ಹೊಸತು ಹೊತ್ತು ತರುತಿದೆ

..ಯುಗಾದಿ ಮತ್ತೆ ಮರಳಿ ಬರುತಿದೆ

ತರುಲತೆಗಳಲ್ಲಿ ಚೈತ್ರದ ಚಿಗುರು ಪಲ್ಲವಗಳು, ಹೊಂಗೆ ಮರದ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿಗಳು, ಬೇವು-ಮಾವುಗಳ ಸೊಗಸು-ಸಂಭ್ರಮಗಳು ..ಇವೆಲ್ಲವನ್ನೊಳಗೊಂಡು ಮತ್ತೆ ಬಂದಿದೆ ಯುಗಾದಿ. ನವ ವಸಂತದ ನವಿರು ಗಾಳಿ ಮನಮನಗಳನ್ನೂ ಪುಲಕಗೊಳಿಸಿದೆ. ಬೇವು-ಬೆಲ್ಲದೊಂದಿಗೆ ಹಳೆಯ ನೂರಾರು ಸ್ಮೃತಿಗಳನ್ನು ತನ್ನೊಡನೆ ಮತ್ತೆ ಹೊತ್ತು ತಂದಿದೆ ಈ ಯುಗಾದಿ.

ಬೆಳಿಗ್ಗೆ ಎದ್ದೊಡನೆಯೇ ಬಟ್ಟಲು ತುಂಬ ಬೆಚ್ಚನೆಯ ಖೊಬ್ರಿಎಣ್ಣೆಯನ್ನು ಅಜ್ಜಿ ನೆತ್ತಿಗೊತ್ತಿ ‘ಅಶ್ವತ್ಥಾಮೋ ಬಲೀರ್ವ್ಯಾಸೋ’ ಅಂತ ಚಿರಂಜೀವಿಗಳ  ಹೆಸರಲ್ಲಿ ಹರಸಿದ ಮೇಲೆ ಬಚ್ಚಲುಮನೆಯಲ್ಲಿ ನಮ್ಮ ರಂಗಪ್ರವೇಶ. ಅಲ್ಲಿ ದೆವ್ವನಂಥಾ ತಾಮ್ರದ ಹಂಡೆಯಲ್ಲಿ ಬೇವಿನೆಲೆ ತೇಲುತ್ತಿರುವ ಬಿಸಿ ಬಿಸಿ ನೀರು. ಹೊಗೆಯಾಡುತ್ತಿರುವ ಆ ನೀರನ್ನು ಹಿತ್ತಾಳೆಯ ಗಂಗಾಳದಲ್ಲಿ ಮಾಮಿಯೋ, ಮಾಂಶಿಯೋ ತೋಡುತ್ತಿದ್ದರೆ ಚಿಕ್ಕವರಾದ ನಮಗೆ ಅಗಾಧ ಅಚ್ಚರಿ ..ಕೈ ಸುಡಲಿಕ್ಕಿಲ್ಲವೇ ಇವರಿಗೆ ಎಂದು.ಜೊತೆಗೇ ಆತಂಕ- ಎಲ್ಲಿ ಇಂಥ ಸುಡುಸುಡು ನೀರನ್ನೇ ತಲೆಮೇಲೆ ಸುರಿದು ಬಿಡುತ್ತಾರೋ ಎಂದು.’ಥಣ್ಣೀರು ಹಾಕು’ ಎಂದು ಹತ್ತು ಸಲ ಕೂಗಿಕೊಂಡರೂ ‘ಇನ್ನೂ ಎಂಥ ಥಣ್ಣೀರs ಈಗೇ ಆರಿ ಕತ್ತಿ ಉಚ್ಚಿ ಆಗ್ಯಾವ’ ಎಂದು ಜಬರಿಸಿ ಮೈಮೇಲೆ ಬಿಸಿನೇರು ಸುರಿದರೆ ಆಹಾ! ನಮ್ಮ  ಬಚ್ಚಲು ಮನೆಯ  ಆ ಕಥಕ್ಕಳಿ, ಭರತನಾಟ್ಯ.. 

ತಲೆಬಾಗಿಲಿನ ಹಸಿರಾದ ಮಾವಿನ ತೋರಣ, ಅಂಗಳದ ರಂಗವಲ್ಲಿ, ಹೊಸ್ತಿಲಿನ ಕೆಮ್ಮಣ್ಣು, ದೇವರ ಮನೆಯ ಥಳಥಳ ಹೊಳೆವ ಉಪಕಾರಣಿಗಳು, ತುಪ್ಪದ ಬತ್ತಿ, ಎಣ್ಣೆಯ ದೀಪ, ಊದಿನಕಡ್ಡಿಯ ಸುಗಂಧಗಳು, ಅಜ್ಜನ ‘ಆಚಾರ್ಯಾ ಶ್ರೀಮದಾಚಾರ್ಯಾ ಸಂತು ಮೇ ಜನ್ಮಜನ್ಮನೀ’ ಎಂಬ ರಿಂಗುಣಿಸುವ ಮಂತ್ರ, ಪಡಸಾಲೆಯ ರೇಡಿಯೋದಲ್ಲಿ ‘ ಯುಗ ಯುಗಾದಿ 
ಕಳೆದರೂ’ ಹಾಡಿನ ದನಿ, ಅಡಿಗೆಮನೆಯಲ್ಲಿ ಬೇಳೆ ರುಬ್ಬುವ ಸದ್ದು, ಹೂರಣ ಕುದಿವ ನರುಗಂಪು, ಬಾಳೆಲೆ-ರಂಗೋಲಿಗಳ ಸಂಭ್ರಮ, ಬೇವು-ಬೆಲ್ಲದ, ಹೋಳಿಗೆ-ಬುರಬುರಿಗಳ ಭರ್ಜರಿ ಊಟ, ಸಂಜೆಯಾಗುತ್ತಿದ್ದಂತೆಯೇ ಲಕ್ಷ್ಮಿಗುಡಿಯ ಪಾಳಿಯ ಸಂಭ್ರಮ. ಲಕ್ಷ್ಮೀದೇವಿಯ ಕಣ್ಮನ ಸೆಳೆವ ಅಲಂಕಾರ,ಆ ಪಟ್ಟೆಸೀರೆ-ಸರ-ಡಾಬು ಆಭರಣಗಳು, ಗಂಟೆ-ಜಾಗಟೆಗಳ ನಿನಾದ, ಮಂಗಳಾರತಿ, ಆ ಅಂಗಾರದ ರುಚಿ, ಹೊರಗಿನ ಸಾಲು ಸಾಲು ಅಂಗಡಿಗಳ ಪ್ಲಾಸ್ಟಿಕ್ ಬಳೆ,ರಿಬ್ಬನ್ನುಗಳು.. ಒಂದೊಂದೂ ಎಂಥ ಮಧುರ!!
‘ನಿದ್ದೆಗೊಮ್ಮೆ ನಿತ್ಯಮರಣ ಎದ್ದ ಸಲ ನವೀನ ಜನನ ಅಖಿಲ ಜೀವಜಾತಕೆ   ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೇ ಏತಕೆ?’

ನಲ್ಮೆಯ ಓದುಗರೇ ತಮಗೆಲ್ಲ ಯುಗಾದಿಯ ಹಾರ್ದಿಕ ಶುಭಾಶಯಗಳು. ಇಂದಿನ ಸಂಚಿಕೆಯಲ್ಲಿ ಸವಿತಾ ಸುರೇಶ್ ಅವರು ಒಂದು ಅಪರೂಪದ ‘ಸವಿರುಚಿ’ಯನ್ನು ಹಂಚಿಕೊಂಡಿದ್ದಾರೆ. ಈ ಯುಗಾದಿಯಂದು ಮಾಡಿ ಸವಿದು ಹೇಗಿತ್ತೆಂದು  ಹೇಳಲು ಮರೆಯದಿರಿ.

ಉಮೇಶ ನಾಗಲೋತಿಮಠ ಅವರು ಯುಗಾದಿಯ ವೈಜ್ಞಾನಿಕ ಸಂಗತಿಗಳ ಕುರಿತಾಗಿ ಬಹಳ ಆಸಕ್ತಿಭರಿತವಾದ ಲೇಖನವೊಂದನ್ನು ಅನಿವಾಸಿಗಾಗಿ ಹೊತ್ತು ತಂದಿದ್ದಾರೆ.

ಎತ್ತರದ ಬೆಟ್ಟದ ಬದರಿ-ಕೇದಾರ-ಅಮರನಾಥಗಳಿರಲಿ, ಸಮುದ್ರ ದಂಡೆಯ ರಾಮೇಶ್ವರ-ಕನ್ಯಾಕುಮಾರಿಗಳಿರಲಿ, ಭೋರ್ಗರೆವ ನದೀತಟದ ಕಾಶಿ-ಹೃಷಿಕೇಶಗಳಿರಲಿ ..ಯಾತ್ರೆ ನಮ್ಮ ಸಂಸ್ಕೃತಿಯ ಅವಿಭಾಜ್ಯ  ಅಂಗ. ಪ್ರಕೃತಿಯ ರೌದ್ರ-ರಮಣೀಯತೆಗಳ ಮುಖೇನ ‘ಶಿವರುದ್ರನಾದ ಭಗವಂತ’ನನ್ನು ಅರಿವ ಪ್ರಯಾಸ, ಮಹತ್ತರವಾದ ಆ ನಿಸರ್ಗ ದ ಭವ್ಯತೆಯಲ್ಲಿ ನಮ್ಮ ಅಲ್ಪತೆಯನ್ನು ಕರಗಿಸಿ ನಿಸರ್ಗದೊಡೆಯನ ಮಹತ್ತಿನಲ್ಲಿ ಮೈಮರೆವ ರೀತಿ, ಸಹಬಾಳ್ವೆಯ ಕಲಿಕೆ..ಏನೆಲ್ಲ ಅಡಕ ಈ ಯಾತ್ರೆಯಲ್ಲಿ..ಬನ್ನಿ, ವಿನತೆಯವರು ತಮ್ಮಮ್ಮನೊಡನೆ ನಮ್ಮನ್ನೂ ‘ಅಮರನಾಥ ಯಾತ್ರೆ’ಗೆ ಕರೆದೊಯ್ಯಲಿದ್ದಾರೆ. ಹೊಸ ವರುಷದ ಆರಂಭಕ್ಕೆ  ಇದಕ್ಕಿಂತ ಶುಭಪ್ರದ ಮತ್ತೆನಿದ್ದೀತು?

