ಪ್ರಿಯ ಓದುಗರೆ
ಅನಿವಾಸಿಯ ಕಟ್ಟೆಯಲ್ಲಿ ಮತ್ತೊಮ್ಮೆ ಹರಟೆಯನ್ನು ಹೊಡೆಯುವ ಪ್ರಯತ್ನವನ್ನು ಮಾಡಿರುವೆ . ಕಟ್ಟೆ ಹಳೆಯದಾದರೇನು
ಹರಟೆಯ ವಿಷಯ ಮಾತ್ರ ಹೊಸದು . ರುಚಿಯಾದ ಊಟ , ಮಲಗಲು ಒಂದು ಹಾಸಿಗೆ , ಸವಿಯಾದ ನಿದ್ದೆ ಇದ್ದರೆ ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ - ಎಂದು ಸರ್ವಜ್ಞನು ಹೇಳಿರಬಹುದಾಗಿತ್ತೇನೋ ? ಇವು ಮೂರು ಯಾರಿಗೆ ಇಷ್ಟವಿಲ್ಲ? ಅದರಲ್ಲೂ
ಸವಿಯಾದ ನಿದ್ದೆಯಲ್ಲಿ ಸವಿಗನಸು ಕಾಣುವ ಮಜಾನೆ ಬೇರೆ . ನಿದ್ದೆಯ ಕುರಿತು ನನ್ನ ಪ್ರಾಥಮಿಕ ಶಾಲೆಯಿಂದ ಇಲ್ಲಿಯವರೆಗಿನ
ಅನುಭವಗಳು ವಿಶಿಷ್ಟವಾಗಿದ್ದು , ಆ ಘಟನೆಗಳ ನೆನಪುಗಳನ್ನು ಆಗಾಗ್ಗೆ ಮೆಲಕಿಸಿಕೊಂಡು , ನನ್ನಷ್ಟಕ್ಕೆ ನಾನೇ ಎಷ್ಟೋ ಸಲ
ನಕ್ಕಿದ್ದುಂಟು . ಆ ಮೆಲಕುಗಳನ್ನು ಹರಟೆಯ ರೂಪದಲ್ಲಿ ನಿಮ್ಮ ಮುಂದೆ ಇಡಲು ಪ್ರಯತ್ನಿಸಿರುವೆ .ಬನ್ನಿ ಸಾಧ್ಯವಾದರೆ ಓದಿ ,
ಹಾಗೆಯೇ ನಿಮ್ಮ ಅನಿಸಿಕೆಯನ್ನು ಗೀಚಲು ಮರೆಯದಿರಿ . ---- ಇಂತಿ ನಿಮ್ಮ ಸಂಪಾದಕ
“ಹೊಟ್ಟೆ ತುಂಬ ಊಟ ಮಾಡು , ಕಣ್ಣು ತುಂಬಾ ನಿದ್ದೆ ಮಾಡು ಆಯುಷ್ಯ ಘಟ್ಟಿಯಾಗುತ್ತೆ “ಎಂದು ವೈದ್ಯರು ಮತ್ತು ಹಿರಿಯರು
ಉಪದೇಶ ಮಾಡುವದು ಹೊಸದೇನು ಅಲ್ಲ . ಸರಿಯಾದ ಊಟ ಮತ್ತು ನಿದ್ದೆ ಉತ್ತಮ ಆರೋಗ್ಯಕ್ಕೆ ಮೂಲ ಮಂತ್ರ .ಆದರೆ
ಅವರವರ ಭಾವಕ್ಕೆ — ಅವರವರ ಮನಸಿಗೆ ತಕ್ಕಂತೆ , ಇದಕ್ಕೆ ತಮ್ಮದೇ ಆದ ಅರ್ಥವನ್ನು ಹುಡಿಕಿಕೊಂಡವರಿಗೆ ಏನೂ
ಕೊರತೆಯಿಲ್ಲ . ಕೆಲವರು ಬದುಕುವದಕ್ಕಾಗಿ ತಿನ್ನುವವರಿದ್ದರೆ ಇನ್ನು ಕೆಲವರು ತಿನ್ನುವದಕ್ಕಾಗಿಯೇ ಬದುಕುವದುಂಟು .
ಪರ್ಯಾಯವಾಗಿ ಕೆಲವರು ಬದಕುವದಕ್ಕಾಗಿ ನಿದ್ದೆ ಮಾಡಿದರೆ ಇನ್ನೂ ಕೆಲವರು ನಿದ್ದೆ ಮಾಡುವದಕ್ಕೆಂದೇ ಬದುಕುವದುಂಟು .
ಊಟ ಮಾಡುವ ಪರಿಯಲ್ಲಿ ಎಷ್ಟೊಂದು ವೈವಿಧ್ಯತೆ ಇದೆಯೋ ಹಾಗೆಯೇ ನಿದ್ದೆ ಮಾಡುವ ರೀತಿಯಲ್ಲೂ ವಿಭಿನ್ನ ವಿವಿಧತೆ ಉಂಟು .
