ಅರಿವೇ ಗುರು

ನಲುಮೆಯ ಓದುಗ ಬಳಗಕ್ಕೆ ನಮಸ್ಕಾರ.
‘ ರಾಜನಿಗಿಂತ ಭಿಕ್ಷುವಿನ ಸ್ಥಾನವೇ ಹೆಚ್ಚಿನದು ಎಂಬ ಮೌಲ್ಯವನ್ನು ಕಟ್ಟಿದ್ದು ಜಗತ್ತಿನಲ್ಲಿ ಭಾರತವೊಂದೇ. ಭಿಕ್ಷು ಯಾರು? ಯಾರು ತನ್ನ ಮೇಲೆ ತಾನು ನಿಜವಾದ ಮಾಲೀಕತ್ವವನ್ನು ಸಾಧಿಸಿರುವನೋ ಅವನು. ಅವನೊಳಗೇ ಒಂದು ವಿಶ್ವವಿದೆ; ಒಂದು ಸಾಮ್ರಾಜ್ಯವಿದೆ;ವಿಶಾಲತೆಯಿದೆ; ಆಕಾಶವಿದೆ. ಇದು ಮಹಾವೀರರ ಹಾದಿ. ಮಹಾವೀರರಂಥವರು ಬತ್ತಲೆಯಾದಾಗ ಅದು ಕೇವಲ ರೂಢಿ ಅಥವಾ ನಡವಳಿಕೆ ಅಲ್ಲ, ಅದು ಅರಿವು..ತಿಳವಳಿಕೆ..ವಿವೇಚನೆ’. (ರಜನೀಶ್. ನನ್ನ ಪ್ರಿಯ ಭಾರತ)

‘ಭಾರತದ ಶೋಷಿತ ವರ್ಗಗಳ ಹಿತಕಾಯಲೆಂದೇ ನಾನು ಮೊದಲು ಸಂವಿಧಾನ ಕರಡು ರಚನಾ ಸಮಿತಿಗೆ ಬಂದೆ. ದುರ್ಬಲ ವರ್ಗಗಳಿಗೆ ಮಾನವ ಹಕ್ಕುಗಳನ್ನು ಗಳಿಸಿಕೊಡುವುದೇ ನನ್ನ ಜೀವನದ ಧ್ಯೇಯ.’ (ಬಿ.ಆರ್.ಅಂಬೇಡಕರ)

ಮೊದಲಿಗೆ ಸರ್ವರಿಗೂ ಮಹಾವೀರ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು.

‘ಯುಜ್ಯತೇ ಇತಿ ಯೋಗ:’ ಯೋಗ ಅಪ್ಪಟ ವಿಜ್ಞಾನ. ಯೋಗ ಪ್ರಪಂಚದಲ್ಲಿ ಪತಂಜಲಿ ಅಗ್ರಗಣ್ಯರು. ನೀವು ಪತಂಜಲಿಯನ್ನು ಅನುಸರಿಸಿದರೆ, ಅವರು ಒಂದು ಗಣಿತದ ಸೂತ್ರದ ಹಾಗೆ ನಿಖರವೆಂಬುದು ಗೊತ್ತಾಗುವುದು. ಸುಮ್ಮನೇ ಆತ ಹೇಳಿದಂತೆ ಮಾಡಿದಲ್ಲಿ ಫಲಿತಾಂಶ  ಬರುವುದು; ಬರಲೇಬೇಕು. ಎರಡು ಮತ್ತು ಎರಡು ಕೂಡಿದರೆ ನಾಲ್ಕು ಎಂದಹಾಗೆಯೇ ಇದು. ನೀವು ನೀರನ್ನು ನೂರು ಡಿಗ್ರಿ ತಾಪಕ್ಕೆ ಕಾಯಿಸಿದರೆ ಆವಿಯಾಗುವ ಹಾಗೆ. ಯಾವುದೇ ನಂಬಿಕೆ, ಮತಶ್ರದ್ಧೆ ಬೇಕಿಲ್ಲದೆಯೂ ಸುಮ್ಮನೆ ಮಾಡಿನೋಡಿ  ತಿಳಿಯಬಹುದು. ಈ ಭೂಮಿಯ ಮೇಲೆ ಪತಂಜಲಿಯಂಥ ಇನ್ನೊಬ್ಬ ವ್ಯಕ್ತಿ ಜೀವಿಸಿರಲಿಲ್ಲ’..ಇದನ್ನು ನಾನಲ್ಲ ಹೇಳುತ್ತಿರುವುದು; ಓಶೋ ರವರು  ಹೇಳಿದ ಮಾತಿದು. ಇವತ್ತು ತಾವು ಮಾಡಿದ ಯೋಗಪಯಣವನ್ನು ನಿಮ್ಮೊಡನೆ ಹಂಚಿಕೊಂಡಿದ್ದಾರೆ ಶ್ರೀಮತಿ ಸಂಧ್ಯಾ ಪುರೋಹಿತ್ ಅವರು.

ಧುಮ್ಮಿಕ್ಕಿ ಹರಿವ ನದಿಯಲ್ಲಿ, ಹಕ್ಕಿಗಳ ಕಲರವದಲ್ಲಿ, ಭೋರ್ಗರೆವ ಕಡಲಲ್ಲಿ, ಗಾಳಿಯ ಸುಯ್ಗುಡುವಿಕೆಯಲ್ಲಿ ,ಮಳೆ ಹನಿಗಳ ತಟಗುಟ್ಟುವಿಕೆಯಲ್ಲಿ, ಕಪ್ಪೆಗಳ  ವಟಗುಟ್ಟುವಿಕೆಯಲ್ಲಿ, ಗುಡುಗಿನ ಆರ್ಭಟದಲ್ಲಿ...ಸಕಲ ಪ್ರಕೃತಿಯೇ ಸಂಗೀತಮಯ.  ‘ಸುರ್ ಕೀ ಸಾಧನಾ ಪರಮೇಶ್ವರ್ ಕೀ’ 
ಅಂಥದೊಂದು ಸಂಗೀತ ರಸಾಯನದ  ಹನಿ ನಿಮಗಾಗಿ ಕುಮಾರಿ ಸಂಪದಾ ಪುರೋಹಿತ್ ಅವರಿಂದ.

‘ಸೆಲ್ಫಿ’ ಯಾರಿಗಿಷ್ಟವಿಲ್ಲ? ಇವತ್ತೇನಾದರೂ ಬುದ್ಧನಿದ್ದಿದ್ದರೆ ‘ಸೆಲ್ಫಿ’ ತೆಗೆಯದವರಿಂದ ಸಾಸಿವೆ ತರಲು ಹೇಳತ್ತಿದ್ದನೇನೋ??!! ಆದರೆ ಎಷ್ಟು ಸೆಲ್ಫಿ ತೆಗೆದುಕೊಂಡರೇನು ಅಂತರಂಗದ ಅರಿವು ‘ಸ್ವಂತಕೇ ದುರ್ದರ್ಶ ಮಂಕುತಿಮ್ಮ’. ಬನ್ನಿ, ಓದಿ ವಿಜಯ ನಾರಸಿಂಹ ಅವರ ಕವನವನ್ನು. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಮರೆಯದಿರಿ.

~ಸಂಪಾದಕಿ


ಸಂಧ್ಯಾ ಪುರೋಹಿತ ಅವರು ಮೂಲತ: ಕುಷ್ಟಗಿಯವರಾಗಿದ್ದು ಕಳೆದ ಸುಮಾರು 19 ವರುಷಗಳಿಂದ ಯು.ಕೆ.ನಲ್ಲಿ ವಾಸವಾಗಿದ್ದು ಸಧ್ಯ ಬರ್ನಾಮ್ ನಿವಾಸಿ. ಸಂಗೀತ, ನೃತ್ಯ,  ಅಡುಗೆ ಇತ್ಯಾದಿ ಆಸಕ್ತಿಗಳೊಡನೆ  ತುಂಬಿ ತುಳುಕುವ ಜೀವನೋತ್ಸಾಹ ಇವರದು. ಇದೀಗಷ್ಟೇ ಭಾರತ ಸರಕಾರದ ಆಯುಷ್ ಮಂತ್ತಾಲಯದಿಂದ ಯೋಗ ಸ್ನಾತಕೋತ್ತರ ಕೋರ್ಸನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಆಸಕ್ತರಿಗೆ ಆನ್ ಲೈನ್ ಪಾಠ ಮಾಡುತ್ತಿದ್ದಾರೆ.