~ ಸಂಪಾದಕಿ

ಗೋಡಂಬಿ-ಗುಲ್ಕಂದ್ ಲಡ್ಡು

ಬೇಕಾಗುವ ಸಾಮಗ್ರಿಗಳು 
:

ಗೋಡಂಬಿ-200ಗ್ರಾಂ 
ಕಲ್ಲು ಸಕ್ಕರೆ ಪುಡಿ- 100ಗ್ರಾಂ 
ಹಾಲಿನ ಪುಡಿ- 50 ಗ್ರಾಂ 
ಗುಲ್ಕಂದ್- 4ಚಮಚ
ಕಂಡೆಂನ್ಸ್ಡ್ ಮಿಲ್ಕ್- 5ಚಮಚ
ಸ್ವಲ್ಪ  ಏಲಕ್ಕಿ ಪುಡಿ 
ಗುಲಾಬಿ ಹೂವಿನ ಪುಡಿ 

ಮಾಡುವ ವಿಧಾನ 
:

ಮೊದಲಿಗೆ ಗೋಡಂಬಿಯನ್ನು ಮಧ್ಯಮ ಉರಿಯಲ್ಲಿ ಹುರಿದು ರವೆಯ ರೀತಿಯಲ್ಲಿ ಪುಡಿ ಮಾಡಿ ಒಂದು ಅಗಲವಾದ ತಟ್ಟೆಗೆ ವರ್ಗಾಯಿಸಿ.
ನಂತರ ಕಂಡೆಂನ್ಸ್ಡ್ ಮಿಲ್ಕ್, ಕಲ್ಲು ಸಕ್ಕರೆ ಪುಡಿ, ಹಾಲಿನ ಪುಡಿ ಮಿಶ್ರಿಸಿ ಉಂಡೆಯ ಆಕಾರಕ್ಕೆ ಮಾಡಿ ಹೆಬ್ಬೆರಳಿಂದ ಮಧ್ಯದಲ್ಲಿ ಹಳ್ಳ ಮಾಡಿ ಸ್ವಲ್ಪ ಗುಲ್ಕಂದ್ ತುಂಬಿ.
ನಂತರ ಲಡ್ಡು ಆಕಾರಕ್ಕೆ ಉಂಡೆ ಮಾಡಿ.
ಇನ್ನೊಂದು ತಟ್ಟೆಯಲ್ಲಿ  ಒಣಗಿದ ಗುಲಾಬಿ ಹೂವಿನ ಪುಡಿಯನ್ನು ಹರಡಿ.
ಮಾಡಿಟ್ಟ ಲಾಡುಗಳನ್ನು ಇದರಲ್ಲಿ ಹೊರಳಿಸಿ.
ಚಿತ್ರದಲ್ಲಿ ಕಾಣುವಂತೆ ಅಲಂಕಾರ ಮಾಡಿ ಸವಿಯಿರಿ.

~ ಸವಿತ ಸುರೇಶ್ 

ಡಾ ಉಮೇಶ ನಾಗಲೋಟಿಮಠ 

ಬೆಳಗಾವಿಯಲ್ಲಿ  ೧೦ನೇ ತರಗತಿ ವರೆಗೆ ಕನ್ನಡದಲ್ಲೇ ವಿದ್ಯಾಭ್ಯಾಸ , MBBS , MS (ENT ) ಮುಗಿಸಿ ಮುಂಬೈನಲ್ಲಿ ಹೆಚ್ಚಿನ ತರಬೇತಿ , ಹುಬ್ಬಳ್ಳಿಯ KMC (ಕಿಮ್ಸ್ ಈಗ ) ಯಲ್ಲಿ ಸುಮಾರು ೧೭ವರ್ಷ ಸೇವೆ ENT ವಿಭಾಗದ ಮುಖ್ಯಸ್ಥರಾಗಿ ಸ್ವಯಂ ನಿವೃತ್ತಿ . ಹುಬ್ಬಳ್ಳಿಯ ಸುಶ್ರುತ ಬಹುತಜ್ಞ ಆಸ್ಪತ್ರೆ ನಿರ್ದೇಶಕ . 
ಸಾಹಿತ್ಯ ಆಸಕ್ತಿ . ಹಲವು ರೇಡಿಯೋ ಕಾರ್ಯಕ್ರಮ , ಹಲವು ವೈದ್ಯಕೀಯ ಬರಹಗಳು , ವೈದ್ಯಕೀಯದಲ್ಲಿ ಹಾಸ್ಯ ಬರಹಗಳು , ಕೆಲವೊಮ್ಮೆ ಕವನದ ಕೆಮ್ಮು  . ಸೋರುವ ಕಿವಿ ಎಂಬ ಪುಸ್ತಕ ಪ್ರಕಟಣೆ . 
ಆಂಗ್ಲನಾಡಿಗೆ ಆಗಮನವಾಗಿ ಆಯ್ತೆಳುವರುಷ . 
ಏಕಪತ್ನಿ  , ಏಕಪುತ್ರ 😀. 
ಇದೆ ವಿರಲ್ (wirral ) ವಾಸ 
ಸಾಕಾಗಿದೆ ಪುಸ್ತಕ ಉಪವಾಸ 
 ಬೇಕಾಗಿದೆ ಸಾಹಿತಿಗಳ ಸಹವಾಸ 
ಅದಕೆಂದೇ ಇರುವುದು ಈ  ಅ-ನಿವಾಸ(ಸಿ)

ಹೊಸ ವರ್ಷ ಯಾವುದು ?

ಯುಗಾದಿ ಅಥವಾ ಜನೆವರಿ 

ಭಾರತೀಯರೆಲ್ಲರಿಗೂ ಯುಗಾದಿ ಹೊಸ ವರ್ಷ ಎಂದು ಗೊತ್ತು . ಇನ್ನು ಹಲವರ ಪ್ರಕಾರ ಯುರೋಪಿಯನ್ ಜನರಿಗೂ ಯುಗಾದಿ ಆಸು ಪಾಸೇ ಹೊಸ ವರ್ಷ ಇತ್ತು ಎಂಬ ಬಗ್ಗೆ ಅನುಮಾನಗಳಿವೆ . 

ನಾವು ನಮ್ಮ ಗ್ರೆಗೋರಿಯನ್ ಕ್ಯಾಲೆಂಡರನ್ನೇ ತಳಹದಿಯಾಗಿ ಇಟ್ಟುಕೊಂಡು ಸಂವಾದ ನಡೆಸೋಣ . ನಾವು ಮಾರ್ಚ್ ತಿಂಗಳನ್ನು ವರ್ಷದ ಮೊದಲ ತಿಂಗಳು ಎಂದು ಪರಿಗಣಿಸುವಾ .
ಆಗ ಪ್ರತಿ ಗ್ರೆಗೋರಿಯನ್ ತಿಂಗಳು ಯಾವ ಕ್ರಮದಲ್ಲಿ ಬರುತ್ತದೆ ಎಂದು ನೋಡೋಣ . 
ಮಾರ್ಚ್ -೧ನೇ ತಿಂಗಳು 
ಏಪ್ರಿಲ್ -೨ನೇ ತಿಂಗಳು 
ಮೇ -೩ನೇ ತಿಂಗಳು 
ಜೂನ್ -೪ನೇ ತಿಂಗಳು 
ಜೂಲೈ -೫ನೇ ತಿಂಗಳು 
ಅಗಸ್ಟ್ -೬ನೇ ತಿಂಗಳು 
ಸೆಪ್ಟೆಂಬರ್ -೭ನೇ ತಿಂಗಳು 
ಲ್ಯಾಟಿನ್ ಭಾಷೆಯಲ್ಲಿ ಸಂಖ್ಯೆ ಏಳು ಇದಕ್ಕೆ septem ಎನ್ನುತ್ತಾರೆ ಹಾಗು 
ಗ್ರೀಕ್ ಭಾಷೆಯಲ್ಲಿ epta ಎನ್ನುತ್ತಾರೆ . 
ಸಂಸ್ಕೃತದಲ್ಲಿ ಸಪ್ತ ಎನ್ನುತ್ತಾರೆ . 
(ಸಪ್ತ ಸ್ವರಗಳು , ಸಪ್ತ ಪದಿ ಇತ್ಯಾದಿಗಳು ಇತರ ಉದಾಹರಣೆ )

ಅಕ್ಟೋಬರ್ -೮ನೇ ತಿಂಗಳು 
ಲ್ಯಾಟಿನ್ ಭಾಷೆಯಲ್ಲಿ ಸಂಖ್ಯೆ ಎಂಟು ಇದಕ್ಕೆ octingenti ಎನ್ನುತ್ತರೆ. 
ಗ್ರೀಕ್ ಭಾಷೆಯಲ್ಲಿ okto ಹಾಗು ಸಂಸ್ಕೃತದಲ್ಲಿ ಅಷ್ಟ ಎನ್ನುತ್ತಾರೆ . 
(ಆಕ್ಟೋಪಸ್ =ಎಂಟು ಪಾದ ಹೊಂದಿರುವ ಪ್ರಾಣಿ . ಅಷ್ಟ ದಿಕ್ಕುಗಳು )
ನವೆಂಬರ್ -೯ನೇ ತಿಂಗಳು 
ಲ್ಯಾಟಿನ್ ಭಾಷೆಯಲ್ಲಿ novem ಎನ್ನುತ್ತರೆ . ಗ್ರೀಕ್ ಭಾಷೆಯಲ್ಲಿ ennea ಎಂದರೆ ಸಂಸ್ಕೃತದಲ್ಲಿ ನವ ಎನ್ನುವರು . 
(ನವರಾತ್ರಿ , ನವರಂದ್ರ ಇತ್ಯಾದಿಗಳು ಉದಾಹರಣೆಗಳು )

ಡಿಸೆಂಬರ್ -೧೦ನೇ ತಿಂಗಳು 
ಲ್ಯಾಟಿನ್ ಭಾಷೆಯಲ್ಲಿ decem ಎನ್ನುತ್ತರೆ . ಗ್ರೀಕ್ ಭಾಷೆಯಲ್ಲಿ deka ಎಂದರೆ ಸಂಸ್ಕೃತದಲ್ಲಿ ದಶ ಎನ್ನುವರು . 
(ದಶಮುಖ =ಹತ್ತು ತಲೆ ಉಳ್ಳವ , ದಶಮಾನ ಸಂಖ್ಯಾ ಪದ್ದತಿ ; Deciliter , decimeter ಇವು ಹತ್ತರ ಮೇಲೆ ನಿರ್ಭರವಾಗಿವೆ )

ಜನೆವರಿ -೧೧ನೇ ತಿಂಗಳು 

ಫೆಬ್ರವರಿ -೧೨ನೇ ತಿಂಗಳು 

ಇದನ್ನು ನೋಡಿದರೆ ಆಶ್ವರ್ಯದ ಜೊತೆ ಕುತೂಹಲವು ಮೂಡಿ ಅನೇಕ ತಿಂಗಳುಗಳಿಗೆ ಅವುಗಳ ನಿಜ ಅರ್ಥ ಸರಿಯಾಗಿ ಹೊಂದುತ್ತವೆ . 

