ಆ ಗಹನ ತತ್ವಕೆ ಶರಣು – ಮಂಕುತಿಮ್ಮ


ಸಹೃದಯಿ ಓದುಗರಿಗೆಲ್ಲ ನಮಸ್ಕಾರ. 

ಒಮ್ಮೆ ಡಿ.ವಿ.ಜಿ.ಯವರ ಮನೆಗೊಬ್ಬ ಜಪಾನಿ ಯುವಕ ಬಂದ.ಅವರೊಡನೆ ಮಾತನಾಡಿದ.ಡಿ.ವಿ.ಜಿ.ಅವನಿಗೆ ಕಾಫಿ ಕೊಟ್ಟರು. ಅದನ್ನು ಹೀರಿದ ಆ ಯುವಕ ‘The coffee is good'ಎಂದ. ಅವನು ಹೊರಟು ನಿಂತಾಗ ಡಿ.ವಿ ಜಿಯವರು ‘God bless you’ ಎಂದರು. ಹೊರಟಿದ್ದ ಯುವಕನು ‘ನಿಮಗೆ ದೇವರಲ್ಲಿ ಹೇಗೆ ನಂಬಿಕೆ ಸಾಧ್ಯ? ನೀವು ಅವನನ್ನು ಕಂಡಿದ್ದೀರಾ?’ಎಂದು ಪ್ರಶ್ನಿಸಿದ. ಡಿ.ವಿ.ಜಿ  ಉತ್ತರ ಕೊಟ್ಟರು:’The coffee is good ‘ಎಂದಿರಲ್ಲ,ಅದರಲ್ಲಿರುವ goodness..ನೀವು ಸಾವಿರಾರು ಮೈಲು ಆಚೆ ಇರುವವರು ಇದುವರೆಗೆ ನನ್ನನ್ನು ಕಾಣದಿದ್ದವರು ಕಾಣಬೇಕೆಂದು ವಿಶ್ವಾಸದಿಂದ ಬಂದಿರಲ್ಲ, ಆ goodness ..ಈ ಎಲ್ಲ goodness ದೇವರು’ ಆ ಜಪಾನಿ ಯುವಕ ಒಳಕ್ಕೆ ಬಂದ.ಒಂದು ಗಂಟೆ ಕುಳಿತು ತನ್ನ ತೊಡಕು ತಾಕಲಾಟಗಳನ್ನು ಅವರಲ್ಲಿ ಹೇಳಿಕೊಂಡು ಸಮಾಧಾನವನ್ನು ಪಡೆದು ಹೊರಟ (ಆಧಾರ ಬ್ರಹ್ಮಪುರಿಯ ಭಿಕ್ಷುಕ).  ಹೀಗೆ ಒಳಿತೆಲ್ಲ ದೇವರು ಎಂದು ನಂಬಿದ, ಬಾಳಿದ ಧೀಮಂತ ಚೇತನ ಈ ನಮ್ಮ ಕಗ್ಗಾಚಾರ್ಯ ಡಿ.ವಿ.ಗುಂಡಪ್ಪನವರು. ಅವರು ಮೂರಡಿಗಳಿಂದಲೇ ಮೂರು ಲೋಕಗಳನ್ನಳೆದು ಅದನ್ನೂ ಮೀರಿದ ತ್ರಿವಿಕ್ರಮನಂತೆ ಎಂದು ಪ್ರಾಜ್ಞರ ಹೇಳಿಕೆ. ಅವರ ಹುಟ್ಟಿಗಿಂದು ನೂರಾಮೂವತ್ತೈದು ಸಂದಿತು. ಸೃಷ್ಟಿಸಿದ ಸಾಹಿತ್ಯವೆಲ್ಲ ಇನ್ನೂ ಚಿರನೂತನ.

ಅವರ ಕಗ್ಗದ ಅಭಿಮಾನಿಯಾದ ವಿಜಯ ನಾರಸಿಂಹ ಅವರು ಬಹಳ ಅಭಿಮಾನದಿಂದ ನುಡಿನಮನ ಸಲ್ಲಿಸಿದ್ದಾರೆ. ಕಗ್ಗಗಳು ಅದ್ಹೇಗೆ ತಮ್ಮನ್ನು ಆಕ್ರಮಿಸಿಕೊಂಡಿವೆಯೆಂಬುದನ್ನು ಹೇಳುತ್ತಿದ್ದಾರೆ ಕೇಳಿ.

ಸತ್ವಪೂರ್ಣವಾದ ಕೆಲವು ಕಗ್ಗದ ಪದ್ಯಗಳನ್ನು ತಮ್ಮ ಸುಶ್ರಾವ್ಯ ಕಂಠದಿಂದ ಗಮಕವಾಚನ ಮಾಡಿದ್ದಾರೆ ನವ್ಯ ಆನಂದ ಅವರು. 
‘ಶ್ರೀರಮಣನೇ ನಮ್ಮ ಚೆನ್ನಕೇಶವರಾಯ ಓರೆಗಣ್ಣಿಂ ಸನ್ನೆ ತೋರುತಲಿಹನೇನೇ..ಏನೀ ಮಹಾನಂದವೇ’ ಎಂದು ಕವಿ ಹಾಡುತ್ತಾರೆ ತಮ್ಮ ‘ಅಂತ:ಪುರ ಗೀತೆ’ಯಲ್ಲಿ. ಬನ್ನಿ..ಬೇಲೂರ ಬಾಲಿಕೆಯರನ್ನೂ, ಚೆನ್ನಕೇಶವನನ್ನೂ ನಾವೂ ನೋಡೋಣ ಪ್ರಸನ್ನ ಅವರ ‘ಆನಂದೋಬ್ರಹ್ಮ’ ಕಥೆಯಲ್ಲಿ.
ಅರೇ, ಇದೇನಪ್ಪಾ! ನಾವಿಷ್ಟುದಿನ ‘ ಪ್ಯಾಪ್ಯಾ’, ‘ಬ್ಲಾ ಬ್ಲಾ’ ಮಾತು ಕೇಳಿದ್ದೆವು. ಇಂದು ಪ್ರಮೋದ್ ಅವರು ಅದೇನೋ ‘ಪೈ ಪೈ’  ಮಾತು ಹೇಳುತ್ತಾರಂತೆ ಮಾರ್ಚ್ 13 ರ ಹಿನ್ನೆಲೆಯಲ್ಲಿ. ಏನಂತ ಕೇಳೋಣವೇ?

ಬನ್ನಿ..ಓದಿ,ಕೇಳಿ,ಮಾತಾಡಿ. ಖುಷಿಪಡಿ.ಏಕೆಂದರೆ ನಮ್ಮ ಡಿ.ವಿ.ಜಿ. ಅಪ್ಪಣೆ ಕೊಡಿಸಿದ್ದಾರಲ್ಲವೇ ‘ಆನಂದವಾತ್ಮಗುಣ ಮಂಕುತಿಮ್ಮ’ ಎಂದು.

~ ಸಂಪಾದಕಿ

ಎಲ್ಲರೊಳಗೊಂದಾಗು ಮಂಕುತಿಮ್ಮ

ಸಾಹಿತ್ಯ,ತತ್ವಜ್ಞಾನ, ಪತ್ರಿಕೋದ್ಯಮ,ಶಾಸ್ತ್ರ ಜ್ಞಾನ, ಸಮಾಜ ಸೇವೆ,ಬಹು ಭಾಷಾ ಪಾಂಡಿತ್ಯ ಹೀಗೆ ಹತ್ತು ಹಲವು  ಕ್ಷೇತ್ರಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ಆದರ್ಶಯುತ ಜೀವನವನ್ನು ನಡೆಸಿ ಕನ್ನಡ ಸಾಹಿತ್ಯಕ್ಷೇತ್ರ ಮತ್ತು ಪತ್ರಿಕಾ ರಂಗಕ್ಕೆ ಅನರ್ಘ್ಯ ಕೊಡುಗೆಯನ್ನು ಕೊಟ್ಟ ದಿವ್ಯ ಚೇತನ ಡಿ.ವಿ.ಜಿ (ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪ ) ಅವರು ಜನಿಸಿದ್ದು  ೧೮೮೭ ಮಾರ್ಚ್ ೧೭ರಂದು.
ಕನ್ನಡ ಸಾಹಿತ್ಯ ಲೋಕದಲ್ಲಿ ಡಿ.ವಿ.ಜಿ ಕಿರೀಟಮುಕಟಪ್ರಾಯರು ಎಂದರೆ ಅತಿಶಯೋಕ್ತಿಯಲ್ಲ.
ಬಡವರ ಭಗವದ್ಗೀತೆ ಎಂದೇ ಪ್ರಖ್ಯಾತಿಗೊಂಡಿರುವ ‘ಮಂಕುತಿಮ್ಮನ ಕಗ್ಗ’ ಮತ್ತು ‘ಮರುಳ ಮುನಿಯನ ಕಗ್ಗ' ವನ್ನು ರಚಿಸಿದ ನಂತರ  ಕನ್ನಡದ ಕಗ್ಗಾಚಾರ್ಯರಾಗಿ ಗೋಚರಿಸಿದರು.
ಅವರ ‘ಉಮರನ ಒಸಗೆ' , ‘ಜೀವನ ಧರ್ಮ ಯೋಗ', ‘ಅಂತಃಪುರ ಗೀತೆಗಳು' ಕನ್ನಡ ಸಾಹಿತ್ಯಕ್ಕೆ ದಕ್ಕಿದ ರತ್ನಗಳು.
ನಾನು ಶಾಲಾದಿನದಲ್ಲಿ ಓದಿದ ಕಗ್ಗದ ಪದ್ಯ 
‘ಹುಲ್ಲಾಗು ಬೆಟ್ಟದಡಿ,ಮನೆಗೆ ಮಲ್ಲಿಗೆಯಾಗು|
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ||
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ |
ಎಲ್ಲರೊಳಗೊಂದಾಗು-ಮಂಕು ತಿಮ್ಮ||’
ಈ ಪದ್ಯವು ನನ್ನನು ಬಹಳವಾಗಿ ಆಕರ್ಷಿಸಿತು , ಒಂದೊಂದು ಸಾಲಿನ ಒಂದೊಂದು ಪದವೂ ಅರ್ಥ ಗರ್ಭಿತ, ವ್ಯಷ್ಟಿಯಲ್ಲಿ ಓದಿದಾಗ ಪದಚ್ಛೇದದ/ಪದಸಂಕುಚಿತಗಳ ಮೋಡಿ ಸಮಷ್ಟಿಯಲ್ಲಿ ಓದಿದಾಗ ತತ್ವಜ್ಞಾನದ ಸಾರ, ಪದ ಲಾಲಿತ್ಯ, ಕಾವ್ಯ ಸೌಂದರ್ಯ, ನಾಲಿಗೆಯ ಮೇಲೆ ನಲಿದಾಡುವ, ಮನಸಿಗೆ ಮುದ ನೀಡುವ, ಬುದ್ಧಿಗೆ ಪ್ರಶ್ನೆ ಹಾಕಿ ಬುದ್ಧಿ ಕಲಿಸುವ, ಪಾಠ ಹೇಳುವ, ಜೀವನಧರ್ಮವನ್ನು ತಿಳಿಸುವ ಇನ್ನೂ ಸಾಕಷ್ಟು ಅವ್ಯಕ್ತ ಅನುಭವ ನನಗೆ ಆಗತೊಡಗಿತು. ಇದರಿಂದಾಗಿ ಇನ್ನಷ್ಟು ಕಗ್ಗ ಪದ್ಯಗಳನ್ನು ಓದುವ ಹಂಬಲ ನನ್ನಲ್ಲಿ ಹುಟ್ಟಿತು.
ಕಗ್ಗದ ಮೋಡಿಯೇ ಅಂತಹುದು,ಒಂದು ಬಾರಿ ಓದಿದರೆ ಮತ್ತೆ ಮತ್ತೆ ಓದಬೇಕೆನ್ನುವ ಪರಮಾಕರ್ಷಣೆಯನ್ನು ಅದರಲ್ಲಿ ಅಡಗಿಸಿಟ್ಟಿದ್ದಾರೆ ಮಾನ್ಯ ಡಿ.ವಿ.ಜಿ.
ಕಗ್ಗವನ್ನು ಬರೆಯುವಾಗ ಯಾರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದೆ ಎಂದು ಸ್ವತಃ ಡಿ.ವಿ.ಜಿ ಅವರೇ ಈ ಕೆಳಗಿನ ಪದ್ಯದಲ್ಲಿ ಹೇಳಿದ್ದಾರೆ
‘ ವ್ಯಾಕರಣ ಕಾವ್ಯಲಕ್ಷಣಗಳನು ಗಣಿಸದೆಯೆ|
ಲೋಕತಾಪದಿ ಬೆಂದು ತಣಿಪನೆಳಸಿದವಂ||
ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು|
ಸ್ವೀಕರಿಕೆ ಬೇಳ್ಪವರು-ಮಂಕು ತಿಮ್ಮ ||’
ಕಗ್ಗವು ಪಂಡಿತರಿಗೆ , ಜ್ಞಾನಿಗಳಿಗೆ, ಶಾಸ್ತ್ರಜ್ಞರಿಗೆ ಬರೆದದ್ದಲ್ಲ ಬದಲಾಗಿ ಸಾಮಾನ್ಯರಲ್ಲಿ ಅತಿಸಾಮಾನ್ಯರು 
ಜೀವನದ ಬೇಗೆಯಲ್ಲಿ ನೊಂದು ಬೆಂದು ತಂಪನು ಬಯಸುವವರಿಗೆ ಎನ್ನುತ್ತಾರೆ ಕಗ್ಗಾಚಾರ್ಯ ಡಿ.ವಿ.ಜಿ
ಕಗ್ಗಗಳನ್ನು ಓದುವಾಗ ಒದುಗರಿಗೆ ರಸಾನುಭವವಾಗುವುದು ಒಂದೋ ಎರಡೋ ಬಾರಿ ಕಣ್ಣಾಡಿಸಿಯೋ ಅಥವಾ ಬಾಯಾಡಿಸಿದಾಗ ಅಲ್ಲ ಬದಲಿಗೆ ಮತ್ತೆ ಮತ್ತೆ ಓದಿ, ವಿವಿಧ ದೃಷ್ಟಿ ಕೋನದಿಂದ ಅರ್ಥಗ್ರಹಿಸಬೇಕು, ಕಗ್ಗದ ಸಾಲುಗಳೊಂದಿಗೆ ನಮ್ಮ ಜೀವನದ ಅನುಭವಗಳನ್ನು ಬೆಸೆದು ಸವಿಯಬೇಕು.
ನಾವು ಫಿಲ್ಟರ್ ಕಾಫಿಯನ್ನು ಒಮ್ಮೆಗೇ ಕುಡಿದರೆ ಅದರ ರಸಾಸ್ವಾದ ಅಗುವುದಿಲ್ಲ ಒಂದೊಂದು ಗುಕ್ಕನ್ನೂ ನಾಲಗೆಯ ಮೇಲೆ  ಕೆಲವು ಸೆಕೆಂಡುಗಳ ಕಾಲ ಕುಳ್ಳಿರಿಸಿ  ರಸಗ್ರಂಥಿಗಳು ಹೀರಿ ಆನಂದಿಸಿ ಚಪ್ಪರಿಸಿದಾಗ ಮೆದುಳಿಗೆ ಕಾಫಿಯ ರಸವು ಉನ್ಮತ್ತ ಭಾವದ ಪರಾಕಾಷ್ಠೆಯ ಪ್ರತೀ ಸಂದೇಶವನ್ನೂ  ಕಳಿಸುತ್ತದೆ , ಇದೇ ರೀತಿ ನಾವು ಕಗ್ಗಪದ್ಯಗಳನ್ನು ಸವಿಯಬೇಕು.
ಇಂತಹ ಶ್ರೇಷ್ಠ ಕೃತಿಯನ್ನು ರಚಿಸಿದ್ದರೂ ಡಿ.ವಿ.ಜಿ ಯವರು ಅದು ಪರಮಶ್ರೇಷ್ಠವಲ್ಲ ಎಂದು ತಮ್ಮ ನಿರಹಂಕಾರದ ನಿಲುವನ್ನು ಮತ್ತು ತಮ್ಮನ್ಮು ತಾವು ತಿದ್ದಿಕೊಳ್ಳುವ ಔದಾರ್ಯವನ್ಮು ಓದುಗರಲ್ಲಿ ಈ ಕೆಳಗಿನಂತೆ ಬಿನ್ನಹಿಸುತ್ತಾರೆ
‘ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ|
ಇಂದು ನಂಬಿಹುದೆ ಮುಂದೆಂದುಮೆಂದಲ್ಲ||
ಕುಂದು ತೋರ್ದದನು ತಿದ್ದಿಕೊಳೆ ಮನಸುಂಟು|
ಇಂದಿಗೀ ಮತವುಚಿತ-ಮಂಕುತಿಮ್ಮ ||’
ಇನ್ನು ಕಗ್ಗವನ್ನು ಒಂದು ಶಾಸ್ತ್ರ ಗ್ರಂಥವಾಗಿಯೋ ಇಲ್ಲವೇ ಪಠ್ಯವಾಗಿಯೋ ರಚಿಸದೆ ನಾಲ್ಕೇ ಸಾಲುಗಳ ಮುಕ್ತಕ ರೂಪವಾಗಿ ಅಥವಾ ಚುಟುಕು ಕವನದ ರೂಪಾವಾಗಿ ರಚಿಸಿದ್ದರ ಹಿಂದಿನ ಉದ್ದೇಶವನ್ನು ಈ ಕೆಳಕಂಡಂತೆ ಡಿ.ವಿ.ಜಿ ಹೇಳಿದ್ದಾರೆ
‘ಕವಿಯಲ್ಲ ವಿಜ್ಞಾನಿಯಲ್ಲ ಬರಿಯ ತಾರಾಡಿ|
ಅವನರಿವಿಗೆಟುಕುವೊಲೊಂದಾತ್ಮನಯವ||
ಹವಣಿಸಿದನಿದನು ಪಾಮರಜನದ ಮಾತಿನಲಿ|
ಕವನ ನೆನಪಿಗೆ ಸುಲಭ-ಮಂಕುತಿಮ್ಮ ||’

ಕಗ್ಗವು ಡಿ.ವಿ.ಜಿ ಯವರ ಅಖಂಡ ಜೀವನಾನುಭವಾಮೃತದ ಸಾರವೆನ್ನುವುದು ಬಲ್ಲವರಿಗೆ ಗೋಚರವಾಗುತ್ತದೆ. ಕಗ್ಗವನ್ನು ರಚಿಸುವ ಹಿಂದಿನ ಸ್ಫೂರ್ತಿ ಮತ್ತು ವಿಧಾನವನ್ನು ಬಹಳ ಸೊಗಸಾಗಿ ಈ ಕೆಳಗಿನ ಪದ್ಯದಲ್ಲಿ ತಿಳಿಸಿದ್ದಾರೆ
‘ವಿಶದಮಾದೊಂದು ಜೀವನಧರ್ಮದರ್ಶನವ|
ನುಸುರಿಕೊಳೆ ತನ್ನ ಮನಸ್ಸಿಗೆ ತಾನೆ ಬಗೆದು||
ನಿಸದವಂ ಗ್ರಂಥಾನುಭವಗಳಿಂದಾರಿಸುತೆ|
ಹೊಸೆದನೀ ಕಗ್ಗವನು-ಮಂಕುತಿಮ್ಮ||’
ಆಧುನಿಕ ಯುಗದಲ್ಲಿ  ವಿಜ್ಞಾನ, ತಂತ್ರ ಜ್ಞಾನದ ಉತ್ತುಂಗದಲ್ಲಿರುವ ಕಾಲಘಟ್ಟದಲ್ಲಿ ಮನುಕುಲವು ಮನುಜಮತದಿಂದ ದೂರ ಸರಿಯುತ್ತಿರುವುದನ್ನು,ಮಾನವಸಂಬಂಧಗಳು ದುರ್ಬಲವಾಗುತ್ತಿರುವುದನ್ನು, ಮನೆಯೊಳಗಿನ ಮನಸ್ಸುಗಳು ಕೋಟೆಯನು ಕಟ್ಟಿಕೊಳ್ಳುತ್ತಿರುವುದನ್ನು,ಮನುಷ್ಯನ ದುರಾಸೆಗೆ ಪ್ರಕೃತಿಯನ್ನು ನಾಶದ ಅಂಚಿಗೆ ದೂಡುತ್ತಿರುವುದನ್ನು ಡಿ.ವಿ.ಜಿ ಹಲವು ದಶಕಗಳ ಹಿಂದೆಯೇ ಕಗ್ಗದಲ್ಲಿ ತಿಳಿಯಪಡಿಸಿದ್ದಾರೆ, ಈ ಕೆಳಗಿನ ಪದ್ಯಗಳು ಅದಕ್ಕೆ ಒಂದು ನಿದರ್ಶನ 
‘ಭೌತವಿಜ್ಞಾನಿ ರವಿತಾರೆಧರೆಗಳ ಚಲನ|
ರೀತಿ ವೇಗವನಳೆದು ಶಕ್ತಿಗಳ ಗುಣಿಪನ್||
ಪ್ರೀತಿರೋಷಗಳವನಳೆವನೇನ್?|
ಚೇತನವನರಿವನೇಂ-ಮಂಕುತಿಮ್ಮ||’

