ವಿಶ್ವಭಾರತಿಗೆ ಕನ್ನಡದಾರತಿ..ಚನ್ನವೀರ ಕಣವಿಯವರಿಗೆ ಅನಿವಾಸಿಯ ಭಾವಾಂಜಲಿ

ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ
‘ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯಸಂಸ್ಕಾರಿ’... ಎಲ್ಲಾ ಶಾಲಾ-ಕಾಲೇಜುಗಳ ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ಹಾಡು ಸ್ವಾಗತ ಗೀತೆಯಾಗಿಯೋ, ಪ್ರಾರ್ಥನಾ ಗೀತೆಯಾಗಿಯೋ ಅನುರಣಿಸಲೇಬೇಕಿತ್ತು ಆಗ. ಅಂತೆಯೇ ‘ನನ್ನ ದೇಶ ನನ್ನ ಜನ ನನ್ನ ಮಾನಪ್ರಾಣಧನ ತೀರಿಸುವನೇ ಅದರ ಋಣ ಈ ಒಂದೇ ಜನ್ಮದಿ’ ಎನ್ನುವ ಆಕಾಶವಾಣಿಯ ವಂದನಾದ ಕೊನೆಯ ದೇಶಭಕ್ತಿ ಗೀತೆಯೊಂದಿಗೇ ನಮ್ಮ ಹೆಚ್ಚಿನ ಬೆಳಗುಗಳು ಆರಂಭವಾಗುತ್ತಿದ್ದವು. ಕವಿಯ ಬಗ್ಗೆ ಏನೇನೂ ಗೊತ್ತಿಲ್ಲದಾಗಲೂ ಅವರ ಕವನಗಳು ಹೀಗೆ ಹಾಡಾಗಿ ಹರಿದು ಸಾಮಾನ್ಯರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿ ಬಿಡುವುದೇ ಆ ಕಾವ್ಯದ ಗೆಲುವು. 

ಸಾರ್ಥಕ ತುಂಬು ಜೀವನ ನಡೆಸಿದ  ಚೆಂಬೆಳಕಿನ ಕವಿಚೇತನ ಮಹಾಬೆಳಗಿನಲಿ ವಿಲೀನವಾಗಿದೆ. ಆದರೆ ಅರವತ್ತೆಂಟು  ವರುಷ ಜೊತೆಯಾಗಿ ದಾಂಪತ್ಯ ರಥವನ್ನೆಳೆದ ತಮ್ಮ ಪತ್ನೀವಿಯೋಗದ ಸಂದರ್ಭ ದಲ್ಲಿ ಅವರೇ ಹೇಳಿದ ಮಾತಿನಂತೆ ಹೇಳುವುದಾದರೆ –‘ಇಲ್ಲಿದ್ರು..ಇಲ್ಲೇ ಇದ್ರು..ಈಗ – ಎಲ್ಲಾ ಕಡೆ ಅದಾರ. ಇದ್ದಾಗ ಇರುವು ಇಲ್ಲಷ್ಟೇ ಇತ್ತು. ಈಗ ಸರ್ವವ್ಯಾಪಿ ಆದ್ರು. ಥೇಟ್ ಚೆಂಬೆಳಕಿನ್ಹಂಗ..’

ಸಮನ್ವಯ ಕವಿಯೆಂದೇ ಖ್ಯಾತರಾದ ಕಣವಿಯವರು ಕನ್ನಡದಲ್ಲಿ ಸಮೃದ್ಧವಾದ ಕಾವ್ಯಪರಂಪರೆಯನ್ನು ನಿರ್ಮಿಸಿದವರು.ಮೃದು ಮಾತಿನ ಆದರೆ ಖಚಿತ ನಿಲುವಿನ ಸಜ್ಜನಿಕೆಯ ಕವಿಯವರು. ಧಾರವಾಡದ ಅನೇಕ ಸಾಹಿತ್ಯಿಕ  ಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲಿನ ಅವರ ಉಪಸ್ಥಿತಿ ನನಗೆ ಶಾಂತವಾಗಿ,ಸದ್ದಿಲ್ಲದೇ ಬೆಳಗುವ ನಂದಾದೀಪದಂತೆ ಕಂಡದ್ದಿದೆ.
ಕಣವಿಯವರ ಕಾವ್ಯ ಮುಂಗಾರಿನ ಮಳೆಯ ಆರ್ಭಟದಂತೆಯೋ, ಶ್ರಾವಣದ ಮುಸಲಧಾರೆಯಂತೆಯೋ ಅಬ್ಬರದ್ದಲ್ಲ;ಇದ್ದೂ ಇಲ್ಲದಂತೆ ಶೃತಿ ಹಿಡಿದು ಸುರಿದು ನೆಲವ ಹದಗೊಳಿಸಿ, ಮನವ ಮುದಗೊಳಿಸುವ ಮುಂಜಾವಿನ ಸೋನೆಮಳೆ.. ‘ಬಾನ ಸಾಣಿಗೆ ಹಿಟ್ಟು ಸಣಿಸಿದಂತೆ’ ಜಿನುಗಿದ ಸೋನೆ. 

ಕವಿವರ್ಯರ ಪ್ರಸಿದ್ಧ ಗೀತೆ ‘ಹೂವು ಹೊರಳುವವು ಸೂರ್ಯನ ಕಡೆಗೆ’ ಇದರ ಬಗ್ಗೆ ಅರ್ಥಪೂರ್ಣ ಲೇಖನವನ್ನು ನಮ್ಮ ಆಹ್ವಾನದ ಮೇರೆಗೆ ಅತಿ ಕಡಿಮೆ ವೇಳೆಯಲ್ಲಿ ಸರೋಜಿನಿ ಪಡಸಲಗಿಯವರು ಬರೆದು ಕಳಿಸಿದ್ದು ಅವರ ಕವಿ-ಕಾವ್ಯ ಪ್ರೇಮವನ್ನೂ, ಅನಿವಾಸಿಯ ಬಗೆಗಿನ ಅಭಿಮಾನವನ್ನೂ ಎತ್ತಿ ತೋರಿಸುತ್ತದೆ.

ತಮ್ಮ ಶೃತಿಬದ್ಧವಾದ ಇನಿದನಿಯಲ್ಲಿ ‘ಒಂದು ಮುಂಜಾವಿನಲಿ’ ಹಾಡುವುದರ ಮೂಲಕ ಕವಿಗೆ ಗೀತನಮನ ಸಲ್ಲಿಸಿದ್ದಾರೆ ಸುಮನಾ ಧ್ರುವ್ ಅವರು.

ತಮ್ಮ ವಿದ್ಯಾರ್ಥಿದೆಸೆಯಲ್ಲಾದ ಕವಿವರ್ಯರ ಮುಖಾಮುಖಿ ಭೇಟಿಯ ಕುರಿತಾದ ಮಧುರ ನೆನಪುಗಳನ್ನು ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದಾರೆ ಶಿವ್ ಮೇಟಿ ಹಾಗೂ ಅಮಿತಾ ರವಿಕಿರಣ್ ಅವರು.

ಕವಿಯ ಯಶೋಕಾಯಕ್ಕೆ  ಕಾಲದ-ಹಂಗಿಲ್ಲ.ಅನಂತದವರೆಗೂ ವಿಶ್ವಭಾರತಿಗೆ ಕನ್ನಡದಾರತಿ ಬೆಳಗುತ್ತಲೇ ಇರುತ್ತದೆ; ಮಂಗಳ ಜಯಭೇರಿ ಮೊಳಗುತ್ತಲೇ ಇರುತ್ತದೆ. ಮುಟ್ಟಿದರೆ ಮಾಸುತಿಹ ಮಂಜಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯು ಬಿಂಬಿಸುತ್ತಲೇ ಇರುತ್ತದೆ. ಸೋನೆಮಳೆ ಸುರಿಸುರಿದು ನೆಲದೆದೆ ಹದಗೊಳ್ಳುತ್ತಲೇ ಇರುತ್ತದೆ.
ಬನ್ನಿ ಓದುಗರೇ, ಇವತ್ತಿನ ಸಂಚಿಕೆಯನ್ನೋದಿ ಕವಿಗೊಂದು ಭಾವನಮನ ಸಲ್ಲಿಸಿ.

~ ಸಂಪಾದಕಿ

ಪರಿಚಯ 

ಧಾರವಾಡದವಳಾದ ನಾನೀಗ ಸಧ್ಯ ಬೆಂಗಳೂರು ವಾಸಿ. ಸಾಮಾನ್ಯ ಗೃಹಿಣಿ. ಚಿಕ್ಕಂದಿನಿಂದಲೂ ಹಾಡಿನ ಹುಚ್ಚು; ಸಂಯೋಜಿಸುವ, ಹಾಡುವ ಗುಂಗು.ಇದೇ ಕವಿತೆಗಳನ್ನು ಬರೆಯುವತ್ತ ಕೊಂಡೊಯ್ತು. ಓದುವ ಹವ್ಯಾಸವೂ ಹಾಗೇ.

ಈಗ ಎರಡು ಕವನಸಂಕಲನ ಹೊರ ಬಂದಿವೆ. ವೈದ್ಯ ಪತ್ನಿಯ ಅನುಭವ ಕಥನ; ಸ್ವರಚಿತ ಸಂಪ್ರದಾಯದ ಹಾಡುಗಳು ತಾಯಿ-ಮಗು ಇವೆರಡೂ ಅಚ್ಚಿನಲ್ಲಿವೆ. ನಾನು ಅನಿವಾಸಿ ಅಲ್ಲದಿದ್ದರೂ ಅನಿವಾಸಿ ಮಗನ ತಾಯಿ ನಾನು. ಅದಕ್ಕೇ ಏನೋ ಈ ಅನಿವಾಸಿ ಬಳಗ ನನ್ನದೇ ಎಂಬ ಆತ್ಮೀಯ, ಆಪ್ತ ಭಾವ.