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಒಂದು ದಿನವನ್ನು ಡಿಸೆಂಬರ್ ಬದಲಾಗಿ ಫೆಬ್ರವರಿ ತಿಂಗಳಿಗೆ ಯಾಕೆ ಸೇರಿಸುತ್ತಾರೆ ?
ಫೆಬ್ರವರಿ ತಿಂಗಳಲ್ಲಿ ಎಲ್ಲಕಿಂತ ಕಡಿಮೆ ದಿನಗಳು ಯಾಕೆ ಇದ್ದಾವೆ ? ಇವುಗಳ ಬಗ್ಗೆ ನನಗಿನ್ನೂ ಮಾಹಿತಿ ಸಿಕ್ಕಿಲ್ಲ . 
ಇನ್ನು ಯುಗಾದಿ ಸಮಯಕ್ಕೆ ಪ್ರಕೃತಿ ತನ್ನನ್ನು ತಾನೇ ಸಿಂಗರಿಸಿಕೊಂಡಿರುತ್ತದೆ . ಎಲ್ಲಡೆ ಹೊಸ ಚಿಗುರು , ಹೊಸ ಹೂವು ಬಂದಿರುತ್ತದೆ . 
ಯುಗಾದಿ ಹೆಸರೇ ಸೂಚಿಸುವಂತೆ ಅದು ಯುಗ (ವರ್ಷ )ದ ಆದಿ (ಪ್ರಾರಂಭ ). 
ಇನ್ನೂ ಯುಗಾದಿಯ ಆಚರಣೆಗಳ ಬಗ್ಗೆ , ಅವುಗಳ ವೈಜ್ಞಾನಿಕತೆಯ ಬಗ್ಗೆ ಬರೆಯುತ್ತ ಹೋದರೆ ಪುಟಗಳು ಸಾಲವು . 
ಯುಗಾದಿಗೆ ಎಲ್ಲರಿಗು ಶುಭವಾಗಲಿ . 


~ ಡಾ -ಉಮೇಶ ನಾಗಲೋಟಿಮಠ

ನನ್ನಮ್ಮನ ಪ್ರವಾಸ ಕಥನ – ಶ್ರೀ ಅಮರನಾಥ್ ಯಾತ್ರೆ

ನನ್ನ ಅಮ್ಮನ ಹೆಸರು ಪದ್ಮಾವತಮ್ಮ. ಅಮ್ಮ ೩೭ ವರ್ಷಗಳಷ್ಟು ದೀರ್ಘಕಾಲ ಶಾಲಾಶಿಕ್ಷಕಿಯಾಗಿ ದುಡಿದರು. ತಮ್ಮ ಅನ್ನದಾತ ಶಾಲೆಯನ್ನು, ವಿದ್ಯಾರ್ಥಿಗಳನ್ನು ಬಹುವಾಗಿ ಪ್ರೀತಿಸುತ್ತ, ಅವರ ಸಹೋದ್ಯೋಗಿಗಳೊಡನೆ ವಿಶ್ವಾಸ, ಗೌರವದ ಸಂಬಂಧವನ್ನು ರೂಢಿಸಿಕೊಂಡಿದ್ದರು. ಅದೇ ಶಾಲೆಯಲ್ಲಿ ನನ್ನಂತೆ ಅನೇಕ ಶಿಕ್ಷಕವೃಂದದ ಮಕ್ಕಳು ಓದಿದ್ದು, ಸ್ನೇಹ ಸಂಪಾದಿಸಿದ್ದು ನಿತ್ಯನೂತನ ನೆನಪು! ತಮ್ಮ ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಅಮ್ಮ ‘ಸದಾ ಸಂಸಾರ, ಸಂಪಾದನೆ’ ಎಂಬುದರ ಆಚೆ ಇರುವ ಪ್ರವಾಸವೆಂಬ ಅನುಭವ ಲೋಕವನ್ನು ಆಯ್ದುಕೊಂಡು ತಮ್ಮ ಜೀವನದ ಸಾರ್ಥಕತೆಯನ್ನು ವಿಸ್ತರಿಸಿಕೊಂಡರು. ಅವರ ಕಾಲಕ್ಕೆ, ಅನುಸರಿಸುತ್ತಿದ್ದ ಧಾರ್ಮಿಕ ನಂಬಿಕೆ, ಭಾವನೆಗಳಿಗೆ ಅನುಗುಣವಾಗಿ ಅವರು ಮತ್ತು ಶಾಲೆಯ ಮೂರ್ನಾಲ್ಕು ಸಹೋದ್ಯೋಗಿಗಳು ಒಂದಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಭಕ್ತಿ ಯಾತ್ರೆಗಳನ್ನು ಕೈಗೊಂಡರು. ೧೯೮೦ ದಶಕದ ಆದಿಯಲ್ಲಿ ಆರಂಭವಾದ ಅವರ ತೀರ್ಥಯಾತ್ರೆಗಳು ೧೯೯೮ ನೇ ಇಸವಿ ಆಗಸ್ಟ್ ತಿಂಗಳಲ್ಲಿ ಕೈಗೊಂಡಿದ್ದ ಕೈಲಾಸ-ಮಾನಸ ಸರೋವರ ಯಾತ್ರೆಯಲ್ಲಿ ಮುಕ್ತಾಯವಾಯ್ತು. ಮಾನಸ ಸರೋವರದಲ್ಲಿ ಮಿಂದು, ಕೈಲಾಸನಾಥನನ್ನು ನೋಡಿ ಕಣ್ತುಂಬಿಸಿಕೊಳ್ಳುವ ಮುನ್ನವೇ ಅವರು ಇಲ್ಲವಾದರು. 

ಯಾತ್ರಾರ್ಥಿಗಳು ರಾತ್ರಿ ತಂಗಿದ್ದ, ಹಿಮಾಲಯ ಪರ್ವತಗಳಲ್ಲಿ ಅಡಗಿದ್ದ ಮಾಲ್ಪ ಎನ್ನುವ ಹಳ್ಳಿಯು ಆಗಸ್ಟ್ ತಿಂಗಳ ೧೮ನೇ ತಾರೀಕು ಬೆಳಗಿನ ಜಾವ ಸಂಭವಿಸಿದ ಬೃಹತ್ ಭೂಭಾಗ ಕುಸಿತಕ್ಕೆ ಒಳಗಾಗಿ ಸಂಪೂರ್ಣವಾಗಿ ನಿಶ್ಯೇಷವಾಗಿತ್ತು.  

ಸಾಹಿತ್ಯವನ್ನು ಮೆಚ್ಚುತ್ತಿದ್ದ ನಮ್ಮ ತಾಯಿ ಬಹು ಚೆನ್ನಾಗಿ ಬರೆಯುತ್ತಿದ್ದರು. ೧೯೮೦ ದಶಕದಿಂದ ತಾವು ಪ್ರವಾಸದ ಸಮಯದಲ್ಲಿ ನಮಗೆಲ್ಲ ಬರೆಯುತ್ತಿದ್ದ ಪತ್ರಗಳನ್ನು ಆಧರಿಸಿ ಮತ್ತು ಅವರ ಡೈರಿ, ನೆನಪುಗಳನ್ನು ಹೆಕ್ಕಿ, ತಮ್ಮ ಪ್ರವಾಸ ಅನುಭವ ಕಥನಗಳನ್ನು ಲೇಖಕ್ ನೋಟ್ ಬುಕ್ ಗಳಲ್ಲಿ ಬರೆದು ದಾಖಲಿಸಿದ್ದರು. ಅವುಗಳಲ್ಲಿ ವಿವರವಾಗಿ ತಾವುಗಳು ಹೇಗೆ ಯಾತ್ರಾಸ್ಥಳವನ್ನು, ಪ್ರವಾಸದ ದಿನಾಂಕಗಳನ್ನು ಗೊತ್ತುಮಾಡಿಕೊಳ್ಳುತ್ತಿದ್ದರು ಎಂಬುದರಿಂದ ಹಿಡಿದು ಬಹುಬಗೆಯ ವಿವರಗಳು ಇವೆ. ಯಾತ್ರೆಯ ಸಿದ್ಧತೆ, ಹಣಕಾಸು, ಮನೆಮಂದಿಯಿಂದ ಒಪ್ಪಿಗೆ, ತಾವು ಪಯಣಿಸುವ ದಾರಿಯ ಸ್ಥೂಲ ನಕ್ಷೆ, ಹಿಂದೆ ಪಯಣಿಸಿ ಬಂದ ಯಾತ್ರಾರ್ಥಿಗಳ ಪರಿಚಯ ಮತ್ತು ಮನೆಭೇಟಿ, ಅವರ ಅನುಭವಗಳ ವಿವರಗಳು, ಬಾಯಿಮಾತಿನಿಂದ ತಿಳಿದ ದೂರದೂರಿನ ಸಂಪರ್ಕ ವ್ಯಕ್ತಿಗಳು, ಗೈಡ್, ರೈಲು ಪಯಣಕ್ಕೆಂದು ಆಹಾರ, ಒಣಗಿದ ಆಹಾರದ ಸಿದ್ಧತೆ (ಅವಲಕ್ಕಿ, ಉಪ್ಪಿಟ್ಟು ಮಿಕ್ಸ್, ಹುರಿಹಿಟ್ಟು ಇತ್ಯಾದಿ), ತಮಗೆ ಸಹಾಯ ಮಾಡುವ ಕೂಲಿ ಜನರು, ಕುದುರೆ ಜನರು, ದೇವಾಲಯಗಳಲ್ಲಿ ಕಾಣುವ ಭಿಕ್ಷಕರು, ವಿಧವೆಯರು ಎಲ್ಲರಿಗೂ ಕೊಡಲು ಒಂದಷ್ಟು ಹಣ, ಹಳೆಬಟ್ಟೆ, ಕಾಲುಚಪ್ಪಲಿ, ಶೂಸ್, ಔಷಧಗಳು ಇತ್ಯಾದಿ ಶೇಖರಣೆ … ಅಬ್ಬಬ್ಬಾ ಒಂದೇ ಎರಡೇ ಎನ್ನುವಷ್ಟು ಆಶ್ಚರ್ಯವಾಗುತ್ತದೆ. ತೀರಾ ಅಪರೂಪಕ್ಕೆ ಬಳಸುತ್ತಿದ್ದ ದೂರವಾಣಿ ಬಿಟ್ಟರೆ ಬೇರೆ ಊರಿನವರೊಂದಿಗೆ ಇವರ ಸಂಪರ್ಕವಿದ್ದದ್ದು ಕೇವಲ ಅಂಚೆಯ ಮೂಲಕವಷ್ಟೇ! ಮಧ್ಯಮ ವರ್ಗದ, ಶಾಲಾಶಿಕ್ಷಕ ಮಂದಿ ಇವರುಗಳು ಸುಮಾರು ಎರಡು ದಶಕಗಳ ಕಾಲ ನಡೆಸಿದ ವ್ಯವಸ್ಥಿತ ಯಾತ್ರೆಗಳು, ಪ್ರವಾಸಗಳು ಅಚ್ಚರಿಯೊಂದಿಗೆ ರೋಮಾಂಚನವನ್ನೂ, ಹೆಮ್ಮೆಯನ್ನೂ ಹುಟ್ಟಿಸುತ್ತದೆ. ಅವರ ಅನುಭವಗಳಲ್ಲಿ ಭಕ್ತಿಭಾವ, ಧರ್ಮ-ದೇವರು, ಪರಂಪರಾನುಗತ ಆಚರಣೆಯೊಂದಿಗೆ ಮಿಳಿತವಾದ ವೈಚಾರಿಕತೆ, ಹೊರಾಂಗಣ ಸಾಹಸ, ಪ್ರಕೃತಿ ಆರಾಧನೆ, ಸಮುದಾಯ ಪ್ರಜ್ಞೆ, ಪರಸ್ಪರ ಹೊಂದಾಣಿಕೆ, ಗುಂಪು-ಕೆಲಸ, ಪಡೆದಿದ್ದಕ್ಕಿಂತಲೂ ಕೊಟ್ಟಿದ್ದೇ ಹೆಚ್ಚು ಎನ್ನುವ ವಿಶಾಲ ಮನೋಭಾವ, ದೈವದರ್ಶನದ ಕೊಂಡಾಟ-ಪರವಶ ಭಾವ, ಅದರೊಂದಿಗೆ ಇಣುಕುವ ಆಧ್ಯಾತ್ಮಿಕತೆ, ದೈವಿಕ ಶಕ್ತಿಯಲ್ಲಿ ಎಷ್ಟು ನಂಬಿಕೆಯೋ ಅಷ್ಟೇ ನಂಬಿಕೆ ಮತ್ತು ಶ್ರದ್ಧೆ ಮಾನವ ಪ್ರಯತ್ನದಲ್ಲೂ ಇರಬೇಕು ಎನ್ನುವ ನಿಲುವು, ಎಲ್ಲವೂ ಕಾಣುತ್ತದೆ.  

