂ ಹಂಗ ಆತು.

  ಇತ್ತ ಗೌರಿ ಅಳುಕಿನಿಂದ ಗಂಡನ ಫೋನ್ ಕಾಯ್ದದ್ದೇ ಬಂತು.ಅವನು ಸಿಟ್ಟಿಗೆದ್ದು ಮಾಡಲಿಲ್ಲವೋ, ಮಳಿ ಸಲುವಾಗಿ ಲೈನ್ ಕಟ್ ಆಗಿ ಫೋನ್ಬರವಲ್ತೋ ತಿಳೀಲಾರದೇ ಚಡಪಡಿಸಿದಳು. ಎರಡು ದಿನ ಹೆಚ್ಚಿಗೆ ತೌರಿನಲ್ಲಿರುವ ಸುಖ ವರುಣರಾಯ ಕರುಣಿಸಿದ್ದರೂ ಅದನ್ನು ಅನುಭವಿಸಲಾಗದೇಒಳಗೊಳಗೇ ತಳಮಳಿಸುತ್ತಿದ್ದಳು. ಅಂತೂ ಗುರುವಾರ ಹಿರೇಕೆರೂರು ಬಸ್ಸು 9 ಕ್ಕೆಲ್ಲ ಬಂದು, ಸೀಟೂ ಸಿಕ್ಕು 12 ಅನ್ನೂದರಾಗ ಬಿಜಾಪೂರದ ಬಸ್ಸ್ಟ್ಯಾಂಡ್ ಮಟ್ಟಿಯೂ  ಆತು. ತಾನೇ ಬ್ಯಾಗು, ಕೂಸು ಎಲ್ಲ ಹೆಂಗೋ ಸಾವರಿಸಿಕೊಂಡು ಆಟೋ ಹತ್ತಿ ಮನೆಗೆ ಬಂದಿಳಿದಾಗ ಮನೆಯಲ್ಲಿಅತ್ತಿಯವರನ್ನು ಬಿಟ್ಟು ಯಾರೂ ಇರಲಿಲ್ಲ. ಅವರ ಗಂಟಿಕ್ಕಿದ ಮುಖದಿಂದಲೇ ಅವರ ಮನಸ್ಥಿತಿ ಅರಿಯಬಹುದಿತ್ತು. ‘ಬಂದ್ಯಾ ಕೂಸುಮರೀ, ಒಂದುಯುಗ ಆಗಿಹೋಗಿತ್ತಲ್ಲಾ ನಿನ್ನ ನೋಡದs?’ಅಂತ ಮೊಮ್ಮಗನನ್ನು ಎತ್ತಿ ಮಾತಾಡಿಸಿದ  ಅವರು ಸೊಸೆಯತ್ತ ತಿರುಗಿ ‘ಹೇಳಿದ ಸಮಯಕ್ಕ ಬರಬೇಕು. ಆಗದಿದ್ರ ಮದಲs  ಹೇಳಿಬಿಡಬೇಕು ಬರಂಗಿಲ್ಲ ಅಂತ..ಪ್ರಸನ್ನ ಎಷ್ಟ ಕಿರಿಕಿರಿ ಮಾಡಿಕೊಂಡಾನ ನಾಕ ದಿನದಿಂದ ಅನ್ನೂ ಅಂದಾಜರೇ ಅದನ ನಿನಗ?’ ಅಂತ ತುಸು ಬಿರುಸಾಗೇ ಅಂದು ಅವಳ ಉತ್ತರವನ್ನೂ ಕೇಳಲಿಷ್ಟವಿಲ್ಲದವರಂತೆ ಮಗುವನ್ನೆತ್ತಿಕೊಂಡು ತಮ್ಮ  ರೂಮಿಗೆ ನಡೆದರು. ಗೌರಿಗೆ ಯಾಕೋಎಲ್ಲಾ ಖಾಲಿಖಾಲಿ ಎನಿಸಿ ಅಳು ಬರುವಂತಾಯ್ತು. ಸಂಜೆ ಮನೆಗೆ ಬಂದ ಯಜಮಾನರು ‘ಅಂತೂ ಬರಬೇಕನ್ನಿಸಿತಾ ತೌರುಮನೆ ಬಿಟ್ಟು ..ನೆನಪಾತಾನಮ್ಮದು. ಥ್ಯಾಂಕ್ಸ್ ವಾ ಬಂದಿದ್ದಕ್ಕ’ ಎಂದು ಕಹಿಯಾಗೇ ನುಡಿದಾಗ ಗೌರಿಗೆ ನೋವಿನೊಡನೆ ಸಿಟ್ಟೂ ಬಂತು. ಬಸ್ಸೇ ಬರದಿದ್ದುದು, ಎರಡು ದಿನ ಮಳಿಹಚ್ಚಿಹೊಡದು ಹಳ್ಳ ಕಟ್ಟಿದ್ದು ತನ್ನ ತಪ್ಪೇ ಅಂತ ಚೀರಿ  ಹೇಳಬೇಕೆನ್ನಿಸಿತಾದರೂ ಮನೆತುಂಬ ಜನರಿರುವಾಗ ಹಾಗೆ ದನಿಯೇರಿಸಿ ಮಾತಾಡುವುದುಉಚಿತವಲ್ಲವೆನಿಸಿ ಏಕಾಂತದ ಗಳಿಗೆಗಾಗಿ ಕಾಯುತ್ತಿದ್ದಳು. ರಾತ್ರಿ ರೂಮಲ್ಲಿ, ತಾನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಸ್ಸಿಗಾಗಿ ಕಾಯ್ದ  ಬವಣೆಯನ್ನುಕಥಿ ಮಾಡಿ ಹೇಳುತ್ತಿದ್ದಾಗ – ‘ಇರಬೇಕು ಅನ್ನಿಸಿದ್ರ ಇದ್ದು ಬಾ ಗೌರಾ. ಆದ್ರ ಬಸ್ ಬಂದಿಲ್ಲ ಅಂತ ಸುಳ್ಳು ಹೇಳೂದು, ಅದೂ ನನ್ನ ಮುಂದ..ನಿನ್ನಕಡೆಯಿಂದ ಇದನ್ನ ನಿರೀಕ್ಷಿಸಿರಲಿಲ್ಲ.ಅವತ್ತ 11:30 ಅಂದ್ರ ಬಸ್ ಬಂದಿತ್ತು. ಕೊನೆಯ ವ್ಯಕ್ತಿ ಇಳದು ಕಂಡಕ್ಟರ್ ಬಾಗಿಲಾ ಬಂದ್ ಮಾಡೂತನಾ ಮೈಯೆಲ್ಲಕಣ್ಣಾಗಿ ಕಾಯತಿದ್ದೆ ನಿನ್ನ, ಪ್ರಣೂನ ಸಲೂವಾಗಿ.ಈಗ ನೋಡಿದ್ರ ನೀ ಹೀಂಗ ಹೇಳಲಿಕ್ಹತ್ತೀ.ನಮ್ಮ ನಡುವನೂ ಇಂಥ ಸುಳ್ಳುಗಳು ಬೇಕಾ? ಇಷ್ಟ ಏನನಮ್ಮ ಪ್ರೀತಿ ಅರ್ಥ?’ ಅಂತಂದು ಪ್ರಸನ್ನ ಹೊಳ್ಳಿ ಮುಸುಕು ಹಾಕಿಕೊಂಡಾಗ ಗೌರಿಗೆ ಎಲ್ಲ ಅಯೋಮಯ!! 4-6 ದಿನ ಇಬ್ಬರ ನಡುವೆಮಾತಿಲ್ಲ-ಕತೆಯಿಲ್ಲ. ನಡೆದದ್ದು ಬರೀ ಹಾಡು. ಅದೂ ಟೇಪ್ ರಿಕಾರ್ಡರಿನಲ್ಲಿ.. ‘ಏಕೆ ಹೀಗೆ ನಮ್ಮ ನಡುವೆ ಮಾತು ಬೆಳೆದಿದೆ..ಕುರುಡು ಹಮ್ಮುಬೇಟೆಯಾಡಿ ಪ್ರೀತಿ ನರಳಿದೆ’ ಅಂತ ಅಶ್ವತ್ಥ ಹಗಲೂ ರಾತ್ರಿ ಹಾಡಿದ್ದೇ ಹಾಡಿದ್ದು.