ಯೋಗದೆಡೆಯ ನನ್ನ ಪಯಣ

೨೦೧೯ ಪ್ರಾರಂಭ ದಲ್ಲಿ ನನ್ನ ಆತ್ಮೀಯ ಗೆಳತ ಆಶಾ ಹೇಳಿದಳು , ‘ಯಾವಾಗಲೂ ಬೆನ್ನು ನೋವು, ಆರೋಗ್ಯದಲ್ಲಿ ಏರು ಪೇರು ಅಂತೀಯಾ   ಯಾಕೆ ನೀನು  ಯೋಗ ಪಯತ್ನಿಸ ಬಾರದು?’ ಅಂತ ಹೇಳಿದಳು. ನಂದು ಅವಳದು ೧೭ ವರ್ಷದ ಸ್ನೇಹ. ಆದರೆ ಕಳೆದ ೬ ವರ್ಷದಿಂದ ಭಾರತದಲ್ಲಿ ನೆಲೆಸಿ ಈಗ ಫುಲ್ ಟೈಮ್ ಯೋಗ ಶಿಕ್ಷಕಿ ಅವಳು. ಆದರೆ ನನಗೆ ಆಸನ ಅಂದರೆ   ಆತಂಕ ಏಕೆಂದರೆ ಸೋಶಿಯಲ್ ಮೀಡಿಯಾ ಮೂಲಕ ಯೋಗಿಗಳ ಪರ್ಫೆಕ್ಟ್ ಪೋಸುಗಳನ್ನು ನೋಡಿದಾಗ ಮುಖ್ಯವಾಗಿ ಕಾಣೋದು  ತೆಳ್ಳಗಿರುವ, ಸೂಪರ್ ಫ್ಲೆಕ್ಸಿಬಲ್ ಮತ್ತು ಯಂಗ್ ಆಗಿ ಕಾಣುವ ದೇಹಗಳು.  ಹೀಗಾಗಿ ನನಗೆ ಆಸನ ಅಂದರೆ ಭಯ, ಸರ್ವಾಂಗಾಸನ, ಧನುರಾಸನ,ಶಿರ್ಷಾಸನ,ನಟರಾಜಾಸನ  ಮುಂತಾದವುಗಳನ್ನ ನೋಡಿದರೆ ‘ಇಟ್ ಇಸ್ ನಾಟ್ ಮೈ ಕಪ್ ಆಫ್ ಟೀ’ ಅಂತ ಅನಿಸುತಿತ್ತು. ಇದು ನನ್ನ ಕಲ್ಪನೆ ಆಗಿತ್ತು . ಆದರೆ ಪ್ರಾಣಾಯಾಮದಲ್ಲಿ ನನಗೆ ಒಲವು ಇತ್ತು. ಆಶಾ ಕೇಳಿದಾಗ ಒಮ್ಮೆ ಈಗ ಆಗ ಅಂತ ಏನೋ ನೆಪ ಹೇಳಿ ಮುಂದೆ ಹಾಕ್ತಾನೆ ಇದ್ದೆ. ಆದರೆ ಅವಳು ಛಲ ಬಿಡದೆ ‘ಸರಿ ವೀಕೆಂಡ್ ನಲ್ಲಿ ನಿಮ್ಮ ಟೈಮ್ಗೆ ಕ್ಲಾಸ್ ತೊಗೋತೀನಿ’ ಅಂತ ಹೇಳಿದಳು ಸರಿ ಅಂತ ನಾನು ಮತ್ತು ನನ್ನ ಇಬ್ಬರು ಸ್ನೇಹಿತರು ಮತ್ತು ನನ್ನ ಇಬ್ಬರು ಸ್ನೇಹಿತರು ಮತ್ತು ನನ್ನ ಸಹೋದರಿಯರಾದ ಗೌರಿಯಕ್ಕ ಮತ್ತು ಸಂಧ್ಯಾರ ಜೊತೆ ಸೇರಿ ಪ್ರಾಣಾಯಾಮ ಮತ್ತು ಕೆಲವು ಆಸನಗಳುನ್ನು ಕಲಿಯ ತೊಡಗಿದೆವು.ಆದರೆ ರೆಗ್ಯೂಲರಾಗಿ ಮಾಡ್ತಾ ಇರ್ಲಿಲ್ಲ. ಹೀಗಿರುವಾಗ  ಸೂರ್ಯನಮಸ್ಕಾರ ಹೇಳಿಕೊಡತೀನಿ ಅಂತ ಒಂದು ದಿವಸ ಹೇಳಿದಳು. ಸರಿ ಕಲಿತೆನೋ ಕಲಿತೆ. ಆದರೆ ಸರಿಯಾಗಿ ಮಾಡ್ತಾ ಇರಲಿಲ್ಲ . ಆಶಾ ಕ್ಲಾಸ್ನಲ್ಲಿ ಕೇಳಿದಾಗ ಅಯ್ಯೋ ಅದನ್ನು ಮಾಡಿದರೆ ನನಗೆ ಮೊಣಕಾಲು ನೋವು ಅಗತದೆ ಅಂತ ಜಾರಿಕೊಂಡು ಬಿಟ್ಟಿದ್ದೆ. ಆದರೂ ಅವಳ ಒತ್ತಾಯಕ್ಕೆ ಹೀಗೆ ೩ತಿಂಗಳು ಮಾಡ್ತಾ ಹೋದೆ. ಆಮೇಲೆ ನನಗೆ ಅರಿವಿಲ್ಲದೆ ಬದಲಾವಣೆ ಕಾಣತೊಡಗಿತು ನನ್ನಲ್ಲಿ. ೨೦೨೦ ಕರೋನದಿಂದ ಲೊಕ್ಡೌನ್ ಆಗಿ ಎಲ್ಲರೂ ಮನೇಲಿ ಇರುವ ಪ್ರಸಂಗ ಬಂತು. ನೋ ಆಕ್ಟಿವಿಟೀಸ್, ಯಾರನ್ನು ಭೇಟಿ 
ಆಗದ ಸಮಯ ಬೇಜಾರು, ಆತಂಕ ಆಂಕ್ಸಿಟಿ ಗಳಿಂದ ಕೂಡಿತ್ತು ಮನಸ್ಸು. blessing  in  disguise ಅಂತಾರಲ್ಲ 
ಹಾಗೆ  ಆ ಟೈಂಲ್ಲಿ ಯೋಗ ನಮಗೆ ಸಹಾಯ ಮಾಡಿತು. ವಾಟ್ಸ್ಯಾಪ್ಪ್ ಮೂಲಕ ನಾನು, ಗೌರಿಯಕ್ಕ ಮತ್ತು ಸಂಧ್ಯಾ ರೆಗ್ಯೂಲರಾಗಿ ಶುರು ಮಾಡಿದಿವಿ. ಸ್ವಾಮಿ ಕಾರ್ಯ ಹಾಗು ಸ್ವಕಾರ್ಯ ಹಾಗೆ ಒಬ್ಬರನ್ನು ಒಬ್ಬರು ಯೋಗ ಮಾಡುವ ಮೂಲಕ ನೋಡಿಯಾದರೂ ಖುಷಿ ಆಗತಿತ್ತು. 

ನನ್ನಲ್ಲಿ ಯೋಗದ ಬಗ್ಗೆ ಅಭಿರುಚಿ ಬೆಳೆಯಲು ಆರಂಭ ವಾಯಿತು.ಇದು ಬರಿ ಆಸನ ಅಲ್ಲ beyond ಇದೆ ಅಂತ ಅನಿಸೋಕ್ಕೆ ಶುರು ಆಯಿತು. ಇನ್ನೂ ಆಳವಾಗಿ ಕಲಿಬೇಕು ಅನ್ನೋ ಹಂಬಲ ಹೆಚ್ಚಾಯಿತು. ಅದೇ ಸಮಯಕ್ಕೆ ಸರಿ ಆಗಿ ಮತ್ತೆ ನನ್ನ ಗೆಳತಿ ಆಶಾ ಹೇಳಿದಳು ಪುಣೆಯಲ್ಲಿ ಪರಂ ಅಂತ ಯೋಗ ಇಸ್ಟಿಟ್ಯೂಟ್ ನೂರು ಆನ್ಲೈನ್ ಯೋಗ Ttc (ಟೀಚರ್ ಟ್ರೈನಿಂಗ್ ಕೋರ್ಸ್ ) ಶುರು ಮಾಡ್ಲಿಕತ್ತಾರ ಜಾಯಿನ್ ಆಗತಿಯೇನು ನೋಡು ಅಂತ. ನಾನಂದೆ ಈಗಿನ್ನ ಯೋಗಪ್ರಾಕ್ಟಿಸ್ನ ಆರಂಭ ಮಾಡೀನಿ ಹೆಂಗ್ ಅಂತ.ಸರಿ  ನಾ ವಿಚಾರಿಸಿ ತಿಳಿಸ್ತೀನಿ ಅಂದಳು . ವಿಚಾರಿಸಿದ್ಮೇಲೆ ಹೇಳಿದಳು ನೀ ಕೋರ್ಸ್ ಮಾಡಬಹುದು ಅಂತ ಅದ್ರ ನಾನು ಮೊದಲೇ ಹೇಳಿದ್ದೆನಲ್ಲ  ಆಸನ  ಕಷ್ಟ ಅಂದೆ. ಅದಕ್ಕೆ   ಅವಳು ಅಂದ್ಲು ‘ನೋಡು ಅವರದು ೪ modules  ಅವ ಅದರಾಗ್ ಫಿಲಾಸಫಿ ಅದ ನೀ ಬೇಕಾದ್ರ ಅದು  ಮಾಡು’ ಎಂದಳು . ನೀನು ಒಮ್ಮೆ ಅವರ  ಜೊತೆ ಮಾತಾಡು ಎಂದು ಫೋನ್ no ಕೊಟ್ಟಳು. ನಾನು ma'am ಗೆ ಫೋನ್ ಮಾಡಿದಾಗ ಒಂದು ಮಾತು ಹೇಳಿದರು ನೀನು ಬಹಳ ತಪ್ಪು ಕಲ್ಪನೆಯಲ್ಲಿ ಇದ್ದಿ , ,ನಿಮ್ಮನ್ನು ಇತರರಿಗೆ ಹೋಲಿಸಬೇಡಿ ನಿಮ್ಮಯೋಗಭ್ಯಾಸ ನಿಮ್ಮದು. ನಾವೆಲ್ಲಾ ಅನನ್ಯರು. ನಾವು ವಿಭಿನ್ನವಾಗಿ ಕಾಣುತ್ತೇವೆ. ನಮ್ಮಲ್ಲಿ ವಿಭಿನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳಿವೆ ಅಂತ ಹೇಳಿ ನೀ ಫುಲ್ ಕೋರ್ಸ್ ಮಾಡು ಅಂತ ಪ್ರೋತ್ಸಾಹಿಸಿದರು.ನನಗೆ ಅವರ ಮಾತೇ ಟರ್ನಿಂಗ್ ಪಾಯಿಂಟ್. ಯೋಗ ಕೋರ್ಸ್ ಪ್ರಾರಂಭದಿಂದಲೇ ಬದಲಾವಣೆ ಕಾಣಿಸಿತು ಏನಂದರೆ ಬೆಳ್ಳಗ್ಗೆ ೫ ಗಂಟೆಗೆ ಏಳೋದು.ಕೋರ್ಸ್ನಲ್ಲಿ ವೇದ,ಗೀತಾ,ಉಪನಿಷದ್, ಪತಂಜಲಿ ಸೂತ್ರ ಎಲ್ಲದರ ಬಗ್ಗೆ  ಪರಿಚಯ ಆಯಿತು. ಕೋರ್ಸ್ ಮಾಡ್ತಾ ಮಾಡ್ತಾ ನನ್ನಳೊಗಿನ ಆತಂಕ ,ದುಗಡ ಮರೆಯಾಯಿತು.

Yoga  is  union  of  mind ,body  and  spirit ಅಂತ ತಿಳೀತಾಹೋಯಿತು.ಯೋಗ ಬರಿ ಆಸನಕ್ಕೆ ಸೀಮಿತವಲ್ಲ ಎಂಬೊ ಸತ್ಯ ಅರಿವಾಯಿತು. ಯೋಗ ಇದು ಹೆಚ್ಚಿನ ಆಧ್ಯಾತ್ಮಿಕ ತಿಳುವಳಿಕೆಗೆ ಒಂದು ಮಾರ್ಗವಾಗಿದೆ. ಒಂದು ಸಮಯದಲ್ಲಿ,ಒಂದು ವಿಷಯದ ಮೇಲೆ ಕೇಂದ್ರೀಕರಿಸಲು ಯೋಗವು ನಮಗೆ ಸಹಾಯ ಮಾಡುತ್ತದೆ.  ಯೋಗಾಭ್ಯಾಸದ ನಂತರ ನಿಮ್ಮ ಮನಸ್ಸು ಶಾಂತವಾಗುವುದರಿಂದ ' ಈ ಕ್ಷಣ 'ದಲ್ಲಿ  ಹೆಚ್ಚು ಸಂಪೂರ್ಣವಾಗಿ ಇರಲು ಸಹಾಯ ಮಾಡುತ್ತದೆ . ಕಳೆದ ೨ ವರ್ಷದಲ್ಲಿ ನನ್ನಲ್ಲಿ ಅದ ಬದಲಾವಣೆ ತುಂಬಾ  ಅದರಲ್ಲೂ ಕೆಲವಮ್ಮೆ ಮೆಲಕು ಹಾಕಿದಾಗ ನನಗೆ ಆಶ್ಚರ್ಯಅಗತದ ಎಲ್ಲಿ ಒಂದು ಸೂರ್ಯನಮಸ್ಕಾರ ಹಾಕಲಿಕ್ಕೆ ಬೇಡಾ ಅಂದವಳು ಈಗ continuous ೨೧ ಸೂರ್ಯನಮಸ್ಕಾರ ಹಾಕುವ ಧೈರ್ಯ ನನ್ನಲ್ಲಿ ಬಂದಿದೆ.ದಿನಕ್ಕೆ ೨ಬರಿ ಕ್ಲಾಸ್ ಅಟೆಂಡ್ ಆಗಿ ಮತ್ತೆ ಕ್ಲಾಸ್ ಕೂಡ ತೊಗೋತೀನಿ . ರೆಸೆಂಟಾಗಿ ಮಿನಿಸ್ಟ್ರಿ ಒಫ್ ಆಯುಷ್ ನಿಂದ ಎರಡು ಸರ್ಟಿಫಿಕೇಷನ್ ಮಾಡಿದ್ದೇನೆ.ಯೋಗ ಪುಸ್ತಕಗಳನ್ನು ಓದುತ್ತಿದ್ದೇನೆ. ಹಠಯೋಗಪ್ರದೀಪಿಕಾ,ಘೆರoಡ್ ಸಂಹಿತಾ, ಪತಂಜಲಿ ಯೋಗಸೂತ್ರ ಹೀಗೆ ಹಲವಾರು ಬುಕ್ಗಳನ್ನ ಓದುವ ತವಕ ಹೆಚ್ಚಾಗಿದೆ.