ಚೆಂಬೆಳಕಿನ ಕವಿ - ಚೆಂಬೆಳಕಿನ ಕವಿತೆ- ನಾಲ್ಕು ಮಾತು
     "ನಾಡೋಜ, ಚೆಂಬೆಳಕಿನ ಕವಿ  ಚೆನ್ನವೀರ ಕಣವಿಯವರು ಇನ್ನಿಲ್ಲ" . ಟಿವಿ ಯಲ್ಲಿ  ಬಿತ್ತರವಾಗುತ್ತಿದ್ದ  ಸುದ್ದಿ  ಕೇಳುತ್ತಿದ್ದಂತೆಯೇ ನನಗೇ ಗೊತ್ತಿಲ್ಲದಂತೆ  ಒಂದು ಗಳಿಗೆ  ಹಾಗೇ ಸ್ತಬ್ಧವಾಗಿ  ಬಿಟ್ಟೆ. ಈ ೯೩ ರ, ಜೀವನದ  ಸಂಧ್ಯಾ ಕಾಲದಲ್ಲಿ  ಕೋರೋನಾದ  ಕರಾಳ  ಬಂಧನದಲ್ಲಿ ಸಿಲುಕಿ ,  ನಲುಗುತ್ತಿರುವ  ಆ ಜೀವ  ಸೋತು ಹೋಗಿದ್ದರೂ , ಮತ್ತೆ ಚಿಗುರೀತೇನೋ ಮಾಗಿದ ಚೇತನ  ಎಂಬ  ಅರ್ಥವಿಲ್ಲದ  ಆಸೆ  ದೂರದಲ್ಲಿತ್ತು. ಈಗ ' ದೀಪ  ಹೊತ್ತಿಸಿದ  ದೀಪವೇ  ನಂದಿ  ಹೋಯ್ತಲ್ಲ' ಎಂಬ  ದಿಗ್ಭ್ರಮೆ !
ಈಗಿದ್ದು  ಮುಂದಿನ  ಗಳಿಗೆಗೇ ಇಲ್ಲದಂತಾಗುವುದು  ಜೀವವೊಂದೇ ಏನೋ ಎಂಬ ಹತಾಶೆ ಭರಿತ  ವಿಷಾದದಲೆ  ಸುಳಿದು ಹೋಗಿ , ಕಣ್ತುಂಬಿ ತುಳುಕಿ ಅದರಲ್ಲೇ  ಆ ಮಗುವಿನ ಮನದ, ಮುಗ್ಧ ನಗೆಯ ಮೃದು ವ್ಯಕ್ತಿತ್ವ ಅದೇ ಶುಭ್ರ ನಗೆಯೊಡನೆ ತೇಲಿದ ಭಾಸ.
ಒಣ ಕಠೋರತೆ, ಅಣುಕು ಮಾತುಗಳಿಂದ ಬಲು ದೂರ  ಇದ್ದ ಆ ಭಾವಜೀವಿಯ ಎದೆ ತುಂಬಿದ ಕನಸುಗಳು ಅರಳಿ ಕವಿತೆಯಾಗಿ  ಹರಿದ  ಆ ಕೋಮಲ ಧಾರೆಯಲಿ ಮುಳುಗಿ ಹೋದೆ ನಾ, ಅವರ  ಭೇಟಿಯಾದ ಗಳಿಗೆಯ ನೆನಪಿನೊಡನೆ!
        ಧಾರವಾಡದ  ಕಲ್ಯಾಣ ನಗರದ  ಅವರ ಮನೆಯ ಹೊಸ್ತಿಲನ್ನು  ಅಳುಕುತ್ತಲೇ ತುಳಿದಾಗ ಅವರ  ಆ ತುಟಿತುಂಬ  ಹರಡಿದ  ಮೃದು ಹಾಸ, ನೀಡಿದ  ಮನದುಂಬಿದ ಸ್ವಾಗತ ," ಬಾ ಯವ್ವಾ ಬಾ  ತಂಗಿ  ಬಾ  ಒಳಗ" ಅಂದ  ಆ ಮೆತ್ತಗಿನ  ಧ್ವನಿ  ಇನ್ನೂ ಕಿವಿಯಲ್ಲಿ  ಗುಂಜಿಸುತ್ತಿದೆ. ಆ ಒಂದು  ಗಂಟೆಯಲ್ಲಿ  ಎಷ್ಟೊಂದು ಮಾತಾಡಿದೆವು! ಆದರೆ  ಅದರಲ್ಲಿ ನನ್ನ ತಲೆಗೆ ಎಷ್ಟು ಹೋಯ್ತೋ ಗೊತ್ತಿಲ್ಲ. ಅವರ  ಕವಿತೆಯಂತೆ ಇರುವ  ಆ  ವ್ಯಕ್ತಿತ್ವದಲ್ಲಿ  ಕರಗಿ  ಹೋಗಿದ್ದೆ  ನಾ! ಅಂತಹ  ಧೀಮಂತ  ಚೇತನ  ಇನ್ನು ನಮ್ಮೊಡನಿಲ್ಲ. ಆದರೆ ಅವರ  ಒಂದೊಂದು ಕವಿತೆ ಒಂದೊಂದು ಮಾತು ಹೇಳುತ್ತ ಚಿರಸ್ಥಾಯಿಯಾಗಿ ಉಳಿಯುವಂಥವೇ. ಆ ಕಾವ್ಯ- ಕವನಗಳೊಂದಿಗೆ ಅವರೂ ನಮ್ಮೊಡನೆಯೇ  ಇದ್ದಾರೆ ಎಂಬ ಹುಚ್ಚು ಸಮಾಧಾನ." ಹೂವು ಹೊರಳುವವು ಸೂರ್ಯನ ಕಡೆಗೆ....." ಎಂದು  ಅವರು  ಹಾಡಿದಂತೆ ಆ ಸ್ವಚ್ಛ ಮನದ  ಕವಿ ಆ ಶುಭ್ರತೆಯಲ್ಲೇ, ಆ ಬೆಳಕಿನಲ್ಲೇ ಒಂದಾಗಿ  ಹೋಗಿದ್ದಾರೆ. ಅವರ ಈ  ಕವಿತೆ ನನಗೆ ಅತ್ಯಂತ ಪ್ರಿಯವಾದ  ಕವಿತೆ. ಅವರಿನ್ನಿಲ್ಲದ  ಸುದ್ದಿ  ಕೇಳಿದಾಗಿನಿಂದ  ಎಷ್ಟು ಸಲ  ಆ ಹಾಡು ರತ್ನಮಾಲಾ ಪ್ರಕಾಶ ಅವರ  ಧ್ವನಿಯಲ್ಲಿ ಕೇಳಿದೀನೋ  ನನಗೇ ಗೊತ್ತಿಲ್ಲ!  ಮತ್ತೊಮ್ಮೆ ಹುಟ್ಟಿ ಬಾ ಅನ್ನುವುದು ಅದೆಷ್ಟು ವಾಸ್ತವಿಕ ಗೊತ್ತಿಲ್ಲ. ಈಗ ನಮ್ಮ ಕೈಲಿರುವುದು ಅವರ ನೆನಪಲ್ಲಿ ನಾಲ್ಕು ಹನಿ ಕಣ್ಣೀರು ಸುರಿಸುವ ಅಸಹಾಯಕತೆ ಒಂದೇ.  ನಾನೀಗ ಅವರ ಈ ಕವಿತೆಯ ಕುರಿತು ನನಗೆ ತಿಳಿದ  ಹಾಗೆ ಬರೆದ ನಾಲ್ಕು ಮಾತುಗಳೇ   ಚೆಂಬೆಳಕಿನ ಕವಿಗೆ  ನನ್ನ ಶ್ರದ್ಧಾಂಜಲಿ !  

ಹೂವು ಹೊರಳುವವು ಸೂರ್ಯನ ಕಡೆಗೆ..

ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನ ವರೆಗೆ
ಇರುಳಿನ ಒಡಲಿಗೆ  ದೂರದ ಕಡಲಿಗೆ
ಮುಳುಗಿದಂತೆ, ದಿನ  ಬೆಳಗಿದಂತೆ
ಹೊರ ಬರುವನು  ಕೂಸಿನ ಹಾಗೆ

ಜಗದ  ಮೂಸೆಯಲಿ  ಕರಗಿಸಿ  ಬಿಡುವನು
ಎಲ್ಲ  ಬಗೆಯ  ಸರಕು
ಅದಕೆ  ಅದರ ಗುಣ ದೋಷಗಳಂಟಿಸಿ
ಬಿಡಿಸಿ  ಬಿಟ್ಟ ತೊಡಕು

ಗಿಡದಿಂದುರುವ  ಎಲೆಗಳಿಗೂ ಮುದ 
ಚಿಗುರುವಾಗಲೂ  ಒಂದೆ ಹದ
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ  ಕುಳಿತಿಹನೋ ಕಲಾವಿದ

ಬಿಸಿಲ ಧಗೆಯ  ಬಸಿರಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ
ಸಹಿಸಿಕೊಂಡ  ಸಂಕಟವನು ಸೋಸಲು
ಬಂದೇ ಬರುವುದು ಗಳಿಗೆ

ಸಹಜ ನಡೆದರೂ  ಭೂಮಿಯ ಲಯದಲಿ
ಪದಗಳನಿರಿಸಿದ  ಹಾಗೆ
ವಿಶ್ವದ  ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ

ನಾಲ್ಕು ಮಾತುಗಳು ಕವಿತೆ ನನಗನಿಸಿದಂತೆ -

       ನಾಡೋಜ ಕವಿ ಚೆನ್ನವೀರ ಕಣವಿಯವರ ಈ ಕವಿತೆ " ಹೂವು ಹೊರಳುವವು ಸೂರ್ಯನ ಕಡೆಗೆ....."  ಹಾಗೇ ಓದಿ, ಆಲಿಸಿದ್ರೆ ಒಂದು ಸರಳ , ಸುಂದರ ಭಾವಗೀತೆ  ಅನ್ನಿಸಿದ್ರೂ ಬಗೆದಷ್ಟು  ಗೂಢಾರ್ಥ  ಅದರೊಡಲಲ್ಲಿ ಅಂತ ನನಗನ್ನಿಸ್ತು.
 ಹೂವು  ಇಲ್ಲಿ ಸುಂದರ, ಸರಳ, ಸ್ವಚ್ಛ ಮನದ ಪ್ರತೀಕ. ಅಂತೆಯೇ  ಸಹಜವಾಗಿಯೇ ಅವು  ಸೂರ್ಯನ  ಅಂದರೆ ತಮದ ಲವಲೇಶವೂ ಇಲ್ಲದ, ಶುಭ್ರ, ಸ್ವಚ್ಛ ಪ್ರಕಾಶದ, ಅರಿವಿನ ದ್ಯೋತಕ; ಅತ್ತ ಹೊರಳಬಲ್ಲವು , ಆ ಬೆಳಕು ಪ್ರಖರವಾಗಿದ್ದರೂ. ಆದರೆ ನಾವು ಮನುಷ್ಯರು ; ಮಾನವ ಸಹಜ  ದುರ್ಬಲತೆ  ನಮ್ಮಲ್ಲಿ. ಮಾಯಾ, ಮೋಹ, ಅಹಂ ದ ಗಾಢ ಕತ್ತಲು, ತುಮುಲದಲ್ಲಿ  ಮುಳುಗಿರುವ ನಾವು ಅದನ್ನು ಜೀರ್ಣಿಸಿಕೊಳ್ಳುವ ತಾಕತ್ತೂ ಇಲ್ಲದವರು. ನಮ್ಮ ದಾರಿ ಬರಿ ಚಂದ್ರನ ವರೆಗಷ್ಟೇ; ಸೂರ್ಯನ ಪ್ರತಿಫಲಿತ ಬೆಳಕಿನ ಚಂದ್ರನ ವರೆಗಷ್ಟೇ . ಆ ಜ್ವಾಜ್ವಲ್ಯಮಾನ  ಬೆಳಕಿನೆಡೆ  ಕಣ್ಣೆತ್ತಿ ನೋಡಲೂ ಆಗದಷ್ಟು ಆಳವಾಗಿ  ಹುದುಲಿನಲ್ಲಿ  ಸಿಲುಕಿದವರು. ಆ ಇರುಳಿನ ಒಡಲಿಂದ ಸಾಗಿ  ಬೆಳಕಿನೆಡೆ ಸಾಗಲು ಸೇತುವೆಯಂತಿರುವ  ಈ ಜೀವನದ  ಕಡಲಿನಲ್ಲೇ ಮುಳುಗಿ ಅಲ್ಲೇ ಎಲ್ಲಾ ದುರ್ಬಲತೆ, ಜಂಜಾಟಗಳನ್ನೆಲ್ಲ ಕಳಚಿ ಎದ್ದು ನಿಷ್ಕಲ್ಮಶ ಮನಸಿನ ಕೂಸಿನಂತೆ  ಹೊರಬಂದರೆ ಸೂರ್ಯನತ್ತ ಹೊರಳುವ ಯೋಗ್ಯತೆ ಬಂದೀತೋ ಏನೋ ಅಂತ. ಸೂರ್ಯನು ದಿನವೂ ಇರುಳಿನೊಡಲಲ್ಲಿ ಮುಳುಗಿ, ಕಡಲಿನಿಂದ  ಬೆಳಗುತ್ತ ಕೂಸಿನ ಹಾಗೆ ಶುಭ್ರವಾಗಿ ಹೊರಬಂದು ಇದನ್ನೇ ಹೇಳ್ತಾ ಇದಾನೆ ಅಂತ ಕವಿ ಸೂಚ್ಯವಾಗಿ ಹೇಳಿದ್ದಾರೆ ಇಲ್ಲಿ. ನಿಜಕ್ಕೂ ಇದೊಂದು ಅನುಪಮ ಪ್ರತಿಮೆ.ಮಾನವನೂ ಸೂರ್ಯ ದಿನ ಬೆಳಗಿದ ಹಾಗೆ ಬೆಳಗುತ್ತ ಅಂದರೆ ತುಸು ತುಸುವಾಗಿ ತಿಳಿವು ವಿಕಸಿಸಿ, ಸ್ವಚ್ಛ ಮನದ ಬೆಳಕಲಿ ಹೊಳೆಯುತ್ತ  ಕೂಸಿನ ಹಾಗೆ ಶುಭ್ರವಾಗಿ ಹೊರಬರಲಿ ಕಡಲ ಮಡಿಲಿಂದ  ಥೇಟ್  ಆ ನೇಸರ  ಬಂದ ಹಾಗೆ  ಎಂಬುದು ಕವಿಯ ಆಶಯ. 
         ಎರಡನೇ ಚರಣದಲ್ಲಿ  ಇದನ್ನೇ ಮುಂದುವರಿಸುತ್ತ  ಕವಿ ಹೇಳ್ತಾರೆ - ಯಾರು ಹೇಗೇ ಬಂದರೂ, ಅವರ ಯಾವ ಗುಣಾವ ಗುಣಗಳನ್ನು ಗಣನೆಗೆ ತಾರದೇ ಅವರವರ ಯೋಗ್ಯತೆಗೆ ತಕ್ಕಂತೆ ಈ ಜಗದ ದಿನ ನಿತ್ಯದ ಬದುಕಿನಲ್ಲಿ ಮುಳುಗಿಸಿ ಬಿಡ್ತಾನೆ ಆತ. ಹಾಗೇ ಆ ಒಂದೇ ಮೂಸೆಯಲ್ಲಿಯೇ ಅಕ್ಕಸಾಲಿಗನಂತೆ ಕರಗಿಸಿ ಮಸೆಸಿ ಬಿಟ್ಟು, ಒರೆಗ್ಹಚ್ಚಿ ಶುದ್ಧೀಕರಿಸುವದೊಂದೇ ಆತನ ಕೆಲಸ. ಆದರೆ ಒಂದೇ ಬಾರಿಗೆ ಆಗುವುದಲ್ಲ ಅದು. ಅವರವರ ಒಳಿತು ಕೆಡುಕುಗಳ ಕರ್ಮದ ಗಂಟು ಅವರ ಬೆನ್ನಿಗೇ. ಅಲ್ಲಿ ಯಾವ ಏಚು ಪೇಚಿಲ್ಲ; ತೊಡಕು ತೊಡರಿಲ್ಲ. ಬಲು ಸ್ಪಷ್ಟ ಆ ಲೆಕ್ಕ.
        ಇನ್ನು ಈ  ಕರಗಿಸಿ ಶುದ್ಧೀಕರಿಸಿದ್ದು ಎಷ್ಟರ ಮಟ್ಟಿಗೆ ಫಲ ಕೊಟ್ಟಿದೆ  ಎಂಬುದನ್ನು ಮೂರನೇ ಚರಣದಲ್ಲಿ ಹೇಳ್ತಾರೆ ಕವಿ. ಗಿಡದಿಂದ ಉದುರುವ ಎಲೆಗೂ ಒಂದು ಮುದ ಇದೆ ಅಂತ. ನಿಜ; ಮಾಗಿದ  ಮನದ  ಪ್ರತೀಕ ಅದು. ಮನ  ಮಾಗಿ ಪಕ್ವವಾಗಿ  ತೊಟ್ಟು ಕಳಚಿ ಗಿಡದಿಂದ ಉದುರುವ ಎಲೆಯಂತಾಗಿದ್ರೂ ಆ ಹಣ್ಣಾದ ಮನದಲ್ಲಿ  ಏನೋ ಒಂದು ನಿರಾಳ, ನಿವಾಂತ ಭಾವ. ಯಾವ
ಗೊಂದಲದ  ಗೋಜಿಲ್ಲದೇ, ತಿಳಿವು ಅರಿವಿನ  ಹುಡುಕಾಟದಿ ನಲುಗದ ಸ್ಥಿತಿ ಅದು; ಸ್ಥಿತಪ್ರಜ್ಞನ ಹಾಗೆ. ತಾ ಏನು, ತನ್ನ ದಾರಿ ಎತ್ತ ಎಂಬುದರ  ಕಲ್ಪನೆ  ನಿಚ್ಚಳವಾಗಿದೆ ಈಗ ಆ‌ ಜೀವಕೆ. ಅದಕ್ಕೇ ಹೊಸ ಚಿಗುರಿನ ಹದದಂತೆಯೇ ಆ ಮನವೀಗ. ಷೇಕ್ಸ್ ಪಿಯರ್ ನ  ಕವಿತೆಯ  ನೆನಪು ಬಾರದಿರದೀಗ; ಶಿಶುವಾಗಿ ಆಗಮಿಸಿ ಶಿಶುವಿನಂತೆ ನಿರ್ಗಮನ. ನಿರ್ಗಮನ ಆದ ಹಣ್ಣೆಲೆ ಭೂಮಿ ಒಡಲು ಸೇರಿ ಮತ್ತೆ ಚಿಗುರೊಡೆಯುವುದೂ ಅಲ್ಲಿಂದಲೇ. ಆ ಹಂತದಲ್ಲಿ ಅಲ್ಲಿ ಏನು ನಡೀತದೋ ಗೊತ್ತಿಲ್ಲ, ಆಗುವುದೂ ಇಲ್ಲ. ಇದು ಜನನ- ಮರಣ - ಜನನ ಈ ಚಕ್ರದ ಸೂಚಕ. ಆ ಕಲಾವಿದ ಮತ್ತೆ ಅವುಗಳ ಗುಣದೋಷಗಳನು  ಅಂಟಿಸಿ ಕಳಿಸಬೇಕಲ್ಲ ರೂಪಿಸಿ! ಒಂದು ಹದದ ಲೆಕ್ಕ, ಅಳತೆಗೋಲು ಇಟ್ಟುಕೊಂಡೇ ಇರ್ತಾನೆ ಆ ಕಲಾವಿದ- ಅದೇ ಸೃಷ್ಟಿಕರ್ತ, ಯಾರ ಅಳಿವಿಗೂ ನಿಲುಕದವನಾತ ಎಂದು ಹೇಳ್ತಿದ್ದಾರೆ ಕವಿ.
         ಈಗ  ನಾಲ್ಕನೇ ಚರಣದಲ್ಲಿ ಕವಿ ಸಂತೈಸ್ತಿದಾರೆ ಆ ಜೀವಗಳನ, ಗುಣದೋಷಗಳ ಮೂಟೆ ಹೊತ್ತು ತಿರುಗುವ ಜೀವಗಳನ. ಈ ಹೆಣಗಾಟದ ಮಧ್ಯೆಯೂ  ಒಂದು ಸುಂದರ ಗಳಿಗೆ ಬಂದೇ ಬರತದೆ.ಸಾಗಿ ಬಂದ ದಾರಿಯ ಹಿಂದಿರುಗಿ ನೋಡಿ , ತನ್ನನ್ನೇ ತಾ ಮಥಿಸಿ ಸೋಸಿ ನೋಡಿದಾಗ  ವಿಷಯ ನಿಚ್ಚಳವಾಗಿ ಗೋಚರಿಸಿ ಒಂದು ನಿರಾಳತೆ  ಮನದಲ್ಲಿ. ಇದೇ ಆ ಹೆಣಗಾಟದ  ಗರ್ಭದಲ್ಲಿಯೇ ಇರುವ ತಂಪೆರೆವ ಹಾಯಿಯ ನೆರಳಿನೆಳೆ. ಇದನ್ನು ಗುರುತಿಸುವ ಗಳಿಗೆ ಬಂದೇ ಬರುತ್ತದೆ ಎಂಬುದು ಕವಿಯ ಧೃಡ ನಂಬಿಕೆ. ಇಲ್ಲಿ ಬಿಸಿಲಿನ ಧಗೆ ಜೀವನ ಪರ್ಯಂತದ
 ಜಂಜಾಟ, ಗುದ್ದಾಟವೇ;  ಮಾಗುವಿಕೆ ಬರೋ ತನಕ. ನಂತರ ಬರುವುದು ಮೆಲು ತಂಗಾಳಿಯ ಅಲೆ. ನಿಧಾನವಾಗಿ ಬರೋದದು. ಆ ಹಣ್ಣೆಲೆಗೆ ಮುದ ನೀಡುವುದೂ ಇದೇ.
ಇದನ್ನೆಲ್ಲ  ನೋಡಿ  ಕವಿಗೆ  ಎಲ್ಲ  ಅಂಶಗಳ ನಡೆ, ಚಲನೆಯಲ್ಲೂ ಒಂದು ಲಯಬದ್ಧತೆ, ಕ್ರಮ ಬದ್ಧತೆ ಎದ್ದು ಕಾಣುತ್ತದೆ. ಸೃಷ್ಟಿಯ ಪ್ರತಿ ಅಣು , ಪ್ರತಿ ಕಣವನ್ನೂ ವ್ಯವಸ್ಥಿತವಾಗಿ, ಸರಿಯುತ್ತಿರುವ ಸಮಯದ ಚಲನೆಯಲ್ಲೂ, ಭೂಮಿಯು ಸಾಗುವ ಗತಿಯಲ್ಲೂ ಆಚೀಚೆ ಅಲುಗಾಡದಂತೆ , ಅದರದರದೇ ಸ್ಥಳದಲ್ಲೇ ಜೋಡಿಸಿರುವುದರಲ್ಲೂ ಒಂದು ಸೌಂದರ್ಯ ಕಾಣ್ತಿದೆ , ಕವಿತೆಯ  ಲಯಬದ್ಧ ಪದ ಜೋಡಣೆಯಲ್ಲಿರುವ ಹಾಗೆ. ಅದಕ್ಕೇ ಕವಿಗೆ  ಈ ಜೀವನವೇ ಒಂದು ಕವಿತೆ ಅನಿಸಿ ಬಿಟ್ಟು, ಅದು ಈ ಜಗದ ಮೊಳಹಿನಲ್ಲಿಯೇ ಅಂದರೆ ಜೀವನದ ಉಗಮದಲ್ಲಿಯೇ ರೂಪ ತಾಳಿ ಬಿಟ್ತು ಅಂತ ಹೇಳ್ತಾರೆ. ಹೀಗೆ ಜೀವನದ ಸಾರವನ್ನು ಪೂರ್ತಿಯಾಗಿ ಹೇಳಿ ಅದನ್ನು ಕವಿತೆ ಎನ್ನುವುದು ಅನುಪಮ  ಹೇಳಿಕೆ.ಜೀವನವೇ ಕವಿತೆ ಎನ್ನುವುದು ನಿಜಕ್ಕೂ ಅಪ್ರತಿಮ ಪ್ರತಿಮೆ.

ಒಟ್ಟಿನಲ್ಲಿ ಈ ಛಂದದ ಕವಿತೆ ಮನದ ತುಂಬಾ ಯೋಚನಾ ಭಾವ ತರಂಗಗಳನೆಬ್ಬಿಸುವದಂತೂ ನಿರಂತರ ಸತ್ಯ! ಈಗ ಅವರನ್ನು ಕಳೆದುಕೊಂಡು ಮಂಕು ಕವಿದು, ಮಬ್ಬುಗತ್ತಲೆ ಆವರಿಸಿದ್ದರೂ, ಇಂತಹ ಅಪರೂಪದ ಕವಿತೆಗಳಿಂದ ಚೆಂಬೆಳಕನ್ನು ಹರಡುತ್ತಾ, ಆ ಮಬ್ಬುಗತ್ತಲೆಯ ಮಂಕನ್ನು ಸರಿಸುತ್ತಾ  ನಮ್ಮ ಜೊತೆಯಲ್ಲೇ ಇರುತ್ತಾರೆಂಬುದೂ ಅಷ್ಟೇ ಸತ್ಯ!

~ ಸರೋಜಿನಿ ಪಡಸಲಗಿ
ಬೆಂಗಳೂರು

ಒಂದು ಮುಂಜಾವಿನಲಿ..ಸುಮನಾ ಧ್ರುವ್

ವಿಶ್ವ ವಿನೂತನ ವಿದ್ಯಾ ಚೇತನ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ	
ಈ ಹಾಡನ್ನು ಅದೆಷ್ಟು ಬಾರಿ ಆ ಮೊದಲು ಹಾಡಿದ್ದೆ ಆದರೆ , ಆ ದಿನ ಒಂಥರಾ ಭಯಮಿಶ್ರಿತ ಖುಷಿ ಯಾಕೆಂದರೆ ಕವಿಯ ಎದುರೆ ಅವರ ಹಾಡು ಹಾಡುವ ಸೌಭಾಗ್ಯ ಎಲ್ಲ ಗಾಯಕರಿಗೂ ಸಿಗುವಂತದ್ದಲ್ಲ, ಆ ಒಂದು ವಿಷಯದಲ್ಲಿ ನಾನು ನಿಜಕ್ಕೂ ನಶೀಬವಾನ,ಈ ಅವಕಾಶ ನನಗೆ ಹಲವುಬಾರಿ ಸಿಕ್ಕಿದೆ. 

ಕಣವಿ ಅವರನ್ನ ಅದೇ ಮೊದಲ ಬಾರಿ ನೋಡಿದ್ದು , ಧಾರವಾಡದ ವಿದ್ಯಾವರ್ಧಕ ಸಂಘದ ಯಾವುದೋ ಕಾರ್ಯಕ್ರಮಕ್ಕೆ ವಿಶ್ವ ವಿನೂತನ ಹಾಡಲಿಕ್ಕೆಂದು ನಾವು ಕೆಲವು ಸಂಗೀತ ವಿದ್ಯಾರ್ಥಿಗಳು ಹೋಗಿದ್ದೆವು. ವಿಶ್ವವಿನೂತನ ಹಾಡಿನ ಹೊಸದೊಂದು ಸಂಯೋಜನೆಯನ್ನು ನಮ್ಮ ಉಪನ್ಯಾಸಕರಾದ ಡಾ ನಂದಾ ಪಾಟೀಲ್ ಅವರು ನಮಗೆ ಕಲಿಸಿದ್ದರು. ಹಾಡಿನ ನಂತರ "ಚಲೋ ಹಾಡಿದ್ರು ಹುಡುಗೂರು". ಅಂದು ಮುಗುಳುನಕ್ಕರು ಅವರ ಕವಿತೆಗಳಂತೆ ಅವರ ನಗುವೂ ಚಂದ ಚಂದ, ಪುಟ್ಟ ಮಗುವಿನ ನಗುವಿನಂತೆ.

ಧಾರವಾಡದಲ್ಲಿ ಇದ್ದಷ್ಟು ದಿನ ಆಗೊಮ್ಮೆ ಈಗೊಮ್ಮೆ ಸಾಹಿತ್ಯ ಸಂಗೀತ ಕಾರ್ಯಕ್ರಮದಲ್ಲಿ ಅವರ ಭೇಟಿ ಆಗುತ್ತಲೇ ಇರುತ್ತಿತ್ತು. ಈಗಿನಂತೆ selfi ಕಾಲವಾಗಿದ್ದ್ರೆ ಅದೆಷ್ಟು ಫೋಟೋಗಳ ಸಂಗ್ರಹವಾಗುತ್ತಿತ್ತೋ. ಮನಸ್ಸಲ್ಲಿ ಅಚ್ಚಾದ ಆ ನೆನಪಿನ ಚಿತ್ರಗಳನ್ನು ಅಕ್ಷರದಲ್ಲಿ ಬಿಂಬಿಸಲು ಸೋಲುತ್ತಿದ್ದೇನೆ.