‘ನಂಟು ತಂಟೆಗಳ ಗಂಟೀ ಬ್ರಹ್ಮ ಭಂಡಾರ|
ಅಂಟಿಲ್ಲ ವೆನಗಿದರೊಳೆನ್ನದಿರದೆಂದೆಂದುಂ||
ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ|
ಒಂಟಿಸಿಕೊ ಜೀವನವ-ಮಂಕುತಿಮ್ಮ||’
ಹೆಣ್ಣು ಗಂಡುಗಳ ನಡುವಿನ ಭೇದವನ್ನು ನಾವು ಇಂದಿಗೂ ಕಾಣುತ್ತಿದ್ದೇವೆ, ಪುರುಷ ಪ್ರಧಾನದ ಸಮಾಜಕ್ಕೆ  ಹೆಣ್ಣು ಗಂಡುಗಳ ಅರ್ಧನಾರೀಶ್ವರ ತತ್ವವನ್ನು ಈ ಕೆಳಗಿನ ಪದ್ಯದಲ್ಲಿ ತಿಳಿಸಿದ್ದಾರೆ
‘ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಗಿಲ್ಲ |
ಬೆರಕೆಯೆಲ್ಲರುಮರ್ಧನಾರಿಶನಂತೆ|
ನರತೆಯಣು ನಾರಿಯಲಿ ನಾರೀತ್ವನರನೊಳಗನು
ತಿರಿಚುತಿರುವುದು ಮನವ- ಮಂಕುತಿಮ್ಮ||’
ಕಗ್ಗಗಳಲ್ಲಿ ಇಲ್ಲದ ವಿಷಯಗಳಿಲ್ಲ ತತ್ವಜ್ಞಾನ, ವಿಜ್ಞಾನ, ಜೀವನಾನುಭವ, ನೀತಿ, ಕಾವ್ಯ, ಧರ್ಮ, ಶಾಸ್ತ್ರ ಹೀಗೆ ಯಾರು ಯಾವ ವಿಷಯವನ್ನು ಅರಸುತ್ತಾರೊ ಅವೆಲ್ಲವನ್ನೂ ಕಗ್ಗದ ಗಣಿಯಲ್ಲಿ ಹೆಕ್ಕಿ ತಗೆಯಬಹುದು 
‘ಮಂಕು ತಿಮ್ಮನ ಕಗ್ಗ' ಮತ್ತು ‘ಮರುಳ ಮುನಿಯನ ಕಗ್ಗ’ಗಳು ಅವಳಿ ಕೃತಿಗಳಾಗಿದ್ದರೂ ಜನಪ್ರಿಯತೆಯಲ್ಲಿ ಮಂಕುತಿಮ್ಮನದ್ದೇ  ಮಾತು ಜಾಸ್ತಿ ಆದರೆ ಮರುಳ ಮುನಿಯನಲ್ಲಿಯೂ ನಾವು ಅನೇಕ ಮುತ್ತುಗಳನ್ನು ಗಣಿಗಾರಿಕೆ ಮಾಡಿ ನೋಡಬಹುದು.
ಡಿ.ವಿ.ಜಿ ಅವರು ತಮ್ಮ ಮನಸ್ಸಿನಲ್ಲಿ ಕಗ್ಗಗಳು ಎಗ್ಗಿಲ್ಲದೇ ನುಗ್ಗಿ ಅನುಭವ ಬುಗ್ಗೆಗಳಾಗಿ ಹೊರಬರುತ್ತಿದ್ದುದನ್ನು ಹೀಗೆ ಹೇಳಿದ್ದಾರೆ
‘ಕಗ್ಗವಿದು ಬೆಳೆಯುತಿದೆ ಲಂಕೆಯಲಿ ಹನುಮಂತ|
ಹಿಗ್ಗಿ ಬೆಳೆಸಿದ ಬಾಲದಂತೆ ಸಿಗ್ಗುಳಿದು ||
ನುಗ್ಗಿ ಬರುತಿರೆ ಲೋಕದ ಪ್ರಶ್ನೆಗಳ ಧಾಳಿ|
ಉಗ್ಗು ಬಾಯ್ಚಪಲವಿದು- ಮರುಳಮನುನಿಯ||’
ಒಟ್ಟಿನಲ್ಲಿ  ಡಿ.ವಿ.ಜಿ ಯವರ ಕಗ್ಗಗಳು ಎಲ್ಲ ದೇಶಗಳ,ಎಲ್ಲ ಭಾಷೆಗಳ, ಎಲ್ಲ ಕಾಲಗಳ , ಎಲ್ಲ‌ ಸಾಹಿತ್ಯಗಳ ಮಧ್ಯೆ ಅದ್ವಿತೀಯ ಕೃತಿಗಳು ಎಂದರೆ ಅತಿಶಯೋಕ್ತಿಯಾಗಲಾರದು.
ಕಗ್ಗದ ಜನಪ್ರಿಯತೆ ಇರುವುದು ಅದರ ಪ್ರಸ್ತುತೆಯಲ್ಲಿ ಮತ್ತು ಜೀವನಾನುಭವದಲ್ಲಿ ಸಾರ್ವಕಾಲಿಕ ಸತ್ಯಗಳ ಒಳತಿರುಳನ್ನು ಬಗೆದು ಬಿಡಿಸಿ ಕನ್ನಡಿಗರಿಗೆ ಉಣಬಡಿಸಿದ್ದಾರೆ, ಅವರ ಶಿಷ್ಯಪರಂಪರೆಯು ಕಗ್ಗಗಳನ್ನು ಇತರೆ ಭಾಷೆಗಳಿಗೂ ಅನುವಾದಿಸಿ ಮತ್ತಷ್ಟು ಜನಪ್ರಿಯತೆಗೆ ಕಾರಣರಾಗಿದ್ದಾರೆ. ಕನ್ನಡಿಗರ ಹೆಮ್ಮೆಯ ಡಾ|ಗುರುರಾಜ ಕರ್ಜಗಿ ಅವರ ಮಾತಿನಲ್ಲಿ ಕಗ್ಗಗಳ ರಸಧಾರೆ ಧಾರಾಕಾರವಾಗಿ ಹರಿದು ನಮ್ಮನ್ನು ಮತ್ತೆ ಮತ್ತೆ ಕಗ್ಗದ ಧಾರೆಯಲ್ಲಿ ಮುಳುಗೇಳಿಸುತ್ತದೆ. 
ಡಿ.ವಿ.ಜಿ ಯವರನ್ನು ಪಡೆದ  ಕನ್ನಡಿಗರು ನಾವೇ ಧನ್ಯರು.

~ ವಿಜಯ ನರಸಿಂಹ

ಹುಲ್ಲಾಗು ಬೆಟ್ಟದಡಿ

ಡಾ ನವ್ಯ ಆನಂದ್ ಅವರು ಲಂಡನ್ ನಲ್ಲಿ ಕ್ಲಿನಿಕಲ್ ಸೈಕಾಲಜಿಯಲ್ಲಿ ಡಾಕ್ಟರೇಟ್ ಪದವಿ ಮುಗಿಸಿ ಈಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಸಣ್ಣ ವಯಸ್ಸಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಇಂಗ್ಲೆಂಡಿನಲ್ಲಿರುವ ಶ್ರೀಮತಿ ಮನೋರಮಾ ಪ್ರಸಾದ್ ಅವರಿಂದ ಕಲಿಯುತ್ತಿದ್ದಾರೆ. ಅವರು ಗಮಕ ಕಲಿಕೆಯನ್ನು ತಮ್ಮ ಅಜ್ಜಿಯವರಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಅವರಿಂದ ಮೂರು ವರ್ಷದ ಹಿಂದೆ ಶುರು ಮಾಡಿದರು. ನವ್ಯ ಅವರು ಗಮಕ ಕಾರ್ಯಕ್ರಮಗಳನ್ನು ಬೆಂಗಳೂರು ಹಾಸನ ಹಾಗೂ ಇಂಗ್ಲೆಂಡಿನಲ್ಲಿ ಕೊಟ್ಟಿರುತ್ತಾರೆ. ಅವರು ಕುಮಾರವ್ಯಾಸ ಭಾರತ, ಕುವೆಂಪು ರಾಮಾಯಣ, ಕನಕ ದಾಸರ ನಳ ಚರಿತ್ರೆ, ರನ್ನನ ಗಧಾಯುದ್ದ ಮುಂತಾದ ಕಾವ್ಯಗಳಿಂದ ಕಥಾಭಾಗಗಳನ್ನ ಅಭ್ಯಾಸ ಮಾಡಿದ್ದಾರೆ.

ಆನಂದೋಬ್ರಹ್ಮ(ಡಿ.ವಿ.ಜಿ. ಅವರ‘ಅಂತ:ಪುರಗೀತೆ’ ಆಧಾರಿತ)

ಮುನ್ನುಡಿ.
ಕನ್ನಡಿ ನೋಡುತ್ತ ತನ್ನ ಸೌಂದರ್ಯಕ್ಕೆ ತಾನೇ ಮರುಳಾದ ಮುಕುರಮುಗ್ಧೆ(ಕನ್ನಡಿಗೆ ಮರುಳಾದವಳು), ಹಗಲಿರುಳೂ ತನ್ನ ನಲ್ಲನ ಬಗ್ಗೆಯೇ ಮಾತಾಡಿ ದಣಿಯದ ಹರಟೆಮಲ್ಲಿ ಶುಕಭಾಷಿಣಿ(ಗಿಳಿಯೊಂದಿಗೆ ಮಾತಾಡುವವಳು ಅಥವಾ  ಗಿಳಿಯಂತೆಯೇ ಆಡಿದ್ದನ್ನೇ ಮತ್ತೆ ಮತ್ತೆ ಆಡುವವಳು), ಕಪಿಚೇಷ್ಟೆಗೆ ಸಿಟ್ಟಿಗೆದ್ದು ಕೆಂಪಾದ ಅಲಂಕಾರಪ್ರಿಯೆ ವಾಸಂತಿ, ಡಮರುಗ ಬಾರಿಸುವವಳೊಬ್ಬಳು, ಕೊಳಲನ್ನೂದುವವಳೊಬ್ಬಳು, ಕೇಶಾಲಂಕಾರ ಪ್ರಿಯೆಯೊಬ್ಬಳು..ಬೇಲೂರಿನ ಈ ಶಿಲಾಬಾಲಿಕೆಯರಿಗೆ ಜೀವತುಂಬಿದ್ದು ಡಿ.ವಿ.ಜಿ.ಯವರ ಅಂತ:ಪುರಗೀತೆ. 7‘ಶರಣ ಸತಿ ಲಿಂಗ ಪತಿ’ ಎನ್ನುವಂತೆ ಇಲ್ಲಿ ಬಾಹ್ಯತೋರಿಕೆಗೆ ಕಂಡುಬರುವ ಶೃಂಗಾರ, ಸರಸ-ಸಲ್ಲಾಪಗಳು ಜೀವಾತ್ಮ-ಪರಮಾತ್ಮರ ಸಂಗಮದ ಪ್ರತೀಕಗಳಾಗಿವೆ. ಅನ್ನಮಯದಿಂದ ಆನಂದಮಯದವರೆಗಿನ ಪಯಣವಾಗಿದೆ. ‘ಅಣುರಣೀಯೋ ಮಹತೋಮಹತ್’ ಎಂಬ ಅನುಭಾವ ಮೂಡಿಸುವ ಸಚ್ಚಿದಾನಂದ ಬ್ರಹ್ಮನ ಅದ್ವೈತವಾಗಿದೆ. ಒಟ್ಟಿನಲ್ಲಿ ‘ ಏನೀ ಮಹಾನಂದವೇ ಓ ಭಾಮಿನಿ ಏನೀ ಸಂಭ್ರಮದೊನ್ನವೇ, ಬಲು ಚಂದವೇ’..       

ಪ್ರಸನ್ನ ಅವರು ವೃತ್ತಿಯಿಂದ ಇಂಜನೀಯರ್. ಇಂಗ್ಲೀಷ್ ಹಾಗೂ ಕನ್ನಡ ಸಾಹಿತ್ಯದೆಡೆ ಅಪಾರ ಒಲವು. ವಿಶ್ವದೆಲ್ಲ ಭಾಷೆಗಳ ಚಲನಚಿತ್ರ ಹಾಗೂ ಸರಣಿ(series) ವೀಕ್ಷಣೆ ಇವರ ಬಹುದೊಡ್ಡ ಹುಚ್ಚು. ಸಂಗೀತ, ಚಿತ್ರಕಲೆಯಲ್ಲೂ ಆಸಕ್ತರು. ಸಧ್ಯ ಕಳೆದಾರೇಳು ವರುಷಗಳಿಂದ Slough ನಲ್ಲಿ ವಾಸವಾಗಿದ್ದಾರೆ.