'Yoga is a journey not a destination '. ನಿಮಗೆ ಯೋಗದ  ಬಗ್ಗೆ ಕುತೂಹಲವಿದ್ದರೆ ,ಮುಕ್ತ ಮನಸ್ಸಿನಿಂದ 
ಹೋಗಿ ಮತ್ತು ಅದನ್ನು ಪ್ರಯತ್ನಿಸುವ ಆರಂಭಿಕ ಹಂತವನ್ನು ತೆಗೆದುಕೊಳ್ಳಿ.  "ಯೋಗ:  ಕರ್ಮಸು ಕೌಶಲಂ".ಗೀತಾ ಚಾಪ್ಟರ್ ೨/೫೦.and  you  won't  regret it .ನನ್ನನು ಈ ಜರ್ನಿಗೆ ಕರೆತಂದ ಆಶಾ ಹಾಗು ಪರಂ ಇನ್ಸ್ಟಿಟ್ಯೂಟ್ ಗೆ ಚಿರಋಣಿ .ಲಾಸ್ಟ ಬಟ್ ನಾಟ್ ಲೀಸ್ಟ್ ಈ ಅನುಭವನ್ನು ಬರೆಯಲು ಪ್ರೋತ್ಸಾಹಿಸಿದ ಗೌರೀಅಕ್ಕಗೆ ನನ್ನ ತುಂಬು ಹೃದಯದ ಧನ್ಯವಾದಗಳು

~ಸಂಧ್ಯಾ ಪುರೋಹಿತ್                
ಸಂಪದಾ ಪುರೋಹಿತ ಇವಳು ಇಯರ್ 9 ರ ವಿದ್ಯಾಥಿ೯ನಿ. ಇವಳು ಬರ್ನಾಹಾಮ್ ನಿವಾಸಿ. ಕನ್ನಡ ಭಾವಗೀತೆ, ಚಿತ್ರಗೀತೆ ಹಾಗೂ ದೇವರ ನಾಮಗಳನ್ನು ಸುಶ್ರಾವ್ಯವಾಗಿ ಹಾಡುವ ಇವಳು ಕಳೆದ ಐದು ವರುಷಗಳಿಂದ  ಯು.ಕೆ.ಯ ಜಯಿತಾ ಘೋಷ್ ಅವರ ಬಳಿ ಹಿಂದೂಸ್ತಾನೀ  ಗಾಯನವನ್ನು ಕಲಿಯುತ್ತಿದ್ದಾಳೆ.

ರಾಮ್ ಭಜನ್

ಸೆಲ್ಫಿ 

ಸೆಲ್ಫಿ ತೆಗೆಯುವ ಹುಚ್ಚು ಹಿಡಿದಿತು ನನಗೆ ಒಂದು ದಿನ 
ಸ್ಮಾರ್ಟ್ ಫೋನಿನ ಮಹಿಮೆಯಿದು ನನಗೊಬ್ಬನಿಗೆನ?
ಚೆಂದದ ಪೋಸು ಕೊಡಲು ಬಾರದೆನಗೆ 
ಚೆಂದದ ನಗೆಯನ್ನು ನನ್ನ ಮುಖವೇಕೊ ಕೊಡದು!
ಕೆನ್ನೆಗಳು ಅಗಲಗೊಳ್ಳವು, ತುಟಿ ತೆರೆದು ಹಲ್ಲುಗಳೇಕೊ
ಹೊರಗೆ ಬಾರವು, ಕಣ್ಣುಗಳು ಹೊಳಪನ್ನು ಬೀರವು 
ನನಗೆ ಹೊಳೆದದ್ದು ಆಗ ಈ ಸೆಲ್ಫಿಗೂ ನನಗೂ ದೂರ
ಮನೆಯೊಳಗೆ ಒಬ್ಬನೆ, ಮನಸಿನೊಳಗೆ ಒಬ್ಬನೆ 
ಯೋಚಿಸುತ್ತಿದ್ದೆ, ಅಂತರಾಳದ ಸ್ಮಾರ್ಟ್ ಫೋನದು  
ತನ್ ತಾನೇ ತಗೆಯತೊಡಗಿತ್ತು ಭಾವದ ಸೆಲ್ಫಿಗಳ
ಕೆಲವು ಸುಂದರ, ಕೆಲವು ವಿಕಾರ, ಕೆಲವು ಬಾಲಿಷ 
ಕೆಲವು ರೋಚಕ, ಕೆಲವು ಮಾರ್ಮಿಕ, ಕೆಲವು ಉಚ್ಛ
ಕೆಲವು ನೀಚ, ಕೆಲವು ಪ್ರಾಮಾಣಿಕ, ಕೆಲವು ಭಂಡತನ
ಕೆಲವು ಹಗುರ, ಕೆಲವು ಭಾರ, ಕೆಲವು ಸ್ಪಷ್ಟ, ಹಲವು ಅಸ್ಪಷ್ಟ, ಕೆಲವು ಉತ್ಕೃಷ್ಟ, ಕೆಲವು ನಿಕೃಷ್ಟ, ಕೆಲವು ಸತ್ಯ, ಹಲವು ಮಿಥ್ಯ, ಕೆಲವು ರಾಗ, ಕೆಲವು ದ್ವೇಷ, ಕೆಲವು ನೋವು, ಕೆಲವು ನಲಿವು, ಕೆಲವು ಸಾರ್ಥಕ
ಹೀಗೆ ಒಳಗಿನ ವಿಭಿನ್ನ ಪೋಸುಗಳ ಸೆಲ್ಫಿಗಳು ದಿನವೂ ಅದೆಷ್ಟು ತೆಗೆದುಕೊಳ್ಳುತ್ತಿರುತ್ತೇವೊ ನಾವು? 
ನೆನಪಿನ ಗೋಡೆಗೆ ಅಂಟಿಸಿ ಒಂದೊಂದನೂ ಸೂಕ್ಷ್ಮವಾಗಿ 
ಗಮನಿಸಬೇಕು, ಅವುಗಳಲ್ಲಿ ಯಾವುದು ನಮ್ಮನ್ನು ಬಿಂಬಿಸುವ ಸರಿ
ಯಾದ ಸೆಲ್ಫಿ ಎಂದು 
ಎಷ್ಟಾದರೂ ಅವು ನಮ್ಮದೇ ಭಿನ್ನ ಪೋಸುಗಳು 
ನಮಗೆ ನಾವು ಯಾವಾಗಲೂ ಚೆಂದ ಕಾಣುತ್ತೇವೆ  
ನಮ್ಮ ಸೆಲ್ಫಿಗಳನ್ನು ನಾವು ನಾವೇ ಮೆಚ್ಚಿಕೊಳ್ಳುತ್ತೇವೆ
ಆದರೆ ಪ್ರಶ್ನೆಗಳು ಉಳಿಯುತ್ತವೆ ಕೊನೆಗೆ ಇಷ್ಟು  ಸೆಲ್ಫಿಗಳಲ್ಲಿ
ಯಾವುದು  ಚೆಂದ? , ಯಾವುದು ಅತಿಚೆಂದ ?
ಯಾವುದನ್ನು ಬೇರೆಯವರಿಗೆ ಕಳಿಸಲಿ?
ಯಾವುದನ್ನು ಡಿಲೀಟ್ ಮಾಡಲಿ?
ಯಾವುದನ್ನು ಸ್ಟೇಟಸ್ಗೆ ಹಾಕಲಿ?

🖋ವಿಜಯನರಸಿಂಹ 
31/03/2022

ಗುರು: ಸಾಕ್ಷಾತ್ ಪರಬ್ರಹ್ಮ

‘ಹರ ಮುನಿದರೆ  ಗುರು ಕಾಯ್ವ..ಗುರು ಮುನಿದರೆ ಹರ ಕಾಯ್ವನೇ?’ ಎಂಬ ಮಾತಿದೆ. ಬದುಕ ಹಸನಾಗಿಸಲು, ಗುರಿಯೊಂದ ತೋರಲು, ಅರಿವೊಂದ ಮೂಡಿಸಲು, ತಪ್ಪುಗಳ ಒಪ್ಪ ಮಾಡಲು, ನಮ್ಮ ಗರಿಗಳಿಗೆ ವೈನತೇಯನ ಬಲ ತುಂಬಲು ಗುರುವೊಬ್ಬ ಬೇಕೇಬೇಕು. ವಿಶ್ವಾಮಿತ್ರ ಗುರುವಾಗಿ ದೊರೆಯದಿದ್ದರೆ ತಾಟಕೀ ಸಂಹಾರದಂಥ ದುಷ್ಟ ಶಿಕ್ಷಣೆಯ, ಅಹಲ್ಯೋದ್ಧಾರದಂಥ  ಶಿಷ್ಟರಕ್ಷಣೆಯ ಛಲ-ಬಲಗಳು ಬಾಲಕ ರಾಮನಿಗೆ ಸಿದ್ಧಿಸುವುದು ಸಾಧ್ಯವಿತ್ತೇ?  ನಮ್ಮೊಳಗನ್ನು ಬೆಳಗುವ ಗುರು ಪರಬ್ರಹ್ಮನಲ್ಲದೇ ಮತ್ತೇನು? ಗುರು ಸ್ಮರಣೆಗೆ ಸಮಯಾಸಮಯಗಳಿಲ್ಲ. ಅದಕ್ಕೆಂದೇ  ‘ಗುರು ಕರುಣೆಯೆಂಬ ತರಣಿ ಉದಯವಾಗಿ ಪರಿಹಾರವಾಯಿತು ಅಜ್ಞಾನವೆಂಬ ಕತ್ತಲೆಯಿಂದು’ ಎಂತಲೂ, ‘ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂತಲೂ   ದಾಸರು ಹಾಡಿದ್ದು.