ಆ ಕಥನಗಳನ್ನು ನಮ್ಮ ಬಂಧುಬಳಗ, ಮಿತ್ರರಲ್ಲಿ ಅನೇಕರು ಓದಿದ್ದಾರೆ. ಇತ್ತೀಚೆಗೆ, ‘ನೋಡೆ, ಅಷ್ಟು ವರ್ಷಗಳಿಂದಲೂ ನನ್ನ ಬಳಿ ಇರುವ ಆ ನೋಟ್ ಬುಕ್ ಗಳು ಮಾಸುತ್ತಿವೆ. ಅಂಚುಗಳು ಬಿರಿಯುತ್ತಿವೆ. ಅಮ್ಮನ ನೆನಪುಗಳನ್ನು ಕಾಪಿಡಬೇಕು. ಅವನ್ನು ಇಲೆಕ್ಟ್ರಾನಿಕ್ ಡಾಕ್ಯುಮೆಂಟ್ ಗಳನ್ನಾಗಿಸಬೇಕು,’ ಎಂದು ಅಕ್ಕ ಕಳವಳಿಸಿದಾಗ ‘ಅವನ್ನು ನನಗೆ ಕಳಿಸು, ನಾನು ಆ ಕೆಲಸ ಮಾಡುತ್ತೀನಿ, ಅವನ್ನೆಲ್ಲ ಟೈಪ್ ಮಾಡಿ ಕಂಪ್ಯೂಟರಿನಲ್ಲಿ ಶೇಖರಿಸಿ ಕಳಿಸುತ್ತೀನಿ, ಇದು ನಮ್ಮಮ್ಮನ ಸೇವೆ’, ಎಂದೆ ನಾನು. 
ಇದು ನಾನು ಮೊಟ್ಟ ಮೊದಲು ಟೈಪ್ ಮಾಡಿದ ಕಥನ. ಇಲ್ಲಿ ಬರುವುದು ಅಮ್ಮನ ಶ್ರೀ ಅಮರನಾಥ ಯಾತ್ರೆ ಕಥನದ ಒಂದು ತುಣುಕು ಮಾತ್ರ. ಆಕೆಯ ಬರಹವನ್ನು ನಾನು ಯಥಾವತ್ತಾಗಿ ಟೈಪ್ ಮಾಡಿದ್ದರೂ, ಯಾತ್ರೆಯ ಮೊದಲ ಹಂತಗಳನ್ನೂ ಮತ್ತು ಖಾಸಗಿ ವಿಷಯಗಳನ್ನು ತೆಗೆದುಹಾಕಿ ಲೇಖನವನ್ನು ಇಲ್ಲಿ ಹಂಚಿಕೊಂಡಿದ್ದೀನಿ. 
ವಿನತೆ ಶರ್ಮ


೧.೦೭.೧೯೮೭ ರಿಂದ ೧೯.೦೭.೧೯೮೭ ರವರೆಗೆ ಕೈಗೊಂಡ ಶ್ರೀ ಅಮರನಾಥ ಪುಣ್ಯಯಾತ್ರೆ
‘ಭಾರತದ ಸ್ವಿಟ್ಜರ್ಲ್ಯಾಂಡ್’, ‘ಪ್ರವಾಸಿಗರ ಸ್ವರ್ಗ’, ‘ಪ್ರಕೃತಿ ಸೌಂದರ್ಯದ ನೆಲವೀಡು’, ‘ಝರಿ-ಜಲಪಾತಗಳ ಖನಿ’ ಮುಂತಾಗಿ ಬಿರುದುಬಾವಲಿಗಳನ್ನು ಜನರಿಂದ ಪಡೆದಿರುವ ಕಾಶ್ಮೀರವನ್ನು ನೋಡುವ ಅವಕಾಶ ನನಗೆ ಮತ್ತೊಮ್ಮೆ ಬಂದಿತು. ನಿನಗೆ ತಿಳಿಸಿದ್ದಂತೆ ಶಾಲೆಯಲ್ಲಿ ೫-೬ ಜನರು ಅಮರನಾಥ್ ಯಾತ್ರೆಯ ಮಾತನಾಡುತ್ತಿದ್ದರು. ೧೯೭೮ರಲ್ಲಿ ಹೋಗಿ ಬಂದಿದ್ದ ದೊಡ್ಡ ಭಾವನವರು ತುಂಬಾ ಆಶಾದಾಯಕವಾಗಿ ಹೇಳಿದುದಲ್ಲದೆ ಶ್ರೀ ಅಮರನಾಥ್ ಯಾತ್ರೆಗೆ ಆಷಾಢಮಾಸದ ಹುಣ್ಣಿಮೆಯು ಸೂಕ್ತವಾದುದೆಂದೂ ತಿಳಿಸಿದರು. ಅವರಿಂದಲೇ ಶ್ರೀ ಅಮರನಾಥ್ ಪುಸ್ತಕವನ್ನು ಪಡೆದು ಬಂದು, ಈ ಎಲ್ಲಾ ವಿಚಾರಗಳನ್ನು ನನ್ನ ಗೆಳತಿಯರಿಗೆ ತಿಳಿಸಿ ಪುಸ್ತಕ ಕೊಟ್ಟೆನು. ೧೯೮೩ರಲ್ಲಿ ಶ್ರಾವಣದ ಹುಣ್ಣಿಮೆಯಂದು ಯಾತ್ರೆ ಮಾಡಿದ್ದ ಇಬ್ಬರೂ ಅಮರನಾಥ ಲಿಂಗದರ್ಶನವಾಗದೆ ನಿರಾಶರಾಗಿದ್ದರು. ಅವರು ಬರಲು ಸಿದ್ಧರಾದರು. ಸರಿ, ಎಲ್ಲರೂ ಆಷಾಢದಲ್ಲಿ ಯಾತ್ರೆ ಮಾಡಲು ನಿರ್ಧರಿಸಿದರು. ಆಗ ನನ್ನ ಮನದಲ್ಲಿ ಆಸೆಯ ಗರಿಗೆದರಿತು. 
*****
೧೯೮೭ರ ಜುಲೈ ೧ನೇ ತಾರೀಕು ಸಂಜೆ ೭.೩೦ ಗೆ ಹೊರಡುವ ಕೆ ಕೆ ಎಕ್ಸ್ಪ್ರೆಸ್ ನಲ್ಲಿ ನಮ್ಮ ಪ್ರಯಾಣ ಶುರು.
*****
ಶ್ರೀ ಅಮರನಾಥ್ ಯಾತ್ರೆಯು ಪಹಲ್ ಗಾವ್ ನಿಂದಲೇ ಪ್ರಾರಂಭವಾಗುವುದು. ಇದು ಚಿಕ್ಕ ಊರು. ಅನೇಕ ಹೋಟೆಲ್ಗಳೂ, ಸರ್ಕಾರಿ ತನಿಖಾ ಕಚೇರಿ, ಪೋಸ್ಟ್ ಆಫೀಸ್ ಇತ್ಯಾದಿ ಆಫೀಸುಗಳಿದ್ದವು. ದೂರದಲ್ಲಿ ಆಕಾಶಕ್ಕೆ ಮುತ್ತಿಡುವಂತಿದ್ದ ಮಂಜಿನ ಶಿಖರಗಳೂ, ಅದರ ಮುಂದೆ ೨-೩ ಸಾಲು ನೀಲಿ ಬೆಟ್ಟಗಳೂ, ಅದರ ಮುಂದೆ ಚೆನ್ನಾಗಿ ಗೋಚರಿಸುವ ಇಳಿಜಾರಿನ ಹಸಿರು ಬೆಟ್ಟಗಳೂ, ಅವುಗಳ ಮುಂದೆ ಬೆಳೆದ ಪೈರುಗಳಿಂದಿರುವ ಗದ್ದೆಗಳೂ, ಅವುಗಳ ಮುಂದೆ ಕಪ್ಪನೆಯ ನೀರು ಹರಿಯುತ್ತಿರುವ ಲಂಬೋದರಿ ನದಿ. ಅದರ ಪಕ್ಕ ಫುಟಪಾಟಿನಲ್ಲಿ ನಾವು ನಿಂತಿದ್ದೆವು. ನನಗಂತೂ ಆ ಸೌಂದರ್ಯ ನೋಡಿ ಪರಮಾನಂದವೂ, ಪರಮಾಶ್ಚರ್ಯವೂ ಆಯಿತು. ಇಬ್ಬರು ವಿಚಾರಣೆಗೆ ತೆರಳಿದರು. ಇಬ್ಬರು ವಿಶ್ರಾಂತಿ ಹಾಗೂ ಸಾಮಾನು ಕಾವಲಿಗೆ ಕುಳಿತರು. ನಾನು ೧೦ ನಿಮಿಷಗಳ ಕಾಲ್ ಸುತ್ತಮುತ್ತ ನೋಡಿ ಮನತಣಿದ ಮೇಲೆ ಎಸ್ ಎಲ್ ಮನೆಗೆ, ನಮ್ಮ ...ಗೆ ಟೆಲಿಗ್ರಾಂ ಕೊಟ್ಟು ಬಂದೆ. ದಾರಿ ಪೂರ್ತಿ ಕುದುರೆ ಸವಾರರೂ, ಅಪರಿಚಿತರೂ, ಪ್ರವಾಸಿಗರ ಗುಂಪು ಕಾಣ ಸಿಗುತ್ತಿತ್ತು. ವಾತಾವರಣವು ಜಿಲ್ ಎಂದು ತಣ್ಣಗಿತ್ತು. ಶಾಲುಗಳನ್ನು ಈಚೆಗೆ ತೆಗೆದೆವು. ಸುಮಾರು ಒಂದೂಕಾಲು ಗಂಟೆಯ ನಂತರ ವಿಚಾರಿಸಲು ಹೋದವರು ಬಂದರು. ಸರ್ಕಾರದ ಕಡೆಯಿಂದ ಯಾವ ಸೌಲಭ್ಯವಿಲ್ಲವೆಂದು ತಿಳಿಯಿತು. ಆದರೆ ಒಬ್ಬ ಒಳ್ಳೆಯ ಶೆರ್ಪಾನನ್ನು ತೋರಿಸಿಕೊಟ್ಟಿದ್ದರು. ಒಂದು ಕುದುರೆಗೆ ೪೦೦ ರೂಪಾಯಿ, ಎಲ್ಲರ ಸಾಮಾನು ಹೊರುವ ಕುದುರೆಗೆ ೪೦೦ ರೂ, ಎರಡು ತಂಗುದಾಣಗಳಿಗೆ ಬಾಡಿಗೆ ಇತ್ಯಾದಿಗಳನ್ನು ಮಾತನಾಡಿದೆವು. ಅಲ್ಲಿಂದ ೩ ಕಿಮೀ ಇರುವ ಅಬ್ದುಲ್ಲಾ ಶೆರ್ಪಾನ ಮನೆಗೆ ಹೊರೆಟೆವು. ನಡೆಯುವ ಮೂರು ಜನರು ಕೋಲುಗಳನ್ನು ಕೊಂಡರು. ಅಲ್ಲಿ ಕರ್ನಾಟಕದ ಪೂರ್ಣಿಮಾ ಹೋಟೆಲ್ ಹುಡುಗ ಬಂದು ಕನ್ನಡದಲ್ಲಿ ಮಾತನಾಡಿಸಿದಾಗ ನಮಗೇನೋ ಆನಂದ! ಶೆರ್ಪಾನ ಸಹಾಯದಿಂದ ಒಂದು ಮಿಲಿಟರಿ ಟ್ರಕ್ ನಲ್ಲಿ ಸಾಮಾನುಗಳೊಡನೆ ನಾವೂ ಕುಳಿತು ಆ ಹಳ್ಳಿಗೆ ಹೋಗಿ ಸೇರುವ ವೇಳೆಗೆ ಕತ್ತಲಾಗುವಂತಿತ್ತು. ಅಲ್ಲಿ ಇನ್ನೂ ರಮಣೀಯವಾದ ದೃಶ್ಯ ನೋಡಿ ದಂಗಾದೆವು. ಒಂದು ದೊಡ್ಡ ಕೊಠಡಿ ಪ್ರವಾಸಿಗರಿಗಾಗೆ ಮೀಸಲಾಗಿಟ್ಟಿದ್ದರು. ಅಲ್ಲಿ ಎಲ್ಲರೂ ತಂಗಿದೆವು. ಆನಂತರ ನಾವು ಭಜನೆ ಪ್ರಾರ್ಥನೆಗಳನ್ನು ಮಾಡಿ ಹುರಿಟ್ಟು ತಿಂದು ಮಲಗಿದೆವು. 