‘ಮುಕುರಮುಗ್ಧೆ’- ನಗು ಬರುತ್ತದೆ. ನನಗೀ ಹೆಸರೇ? ಛೇ!ಅಲ್ಲ, ನನ್ನ ಕಣ್ಣ ಕನ್ನಡಿಯಲ್ಲಿ ತನ್ನ ರೂಪು ನೋಡಿಕೊಳ್ಳುವ ಆ ತುಂಟನಿಗೆ ಇಡಬೇಕು ಆ ಹೆಸರನ್ನು. ಇಲ್ಲಾ, ನಾನೇ ಅವನ ಕಣ್ಣಲ್ಲಿ ನನ್ನನ್ನು ನೋಡಿಕೊಳ್ಳುತ್ತಿರುವಿನೇನು ಮತ್ತೆ? ಏನೋಪ್ಪ! ಅಂತೂ ನನ್ನ ಕಣ್ಣಲ್ಲಿ ಅವನು, ಅವನ ಕಣ್ಣಲ್ಲಿ ನಾನು ಹೀಗೆ ಜಗದ ಆಟ-ಓಟವನ್ನು ಮರೆತು ಕುಳಿತರೆ..ಕುಳಿತರೇನು? ಕುಳಿತ ಮೇಲೆ ಏನಾದರೂ ನೆನಪಿದ್ದರೆ ತಾನೇ? ನನ್ನ ಕಂಗಳು ಅವನ ಕನ್ನಡಿಯಿಂದು. ಕಾಡಿಗೆ ಬಹಳವಾದರೆ ಅವನೇನು ನೋಡುತ್ತಾನೆ ಇಲ್ಲಿ? ಸ್ವಲ್ಪ ಹಚ್ಚಿದರೆ ಹಚ್ಚಿದಂತೆಯೇ ಅನ್ನಿಸುವುದಿಲ್ಲ. ಕಣ್ಣಂಚಿನಲ್ಲಿ ಈ ಕೆಂಪೇನು? ಹೊಳಪೇನು? ಓ! ಅವನ ನೆನಪೇ ನಿನ್ನ ನಾಚಿಕೆಗೆ ಕಾರಣವೇ? ಓ ಕಣ್ಣೇ! ನಾಚಬೇಡ. ಈಗ ಬರುವ ಅವನು ನಿನ್ನಲ್ಲೇ ಮನೆ ಮಾಡಿ ಕೂಡುವವನಿದ್ದಾನೆ ಈ ಇರುಳುಪೂರ್ಣ. ‘ಅಮ್ಮಾ! ಎಷ್ಟು ಜೋರಾಗಿ ಹೊಡೆದಳು ಈ ಶುಕಭಾಷಿಣಿ. ಬರೀ ಹೊಟ್ಟೆಕಿಚ್ಚು. ನನ್ನ ಕನ್ನಡಿಯಲ್ಲಿ ನಾನು ಮೈಮರೆತರೆ ನಿನಗೇನೇ ಮಹಾತಾಯಿ?’  ‘ಇಲ್ಲಿ ಬಂದು ನನ್ನ ಕಷ್ಟವನ್ನು ಕೇಳುವವರು 
ಯಾರೂ ಇಲ್ಲ. ಎಲ್ಲರಿಗೂ ತಮ್ಮದೇ ತಮಗೆ.’  ‘ಕೋಪ ಬೇಡ ಶುಕಭಾಷಿಣಿ. ಎಲ್ಲಿ ನಿನ್ನ ಹರಟೆಮಲ್ಲ, ಪ್ರಭುವನ್ನು ಕರೆತರಲು ಓಡಿದನೇನು?’   ‘ಅದೇ ನನಗೆ ತೊಂದರೆಯಾಗಿರುವುದು. ನನ್ನ ಅಳಲು ಕೇಳಲು ಇದ್ದೊಂದ ಶುಕವೂ ಕಾಣುತ್ತಿಲ್ಲವಲ್ಲ??’  ‘ಓ! ಅಲ್ಲಿ ನೋಡು. ಆ ಗಿಡದ ಮೇಲೆ. ಅದೇ ಅಲ್ಲವೇ ನಮ್ಮ ಗೆಳೆಯ ?’  
‘ಅಬ್ಬಾ! ಎಲ್ಲಿಗೆ ಹೋಗಿದ್ದೆ ನೀನು? ಎಷ್ಟು ಬಯ್ಯಿಸಿಕೊಂಡೆ ಗೊತ್ತಾ ನಾನೀ ಮುಕುರಮುಗ್ಧೆಯ ಬಳಿ? ಆಕೆಗೆ ತನ್ನ ಅಲಂಕಾರದ ಹುಚ್ಚು. ನನಗೆ ನನ್ನ ಗೆಳೆಯನ ಕುರಿತು ಮಾತಾಡುವ ಹುಚ್ಚು. ನೀನು ಇರದಿದ್ದರೆ ನನ್ನ ಮಾತು ಕೇಳುವವರಾರು?  ನನ್ನ  ಮಾಧವನನ್ನು ಕಂಡಿದ್ದೆಯಲ್ಲವೇ ಅಂದು ಅವನಿಲ್ಲಿ ಬಂದಾಗ.ಅವನ ಮೈಯನ್ನಲಂಕರಿಸಿದ್ದ ಆ ಹಳದೀ ವಸ್ತ್ರದ ಬಂಗಾರದ ಶೋಭೆಯಿಂದ ನಾನು ಚಿನ್ನದಲ್ಲಿ ಮೀಯ್ದಂತಾಗಿದ್ದೆ. ನನ್ನೀ ದೇಹದಲ್ಲಿ ಹೊಸ ಕಾಂತಿಯೊಂದು ಪ್ರವೇಶಿಸಿದಂತಾಗಿತ್ತು. ಅವನೋ ಹುಣ್ಣಿಮೆಯ ಚಂದಿರನಿದ್ದ ಆಕಾಶದಂತಿದ್ದ. ನನ್ನನ್ನು ಮೋಹದಲ್ಲಿ ಕೆಡವಿ, ನಾನವನ ನೆನಪಲ್ಲಿ ಹೀಗೆ ಕನವರಿಸಬೇಕೆಂದೇ ಹಾಗೆ ರೂಪ ತಳೆದಿದ್ದನೇನೋ ಅವನು! ಅವನ ಕೊರಳ ಮಣಿಹಾರ-ಮುತ್ತಿನ ಹಾರ ಆ ವಿಶಾಲ ಎದೆಯ ಮೇಲೆ ತೂಗುತ್ತ ಬೆಟ್ಟದ  ಮೇಲಿಂದ ಬೀಳುವ ಜಲಪಾತಗಳ ಆಟದಂತೆ ಕುಣಿಯುತ್ತಿದ್ದವು. ತೋಳುಗಳ ಮೇಲೆ ತನ್ನೆಡೆ ಲಕ್ಷ್ಯ ಕೊಡುತ್ತಿಲ್ಲವಲ್ಲ ಮೋಹನ ಎಂಬ ಸಿಟ್ಟಿನಿಂದಲೋ ಎಂಬಂತೆ ಅಸ್ತವ್ಯಸ್ತವಾದ ಮೇಲ್ ವಸ್ತ್ರದ ಸೊಬಗು. ಹಣೆಯ ಗಂಧ ಆ ನೀಲಿಮೊಗದಲ್ಲಿ ತಂಪು ತಂಗದಿರನಾಗಿತ್ತು. ಅವನ ತುಟಿಯಲ್ಲಾಠುವ ಕಿರುನಗೆಯು ನನಗೆ ‘ಇಂದು ನಿನಗಿಲ್ಲಿ ಸ್ಥಾನವಿಲ್ಲ’ ಎಂದು ಹೇಳುತ್ತಿರುವಂತಿತ್ತು. ಅವನ ನಗುವೇ ಹಾಗೆ..ಮೋಹಗೊಳಿಸಿ ಮರೆಯಾಗಿಬಿಡುವುದು.ಆಗ ಹೋದವನು ಇಂದು ಬರುತ್ತಿದ್ದಾನೆ. ಇಂದು ಅವನು, ಅವನ ಚೆಂದುಟಿಗಳು ಎಲ್ಲಾ ನನ್ನವೇ ಅಲ್ಲವೇ ಶುಕರಾಜ? ಓ ಶುಕರಾಜ, ಅಲ್ಲಿ ನೋಡು ಆ ವಾಸಂತಿಯನ್ನು! ಆಕೆಯ ಆಟಕ್ಕೆ ಮನಸೋತೋ, ಬೆದರಿಯೋ ಅವಳ ವಸ್ತ್ರಕ್ಕೇ ಕೈ ಹಾಕಿದಂತೆ ಕಾಣುತ್ತಿದೆ ಆ ಕಪಿರಾಯ. ಬಾ ಅಲ್ಲೇ ಹೋಗಿ ನೋಡೋಣ.’
‘ಸಖೀ, ವಾಸಂತಿ, ಜೋಪಾನ. ಅರೇ, ನಿನ್ನ ಮೇಲ್ ಹೊದ್ದಿಕೆಯನ್ನು ಸೆಳೆದೇ ಬಿಟ್ಟಿತಾ ಈ ಕಪಿರಾಯ!  ಏಯ್! ಬೇಡ..ಬೇಡ..ನೀನು  ಕಪಿಕುಪಿತೆಯಾಗಬೇಡ. ಈಗಲೇ ನಿನ್ನೀ ದೇಹ ಸೌಂದರ್ಯದ ರಂಗು ಹೆಣ್ಣಾದ ನನ್ನನ್ನೇ ಮೋಹದಲ್ಲಿ ಸಿಲುಕಿಸಿದೆ; ಇನ್ನು ಆ ರಸಿಕ ರಂಗನ ಗತಿ? ಇನ್ನೇನು ಆ ತುಂಟ ಬರುವ ಹೊತ್ತಾಯಿತು..ಅವನು ನಿನ್ನ ಈ ಅವತಾರದಲ್ಲಿ ನೋಡಿದರೆ ನಮಗೆಲ್ಲ ಇಂದು ಕನಸೇ ಜೊತೆ. ನಿನ್ನ ಇಚ್ಛೆಯೂ ಅದೇ ಏನು ಮತ್ತೆ? ಇದೇನು ಭಂಗಿ! ಇದೇನು ಭಾವ!! ಅಬ್ಬಬ್ಬಾ! ‘
‘ಏಯ್! ಸುಮ್ಮನೇ ಕಾಡುತ್ತೀಯಾ ನನ್ನ. ಇಷ್ಟೊತ್ತು ಆ ಕಪಿರಾಯನದಾಯಿತು..ಇನ್ನು ಈಗ ನೀನು..ಆಮೇಲೆ ನಂತರ ಆ ಕೃಷ್ಣ.  ಮೊನ್ನೆ ಏನು ಮಾಡಿದ ಗೊತ್ತೆ? ಊಟಕ್ಕೆ ಅಂತ ಕುಳಿತ. ನನಗೋ ಸಂಭ್ರಮವೋ ಸಂಭ್ರಮ. ದೇವದೇವನ ಹಸಿವು ಇಂದು ಈ ಪಾಮರಳಿಂದ ಹಿಂಗುವುದಲ್ಲ ಎಂಬ ಭ್ರಮೆ. ನಾನು ಮೊಸರನ್ನು ಇಳಿಸಲು ನೆಲುವಿಗೆ ಕೈ ಹಾಕಿದರೆ ಏನನ್ನುತ್ತಾನೆ ಗೊತ್ತೇ?’ವಾಸಂತಿ,ನೀನು ನೆಲುವಿನಿಂದ ಮೊಸರು-ಬೆಣ್ಣೆ ತೆಗೆಯಲೂ ಬೇಡ..ಮತ್ತೆ ಅಲ್ಲಿಂದ ಕೈ ಕೆಳಗಿಳಿಸಲೂ ಬೇಡ. ನಿನ್ನೀ ಭಂಗಿ ಕಣ್ಗೆ ಹಬ್ಬ’ ಎನ್ನಬೇಕೇ? ನನ್ನ ಮೈಯಲ್ಲೆಲ್ಲ ನಾಚಿಕೆ ಹರಿದಾಡಿತು. ನಾಚಿ ನೀರಾಗಿ ಕೈಯಿಳಿಸುವಷ್ಟರಲಿ ಸೊಂಟದ ಸುತ್ತ ಸುತ್ತಿದ ಅವನ ತೋಳುಗಳಲ್ಲಿ ನಾ ಆಜನ್ಮ ಬಂಧಿ. ಇಂದವನ ಆಗಮನದ ಸುದ್ದಿ ಕೇಳಿ ಸಿಂಗರಿಸಿಕೊಳ್ಳುವಷ್ಟರಲಿ ಈ ಕಪಿರಾಯನಾಟ ಶುರುವಾಗಬೇಕೇ?’ 
‘ಏನು? ವಾಸಂತಿ-ಶುಕಭಾಷಿಣಿಯರ ಚರ್ಚೆ ಮುರಲೀಮೋಹನನ ಆಗಮನದ ಕುರಿತೆ? ಈ ಮುಕುರಮುಗ್ಧೆಯ ಕನ್ನಡಿಯಲ್ಲಿನ ಚೆಲುಮೊಗವೂ ಅದನ್ನೇ, ಅವನಾಗಮನದ ಘಳಿಗೆಯನ್ನೇ ಕಾಯುತ್ತಿದೆ ಸಖೀ. ದಿನದಿನವೂ, ಕ್ಷಣಕ್ಷಣವೂ ಅಂತ್ಯದೆಡೆ ಜರಗುತ್ತಿರುವ ಈ ಯೌವನ, ಈ ರೂಪವನ್ನು ಆ ದೇವದೇವನಿಗೆ, ಕಾಮಜನಕನಿಗೆ ಆದಷ್ಟು ಬೇಗ ಅರ್ಪಿಸುವ ಆಸೆ.ಈ ತನು-ಮನ-ಜೀವನವೆಲ್ಲವನ್ನೂ ಅದೊಂದು ಸುಂದರ ಗಳಿಗೆಯಲ್ಲಿ ಅವನಿಗರ್ಪಿಸಿ ಅವನ ಕಣ್ಣಲ್ಲಿ ನನ್ನನ್ನೇ ನೋಡುತ್ತ ಎಲ್ಲವನ್ನೂ ಮರೆಯುವ ಆಸೆ.’
‘ನಮ್ಮೆಲ್ಲರ ಆಸೆಯೂ ಅದೇ ಅಲ್ಲವೇ ಮುಕುರಮುಗ್ಧೆ?  ನಿನ್ನ ಸಿಂಗಾರ, ಶುಕಭಾಷಿಣಿಯ ಕಾತರತೆ, ಈ ವಾಸಂತಿಯ ಲಾವಣ್ಯ  ಯಾವುದೂ ನಿರರ್ಥಕವಾಗುವುದಿಲ್ಲ. ಆ ಚೆಲುವ- ಚೆನ್ನಿಗರಾಯ ಬಂದೇ ಬರುತ್ತಾನೆ. ಅದಕ್ಕೇ ಈ ದಿನ ಇಂಥ ಸಡಗರ-ಸಂಭ್ರಮ.ಅಲ್ಲಿ ನೋಡಿ..ಏನು ನಡೆಯುತ್ತಿದೆ! ಬನ್ನಿ;ಅಲ್ಲಿಗೇ ಹೋಗಿ ನೋಡೋಣ. 
 ಮುರಜಾಮೋದೆ, ಮುರಳೀಧರೆ, ಕುಟಿಲಕುಂತಲೆ, ರಸಿಕಶಬರಿ, ಉಲ್ಲಾಸಿನಿ, ಪುಂವಿಡಂಬಿನಿ ಎಲ್ಲರೂ ಇದ್ದರು ಅಲ್ಲಿ. ಮುರಜಾಮೋದೆಯ ಡಮರುಗನಾದ, ಮುರಳೀಧರೆಯ ಮುರಳೀಗಾನ, ಇದಕ್ಕೆ ಸರಿಸಾಟಿಯಾಗಿ ಆ ತಾಂಡವೇಶ್ವರಿಯ ನರ್ತನ. ಚೆಲುವ ಚೆನ್ನಕೇಶವನ ಆಗಮನಕ್ಕಾಗಿ  ನಡೆಯುತ್ತಿದ್ದ ಉಲ್ಲಾಸಭರಿತ ಸಂಭ್ರಮೋತ್ಸಾಹ ಅದು. ಕುಟಿಲಕುಂತಲೆ ವೈಯ್ಯಾರ, ಮುಡಿಯ ಮಲ್ಲಿಗೆ, ಆಕೆಯ ಸುಂದರ  ಗುಂಗುರು ಕೇಶರಾಶಿ ಮೇಘರಾಜನಿಗೆ ಸಸವಾಲೊಡ್ಡುತ್ತಿತ್ತು.ಮೋಡಗಳಿಂದ ಸುತ್ತುವರೆದ ಚಂದಿರನಂತೆ ಆಕೆಯ ಮುಖಕಮಲ ಆ ಕೇಶರಾಶಿಯ ಮಧ್ಯೆ ಶೋಭಿಸುತ್ತಿತ್ತು. ಅವನಾಗಮನದ ಸಂತಸವೇ ಆ ಶೋಭೆಯ ನಿಜ ಕಾರಣ.
  ರಸಿಕಶಬರಿಯ ಮೈಕಾಂತಿ ಹೊಳಪುಗೊಂಡಿತ್ತು ಇಂದು.ಅವಳ ಬಿಗಿಯುಡುಪಿನ ಮೈಯ್ಯ ಬಿಸುಪು ಅವನ ನೆನಪಿಂದ ಇನ್ನಷ್ಟು ಬಿಗಿಗೊಂಡಂತಿತ್ತು. ಅವಳ ಕಿರುಸೊಂಟ ಹರೆಯದ ಹೊರೆ ತಾಳದೇ ಬಳುಬಳುಕುತ್ತಿದ್ದರೂ ತಾಂಡವೇಶ್ವರಿಯೊಡನೆ ಸಂತಸದಿಂದ ಕುಣಿದಾಡುತ್ತಿದ್ದಳವಳು. ಮುರಜಾಮೋದೆಯದಂತೂ ಕೇಳುವುದೇ ಬೇಡ. ಆಕೆಯ ಕೈಗಳು ಡಮರುಗ ಬಡಿಬಡಿದು ಎಷ್ಟು ನೊಂದಿದ್ದವೋ ಏನೋ? ಕೇಶವನ ಸ್ಪರ್ಶಸುಖದಿಂದಲೇ ನೋವು ನಿವಾರಣೆ ಅವುಗಳಿಗೆ. ಉಲ್ಲಾಸಿನಿ, ಪುಂವಿಡಂಬಿನಿಯ ಉತ್ಸಾಹಕ್ಕೆ ಮೇರೆಯೇ ಇಲ್ಲ. ಪುರುಷ ವೇಷದಲ್ಲಿನ ಪುಂವಿಡಂಬಿನಿ ಇತರರನ್ನು ಛೇಡಿಸಿ, ಕಾಡಿಸುತ್ತ ನಡೆದರೆ ಉಲ್ಲಾಸಿನಿ ಅವಳಿಗೆ ಪ್ರೋತ್ಸಾಹ ಕೊಡುತ್ತ ನಗುತ್ತ ಸಾಗಿದ್ದಾಳೆ.ಇಬ್ಬರದೂ ಮಿತಿಮೀರಿದ ತುಂಟತನ ಇಂದು. ಆಕೆ ಮೋಹನನಂತೆ ಮುರಳೀಧರೆಯ ವಸ್ತ್ರದ ಗಂಟನ್ನು ಸಡಿಲಿಸಿದರೆ ಈಕೆ ಅದನ್ನೆಳೆದು ಅವಳನ್ನು ಛೇಡಿಸಿ ನಗುವುದು.ಪಾಪ! ಮುರಳೀಧರೆಯ ಕೊಳಲಗಾನ ಆಕೆಯ ವಿವಸ್ತ್ರವಾಗುವ ಭಯದಿಂದ ನಿಂತೊಡನೆ ಇವರ ಚಿನ್ನಾಟ ಬೇರೆಯವರೊಡನೆ. 
ನಗು-ನೃತ್ಯ-ಸಂಗೀತ-ಸುಂದರಿಯರು..ಪ್ರಭುವಿನ ಅಂತ:ಪುರ ಜಗದೆಲ್ಲ ಸಂಭ್ರಮಗಳಿಂದ ತುಂಬಿತುಳುಕುತ್ತಿತ್ತು. ಪ್ರತಿಯೊಬ್ಬರ ಮನದಲ್ಲೂ ಶ್ರೀಕೃಷ್ಣನಾಗಮನದ ಸಂತಸ..ಸಂಭ್ರಮ..ಕಾತರದ ಕಾಯುವಿಕೆ. ಅವನ ಹೆಸರಿನಿಂದ, ನೆನಪಿನಿಂದ, ಒಲವಿನಿಂದ ಹುಚ್ಚಾದ ಮನಸ್ಸನ್ನು ಸಂಪ್ರದಾಯಸ್ಥ ಮನೆತನದ ಹೆಂಗಳೆಯರಾದ ಇವರೂ ಅದರ ಪಾಡಿಗದನ್ನು ಹರಿಯಲು ಬಿಟ್ಟಿದ್ದರು. ಅವರಿಗೆ ಗೊತ್ತು – ಎಲ್ಲವೂ ಕಡೆಗೆ ಸೇರಬೇಕಾದದ್ದು ಆ ಗೋಪಾಲನನ್ನೇ ಎಂದು. ಇನ್ನೇಕೆ ಚಿಂತೆ? ಯಾರ ಹೆದರಿಕೆ, ಯಾವ ಹಿಂಜರಿಕೆ ಅವರಿಗೆ??
  ಮುರಜಾಮೋದೆಯ ಡಮರುಗದ ನಾದ ಅಲೆಅಲೆಯಾಗಿ ಹರಿದು ಸಂದೇಶವನ್ನು ಹೊತ್ತೊಯ್ಯಿತು.ಅದರ ಲಯಬದ್ಧವಾದ ಸಂಗೀತ ಪ್ರೇಮವಾಹಿನಿಯಾಯಿತು. ತಂಗಾಳಿಯ ಸವಾರಿಯೇರಿದ  ಮುರಳೀಧರೆಯ ಮುರಲಿನಾದ ಮೋಹನನ ಮುರಲಿಗೆ ಸಂವಾದಿಯುಯ್ತು. ಮುಕುರಮುಗ್ಧೆಯ ಭಕ್ತಿ ಅವನನ್ನು ಹಿಡಿದೆಳೆಯಿತು. ಶುಕಭಾಷಿಣಿಯ ಹಂಬಲಿಕೆ ತಪವಾಗಿ ಶುಕರೂಪ ಸಂದೇಶವಾಗಿ ಸಖನೆದೆ ತಲುಪಿತು.ವಾಸಂತಿಯ ಆರ್ದ್ರ ಬೇಡಿಕೆ , ಉಲ್ಲಾಸಿನಿ, ಪುಂವಿಡಂಬಿನಿಯರ ಬೇಟದಾಟಗಳು ಶ್ರೀಕೃಷ್ಣನನ್ನು ಆ ಅಂತ:ಪುರಕ್ಕೆ ಸೆಳೆದವು. ಜಗದ ಜಂಜಡದಲ್ಲಿ ಮೈಮರೆತು, ಕುಟಿಲನೀತಿಗಳನ್ನು  ರೂಪಿಸುತ್ತ, ದುಷ್ಟ ಶಿಕ್ಷಣ-ಶಿಷ್ಟ ರಕ್ಷಣೆಯಲ್ಲಿ ತೊಡಗಿದ್ದ ಮುರಾರಿ ಇತ್ತ ಕಡೆ ನೋಡಿದ. ಅವನ ಚೆಲುವ ರೂಪು, ಮನಸೆಳೆವ ಮೋಹಕ ನಗು ಇಂದು ಅವರದಾಯಿತು..ಕೇವಲ ಅವರದು. ಆನಂದವು ಪ್ರವಾಹದೋಪಾದಿಯಲ್ಲಿ ಧರೆಗಿಳಿಯಿತು. ಅದನ್ನಷ್ಟೇ ಪ್ರೀತಿ-ತನ್ಮಯತೆಗಳಿಂದ ಧರಿಸಿದರಾ ಗೋಪಿಕೆಯರು.
  ಮೋಹನ ಮುರಳಿ ತನ್ನ ಕೊಳಲನ್ನೂದೂತ್ತ ಇವರ ಜೊತೆಯಲ್ಲಿ ರಾಸಲೀಲೆಯಾಡಿದ. ಪ್ರತಿಯೊಬ್ಬರನ್ನೂ ಅಪ್ಪಿ,ಮುದ್ದಿಸಿ, ಸಂತೈಸಿದ.ಅವಳ ಜಡೆಯೆಳೆದ..ಇವಳ ಮುಂಗುರುಳು ತೀಡಿದ..ಅವಳ ಸೆರಗೆಳೆದ..ಇವಳ ಕೈಹಿಡಿದು ಬರಸೆಳೆದಪ್ಪಿದ.ಸಂಭ್ರಮೋತ್ಸಾಹದಲಿ ಮೈಮರೆತರು ಗೋಪಿಯರು. ಆನಂದದ ತುತ್ತ ತುದಿಯನೇರಿದರು..ಪೂರ್ಣನೊಂದಿಗೆ ಬೆರೆತು ಪರಿಪೂರ್ಣರಾಗಿದ್ದರು.ಈ ಕ್ಷಣಕ್ಕಾಗಿ ಅದೆಷ್ಟು ಯುಗ ಕಾದಿದ್ದರೋ ಯಾರು ಬಲ್ಲರು? ‘ಈ ಕ್ಷಣ ಶಾಶ್ವತವಾಗಲಿ ದೇವ’ ಎಂದು ಒಮ್ಮನದಿಂದ ಮೊರೆಯಿಟ್ಟರು. ‘ನಮ್ಮೀ ಮಧುರ ಮಿಲನ ಹೀಗೇ ಅನವರತವಾಗಿರಲಿ;ಚಿರಂತನವಾಗಲಿ’ ಎಂದು ಬೇಡಿಕೊಂಡರು.ಅವನೆಂದು ಭಕ್ತಿಯಿಂದ ಬೇಡಿದವರಿಗೆ ಇಲ್ಲವೆಂದಿದ್ದಾನೆ?! ಚೆನ್ನಕೇಶವ ತನ್ನ ಬಾಲೆಯರೊಡನೆ ಬೇಲೂರಿನಲ್ಲಿ ಶಾಶ್ವತನಾದ.ಈ ಅಶಾಶ್ವತ, ನಶ್ವರ ಜಗತ್ತಿನಲ್ಲಿ ಅನಂತ ಸುಖದ, ಅಮಿತಾನಂದದ ರಹದಾರಿಯಾದ. ಆನಂದಬ್ರಹ್ಮನಾದ.

~ ಪ್ರಸನ್ನ 

‘ಪೈ..ಪೈ’ ಮಾತು

ಮುಂಜಾನಿ ಪೇಪರ್ ನಲ್ಲಿ ಮುಳುಗಿದ್ದ ಗಂಡ ಒದರಿದ "ಏ... ಏನೇ... ಮಂದಿ "ದಿನ"ಕ್ಕೊಂದು ಏನೇನೂ ಹೆಸರಿಡ್ತಾರಲ್ಲೇ? ಇಂದ ನೋಡ ಪೈ ದಿನ ಅಂತ"
ಒಳಗಿನಿಂದ ಹೆಂಡ್ತಿ ತಿರುಗಿ ಕೂಗಿದ್ಲು "ಏನ್? ಪುದಿನಾ? ಖಾಲಿ ಕೂತು ಏನೇನಾರ ಕೇಳ್ತೀರಲ್ಲ? ಏನ ಬೇಕ್ ನಿಮಗ?"

ಅಡಗಿ ಮನಿಯಿಂದ ಪಡಸಾಲಿಗೆ ಬಂದ ಹೆಂಡ್ತಿ ಕೇಳಿದ್ಲು "ಏನ್ ಬೇಕು ನಿಮಗ?"

ಗಂಡ: "ನನಗೆ ಏನ್ ಬೇಕಿಲ್ಲ, ಇಂದ ಪೈ ದಿನ ಅಂತ ಹೇಳಿದೆ, ಪೇಪರ್ ನಲ್ಲಿ ಬಂದದ ನೋಡ ss ..." 

ಹೆಂಡತಿ: ಅಂದ್ರ ಗೋವಿಂದ ಪೈ ಅವರ ದಿನ ಏನ್ರಿ?

ಗಂಡ: ಅಲ್ಲ ಮಾರಾಯ್ತಿ  ಗೋವಿಂದ ಪೈ ಅವರ ಹುಟ್ಟು ದಿನ ೨೩ ಮಾರ್ಚ್, ಇವತ್ತು ೧೪ ಮಾರ್ಚ್ ಅಲ್ಲೇನು?
ಆದ್ರೂ ನಿನ್ನ ಈ ಮಾತಿನಿಂದ ಒಂದು ನೆನಪು ಖುಷಿ ತಂದಿತು ನೋಡ...

ಸಣ್ಣಗೆ ಹಾಡು ಗುನು ಗುನು ಸುರು ಆಯಿತು...
"ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ. ನಮ್ಮ ಜನ್ಮದಾತೆಯೆ"

ನಿನಗ ಗೊತ್ತ ಇರತದ, ಗೋವಿಂದ ಪೈ ಅವರು ಕನ್ನಡದ ಪ್ರಥಮ ರಾಷ್ಟ್ರ ಕವಿ...ಇವತ್ತಿನ ಪೈ ದಿನ ಅವರದಲ್ಲ 

ಹೆಂಡತಿ: ಹಂಗಾದರ ಅದೇನೋ ಅಂತಾರಲ್ಲ ಆಪಲ್ ಪೈ ಅಂತ, ಅದರ ದಿನ ಏನು? ತಿನ್ನೂ ವಿಷಯ ಬಂದ್ರ ಅಯ್ತ ನಿಮಗ, ಅದನ್ನ ಮಾಡ್ ಅಂತ ಹೇಳಾಕ ಕರದ್ರ ಏನ್ರಿ ಮತ್ತ?

