ನಮಸ್ಕಾರ ಅನಿವಾಸಿ ಬಳಗಕ್ಕೆ. ಇನ್ನೇನು ಬಂದೇ ಬಿಡಲಿರುವ ಕ್ರಿಸ್ಮಸ್ ಹಬ್ಬದ ಹಾಗೂ ಹೊಸವರುಷದ ಹಾರ್ದಿಕ ಶುಭಾಶಯಗಳು.
ದೇಶ- ಕಾಲ ಯಾವುದಿದ್ದರೇನು? ಮಾನವ ಜೀವ - ಭಾವ ಜಗತ್ತು ಮಾತ್ರ ಸದಾ ಅದೇ ಅಲ್ಲವೇ? ಅದಕ್ಕೆಂದೇ ತ್ರೇತೆಯ ಸೀತೆ, ದ್ವಾಪರದ ರಾಧೆ ಈಗಲೂ ನಮ್ಮನ್ನು ಕಾಡುತ್ತಾರೆ. ನನ್ನ ಹಳ್ಳಿಯ ನನ್ನ ಪರಿಧಿಗೆ ಬಂದ ಎಲ್ಲ ಹೆಂಗಳೆಯರದೂ ಒಂದೊಂದು ಕಥೆ.. ವ್ಯಥೆ. ಅದನ್ನೇ ಇಲ್ಲಿನ ಕವನ ಹೇಳಲು ಪ್ರಯತ್ನಿಸುತ್ತಿದೆ. ಹಾಗೆಯೇ ಒಂದು ಲಘು ಹರಟೆಯೂ ಉಂಟು. ಒಪ್ಪಿಸಿಕೊಳ್ಳಿ.
~ ಸಂಪಾದಕಿ
ನಮ್ಮೂರ ರಾಧೆಯರು..
ನಮ್ಮೂರಲ್ಲಿ ಜುಳು ಜುಳು ಹರಿವ ತಂಪಾದ ನದಿಯಿಲ್ಲ. ಹಿಂಡಿದರೆ ದಂಡಿ ಹಾಲು ಕರೆವ ದನದ ಮಂದೆಗಳಿಲ್ಲ. ಒಣಬಿದಿರ ಕೊಳಲ ಮಾಡಿ ನುಡಿಸಿ ಕುಣಿಸುವ ಕೃಷ್ಣನೂ ಇಲ್ಲ. ನಮ್ಮೂರ ಹೆಸರಂತೂ ಗೋಕುಲ- ಬೃಂದಾವನ ಮೊದಲೇ ಅಲ್ಲ.
ಯಮುನೆ ಇರದಿದ್ದರೇನಂತೆ ಇಲ್ಲಿ ಕಾಳಿಂಗರಿಗೇನೂ ಕೊರತೆ ಇಲ್ಲ. ರಾಸ ರಚಿಸಲೆಂದೇ ರಸಿಕರು ಸುತ್ತಮುತ್ತ ಕಾಯ್ದುಕೊಂಡಿಹರಲ್ಲ?! ಪ್ರತಿಷ್ಠೆ, ಮರ್ಯಾದೆ, ರಕ್ಷಣೆಯ ಹೆಸರಲ್ಲಿ ಚೈತನ್ಯ ಹೋಮ ನಡೆವುದಲ್ಲ.. ದ್ವಾಪರವಲ್ಲವಾದ್ದರಿಂದ ನರಕಾಸುರ ಬಂಧನದಿಂದ ಈ ಗೋಪಿಕೆಯರಿಗೆ ಮುಕ್ತಿಯೇ ಇಲ್ಲ..
~ ಗೌರಿಪ್ರಸನ್ನ
ಕ್ಯಾಲೆಂಡರ್ ಪುರಾಣ
2025 ಅರಿವಿಲ್ಲದೇ ಉರುಳಿ ಇನ್ನೇನು ಹೊಸ ವರುಷದ ಹೊಸಿಲಲ್ಲಿದ್ದೇವೆ. ಇಷ್ಟಕ್ಕೂ ಈ ಹೊಸ ವರ್ಷ ಅನ್ನೋದು ಏನು? ಅದೇ ಹಗಲು ರಾತ್ರಿಗಳು, ಅದೇ ಸೂರ್ಯ ಚಂದ್ರರು, ಅವೇ ಗಿಡಮರ-ಉಪವನಗಳು, ಅವೇ ಮಾನವ ಮನದ ರಾಗ ದ್ವೇಷ ಭಾವವೇಗಗಳು, ಅದೇ ಹೊಡೆದಾಟ ಬಡೆದಾಟಗಳು,ಅವೇ ಚರ್ವಿತ ಚರ್ವಣ ರಾಜಕೀಯ ಸಾಮಾಜಿಕ ಸುದ್ದಿ ಸಮಾಚಾರಗಳು, ಅವೇ ಹೊಸ ವರ್ಷದ ಹಳೆಯ ರೆಸುಲ್ಯೂಷನ್ ಗಳು.. ಬರೀ ಬದಲಾಗುವ ಕ್ಯಾಲೆಂಡರ್ ಹೊರತುಪಡಿಸಿ ಉಳಿದಿದ್ದೆಲ್ಲಾ ಅದೇ ಹಿಂದಿನದೇ.
ಆದರೆ ಜಡ್ಡು ಕಟ್ಟಿದ ಮನಸ್ಸಿಗೆ ಯಾಂತ್ರಿಕವಾದ ಬದುಕಿಗೆ ಒಂದೆರಡು ಖುಷಿಯ ಕ್ಷಣಗಳು ಬೇಕು ಹಗುರಾಗಲು ಒಂದು ನೆಪಬೇಕು ಆ ನೆಪದಲ್ಲಿ ಆಪ್ತರೊಡನೆ, ಸ್ನೇಹಿತರೊಡನೆ ಬಂಧು ಬಾಂಧವರೊಡನೆ ಒಂದಷ್ಟು ಮಾತು, ಹರಟೆ, ನಗು, ಹಾಡು, ಕುಣಿತ, ತಿನ್ನುವುದು, ಕುಡಿಯುವುದು.. ಅವುಗಳ ಮೂಲಕ ಒಂದು ನಿರಾಳತೆಯನ್ನೂ, ಬಿಡುಗಡೆಯನ್ನೂ, ಸಾರ್ಥಕತೆಯ ಕ್ಷಣಗಳನ್ನೂ, ಹೊಸ ಭರವಸೆಯನ್ನೂ ಪಡೆಯಲು ಬಯಸುವುದಷ್ಟೇ ಅವುಗಳ ಆಚರಣೆಯ ಹಿಂದಿರುವ ಅರ್ಥ. ಬರೀ ಹೊಸ ವರ್ಷದ ಆಚರಣೆ ಅಲ್ಲ ಎಲ್ಲ ಹಬ್ಬ, ದಿನಗಳು, ಜಾತ್ರೆ, ಉತ್ಸವಗಳ ಉದ್ದೇಶವೂ ಅದುವೇ ಅಂಬೋದು ನನ್ನ ಅನಿಸಿಕೆ. ಇಷ್ಟಕ್ಕೂ ಅಖಂಡವಾದ ಅನಂತವಾದ ಕಾಲವನ್ನು ನಮ್ಮ ಅನುಕೂಲಕ್ಕಂತನೇ ತಾನೇ ನಾವು ವಿಭಾಗಿಸಿ ವರುಷ, ತಿಂಗಳು, ಮಾಸ, ತಿಥಿ, ವಾರ ಎಂದೆಲ್ಲ ಮಾಡಿಕೊಂಡಿದ್ದು.ನಿನ್ನೆಯಷ್ಟೇ ಎಲ್ಲಿಯೋ ಓದುತ್ತಿದ್ದೆ.. ಇಥಿಯೋಪಿಯಾ ದೇಶದ ಕ್ಯಾಲೆಂಡರ್, ಅಲ್ಲಿಯ ಹೊಸ ವರುಷ ಎಲ್ಲ ಬೇರೆಯೇ ಅಂತೆ. ಅಲ್ಲೀಗ 2018 ನಡೆದಿದೆಯಂತೆ. ಅದಕ್ಕೇ ಅಲ್ಲವೇ ‘ದೇಶ ಕಾಲ ವಿಭಾಗ ಮನದ ರಾಜ್ಯದೊಳಿರದು’ ಅಂತ ನಮ್ಮ ಗುಂಡಪ್ಪನವರು ಎಂದೋ ಹೇಳಿದ್ದು?!