ಮಲಗಿ ನಿದ್ದೆ ಮಾಡುವದು ಸಹಜವಾದರೂ , ಕೆಲವರು ಕುಳಿತಲ್ಲಿಯೇ ನಿದ್ದೆ ಮಾಡಿ ಖುಷಿ ಪಡುವದುಂಟು . ಇಷ್ಟೇ ಸಾಲದೆಂದು
ಇನ್ನು ಕೆಲವರು ನಿಂತು ನಿದ್ದೆ ಮಾಡಿದರೆ , ಕೆಲವರಂತೂ ಅಡ್ಡಾಡಿಕೊಂಡೇ ನಿದ್ದೆ ಮಾಡಿ ತಾವು ಎಲ್ಲರಿಗಿಂತಲೂ ವಿಭಿನ್ನವೆಂದು ತೋರಿಸುವದುಂಟು . ಒಟ್ಟಿನಲ್ಲಿ ನಾದಮಯಾ — ಅಲ್ಲಲ್ಲ ಕ್ಷಮಿಸಿ , ನಿದ್ದೆಮಯಾ —– ಈ ಲೋಕವೆಲ್ಲಾ .
ಅಚ್ಚು ಕಟ್ಟಾದ ಹಾಸಿಗೆಯ ಮೇಲೆ ತಮಗೆ ಅನುಕೂಲವಾದ ಭಂಗಿಯಲ್ಲಿ ಎಂದರೆ – ಅಡ್ಡಬಿದ್ದು , ಡಬ್ಬು ಬಿದ್ದು , ಚಿತ್ತ ಬಿದ್ದು
ಮಲಗುವವರು ಸಹಜವಾಗಿ ಸಿಗುತ್ತಾರೆ . ‘ಅಚ್ಚು ಕಟ್ಟಾದ ಹಾಸಿಗೆ’ ಯ ಪದವನ್ನು ಅವರವರ ಭಾವನೆಯಂತೆ
ಅರ್ಥೈಯ್ಯಿಸಬಹುದು . ಬಡವರಿಗೆ ನೆಲದ ಮೇಲಿನ ಚಾಪೆಯೇ ಅಚ್ಚು ಕಟ್ಟಾದರೆ , ಬಲ್ಲಿದರಿಗೆ ಅಲಂಕೃತ ಮಂಚ ಅಚ್ಚು
ಕಟ್ಟಾಗಬಹುದು . ದುರದೃಷ್ಟವಶಾತ್ ಕೆಲವು ಬಲ್ಲಿದರಿಗೆ ಮಂಚ ಇದ್ದರೂ ಬೊಜ್ಜಿನ ಬಾಧೆಯಿಂದಲೋ , ಸೊಂಟದ
ನೋವಿನಿಂದಲೋ ಚಾಪೆಯೇ ಗತಿಯಾಗುವದು ಬೇರೆ ವಿಷಯ ಬಿಡಿ . “ಹಲ್ಲಿದ್ದರೆ ಕಡಲೆ ಇಲ್ಲ , ಕಡಲೆಯಿದ್ದರೆ ಹಲ್ಲಿಲ್ಲ”
ಎಂಬುವದು ನಿಜ ತಾನೇ ?
ಕೆಲವರು ನಿಶ್ಚಿಂತೆಯಿಂದ ಶಾಂತವಾಗಿ ಮಲಗಿದರೆ ಇನ್ನೂ ಕೆಲವರು ಘೋರವಾದ ಗೊರಕೆಯನ್ನು ಹೊಡೆದು ಅಕ್ಕ ಪಕ್ಕದವರ ,
ಅಷ್ಟೇ ಏಕೆ ಮನೆ ಮಂದಿಯ ನಿದ್ದೆಯನ್ನೆಲ್ಲಾ ಹಾಳು ಮಾಡಿ ಸುಖ ಪಡುವದೂ ಉಂಟು . ಪತಿರಾಯನ ಗೊರಕೆಯ ಕಾಟವನ್ನು
ತಾಳದೆ , ಗೊರಕೆಯನ್ನು ತಡೆಯುವ ಎಲ್ಲ ಉಪಾಯಗಳು ವಿಫಲವಾದಾಗ , ‘ ಸಾಕಪ್ಪಾ ಈ ಮಹಾರಾಯಣ ಸಹವಾಸವೆಂದು
‘ವಿವಾಹ ವಿಚ್ಛೇದನೆಗೆ ಮೊರೆ ಹೋದ ಹೆಂಗಳೆಯರಿಗೇನೂ ಕಡಿಮೆಯಿಲ್ಲ .