ಪಹಲ್ ಗಾವ್ ನಿಂದ ಶ್ರೀ ಅಮರನಾಥ್ ಕ್ಷೇತ್ರವು ೩೨ ಮೈಲಿಗಳು ಅಥವಾ ೫೦ ಕಿಲೋಮೀಟರುಗಳು. ಕೆಲವರು ಇಲ್ಲಿಂದ ೧೦ ಮೈಲಿ ಮಿಲಿಟರಿ ಟ್ರಕ್ಕುಗಳಲ್ಲಿ ಹೋಗಿ ಅಲ್ಲಿಂದ ನಡೆಯುವರು. ಎಲ್ಲರಿಗೂ ಧಾವಂತ, ಆತಂಕ. ಈ ಸಾಹಸದ ಯಾತ್ರೆ ನಡೆಸುವುದು ಭಗವಂತನೆಂದು ನಂಬಿ ಮಲಗಿದ ನಮಗೆ ನಿದ್ದೆಯೇ ಬರಲಿಲ್ಲ. ಬೆಳಗಿನ ೫ ಗಂಟೆಗೇ ಎಡೆವು. ಶ್ರೀನಿವಾಸ್, ರಮೇಶ್, ಎಸ್ ಎಲ್ ರವರು ಶೂಸ್, ಸಾಕ್ಸ್, ಟೋಪಿ, ಕೋಟುಗಳನ್ನು ಹಾಕಿಕೊಂಡು ಹೊರಟರು. ನಾವು ಹುಶಾರೆಂದು ಹೇಳಿ ಅವರಿಗೆ ಶುಭ ಕೋರಿದೆವು. ಎಲ್ಲರದೂ ಮಿತವಾದ ಬಟ್ಟೆಬರೆ, ತಿಂಡಿ-ಕಂಬಳಿಗಳನ್ನು ಸೇರಿಸಿ ಲಗ್ಗೇಜ್ ರೆಡಿ ಮಾಡಿದೆ. ಮಿಕ್ಕಿದ್ದನ್ನು ಅಲ್ಲೇ ಬಿಟ್ಟೆವು. ಬೆಳಗ್ಗೆ ಆರೂವರೆ ಗಂಟೆ ವೇಳೆಗೆ ಕುದುರೆಗಳು ಬಂದವು. ನಾವು ಮೂವರು - ಸುಬ್ಬಮ್ಮ, ಲಲಿತಕುಮಾರಿ ಮತ್ತು ನಾನು - ಅಗತ್ಯವಾದ ಉಡುಪು ಧರಿಸಿ ಹೊರೆಟೆವು. ಇದೆ ಮೊದಲು ನಾನು ಶೂಸು, ಟೋಪಿಗಳನ್ನು ಹಾಕಿಕೊಂಡದ್ದು. ನಿಂತಿದ್ದ ಕುದುರೆಗಳಿಗೆ ಮುಟ್ಟಿ ನಮಸ್ಕಾರ ಮಾಡಿ ಜೈ ಅಮರನಾಥ್ ಎನ್ನುತ್ತಾ ಹತ್ತಿದೆನು. ಅಮರನಾಥ್ ಕ್ಷೇತ್ರದ ಕಡೆಗೆ ಪ್ರಯಾಣ ಶುರುವಾಯಿತು. 

*****
ಪಹಲ್ ಗಾವ್ ನಿಂದ ಚಂದನವಾಡಿ ಎಂಬ ಹಳ್ಳಿಯವರೆಗೆ ೧೦ ಮೈಲಿಗಳ ಡೋರ್ ಟ್ರಕ್ ಗಳು ಓಡಾಡುವಷ್ಟು ಒಳ್ಳೆಯ ರಸ್ತೆ ಇದೆ. ತುಂಬಾ ಸುಂದರವಾದ ತಾಣ. ಈ ಪ್ರದೇಶವು ಚಲಚಿತ್ರಗಳ ಚಿತ್ರೀಕರಣ ಕೇಂದ್ರ. ‘ರಾಮ್ ತೇರಿ ಗಂಗಾ ಮೈಲಿ’, ‘ಬೇತಾಬ್’ ಮುಂತಾದ ಅನೇಕ ಹಿಂದಿ ಸಿನಿಮಾಗಳ ಶೂಟಿಂಗ್ ಇಲ್ಲಾಗಿದೆ. ಚಂದನವಾಡಿವರೆಗಿನ ಕಣಿವೆಯು ಅತಿ ಸುಂದರವಾಗಿದೆ. ಬೆಳಗಿನ ತಂಪು ಹವೆ, ಹೂ ಬಿಸಿಲು ಪ್ರಕೃತಿಯ ಅಂದವನ್ನು ಹೆಚ್ಚಿಸಿತ್ತು. ಎಲ್ಲವೂ ಚೆನ್ನಾಗಿದೆ, ಹೆಜ್ಜೆಹೆಜ್ಜೆಗೂ ಫೋಟೋ ತೆಗೆಯಬೇಕಿತ್ತು! ಇರಲಿ, ನನ್ನ ಮನವೆಂಬ ಕ್ಯಾಮೆರಾದಲ್ಲಿ ಎಲ್ಲಾ ಫೋಟೋಗಳೂ ಪ್ರಿಂಟಾಗಿ ನೆನಪೆಂಬ ಕಣ್ಣಿಂದ ಬೇಕಾದಾಗ ನೋಡಿಕೊಳ್ಳುವೆ. 
ಆ ಸುಂದರ ನೋಟದ ಅನುಭವಕ್ಕೆ ಭಂಗ ಬಾರದಂತೆ ನಾನು ಮೂಕಳಾಗಿ ವಿಸ್ಮಿತಳಾಗಿ ನೋಡುತ್ತಿದ್ದೆ. ಆಗ ಹಿಮಾಲಯವು ಕಣ್ಣಿಗೆ ಕಾಣುವ ಬರಿ ಬೆಟ್ಟಗಳಾಗಿರದೆ ಶ್ರುತಿ, ಸ್ಮೃತಿಗಳಲ್ಲಿ ವಿವರಿಸಿರುವಂತಹ ಪರಮಾತ್ಮನ ವಾಸಸ್ಥಳವಾಗುತ್ತದೆ. ಹಿಮಾಲಯದಲ್ಲಿ ಅನೇಕ ಅಂತರ್ಗತವಾದ ರಹಸ್ಯಗಳು ಹುದುಗಿವೆ. ಒಳಹೊಕ್ಕು ಪಯಣಿಸಿದಾಗ ಒಂದೊಂದೇ ಅರಿವಾಗುವುದು. ನಾನು ಆದಷ್ಟೂ ನನ್ನ ಬುದ್ಧಿಗೆ ಹೊಳೆದಷ್ಟು ನೋಡಿನೋಡಿ ಅರಿತೆನು. ಆನಂದಿಸಿದೆನು. ಆಗ ನನ್ನ ಮನಸ್ಸು ತುಂಬಾ ತೃಪ್ತಿಯಾಗಿತ್ತು. 
ನನಗೆ ಮಸ್ತಾನ ಎಂಬ ಕುದುರೆ ಕೊಟ್ಟಿದ್ದರು. ಎರಡು ಕುದುರೆಗೆ ಒಬ್ಬ ಶೆರ್ಪಾ. ನನ್ನ ಹಾಗೂ ಲಲಿತಕುಮಾರಿಯವರಿಗೆ ಸೇರಿದಂತೆ ಅಬ್ದುಲ್ಲಾ ನೋಡಿಕೊಳ್ಳುತ್ತಿದ್ದನು. ಈತನು ಪಕ್ಕಾ ಕಾಶ್ಮೀರ ಯುವಕ. ಹಿಂದಿ ಬರುತ್ತಿತ್ತು. ತುಂಬಾ ನಂಬಿಕಸ್ಥ. ನಿಮ್ಮ ಯಾತ್ರೆಯು ನನಗೆ ಸೇರಿದ್ದು, ನಾನು ಗುಹೆಯವರೆಗೆ ತಲುಪಿಸಿ, ವಾಪಸ್ಸು ಕರೆ ತರುವೆನು, ನೀವೇನೂ ಯೋಚನೆ ಮಾಡಬೇಡಿ ಮಾಜಿ, ಎಂದು ಹಲವು ಸಲ ಧೈರ್ಯ ಹೇಳಿದ್ದನು. ದಾರಿಯಲ್ಲಿ ಅದೇನೋ ಕಾಶ್ಮೀರಿ ಪದಗಳನ್ನು ಕೂಗಿ ಹಾಡುತ್ತ ಹೇಳಿಕೊಳ್ಳುತ್ತಿದ್ದನು. ಕುದುರೆ ಹತ್ತಿದ ತಕ್ಷಣ ಲಗಾಮಿನ ಪ್ರಯೋಗವನ್ನು ಹೇಳಿಕೊಟ್ಟನು. ನಾನು ಅನೇಕರಂತೆ ಸರಾಗವಾಗಿ ಕುದುರೆಯನ್ನು ನಡೆಸಿದೆನು. ಇಲ್ಲಾ, ಅದೇ ನನ್ನನ್ನು ನಡೆಸಿತು! ಆತನ ಗಮನವೆಲ್ಲ ಸ್ಥೂಲಕಾಯದ ಎಲ್ ಕೆ ರವರ ಕಡೆಗಿತ್ತು. ಅವರಿಗೆ ಮೈ ಹುಷಾರಿರಲಿಲ್ಲ ಬೇರೆ. ಅಬ್ದುಲ್ಲಾ ಕಷ್ಟದ ದಾರಿಗಳಲ್ಲಿ ಓಡಿಬಂದು ನನ್ನ ಕುದುರೆಯನ್ನು ಹಿಡಿದುಕೊಳ್ಳುತ್ತಿದ್ದನು. ಸಣ್ಣ ಸೇತುವೆಗಳು ಬಂದಾಗ ನಾವು ಭಯದಿಂದ ತತ್ತರಿಸುತ್ತಿದ್ದೆವು. ಒಂದೆರೆಡು ಬಾರಿ ಇಳಿಸಿ ನಡೆದು ಬರಲು ಹೇಳಿದನು. ಒಟ್ಟಿನಲ್ಲಿ ನಾನು ಕುದುರೆ ಸವಾರಿಯಲ್ಲಿ ಪಳಗಿದವಳೆಂದು ಹೇಳಿ ಮೆಚ್ಚಿಕೊಂಡನು! ಹೋಗುತ್ತಾ, ಬರುತ್ತಾ ಒಟ್ಟು ೯೦ ಕಿಮೀ ಕುದುರೆಸವಾರಿ. ಅದು ಓಡುವಂತಿಲ್ಲ! ಪಕ್ಕದಲ್ಲಿ ಆತನು ನಡೆದು ಬರುತ್ತಿದ್ದನು. ನಾನೂ ಒಮ್ಮೆ ಕುದುರೆಯಿಂದ ಮಂಜಿನಲ್ಲಿ ಬಿದ್ದು ಸ್ಕೇಟಿಂಗ್ ಅನುಭವ ಪಡೆದೆನು. ಶ್ರೀ ಅಮರನಾಥನಿಗೆ ಉರುಳುಸೇವೆ ಮಾಡಿದೆನು. ಮೂರು ನಾಲ್ಕು ಸಲ ಬಿದ್ದವರನ್ನು ನೋಡಿ ಮರುಕಪಟ್ಟು ಸದ್ಯ ನಾನು ಬೀಳಲಿಲ್ಲವೆಂದುಕೊಂಡೆನು. ತಕ್ಷಣವೇ ಬಿದ್ದೆನು! ಅಹಂ ಕೂಡದಲ್ಲವೇ?   