ತಮ್ಮ ಸಂಗೀತ ಗುರುಗಳನ್ನು ಮನತುಂಬಿ ನೆನೆದು, ಅಕ್ಷರದ ಅಕ್ಷಯ ಕಾಣಿಕೆ ಸಲ್ಲಿಸಿದ್ದಾರೆ ಪೂಜಾ ತಾಯೂರ್ ಅವರು. 
‘ಚೈತ್ರ ಶುದ್ಧ ಹಗಲು ನವಮಿ ರಾಮ ಜನಿಸಿದ
ಬಿದ್ದ ಶಿಲೆಯ ಪಾದದಿಂದುದ್ಧಾರ ಮಾಡಿದ
ಜನಕರಾಯನಲ್ಲಿ ಚಾಪು ತುಣುಕು ಮಾಡಿದ 
ಗುಣಕ ಶೀಲ ಸೀತಾದೇವಿ ಮನಕ ಮೆಚ್ಚಿದ

ಹೀಗೆ ಅಚ್ಚಗನ್ನಡದಲ್ಲಿ ನಾಲ್ಕಾರು ನುಡಿಗಳಲ್ಲಿ ಇಡಿಯ ವಾಲ್ಮೀಕಿ ರಾಮಾಯಣ ನನ್ನಜ್ಜಿ, ನನ್ನವ್ವರ ಬಾಯಲ್ಲಿ ನಲಿದಾಡುತ್ತಿತ್ತು. ಬೆಳಗಾದರೆ ಮತ್ತೆ ಬರಲಿದೆ ಅದೇ ಚೈತ್ತ ಶುದ್ಧ ಹಗಲುನವಮಿ-ಶ್ರೀರಾಮನವಮಿ.  ರಾಮ ಮಹಿಮೆಯ, ಕೇಳಿದಷ್ಟು ಸಲವೂ ಹೊಸ ಹೊಸ ಅರ್ಥ ಹೊಳೆಯಿಸುತ್ತಲೇ ಇರುವ ‘ಅಲ್ಲಿ ನೋಡಲು ರಾಮ’ ಎನ್ನುವ ಪುರಂದರ ದಾಸರ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಪ್ರಸ್ತುತ ಪಡಿಸಿದ್ದಾರೆ ಪೂಜಾ ಅವರು.
ಮೈ ನವಿರೇಳಿಸುವ ಸಹಜ-ಸುಂದರ ಶೈಲಿಯ ಜೊತೆಗೆ ನಮ್ಮನ್ನೂ ಹಿಮಾಲಯದ ಬರ್ಫ್ ನಲ್ಲಿ ಸುತ್ತಾಡಿಸುತ್ತಿದ್ದಾರೆ..ಶೇಷನಾಗನ ಅದ್ಭುತ ದರ್ಶನ ಮಾಡಿಸುತ್ತಿದ್ದಾರೆ ಅಮ್ಮ ಪದ್ಮಾವತಮ್ಮನವರು. ಬನ್ನಿ, ಹಿಮಾಲಯದಲ್ಲೊಂದು ಸುತ್ತು ಹೊಡೆದು ‘ಅಮರನಾಥ್ ಬಾಬಾ ಕೀ ಜೈ’ ಎಂದು ಬರೋಣವೇ? 

~ ಸಂಪಾದಕಿ
ಪೂಜಾ ತಾಯೂರ್ ಅವರು ಮೂಲತ: ಬೆಂಗಳೂರಿನವರಾಗಿದ್ದು ಕರ್ನಾಟಕೀ ಸಂಗೀತದಲ್ಲಿ ಸುಮಾರು 20 ವರುಷಗಳಿಂದ ತೊಡಗಿಕೊಂಡಿದ್ದು ಹಲವಾರು ಆಲ್ಬಂ ಗಳಲ್ಲಿ  ತಮ್ಮ ಕಂಠಸಿರಿಯನ್ನು ಮೆರೆದಿದ್ದಾರೆ. ನೀಡಿದ್ದಾರೆ. ಶ್ರೀ ವಿದ್ಯಾಭೂಷಣರು, ಉಪಾಸನಾ ಮೋಹನ್, ವಿದುಷಿ ಜ್ಯೋತಿ ಮಾ, ವಿದುಷಿ ತಿರುಮಲೆ ಶಾರದೆ ಇತ್ಯಾದಿ ಮಹಾನ್ ಸಂಗೀತಗಾರರ ಶಿಷ್ಯೆಯಾದ ಯೋಗ ಇವರದು. ಇವರಿಗೆ ದೇವರನಾಮ, ದಾಸಸಾಹಿತ್ಯದಲ್ಲಿ ವಿಶೇಷ ಅಭಿರುಚಿಯಿದ್ದು ನಮ್ಮೊಳಗನ್ನು ಕಾಣಲು ಅದರಿಂದ ಸಾಧ್ಯ ಎಂಬ ನಂಬಿಕೆ ಅವರದು.

ತಸ್ಮೈಶ್ರೀಗುರವೇನಮ:

ನಮ್ಮದು ಕೇವಲ ಆರೆಂಟು ತಿಂಗಳ ಒಡನಾಟವಾದರೂಶಾರದಾ ಮೇಡಂ ನನ್ನ ಕಲಿಕೆಯ ಜೀವನ ಮತ್ತು ವೈಯಕ್ತಿಕ ಜೀವನಎರಡರಲ್ಲೂ ತುಂಬಾಪ್ರಭಾವ ಬೀರಿದ ವ್ಯಕ್ತಿ.  ನನಗೆ ಇವರ ಪರಿಚಯವಾದದ್ದು ನನ್ನ ಅತ್ತೆಅಂದರೆ ಗಂಡನ ತಾಯಿಯಿಂದಶಾರದಾ ಮೇಡಂಅವರಿಗೂ ಗುರುಗಳು.

ಮದುವೆಯಾಗಿ ಗಂಡನ ಮನೆಗೆ ಬಂದ ಕೆಲ ತಿಂಗಳ ಬಳಿಕನನ್ನ ಅತ್ತೆ – ನೀನು ಸಂಗೀತ ಮುಂದುವರಿಸಲೇಬೇಕುನಿನಗೆ ನಮ್ಮ ಶಾರದಾ ಮೇಡಂಗು ಒಳ್ಳೆಯ ಗುರು ಎಲ್ಲೂ ಸಿಗುವುದಿಲ್ಲ ಎಂದು ಹೇಳಿ ಒಂದು ದಿನ ಅವರ ಮನೆಗೆ ಕರೆದುಕೊಂಡು ಹೋದರುಓದುಕೆಲಸದ ಮಧ್ಯೆ senior exam ಮುಗಿಸಿ ಅಲ್ಲಿಗೆ ನಿಲ್ಲಿಸಿದ್ದ ನನಗೆ ಏನೋ ದಿಗಿಲುದಾಸವಾಣಿ ಕಾರ್ಯಕ್ರಮಗಳೇನೋ ಕೊಡುತ್ತಿದ್ದೆಸಾಧನೆ ಮಾಡಿರುವವರಿಗೆಹೋಲಿಸಿದರೆಶಾಸ್ತ್ರೀಯ ಸಂಗೀತದಲ್ಲಿ ನಾನು zero ಎಂದರೂ ತಪ್ಪೇನಿಲ್ಲಇವರು ನೋಡಿದರೇ ಮಹಾನ್ ಕಲಾವಿದೆವೀಣೆಹಾಡುಗಾರಿಕೆಎರಡರಲ್ಲೂ ಅತ್ತ್ಯುನ್ನತ ಸಾಧನೆ ಮಾಡಿರುವವರುನನಗೆ ಏನಾದರೂ ಹಾಡು ಎಂದುಅಥವಾ ಪಠ್ಯಕ್ರಮದಿಂದ ಏನಾದರೂ ಕೇಳಿದರೆ ಏನಪ್ಪಾ ಗತಿಇವರು ನನಗೆ ಪಾಠ ಹೇಳಿಕೊಡಲು ಒಪ್ಪುತ್ತಾರಾಹೀಗೆ ಹಲವಾರು ಯೋಚನೆಗಳ ಮಧ್ಯೆಯೇ ನನ್ನ ಅತ್ತೆ ಹಾಗೂ ಗಂಡನ ಜೊತೆ ಮೇಡಂ ಮನೆಗೆಕಾಲಿಟ್ಟೆಮುಂಚೆಯೇ ಕರೆ ಮಾಡಿ 7.30 ಗಂಟೆಗೆ ಬರುತ್ತೇವೆ ಎಂದು ಹೇಳಿ ಹೋಗಿದ್ದೆವುಬಾಗಿಲು ತೆಗೆದರುನಗು ತುಂಬಿದ ಅವರ ಮುಖ ನೋಡಿನನಗೆ ಏನೋ ಆನಂದವಾಯಿತುಓಹ್ಮೇಡಂ strict ಅಲ್ಲ ಅನಿಸುತ್ತೆ  ಎಂದು ಮನಸ್ಸಿನಲ್ಲೇ ಅಂದುಕೊಂಡೆಮಾತಿನ ಮಧ್ಯೆನಾವು  ಹೊತ್ತಿಗೆಬಂದದ್ದು ನಿಮಗೆ ತೊಂದರೆ ಆಯ್ತೋ ಏನೋ ಅಂತ ಹೇಳಿದೆವುಮೇಡಂ ಅದಕ್ಕೆ “ತೊಂದರೆ ಕೊಟ್ಟಾಯಿತಲ್ಲಬಿಡಿ” ಎಂದು ನಕ್ಕಿದರುಸಾಮಾನ್ಯವಾಗಿ ನಾವು ಇದಕ್ಕೆ “ಅಯ್ಯೋ ಇಲ್ಲ ಬಿಡಿ” ಎಂದು ಹೇಳಿಎಲ್ಲೋ ಮನಸ್ಸಿನೆಲ್ಲೆಡೆ “ಹೌದು” ಎಂದುಕೊಳ್ಳುತ್ತೇವೆಆದರೆ ಮೇಡಂ ಇದ್ದಿದ್ದನ್ನುಇದ್ದ ಹಾಗೆ ಹೇಳಿ ತಮ್ಮ straight forwardness ತೋರಿಸಿಕೊಂಡರುನನಗೆ ಇದೂ ತುಂಬಾ ಇಷ್ಟವಾಯಿತುಪಾಠ ಹೇಳಿಕೊಡುವಾಗಲೂ ಅಷ್ಟೇಬಹಳ ಸೂಕ್ಷ್ಮವಾಗಿ ಗಮನಿಸಿತಪ್ಪುಗಳನ್ನು straight forward ಆಗಿ ಹೇಳಿ ತಿದ್ದುತ್ತಾರೆ. “ಎಲ್ಲಿಒಂದು ಹಾಡಮ್ಮ” ಎಂದರುಮೊದಲೇ ದಿಗಿಲಿದ್ದನನಗೆ ಅಂದುಕೊಂಡ ಕ್ಷಣ ಬಂದೆ ಬಿಡ್ತಲ್ಲಪ್ಪಾಎಂಬ ಯೋಚನೆಒಂದು ದೇವರನಾಮ ಹಾಡಿದೆತಮ್ಮ ಶಿಷ್ಯೆ ಯಾಗಿ ನನ್ನನ್ನು ತೊಗೊಳ್ತರೋಇಲ್ವೋ ಅಂತ ಯೋಚನೆ ಮಾಡಿ ಮುಗಿಸುವಷ್ಟರಲ್ಲಿ “ಆಯ್ತಮ್ಮನಾನು ಹೇಳ್ಕೊಡ್ತೀನಿಆದರೆ ಚೆನ್ನಾಗಿ ಅಭ್ಯಾಸ ಮಾಡ್ಬೇಕು” ಅಂತ ಹೇಳಿದರುನನಗೆ ಕುಣಿದಾಡುವಷ್ಟು ಖುಷಿಪಾಠ ಶುರುವಾಯಿತುಕಲಿಯಲು ಆರಂಭಿಸಿದೆಸಂಗೀತ ಪಾಠದ ಜೊತೆ ಜೀವನದ ಎಷ್ಟೋ ಪಾಠಗಳನ್ನು ಮೇಡಂ ನನಗೆ ಹೇಳಿಕೊಟ್ಟರುನಾನುಕಾರ್ಯ ನಿರ್ವಹಿಸುತ್ತಿದ್ದ ಖಾಸಗಿ company ಅಲ್ಲಿ ತೊಂದರೆ ಅನುಭವಿಸುತ್ತಿದ್ದ ನನಗೆ ಬಹಳಷ್ಟು ನೈತಿಕ ಬೆಂಬಲ ನೀಡಿದವರು ಶಾರದಾ ಮೇಡಂನಿನಗೆ ಹತ್ತಿರವಿರುವ ಒಳ್ಳೆಯಆರಾಮಾದ ಕೆಲಸ ಸಿಕ್ಕೇ ಸಿಗತ್ತೆ ಅಂತ ಹೇಳಿದ್ರುಅದು ನಿಜವಾಗಿದೆಇಂದುಅವರು ಏನೇ ಹೇಳಿದರೂ ಒಳ್ಳೆಯಮನಸ್ಸಿನಿಂದ ಹೇಳ್ತಾರೆ.ಅದು ಆಗೇ ಆಗತ್ತೆ ಅನ್ನೋದು ನನ್ನ ನಂಬಿಕೆನನಗೆ ಹೇಗೆ ಕಲಿಯಬೇಕುಹಾಗೆಯೇ ಮತ್ತೊಬ್ಬರಿಗೆ ಹೇಗೆ ಹೇಳಿಕೊಡಬೇಕು ಎಂದು ಹಂತ ಹಂತವಾಗಿ ಹೇಳಿಕೊಟ್ಟರುಮೇಡಂ ಇಂದ ಹಲವಾರುವಿಷಯಗಳನ್ನು ತಿಳಿದುಕೊಂಡೆಕೇವಲ ಹಾಡಿದರೆ ಸಾಲದುತಕ್ಕ ಮಟ್ಟಿಗೆ theory ಕೂಡ ತಿಳಿದಿರಬೇಕು ಎಂದು ಅವರ ಭಾವನೆಇಂತಹ ಒಳ್ಳೆಯಮಾರ್ಗದರ್ಶನ ಕೊಡುವ ಗುರು ಈಗಿನ ದಿನಗಳಲ್ಲಿ ಸಿಗುವುದು ಅಸಾಧ್ಯದ ಹತ್ತಿರವೇಕೇಳಿ ಅಚ್ಚರಿ ಆಗಬಹುದು.. ಮೇಡಂ ತಾವು ಮಾಡುವಪಾಠಕ್ಕೆ fees ತೆಗೆದುಕೊಳ್ಳುವುದಿಲ್ಲವಿದ್ಯೆ ಕಲಿಯಿರಿಅಷ್ಟೇ ಸಾಕು ಅನ್ನುತ್ತಾರೆಅವರು ಒಂದು knowledge bank. ಏನು ಕೇಳಿದರೂಪುಸ್ತಕತೆಗೆದು ಹಾಡುವ ನನಗೆಇವರು  ವಯಸ್ಸಿನಲ್ಲೂ ಏನು ಕೇಳಿದರೂ ಫಟ್ ಅಂತ ಹಾಡಲು ಶುರು ಮಾಡ್ತಾರಲ್ಲಪ್ಪ!! ಎಂದು ಅಚ್ಚರಿ ಆಗಿರುವಸನ್ನಿವೇಶಗಳು ಬಹಳ ಇವೆಅವರ ನೆನಪಿನ ಶಕ್ತಿಗೆ ಒಂದು ದೊಡ್ಡ ನಮಸ್ಕಾರಹಾಗೆಯೇಅವರಲ್ಲಿರುವ ಜ್ಞಾನ ಎಲ್ಲರಿಗೂ ಹರಡಬೇಕು ಎಂಬಮನೋಭಾವನೆ ಇರುವ ಕೆಲವು ವ್ಯಕ್ತಿಗಳಲ್ಲಿ ಮೇಡಂ ಒಬ್ಬರು.ಒಮ್ಮೆ ಶಿವಮೊಗ್ಗದಲ್ಲಿ ಒಂದು ಸ್ಪರ್ಧೆ ಉಂಟು ಎಂದು ನನಗೆ ಸಿದ್ಧತೆಯನ್ನು ಸ್ವಯಂ ಅವರೇ ಮಾಡಿಸಿದ್ದರುಎಷ್ಟೋ ಹಾಡುಗಳಿಗೆ ರಾಗ ಹಾಕಿಸ್ವರದ ಸಮೇತ ಹೇಳಿಕೊಟ್ಟರುಒಂದು ಸ್ಪರ್ಧೆ ಉಂಟುನೀನು ತಯಾರಿ ಮಾಡಿಕೋ ಎಂದು ಹೇಳಿ ಸುಮ್ಮನಾಗಬಹುದಿತ್ತುತಾವೇ ಆಸಕ್ತಿ ತೋರಿಸಿನನಗೆ ಅಷ್ಟೂ ತಯಾರಿ ಮಾಡಿಸಿದರುನಾನು  ಸ್ಪರ್ಧೆಯಲ್ಲಿ ಗೆಲ್ಲಲಿಲ್ಲಆದರೆ ನನಗೆ ಅಲ್ಲಿ ಸಿಕ್ಕ ಬಹುಮಾನ ಏನೆಂದರೆ – ಮೇಡಂ ಗೆ ಗೊತ್ತಿರುವಸಂಸ್ಥೆಯೇ ಸ್ಪರ್ಧೆಯ ಆಯೋಜಕರುಅವರು ಮಾಡುತ್ತಿರುವ  ಒಳ್ಳೆಯ ಕೆಲಸ ನೋಡಿ ನನ್ನ ಜೊತೆ ತಮ್ಮ ಕಾಣಿಕೆಯಾಗಿ ಒಂದು cheque ಕಳಿಸಿದರುಅಲ್ಲಿನಾನು Prof. ಟಿಶಾರದಾ ಅವರ ಶಿಷ್ಯೆನಿಮಗಾಗಿ ಇದನ್ನು ಕಳಿಸಿದ್ದಾರೆ ಎಂದು ಹೇಳಿದ ಮರು ಕ್ಷಣ ನನಗೆ ಸಿಕ್ಕ ಮರ್ಯಾದೆವರ್ಣಿಸಲು ಸಾಧ್ಯವಿಲ್ಲ!! ಅನುಭವಿಸಿಯೇ ನೋಡಬೇಕುಬೇರೆ ಎಲ್ಲೆಡೆಯೂ ಅಷ್ಟೇಟಿಶಾರದಾ ಅವರ ಶಿಷ್ಯೆ ಎಂದರೆ ಮರ್ಯಾದೆಯೇ ಬೇರೆಅಷ್ಟು ದೊಡ್ಡ ಹೆಸರು ನಮ್ಮ ಮೇಡಂನದ್ದು.ಸಂಗೀತ ಕ್ಷೇತ್ರದಲ್ಲಿ ಅವರಿಗೆ ಗೊತ್ತಿಲ್ಲದ ವ್ಯಕ್ತಿ ಇಲ್ಲಎಲ್ಲರಿಗು ಅವರು ಯಾರು ಎಂದು ಗೊತ್ತುಅವರ ಒಂದು phone call ಸಾಕುನಮಗೆ ಏನುಬೇಕೋ ಅದು ಆಗುವುದಕ್ಕೆಆದರೆಮೇಡಂ ಎಂದೂ ಅದನ್ನು ಪ್ರೋತ್ಸಾಹಿಸಿಲ್ಲಗೆದ್ದರೆ ಒಳ್ಳೆಯದುಗೆಲ್ಲದಿದ್ದರೆ ಅದು ಒಂದು ಅನುಭವಪಾಠಎಂದು ನನಗೆ ಹೇಳಿಕೊಟ್ಟರುಅಯ್ಯೋನನಗೂ ಯಾರಾದರೂ ಗೊತ್ತಿದ್ದರೆ ನಾನು ಇಲ್ಲಿ pass / ಗೆಲ್ಲುತ್ತಿದ್ದೆ ಎಂಬ ಮನೋಭಾವನೆ ಇದ್ದ ನನಗೆಭಾಗವಹಿಸಿದ್ದು ಮುಖ್ಯಗೆಲ್ಲುವುದು ಬಿಡಿವುದು ಮುಖ್ಯವಲ್ಲ ಎಂದು ಮೇಡಂ ತೋರಿಸಿಕೊಟ್ಟರುಸಂಗೀತ ಒಂದು ಸುಂದರ ಅನುಭವವ್ಯಾಪಾರವಲ್ಲ ಎಂದು ಮೇಡಂನಿಂದ ಕಲಿತೆ.ಜೊತೆಯಲ್ಲಿಮೇಡಂ ಹಾಗೆ ನನ್ನ ಗೆಳೆತನ ಶುರುವಾಗಿತ್ತುಮೇಡಂ ತುಂಬಾ friendly. ಸದಾ ಹಸನ್ಮುಖಿನೋಡಲು ಬಹಳ ಸುಂದರವಾಗಿದ್ದರೆವಿದ್ಯಾರ್ಥಿಗಳು ಯಾವಾಗ ಬೇಕಾದರೂ ಅವರ ಮನೆ ಬಾಗಿಲು ತಟ್ಟಬಹುದುಸದಾ ಸಿದ್ಧ ನಮ್ಮ ಮೇಡಂಆದರೆನರೇಂದ್ರ ಮೋದಿ ಇದ್ದರೆನಮಗೆಬೇರೆ ಸಮಯ ನಿರ್ಧರಿಸುತ್ತಾರೆಏನಪ್ಪಾ ಇದು ಅಂದುಕೊಂಡರ?? ಮೇಡಂ ನರೇಂದ್ರ ಮೋದಿ ಅವರ fan. ಅವರ man ki baat ತಪ್ಪದೆಕೇಳಿಸಿಕೊಳ್ಳುತ್ತಾರೆ.ನನಗೆ ದಿನೇ ದಿನೇ ಅವರ ಮೇಲಿದ್ದ ಭಯ ಹೋಗಿ ಆತ್ಮೀಯತೆ ಹೆಚ್ಚುತ್ತಾ ಹೋಯಿತುಅಷ್ಟು ಸಾಧನೆ ಮಾಡಿದರೂಮೇಡಂ ಬಹಳ down to earth. ನನ್ನ ಎಷ್ಟೋ ವೈಯಕ್ತಿಕ ವಿಷಯಗಳನ್ನು ಅವರ ಬಳಿ ಚರ್ಚಿಸುತ್ತೇನೆಅವರ advice ಇಂದ ಮನಸ್ಸಿಗೆ ಎಷ್ಟೋ ನೆಮ್ಮದಿಹೆಣ್ಣು ಮಕ್ಕಳುindependent ಆಗಿ ಇರಬೇಕುಕೆಲಸ ಮಾಡಬೇಕಮ್ಮ ಅನ್ನುತ್ತಾರೆಅವರು ಏನು ಹೇಳುತ್ತಾರೋ ಅದು ಆಗೇ ಆಗುತ್ತದೆಯಾವಾಗಲೂಒಳ್ಳೆಯದನ್ನೇ ಬಯಸುವ ಇಂತಹ ವ್ಯಕ್ತಿಲಕ್ಷಕ್ಕೆ ಒಬ್ಬರುಅಂತಹ ಲಕ್ಷಕ್ಕೆ ಒಬ್ಬರು ನನಗೆ ಪರಿಚಯವಾಗಿರುವುದು ನನ್ನ ಭಾಗ್ಯವಲ್ಲದೆ ಮತ್ತೇನು?