ಹೊಸ ವರುಷ ಅಂದ ಮ್ಯಾಲೆ ಎಲ್ಲರ ಮನೆಯಾಗೂ ಹೊಸ ಕ್ಯಾಲೆಂಡರ್ ಹಾರಾಡಲಿಕ್ಕೇ ಬೇಕು . ಈ ಕ್ಯಾಲೆಂಡರ್ ನ ಇತಿಹಾಸ ಅಥವಾ ಕೆಲವು ಜನರ ಈ ಜನವರಿ ಫೆಬ್ರವರಿ ಅಥವಾ ಹಿಂದೂ ಪಂಚಾಂಗ ಚೈತ್ರ- ವೈಶಾಖಗಳ ದ್ವಂದ್ವ ಯುದ್ಧ ಇತ್ಯಾದಿಗಳ ಬಗ್ಗೆ ನಾ ಇಲ್ಲೇ ಮಾತನಾಡಲಿಕ್ಕೆ ಹೋಗೋದಿಲ್ಲ ಖರೇ ಹೇಳಬೇಕೆಂದರೆ ನಾವು ಸಣ್ಣವರಿದ್ದಾಗ ಅಂಕಲಪಿ ಹಿಂದೆ ಇದ್ದ ಚೈತ್ರ- ವೈಶಾಖ- ವಸಂತ ಋತು ಹಾಗೂ ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ಅಂತ ಎರಡನ್ನೂ. ಅಷ್ಟೇ ಶ್ರದ್ಧೆಯಿಂದ ಕಣ್ಮುಚ್ಚಿ ಕೈ ಕಟ್ಟಿ ನಿಂತು ಉರು ಹೊಡೆದಿದ್ದೆವು.. ಕೆಲವೊಮ್ಮೆ ಹಿಂದೆ ಮುಂದೆ ವಾಲಾಡುತ್ತಾ. ಜೋಡಿಗೆ ಆ ಜನವರಿ, ಫೆಬ್ರವರಿಗಳ ಸ್ಪೆಲಿಂಗ್ ಕಲಿಯಲಿಕ್ಕೂ ಪರಿಪಾಟಲು ಪಟ್ಟಿದ್ದು ಸುಳ್ಳಲ್ಲ. ಯಾಕೆಂದರೆ ಇಂಗ್ಲೀಷ್ ನಮ್ಮ ಕನ್ನಡದ್ಹಂಗ ಅಲ್ರಿ ಬಾಯಲ್ಲಿ ಅನ್ನೋದೇ ಬೇರೆ, ಅಲ್ಲಿ ಸ್ಪೆಲಿಂಗ್ ಬರೆಯುವುದೇ ಬೇರೆ. ಈಗ ಉದಾಹರಣೆಗೆ ನೋಡ್ರಿ ಜನವರಿಯನ್ನು ಬರೆಯುವುದು JANUARY ಅಂತ ಇಲ್ಲೇ U ಎಲ್ಲಿಂದ ಬಂತು ಅಂತ ತಲಿ ಕೆಡತಿತ್ತರೀ.. ಈಗಲೂ ಅಷ್ಟೇ ಎಷ್ಟೋ ಶಬ್ದಗಳನ್ನು ಉಚ್ಚಾರ ಮಾಡೂದ್ಹೆಂಗ ಅಂತ ಚಿಂತೀರಿ. ಏನs ಇರಲೀರಿ ನಮಗ ದಿನದ ಉಪಯೋಗಕ್ಕೆ ಸರಳ ಅನ್ನಸೂವು ಈ ಜನವರಿ ಫೆಬ್ರವರಿನೇ. ಚೈತ್ರ ವೈಶಾಖಗಳು ಸ್ವಲ್ಪ ಕಠಿಣ ಅನ್ನಿಸಿ ಬಿಡತಾವ್ರೀ. ವೈಶಾಖ ಶುದ್ಧ ದಶಮಿ, ಭಾದ್ರಪದ ಶುಕ್ಲ ಚೌತಿ, ಶ್ರಾವಣ ಬಹಳ ಅಷ್ಟಮಿ ಹಿಂಗೆಲ್ಲಾ. ಆ ಕೃಷ್ಣ ಪಕ್ಷ ಶುಕ್ಲ ಪಕ್ಷಗಳು, ಶುದ್ಧ ಬಹುಳಗಳು ಸ್ವಲ್ಪ ಕನ್ಫ್ಯೂಸ್ ಆಗಿಬಿಡತಾವ್ರಿ. ಅವು ಸುಮ್ಮ ಮದುವೆ ಮುಂಜವಿಗಳಿಗೆ, ಪೂಜಾ ಪುನಸ್ಕಾರಗಳಿಗೆ, ಲಗ್ನ ಮುಹೂರ್ತಕ್ಕಷ್ಟೇ ಸೀಮಿತವಾಗಿ ಬಿಟ್ಟಾವ. ಹಂಗ ನೋಡಿದ್ರ ಈ ಜನವರಿ ಫೆಬ್ರವರಿಗಳು ದಿನ ಊಟಕ್ಕೆ ಬಳಸುವ ಸ್ಟೀಲ್ ತಟ್ಟೆ ಲೋಟಗಳಾದ್ರ ಈ ಸಂವತ್ಸರೇ, ಅಯನೇ, ಮಾಸೌ, ಪಕ್ಷೇ, ತಿಥೇ, ವಾಸರೌ.. ಎಲ್ಲಾ ಯಾರರೆ ಅತಿಥಿ ಅಭ್ಯಾಗತರು ಬೀಗರು ಬಿಜ್ಜರು ಬಂದಾಗ ಮಾತ್ರ ಹೊರ ತೆಗೆದು ಅವರು ಹೋದ ನಂತರ ಮತ್ತೆ ಕಾಳಜಿಲೆ ಪ್ಯಾಕ್ ಮಾಡಿ ಸ್ವಸ್ಥಾನಕ್ಕೆ ಸೇರಿಸಿಬಿಡುವ ತುಟ್ಟಿ ಡಿನ್ನರ್ ಸೆಟ್ ಗಳ ಗತೆ ಅಂದ್ರ ತಪ್ಪಾಗಲಿಕ್ಕಿಲ್ಲ.
ಆದ್ರೆ ಕೆಲವು ಈ ನಮ್ಮ ಕ್ಯಾಲೆಂಡರ್ ಗಳು ಇರ್ತಾವಲ್ರೀ ‘ ಹೊಂಬಾಳಿ ಬಂಧುಗಳು’, ‘ ಮಹಾಲಕ್ಷ್ಮಿ ದಿನದರ್ಶಿಕೆ’, ‘ಕಾಲ ನಿರ್ಣಯ’ ಇತ್ಯಾದಿ.. ಇವುಗಳು ಮಾಡುವ ಕೆಲಸ ಅನನ್ಯ ನೋಡ್ರಿ ಇವುಗಳೊಳಗ ಜನವರಿ ಫೆಬ್ರವರಿ 1 ರಿಂದ 28,30,31 ದಿನಾಂಕಗಳ ಜೊತೆಗೆ ತಿಥಿ, ನಕ್ಷತ್ರ, ರಾಹುಕಾಲ, ಗುಳಿಕಕಾಲ ಎಲ್ಲಾನೂ ಕೊಟ್ಟಿರ್ತಾರ. ಏನು ಮಾಹಿತಿ ಬೇಕಂದ್ರೂ ತಟ್ಟಂತ ಸಿಕ್ಕಿಬಿಡುತ್ತದ. ಅಡುಗೆಮನೆ ಗ್ವಾಡಿಗೆ ಇಂಥದೊಂದು ಕ್ಯಾಲೆಂಡರ್ ಬೇಕೇ ಬೇಕು ನೋಡ್ರಿ. ರಥ, ಜಾತ್ರಿ, ತೇರು ಏಕಾದಶಿ- ದ್ವಾದಶಿಗಳು, ಹುಣ್ಣಿಮೆ- ಅಮಾವಾಸ್ಯೆಗಳು, ಹಬ್ಬ- ಹರಿದಿನಗಳು, ಆರಾಧನೆ- ವರ್ಧಂತಿಗಳು, ಸಂಕಷ್ಟಿ, ಚಂದ್ರೋದಯ- ಸೂರ್ಯೋದಯಗಳು ಇವುಗಳ ಮಾಹಿತಿ ಗೃಹಿಣಿ ಆದಾಕಿಗೆ ಅವಶ್ಯ ಇರಬೇಕಲ್ರಿ.ಅದಕ್ಕ ಅಡುಗೆಮನ್ಯಾಗೊಂದು ಕ್ಯಾಲೆಂಡರ್ ಇದ್ರ ಅದರ ಮೇಲೆ ಕಣ್ಣು ಹಾಯಕೋತ ಇರ್ತದ. ಇರಲಿಕ್ಕಂದ್ರ ಏಕಾದಶಿ ಮುಂಜಾನೆ ಘಂ ಅಂತ ಉಳ್ಳಾಗಡ್ಡಿ ಉಪ್ಪಿಟ್ಟು ತಯಾರಾಗಿ ಬಿಡುತದ. ಮರುದಿನದ ಹುಣ್ಣಿಮೆಗೆ ಕಾಯಿ ತರೋದು ಮರೆತು ಹೋಗ್ತದ. ಕುಲ ದೇವರ ತೇರು, ಮನೆಯ ಹೆಣ್ಣು ದೇವತೆಯ ಕಾರ್ತಿಕೋತ್ಸವ, ತೆಪ್ಪೋತ್ಸವ ಇವುಗಳೆಲ್ಲ ನೆನಪೇ ಉಳಿಯುವುದಿಲ್ಲ.
ಈ ಕ್ಯಾಲೆಂಡರ್ಗಳ ಬಹುಪಯೋಗ ನಿಮಗೂ ಗೊತ್ತೇ ಇರುತದ್ರಿ. ಅವಸರಕ್ಕ ಬೇಕಂದಾಗ ದಾರದ ಸಮೇತ ಸೂಜಿ, ಟಾಚನಿಗಳು ಸಿಗುವುದು ಇದೇ ಕ್ಯಾಲೆಂಡರಿನಾಗೇರಿ. ತಿಂಗಳ ವರವಿ ಹಾಲು -ಮೊಸರಿನ ಲೆಕ್ಕ, ಇಸ್ತ್ರಿ ಅವನಿಗೆ ಕೊಟ್ಟ ಬಟ್ಟೆಗಳು, ಅವನು ವಾಪಸ್ ಕೊಡಬೇಕಾದ ಚಿಲ್ಲರೆಯ ಲೆಕ್ಕ, ಯಾವುದೋ ಬ್ಲಡ್ ಟೆಸ್ಟ್, ದಂತ ವೈದ್ಯರ ಅಪಾಯಿಂಟ್ಮೆಂಟ್ ದಿನಾಂಕ, ಮಕ್ಕಳ ಶಾಲೆಯ ಪೇರೆಂಟ್ -ಮೀಟಿಂಗ್, ಪಿಕ್ನಿಕ್- ಗ್ಯಾದರಿಂಗು ಇವುಗಳ ದಿನಾಂಕಗಳು, ಯಾರದೋ ಮನೆಯ ಮದುವೆಯ ರಿಸೆಪ್ಶನ್, ಬಂಧುಗಳೊಬ್ಬರ ಸೊಸೆಯ ಶ್ರೀಮಂತದೂಟಕ್ಕೆ ಹೋಗಬೇಕಾಗಿರುವ ದಿನಾಂಕಗಳು, ಕಿರಾಣಿ ಖರೀದಿಸಿದ ದಿನ ಮತ್ತು ಅದರ ಟೋಟಲ್ ರೊಕ್ಕ ( ಯಾಕಂದ್ರೆ ಯಜಮಾನರು ಯಾವಾಗ ಕಿರಾಣಿ ತರಲು ಕರೆದರೂ “ಮನ್ನೀನ ತಂದಿದ್ದೆಲ್ಲಾ 20,000 ಕಿರಾಣಿ ಅಂತಿರ್ತಾರ. ಅವರಿಗೆ ಸಾಕ್ಷಿ ಸಮೇತ ಆ ಹಿಂದಿನ ಡೇಟ್, ದುಡ್ಡು ತೋರಿಸಬೇಕಲ್ರೀ ಅದಕ್ಕ) ಇನ್ನ ಕೆಲಸದ ಗದ್ದಲದಾಗ ಮರೆತು ಬಿಡಬಾರದಂತ ಮನೆಯವರ ಆಫೀಸಿನ ಟೂರಿನ ದಿನಾಂಕ, ತಿಂಗಳ ಮೊದಲೇ ತಮ್ಮ ಆಗಮನದ ಡೇಟ್ ತಿಳಿಸಿದ ಅತಿಥಿಗಳ ಆಗಮನದ ದಿನಾಂಕ, ಅವರ ಟ್ರೈನು, ಬೋಗಿ ನಂಬರ್, ಫ್ಲೈಟು, arrival time, ಟರ್ಮಿನಲ್ ಇತ್ಯಾದಿಗಳ ದಾಖಲಾತಿ ಎಲ್ಲಾ ಇಲ್ಲೇ ಈ ತೂಗಾಡೋ ಕ್ಯಾಲೆಂಡರಿನಲ್ಲೇ. ನಾದಿನಿಯ ಗಂಡ, ತಮ್ಮನ ಹೆಂಡತಿ, ಅಕ್ಕನ ಗಂಡ ಹೀಗೆ ಬಹಳ ಪ್ರಮುಖರಾದವರ ಹುಟ್ಟುಹಬ್ಬ, ಆನಿವರ್ಸರಿ ಮರೆತು ಬಿಡಬಹುದಾದ ಸಾಧ್ಯತೆಗಳೇ ಹೆಚ್ಚು. ಆ ಪ್ರಮಾದಗಳು ಆಗದಂಗ ತಪ್ಪಿಸಲಿಕ್ಕೆ ಈ ಕ್ಯಾಲೆಂಡರ್ ನಾಗ ಮಾರ್ಕ್ ಮಾಡಿ ಇಟ್ಟುಬಿಟ್ಟರ ಆಯ್ತ್ರಿ . ಇನ್ನ ಮನೆ ಕೆಲಸದಕಿ ತಗೊಂಡ ರಜಾ ದಿನಗಳು, ಅಕಿ ಅಡ್ವಾನ್ಸ್ ಆಗಿ ಇಸ್ಕೊಳ್ಳೋ ನೂರು ಇನ್ನೂರು ರೂಪಾಯಿಗಳ ಲೆಕ್ಕಕ್ಕೂ ಈ ಕ್ಯಾಲೆಂಡರ್ ಬೇಕ್ರಿ. ಇಲ್ಲ ಅಂದ್ರ ತಿಂಗಳದಾಗ ನಾಲ್ಕು ದಿನ ರಜಾ ಮಾಡಿ ಅಂತ ನಾನು, ಇಲ್ಲ ಎರಡೇ ದಿನ ಅಂತ ಅಕಿ ಹಾಕ್ಯಾಡೋದು ನಡೀತಿತ್ರೀ. ಆದ್ರ ಯಾವಾಗ ಈ ಕ್ಯಾಲೆಂಡರ್ನಾಗ ಅವೆಲ್ಲ ದಾಖಲಾಗಲಿಕ್ಕೆ ಶುರು ಆಯ್ತೋ ಆಗ ಇಂಥ ಪ್ರಸಂಗಗಳು ಕಡಿಮೆ ಆದ್ವು ಅನ್ರಿ. ಅಷ್ಟೇ ಅಲ್ರಿ ನಾನಂತೂ ಕೆಲವೊಂದು ಅರ್ಜೆಂಟ್, ಎಮರ್ಜೆನ್ಸಿ ಫೋನ್ ನಂಬರ್ ಗಳನ್ನು ಅದರ ಮೇಲೇ ಗೀಚಿರತೀನ್ರಿ. ಫೆಸಿಲಿಟಿ ಆಫೀಸ್, ಗ್ಯಾಸ್ ಸಿಲಿಂಡರ್ ಏಜೆನ್ಸಿ, ಮಿಕ್ಸಿ ರಿಪೇರಿಯವ, ರದ್ದಿ ಪೇಪರಿನವ, ಹೋಂ ಡೆಲಿವರಿ ಮಾಡುವ ಹತ್ತಿರದ ಕಿರಾಣಿ ಅಂಗಡಿಯವ, ಅರ್ಜಂಟಿಗೊದಗುವ ಆಟೋ ಚಾಲಕ, ಡ್ರೈಕ್ಲೀನಿನವ, ಟೇಲರ್, ಬ್ಯೂಟಿ ಪಾರ್ಲರ್ ದಕಿ.. ಹೀಂಗs ನೂರಾ ಎಂಟು ನಂಬರ್.. ಯಾಕ ನಗಲಿಕ್ಹತ್ತೀರೇನು? ಏಯ್ ನಿಮಗೇನ ಗೊತ್ತರೀ ಯಾವ ಟೈ ಮಿನಾಗ ಯಾರಾರ ನಂಬರ್ ಹರಕತ್ ಆಗಿಬಿಡತಾವ ಅಂತ. ಮೊಬೈಲ್ ನಾಗ ಸೇವ್ ಮಾಡಕೋಬಹುದಲಾ ಅಂತೀರೇನು ಅದರ ಕಥಿನೂ ಹೇಳತೀನಿ ತಡೀರಿ. ಮೊಬೈಲ್ ನಾಗ ನಮಗ ಬೇಕಂದಾಗ ಕೆಂಪು ಗೆರಿನೇ.. ಚಾರ್ಜೇ ಇರಂಗಿಲ್ಲ. ನೂರೆಂಟು ಗೇಮ್ಸ್ ಡೌನ್ಲೋಡ್ ಮಾಡಿಕೊಂಡು ಆಡಿ, U tube, google ಜನ್ಮವನ್ನೆಲ್ಲ ಜಾಲಾಡಿ ಬ್ಯಾಟರಿ ಲೋ ಅಂತ ತೋರಿಸಿದ ಕೂಡಲೇ ಎಲ್ಲಿ ಕೂತಿರತಾರೋ ಅಲ್ಲೇ ಅದನ್ನಿಟ್ಟು ಎದ್ದು ಮತ್ತೊಂದು ಅಪ್ಪನದೋ, ಅಜ್ಜನದೋ ಮೊಬೈಲ್ ಅನ್ವೇಷಣೆಗೆ ಹೊರಡೂದು ನಮ್ಮ ಮಕ್ಕಳ ಹುಟ್ಟು ಗುಣಾರೀ. ಎಷ್ಟರ ಬಯ್ಯರಿ, ತಿಳಿಸಿ ಹೇಳ್ರಿ ಏನು ಉಪಯೋಗ ಇಲ್ಲ ರೀ. ಹಿಂಗಾಗಿ ಮೊದಲು ಮೊಬೈಲ್ ಹುಡುಕುವ ಕೆಲಸ ಶುರು ಮಾಡಬೇಕ್ರಿ. ಸೋಫಾ ಸಂದ್ಯಾಗ, ಡೈನಿಂಗ್ ಟೇಬಲ್ ಚೇರ್ ಮ್ಯಾಲೋ, ಮಡಚಿಡಬೇಕು ಎಂದು ಗುಡ್ಡೆ ಹಾಕಿದ ಒಗೆದ ಬಟ್ಟೆಗಳ ರಾಶಿಯಲ್ಲೋ, ರಜಾಯಿಯ ಸುರುಳಿ, ತಲೆದಿಂಬಿನ ಕವರ್ ನಲ್ಲೋ, ಬಚ್ಚಲು ಮನೆಯ ಸಿಂಕಿನ ಬಳಿಯೋ ಎಲ್ಲಿ ಬೇಕಾದರೂ ಪರದೇಶಿಗತೆ ಅದು ಬಿದ್ದಿರಬಹುದಾದ ಸಾಧ್ಯತೆಗಳು ಹೆಚ್ಚರೀ. ಯಾರನ್ನೇ ಕೇಳ್ರಿ ‘ನಾ ನೋಡಿಲ್ಲ.. ಚಿನ್ನು ತಗೊಂಡಿದ್ಲು’, ‘ನಂಗೊತ್ತಿಲ್ಲ.. ಅಣ್ಣಾ ಪಬ್ಜಿ ಆಡಲಿ ಕ್ಹತ್ತಿದ್ದ’, ‘ಇಲ್ಲೇ ಚಾರ್ಜಿಗಿತ್ತು.. ಆಗಳೇ ನೋಡಿದ್ದೆ.’. ಇಂಥವೇ ಉತ್ತರಗಳು. ರಿಂಗ್ ಮಾಡಿದ್ರೆ ಪಾಪ ಗುಟುಕು ಜೀವ ಹಿಡಿದ ಅದಕ್ಕ ರಿಂಗ್ ಆಗುವ ತಾಕತ್ತೂ ಇರುವುದಿಲ್ಲ. ಕೆಲವೊಮ್ಮೆ ಅಂತೂ ನಾನು ಗೇಮ್ ಆಡಿದ್ರ ಬೈತೀನಿ ಅಂತ ಸೈಲೆಂಟ್ ಬೇರೆ ಮಾಡಿರತಾರ. ಹಿಂಗಂತ ಪಾಸ್ವರ್ಡ್ ಹಾಕಿಟ್ರೆ ಆ ನಂಬರು ಪ್ಯಾಟರ್ನ್ ಏನಿತ್ತು ಅಂತ ನಂಗs ನೆನಪಿರುವುದಿಲ್ಲರೀ. ಇನ್ನ ಯಾವುದರ ಡೈರಿನಾಗ ಬರೆದಿಟ್ಟುಕೊಂಡಿದ್ದರೂ ಆ ಡೈರಿ ಹುಡುಕಲಿಕ್ಕೆ ತಾಸು ಬೇಕು. ಯಾಕಂದ್ರ ಮಗಳು ಒಮ್ಮೆ ಅದನ್ನ ತನ್ನ rough note book ಮಾಡಿಕೊಂಡಿರತಾಳ. ಇನ್ನೊಮ್ಮೆ ಮಗ ರಾಯ ಯಾವುದೋ ಹಾಳಿನಾಗ ಯಾರಿಗೋ ಅಡ್ರೆಸ್ ಬರೀಲಿಕ್ಕೆ ಅಂತ ಅದನ್ನ ಪೇಪರ್ ಪ್ಯಾಡ್ ಗತೆ use ಮಾಡಿ ಎಲ್ಲೋ ಸೇರಿ ಸಿಟ್ಟು ಹೋಗಿರುತ್ತಾನೆ. ವೀಕೆಂಡ್ಗೆ ಮನೆಗೆ ಬಂದಿದ್ದ ನಾದಿನಿ ಮಗಳು ಅದನ್ನು ಡ್ರಾಯಿಂಗ್ ಬುಕ್ ಮಾಡಿಕೊಂಡು ಚಿತ್ರ ಗೀಚಿರತಾಳ. ಟೀಪಾಯ್ ಮೇಲಿದ್ರ ಯಾರೋ ಅದನ್ನು ಬಿಸಿ ಚಹಾ ಕಪ್ ಇಡಲಿಕ್ಕೆ ಕೋಸ್ಟರ್ ಗತೆ ಸಹ ಬಳಸಿರತಾರ. ಹೀಂಗಾಗಿ ಇವ್ಯಾವುದರ ಉಸಾಬರಿನೇ ಬ್ಯಾಡ ಅಂತ ‘ಅನ್ಯಥಾ ಶರಣಂ ನಾಸ್ತಿ.. ತ್ವಮೇವ ಶರಣಂ ಮಮ’ ಅಂತ ಈ ಕ್ಯಾಲೆಂಡರಿನ ಮೊರೆ ಹೋಗುವುದೊಂದೇ ದಾರಿ. ನಂಬಿದವರ ಕೈಬಿಡಲಾರದ ದೊಡ್ಡ ಗುಣ ಈ ನಮ್ಮ ಅಡಗಿಮನಿ ಕ್ಯಾಲೆಂಡರಿಗೆ ಅದರೀ.