(ಮುಂದುವರೆಯುವುದು)

~ ವಿನತೆ ಶರ್ಮ

ಯಾ ದೇವಿ ಸರ್ವಭೂತೇಷು 

ಮಾತೃರೂಪೇಣ ಸಂಸ್ಥಿತಾ..

ನಲ್ಮೆಯ ಓದುಗರೇ ನಮಸ್ಕಾರ.
   ‘ಕೌಸಲ್ಯಾ ಸುಪ್ರಜಾ ರಾಮಾ’ ಎಂದು ಜಗದೊಡೆಯನನ್ನೂ ಕೌಸಲ್ಯೆಯ ಮಗನನ್ನಾಗಿ ಕಾಣುವ ಸಂಸ್ಕೃತಿಯಿಂದಲೇ ಅರ್ಥವಾಗುತ್ತದೆ ತಾಯ್ತನದ ಎತ್ತರ. ಜಗದೆಲ್ಲ ಬಂಧಗಳಿಂದ ಮುಕ್ತನಾದ ಸನ್ಯಾಸಿಯೂ ಮಾತೃಪಾದಗಳಿಗೆರಗುತ್ತಾನೆ. ಅದಕ್ಕೆಂದೇ ದೇವಕಿನಂದನ, ಯಶೋದಾಕಂದ, ಗೌರೀತನಯ, ಗಾಂಗೇಯ, ಕೌಂತೇಯ, ರಾಧೇಯ..ಇತ್ಯಾದಿ ಪುರಾಣೇತಿಹಾಸ ಪುರುಷರಿಂದ ಹಿಡಿದು ನಮ್ಮ ವರಕವಿ ಬೇಂದ್ರೆ ಸಹಿತ ತಮ್ಮನ್ನು ಗುರುತಿಸಿಕೊಂಡಿದ್ದು ‘ಅಂಬಿಕಾತನಯ'ರಾಗಿಯೇ. 
 ‘ಪಾತಾಳ ಕಂಡರೇನು? ಆ ತಾಯಿ ಬಿಡುವಳೇನು? ಕಾಯವನು ಹೆತ್ತ ಕರುಳು, ಕಾಯುವಳು ಹಗಲು ಇರುಳು’ ಎಂದು ನಮ್ಮನ್ನು ಪೊರೆವ ಮಾತೃವಾತ್ಸಲ್ಯದ ಬಗ್ಗೆ ಭಾವುಕರಾಗಿ ಬರೆಯುತ್ತಾರೆ ಅಂಬಿಕಾತನಯದತ್ತರು. 
‘ಹಸಿರು ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ..ಮರೆಯುವುದುಂಟೇ ಮರೆಯಲಿ ನಿಂತೇ ಕಾಯುವ ಕರುಣಾಮಯಿಯ’ ಎನ್ನುತ್ತಾರೆ ಎಚ್ಚೆಸ್ವಿ      
‘ನನ್ನವ್ವ ಫಲವತ್ತಾದ ಕಪ್ಪು ನೆಲ.
 ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ; 
ಸುಟ್ಟಷ್ಟು ಕಸುವು,ನೊಂದಷ್ಟೂ ಹೂ ಹಣ್ಣು – 
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ’..ಎಂಥ ಹೃದಯಸ್ಪರ್ಶಿ ಸಾಲುಗಳು ಲಂಕೇಶರ ‘ಅವ್ವ’ನದು! 
‘ಮೋಡದಲ್ಲಿ ಬಿಸಿಲಿನಲಿ ನೋಯದಂತಡಗಿ, 
ಮಾಯದಂತೆ ಕಾದು ಸ್ವಂತತನವ, ಕತ್ತಲಲ್ಲಿ ಹೊಳೆವ ಜೀವ. 
‘ಅಮ್ಮ’ ಎನ್ನುವ ಸುಖದ ನಿಟ್ಟುಸಿರ ಕರೆದು 
ಸವೆದೂ ಸವೆಯದ ಆ ಪದವ ನೆನೆದು ಆ ಪದವ ನೆನೆದು ..ಎಂದು ಹಲಬುತ್ತ ಅಮ್ಮನಿಗಾಗಿ ಹಂಬಲಿಸುತ್ತಾರೆ ವೈದೇಹಿಯವರು ‘ನನ್ನ ಅಮ್ಮನ ಸೀರೆ’ಯಲ್ಲಿ.
ಒಟ್ಟಿನಲ್ಲಿ ತನ್ನ ಗರ್ಭದಲ್ಲಿ ಹೊಸ ಚೈತನ್ಯವೊಂದಕ್ಕೆ ಜೀವ ನೀಡಿ ಪೊರೆವ ಶಕ್ತಿ ಬ್ರಹ್ಮನ ನಂತರ ಇರುವುದೆಂದಾದರೆ ಅದು ತಾಯಿಗಷ್ಟೇ.
ಜಗದೆಲ್ಲ ಅಮ್ಮಂದಿರಿಗೆ ಅಂತೆಯೇ ತಾಯ್ಮನದ,ಅಂತ:ಕರಣದ ಎಲ್ಲ ಜೀವಗಳಿಗೆ ಬರಲಿರುವ ‘ಮದರ್ಸ್ ಡೇ’ಯ ಹಾರ್ದಿಕ ಶುಭಾಶಯಗಳು.
‘ಕಲ್ಲಾಗು, ಗುಂಡಾಗು, ಕರಕೀ ಬೇರಾಗು, ಅಗಸೀ ಮುಂದಿನ ಬೋರ್ಗಲ್ಲಾಗು’ಎಂದು  ಹಗಲಿರುಳೂ ಶ್ರೀರಕ್ಷೆಯನ್ನೀಯುತ್ತ ಮಕ್ಕಳ ಕನಸು-ಆಸೆಗಳ ರೆಕ್ಕೆಗಳಿಗೆ ವೈನತೇಯ ಬಲ ತುಂಬುವ ಅಮ್ಮನನ್ನು ತಮ್ಮ ಕವನದ ಮೂಲಕ ಭಾವದುಂಬಿ ನೆನೆದಿದ್ದಾರೆ ರಮ್ಯಾ ಭಾದ್ರಿಯವರು. ಅದರೊಡನಿರುವ ಅವರೇ ಚಿತ್ರಿಸಿರುವ ಸುಂದರ ಸ್ಕೆಚ್ ಆ ಕವನಕ್ಕೆ ಕಳಸವಿಟ್ಟಂತಿದೆ.
 ದುರದೃಷ್ಟಕರವಾಗಿ ತಮ್ಮ ನೆಲ-ಮನೆಗಳನ್ನು ಕಳೆದುಕೊಂಡು, ಮಗನಿಂದಲೂ ಬೇರ್ಪಟ್ಟ ನೈಜೀರಿಯನ್ ರೆಫ್ಯೂಜಿ ಅಮ್ಮನ ಮನಮಿಡಿಯುವ ಸತ್ಯ ಘಟನೆಯೊಂದನ್ನು ಕಥೆಯಾಗಿ ನೇಯ್ದು ತಂದಿದ್ದಾರೆ ವತ್ಸಲಾ ರಾಮಮೂರ್ತಿಯವರು ತಮ್ಮ ‘ಕರುಳಿನ ಕರೆ’ಯಲ್ಲಿ. ಓದಿ ನೋಡಿ ಕಣ್ಣಂಚು ತೇವವಾಗುತ್ತದೆ. ಯಾವ ಕಂದನೂ ಅಮ್ಮನಿಂದ ಅಗಲದಿರಲಿ ಎಂಬ ಹಾರೈಕೆ ಮೂಡುತ್ತದೆ.
‘ಅಮ್ಮ’ ಎನ್ನುವ ಭಾವ ಎಷ್ಟು ಸಾರ್ವತ್ರಿಕವೋ ಅಷ್ಟೇ ವೈಯಕ್ತಿಕವೂ ಕೂಡ. ಎಲ್ಲರ ಅನುಭೂತಿ,ಭಾವ ಬಂಧಗಳು ತೀರ ಭಿನ್ನ ಹಾಗೂ ಸ್ವಂತ. ತಮ್ಮ ಅಮ್ಮನ ಕುರಿತು ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ ಪ್ರಸನ್ನ ಅವರು. ಬನ್ನಿ..ಓದಿ..ಅಮ್ಮನಂತ:ಕರಣದಲ್ಲಿ ಮಿಂದೇಳಿ.