ತಪ್ಪು ಇಲ್ಲಿ ಯಾರದ್ದೂ ಅಲ್ಲ. ನಡೆದದ್ದು ಇಷ್ಟೇ..ಒಂದಿನವೂ ಸರಿಯಾದ ಸಮಯಕ್ಕೆ ಬಾರದೇ ಇದ್ದ ಹಿರೇಕೆರೂರ  ಬಸ್ಸು ಅಂದು ಅದ್ಯಾವ ಹೊಸಕಂಡಕ್ಟರ್,ಡ್ರೈವರ್ ಇದ್ದರೋ ಗೊತ್ತಿಲ್ಲ  8 ಗಂಟೆಗೆ, ಸರಿಯಾದ ಸಮಯಕ್ಕೇ ಬಂದು ಎರಡು ನಿಮಿಷ ಬಸ್ ಸ್ಟ್ಯಾಂಡಿನಾಗ ನಿಂತು ಇಳಿವವರು, ಹತ್ತುವವರು ಯಾರೂ ಇಲ್ಲದೇ  ಬುರ್ ಅಂತ ಹೊರಟು ಹೋಗಿದೆ. ಪಾಪ! ಗುಬ್ಬವ್ವಗಾದರೂ ಹೆಂಗ ತಿಳದೀತು ಅದು! ದಿನಾ ತಡಾಮಾಡೂ ಆಹಿರೇಕೆರೂರ ಬಸ್ಸು ಒಂದಿನಾ ಸರಿಯಾದ ಸಮಯಕ್ಕೆ ಬಂದು ಮೂರೂ ಜನರ ಜೀವನದಾಗ ಏನೇನೋ ಆವಾಂತರ ಮಾಡಿ ಹೋತು ಅನ್ರಿ.