ಗಂಡ: ಅಲ್ಲ ಇದು ಮತ್ತೊಂದು ಪೈ, ವಿಶೇಷ ಪೈ 

ಹೆಂಡತಿ: ಏನ್ರಿ ವಿಶೇಷ?

ಗಂಡ: ನೋಡಾ, ಇದರ ವಿಶೇಷ ಅಂದ್ರ ಅದರ ಒಂದು ಮುಖ್ಯ ಗುಣ "ಅನಂತ"

ಹೆಂಡತಿ: ಅಂದ್ರ ನೀವು ಅನಂತ ಪೈ ಬಗ್ಗೆ ಹೇಳಕಾತಿರೇನು?

ಗಂಡ: ಎಂತಾ ಒಳ್ಳೆ ಮಂದಿ ಹೆಸರು ನೆನಪಿಸ್ತಿ ನೀನು? ಶಭಾಷ್... ಅದರ ಇಂದಿನ ದಿನ "ಅಮರ ಚಿತ್ರ ಕಥಾ" ದ ಅನಂತ್ ಪೈ ಅವ್ರಿಗೂ ಸಂಬಂಧ ಇಲ್ಲ.
ಇಂದು ಒಂದು ವಿಸ್ಮಯದ ಗಣಿತದ ಸಂಖ್ಯಾ ದಿನ, ಪೈ ಅಂದ್ರ ೩.೧೪ ಸಂಖ್ಯಾ... ನೆನಪದನೋ ಅಥವಾ ಇಲ್ಲೋ?

ಹೆಂಡತಿ: ಈಗ ಗೊತ್ತಾಯತು ನೋಡ್ರಿ... ಸಾಲ್ಯಾಗ ನಮ್ಮ ಮಾಸ್ತರ್ ವರ್ತುಲ ಬಗ್ಗೆ ಕಲಿಸದಾಗ ಇದನ್ನು ಓದಿದ್ದೆ ನೋಡ್ರಿ 

ಗಂಡ: ಹೌದು, ವರ್ತುಲದ ಸುತ್ತಳತೆ ಮತ್ತು ನಡುಗೆರೆ ಇಂದ ಬಂದ ಸಂಖ್ಯಾ ನೋಡ್ ಇದು

ಆಗಲೇ ನನ್ನ ಚಡ್ಡಿ ಗೆಳೆಯ ಗುಂಡ ಬಂದ. ಗುಂಡ ಒಳಗೆ ಬರೋದು, ನನ್ನ ಮಗನ ಪ್ರಶ್ನೆ ನನಗೆ ಬರೋದು ಎರಡು ಒಂದೇ ಸಮಯಕ್ಕೆ ಆಯಿತು

ಮಗ: ಅಪ್ಪಾ.. ಅವತ್ತು ನೀನು ಬ್ಯಾಂಕಿನ ಸಾಲ ಪೈ ಪೈ ತೀರಿಸ್ತೀನಿ ಅಂತ್ತಿದ್ದಿ, ಪೈ ಅಂದ್ರ ನೀನು ಬರೀ ೩ ರೂಪಾಯಿ ೧೪ ಪೈಸೆ ಸಾಲ ಮಾಡಿಯೇನು ?

ಅಪ್ಪ: ಸಾಲ ಎಷ್ಟು ಅಂತ ಕೇಳುವಷ್ಟು ದೊಡ್ಡವನಾದಿಯೇನ ಮಗನೆ? ಆದ್ರೂ ಹೇಳ್ತೀನಿ ಕೇಳಪ್ಪ, ಆ ಪೈ ಪೈ ಅಂದ್ರ ಪ್ರತಿ ಪೈಸೆ ಮಗನೆ, ನಾನು ಎಲ್ಲಾ ಸಾಲ ತೀರಿಸಿ ಬರ್ತೀನಿ ಅಂತ ಹೇಳಿದೆ ಅವತ್ತು 

ಗುಂಡ: ಅಲ್ಲೋ ಸತ್ಯಾ, ಏನು ಸಾಲ, ಪಾಲ ಅಂತ ಮನ್ಯಾಗ ಮಾತ್ ನಡೆದಾದ?

ಸತ್ಯಾ: ಸಾಲ ಅಲ್ಲಪ್ಪಾ,  ನಾನು ಪೈ ದಿನದ ಬಗ್ಗೆ ಮಾತಾಡಕ್ಕ ಹತ್ತೀನಿ, ಇವರಿಗೆ ತಿಳಸಾಕತ್ತೀನಿ ಪೈ ಅಂದ್ರ ಏನು ಅಂತ

ಗುಂಡ: ಛಲೋ ಆತು ನಾನು ಈಗ ಬಂದಿದ್ದು. ನಾನು ಸ್ವಲ್ಪ ತಿಳ್ಕೋತೀನಿ, ಮತ್ತ ಗೊತ್ತಿದ್ರ ತಿಳಿಸ್ತೀನಿ 

ಹೆಂಡತಿ: ಅಲ್ರಿ, ಅದೇನೂ ಅನಂತ, ಅಚ್ಯುತ ಅಂದ್ರಲ್ಲ, ಅದೇನು ವಿಶೇಷ?

ಸತ್ಯಾ:  ಪೈ ಸಂಖ್ಯಾ ಭಾಗಾಕಾರ ಮಾಡಿದಾಗ ಸಿಗುವ ದಶಮಾಂಶ ಬಿಂದು ನಂತರದ ಅಂಕಿ ಕೊನೆಗೊಳ್ಳುವದೇ ಇಲ್ಲ. ಗೂಗಲ್ ಸಂಸ್ಥೆಯ ಉದ್ಯೋಗಿ "ಎಮ್ಮಾ ಹರುಕಾ" ಪೈ ಸಂಖ್ಯೆ ೩೧೫ ಟ್ರಿಲಿಯೆನ್ ಅಂಕಿಯಲ್ಲಿ ಲೆಕ್ಕ ಹಾಕಿದ್ದು ಒಂದು ದಾಖಲೆ. ಅದಕ್ಕೆ ಅದನ್ನು ಅನಂತ, ಅಂದ್ರೆ ಕೊನೆಯಿಲ್ಲದ್ದು ಅಂತ ಹೇಳ್ತಾರೆ ಅಲ್ಲದೆ ಇದು ಗಣಿತದ ಒಂದು ವಿಸ್ಮಯ ಕೂಡಾ ನೋಡ.

ಮತ್ತೊಂದು ಮಜಾ ಕೇಳಿ, ನೀವು ಮೈಯ್ಯಾಗ ದೇವರು ಬಂದದ ಅಂತಾನೋ, ದೆವ್ವ ಬಂದದ ಅಂತಾನೋ ಕೇಳಿರಿ, ಅದ್ರ ಮೈಯ್ಯಾಗ ಕಂಪ್ಯೂಟರ್ ಬಂದದ್ ಕೇಳಿರೇನು? 
ನಮ್ಮ ಶಕುಂತಲಾ ದೇವಿ ಕೇಳಿರಲ್ಲ, ಅವರ ಹಂಗೆ ನಮ್ಮ ರಾಜವೀರ್ ಮೀನಾ ಪೈ ಸಂಖ್ಯಾದ ದಶಮಾಂಶ ಬಿಂದು ನಂತರದ ೭೦೦೦೦ ಅಂಕಿ ನೋಡದ ಹೇಳಿ ಅವ್ನೂ ದಾಖಲೆ ಮಾಡ್ಯಾನ... ಅದಕ್ಕ ಅಂದದ್ದು ಕಂಪ್ಯೂಟರ್ ಇವರ ಮಯ್ಯಾಗ ಬರ್ತದ ಅಂತ (ನಕ್ಕೋತ)

ಗುಂಡ: ಇನ್ನೊಂದು ಆಶ್ಚರ್ಯದ ಸಂಗತಿ ಅಂದ್ರ, ಪೈ ಸಂಖ್ಯಾದ ದಶಮಾಂಶ ಬಿಂದು ನಂತರದ ಅಂಕಿಗೆ ಯಾವುದೇ ಒಂದು ಕ್ರಮಬದ್ಧತೆ ಇಲ್ಲ, ಅದಕ್ಕ ನಾವು ತರ್ಕಾತೀತ ಅನ್ನಬಹುದೇನೋ...

ಸತ್ಯಾ: ಮಂದಿ ಪೈ ವಿಷಯದ ಮೇಲೆ ಬಹಳ ಕೆಲಸ ಮಾಡ್ಯಾರ. ಅವರು "ಪೈ-ಲಿಷ್" ಅಂತ ಭಾಷಾ ಹುಡುಕ್ಯಾರ, ಪೈ ದಾಗ ಬರುವ ಸಂಖ್ಯಾ ದಷ್ಟೇ ಇಂಗ್ಲಿಷ್ ಅಕ್ಷರ ಉಪಯೋಗಿಸಿ ಬರೀತಾ ಹೋಗೋದೇ ಈ ಭಾಷಾ ಸ್ವರೂಪ. ಅಮೆರಿಕನ್ ಮೈಕ್ ಕೀತ್ ಬರೆದ ಪುಸ್ತಕ " Not A Wake: A Dream Embodying π’s Digits Fully For 10000 Decimals "  (೩.೧೪೧೫೯೨೬೫೩೫೮ - ಪುಸ್ತಕದ ಹೆಸರ್ ಕೋಡಾ ಪೈ ಲಿಷ್ ನಲ್ಲಿ ಬರೆದದ್ದು)  ಪೈ ಲಿಷ್ ನಲ್ಲಿ ಬರೆದದ್ದು 

ನಮ್ಮ ಗಣಿತಜ್ಞ ಭಾಸ್ಕರ, ಆರ್ಯಭಟ್ಟ ಮತ್ತು ಮಾಧವ ಎಲ್ಲರೂ ಕೂಡಾ ಪೈ ಕುರಿತು ಬಹಳ ಶೋಧನೆ ಮಾಡ್ಯಾರ. ಅವರನ್ನಂತೂ ಇವತ್ತು ಮರೆಯೋಕ್ಕಾಗಲ್ಲ

ಹೆಂಡತಿ: ನಡೀರಿ ಎಲ್ಲಾರೂ, ಇಲ್ಲಿ ಹತ್ತಿರ್ದಾಗ ಹವನ ಮಾಡ್ಯಾರ. ಬಾ ಅಂತ ಕರೆದಾರ 

ಎಲ್ಲರೂ ಅಲ್ಲಿಗೆ ಹೋದಾಗ ಅಲ್ಲಿ ಕಂಡ ಮಂಡಳಗಳ ತುಂಬೆಲ್ಲ ಕಂಡಿದ್ದು "ಪೈ". 
ಸೋಮವಾರ, ಶಿವನ ವಾರ - ನೆನಪಾದ ಹಾಡು " ಶಿವ ಶಿವ ಎಂದರೆ ಭಯ ಇಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ"
ಪೈ ದಿನ  ಅಂತ ನಾನು ಅವತ್ತ ಮನಸಾಗ ಹಾಡಿದ್ದು 

ಪೈ ಪೈ ಇಲ್ಲದ ಜಗವಿಲ್ಲ,
ಪೈ ಸಂಖ್ಯಾ ಗೆ ಸಾಟಿ ಬೇರಿಲ್ಲ, 
ಪೈ ಇಲ್ಲದ್ ವರ್ತುಲಾ ಇಲ್ಲ, 
ವರ್ತುಲ ಇಲ್ಲದ್ ರೇಖಾ ಗಣಿತ ಇಲ್ಲ...

ಪೈ ಪೈ ಇಲ್ಲದ ಜಗವಿಲ್ಲ,
ಪೈ ಸಂಖ್ಯಾ ಗೆ ಸಾಟಿ ಬೇರಿಲ್ಲ.

~ ಪ್ರಮೋದ್

ಜೋಗಿಯ ಮಾಯೆ

ನಲುಮೆಯ ಓದುಗರೇ ನಮಸ್ಕಾರ. ಈ ‘ಜೋಗಿ-ಜಂಗಮ’ ಪದದಲ್ಲೇ ಅದೇನೋ ಮೋಡಿ, ಸೆಳೆತ ಕಾಣುತ್ತದೆ ನನಗೆ. ಈ ಜೋಗಪ್ಪನ ಅರಮನೆ, ತಳಮನೆಗಳು ಅಷ್ಟು ಸುಲಭಕ್ಕೆ ದಕ್ಕುವಂಥವಲ್ಲ. ಜಾನಪದದಿಂದ ತೀರ ಇತ್ತೀಚಿನ ಸಾಹಿತ್ಯದಲ್ಲೂ ಇವನ ಸಾಮ್ರಾಜ್ಯವಿದೆ. ಮರುಳ ಮಾಡಾಕ ಹೋದ ಮರುಳಸಿದ್ಧನ ನಾರಿಯೂ ಇವನ ಕೈಯಾಗಿನ ಕಿನ್ನರಿಯಾಗಿ ಮೈಯಾಗ ಬಂದ್ಹಂಗ ನುಡಿಯುತ್ತಾಳೆ; ಎಳ್ಳಿನ ಹೊಲ, ಒಳ್ಳೆಯ ಗಂಡನನ್ನು ಬಿಟ್ಟು ಇವನ ಹಿಂದೆ ನಡೆಯುತ್ತಾಳೆ. ಈ ಜೋಗಿ ಹಾಡುತ್ತಾನೆ;ಕಾಡುತ್ತಾನೆ. ಇಂಥ ಕಿಂದರಿ ಜೋಗಿಯನ್ನು ಇಂದು ಅನಿವಾಸಿಯಂಗಳಕ್ಕೆ ಕರೆತಂದಿದ್ದಾರೆ ಅನುರಾಧ ಜಗಳೂರ ಅವರು   ‘ಪುಸ್ತಕಕ್ಕೊಂದು ಕಥೆ’ ಸರಣಿಯಲ್ಲಿ.

ಬೆಳಗಿನ ತಿಂಡಿ,ಕಾಫಿ ಪೂರೈಸಿ ಮೇಲೆ ಉಪ್ಪರಿಗೆಗೆ ಹೋಗಿ ಬರೆಯತೊಡಗಿ ಮಧ್ಯಾಹ್ನದ ಊಟದ ಹೊತ್ತಿಗಾಗಲೇ ಅಂದರೆ ಸುಮಾರು 4-5 ಗಂಟೆಗಳಲ್ಲಿಯೇ ಕುವೆಂಪು ಇದನ್ನು ಬರೆದು ಮುಗಿಸಿದ್ದರಂತೆ!! (ನೆನಪಿನ ದೋಣಿಯಲ್ಲಿ.ಪುಟ ಸಂಖ್ಯೆ 724)

ತನ್ನ ರೆಕ್ಕೆಗಳಲ್ಲಿ ರಹಸ್ಯಮಯ ಕುತೂಹಲಕಾರಿ ಕಥೆಯೊಂದನ್ನು ಹೊತ್ತ  ರೆಕ್ಕೆಹುಳಗಳ ಕಥೆಯೊಂದನ್ನು ಎಂದಿನ ತಮ್ಮ ಅನನ್ಯ ಶೈಲಿಯಲ್ಲಿ ನಿಮಗಾಗಿ ತಂದಿದ್ದಾರೆ  ರಾಮಮೂರ್ತಿಯವರು. 

ಬನ್ನಿ; ಓದಿ; ಒಂದೆರಡು ಪದಗಳಲ್ಲಾದರೂ ಸರಿಯೇ..ಅನಿಸಿಕೆ ಹಂಚಿಕೊಳ್ಳಿ.ಲೇಖಕರನ್ನು ಪ್ರೋತ್ಸಾಹಿಸಿ..ಸಂಪಾದಕರನ್ನು ಪೋಷಿಸಿ.

~ ಸಂಪಾದಕಿ

ನನ್ನ ನೆಚ್ಚಿನ ಪುಸ್ತಕ(ಗಳು)

ಅನುರಾಧ ಜಗಳೂರು ಮೂಲತಃ ಮೈಸೂರಿನವರು. ಈಗ ರೆಡಿಂಗ್ನಲ್ಲಿ  ನೆಲೆಸಿದ್ದಾರೆ. ಗಣಿತ ಶಾಸ್ತ್ರದ ಅಧ್ಯಾಪಕಿ. ರೆಡಿಂಗ್ ಕನ್ನಡ ಮಿತ್ರರು (ರೆಕಮಿ) ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು. ಓದು, ಬರಹ, ಸಂಗೀತ, ಬೆಟ್ಟಗುಡ್ಡಗಳಲ್ಲಿ ನಡಿಗೆ, ತೋಟಗಾರಿಕೆ, ಮುಂತಾದವು ಪ್ರಿಯವಾದ ಹವ್ಯಾಸಗಳು.
ನನ್ನಂತಹ ಪುಸ್ತಕ ಪ್ರಿಯರಿಗೆ ‘ನಿನಗೆ ವಿಶೇಷ ಮಹತ್ವವಿರುವ, ನೆಚ್ಚಿನ ಪುಸ್ತಕ ಯಾವುದು’ ಎಂದು ಎಲ್ಲಾದರೂ ಕೇಳುವುದುಂಟೆ? ಕೇಳಿದವರು ಪ್ರಶ್ನೆಯನ್ನು ಮುಗಿಸಿ ಉಸಿರು ತೆಗೆದುಕೊಳ್ಳುವಷ್ಟರಲ್ಲಿ ನಾನು ಮುಂದು, ತಾನು ಮುಂದು ಎಂದು ನನ್ನ ಕಣ್ಣಿನ ಮುಂದೆ ೧೦-೨೦ ಪುಸ್ತಕಗಳ ನೂಕು ನುಗ್ಗಲು. ನನ್ನಂಥವರಿಗೆ ಅಂತಹ ಪ್ರಶ್ನೆಯನ್ನು ಕೇಳುವುದು ಶಾಂಪೇನ್ ಬಾಟಲಿನ ಕಾರ್ಕ್ಸ್ ತೆಗೆದ ಹಾಗೆ. ಪಾಪ, ಕೇಳಿ ತಪ್ಪು ಮಾಡಿದವರು, ಚಿಮ್ಮಿ ಹರಿಯುವ, ತಡೆದು ನಿಲ್ಲಿಸಲಾಗದ ನನ್ನ ಉತ್ತರವನ್ನು ಕೇಳಿಸಿಕೊಳ್ಳಬೇಕಾಗುವುದು. 


ನೆಚ್ಚಿನ ಪುಸ್ತಕ ಪಟ್ಟಕ್ಕೆ ಸ್ಪರ್ಧಿಸುವ ೧೦-೨೦ ಪುಸ್ತಕಗಳಲ್ಲಿ ವಿಶೇಷವಾದ ಒಂದನ್ನು ಆರಿಸುವುದಾದರೂ ಹೇಗೆ? ಗಟ್ಟಿ ಮನಸ್ಸು ಮಾಡಿ ಅವುಗಳಲ್ಲಿ  ೧೦-೧೨ನ್ನು ಹಿಂದಕ್ಕೆ ತಳ್ಳಿ, ಮಿಕ್ಕವನ್ನು ತುಲನೆ ಮಾಡಿದೆ ಎಂದುಕೊಳ್ಳಿ. ಆಗಲೂ ಸಂಕಷ್ಟವೇ. ಚಿಕ್ಕ ಹುಡುಗಿಯಾಗಿದ್ದಾಗ ಪದೇ ಪದೇ ಓದಿ ಸಂತೋಷಪಡುತ್ತಿದ್ದ ಎ.ಆರ್.ಕೃಷ್ಣಶಾಸ್ತ್ರಿಗಳ  ‘ಮಕ್ಕಳ ಮಹಾಭಾರತ’ ಅಥವಾ ‘ನಿರ್ಮಲ ಭಾರತಿ’ಯ ಬಗ್ಗೆ ಹೇಳಲೇ? ಅಥವಾ “ಈಗ ದೊಡ್ಡವಳಾಗಿದ್ದೀಯೆ, ಮಕ್ಕಳ ಮಹಾಭಾರತ ಸಾಕು, ಇದನ್ನು ಓದು” ಎಂದು ಅಮ್ಮ ಕೈಯಲ್ಲಿತ್ತ, ನಾನು ಓದಿದ ಮೊಟ್ಟ ಮೊದಲ ವಯಸ್ಕರ ಪುಸ್ತಕ - ಕೃಷ್ಣಶಾಸ್ತ್ರಿಗಳದ್ದೇ ಆದ ‘ವಚನ ಭಾರತ’ದ ಬಗ್ಗೆ  ಹೇಳಲೇ? ಪ್ರತಿ ಬೇಸಿಗೆ ರಜದಲ್ಲೂ ಒಮ್ಮೆ ಅದನ್ನು ಪುನಃಪಠಿಸುತ್ತಿದ್ದೆನಲ್ಲಾ! ಕಾಲೇಜಿನಲ್ಲಿ ಪಠ್ಯಪುಸ್ತಕವಾಗಿದ್ದ(ರೂ) ಬಹಳ ಪ್ರಿಯವಾಗಿದ್ದ ಕೆ ವಿ ಅಯ್ಯರ್ ಅವರ ರೂಪದರ್ಶಿ? ಅದರಲ್ಲಿ ರೂಪಿಸಿರುವ ಕೆಲವು ಸನ್ನಿವೇಶಗಳು ಇಷ್ಟು ವರ್ಷಗಳ ನಂತರವೂ ಸ್ಪಷ್ಟವಾಗಿ ನೆನಪಿನಲ್ಲಿದ್ದು ನನ್ನ ಮನಸ್ಸನ್ನು ಈಗಲೂ ಹಿಂಡುತ್ತದಲ್ಲಾ!.  