~ ಪೂಜಾ ತಾಯೂರ್

ನನ್ನಮ್ಮನ ಪ್ರವಾಸ ಕಥನ – ಶ್ರೀ ಅಮರನಾಥ್ ಯಾತ್ರೆ

(ಮುಂದುವರಿಕೆ)

ಚಂದನವಾಡಿಯಲ್ಲಿ ಅಂಗಡಿಗಳು, ಹೋಟೆಲ್ಗಳು ಎಲ್ಲವೂ ಇವೆ. ಅರ್ಧಗಂಟೆಯ ನಮ್ಮ ವಿಶ್ರಾಂತಿ ಮತ್ತು ಕುದುರೆಗಳಿಗೆ ಆಹಾರ ಕೊಟ್ಟು ಅವು ಸುಧಾರಿಸಿಕೊಂಡ ನಂತರ ಮತ್ತೆ ಹೊರಟೆವು. ಮುಂದಿನ ದಾರಿ ಪಿಸುಘಾಟ್. ಇದು ಕಠಿಣವಾದ ದಾರಿ. ಜೈ ಅಮರನಾಥ್ ಎಂಬ ಶಬ್ದವೇ ನಮಗೆ ಧೈರ್ಯವನ್ನು ನೀಡುತ್ತಿತ್ತು. ಕಿರಿದಾದ ಕೊರಕುಲುಗಳಲ್ಲಿ, ಇಳಿಜಾರುಗಳಲ್ಲಿ ಬರುವಾಗ ಜೀವದ ಹಂಗು ತೊರೆದಿದ್ದೆವು. ಆಗ ನಡೆದುಕೊಂಡು ಬರುವವರಿಗೆ ಆಯಾಸವೇ ಹೊರತು ಅಪಾಯವಿಲ್ಲವೆನಿಸಿತು. ಪಿಸುಘಾಟ್ ದಾಟಿ ಒಂದೆಡೆ ನಿಂತೆವು. ಅಲ್ಲಿ ಮೊದಲೇ ನಡೆದು ಬಂದವರು ನಮ್ಮವರು ಮೂವರು ಸಿಕ್ಕರು. ಏಕಾದಶಿ ಎಂದು ಒಂದಿಬ್ಬರು ತಿನ್ನಲು ಏನೂ ಬೇಡವೆಂದರು. ನಾನು ರಾಗಿ ಹುರಿಟ್ಟು ಕಲೆಸಿ ತಿಂದೆನು. ಅಲ್ಲಿಂದ ಮುಂದೆ ಒಂದು ನದಿಯನ್ನು ದಾಟಿ ಗುಡ್ಡವನ್ನು ಹತ್ತಿ, ಇಳಿದು ನಡೆದು ದಾಟಿದೆವು. ಮತ್ತೆ ಕುದುರೆ ಹತ್ತಿ ಪಯಣ. ಅಷ್ಟುಹೊತ್ತಿಗೆ ನಾವು ಹಿಮಾಲಯದ ಗರ್ಭದೊಳಗಿದ್ದೆವು. ಎಲ್ಲೆಲ್ಲೂ ಹಿಮ ತುಂಬಿದ ಶಿಖರಗಳು. ಮುಂದೆ ಮಹಾಪಶುಪತ್ತೇರಿ ಘಾಟ್ ಗೆ ಬಂದೆವು. ಇಲ್ಲಿ ಕೂಡ ಹೋಟೆಲ್, ಮೈಕೈ ಕಾಯಿಸಲು ಕೆಂಡ ಎಲ್ಲವೂ ಸಿಗುತ್ತಿತ್ತು. ನಾವು ಇಳಿಯಲಿಲ್ಲ. ಸಾಗಿದ ನಮ್ಮ ಪಯಣದಲ್ಲಿ ಮಹಾಗುಣಾಸುಘಾಟ್ ಅತಿ ಎತ್ತರವಾದುದು- ಹದಿನಾಲ್ಕೂವರೆ ಸಾವಿರ ಅಡಿಗಳ ಎತ್ತರ. ಎಲ್ಲೆಲ್ಲೂ ಹಿಮ. ಮುಂದೆ ಪಯಣಿಸುತ್ತಾ ಸಂಜೆಯ ವೇಳೆಗೆ ಪ್ರಸಿದ್ಧ ಶೇಷನಾಗ್ ಸರೋವರದ ಬಳಿಗೆ ಬಂದೆವು. ಧನ್ಯೋಸ್ಮಿ. ಶೆರ್ಪನೂ ಕೂಡ ಜೈ ಶೇಷನಾಗ್ ಸರೋವರ್ ಕೀ ಜೈ ಎಂದು ಕೂಗಿ ಹೇಳಿದನು.

*****

೮ - ಹರ ಕೊಲ್ಲಲ್ ಪರ ಕಾಯ್ವನೇ?

ಶೇಷನಾಗ್ ಸರೋವರದ ದೃಶ್ಯ ಹಿಮಾಲಯದಲ್ಲೇ ಅತಿ ಮನೋಹರವಾದುದೆಂದು ಬಲ್ಲವರು ಹೇಳುವರು. ಮಹಾಶಿವನು ಗೌರಿ, ಗಣೇಶರನ್ನು ಪಹಲ್ ಗಾವ್ ನಲ್ಲಿ ಬಿಟ್ಟು ಈ ಸ್ಥಳದಲ್ಲಿ ಶೇಷನನ್ನು ತೊರೆದು ಒಂಟಿಯಾಗಿ ತಪಃಗೈಯಲು ಗುಹೆಗೆ ಹೋದನೆಂದು ಪ್ರತೀತಿ. ಅಲ್ಲಿ ಬಿದ್ದ ಐದು ಹೆಡೆಗಳ ಶೇಷನು ಐದು ಮಂಜುಬೆಟ್ಟಗಳಾಗಿ ಮಾರ್ಪಾಟಾಗಿದೆ. ಈ ಐದು ಬೆಟ್ಟಗಳ ನಡುವೆ ಇರುವ ಶೇಷನಾಗ ಸರೋವರವು ನೀಲಿಹಸಿರು ನೀರಿನಿಂದ, ಸ್ಫಟಿಕ-ಪಚ್ಚೆ ಹರಡಿದ ಅಸದಳ ಸೌಂದರ್ಯದಿಂದ ಕಂಗೊಳಿಸುತ್ತದೆ. ನಾನು ಇಂತಹ ದೃಶ್ಯವನ್ನು ಚಿತ್ರಗಳಲ್ಲಿ ನೋಡಿದ್ದೆ. ಆ ಕ್ಷಣದಲ್ಲಿ ನಾನೆಂಬುದು ಮರೆತು ಈ ದೈವೀಕ ಸೌಂದರ್ಯದಲ್ಲಿದ್ದು ಅಂತರ್ಗತಳಾಗಿದ್ದೆ. ನಮ್ಮ ದಾರಿ ಎತ್ತರದಲ್ಲಿದ್ದುದರಿಂದ ಸರೋವರದ ನೋಟ ಸ್ಪಷ್ಟವಾಗಿ ಕಾಣುತ್ತಿತ್ತು. ಹತ್ತಿರ ಹೋಗುವ ಮಾತೇ ಇಲ್ಲ!

ಈ ಶೇಷನಾಗ್ ಸರೋವರದಿಂದಲೇ ಲಂಬೋದರಿ ನದಿಯು ಹುಟ್ಟುವುದು. ಇಲ್ಲಿಯವರೆಗಿನ ಪ್ರಯಾಣದಲ್ಲಿ ಒಮ್ಮೊಮ್ಮೆ ನದಿ ಕಾಣುತ್ತಿತ್ತು. ಒಮ್ಮೊಮ್ಮೆ ಮಂಜಿನಲ್ಲಿ ಮುಚ್ಚಿರುತ್ತಿತ್ತು. ಒಂದು ಕಡೆ ದಾರಿಗೆ ದೂರದಲ್ಲಿ ಮಂಜಿನಿಂದಾದ ಎರಡು ದೊಡ್ಡ ಹೊಂಡಗಳಿದ್ದವು. ಅವುಗಳಿಂದ ನೀರು ಧುಮುಕುತ್ತಿತ್ತು. ಅದು ಲಂಬೋದರಿ ನದಿ ಎಂದಾಗ ನಮಗೆ ಆಶ್ಚರ್ಯದೊಡನೆ ಭಯವೂ ಆಯಿತು. ಶೇಷನಾಗ್ ಸರೋವರದ ದಡದಲ್ಲಿ ಟೆಂಟುಗಳಿದ್ದವು. ನಾವು ಹೋಗಿ ನಮಗೆ ಶೆರ್ಪಾ ಗೊತ್ತು ಮಾಡಿದ್ದ ಟೆಂಟಿನಲ್ಲಿಳಿದೆವು. ಅಷ್ಟುಹೊತ್ತಿಗೆ ಎಲ್ ಕೆ ರವರು ತುಂಬಾ ಸುಸ್ತಾಗಿದ್ದರು. ಆದರೆ ಏನನ್ನೂ ತಿನ್ನುವುದಿಲ್ಲವೆಂದರು. ನಾವೆಲ್ಲಾ ಕಾಲಿನ ಶೂಸ್, ಸಾಕ್ಸ್, ತಲೆಯ ಟೋಪಿ, ಶಾಲುಗಳನ್ನು ಬಿಚ್ಚಿ ಕಾಲು ಚಾಚಿದೆವು. ನಡೆದು ಬರುವವರಿಗಾಗಿ ಬಿಸಿನೀರು, ಹಾಸಿಗೆಗಳನ್ನು ಹಾಸಿ ರೆಡಿ ಮಾಡಿದ್ದೆವು. ನೆಲದ ಮೇಲೆ ಮೊದಲು ರೈನ್ ಕೋಟುಗಳನ್ನು, ಪ್ಲಾಸ್ಟಿಕ್ ಶೀಟುಗಳನ್ನು ಹಾಕಿ ಆನಂತರ ಕಂಬಳಿಗಳನ್ನು ಹರಡಿದ್ದೆವು. ನಮ್ಮ ಎಲ್ಲಾ ವಸ್ತುಗಳನ್ನು ನಮ್ಮ ದೇಹಕ್ಕೆ ತಗುಲಿದಂತೆ ಇಟ್ಟಿದ್ದೆವು. ನಮ್ಮ ಟೆಂಟಿನಿಂದ ಸರೋವರದ ನೋಟ ಕಾಣುತ್ತಿತ್ತು. ಭಾಗ್ಯವಿದು ಅಲ್ಲವೇ! ನನಗೇನೂ ಆಯಾಸವಾಗಿರಲಿಲ್ಲ. ಸರೋವರವನ್ನು ನೋಡುತ್ತಾ ಇದ್ದೆ.

ಅಲ್ಲಿ ನಮಗೆ ಕಲ್ಕತ್ತಾದ ದಂಪತಿಗಳು ಇಬ್ಬರು ದೊರೆತರು. ಅವರು ಹಿಂದಿನ ದಿನ ಗುಹೆಗೆ ಹೋಗಿ ಲಿಂಗದರ್ಶನ ಮಾಡಿದವರಲ್ಲಿ ಮೊದಲಿಗರು. ಮುಂದಿನ ದಾರಿ ಬಹಳ ಕಠಿಣ ಹಾಗೂ ಅಪಾರ ಮಂಜಿನಿಂದ ಕೂಡಿದೆ. ಆದರೆ ದರ್ಶನ ಭಾಗ್ಯ ಎಲ್ಲರಿಗೂ ದೊರಕುವುದೆಂದು ಹೇಳಿದರು. ರಾತ್ರಿ ಎಂಟು ಗಂಟೆಯ ವೇಳೆಗೆ ನಡೆದು ಬಂದವರು ಬಂದು ನಮ್ಮನ್ನು ಸೇರಿದರು. ಎಲ್ಲರಿಗೂ ಅದೂಇದೂ ಮಾತನಾಡಲೂ ಆಗದಷ್ಟು ಚಳಿ, ಆಯಾಸ. ಇಷ್ಟು ಹೊತ್ತಿಗೆ ನಮಗೆ ಹಸಿವು, ಬಾಯಾರಿಕೆ, ಒಂದು-ಎರಡು ಎಲ್ಲವೂ ಬಂದಾಗಿತ್ತು. ರಾತ್ರಿ ೧೧ ಗಂಟೆ ವೇಳೆಗೆ ನಮ್ಮ ಟೆಂಟು ಬೀಳುವಂತಾಗಿ ಭಯವಾಗಿ ಶ್ರೀನಿವಾಸರು ಹೋಗಿ ಶೆರ್ಪಾನನ್ನು ಕರೆತಂದರು. ನಾವು ಮಿಕ್ಕವರು ಟೆಂಟಿನ ಮಧ್ಯದ ಕಂಬ ಕುಸಿಯದಿರಲೆಂದು ಭದ್ರವಾಗಿ ಹಿಡಿದಿದ್ದೆವು. ಹತ್ತು ನಿಮಿಷಗಳೊಳಗೆ ನಮ್ಮನ್ನು ಪಕ್ಕದ ಟೆಂಟಿಗೆ ಕರೆತಂದರು. ಆದರೆ ಹೊರಗೆ ಚಳಿಯಲ್ಲಿ ಹೋಗಿಬಂದು ಮಾಡಿದ ಶ್ರೀನಿವಾಸರ ದೇಹ ಮರಗಟ್ಟಿದಂತಾಗಿ ಚಿಂತೆಯಾಯಿತು. ರಮೇಶರು ಅವರಿಗೆ ಉಪಚಾರ ಮಾಡಿ ತ್ರಾಣ ಬರುವಂತೆ ಮಾಡಿದರು. 