ಕನ್ನಡ ಭಾವಗೀತೆಗಳ ಗುಂಗಿಗೆ ಬಿದ್ದವರು, ತಮ್ಮ ಜೀವನದ ಎಲ್ಲ ಸಂದರ್ಭಕ್ಕೂ ಒಂದು ಹಾಡನ್ನು ತಮ್ಮ ಅರಿವಿಲ್ಲದಂತೆ ಗುನುಗಿಕೊಂಡು ಬಿಡುತ್ತೇವೆ. ಹಾಗೆ ಎಂದೋ ಕೇಳಿದ ಮುಂಜಾವಾದಲಿ ಹಸಿರುಹುಲ್ಲ ಮಖಮಲ್ಲಿನಲಿ ಪಾರಿಜಾತವೂ ಹೂವು ಸುರಿಸಿದಂತೆ ಹಾಡು ಪಾರಿಜಾತ ಸಿಗದ ನಾಡಿಗೆ ಬಂದರೂ ಇಬ್ಬನಿ ತುಂಬಿದ ಹಸಿರು ಹೊದ್ದ ನೆಲವನ್ನು ಕಂಡರೆ ಪಕ್ಕನೆ ಗುನುಗಿಬಿಡುತ್ತೇನೆ. ಏಳುತ್ತಲೇ ಮಳೆ ನಾದ ಕೇಳಿದರೆ ತುಂತುರಿನ ಸೋನೆಮಳೆ ಎಂದು ಮನಸು ಹಾಡತೊಡಗುತ್ತದೆ. ಎಲ್ಲಕ್ಕಿಂತ ಹೆಚ್ಚು ಆಪ್ಯಾಯಮಾನ ಹಾಡು ಎಂದರೆ ಹೂವು ಹೊರಳುವವು ಸೂರ್ಯನ ಕಡೆಗೆ ಎನ್ನುವ ಗೀತೆ, ಈಗಲೂ ಸೂರ್ಯನತ್ತ ಮುಖಮಾಡಿದ ಹೂಗಳನ್ನು ನೋಡಿದಾಗ, ಆ ಸಾಲು ನೆನಪಾಗುತ್ತದೆ. 

~ ಅಮಿತಾ ರವಿಕಿರಣ್
ಕಣವಿಯವರ ಜೊತೆಗೆ ನನ್ನದೊಂದು ಭೇಟಿ 
ನಾವಿದ್ದ ಸಮಯದಲ್ಲಿ ಕೆಎಂಸಿಯ ಕನ್ನಡ ಸಂಘ ತುಂಬಾ ಚುರುಕಾಗಿತ್ತು . ಪ್ರತಿ ವರ್ಷ ' ಬೇಂದ್ರೆಯವರ ' ದಿನಾಚರಣೆಯನ್ನು ಆಚರಿಸುವುದು ವಾಡಿಕೆಯಾಗಿತ್ತು . ಯಾರಾದರೂ ಸಾಹಿತಿಗಳನ್ನು ಮುಖ್ಯ ಅತಿಥಿಗಳನ್ನಾಗಿ ಕರೆತರುವದು ವರ್ಷಗಳಿಂದ ನಡೆದುಬಂದ ರೂಢಿಯಾಗಿತ್ತು .
ಅದು ೧೯೯೦ ರ ಬೇಂದ್ರೆ ದಿನಾಚರಣೆ  . ನಮ್ಮ ಸಂಘದ  ಮುಖ್ಯಸ್ಥರಾಗಿದ್ದ ಡಾ . ಪಾರ್ಶ್ವನಾಥ ಸಾರರ ಮೇರೆಗೆ ಆ  ಸಲ ನಾಡೋಜ ಕವಿ ಚೆನ್ನವೀರ ಕಣವಿಯವರನ್ನು ಮುಖ್ಯ ಅತಿಥಿಯಾಗಿ ಕರೆಯಬೇಕೆಂದು ನಿರ್ಧಾರವಾಗಿತ್ತು .
ನನ್ನ ಸೌಭಾಗ್ಯವೋ ಏನೊ ನನಗೆ ಆ ಜವಾಬ್ಧಾರಿಯನ್ನು ಒಪ್ಪಿಸಲಾಗಿತ್ತು . ನಾನು ಅವರನ್ನು ಪ್ರತ್ಯಕ್ಷವಾಗಿ ನೋಡಿರಲಿಲ್ಲ . ಅವರ ಪದ್ಯಗಳನ್ನು ಪಠ್ಯ ಪುಸ್ತಕದಲ್ಲಿ ಓದಿದ್ದೆ. ಧಾರವಾಡದಲ್ಲಿ  ಇದ್ದಾಗ ಬೇಂದ್ರೆಯವರ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತಾದರೂ ಕಣವಿಯವರನ್ನು ಕಾಣುವ ಸಂದರ್ಭ ಒದಗಿ ಬಂದಿರಲಿಲ್ಲ.
ಒಂದು ಸಂಜೆ ನಾನು ಮತ್ತು ನನ್ನ ಗೆಳೆಯ ಸೇರಿ ಧಾರವಾಡಕ್ಕೆ ಪಯಣ ಬೆಳೆಸಿದೆವು. ಆಗಿನ ಸಮಯದಲ್ಲಿ ಈಗಿನಂತೆ ಮೊಬೈಲ್ ಫೋನಗಳು ಮತ್ತು ಅಂತರ್ಜಾಲದ ಅನುಕೂಲತೆಯೂ ಇರಲಿಲ್ಲ . ಅವರು ಧಾರವಾಡ ವಿಶ್ವ ವಿದ್ಯಾಲಯದ ನೌಕರರ ಕ್ವಾರ್ಟರ್ಸ್ ನಲ್ಲಿ ಇರುತ್ತಾರೆಂದು ಗೊತ್ತಿತ್ತು . ಮನೆಯ ನಂಬರನ್ನು ನಮ್ಮ ಸಾರರಿಂದ ಪಡೆದುಕೊಂಡಿದ್ದೆವು . ಸಂಜೆ ೭ ಘಂಟೆಯ ಸುಮಾರಿಗೆ ಸಿಟಿ ಬಸ್ಸ ಹಿಡಿದು ವಿಶ್ವವಿದ್ಯಾಲಯವನ್ನು ತಲುಪಿದ್ದೆವು . ಬಸ್ಸಿನಿಂದ ಕೆಳಗಿಳಿದ ಮೇಲೆ ಎಲ್ಲಿಹೋಗಬೇಕೆಂದು ಗೊತ್ತಾಗದೆ ಯಾರನ್ನಾದರೂ ಕೇಳಿದರಾಯಿತು ಎಂದು ಕಾಯುತ್ತಿದ್ದೆವು. ಅಷ್ಟರಲ್ಲಿಯೇ ನಮ್ಮ  ಹಿಂದೆಯೇ ಇನ್ನೊಬ್ಬರು ಬಸ್ಸಿನಿಂದ  ಇಳಿದರು  . ನೆಹರು ಶರ್ಟ್ ಮತ್ತು ಪಾಯಜಾಮ್ ಹಾಕಿದ್ದರು ತಲೆಯ ಮೇಲೆ ಒಂದು ಟೋಪಿ ಇತ್ತು ಮತ್ತು ಕೈಯಲ್ಲಿ  ಒಂದು ಕಾಯಿಪಲ್ಲೆ ತುಂಬಿದ ಚೀಲವಿತ್ತು . ನಾವು ಹೋಗಿ ಅವರನ್ನು ಕೇಳಿದೆವು - 'ಕಣವಿ ಸರ್ರರ್ ಮನೆಗೆ ಹೋಗಬೇಕು , ದಾರಿಯನ್ನು ಹುಡುಕುತ್ತಿದ್ದೇವೆ ನಿಮಗೇನಾದರೂ ಗೊತ್ತೇನು' ಎಂದು . ನಮ್ಮನ್ನೊಮ್ಮೆ ನೋಡಿ ಅವರೆಂದರು   ' ನಾನು ಅಲ್ಲಿಯೇ ಹೊರಟಿದ್ದೇನೆ ನೀವೂ ನನ್ನ ಜೊತೆಗೆ ಬರಬಹುದು ಎಂದು. ಅವರನ್ನೇ ಹಿಂಬಾಲಿಸಿದೆವು 
ಅವರ ಮನೆಯನ್ನು ಮುಟ್ಟಿದ್ದಾಗ ನಮಗೆ  ಗೊತ್ತಾಯಿತು ಅವರೇ ಕಣವಿಯವರೆಂದು . ನಾವೇನೋ ತಪ್ಪು ಮಾಡಿದೆವು ಎಂದು ಅನಿಸಿತ್ತು. 'ನಿಮ್ಮನ್ನು ಗೊತ್ತು ಹಿಡಿಯಲು  ಆಗಲಿಲ್ಲವೆಂದು ' ಕ್ಷಮೆಯಾಚಿಸಿದ್ದೆವು .ನಾವು ಬೆಪ್ಪಾಗಿರುವದನ್ನು ಕಂಡು ಅವರೇ ಮಾತನಾಡಿದರು . 'ಪರವಾಗಿಲ್ಲ ಬಿಡ್ರಪ್ಪಾ ! ಎಲ್ಲರೂ ಗೊತ್ತು ಹಿಡಿಯುವದಕ್ಕೆ ನಾನೇನು ಫಿಲ್ಮ್ ನಟನೇನೂ ' ಅಂತ ಎಂದಿದ್ದರು . ಬಂದ ವಿಷಯವನ್ನು ಹೇಳಿದೆವು . ಅವರು ತುಂಬು ಹೃದಯದಿಂದ ಒಪ್ಪಿಕೊಂಡಿದ್ದರು. ಅಷ್ಟರಲ್ಲಿಯೇ ಅವರ ಪತ್ನಿಯವರು ಗರಂ ಚಹಾ ತಂದು ಇಟ್ಟಿದ್ದರು. ಚಹಾ  ಕುಡಿದು ಮನೆಯನ್ನು ಬಿಟ್ಟಿದ್ದೆವು . ಅವರ ಸರಳ ಜೀವನದ ಶೈಲಿಯನ್ನು ಕಂಡು ನಾನು ದಂಗಾಗಿದ್ದೆ.
೧೫ ದಿನಗಳ ನಂತರ ಅವರನ್ನು ಕಾರ್ಯಕ್ರಮಕ್ಕೆ ಕರೆ ತರಲು ಕಾರು ತೆಗೆದುಕೊಂಡು ಹೋಗಿದ್ದೆವು. ಕಾರನ್ನು  ಕಂಡು ಅವರೆಂದಿದ್ದರು ' ಇದಕ್ಕ್ಯಾಕ ಇಷ್ಟು ಖರ್ಚು  ಮಾಡಿದ್ರಿ , ಅರ್ಧ ಘಂಟೆಗೊಂದ  ಸಿಟಿ ಬಸ್ಸ ಅದಾವ ಬಸ್ಸಿನಾಗ ಹೋಗಬಹುದಿತ್ತಲ್ಲ?' ಎಂದು . ಆ ಮಾತುಗಳು ಅವರ ಸರಳ ಜೀವನಕ್ಕೆ ಇನ್ನೊಂದು ಸಾಕ್ಷಿಯಾಗಿದ್ದವು . ಅರ್ಧ ಘಂಟೆಯ ಕಾರು ಪಯಣದಲ್ಲಿ ನಮ್ಮ ಜೊತೆಗೆ ಎಷ್ಟೊಂದು ಸಲೀಸಾಗಿ  ಮಾತನಾಡಿದ್ದರು . ಅವರಿಗೆ  ತಾವೊಬ್ಬ ದೊಡ್ಡ ಕವಿ ಎಂಬ ಅಹಂಕಾರ ಸ್ವಲ್ಪವೂ ಇರಲಿಲ್ಲ . 
ಕೆಎಂಸಿ ಯ ಕನ್ನಡ ಸಂಘದ ಬಗ್ಗೆ ಮತ್ತು ಬೇಂದ್ರೆಯವರ ದಿನಾಚರಣೆ ಬಗ್ಗೆ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದರು. ಬೇಂದ್ರೆಯವರ ಬಗ್ಗೆ ಅವರಿಗೆ ತುಂಬಾ ಗೌರವವಿತ್ತು . ಅವರ  ಬಗ್ಗೆ  ಮನಸು ಬಿಚ್ಚಿ ಮಾತನಾಡಿದ್ದರು ಕಾರ್ಯಕ್ರಮದಲ್ಲಿ . 
ಅಂಥ ಸರಳ ಮತ್ತು ಶಿಸ್ತಿನ ಕವಿ ಜೀವಿಯ ಜೊತೆಗಿನ ನನ್ನ ಸಣ್ಣ ಭೇಟಿ ಮತ್ತು ಅರ್ಧಘಂಟೆಯ ಕಾರು ಪಯಣ ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯೊಲ್ಲೊಂದು . ಇಲ್ಲಿ ಅದನ್ನು ನೆನಪಿಸಿಕೊಳ್ಳಲು ಹೆಮ್ಮೆ ಎನಿಸುತ್ತಿದೆ.