ಮೇಲೆ ಹೇಳಿದ ನೂಕುನುಗ್ಗಲಿನಲ್ಲಿದ್ದ ಇಂಗ್ಲಿಷ್ ಪುಸ್ತಕಗಳನ್ನು ನಿರ್ಲಕ್ಷಿಸುವಂತಿಲ್ಲ. ಯಥೇಚ್ಛವಾಗಿ ಲಭ್ಯವಾಗಿರುವುದೆಂಬ ಕಾರಣ - ಅದರಲ್ಲೂ ನಾನ್-ಫಿಕ್ಷನ್  ಪುಸ್ತಕಗಳು ಕನ್ನಡಕ್ಕಿಂತ ಇಂಗ್ಲಿಷ್ನಲ್ಲಿ ಹೇರಳವಾಗಿ ಲಭ್ಯವಾಗಿರುವುದೆಂಬ ಒಂದೇ ಕಾರಣದಿಂದಾದರೂ ನಾನು ಇಂಗ್ಲಿಷ್ ಪುಸ್ತಕಗಳನ್ನು ಓದಿರುವುದೇ ಹೆಚ್ಚು. ಪೋಲೆಂಡಿನ ಭೌತವಿಜ್ಞಾನಿ ಲಿಯೊಪಾಲ್ಡ್ ಇನ್ಫೆಲ್ಡ್ ಅವರ ಆತ್ಮ ಕಥೆ ‘ಕ್ವೆಸ್ಟ್’ ನನ್ನ ಅತ್ಯಂತ ಮೆಚ್ಚಿನ ಪುಸ್ತಕ ಎಂದು ಹಲವಾರು ವರ್ಷ ಹೇಳುತ್ತಿದ್ದೆ. ಈಗಲೂ ಮೆಚ್ಚಿನ ಪುಸ್ತಕವೇ. ಆದರೆ ಇತರ ಪುಸ್ತಕಗಳು ಬಹು ಬೇಗ ಅದರ ಜೊತೆ ಪೈಪೋಟಿಗೆ ಬಂದವು. ಆಲಿಸ್ ವಾಕರ್ ಅವರ ‘ದಿ ಕಲರ್ ಪರ್ಪಲ್’- ಇದು ನನ್ನ ಕೈಗೆ ಬಂದಾಗ ಹೇಗೆ ಛಿದ್ರ ಚೂರಾಗಿತ್ತೆಂದರೆ, ಬ್ಯಾಗ್ ಒಂದರಲ್ಲಿ ತೆರೆದಿಟ್ಟುಕೊಂಡಿದ್ದು ಒಂದೊಂದೇ ಹಾಳೆ ಹೊರತೆಗೆದು ಓದಿದ್ದೆ.  ಹಾರ್ಪರ್ ಲೀ ಅವರ ’ಟು ಕಿಲ್ ಎ ಮಾಕ್ಕಿಂಗ್ ಬರ್ಡ್’- ಮುಂದೆ ನನ್ನ ಪತಿಯಾದವ ನನಗಾಗಿ ತಂದು ಕೊಟ್ಟ ಮೊದಲ ಪುಸ್ತಕ. ಓದಿ (ಪುಸ್ತಕದಿಂದಲೂ) ಮೋಹಿತಳಾಗಿದ್ದೆ. ಜೇಮ್ಸ್ ಮಿಚೆನೆರ್ ಅವರ ‘ಸೋರ್ಸ್’ ಮರೆಯಲು ಸಾಧ್ಯವೇ? ಸುಮಾರು ೯೦೦-೧೦೦೦ ಪುಟಗಳ ಆ ಪುಸ್ತಕವನ್ನು ಮನೆಯವರೆಲ್ಲ ಓದಿ ಚರ್ಚೆ ಮಾಡಿ ಸಂತೋಷ ಪಟ್ಟಿದ್ದೆವು. ಆ ಪುಸ್ತಕ ನನ್ನ ಕೈ ತಪ್ಪಿ ಹೋಯಿತೆಂದು ಬೇಜಾರಿಸಿಕೊಂಡದ್ದನ್ನು ಕೇಳಿ ನನ್ನ ಮಾವನವರು ಕೆಲಸದ ಮೇಲೆ ಮುಂಬೈಗೆ ಹೋದವರು ಆ ಪುಸ್ತಕಕ್ಕಾಗಿ ಹುಡುಕಾಡಿ, ರಸ್ತೆಯ ಬದಿಯ ಕಲ್ಲುಹಾಸಿನ ಮೇಲಿನ ಪುಸ್ತಕದಂಗಡಿಯಲ್ಲಿ ಕೊಂಡು ತಂದುಕೊಟ್ಟಿದ್ದರು. ನಿಜ, ಕೆಲವೊಮ್ಮೆ ಪುಸ್ತಕದೊಳಗೂ ಸುಂದರ ಕಥೆ, ನಮ್ಮ ಕೈಸೇರಿದ ಆ ಪುಸ್ತಕದ ಪ್ರತಿಗೂ ಒಂದು ಸುಂದರ ಕಥೆ ಇರುತ್ತದೆ.


ಶೆಲ್ಫ್ ನಲ್ಲಿ ಕುಳಿತು ಪೈಪೋಟಿ ಮಾಡುತ್ತಿರುವ ಪುಸ್ತಕಗಳನ್ನು ಅಲ್ಲಿಯೇ ಕೈಬಿಟ್ಟು ನಾನು ಬೇರೆಯೇ ಒಂದು ಪುಸ್ತಕವನ್ನು ಹೊರತೆಗೆದಿದ್ದೇನೆ. ಇದು ನನ್ನ ಬಟ್ಟೆಯ ಬೀರುವಿನಲ್ಲಿ, ಒಂದು ಜಿಪ್ ಲಾಕ್  ಬ್ಯಾಗಿನಲ್ಲಿ ಜೋಪಾನವಾಗಿರುವ, ಕೇವಲ ೨೬ ಪುಟದ ಕಿರುಪುಸ್ತಕ. ಚಿಕ್ಕವರಿದ್ದಾಗ ನಮ್ಮ ತಂದೆಯವರು (ಇದೇ ಪ್ರತಿಯಲ್ಲನ್ನಲ್ಲದಿದ್ದರೂ) ಓದಿ ಆನಂದ ಪಟ್ಟ ಪುಸ್ತಕ. ನಾನು ಚಿಕ್ಕವಳಿದ್ದಾಗ ನನ್ನ ಕೈಯಲ್ಲಿ ಓದಿಸಿ ನನ್ನ ಜೊತೆ ನಕ್ಕು ಅವರೂ ಸಂತೋಷ ಪಟ್ಟ ಪುಸ್ತಕ. ನನ್ನ ಮಗ ಪುಟ್ಟವನಾಗಿದ್ದಾಗ ನಾನು ಅವನಿಗೆ ಓದಿ ಹೇಳಿದ ಪುಸ್ತಕ : ಕುವೆಂಪು ಅವರ ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’!
 
ಇದು ರಾಬರ್ಟ್ ಬ್ರೌನಿಂಗ್ ಅವರ ‘ಪೈಡ್ ಪೈಪರ್ ಆಫ್ ಹ್ಯಾಮ್ಲಿನ್’ ಪದ್ಯದಿಂದ ಪ್ರೇರಿತರಾಗಿ ಬರೆದ ಅತ್ಯಂತ ಸೊಗಸಾದ ಕಥನಕಾವ್ಯ. 

“ತುಂಗಾತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿನ ಜನಗಳಿಗತಿಗೋಳಾಟ”

ಎಂಬ ಸಾಲುಗಳಿಂದ ಪ್ರಾರಂಭವಾಗುವ ಈ ಪದ್ಯದ ೪೨೦ ಸಾಲುಗಳಲ್ಲೂ ಎದ್ದು ಕಾಣುವ ತಿಳಿ ಹಾಸ್ಯ, ವಿಶೇಷ ಕಲ್ಪನಾ ಶಕ್ತಿ ಯಾರ ಮನಸ್ಸನ್ನೇ ಆಗಲಿ ಸೂರೆಗೊಳಿಸುತ್ತದೆ. 


ಇಲಿಗಳ ಕಾಟ ಎಷ್ಟಿತ್ತೆಂದರೆ, 

“ಭೃಂಗಾಮಲಕದ ತೈಲವ ಹಚ್ಚಿದ ಶೇಷಕ್ಕನ ನುಣ್ಣನೆ ಫಣಿವೇಣಿ
ಬೆಳಗಾಗೇಳುತ ಕನ್ನಡಿ ನೋಡೆ ಇಲಿಗಳಿಗಾಗಿತ್ತೂಟದ ಫೇಣಿ”

ಇಂತಹ  ಲಯಬದ್ಧ ಸಾಲುಗಳಂತೂ ಮತ್ತೆ ಮತ್ತೆ ಮೆಲಕು ಹಾಕಿಕೊಳ್ಳುವಂತಹವು.

ಇಲಿಗಳು, ಮನುಷ್ಯರು ಮಲಗಿದ್ದಾಗ ಮಾತ್ರ ಚೇಷ್ಟೆ ಮಾಡುತ್ತಿರಲಿಲ್ಲ! 

ಸಿದ್ದೋಜೈಗಳು ಶಾಲೆಗೆ ಹೋಗಿ 
ಪಾಠವ ಬೋಧಿಸುತ್ತಿದ್ದಾಗ 
ಅಂಗಿಯ ಜೇಬಿಂ ಹೆಳವಿಲಿಯೊಂದು 
ಚೆಂಗನೆ ನೆಗೆಯಿತು ತೂತನು ಮಾಡಿ 
ಲೇವಡಿ ಎಬ್ಬಿಸೆ ಬಾಲಕರೆಲ್ಲ 
ಗುರುಗಳಿಗಾಯಿತು ಬಲು ಗೇಲಿ 

ಇಲಿಗಳ ಕಾಟ ತಡೆಯಲಾಗದ ಜನರೆಲ್ಲರೂ ಊರಿನ ಗೌಡನನ್ನು ಒತ್ತಾಯಿಸಿದಾಗ ಆತ, ಇಲಿಗಳನ್ನು ನಿರ್ನಾಮ ಮಾಡಿದವರಿಗೆ ಆರು ಸಾವಿರ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಡುವುದಾಗಿ ಘೋಷಿಸಿದ. 

ಆಗ ಕಿಂದರಿ ನುಡಿಸುತ್ತಾ, 

“ಕೆದರಿದ ಕೂದಲ ಗಡ್ಡದ ಜೋಗಿ 
ನಾನಾ ಬಣ್ಣದ ಬಟ್ಟೆಯ ಜೋಗಿ” ಬಂದವನೇ ಕಿಂದರಿ ಜೋಗಿ! !
 
ಇಲಿಗಳನ್ನು ಓಡಿಸುವ ಅವನ ಅನುಭವದ ಬಗ್ಗೆ ವಿಚಾರಿಸಿದಾಗ, ಆತ ತನ್ನ ಪರಾಕ್ರಮವನ್ನು ಹೇಳಿಕೊಂಡ. ದೇವಲೋಕದಲ್ಲಿ ಇಲಿಗಳ ಕಾಟ ಹೆಚ್ಚಾದಾಗ,
 
“ಕಾಮನ ದಹಿಸಿದ ಹಣೆಗಣ್ಣು 
ಮೂಷಿಕರೋಮವ ಸುಡಲಿಲ್ಲ” ವಂತೆ!

“ಕಡೆಗಾ ವಿಷ್ಣುವೆ ಚಕ್ರವ ಹಿಡಿದು
ಮೂಷಿಕಕುಲವನೆ ಕೊಲ್ಲುವೆನೆಂದು 
ಕದನವನಾಡಲು ಇಲಿಗಳ ಕೂಡೆ
ಮೂರ್ಛೆಗೆ ಸಂದನು ಬಲುಬಳಲಿ“ 

ಆದರೆ, ನಮ್ಮ ಕಿಂದರಿ ಜೋಗಿ ಎಂತಹ ಪ್ರವೀಣನೆಂದರೆ, ಶಿವ, ವಿಷ್ಣುಗಳು ಸೋತ ಯುದ್ಧದಲ್ಲಿ ಆತ ಜಯಗಳಿಸಿದ! ಕುವೆಂಪು ಅವರದು ಅದೆಂತಹ ಕಲ್ಪನಾಶಕ್ತಿ!

ಕಿಂದರಿ ಜೋಗಿ ತನ್ನ ಕಿಂದರಿ ನುಡಿಸಿದಾಗ ಏನಾಯಿತೆಂಬುದನ್ನು ತಿಳಿಸುವ ಈ ಕೆಳಗಿನ ಸಾಲುಗಳು ಮಕ್ಕಳಿಗಾಗಲಿ ದೊಡ್ಡವರಿಗಾಗಲಿ ಶುದ್ಧ, ಸರಳ, ಖುಷಿಯನ್ನುಂಟುಮಾಡುವಂತಹವು. 

“ಹಾರುತ ಬಂದವು ಓಡುತ ಬಂದವು
ನೆಗೆಯುತ ಬಂದವು ಕುಣಿಯುತ ಬಂದವು
ಜೋಗಿಯು ಬಾರಿಸೆ ಕಿಂದರಿಯ


ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ
ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ, ಮಾವಿಲಿ, ಭಾವಿಲಿ, ಅಕ್ಕಿಲಿ, ತಂಗಿಲಿ,
ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ ಎಲ್ಲಾ ಬಂದವು ಓಡೋಡಿ
ಜೋಗಿಯು ಬಾರಿಸೆ ಕಿಂದರಿಯ”

ನನ್ನ ಪುಟ್ಟ ಮಗನಿಗೆ ಪದ್ಯದ ಇತರ ಎಷ್ಟೋ ಸಾಲುಗಳನ್ನು ವಿವರಿಸಿ ಹೇಳಬೇಕಾಯಿತಾದರೂ, ಈ ಮೇಲಿನ ಸಾಲುಗಳನ್ನು ಲಯಬದ್ಧವಾಗಿ ಓದಿದಾಗ ಮಾತ್ರ ಅವನಿಗೆ ತಡೆಯಲಾರಷ್ಟು ನಗು! ಕುಣಿಯುತ್ತ ಕುಪ್ಪಳಿಸುತ್ತ ಆನಂದಪಟ್ಟ. 

ನಾನು ನನ್ನ ಚಿಕ್ಕ ವಯಸ್ಸಿನಲ್ಲಿ ಪುಸ್ತಕದ ಸಾಲುಗಳನ್ನು ಜೋರಾಗಿ ಓದಿದಾಗ ಅಮ್ಮ, ಅಣ್ಣ ಇಬ್ಬರ ಆನಂದದ ನಗು, ಹಾಗೂ ಕಣ್ಣಲ್ಲಿನ ಹೊಳಪನ್ನು ಎಂದೆಂದಿಗೂ ಮರೆಯಲಾರೆ. ಇಂತಹ ಆಹ್ಲಾದಕರ ನೆನಪುಗಳನ್ನು ತರುವ ಪುಸ್ತಕ ಪುಟ್ಟದಾದರೂ ವಿಶೇಷವಾದುದಲ್ಲವೇ? 

ಈಚೆಗೆ ಈ ಪುಸ್ತಕ ಮರು ಮುದ್ರಣವಾಗಿ ಅಂಗಡಿಗಳಲ್ಲಿ ಸಿಗುತ್ತಿರುವಂತಿದೆ, ಆದರೆ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಮಗ ನಾಲ್ಕೈದು ವರ್ಷದವನಿದ್ದಾಗ ನನಗೆ ಅಂಗಡಿಯಲ್ಲಿ ಸಿಕ್ಕಿರಲಿಲ್ಲ. ಅಣ್ಣನ ಗ್ರಂಥಾಲಯದಲ್ಲಿದ್ದ ಪುಸ್ತಕವನ್ನು ನಾನು ತೆಗೆದುಕೊಂಡು ಹೋಗಲೇ ಎಂದು ಕೇಳಿದೆ. ಅಣ್ಣ ತೆಗೆದುಕೊಂಡು ಹೋಗು, ಹುಷಾರಾಗಿ ಇಟ್ಟುಕೋ ಎಂದು ಹೇಳಿದರು. ತೆಳುವಾದ, ಸವೆದು ಹೋಗಿರುವ ಪುಸ್ತಕ. ಇತರ ಧಡೂತಿಗಳ ಮಧ್ಯೆ ಕಳೆದುಹೋಗದಿರಲೆಂದು ಪ್ರೀತಿಯಿಂದ ಭದ್ರವಾಗಿ ಬಟ್ಟೆ ಬೀರುವಿನಲ್ಲಿ ಇಟ್ಟುಕೊಂಡಿದ್ದೇನೆ.  

~ ಅನುರಾಧ ಜಗಳೂರು

ಮೂಲ :  ಸರ್ ಅರ್ಥರ್ ಕಾನಾನ್ ಡೊಯಲ್ ಬರೆದ  The Strand magazine  ನಲ್ಲಿ ಪ್ರಕಟವಾಗಿದ್ದ ಕಥೆ :  The Story of the Beetle Hunter (೧೮೯೬)

ನಾನು ಆಗತಾನೆ ವೈದ್ಯಕೀಯ ಪದವಿಯನ್ನು ಪಡೆದು ಲಂಡನ್ ಗೋವರ್ ಸ್ಟ್ರೀಟ್ ನಲ್ಲಿ  ಬಾಡಿಗೆ ಮನೆಯಲ್ಲಿ ವಾಸಕ್ಕೆ ಬಂದೆ, ಹೆಚ್ಚಾಗಿ ಹಣ ಇರಲಿಲ್ಲ , ಕೆಲಸ ಇನ್ನು ಸಿಕ್ಕಿರಲಿಲ್ಲ.  ನನ್ನ ಆಸಕ್ತಿ ವೈದಕೀಯಗಿಂತ ಪ್ರಾಣಿ ಶಾಸ್ತ್ರ (   Zoology ) ಮತ್ತು ವಿಜ್ಞಾನ (Science} ಮೇಲಿತ್ತು. ಆದರೆ ಹಣಕಾಸಿನ ಒತ್ತಡದಿಂದ ಯಾವ ಕೆಲಸ ವನ್ನು ಮಾಡುವುದಕ್ಕೂ ತಯಾರಿದ್ದೆ. ಒಂದು ದಿನ ಲಂಡನ್ ದಿನಪತ್ರಿಕೆ The Standard ಈ ಜಾಹೀರಾತು ನೋಡಿದೆ.

" wanted for one or more days services of a medical man. it is essential that he should be man of strong physique, of steady nerves and of a resolute nature, knowledge of entomology preferred. Apply 77 Brooke Street/ Applications must be made before 12'o clock today. 