ಡಿಸೆಂಬರ್ ತಿಂಗಳು ಬಂತಂದ್ರ ಈ ಕ್ಯಾಲೆಂಡರುಗಳ ವ್ಯಾಪಾರದ ಭರಾಟೆ ನೋಡಬೇಕ್ರಿ. ಎಲ್ಲಾ ಸ್ಟೇಷನರಿ ಹಾಗೂ ಪುಸ್ತಕ ಅಂಗಡಿಗಳೊಳಗ ನಾನಾ ನಮೂನಿ ಹೊಚ್ಚ ಹೊಸ ಕ್ಯಾಲೆಂಡರುಗಳು ಮನೆಮನೆಯ ಗೋಡೆಯನ್ನಲಂಕರಿಸಲು ಸಜ್ಜಾಗಿ ಕೂತಿರತಾವ. ವೆಂಕಪ್ಪ, ಹನುಮಪ್ಪ, ಶಿವ, ನರಸಿಂಹ, ಲಕ್ಷ್ಮಿ ಇತ್ಯಾದಿ ದೇವತೆಗಳ ಚಂದದ ಕ್ಯಾಲೆಂಡರ್ ಗಳು. ನಮ್ಮ ಬಾಲ್ಯಕಾಲದ ಎಲ್ಲಾ ಮನೆಯ ಪಡಸಾಲೆಗಳಲ್ಲಿ ಎಲ್ಲಾ ಪ್ರಮುಖ ದೇವತೆ ದೇವತೆಗಳು ಹಿಂಗ ಕ್ಯಾಲೆಂಡರಿನಾಗ ಜೋಕಾಲಿ ಆಡುತ್ತಿದ್ದರು. ನಾವು ಹೊರಹೋಗಲು ಚಪ್ಪಲಿ ಮೆಟ್ಟುವುದಕ್ಕಿಂತ ಮೊದಲು ತಪ್ಪದೇ ಈ ಜೀಕುವ ದೇವರಿಗೆ ಕೈಮುಗಿದೇ ಹೋಗುತ್ತಿದ್ವಿ. ಕೈ ಮುಗಿದೀದ್ದರೂ ಕಡೀಕೆ ಕಣ್ರೆಪ್ಪೆ ಮುಚ್ಚಿ ತೆಗೆದಾದರೂ ಸಾಂಕೇತಿಕ ನಮಸ್ಕಾರ ಸಲ್ಲಿಸಿಯೇ ಹೊರಗಡಿ ಇಡುತ್ತಿದ್ದು. ಎಲ್ಲ ದೇವಾನುದೇವತೆಗಳ ರೂಪ, ಮೈಬಣ್ಣ, ಅವರ ಆರು-ಮೂರು- ನಾಲ್ಕು ತಲೆಗಳು, ಚತುರ್ ಷಡ್ ಭುಜಗಳು,ಶಂಖ- ಚಕ್ರ- ಗದಾ- ತ್ರಿಶೂಲಾದಿ ಆಯುಧಗಳು, ಗರುಡ -ನಂದಿ- ನವಿಲು -ಇಲಿ ಇತ್ಯಾದಿ ಅವರ ಸ್ಪೆಸಿಫಿಕ್ ಆದ ವಾಹನಗಳು, ಅವರು ನುಡಿಸುವ ಕೊಳಲು, ವೀಣೆ ಇತ್ಯಾದಿ ವಾದ್ಯಗಳು,ಆಭರಣಗಳು, ಉಡುಗೆತೊಡುಗೆಗಳು ನಮ್ಮ ಅರಿವಿನ ವಲಯಕ್ಕೆ ತಲುಪಿದ್ದೇ ಈ ಕ್ಯಾಲೆಂಡರುಗಳಿಂದ. ಒಂದರ್ಥದಲ್ಲಿ ದೇವ ದರುಶನ ಮಾಡಿಸಿದ ಗುರು ಸ್ಥಾನ ಸಲ್ಲಬೇಕಿವಕ್ಕೆ. ಎಷ್ಟೋ ಚೆಂದದ ಕ್ಯಾಲೆಂಡರ್ ಗಳು ಕಟ್ ಹಾಕಿಸಿಕೊಂಡು ದೇವರ ಫೋಟೋ ಆಗಿ ಸೀದಾ ದೇವರ ಮನೆಗೆ ಬಡ್ತಿ ಪಡೆಯುತ್ತಿದ್ದವು. ಈಗಲೂ ನನ್ನ ಅಡುಗೆ ಮನೆಯಲ್ಲಿ ವಿರಾಜಮಾನವಾಗಿರುವ 2014ನೇ ಇಸ್ವಿಯ, ಬರ್ಮೀಂಗ್ ಹ್ಯಾಮಿನ ದೇವಸ್ಥಾನದ ಕ್ಯಾಲೆಂಡರಿನ ವೆಂಕಪ್ಪನ ಪಾದಸ್ಪರ್ಶದಿಂದಲೇ ನಮ್ಮ ದಿನಚರಿ ಆರಂಭ ಆಗುತ್ತದೆ. ಯಾಕಂದ್ರ ನಮ್ಮ ಕುಲದೈವರೀ ವೆಂಕಪ್ಪ. ನಾವೂ ಅವನ ಒಕ್ಕಲದವರೇ.. ಅಷ್ಟೇ ಅಲ್ಲ ಬಹಳಷ್ಟು ಸಾಮ್ಯ ಅವರೀ ನಮಗೂ ಅವಗೂ. ನಾವು ಎಲ್ಲರs ಹೊರಗೆ ಹೊಂಟ್ರ ಅವನ ಹಂಗ ಸಿರಿ -ಗರುಡ- ಶೇಷ- ವಾಯು- ಬ್ರಹ್ಮಾದಿಗಳ ಸುರವರ ಪರಿವಾರ ಸಮೇತ ಹೊಂಡಿತೀವ್ರಿ. ಕನಿಷ್ಠ ಪಕ್ಷ ಎಂಟು 10 ಮಂದಿ ಅಂತೂ ಇರಬೇಕು. ಹಿಂಗಾಗಿ ಖರೆ ಹೇಳ್ತಿನ್ರಿ ಮಂದಿ ನಮ್ಮನ್ನು ತಮ್ಮ ಮನೆಗೆ ಛಾಕ್ಕ ಸಹಿತ ಕರೀಲಿಕ್ಕೆ ಅಂಜತಾರ್ರೀ. ಮತ್ತ ಹತ್ತಾರು ಮೂಲಗಳಿಂದ ಸಾಕಷ್ಟು ಬೇಕಾದಷ್ಟು ಆದಾಯ ಇದ್ದರೂ ವೆಂಕಪ್ಪ ಸದಾ ಸಾಲಗಾರನೇ. ನಾವೂ ಹಂಗs ಆದಾಯದ ಸ್ರೋತ್ರಗಳೆಷ್ಟೇ ಇರಲಿ ನಮ್ಮ ಕ್ರೆಡಿಟ್ ಮುಗಿಯೋದೇ ಇಲ್ರೀ , ಹೋಂ ಲೋನ್, ಕಾರ್ ಲೋನ್, ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಲೋನ್ ಎಷ್ಟೆಷ್ಟು ಪ್ರಕಾರದ ಲೋನ್ ಗಳು ಅವನೋ ಅಷ್ಟೆಲ್ಲಾ ತರ ಲೋನ್ಗಾರರು ನಾವು. ಇರಲಿ ಬಿಡ್ರಿ ವಿಷಯ ಎಲ್ಲಿಂದೆಲ್ಲೋ ಹೊಂಟತು ಕ್ಯಾಲೆಂಡರ್ ಬಿಟ್ಟು.
ಚಂದ ಚಂದ ನೆಯ ನೀಲಿ ಆಗಸ, ನೀಲಿ ಕಡಲು, ಬೆಟ್ಟ,ಹಸಿರು ವನಗಳು, ಬಣ್ಣಬಣ್ಣದ ಹೂಗಳಂಥ ನಿಸರ್ಗ ಸೌಂದರ್ಯದ ಕ್ಯಾಲೆಂಡರ್ ಗಳು, ಪ್ರಾಣಿ-ಪಕ್ಷಿಗಳ ಕ್ಯಾಲೆಂಡರ್ ಗಳು, ಮುದ್ದು ಮುದ್ದಾದ ಪುಟ್ಟ ಮಕ್ಕಳ ಕ್ಯಾಲೆಂಡರ್ ಗಳು, ರವಿವರ್ಮನ ಪೇಂಟಿಂಗ್ ಗಳ ಚಿತ್ರವಿರುವ ಕ್ಯಾಲೆಂಡರ್ ಗಳು, ಮೈಸೂರ ಅರಮನೆ, ತಾಜ್ಮಹಲ್, ಗೋಲ್ ಗುಂಬಜ್, ಹಂಪಿಯ ಕಲ್ಲಿನ ರಥವಿರುವಂತಹ ಐತಿಹಾಸಿಕ ಸ್ಮಾರಕಗಳ ಕ್ಯಾಲೆಂಡರ್ ಗಳು, ಸ್ವಾತಂತ್ರ್ಯ ಯೋಧರ, ಸಾಹಿತಿಗಳ, ಕವಿಗಳ ಕ್ಯಾಲೆಂಡರ್ ಗಳು, ಸಿನಿಮಾ ನಟ- ನಟಿಯರ ಕ್ಯಾಲೆಂಡರ್ ಗಳು, ತುಂಡುಡುಗೆಯಲ್ಲಿ ದೇಹಸಿರಿ ಪ್ರದರ್ಶಿಸುವ ರೂಪದರ್ಶಿಗಳ ಮಾದಕ ಕ್ಯಾಲೆಂಡರ್ ಗಳು ಓಹ್! ಎಷ್ಟೆಲ್ಲಾ ವೈವಿಧ್ಯಮಯ.. ಎಷ್ಟೋ ನಮಗೆ ಪ್ರಿಯವಾದ ನಟ ನಟಿಯರ, ಧೀಮಂತ ವ್ಯಕ್ತಿಗಳ, ನಿಸರ್ಗ ಚಿತ್ರಗಳ ಕ್ಯಾಲೆಂಡರ್ ಅನ್ನು ಪುಸ್ತಕ- ನೋಟ್ಬುಕ್ಕುಗಳಿಗೆ ಕವರ್ ಹಾಕಲು ಉಪಯೋಗಿಸಿದ್ದಿದೆ. ಬರೀ ಗೋಡೆಗೆ ತೂಗು ಹಾಕುವ ಕ್ಯಾಲೆಂಡರ್ಗಳಷ್ಟೇ ಅಲ್ಲ ಟೇಬಲ್ ಮೇಲೆ ಇಡಬಹುದಾದ ಕ್ಯಾಲೆಂಡರ್ ಗಳು ಇರ್ತಾವ. ಎಷ್ಟೋ ಬ್ಯಾಂಕು, ಎಲ್ಐಸಿ, ಪ್ರೈವೇಟ್ ಕಂಪನಿಗಳು ತಮ್ಮದೇ ಲೇಬಲ್ ನಡಿಯಲ್ಲಿ ಕ್ಯಾಲೆಂಡರ್ ಮಾಡಿಸುವುದು ಸರ್ವೇಸಾಮಾನ್ಯ. ಇನ್ನು ಕೆಲವೊಬ್ಬ ಸ್ಥಿತಿವಂತರು ತಮ್ಮ ಮದುವೆಯ, ಮಕ್ಕಳ ಚಿತ್ರಗಳನ್ನು ಒಳಗೊಂಡ ತಮ್ಮದೇ ಆದ ಕ್ಯಾಲೆಂಡರ್ ಮಾಡಿಸಿಕೊಂಡು ತಮ್ಮ ಬಂಗಲೆ ಅಂಥ ಮನೆಯ ಲಿವಿಂಗ್ ರೂಮ್ನಲ್ಲೋ, ಬೆಡ್ರೂಮ್ ನಲ್ಲೋ ಹಾಕಿರತಾರ.