ಮಲಗಿ ನಿದ್ದೆ ಮಾಡುವವರದು ಈ ಕಥೆಯಾದರೆ ಇನ್ನು ಕುಳಿತು ನಿದ್ದೆ ಮಾಡುವವರ ವಿಷಯವೇ ಬೇರೆ ಬಿಡಿ . ನಾನು ನಮ್ಮ ಹಳ್ಳಿಯ ಪ್ರಾಥಮಿಕ ಶಾಲೆಯ ಮೂರನೆಯ ಕ್ಲಾಸಿನಲ್ಲಿ ಓದುವಾಗ ‘ಮೂಲಿಮನಿ ‘ ಮಾಸ್ತರರು ಅಂತ ಇದ್ದರು (ಈಗಲೂ ಇದ್ದಾರೆ ). ಅಂಕಿ ಮಗ್ಗಿಯನ್ನೇನೋ ಚನ್ನಾಗಿ ಹೇಳಿಕೊಡುತ್ತಿದ್ದರು ಎನ್ನಿ ! ಆದರೆ , ಅಷ್ಟೇ ಚನ್ನಾಗಿ ತರಗತಿಯಲ್ಲಿ ನಿದ್ದೆಯನ್ನೂ ಹೊಡೆಯುತ್ತಿದ್ದರು ಎಂಬುವದು ವಿಶೇಷ ವಿಷಯ . ಅರ್ಧ ಘಂಟೆಯವರೆಗೂಒಂದರಿಂದ ಇಪ್ಪತ್ತರವರೆಗಿನ ಮಗ್ಗಿಗಳನ್ನು ನಮ್ಮೆಲ್ಲರ ಬಾಯಿಯಿಂದ ಸರತಿಯ ಮೇಲೆ ಒದರಿಸಿ , ಕೊನೆಯ ಹುಡುಗ ಇಪ್ಪತ್ತಇಪ್ಪತ್ತಲೇ ನಾಕನೂರೋ —- ಅಂತ ಮುಗಿಸುವದರೊಳಗೆನೇ ನಿದ್ದೆ ಹೋಗಿ ಬಿಡುತ್ತಿದ್ದರು . ಹಳ್ಳಿಯ ಶಾಲೆಗಳಲ್ಲಿ ಮಕ್ಕಳು ಮಗ್ಗಿಯನ್ನು ಹೇಳುವ ಪರಿ ರಾಗ ಹಚ್ಚಿ ಹಾಡು ಹೇಳಿದಂತೆ ಇರುತಿತ್ತು ( ಈಗ ಹೇಗಿದೆ ಎಂದು ಗೊತ್ತಿಲ್ಲ) . ಅದರ ಇಂಪಿಗೆನೇ ಇವರಿಗೆ ನಿದ್ದೆ ಬರುತಿತ್ತೇನೋ ? ಎಂಬುದು ನನ್ನ ಈಗಿನ ಒಂದು ಅನುಮಾನಿತ ಶಂಕೆ . ಮೂಲಿಮನಿ ಮಾಸ್ತರರು ಕುರ್ಚಿಯ ಮೇಲೆ ಕಾಲು ಮುದುರಿಸಿಕೊಂಡು ಕುಳಿತು ನಿದ್ದೆ ಹೊಡೆಯಲು ಪ್ರಾರಂಭಿಸಿದರೆ ಲಂಗು ಲಗಾಮು ಇಲ್ಲದ ನಮಗೆಲ್ಲಾ ಖುಷಿಯೋ ಖುಷಿ . ನಮ್ಮೆಲ್ಲರ ಗುದ್ದಾಟ , ಕಿರುಚಾಟ , ಪರಚಾಟ , ಜಗಳಾಟ ಮತ್ತು ಅಳಲಾಟ ಕುರುಕ್ಷೇತ್ರದ ಯುದ್ಧಕ್ಕಿಂತಲೂ ಭಯಂಕರವಾಗಿರುತಿತ್ತು . ಆದರೂ ಇದರ ಕಿಂಚಿತ್ತೂ ಪರಿವೆ ಇಲ್ಲದೆ ಮಾಸ್ತರರ ನಿದ್ದೆ ಮುಂದುವರೆಯುತ್ತಿತ್ತು .ಕುಂಭಕರ್ಣನನ್ನು ಎಬ್ಬಿಸಲು ಅವನ ಪ್ರಜೆಗಳೆಷ್ಟು ಹರಸಾಹಸ ಮಾಡುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯವೇ , ಆದರೆ ನಾವೆಲ್ಲಾ ಅವರೆಲ್ಲರಿಗಿಂತ ಬಹಳೇ ಮೇಲು ಇದ್ದಿದ್ದೀವಿ ಎನ್ನಿ . ನಮ್ಮ ನಿರಂತರ ಗಲಾಟೆಯಿಂದ ಒಂದರ್ಧ ಘಂಟೆಯಲ್ಲಿ ಮಾಸ್ತರರನ್ನು ಎಬ್ಬಿಸುವಲ್ಲಿ ಸಫಲವಾಗುತಿದ್ದೆವು