ನಾನು ಮೇಲೆ ಹೇಳಿದಂತೆ. ಪ್ರಾಣಿಶಾಸ್ತ್ರ ಅದರಲ್ಲೂ ,  ಕೀಟಶಾಸ್ತ್ರ ನನಗೆ ಪ್ರಿಯವಾದ ವಿಷಯವಾಗಿತ್ತು, ಚಿಕ್ಕಂದಿನಿಂದ ಅನೇಕ ಮಾದರಿಯ ರೆಕ್ಕೆ ಹುಳ ( Beetles) ಗಳನ್ನು ಸಂಗ್ರಹಿಸಿದ್ದೆ. ಈ ಕೆಲಸದ ಜಾಹೀರಾತು ಸ್ವಲ್ಪ ವಿಚಿತ್ರವಾಗೇ ತೋರಿತು.  ಗಟ್ಟಿ ಮುಟ್ಟಾದ ವೈದ್ಯ ಮತ್ತು ಕೀಟಶಾಸ್ತ್ರದ ತಿಳಿವು,  ಅದೂ  ಅಲ್ಲದೆ ಈ ಕೆಲಸ ಕೇವಲ ತಾತ್ಕಾಲಿಕ ಅಷ್ಟೇ,  ಆದರೆ ಹಣದ ಅವಶ್ಯಕತೆ ಇತ್ತು . ತಕ್ಷಣ ಕೊಟ್ಟಿದ್ದ ವಿಳಾಸಕ್ಕೆಹೊರಟು  ಹನ್ನೆರಡು ಗಂಟೆ ಮುಂಚೆ ತಲಪಿದಾಗ ಒಬ್ಬ ನನ್ನ ವಯಸ್ಸಿನ ತರುಣ ಸಪ್ಪೆ ಮುಖ ದಲ್ಲಿ ಹೊರಗೆ ಬಂದ, ಅಂದರೆ ಇವನಿಗೆ ಕೆಲಸ ಸಿಕ್ಕಿರಲಿಲ್ಲ ಅನ್ನುವ ಸಂದೇಹ ಬಂತು. ಬಾಗಿಲು ತಟ್ಟಿದೆ , ಒಬ್ಬ ಸಮವಸ್ತ್ರದ ಸೇವಕ ಬಾಗಿಲು ತೆಗದು ಏನು ಬೇಕಾಗಿತ್ತೆಂದು  ಕೇಳಿದ.  ಕೆಲಸದ ಬಗ್ಗೆ ಅಂತ ಹೇಳಿದಾಗ " ಸರಿ ನಿಮ್ಮನ್ನು ಲಾರ್ಡ್ ಲಿಂಚ್ಮಿಯರ್ ನೋಡುತ್ತಾರೆ , ಗ್ರಂಥಾಲಯದಲಿದ್ದಾರೆ ಬನ್ನಿ " ಅಂತ ಹೇಳಿ ಒಂದು ದೊಡ್ಡ ಕೋಣೆಗೆ ಕರೆದೊಯ್ದ.   ಇವರ ಹೆಸರು ಎಲ್ಲೊ ಕೇಳಿದ ಹಾಗಿದೆ ಆದರೆ ಜ್ಞಾಪಕ ಬರಲಿಲ್ಲ.
ಲಾರ್ಡ್ ಲಿಂಚ್ಮಿಯರ್, ಸುಮಾರು ಐವತ್ತು  ವಯಸ್ಸಿರಬಹುದು, ಸಣ್ಣ ಮೈಕಟ್ಟು ದೊಡ್ಡ ಮೇಜಿನ ಮುಂದೆ ಕೂತು ಸೇವಕ ಕೊಟ್ಟಿದ್ದ ನನ್ನ ವಿಸಿಟಿಂಗ್ ಕಾರ್ಡ್ ಮೇಲೆ ಎತ್ತಿ ತೋರಿಸಿ 
" ನೀವು ನಮ್ಮ ಜಾಹೀರಾತನ್ನು ನೋಡಿ ಬಂದಿದ್ದೀರಾ ಡಾ.  ಹ್ಯಾಮಿಲ್ಟನ್ ?" ಅಂದರು 
"ಹೌದು ಸರ್ "
" ಜಾಹೀರಾತನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಈ ಕೆಲಸಕ್ಕೆ ಅರ್ಹತೆ ಇದೆಯಂದು ಭಾವಿಸಿದ್ದೀರಾ ?"
" ನನ್ನ ಪ್ರಕಾರ ಹೌದು  ಸರ್ "
"ನಿಮ್ಮಮೈಕಟ್ಟು  ನೋಡಿದರೆ ನೀವು ಬಲಶಾಲಿ"
"ನನ್ನ ಭಾವನೆ ಅದೇ ಸರ್ "
" ನಿಮ್ಮ ಜೀವನದಲ್ಲಿ ಎಂದಾದರೂ ಅಪಾಯ ತರುವ ಸಂಧರ್ಬವನ್ನು ಎದಿರಿಸಿದ್ದೀರಾ ?"
"ಅಂತಹ ಸಂದರ್ಭ ಹಿಂದೆ ಬಂದಿಲ್ಲ"
" ಸರಿ, ಅಂತಹ ಸಮಯ ಮುಂದೆ  ಬಂದರೆ "
" ಅದನ್ನು ಎದಿರಿಸುವ ಧೈರ್ಯ ನನಗಿದೆ ಅನ್ನುವುದರಲ್ಲಿ  ಸಂದೇಹ ಇಲ್ಲ ಸರ್ "
" ನಿಮ್ಮನ್ನು ನೋಡಿದರೆ ನನಗೂ ಅದೇ ಭಾವನೆ ಬಂತು , ಈಗ ಎರಡನೇ ವಿಷಯಕ್ಕೆ  ಹೋಗೋಣ ಡಾ. ಹ್ಯಾಮಿಲ್ಟನ್ "
"ಕೇಳಿ ನನಗೆ ಗೊತ್ತಿದ್ದರೆ ಉತ್ತರಿಸುತ್ತೇನೆ "
" ಕ್ರಿಮಿ ಕೀಟಗಳ , ಅದರಲ್ಲೂ ರೆಕ್ಕೆ ಹುಳ ( Beetles) ಬಗ್ಗೆ ನಿಮಗೆ ಏನು ಗೊತ್ತಿದೆ ?"
ನನಗೆ ಈ ಪ್ರಶ್ನೆ  ಬಹಳ ವಿಚಿತ್ರವಾಗಿತ್ತು, ನನ್ನ  ಗೇಲಿ ಮಾಡುತ್ತಿದ್ದಾರ ಎನ್ನುವ ಸಂಶಯವೂ  ಮನಸ್ಸಿಗೆ ಬಂತು, ಆದರೆ ಲಾರ್ಡ್ ಲಿಂಚ್ಮಿಯರ್  ಒಬ್ಬ ಗಂಭೀರ ಮತ್ತು ವಿದ್ಯಾವಂತ ಮನುಷ್ಯ ಅನ್ನುವುದರಲ್ಲಿ  ಏನೂ   ಸಂದೇಹ ಇರಲಿಲ್ಲ ಆದರೂ ಈ ಪ್ರೆಶ್ನೆ ಅರ್ಥವಾಗಲಿಲ್ಲ. ನಾನು ಮೇಲೆ ಹೇಳಿದಹಾಗೆ ವೈದ್ಯಕೀಯಗಿಂತ ಹೆಚ್ಚು ಆಸಕ್ತಿ ಪ್ರಾಣಿ ಶಾಸ್ತ್ರದಲ್ಲಿ ಮತ್ತು Entomology ಬಗ್ಗೆ  ಸಹ ಸ್ವಲ್ಪ ತಿಳಿದಿದ್ದೆ, ತಕ್ಷಣ ನನಗೆ ಉತ್ತರ ಹೇಳುವುದಕ್ಕೆ ತೋಚಲಿಲ್ಲ. 
" ಓ ಹೊ ನಿಮಗೆ ಕ್ರಿಮಿ ಕೀಟಗಳ ಬಗ್ಗೆ ಗೊತ್ತಿಲ್ಲ ಅಲ್ಲವೇ ?"
ಧೈರ್ಯ ತಂದುಕೊಂಡು " ಹಾಗಲ್ಲ ಸರ್ , ಈ ವಿಷಯದಲ್ಲಿ ನನಗೆ ಆಸಕ್ತಿ ಇದೆ ಮತ್ತು coleopterology  ಅಧ್ಯಯನ ಮಾಡಿದ್ದೇನೆ"
" ಹಾಗಾದರೆ ತುಂಬಾ ಸಂತೋಷ , ನಿಮಗೆ ಗೊತ್ತಿರುವದ್ದನ್ನ  ವಿವರಿಸಿ "
ಸುಮಾರು ಐದು  ನಿಮಿಷ ರೆಕ್ಕೆ ಹುಳದ ಬಗ್ಗೆ ಮಾತನಾಡಿದೆ , ನಾನು ಹೇಳಿದ್ದರಲ್ಲಿ ಹೊಸ ವಿಷಯ ಏನೂ ಇರಲಿಲ್ಲ ಆದರೆ ಹಿಂದೆ Journal of Entomological Science ನಲ್ಲಿ ಒಂದು ಸಣ್ಣ ಬರಹ ಪ್ರಕಟವಾಗಿದ್ದು ಮತ್ತು ನನ್ನ ಬಳಿ ಅನೇಕ ರೀತಿಯ ರೆಕ್ಕೆ ಹುಳಗಳ  ಸಂಗ್ರಹ ಇದ್ದ ವಿಚಾರ ಕೇಳಿ ಲಾರ್ಡ್ ಲಿಂಚ್ಮಿಯರ್ ಬಹಳ ಸಂತೋಷ ಪಟ್ಟರು 
"ಡಾ. ಹ್ಯಾಮಿಲ್ಟನ್ , ನೀವು ನಮಗೆ ಬೇಕಾದವರು ಎನ್ನುವುದರಲ್ಲಿ ಸಂದೇಹವೇ ಇಲ್ಲ, ನೋಡಿ,  ಲಂಡನ್ ನ ೫ ಮಿಲಿಯನ್ ಜನಸಂಖ್ಯೆ ಯಲ್ಲಿ ನಿಮ್ಮಂತವರು ಸಿಕ್ಕಿರುವುದು ನನ್ನ ಅದೃಷ್ಟ" ಅಂತ ಹೇಳಿ ಮೇಜಿನ ಮೇಲೆ ಇದ್ದ ಗಂಟೆ ಬಾರಿಸಿ ಹೊರಗೆ ನಿಂತಿದ್ದ ಸೇವಕನನ್ನು ಕರೆದು  "ಲೇಡಿ ರೊಸ್ಸಿಟರ್  ಅವರನ್ನು ಇಲ್ಲಿಗೆ ಬರ ಹೇಳು " ಎಂದರು . ಕೆಲವು ನಿಮಿಷದಲ್ಲಿ ಈಕೆ ಬಂದರು . ನೋಡಿದರೆ 
ಲಾರ್ಡ್ ಲಿಂಚ್ಮಿಯರ್ ರ ಹೋಲಿಕೆ ಇತ್ತು , ಇವರಿಗೂ ಸುಮಾರು ಐವತ್ತು ವಯಸ್ಸು , ಮಖದಲ್ಲಿ ಏನೋ ಕಳವಳ ಮತ್ತು ಹೆದರಕೆ ಇರುವಂತಿತ್ತು, ಪರಿಚಯ ಆದನಂತರ ನನ್ನ ಕಡೆ ನೋಡಿ ತಿರಿಗಿದಾಗ ಆಕೆಯ ಬಲ ಕಣ್ಣಿನ ಕೆಳಗೆ ಎರಡು ಮೂರು ಇಂಚುಗಳ , ಬಹುಷಃ ಇತ್ತೀಚಿಗೆ ಆಗಿದ್ದ,  ಗಾಯದ  ಗುರುತು ಕಾಣಿಸಿತು. 
" ನೋಡು ಈವೆಲಿನ್ ,   ಇವರು ಡಾ . ಹ್ಯಾಮಿಲ್ಟನ್ ನಮ್ಮ  ಕೆಲಸಕ್ಕೆ ಸರಿಯಾಗಿ  ಹೊಂದುವರು ಅಂದರೆ ಇವರೇ,  ಇವರಿಗೆ ರೆಕ್ಕೆ ಹುಳಗಳ ವಿಷಯ ಗೊತ್ತಿದೆ ಮತ್ತು ಇವರ ಹವ್ಯಾಸ ಸಹ ಅದರ ಸಂಗ್ರಹ ಮತ್ತು ಈ ವಿಷಯದ ಮೇಲೆ ಲೇಖನವನ್ನು ಬರೆದಿದ್ದಾರೆ  "
" ಸಂತೋಷ, ಹಾಗಾದರೆ ನೀವು  ನನ್ನ ಪತಿ ಸರ್ ಥಾಮಸ್ ರೊಸ್ಸಿಟರ್  ಹೆಸರು ಕೇಳಿರಬೇಕು , ಇವರು  ರೆಕ್ಕೆಹುಳಗಳ  ಬಗ್ಗೆ ಸಂಶೋಧನೆ ಮಾಡಿದ್ದಾರೆ"
ಆ ಕ್ಷಣ ನನಗೆ ಈ ಕುಟುಂಬಕ್ಕೆ  ರೆಕ್ಕೆ ಹುಳದ  ಸಂಬಂಧ  ಹೊಳೆಯಿತು, ಸರ್ ಥಾಮಸ್, coleopterology ಅಧ್ಯಯನದಲ್ಲಿ ಗಣ್ಯರು ಅನ್ನುವುದನ್ನ ಕೇಳಿದ್ದೆ 
"  ನೀವು ಅವರನ್ನು ಭೇಟಿಯಾಗಿದ್ದೀರಾ "
"ಇಲ್ಲ,  ಲೇಡಿ ರೊಸ್ಸಿಟರ್  , ಮಾಡಿಲ್ಲ "
ಲಾರ್ಡ್ ಲಿಂಚ್ಮಿಯರ್ " ನಿಮಗೆ ಅವರ ಭೇಟಿ ಮಾಡಿಸುತ್ತೇನೆ "
ಲೇಡಿ ರೊಸ್ಸಿಟರ್ , " ಚಾರ್ಲ್ಸ್ , ನೀನು ಇದನ್ನು ನಿಜವಾಗಲೂ ಮಾಡುತ್ತೀಯಾ, ಆದರೆ ನನಗೆ ಭಯ" ಎಂದು ಹೇಳಿ ಪಕ್ಕದಲ್ಲೇ ನಿಂತಿದ್ದ  ಲಾರ್ಡ್ ಲಿಂಚ್ಮಿಯರ್ ಭುಜದ  ಮೇಲೆ ಕೈ ಇಟ್ಟು ಆತಂಕದಿಂದ  ಹೇಳಿದಳು, ನನಗೆ ಇವರಿಬ್ಬರು ಅಣ್ಣ ತಂಗಿ ಅಂತ ಅರಿವಾಯಿತು,
" ನೀನೇನು ಆತಂಕ ಪಡಬೇಡ ಈವಲಿನ್ ನಮಗೆ ಬೇರೆ ದಾರಿ ಇಲ್ಲ "
" ಇನ್ನೊಂದು ದಾರಿ ಇದೆ ಚಾರ್ಲ್ಸ್ "
" ನಮಗೆ ಇದನ್ನು ಬಿಡು ಈವಲಿನ್ , ನಿನ್ನನ್ನು ನಾನು ಪರಿತ್ಯಜಿಸುವುದಿಲ್ಲ "
ನಾನು ಇರುವುದನ್ನ   ಮರೆತು ಈ ಸಂಭಾಷಣೆ ನಡೆದಹಾಗೆ ಕಾಣಿಸಿತು,    ಲಾರ್ಡ್ ಲಿಂಚ್ಮಿಯರ್ ನನ್ನ ಕಡೆ ತಿರಿಗಿ , "ನೋಡಿ ಡಾ. ಹ್ಯಾಮಿಲ್ಟನ್, ಈ ಕೆಲಸಕ್ಕೆ ನಾನು  ನಿಮನ್ನು ಕೇಳುವುದಿಷ್ಟೇ , ನೀವು ನನ್ನ ಜೊತೆಯಲ್ಲಿ ಯಾವಾಗಲು ಇರತಕ್ಕದ್ದು ಮತ್ತು ನಾನು ಹೇಳಿದಾಗೆ ಮಾಡಬೇಕು, ಇದು ನಿಮಗೆ ಸರಿ ಅಲ್ಲ ಅನ್ನಿಸದೇ ಇರಬಹುದು ಆದರೂ ನೀವು ನನ್ನ ಅಪ್ಪಣೆಯನ್ನು ಮೀರಬಾರದು.  
" ಇದು ಸ್ವಲ್ಪ ಮಿತಿ ಮೀರಿದ್ದು ಅಲ್ಲವೇ ಸರ್ "
"ಇರಬಹುದು, ಆದರೆ ಈಗಿನ ಪರಿಸ್ಥಿತಿಯಲ್ಲಿ ಯಾವ ರೀತಿ ಮುಂದೆವರೆಯುತ್ತೆ ಅನ್ನುವುದು ನನಗೂ ಗೊತ್ತಿಲ್ಲ. ಕೊನೆಗೆ ಇದು ಸಫಲವಾದರೆ, ನೀವು ಹೆಮ್ಮೆ ಪಡುಬಹುದಾದ ವಿಚಾರ "
ಲೇಡಿ ರೊಸ್ಸಿಟರ್  " ಇದು ಸಂತೋಷದಿಂದ ಕೊನೆಗೊಂಡರೆ "
" ಹೌದು , ಇದು ಸಂತೋಷದಿಂದ ಕೊನೆಗೊಂಡರೆ " ಲಾರ್ಡ್ ಲಿಂಚ್ಮಿಯರ್ ಪುನರಾವರ್ತಿಸಿದರು 
" ಇದಕ್ಕೆ ನನ್ನ ಸಂಭಾವನೆ ಏನು ಅಂತ ಕೇಳಬಹುದಾ  ಸರ್ "
" ದಿನಕ್ಕೆ ಇಪ್ಪತ್ತು ಪೌಂಡ್ ಗಳು "
ನಾನು  ಇಷ್ಟು ದೊಡ್ಡ ಮೊತ್ತವನ್ನು ನಿರೀಕ್ಷಿಸಿರಲಿಲ್ಲ , ನನ್ನ ಮಖದ ಮೇಲೆ ಕಂಡ ಆಶ್ಚರ್ಯ ನೋಡಿ " ಈ ಕೆಲಸವು ಪ್ರಯಾಸಕರ ಅಥವಾ ಅಪಾಯಕಾರಿಯಾಗಿರಬಹುದು ಆದ್ದರಿಂದ ವೇತನ ಹೆಚ್ಚು, ಇದು ಒಂದು ಅಥವಾ ಎರಡು ದಿನಗಳಲ್ಲಿ ಕೊನೆಗೊಳ್ಳುವ ಸಾಧ್ಯತೆ ಇದೆ ಅನ್ನುವುದು ನನ್ನ ಭಾವನೆ, ನಿಮ್ಮ ಸಹಾಯ ನಿರೀಕ್ಷಿಸಬಹುದಾ, ಡಾ. ಹ್ಯಾಮಿಲ್ಟನ್?"
" ಖಂಡಿತವಾಗಿಯೂ  ಸರ್ , ಹೇಳಿ ನನ್ನಿಂದ ಏನಾಗಬೇಕು "
" ನೀವು ತಕ್ಷಣ ನಿಮ್ಮ ಕೋಣೆಗೆ ಹಿಂತಿರುಗಿ , ಕಿರು ಭೇಟಿಗೆ ಬೇಕಾದ್ದ ಬಟ್ಟೆಗಳನ್ನು ತೆಗೆದುಕೊಂಡು ೩ :೩೦ ಘಂಟೆಗೆ  ಪ್ಯಾಡಿಂಗ್ಟನ್ (Paddington) ರೈಲು ನಿಲ್ದಾಣಕ್ಕೆ ಬನ್ನಿ , ನಾನು ನಿಮ್ಮ ಟಿಕೆಟ್ ನ್ನು ಖರೀದಿ ಮಾಡಿರುತ್ತೇನೆ , ೪ ಘಂಟೆಗೆ   ಬಾರ್ಕ್ ಶೈರ್ (Berkshire) ನಲ್ಲಿರುವ ಪೆಂಗ್ ಬೌರನ್ (Pangbourne) ಗೆ ನಮ್ಮ ಪ್ರಯಾಣ, ಅಂದಹಾಗೆ ಎರಡು ವಿಷಯ ಬಹಳ ಮುಖ್ಯವಾದುದ್ದು . ನೀವು ಸಂಗ್ರಹಿಸಿದ  ರಕ್ಕೆ ಹುಳಗಳು ಮತ್ತು ಒಂದು ದೊಡ್ಡ ಕೋಲು ಮರಯೆದೆ ತನ್ನಿ "  
ನನ್ನ ಮನಸಿನ ಕಳವಳ ಹೆಚ್ಚಾಗಿ ಅನೇಕ ಪ್ರಶ್ನೆಗಳು ನನ್ನ ತಲೆ ತುಂಬಿತು ಆದರೆ ಈ ಸಮಸ್ಯೆಗಳಿಗೆ ಉತ್ತರ ಇಲ್ಲ ಎಂಬುದು ಖಚಿತ,  ಅದೂ  ಅಲ್ಲದೆ ಲಾರ್ಡ್ ಲಿಂಚ್ಮಿಯರ್ ಹೇಳಿದ ಮಾತುಗಳು ನೆನಪಿಗೆ ಬಂದು ಅವರು  ಹೇಳಿದಹಾಗೆ ಮಾಡಲೇಬೇಕಾಗಿದೆ. 