ಈ ಶೇಷನಾಗ್ ಪ್ರಾಂತ್ಯದಲ್ಲಿ ಗಾಳಿಯು (ಅಥವಾ ಆಮ್ಲಜನಕ) ವಿರಳವಾಗಿತ್ತು. ಉಸಿರಾಡಲು ಒಮ್ಮೊಮ್ಮೆ ಕಷ್ಟವೆನಿಸತೊಡಗಿತು. ಇಲ್ಲಿ ಶೇಷನು ತನ್ನನ್ನು ಬಿಟ್ಟು ಹೋದ ಮಹಾಶಿವನ ಮೇಲಿನ ಕೋಪವನ್ನು ತೋರಿಸದೆ ಬಿಡನು ಎನ್ನುವರು. ಇಲ್ಲಿಯವರೆಗೆ ಬಂದು ಆಗೊಲ್ಲಾ ಎಂದು ಹಿಂದಿರುಗುವವರು ಬಹಳ ಮಂದಿ. ನಾವೂ ಅಂತಹವರನ್ನು ಮಾರ್ಗಮಧ್ಯದಲ್ಲಿ ನೋಡಿ, ನಮಗೆ ದರ್ಶನ ಭಾಗ್ಯವು ದೊರಕಲೆಂದು ಆ ಶಿವನನ್ನೇ ಧ್ಯಾನಿಸಿ ಮನದಲ್ಲೇ ಪ್ರಾರ್ಥಿಸುತ್ತಿದ್ದೆವು. ಅಂದು ರಾತ್ರಿ ಕಳೆದು ಬೆಳಗಾದಾಗ ನಮಗೆ ಇಂದು ಎಂಟನೇ ತಾರೀಕು, ದರ್ಶನದ ದಿನವೆಂದು ಖುಷಿ, ಹುರುಪು. ನೀರು ಮುಟ್ಟುವಂತಿರಲಿಲ್ಲ ಅಷ್ಟು ಕೊರೆತ. ಬಿಸಿನೀರು ಸಿಗಲಿಲ್ಲ. ಹೇಗೋ ಬಾಯಿ, ಮುಖ ತೊಳೆದು ಒಗೆದ ಶುಭ್ರ ಬಟ್ಟೆಗಳನ್ನುಟ್ಟು ಹೊರಟೆವು.       

*****

ಶೇಷನಾಗ್ ನಿಂದ ಬರೀ ಹಿಮ ಮುಸುಕಿದ ದಾರಿ. ಅದರ ಮೇಲೆ ಕುದುರೆಗಳು ನಡೆಯುವಾಗ ನಮಗೆ ಬಹಳ ಭಯವಾಗುತ್ತಿತ್ತು. ನಾವು ಕ್ರಮಿಸಬೇಕಿದ್ದ ೧೨ ಮೈಲಿಗಳಲ್ಲಿ ೮-೯ ಮೈಲಿಗಳಂತೂ ದಪ್ಪ ಹಿಮವಿದ್ದ ಮಂಜಿನ ದಾರಿ. ಎದ್ದುಬಿದ್ದು ಹೋಗುತ್ತಿದ್ದ ಕುದುರೆಗಳ ಪಾಡು ಅಯ್ಯೋ ಎನಿಸುವಂತಿತ್ತು. ಪಹಲ್ ಗಾವ್ ನಲ್ಲಿ ದೂರದಲ್ಲಿ ಆಕಾಶಕ್ಕೆ ಏಕವಾದಂತೆ ಇದ್ದ ಹಿಮಪರ್ವತಗಳ ನಡುವೆಯೇ ಈಗ ನಾವಿದ್ದೇವೆಂದು ತಿಳಿದು ಆಶ್ಚರ್ಯವಾಯಿತು. ಸಂತೋಷವೂ ಆಯಿತು. ಒಂದೆಡೆ ಅತಿ ಎತ್ತರದ ಪುಟ್ಟದಾರಿಯಿದ್ದು, ಯಾತ್ರಿಗಳು ಕಾಣಿಸದೆ ಬರಿಯೆ ಜೈ ಅಮರನಾಥ್ ಎಂಬ ಧ್ವನಿಯು ಮಾತ್ರ ಕೇಳಿಬರುತ್ತಿತ್ತು. ಸುಮಾರು ೧೧.೩೦ ರ ವೇಳೆಗೆ ಪಂಚತರಣಿಗೆ ಬಂದಾಗ ನಿರಾಳವಾಯಿತು. ಪಂಚತರಣಿಯಿಂದ ಸ್ವಲ್ಪ ದೂರದವರೆಗೆ ಬಯಲುಪ್ರದೇಶ. ಇಲ್ಲಿ ಐದು ನದಿಗಳು ಬಂದು ಸೇರುವುದು ವಿಶೇಷ. ಟೆಂಟಿನಲ್ಲಿ ತಂಗಿದ್ದು ಸ್ವಲ್ಪ ಏನೋ ಒಂದಿಷ್ಟು ಆಹಾರ ತಿಂದೆವು. ಅರ್ಧ ಗಂಟೆಯ ನಂತರ ಹೊರಟಾಗ ಇಲ್ಲಿಂದ ಮುಂದೆ ದಾರಿ ಅಷ್ಟು ಕಠಿಣವಿಲ್ಲ, ಮಂಜು ಕೂಡ ಕಡಿಮೆ ಎಂದು ಹೇಳಿ ನಮ್ಮ ಶೆರ್ಪಾ ಸಮಾಧಾನ ಮಾಡಿದನು. ಅಷ್ಟುಹೊತ್ತಿಗೆ ಹಿಂದಿನ ದಾರಿಯಲ್ಲಿ ಬಿದ್ದು ನೊಂದಿದ್ದ ಸುಬ್ಬಮ್ಮನವರ ಕೈ ಮುರಿದಂತೆ ಕಂಡು ಊದಿತ್ತು. ನೋವು, ಭಯದಿಂದ ಒದ್ದಾಡುತ್ತಿದ್ದರು. ಎಲ್ ಕೆ ರವರ ಆರೋಗ್ಯವಂತೂ ತೀರಾ ಹದಗೆಟ್ಟಿತ್ತು. ನಡೆದು ಬರುತ್ತಿದ್ದ ಆ ಮೂರು ಮಂದಿಯ ಪಾಡು ಹೇಗೋ ಎಂದೆನಿಸುತ್ತಿತ್ತು. ನಾವೆಲ್ಲರೂ ಪ್ರಕೃತಿಯ ಸುಂದರ ಮತ್ತು ಭಯಂಕರ ರೂಪಗಳೆರಡನ್ನೂ ಕಂಡಿದ್ದೆವು. ದೇವರಧ್ಯಾನ ಮಾತ್ರ ನಮ್ಮ ಮಂತ್ರವಾಗಿತ್ತು. ಅದರಿಂದ ನನ್ನ ಮನಸ್ಸಿಗೆ ಸಮಾಧಾನವಾಗಿತ್ತು.

ಅಂದು ಒಂದೂವರೆ ಗಂಟೆಯ ವೇಳೆಗೆ ಒಂದು ಕಿಮೀ ದೂರದಿಂದಲೇ ಗುಹೆಯನ್ನು ಕಂಡಾಗ ಎಲ್ಲರ ಕಣ್ಣಲ್ಲೂ ನೀರು ಬಂದಿತ್ತು. ಆ ಭವ್ಯವಾದ ಹಿಮಗಲ್ಲಿನ ಗುಹೆಯನ್ನು ಕಂಡು ನನಗೆ ಕುವೆಂಪುರವರು ಹೇಳಿದ “ಪ್ರಕೃತಿಯ ಆರಾಧನೆ ಪರಮನ ಆರಾಧನೆ ಮತ್ತು ಮುಕ್ತಿಯ ಸಾಧನೆ” ಎಂಬ ಮಾತು ನೆನಪಿಗೆ ಬಂದಿತು. ಎರಡೂಕಾಲು ಗಂಟೆಗೆಲ್ಲಾ ನಾವು ಗುಹೆಯನ್ನು ತಲುಪಿದೆವು.

ಶ್ರೀ ಅಮರನಾಥ್ ಗುಹೆಯು ಬೆಟ್ಟದ ಮಧ್ಯಭಾಗದಲ್ಲಿದೆ. ಹತ್ತಲು ಮಾನವನಿರ್ಮಿತ ಸುಮಾರು ೪೦ ಮೆಟ್ಟಿಲುಗಳಿವೆ. ಹತ್ತಿ ತಲುಪಿದಾಗ ಕಂಡಿದ್ದು ಇದು ಸಹಜವಾಗಿ ಆಗಿರುವ ಪ್ರಕೃತಿನಿರ್ಮಿತ ಗುಹೆ. ಸುಮಾರು ೧೫೦ ಅಡಿ ಅಗಲ, ೮೦ ಅಡಿ ಎತ್ತರವಿರುವ ಗುಹೆಯಲ್ಲಿ ಮೂರು ಹಂತಗಳಿವೆ. ಮೊದಲ ಹಂತವು ಒದ್ದೆಯಾಗಿದೆ. ಚಪ್ಪಲಿಗಳನ್ನು, ಬೂಟು-ಶೂಸ್ ಗಳನ್ನು ಅಲ್ಲಿಯೇ ಬಿಚ್ಚಿಟ್ಟು ೨ ರೂ ಬಾಡಿಗೆಗೆ ಮರದ ಚಪ್ಪಲಿಗಳನ್ನು ಪಡೆದು ಹಾಕಿಕೊಂಡು ಹೊರಡಬೇಕು. ಎರಡು ಬಾಗಿಲು ತರದ ದ್ವಾರಪ್ರವೇಶವಿದೆ. ಅವುಗಳ ಮೂಲಕ ಒಳಹೊಕ್ಕರೆ ನೀರು ನಿಂತಿರುವ (ಪಾದ ಮುಳುಗುವಷ್ಟು) ಎರಡನೇ ಹಂತವನ್ನು ಸೇರುತ್ತೇವೆ. ಇದು ವಿಶಾಲವಾಗಿದೆ. ಇಲ್ಲಿಂದ ನಮಗೆ ಭಗವಂತನ ದರ್ಶನವಾಗುವುದು. ಮೂರನೇ ಹಂತವು ೪-೫ ಅಡಿ ಎತ್ತರದ ಜಗುಲಿ. ಇದು ಗುಹೆಯ ಒಂದು ಕೊನೆ ಪಾರ್ಶ್ವದಲ್ಲಿದೆ. ಆ ಜಗುಲಿಯ ಬಲಮೂಲೆಯಲ್ಲಿ ಹಿಮದ ಲಿಂಗವೂ, ಎಡಮೂಲೆಯಲ್ಲಿ ಪಾರ್ವತಿ ಅಮ್ಮನವರೂ ನಡುವೆ ಗಣೇಶನೂ ಇದ್ದಾರೆ. ಪಾರ್ವತಿಯು ಲಿಂಗಾಕಾರದಲ್ಲಿದ್ದು ೩ ಅಡಿಗಳಷ್ಟು ಮುಂದೆ ಸೀರೆಯ ನೆರಿಗೆ ಹರಡಿದಂತೆ ಮಂಜು ಪದರಗಳಿವೆ. ಗಣೇಶನು ಸರಿಯಾದ ಆಕೃತಿಯಲ್ಲಿ ಇನ್ನೂ ಮೂಡುತ್ತಿದ್ದನು. ಬಲಮೂಲೆಯಲ್ಲಿ ಭವ್ಯವಾದ ಹಿಮದ ಲಿಂಗವು ಬೆಳೆದಿತ್ತು. ಗುಹೆಯ ಮೇಲಿನಿಂದ ಅಮರಗಂಗೆ ನದಿಯ ನೀರು ತೊಟ್ಟಿಕ್ಕುತ್ತಿರುತ್ತದೆ. ಅಮರಗಂಗಾ ನದಿಯು ಗುಹೆಯ ಬಳಿಯಿಂದ ಹರಿದು ಶೇಷನಾಗ್ ಸರೋವರಕ್ಕೆ ಸೇರುವುದು. ಜಗುಲಿಪೂರ್ತಿ ಒಂದೇ ಪಾಣಿವಟ್ಟದಂತೆ ದಟ್ಟವಾದ ಹಿಮದಿಂದ ಕೂಡಿತ್ತು. ಜಗುಲಿಯ ಕೆಳಗೆ ಈ ಹಿಮವು ಕರಗುತ್ತಿರುವ ಕೊರೆಯುವ ಮಂಜಿನ ನೀರಿನಲ್ಲಿ ನಾವು ನಿಂತಿದ್ದೆವು.  