ಎಂಬುದು ಹೆಮ್ಮೆಯ ವಿಷಯ . ನಿದ್ದೆಯಿಂದ ಎದ್ದ ಮಾಸ್ತರರು ಟೇಬಲ್ ಮೇಲೆ ಇರುತ್ತಿದ್ದ ಬಡಿಗೆಯನ್ನೊಮ್ಮೆ ಕುಟ್ಟಿ ಮತ್ತೆ ಮಗ್ಗಿಯ ಸರದಿಗೆ ಹೋಗುತ್ತಿದ್ದರು. ಕಳೆದ ಸಲ ನಮ್ಮೂರಿಗೆ ಹೋದಾಗ ಮಾಸ್ತರರನ್ನು ಮಾತಾಡಿಸಿಕೊಂಡು ಬರೋಣವೆಂದು ಅವರ ಮನೆಗೆ ಹೋಗಿದ್ದೆ . ಕುಶಲೋಪಹಾರಿ ಮಾತುಗಳೆಲ್ಲ ಮುಗಿದ ಮೇಲೆ ಅವರೆಂದರು. ” ಯಾಕೋ ಶಂಕ್ರಪ್ಪ , ನಿದ್ದೀನ ಬರವಲ್ಲದು ಯಾವುದಾದ್ರೂ ಗುಳಿಗಿಯಿದ್ದರ ಬರದಕೊಡ್ ” ಎಂದು .
ಅದಕ್ಕೆ ತಕ್ಷಣವೇ ನಾನಂದೆ ” ಗುರುಗೋಳ್ ಸಾಲ್ಯಾಗ ಇದ್ದಾಗ್ನ ನಿಮ್ಮ ಜನ್ಮ ಪೂರ್ತಿಯ ನಿದ್ದಿ ಮಾಡಿ ಮುಗಿಸಿ ಬಿಟ್ಟಿರಿ ಈಗ ಹ್ಯಾಂಗ್ ನಿದ್ದಿ ಬರಬೇಕು ?” ಎಂದು . ‘ ನಿನ್ನ ಕುಚೇಷ್ಟೆಯನ್ನು ಇನ್ನೂ ಬಿಟ್ಟಿಲ್ಲವೆಂದು’ ಬೈದುಕೊಂಡು ಹೋಗಿಬಿಟ್ಟರು .
ಇನ್ನು ಪ್ರಾಥಮಿಕ ಸಾಲಿ ಮುಗಿಸಿ ಮಾಧ್ಯಮಿಕ ಸಾಲಿಗೆ ಅಂತ ಬೈಲಹೊಂಗಲಕ್ಕೆ ಬಂದಾಗ ‘ಉಳ್ಳಾಗಡ್ಡಿ ‘ಅಂತ ಇಂಗ್ಲಿಷ್
ಮಾಸ್ತರರು ಸಿಕ್ಕಿದ್ದರು . ಅವರು ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿರಲಿಲ್ಲ ಬದಲು ಸ್ಟಾಫ್ ರೂಮಿನಲ್ಲಿ ಕುಳಿತು ಗಡದ್ದಾಗಿ ನಿದ್ದೆ
ಹೊಡೆಯುತ್ತಿದ್ದರು . ಸುಮಾರು ಸಲ ಅವರಿಗೆ ಕ್ಲಾಸ್ ಇದ್ದದ್ದೇ ಗೊತ್ತಿರುತ್ತಿರಲಿಲ್ಲ . ನಾವೇ ಹೋಗಿ ಸೂಕ್ಷ್ಮ ಪ್ರಯತ್ನ ಮಾಡಿ
ಎಬ್ಬಿಸಿಕೊಂಡು ಬರುತ್ತಿದ್ದೆವು . ಕಣ್ಣು ತಿಕ್ಕುತ್ತಾ ಬಂದರೂ , ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡಿ ಮಸ್ತ ಕ್ಲಾಸ್
ತೆಗೆದುಕೊಳ್ಳುತ್ತಿದ್ದರು . ಪಾಠ ಮುಗಿದ ಮೇಲೆ ನಮ್ಮನ್ನು ಕುರಿತು “ನಿಮಗೆಲ್ಲಾ ವಿದ್ಯೆಯೇ ಜೀವನದ ಹೆಗ್ಗುರಿಯಾಗಬೇಕು ” ಎಂದು
ಜೋರಾಗಿ ಹೇಳುತ್ತಿದ್ದರೆ , ಕಡೆಯ ಬೆಂಚಿನಲ್ಲಿ ಕುಳಿತ ಕಿಡಗೇಡಿಗಳು. ” ಸಾರ್ , ನಿದ್ದೆಯೇ ಜೀವನದ ಹೆಗ್ಗುರಿಯಾಗಬೇಕೆಂದು ” ಇನ್ನಷ್ಟು ಜೋರಾಗಿ ಕೂಗುತ್ತಿದ್ದರು .