~ ಶಿವ ಮೇಟಿ

ಒಲವೇ ಜೀವನ ಸಾಕ್ಷಾತ್ಕಾರ 💕

ನಲುಮೆಯ ಓದುಗರಿಗೆಲ್ಲ ವ್ಯಾಲಂಟೈನ್ಸ್ ಡೇ ಯ ಶುಭಾಶಯಗಳು.

ತೊಂಬತ್ತರ  ದಶಕದಲ್ಲಿ ನಮ್ಮೂರ ವ್ಯಾಪಾರ ಮಳಿಗೆಯ ಸಂಕೀರ್ಣದಲ್ಲಿದ್ದ ಒಂದೇ ಒಂದು ಆರ್ಚಿಸ್ ಗ್ಯಾಲರಿಯಲ್ಲಿ ನಾನು ಮೊಟ್ಟಮೊದಲು ಈ ವ್ಯಾಲಂಟೈನ್ಸ್ ಡೇ ಯ ಹಾರ್ಟ್ ಶೇಪಿನ ಬಣ್ಣದ ಬಲೂನುಗಳನ್ನೂ, ಜೋಡಿ ಹೃದಯದ ಚಿತ್ರಗಳನ್ನೂ ಹಾಗೂ ಅರ್ಥಗರ್ಭಿತ ಮೆಸೇಜುಗಳನ್ನೂ ಹೊತ್ತ  ಸುಂದರ ಗ್ರೀಟಿಂಗ್ ಕಾರ್ಡುಗಳನ್ನು ನೋಡಿದ್ದು;ನೋಡಿ ಮನಸೋತಿದ್ದು. ಇವನ್ನೆಲ್ಲ ಕೊಡಲಾದರೂ, ಇಸಿದುಕೊಳ್ಳಲಾದರೂ ಒಬ್ಬ ಬಾಯ್ ಫ್ರೆಂಡ್ ಇರೇಬೇಕು ಅನ್ನಿಸಿಬಿಟ್ಟಿತ್ತು.

‘ಯಾರಿಂದಲೋ ಪ್ರೀತಿಸಲ್ಪಡುತ್ತಿದ್ದೇವೆ’ ಎನ್ನುವ ಭಾವವೇ ಮಧುರವಾದದ್ದು. ಆ ಭಾವ ನೀಡುವ ಭರವಸೆ, ಚೈತನ್ಯ, ಆತ್ಮತೃಪ್ತಿಗಳಿಗೆ ಸಾಟಿ ಬೇರಾವುದೂ ಇಲ್ಲ. ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ?’ ಕ್ರಿಸ್ತನ ಕರುಣೆ ಅರ್ಥವಾಗಲೂ ಪ್ರೀತಿ ಬೇಕೆನ್ನುತ್ತದೆ  ಕವಿವಾಣಿ.
  
ಒಟ್ಟಿನಲ್ಲಿ ‘ಒಂದು ಹೆಣ್ಣಿಗೊಂದು ಗಂಡು, ಹೇಗೋ ಏನೋ ಹೊಂದಿಕೊಂಡು, ಕಾಣದೊಂದ ಕನಸ ಕಂಡು, ಮಾತಿಗೊಲಿಯದಮೃತವುಂಡು ದು:ಖ ಹಗುರ ಎನುತಿರೆ ಪ್ರೇಮವೆನಲು ಹಾಸ್ಯವೇ?’ ಎನ್ನುವುದು ಅಕ್ಷರಶ: ಸತ್ಯ.

‘ ಮಿಡಿಯುವ ಮನಗಳು ಎರಡು; ಮಿಡಿತದ ರಾಗವು ಒಂದೇ..ತಪಿಸುವ ಹೃದಯಗಳೆರಡು ತಾಪದ ವೇಗವು ಒಂದೇ..’ ಆಕಾಶವಾಣಿಯ  ಅಭಿಲಾಷಾದಲ್ಲಿ ಈ ಗೀತೆ ಹರಿದು ಬರುತ್ತಿದ್ದರೆ ನಮ್ಮ ಎದೆಯಲ್ಲೂ ಎಂಥದೋ ಮಧುರ ಮಿಡಿತ, ಕಾಣದ ಒಲವಿಗಾಗಿ ತುಡಿತ..ಕಂಗಳಲ್ಲಿ ತೇಲುವ ಹಗಲುಗನಸು,ಹುಚ್ಚೆದ್ದು ಕುಣಿಯುವ ಹರೆಯದ ವಯಸು-ಮನಸು. ಪುಸ್ತಕಕ್ಕೊಂದು ಕಥೆ ಮಾಲಿಕೆಯಲ್ಲಿ ಹೊಂಬಿಸಿಲಿನ ನವಿರಾದ ಕಚಗುಳಿ ಹರಿಸಿದ್ದಾರೆ ಉಮಾ ವೆಂಕಟೇಶ್ ಅವರು.’ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ’ ಅಂತ ಹಲಬುವಂತೆ ಮಾಡಿದ್ದಾರೆ.

ತಮ್ಮ ವಿಶಿಷ್ಟವಾದ ಶೈಲಿಯಲ್ಲಿ ಚೀಸಿನ ಕಥೆಯೊಂದನ್ನು ನಿಮಗಾಗಿ ಉಣಿಸಬಂದಿದ್ದಾರೆ ರಾಂ ಅವರು.

ಬನ್ನಿ, ಅಕ್ಷರದ ಎಡೆ ರೆಡಿ ಇದೆ. ಉಂಡೂಟ ಹೇಗಿತ್ತು ಮರೆಯದೇ ಹೇಳಿ.
~ ಸಂಪಾದಕಿ

ಹುಚ್ಚೆಬ್ಬಿಸಿದ್ದ “ಹೊಂಬಿಸಿಲು”!