~ ಸಂಪಾದಕಿ

ಅಮ್ಮ 

ಸುಂದರ ಘಳಿಗೆಯಲ್ಲಿ ಬೆಸೆದ ಕರುಳ ಬಂಧ  
ಸಕಲ ಸಂಬಂಧಗಳಿಗೂ ಶ್ರೇಷ್ಠ ಈ ಅನುಬಂಧ 
ಹಂಚಿದಷ್ಟು ಹೆಮ್ಮರವಾಗುವ   ಪ್ರೀತಿಯ  ಬಂಧ 
ಅನಂತ, ಅಪೂರ್ವ  ಈ ಋಣಾನುಬಂಧ 
ಅಮ್ಮ, ನಿನಗೆ ನಾ ಚಿರಋಣಿಯಮ್ಮ 

ಹೊತ್ತು, ಹೆತ್ತು ಜೊತೆಜೊತೆಗೆ ಹೆಜ್ಜೆ ಹಾಕಿದೆ 
ಎಡವಿದಾಗ ಮೈದಡವಿ ಕೈ ಹಿಡಿದು ಬೆಳೆಸಿದೆ 
ಮಮತೆಯ ಮಳೆಗರೆದು ಮಡಿಲಲ್ಲಿ ಆಡಿಸಿದೆ 
ಹೊತ್ತು ಗೊತ್ತೆನ್ನದೆ  ಅತ್ತಾಗ ಮುತ್ತಿಟ್ಟು ತುತ್ತುಣಿಸಿದೆ 
ಅಮ್ಮ , ನೀನೊಂದು ಅನರ್ಘ್ಯ ಮುತ್ತಮ್ಮ 

ಅಕ್ಕರೆಯ ಅಪ್ಪುಗೆಯಲಿ ಆಸರೆಯ ಶ್ರೀರಕ್ಷೆಯನ್ನಿತ್ತೆ 
ಮಾತನ್ನು ಕಲಿಸಿದೆ , ಕನಸುಗಳನ್ನು ಬಿತ್ತೆ 
ಹಾಲುಣಿಸಿ ಆಸೆಯ ರೆಕ್ಕೆಗಳಿಗೆ ಬಲವನ್ನೂ  ಇತ್ತೆ 
ಗುರುವಾಗಿ ಗುರುತರ ಮಾರ್ಗದ ಬೆಳಕಾಗಿ ನಿಂತೆ 
ಅಮ್ಮ, ನಿನ್ನಿಂದಲೇ  ಇಂದು ನಾನಮ್ಮ 

ಅಪೇಕ್ಷಗಳನ್ನರಿಯದ ನಿನ್ನ ನಿಸ್ವಾರ್ಥದೊಲುಮೆ 
ಕಂದನ ಆನಂದಕ್ಕಾಗಿಯೇ ನಿನ್ನೆಲ್ಲಾ ದುಡಿಮೆ 
ನೊಂದ ಮನಕೆ ಮದ್ದಾಗುವ ವಾತ್ಸಲ್ಯದ ಮಹಿಮೆ 
ಅಮ್ಮಾ .. ಎನ್ನಲು ಮನವರಳಿಸುವ ಉತ್ಸಾಹದ ಚಿಲುಮೆ 
ಅಮ್ಮ, ನನಗೆ ನೀನೆ ದೈವವಮ್ಮ 

ಹೇಳದೆಯೇ ಮನದಾಳದ ಭಾವವ ನೀ ಬಲ್ಲೆ 
ಕಾಣದಿದ್ದರೂ ಕಣ್ಮುಚ್ಚಲು ಕಂಡೆ ಎನ್ನ ಮನದಲ್ಲೇ 
ಕರೆದೊಡನೆ ಕರುಳರಿವ ನಿನ್ನ ಕಾರುಣ್ಯಕ್ಕಿಲ್ಲ ಎಲ್ಲೆ 
ಸಕಲವೂ ನಿನ್ನ ಮಡಿಲಲ್ಲೇ ,ಸ್ವರ್ಗವೂ ನಿನ್ನ ಪಾದದಲ್ಲೇ 
ಅಮ್ಮ, ನೀನೇ  ಸೌಭಾಗ್ಯವಮ್ಮ 

~ ರಮ್ಯ ಭಾದ್ರಿ 

ಕರುಳಿನ ಕರೆ

ನಾನು ಪಿಂಚಿನಿಯಾದ ಮೇಲೆ RedCross Volunteer ಕೆಲಸ ಶುರುಮಾಡಿದೆ. ಏನಾದರು ಮಾಡಬೇಕಲ್ಲ ಇನ್ನು ಆರೋಗ್ಯ ಇದೆ ಮತ್ತು  ತಲೆ ಓಡುತ್ತಿದೆ. ನನ್ನ ಮಗ “ಅಮ್ಮ ಏನಾದರೂ  ವಾಲಿಂಟಿಯರ್‌ ಕೆಲಸ ಮಾಡು ಸುಮ್ಮನೆ ಟಿ.ವಿ. ನೋಡುತ್ತಾ ಕುಳಿತು ಕೊಳ್ಳಬೇಡ  ಅಂತ ವರಾತ ಹಚ್ಚಿದ.  ನಾನು “ಹೋಗೋ  ವರ್ಷಗಟ್ಟಲೆ ಕೆಲಸ ಮಾಡಲಿಲ್ಲವೇ? ಈಗ ಖುಷಿಯಾಗಿ  Story books ಓದಿಕೊಂಡು,  ಮಸಾಲೆದೋಸೆ, ಜಾಮೂನು,ನಿಪ್ಪಟ್ಟು ತಿಂದುಕೊಂಡು ಮಜಮಾಡುತ್ತೇನೆ”  ಎಂದೆ. ಅವನು ಅದುಮಾಡು ಮತ್ತು ಇದುಮಾಡೆಂದ. ನಿಜ ಹೇಳಬೇಕೆಂದರೆ  ಮಸಾಲೆದೋಸೆ, ಜಾಮೂನು ಕನಸಿನಲ್ಲಿ ತಿನ್ನಬೇಕು ! ನಾನಿರುವ ಯು.ಕೆ.ಯ ಮೂಲೆಯಲ್ಲಿ  ನಮ್ಮಊರಿನ ತಿಂಡಿ ಬೇಕಾದರೆ ರೈಲು ಹತ್ತಿ ಲಂಡನ್‌ಗೆ ಹೋಗಬೇಕು. ಅಲ್ಲಿಗೆ ಮಗಿಯಿತು ಆ ಕನಸು. RedCross ನಲ್ಲಿ ತಪಾಸಣೆಗಳಲ್ಲಾ ಮುಗಿದಮೇಲೆ Volunteer ಯಾಗಿ ನೋಂದಾಯಿಸಿದರು. ನನ್ನ ಕೆಲಸ Day centre ನಲ್ಲಿ. Refugeeಗಳಿಗೆ ಊಟ,ತಿಂಡಿ ಮನೆಸಾಮನುಗಳು ಮತ್ತು ಪ್ರಯಾಣದ ಖರ್ಚಿಗೆದುಡ್ಡು, GP Registrationಗೆ , ಒಟ್ಟಿನಲ್ಲಿ ಆರ್ಥಿಕ, ಮಾನಸಿಕ, ಸಾಮಾಜಿಕವಾಗಿ ಬೆಂಬಲ ನೀಡುವುದು.

RedCrossಗೆ ಸೇರಿದಮೇಲೆ ನನ್ನ ಜೀವನದ  ದೃಷ್ಷಿಕೋನವೇ ಬದಲಾಯಿತು. Refugeeಗಳು ಅನುಭವಿಸಿದ  ದಾರುಣ ಕತೆಗಳು, ದೈಹಿಕ, ಮಾನಸಿಕ, ಹಿಂಸೆಗಳನ್ನು ಬರೆಯಲು ಈ ಲೇಖನಿಗೆ ಶಕ್ಯವಿಲ್ಲ. ಕೆಲವರ ಬೆನ್ನಮೇಲೆ ಲಾಟಿಚಾರ್ಜ್ ಬೊಬ್ಬೆಗಳು ಇನ್ನೂ ಇವೆ.
ಒಂದು ದಿನ ಒಬ್ಬ Nigerian ಮಹಿಳೆ ಹೊಸದಾಗಿ ನಮ್ಮ Day Centerಗೆ ಬಂದಳು. ಅವಳನ್ನು ನೋಡಿದರೆ ಸಂಬಾವಿತಳು,  ವಿದ್ಯಾವಂತಳ ಹಾಗೆ ಕಾಣುತ್ತಿದ್ದಳು.  ನಾವು ಕೊಡುವ ತಿಂಡಿ, ಸಾಮಾನುಗಳನ್ನು ತೆಗೆದುಕೊಳ್ಳಲು ಕುಗ್ಗಿಹೋಗುತ್ತಿದ್ದಳು. ಮುಖ ದುಗಡದಿಂದ ಮಂಕಾಗಿತ್ತು. ನಾನು ಆಕೆಯ ಪರಿಚಯ ಬೆಳೆಸಿ ಅವಳ ದಾರುಣ ಕತೆ ಕೇಳಿದೆ. ಎಲ್ಲ ವಿವರಣೆಗಳನ್ನು ಇಲ್ಲಿ ಬರಿಯಲು ಸಾದ್ಯವಿಲ್ಲ. ಮುಖ್ಯವಾಗಿ ಅವಳ ೧೫ ವರುಷದ ಮಗ ಕಾಣೆಯಾಗಿದ್ದಾನೆ. ಅವಳ ಮಗನ ಸಮಚಾರ ತಿಳಿಯದೆ ಒದ್ದಾಡುತ್ತಿದ್ದಾಳೆ.ಅವಳು ಲಾಯರ್‌ ಆಗಿ ಕೆಲಸ ಮಾಡುತ್ತಿದ್ದಳಂತೆ. ದುರಾದೃಷ್ಷದಿಂದ  U.K.ಗೆ Refugee ಯಾಗಿ ಬರಬೇಕಾಯಿತು. ಮಗ Londonನಲ್ಲಿ ಕಾಣೆಯಾದ. ನಾವು RedCrossನಿಂದ  ಕಾಣೆಯಾಗಿರುವರನ್ನು (missing person )ಹುಡುಕಿ ಅವರ ಸಂಸಾರದ ಜತೆ ಕೂಡಿಸುತ್ತೇವೆ. ಅವಳ ಮಗನ ಗುರುತಿನ ವಿವರಗಳನ್ನು ತಿಳಿದುಕೊಂಡೆವು. ಅವನ ಹಣೆಯಮೇಲೆ  ಹುಲಿ ಮಚ್ಚೆಯಿದೆ ಮತ್ತು English ಮಾತಾನಾಡಲು ಬರುತ್ತದೆಯೆಂದು ತಿಳಿಯಿತು. 