೩:೩೦ ಸರಿಯಾಗಿ ರೈಲ್ ನಿಲ್ದಾಣ ಕ್ಕೆ ಸೇರಿದಾಗ ಲಾರ್ಡ್ ಲಿಂಚ್ಮಿಯರ್ ನನಗೆ ಕಾಯುತ್ತಿದ್ದರು, ಕೈಯಲ್ಲಿ ಒಂದು ದಪ್ಪದ  ಕರಿ ದೊಣ್ಣೆ ಕಂಡು ನನ್ನ ಕುತೊಹಲ ಮತ್ತಷ್ಟು ಕೆರಳಿತು. 
" ಡಾ. ಹ್ಯಾಮಿಲ್ಟನ್ , ಎರಡು ವಿಚಾರ ಸರಿಯಾಗಿ ಗಮನಿಸಿ , ಒಂದು,  ನೀವು ನನ್ನ ರಕ್ಷಣೆಗೆ ಇರಬೇಕು ಮತ್ತು ಎರಡನೆಯದು ನನ್ನ ಬಿಟ್ಟು ಒಂದು ಕ್ಷಣವೂ ಇರಬಾರದು"    ಈ ಮಾತುಗಳನ್ನು ಪ್ರಯಾಣ ಮಾಡುವಾಗ ಎರಡು ಮೂರು ಸರಿ ಪುನಃ ಪುನಃ ಹೇಳಿದರು. 
ಪ್ರಯಾಣ ಮುಗಿದು ಕುದರೆ ಗಾಡಿಯಲ್ಲಿ ಕುಳಿತಾಗ, " ನೋಡಿ ಡಾ,  ಹ್ಯಾಮಿಲ್ಟನ್ , ನನಗೆ  ಸ್ವಲ್ಪ ನರಗಳ ದುರ್ಬಲತೆ ಇದೆ ಮತ್ತು ಪುಕ್ಕಲ ಎಂದೂ ಹೇಳಬಹುದು ಆದರೆ ನನ್ನಲ್ಲಿ ಆತ್ಮ ವಿಶ್ವಾಸ ಇದೆ ಎಂಥಹ  ಕಷ್ಟ ಬಂದರೂ ,  ನರಗಳ ದುರ್ಬಲತೆ ಇದ್ದರೂ ಇದನ್ನ ಎದಿರುಸುವ ಧೈರ್ಯ ನನ್ನಲ್ಲಿ ಇದೆ. ಈಗ ನಾನು ಕೈಕೊಳ್ಳುವ ಕೆಲಸ  ಕರ್ತ್ಯವ್ಯ ಪ್ರಜ್ಞೆಯಿಂದ  ಮಾತ್ರ, ಅಕಸ್ಮಾತ್ ಇದು ಕೈಮೀರಿ ವೈಫಲ್ಯ ವಾದರೆ ನಾನು  ಹುತಾತ್ಮನಾಗಬಹುದು"

ಈ ಒಗಟುಗಳ ಮಾತನ್ನು  ಕೇಳಿ ನನಗೆ ವಿಪರೀತ ಗೊಂದಲವಾಯಿತು " ಸರ್ ನೀವು ನನ್ನಲ್ಲಿ ನಂಬಿಕೆ ಇಡಿ , ಆದರೆ ನಮ್ಮ ಉದ್ದೇಶ್ಯ ಏನು, ನಾವೆಲ್ಲಿಗೆ ಈಗ ಹೋಗುತ್ತಿದ್ದೇವೆ ಇಂತಹ ಪ್ರಶ್ನೆಗಳು ನನ್ನ  ಕಾಡುತ್ತಿದೆ"

" ಎಲ್ಲಿಗೆ ಹೋಗುತ್ತಿದ್ದೇವೆ ಅನ್ನುವುದರಲ್ಲಿ ಸಂದೇಹ ಇಲ್ಲ, ಇಲ್ಲಿಂದ ಸ್ವಲ್ಪ ದೂರದಲ್ಲಿ ಡೆಲಾಮಿರ್ ಕೋರ್ಟ್(Delamere Court) , ಸರ್ ಥಾಮಸ್ ರೊಸ್ಸಿಟರ್  ಅವರ ನಿವಾಸ, ಇವರ ಸಂಶೋಧನೆ ನಿಮಗೆ ಪರಿಚಯ ಇದೆ ಎಂದು ಹೇಳಿದ್ದೀರಿ ,   ಅಲ್ಲಿ ಏನು ಮಾಡುತ್ತೀವಿ ಅನ್ನುವುದನ್ನ ಈಗ ಹೇಳಿ ಪ್ರಯೋಜನ ಇಲ್ಲ ಅಂತ ನನ್ನ ನಂಬಿಕೆ.  ನಮ್ಮ , ಅಂದರೆ,  ನನ್ನ ಮತ್ತು ಲೇಡಿ ರೊಸ್ಸಿಟರ್  ಉದ್ದೇಶ್ಯ ಒಂದೇ , ನಮ್ಮ ಕುಟುಂಬದಲ್ಲಿ ಆಗಬಹುದಾದ  ಹಗರಣವನ್ನು ತಪ್ಪಿಸುವುದು,  ನಿಮಗೆ ವಿವರವಾದ ವಿವರಣೆಯನ್ನು ಈಗ ಹೇಳಿ ಅಗತ್ಯವಿಲ್ಲ ಡಾ .  ಹ್ಯಾಮಿಲ್ಟನ್ , ನಿಮ್ಮ ಸಲಹೆ ನಾನು ಕೇಳುತ್ತಿಲ್ಲ, ನಿಮ್ಮಿಂದ ಬೇಕಾಗಿರುವುದು   ಸಹಕಾರ ಮತ್ತು ಸಹಾಯ ,  ಎಲ್ಲಿ,  ಹೇಗೆ ಅನ್ನುವುದನ್ನ ಸಮಯ ಬಂದಾಗ ಕೇಳುತ್ತೇನೆ"

ಇನ್ನೇನು ಪ್ರಶ್ನೆಗಳನ್ನು  ಕೇಳುವ  ಸ್ಥಿತಿಯಲ್ಲಿ ನಾನಿರಲಿಲ್ಲ, ದಿನಕ್ಕೆ ಇಪ್ಪತ್ತು ಪೌಂಡ್ ಗಳ ವೇತನ ಮುಖ್ಯ , ಹಾಗಾಗಿ ಸುಮ್ಮನಾದೆ 

ಡೆಲಾಮಿರ್ ಕೋರ್ಟ್ ರೈಲು ನಿಲ್ದಾಣದಿಂದ ಐದು ಮೈಲಿ , ಲಾರ್ಡ್ ಲಿಂಚ್ಮಿಯರ್ ದಾರಿಯಲ್ಲಿ ಇನ್ನೇನು ಹೇಳಲಿಲ್ಲ, ನಾನು ಸುಮ್ಮನಿದ್ದೆ, ಗಾಡಿಯಿಂದ ಇಳಿಯುವಕ್ಕೆ ಮುಂಚೆ 
"ನೋಡಿ ಡಾ . ಹ್ಯಾಮಿಲ್ಟನ್ ನಾನು ನಿಮ್ಮಹಾಗೆ ಒಬ್ಬ ವೈದ್ಯ"
" ಓ ಹೌದಾ ಸರ್ ನನಗೆ ಗೊತ್ತಿರಲಿಲ್ಲ "
" ಹೌದು ಬಹಳ ವರ್ಷಗಳ  ಹಿಂದೆ ನಾನು ಪದವಿ ಪಡೆದೆ ಆದರೆ ಕಾರಣಾಂತರಗಳಿಂದ   ವೈದ್ಯ ವೃತ್ತಿ ಪ್ರಾರಂಭಿಸುವುದಕ್ಕೆ ಸಾಧ್ಯವಾಗಲಿಲ್ಲ, ಆದರೂ ನಾನು ಕಲಿತದ್ದನ್ನು ಮರೆತಿಲ್ಲ , ಇಲ್ಲಿ ನೋಡಿ 
ಡೆಲಾಮಿರ್ ಕೋರ್ಟ್ ಗೇಟ್  ಬಂತು".

 ಗೇಟಿನಿಂದ ಒಳಗೆ ಸುಮಾರು ದೂರದಲ್ಲಿ ಒಂದು ದೊಡ್ಡ ಕಟ್ಟಡ ಇಂಗ್ಲೆಂಡ್ ದೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇರುವ ಮ್ಯಾನರ್ ಹೌಸ್. ನಮ್ನನ್ನು  ಎದಿರಗೊಳ್ಳಲು ನಿಂತಿದ್ದ ವ್ಯಕ್ತಿ, ಸುಮಾರು ಆರು ಅಡಿ ಮೇಲೆ ಇರುವ ಎತ್ತರ  , ತಲೆಯಮೇಲೆ ಕಪ್ಪು ಹ್ಯಾಟ್ , ಟ್ರಿಮ್ ಮಾಡಿಲ್ಲದ ಬಿಳಿ ಗಡ್ಡ ,  ತೋಟದಲ್ಲಿ ಕೆಲಸ ಮಾಡುವಾಗ ಕೈಗೆ ಹಾಕುವ ಗ್ಲೋವ್ಸ್. ಲಾರ್ಡ್ ಲಿಂಚ್ಮಿಯರ್, ಗಾಡಿಯಿಂದ ಇಳಿಯುದಕ್ಕೆ  ಮುಂಚೆ " ಇವರೇ ಸರ್ ಥಾಮಸ್ ರೊಸ್ಸಿಟರ್   "

ಇಳಿದು  ಆತ್ಮೀಯತೆಯಿಂದ " ಮೈ ಡಿಯರ್ ಥಾಮಸ್ ಹೇಗಿದ್ದೀರ?"
ಆದರೆ ಉತ್ತರ ತಕ್ಷಣ ಬರಲಿಲ್ಲ , ಮಖದಲ್ಲಿ ಏನೂ ವಾತ್ಸಲ್ಯ ಇರಲಿಲ್ಲ , ನಾನು ಲಾರ್ಡ್ ಲಿಂಚ್ಮಿಯರ್ ಹಿಂದೆ ನಿಂತಿದ್ದೆ , ನನ್ನ ಕಡೆ ನೋಡಿ ಸರ್ ಥಾಮಸ್ ಮೆಲ್ಲಗೆ ಗೊಣಗಿದ್ದು ಸ್ವಲ್ಪ  ಕೇಳಿಸಿತು  " ..... ಅಪರಿಚಿತರು ...ಇಲ್ಲಿಗೆ.. ಏನು ಕಾರಣ .. ಇಷ್ಟ ಇಲ್ಲ ... ."

ತಕ್ಷಣ ಲಾರ್ಡ್ ಲಿಂಚ್ಮಿಯರ್  ನನ್ನ ಕಡೆ ತಿರಗಿ " ಡಾ. ಹ್ಯಾಮಿಲ್ಟನ್,  ನಿಮ್ಮನ್ನು ಸರ್ ಥಾಮಸ್ ಅವರಿಗೆ ಪರಿಚಯ ಮಾಡುತ್ತೇನೆ"  ಸರ್ ಥಾಮಸ್ ನಗಲಿಲ್ಲ, ಕೈಕುಲಕಲಿಲ್ಲ, ನೇರವಾಗಿ ನೋಡಿ " ಲಾರ್ಡ್ ಲಿಂಚ್ಮಿಯರ್ ಹೇಳಿದ್ದ ಪ್ರಕಾರ ನಿಮಗೆ ರೆಕ್ಕೆ ಹುಳಗಳ ಬಗ್ಗೆ ಆಸಕ್ತಿ ಇದೆಯಂತೆ  ?"
" ಹೌದು ಸರ್ ನಿಮ್ಮ ಸಂಶೋಧನೆಯಿಂದ ಕೆಲವು ವಿಚಾರಗಳನನ್ನು ತಿಳಿದಿದ್ದೇನೆ"
" ಹಾಗಾದರೇ ಒಂದೆರಡು ಹೆಸರುಗಳನ್ನು  ಹೇಳಿ ಅದರ ಬಗ್ಗೆ ವಿವರಣೆ ಕೊಡಿ",  ನಾನು  ಈ ರೀತಿಯ ಪರೀಕ್ಷೆ ನಿರೀಕ್ಷಿಸಿರಲಿಲ್ಲ, ವಿಚಿತ್ರ  ಮನುಷ್ಯ,   ಮನೆ ಹೊರಗೆ ನಿಲ್ಲಿಸಿ ರೆಕ್ಕೆ ಹುಳಗಳ ಮೇಲೆ ಮಾತನಾಡು ಅಂದರೆ ಇವರಿಗೆ ಬುದ್ದಿ ನೆಟ್ಟಗಿಲ್ಲ ಅನ್ನುವ ಭಾವನೆ ಬಂತು , ನನಗೆ ತಿಳಿದ ವಿಚಾರಗಳನ್ನು ಹತ್ತು ನಿಮಿಷ ಹೇಳಿದೆ, ಮತ್ತು  ಸರ್ ಥಾಮಸ್ ನಡೆಸಿದ ಸಂಶೋಧನೆ ಸಹ ವಿವರಿಸಿದೆ 

" ಡಾ . ಹ್ಯಾಮಿಲ್ಟನ್ ನೀವು ನನ್ನ ಪುಸ್ತಕವನ್ನು ಓದಿ ತಿಳಿಕೊಂಡಿದ್ದೀರ, ಬಹಳ ಸಂತೋಷ, ನೋಡಿ ಜನರಿಗೆ ಕ್ರೀಡೆಗಳು ಮನೋರಂಜನೆ ಇತ್ಯಾದಿ ಗಳಮೇಲೆ ಗಮನ ಹೆಚ್ಚು ಆದರೆ ಈ ಅಜ್ಞಾನಿ ಜನಕ್ಕೆ  ರೆಕ್ಕೆಹುಳ  ಬಗ್ಗೆ ಸ್ವಲ್ಪಾನೂ  ಆಸಕ್ತಿ ತೋರಿಸುವುದಿಲ್ಲ,   ನಿಮ್ಮನ್ನು ಭೇಟಿಯಾಗಿದ್ದು ಒಳ್ಳೇದೇ ಆಯಿತು,  ಬನ್ನಿ ನನ್ನ ರೆಕ್ಕೆ ಹುಳಗಳ ಸಂಗ್ರಹ ತೋರಿಸುತ್ತೇನೆ "  

ಅವರನ್ನು ಹತ್ತಿರದಿಂದ ಮನೆ ಒಳಗೆ ನೋಡಿದಾಗ ತಲೆಮೇಲೆ ಹ್ಯಾಟ್ ಇರಲಿಲ್ಲ , ಹಣೆ ಮೇಲೆ, ನರಗಳ ದುರ್ಬಲದಿಂದ ಇರಬೇಕು , ಸ್ನಾಯುಗಳು ಅಲ್ಲಾಡಿತ್ತಿರುವುದು ಗಮನಿಸಿದೆ , ನಮ್ಮ ಕಡೆ ತಿರಿಗಿ ಮಾತನಾಡಿದಾಗ ಈ ಲಕ್ಷಣಗಳು ಹೆಚ್ಚಾದಂತೆ ತೋರಿತು. 

" ನಿಮ್ಮನ್ನ ಸ್ವಾಗತಿಸೊಕ್ಕೆ  ಲೇಡಿ ರೊಸ್ಸಿಟರ್  ಇಲ್ಲಿಲ್ಲ, ಅಂದಹಾಗೆ ಚಾರ್ಲ್ಸ್, ಈವಲಿನ್ ಇಲ್ಲಿಗೆ ಬರುವ ವಿಚಾರ ನಿನಗೆ ತಿಳಿಸಿದ್ದಳಾ ?"
" ನಿಮಗೆ ಗೊತ್ತಿದೆ ಥಾಮಸ್ , ಅವಳ  ಸ್ನೇಹಿತರು ಬಹಳ ಮಂದಿ ಇದ್ದಾರೆ ಆದ್ದರಿಂದ ಇನ್ನೂ ಕೆಲವು ದಿನ ಲಂಡನ್ ನಲ್ಲಿ ಇರುವ ನಿರ್ಧಾರ ಅವಳದ್ದು"
" ಸರಿ ಅವಳ ಇಷ್ಟ , ಆದರೆ ಆಕೆ ಇಲ್ಲಿ ಇಲ್ಲದೆ ಇರೋದು ನನಗೆ ಬಹಳ ಬೇಜಾರು "
" ನನಗೆ ಇದು ಗೊತ್ತಿದೆ ಚಾರ್ಲ್ಸ್ , ಆದ್ದರಿಂದ ನಾನೇ  ಬಂದೆ ಮತ್ತು  ಡಾ .  ಹ್ಯಾಮಿಲ್ಟನ್  ನಿಮ್ಮನ್ನು ಭೇಟಿಯಾಗಲಿ ಅಂತ ಕರೆತಂದೆ, ನಿಮ್ಮ ಸಂಶೋಧನೆ ಬಗ್ಗೆ ಈತನಿಗೆ ಬಹಳ ಕುತೂಹಲ ಇದೆ "
  " ನಾನು ಈಗ ನಿವೃತ್ತಿ ಜೀವನ ನಡೆಸುತ್ತಿದ್ದೇನೆ ಡಾ . ಹ್ಯಾಮಿಲ್ಟನ್, ಪ್ರಪಂಚದ ನಾನಾ ಭಾಗಗಳಿಗೆ ಹೋಗಿ ಅನೇಕ ವಿಧವಾದ ರೆಕ್ಕೆ ಹುಳಗಳನ್ನು ಹುಡುಕಿ ತಂದಿದ್ದೀನಿ.  ನನ್ನಲ್ಲಿ ಇರುವ ಈ ಅತ್ಯುತ್ತಮ ಸಂಗ್ರಹ ಇನ್ನೆಲ್ಲೂ ಇಲ್ಲ ಎಂದು ಹೇಳಬಲ್ಲೆ, ನಿಮಗೂ ಈ ವಿಚಾರದಲ್ಲಿ ಆಸಕ್ತಿ ಇರುವದರಿಂದ ಬನ್ನಿ ನೋಡುವಿರಂತೆ " . 

ನಿಜವಾಗಲೂ , ಈ ಸಂಗ್ರಹವನ್ನು ಮೆಚ್ಚಲೇಬೇಕು, ಹಲವಾರು ಮರದ ಬೀರುಗಳಲ್ಲಿ ಪ್ರಪಂಚದ ನಾನಾ ಭಾಗದಿಂದ ತಂದ ಈ ಕ್ರಿಮಿಗಳನ್ನು ಜೋಡಿಸಿ ಅದರ ವಿವರಣೆಯನ್ನು ಬರೆದಿತ್ತು . ಕೆಂಪು ಕಪ್ಪು ಹಸಿರು ಬಣ್ಣದ ಕ್ರಿಮಿಗಳು ಸಾವಿರಾರು.  ತನ್ನ ಇಡೀ ಜಾಯಮಾನವನ್ನೇ ಈ ಸಂಗ್ರಹಕ್ಕೆ ಕಳೆದಿದ್ದಾರೆ  ಅನ್ನಬಹುದು.  ಸುಮಾರು ಎರಡು ಗಂಟೆ ತಮ್ಮ ಸಂಶೋಧನೆ ಮೇಲೆ ಮಾತಾಡಿರಬಹುದು ಬಹುಶ: ನಾನೇ ಇವರ ಮೊದಲನೆಯ  ಸಹಾನುಭೂತಿಯ ಕೇಳುಗ. 

   ಸರ್ ಥಾಮಸ್ ಪಕ್ಕದಲ್ಲೇ   ಲಾರ್ಡ್ ಲಿಂಚ್ಮಿಯರ್   ನಿಂತಿದ್ದರೂ ಒಂದು ಮಾತೂ ಅಡರಿಲಿಲ್ಲ ಆದರೆ ಅವರ ಮಖದಲ್ಲಿ  ಆತಂಕ ಅಥವಾ ಕಳವಳ, ಮತ್ತು  ಮುಂದೆ ಏನಾಗಬಹುದು ಅನ್ನುವ ಚಿಂತೆ ಅವರನ್ನು ಕಾಡಿಸುತ್ತಾ ಇರುವಹಾಗಿತ್ತು 

ಅವರ ಸೇವಕ ಬಂದು ಊಟ ತಯಾರಾಗಿದೆ ಎಂದು ಹೇಳಿದಾಗ , ಎಲ್ಲರೂ ತಮ್ಮ ಕೊಠಡಿಗೆ ಹೋಗಿ ಸರಿಯಾದ ಉಡುಪುಗಳನ್ನು ಧರಿಸಿ ಊಟದ  ಮನೆಯಲ್ಲಿ ಸೇರಿದೆವು.
ಊಟದ ಸಮಯದಲ್ಲಿ ಸರ್ ಥಾಮಸ್ ,  ಲೇಡಿ ರೊಸ್ಸಿಟರ್  ಮತ್ತು ಮಗ ಮನೆಯಲ್ಲಿ ಇಲ್ಲದಿರುವುದು ಬಹಳ ಬೇಜಾರು, ದಿನಗಳನ್ನು ಕಳೆಯುವುದು ಕಷ್ಟ ಅನ್ನುವುದೇ  ನನ್ನ ಚಿಂತೆ ಎಂದು ಪಶ್ಚಾತ್ತಾಪ ಪಟ್ಟರು . 
ಊಟದನಂತರ ಬಿಲಿಯರ್ಡ್ಸ್ ಆಡುವ ಕೋಣೆ ಯಲ್ಲಿ ಸ್ವಲ್ಪ ಕಾಲ ಧೂಮಪಾನ ಮಾಡುತ್ತಾ ಕುಳಿತು ನಂತರ ಅವರವರ  ಕೋಣೆಗೆ ಹೋಗಿ ಮಲಗುವುದಕ್ಕೆ ಹಿಂತಿರಿಗಿದೆವು.  ನನ್ನ ಹಿಂದೆ  
ಲಾರ್ಡ್ ಲಿಂಚ್ಮಿಯರ್ ಬಂದು " ಡಾ ಹ್ಯಾಮಿಲ್ಟನ್ , ನೀವು ಇಲ್ಲಿ ಮಲಗ ಬೇಡಿ ನನ್ನ ಕೋಣೆ ಗೆ ಬನ್ನಿ"  ಅಂತ ಹೇಳಿದಾಗ, ಈತನಿಗೆ ಬುದ್ದಿ ಕೆಟ್ಟಿರ ಬೇಕು ಅನ್ನುವ ಸಂದೇಹ ಬಂತು.    ಇದರ ಉದ್ದೇಶ ಏನು ಅಂತ ಕೇಳಿದಾಗ " ಇದನ್ನು ನಾನು ನಿಮಗೆ ವಿವರಿಸಬೇಕಾಗಿಲ್ಲ, ಬೆಳಗ್ಗೆ ಸೇವಕ ಬಂದು ಎಬ್ಬಿಸುವಕ್ಕೆ ಮುಂಚೆ ನೀನು ನಿಮ್ಮ ಕೋಣೆ ಗೆ ಹೋಗಿ " 
"ಆದರೆ ಏಕೆ ಹೇಳಿ"
" ನನ್ನ ನರಗಳ ದುರ್ಬಲತೆಯಿಂದ ಒಬ್ಬನೇ ಮಲಗುವುದಕ್ಕೆ ಆಗುವುದಿಲ್ಲ , ಈಗ ನಾನು ಹೇಳಿದ್ದನ್ನು ಕೇಳಿ "
 ಇಪ್ಪತ್ತು ಪೌಂಡ್ ಗಳು ಕಣ್ಣಿನಮುಂದೆ ಬಂತು, ವಿಧಿ ಇಲ್ಲದೆ ಅವರನ್ನು ಅವರ ಕೋಣೆಗೆ  ಹಿಂಬಾಲಿಸಿದೆ   
"ಆದರೆ ಸರ್, ಈ ಹಾಸಿಗೆ ಒಬ್ಬರಿಗೆ ಮಾತ್ರ  "
"ಹೌದು  ಒಬ್ಬರಿಗೆ ಜಾಗ, ಇನ್ನೊಬ್ಬರು ಕಾವಲಿರಬೇಕು "
" ಕಾರಣ , ಯಾರಾದರೂ ಹಲ್ಲೆ ಮಾಡುವ ಸಾಧ್ಯತೆ ಇದೆಯೇ ?"
"ಆ ಅನುಮಾನ ನನಗಿದೆ "
" ಹಾಗಾದರೆ ಬಾಗಿಲಗೆ ಚಿಲಕ ಹಾಕಿ ಮಲಗಬಹುದಲ್ಲ "
"ಇಲ್ಲ, ನನ್ನ ಮೇಲೆ ಹಲ್ಲೆ ನಡೆಯಲಿ ಅನ್ನುವುದೇ  ಅಸೆ  "
ಈತನಿಗೆ  ಬುದ್ಧಿವಿಕಲ್ಪ ಆಗಿದೆ ಎಂಬುದು ನನಗೆ ಖಚಿವಾಯಿತು " ಹಾಗಾದರೆ ನೀವು ಮಲಗಿ  ನಾನು ಈ ಕುರ್ಚಿಮೇಲೆ ಕುಳಿತು ಕಾವಲಿರುತ್ತೇನೆ "
" ಇಬ್ಬರೂ ಮಾಡೋಣ , ನೀವು ಎರಡು ಗಂಟೆಯವರೆಗೆ ಎದ್ದಿರಿ  ನಂತರ ನನ್ನ ಸರದಿ,  ನನ್ನನ್ನು ಆ ಸಮಯಕ್ಕೆ ಎಬ್ಬಿಸಿ "
"ಸರಿ "
" ಎಚ್ಚ್ಚರದಿಂದಿರಿ ,ಕೂತಲ್ಲೇ ನಿದ್ದೆ ಮಾಡಬೇಡಿ ,  ಏನಾದರೂ ಶಬ್ದ ಕೇಳಿಸಿದರೆ ನನ್ನನ್ನು ಎಬ್ಬಿಸಿ"