೬೦ - ೮೦ರ ದಶಕಗಳ ಮೈಸೂರಿನಲ್ಲಿ ಹುಟ್ಟಿ, ಬೆಳೆದು ವಿದ್ಯಾಭ್ಯಾಸ ಮಾಡಿದವರಿಗೆ ಮನೆಯಲ್ಲಿ ಕನ್ನಡದಲ್ಲಿ ಮಾತಾಡುವುದು, ಕನ್ನಡ ಪುಸ್ತಕ ಓದುವುದು ಸಹಜವಾಗಿತ್ತು. ಶಾಲೆಯಲ್ಲೂ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದ ನಮಗೆ, ಕನ್ನಡ ಜೀವನದ ಪ್ರಮುಖ ಅಂಗವೆನಿಸಿತ್ತು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ,ಶಾಲೆಯಲ್ಲಿ ಆಂಗ್ಲ ಭಾಷೆಯನ್ನು ಕಲಿಯುತ್ತಿದ್ದರೂ,ಅದು ಅನೇಕರ ಪಾಲಿಗೆ ಸ್ವಲ್ಪ ಕಬ್ಬಿಣದ ಕಡಲೆಯಾಗಿತ್ತು. ನಮ್ಮಲ್ಲಿ ಅನೇಕರು ಇಂಗ್ಲೀಷ್ ಕಲಿಯಲು ಪಡುತ್ತಿದ್ದ ಕಷ್ಟವನ್ನು ನೆನೆಸಿಕೊಂಡರೆ ನಮ್ಮ ಮೇಲೆ ಈ ಭಾಷೆಯನ್ನು ಹೇರಿದ ಬ್ರಿಟಿಷರ ಮೇಲೆ ಸಿಟ್ಟು ಬರುತ್ತದೆ. ನಮ್ಮ ಸಹಪಾಠಿಗಳಲ್ಲಿ ಅನೇಕರು, Could, Would, Should ಪದಗಳನ್ನು ಕುಲ್ಡ್, ವುಲ್ಡ್, ಶುಲ್ಡ್ ಎಂದು ಉಚ್ಛರಿಸಿ ಇಂಗ್ಲೀಷ್ ಟೀಚರುಗಳ ಕೈಯಲ್ಲಿ ತಿನ್ನುತ್ತಿದ್ದ ಬೈಗುಳವನ್ನು ಇಂದಿಗೂ ಮರೆತಿಲ್ಲ. ನನಗೆ ಕನ್ನಡ ಕಥೆಗಳನ್ನು ಓದುವ ವಾಡಿಕೆ ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಪ್ರಾರಂಭವಾಯಿತು. ಸುಮಾರು ೧೯೬೬ರ ಮಧ್ಯದಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ಕನ್ನಡದ ಅತ್ಯಂತ ಜನಪ್ರಿಯ ವಾರ ಪತ್ರಿಕೆ "ಸುಧಾ"ಳ ಆಗಮನದಿಂದ ಮನೆಮಂದಿಯೆಲ್ಲಾ ಅದಕ್ಕಾಗಿ ಜಗಳವಾಡುತ್ತಿದ್ದದ್ದು ಮರೆಯದು. ಪ್ರತಿ ಗುರುವಾರ ಸುಧಾ ಪತ್ರಿಕೆ ಬರುವ ಹೊತ್ತಿಗೆ ಮನೆಯ ಗೇಟ್ ಬಳಿ ನಿಂತು, ನಾ ಮುಂದು,ತಾ ಮುಂದು ಎನ್ನುತ್ತಾ ಪತ್ರಿಕೆಯನ್ನು ಗಬಕ್ಕನೆ ಎಳೆದುಕೊಂಡು,ಬಾಲವಿಹಾರದ ಕಥೆಗಳನ್ನು ಓದಿ ಆನಂದಿಸುತ್ತಿದ್ದ ಆ ದಿನಗಳನ್ನು ಮರೆಯಲು ಸಾಧ್ಯವೇ?ಹೈಸ್ಕೂಲ್ ಮೆಟ್ಟಿಲು ಹತ್ತಿದೊಡನೆ,ನನ್ನ ಓದುವ ಗೀಳು ಬಾಲವಿಹಾರದಿಂದ ಮುಂದುವರೆದು,ಕಾದಂಬರಿಗಳ ಕಡೆಗೆ ಹರಿಯಲಾರಂಭಿಸಿತ್ತು. ಕನ್ನಡದ ಜನಪ್ರಿಯ ಲೇಖಕಿ ಶ್ರೀಮತಿ. ಉಷಾ ನವರತ್ನರಾಂ ಹೆಸರನ್ನು ಕೇಳದ ಕನ್ನಡಿಗರಿಲ್ಲ ಎನ್ನುವುದು ನನ್ನ ಭಾವನೆ. ಉಷಾ ನವರತ್ನರಾಂ ಅವರ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದಾದ "ಹೊಂಬಿಸಿಲು" ೧೯೭೨ರಲ್ಲಿ, ವಾರದ ಕಾದಂಬರಿಯಾಗಿ ಕಂತುಗಳಲ್ಲಿ ಪ್ರಕಟವಾಗುತ್ತಿತ್ತು. ಆಗ ಹೈಸ್ಕೂಲಿನ ೮ನೆಯ ತರಗತಿಯಲ್ಲಿದ್ದ ನನಗೆ ಆ ಕಾದಂಬರಿಯ ಪ್ರಭಾವ ಎಳೆಯ ಹದಿಹರೆಯದ ಮನಗಳ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತು ಎನ್ನುವುದನ್ನು ಈಗ ಜ್ಞಾಪಿಸಿಕೊಂಡಾಗಲೆಲ್ಲ ಸ್ವಲ್ಪ ನಗುಬಂದರೂ,ಪ್ರತಿ ವಾರ ಕಾದಂಬರಿಯ ಕಂತನ್ನು ಓದುತ್ತಿದ್ದ ಹುಡುಗಿಯರು ಆ ದಿನ ಶಾಲೆಯಲ್ಲಿ ಕಥೆಯ ಬಗ್ಗೆ ನಡೆಸುತ್ತಿದ್ದ ಚರ್ಚೆ ನಿಜಕ್ಕೂ ಆಮೋಘವಾಗಿರುತ್ತಿತ್ತು. ಆ ಕಥೆಯ ಸನ್ನಿವೇಶಗಳು ನಮ್ಮ ಎಳೆಯ ಮನಗಳಲ್ಲಿ ಎಬ್ಬಿಸಿದ್ದ ಪ್ರಣಯ ಭಾವನೆಗಳ ಬಿರುಗಾಳಿ ಅದೆಷ್ಟು ಪರಿಣಾಮಕಾರಿ ಎನ್ನುವುದನ್ನು ಈಗಲೂ ನಾನು ನನ್ನ ಅಕ್ಕನ ಬಳಿ ಮಾತನಾಡುತ್ತಲೇ ಇರುತ್ತೇನೆ. ಕಥೆಯ ನಾಯಕಿ ಡಾ. ರೂಪಾ ಒಬ್ಬ ಸ್ವಾಭಿಮಾನಿ,ಪ್ರತಿಭಾಶಾಲಿ ವೈದ್ಯೆ. ಅವಳನ್ನು ತನ್ನ ನರ್ಸಿಂಗ್ ಹೋಮಿನಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದ ಮತ್ತೊಬ್ಬ ಮಹಿಳಾ ವೈದ್ಯೆಗೆ ಅವಳ ಮೇಲೆ ಇನ್ನಿಲ್ಲದ ವಿಶ್ವಾಸ ಮತ್ತು ನಂಬಿಕೆ. ನಾಯಕ ಡಾ. ನಟರಾಜ ಈ ಮಹಿಳಾ ವೈದ್ಯೆಯ ಸೋದರ ಸಂಬಂಧಿ. ಒಮ್ಮೆ ತಾನು ನಡೆಸುತ್ತಿದ್ದ ನರ್ಸಿಂಗ್ ಹೋಮಿನಲ್ಲಿ ಪ್ರಸೂತಿತಜ್ಞೆಯ ಅಗತ್ಯ ಬಿದ್ದಾಗ,ತನ್ನ ಚಿಕ್ಕಮ್ಮನನ್ನು ಹುಡುಕಿಕೊಂಡು ಬಂದ ಅವನಿಗೆ ಡಾ. ರೂಪಾಳ ಭೇಟಿ ಮತ್ತು ಪರಿಚಯವಾಗುತ್ತದೆ. ಮೊದಲೇ ಅವಳ ಬಗ್ಗೆ ಪ್ರಶಂಸೆಯ ಮಾತುಗಳನ್ನು ಕೇಳಿದ್ದ ಡಾ. ನಟರಾಜ ತನ್ನ ಮೊದಲ ಭೇಟಿಯಲ್ಲೇ ಡಾ. ರೂಪಾಳ ಸೌಂದರ್ಯ ಮತ್ತು ವ್ಯಕ್ತಿತ್ವಕ್ಕೆ ಮಾರುಹೋಗಿ ಅವಳನ್ನು ಮದುವೆಯಾಗುತ್ತಾನೆ. ಮಿಂಚಿನ ವೇಗದಲ್ಲಿ ನಡೆದುಹೋಗುವ ಈ ವಿವಾಹ ಸಂಬಂಧದಲ್ಲಿ, ತೀವ್ರವಾದ ಆಕರ್ಷಣೆಯಿದ್ದರೂ,ಇಬ್ಬರ ವ್ಯಕ್ತಿತ್ವಗಳ ಘರ್ಷಣೆಯಿಂದಾಗಿನಾಯಕ ನಾಯಕಿಯರ ನಡುವೆ ಉದ್ಭವವಾಗುವ ಭಿನ್ನಾಭಿಪ್ರಾಯ ಮತ್ತು ತಪ್ಪು ಕಲ್ಪನೆಗಳ ವಿಸ್ತಾರವೇ ಈ ಕಥೆಯ ಕಥಾವಸ್ತು. ೭೦ರ ದಶಕದ ಹದಿಹರಯದ ಮನಗಳಿಗೆ ಲೀಲಾಜಾಲವಾಗಿ ಲಗ್ಗೆಯಿಟ್ಟು ಕಥೆಯನ್ನು ಸುಲಭವಾಗಿ ಓದಿಸಿಕೊಂಡು ಹೋಗುವಲ್ಲಿ ಲೇಖಕಿ ಯಶಸ್ವಿಯಾಗಿದ್ದರು. ಕಡೆಯಲ್ಲಿ ನಾಯಕ-ನಾಯಕಿಯ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗಿ,ಅವರಿಬ್ಬರ ಸಮಾಗವಾಗುತ್ತದೆ ಎನ್ನುವಲ್ಲಿಗೆ ಸಮಾಪ್ತವಾಗುವ ಈ ಕಾದಂಬರಿ ಒಂದು ವಿಶಿಷ್ಟವಾದ ಪ್ರಣಯ ಕಥೆ. ಈ ಕಾದಂಬರಿಯ ಪರಿಣಾಮ ಎಳೆಯಮನಗಳಲ್ಲಿ ಎಂತಹ ತೀವ್ರವಾದ ಬಿರುಗಾಳಿಯನ್ನೆಬ್ಬಿಸಿತ್ತು ಎಂದರೆ ನನ್ನ ಶಾಲೆಯ ಗೆಳತಿಯರಲ್ಲಿ ಗುಂಪುಗಾರಿಕೆ ಶುರುವಾಗಿತ್ತು. ಕೆಲವರಂತೂ ತಾವೇ ಡಾ. ರೂಪಾ ಎನ್ನುವಂತೆ ವರ್ತಿಸಲಾರಂಭಿಸಿದ್ದರು. ನಮ್ಮಲ್ಲಿ ಅನೇಕ ಹುಡುಗಿಯರು,ವೈದ್ಯವೃತ್ತಿಯೇ ನಮ್ಮ ಮುಂದಿನ ಗುರಿ ಎಂದು ಪ್ರತಿಜ್ಞೆ ತೊಟ್ಟಿದ್ದೂ ಉಂಟು. ಕಾದಂಬರಿಯಲ್ಲಿ ಅವರು ಓದುತ್ತಿದ್ದ ಆಸ್ಪತ್ರೆ,ಅಲ್ಲಿನ ವಾತಾವರಣ,ಡಾಕ್ಟರ್ ಮತ್ತು ನರ್ಸುಗಳ ನಡುವಿನ ಪ್ರಣಯ ಸಂಬಂಧಗಳು ಹುಡುಗಿಯರ ಮನಗಳಲ್ಲಿ ನಿಜಕ್ಕೂ ವೈದ್ಯ ವೃತ್ತಿಯ ಬಗ್ಗೆ ಬಹಳ ಮಧುರವಾದ ಭಾವನೆಗಳನ್ನು ಕೆರಳಿಸಿದ್ದವು. ಈ ಕಥೆಯಲ್ಲಿ,ಆಸ್ಪತ್ರೆಯಲ್ಲಿ ಕಂಡುಬರುವ ನೋವು ಮತ್ತು ಸಾವುಗಳ ಸನ್ನಿವೇಶಗಳ ಬಗ್ಗೆ ಲೇಖಕಿ ಅಷ್ಟಾಗಿ ಬರೆಯದೆ, ಕೇವಲ ನಾಯಕ ನಾಯಕಿಯರ ವೈಯಕ್ತಿಕ ಸಂಬಂಧ ಮತ್ತು ಆಕರ್ಷಣೆಗಳ ಬಗ್ಗೆ ಬರೆದು,ಓದುಗರ ಚಿತ್ತವಿಕ್ಷೇಪಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೇನೆ ಇರಲಿ,ಶಾಲೆಯ ಹುಡುಗಿಯರ ವರ್ತನೆ ವಿನೋದಮಯವೆನಿಸಿದರೂ,ಖುಷಿಯಾಗುತ್ತಿತ್ತು. ಒಟ್ಟಿನಲ್ಲಿ ಪ್ರತಿ ಗುರುವಾರ ಕಥೆಯ ಬಗ್ಗೆ ದಾರಿಯುದ್ದಕ್ಕೂ ನಡೆಯುತ್ತಿದ್ದ ವಾಗ್ವಾದ ಪ್ರತಿವಾದಗಳು,ನಡಿಗೆಯ ದೂರವನ್ನು ಕಡಿಮೆ ಮಾಡಿದ್ದವೆಂದರೆ ಅಚ್ಚರಿಯಲ್ಲ. ಮನೆಯಲ್ಲಿ ಹಿರಿಯರ ಮುಂದೆ, ಕಥೆಯಲ್ಲಿ ಬರುವ ಪಾತ್ರಗಳ ಪ್ರಣಯ ವ್ಯವಹಾರಗಳನ್ನು ಚರ್ಚಿಸಲು