ಒಂದು ದಿನ ವಿರಾಮ ಸಮಯದಲ್ಲಿ ಮತಾನಾಡುತ್ತಾ ಕುಳಿತಿದ್ದೆವು.ಆಗ  ನಮ್ಮSocialWorker ಒಬ್ಬ  ಯುವಕನ ಜತೆಬಂದಳು. ೬ ಅಡಿಉದ್ದವಿದ್ದ ಆ ಯುವಕನ ನಡಿಗೆ ಮಾತುಕತೆ,ಅಗಾಧ ದುಃಖದ ಮುಖವಾಡ,  ಸುಖವಾಗಿ ಬೆಳದ ಹುಡುಗ ಪಡಬಾರದ ಕಷ್ಷಕ್ಕೆ ಸಿಕ್ಕಿದ್ದಾನೆ ಅಂತ ನಾವೆಲ್ಲಾ ಮಾತನಾಡಿಕೊಂಡೆವು. ನಂಗೆ ಮಾತ್ರ ಯುವಕನ ಮುಖ, ನಡುವಳಿಕೆ ತುಂಬಾ ಪರಿಚಯೆನ್ನುವ ಬಾವನೆ. ನೆನಪು ಬರವಲ್ಲದು.  ರಾತ್ರಿಯಿಲ್ಲಾ ನಿದ್ರೆಯಿಲ್ಲ. ಕಳವಳಿಸಿದೆ. ಒಂದು ವಾರದ ಮೇಲೆ ನೆನಪಿನ ಸುಳಿಬಿಚ್ಚಿತು. ಆ ಯವಕನಿಗೆ ಆ ಲಾಯರಿನ ಹೋಲಿಕೆಯಿದೆಂದು.ಅವಳ ಸಂಬಂಧಿ ಇರಬಹುದೆ?  ಇತ್ತೀಚೆಗೆ ಆ ಹೆಂಗಸಿನ ಪತ್ತೆಯಿಲ್ಲ.ಸುಮಾರು ೩ ತಿಂಗಳಹಿಂದೆ localAuthourity ಅವಳನ್ನು  ಬೇರೆ ಜಾಗಕ್ಕೆ ಕಳಿಸಿದ್ದಾರೆಯೆಂದು ತಿಳಿಯಿತು. ಅವಳ ನೆನಪು ಅಳಿಸಿ ಹೋಗಿದೆ. ನನ್ನ ಕಳವಳ ತಡಿಯಲಾರದೆ SocialWorkerನ ಮೂಲಕ ಮಾಹಿತಿ ದೊರೆಕಿಸಿಕೊಂಡೆ.ಆ ಯುವಕ ಸಹ ತಾಯಿಗಾಗಿ ಹಂಬಲಿಸಿ ಸೊರಗಿದ್ದಾನೆಂತ. ನಾನು SocialWorkerಗೆ ನನ್ನ ಅನಸಿಕೆ ವಿವರಿಸಿ ಹೇಳಿದೆ. ಆದರೆ ಆಕೆಗೆ ನನ್ನ ಮಾತಿನಲ್ಲಿ ನಂಬಿಕೆ ಬರಲಿಲ್ಲ. ಆ ವಿಷಯ ಮರೆತು ಹೋಯಿತು. ಸುಮಾರು 6 ತಿಂಗಳನಂತರ RedCrossಗೆ ಒಬ್ಬ ತಾಯಿಮಗ ಕೈ ಹಿಡಿದುಕೊಂಡು ಸಂತೋಷದಿಂದ ಬಂದರು. ನನಗೆ ನಂಬಲಾಗಲಿಲ್ಲ. ನಾನು ಕೊಟ್ಟ ಮಾಹಿತಿಯಿಂದ SocialWorker (Reluctantly looked for his mother ) .ಅಂತೂ ಪತ್ತೆಮಾಡಿ ಒಂದುಗೂಡಿಸಿದಳು. ಇವತ್ತು ತಾಯಿಗೆ Asylum status ದೊರಕಿದೆ. ಮಗ ಕಾಲೇಜ್‌ ಸೇರಿದ್ದಾನೆ. ಇದಲ್ಲವೇ ಕರುಳಿನ ಕರೆ!

~ ವತ್ಸಲಾ ರಾಮಮೂರ್ತಿ

ನಮ್ಮಮ್ಮ

ಸೂರ್ಯ , ಚಂದ್ರ, ಮುಂಜಾವು, ಮುಸ್ಸಂಜೆ , ಜಗಕೆಲ್ಲಾ ಒಂದೇ ಆದರೂ, ಅವುಗಳ ಬಗೆಗಿನ ನಮ್ಮ ನಮ್ಮ ಅನುಭವ ತೀರ ನಮ್ಮದೇ.  ಹಾಗೆಯೇ ಅಮ್ಮ. ಅಮ್ಮ ದಿನ ನಿತ್ಯದ ಸಂಬಂಧ ಆಗಬಹುದು, ಮಧುರ ಭಾವನೆ ಆಗಬಹುದು, ಪ್ರೇರಣೆ ಆಗಬಹುದು , ಜಾಗತಿಕವೂ ಆಗಬಹುದು Mother Teresa ರಂತೆ.  

ನನ್ನ ಅಮ್ಮ ಕೂಡ , ಜಗದೆಲ್ಲಾ ಅಮ್ಮಂದಿರಂತೆ Best mother in the world. ನನ್ನ ಮೊಟ್ಟ ಮೊದಲ ಅಚ್ಚರಿ ಅವಳನ್ನು ಕುರಿತಾಗಿದ್ದು , ಅವಳ ಹಣಕಾಸಿನ management skills. ಅಪ್ಪನ ೨೦೦ ತಿಂಗಳ ಸಂಬಳದಲ್ಲೂ, ೨೦೦೦೦ ದಲ್ಲೂ, ಅಂದೂ, ಇಂದೂ,  ಮನೆ ಸಂತೃಪ್ತ , ಸಂತಸ , ನಗುವದು ಅವಳಿಂದಲೇ. ಹತ್ತನೇ ತರಗತಿ ಮುಗಿಸದ ಅಮ್ಮ, ನಮಗೆ ಯಾವ ಅಮರ್ತ್ಯ ಸೇನ, ಮನಮೋಹನರಿಗಿಂತ ಎಂದೂ ಕಡಿಮೆ ಅನ್ನಿಸಲಿಲ್ಲ. 

ನನ್ನ ಒಂದು ಪ್ರಾಥಮಿಕ ಶಾಲಾ ವರ್ಷದ ನೆನಪು. ಅಂತಿಮ ಪರೀಕ್ಷಾ ಸಮಯ. ಅಮ್ಮ ನನ್ನನ್ನು ಕರೆದು ಹೇಳಿದಳು -ಈ ಬಾರಿ ಚನ್ನಾಗಿ ಓದಿಕೊಂಡು , ಪರೀಕ್ಷೆ ಬರೆದರೆ , ನನಗೆ ಏನೊ ಒಂದು ಬಹುಮಾನ ಕಾಯ್ದಿದೆ ಎಂದು. ಅಲ್ಲಿಯ ತನಕ ನನಗೆ ಎಂದೂ ಈ ರೀತಿಯ ಪ್ರಲೋಭನೆಯ ಪರಿಚಯವೇ ಇರಲಿಲ್ಲ. ನನಗೋ ಕಾತರ, ಸಂಭ್ರಮ, ಕೂತೂಹಲ. ಪರೀಕ್ಷೆಯ ನಂತರ ಸಿಕ್ಕ ಅಮರ ಚಿತ್ರ ಕಥಾ ಅವರ ದಶಾವತರ bumper comic book ಇಂದಿಗೂ ನನ್ನ ನೆನಪಿನಂಗಳದಲ್ಲಿ ನೆನ್ನೆಯೆ ನಡೆದಂತಿದೆ. ನನ್ನ ಅಮ್ಮ ನನಗೆ ಯಾವುದೇ motivational guru’s ಗಳಿಗಿಂತ ಕಡಿಮೆ ಏನಿಲ್ಲ. 

ಅಮ್ಮನ ಬದುಕು ಅವಳ ಹುಮ್ಮಸ್ಸು , ಹೊಸತನ್ನು ಕಲಿಯುವ ಹುರುಪು ನನಗೆ ಸೋಜುಗ. ಇಂದಿಗೂ ಏನೋ ಒಂದು ಕಲಿಯುತ್ತಿರುತ್ತಾಳೆ ಅವಳು. Alternative healing Reiki ಆಗಲಿ, ವಿಪಶ್ಯನ ಧ್ಯಾನ ಪದ್ಧತಿಯಾಗಲಿ , ಇಂದಿನ social media aap ಆಗಲಿ, ತಾನೂ ಕಲಿತು , ಅಪ್ಪನಿಗೂ ಕಲಿಸಿ, ನಮಗೂ ತನ್ನ ಕಲಿಕೆಯ ಪ್ರಯೋಗಗಳನ್ನು ಕಲಿಸುವ ಹುಮ್ಮಸ್ಸು ಆಕೆಯದು. ನನಗೆ ಯಾವ Abdul Kalam,  ಶಾರದಾ ಮಾತೆಗೂ ಕಡಿಮೆಯಲ್ಲ ಆಕೆ.. 

ನನ್ನ ಅಮ್ಮ ನನ್ನ ಜಗತ್ತು. ಆಕೆಯ ಪ್ರತಿಬಿಂಬ ನಾನು. ಮನುಷ್ಯನನ್ನು ರೂಪಿಸಿದ ಮಾತೃಶಕ್ತಿಗೆ ನಿತ್ಯ ನಮನ.

~ ಪ್ರಸನ್ನ