ನನಗೆ ತೂಕಡಿಕೆ ಬಂದರೂ ಕಷ್ಟದಿಂದ ಎದ್ದಿದ್ದೆ , ಕೊಣೆಯ ಎದುರಿನ ಓಣಿಯಲ್ಲಿ ಗಡಿಯಾರ ಹದಿನೈದು ನಿಮಿಷಕ್ಕೆ ಸದ್ದುಮಾಡುತಿತ್ತು, ಕೊನೆಗೆ ಎರಡು ಗಂಟೆ ಹೊಡೆದ ಶಬ್ದ ಕೇಳಿಸಿತು, ತಕ್ಷಣ 
ನಿಶ್ಚಿಂತೆಯಿಂದ ಮಲಗಿದ್ದ ಲಾರ್ಡ್ ಲಿಂಚ್ಮಿಯರ್ ಭುಜವನ್ನು ಮುಟ್ಟಿ ಎಬ್ಬಿಸಿದೆ, ಅವರು ಗಾಬರಿಯಿಂದ ಎದ್ದು " ಏನಾಯಿತು ಶಬ್ದ ಏನಾದರೂ ಕೇಳಿಸಿತೇ ?"
"ಇಲ್ಲ ಸರ್, ಎರಡು ಗಂಟೆ ಅದಕ್ಕೆ ಎಬ್ಬಿಸಿದೆ "
" ಸರಿ, ನೀವು ಮಲಗಿ ನಾನು ಎದ್ದಿರುತ್ತೇನೆ "
ಎಷ್ಟು ಹೊತ್ತು ನಿದ್ದೆ ಮಾಡಿದ್ದೆನೋ ಅರಿವಿಲ್ಲ , ಆದರೆ ನನ್ನ ತೋಳನ್ನು ಯಾರೋ ಬಲವಾಗಿ ಎಳೆದಾಗ ಎಚ್ಚರಿಕೆ ಆಯಿತು .  " ಬೇಗ, ಬೇಗ ಏಳಿ ,  ಬನ್ನಿ ಶಬ್ದ ಮಾಡದೆ ಕೇಳಿ " ಲಾರ್ಡ್ ಲಿಂಚ್ಮಿಯರ್ ನನ್ನನ್ನು ಎಳೆಯುತ್ತಾ ಒಂದು ಮೂಲೆಯಲ್ಲಿ ನಿಲ್ಲಿಸಿದರು. 
ಸಂದೇಹವೇ ಇರಲಿಲ್ಲ, ಯಾರೋ ಬರುತ್ತಿರುವ ಶಬ್ದ, ಬಹಳ ಎಚ್ಚರದಿಂದ ಬರುತ್ತಿರುವ ಹಾಗಿದೆ, ಹೆಜ್ಜೆಯ ಶಬ್ದ ಒಂದು ಕ್ಷಣ ನಿಲ್ಲುವುದು ನಂತರ ಕೇಳುವುದು, ನನ್ನ ಕೈಯನ್ನು ಹಿಡದಿದ್ದು  ಲಾರ್ಡ್ ಲಿಂಚ್ಮಿಯರ್  ಬಿಟ್ಟರಲಿಲ್ಲ , ಆದರೆ ಉದ್ರೇಕದಿಂದ ನಡಗುತ್ತಿದ್ದರು, 
" ಯಾರು ಇರಬಹುದು ಸರ್ ?
" ಅವರೇ .....   ಅವರೇ .."
"ಸರ್ ಥಾಮಸ್, ಏನು ಬೇಕು ಅವರಿಗೆ  ?"
"ಹೌದು ಹೌದು  ನಾನು ಹೇಳುವರಗೆ ಏನೂ ಮಾಡಬೇಡಿ
 ಮುಂದಾಗಿದ್ದ ಬಾಗಿಲು ನಿಧಾನವಾಗಿ ತೆರೆದಿದ್ದು ಕೇಳಿಸಿತು  ಓಣಿಯಲ್ಲಿ ಹಚ್ಚಿದ್ದ  ದೀಪ ದಿಂದ ಸ್ವಲ್ಪ ಬೆಳಕಿತ್ತು , ಒಂದು  ಬಗ್ಗಿದ ವ್ಯಕ್ತಿ ಒಳಗೆ ಧಾವಿಸಿ, ತಕ್ಷಣ   ಹಾಸಿಗೆಮೇಲೆ  ಮೇಲೆ ಧಭ ಧಭ ಅಂತ ಬಾರಿಸಿದ್ದು ಕಂಡು ನನ್ನ ಜೀವವೇ ಹೋದಂತಾಯಿತು.   ಕೆಲವೇ ಕ್ಷಣಗಳಲ್ಲಿ ಲಾರ್ಡ್ ಲಿಂಚ್ಮಿಯರ್ ನನ್ನ ಕೈ ಬಿಟ್ಟು  ಸರ್ ಥಾಮಸ್ ಹಿಂದೆ ನಿಂತು ಅವರ ಎರಡು ಕೈಯನ್ನು ಅವರ ಕತ್ತಿನ ಮೇಲೆ ಹಾಕಿ ನನ್ನನ್ನು   ಕೂಗಿದರು , ಎತ್ತರದ ವ್ಯಕ್ತಿ ಬಿಡಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾಗ ನಾನು ತಕ್ಷಣ ಅವರ ನೆರವಿಗೆ ಹೋಗಿ ಇಬ್ಬರೂ  ಆತನನ್ನು  ಹತೋಟಿಗೆ ತಂದು ಅವರು  ತೊಟ್ಟಿದ್ದ ಡ್ರೆಸ್ಸಿಂಗ್ ಗೌನ್ ನಲ್ಲಿದ್ದ ಹಗ್ಗವನ್ನು ತೆಗೆದು ಅವರ ಎರಡು ಕೈಗಳನ್ನು ಕಟ್ಟಿದವು,  ಈ ಕಿರುಚಾಟ ಕೇಳಿದ ಮೂರು ಸೇವಕರು ಓಡಿ  ಬಂದರು. ಇವರ ಸಹಾಯದಿಂದ ಸರ್ ಥಾಮಸ್ ಸಂಪೂರ್ಣವಾಗಿ ನಮ್ಮ ಸೆರೆಯಾದರು , ಕೆಳಗೆ ಕೂತು ಸಿಟ್ಟಿನಿಂದ ನೊರೆಯಾಡುತ್ತಿದ್ದರು. ಅವರ ಮುಖವನ್ನು  ಸರಿಯಾಗಿ ನೋಡಿದಾಗ ಈತ ಒಬ್ಬ ಅಪಾಯಕಾರಿ ಹುಚ್ಚ ಅನ್ನುವುದು ಸ್ಪಷ್ಟವಾಯಿತು , ಅದೂ ಅಲ್ಲದೆ ಹಾಸಿಗೆ ಪಕ್ಕದಲ್ಲಿ ಬಿದ್ದಿದ್ದ ಸುತ್ತಿಗೆಯಿಂದ   ಸರ್ ಥಾಮಸ್ ರವರ ಉದ್ದೇಶ್ಯ ಲಾರ್ಡ್ ಲಿಂಚ್ಮಿಯರ್ ರನ್ನು ಕೊಲ್ಲುವುದಾಗಿತ್ತು ಅನ್ನುವುದರದಲ್ಲಿ ಸಂಶಯ ಏನೂ ಇರಲಿಲ್ಲ. 
ಅವರನ್ನು ಎತ್ತಿ ನಿಲ್ಲಿಸಿದಾಗ , ಲಾರ್ಡ್ ಲಿಂಚ್ಮಿಯರ್ " ಅವರನ್ನು ಹಿಂಸೆ ಮಾಡಬೇಡಿ,  ಉದ್ರೇಕದ ನಂತರ ಈ  ಮೂರ್ಖತನ ಕೆಲವು ನಿಮಿಷಗಳು ಮಾತ್ರ ಇರುತ್ತದೆ." ಹೀಗೆ ಹೇಳುತ್ತಿರುವಾಗಲೇ 
ಸರ್ ಥಾಮಸ್ ಅವರ ತಲೆ ತಗ್ಗಿಸಿ ನಿಂತಲ್ಲೇ ನಿದ್ದೆ ಮಾಡುವಹಾಗಿತ್ತು, ಎಲ್ಲರೂ ಸೇರಿ ಅವರನ್ನು ನಿಧಾವಾಗಿ ನಡೆಸಿಕೊಂಡು ಅವರ ಕೋಣೆ ಯಲ್ಲಿ ಹಾಸಿಗೆಮೇಲೆ ಮಲಗಿಸಿದೆವು.  ಪ್ರಜ್ಞೆ ಇದ್ದಹಾಗೆ ಕಾಣಿಸಲಿಲ್ಲ  ಮೇಲೆ  ಮೇಲೆ ಉಸಿರು ಬಿಡುತ್ತಿದ್ದರು . 
" ನೀವೆಲ್ಲರು  ಇವರ ಮೇಲೆ ನಿಗಾ ಇಟ್ಟಿರಿ , ಡಾ.  ಹ್ಯಾಮಿಲ್ಟನ್ , ನೀವು ನನ್ನ ಜೊತೆಯಲ್ಲಿ ಬನ್ನಿ ನನ್ನ ಕೊಣೆಯಲ್ಲಿ ನಿಮಗೆ ಇದರ ಬಗ್ಗೆ ವಿವರಣೆ ಕೊಡುತ್ತೇನೆ"

ಅವರ ಕೋಣೆ  ಸೇರಿದಾಗ " ನೋಡಿ ನನ್ನ ಮೈದುನ,  ಸರ್ ಥಾಮಸ್ ಬಹಳ ಒಳ್ಳೆ ಮನುಷ್ಯ, ಅವರಿಗೆ ತನ್ನ ಪತ್ನಿ ಮತ್ತು ಮಗನ ಮೇಲೆ ಅಪಾರ ಪ್ರೀತಿ, ಆದರೆ ಅವರ ಮನೆತನದಲ್ಲಿ   ಹಲವಾರು ತಲೆ ಮಾರುಗಳಿಂದ ಬಂದಿರುವುದು ಕಳಂಕಿನ ಹುಚ್ಚುತನ. ಆಗಾಗ್ಗೆ ಕೊಲೆಗಾರನಿಗೆ ಬರುವ ಪ್ರವೃತ್ತಿ, ಇವರಿಗೂ ಬಂದಿದೆ, ಒಂದು ವಿಚಿತ್ರ ಅಂದರೆ,  ಯಾರು ತುಂಬಾ ಹತ್ತಿರವಾದವರ ಮೇಲೆ ದಾಳಿ ನಡೆಸುವುದು. ಆದ್ದರಿಂದ ಅವರ ಮಗ  ಬೋರ್ಡಿಂಗ್ ಶಾಲೆಯಲ್ಲಿದ್ದಾನೆ ಮತ್ತು ಲೇಡಿ ರೊಸ್ಸಿಟರ್ ಆದಷ್ಟು ಮನೆಯಿಂದ ಹೊರಗೆ ಇರುತ್ತಾರೆ. ನೀವು ನನ್ನ ತಂಗಿ ಮಖದ ಮೇಲೆ ಆಗಿದ್ದ ಗಾಯವನ್ನು ಗಮನಿರಸಬಹುದು. ಈತನಿಗೆ  ಇದರ ಅರಿವು ಚೂರು ಇಲ್ಲ ಮತ್ತು ತಾನು ಇಂತ ಘಟನೆಗಳಿಗೆ ಕಾರಣ ಅನ್ನುವುದು ನಗೆಗೇಡಿತನ ಅನ್ನುವ ಭಾವನೆ. ಇವರ ಹವ್ಯಾಸ ರೆಕ್ಕೆ ಹುಳಗಳ ಸಂಗ್ರಹಣ ಮತ್ತು ಏಕಾಂತ ಜೀವನ, ಬೇರೆ ಯಾರ ಹತ್ತಿರನೂ ಸಂಪರ್ಕ ಬೆಳಸಿಲ್ಲ ಮತ್ತು ಬೇಕಾಗೂ ಇಲ್ಲ, ಇಂಥವರಿಗೆ ವೈದ್ಯರಿಂದ ಚಿಕಿತ್ಸೆ  ಕೊಡಿಸುವುದು ದೊಡ್ಡ ಸಮಸ್ಯೆ ಇತ್ತು, ಅದೂ ಅಲ್ಲದೆ ವೈದ್ಯನಿಗೂ ಇವರಿಗೆ ಈ ಮಾನಸಿಕ ರೋಗ ಇದೆ ಎಂದು ಅರಿವು ಮಾಡಿಸುವುದೂ  ಹೇಗೆ ಅನ್ನುವುದು ನಮ್ಮನ್ನು  ಕಾಡುತಿತ್ತು. ಆದರೆ , ಸುದೈವದಿಂದ ಇವರಿಗೆ ಈ ಮನಸ್ಥಿತಿ ಬರುವ ಮೊದಲು ಕೆಲವು ಸೂಚನೆಗಳು ಕಾಣಿಸುತ್ತವೆ. ನಿಮ್ಮ ಹತ್ತಿರ ಮಾತನಾಡುವಾಗ ಅವರ ಹಣೆಯಮೇಲೆ ಸ್ನಾಯುಗಳ ಅಲ್ಲಾಡಿಕೆ ನೀವು ಗಮನಿಸಿದಿರಾ ? ಇದು ಮೂರು ಎರಡು ಮೂರು ದಿನಗಳ ಹಿಂದೆ ಶುರು ವಾಗುವುದು.  ಅಂತಹ ಸಮಯದಲ್ಲಿ ಲೇಡಿ  ರೊಸ್ಸಿಟರ್ ಏನೋ ನೆಪ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ನಮ್ಮ ಮನೆಗೆ ಬರುತ್ತಿದ್ದರು, ನನ್ನ ಗುರಿ ಇದ್ದಿದ್ದು ಹೇಗಾದರೂ ಮಾಡಿ ಒಬ್ಬ ವೈದ್ಯನ ಮುಂದೆ ಸರ್ ಥಾಮಸ್ ಅವರಿಗೆ ಈ ಮಾನಸಿಕ ರೋಗ ಇದೆ ಅನ್ನುವುದನ್ನ ತೋರಿಸಿವುದು. ಅವರ ಮನೆಗೆ ಅಪರಿಚಿತರು ಹೋಗುವುದಕ್ಕೆ ಒಂದು ಒಳ್ಳೆ ಕಾರಣ ಹುಡಕಬೇಕಾಗಿತ್ತು. ರೆಕ್ಕೆ  ಹುಳದ  ಬಗ್ಗೆ ಆಸಕ್ತಿ ಇರುವರು ಸಿಕ್ಕಿದರೆ ಸರ್  ಥಾಮಸ್ ಅವರನ್ನು ನೋಡುವ ಸಾಧ್ಯತೆ ಇದೆ ಎಂದು ಆ ರೀತಿ  ಜಾಹೀರಾತನ್ನು ಪತ್ರಿಕೆಯಲ್ಲಿ ಹಾಕಿದ್ದು. ನೀನು ಅದನ್ನ ನೋಡಿ ಬಂದದ್ದು ನಮ್ಮ ಅದೃಷ್ಟ, ನನಗೆ ಯಾವ ಘಳಿಗೆಯಲ್ಲಿ ಈ ಅನಾಹುತ ನಡೆಯುತ್ತೆ ಅನ್ನುವುದು ಊಹಿಸುವುದು ಕಷ್ಟ, ಆದರೆ ಇದು ನನ್ನ ಮೇಲೆ ನಡೆಯುತ್ತೆ ಅನ್ನುವುದು ಖಚಿತ. ಕಾರಣ ಈತನಿಗೆ ನನ್ನ  ಮೇಲೆ ಅಕ್ಕರೆ ಮತ್ತು ಗೌರವ ಇದೆ. ನಿಮ್ಮ ಸಹಾಯದಿಂದ ಈಗ ಇವರಿಗೆ ಸರಿಯಾದ ಚಿಕಿತ್ಸೆ  ದೊರೆಯುವ ಸಂದರ್ಭ ಬಂದಿದೆ   " 

"ಡಾ. ಹ್ಯಾಮಿಲ್ಟನ್, ನೀವು ಸರ್ ಥಾಮಸ್ ಅವರ ಮಾನಸಿಕ ಕಾಯಿಲೆಯ ಪ್ರಮಾಣ ಪತ್ರಕ್ಕೆ ಸಹಿ ಹಾಕುತ್ತೀರಾ?"
"ಖಂಡಿತ ಸರ್ , ಆದರೆ ಕಾನೂನಿನ ಪ್ರಕಾರ ಎರಡು ಸಹಿ ಬೇಕಲ್ಲ "
" ನಾನು ಒಬ್ಬ ಪರಿಣಿತಿ ಹೊಂದಿರುವ ವೈದ್ಯ ಅನ್ನುವುದು ಮರೆಯಬೇಡಿ, ಬೇಕಾದ್ದ ಪತ್ರಗಳು ಇಲ್ಲೇ ಇದೆ ನಮ್ಮಿಬ್ಬರ ಸಹಿ ಆದನಂತರ ರೋಗಿಯನ್ನು ಇಲ್ಲಿಂದ ಸಾಗಿಸಬಹುದು "

ಪ್ರಸಿದ್ಧ "ಬೀಟಲ್ ಹಂಟರ್ " ಸರ್  ಥಾಮಸ್ ರೊಸ್ಸಿಟರ್ ಅವರ ಭೇಟಿಯಾಗಿದ್ದು, ಲಾರ್ಡ್ ಲಿಂಚ್ಮಿಯರ್ ಮತ್ತು ಲೇಡಿ ರೊಸ್ಸಿಟರ್ ಪರಿಚಯ ನನ್ನ ವೈಯಕ್ತಿಕ ಜೀವನದಲ್ಲಿ ಯಶಸ್ವಿಯಾಗಿ ಮುಂದುವರೆಯುವದಕ್ಕೆ  ಸಹಾಯವಾಯಿತು.

ಸರ್ ಥಾಮಸ್ ಚಿಕಿತ್ಸೆನಂತರ ಗುಣವಾಗಿ  ಮಾನಸಿಕ ಆಸ್ಪತ್ರೆಯಿಂದ ಹೊರಗೆ ಬಂದಿದ್ದಾರೆ, ಆದರೆ, ನಾನು ಪುನಃ ಡೆಲಾಮಿರ್  ಕೋರ್ಟ್ ನಲ್ಲಿ  ಉಳಿದರೆ ಬಾಗಿಲಗೆ  ಚಿಲಕ ಹಾಕಿ ಮಲಗುವುದು ಉತ್ತಮ ಅಲ್ಲವೇ?   
 
~ ರಾಮಮೂರ್ತಿ , ಬೇಸಿಂಗ್ ಸ್ಟೋಕ್