ಮಜಾ ಅಂದ್ರ ಕ್ಯಾಲೆಂಡರಿನ ಮುಂಭಾಗದಷ್ಟೇ ಹಿಂಭಾಗವೂ ಅತ್ಯಂತ ಆಸಕ್ತಿದಾಯಕ ವಿಷಯಗಳನ್ನು ಒಳಗೊಂಡಿರುತದ ಅನ್ನೋದು ನಿಮಗೂ ಗೊತ್ತೇ ಇರುತ್ತದ. ರಾಶಿ ಭವಿಷ್ಯ, ತಲೆನೋವಿನಿಂದ ಮೂಲವ್ಯಾಧಿ ತನಕ ಎಲ್ಲಾ ಜಡ್ಡುಗಳಿಗೂ ಮನೆಮದ್ದುಗಳು, ಗೋದಿ- ಜೋಳದಾಗ ನುಶಿ ಆದ್ರ, ಬ್ಯಾಳಿ- ಕಾಳಿನಾಗ ಬುರಬುರಿ, ಹಾರೋ ಹುಳ, ರವಾದಾಗ ಬಾಲ ಹುಳ ಆದರೆ ಏನು ಮಾಡಬೇಕು, ತಲ್ಯಾಗ ಹೇನು ಆದ್ರ ಏನು ಮಾಡಬೇಕು, ಮನ್ಯಾಗ ಜೊಂಡಿಗ್ಯಾ,ಹಲ್ಲಿ ಹಾವಳಿಯಾದ್ರ ಏನು ಮಾಡಬೇಕು, ಹೊಲದಾಗಿನ ಯಾವ ಬೆಳೀಗೆ ಯಾವ ಗೊಬ್ಬರ ಹಾಕಬೇಕು, ಮುಖದ ಮೇಲೆ ಮೊಡವಿಗಳಾದ್ರ.. ತಲೆ ಕೂದಲು ಉದುರಿದರ..ತ್ವಚೆ ಕಾಂತಿಹೀನವಾದ್ರಏನೇನೆಲ್ಲ ಮಾಡಬೇಕು?, ಗ್ರಹಣವಾದಾಗ ಏನು ತಿನ್ನಬೇಕು, ಯಾವಾಗ ತಿನ್ನಬೇಕು, ಏನೇನು ದಾನ ಕೊಡಬೇಕು ಎಲ್ಲದರ ವಿವರಣೆ ಇರತದ. ಹಲ್ಲಿ ಮೈಮೇಲೆ ಬಿದ್ರ, ಬೆಕ್ಕು ಅಡ್ಡ ಹೋದ್ರಾ , ನಾಯಿ ಊಳಿಟ್ಟರ, ಮನೆ ಮುಂದೆ ಆಕಳು ಸಗಣಿ ಹಾಕಿ ಹೋಗಿದ್ರ, ಬಲಗಣ್ಣು ಅದುರಿದ್ರ, ಎಡಗಾಲು ತುರಿಸಿದ್ರ.. ಹಿಂಗ ಹತ್ತು ಹಲವಾರು ಶಕುನ ಫಲಗಳು.. ಕನಸಿನಾಗ ತುಂಬಿದ ಕೊಡ ಬಂದ್ರ, ಹಾವು ಬಂದ್ರ, ದೇವರು ಬಂದ್ರ, ಸತ್ತ್ರ, ಎದ್ರ, ಬಿದ್ರ ಅಂತೆಲ್ಲ 108 ಸ್ವಪ್ನ ಫಲಗಳು.. ಮುಂಗಾರು ಹಿಂಗಾರು ಮಳೆ, ನಕ್ಷತ್ರಗಳ ವಿವರಣೆ, ಮಳೆಯ ಸಂಭವನೀಯತೆಗಳು.. ಕೃಷ್ಣಾರ್ಘ್ಯ ಮಂತ್ರ, ಕಾರ್ತಿಕ ಸ್ನಾನದ ಮಂತ್ರ, ನಷ್ಟವಸ್ತು ಸಿಗುವ ಕಾರ್ತವೀರ್ಯಾರ್ಜುನ ಮಂತ್ರ, ಲಗ್ನ ಮುಹೂರ್ತಗಳು, ಪ್ರಯಾಣಕ್ಕೆ ಶುಭ ತಿಥಿ, ಶುಭ ನಕ್ಷತ್ರಗಳ ವಿವರಣೆ , ವಾಸ್ತು ಪುರುಷ ತೇಜಿ ಮಂದಿ ಏನುಂಟು ಏನಿಲ್ಲ ನನಗಂತೂ ಹೊಸ ಕ್ಯಾಲೆಂಡರ್ ಬಂದೊಡನೆ ಅದರ ಹಿಂಪುಟಗಳನ್ನು ತಿರುಗಿಸಿ ನೋಡುವುದೇ ಅಲ್ಲಲ್ಲ ಓದುವುದೇ ಕೆಲಸ. ಈಗೀಗ ಮೊಬೈಲ್ನಾಗೂ ಆಯಾ ವರ್ಷದ ಕ್ಯಾಲೆಂಡರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಒಂದು ಬಟ್ಟೊತ್ತಿದರೆ ಸಾಕು ಎಲ್ಲ ಮಾಹಿತಿ ಪಡೆಯಬಹುದು. ಆದರೆ ಗ್ವಾಡಿಗೆ ಮಳಿ ಹೊಡೆದು ತೂಗು ಹಾಕಿದ ಆ ಕ್ಯಾಲೆಂಡರ್ ನ ಮಜಾ ಖಂಡಿತ ಅದರಾಗಿಲ್ಲ. ಯಾಕಂದ್ರ ನಾ ಈ ಹಿಂದೆ ಹೇಳಿದ ಸೂಜಿ ಚುಚ್ಚುವುದೇ ಮುಂತಾದ ಯಾವ ಬಹುಪಯೋಗಿ ಕೆಲಸಕ್ಕೂ ಅದು ಬರಂಗಿಲ್ಲ.
ಒಟ್ಟಿನಾಗ ಕ್ಯಾಲೆಂಡರ್ ನಮ್ಮ ನಿಮ್ಮೆಲ್ಲರ ಜೀವನದ ಒಂದು ಅವಿಭಾಜ್ಯ ಅಂಗ ಅನ್ನೂದರಾಗ ಎರಡು ಮಾತಿಲ್ಲ ಕಾಲ ದೇಶ ಯಾವುದರ ಇರಲಿ ಗ್ವಾಡಿ ಮೇಲೆ ಕ್ಯಾಲೆಂಡರ್ ಇರಲಿ ಅಂತ ಹೇಳುತ್ತಾ ನನ್ನ ಹರಟಿಗೆ ಮಂಗಳ ಹಾಡುತೀನಿ.
ಅನಿವಾಸಿ ಬಂಧುಗಳಿಗೆಲ್ಲ ನಮಸ್ಕಾರ. ಜೊತೆಗೇ ನಾಡಹಬ್ಬ ದಸರೆಯ ಹಾರ್ದಿಕ ಶುಭಾಶಯಗಳು. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನವದುರ್ಗೆಯರು ತಮ್ಮೆಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ. ಈ ನಾಡ ಹಬ್ಬದ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಸರಸ್ವತಿ ಸಮ್ಮಾನರಾದ ಸರಸ್ವತಿ ಪುತ್ರನನ್ನು ನಾಡು ಕಳೆದುಕೊಂಡ ವಿಷಾದವಿದೆಯಾದರೂ ಅಕ್ಷರಗಳಿಗೆಂದಿಗೂ ಸಾವಿಲ್ಲ, ಅಕ್ಷಯ ಆಯಸ್ಸು ಅವುಗಳಿಗೆ. ನಾಡಿನ ಹೆಮ್ಮೆಯ ಹೆಸರಾಂತ ಸಾಹಿತಿ ಭೈರಪ್ಪನವರು ಆ ಅಕ್ಷರ ರೂಪದಲ್ಲಿ ಕೀರ್ತಿ ಶರೀರದಲ್ಲಿ ಚಿರಕಾಲ ನಮ್ಮೊಡನೆ ಇರುತ್ತಾರೆ ಎಂಬುದು ಸಮಾಧಾನದ ವಿಷಯ. ಒಂದು ರೀತಿಯಲ್ಲಿ ನನ್ನನ್ನು ಈ ಅನಿವಾಸಿ ಗುಂಪಿಗೆ ಸೇರಿಸಿದ ಶ್ರೇಯವೂ ಪರೋಕ್ಷವಾಗಿ ಭೈರಪ್ಪನವರಿಗೇ ಸೇರಬೇಕು ಎನ್ನಿ. 2019ರ ನಾಡಹಬ್ಬದ ಉದ್ಘಾಟನೆ ಮುಗಿಸಿದ ಭೈರಪ್ಪನವರು ಶತಾವಧಾನಿ ಗಣೇಶರೊಂದಿಗೆ ನೇರ ಲಂಡನ್ ಗೆ ಬಂದಿಳಿದಿದ್ದರು.ಆ ಕಾರ್ಯಕ್ರಮದಲ್ಲಿ ನಾನು ಮೊದಲ ಬಾರಿಗೆ ಅನಿವಾಸಿಯ ಘಟಾನುಘಟಿಗಳಾದ ಪ್ರೇಮಲತಾ ರಾಮ್ ಹಾಗೂ ಕೇಶವ್ ಅವರ ಸಂಪರ್ಕಕ್ಕೆ ಬಂದಿದ್ದು. ಈ ಅನಿವಾಸಿಯನ್ನು ನನ್ನದಾಗಿಸಿಕೊಂಡಿದ್ದು. ಅವತ್ತಿನ ಆ ಕಾರ್ಯಕ್ರಮ ನನ್ನ ಜೀವಮಾನವಿಡೀ ನೆನಪಿಡುವಂತಹ ಅವಿಸ್ಮರಣೀಯ ಕಾರ್ಯಕ್ರಮ. ಶ್ರೀಯುತ ಎಸ್ ಎಲ್ ಭೈರಪ್ಪ ಮತ್ತು ಶತಾವಧಾನಿ ಗಣೇಶರಂಥ ನಡೆದಾಡುವ ವಿಶ್ವಕೋಶಗಳನ್ನು ಸ್ಟೇಜ್ ಮೇಲೆ ಏಕಕಾಲಕ್ಕೆ ನೋಡುವ ಅವರ ಮಾತು ಕೇಳುವ ಅವರ ಕೃತಿಗಳ ಬಗ್ಗೆ ತೊದಲ ನುಡಿ ಆಡುವ ಅವಕಾಶ ಸಿಕ್ಕಿತ್ತಂದು ಸಾಹಿತ್ಯದ ರಸಗಳ ಗುಣಪಡಿಸಿ ನಮ್ಮ ಆತ್ಮವನ್ನು ತೃಪ್ತಪಡಿಸುವ ಅವರಿಗೆ ಅಂದು ನಮ್ಮ ಮನೆಯಲ್ಲಿ ನಮ್ಮ ಕೈಯಾರೆ ಗುಣಪಡಿಸುವ ಭಾಗ್ಯವು ಸಿಕ್ಕಿತ್ತು ಅದೇ ನೆನೆಸಿಕೊಂಡರೆ ಈಗಲೂ ಹೃದಯ ಖುಷಿಯಿಂದ ಧನ್ಯತೆಯಿಂದ ಮೂಕವಾಗುತ್ತದೆ. ಇಂದಿನ ಸಂಚಿಕೆಯಲ್ಲಿ ಅಂದಿನ ನನ್ನ ಮಾತುಗಳನ್ನೇ ಹಂಚಿಕೊಳ್ಳುತ್ತಿದ್ದೇನೆ. ಅವರಿನ್ನಿಲ್ಲ ಎಂದರಿವಾದಾಗ ಮನಭಾರವಾಗುತ್ತದೆ.ಮಾತು ಮೂಕವಾಗುತ್ತದೆ. ಹೃದಯ ಒದ್ದೆಯಾಗುತ್ತದೆ. ಆದರೆ ಭೈರಪ್ಪನವರು ಹಚ್ಚಿದ ಅಕ್ಷರ ಜ್ಯೋತಿ ‘ ಮಾತು ಮನಂಗಳಿಂದ ಅತ್ತತ್ತ ಮೀರಿ, ನಿರುಪಾಧಿಕ ನಿರ್ಮಲವಾಗಿ ಬೆಳಗುತ್ತಲೇ ಇರುತ್ತದೆ.. ಬೆಳಕ ಹಬ್ಬಿಸುತ್ತಲೇ ಇರುತ್ತದೆ.