ಒಪ್ಪಿಗೆಯಿರಲಿಲ್ಲ. ಹಾಗಾಗಿ ಶಾಲೆಗೆ ನಡೆದು ಹೋಗುವ ಸಮಯ ನಮ್ಮ ಪಾಲಿಗೆ ಬಹಳ ಅಮೂಲ್ಯವಾಗಿತ್ತು. ಅನೇಕ ವಾರಗಳು ಪ್ರಕಟವಾದ ಈ ಕಥೆಯಲ್ಲಿ ಕಡೆಗೊಮ್ಮೆ ನಾಯಕ-ನಾಯಕಿಯರ ಸಮಾಗಮವಾದಾಗ,ಹುಡುಗಿಯರ ಮನಗಳು ಸಮಾಧಾನಗೊಂಡು ನಿಟ್ಟುಸಿರು ಬಿಟ್ಟಿದ್ದೆವು. ಈ ಕಾದಂಬರಿ ನಿಜಕ್ಕೂ ನನ್ನ ಮಟ್ಟಿಗೆ ಅನೇಕರಲ್ಲಿ ಕನ್ನಡ ಪುಸ್ತಕ ಓದುವ ಗೀಳನ್ನು ಹುಟ್ಟುಹಾಕಿತ್ತು ಎಂದರೆ ಸುಳ್ಳಲ್ಲ. ಮುಂದೆ ೧೯೭೭ರಲ್ಲಿ ಈ ಕಾದಂಬರಿಯನ್ನು, ಜನಪ್ರಿಯ ನಟಿ ಆರತಿ ಮತ್ತು ನಟ ವಿಷ್ಣುವರ್ಧನ್ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿ ಚಲನಚಿತ್ರವಾದಾಗ,ಕಾಲೇಜಿನ ಹುಡುಗ ಹುಡುಗಿಯರು,ಸಿನಿಮಾ ಥಿಯೇಟರುಗಳಿಗೆ ಮುಗಿಬಿದ್ದಿದ್ದನ್ನು ನೆನೆಸಿಕೊಂಡಾಗ,ಟಿವಿ ಇಲ್ಲದ ಆ ದಿನಗಳಲ್ಲಿ,ಚಲನಚಿತ್ರ ಅದೆಷ್ಟು ಪ್ರಭಾವಶಾಲಿಯಾಗಿತ್ತು ಎನ್ನುವುದು ಅರಿವಾಗುತ್ತದೆ. ಮಹಾರಾಣಿ ಕಾಲೇಜಿನ ಹುಡುಗಿಯ ಹೇರ್ ಸ್ಟೈಲ್,ಮಹಾರಾಜಾ ಕಾಲೇಜ್,ಮೈಸೂರ್ ಮೆಡಿಕಲ್ ಕಾಲೇಜ್ ಹುಡುಗರು,ನಟ ವಿಷ್ಣುವರ್ಧನನಂತೆಯೇ ಕಣ್ಣಿಗೆ ದೊಡ್ಡ ಫ಼್ರೇಮಿನ,ಪ್ಲೇನ್ ಗ್ಲಾಸ್ ಧರಿಸಿ ಹುಡುಗಿಯರಿಗೆ ಲೈನ್ ಹೊಡೆಯುತ್ತಿದ್ದದ್ದು ಆ ದಿನಗಳ ಸುಂದರ ನೆನಪುಗಳು. ಮುಂದೆ ಉಷಾ ನವರತ್ನರಾಂ ರಚಿಸಿದ್ದ ಅನೇಕ ಪ್ರಣಯ ಕಾದಂಬರಿಗಳು ಪ್ರಕಟವಾಗಿ ನಾವೆಲ್ಲಾ ಅದನ್ನು ಓದಿದ್ದರೂ, "ಹೊಂಬಿಸಿಲು" ಪುಸ್ತಕ,೭೨-೭೩ರಲ್ಲಿ ಹದಿಹರೆಯದ ಮನಗಳನ್ನು ಅಪಹರಿಸಿದ ವಿಷಯ ಈ ಲೇಖನಕ್ಕೆ ಸ್ಫೂರ್ತಿ. ಕಾಲೇಜಿನ ದಿನಗಳಲ್ಲಿ ಕನ್ನಡದಲ್ಲಿ ಪ್ರಕಟವಾಗುತ್ತಿದ್ದ ಅನೇಕ ಜನಪ್ರಿಯ ಕಾದಂಬರಿಕಾರರ ಹೆಸರುಗಳನ್ನು ಪಟ್ಟಿಮಾಡುತ್ತಾ ಹೋದರೆ ನಾನು ಹಲವು ಹತ್ತು ಲೇಖನಗಳನ್ನು ಬರೆಯಬಹುದೇನೋ! ಬಹುಶಃ,೬೦-೮೦ರ ದಶಕಗಳಲ್ಲಿ ಕನ್ನಡ ಕಾದಂಬರಿಲೋಕ ಒಂದು ರೀತಿಯ ಸುವರ್ಣಯುಗದಲ್ಲಿತ್ತು. ಒಮ್ಮೆ ಹತ್ತಿದ್ದ ಕನ್ನಡ ಕಾದಂಬರಿಗಳ ಗೀಳು ಪ್ರತಿ ಬೇಸಿಗೆಯಲ್ಲೂ,ಪ್ರತಿ ಮೊಹಲ್ಲಾಗಳಲ್ಲೂ ಇರುತ್ತಿದ್ದ ಸರ್ಕ್ಯುಲೇಟಿಂಗ್ ಲೈಬ್ರರಿಗಳಲ್ಲಿ ದೊರೆಯುತ್ತಿದ್ದ ಕಾದಂಬರಿಗಳನ್ನು ದಿನಕ್ಕೊಂದರಂತೆ ಓದಿ ಮುಗಿಸುವಷ್ಟರ ಮಟ್ಟಿಗೆ ನನಗೆ ಹುಚ್ಚುಹಿಡಿಸಿತ್ತು. ಕ್ರಮೇಣ ನನ್ನ ಮನ ನಿಧಾನವಾಗಿ,ಉಷಾ ನವರತ್ನರಾಂ ಪುಸ್ತಕಗಳಿಂದ ಸರಿದು ಯು.ಆರ್.ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ತ.ರಾ.ಸು, ತ್ರಿವೇಣಿ, ಎಂ.ಕೆ.ಇಂದಿರಾ, ಆ.ನ.ಕೃ ಅವರಂತಹ ಪ್ರಬುದ್ಧ ಲೇಖಕರ ಅತ್ಯದ್ಭುತ ಪುಸ್ತಕಗಳ ಸೊಗಡನ್ನು ಆಸ್ವಾದಿಸಲು ಪ್ರಾರಂಭಿಸಿತು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಓದುವ ಗೀಳಿದ್ದರೆ ಅವರ ಮನಸ್ಸನ್ನು ತಟ್ಟುವ ಒಂದು ಪುಸ್ತಕವಿದ್ದೇ ಇರುತ್ತದೆ. ನನ್ನ ತಾಯಿಗೆ ಕನ್ನಡ ಕಾದಂಬರಿಗಳನ್ನು ಓದುವ ಹುಚ್ಚಿತ್ತು. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ, ಕನ್ನಡಪ್ರಭ ಪತ್ರಿಕೆಯಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ, ಎಸ್.ಎಲ್.ಭೈರಪ್ಪ ಅವರ ಗೃಹಭಂಗ ಕಥೆಯನ್ನು ಪ್ರತಿ ದಿನ ಸಂಜೆ ಪಕ್ಕದ ಮನೆಯ ಮಹಿಳೆಯರೊಂದಿಗೆ ಚರ್ಚಿಸುತ್ತಿದ್ದದ್ದು ನೆನಪಿದೆ. ನಮಗೆ ಆ ಕಥೆಯನ್ನು ಓದಿ ಅರ್ಥಮಾಡಿಕೊಳ್ಳುವ ವಯಸ್ಸಾಗಿರಲಿಲ್ಲ. ಆದರೂ, ನಮ್ಮ ತಾಯಿಯ ಬಾಯಲ್ಲಿ ಆ ಕಥೆಯ ವಿಶ್ಲೇಷಣೆಯನ್ನು ಕೇಳುತ್ತಿದ್ದಾಗ, ಪುಸ್ತಗಳ ಬಗ್ಗೆ ಒಂದು ರೀತಿಯ ಒಲವು ಮೂಡಿತ್ತು. ನನ್ನ ತಾಯಿಯ ಅಕ್ಕ, ಒಬ್ಬ ಉತ್ಸಾಹಭರಿತ ಓದುಗರಾಗಿದ್ದರು. ಅವರ ಮನೆಗೆ ಹೋದರೆ, ಅಲ್ಲಿ ಪುಸ್ತಕಗಳ ದೊಡ್ಡ ಸಂಗ್ರಹವೇ ಇರುತ್ತಿತ್ತು. ಒಮ್ಮೆ ನಮ್ಮ ಕಸಿನ್ ಗಳ ಮುಖ ನೋಡಿ ಹಲೋ ಹೇಳಿದನಂತರ, ನಾನು ನನ್ನ ಅಕ್ಕ, ಆ ಪುಸ್ತಕಗಳಲ್ಲಿ ಒಂದನ್ನು ಕೈಯಲ್ಲಿ ಹಿಡಿದು ಕುಳಿತೆವೆಂದರೆ, ಕಡೆಯಲ್ಲಿ ನಮ್ಮ ತಾಯಿ ಮನೆಗೆ ವಾಪಸ್ ಹೋಗುವಾಗಲೇ ನಮಗೆ ಎಚ್ಚರವಾಗುತ್ತಿದ್ದದ್ದು. ನನ್ನ ಕಸಿನ್ನುಗಳು, "ಈ ಉಮಾ ಮತ್ತು ಲಕ್ಷ್ಮಿ ನಮ್ಮ ಮನೆಗೆ ಬಂದ್ರೆ, ಬರೀ ಪುಸ್ತಕದೊಳಗೆ ಮುಖ ಇಟ್ಕೋಂಡು ಕೂತೀರ್ತಾರೆ ಚಿಕ್ಕಮ್ಮ" ಎಂದು ನಮ್ಮ ತಾಯಿಯ ಹತ್ತಿರ ದೂರುತ್ತಿದ್ದರು. ನನಗಂತೂ, ತ.ರಾ.ಸು ಅವರ ಮೂರು ಭಾಗದಲ್ಲಿ ಪ್ರಕಟವಾಗಿದ್ದ, ಸರ್ಪಮತ್ಸರ, ಎರಡು ಹೆಣ್ಣು ಒಂದು ಗಂಡು ಮತ್ತು ನಾಗರಹಾವು ಕಾದಂಬರಿಗಳನ್ನು, ಅವರ ಮನೆಯ ರೂಮಿನಲ್ಲಿ ಕುಳಿತು ಓದಿದ್ದು ನನ್ನ ಕಾಲೇಜಿನ ದಿನಗಳ ಸವಿನೆನಪುಗಳಲ್ಲಿ ಒಂದು. ನಾನು ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಬಳ್ಳಾರಿಯಲ್ಲಿ, ನಮ್ಮ ಮನೆಯಲ್ಲಿದ್ದ ; ಕವಿ ಕುವೆಂಪು ಸಂಪಾದಕೀಯದ ಸಂಪೂರ್ಣ ರಾಮಾಯಣದ ಪುಸ್ತಕವನ್ನು ನನ್ನ ಅಜ್ಜಿಗೆ ಓದಿ ಹೇಳಿದ್ದ ನೆನಪು ಹಸಿರಾಗಿದೆ. ಅಯೋಧ್ಯಾ-ಕಾಂಡದಲ್ಲಿ, ಕೈಕೇಯಿ, ದಶರಥನನ್ನು ರಾಮನ ಅರಣ್ಯವಾಸಕ್ಕೆ ಪೀಡಿಸುತ್ತಿದ್ದ ಭಾಗವನ್ನು ಓದುತ್ತಿದ್ದಾಗ, ಬಹಳ ಭಾವುಕಳಾಗಿ - "ಅಜ್ಜಿ ಈ ಕೈಕೇಯಿಗೆ ದಶರಥ ನಾಲ್ಕು ಬಾರಿಸಿ ಸುಮ್ಮನಿರಸಲು ಸಾಧ್ಯವಾಗಲಿಲ್ಲವೇ" ಎಂದು ಕೇಳಿದ್ದೆ. ಅದನ್ನು ಕೇಳಿ ನನ್ನ ತಾಯಿ ಮತ್ತು ಅಜ್ಜಿ ನಕ್ಕಿದ್ದರು. ಇಂದು ಮಕ್ಕಳು ಅದೇ ವಯಸ್ಸಿನಲ್ಲಿ, ಹ್ಯಾರಿ ಪಾಟರ್ ಪುಸ್ತಕವನ್ನು ಓದಿ ಮುಗಿಸಿರುತ್ತಾರೆ. ಅವರಿಗೆ ಕನ್ನಡದಲ್ಲಿ ಸಂಪೂರ್ಣ ರಾಮಾಯಣ ಓದುವ ಅವಕಾಶ ಸಿಗುವುದು ಅಪರೂಪ. ಮೊಮ್ಮಕ್ಕಳ ಕೈಯಲ್ಲಿ ರಾಮಾಯಣ ಮಹಾಭಾರತದ ಕಥೆಯನ್ನು ಓದಿಸಿ ಕೇಳುವ ಅಜ್ಜ-ಅಜ್ಜಿಯರೂ ಕಾಣಸಿಗುವುದು ಕಡಿಮೆ. ಟಿ.ವಿ ಮತ್ತು ಇಂಟರ್-ನೆಟ್, ನೆಟ್-ಫ಼್ಲಿಕ್ಸ್ ಸ್ಟ್ರೀಮಿಂಗ್ ಹಾವಳಿಯಲ್ಲಿ ಆ ಸಂಸ್ಕೃತಿ ಮರೆಯಾಗಿದೆಯೇನೋ!. ಈಗಲೂ ಪುಸ್ತಕ ಮನುಷ್ಯನ ಅತ್ಯಂತ ಸ್ನೇಹಮಯಿ ಒಡನಾಡಿ. ಪುಸ್ತಕಗಳ ಪ್ರಭಾವ ಮಾನವನ ಮನಸ್ಸಿನ ಬೆಳವಣಿಗೆಯಲ್ಲಿ ಅತ್ಯಂತ ಪ್ರಭಾವಶಾಲಿ ಪಾತ್ರವಹಿಸುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. "ಅಯ್ಯೋ ನೀನೇನು ಪುಸ್ತಕದ ಹುಳು" ಎನ್ನುವ ಅಪಹಾಸ್ಯದ ಮಾತನ್ನು ನಾವೆಲ್ಲಾ ಬಳಸುತ್ತಿದ್ದರೂ, ಪುಸ್ತಕದಂತಹ ವಸ್ತುವನ್ನು ಮಾನವ ಸೃಷ್ಟಿಸಿ ತನ್ನ ಏಕಾಂಗಿತನವನ್ನು ಮರೆಸುವಲ್ಲಿ ಬಹಳಷ್ಟು ಮಟ್ಟಿಗೆ ಯಶಸ್ವಿಯಾಗಿದ್ದಾನೆ ಅನ್ನಬಹುದೇನೋ! 