ಇದೇನು ಬರೀ ಗುರುಗಳ ಬಗ್ಗೆ ಇಷ್ಟೊಂದು ಬರೆಯುತ್ತಿದ್ದೀನಿ ಅಂತ ಬೇಜಾರು ಮಾಡಿಕೊಳ್ಳಬೇಡಿ . ಶಿಷ್ಯರೂ ಯಾವುದರಲ್ಲು
ಕಡಿಮೆ ಇಲ್ಲ . ‘ ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ‘ ಅಂತ ದಾಸರು ಹೇಳಿಲ್ಲವೆ ? , ‘ಶಿಷ್ಯನು ಗುರುವನ್ನು
ಮೀರಿಸಬೇಕೆಂದು’ ಎಷ್ಟೋ ಕಥೆಗಳಲ್ಲಿ ಸಾರಿಲ್ಲವೆ ? ಇದನ್ನು ಕಾಯಾ , ವಾಚಾ , ಮನಸಾ ಅಂತ ಪೂರೈಸುವ ಶಿಷ್ಯರ
ಗುಂಪೂ ಬಹಳ ದೊಡ್ಡದುಂಟು .ಎಲ್ಲ ಕಾಲೇಜುಗಳ ಕೊಠಡಿಯ ಕೊನೆಯ ಬೆಂಚಿನಲ್ಲಿ ಈ ಗುಂಪು ಸಹಜವಾಗಿ ಸಿಗುವದುಂಟು .
ನಾನೂ ಒಬ್ಬ ಆ ಗುಂಪಿನ ಸದಸ್ಯನೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ( ನಿಜವಾಗಿಯೂ ?). ಕರ್ನಾಟಕ ಕಾಲೇಜಿನಲ್ಲಿ ಪಿ
ಯು ಸಿ ಓದುತ್ತಿರುವಾಗಿನ ಸಂದರ್ಭ . ಲಿಬರಲ್ ಹಾಸ್ಟೆಲಿನಲ್ಲಿದ್ದ ನಾವು ಎಂಟು ಜನ ಹುಡುಗರು ಬೆಳಿಗ್ಗೆ ಒಂಭತ್ತೂವರೆಗೆ ,
ಮೆಸ್ಸಿನಲ್ಲಿ ಹೊಟ್ಟೆತುಂಬ ತಿಂದು ಹತ್ತು ಘಂಟೆಗೆ ಕಾಲೇಜಿಗೆ ಹೋಗುತ್ತಿದ್ದೆವು . ಮೊದಲನೆಯದು ಇಂಗ್ಲಿಷ್ ಕ್ಲಾಸು . ಪ್ರೊಫೆಸರ್
ಮುಳಗುಂದ ಅವರು ‘ಚಾರ್ಲ್ಸ್ ಡಿಕ್ಷನ್ನ ‘ನ ‘ Great expectations’ ಕಾದಂಬರಿಯನ್ನು ಭಾವಪೂರ್ವಕವಾಗಿ ಚಿತ್ರಿಸುತ್ತಿದ್ದರೆ ,ಕೊನೆಯ ಬೆಂಚಿನಲ್ಲಿ ಕುಳಿತ ನಾವು ನಿದ್ರಾಲೋಕದಲ್ಲಿ ಮುಳುಗಿ ನಮ್ಮದೇ ಆದ ಹಗಲು ಕನಸು ಕಾಣುತ್ತಿದ್ದೆವು . ಕೊನೆಗೊಂದು
ದಿನ ಪ್ರೊಫೆಸ್ಸರ್ ನಮ್ಮನ್ನೆಲ್ಲ ತಮ್ಮ ಕಚೇರಿಗೆ ಕರೆದು ” ನೀವು ನಿದ್ದೆ ಮಾಡದೆ ನನ್ನ ಪಾಠವನ್ನು ಕೇಳುತ್ತೀರಿ ಎಂಬುದೇ ನನ್ನ
great expectations ಎಂದು ಛಿ ಮಾರಿ ಹಾಕಿ ಕಳುಹಿಸಿದ್ದರು .