~ ಸಂಪಾದಕಿ
ಭೈರಪ್ಪನೆಂಬ ದೈತ್ಯ ಪ್ರತಿಭೆ
ಭೈರಪ್ಪನವರು ಒಂದು ಅಗಾಧಸಾಗರ. ಅದರ ಆಳ, ವಿಸ್ತಾರ, ಭೋರ್ಗರೆತ, ಅಲೆಗಳ ಕುಣಿತ ಅಂತರಾಳದಲ್ಲ ಡಗಿರುವ ಹವಳ ಮುತ್ತುಗಳು, ನೂರೆಂಟು ಬಗೆಯ ಸಸ್ಯರಾಜಿಗಳು, ಸಣ್ಣ ಮೀನಿನಿಂದ ಹಿಡಿದು ದೊಡ್ಡ ತಿಮಿಂಗಿಲಿನವರೆಗೆ ಸಾವಿರಾರು ಬಗೆಯ ಜೀವ ವೈವಿಧ್ಯಗಳು, ಅಷ್ಟೇ ಏಕೆ ಅಸ್ತಮಿಸುವ ಸೂರ್ಯ, ಉದಯಿಸುತ್ತಿರುವ ಚಂದ್ರ ಇವರನ್ನೂ ತನ್ನಲ್ಲಿ ಒಳಗೊಂಡಿರುವಂಥದ್ದು. ಇನ್ನು ನಾನೋ ಸಮುದ್ರದ ದಡದಲ್ಲಿ ಕುಳಿತು ಅಟ್ಟಿ ಬರುವ ಅಲೆಗಳಿಂದ ಪಾದ ತೋಯಿಸಿಕೊಂಡು, ಉಸುಕಿನ ಪುಟ್ಟ ಗುಬ್ಬಿ ಮನೆ ಕಟ್ಟಿ, ದಡಕ್ಕೆ ಬಂದು ಬಿದ್ದ ಒಂದೆರಡು ಶಂಖ ಕಪ್ಪೆ ಚಿಪ್ಪುಗಳನ್ನು ಆರಿಸಿ “ಓಹೋ ಸಾಗರ ತಾನೇ? ನಾ ಬಲ್ಲೆ” ಎಂದು ಹೇಳುವಂತಹ ದುಸ್ಸಾಹಸ.. ನಾನು ಇಲ್ಲಿ ಬಂದು ಇಂದು ಸಾಕ್ಷಾತ್ ಅವರ ಉಪಸ್ಥಿತಿಯಲ್ಲಿ ಅವರ ಕೃತಿಗಳ ಬಗ್ಗೆ ಮಾತನಾಡುವುದು ಎಂದರೆ. ಸಂಪೂರ್ಣ ವೇದ ವಾಗ್ಮಯದ ಕರ್ತೃವೇ ಆದ ಪರಮಾತ್ಮನೆದಿರು ಒಂದೆರಡು ಶಬ್ದಗಳಿಂದ ಹೆಣೆದ ಸ್ತೋತ್ರ ಒಂದನ್ನು ‘ನಾ ರಚಿಸಿದೆ’ ಎಂದು ಬೀಗುತ್ತಾ ಹಾಡುವ ಭಕ್ತನ ಪಾಡು ನನ್ನದು. ಅವರೊಂದು ಅಗಾಧ ಚೈತನ್ಯ. ಅದಕ್ಕೇ ನಾ ಮುಂಚೆಯೇ ಹೇಳುತ್ತಿರುವೆ. ಈಗ ನಾ ಮಾತಾಡುತ್ತಿರುವುದು ಭೈರಪ್ಪನವರ ಬಗ್ಗೆ ಅಲ್ಲ “ಭೈರಪ್ಪ ನನಗೆ ದಕ್ಕಿದಷ್ಟು” ಎಂಬುದರ ಬಗ್ಗೆ ‘ಬಾಲಕನ ಕಲಭಾಷೆ ಕೇಳಿ ಜನನಿ ಸುಖ ಪಡುವಂದದಿ’ ಎಂದು ದಾಸರು ಹಾಡುವಂತೆ ಅವರೂ ಕೂಡ ನನ್ನೀ ತೊದಲುಗಳನ್ನು ಸಾವಧಾನದಿಂದ ಕೇಳಿಯಾರು ಎಂಬ ವಿಶ್ವಾಸ ನನಗೆ.
ಭೈರಪ್ಪನವರು ಶತಾವಧಾನಿ ಗಣೇಶರೊಂದಿಗೆ
ಭೈರಪ್ಪನವರ ಕೃತಿಗಳ ಬಗ್ಗೆ ಹೇಳ ಹೊರಟಾಗ ಮೊದಲನೆಯದಾಗಿ ತಾವೇ ತಾವಾಗಿ ಓದಿಸಿಕೊಂಡು ಹೋಗುವ ಅವುಗಳ ಗುಣದ ಬಗ್ಗೆ ಬಹಳ ಅಚ್ಚರಿಯಾಗುತ್ತದೆ. ಕಾದಂಬರಿಯ ವಿಷಯ ವಸ್ತು- ಸಿದ್ಧಾಂತಗಳು ಏನೇ ಇರಲಿ, ಅವುಗಳನ್ನು ನೀವು ಒಪ್ಪಲಿ ಬಿಡಲಿ ಅದು ಬೇರೆ ವಿಷಯ. ಆದರೆ ಪುಸ್ತಕ ಹಿಡಿದರೆ ಸಾಕು ಮುಗಿಸುವ ತನಕ ಒಂದರೆಗಳಿಗೆ ಬಿಡದಂತೆ ನಮ್ಮನ್ನು ಅವಿಶ್ರಾಂತವಾಗಿಸಿ ಒಂದೇ ಗುಕ್ಕಿಗೆ ಓದಿಸಿಕೊಳ್ಳುವಂಥ ಅದ್ಭುತ ಶಕ್ತಿ ಅವುಗಳಿಗೆ. ನಾನಂತೂ ಇದುವರೆಗೂ ಅವರ ಕಾದಂಬರಿಗಳನ್ನು ಓದುತ್ತಾ ಒಲೆಯ ಮೇಲಿಟ್ಟ ಅದೆಷ್ಟು ಪಾತ್ರೆಗಳನ್ನು ಸುಟ್ಟು ಕರಕಲು ಮಾಡಿ ಎಸೆದೇಬಿಟ್ಟಿದ್ದೇನೋ ಲೆಕ್ಕವಿಲ್ಲ. ಅಂದರೆ ನಾನಿಲ್ಲಿ ಹೇಳಬಯಸುತ್ತಿರುವುದು ಇಷ್ಟೇ , ಓದಿಗೆ ಬೇಕಾದದ್ದು ಕಣ್ಣು, ತಲೆ, ಮನಸ್ಸುಗಳು.ಅವು ಮೂರು ತಲ್ಲೀನವಾಗಿದ್ದರೆ ಸಾಕಲ್ಲವೇ? ಆದರೆ ಇವರ ಕಾದಂಬರಿಗಳನ್ನು ಓದುತ್ತಿರುವಾಗ ಎಲ್ಲ ಜ್ಞಾನೇಂದ್ರಿಯಗಳೂ ಓದಿನ ಮೋಡಿಗೆ ಸಿಲುಕಿ ಬಿಡುತ್ತವೆ. ಮನೆಯಲ್ಲಿ ಯಾರೋ ಕೂಗಿದ್ದು, ಬೆಲ್ ಆಗಿದ್ದು,ಮಗು ಅತ್ತದ್ದು ಕಿವಿಗೆ ಕೇಳದು. ಸುಟ್ಟ ವಾಸನೆ ಮೂಗಿಗೆ ಅಡರದು. ಒಂಥರಾ ಧ್ಯಾನಸ್ಥ ಸ್ಥಿತಿ. ಧ್ಯಾನದಲ್ಲಿ ಹೊರ ಜಗತ್ತಿನ ಆಗುಹೋಗುಗಳ ಅರಿವಾಗುತ್ತಿದ್ದರೂ ಅಲ್ಲಿ ನಮ್ಮದು ಕೇವಲ ಸಾಕ್ಷಿ ಭಾವ. ಯಾವ ಕ್ರಿಯೆ- ಪ್ರತಿಕ್ರಿಯೆಗಳೂ ಇಲ್ಲದಂತಹ ಸ್ಥಿತಿಯಲ್ಲಿರುತ್ತದೆ. ಅಂಥದೇ ಒಂದು ಸ್ಥಿತಿಯನ್ನು ಅವರ ಕಾದಂಬರಿಗಳು ಒದಗಿಸಲು ಸಶಕ್ತವಾದವುಗಳು. ಎರಡನೆಯದು ಅವರು ಬಳಸುವ ಭಾಷೆ. ಟಿಪಿಕಲ್ ಆದ ‘ಭೈರಪ್ಪ ಭಾಷೆ’ ಅಂತಲೇ ಅದನ್ನು ನಾವು ಕರೆಯಬಹುದು. ಅವರ ಕಾದಂಬರಿಗಳನ್ನು ಓದುವಾಗ ಮನೆ ಕೆಲಸ ಇತ್ಯಾದಿಗಳನ್ನು ಮಾಡುತ್ತಿರುವಾಗಲೂ ಅದೇ ಭಾಷೆ ನನ್ನ ತಲೆಯಲ್ಲಿ ಓಡುತ್ತಿರುತ್ತದೆ. ಉದಾಹರಣೆಗೆ.. ಅವಸರದಲ್ಲಿ ಹಾಲನ್ನು ಜೋರು ಉರಿಯಲ್ಲಿಟ್ಟು ಉಕ್ಕಿಸಿದರೆ “ಹಾಲನ್ನು ಅವಸರಿಸದೇ ಸಣ್ಣ ಉರಿಯಲ್ಲಿಟ್ಟು ಕಾಸಿದ್ದರೆ ಹದವಾದ ಕೆನೆಯೂ ದಕ್ಕುತ್ತಿತ್ತು.. ಗ್ಯಾಸನ್ನು ಸ್ವಚ್ಛಗೊಳಿಸುವ ಪ್ರಮೇಯವೂ ತಪ್ಪುತ್ತಿತ್ತು”ಎನ್ನುವ ವಿಚಾರ ಹೊಳೆಯಿತು, ಭಾವಸ್ಪರಿಸಿತು” ಇತ್ಯಾದಿಯಾಗಿ.