ಈಗ ಗುಬ್ಬವ್ವನ ಗೂಡಂಗಡಿ ಜಾಗದಲ್ಲಿ ಸಿಮೆಂಟಿನ ಕಟ್ಟಡ ಎದ್ದಿದೆ. ‘ಕಾಮಧೇನು ಹಾಲಿನ ಡೈರಿ’ಯಲ್ಲಿ ಗುಬ್ಬವ್ವನ ಅಳಿಯಂದಿರು ಹಾಲು-ಮೊಸರು, ಬ್ರೆಡ್ಡು-ಬನ್ನು, ಜಾಮ್-ಸಾಸ್ ಗಳ ಭರ್ಜರಿ ಮಾರಾಟ ನಡೆಸಿದ್ದಾರೆ. ಪಾತಜ್ಜಿಯ ಮೊಮ್ಮಗ  ಸುನೀಲ ಈಗ ಚಿಗುರು ಮೀಸೆಯ ಯುವಕ. ಧಾರವಾಡದಕೃಷಿವಿಶ್ವವಿದ್ಯಾಲಯದಲ್ಲಿ Bsc Agri ಮಾಡಿದ ಅವನು ತನ್ನ ಅಪ್ಪನ ನೆರವಿನಿಂದ ಗೌಡ ಈಶಪ್ಪನಿಂದ ಅಜ್ಜಿಯ ಮನೆ-ಎಲೆಯ ಪುಟ್ಟ ತೋಟಬಿಡಿಸಿಕೊಂಡದ್ದಲ್ಲದೇ ಅದನ್ನು ಎಕರೆಗಟ್ಟಲೆ ಬೆಳೆಸುವ ಹವಣಿಕೆಯಲ್ಲಿದ್ದಾನೆ. ಮರುವರುಷ ಬ್ಯಾಂಕ್ ಪರೀಕ್ಷೆ ಬರೆದು ಪಾಸಾದ ಮುತ್ತಪ್ಪ ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರಿನ ಬನಶಂಕರಿ ಶಾಖೆಯಲ್ಲಿ ಆಫೀಸರ್ ಆಗಿದ್ದಾನೆ. ಪುಟ್ಟ ಪ್ರಣವ್ ಈಗ ಸ್ನಾತಕೋತ್ತರ ಪದವೀಧರ. ಕಾಲೇಜುಓದುವ ಅಕ್ಕರೆಯ ಅವಳಿ-ಜವಳಿ ತಂಗ್ಯಂದಿರಿದ್ದಾರೆ. ಅವರ ಮನೆಯಲ್ಲೀಗ CD ಪ್ಲೇಯರ್ ‘ಒಲವೇ ಜೀವನ ಸಾಕ್ಷಾತ್ಕಾರ’ ಹಾಡುತ್ತಿದೆ.

  ಹೀಗೆ ಎಲ್ಲ ಬದಲಾಗಿದೆ ಈಗ. ಆದರೆ ಈಗಲೂ ಬದಲಾಗದೇ ಇದ್ದದ್ದು ಒಂದೇ ಒಂದು—ಸಮಯಕ್ಕೆ ಸರಿಯಾಗಿ ಬರದ ಆ ಬಸ್ಸು;ಅದೇ ಹಿರೇಕೆರೂರಬಸ್ಸು.

~ ಗೌರಿ ಪ್ರಸನ್ನ