‘ ತಿಂದ ತಕ್ಷಣವೇ ನಿದ್ದೆ ‘ ಎಂದಾಗ ನನ್ನ ಸ್ನಾತಕೋತರ ಪದವಿಯ ಗೆಳೆಯನೊಬ್ಬನದು ನೆನಪಾಯಿತು ನೋಡಿ . ನಾವು
ತರಬೇತಿಯಲ್ಲಿ ಇದ್ದಾಗ ಮಧ್ಯಾಹ್ನದಲ್ಲಿ ಊಟಕ್ಕೆಂದು ಅಬ್ಬಬ್ಬಾ ಎಂದರೆ ಅರ್ಧ ಘಂಟೆ ಸಮಯವಿರುತ್ತಿತ್ತು , ಸುಮಾರು ಐದು
ನಿಮಿಷಿನಲ್ಲಿ ಗಬಗಬನೆ ತಿಂದು , ಮಿಕ್ಕಿದ ಇಪ್ಪತ್ತು ನಿಮಿಷ ಅವನು ಎಲ್ಲೋ ಮಾಯವಾಗಿ ಬಿಡುತ್ತಿದ್ದ . ಕುತೂಹಲಕ್ಕೆಂದು
ಅವನನ್ನು ಹಿಂಬಾಲಿಸಿದಾಗ ಗೊತ್ತಾಗಿತ್ತು – ಅವನು ಪಕ್ಕದ ಕೋಣೆಯೊಂದರಲ್ಲಿ ಕುಳಿತು ಸಣ್ಣ ನಿದ್ದೆ ಮಾಡಿ ಬರುತ್ತಿದ್ದ .
ಇವರೇನೂ ಅಪರೂಪವಲ್ಲ ಬಿಡಿ , ಎಲ್ಲೆಲ್ಲೋ ಕಾಣಿಸುವವರೆ . ಇದನ್ನೇ ಇಂಗ್ಲೀಷಿನಲ್ಲಿ ಸ್ಟೈಲಿಶ್ ಆಗಿ ‘ ನ್ಯಾಪ್ ‘ ಅಂತ ಕರೆಯುವದುಂಟು ತಾನೆ ? ಪಾಪ ! ಹೊಟ್ಟೆಯ ತಪ್ಪೋ ಅಥವಾ ನಿದ್ಧೆಯ ತಪ್ಪೋ ಒಂದೂ ಗೊತ್ತಿಲ್ಲ .
ಇನ್ನು , ನಿಂತು ನಿದ್ದೆ ಮಾಡುವವರನ್ನು ನೀವು ಕಂಡಿರದೆ ಇರಬಹುದು . ಇಂಥವರು ಭರ್ಜರಿಯಾಗಿ ತುಂಬಿದ ಬಸ್ಸುಗಳಲ್ಲಿ
ಸಹಜವಾಗಿ ಸಿಗುವದುಂಟು . ನಮ್ಮೂರಿನಿಂದ ಪಟ್ಟಣಕ್ಕೆ ಸಂತೆಯ ದಿನದಂದು ಹೋಗುವ ಬಸ್ಸು ಯಾವಾಗಲೂ ಕಿಕ್ಕಿರಿದು ತುಂಬಿರುತ್ತಿತ್ತು . ನಮ್ಮ ಕಟುಕರ ಕಮಾಲಸಾಬನು ಖಾಯಮ್ ಪ್ರಯಾಣಿಕನಾಗಿದ್ದರೂ , ಧಡೂತಿ ಶರೀರವಿರುವದರಿಂದ ಬೇಗನೆ ಬಸ್ಸಿನಲ್ಲಿ ನುಗ್ಗಲಾರದೆ ಯಾವಾಗಲೂ ಕುಳಿತುಕೊಳ್ಳಲು ಸೀಟು ಸಿಗಲಾರದೆ ಒದ್ದಾಡುತ್ತಿದ್ದನು . ಪಾಪ !! ರಾತ್ರಿಯಲ್ಲ ಏನು
ಮಾಡಿರುತ್ತಿದ್ದನೋ ಕಾಣೆ , ಆದರೆ ಬಸ್ಸಿನಲ್ಲಿ ಏರಿದ ಮೇಲೆ ಮಾತ್ರ ನಿಂತುಕೊಂಡೆ ನಿದ್ದೆ ಹೊಡೆಯಲು ಪ್ರಾರಂಭಿಸುತ್ತಿದ್ದನು.
ತೂಗಾಡಿಕೆಯಲ್ಲಿ ಅವನ ಶರೀರದ ಮುಕ್ಕಾಲು ಭಾರ ಸೀಟಿನಲ್ಲಿ ಕುಳಿತವರ ಮೇಲೆ ಬೀಳುತ್ತಿತ್ತು . ಇವನ ಕಾಟವನ್ನು
ತಾಳಲಾರದೆ , ಬೈಯ್ಯಲೂ ಮನಸಿರಲಾರದೆ , ಕುಳಿತವರೆ ಎದ್ದು ಇವನಿಗೆ ತಮ್ಮ ಸೀಟು ಕೊಟ್ಟು ಕೃತಾರ್ಥರಾಗುತ್ತಿದ್ದರು .