ಈ ತೆರನಾಗಿ ನನಗೆ ಅರಿವಿಲ್ಲದೇ ಆ ಭಾಷಾ ಪ್ರಯೋಗ ನನ್ನಲ್ಲಿ ನಡೆದಿರುತ್ತದೆ. ಹೀಗೆ ವೈಚಾರಿಕ ನೆಲೆಯಿರಲಿ, ಭಾಷಾ ಪ್ರಯೋಗವಿರಲಿ, ಕಥಾಹಂದರವಿರಲಿ, ಪಾತ್ರ ಪ್ರಪಂಚವಿರಲಿ ಅವರ ಸಮ್ಮೋಹನಕ್ಕೆ ಒಳಗಾಗಿ ಬಿಟ್ಟಿರುತ್ತೇವೆ. ‘ಬೌದ್ಧಿಕ ಸಾಹಚರ್ಯ’ ಎನ್ನುವ ಪದವನ್ನು ನಾನು ಕಾಲೇಜಿನಲ್ಲಿದ್ದಾಗ ಮೊದಲ ಸಲ ಅವರ ಕಾದಂಬರಿಯಲ್ಲೋದಿ ರೋಮಾಂಚಿತಳಾಗಿದ್ದು ಈಗಲೂ ನೆನಪಿದೆ. ಹೀಗೆ ಸಂಪೂರ್ಣ ಭಿನ್ನವಾದ ಆಯಾಮಗಳನ್ನು ಒದಗಿಸುವುದೇ ಅವರ ಕಾದಂಬರಿಗಳ ವೈಶಿಷ್ಟ್ಯ. ಇನ್ನು ಅವರು ಸೃಷ್ಟಿಸಿದ ಪಾತ್ರ ಪ್ರಪಂಚ.. ಗೃಹ ಭಂಗದ ಪಾತ್ರ ವೈವಿಧ್ಯಗಳಂತೂ ಅನುಪಮ. ಸೌಮ್ಯತೆಯ ಸಂಕೇತವಾದ ನಂಜಮ್ಮ, ಬಾಯ್ ತೆರೆದರೆ ಸಾಕು ಬೈಗುಳಗಳನ್ನು ಉದುರಿಸುವ ಗಂಗಮ್ಮ, ಬೇಜವಾಬ್ದಾರಿಯ ಚೆನ್ನಿಗರಾಯ, ಉಡಾಫೆಯ ಅಪ್ಪಣ್ಣ, ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಅಯ್ಯನವರು.. ಹೀಗೆ ಮಾನವ ಪ್ರಪಂಚದ ಎಲ್ಲ ಮುಖಗಳು, ಎಲ್ಲ ಭಾವ ರಸಗಳು ಇಡಿ ಇಡಿಯಾಗಿ ದೊರಕುವಂತಹ ಅಪರೂಪದ ಕಾದಂಬರಿ. ಅವರು ಸೃಷ್ಟಿಸಿದ ಸ್ತ್ರೀ ಪಾತ್ರಗಳೂ ಅಷ್ಟೇ.. ಸಮಕಾಲೀನ ಸಾಮಾಜಿಕ ವ್ಯವಸ್ಥೆ ಮೌಲ್ಯಗಳ ವಿರುದ್ಧ ಸಿಡಿದೆದ್ದ ‘ದಾಟು’ವಿನ ಸತ್ಯ ಇರಲಿ, ‘ಸಾರ್ಥ’ದ ಚಂದ್ರಿಕೆ ಇರಲಿ , ಉತ್ತರ ಕಾಂಡದ ಸೀತೆ ಇರಲಿ ಅಥವಾ ಆವರಣದ ರಜಿಯಾ ಆಗಿರಲಿ ಇವರೆಲ್ಲ ವಿಭಿನ್ನವಾಗಿ ಚಿಂತಿಸಿ, ವಿಭಿನ್ನವಾಗಿ ಬಾಳಿ, ಕೊನೆಯಲ್ಲಿ ಸೋತಂತೆ ಕಂಡರೂ ಸೋಲಲ್ಲೂ ಗೆಲುವನ್ನು ಕಂಡಂತಹವರು. ಸ್ವಲ್ಪ ಕಣ್ತೆರೆದರೆ ಸಾಕು ನಮ್ಮಲ್ಲೇ ನಮ್ಮ ಸುತ್ತಮುತ್ತಲಲ್ಲೇ ಅಂಥ ಹತ್ತು ಹಲವಾರು ಪಾತ್ರಗಳ ಅನಾವರಣವಾಗುತ್ತದೆ. ನಾನು ಮನೆಯಲ್ಲಿ ಎಷ್ಟೋ ಸಲ ಯಾವುದೋ ಕೆಲಸದ ಬಗ್ಗೆ ಬೇಜವಾಬ್ದಾರಿ ತೋರುವ ನಮ್ಮ ಯಜಮಾನರಿಗೆ ‘ಚೆನ್ನಿಗರಾಯನಂಗ ಮಾಡಬ್ಯಾಡ’ ಅಂತಲೂ, ಮಕ್ಕಳ ಬಗ್ಗೆ ಗಮನಕೊಡದಿದ್ದಾಗ ‘ನೀ ಏನು ನಿರಾಕರಣದ ನರಹರಿನಾ?’ ಅಂತಲೂ ಮೂದಲಿಸುವಷ್ಟು ಜೀವಂತ ಆ ಪಾತ್ರಗಳು. ಯಾವುದೇ ವಿಷಯದ ಬಗ್ಗೆ ಕಾದಂಬರಿ ಬರೆಯಲಿ ಬರೆಯುವುದಕ್ಕಿಂತ ಮುಂಚಿನ ಅವರ ಅಧ್ಯಯನದ ಶಿಸ್ತು, ಅಚ್ಚುಕಟ್ಟು ತನಗಳು, ಆ ವಿಷಯದ ಬಗೆಗಿನ ನಿಷ್ಠೆ ಅವುಗಳ ರೀತಿಯೇ ಬೇರೆ. ಭೀಮ ಕಾಯದ ಕುಸ್ತಿ ಇರಲಿ, ಮಂದ್ರದ ಸಂಗೀತ ನಾಟ್ಯಗಳಿರಲಿ, ಸಾರ್ಥದ ಇತಿಹಾಸ -ಪುರಾಣ -ಮೂರ್ತಿ ಶಿಲ್ಪ- ವೇದಾಂತ- ನಾಟಕಗಳಿರಲಿ, ಯಾನದ ಸ್ಪೇಸ್ ಟೆಕ್ನಾಲಜಿ ಇರಲಿ ಎಲ್ಲವೂ ಪೂರ್ಣ.. ಪರಿಪೂರ್ಣ. ಹೀಗಾಗಿ ಅವರ ಕಾದಂಬರಿಗಳನ್ನು ಓದುವಲ್ಲಿ ಓದುಗರಾದ ನಾವೂ ಸ್ವಲ್ಪ ಮಟ್ಟಿಗಿನ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯವೇನೋ ? ಉದಾಹರಣೆಗೆ ಮಂದ್ರವನ್ನೇ ತೆಗೆದುಕೊಳ್ಳಿ. ಕೇವಲ ಸಾಹಿತ್ಯಸಕ್ತನಿಗಾಗಲಿ ಅಥವಾ ಕೇವಲ ಸಂಗೀತಗಾರನಿಗಾಗಲಿ ಸಂಪೂರ್ಣವಾಗಿ ದೊರಕದದು. ಸ್ವಲ್ಪ ಮಟ್ಟಿಗೆ ಎರಡರ ಜ್ಞಾನವಿದ್ದವನಿಗೆ ಅಷ್ಟೇ ದಕ್ಕಬಲ್ಲದು. ಇಲ್ಲದಿದ್ದರೆ ಹೆಣ್ಣಿನ ವ್ಯಾಮೋಹದ, ವಿಷಯ ಲಂಪಟ ಮೋಹನ ಲಾಲನನ್ನಲ್ಲದೇ ಬೇರೇನನ್ನೂ ನಾವು ಅದರಲ್ಲಿ ದಕ್ಕಿಸಿಕೊಳ್ಳಲಾರೆವು.