~ ಡಾ ಉಮಾ ವೆಂಕಟೇಶ್

ಹೀಗೊಂದು ಚೀಸೀ ಕಥೆ

ಸೋಮಣ್ಣನಿಗೆ ಊರ ಹತ್ತಿರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದಾಗ ತುಂಬಾ ಖುಷಿ ಆಗಿತ್ತು. ಆದರೂ ಹೊಸ ಜಾಗಕ್ಕೆ ಹೋಗುವುದು, ಹೇಗೆ ಇರ್ತದೇನೋ ಅಂತನೂ ಸ್ವಲ್ಪ ಟೆನ್ಷನ್ ಇತ್ತು. ಅಪ್ಪ, “ಆಚೆ ಮನೆ ಮಾಧವನ ಮಗ ಪ್ರಸಾದ ಅಲ್ಲಿಯೇ ಓದಿದ್ದಲ್ವಾ, ಅವನಿಗೆ ಗುರ್ತದವರು ಇರ್ತಾರೆ ನೀನೆಂತಕೆ ಚಿಂತೆ ಮಾಡ್ತಿ” ಅಂತ ಸಮಾಧಾನ ಮಾಡಿದ್ರು. ಮಾಧವ ಮಾಮ, “ಪ್ರಸಾದನ ಗೆಳೆಯ ಅವಿನಾಶ ಇದ್ದಾನೆ. ಒಳ್ಳೆ ಹುಡುಗ, ಭಾರಿ ಹುಷಾರಿ. ಎಂತ ಚಟ ಕೂಡ ಇಲ್ಲ, ನಮ್ಮ ಪ್ರಸಾದನ ಹಾಗೆಯೇ. ನಾನು ಚೀಟಿ ಕೊಡ್ತೇನೆ, ಹೋಗಿ ಸಿಕ್ಕಿ” ಅಂತ ಅಭಯ ತೋರಿದ್ರು. ಸೋಮಣ್ಣನಿಗೂ ಮನಸ್ಸು ನಿರುಮ್ಮಳವಾಯ್ತು. ಅವಿನಾಶ ಒಳ್ಳೆಯವನೇ, ಸ್ವಲ್ಪ ಪಿರ್ಕಿ ಅಂತ ಕೆಲವರು ಹೇಳಿದ್ರೂ, ಸೋಮಣ್ಣನಿಗೆ ಹೊಂದಿಕೊಳ್ಳಲಿಕ್ಕೇನೂ ತೊಂದರೆ ಆಗಲಿಲ್ಲ. “ಒಳ್ಳೇ ಓದಬೇಕು, ರೇಂಕು ತೆಗ್ದರೆ ಲಾಯಕ್ಕು ಕೆಲಸ ಸಿಗ್ತದೆ” ಎಂದು ಬ್ರಹ್ಮೋಪದೇಶ ಮಾಡಿದ. 
ಅವಿನಾಶನ ಕ್ಲಾಸಲ್ಲಿ ಅನನ್ಯ ಎಂಬ ಚಂದದ ಹುಡುಗಿ ಇದ್ದಳು. ಒಳ್ಳೆ ಲಕ್ಷಣವಾಗಿ, ತಿರುಗಿ ನೋಡುವ ಹಾಗೆ ಇದ್ದಳು. ಸುಮಾರು  ಹುಡುಗರು ಅವಳ ಹಿಂದೆ ಬಿದ್ದಿದ್ರೂ, ಅವಳು ತಾನಾಯ್ತು, ಓದಾಯ್ತು ಅಂತ ಇದ್ದಳು. ಅವಳಿಗೂ ಅವಿನಾಶನಿಗೂ ಕ್ಲಾಸಿನಲ್ಲಿ ಸ್ಪರ್ಧೆ. ಇಬ್ಬರೂ ಜೊತೆಯಲ್ಲೇ ಕೆಲವೊಮ್ಮೆ ಓದುವುದೂ  ಇತ್ತು. ಪ್ರಾಜೆಕ್ಟ್ ಕೆಲಸನೂ ಒಂದೊಂದ್ಸಲ ಒಟ್ಟಿಗೇ  ಇರುತ್ತಿತ್ತು. ಕೆಲವರು “ಓ, ಇವರು ಲವರ್ಸ್ ಮಾರಾಯ” ಎಂದರೆ, ಅವಿನಾಶ ಸಿಡುಕುತ್ತಿದ್ದ. ಸೋಮಣ್ಣನೇ, “ಎಂತ ಅವಿನಾಶಣ್ಣ, ನಿಮ್ಮದು ಎಂತಾದ್ರೂ ಇದೆಯಾ” ಎಂದು ಜೋಕ್ ಮಾಡಿದ್ರೆ; “ಎಂತ ಸಾವು ನಿಂದು, ಬ್ಯಾವರ್ಸಿ! ಅವಳದ್ದು ಬೆಳಗಾಂ, ನನಗೆ ಊರಿನ ಹುಡುಗಿ ಬೇಕು ಮಾರಾಯ. ಅವರಿಗೆಲ್ಲ ಅಮ್ಮನ ಹಾಗೆ ಬಂಗುಡೆ ಫ್ರೈ ಗಮ್ಮತ್ತಾಗಿ ಮಾಡ್ಲಿಕ್ಕೆ ಬರ್ತದಾ? ನನಗೆ ಮತ್ತೆ ಈ ಲವ್ವು-ಗಿವ್ವು ಇದೆಲ್ಲ ನಂಬಿಕೆ ಇಲ್ಲ. ಸುಮ್ಮನೆ ಕೂತುಕೋ” ಎಂದು ಗರಂ ಆಗಿದ್ದ. ಇಂಥ ಸಂದರ್ಭಗಳಲ್ಲಿ ಮತ್ತೆ ಸೋಮಣ್ಣನೇ ಅವನನ್ನು ನಾಯ್ಕರ ಹೋಟೆಲ್ಲಿನಲ್ಲಿ ಮೀನೂಟಕ್ಕೋ, ಬೀಚಿನ ಹತ್ತಿರ ಇದ್ದ ಭಟ್ರ ಕೇಂಟೀನಿನಲ್ಲಿ ಬಿಸ್ಕುಟಂಬಡೆ-ಚಾ ಕುಡಿಲಿಕ್ಕೋ ಕರಕೊಂಡು ಹೋಗಿ ಸಮಾಧಾನ ಮಾಡುತ್ತಿದ್ದ. 
ವರ್ಷ ಕಳೆಯುವುದರಲ್ಲಿ ಸೋಮಣ್ಣ ಕಾಲೇಜಿಗೆ ಹೊಂದಿಕೊಂಡಿದ್ದ. ಅವನದ್ದೇ ಗೆಳೆಯರ ಗುಂಪು ಇತ್ತು. ಅವಿನಾಶ, ಸೋಮಣ್ಣ ಹಾಸ್ಟೆಲ್ಲಿನ ಒಂದೇ ಮಜಲಿನಲ್ಲಿದ್ದಿದ್ದರಿಂದ, ದಿನವೂ ಸಿಗುತ್ತಿದ್ದರು. ಸೋಮಣ್ಣನಿಗೆ ಅವನ ಕ್ಲಾಸಿನ ರೇಖಾ ಎಂಬ ಹುಡುಗಿಯ ಪರಿಚಯ ಜೋರಾಗಿತ್ತು. ಇವರಿಬ್ಬರ ಇಷ್ಟಾಶಿಷ್ಟಗಳ ಮೇಳಾ-ಮೇಳಿ ಹೇಳಿ ಮಾಡಿಸಿದ ಹಾಗಿತ್ತು. ಕಾಲೇಜಿನ ಕೆಮ್ಮಣ್ಣಿನ ಕಾಲ್ದಾರಿಗಳು ಇವರಿಗೆ ಕೆಂಪು ಹಾಸಿನ ಹಾಗೆ ಕಾಣುತ್ತಿದ್ದವು. ದಾರಿಯುದ್ದಕ್ಕೂ ನೆಟ್ಟ ಗುಲ್ಮೊಹರ್ ಮರಗಳು ಇವರ ಪ್ರೇಮಕ್ಕೆ ಆಸರೆಯಾಗಿ ಹೂ ಮಳೆಗರಿಯುತ್ತಿದ್ದವು. ಅವಿನಾಶನಿಗೂ ಸೋಮಣ್ಣನ ಪ್ರೇಮ ಸಲ್ಲಾಪದ ಘಮಲು ತಲುಪಿತು. “ಎಂತ ಮಾರಾಯ, ನೀನು ಇಲ್ಲಿ ಓದಲಿಕ್ಕೆ ಬಂದಿದ್ದೀಯೋ, ಲವ್ ಮಾಡಲಿಕ್ಕೋ? ಈ ಹುಡುಗಿಯರ ಪಾಶಕ್ಕೆ ಬಿದ್ದು ಹಾಳಾಗ್ತಿಯ ಅಷ್ಟೇ. ಎಲ್ಲ ಬಿಟ್ಟು ಬಿಡು” ಎಂದು ಉಪದೇಶ ಮಾಡಿದ್ದ. ಸೋಮಣ್ಣ ಸುಮ್ಮನೆ ಗೋಣು ಹಾಕಿ, ಕೇಳಿದ್ದನ್ನೆಲ್ಲ ಇನ್ನೊಂದು ಕಿವಿಯಿಂದ ಬಿಟ್ಟು ಸುಮ್ಮನಾದ. ಅವಿನಾಶ ಸುಮ್ಮನೆ ಇರಲಿಲ್ಲ. ರಕ್ಷಾಬಂಧನದ ದಿನ ಸೋಮಣ್ಣನನ್ನು ಕರೆದುಕೊಂಡು ಲೈಬ್ರರಿಯಲ್ಲಿ ಕುಳಿತಿದ್ದ ರೇಖಾಳ ಬಳಿಗೆ ಕರೆದೊಯ್ದ. ರೇಖಾಳ ಕೈಗೆ ರಾಖಿ ತುರುಕಿ, “ಇವನಿಗೆ ಕಟ್ಟು” ಅಂತ ದಬಾಯಿಸಿದ. ರೇಖಾ ತಬ್ಬಿಬ್ಬಾಗಿ, ಏನು ಹೇಳಬೇಕೋ ತಿಳಿಯದೆ ಗೊಳೋ ಎಂದು ಅಳಲು ಸುರು ಮಾಡಿದಳು. ಸೋಮಣ್ಣನ ಪಿತ್ತ ನೆತ್ತಿಗೇರಿ, “ಎಂತ ನೀನು ಬ್ಯಾವರ್ಸಿ, ನಿನಗೆ ಮಂಡೆ ಸರಿ ಇದೆಯಾ?” ಎಂದು ಚೀರಾಡಿದ. ಲೈಬ್ರರಿಯನ್ ಬಂದು ಇಬ್ಬರನ್ನೂ  ಹೊರಗಟ್ಟಿದರು. ಅಲ್ಲೇ ಇದ್ದ ಅನನ್ಯ, ಅವರಿಬ್ಬರ ಜಗಳ ಬಿಡಿಸಿ, ರೇಖಾಳನ್ನು ಸಮಾಧಾನ ಮಾಡುತ್ತ ಹಾಸ್ಟೆಲಿಗೆ ಕರೆದೊಯ್ದಳು. ಸೋಮಣ್ಣನಿಗೆ ಈ ಪ್ರಸಂಗವೆಲ್ಲ ಹೇಸಿಗೆಯಾಗಿ ಅವಿನಾಶನ ಜೊತೆ ಮಾತು ಬಿಟ್ಟ. 
ಅದೇ ವರ್ಷ ವ್ಯಾಲಂಟೈನ್ ದಿನದಂದು ಸೋಮಣ್ಣ ಗಡಬಡ್ ಹಾಗೂ  ಚೀಸ್ ಸ್ಯಾಂಡ್ವಿಚ್ ತಿನ್ನಿಸುತ್ತ ಚೀಸಿಯಾಗೆ ರೇಖಾಳ ಎದುರು ಮದುವೆಯ ಪ್ರಸ್ತಾಪವಿಟ್ಟ. ಪ್ರಸ್ತಾಪ ಒಪ್ಪಿಗೆ ಆಯ್ತು ಅಂತ ಬೇರೆ ಹೇಳ್ಬೇಕಾ? ಇಬ್ಬರೂ ನೌಕರಿ ಹಿಡಿದು ರಾಜಧಾನಿಯಲ್ಲಿ ನೆಲೆಸಿದರು. ಅಲ್ಲಿ ಬಂಗುಡೆ ಫ್ರೈ ಹೋಟೆಲಿಗೇನು ಕೊರತೆಯಿರಲಿಲ್ಲ, ನಾಯ್ಕರ ಹೋಟೆಲ್ಲಿನ ನೆನಪೂ ಬರುತ್ತಿರಲಿಲ್ಲ. ಸೋಮಣ್ಣ ವ್ಯಾಲಂಟೈನ್ ದಿನವನ್ನು ಮಾತ್ರ ಮದುವೆಯ ವಾರ್ಷಿಕೋತ್ಸವಕ್ಕಿಂತಲೂ ಆಸ್ಥೆಯಿಂದ ಆಚರಿಸುತ್ತಿದ್ದ. ರೇಖಾಳಿಗೆ ಉಡುಗೊರೆ, ಉತ್ತಮ ಹೋಟೆಲ್ಲಿನಲ್ಲಿ ಊಟ ಖಾಯಂ ಹಾಕಿಸುತ್ತಿದ್ದ. ಈ ವರ್ಷ ಅವನಿಗೆ ದೊಡ್ಡ ಭಡ್ತಿ ಸಿಕ್ಕಿತ್ತು. ಈ ಖುಷಿಯಲ್ಲಿ ನಗರದ ಪ್ರತಿಷ್ಠಿತ ಹೋಟೆಲ್ಲಿನಲ್ಲಿ ಟೇಬಲ್ ಬುಕ್ ಮಾಡಿದ್ದ. ಸಭಾಂಗಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಜೋಡಿಗಳನ್ನು ಕೆಂಪು ಗುಲಾಬಿಯೊಂದಿಗೆ ಸ್ವಾಗತಿಸಿದರು. ಲೈವ್ Jazz ಸಂಗೀತ ಪ್ರಣಯಿಗಳಿಗೆ ಮತ್ತು ಹತ್ತಿಸುತ್ತಿತ್ತು. ಊಟಕ್ಕೆ ಬಗೆ ಬಗೆಯ ಖಾದ್ಯಗಳನ್ನು ಟೇಬಲ್ಲಿಗೇ ಬಂದು ಬಡಿಸುತ್ತಿದ್ದರು. ಕೊನೆಯಲ್ಲಿ ಲಕ್ಕೀ ಡ್ರಾ ಬೇರೆ ಇತ್ತು. ಸೋಮಣ್ಣ - ರೇಖಾ ಇಬ್ಬರೂ ಅಂದಿನ ಅನುಭವದಿಂದ  ಸಂತೃಪ್ತರಾಗಿದ್ದರು. ಕೊನೆಯಲ್ಲಿ ಚೀಸ್ ಕೇಕ್ ತಿನ್ನುವಾಗ ಲಕ್ಕಿ ಡ್ರಾ ನಡೆಯಿತು. ವಿಜೇತರು ಟೇಬಲ್ ನಂಬರ್ ೧೦ ಎಂದು ಘೋಷಿಸಿದರು. ಟೇಬಲ್ ನಂಬರ್ ೧೦ರ  ಮೇಲೆ ಝಗ್ಗನೆ ಬೆಳಕಾಯಿತು. ಯಾರು ಲಕ್ಕಿ  ಜೋಡಿ ಎಂದು ಸೋಮಣ್ಣ ಕೇಕ್ ತಿನ್ನುತ್ತಾ ತಲೆ ಎತ್ತಿದ. ಅವನ ಬಾಯಿಂದ “ಏ ಬ್ಯಾವರ್ಸಿ” ಎಂಬ ಉದ್ಗಾರ ಮೂಡಿತ್ತು, ಚೀಸ್ ಕೇಕ್ ಕೆಳಗೆ ಬಿದ್ದಿತ್ತು. ಫಳಫಳಿಸುವ ಬೆಳಕಿನ ಹೊನಲಲ್ಲಿ ಅವಿನಾಶ-ಅನನ್ಯ ಚುಂಬಿಸುತ್ತಿದ್ದರು.  

-ರಾಂ