ಅಂತು ಇಂತು ಕೊನೆಗೂ ಸೀಟು ಗಿಟ್ಟಿಸುತ್ತಿದ್ದ ಎನ್ನಿ .
ಇವರದೆಲ್ಲಾ ಒಂದು ಪಂಗಡವಾದರೆ ಇನ್ನೊಂದನ್ನು ವಿಭಿನ್ನ ಪಂಗಡವೆಂದೇ ಪರಿಗಣಿಸಬಹುದು , ಅದುವೇ ನಡೆದಾಡಿಕೊಂಡು
ನಿದ್ದೆ ಮಾಡುವವರ ಅಥವಾ ನಿದ್ದೆಯಲ್ಲಿ ನಡೆದಾಡುವವರ ಪಂಗಡ . ಈ ಪಂಗಡದ ಸದಸ್ಯರನ್ನು ಸ್ವತಃ ನೋಡಿರುವವರಕ್ಕಿಂತಲೂ ಅವರ ಬಗ್ಗೆ ಓದಿದವರೆ ಹೆಚ್ಚು ಇರಬಹುದು ಎಂಬುವದು ನನ್ನ ಅನಿಸಿಕೆ .
ನಾನು ಕೆಎಂಸಿ ಯಲ್ಲಿ ಕಲಿಯುತ್ತಿದ್ದಾಗ , ನನ್ನ ಖಾಸಾ ದೋಸ್ತ ‘ಮಂಜು’ ಹುಬ್ಬಳ್ಳಿಯ ಬಿ ವ್ಹಿ ಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್
ಓದುತ್ತಿದ್ದ . ಅವನು ನಿದ್ದೆಯಲ್ಲಿ ಅಡ್ಡಾಡುತ್ತಿದ್ದಾನೆ ಎಂದು ಹೆದರಿಕೊಂಡು ಅವನ ರೂಮ್ಮೇಟ್ ಕೊಠಡಿಯನ್ನು ಬದಲಿಸಿದ್ದು ತಿಳಿದು ನನಗೆ ಬೇಜಾರವು ಹಾಗೆಯೇ ಕುತೂಹಲವೂ ಆಗಿತ್ತು . ಅದೊಂದು ದಿನ ನೋಡಿಯೇ ಬಿಡೋಣವೆಂದು ನಿರ್ಧರಿಸಿ ,
ಧೈರ್ಯತುಂಬಿಕೊಂಡು ಅವನ ಕೊಠಡಿಯಲ್ಲಿ ಮಲಗಲು ಹೋಗಿದ್ದೆ . ವಿಷಯ ನನ್ನ ಬೇರೆ ದೋಸ್ತಗಳಿಗೆ ಗೊತ್ತಾಗಿ ” ಲೇ ಸುಮ್ಮ್ನ
ವಾಪಸ್ ಹೋಗಿ ಬಿಡು , ಇಲ್ಲಂದ್ರ ನಡು ರಾತ್ರ್ಯಾಗ ಓಡಿ ಹೋಗತಿ ನೋಡ್ ಮಗನ ” ಅಂತ ಬೆದರಿಕೆಯ ಮಾತುಗಳನ್ನು
ಆಡಿದ್ದರು . ಆದರೂ ಅವರ ಮಾತುಗಳಿಗೆ ಬೆಲೆ ಕೊಡದೆ ಅವನ ಕೊಠಡಿಯಲ್ಲಿ ಮಲಗುವ ಸಾಹಸವನ್ನು ಮಾಡಿ ಬಿಟ್ಟಿದ್ದೆ . ಗಾಢ ನಿದ್ದೆಯಲ್ಲಿದ್ದ ಮಂಜು , ನಡು ರಾತ್ರಿಯಲ್ಲಿ ಕೋಣೆಯ ಬಾಗಿಲು ತೆಗೆದು ಹೊರಗೆ ಹೊರಟೇ ಬಿಟ್ಟಿದ್ದ . ಭಯವಾದರೂ ಕುತೂಹಲದಿಂದ ಅವನನ್ನೆ ಹಿಂಬಾಲಿಸಿದ್ದೆ . ನಿದ್ದೆಯಲ್ಲಿ ನಡೆಯುತ್ತ ನಡೆಯುತ್ತಾ ಅವನು ಎದುರುಗಡೆಯಿದ್ದ ಸ್ಮಶಾನದ ಜಾಗವನ್ನು ಪ್ರವೇಶಿಸಿದಾಗ ನನಗೆ ಧೈರ್ಯಸಾಲದೆ ವಾಪಸು ಓಡಿ ಬಂದಿದ್ದೆ . ಮನುಷ್ಯನ ಮೆದಳು ನಿದ್ದೆಯಲ್ಲಿಯೂ
ಇಷ್ಟೊಂದು ಅಚ್ಚು ಕಟ್ಟಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದು ನನಗೆ ಇನ್ನೂ ಒಗಟಾಗಿರುವ ವಿಷಯ . ಮಂಜುನಾಥನ
ಆಶೀರ್ವಾದದಿಂದ ಮಂಜು ಈಗ ನಿದ್ದೆಯಲ್ಲಿ ನಡೆಯುವದನ್ನು ಬಿಟ್ಟಿದ್ದಾನೆಂದು ಅವನ ಶ್ರೀಮತಿಯವರಿಂದ ತಿಳಿದು
ಸಂತೋಸವಾಯಿತು ಎನ್ನಿ .