ಶ್ರೀ ಅಮರನಾಥೇಶ್ವರ ಲಿಂಗವು ಸುಮಾರು ಆರೂವರೆ ಅಡಿ ಎತ್ತರವಿತ್ತು. ದೊಡ್ಡ ನೀರಿನ ಕೊಳಗದಷ್ಟು (ಅಥವಾ ಡ್ರಮ್) ದಪ್ಪವಿತ್ತು. ಪಾರದರ್ಶಕವಾದ, ನಯವಾದ ಮಂಜಿನಿಂದಾಗಿತ್ತು. ಆ ಸಮಯದಲ್ಲಿ ಲಿಂಗವನ್ನು ನಾವು ಮುಟ್ಟುವಂತಿರಲಿಲ್ಲ. ಪಾಣಿವಟ್ಟ ಕರಗುವವರೆಗೆ ಈ ರೀತಿ. ದೂರದಿಂದಲೇ ಅಮರನಾಥೇಶ್ವರನಿಗೆ ಗಂಗೆಯ ನೀರು ಹಾಕಿ ಪೂಜೆ, ಪ್ರಾರ್ಥನೆ ಮಾಡಿ ಕೊಬ್ಬರಿ ನೈವೇದ್ಯ ಮಾಡಿದೆವು. ಈ ರೀತಿ ಪ್ರತಿವರ್ಷವೂ ಅಮರನಾಥೇಶ್ವರ ಲಿಂಗವು ಮೂಡುತ್ತದೆ, ಕರಗುತ್ತದೆ. ಜಾತ್ರೆಯ ದಿನದ ವೇಳೆಗೆ ಲಿಂಗವನ್ನು ಮುಟ್ಟಿಮುಟ್ಟಿ ಕೊನೆಯ ಸಾವಿರಾರು ಜನರಿಗೆ ಲಿಂಗದರ್ಶನವಿಲ್ಲದೆ ಅದು ಅದಾಗಲೇ ಕರಗಿಹೋಗಿರುತ್ತದೆ.

ಯುಗಯುಗಾಂತರಗಳಿಂದ ಈ ರೀತಿ ಭಗವಂತನು ಮೂಡುತ್ತಲೇ ಇರುವುದರಿಂದೇನೊ ಅಮರನಾಥ ಎನ್ನುವುದು. ಒಟ್ಟಿನಲ್ಲಿ ರೋಮಾಂಚನಕಾರಿ ಅನುಭವವಾಯಿತು. ಎಲ್ಲರನ್ನು ನೆನೆಸಿಕೊಂಡು ಅವರವರ ಅಭೀಷ್ಟೆಗಳು ನೆರವೇರುವಂತೆ ಪ್ರಾರ್ಥಿಸಿಕೊಂಡೆನು. ನಮ್ಮವರೆಲ್ಲರ, ಅಲ್ಲಿದ್ದವರ ಎಲ್ಲರ ಮುಖಗಳಲ್ಲೂ ತೃಪ್ತಿಯೂ, ಸಾರ್ಥಕತೆಯೂ, ನೆಮ್ಮದಿಯೂ ನೆಲೆಸಿತ್ತು. ಹೆಚ್ಚು ಹೊತ್ತು ನಿಲ್ಲಲಾಗದು ಆ ಹಿಮಕೊರೆತದ ನೀರಿನಲ್ಲಿ! ನಾವು ಹಿಂದಿರುಗಿದೆವು.

ಸುಮಾರು ೫ ಗಂಟೆಯ ವೇಳೆಗೆ ಪಂಚತರಣಿಗೆ ಬಂದು, ವಿಶ್ರಾಂತಿಗಾಗಿ ಅಲ್ಲಿಯೇ ರಾತ್ರಿ ಕಳೆಯುವುದುದೆಂದು ನಮಗೆ ಮೊದಲೇ ಹೇಳಿದ್ದರು. ರಾತ್ರಿ ಎಂಟೂವರೆಯ ವೇಳೆಗೆ ಎಸ್ ಎಲ್ ರವರು, ಶ್ರೀನಿವಾಸ್ ಮತ್ತು ರಮೇಶ್ ನಡೆದು ಬಂದು ನಮ್ಮನ್ನು ಸೇರಿದರು. ಮೂವರೂ ತುಂಬಾ ಸುಸ್ತಾಗಿದ್ದರು. ಏನೋ ಒಂದು ಚೂರು ಆಹಾರ ತಿಂದು ಬಿದ್ದುಕೊಂಡೆವು.

ಒಂಭತ್ತನೇ ತಾರೀಕು ಮತ್ತೊಂದು ಬೆಳಗು. ಆ ದಿನ ಗುಣಾಸುಘಾಟ್, ಶೇಷನಾಗ್, ಪಿಸುಘಾಟ್, ಚಂದನವಾರಿ ಮೂಲಕವೇ ಮರುಪ್ರಯಾಣ ಮಾಡಿ ೭ ಗಂಟೆಯ ವೇಳೆಗೆ ಪಹಲ್ ಗಾವ್ ಬಳಿಯಿದ್ದ ಶೆರ್ಪಾ ಮನೆ ಸೇರಿದಾಗ ನಮ್ಮ ಶ್ರೀ ಅಮರನಾಥ್ ಯಾತ್ರೆ ಮುಗಿದಿತ್ತು. ನಾವೆಲ್ಲಾ ಸ್ನಾನ ಮಾಡಿ, ಬಟ್ಟೆ ಒಗೆದುಕೊಂಡೆವು. ನಮ್ಮ ಶೆರ್ಪಾ ನಮಗಾಗಿ ಅನ್ನ ಮಾಡಿಸಿದ್ದನು. ಸರಿಯಾದ ಬಿಸಿ ಊಟ ಮಾಡಿ ಮೂರು ದಿನಗಳಾಗಿದ್ದವು. ಎಲ್ಲರೂ ಮೊಸರನ್ನವನ್ನು ತಿಂದೆವು. ಆ ಶೆರ್ಪಾನ ಅಣ್ಣ ಸುಬ್ಬಮ್ಮನವರ ಮುರಿದ ಹಸ್ತಕ್ಕೆ ಮಂತ್ರ, ಔಷಧಿಗಳನ್ನು ಹಾಕಿದನು. ಎಲ್ಲರೂ ನಿರಾತಂಕವಾಗಿ ಮಲಗಿದೆವು.

*****

೧೦. ೭. ೧೯೮೭ ರಂದು ಬೆಳಗ್ಗೆ ೮ ಗಂಟೆಯ ವೇಳೆಗೆ ಟ್ರಕ್ ನಲ್ಲಿ ಪಹಲ್ ಗಾವ್ ನ ಕೇಂದ್ರಕ್ಕೆ ಬಂದೆವು. ಬರುವ ಮೊದಲು ನಾನು ತಂದಿದ್ದ ಜಮಖಾನ, ರಗ್ಗು, ಸ್ವೆಟರ್, ಶೂಸ್, ಸಾಕ್ಸ್ ಇತ್ಯಾದಿಗಳನ್ನು ನಮ್ಮ ಶೆರ್ಪಾನಿಗೆ ಕೊಟ್ಟೆ. ನಾವೆಲ್ಲರೂ ಸೇರಿ ಶೆರ್ಪಾನಿಗೆ ಒಂದು ಒಳ್ಳೆಯ ಮಾತನ್ನು ಇಂಗ್ಲೀಷಿನಲ್ಲಿ ಬರೆದುಕೊಟ್ಟೆವು. ನಾವು ತಂದಿದ್ದ ಔಷಧಿಗಳು, ಮುಲಾಮುಗಳನ್ನು ಕೊಟ್ಟೆವು. ನಿಜವಾಗಿಯೂ ಅಂತಹ ಒಳ್ಳೆಯ ಶೆರ್ಪಾ ಸಿಕ್ಕಿದ್ದರಿಂದಲೇ ನಾವು ಶ್ರೀ ಅಮರನಾಥೇಶ್ವರನನ್ನು ನೋಡಿ ತಣಿದೆವು. ಆತನು ಸುಬ್ಬಮ್ಮನವರ ಕೈ ಹಿಡಿದುಕೊಂಡು ಲಿಂಗದ ಬಳಿಯವರೆಗೂ ಕರೆತಂದನು. ಒಮ್ಮೆ ಆಕೆಯನ್ನು ಕೂಸುಮರಿ ಮಾಡಿತಂದು ತಂಗುದಾಣಕ್ಕೆ ಬಿಟ್ಟನು. ಒಟ್ಟಿನಲ್ಲಿ ಹವಾಗುಣ, ಅದೃಷ್ಟ, ಒಳ್ಳೆಯ ಜೊತೆಗಾರರು, ನಿಷ್ಠಾವಂತನಾದ ಶೆರ್ಪಾ, ಮುಖ್ಯವಾಗಿ ಪರಮಾತ್ಮನ ಕೃಪೆ ಇದ್ದುದ್ದರಿಂದ ನಮ್ಮ ಸಾಹಸ ಪುಣ್ಯಯಾತ್ರೆಯು ಸಫಲವಾಗಿ ಮುಗಿಯಿತು. ಇಲ್ಲಿಂದ ಮುಂದಕ್ಕೆ ಜಮ್ಮು ಪ್ರಯಾಣ, ವೈಷ್ಣೋದೇವಿಯ ದರ್ಶನ. 

~ ವಿನತೆ ಶರ್ಮ