ಬರೀ ಪಾಣಿಪತ್ ಕದನ ರಕ್ಕಸತಂಗಡಗಿ ಕದನಗಳ ಇಸ್ವಿಗಳಿಗಷ್ಟೇ ಸೀಮಿತವಾಗಿದ್ದ ನಮ್ಮ ಇತಿಹಾಸದ ಜ್ಞಾನಕ್ಕೆ ಐತಿಹಾಸಿಕ ಪ್ರಜ್ಞೆಗಳನ್ನು ಅನಾವರಣಗೊಳಿಸಿದ್ದು,ಅವುಗಳಿಗೆ ಒಂದು ಹೊಸದಾದ ಆಯಾಮ ದೊರಕಿಸಿದ್ದೇ ಸಾರ್ಥ, ಆವರಣದಂತಹ ಐತಿಹಾಸಿಕ ನೆಲೆಯಲ್ಲಿರುವ ಅವರ ಕಾದಂಬರಿಗಳು. ಮೊದಲ ಸಲ ಸಾರ್ಥ ಓದಿದಾಗ ದಂಗಾಗಿ ಬಿಟ್ಟಿದ್ದೆ. ‘ಸಾರ್ಥ’ ಎಂದರೆ ಅಲ್ಲಿಂದಿಲ್ಲಿಗೆ ಸಂಚರಿಸುವ ವ್ಯಾಪಾರಿಗಳ ಗುಂಪು ಎಂದಷ್ಟೇ ಗೊತ್ತಿದ್ದ ನನಗೆ ಸಾರ್ಥದಲ್ಲಿ ಏನೆಲ್ಲಾ ಉಂಟು? ಬಡಗಿ,ಅಡುಗೆ ಮಾಡುವವನು, ಡೇರೆ ಹಾಕುವವನು, ವೈದ್ಯ, ಪಶುವೈದ್ಯ, ಕಮ್ಮಾರರು, ಜನ ಹಾಗೂ ಪದಾರ್ಥಗಳನ್ನು ಹೊರಲು ಆನೆ, ಕುದುರೆ, ಕತ್ತೆ ಗಳು, ಕುದುರೆ ಗಾಡಿಗಳು, ವಿದ್ಯಾರ್ಥಿಗಳು, ಪ್ರವಾಸಿಗಳು, ಸನ್ಯಾಸಿಗಳು, ಧರ್ಮ ಪ್ರಚಾರಕರು.. ಇಡಿಯ ಪ್ರಪಂಚದ ಒಂದು ಸಣ್ಣ ತುಂಡು - ಮಿನಿ ಪ್ರಪಂಚವೇ ಸಾರ್ಥದಲ್ಲಿರುತ್ತದೆ ಎಂದು ಓದಿದಾಗ ಅರೆ ಹೌದಲ್ಲ ಎನ್ನಿಸಿದ್ದುಂಟು. ಸಾರ್ಥ ನನ್ನ ಮೆಚ್ಚಿನ ಕಾದಂಬರಿ. ಅದರಲ್ಲೂ ಶಂಕರ, ಮಂಡನ ಮಿಶ್ರ, ಭಾರತಿ, ಕುಮಾರಿಲ ಭಟ್ಟ ಇತ್ಯಾದಿ ವೃತ್ತಾಂತಗಳು ಬಹಳವೇ ಇಷ್ಟ. 98 ರಲ್ಲಿ ಆ ಕಾದಂಬರಿ ಬಂದಾಗ ಕಸ್ತೂರಿಯಲ್ಲಿ ಕುಮಾರಿಲ ಭಟ್ಟರು ಪ್ರಾಯಶ್ಚಿತ್ತ ರೂಪವಾಗಿ ಹೊಟ್ಟಿನ ಬೆಂಕಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗದ ವಿವರಣೆ ಇತ್ತು ಪುಸ್ತಕ ಪರಿಚಯ ಕಾಲಮ್‌ನಲ್ಲಿ. ಸುಮಾರು ದಿನಗಳವರೆಗೆ ಸಂಕಟಪಟ್ಟಿದ್ದೆ ನಾನೇ ಆ ಹೊಟ್ಟಿನ ಶಾಖದಲ್ಲಿ ಬೆಂದಂತೆ. ನಾನಾಗ ಅಮ್ಮನ ಮನೆಯೆಂದು ಇಲ್ಕಲ್ ಬಳಿ ಹಳ್ಳಿಗೆ ಹೋಗಿದ್ದೆ. ಅಲ್ಲಿ ಇಲಕಲ್ಲಿನಲ್ಲಿ ಇದ್ದದ್ದೇ ಒಂದು ಬುಕ್ ಸ್ಟಾಲ್. ಬಸವರಾಜ್ ಬುಕ್ ಡಿಪೋ ಅಂತ. ಅವನ ಅಂಗಡಿಗೆ ಹೋಗಿ ಸಾರ್ಥ ಕೇಳಿದೆ . “ಅಕ್ಕೋರ, ಇಲ್ಲಿ ಯಾರು ಓದ್ತಾರ್ರಿ ಅವನ್ನೆಲ್ಲ? ಮತ್ತ ಭಾಳ ಬಿರಿ ಪುಸ್ತಕರೀ..ಮಾರಾಟ ಆಗಂಗಿಲ್ರಿ. ಅದಕ್ಕೇ ತರಸಂಗಿಲ್ರೀ” ಅಂದುಬಿಟ್ಟ. ಬಿಜಾಪುರಕ್ಕೆ ವಾಪಸ್ ಹೋಗಲು ಇನ್ನೂ ವಾರವಿತ್ತು. ವಾರಗಟ್ಟಲೆ ಅದನ್ನು ಓದದೇ ಇರುವುದು ಹೇಗೆ? ಅಂಗಡಿಯವನಿಗೆ ದುಂಬಾಲು ಬಿದ್ದು ಸ್ಪೀಡ್ ಪೋಸ್ಟ್ ನ ಎಕ್ಸ್ಟ್ರಾ ದುಡ್ಡು ಕೊಟ್ಟು ಆ ಪುಸ್ತಕವನ್ನು ತರಿಸಿಯಾಯಿತು. ಅಂಥ ಹಳ್ಳಿಯಲ್ಲಿ ರಾತ್ರಿಯೆಲ್ಲ ಕರೆಂಟ್ ಇರುತ್ತಿರಲಿಲ್ಲ. ಚಿಮಣಿ, ಕಂದೀಲುಗಳ ಬೆಳಕಲ್ಲಿ ಎರಡು ರಾತ್ರಿ ಹಗಲುಗಳಲ್ಲಿ ಅದನ್ನ ಗಬಾ ಗಬ ಓದಿಯಾಯಿತು. ಹೀಗೆ ಬೆಂಬಿಡದೆ ಕಾಡಿ ಓದಿಸಿಕೊಳ್ಳುವ ತಾಕತ್ತು ಬರೀ ಭೈರಪ್ಪನವರ ಪುಸ್ತಕಗಳಿಗೆ ಮಾತ್ರ. ಸಾರ್ಥ ಹಿಂದು - ಬೌದ್ಧ ಧರ್ಮಗಳ ಸಂಘರ್ಷದ ಕಾಲಘಟ್ಟದ ಕಥೆ ಹೇಳಿದರೆ ಆವರಣ ಹಿಂದೂ - ಮುಸ್ಲಿಂ ಕಾಲಘಟ್ಟದ ಕಥೆ ಹೇಳುತ್ತದೆ ಹಂಪಿಯ , ಕಾಶಿಯ ವಿಶ್ವನಾಥನನ್ನು ಜೊತೆ ಜೊತೆಯಾಗಿ ಕಣ್ಣೆದುರಿಗೆ ತಂದುಬಿಡುತ್ತಾರೆ ಭೈರಪ್ಪ ಇದರಲ್ಲಿ. ಭೀಭತ್ಸರಸವನ್ನು ಓದಿಯೂ ಅನುಭವಿಸಬಹುದು ಎನ್ನುವುದು ಅರ್ಥವಾದದ್ದೇ ಆವರಣದ ಕೆಲವೊಂದು ವಿವರಗಳನ್ನು ಓದುವಾಗ. ಅದರ ಮುನ್ನುಡಿಯಲ್ಲಿ ಅವರು “ಸತ್ಯಶೋಧನೆಯಲ್ಲಿ ಓದುಗನು ಲೇಖಕನಷ್ಟೇ ಪಾಲುದಾರ ಪಾತ್ರಗಳನ್ನಾಗಲಿ ಸನ್ನಿವೇಶಗಳನ್ನಾಗಲಿ ಸತ್ಯದ, ಕಲಾ ಸತ್ಯದ ವಸ್ತು ನಿಷ್ಠೆಯಿಂದ ಗ್ರಹಿಸಿ ಅವುಗಳ ಭಾವವನ್ನು ಆಸ್ವಾದಿಸಬೇಕೇ ಹೊರತು ವೈಯಕ್ತಿಕ ರಾಗ ದ್ವೇಷಗಳಿಂದ ಉದ್ರೇಕಗೊಳ್ಳಬಾರದು ಎಂದು ಹೇಳಿರುವುದು ಅಕ್ಷರ ಸತ್ಯ. ಅದರಲ್ಲಿ ಶಕ್ತಿಯೇ ಧರ್ಮ,ಶಕ್ತ ವಲ್ಲದ್ದು ಧರ್ಮ ಹೇಗಾದೀತು ಎಂಬ ತರ್ಕ ಸ್ಫುಟವಾಯಿತು ಅನ್ನುವ ಮಾತೊಂದು ಬರುತ್ತದೆ ಯಾವಾಗಲೂ ಇದುವೇ ಐತಿಹಾಸಿಕ ಸತ್ಯವೇನೋ ಅನಿಸುತ್ತದೆ ಶಕ್ತವಾದದ್ದು ದುರ್ಬಲವಾದದನ್ನು ತನ್ನೊಳಗೆ ಎಳೆದುಕೊಂಡು ಬಿಟ್ಟಿದೆ ಅಂತ. ಡಾರ್ವಿನ್ ನ ವಿಕಾಸವಾದ ನೆನಪಾಗುತ್ತದೆ. “ ಒಳಗಿನದನ್ನೆಲ್ಲ ಸುರಿದುಕೊಂಡರೂ ನಮ್ಮನ್ನು ತಕ್ಕಡಿಗೆ ಹಾಕುವುದಿಲ್ಲವೆಂಬಂಥ ಒಬ್ಬ ಆತ್ಮೀಯ ಸ್ನೇಹಿತನಿದ್ದರೆ….ಎಲ್ಲ ಜೀವಿಗಳ ಹಂಬಲದ ಪ್ರತೀಕವೆನಿಸುತ್ತದೆ ಈ ಮಾತು. ನಾವೆಷ್ಟೇ ಹೋರಾಡಿದರೂ ನಾವು ನಮ್ಮ ಸಂಸ್ಕಾರದ ಅಡಿಯಾಳುಗಳು, ವ್ಯವಸ್ಥೆ ಯ ಒಂದು ಅಂಗಗಳಷ್ಟೇ ಎಂಬುದು ಲಕ್ಷ್ಮಿ ಮತ್ತು ಪ್ರೊಫೆಸರ್ ಪಾತ್ರಗಳು ಮಾಡುತ್ತವೆ. ಒಟ್ಟಿನಲ್ಲಿ ಭೈರಪ್ಪನವರ ಕೃತಿಗಳ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆ. ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗೆ ಹೋಲಿಕೆಯೇ ಇಲ್ಲ ನಿಜವಾದ ಲೇಖಕನಿಗೆ ಪ್ರಶಸ್ತಿ ಸನ್ಮಾನಗಳೆಲ್ಲ ಬರೀ ನಿಮಿತ್ತ. ಅವನ ಶ್ರಮ ಸಾರ್ಥಕವಾಗುವುದು ಅವನ ಕೃತಿಗಳನ್ನು ಓದುವ, ಅರ್ಥೈಸಿಕೊಳ್ಳುವ ಓದುಗರು ದೊರೆತಾಗ ಮಾತ್ರ. ಅಂತಹ ಅಗಣಿತ ಓದುಗರು ಭೈರಪ್ಪನವರಿಗಿದ್ದಾರೆಂಬುದು ನಿರ್ವಿವಾದ. ಕನ್ನಡ ಸಾಹಿತ್ಯ ಲೋಕದಲ್ಲಿ ಅವರು ಪಡೆದ ವಿಶಿಷ್ಟವಾದ ಸ್ಥಾನಮಾನಕ್ಕೆ ಪರ್ಯಾಯ ಎನ್ನುವುದಿಲ್ಲ.