ಈ ನಿದ್ದೆಯ ಪುರಾಣ ಇಷ್ಟಕ್ಕೆ ಮುಗಿಯುವದಿಲ್ಲ ಬಿಡಿ . ‘ ಅತಿ ‘ ಎಂಬುವದಕ್ಕೆ ‘ ಮಿತಿ ‘ ಅಂತ ವಿರುದ್ಧ ಪದವಿರುವದು ನಿಜ .
ಹಾಗೆಯೆ ಅತಿಯಾಗಿ ನಿದ್ದೆಮಾಡುವವರು ಒಂದೆಡೆ ಇದ್ದರೆ , ಇನ್ನು ನಿದ್ದೆ ಬರದೆ ಒದ್ದಾಡುವವರು ಇನ್ನೊಂದೆಡೆ ಇರಲೇಬೇಕಲ್ಲವೆ ? ನಿದ್ದೆ ಬಾರದೆ ಪರಿತಪಿಸುವ ಬಹು ಜನರು ಮನಬಂದಂತೆ ಪರಿಶೋಧನೆ ನಡೆಸಿ , ತಮಗೆ ತಕ್ಕ ಹವ್ಯಾಸಗಳನ್ನು
ಬೆಳೆಸಿಕೊಳ್ಳುವದು ಸಹಜ . ಹವ್ಯಾಸ ಒಳ್ಳೆಯದೊ ಕೆಟ್ಟದ್ದೊ ಬೇರೆ ವಿಷಯ ಬಿಡಿ .
ಅಂತೂ ‘ ಮನಸಿದ್ದರೆ ಮಾರ್ಗ ‘ಎಂದು ಅಂಬುವದರಲ್ಲಿ ಅವರಿಗೆ ನಂಬಿಕೆ ಇರುವದು ಶ್ಲಾಘನೀಯ . ನಿದ್ದೆ ಬರಲೆಂದು
ಸೋಮಾರಿಗಳು ಕೂಡ ತಾಸು ಗಂಟಲೇ ‘ ವಾಕಿಂಗ್ ‘ ಮಾಡುವದಕ್ಕೆ ಮತ್ತು ಪುಸ್ತಕಗಳ ಮುಖವನ್ನೇ ನೋಡದವರು
ಮೂಟೆಗಂಟಲೇ ಪುಸ್ತಕಗಳನ್ನು ಖರೀದಿಸಿ ಓದಲು ಪ್ರಾರಂಭಿಸುವದಕ್ಕೆ ಈ ನಿದ್ದೆರಾಯನೇ ಕಾರಣ ಎಂಬುದೊಂದು ನೆಮ್ಮದಿಯ
ಸಂಗತಿ . ಅದಕ್ಕಾದರೂ ಅವನಿಗೊಂದು ಧನ್ಯವಾದವನ್ನು ಹೇಳಲೇ ಬೇಕಲ್ಲವೆ ?
ಒಟ್ಟಿನಲ್ಲಿ ನನ್ನ ಮಾಧ್ಯಮಿಕ ಶಾಲೆಯ ಕಿಡಿಗೇಡಿ ಗೆಳೆಯರು ಹೇಳಿದಂತೆ , ಒಂದಿಲ್ಲ ಒಂದು ರೀತಿಯಲ್ಲಿ ಬಹು ಜನರಿಗೆ ‘ನಿದ್ದೆಯೇ ಜೀವನದ ಹೆಗ್ಗುರಿ ‘ ಯಾಗಿರುವದು ಮಾತ್ರ ನಿಜ ಸಂಗತಿ . ನೀವೇನು ಅನ್ನುತ್ತೀರಿ ?
ಹರಟೆಯ ನೆಪದಲ್ಲಿ ನನ್ನಿಂದ ಇಷ್ಟೊಂದು ಕೊರೆಯಿಸಿಕೊಂಡ ಮೇಲೆ , ತಾಳ್ಮೆಯಿಂದ ಓದಿದವರಿಗೆಲ್ಲ ಕಣ್ಣು ತುಂಬಾ ನಿದ್ದೆ ಬರುತ್ತದೆ ಎಂದು ಬಲವಾಗಿ ನಂಬಿರುವೆ.
—– ಶಿವಶಂಕರ ಮೇಟಿ